ಸತ್ಯಬೋಧ ಜೋಶಿ ಕಥೆ – ವಾಮನ ಲವ್ಸ್ ಶೀಲಾ…

ಸತ್ಯಬೋಧ ಜೋಶಿ

“ಶೀನು ಈ ಬೆವರ ನೋಡ್ಲಿಕ್ಕೆ ಹತ್ತೀ ಇವು ಆತ್ಮಕ್ಕ ಬಗ್ಗಲಾರದದ್ದನ್ನ, ದೇಹದಿಂದ ಬಗ್ಗಿಸಿದ್ದಕ್ಕ ಸಿಕ್ಕ ಭಕ್ಸಿಸು, ಸಿಗಲಿಬಿಡು ಅಂತ ಹಂಗ ಬಿಟ್ಟೀನಿ” ಅಂತ ವಾಮನ ಅಂದು ಎದುಸಿರು ಬಿಟ್ಟುಕೊಂಡು ಹೇಳ್ತಾಯಿದ್ರೆ, ಅಷ್ಟು ದಿವಸ ನೋಡಿದ ತಮ್ಮ ವಾಮನಣ್ಣ ಅವನೇ ಅಂತ ಶೀನನಿಗೆ ಅನ್ನಿಸಲೇ ಇಲ್ಲ.

“ಜಿಸ್ ಗಲೀಮೆ ತೇರಾ ಘರ್ ನಾ ಹೋ ಬಾಲಮಾ” ಅಂತನ್ನೊ ಹಾಡುಗಳ ಗುಂಗಿನಲ್ಲೇ ಓಡಾಡಿಕೊಂಡಿದ್ದ ವಾಮನ “ಶೀಲಾ ನನ್ನ ಪ್ರೀತಿಸ್ತಾಳೋ  ಇಲ್ಲೋ ನನಗ ಗೊತ್ತಿಲ್ಲ, ಆದರ ನಾ ಅಕಿನ್ನ ಪ್ರೀತಸ್ತೀನಿ! ಅಕಿ ಸಿಗದಿದ್ದರ ಏನಾತು! ಅಕೀ ಪ್ರೀತಿನ ಸಾಕು, ಇಡೀ ಜೀವನಾನ ಬ್ಯಾಚಲರ್ ಆಗಿ ಕಳದ ಬಿಡತೀನಿ, ಪ್ರೀತಿ ಅಂದ್ರೇನೇ ಹಂಗೊ ! ಒಂಥರಾ ಸುಗಂಧ ಇದ್ದ ಹಂಗ, ಆತ್ಮ ಇದ್ದ ಹಂಗ, ಸಾಕ್ಷತ್ಕಾರ! ದೇವರ ಇದ್ದ ಹಂಗ, ಬಾಬು ಮುಶಾಯ್ ಹಮ್ ಜಿಂದಗೀ ಕೆ ಕಟಪುತ ಲಿಯಾ ಹೈ..” ಅಂತ ತನ್ನ 150 ರೂಪಾಯಿ ಬಾಡಿಗೆಯ ಚಿಕ್ಕ ಕೋಣೆಯನ್ನೇ ದೇವರ ಮನೆಯಷ್ಟು ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದ ವಾಮನನ್ನ ಇಡೀ ಓಣಿಯವರು ರಾಜೇಶ್ ಖನ್ನಾ ಅಂತಾನೆ ಕರೀತಾ ಇದ್ದದ್ದು, ಬಿಳಿ ಜುಬ್ಬಾ, ಪೈಜಾಮ, ಬಾಚಿಕೊಂಡ ಕ್ರಾಫು ಮತ್ತು ಹುಟ್ಟಿನಿಂದಲೇ ಬಂದ ಮುಗುಳ್ನಗು, ಅವನು ಇರದಿದ್ದರೂ, ಎಂದೆಂದೂ ತೆರೆದೆ ಇರುತ್ತಿದ್ದ ಅವನ ಕೋಣೆಗೆ, ಶೀನನಂಥಾ ಹತ್ತಾರು ಹುಡುಗರು, ಆಗಾಗ ಡಬ್ಬಿಯಲ್ಲಿರುತ್ತಿದ್ದ ಬೆಳ್ಳುಳ್ಳಿ ಹಾಕಿದ್ದ ಮಂಡಕ್ಕಿ ತಿನಲಿಕ್ಕೆ ಅಂತ ಹೋಗತಾಯಿದ್ರು, ಯಾವಾಗಲೂ ಶಾಲೆ, ಗಣಿತ, ಮಡಿ ಮೈಲಿಗೆ ಅಂತ ಕಂಗೆಟ್ಟಿದ್ದ ಹುಡುಗರಿಗೆ ವಾಮನನ ಕೋಣೆ ಒಂಥರ “ಆನಂದ ಮಹಲ್”, ಕವನ, ಕಥೆ, ಸಿನೆಮಾ ಹಾಡು, ಪ್ರೀತಿ, ನಾಟಕ ಮತ್ತು ಯಾವಾಗಲೂ ಹಾಡುತ್ತಿರೋ ರೇಡಿಯೋ! ಹಾಗಾಗಿ ಅಲ್ಲಿ “ಕರಿಯತ್ತ ಕಾಳಿಂಗ..” ಅನ್ನೋದನ್ನೂ ಅಲ್ಲಿ ಕೇಳಿಸಿಕೊಳ್ಳಲಿಕ್ಕೆ ಬೇಕು ಅಂತ ಅನಿಸೋದು, ಆದರೆ ಅವರ ಆ ಓಣಿಯಲ್ಲಿ, ನಳ ದಮಯಂತಿ, ದುಷ್ಯಂತ ಶಕುಂತಲೆಯರ, ಕಾಲದಲ್ಲಷ್ಟೇ ಶಿಷ್ಟ ವೆನಿಸಿದ್ದ ಪ್ರೇಮ, ಮಾಮೂನ ಅಂಗಡಿಯ ರತಿವಿಜ್ಞಾನದಿಂದ ಇಳಿದು, ಗಂಡಸರ ಶೌಚಾಲಯದೊಳಗಿನ ಗೋಡೆ ಚಿತ್ರಗಳಿಗೆ ಬಂದು ನಿಂತಾಗಲೂ, ವಾಮನನ ಈ ಪ್ರೇಮ ಕಹಾನಿ ಯಾರಿಗೂ ಮೈಲಿಗೆ ಅನ್ನಿಸಲಿಲ್ಲ, ಅದಕ್ಕೆ ಬಹುಶಃ ವಾಮನನ ನಡತೆ ಮತ್ತು ಇನ್ನೂ ಕೂಡಿ ಬರದ ಶೀಲಾಳ ಕಂಕಣ ಬಲದ ಜೊತೆಗೆ, ಅವನ ಖಾಯಂ ಆಗದ ಪೋಸ್ಟ್ ಆಫೀಸಿನ ಕೆಲಸ ಮತ್ತು ಶೀಲಾಳ ಕುಂಡಲಿಯಲ್ಲಿ ಕುಂಡಿ ಊರಿದ್ದ ಮಂಗಳವು ಕಾರಣವಾಗಿತ್ತು,

ಹಾಗಾಗಿ 35 ವರ್ಷವಾದರೂ ವಾಮನ, ಹದಿನೆಂಟರ ಪ್ರೇಮ ಕವಿತೆಗಳಲ್ಲೆ ಮುಳುಗಿದ್ದ “ಒಂದು ಪೋಸ್ಟಕಾರ್ಡ ಬೇಕಾಗಿತ್ತರೀ..” ಅಂತ ಹತ್ತು ವರುಷಗಳ ಹಿಂದೊಮ್ಮೆ ಪೋಸ್ಟ್ ಆಫೀಸಿಗೆ ಬಂದಿದ್ದ ಶೀಲಾಳಿಗೆ, ಕಾರ್ಡು, ಸ್ಟ್ಯಾಂಪು, ಪಾವತಿ ಕೊಡುವುದರ ಜೊತೆಗೆ ಹೃದಯವನ್ನೂ ಕೊಟ್ಟು, ಆಗಾಗ ಸಿಗುತ್ತಿದ್ದ, ಅವಳ ಕಣ್ಣು, ಮುಗುಳ್ನಗೆಯ ಪರತ ಪಾವತಿಯನ್ನ ಎದೆಗೆ ಅಂಟಿಸಿಕೊಂಡು ಬಿಟ್ಟಿದ್ದ, ಆದರೆ ಕ್ರಮೇಣ ಶೀಲಾಳ ಗೆಳತಿಯರಿಗೆ, ದೂರದ ತಂಗಿಯಂದಿರಿಗೂ ಮದುವೆ ಆಗಿ, ಅವರ ಮಕ್ಕಳನ್ನ ಆಡಿಸೋ ಪ್ರಸಂಗ ಬಂದಾಗಲೂ, ವಾಮನನ ಕೆಲಸ ಖಾಯಂ ಆಗಲ್ಲವೋ ,ಆಗ ಶೀಲಾ ಕೂಡ ಪೋಸ್ಟ್ ಆಫೀಸಿಗೆ ಬರೋದನ್ನ ನಿಲ್ಲಿಸಿ ಬಿಟ್ಟಳು, ವಾಮನನಿಗೆ ಚಡಪಡಿಕೆ ಅಂತ ಶುರು ಆದದ್ದೇ ಆವಾಗ, ಎಂದೆಂದೂ ನಗ್ತಾನೆ ಓಡಾಡುತ್ತಾ ಇದ್ದ ವಾಮನ ಉದ್ವಿಗ್ನಗೊಂಡವರಂತೆ ಕಂಡು, ಕ್ರಮೇಣ ತಲೆ ಕೂದಲು ಬೆಳ್ಳಗಾಗ್ತಾಯಿದ್ದಂತೆ ಒಮ್ಮೆ ಅವಳ ಮನೆಗೆ ಹೋಗಿ ಬಂದವನು, ತನ್ನ  ಕೋಣೆಯ ಬಾಗಿಲನ್ನು ಎಂದೆಂದೂ ಮುಚ್ಚಿಕೊಂಡೆ ಕಳೆಯತೊಡಗಿದ, ಆದರೆ ಒಮ್ಮೆ ಎಂದಿನಂತೆಯೇ ಶೀನ ಅವನ ಕೋಣೆಗೆ ಅಂತ ಹೋಗಿ ಬಾಗಿಲನ್ನ ತಟ್ಟಿ “ವಾಮನಣ್ಣ..” “ಅಂತ ಹತ್ತಾರು ಬಾರಿ ಕೂಗಿದರೂ, ಅವನು ಬಾಗಿಲು ತೆರೆಯದೆ ಇದ್ದಿದ್ದಕ್ಕೆ, ಹಾಗೆಯೇ ಮರಳಿದವನು, ಹೊರಗೆ ಎಲ್ಲಾದರೂ ಸಿಗಬಹುದಾ ಅಂತಾನೂ ನೋಡಿದ, ಮಾತಿನ ಮದ್ಯದಲ್ಲಿ ಗೆಳೆಯರಿಗೆ “ವಾಮನಣ್ಣ ಯಾಕೋ ಕಂಡೆ ಇಲ್ಲಲ್ಲಾ” ಅಂತಾನೂ ಅಂದಿದ್ದ, ಆದರೆ ಮತ್ತೊಂದು ದಿವಸ ಕೀಲಿ ಹಾಕಿರದ ಬಾಗಿಲನ್ನ ತಟ್ಟಿದಾಗಲೂ, ವಾಮನಣ್ಣ  ಬಾಗಿಲು ತೆಗೆಯದೆ ಇದ್ದಾಗ, ಕುಂಬಾರ್ತಿ ಕಣಜ, ಬಾಗಿಲ ತೂತಿನಲ್ಲಿ ಕಟ್ಟಿದ್ದ ಮಣ್ಣಿನ ಗೂಡನ್ನ ಕಡ್ಡಿಯಿಂದ ಕೆರೆದು, ತುದಿಗಾಲಿನಲ್ಲಿ ನಿಂತು, ಆ ತೂತಿನಿಂದ ಕೋಣೆಯೊಳಗೆ ನೋಡಿದಾಗ, ಅಲ್ಲಲ್ಲಿ ಹರಿದು ಬೀಸಾಕಿದ ಕಾಗದಗಳ ಮಧ್ಯೆ, ಮುಲಾಮಿನ ಡಬ್ಬಿಗಳು, ಔಷಧ ಬಾಟಲಿಗಳು, ಮಾಮೂನ ಅಂಗಡಿಯ ಕೆಲವು ಪುಸ್ತಕ, ಕೂದಲಿನ ರಾಶಿಯ ಜೊತೆ, ಹರಿದ ಗಾದೆಯ ಮೇಲೆ ಬಿದ್ದಿದ್ದ ಸ್ತ್ರೀಯರ ಒಳ ಉಡುಪುಗಳ ಮೇಲೆ ವಾಮನಣ್ಣ ಬೆತ್ತಲಾಗಿಯೇ ಮಲಗಿದ್ದ..

ಶೀನನಿಗೆ, ಬೆಕ್ಕೊಂದು ತನ್ನ ಎದೆಯ ಮೂಲೆಯ ಒಂದು ಭಾಗವನ್ನ ತಾನು ಜೀವಂತವಿರುವಾಗಲೇ ಕಚ್ಚಿ ತಿನ್ನುವಂತೆನಿಸಿ, ಗಾಬರಿಯಲ್ಲೇ ಓಡಿ ಹೋಗಿಬಿಟ್ಟ, ಅದಾದ ಎಂಟೇ ದಿವಸಕ್ಕೆ ಕೋಣೆಯ ಕಡೆಗೂ ನೋಡದೆ, ದೂರದಿಂದಲೇ ಹೋಗುತ್ತಿದ್ದ ಶೀನನಿಗೆ, ಆ ಕೋಣೆಯ ಹಿಂಬಾಗದಿಂದ, ಮಾಸಲು ಜುಬ್ಬಾ, ಕೆದರಿದ ಕೂದಲಿನಲ್ಲೇ ಓಡಿ ಬರುತ್ತಿದ್ದ ವಾಮನನನ್ನ ನೋಡಿ, ಎದೆ ಝಲ್ ಅಂತು, ಶೀನ ನೋಡು ನೋಡುತ್ತಿದ್ದಂತೆ, ಅವನನ್ನ ಪಕ್ಕಕ್ಕೆ ಎಳೆದುಕೊಂಡು 

ಹೋಗಿ ಕಣ್ಣಲ್ಲಿ ಕಣ್ಣಿಟ್ಟ ವಾಮನ,

“ಶೀನು ಈ ಬೆವರ ನೋಡಲಿಕ್ಕೆ ಹತ್ತೀ ಇವು ಆತ್ಮಕ್ಕ ಬಗ್ಗಲಾರದ್ದನ್ನ ದೇಹದಿಂದ ಬಗ್ಗಿಸಿದ್ದಕ್ಕ ಸಿಕ್ಕ ಭಕ್ಸೀಸು, ಸಿಗಲಿಬಿಡು ಅಂತ ಹಂಗ ಬಿಟ್ಟೀನಿ, ಅಕಿ ‘ಹಿಂಗ್ಯಾಕ ಮಾಡಿದ್ಯೋ ..’  ಅಂತ ಬಿಕ್ಕಿ ಬಿಕ್ಕಿ ಅಳತಿದ್ರೂ ಅಕಿನ್ನ ಕಾಲಿಂದ ಒದ್ದು ‘ನಿಮ್ಮ ಜಾತಿ ಬಣ್ಣನ ಇಷ್ಟು! ಮ್ಯಾಲೆ ಮೀನಾಕುಮಾರಿ ಯ್ಯಾಕ್ಟಿಂಗ್ ಬ್ಯಾರೆ, ನ ಜಾವೋ ಸಯ್ಯಾ ಛೂಡಾ ಕೆ ಬಂಯಾ “ಅಂತ ವಾಮನ ಚಿತ್ರ ವಿಚಿತ್ರವಾಗಿ ಮಾತನಾಡತಾ ಇದ್ರೆ,ಜೀವಶಾಸ್ತ್ರದ ಆ ದೇಹಗಳೇ ಇಲ್ಲೆಲ್ಲ ಓಡಾಡುವ ದೇಹಗಳು ಅನ್ನುವ ಯೋಚನೆಯೂ ಬರದ ಶೀನ ಥರ ಥರ ನಡಗ್ತಾಯಿದ್ದ, ಇನ್ನೂ ಆಗ ಶೀನನನ್ನ ಹತ್ತಿರಕ್ಕೆ ಎಳೆದುಕೊಂಡ ವಾಮನ” ಹಾಡು, ಕವನ ದೇಹವನ್ನ ಕಾಡಬಹುದು, ಕೆಣಕಬಹುದು, ಆದರ ತಣಿಸೋದಿಲ್ಲ ಶೀನು, ದೇಹಕ್ಕೆ ದೇಹನ ಬೇಕು, ಅವು ಕೂಡಿದಾಗನ ಗೊತ್ತಾಗೋದು ನಮ್ಮೊಳಗ ಎಂತಹ ಪ್ರಾಣಿ ಕೂತದ ಅಂತ, ಆದ್ರ ಮ್ಯಾಲೆ ತಲಿ ಬ್ಯಾರೆ ಇರೋದಕ್ಕ ಭಾರಿ ಸಂಭಾವಿತರ ಹಂಗ ಓಡಾಡ್ತೀವಿ,  ಓಣಿ, ಗಲ್ಲಿ, ಗುಡಿ ಶಾಲಿವೊಳಗ ಒಡ್ಯಾಡೋ ಒಬ್ಬಬ್ಬವನೂ ಮುಖವಾಡ ಹಾಕ್ಕೊಂಡ ಓಡಾಡ್ತಾನಾ ಶೀನು,

ನಮಗ ಕಲಿಸಿದ ಮಾಸ್ತರಿರಲೀ, ಪ್ರವಚನ ಮಾಡಿದ ಆಚಾರು ಇರಲಿ,ಕೈತುತ್ತ ಕೊಟ್ಟ ಅವ್ವ ,ಮುದ್ದು ಮಾಡೋ ಅಕ್ಕಂದ್ರು ,ಕುತ್ತಿ ಮರೀ ಮಾಡೋ

ಅಣ್ಣಂದರೂ, ಹದಿನೈದು ದಿವಸಕ್ಕೊಮ್ಮೆ ಒಮ್ಮೆಯಾದ್ರು ತಮ್ಮ ದೇಹವನ್ನ ಲಂಗು ಲಗಾಮು ಇರದೇ ಬಿಟ್ಟು ಕೊಳ್ಳವರೇ, ಛೀ ! ಯಾವ ಮನಿ ಒಂದು ಮೂಲಿ ಒಳಗ, ದೇವರ್ನ ಕೂಡಿಸಿ,ಮಡಿ ಮೈಲಿಗೆ ಮಾಡಿ ‘ಗೆಲ್ಲಸೋ..’ ಅಂತ ಬೆಡ್ಕೋತಾರೋ,ಅದ ಮನಿ ಇನ್ನೊಂದು ಮೂಲಿ ಒಳಗ  ಮೈಮರೆತು ಬೆವರಿ ಸೋಲತಾರ ಅಂದ್ರ ,ನಾ ನನ್ನನ್ನ ಒಬ್ಬನ ಇದ್ದಾಗ ಪಾಪಿ ಅಂತ ಯಾಕ ಅನ್ಕೋಬೇಕು ಶೀನು, ಅದಕ್ಕ ಅಕಿನ್ನ ಇವತ್ತು ಸೋಲಿಸಿ ಬಿಟ್ಟೆ, ನಾನ, ನಾನ ಸೋಲಿಸಿದ್ದು, ಬೇಕೆಂದ್ರ ನೀನ ನೋಡ ಹೋಗು, ಹಳೇ ಗುಡಿ ಪೌಳಿಯೊಳಗ ನಾ ಬ್ಯಾಡಾ ಅಂದ್ರು ,ಅಕಿನಾ ಗ್ವಾಡಿ ಮ್ಯಾಲೆ ಶೀಲಾ,ವಾಮನ ಅಂತ ಕಂಡ ಕಂಡಲ್ಲಿ ಬರದಾಳ, ಹುಚ್ಚಿ! ನಾ ಎಲ್ಲಾ ಆದ ಮ್ಯಾಲೆ ಅಕಿ 

ಜೊತೀನ ಇರತೀನಿ ಅಂದುಕೊಂಡಾಳ, ಪಾಪ! ಹಂಗ ಬರಯೋದನ್ನಷ್ಟ ಅಕೀ ಪ್ರೀತಿ ಅಂದುಕೊಂಡಿದ್ದಳೋ ಏನೋ..” ಅಂತ ವಾಮನ ಏನೇನನ್ನೋ ಹೇಳ್ತಾಯಿದ್ರೆ, ಹೆದರಿಕೊಂಡಿದ್ದ ಶೀನು,ಹೊರಟಿದ್ದ ಕಾರಣವನ್ನೂ ಮರೆತು ಮನೆ ಕಡೆಗೆ ಬೇಗ ಬೇಗನೆ ನಡೆದುಕೊಂಡು ಹೋಗಿಬಿಟ್ಟಿದ್ದ, ಅದಾದ ಎರಡೇ ದಿನಕ್ಕೆ  ತನ್ನ ಕೋಣೆಯನ್ನ ಹಾಗೆ ತೆರೆದಿಟ್ಟು, ಚಿಕ್ಕ  ಗಂಟು ಒಂದನ್ನ  ತೆಗೆದುಕೊಂಡು ಹೋದ ವಾಮನ ಮತ್ತೆಂದೂ ಆ ಕೋಣೆಗೆ ಬರಲೇ ಇಲ್ಲ, ಆದರೆ ಮೂರೇ ತಿಂಗಳಲ್ಲಿ ಶೀಲಾ, ಮೈ ಮೇಲೆ ಸೀಮೆ ಎಣ್ಣೆ ಯನ್ನ ಸುರಿದುಕೊಂಡು ಬೆಂಕಿಗೆ ಕರಕಲಾಗಿ ಓಣಿಯ ಮಧ್ಯದಲ್ಲಿ ಸತ್ತು ಹೋದಾಗ, ಇಡೀ ಓಣಿ, ಪೊಲೀಸರು ಬೆಳಗಿ ಸೋಮ್ಯಾನ ಹೆಸರನ್ನ ಸುಳ್ಳು ಸುಳ್ಳಾಗಿ ಹೇಳ್ತಾಯಿದ್ರೆ ,ತನಗಷ್ಟೇ ಗೊತ್ತಿದ್ದ ಸತ್ಯವನ್ನ ಮರೆಯೋ ಪ್ರಯತ್ನದಲ್ಲಿ ಶೀನ  ನಡುರಾತ್ರಿಯ ಲ್ಲಿಯೂ ಬೆಚ್ಚಿ ಬೀಳ್ತಾಯಿದ್ದ,

ಆದರೂ ವಾಮನ ಹಳೆ ಗುಡಿಯ ಪೌಳಿಯ ಬಳಿ ಕಂಡಿದ್ದ, ಅಂತ ಊರ ಜನ ಮಾತನಾಡಿಕೊಳ್ಳುತ್ತಿದ್ದಂತೆ ಶೀನನ ಎದೆ ಮತ್ತೊಮ್ಮೆ ಝಲ್ ಅಂದಿತು, “ಎ ಹತ್ತಿರದಿಂದ ನೋಡಿದ್ರೂ ನಮ್ಮ ವಾಮನಣ್ಣ ಅಂತ ಅನಿಸಲಿಲ್ಲ”

“ಪಾಪ, ಹರಕ ಬಟ್ಟಿ, ಒಂದು ಗಂಟು, ಮ್ಯಾಲೆ ಕೈಯಾಗ ಒಂದು ಮುರಕ ಕನಡಿ ಹಿಡಕೊಂಡು, ಅದೇನು ನೋಡ್ತಾ ಇರ್ತಾನೋ ಏನೋ! ಗಡ್ಡ, ಕಣ್ಣು, ಎದಿ ಮ್ಯಾಲಿನ ಕೂದಲಾ ನೋಡಕೋತ ‘ಹೀಂಗ ಬೇಕಂತಿದ್ದಿ ಅಂದ್ರ ಎಂದೋ ಆಗಿ ಬಿಡೋದು, ನೋಡು ನೋಡು..’ ಅಂತ ಏನೇನೋ ಮಾತಾಡ್ತಾ ಇರ್ತಾನ” ಅಂತ ಅವರಿವರು ಮಾತನಾಡತಾ ಇದ್ದದ್ದನ್ನ ಕೇಳಿದ ಶೀನನಿಗೆ ಒಮ್ಮೆ ಲಕ್ಮಿನಾರಾಯಣ ಜಾತ್ರೆ ಒಳಗೆ ,ವಾಮನ ಹೆಂಗಸರ ನಡುವೆ ಏನನ್ನೋ ಮಾತನಾಡಿಕೊಂಡು ನುಗ್ಗಿದಾಗ ಅವನನ್ನ ನೋಡಿ ಆ ಹೆಂಗಸರು ಹೆದರಿ ಓಡಿ ಹೋದರು, ಆಗ ವಾಮನನೂ ಗಾಬರಿಯಲ್ಲಿ ಓಡಿ ಹೋಗಿ,  ಹಿಂದಿನ ಓಣಿಯ ಕತ್ತಲಲ್ಲಿ ಜೋರಾಗಿ ಕೂಗಿ ಮಾತನಾಡಿದ್ದನ್ನ ಶೀನ ನಿಚ್ಚಳವಾಗಿಯೇ ಕೇಳಿಸಿಕೊಂಡಿದ್ದ.

“ನಿಮಗೂ ,ಅಕಿ ಹಂಗ ಬೇಕಲ್ಲಾ, ಸಾಯ್ತೀರೀ ನೀವು ಸುಟಗೊಂಡು ಶೀಲಾಳ ಹಂಗ ಸತ್ತು ಹೋಗ್ತೀರಿ, ಏನಂದಿ ಆ ದಿನ ನೀನು ನಿನ್ನ ಕೈ ಸಂದಿಯೊಳಗ ಇದ್ದಷ್ಟು ಕೂದಲಾನೂ ನನ್ನ ಎದಿ ಮ್ಯಾಲೆ ಇಲ್ಲಾ ಅಂತಲ್ಲಾ,ಈಗ ನೋಡು, ಎದಿ ತುಂಬ ಅಷ್ಟ ಅಲ್ಲಾ ಮೈತುಂಬ ಕೂದಲವ ಆದ್ರ ನೀ ಎಲ್ಲಿದ್ದೀ”ಅಂತ. 

ಆ ದಿವಸ ವಾಮನ ತನ್ನ ಮನದಾಳದ ಭಾವನೆಯನ್ನು ಹೇಳಲಿಕ್ಕೇ ಬೇಕು ಅಂತ ಶೀಲಾಳ ಮನೆಗೆ ಹೋದಾಗ, ಶ್ರಾವಣದ ಮಳೆ ಆಗಷ್ಟೇ ನಿಂತಿತ್ತು, ವಾಮನ ಬಾಗಿಲಲ್ಲಿ ಬಂದು ನಿಂತಿದ್ದು ಶೀಲಾಳಿಗೆ ಗೊತ್ತಾಗಿದ್ದರೂ,ಗೊತ್ತಿಲ್ಲದಂತೆಯೇ ಕನ್ನಡಿ ಮುಂದೆ ನಿಂತು ಹುಬ್ಬು ತೀಡಿಕೊಳ್ತಾ ಇದ್ದಳು,ಆದರೂ ಕೊನೆಗೆ ವಾಮನನೇ ಒಳಗೆ ಹೋಗಿ “ಶೀಲಾ..” ಅಂತ ಅಂದಾಗ ಬೆಚ್ಚಿ ಬಿದ್ದವರಂತೆ ತಿರುಗಿ “ನೋಡ್ರೀ ನೀವು ಹೀಂಗ ಬಂದದ್ದು ಸರಿ ಅನ್ನಸ್ಲಿಲ್ಲಾ, ಅವ್ವ ಬರೋದು ಇನ್ನೂ ಭಾಳ ಹೊತ್ತಾಕ್ತದ,ಮೂರು ಸಂಜೆ ಬ್ಯಾರೆ ಆಗೇದ, ಆಮೇಲೆ ಹತ್ತ ವರುಷದ ಹಿಂದ ನನಗನ್ನಿಸಿದ್ದು ಈಗೂ ಹಂಗ ಇರಲಿಕ್ಕೆ ಹೆಂಗ ಸಾಧ್ಯದ ! ಸುಮ್ನ ನಿಮ್ಮ ಜೀವನಾ ನೀವು ನೋಡ್ಕೋರೀ, ನನ್ನ ಜೀವನಾ ನಾ ನೋಡ್ಕೋತೀನಿ, ಇನ್ನ ಸಿನೆಮಾದ ರೀತಿ ಪ್ರೀತಿ ಮಾಡೋ ಅಂತಹ ವಯಸ್ಸು ನಮ್ಮದು ಮುಗದದ, ಆಮೇಲೆ ಈ ಕವನ ಕಥೀಯಿಂದ ಹೊಟ್ಟಿ ನಡಿಯುದೂ ಇಲ್ಲ,ಪಾಪ ನೀವು ಸೌಮ್ಯ ಥರದವರು,ಸುಮ್ನ ನಮ್ಮದು ನಿಮ್ಮದು ಹೊಂದಾಣಿಕೀ

ಆಗೂದಿಲ್ಲ,ಈ ಸಣ್ಣ ಹುಡುಗರ ಥರದ ಆಟ ಇಲ್ಲೇ ಬಿಟ್ಟ ಬಿಡ್ರಿ ..” ಅಂತ ಪಕ್ಕದ ಗೋಡೆಯನ್ನ ನೋಡಿಕೊಂಡು ಮಾತನಾಡಿದ ಶೀಲಾ ಒಮ್ಮೆಯೂ ವಾಮನನ ಕಣ್ಣಲ್ಲಿ ಕಣ್ಣಿಟ್ಟು ನೋಡದೆ ಕನ್ನಡಿಯ ಕಡೆ ತಿರುಗಿದಾಗ, ವಾಮನ ಕುಸಿದೆ ಬಿಟ್ಟಾ,

“ಶೀಲಾ ನೀ ಹಂಗ ಮ್ಯಾಡಬ್ಯಾಡಾ ನೀ ಹೀಂಗ ಅಂದ ಬಿಟ್ರ ನಾ ಹೆಂಗ ಬದಕ್ಲಿ..” ಅಂತ ಅತ್ತು ಕರೆದು ಕಾಲಿಗೆ ಬಿದ್ದ ಗೋಗರೆಯುತ್ತಿದ್ದ ವಾಮನನ ಆ ಸ್ಥಿತಿಗೆ ಸಿಟ್ಟಿಗೆದ್ದ ಶೀಲಾ, ಪಕ್ಕದ ಕೋಣೆಯಲ್ಲಿ ಹೋಗಿ ನಿಂತು” ನೋಡು ನೋಡು ಇದನ್ನ ..”ಅಂತ ತನ್ನ ಸೆರಗು,ಬ್ಲೌಸನ್ನ ತೆಗೆದು, ಅರೆಬೆತ್ತಲಾಗಿ ನಿಂತುಕೊಂಡು” ಈ ಎದಿ ಒಳಗ ಹರಿಯೋ ಪ್ರೀತಿ ಏನ ಬೇಕಾಗಿಲ್ಲ, ಎದಿ ನಿಮಿರಿಕೊಳ್ಳೋವಂತಹ ಪ್ರೀತಿ ಬೇಕಾಗೇದ, ಕೂಲಿನಾಲಿ ಮಾಡಿ ಹರದ ಬ್ಲೌಸ್ ಹಕ್ಕೊಂಡರೂ ನಡೀತದ, ಆದರ ಇದನ್ನಾದ್ರೂ ಜೀವನದಿಂದ ಕಳಕೊಳ್ಳೋದಿಲ್ಲಾ ನನಗ,ಅದಕ್ಕ ನೀನು ನನಗ ಬ್ಯಾಡಾ,ನನ್ನ ಕೈ ಸಂದಿಯೊಳಗ ಇದ್ದಷ್ಟು ಕೂದಲಾ ನಿನ್ನ ಎದಿ ಮ್ಯಾಲಿಲ್ಲ ಇನ್ನೇನ ಸುಖಾ ಕಂಡೇನ್ ನಾನು, ಹತ್ತ ವರ್ಷಗಳ ಹಿಂದ ಬಂದಿದ್ರ, ನಿನ್ನ ಕವನ,ಹಾಡಿನ ಜೊತಿ ನಿನ್ನೂ ಸಹಿಸ್ಕೊತಿದೇನೋ ಏನೋ! ಆದರ ಈಗ ನಾ ಜೀವನದಿಂದ ಕಾಡಿ ಬೇಡೋದಕ್ಕ ಇರೋದು ಇದ ಒಂದು, ಅದು ನಿನ್ನಿಂದ ಬ್ಯಾಡಾ ನನಗ, ಈ ಓಣಿಯೊಳಗ ಒಡ್ಯಾಡೋ ಸೊಸಿ, ಅತ್ತಿ,ಅವ್ವ ಹಂಗೂ ಹಿಂಗೂ ನಡಸೋ ಜೀವನದಾಗ ಅಷ್ಟು ಇಷ್ಟು ಆರಾಮ ಇದ್ದಾರ ಅಂದ್ರ ಅದು ಇದರಿಂದನ, ಅವರ ಹಂಗ ಮುತ್ತೈದಾಗಿ ಸಾಯದಿದ್ದರೂ ನಡೀತದ, ಮಕ್ಕಳಾಗದಿದ್ದರೂ ನಡೀತದ ,ಆದ್ರ ಇದೂ ಸಿಗಲಾರದ ಹಂಗ ನಾ ಸಾಯಲಿಕ್ಕೆ ತಯಾರಿಲ್ಲ,ಮುಂದೆಂದೋ ನಾ ನಿನ್ನ ನೆನೆಸಿಕೊಂಡರ ಎದಿ ಒಳಗ ಹಾಲು ಉಕ್ಕಬಹುದು ಆದ್ರ ಬೆವರು ಎಂದೆಂದೂ ಹರಿಲಿಕ್ಕೆ ಸಾಧ್ಯ ಇಲ್ಲಾ, ಅದು ಮೀರಿ ನನಗ ಏನ ಬೇಕಾಗೇದ ಅಂತ ನೋಡಬೇಕು ಅಂತಿದ್ರ ಒಮ್ಮೆ ಹಳೆಗುಡಿ ಪೌಳಿಗೆ ಬಾ ನಿನಗ ಗೊತ್ತಾಕ್ತದ, ಅದ್ರ ಈಗ ಹೋಗು.. ಹೋಗತಿಯೊ ಇಲ್ಲೋ..” ಅಂತ ಅಳುತ್ತ ಶೀಲಾ ಚೀರಿಕೊಂಡಾಗ, ವಾಮನ ಒಳಗೊಳಗೆ ಛಿದ್ರವಾಗಿ ಹೋಗಿದ್ದ..

ಆವಾಗಲೇ ಮೊದಲ ಬಾರಿಗೆ ವಾಮನನಿಗೆ ತಾನೂ ಒಂದು ದೇಹ ಅಂತ ಅನಿಸಿದ್ದು,ಅದಾದ ಸ್ವಲ್ಪ ದಿವಸಕ್ಕೆ ಗುಡಿ ಹಿಂದಿನ ಹಾಳು ಪೌಳಿಯಲ್ಲಿ ಬೆಳಗಿ ಸೋಮ್ಯಾನಿಗೆ, ಸೋತು ಕನವರಿಸುತ್ತಿದ್ದ ಶೀಲಾಳ ಧ್ವನಿಯನ್ನು ಕೇಳಿ ವಿಕಾರಗೊಂಡವನು ದೇಹವಾಗುತ್ತಲೇ ಹೋದ,ಹೃದಯಕ್ಕೆ ದಕ್ಕದಿದ್ದರೂ ದೇಹಕ್ಕಾದರೂ ದಕ್ಕಲಿ ಅಂತ ಗಂಡಸಾಗಲಿಕ್ಕೆ ಹೊರಟು, ಅವರಿಬ್ಬರೂ ಸೇರುತ್ತಿದ್ದ ಆ ಗುಡಿಯ ಪೌಳಿಯಲ್ಲಿ ,ಶೀಲಾ ಲವ್ ವಾಮನ ಅಂತ ಅವನೇ ಗೀಚಿ,ಗೀಚಿ ಬರೆದ, ಹೀಗಾದರೂ ಜಗತ್ತು ಮಾತಾಡಲಿ “ಶೀಲಾಳನ್ನ ಕೆಡಿಸಿದ್ದು ವಾಮನನೇ ಅಂತ, ಗಂಡಸು ಆದ್ರೆ ಕೆಟ್ಟ ಗಂಡಸು” ಅಂತ, ಆದರೆ ಅದನ್ನ ಮಾಡಿ ತೋರಿಸಿದ್ದು ಬೆಳಗಿ ಸೋಮ್ಯಾನೇ, ಹಾಗಂತ ಬರೆದ ಮೇಲೂ ಶೀಲಾ ಸಾಯುವಾಗ ಆ ವಾಮನನ್ನ ನೆನೆದು ಅವಳಲ್ಲಿ ಹಾಲು ಉಕ್ಕಿತ್ತೋ ಇಲ್ಲವೋ ಆದರೆ ಈ ವಾಮನ, ಆ ವಾಮನ ಆಗಿರಲೇ ಇಲ್ಲ.

“ಲೇ ಸೋಮ್ಯಾ ನಿನ್ನ ಮೈ ಕಟ್ಟಿಗೆ ,ಎದಿ ಮ್ಯಾಲಿನ ಕೂದಲಕ್ಕೆ, ನಿನಗೆ ನೂರಾರು ಶೀಲಾಗಳಿರಬಹುದು, ಆದ್ರ ನನಗ ಒಬ್ಬಳ ಇದ್ದಳಲ್ಲೋ ,ಅಕಿ ನಿನಗೂ ಸಿಗಲಿಲ್ಲ, ನನಗೂ ಸಿಗಲಿಲ್ಲ,ಇನ್ನ ನನ್ನ ಎದಿ ಮ್ಯಾಲಿನ ಕೂದಲಾ ಯಾರಿಗೆ ತೋರ್ಸಲಿ..?” ಅಂತ ಕೂಗ್ತಾಯಿದ್ದ ವಾಮನನಣ್ಣನ ಮಾತು ಕೇಳಿ ಶೀನ ಬಿಕ್ಕಿಬಿಕ್ಕಿ ಅಟ್ಟಬಿಟ್ಟಾ.

ದಿವಸಾ ಅಂಟು, ಉಗುಳು, ಫೆವಿಕಾಲ್ ಅಂತೆಲ್ಲಾ ಸಿಕ್ಕಿದ್ದನ್ನ ಮೈಗೆ ಹಚ್ಚಿಕೊಂಡು ಕಟಿಂಗ್ ಅಂಗಡಿ ಹೊರಗೆ ಬಿದ್ದಿರುತ್ತಿದ್ದ ಕೂದಲುಗಳನ್ನ ಹೆಕ್ಕಿ, ಕನ್ನಡಿ ಹಿಡಿದುಕೊಂಡು ಎದೆ, ಕಾಲಿಗೆ ಅಂತ ಕೂದಲು ಹಚ್ಚಿಕೊಳ್ಳುತ್ತಿದ್ದ ವಾಮನಣ್ಣ “ನೋಡು ನೋಡಿದನ್ನ ನಾನೂ ಗಂಡಸು ಆಗೀನಿ..” ಅಂತ ಶೀಲಾಳನ್ನ ಸುಟ್ಟಿದ್ದ ಆ ಸುಡುಗಾಡಗಟ್ಟಿ  ಜಾಗದಲ್ಲೇ ನಿಂತುಕೊಂಡು ಹೇಳ್ತಾ ,ಒಂದು ದಿನ ಅದೇ ಜಾಗದಲ್ಲೇ ಸತ್ತು ಹೋದ, ” ಆದ್ರೂ ವಾಮನಣ್ಣ ನೀ ಹೀಂಗ ಹೋಗಬಾರದಿತ್ತು “ಅಂತ ಶೀನಾ ಅತ್ತು ಎಷ್ಟೇ ಸುಧಾರಿಸಿಕೊಂಡರೂ, ಎದೆಯಲ್ಲಿ ಹೆಣವಾಗಿ ಮಾತ್ರ ಇನ್ನೂ ಜೀವಂತವಾಗಿದ್ದ,

‍ಲೇಖಕರು Admin

March 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: