ಸತ್ಯಬೋಧ ಜೋಶಿ ಹೊಸ ಕವಿತೆ- ಜಲ್ಮದ ಸಂತಿ..

ಸತ್ಯಬೋಧ ಜೋಶಿ

ಆ ಕಡೆಯ ಊರಾನ ತೇರಿಗೆ ಹೊಂಟಾಳ
ಮಡಿ ಮಡಿಕಿ ಮೈಯ ಮುದುಕಿ
ಹೊತ್ತ ಗಡಗಿ ತುಂಬ ಜಲ್ಮಾನ ತುಂಬಿದರೂ
ಮುಗಿವಲ್ದು ಅವಳ ಸಂತಿ

ಮುಗಿಲು ಮಣ್ಣನು ಹೀರಿ ಮುಗಿಲು ತಾನಿರದಾಗ
ಬೆಂಕಿ ನೀರನು ಕುಡಿದು ಬೆಂಕಿ ತಾ ಸುಡದಾಗ
ಇರದ ಗಾಳಿಯು ಹುಟ್ಟಿ ಓಂಕಾರಗೈದಾಗ
ಅಂದೆಂದೊ ತಂದಿ ಕೊಟ್ಟ ಗಡಿಗೀನ ಹೊತ್ತು

ಬಂದಾಗ ತಂದಿದ್ದು, ಬೆಳದಾಗ ತುಳುಕಿದ್ದು
ಸುಖವನುಣಿಸಿದ ಉಸಿರ ಬಸಿರಾಗಿ ಹೊತ್ತಿದ್ದು
ಒಡಲ ಒಲೆಯನು ಉರಿಸಿ ತಂಪನುಣಿಸುತ ಸುರಿದು
ನೀರ ಹನಿಸಿದ ಖಾಲಿ ಮೋಡಗಳ ಹೊತ್ತು..

ಯಮನದೂರಿನ ಹೆಜ್ಜಿ ಗೆಜ್ಜೀಯ ತೊಟ್ಟಹಂಗ
ಸವೆದ ಕಾಣದ ಹಾದಿ ಮತ್ತ ಶುರು ಆದ ಹಂಗ
ಇಹದ ದಾರಿಯ ಬಿಟ್ಟು ಪರವು ಸೆಳೆದಲ್ಲೆಲ್ಲಾ
ಎಡ ಎಡವಿ ಭಾರದಾ  ಹೆಜ್ಜೀಯ ಇಟ್ಟು..
ತಂದಿ ಹಾಡಿದ ಹಾಡು ಮುಗಿಲು ಗುನುಗುನಿಸಿದ ಹಂಗ
ನೀರ ನುಂಗಿದ ಮಣ್ಣು ನದಿಯಾಗಿ ಹರದ ಹಂಗ
ಗಡಿಗಿ ಸುತ್ತಿದ ಗಾಳಿ ಒಡಲೊಳಗ ವಟಗುಟ್ಟಿ
ಬಿಸಿಲು ಬೆಂಕಿಗೆ ಬೆಂದ ಗಡಿಗೀಯ ಬಿಟ್ಟು..

‍ಲೇಖಕರು Admin

December 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಬದರಿನಾಥ ಪಳವಳ್ಳಿ

    *ಜಲ್ಮದ ಸಂತಿ:*

    _ಮೊದಲು ಗಮನ ಸೆಳೆದದ್ದು ಮುದುಕಿಯ ತವರು ಮನೆಯೊಂದಿಗಿನ ಈಗಲೂ ಹೊತ್ತ ಗಡಗಿಯ ಸಂಬಂಧ. ಪುತ್ರ ಸಂತತಿ ಆಸ್ತಿಗಾಗಿ ಮುಗಿ ಬಿದ್ದು, ಹೆತ್ತವರನ್ನು ಹುರಕೊಂಡು ತಿಂದರೂ ಸಹ, ಹೆಣ್ಣು ಸಂತಾನ ಕಡೆಗಾಲದ ವರೆಗೂ ಸಲಹಿದ್ದು ಹಲವು ಕಡೆ ನೋಡಿದ್ದೇನೆ._

    _ಒಂದು ಗಡಗಿಯ ಅಂತರಾಳ ಪಂಚಭೂತಗಳ ಒಡಲಾದದ್ದು ಸ್ತ್ರಿಯ ಹೃದಯ ವೈಶಾಲ್ಯತೆಯನ್ನು ತೋರುತ್ತಿದ್ದೆ._

    _ಇನ್ನೊಂದು ಆಯಾಮದಲ್ಲಿ ಗಮನಿಸಿದರೆ ಇಲ್ಲಿ ಹಣ್ಣು ಹಣ್ಣು ಮುದುಕಿ – ನಮ್ಮಲ್ಲೇ ಹಲವರು ಅಕಾಲ ಮಾನಸಿಕ ಮುಪ್ಪಿಗೆ ಬಿದ್ದು, ಇಹಕ್ಕೆ ಬೆದರಿ ಪರದ ಚಪಲಕ್ಕೆ ಬಿದ್ದು ಯಾವುದೋ ಕಾಣದ ಊರಿನ ತೇರಿನೆಡೆ ಪಲಾಯನಗೆಯ್ಯುವ ಸಂಕೇತದಂತೆಯೂ ತೋರುತ್ತದೆ._

    _ಕವಿಯ ಒಟ್ಟಾರೆ ಆಶಯ ಒಂದು ಮುಪ್ಪುಗಟ್ಟಿದ ಮುದುಕಿಯ ಮಾನಸಿಕ ಸ್ಥಿತಿಯ ಅನಾವರಣಗೊಳಿಸುವ ಅನಿಸಿದರೂ, ಆಳದಲ್ಲಿ ಇಡೀ ಕವಿತೆ ಒಂದರ ಹಿಂದರೊಂದರಂತೆ ಪೇರಿಸಿಕೊಡುವ ಅಲಂಕಾರಗಳು ಯೋಚನೆಗೆ ಹಚ್ಚುತ್ತವೆ._

    _ಮಡಿ ಮಡಿಕಿ ಮೈಯಿ, ನೀರ ನುಂಗಿದ ಮಣ್ಣು ವಿಶಿಷ್ಟ ಪ್ರಯೋಗಗಳು._

    _ಈ ಮಡ್ಡೀ ತಲೆಗೆ ಹೊಳೆದದ್ದು ಇಷ್ಟೇ – ಅದರಾಚೆಗೆ ಒಡಲ ಒಲೆಯನು ಉರಿಸಿಯೇ ಅರಿತುಕೊಳ್ಳಬೇಕಿದೆ._

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: