ಸದರ್ನ್ ಎಕಾನಮಿಸ್ಟ್ @ 60

ಡಿ ಯಶೋದಾ

“ನಾವು ಮಾಡುವ ಕೆಲಸದಲ್ಲಿ ನಮಗೆ ತೃಪ್ತಿ ಇರಬೇಕು. ಆ ತೃಪ್ತಿ ನೀಡುವ ಸಂತೋಷ ಬೇರೆ ಯಾವ ಬಿರುದು, ಸನ್ಮಾನಗಳಿಂದಲೂ ದೊರೆಯುವುದಿಲ್ಲ. ಪ್ರತಿದಿನ ಊಟ ಮಾಡುವ ಮುಂಚೆ ಇವತ್ತಿನ ಊಟ ತಿನ್ನಲು ನಾನು ಅರ್ಹಳಾಗಿದ್ದೇನೆಯೇ ಎಂಬ ಪ್ರಶ್ನೆ ನಮಗೆ ಪ್ರತಿಬಾರಿಯೂ ಕಾಡಬೇಕು. ಆಗ ನಾವೆಂದೂ ಜೀವನದಲ್ಲಿ ನಮ್ಮ ಜವಾಬ್ದಾರಿ ಮರೆಯುವುದಿಲ್ಲ”- ಇಂಥ ತತ್ವವನ್ನು ಪಾಲಿಸಿಕೊಂಡು ಬರುತ್ತಿರುವವರು ಹಿರಿಯ ಪತ್ರಕರ್ತೆ ‘ಸದರ್ನ್ ಎಕಾನಮಿಸ್ಟ್ ಇಂಗ್ಲಿಷ್ ಪಾಕ್ಷಿಕ ಪತ್ರಿಕೆಯ ಸಂಪಾದಕಿ ಸುಶೀಲಾ ಸುಬ್ರಹ್ಮಣ್ಯ.

ಸದರ್ನ್ ಎಕಾನಮಿಸ್ಟ್ ಎಂಬ ಆರ್ಥಿಕ ವಿಷಯಗಳನ್ನೊಳಗೊಂಡ ಒಂದು ಪಾಕ್ಷಿಕ ಪತ್ರಿಕೆ ೬೦ ವರ್ಷಗಳ ಸುದೀರ್ಘ ಅವಧಿಯನ್ನು ಪೂರೈಸಿ ಮುನ್ನಡೆಯುತ್ತಿರುವುದು ಒಂದು ದಾಖಲೆ. ಅದರಲ್ಲೂ ಅದನ್ನು ಒಬ್ಬ ಮಹಿಳೆ ಅನೇಕ ಏಳು-ಬೀಳುಗಳಲ್ಲೂ ಮುನ್ನಡೆಸಿಕೊಂಡು ಬಂದಿರುವುದು ದೊಡ್ಡ ಸಾಧನೆಯೇ.

ಈ ಪತ್ರಿಕೆಯ ವಜ್ರ ಮಹೋತ್ಸವ ಹಾಗೂ ೬೧ನೇ ವರ್ಷದ ಮೊದಲ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ ಮೇ ೫ರ ಗುರುವಾರ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.

ತಮ್ಮ ಪತಿ ಕೆ.ಎನ್. ಸುಬ್ರಹ್ಮಣ್ಯ ಅವರು ಸ್ಥಾಪಿಸಿ ತಾವು ಸಂಪಾದಕರಾಗಿರುವ ಈ ಪತ್ರಿಕೆಗೆ ೨೩ ವರ್ಷವಿರುವಾಗ ಪತಿ ನಿಧನ ಹೊಂದುತ್ತಾರೆ. ಒಂದು ಕಡೆ ಪತಿಯ ಸಾವು, ಇನ್ನೊಂದು ಕಡೆ ಭವಿಷ್ಯದ ಚಿಂತೆ. ಆಗ ಸುಶೀಲಾ ಅವರಿಗೆ ಎಲ್ಲದಕ್ಕಿಂತ ದೊಡ್ಡಾದಾಗಿ ಕಂಡಿದ್ದು ತಮ್ಮ ಪತಿ ಬಲು ಪ್ರೀತಿಯಿಂದ, ತುಂಬಾ ಆಸೆಯಿಂದ ಮಗುವಿನಂತೆ ಬೆಳೆಸಿಕೊಂಡು ಬಂದ ಪತ್ರಿಕೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸಬಾರದು ಎಂಬುದು. ಹಾಗಾಗಿ ಅವರು ತಮ್ಮ ಈ ಮಗುವನ್ನು ೬೦ ವರ್ಷಗಳ ಗಡಿ ಮುಟ್ಟಿಸಿದ್ದಾರೆ.

ಜೀವನದಲ್ಲಿ ಸಾಕಷ್ಟು ಪೆಟ್ಟು ತಿಂದು, ನೋವನ್ನು ಅನುಭವಿಸಿ, ಕಷ್ಟದಲ್ಲಿ ಬೆಳೆದಿರುವ ಸುಶೀಲಾ ಅವರಿಗೆ ಅದನ್ನೆಲ್ಲ ಎದುರಿಸಲು ಸಾಧ್ಯವಾಗಿದ್ದು ತಮ್ಮ ಸಹನಾಶೀಲತೆಯಿಂದ. ಆ ಸಹನೆ ಸಹ ಜೀವನದ ಪಾಠ. ಒಂದೊಂದು ಪೆಟ್ಟೂ ಒಂದು ಕಲಾಕೃತಿಯನ್ನು ಸುಂದರವಾಗಿಸುವಂತೆ, ಒಂದೊಂದು ಘಟನೆಯೂ, ಒಂದೊಂದು ಸಮಸ್ಯೆಯೂ ಸುಶೀಲಾ ಅವರನ್ನು ದಿಟ್ಟರನ್ನಾಗಿಸಿದೆ.

ಆ ದಿಟ್ಟತನದಿಂದಲೇ ಪತ್ರಿಕೆ ಸಂಪಾದಕರಾಗಿ, ಪ್ರೊಫೈಟರ್ ಆಗಿ, ಪತ್ರಿಕೆಯ ಬರಹಕ್ಕಾಗಿ ಹಲವಾರು ಜನರನ್ನು ಸಂಪರ್ಕಿಸಿ, ಪತ್ರಿಕೆಗೆ ಚಂದಾದಾರರನ್ನು ಹುಡುಕಿ, ಹಣಕಾಸಿನ ವ್ಯವಹಾರ ನಿರ್ವಹಿಸಿ, ಕೆಲಸಗಾರರು ಬರದಿದ್ದಾಗ ಅವರ ಕೆಲಸಗಳನ್ನು ತಾವೇ ಮಾಡಿ, ಪತ್ರಿಕೆ ಬಿಡುಗಡೆ ನಂತರ ಚಂದಾದಾರರಿಗೆ ಪತ್ರಿಕೆ ಪೋಸ್ಟ್ ಮಾಡಿ… ಎಲ್ಲ ಕೆಲಸಗಳನ್ನೂ ನಿರ್ವಹಿಸಿದ್ದಾರೆ. ಇಷ್ಟಿದ್ದರೂ ಇದು ಟೀಮ್ ವರ್ಕ್, ತಾವು ಟೀಮ್‌ನ್ನು ನಡೆಸುತ್ತಿರುವುದದಷ್ಟೇ ಎನ್ನುವ ಸೌಜನ್ಯ ಅವರದು.

೧೯೬೨ರಲ್ಲಿ ಸುಶೀಲಾ ಅವರ ಸಂಪಾದಕತ್ವದಲ್ಲಿ, ಸುಬ್ರಹ್ಮಣ್ಯ ಅವರ ಮಾರ್ಗದರ್ಶನದಲ್ಲಿ ಸದರ್ನ್ ಎಕಾನಮಿಸ್ಟ್ ಎಂಬ ಇಂಗ್ಲಿಷ್ ಪಾಕ್ಷಿಕ ಪತ್ರಿಕೆ ಜನ್ಮ ತಳೆಯಿತು. ತಮ್ಮ ಪತಿಯ ಸಹಕಾರ, ಸಮಾನಾಸಕ್ತರ ಪ್ರೋತ್ಸಾಹದಿಂದ ಸುಶೀಲಾ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಪತ್ರಿಕೆಗೆ ೨೩ ವರ್ಷವಿರುವಾಗ ಸುಬ್ರಹ್ಮಣ್ಯ ಹಠಾತ್ ಸಾವು ಸುಶೀಲಾ ಅವರನ್ನು ದಿಕ್ಕುಗೆಡಿಸಿತು. ಗಂಡನ ಸಾವು, ಕೈಯಲ್ಲಿ ಕಾಸಿಲ್ಲ, ಪತ್ರಿಕೆ ನಡೆಸಬೇಕು, ಅವರು ಹುಚ್ಚಿಯಾಗದಿದ್ದದ್ದು ಹೆಚ್ಚು. ಆದರೆ ಅದೇನೋ ಕಿಚ್ಚು ಅವರನ್ನು ಎಚ್ಚರಿಸಿತು. ತಂದೆಯನ್ನು ಕಳೆದುಕೊಂಡ ಪತ್ರಿಕೆಗೆ ತಾಯಿಯೂ ಇಲ್ಲದಂತಾಗಬಾರದು.

ತಂದೆ- ತಾಯಿ ಎರಡೂ ತಾವೇ ಆಗಿ ಪತ್ರಿಕೆಯನ್ನು ಮುನ್ನಡೆಸಬೇಕು ಎಂಬ ಪಣ ತೊಟ್ಟರು. ಸೋಲಲಿಲ್ಲ, ಸವಾಲನ್ನು ಎದುರಿಸಲು ಮುಂದಾದರು. ಪತ್ರಿಕೆಯ ಒಂದು ಸಂಚಿಕೆಯನ್ನೂ ನಿಲ್ಲಿಸಲಿಲ್ಲ, ಪತಿಯ ಇಷ್ಟದಂತೆ ಪತ್ರಿಕೆಯನ್ನು ಮುನ್ನಡೆಸುವ ನಿರ್ಧಾರ ಮಾಡಿದರು.

“೨೦೧೨ರಲ್ಲಿ ಪತ್ರಿಕೆಯ ಸುವರ್ಣ ಮಹೋತ್ಸವ ಆಚರಿಸಲಾಯಿತು. ಅದು ನನ್ನ ಜೀವಮಾನದ ಪರಿಶ್ರಮದ ಕುರುಹು ಎನ್ನಬಹುದು. ಸುವರ್ಣ ಮಹೋತ್ಸವಕ್ಕೂ ಮುಂಚೆ ನಮ್ಮ ಮಗುವನ್ನು ಕಡೇಪಕ್ಷ ೫೦ ವರ್ಷವಾದರೂ ಸಲಹುತ್ತೀನೋ ಇಲ್ಲವೋ ಎಂಬ ಆತಂಕ ನನಗೆ ಇತ್ತು. ಆದರೆ ಈಗ ೬೦ ದಾಟಿದೆ. ೨೩ನೇ ವರ್ಷದಿಂದ ೬೦ ವರ್ಷದಲ್ಲಿ ಅನೇಕ ಬಾರಿ ಕಾಯಿಲೆ ಬಿದ್ದಿದ್ದಾನೆ.

ಪ್ರತಿ ಬಾರಿಯೂ ಮುಂದೆ ನನಗೆ ಏನಾದರೂ ಆದರೆ ನನ್ನ ಮಗುವಿನ ಗತಿ ಏನು ಎಂದು ಚಡಪಡಿಸಿದ್ದೂ ಉಂಟು. ಇದೇ ಕಾರಣಕ್ಕೆ ೨೦೦೩ರಲ್ಲಿ ಕೆ.ಎನ್. ಸುಬ್ರಹ್ಮಣ್ಯ ಫೌಂಡೇಷನ್ ಟ್ರಸ್ಟ್ ಅನ್ನು ಸ್ಥಾಪಿಸಿ ಪತ್ರಿಕೆಗೆ ಸಂಬಂಧಿಸಿದಂತೆ ವಿಲ್ ಕೂಡ ಮಾಡಿದ್ದಾನೆ. ನನ್ನ ನಂತರ ಪತ್ರಿಕೆ ಹೊಣೆಗಾರಿಕೆ ಟ್ರಸ್ಟ್ಗೆ ಹೋಗುತ್ತದೆ” ಎಂಬ ಸಮಾಧಾನ ಅವರದು.

ಒಮ್ಮೆ ತಮ್ಮ ಲೆಟರ್‌ಪ್ರೆಸ್ ಮುದ್ರಣಾಲಯದಲ್ಲಿ ಕೆಲಸಗಾರರೇ ಅಚ್ಚಿನ ಮೊಳೆಗಳನ್ನು ಕದ್ದು, ಪತ್ರಿಕೆ ಅಚ್ಚು ಮಾಡುವ ಮೊಳೆಗಳೇ ಇಲ್ಲವಾದಾಗಲೂ ಧೃತಿಗೆಡದ ಸುಶೀಲಾ ಕಂಪ್ಯೂಟರೈಜ್ ಮಾಡಿ ಸರಿಯಾದ ಸಮಯಕ್ಕೇ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಸದರ್ನ್ ಎಕಾನಮಿಸ್ಟ್ ೬೧ರ ಹರಯದಲ್ಲಿ ಮುಂದುವರಿಯುತ್ತಿರುವುದಕ್ಕೆ ಸುಶೀಲಾ ಅವರ ಈ ಧೈರ್ಯವೇ ಸಾಕ್ಷಿ.

ಪತಿಯ ಪ್ರೋತ್ಸಾಹದಲ್ಲಿ ಸದರ್ನ್ ಎಕಾನಮಿಸ್ಟ್ ಪತ್ರಿಕೆಯ ನಿರ್ವಹಣೆಯ ಹೊಣೆ ವಹಿಸಿಕೊಂಡ ಸುಶೀಲಾ ಅವರಿಗೆ ಪತ್ರಿಕೆ ನಡೆಸುವುದು ಲಾಭದಾಯಕವಲ್ಲದ್ದು ಅಷ್ಟೇ ಅಲ್ಲ, ಸಾಮಾನ್ಯ ಆದಾಯಕ್ಕೂ ಕಷ್ಟ ಎಂಬುದು ಬಹುಬೇಗನೆ ತಿಳಿಯಿತು. ಆದರೆ ಲಾಭದ ಉದ್ದೇಶವಿಲ್ಲದೆ ಪ್ರಾರಂಭಿಸಿದ ಪತ್ರಿಕೆಯಿಂದ ಪತ್ರಿಕೆ ನಡೆಸುವ ಖರ್ಚು ನೀಗಿದರೆ ಸಾಕು ಎನಿಸಿತು. ಅದೇ ಕಾರಣವಾಗೇ ಅಂದಿನಿಂದಲೂ ಇಂದಿನವರೆಗೂ ಪತ್ರಿಕೆ ಚಂದಾ ಹಣದಿಂದಲೇ ಮುಂದುವರಿದುಕೊಂಡು ಬರುತ್ತಿರುವುದು ವಿಶೇಷ. ಪತ್ರಿಕೆ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶ ಇಟ್ಟುಕೊಂಡಿದ್ದರಿಂದ ಸದರ್ನ್ ಎಕಾನಮಿಸ್ಟ್ ಇಂದಿಗೂ ವಿದ್ಯಾರ್ಥಿಗಳ, ಶಿಕ್ಷಕರ, ಅರ್ಥಶಾಸ್ತ್ರಜ್ಞರ, ವಿಶ್ಲೇಷಕರ ಮೆಚ್ಚುಗೆ ಪಡೆದಿದೆ. ಬ್ಯಾಂಕಿಂಗ್, ಕೈಗಾರಿಕೆ, ಹಣಕಾಸು ವಿಚಾರ, ಯೋಜನೆ, ವಿದೇಶಿ ವ್ಯವಹಾರ, ಕಂಪೆನಿಗಳ ವಿಷಯ, ಸ್ಟಾಕ್ ಮಾರ್ಕೆಟ್ ಮೊದಲಾದವುಗಳ ಬಗ್ಗೆ ಸದರ್ನ್ ಎಕಾನಮಿಸ್ಟ್ನಲ್ಲಿ ಓದಬಹುದು.

ದೇಶಾದ್ಯಂತ ಚಂದಾದಾರರನ್ನು ಹೊಂದಿರುವ ಈ ಪತ್ರಿಕೆಯ ಸಮಸ್ಯೆ ಎಂದರೆ ಬರುವ ಬರಹಗಳಿಗೆಲ್ಲ ಜಾಗ ಮಾಡಿಕೊಡುವುದು. ಇದಕ್ಕೆ ವಿಷಯದ ಕೊರತೆ ಆಗಿಲ್ಲ ಇಲ್ಲ.

ಸದರ್ನ್ ಎಕಾನಮಿಸ್ಟ್ ಪತ್ರಿಕೆ ತಾನು ಬೆಳೆಯುವುದರೊಂದಿಗೆ ಅನೇಕ ಲೇಖಕರನ್ನೂ ಬೆಳೆಸಿದೆ. ದೇಶ ಸ್ವತಂತ್ರಗೊಂಡು ಪಂಚವಾರ್ಷಿಕ ಯೋಜನೆಗಳ ಮೂಲಕ ಅಭಿವೃದ್ಧಿಯತ್ತ ಗಮನಹರಿಸಿದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಆರ್ಥಿಕ ಕ್ಷೇತ್ರದ ಅರಿವು ಮೂಡಿಸುವುದು ಅತ್ಯಗತ್ಯವಾಗಿತ್ತು.

ಬಡತನ, ಅನಕ್ಷರತೆಯಿಂದ ಬಳಲುತ್ತಿದ್ದ ಭಾರತದಲ್ಲಿ ಹಣಕಾಸಿನ ವ್ಯವಹಾರ ವ್ಯವಸ್ಥೆ ಮತ್ತು ಅರ್ಥಶಾಸ್ತ್ರದ ಅರಿವನ್ನು ಜನರಲ್ಲಿ ಮೂಡಿಸುವ ಸಾಧನವಾಗಿ ಪತ್ರಿಕೆಗಳು ಕಾರ್ಯ ನಿರ್ವಹಿಸುವ ಅಗತ್ಯ ಮತ್ತು ಸಾಕಷ್ಟು ಅವಕಾಶ ಇತ್ತು. ಆದರೆ ಬಹಳಷ್ಟು ಪತ್ರಿಕೆಗಳು ದಿನನಿತ್ಯದ ಆಗುಹೋಗುಗಳು ಮತ್ತು ರಾಜಕೀಯದಂತಹ ವಿಷಯಗಳ ಕಡೆಗೆ ಗಮನಹರಿಸಿದ್ದವು. ಇಂಥ ಸಂದರ್ಭದಲ್ಲಿ ಜನ್ಮ ತಳೆದ ಸದರ್ನ್ ಎಕಾನಮಿಸ್ಟ್ ಜವಾಬ್ದಾರಿಯುತ ಆರ್ಥಿಕ ಪತ್ರಿಕೋದ್ಯಮದ ಆದರ್ಶವನ್ನು ಪಾಲಿಸಿದೆ.

ಸ್ಟಡಿ ಸರ್ಕಲ್- ತಮ್ಮ ಪತ್ರಿಕೆಗೆ ತಕ್ಕಂತಹ ಬರಹಗಳನ್ನು ಆಹ್ವಾನಿಸುವ ಸಲುವಾಗಿ ಸುಶೀಲಾ ಸುಬ್ರಹ್ಮಣ್ಯ ಅವರು ಸ್ಟಡಿ ಸರ್ಕಲ್ ರಚಿಸಿಕೊಂಡಿದ್ದಾರೆ. ಈ ಸರ್ಕಲ್‌ನಲ್ಲಿರುವವರು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮನಶ್ಶಾಸ್ತ್ರ ಮೊದಲಾದ ವಿಷಯಗಳಲ್ಲಿ ತಜ್ಞರಾದವರು. ಪ್ರತಿ ತಿಂಗಳು ಸಭೆ ಸೇರುವುದು, ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವುದು, ವಿವಿಧ ಕ್ಷೇತ್ರಗಳ ತಜ್ಞರೊಡನೆ ಸಂವಾದ ನಡೆಸುವುದು ಇದರ ಮೂಲ ಉದ್ದೇಶ.

ಇಲ್ಲಿಯವರೆಗೂ ಸ್ಟಡಿ ಸರ್ಕಲ್‌ನಲ್ಲಿ ಹಲವಾರು ವಿಷಯಗಳು ಚರ್ಚೆಯಾಗಿ ಆ ವಿಷಯಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅರ್ಥಶಾಸ್ತ್ರ ಹಣಕಾಸು, ವಾಣಿಜ್ಯ ವಿಷಯಗಳಿಗೆ ಸಂಬಂಧಪಟ್ಟ ವಿವಿಧ ತಜ್ಞರು ಅಷ್ಟೇ ಅಲ್ಲದೇ, ವಿವಿಧ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಅನೇಕರು ಈ ಸ್ಟಡಿ ಸರ್ಕಲ್‌ನ ಸದಸ್ಯರಾಗಿದ್ದಾರೆ.
ಪತ್ರಿಕೆಗಳ ಆಧುನಿಕ ತಾಂತ್ರಿಕತೆ ಮತ್ತು ಹೊಸ ಹೊಸ ಪ್ರಯೋಗಗಳನ್ನು ಅಧ್ಯಯನ ಮಾಡುವುದಕ್ಕಾಗಿ ವಿವಿಧ ದೇಶಗಳಿಗೆ ಭೇಟಿ ಕೊಟ್ಟಿರುವ ಸುಶೀಲಾ, ಆರ್ಥಿಕ ವಿಷಯ ಕುರಿತ ಅನೇಕ ರೇಡಿಯೋ ಹಾಗೂ ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ- ಪ್ರತಿಭಾವಂತ ಪತ್ರಕರ್ತರೆನಿಸಿದ್ದ ತಮ್ಮ ಪತಿ ಕೆ.ಎನ್. ಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಬೇಕು ಎಂಬ ಸುಶೀಲಾ ಅವರ ಆಸೆ ಈಡೇರಿಲ್ಲ. ಈ ಸಂಬಂಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ೨೫,೦೦೦ ರೂಪಾಯಿಗಳನ್ನೂ ೨೦೧೦ರ ಜೂನ್‌ನಲ್ಲಿ ಒಪ್ಪಿಸಿದ್ದಾರೆ. ಅಭಿವೃದ್ಧಿಗೆ ಪೂರಕವಾದ ಆರ್ಥಿಕ ವಿಷಯಕ್ಕೆ ಸಂಬAಧಿಸಿದ ಸಂಶೋಧನೆಯನ್ನು ಹೊಂದಿರುವ ಕನ್ನಡ ವೈಚಾರಿಕ ಲೇಖನಕ್ಕಾಗಿ ಮುದ್ರಣ ಮಾಧ್ಯಮ ಪತ್ರಕರ್ತರಿಗೆ ಪ್ರಶಸ್ತಿ ನೀಡಬೇಕೆಂಬುದು ಅವರ ಬಯಕೆ.

ಗ್ರಂಥ ಸಂಪಾದನೆ/ ಪ್ರಕಾಶನ- ಪುಸ್ತಕ ಪ್ರೀತಿಯ ಸುಶೀಲಾ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ತಮ್ಮ ಸಂಪಾದನೆಯ ಹಾಗೂ ಇತರರ ೨೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ತಮ್ಮ ಪತಿ ಬರೆಯುತ್ತಿದ್ದ ಸಂಪಾದಕೀಯ- ‘ಇಂಡಿಯಾ ದಿ ಟರ್ಬ್ಯುಲೆಂಟ ಆಫ್ ಡಿಕೇಡ್’, ಸದರ್ನ್ ಎಕಾನಮಿಸ್ಟ್ ಪತ್ರಿಕೆಗೆ ಸಲಹೆಗಾರರಾಗಿದ್ದ ಪ್ರೊ.ಎಸ್.ಎಲ್.ಎನ್. ಸಿಂಹ ಅವರು ಬರೆಯುತ್ತಿದ್ದ ಸಂಪಾದಕೀಯದ ‘ವಾಯ್ಸ್ ಆಫ್ ವಿಸ್ಡಂ’ ಪುಸ್ತಕಗಳೂ ಸೇರಿವೆ. ಇತರ ಲೇಖಕರ ಜೊತೆಯಲ್ಲಿ ಸಹ ಸಂಪಾದಕರಾಗಿ ಇರುವ ಸುಶೀಲಾ ಅವರ ಸಂಪಾದನಾ ಪುಸ್ತಕಗಳನ್ನು ಬೇರೆ ಪ್ರಕಾಶನಗಳೂ ಪ್ರಕಟಿಸಿವೆ.

ಭಾರತದಲ್ಲಿ ವಿಶೇಷ ಎನಿಸುವಂತಹ ಪತ್ರಿಕೆ ನಡೆಸುತ್ತಿರುವ ಸುಶೀಲಾ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆಯಾದರೂ ಅವರ ಸಾಧನೆಗೆ ತಕ್ಕ ಪ್ರತಿಫಲ ದೊರೆತಿಲ್ಲ ಎಂದೇ ಹೇಳಬಹುದು.

ಮನ್ನಣೆ ಸಿಗಲಿ, ಬಿಡಲಿ ಸುಶೀಲಾ ಅವರು ಇವುಗಳಿಗಾಗಿ ಹಿಗ್ಗಿಲ್ಲ, ಕುಗ್ಗಿಲ್ಲ. ಬೆಂಗಳೂರಿನ ಪ್ಯಾಲೆಸ್ ಗುಟ್ಟಹಳ್ಳಿಯ ಜಾಮಿಯಾ ಮಸೀದಿ ಸಂಕೀರ್ಣದ ತಮ್ಮ ಕಚೇರಿಯಲ್ಲಿ ಒಂದೇ ನಿಷ್ಠೆಯಿಂದ ಪತ್ರಿಕೆ ಕೆಲಸದಲ್ಲಿ ತೊಡಗಿರುತ್ತಾರೆ.
“ನಮಗೆ ನಾವಷ್ಟೇ, ಬೇರೆಯವರನ್ನು ಅವಲಂಬಿಸಲು ಸಾಧ್ಯವಿಲ್ಲ. ನಮ್ಮ ಸಮಸ್ಯೆಗೆ ನಮ್ಮಿಂದಲೇ ಪರಿಹಾರ” ಎನ್ನುವ ಸುಶೀಲಾ, ಅದೇ ನಂಬಿಕೆಯಿಂದಲೇ ೬೦ ದಾಟಿರುವ ಪತ್ರಿಕೆಯನ್ನು ೮೮ರ ಹರಯದಲ್ಲೂ ಛಲ ಬಿಡದೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

‍ಲೇಖಕರು Admin

May 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: