ಪಿ ಪಿ ಉಪಾಧ್ಯ ಸರಣಿ ಕಥೆ 2 – ನಿರಾಶೆಯಾಗಿತ್ತು ಶಾಮಣ್ಣನಿಗೆ…

ಪಿ ಪಿ ಉಪಾಧ್ಯ

2

ನಿರಾಶೆಯಾಗಿತ್ತು ಶಾಮಣ್ಣನಿಗೆ

ಶಾಮಣ್ಣ ಪ್ರಾಯಕ್ಕೆ ಕಾಲಿಡುತ್ತಿದ್ದಂತೆಯೇ ಅವರಲ್ಲಿ ಹುಟ್ಟಿದ ಒಂದು ಆಸೆ ದಿನಕಳೆಯುತ್ತಿದ್ದಂತೆ ಒಳಗೊಳಗೇ ಪ್ರಬಲವಾಗಿ ಬೇರು ಬಿಟ್ಟಿತ್ತು. ಯಾರಲ್ಲೂ ಹೇಳಿಕೊಳ್ಳಲಾಗದಂತಹ ಆ ಆಸೆ ಅಪ್ಪನ ಹೆದರಿಕೆಯಿಂದಾಗಿ ಈಡೇರಿಸಿಕೊಳ್ಳಲೂ ಆಗದೆ ನಿಧಾನವಾಗಿ ಅವರನ್ನು ಕೊಲ್ಲುತ್ತಿದ್ದುದೂ ಹೌದು. ಅದೂ ಒಮ್ಮೆ ಅವರ ಜೊತೆಯವನೇ ಆದ ಮೇಲಿನ ಮನೆಯ ತಮ್ಮಣ್ಣ ಇವರನ್ನು ತಿವಿದು ಬಿಟ್ಟಾಗಲಂತೂ ಬಯಕೆ ಉಭ್ರಮಿಸಿತ್ತು.

ತಮ್ಮಣ್ಣ ಇವರಿಗಿಂತ ವರ್ಷವೆರಡು ವರ್ಷ ದೊಡ್ಡವನು. ಒಳ್ಳೇ ಮಾತುಗಾರ. ಇವರ ಆಸ್ತಿಯ ನೂರರಲ್ಲಿ ಒಂದು ಪಾಲೂ ಇಲ್ಲದಿದ್ದರೂ ಜೀವನವನ್ನು ದಿನ ದಿನವೂ ಆನಂದಿಸುತ್ತ ಬದುಕುತ್ತಿದ್ದವ. ಜೊತೆಗೆ ಶೋಕೀಲಾಲನೂ. ಇವರಿಬ್ಬರೇ ಇದ್ದಾಗ ರಸವತ್ತಾದ ಕಥೆಗಳನ್ನು ಹೇಳುತ್ತಿದ್ದ. ಜೊಲ್ಲು ಸುರಿಯುವಂತೆ ಮಾಡುವ ಅಂತಹ ಕಥೆಗಳನ್ನು ಕೇಳಿದ ಶಾಮಣ್ಣ ಎದುರಿಗೆ ಛೆ.. ಛೆ.. ಇದೆಲ್ಲ ಎಂತದು ಮಾರಾಯ… ಮರ್ಯಾದಸ್ತರ ಮನೆಯವರು ಮಾಡುವ ಕೆಲಸವೇ’ ಎಂದರೂ ಅವನು ಆಚೆಗೆ ಹೋದ ಮೇಲೆ ತನ್ನಷ್ಟಕ್ಕೆ ಅವ ಹೇಳಿದ್ದನ್ನು ಪದೇ ಪದೇ ಮೆಲುಕು ಹಾಕುತ್ತ ಸುಖಿಸುತ್ತಿದ್ದರು. ಮನೆಯ ಬಡತನದ ಹೊರತಾಗಿಯೂ ಬದುಕನ್ನು ಅನುಭವಿಸಬೇಕು.. ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು’ ಎಂದು ಏನೇನೋ ಹೇಳುತ್ತಿದ್ದ ಅವನ ಮಾತುಗಳನ್ನು ಅರಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.

ತಾನಾಡುವ ಮಾತುಗಳನ್ನು ತೀರ ದಡ್ಡನಂತೆ ಕೇಳುವ ಶಾಮಣ್ಣನಿಗೆ ಕಥೆ ಹೇಳುವುದೆಂದರೆ ತಮ್ಮಣ್ಣನಿಗೂ ಆನಂದವೇ. ಅವರಿಬ್ಬರ ನಡುವೆ ಬೇರೆ ಯಾವುದೇ ಸಂಬಂಧ ಇಲ್ಲದಿದ್ದರೂ ಈ ಕಥೆ ಹೇಳುವ ಮತ್ತು ಕೇಳುವ ಕ್ರಿಯೆಯಲ್ಲಿ ಇಬ್ಬರೂ ಒಟ್ಟಾಗಿರುತ್ತಿದ್ದರು. ಅದೂ ಸಂಜೆ ಸೂರ್ಯ ಕಂತುವ ಮೊದಲು ಒಂದೆರಡು ಘಳಿಗೆ ಹೊತ್ತು. ಉಳಿದಂತೆ ಶಾಮಣ್ಣನವರಿಗಾದರೆ ದುಡಿಯುವ ಅಗತ್ಯವಿಲ್ಲ ನಿಜ. ಆದರೆ ತಮ್ಮಣ್ಣನಿಗೆ ಹೊಟ್ಟೆ ತುಂಬಬೇಕಲ್ಲ. ಇದ್ದ ಗದ್ದೆಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಮೈ ಮುರಿಯೆ ದುಡಿದರೂ ವರ್ಷದ ಮೂರು ತಿಂಗಳಿಗೆ ಸಾಕಾಗುವಷ್ಟೂ ಭತ್ತ ಬರುವುದಿಲ್ಲವೆಂದಾಗ ಆ ಗದ್ದೆಗಳಲ್ಲಿ ಕೆಲಸವಿಲ್ಲದ ಕಾಲದಲ್ಲಿ ಬೇರೆ ಕಡೆ ಕೂಲಿಯನ್ನಾದರೂ ಮಾಡಬೇಕಲ್ಲ. ಹಾಗಾಗಿ ದಿನವಿಡೀ ಎಲ್ಲೆಲ್ಲೋ ಮಾಡುವ ಕೆಲಸವೆಲ್ಲ ಮುಗಿದ ಮೇಲೆ ಸಿಕ್ಕುವ ಸಂಜೆ ಹೊತ್ತಿನ ಸಮಯವಲ್ಲದೆ ಅವನಿಗೆ ಬೇರೆ ಪುರುಸೊತ್ತೂ ಸಿಗದು. ಆ ಸಮಯದಲ್ಲಿಯೇ ಶಾಮಣ್ಣ ಅವನ ಸಂಗಾತಿ.

ಹಾಗೆಯೇ ಒಂದು ಸಂಜೆ ಮಾತನಾಡುತ್ತ ತಮ್ಮಣ್ಣ ಶಾಮಣ್ಣನನ್ನು ಮನೆಯಿಂದ ಹೊರಗೆ ಹೊರಡಿಸಿದ. ನಡೆಯುತ್ತ ನಡೆಯುತ್ತ ದೂರ ಸಾಗಿದ್ದೇ ತಿಳಿಯದೆ ಒಂದು ಗುಡಿಸಲಿನ ಮುಂದೆ ಬಂದು ನಿಂತಾಗಲೇ ಶಾಮಣ್ಣನಿಗೆ ತಿಳಿದದ್ದು ತಾವು ಮನೆ ಬಿಟ್ಟು ತುಂಬ ದೂರ ಬಂದಿದ್ದೇವೆ ಎಂದು. ಏನು…’ ಎನ್ನುವಂತೆ ಕೇಳಿದರೆ ತಮ್ಮಣ್ಣ ಕಣ್ಣು ಮಿಟುಕಿಸುತ್ತಲೇ ಗುಡಿಸಲಿನ ಬಾಗಿಲನ್ನು ಜೋರಾಗಿ ತಳ್ಳುತ್ತ ನಿಧಾನವಾಗಿ ಲಕ್ಷ್ಮೀ..’ ಎಂದು ಕರೆದ. ಶಾಮಣ್ಣ ಏನೊಂದೂ ಅರ್ಥವಾಗದೆ ಮಿಕಿ ಮಿಕಿ ನೋಡುತ್ತ ಇರುವಾಗಲೇ ಅರೆ ತೆರೆದ ಬಾಗಿಲಿನಿಂದ ಜಾರುತ್ತಿದ್ದ ಸೆರಗನ್ನು ಮೈ ಮೇಲೆ ಎಳೆಕೊಳ್ಳುವ ಪ್ರಯತ್ನದಲ್ಲಿ ಮೈಯ್ಯನ್ನು ಇನ್ನಷ್ಟು ತೋರಿಸುತ್ತ ಹೆಂಗಸೊಬ್ಬಳು ಹೊರಗೆ ಇಣಕಿದ್ದಳು.

ಓ.. ತಮ್ಮಣ್ಣಯ್ಯ.. ಬನ್ನಿ ಬನ್ನಿ.. ಏನು ಬಹಳ ಅಪರೂಪ’ ಎಂದು ತನ್ನ ಹೊಗೆಸೊಪ್ಪು ತಿಂದೂ ತಿಂದೂ ಪಾಚಿಗಟ್ಟಿದ್ದ ಹಲ್ಲುಗಳನ್ನು ಬಿಡುತ್ತ ಕರೆದಿದ್ದಳು. ನೋಡು ಲಕ್ಷ್ಮೀ ಯಾರು ಬಂದಿದ್ದಾರೆ’ ಎಂದು ಕೇಳಿದ. ಇಷ್ಟೊತ್ತೂ ಅವನ ಹಿಂದೆಯೇ ನಿಂತು ಇಣಿಕುತ್ತಿದ್ದ ಶಾಮಣ್ಣ ತುಸು ಈಚೆ ಬಂದರೆ ಅವರನ್ನು ನೋಡಿದ್ದೇ ಆಕೆ ಬಾಯಿ ಇಷ್ಟಗಲ ತೆರೆಯುತ್ತ ಓ ದೊಡ್ಡಯ್ಯನವರ ಮಗ.. ಏನಯ್ಯ ಇತ್ತಲಾಗಿ’ ಎಂದು ಸಂಭ್ರಮ ಪಡುತ್ತ ಅವರು ಒಳ ಬರಲು ಅನುವು ಮಾಡಿಕೊಡುವಂತೆ ಸರಿದಿದ್ದಳು. ಅನುಮಾನ ಪಡುತ್ತ ನಿಂತಿದ್ದ ಶಾಮಣ್ಣನನ್ನು ತಮ್ಮಣ್ಣ ಎಳೆದುಕೊಂಡೇ ಒಳ ಹೋದ. ಅರೆ ಕತ್ತಲಿನಲ್ಲಿ ತಡಕಾಡುತ್ತ ಅಲ್ಲಿನ ಮುರುಕಲು ಮಂಚದ ಮೇಲೆ ಕುಳಿತವರ ಕಣ್ಣು ಆ ಬೆಳಕಿಗೆ ಒಗ್ಗುವ ಮೊದಲೇ ಅದೇ ಲಕ್ಷ್ಮೀ ಇವರ ಪಕ್ಕಕ್ಕೆ ಬಂದು ಮೈ ತಗುಲಿಸಿ ಕುಳಿತೇ ಬಿಟ್ಟಿದ್ದಳು.

ಆಕೆಯ ತೆರೆದ ಬಾಯಿಯಿಂದ ಬಂದ ನಾರು ವಾಸನೆಯ ಜೊತೆಗೆ ಆಕೆಯ ಮೈ ಬೀರುತ್ತಿದ್ದ ದುರ್ನಾತದಿಂದ ಹೊಟ್ಟೆ ತೊಳೆಸಿದಂತಾದ ಶಾಮಣ್ಣ ಒಂದೇ ದಾಪಿಗೆ ಜಿಗಿದು ಆಗಲೇ ಮುಚ್ಚಿದ್ದ ಆ ಬಾಗಿಲನ್ನು ತೆರೆದುಕೊಂಡು ಹೊರ ಅಂಗಳಕ್ಕೆ ಹಾರಿದ್ದರು. ಏನು ಏನು’ ಎಂದು ತಮ್ಮಣ್ಣ ಮತ್ತು ಲಕ್ಷ್ಮೀ ಕೇಳುವುದರೊಳಗೆ ಅವರು ಬೆವರುತ್ತ ಅಂಗಳದ ಅಂಚಿಗೆ ಬಂದಾಗಿತ್ತು. ಹಿಂದೆಯೇ ಬಂದ ತಮ್ಮಣ್ಣಯ್ಯ ಏನು ಶ್ಯಾಮಣ್ಣ ಹಾಗೆ ಓಡಿ ಬಂದೆ’ ಎಂದು ಕೇಳಿದರೆ ಇನ್ನೂ ಏದುಸಿರು ಬಿಡುತ್ತಲೇ ಇದ್ದ ಶ್ಯಾಮಣ್ಣ ಏನೂ ಉತ್ತರ ಕೊಡದೆ ಮನೆಯ ದಿಕ್ಕಿಗೆ ಬಿರ ಬಿರನೇ ಹೆಜ್ಜೆ ಹಾಕಿದ್ದರು.

ತಮ್ಮಣ್ಣ ಎಷ್ಟು ಪ್ರಯತ್ನ ಪಟ್ಟರೂ ಶಾಮಣ್ಣನ ಸರಿ ಸಮಕ್ಕೆ ಹೆಜ್ಜೆ ಹಾಕಲಾರದೇ ಹಿಂದೆ ಹಿಂದೆಯೇ ಬಂದರೂ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಲೇ ಇದ್ದ. ಶ್ಯಾಮಣ್ಣ ಹಾಗೆಯೇ ವಾಪಾಸು ಬಂದದ್ದರ ಬಗ್ಗೆ ಅವನಿಗೆ ಚಿಂತೆಯಲ್ಲ. ಎಲ್ಲಿಯಾದರೂ ತನ್ನ ಅಪ್ಪನೊಡನೆ ಹೇಳಿ ಬಿಟ್ಟರೆ. ಅದೂ ತನ್ನ ಹೆಸರನ್ನೂ ಸೇರಿಸಿದರೆ… ಮತ್ತೆ ತಾನು ಆ ಊರಿನಲ್ಲಿ ಇರಲಿಕ್ಕೆ ಇದೆಯೇ.. ದೊಡ್ಡಯ್ಯನನ್ನು ಎದುರು ಹಾಕಿಕೊಂಡು ಇಲ್ಲಿ ಬದುಕಲು ಸಾಧ್ಯವೇ. ಅದು ಹೋಗಲಿ ಅವರೆಲ್ಲಿಯಾದರೂ ವಿಚಾರಣೆ ಅದೂ ಇದೂ ಎಂದು ಕರೆದರೆ ಅವರ ಎದುರಿಗೆ ಹೋಗಿ ನಿಲ್ಲುವ ಧೈರ್ಯವಾದರೂ ಇದೆಯೇ ತನ್ನಲ್ಲಿ.. ಏನೋ ಮಾಡಲು ಹೋಗಿ ಏನೋ ಆಯ್ತಲ್ಲ..

ಈ ಪೆದ್ದ ಶ್ಯಾಮಣ್ಣನನ್ನು ನಂಬಿದ್ದೇ ಮೋಸವಾಯ್ತು ಎಂದೆಲ್ಲ ಅಂದುಕೊಳ್ಳುತ್ತ ಅವನನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿದ್ದಾಗಲೇ ಶ್ಯಾಮಣ್ಣ ಮಾತ್ರ ಇವನ ಹಿಡಿತಕ್ಕೆ ಸಿಕ್ಕದೆ ಅವರ ಮನೆಯ ತಿರುವಿನಲ್ಲಿ ಮಾಯವಾಗಿದ್ದರು. ಅಂತೂ ಆ ರಾತ್ರಿಯೆಲ್ಲ ತಮ್ಮಣ್ಣಯ್ಯ ನಿದ್ದೆ ಮಾಡಿರಲಿಲ್ಲ. ಮತ್ತೆ ಮುಂದಿನ ಎರಡು ದಿನ ಊರಿನವರೆಲ್ಲರ ಕಣ್ಣು ತಪ್ಪಿಸಿಕೊಂಡೆ ತಿರುಗಿದ. ಅಷ್ಟಾಗಿಯೂ ಏನೂ ಆಗದಿದ್ದಾಗ ಈ ಹೇಡಿ ಶ್ಯಾಮ ಅದು ಹೇಗೆ ಅಪ್ಪನೊಂದಿಗೆ ಹೇಳಿಯಾನು ಎನ್ನುವ ಸಂಶಯ ತನ್ನ ಬಡ್ಡು ತಲೆಗೆ ಹೊಳೆಯಲೇ ಇಲ್ಲ್ಲವಲ್ಲ. ಸುಮ್ಮನೇ ಎರಡು ದಿನ ಹೆದರಿಕೆಯಲ್ಲಿ ಸತ್ತೆ’ ಎಂದು ತನ್ನನ್ನು ತಾನೇ ಹಳಿದುಕೊಳ್ಳುತ್ತ ತಲೆಯೆತ್ತಿಕೊಂಡು ಎಂದಿನಂತೆಯೇ ತಿರುಗಾಡ ತೊಡಗಿದ.

ಲಕ್ಷ್ಮೀ ಮತ್ತು ತಮ್ಮಣ್ಣಯ್ಯನ ಕೈಯ್ಯಿಂದ ತಪ್ಪಿಸಿಕೊಂಡು ಬಂದರೂ ಶ್ಯಾಮಣ್ಣನ ಮನಸ್ಸಿನಲ್ಲಿ ಮೊಳೆತ ಆಸೆ ಮಾತ್ರ ಪ್ರಬಲವಾಗಹತ್ತಿತ್ತು. ಅಲ್ಲಿಯವರೆಗೆ ಅಸ್ಪಷ್ಟವಾಗಿದ್ದ ಬಯಕೆ ಮೂರ್ತರೂಪ ಪಡೆದುಕೊಳ್ಳಲು ತೊಡಗಿತು. ಅಷ್ಟು ದಿನಗಳ ವರೆಗೆ ತಮ್ಮಣ್ಣ ಬಾಯಿಯಲ್ಲಿ ಹೇಳುತ್ತಿದ್ದ ಕಥೆಗಳನ್ನು ಕೇಳಿ ಎದುರಿಗೆ ನಿರಾಸಕ್ತಿ ತೋರಿಸಿದರೂ ಗುಟ್ಟಿನಲ್ಲೇ ಆನಂದಿಸುತ್ತಿದ್ದ ಶಾಮಣ್ಣನ ಮನಸ್ಸಿನಲ್ಲಿ ಈಗ ಆ ಬಯಕೆ ತೀವ್ರವಾಗ ತೊಡಗಿತು. ಆ ಲಕ್ಷ್ಮೀ ಮೈಗಂಟಿ ಕುಳಿತಾಗ ರೋಮಾಂಚನಗೊಂಡದ್ದೂ ಹೌದು.

ಈಗ ಅದನ್ನು ನೆನೆಪು ಮಾಡಿಕೊಳ್ಳುವಾಗ ಅಂದು ಅಸಹ್ಯ ಹುಟ್ಟಿಸಿದ ವಾಸನೆ ಮರೆಯಾಗಿ ಆ ರೋಮಾಂಚನ ಮಾತ್ರ ತಿರು ತಿರುಗಿ ಮನಸ್ಸಿಗೆ ಬರಹತ್ತಿತು. ಎರಡು ದಿನದ ಮಟ್ಟಿಗೆ ಕದ್ದು ತಿರುಗಿದ ತಮ್ಮಣ್ಣ ಮೂರನೆಯ ದಿನದಿಂದಲೇ ಪುನಃ ಇವನೊಂದಿಗೆ ಸಂಜೆಗಳನ್ನು ಕಳೆಯಲು ಬರತೊಡಗಿದ್ದ ಮತ್ತು ತನ್ನ ಕಥೆಗಳ ಕಟ್ಟನ್ನು ಬಿಚ್ಚಲು ತಿರುಗಿ ಪ್ರಾರಂಭಿಸಿದ್ದ. ಈಗ ಅವನು ಹೇಳುವ ಕಥೆಗಳಿಗೆ ಶ್ಯಾಮಣ್ಣ ತನ್ನ ಅಂದಿನ ಅನುಭವವನ್ನು ಸ್ವಲ್ಪ ಸ್ವಲ್ಪವೇ ಸಂಬಂಧಿಸುತ್ತ ತನ್ನ ಕಾಲ್ಪನಿಕ ಆನಂದದಲ್ಲಿ ತುಸು ನೈಜತೆಯನ್ನು ಅನುಭವಿಸತೊಡಗಿದ್ದರು.

ಅದೇ ಆನಂದದ ಕನಸು ಒಂದು ದಿನ ಅವನನ್ನು ಲಕ್ಷ್ಮೀಯ ಮನೆಯವರೆಗೆ ಒಬ್ಬನನ್ನೇ ಎಳೆದುಕೊಂಡು ಹೋದದ್ದಿತ್ತು. ಆಕೆಯ ಮನೆಯ ಬಾಗಿಲ ವರೆಗೆ ಹೋಗಿ ಧೈರ್ಯ ಸಾಲದೆ ಹಿಂದಿರುಗಿದ್ದೂ ಹೌದು. ಹಾಗೆ ಹಿಂದಿರುಗುವಾಗ ಯಾರಾದರೂ ನೋಡಿದರೇನೋ ಎಂದು ತನ್ನದೇ ಹೆಜ್ಜೆಯ ಸದ್ದಿಗೆ ದಿಗಿಲು ಬೀಳುತ್ತ ಮನೆಯ ಕಡೆಗೆ ಓಡಿದ್ದರು ಕೂಡ.

ಅಪ್ಪನ ಹೆದರಿಕೆಯನ್ನೂ ಮೀರಿ ಬಯಕೆ ಅವರನ್ನು ಕಾಡಿಸಲು ಪ್ರಾರಂಭಿಸಿದಾಗ ತಮ್ಮಣ್ಣಯ್ಯನ ಜೊತೆಗೆ ಮಾತನಾಡುವಾಗ ತನ್ನ ಮನಸ್ಸಿನ ಬಯಕೆಯನ್ನು ಹೊರ ಹಾಕಲು ತವಕಪಡತೊಡಗಿದ್ದರು. ಅವನಾಗಿಯೇ ವಿಷಯ ಎತ್ತಲಿ ಎಂದು ಕಾದರು ಸಹ. ಆದರೆ ಹಿಂದಿನ ನೆನಪು ಇನ್ನೂ ಹೆದರಿಸುತ್ತಿದ್ದುದರಿಂದ ತಮ್ಮಣ್ಣ ಮುಂದಿನ ಕೆಲ ದಿನಗಳವರೆಗೆ ಅಂತಹ ವಿಷಯದ ಬಗ್ಗೆ ಮಾತನಾಡುವುದನ್ನು ತೀರ ಕಡಿಮೆ ಮಾಡಿದ್ದ. ನಿರಾಶೆಯಾಗಿತ್ತು ಶಾಮಣ್ಣನಿಗೆ.

| ಇನ್ನು ನಾಳೆಗೆ |

‍ಲೇಖಕರು Admin

May 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: