ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಕವಿತೆ – ಮಹಾತ್ಮ ಮತ್ತು ಆ ಹೆಣ್ಣು ಮಗಳು…

ಸತೀಶ ಕುಲಕರ್ಣಿ

ಅರ್ಧ ಮೈಮುಚ್ಚಿಗೆ
ಇನ್ನರ್ಧ ಗಾಳಿ ಬಿಸಿಲಿಗೆ
ಅಂದು ಆ ಬಾವಿ ಕಟ್ಟೆಯ ಮೇಲೆ ನಿಂತವಳ ಬಾಳು
ಇಂದೂ ಮಳೆ ಬಿಸಿಲು ತೋಳಿಗೆ

ಮಹಾತ್ಮನನ್ನು
ಅರ್ಧ ಸೀಳಿದ
ಆ ಹೆಣ್ಣು ಮಗಳು ಈಗ ಈಗೆಲ್ಲಿ ?

ಇಲ್ಲಿಯೇ
ಹರಕು ಉಡಿಯಲ್ಲಿ
ತಂಗಳೂಟವ ಕಟ್ಟಿಕೊಂಡು
ತಿರುಗುತ್ತಿರವಳೋ ಅವಳು ?

ಗುಡಿ ಗುಂಡಾರ, ಜೋಪಡಾ ಪಟ್ಟಿ
ಮಹಾನಗರ, ಮುನಸಿ ಪಾಲ್ಟಿ
ಫುಟ್ ಪಾತೋ, ಪ್ಲೈ ಓಹರೊ
ಎಲ್ಲೊ ಮಾನಮುಚ್ಚಲು ಅಡಗಿಕೊಂಡಿರವಳೊ ?

ಅಥವ
ಐಡಿ, ಆಧಾರ್, ರೇಷನ್ ಕಾರ್ಡುಗಳಿಗಾಗಿ
ಸೌಧ ಸೌಧಗಳ ಸುತ್ತುತ್ತಿರುವಳೊ ?

ಇಲ್ಲ,
ಸಾಕ್ಷಿಗಳಿಲ್ಲದೆ ಅತ್ಯಾಚಾರಕ್ಕೆ
ತಲೆಬಾಗಿ ಕಟಕಟೆಗಳಲ್ಲಿ ನಿಂತಿರುವಳೊ ?

ಅವಳು,
ಅಖಂಡ ಭಾರತದ
ಖಂಡ ಮಾಂಸಗಳಲಿ
ಕ್ವಾರಂಟೈನೊ, ಬ್ಯಾರಿಕೇಡುಗಳ
ಭೇದಿಸುತ್ತ ಅಂಡಲಿಯುತ್ತಿರುವಳೋ ?
ಈ ಜೀವಾತ್ಮ ಭರವಸೆಯ ಮಹಾಭಾರತದಲ್ಲಿ

‍ಲೇಖಕರು avadhi

27 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading