ಜಿ ಎನ್ ನಾಗರಾಜ್ ಅಂಕಣ- ಪ್ಲೇಟೋನ ಉಪನಿಷತ್ತು,ಪುರಾಣ ಗ್ರೀಸಿನಲ್ಲಿ ಆತ್ಮ, ನರಕ ಪುನರ್ಜನ್ಮ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

40


ಪ್ಲೇಟೋ ಜಗತ್ತಿನ ಮಹಾ ದಾರ್ಶನಿಕರಲ್ಲೊಬ್ಬ ಎಂದು ಹೆಸರಾದವನು. ಹಲವು ಉಪನಿಷತ್ತುಗಳಿನ್ನೂ ರಚನೆಯಾಗುತ್ತಿದ್ದ ಕಾಲದಲ್ಲಿಯೇ ಇವನ ಕೃತಿಗಳೂ ಹೊರಬಂದಿವೆ. ಯುರೋಪಿನ ಉದ್ದಗಲಕ್ಕೂ ಸಹಸ್ರಾರು ವರ್ಷ ಅತ್ಯಂತ ಹೆಚ್ಚು ಪ್ರಭಾವಶಾಲಿಯಾದ ತತ್ವಜ್ಞಾನಿ. ವಿಶ್ವಾದ್ಯಂತವೂ ಅವನ ತತ್ವಜ್ಞಾನವನ್ನು ಆಸ್ಥೆಯಿಂದ ಅಧ್ಯಯನ ಮಾಡುತ್ತಾರೆ. ಭಾರತದಲ್ಲೂ ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ಅವನ ಒಂದು ಕೃತಿ ‘ರಿಪಬ್ಲಿಕ್ ‘ ( ಗಣರಾಜ್ಯ ) ಎಂಬ ಪುಸ್ತಕ ವ್ಯಾಪಕ ಓದಿಗೆ, ಹಲವರ ಮೆಚ್ಚುಗೆಗೆ ಒಳಗಾಯಿತು. ಈ ಕೃತಿ ‘ಆದರ್ಶ ಗಣರಾಜ್ಯ’ ಎಂದ ಕನ್ನಡಕ್ಕೂ ಅನುವಾದವಾಗಿದೆ. ಜೊತೆಗೆ ಮತ್ತೊಂದು ಮುಖ್ಯ ಕೃತಿಯನ್ನು ‘ ಸಾಕ್ರಟೀಸನ ಕೊನೆಯ ದಿನಗಳು’ಎಂದು ಎ.ಎನ್ ಮೂರ್ತಿರಾಯರು ಕನ್ನಡಕ್ಕೆ ತಂದಿದ್ದಾರೆ.

ಪ್ಲೇಟೋ ತನ್ನ ಕೃತಿಗಳಲ್ಲಿ ಹಲವು ಮುಖ್ಯ ತತ್ವಜ್ಞಾನದ ಪರಿಕಲ್ಪನೆಗಳನ್ನು ರೂಪಿಸಿದ್ದಾನೆ : ಒಂದು ಪ್ರಭುತ್ವ ಹೇಗಿರಬೇಕು, ಅದರಲ್ಲಿ ಆಳುವವರ, ಜನರ, ಜನರಲ್ಲಿ ವಿವಿಧ ವಿಭಾಗಗಳ, ಸ್ತ್ರೀಯರ ನಡವಳಿಕೆ, ಕರ್ತವ್ಯ ಮೊದಲಾದವುಗಳ ಬಗ್ಗೆ, ಕಾವ್ಯ,ಸಂಗೀತ,ವ್ಯಾಯಾಮ ಇತ್ಯಾದಿ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಅವನ ವಿಚಾರಗಳ ಮಿತಿಯಲ್ಲಿ ಪ್ರಭುತ್ವವೊಂದರ ಆದರ್ಶ ರೂಪ ಹೇಗಿರಬೇಕು, ತತ್ವಜ್ಞಾನಿಗಳ ಪಾತ್ರ, ಸತ್ಯ,ನ್ಯಾಯ,ಸೌದರ್ಯ ಇತ್ಯಾದಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾನೆ. ಅವನ ಮುಖ್ಯ ಕೊಡುಗೆ ಭಾವನೆಗಳೇ ವಿಶ್ವದ ಮೂಲ ಕಾರಣ ಎಂದು ವಿಶ್ವದ ತತ್ವಜ್ಞಾನಿಗಳು ಗುರುತಿಸುತ್ತಾರೆ. ಐಡಿಯಾಗಳು (ideas- ಭಾವನೆ) ಎಲ್ಲ ವಸ್ತು ಪ್ರಪಂಚ, ಜೀವ ವೈವಿಧ್ಯದ ಸೃಷ್ಟಿಗೆ ಮೂಲ. ಇಂತಹ ಜೀವಿಯನ್ನು ಸೃಷ್ಟಿಸಬೇಕೆಂಬ ಐಡಿಯಾ ಮೂಡಿತು, ಅಂತಹ ಜೀವಿಯನ್ನು ಸೃಷ್ಟಿಸಲಾಯಿತು. ಪ್ರತಿ ವಸ್ತು,ಪ್ರತಿ ಜೀವಿಯ ಸೃಷ್ಟಿಗೂ ಬೇರೆ ಬೇರೆ ಐಡಿಯಾ ಎನ್ನುವ ಮೂಲಕ ಜಗತ್ತಿನ ಸೃಷ್ಟಿಗೊಬ್ಬ ಕಾರಣ ಕರ್ತ ಬೇಕೆಂಬುದು ವಿಶ್ಲೇಷಿಸುತ್ತಾನೆ.
ಅವನ ತತ್ವಜ್ಞಾನದ ಬಗ್ಗೆ ವಿಶದವಾಗಿ ವಿವರಿಸುವುದು ಈ ಲೇಖನದ ಉದ್ದೇಶವಲ್ಲ. ಉಪನಿಷತ್ತುಗಳಲ್ಲಿನ ಹಾಗೂ ಪ್ಲೇಟೋನ ಹಲವು ವಿಚಾರಗಳ ನಡುವೆ ಇರುವ ಸಾಮ್ಯತೆ ಬಗ್ಗೆ ಗಮನ ಸೆಳೆಯುವುದು ಇದರ ಗುರಿ

ಉಪನಿಷತ್ತುಗಳ ಸಂಖ್ಯೆ ಇನ್ನೂರನ್ನು ಮೀರುತ್ತದೆ. ಇವುಗಳ ರಚನೆ ಸಾವಿರ ವರ್ಷಗಳಿಗಿಂತ ಹೆಚ್ಚು ವ್ಯಾಪಿಸಿದೆ. ಇವುಗಳ ರಚನೆಯ ಆರಂಭದ ಕಾಲ ಕ್ರಿಪೂ 700 ಎಂದು ಹಲವು ಪುರಾವೆಗಳ ಆಧಾರದ ಮೇಲೆ ಗುರುತಿಸಲಾಗಿದೆ. ಮೊದಲ ಆರು ಹಳೆಯ ಉಪನಿಷತ್ತುಗಳು ಆ ಶತಮಾನದಲ್ಲಿ ರಚನೆಯಾಗಿರುವ ಸಾಧ್ಯತೆ ಹೆಚ್ಚು. ನಂತರ ಕ್ರಿಸ್ತ ಶಕ ಆರನೇ ಶತಮಾನದವರೆಗೂ ‌ಬೇರೆ ಬೇರೆ ಉಪನಿಷತ್ತುಗಳ ರಚನೆಯ ಕಾಲ ಲಂಬಿಸಿದೆ.

ಪ್ಲೇಟೋ ಮತ್ತು ಅವನ ಗುರು ಸಾಕ್ರಟೀಸ್ ಕ್ರಿಪೂ ನಾಲ್ಕನೆಯ ಶತಮಾನದಿಂದ ಮೂರನೆಯ ಶತಮಾನದ ಮಧ್ಯದವರೆಗೆ ಜೀವಿಸಿದ್ದವರು. ಅವರ ಮತ್ತು ಉಪನಿಷತ್ತುಗಳಲ್ಲಿ ರೂಪಿಸಲಾಗಿರುವ ಹಲವು ಪರಿಕಲ್ಪನೆಗಳ ವಿಷಯದಲ್ಲಿ ಸಮಾನ ವಿಚಾರಗಳಿವೆ. ಅದನ್ನು ಮಂಡಿಸಿರುವ ವಿಧಾನ ಮತ್ತು ವಿವರಗಳಲ್ಲಿ ವ್ಯತ್ಯಾಸಗಳಿವೆಯಾದರೂ ಈ ಸಮಾನತೆ ತತ್ವಶಾಸ್ತ್ರಜ್ಞರಲ್ಲಿ ಚರ್ಚೆಗೆ ಕಾರಣವಾಗಿವೆ. ಕೆಲವು ತತ್ವಶಾಸ್ತ್ರಜ್ಞರು ಸಾಕ್ರಟೀಸ್ ಮತ್ತು ಪ್ಲೇಟೋ ಮೇಲೆ ಉಪನಿಷತ್ತುಗಳ ಪ್ರಭಾವ ಇದೆ ಎಂದು ಕೂಡಾ ವಾದಿಸಿದ್ದಾರೆ. ಈ ಎರಡು ತತ್ವಶಾಸ್ತ್ರದ ಹರಿವುಗಳ ನಡುವೆ ಯಾವ ರೀತಿ ಕೊಡು ಕೊಳೆ ನಡೆದಿರಬಹುದು ಎಂಬ ಬಗ್ಗೆ ಕೂಡಾ ಊಹೆಗಳನ್ನು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹಲವು ತತ್ವಶಾಸ್ತ್ರಜ್ಞರು ಆಯಾ ದೇಶಗಳಲ್ಲಿ ಸ್ವತಂತ್ರವಾಗಿಯೇ ರೂಪುಗೊಂಡ ವಿಚಾರಗಳು. ಈ ಕಾಲಕ್ಕೆ ಮೊದಲೂ ನಂತರವೂ ಹಲವು ವಿಷಯಗಳಲ್ಲಾಗಿರುವಂತೆ ವಿವಿಧ ದೇಶ,ಪ್ರದೇಶಗಳಲ್ಲಿನ ವಿಚಾರ ಪ್ರವಾಹದಲ್ಲಿ ಸಾಮ್ಯತೆಗಳು ಕಂಡು ಬಂದಿರುವಂತೆ ಇದೂ ಕೂಡ ಎಂಬ ಬಗ್ಗೆ ಸಾಧಾರ ವಿವರಣೆಗಳನ್ನು ಮುಂದಿಟ್ಟಿದ್ದಾರೆ.

ಪ್ಲೇಟೋನ ಕೃತಿಗಳಲ್ಲಿ ಆತ್ಮ, ಪುನರ್ಜನ್ಮ, ಒಳ್ಳೆಯ , ಕೆಟ್ಟ ಕೃತ್ಯಗಳು, ಸ್ವರ್ಗ, ನರಕಗಳ ಕಲ್ಪನೆಗಳು ವಿವರಿಸಲ್ಪಟ್ಟಿವೆ. ಪ್ಲೇಟೋನ ಹಲವು ಕೃತಿಗಳು ಅವನ ಗುರು ಸಾಕ್ರಟೀಸನ ಜೊತೆ ಸಂವಾದ ರೂಪದಲ್ಲಿ ರಚಿತವಾಗಿರುವುದರಿಂದ ಸಾಕ್ರಟೀಸನ ವಿಚಾರಗಳನ್ನೂ ಒಳಗೊಂಡಿದೆ. ಅದರಲ್ಲಿ ಫೇಡೋ ಎಂಬ ಕೃತಿ ಸಾಕ್ರಟೀಸ್‌ ಸೆರೆಮನೆಯಲ್ಲಿ ಸಾವನ್ನು ಎದುರು ನೋಡುತ್ತಿರುವಾಗ ಸಾವು ಮತ್ತು ಆತ್ಮದ ಬಗ್ಗೆ ನಡೆದ ಸಂವಾದ ಆತ್ಮ ಮತ್ತು ಅದಕ್ಕೆ ಸಂಬಂಧಿತ ವಿಷಯಗಳ ಬಗ್ಗೆ ಸಾಕ್ರಟೀಸ್ ತನ್ನ ಆತ್ಮೀಯ ಶಿಷ್ಯರಿಗೆ ಸಂವಾದ ರೂಪದಲ್ಲಿ ನೀಡಿದ ತಿಳುವಳಿಕೆಯನ್ನು ಒಳಗೊಂಡಿದೆ. ಆದರೆ ಪ್ಲೇಟೋನ ಎಲ್ಲ ಕೃತಿಗಳೂ,ವಿಚಾರಗಳೂ ಸಾಕ್ರಟೀಸ್‌ನ ಪಡಿಯಚ್ಚು , ಕಾಪಿ ಏನಲ್ಲ. ಅವನ ಕೃತಿಗಳಲ್ಲಿ ಆರಂಭದ, ಮಧ್ಯಕಾಲದ, ನಂತರ ಕಾಲದ ಕೃತಿಗಳು ಎಂಬ ವಿಭಾಗವನ್ನು ಮಾಡಬಹುದಾಗಿದೆ, ನಂತರ ಕೃತಿಗಳಲ್ಲಿ‌ ಸಾಕ್ರಟೀಸನ ವಿಚಾರಗಳಿಂದ ಹೊರಬಂದು ತನ್ನದೇ ಆದ ಚಿಂತನೆಗಳನ್ನು ಪ್ಲೇಟೋ ಮಂಡಿಸಿದ್ದಾನೆ ಎಂದು ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ.

ಪ್ಲೇಟೋನ ಕೃತಿಗಳೆಲ್ಲ ಸಂವಾದ ರೂಪದಲ್ಲಿ ಇರುವುದು ಅವುಗಳೊಳಗಿನ ಗಹನ ವಿಚಾರಗಳನ್ನು ಹಲವು ಉದಾಹರಣೆಗಳು,ಕತೆಗಳ ಮೂಲಕ ಮಂಡಿಸಲು , ತಮ್ಮ ವಿಚಾರಗಳಿಗೆ ಭಿನ್ನವಾದ , ಅಥವಾ ವಿರುದ್ಧವಾದ ವಿಚಾರಗಳ ಜೊತೆ ತುಲನೆ, ಸಂಘರ್ಷದ ಮೂಲಕ ಸ್ಪಷ್ಟಪಡಿಸಲು ಅನುಕೂಲವಾಗಿದೆ. ಇದು ಪ್ಲೇಟೋ ತತ್ವಶಾಸ್ತ್ರವನ್ನು ಮಂಡಿಸಿದ ರೀತಿಯ ಹಿರಿಮೆ ಎಂದೂ ಪರಿಗಣಿಸಲಾಗಿದೆ. ಇದೇ ವಿಧಾನವನ್ನು ಪ್ಲೇಟೋನಿಗಿಂತ ಮೂರು ಶತಮಾನಗಳಷ್ಟು ಮೊದಲೇ ರೂಪುಗೊಂಡ ಹಲವು ಉಪನಿಷತ್ತುಗಳಲ್ಲಿ ಕೂಡಾ ಅನುಸರಿಸಲಾಗಿದೆ. ಪ್ರಸಿದ್ಧ ಬೃಹದಾರಣ್ಯಕ ಉಪನಿಷತ್ತಿನ ಮುಖ್ಯ ಭಾಗ ಜನಕ , ಮೈತ್ರೇಯಿ, ಗಾರ್ಗಿ ಮತ್ತಿತರ ಪ್ರಶ್ನಾರ್ಥಿಗಳ ಜೊತೆಗಿನ ಸಂವಾದದ ರೂಪದಲ್ಲಿ , ಇತರ ಋಷಿಗಳು,ರಾಜರುಗಳ ಸಂವಾದದ ರೂಪದಲ್ಲಿ ಮಂಡಿಸಲ್ಪಟ್ಟಿದೆ.

ಇನ್ನು ಬಹಳ ನಂತರದ ಕಾಲದ ಗೀತೆಯ ಕೃಷ್ಣ-ಅರ್ಜುನ ಸಂವಾದದ ರೂಪದ ಬಗ್ಗೆಯಂತೂ ಎಲ್ಲರಿಗೂ ತಿಳಿದ ವಿಷಯ .

ಸಾಕ್ರಟೀಸ್ ಮತ್ತು ಪ್ಲೇಟೋ ಕಂಡ ಆತ್ಮ :

ಉಪನಿಷತ್ತುಗಳಲ್ಲಿ ವಿವರಿಸಲ್ಪಟ್ಟಂತೆ ಸಾಕ್ರಟೀಸ್- ಪ್ಲೇಟೋರವರೂ ದೇಹದಿಂದ ಬೇರೆಯಾದ ಆದರೆ ದೇಹದೊಳಗೇ ಇರುವ ಆತ್ಮದ ಕಲ್ಪನೆ ಮಾಡಿಕೊಂಡಿದ್ದಾರೆ. ಹಿಂದಿನ ಲೇಖನಗಳಲ್ಲಿ ವಿವರಿಸಿದಂತೆ ಆತ್ಮದ ಕಲ್ಪನೆ ಬುಡಕಟ್ಟು ಸಮುದಾಯಗಳಲ್ಲಿ ಸತ್ತ ನಂತರದವರು ಕನಸಿನಲ್ಲಿ ಕಾಣುವ ಬಗ್ಗೆ ಮಾಡಿಕೊಂಡ ಕಲ್ಪನೆಯನ್ನು ಜಗತ್ತಿನ ಮುಖ್ಯ ಧರ್ಮಗಳೆಲ್ಲ ಆತ್ಮವೆಂಬ ಕಲ್ಪನೆಯಾಗಿ ಪುನರ್ ರೂಪಿಸಿಕೊಂಡಿದ್ದಾರೆ. ಈ ಈರ್ವರೂ ಕೂಡಾ ಈ ಕಲ್ಪನೆಯನ್ನು ಸ್ವೀಕರಿಸಿದ್ದಾರೆ ಮತ್ತು ವಿಸ್ತರಿಸಿಕೊಂಡಿದ್ದಾರೆ. ಅದರಲ್ಲಿ ಆತ್ಮ ಅವಿನಾಶಿ ಎಂಬುದು ಮುಖ್ಯ ಅಂಶ. ಪ್ಲೇಟೋನ ಗಣರಾಜ್ಯ ಗ್ರಂಥದಲ್ಲಿ ಸಾಕ್ರಟೀಸ್ ಆತ್ಮವು ನಿತ್ಯ ಅಸ್ತಿತ್ವದಿಂದಿರಬೇಕು. ಅದು ನಿರಂತರವಾಗಿದ್ದು ಅಮರವಾಗಿರಬೇಕು.ಅದುವೇ ಎಲ್ಲ ವಸ್ತುಗಳ ಮೂಲ ಉಗಮ ಕಾರಣ.‌ ಅದು ಅಕಳಂಕವಾದ, ನಿರ್ಮಲವಾದ ರಚನೆಯಾಗಿರಬೇಕು. ಅನೇಕ ಧಾತುಗಳಿಂದ ಕೂಡಿದ ಸಂಯುಕ್ತವಾಗಿರಲಾರದು. ಆತ್ಮದ ನಿಜ ಸ್ವರೂಪವನ್ನು ಕಾಣಬೇಕಾದರೆ ಈಗ ನಾವು ನೋಡುವಂತೆ, ದೇಹದೊಂದಿಗೆ ಸೇರಿ ಇತರ ದುರವಸ್ಥೆಗಳಿಂದ ಕೂಡಿ ಕೆಟ್ಟಿರುವಾಗ ಅಲ್ಲ.‌ಆತ್ಮವನ್ನು ವಿಚಾರದ ಕಣ್ಣಿನಿಂದ ಧ್ಯಾನಿಸಬೇಕು. ಅದನ್ನು ಮೂಲ ಪರಿಶುದ್ಧತೆಯಲ್ಲಿ ಕಾಣಬೇಕು ಎನ್ನುತ್ತಾನೆ. ಇದು ಯಾಜ್ಞವಲ್ಕ್ಯರು , ಕಠೋಪನಿಷತ್ತಿನಲ್ಲಿ ಯಮ ಮತ್ತಿತರರು ಆತ್ಮವನ್ನು ವರ್ಣಿಸಿದುದಕ್ಕೆ ಬಹಳ ಸಮೀಪವಾಗಿದೆ. ಅಲ್ಲದೆ ಭಗವದ್ಗೀತೆಯಲ್ಲಿ ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ ( ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿಯು ಸುಡಲಾರದು – 2-23 ) ಎಂದಂತೆ ಸಾಕ್ರಟೀಸ್ ಕೂಡಾ ಜ್ವರವಾಗಲೀ,ಮತ್ತಾವ ರೋಗವಾಗಲೀ , ಕೊರಳಿಗೆ ಕತ್ತಿಯನ್ನು ಹಾಕಿದಾಗ ಆಗಲೀ , ಶರೀರವನ್ನು ಛಿದ್ರ ಛಿದ್ರ ಮಾಡಿದರೂ ನಾಶವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಆತ್ಮವು ದೈವಿಕಕ್ಕೆ ಮತ್ತು ಅನಂತಕ್ಕೆ ಹತ್ತಿರವಾದದ್ದು. ಆದ್ದರಿಂದ ಅದು ಬೇರೆ ವಸ್ತುಗಳಂತಲ್ಲದೆ ತನಗೆ ತಾನೇ ಸಮವಾದದ್ದು. ಆತ್ಮಕ್ಕೆ ಹುಟ್ಟುವ ಮೊದಲಿನ ‌ನೆನಪುಗಳೂ ಇರುತ್ತವೆ ಎನ್ನುತ್ತಾನೆ. ಆತ್ಮ ಅವಿನಾಶಿ ಎಂಬುವುದಕ್ಕೆ ಸಾಕ್ರಟೀಸ್ ಒಂದು ವಿಶೇಷ ಕಾರಣ ನೀಡುತ್ತಾನೆ. ಏನೆಂದರೆ ಸಾವುಗಳಿಂದಾಗಿ ಪ್ರಾಣಿ,ಪಕ್ಷಿ, ಮರ ಗಿಡ, ಮನುಷ್ಯರಾರೂ ಇಲ್ಲದೆ ಜಗತ್ತು ಖಾಲಿಯಾಗಬೇಕಿತ್ತು. ಅದು ತುಂಬಿಕೊಂಡೇ ಇರುವುದರ ಅರ್ಥ ಏನೆಂದರೆ ಸತ್ತದ್ದೆಲ್ಲ ಮರಳಿ ಹುಟ್ಟಿ ಬರುತ್ತದೆ.

ಸಾಕ್ರಟೀಸನ ಕಲ್ಪನೆಯಲ್ಲಿ ಪುನರ್ಜನ್ಮ :

ಈ ವಾದದ ಪರಿಣಾಮ ಆತ್ಮನ ಮರುಜನ್ಮ. ನಾನು ಈ ಪುನರ್ಜನ್ಮದ ಕಲ್ಪನೆ ಕೇವಲ ಭಾರತದಲ್ಲಿ ಮಾತ್ರ ಹುಟ್ಟಿಕೊಂಡದ್ದು. ಭಾರತದ ಧರ್ಮಗಳಲ್ಲಿ ಮಾತ್ರ ಇದನ್ನು ಮತ್ತಷ್ಟು ಕಲ್ಪನೆಯ ರೆಕ್ಕೆ ಪುಕ್ಕ ಹಚ್ಚಿ ಬೆಳೆಸಲಾಗಿದೆ ಎಂದುಕೊಂಡಿದ್ದೆ. ಆದರೆ ಸಾಕ್ರಟೀಸ್- ಪ್ಲೇಟೋ ವಿಚಾರಗಳನ್ನು ನೋಡಿದ ಮೇಲೆ ನನ್ನ ನಾಲಿಗೆ ನಾನೇ ಕಚ್ಚಿಕೊಂಡೆ. ಈ ಪುನರ್ಜನ್ಮ ಹೇಗಾಗುತ್ತದೆ ? ಅದನ್ನು ಬದುಕಿರುವ ಸಾಕ್ರಟೀಸ್ ಹೇಳಲಾರ. ಏಕೆಂದರೆ ಸತ್ತ ನಂತರ ಏನೆಲ್ಲ ಆಗುತ್ತದೆಯೋ ತಿಳಿಯುವ ಸಾಧ್ಯತೆ ಇಲ್ಲ. ಅದಕ್ಕಾಗಿ ಸಾಕ್ರಟೀಸ್ ಒಂದು ಕತೆ ಹೇಳುತ್ತಾನೆ.‌ ರಣರಂಗದಲ್ಲಿ ಸತ್ತು ಒರಗಿದ ಒಬ್ಬ ವೀರ ಅರ್ ಎಂಬುವನು 12 ದಿನಗಳ ನಂತರ ಮತ್ತೆ ಜೀವ ಬಂದು ಎದ್ದೇಳುತ್ತಾನಂತೆ. ಆ ವೀರ ಪರಲೋಕಕ್ಕೆ ಹೋದ ಮೇಲೆ ಅಲ್ಲಿ ನಮ್ಮ ಯಮನಂತಹ ನ್ಯಾಯಾಧಿಪತಿ ಅವನಿಗೆ,’ ಸತ್ತ ಮೇಲೆ ಪರಲೋಕದಲ್ಲೇನು ನಡೆಯುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕೆಂದೂ , ನಂತರ ಅವನು ಮರಳಿ ಭೂಲೋಕಕ್ಕೆ ಹೋಗಿ ವರದಿ ಮಾಡುವ ದೂತನಾಗಬೇಕೆಂದೂ ಹೇಳುತ್ತಾನೆ. ಈ ವೀರ ವರದಿ ಮಾಡುತ್ತಾನೆ : ಕರಾಳ ರೂಪವುಳ್ಳ ಭಯಂಕರ ವ್ಯಕ್ತಿಗಳು ಸತ್ತು ಪರಲೋಕಕ್ಕೆ ಹೋದವರ ಕೈಕಾಲುಗಳನ್ನು ಕಟ್ಟಿ ನೆಲಕ್ಕೆ ಬೀಳಿಸಿ ಸಲಾಕೆಗಳಿಂದ ಹೊಡೆದು , ರಸ್ತೆಯಲ್ಲಿ ಪಕ್ಕಕ್ಕೆ ಎಳೆದುಕೊಂಡು ಹೋಗಿ ಮುಳ್ಳುಗಳ ಮೇಲೆ ತಿಗಣೆಯನ್ನು ಹೊಸಕಿ ಹಾಕುವಂತೆ ಹೊಸೆಯುತ್ತಾ , ಅಲ್ಲಿ ಹೋಗುತ್ತಿರುವವರಿಗೆ ಇವರು ಎಂತಹಾ ದುಷ್ಕೃತ್ಯಗಳನ್ನು ಎಸಗಿದ್ದಾರೆ ಎಂದು ಸಾರುತ್ತಾ ಅವರನ್ನು ನರಕಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳುತ್ತಿದ್ದರು. ಅಲ್ಲಿಯ ಕರ್ಕಶ ಗರ್ಜನೆ ಕೇಳಿದಾಗ ಹೆದರಿ ನಡುಗಿಸಿದ ಭೀತಿಯಷ್ಟು ಕ್ರೂರವಾದುದು ಯಾವುದು ಇರಲಿಲ್ಲ ಎಂದು ಅರ್ ಹೇಳಿದನಂತೆ.

ಹೀಗೆ ನರಕದ ವಾಸವನ್ನು ಅನುಭವಿಸಿ ಬಂದವರು ಅಲ್ಲಿ ಅವರು ತಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಅಪಕಾರಗಳಿಗೆ ಪ್ರತಿಯಾಗಿ ಹತ್ತು ಪಟ್ಟು ಸಂಕಟಪಡಬೇಕಾಯಿತು ಎಂದು ಗೋಳಾಡುತ್ತಾ ಹೇಳುತ್ತಿದ್ದರಂತೆ . ಹಾಗೆಯೇ ಉಪಕಾರ ಮಾಡಿದವರು, ನ್ಯಾಯಯುತವಾದ ಜೀವನ ನಡೆಸಿದವರು ಅದರ ಹತ್ತು ಪಟ್ಟು ಸ್ವರ್ಗ ಸುಖವನ್ನು ಅನುಭವಿಸಿದುದನ್ನೂ , ಕಲ್ಪಿಸಿಕೊಳ್ಳಲೂ ಕೂಡಾ ಆಗದ ಸುಂದರ ದೃಶ್ಯಗಳನ್ನು ವರ್ಣಿಸುತ್ತಿದ್ದರಂತೆ.

ಹೀಗೆ ನರಕ ಅಥವಾ ಸ್ವರ್ಗವಾಸವನ್ನು ಸಾವಿರ ವರ್ಷಗಳ ಕಾಲ ಅನುಭವಿಸಿದ ಮೇಲೆ ಅವರನ್ನು ಭೂತ,ವರ್ತಮಾನ, ಭವಿಷ್ಯತ್ ಕಾಲವನ್ನು ಪ್ರತಿನಿಧಿಸುವ ಮೂರು ದೇವತೆಗಳ ಬಳಿ ಕರೆತಂದು ಮುಂದೆ ಯಾವ ಜನ್ಮ ಪಡೆಯಬೇಕೆಂದು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತಂತೆ. ಅಲ್ಲಿ ಹಲವಾರು ರೀತಿಯ ಜನ್ಮಗಳ ಮಾದರಿ ಆಯ್ಕೆಗೆ ಲಭ್ಯವಿದ್ದವು. ವಿವಿಧ ರೀತಿಯ ಪ್ರಾಣಿ,ಪಕ್ಷಿಗಳ ಜನ್ಮ, ಮನುಷ್ಯರಲ್ಲಿ ಪೀಡಕರು,ಕ್ರೂರಿಗಳು, ದಾರಿದ್ರ್ಯ-ಶ್ರೀಮಂತಿಕೆ, ಸುರೂಪ-ಕುರೂಪ, ರೋಗ ಪೀಡಿತ- ಆರೋಗ್ಯವಂತ , ಉದಾತ್ತ ಗುಣ- ಕೆಡಕುತನ ಹೀಗೆ ಹಲ ಹಲವು ಮಾದರಿಗಳು ಮತ್ತದರ ವಿವಿಧ ರೀತಿಯ ಬೆರಕೆಗಳ ಜನ್ಮಗಳ ಮಾದರಿಗಳೂ ಇದ್ದವಂತೆ. ಆದರೆ ಈ ಆತ್ಮಗಳು ತಮ್ಮ ಹಿಂದಿನ ಜನ್ಮದ ಅನುಭವದ ಆಧಾರದ ಮೇಲೆ ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ.

ಯಾರೋ ಹಂಸ, ಮತ್ಯಾರೋ ರಣಹದ್ದು ಹೀಗೆ ಕೋಗಿಲೆ, ಕಪಿ, ಸಿಂಹದ ಜನ್ಮಗಳನ್ನು ಆಯ್ಕೆ ಮಾಡಿಕೊಂಡರಂತೆ. ಪುರುಷರು ಸ್ತ್ರೀ ಜನ್ಮವನ್ನೂ ಆಯ್ಕೆ ಮಾಡಿಕೊಂಡರಂತೆ. ಮಾನವರು ಪ್ರಾಣಿಗಳಾಗುವಷ್ಟೇ ಅಲ್ಲದೆ ಸಾಧು ಮೃಗಗಳು ದುಷ್ಟ ಮೃಗಗಳಾಗಿ ಹಾಗೇ ದುಷ್ಟ ಮೃಗಗಳು ಸಾಧು ಮೃಗಗಳಾಗಿ ಜನ್ಮವನ್ನು ಬದಲಾಯಿಸಿಕೊಂಡವಂತೆ. ಮಾನವರಲ್ಲಿ ಒಳ್ಳೆಯವರು ಮತ್ತಷ್ಟು ಸಭ್ಯರಾಗಿ, ಕೆಟ್ಟವರು ಕ್ರೂರಿಗಳಾಗಿ ಹೀಗೆ ಎಷ್ಟೋ ವಿಧದ ಬೆರಕೆಗಳಾಗಿ ಜನ್ಮ ಪಡೆದವಂತೆ. ನಂತರ ಸುಷುಪ್ತಿ ಎಂಬ ನದಿಯ ಬಳಿಗೆ ಕರೆದೊಯ್ದು ಮರವೆಯನ್ನುಂಟು ಮಾಡುವ ಅದರ ನೀರನ್ನು ಕುಡಿಸಲಾಯಿತಂತೆ. ಆಗ ಹಿಂದಿನದೆಲ್ಲವೂ ಮರವೆಯಾಗಿ ಮುಂದಿನ ಜನ್ಮ ತಳೆಯುವರಂತೆ.

ಹೀಗೆ ಯಾವೊಬ್ಬ ಪ್ರಾಣಿಯ, ಯಾರೊಬ್ಬ ಮನುಷ್ಯರ ಜೀವನವೂ ಅವರ ಪಡೆದ ಜನ್ಮಕ್ಕೆ ತಕ್ಕಂತೆ ಹುಟ್ಟಿನಿಂದಲೇ ಬರುವ ಗುಣ ವಿಶೇಷಗಳು. ಶ್ರೇಷ್ಠ ಜನ್ಮ,ಕೀಳು ಜನ್ಮ, ದಡ್ಡತನ,ಜಾಣತನ ಇತ್ಯಾದಿಗಳು ವಿವಿಧ ಬೆರಕೆಗಳಲ್ಲಿ ಯಾವ ರೂಪ ತಳೆಯುತ್ತವೆಂದು ಹೇಳಲಾಗದು.
ಹೀಗೆ ಸಾಗುತ್ತದೆ ಸಾಕ್ರಟೀಸನ ಪರಲೋಕ, ನರಕದ ಕಲ್ಪನೆ. ನಮ್ಮದೇ ಗರುಡ ಪುರಾಣದ ಭಯಂಕರ ವರ್ಣನೆಗಳ ಸಂಕ್ಷಿಪ್ತ ರೂಪದಂತೆ ಕಾಣುತ್ತದೆಯಲ್ಲವೇ !
ನಮ್ಮ ಗರುಡ ಪುರಾಣದ ವರ್ಣನೆಗಳು ಸಾಕ್ರಟೀಸ ಮತ್ತು ಪ್ಲೇಟೋಗಳ ವರ್ಣನೆಗಿಂತ ಬಹಳ ವರ್ಣಮಯವಾಗಿರುವಂತೆ ಉಪನಿಷತ್ತಿನಲ್ಲಿನ ಆತ್ಮದ ವಿವರಣೆ, ವಿಶ್ಲೇಷಣೆಗಳೂ ಬಹಳ ಗಹನವಾಗಿವೆ ಮತ್ತಷ್ಟು ವಿವರಗಳಿಂದ ಕೂಡಿವೆ.
ಉಪನಿಷತ್ತುಗಳು ತತ್ವಶಾಸ್ತ್ರೀಯ ವಿವರಣೆಗೆ ಸೀಮಿತವಾಗಿ, ನರಕದ ಭಯಾನಕತೆಯ ವರ್ಣನೆ, ವಿವಿಧ ರೀತಿಯ ಶಿಕ್ಷೆಗಳು, ವಿವಿಧ ರೀತಿಯ ಪಾಪಗಳಿಗೆ ಸಿಗುವ ಪುನರ್ಜನ್ಮಗಳ ವಿವರಣೆಗಳನ್ನು ಗರುಡ ಪುರಾಣಕ್ಕೆ ವಹಿಸಲಾಗಿದೆ.
ಆದರೆ ಮುಖ್ಯ ಪ್ರಶ್ನೆ ಏನೆಂದರೆ ಭಾರತದಲ್ಲೂ, ಗ್ರೀಸಿನಲ್ಲೂ ಆತ್ಮ, ಪಾಪ, ಪುಣ್ಯ, ನರಕ, ಸ್ವಗ೯, ಪುನರ್ಜನ್ಮ ಮೊದಲಾದ ಕಲ್ಪನೆಗಳು ಏಕೆ ಮೂಡಿ ಬಂದವು ? ಅದರ ಅಗತ್ಯ ಏನಿತ್ತು ?

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: