ಸದಾಶಿವ್ ಸೊರಟೂರು ಕಥಾ ಅಂಕಣ – ಇಂತಿ ನಿನ್ನ ‘ಪ್ರೀತಿಯ’ ಹಸಿವು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

25

ನಡುರಾತ್ರಿ ಮುಟ್ಟಲು ಕೆಲವೇ ಕ್ಷಣಗಳು ಬಾಕಿ. ಊರು ಮಲಗಿದೆ. ಯಾರ್ಯಾರು ಯಾವ ಕನಸಿನ ತುದಿಯಲ್ಲಿದ್ದಾರೊ. ‘ರೊಟ್ಟಿಯ ತುಂಡುಗಳು’ ಎನ್ನುವ ದಪ್ಪನೆಯ ಕಾದಂಬರಿಯ ಕೊನೆ ಪುಟ ಓದಿ ಮುಗಿಸಿ ಒಂದು ನಿಟ್ಟುಸಿರು ಬಿಟ್ಟ ಒಬ್ಬ ಅಜ್ಞಾತ ಓದುಗ. ಅವನ ಮನೆಯ ಮುರಿದ ಹಂಚಿನಿಂದ ಚಂದ್ರ ಇಣುಕುತ್ತಿದ್ದಾನೆ. ಕಾದಂಬರಿ ಅವನನ್ನು ಕಾಡಿದೆ. ಅದರಲ್ಲಂತೂ ಒಂದ್ಹತ್ತು ಮಧ್ಯದ ಪುಟಗಳು ತುಂಬಾ ತೀವ್ರವಾಗಿವೆ ಅನಿಸಿತು ಅವನಿಗೆ. ಇಡೀ ಕಾದಂಬರಿ ಕಣ್ಣು ಮುಂದೆ ತಂದುಕೊಂಡು ಕೂತ. ಮುರುಕು ಕುರ್ಚಿಯ ಹಿಂದಕ್ಕೆ ತಲೆ ಆನಿಸಿ ಕಣ್ಣು ಮುಚ್ಚಿಕೊಂಡ.

ಹಸಿವು ಕಣ್ಣ ಮುಂದೆ ಬಂದಂತಾಯ್ತು.

ಇವನಿಗೆ ನಿದ್ದೆ ಕೆಟ್ಟು ಹೊಯಿತು. ಅದೇ ಒಂಟಿ ರಾತ್ರಿಗಳಲ್ಲಿ ಈ ಕಾದಂಬರಿಗಳ ಮುಂದೆ ಕೂತವರ ಎಷ್ಟೊ ಜನರ ನಿದ್ದೆಗಳು ಹೀಗೆ ಕೆಟ್ಟು ಹೋದವು..ಅವನು ಹಾಗೆ ಕೂತು ಓದುವ ರಾತ್ರಿಗಳು ಉರುಳುವ ಎಷ್ಟೊ ತಿಂಗಳುಗಳ ಮೊದಲು ಒಂದು ದಿನ
ಬೆಳ್ ಬೆಳಗ್ಗೆ ಎಲ್ಲಾ ಪತ್ರಿಕೆಯಲ್ಲೂ ಒಂದು ಬಿಸಿಯಾದ ಸುದ್ದಿ ತಣ್ಣನೆಯ ಬೆಳಗನ್ನು ಸುಟ್ಟಿತ್ತು. ಸಾಹಿತಿಗಳಾದ ಸುಂದರ್ ಮತ್ತು ಗೋಪಿನಾಥ್ ವೇದಿಕೆ ಹಂಚಿಕೊಳ್ಳದೆ ಎದ್ದು ಹೋದರೆಂಬುದೇ ಆ ಸುದ್ದಿ. ಇವರ ಸಿದ್ದಾಂತದ ತಿಕ್ಕಾಟ ಈ ಮಟ್ಟಕ್ಕೂ ಮುಟ್ಟಿತೇ? ಎಂದು ಈ ವಿಷಯ ತಿಳಿದವರು ಆಶ್ಚರ್ಯಪಟ್ಟರು. ಸುಂದರ್ ಅವರ ರಾಷ್ಟ್ರೀಯವಾದ ಮತ್ತು ಗೋಪಿನಾಥ್ ನ ಪ್ರಗತಿಪರವಾದವು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಆದರೆ ಇದು ಅಷ್ಟೊಂದು ಅತಿರೇಕಕ್ಕೆ ಹೋಗುತ್ತದೆ ಎಂದು ಜನ ಭಾವಿಸಿರಲಿಲ್ಲ.‌ ಒಬ್ಬ ಬರಹಗಾರನ ಆ ವಿಚಾರ ಸರಿ ಇದೆ ಎಂದು ಕೆಲವರು ವಾದಿಸಿದರೆ ಇನ್ನೂ ಕೆಲವರು ‘ಸಿದ್ದಾಂತ ಏನೇ ಇರಲಿ ಸ್ವಾಮಿ, ನಕ್ಕು ಮಾತಾಡಿಸಿ ಪಕ್ಕ ಪಕ್ಕ ಕೂರಲು ಏನು ದಾಡಿ?’ ಎಂದು ಜರಿದಿದ್ದರು.

ಅವನು ಹಾಗೆ ಕೂತು ಓದುವ ರಾತ್ರಿಗಳು ಉರುಳುವ ಎಷ್ಟೊ ತಿಂಗಳುಗಳ ಮೊದಲು ಒಂದು ದಿನ
ಬೆಳ್ ಬೆಳಗ್ಗೆ ಎಲ್ಲಾ ಪತ್ರಿಕೆಯಲ್ಲೂ ಒಂದು ಬಿಸಿಯಾದ ಸುದ್ದಿ ತಣ್ಣನೆಯ ಬೆಳಗನ್ನು ಸುಟ್ಟಿತ್ತು. ಸಾಹಿತಿಗಳಾದ ಸುಂದರ್ ಮತ್ತು ಗೋಪಿನಾಥ್ ವೇದಿಕೆ ಹಂಚಿಕೊಳ್ಳದೆ ಎದ್ದು ಹೋದರೆಂಬುದೇ ಆ ಸುದ್ದಿ. ಇವರ ಸಿದ್ದಾಂತದ ತಿಕ್ಕಾಟ ಈ ಮಟ್ಟಕ್ಕೂ ಮುಟ್ಟಿತೇ? ಎಂದು ಈ ವಿಷಯ ತಿಳಿದವರು ಆಶ್ಚರ್ಯಪಟ್ಟರು. ಸುಂದರ್ ಅವರ ರಾಷ್ಟ್ರೀಯವಾದ ಮತ್ತು ಗೋಪಿನಾಥ್ ನ ಪ್ರಗತಿಪರವಾದವು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಆದರೆ ಇದು ಅಷ್ಟೊಂದು ಅತಿರೇಕಕ್ಕೆ ಹೋಗುತ್ತದೆ ಎಂದು ಜನ ಭಾವಿಸಿರಲಿಲ್ಲ.‌ ಒಬ್ಬ ಬರಹಗಾರನ ಆ ವಿಚಾರ ಸರಿ ಇದೆ ಎಂದು ಕೆಲವರು ವಾದಿಸಿದರೆ ಇನ್ನೂ ಕೆಲವರು ‘ಸಿದ್ದಾಂತ ಏನೇ ಇರಲಿ ಸ್ವಾಮಿ, ನಕ್ಕು ಮಾತಾಡಿಸಿ ಪಕ್ಕ ಪಕ್ಕ ಕೂರಲು ಏನು ದಾಡಿ?’ ಎಂದು ಜರಿದಿದ್ದರು.

‘ನಿಮ್ಮ ಸಿದ್ದಾಂತ ನಾವು ಮೆಚ್ಚುತ್ತೇವೆ. ನೀವು ಅದರ ಬಗ್ಗೆ ಬರೆದು ಬರೆದು ಹೆಸರನ್ನು, ಪ್ರಶಸ್ತಿಯನ್ನು ಗಳಿಸಿದ್ರಿ.. ಅದರಿಂದ ಜನರಿಗೇನಾದ್ರೂ ಲಾಭವಾಯಿತು ಅನಿಸುತ್ತಾ…?’ ಒಮ್ಮೆ ಮಾಧ್ಯಮದವರು ಇಬ್ಬರನ್ನು ಪ್ರತ್ಯೇಕವಾಗಿ ನಿಲ್ಲಿಸಿ ಕೇಳಿದಕ್ಕೆ ಇಬ್ಬರೂ ಕೋಪಗೊಂಡು ಉತ್ತರಿಸದೆ ಎದ್ದು ಹೋಗಿದ್ದರು.

ಆದರೆ ಕಾಕತಾಳೀಯ ಎಂಬಂತೆ ಆ ಇಬ್ಬರೂ ಲೇಖಕರು ಕೆಲವು ದಿನಗಳ ಹಿಂದಷ್ಟೆ ತಮ್ಮ ಹೊಸ ಕಾದಂಬರಿಗಳನ್ನು ಬಿಡುಗಡೆಗೊಳಿಸಿದ್ದರು. ಅವುಗಳ ಬಗ್ಗೆ ನಿಧಾನಕ್ಕೆ ಚರ್ಚೆಗಳು ಗರಿಗೆದರುವ ಹೊತ್ತಿಗೆ ಎಡವಟ್ಟೊಂದು ಹೊರಬಿತ್ತು!

ಕಾದಂಬರಿಯ ಬಗ್ಗೆ ಅಲ್ಲಲ್ಲಿ ಚರ್ಚೆಗಳಾದವು. ವಿಮರ್ಶಕರು ಎದ್ದು ಕೂತರು. ಕೆಲವು ವಿಮರ್ಶಕರಂತೂ ಸ್ಪಷ್ಟವಾಗಿ ಒಂದು ಷರಾ ಬರೆದರು. ಇದು ಮಾರುಕಟ್ಟೆಯ ಗಿಮಿಕ್. ಇದು ಮುದ್ರಣಾಲಯದ ಹುಡುಗರ ಲೋಪವಲ್ಲ. ಇಬ್ಬರೂ ಲೇಖಕರು ಖುದ್ದೂ ಕೂತು, ಮಾತಾಡಿಕೊಂಡು ಅದಲು ಬದಲಾಗಬೇಕಾದ ಪುಟಗಳನ್ನು ಬರೆದಿದ್ದಾರೆ. ಮತ್ತು ಮುದ್ರಕರಿಗೆ ಹೇಳಿಯೆ ಪುಟಗಳನ್ನು ಬದಲಿಸಿದ್ದಾರೆ. ಹೊರಗೆ ಮಾತ್ರ ಇವರು ಸಿದ್ದಾಂತ ವಿರೋಧಿಗಳು. ಒಳಗೆ ವ್ಯಾಪಾರಿಗಳು ಎಂದು ದೀರ್ಘ ವಿಮರ್ಶಾ ಲೇಖನ ಬರೆದರು..

ಮತ್ತವರು ಹೇಳಿದರು, ಕಾದಂಬರಿಯ ಕಥೆಗಳು ಬೇರೆ. ಅದರ ಪಾತ್ರಗಳು ಬೇರೆ. ಅವು ಆಡಬೇಕಾದ ಮಾತುಗಳು ಬೇರೆ. ಬದುಕಿನ ಅವಶ್ಯಕತೆಗಳು ಬೇರೆ ಇಷ್ಟು ಇದ್ದಾಗಿಯೂ ಕೂಡ ಆ ಎರಡೂ ಕಾದಂಬರಿಯ ಮಧ್ಯೆದಲ್ಲಿ ಎರಡಕ್ಕೂ ಸೂಕ್ತವಾಗುವಂತೆ ಹತ್ತು ಪುಟಗಳು ಹೇಗೆ ಬರಲು ಸಾಧ್ಯ?

ಆ ಹತ್ತು ಪುಟಗಳು ಎರಡೂ ಕಥೆಗಳಿಗೆ ತುಂಬಾ ಹೊಂದುವಂತೆ ಇದ್ದವು. ಸೂಕ್ಷ್ಮವಾಗಿ ಗಮನಿಸದೇ ಹೋದರೆ ಗೊತ್ತೆ ಆಗದಂತೆ ಇದ್ದವು. ನೀವು ಪುಟದ ಮೇಲೆ ಕಾದಂಬರಿ ಹೆಸರು ಗಮನಿಸಿದರೆ ಮಾತ್ರ ನಿಮಗೆ ಆ ಎಡವಟ್ಟು ಗೊತ್ತಾಗಲು ಸಾಧ್ಯವಿತ್ತು.‌ ಇದೆಲ್ಲವೂ ಹೇಗೆ ಅಚಾನಕ್ಕಾಗಿ ಆಗಲು ಸಾಧ್ಯ? ಎಂದು ವಿಮರ್ಶಕರು ಟೀಕಿಸಿದರು.

ಎರಡೂ ಕಾದಂಬರಿಯ ಆ ಮಧ್ಯದ ಪುಟದಲ್ಲಿ ಏನಿತ್ತು?

ಒಂದು ಕಾದಂಬರಿಯಲ್ಲಿನ ಪಾತ್ರವೊಂದು ತನ್ನ ಇನ್ನೊಂದು ಆತ್ಮೀಯ ಪಾತ್ರಕ್ಕೆ ಇಡೀ ಬದುಕಿನಲ್ಲಿ ತಾನು ಅನುಭವಿಸಿದ ತೀವ್ರ ಹಸಿವಿನ ಬಗ್ಗೆ ಹೇಳುತ್ತಾ ಹೋಗುತ್ತದೆ. ಆ ಇನ್ನೊಂದು ಪಾತ್ರ ಅವನ ಮಾತಿಗೆ ಅಡ್ಡಬರದೆ ಸುಮ್ಮನೆ ಕೇಳಿಸಿಕೊಳ್ಳುತ್ತದೆ. ಆ ಮಾತಿನ ಓಘ ಹಸಿವಿನಷ್ಟೇ ತಾಕುವಂತಿದೆ. ಈ ಮಾತುಗಳು ಆ ಇನ್ನೊಂದು ಕಾದಂಬರಿಯಲ್ಲಿ ಸೇರಿಕೊಂಡಿದ್ದವು..

ಆ ಇನ್ನೊಂದು ಕಾದಂಬರಿಯ ಸನ್ನಿವೇಶ ಇನ್ನೂ ಕುತೂಹಲಕಾರಿ. ಆ ಕಾದಂಬರಿ ನಾಯಕ ಇಡೀ ಬದುಕನ್ನು ಒಂಟಿಯಾಗಿ ಕಳೆಯುತ್ತಾನೆ. ಅವನಿಗೂ ಒಂದು ಹಸಿವಿದೆ. ಆದರೆ ಅದು ಅನ್ನದ್ದಲ್ಲ. ಅವನ ಬಳಿ ಸಾಕಷ್ಟು ಹಣವಿದೆ. ಅದರ ಜೊತೆ ಒಂದು ಹಸಿವು ಅವನನ್ನು ಕಾಡುತಿದೆ. ಅವನು ಅದಕ್ಕಾಗಿ ಹಗಲು ರಾತ್ರಿ ಹಂಬಲಿಸಿದ್ದಾನೆ. ಹಂಬಲಿಸಿ ಸೋತು ಆತ ತನ್ನಷ್ಟಕ್ಕೆ ತಾನು ಕೂತು ತನ್ನ ಹಸಿವಿನ ಬಗ್ಗೆ ಸ್ವಗತದಲ್ಲಿ ಬರೆದುಕೊಳ್ಳುವ ಒಂದಷ್ಟು ಸಾಲುಗಳು ಇನ್ನೊಂದು ಕಾದಂಬರಿಯ ಪುಟದಲ್ಲಿ ತೂರಿಕೊಂಡು ಹೋಗಿವೆ.

ಒಂದು ಕಾದಂಬರಿ ಹೆಸರು ‘ರೊಟ್ಟಿಯ ತುಂಡುಗಳು’ ಇನ್ನೊಂದು ಕಾದಂಬರಿ ಹೆಸರು ‘ಇಂತಿ ನಿನ್ನ ಪ್ರೀತಿಯ ಹಸಿವು’
ಮೊದಲೆ ಕಾದಂಬರಿ ಗೋಪಿನಾಥ್ ಅವರದು ಎರಡನೆ ಕಾದಂಬರಿ ಸುಂದರ್ ಅವರದು.

ಎಷ್ಟು ಜನರು ರಾತ್ರಿಯ ನಿದ್ದೆ ಬದಲು ಕಣ್ಣುಗಳಿಗೆ ಕಾದಂಬರಿಯ ಪುಟಗಳನ್ನು ಉಣಿಸಿ ಕೂತಿದ್ದರೊ.. ಅಲ್ಲಿಲ್ಲೊ ತಮ್ಮನ್ನು ಹುಡುಕಿಕೊಳ್ಳುತ್ತಿದ್ದರೊ.. ಲೆಕ್ಕ ಹೇಗೆ ಸಿಗುತ್ತದೆ?

ಆಗ ಇವರ ಈ ಕಾದಂಬರಿಗಳು ಮುದ್ರಣವಾಗುವ ದಿನಗಳಲ್ಲಿ ಅಚ್ಚಿನ ಮನೆಯಲ್ಲಿ ತೀವ್ರ ಅವಸರವಿತ್ತು.‌ ಆ ತಿಂಗಳಲ್ಲಿ ಬಂದದ್ದು ನೂರಾರು ಪುಸ್ತಕಗಳ ಮುದ್ರಣದ ಆರ್ಡರ್ ಗಳು. ಕೆಲಸದ ಹುಡುಗರಿಗೆ ಹಗಲು ರಾತ್ರಿ ಕೆಲಸ. ಸುಸ್ತೊ ಸುಸ್ತು. ಕೂತಲ್ಲಿ ನಿಂತಲ್ಲಿ ಆಯಾಸ ತೂಕಡಿಕೆ. ದೊಡ್ಡ ಲೇಖಕರ ಪುಸ್ತಕಗಳನ್ನಂತೂ ಸರಿಯಾದ ಟೈಮಿಗೆ ಕೊಟ್ಟುಬಿಡಬೇಕು. ಅದೊಂದು ದೊಡ್ಡ ಜವಾಬ್ದಾರಿಯುತ ಕೆಲಸ. ಆ ಒತ್ತಡವೂ ಅಲ್ಲಿನ ಕೆಲಸಗಾರರ ಮೇಲಿತ್ತು!

ಅದೊಂದು ರಾತ್ರಿ ಮುದ್ರಿಸಬೇಕಾದ ಪುಸ್ತಕದ ಪುಟಗಳನ್ನು ಅಚ್ಚಿಗೆ ಹೊಂದಿಸುವಾಗ ಮುದ್ರಣಕ್ಕೆ ಬಂದಿದ್ದ ಎರಡು ಪುಸ್ತಕಗಳ ನಟ್ಟನಡುವಿನ ಹತ್ತುಪುಟಗಳು ಅದಲು ಬದಲಾದವು. ಇಡೀ ಪುಸ್ತಕ ಸರಿಯಿತ್ತು ಆದರೆ ನಡುವಿನ ಹತ್ತುಪುಟಗಳು ಅದಲುಬದಲಾದವು. ಕೆಲಸದ ಗಡಿಬಿಡಿಯಲ್ಲಿದ್ದ ಮತ್ತು ನಿರಂತರ ಕೆಲಸದಿಂದ ರೋಸಿ ಹೋಗಿದ್ದ ಅಲ್ಲಿನ ಕೆಲಸದ ಹುಡುಗರ ಅರಿವಿಗೆ ಅದು ಬರಲಿಲ್ಲ. ಅದರ ಮೇಲ್ವಿಚಾರಕರ ಅರಿವಿಗೂ ಬರಲಿಲ್ಲ. ಪುಸ್ತಕ ನೋಡಲು ಎತ್ತಿಕೊಂಡ ಸ್ವತಃ ಲೇಖಕರ ಅರಿವಿಗೂ ಬರದೇ ಆ ಹತ್ತು ಪುಟಗಳು ಪುಸ್ತಕದ ನಡುವೆ ಅಡಗಿ ಕೂತಿದ್ದವು.‌ ಸಾವಿರಾರು ಪ್ರತಿಗಳು ಮುದ್ರಣವಾದವು. ಪ್ರಕಾಶಕರನ್ನು ತಲುಪಿದವು. ಬಿಡುಗಡೆಯ ದಿನ ವೇದಿಕೆಯ ಮೇಲೆ ಕೂತವು. ಬಿಡುಗಡೆಯೂ ಆದವು. ಓದುವವರ ಕೈ ಸೇರಿದವು.

ಪರಿಣಾಮ ಮಾತ್ರ ತುಂಬಾ ಆಶ್ಚರ್ಯಕರವಾಗಿತ್ತು..

ಆ ಬದಲು ಬದಲಾದ ಪುಟಗಳ ಪುಸ್ತಕಗಳು ಪ್ರಕಾಶಕರು ಊಹಿಸಿದಕ್ಕಿಂತ ನಾಲ್ಕರಷ್ಟು ಖರ್ಚಾದವು! ಪ್ರಕಾಶಕರು ‘ಪ್ರತಿಗಳು ವಾಪಸ್ ಬರುತ್ತವೆ ಎಂದು ಭಾವಿಸಿದ್ದರು. ಆದರೆ ಹೆಚ್ಚು ಖರ್ಚಾಗಿದ್ದವು.
ಕಾರಣ ಆ ಎರಡೂ ಪುಸ್ತಕಗಳ ಮಧ್ಯದ ಪುಟಗಳು ಅದಲು ಬದಲಾದದ್ದು! ಎರಡೂ ಕಾದಂಬರಿಗಳಿಗೆ ಗಾಢವಾಗಿ ಹೊಂದುವಂತ ಬೇರೆ ಬೇರೆ ಬರಹಗಾರರ ಆ ಹತ್ತು ಪುಟಗಳು ಮೂಡಿದ್ದು ಹೇಗೆ? ಹಸಿವು ಎಲ್ಲರಿಗೂ ಒಂದೇ!

ಕೆಲವು ದಿನಗಳ ನಂತರ ಪ್ರತಿಷ್ಠಿತ ಪತ್ರಿಕೆಯಲ್ಲಿ ಆ ಕಾದಂಬರಿಗಳ ಬಗ್ಗೆ ಒಂದು ಪುಟದಷ್ಟು ವಿಮರ್ಶೆ ಬಂತು. ಅದರ ಕೆಳಭಾಗದಲ್ಲಿ ಯಾರೊ ಓದುಗ ಬರೆದ ಪುಟ್ಟ ಪತ್ರವೊಂದನ್ನು ಪ್ರಕಟಿಸಲಾಗಿತ್ತು..

ಅದು ಹೀಗಿತ್ತು..

“ಒಂದು ಬದುಕು!

..ಬದುಕಿಗೆ ಇರೋದು ಎರಡು ಸಿದ್ದಾಂತವಲ್ಲ, ಎರಡು ಹಸಿವು..
ಒಂದು ಅನ್ನ..
ಇನ್ನೊಂದು ಪ್ರೀತಿ..
ಒಂದು ಬದುಕು, ಎರಡು ಹಸಿವು..!
ಎಲ್ಲರಿಗೂ ಬೇಕಿರುವುದು ಮುಷ್ಟಿ ಅನ್ನ, ಹಿಡಿ ಪ್ರೀತಿ
ನೀವು ಏನೇ ಸಿದ್ದಾಂತ ಅಂತ ವಾದಿಸಿದರೂ
ಅವು ಈ ಎರಡು ಹಸಿವಿನ ನಡುವೆ ನಡೆಯುವ ಯುದ್ಧ ಅಷ್ಟೆ…”

ಒಂದು ರಾತ್ರಿಯ ಕೆಳಗೆ ಎಲ್ಲರೂ ಬರೀ ನಿದ್ರೆಯಲ್ಲಿ ಒಂದಾಗುವುದಿಲ್ಲ. ಯಾರ ಕಣ್ಣುಗಳು, ಯಾರ ಮನಸು ಯಾವುದಕ್ಕೆ ಕಾದು ಕೂತಿರುತ್ತೊ? ಈ ಮಧ್ಯರಾತ್ರಿ ಮಾತ್ರ ತನ್ನ ಬೆಳದಿಂಗಳ ಸರಳರೇಖೆಯಲ್ಲಿ ಅವರನ್ನು ಕೂಡಿಸಿದೆ. ಈ ತುದಿಯಲ್ಲಿ ಇತ್ತ ಇನ್ಯಾವುದೊ ಊರಿನ ಮತ್ತ್ಯಾವುದೊ ಮೂಲೆಯಲ್ಲಿ ಇನ್ನೊಬ್ಬ ಓದುಗ ‘ಇಂತಿ ನಿನ್ನ ಪ್ರೀತಿಯ ಹಸಿವು’ ಅನ್ನುವ ಕಾದಂಬರಿ ಹಿಡಿದು ಕೂತಿದ್ದಾನೆ. ರಾತ್ರಿಯ ಪರಿವೆ ಇಲ್ಲದೆ ಓದುತ್ತಿದ್ದಾನೆ. ಕಾದಂಬರಿಯ ಓದು ಅರ್ಧ ಭಾಗ ತಲುಪಿದಾಗ ತಲ್ಲಣಿಸಿದ. ಅರೆಕ್ಷಣ ನಿಂತ. ಸಾಲುಗಳನ್ನು ಬರೆದಿಟ್ಟುಕೊಂಡ. ಏನೊ ಸಿಕ್ಕವನಂತೆ ಚಡಪಡಿಸಿದ, ಮತ್ತೇನನ್ನೊ ಕಳೆದುಕೊಂಡವನಂತೆ ತಲ್ಲಣಿಸಿದ. ನಡುರಾತ್ರಿಯಲ್ಲಿ‌ ಕಾಫಿ ಮಾಡಿಕೊಂಡು ಕಿಟಕಿ ಆಚೆ ನಗುತ್ತಿರುವ ಚಂದಿರನನ್ನು ನೋಡುತ್ತಾ ಕಾದಂಬರಿಯಲ್ಲಿ ಕಾಡಿದ ಸಾಲುಗಳನ್ನು ಕಣ್ಣಮುಂದೆ ತಂದುಕೊಂಡ..

ಕಣ್ಣಳತೆಯ ದೂರದಲ್ಲಿ ತನ್ನ ಪ್ರೀತಿ ಇನ್ಯಾರದೊ ಬೆರಳಿಡಿದು ನಡೆಯುತ್ತಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: