ಸಣ್ಣಕಥೆಗಳಿಗೆ ತಾರುಣ್ಯವನ್ನು ಮರಳಿಸಿದ ‘ಮಿಸ್ಟರ್ X’

ಜೋಗಿ

ನಾನು ಪಿಯುಸಿ ಓದುತ್ತಿದ್ದ ದಿನಗಳಲ್ಲಿ ನಮ್ಮ ಮನೆ ಒಂದು ಪುಟ್ಟ ತೊರೆಯ ಸಮೀಪ ಇತ್ತು. ಆ ತೊರೆಯ ಮತ್ತೊಂದು ಬದಿಯಲ್ಲಿ ಅರೆಹಸುರು ಗುಡ್ಡ, ಈ ಬದಿಯಲ್ಲಿ ನಮ್ಮ ಹಸುರು ಗದ್ದೆ, ನಡುವೆ ಬಸವಳಿದು ಹರಿಯುವ ಹಳ್ಳ. ಆ ಗುಡ್ಡದ ದಯೆಯಿಂದ ಜಗತ್ತಿಗೆಲ್ಲ ಸಂಜೆಯಾಗುವ ಮೊದಲೇ ನಮಗೆ ಸಂಜೆಯಾಗುತ್ತಿತ್ತು. ನಾಲ್ಕೂವರೆಗೆಲ್ಲ ಸೂರ್ಯ ಗುಡ್ಡದ ಮರೆಗೆ ಸರಿದುಬಿಡುತ್ತಿದ್ದ. ಆಗೆಲ್ಲ ನಾವು ಹಳ್ಳಕ್ಕಿಳಿದು, ಗುಡ್ಡ ಏರುತ್ತಿದ್ದೆವು. ಗುಡ್ಡದ ಮೇಲೆ ಬಿದ್ದ ಮುಸ್ಸಂಜೆಯ ಹಳದಿ ಹಳದಿ ಬಿಸಿಲಿನಲ್ಲಿ ನಮ್ಮ ಮೈ ಕೂಡ ಹಳದಿಯಾಗಿ ಹೊಳೆಯುವುದನ್ನು ನೋಡುತ್ತಿದ್ದೆವು.

ನಮ್ಮ ಮನೆಯ ಅಂಗಳದಲ್ಲಿ ಕುಳಿತು ನೋಡುವವರಿಗೆ ಸೂರ್ಯ ಕಾಣಿಸುತ್ತಿರಲಿಲ್ಲ. ಸೂರ್ಯನ ಹೊನ್ನ ಕಿರಣಗಳು ಬಿದ್ದ ನಾವು ಬಂಗಾರದ ಮೈಯವರಂತೆ ಕಾಣುತ್ತಿದ್ದೆವು. ಆ ಸಂಜೆ ಬೆಳಕಲ್ಲಿ ದೂರದಿಂದ ಕಾಣಿಸುವ ಯಾರೇ ಆದರೂ ಸಂತೋಷವಾಗಿದ್ದರೋ ದುಃಖದಲ್ಲಿದ್ದಾರೋ ಅಂತ ಗೊತ್ತೇ ಆಗುತ್ತಿರಲಿಲ್ಲ. ಅವರ ಮೈಮೇಲೆ ಬಿದ್ದ ಬಂಗಾರದ ಬೆಳಕಿನಲ್ಲಿ ಅವರು ಈ ಜಗತ್ತಿನ ಸಂಕಟ-ಸಂಭ್ರಮ ಎರಡನ್ನೂ ಮೀರಿದವರಂತೆ ತೋರುತ್ತಿದ್ದರು.

ಸಚಿನ್ ತೀರ್ಥಹಳ್ಳಿಯವರ ಹೊಸ ಕಥಾ ಸಂಕಲನ ‘ಮಿಸ್ಟರ್ X’ನ ಪಾತ್ರಗಳು ಕೂಡ ಈ ಜಗತ್ತಿನ ಜಂಜಡಗಳಿಂದ ಮುಕ್ತಗೊಂಡವರಂತೆ, ಮುಕ್ತಗೊಳ್ಳಲು ಹವಣಿಸುವವರಂತೆ ಕಾಣಿಸುತ್ತಾರೆ. ಅವರ ಸಂಭ್ರಮ, ವಿಷಾದ ಮತ್ತು ತಳ್ಳಂಕಗಳು ನಮ್ಮನ್ನು ತಾಕುವ ರೀತಿಯನ್ನೇ ಸಚಿನ್ ಬದಲಿಸಿರುವ ಪರಿ ಈ ಕತೆಗಳನ್ನು ಗಾಢವಾಗಿಸಿದೆ. ಇಲ್ಲಿರುವ ಯಾವ ಪಾತ್ರಗಳು ಕೂಡ ಈ ಜಗತ್ತಿನದಲ್ಲ. ಆದರೆ ಎಲ್ಲ ಪಾತ್ರಗಳ ಅಂತರಂಗವೂ ನಮ್ಮಲ್ಲರ ಅಂತರಂಗವೇ ಆಗಿದೆ.

ಹೊರ ಜಗತ್ತಿನ ವಿವರಗಳನ್ನು ಕೂಡ ಸಚಿನ್ ಮನಸ್ಸಿನ ವ್ಯಾಪಾರಗಳನ್ನು ಹೇಳಲಿಕ್ಕೆ ಮಾತ್ರ ಬಳಸುತ್ತಾರೆ. ಹೀಗಾಗಿ ಅವರ ಕತೆಗಳಲ್ಲಿ ಬರುವ ಮೋಟರ್ ಬೈಕು, ಟೀ, ಸಿಗರೇಟು, ಮಂಜು, ನೆರಳು ಬಿದ್ದ ದಾರಿ, ಮುಗಿಯದ ಮಳೆ, ಸೇತುವೆ, ಕಾರು, ಮೊಬೈಲು ಎಲ್ಲವೂ ನಮ್ಮ ಒಳಗಿನ ಗುಟ್ಟುಗಳನ್ನು ತೆರೆದಿಡುವ ಪರಿಕರಗಳಂತೆ ಕಾಣುತ್ತವೆ.

ಸಚಿನ್ ತಾನೆಂಥ ಕತೆಗಾರ ಅನ್ನುವುದನ್ನು ಮೊದಲ ಸಂಕಲನ ‘ನವಿಲು ಕೊಂದ ಹುಡುಗ’ದಲ್ಲೇ ತೋರಿಸಿದ್ದರು. ಮೊದಲ ಸಂಕಲನದಲ್ಲಿ ಕಂಡ ಓದಿನ ನೆರಳು, ಅಭಿಮಾನದ ಪ್ರಭಾವ ಮತ್ತು ಸಣ್ಣ ಹಿಂಜರಿಕೆಗಳಿಂದ ಪಾರಾಗಿರುವ ಸಚಿನ್ ತೀರ್ಥಹಳ್ಳಿ, ಈ ಸಂಕಲನದ ಒಂದೊಂದು ಕತೆಯನ್ನೂ ಅತೀವ ತನ್ಮಯತೆಯಿಂದ ಕಟ್ಟಿರುವುದು ಗೊತ್ತಾಗುತ್ತದೆ.

ಯಾವ ಕತೆಯಲ್ಲೂ ಒಂದೇ ಒಂದು ಅನಗತ್ಯ ಸಾಲಾಗಲೀ, ಪದವಾಗಲೀ ನಮಗೆ ಸಿಗುವುದಿಲ್ಲ. ಎಲ್ಲೂ ಸಚಿನ್ ಕತೆಯನ್ನು ಹೇಳದೇ ಉಳಿಸುವುದಿಲ್ಲ, ಮುಗಿಸಿದ ನಂತರವೂ ಕತೆ ಹೇಳುತ್ತಿರುತ್ತಾರೆ. ಹೀಗಾಗಿ ಈ ಕತೆಗಳು ನಾವು ಕಾಲು ಇಳಿಬಿಟ್ಟು ಕುಳಿತ ತುಂಗೆಯಂತೆ ನಮ್ಮನ್ನು ಸ್ಪರ್ಶಿಸಿ, ಮುಂದೆ ಹೋಗುತ್ತದೆ. ಕಾಲದ ನಿರಂತರ ಪ್ರವಾಹದಲ್ಲಿ ತೇಲಿಬಿಟ್ಟ ಸಾಲುಗಳಂತೆ ಇವು ನಮ್ಮ ಅನುಭವಕ್ಕೆ ಮಾತ್ರ ದಕ್ಕುವಂತೆ ಭಾಸವಾಗುತ್ತದೆ.

ಮಿಸ್ಟರ್ ಎಕ್ಸ್ ವೈವಿಧ್ಯಮಯ ಕತೆಗಳ ಗುಚ್ಚ. ಈ ಲೋಕದವನೇ ಅಲ್ಲ ಅನ್ನಿಸುವ, ನಾವೆಲ್ಲ ಹುಡುಕುತ್ತಿರುವ ಮನುಷ್ಯನಂತೆ ಕಾಣುವ, ನಮ್ಮೊಳಗೇ ಇರುವ ನಮ್ಮ ದೊಡ್ಡಪ್ಪನಂಥ ಮಿಸ್ಟರ್ ಎಕ್ಸ್ ಈ ಕತೆ ಓದುತ್ತಿದ್ದಂತೆ ನಮಗೆ ಸಿಕ್ಕಿಯೇ ಬಿಟ್ಟ ಅನ್ನಿಸುವಂತೆ ಮಾಡಿಯೂ ಅವನು ಸಿಗುವುದಿಲ್ಲ ಎನ್ನುವುದನ್ನು ಸಚಿನ್ ಯಾವ ದಾಕ್ಷಿಣ್ಯವೂ ಇಲ್ಲದೇ ಹೇಳಿಬಿಡುತ್ತಾರೆ. ಕತೆಗಾರನಿಗೆ ಇರಬೇಕಾದ ನಿಷ್ಕರುಣೆ ಮತ್ತು ನಿರ್ಲಿಪ್ತತೆಯ ತುಂಟ ಬೆರಕೆಯಂಥ ಗುಣವೇ ಒಂದು ಕತೆಯನ್ನು ಕಾಪಾಡಬಲ್ಲದು ಎಂಬುದನ್ನು ಬಲ್ಲವರಂತೆ ಕತೆ ಹೇಳುವ ಸಚಿನ್, ತನ್ನ ಕತೆಯನ್ನು ತಾನೇ ಕೊಲ್ಲಬಲ್ಲೆ ಎಂಬ ಉಡಾಫೆಯನ್ನೂ ಅಲ್ಲಲ್ಲಿ ತೋರುತ್ತಾರೆ.

ಐಸ್ ಕ್ಯಾಂಡಿ ಕತೆಯ ಬ್ರಾಂಡಿ ಕುಡಿಯುವ ಮನುಷ್ಯ, ಮುಖಾಮುಖಿ ಕತೆಯ ಬೈಕು ಹುಡುಗಿ, ಸ್ಮೋಕಿಂಗ್ ಝೋನ್-ನಲ್ಲಿ ಹುಟ್ಟಿದ ನಿರ್ಧಾರಕ್ಕೆ ಬಲಿಯಾದ ಕ್ಷಿತಿ, ಹುಡುಗನ ಹುಡುಕಾಟದಲ್ಲಿರುವ ಆರೋಹಿ, ಮೇಷ್ಟರಿಗೆ ಡ್ರೈವಿಂಗ್ ಹೇಳಿಕೊಡಲು ಬಂದ ವರುಣನ ಪ್ರೇಮ, ಸ್ವಾತಂತ್ರ್ಯ ದಿನಾಚರಣೆಗೆ ಭಾಷಣ ಮಾಡುವ ಹುಡುಗ, ತೀರ್ಥಹಳ್ಳಿಯಲ್ಲಿ ಎದುರಾಗಿ ಮರೆಯಾದ ಹುಡುಗಿಯ ಜತೆಗಿನ ಮೌನ ಸಂಜೆ- ಈ ಎಲ್ಲಾ ಕತೆಗಳಲ್ಲೂ ನಮಗೆ ಎದುರಾಗುವುದು ತಾರುಣ್ಯ ತನಗೆ ತಾನೇ ಕೇಳಿಕೊಳ್ಳುವ ಪ್ರಶ್ನೆಗಳೇ. ಈ ಕಥಾಸಂಕಲನ ತಾರುಣ್ಯ ಉಕ್ಕುವ ಹುಡುಗನೊಬ್ಬ ತನ್ನ ವ್ಯರ್ಥವಾಗುತ್ತಿರುವ ತಾರುಣ್ಯಕ್ಕೆ ಹೆಮ್ಮೆ ಮತ್ತು ವಿಷಾದದಿಂದ ಬರೆದ ಭಾಷ್ಯದಂತಿದೆ.

ಶ್ರೀಕೃಷ್ಣ ಆಲನಹಳ್ಳಿಯ ಕತೆಗಳಲ್ಲಿ ಉಕ್ಕುತ್ತಿದ್ದ ಯೌವನ, ಹದಿಹರೆಯ, ಪ್ರೇಮಕಾಮದ ಹುಡುಕಾಟಗಳೆಲ್ಲ ನಂತರದ ದಿನಗಳಲ್ಲಿ ಅಕಾಲ ವೃದ್ಧಾಪ್ಯಕ್ಕೆ ತುತ್ತಾದದ್ದನ್ನು ನಾವು ನೋಡಬಹುದು. ಈಗಷ್ಟೇ ಕತೆಬರೆಯುವ ಮೀಸೆ ಮೂಡುವ ಬಾಲಕರು ಕೂಡ ಗಂಭೀರವಾದ ಏನನ್ನೋ ಹೇಳುವಂತೆ ನಟಿಸುತ್ತಿರುವುದನ್ನು ನಾವು ಅನೇಕ ಕತೆಗಳಲ್ಲಿ ಕಾಣಬಹುದು.

ಸೋಷಲ್ ಇಂಜಿನಿಯರಿಂಗ್ ಇತ್ತೀಚಿಗೆ ಬರೆಯುತ್ತಿರುವ ತರುಣರ ಸಹಜ ಪ್ರತಿಭೆ ಮತ್ತು ಅಭಿವ್ಯಕ್ತಿಗಳನ್ನು ಎಷ್ಟರ ಮಟ್ಟಿಗೆ ತಿರುಚುತ್ತಿದೆ ಎಂದರೆ ಪ್ರತಿಯೊಂದು ಕತೆಯೂ ಕಲೆಗಾರಿಕೆಯನ್ನು ತೊರೆದು ಸಾಮಾಜಿಕ ಮತ್ತು ರಾಜಕೀಯ ಪ್ರಣಾಳಿಕೆಯಾಗಬೇಕು ಎಂದು ಇಡೀ ಜಗತ್ತೇ ನಿರೀಕ್ಷೆ ಮಾಡುತ್ತಿದೆ ಎಂಬ ಭಾವನೆಯನ್ನು ಕತೆಗಾರರಲ್ಲಿ ಕವಿಗಳಲ್ಲಿ ತುಂಬುತ್ತಿದೆ.

ಅಂಥ ಹೊತ್ತಲ್ಲಿ ಕತೆಗಳಿಗೆ ಅಕಾಲದಲ್ಲಿ ಅಡರಿದ ಮುಪ್ಪು ಮತ್ತು ಸಮಾಜ ಸುಧಾರಣೆಯ ಆರೋಪಿತ ಹಕ್ಕೊತ್ತಾಯಗಳಿಂದ ಮುಕ್ತವಾಗಿರುವ ಈ ಕತೆಗಳು, ಸಣ್ಣ ಕತೆಗಳ ಜಗತ್ತು ಕಳಕೊಂಡ ತಾರುಣ್ಯವನ್ನು ಮರಳಿ ಕೊಟ್ಟಿದೆ. ಈ ಕತೆಗಳಲ್ಲಿ ಬರುವ ಪಾತ್ರಗಳು, ಅವುಗಳ ಆಲೋಚನೆ, ನಿಲುವು ಮತ್ತು ನಡೆ ಬೇಜವಾಬ್ದಾರಿಯದ್ದಲ್ಲ. ಸಾಮಾಜಿಕ ಹೊಣೆಗಾರಿಕೆಯನ್ನು ಸಚಿನ್ ತಮ್ಮ ಕತೆಗಳಲ್ಲಿ ತರುವ ಕ್ರಮವೇ ವಿಶಿಷ್ಟವಾಗಿದೆ.
ಸಚಿನ್ ಸಣ್ಣಕತೆಗಳನ್ನು ರೂಪಕಗಳಲ್ಲಿ ಕಟ್ಟುತ್ತಾ ಹೋಗುತ್ತಾರೆ. ಥಟ್ಟನೆ ಗಮನ ಸೆಳೆದ ನಾಲ್ಕಾರು ಸಾಲುಗಳು ಇವು:

  1. ಮಳೆಯ ಮೋಡಗಳೆಲ್ಲಾ ಕರಗಿ ಶುಭ್ರವಾಗಿದ್ದ ರಂಗೇರುತ್ತಿದ್ದ ಭಾನು, ತೀರ ಸೇರುವ ಧಾವಂತದಲ್ಲಿದ್ದ ತುಂಗೆ, ದಡಗಳ ಪಿಸುಮಾತಿಗೆ ಕಿವಿಯಾಗಿದ್ದ ಸೇತುವೆ, ಏನೂ ಹೇಳದೆ ಜೊತೆಗಿರುವ ಇವಳು, ಇಂತಹದೊಂದು ಸಂಜೆಯ ಕನಸು ಕೂಡ ನನಗೆ ಆವರೆಗೆ ಬಿದ್ದಿರಲಿಲ್ಲ.
  2. ಭೋರ್ಗರೆದು ಬಂದ ಮಳೆಯೊಂದು ಈಗಲಾದರೂ ಮಾತಾಡಿಕೊಳ್ಳಿ ಅಂತ ನಮ್ಮನ್ನು ಬೇಡಿಕೊಳ್ಳುವ ಹಾಗೆ ಸುರಿಯತೊಡಗಿತು.
  3. ನೀನು ಅವಳನ್ನ ನಿಜವಾಗಿಯೂ ಪಡೆದುಕೊಳ್ಳಬೇಕೆಂದರೆ ಮೊದಲು ಅವಳನ್ನ ನಿನ್ನ ಫೋನಿಂದ ತೆಗೆಯಬೇಕು
  4. ಪಯಣಕ್ಕೆ ನಮ್ಮನ್ನು ವಾಸ್ತವದ ದಾರುಣತೆಯಿಂದ ಬಚ್ಚಿಡುವ ಗುಣವಿದೆ. ನಾನು ಯಾರು ಅಂತ ಗೊತ್ತಿಲ್ಲದ ಈ ದಾರಿ, ನನ್ನೆಲ್ಲಾ ಗುಟ್ಟುಗಳು ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುವ ಬೈಕು,
  5. ಸ್ಕೂಲು ಕಾಲೇಜಿಗೆ ಹೋಗುವ ಹುಡುಗ ಹುಡುಗಿಯರ ನಡುವೆ ತೀರ್ಥಹಳ್ಳಿಗೆ ಹೋಗುವ ಬಸ್ಸಿಗೆ ಕಾಯುತ್ತಾ ನಿಂತಿದ್ದ ಹೆಗ್ಗಡೆಯವರು ದಟ್ಟಗಪ್ಪು ಕೂದಲಿನ ನಡುವೆ ಅವಿತಿರುವ ಒಂದು ಸಣ್ಣ ಬಿಳಿ ಕೂದಲಿನಂತೆ ಕಾಣುತ್ತಿದ್ದರು.

ಈ ಸಂಕಲನದ ಪ್ರತಿಯೊಂದು ಕತೆಯೂ ಸಚಿನ್ ಮುಂದಿರುವ ದಾರಿ ಮತ್ತು ಸವಾಲು ಎರಡನ್ನೂ ಸಾರಿ ಹೇಳುತ್ತಿದೆ. ಹೀಗಾಗಿಯೇ ಸಚಿನ್ ನಡೆಯಬೇಕಾದ ಕತೆಗಾರನ ಹಾದಿ ಕಷ್ಟವಿದೆ.

‍ಲೇಖಕರು Admin

December 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಪೂರ್ಣಿಮಾ ಮಾಳಗಿಮನಿ

    ನವಿಲು ಕೊಂದ ಹುಡುಗ ನಂತರ ಇದನ್ನೂ ಖುಷಿಯಿಂದಲೇ ಕೈಗೆತ್ತಿಕೊಂಡಿದ್ದೆ. ಎಲ್ಲಾ ಕಥೆಗಳೂ ಏನೋ ಒಂದು ಹೊಸತನ್ನು ಹೇಳ ಬಯಸುತ್ತವೆ. ಏನೂ ಮಾತನಾಡದೆ ಜೊತೆಗಿರುವ ಅವಳಂತೆ!
    ಜೋಗಿ ಸರ್ ಸೂರ್ಯಕಿರಣದ ರೂಪಕ ಅದ್ಭುತವಾಗಿದೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: