ಪಿ ಚಂದ್ರಿಕಾ ಅಂಕಣ – ನನಗೆ ನಾನು ಈ ಜಗತ್ತಿನಲ್ಲಿ ಒಂಟಿ ಅನ್ನಿಸಿಬಿಟ್ಟಿತ್ತು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

25

ನಮ್ಮ ಸಿನೆಮಾದಲ್ಲಿ ಮಳೆಯ ದೃಶ್ಯವಿತ್ತು. ಆ ದೃಶ್ಯಕ್ಕಾಗಿ ಕೃತಕ ಮಳೆಯ ವಾತಾವರಣವನ್ನು ಸೃಷ್ಟಿಸಬೇಕಿತ್ತು ಹಾಗಾಗಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಬಳಸುವ ಎಂಜಿನ್ ಬೇಕಿತ್ತು. ಅದಕ್ಕಾಗಿ ಮಂಗಳೂರಿನ ಪಾಂಡೇಶ್ವರದ ಬಳಿ ಇರುವ ಅಗ್ನಿಶಾಮಕ ಕಛೇರಿಗೆ ಹೋಗಬೇಕಿತ್ತು. ಹಿಂದೆ ಹೋಗಿ ಮಾತನಾಡಿ ಬಂದಿದ್ದರಿಂದ ಮತ್ತು ಅಲ್ಲಿಯ ಇನ್‌ಚಾರ್ಜ್ ಅಧಿಕಾರಿ ನಮ್ಮೂರಿನವರೇ ಆಗಿದ್ದರಿಂದ ಎಲ್ಲವೂ ಸುಲಭಕ್ಕೆ ಆಗುತ್ತದೆ ಎಂದು ಭಾವಿಸಿದ್ದೆವು.

ಫೈರ್ ಇಂಜಿನ್ ಅನ್ನು ಬುಕ್ ಮಾಡಿ ಬರಲಿಕ್ಕೆ ಆರ್ಟ್ ಡೈರೆಕ್ಟರ್‌ಗಿದ್ದ ನಾನೇ ಹೋಗಬೇಕಿತ್ತು. ಬೆಳಗ್ಗೆಯೇ ಹೋಗಿ ಅವರ ನಿಯಮಗಳ ಪ್ರಕಾರ ಅರ್ಜಿಯನ್ನು ಬರೆದುಕೊಟ್ಟು ಹತ್ತುಸಾವಿರ ಹಣವನ್ನು ಕಟ್ಟಿ, ಒಂದು ಸಮಯ ಹೇಳಿಬಿಟ್ಟರೆ ಆದೀತು ಎಂದು ಹೊರಟೆ. ಆದರೆ ಅಲ್ಲಿಗೆ ಹೋಗುವಾಗ ಅಧಿಕಾರಿ ಬದಲಾಗಿದ್ದರು. ಶೂಟಿಂಗ್‌ಗೆ ಫೈರ್ ಇಂಜಿನ್ ಕೊಡಲು ಕಟ್ಟಿಸಿಕೊಳ್ಳುತ್ತಿದ್ದ ಹಣದ ಮೊತ್ತವೂ ಬದಲಾಗಿತ್ತು. ಎಂಟು ಸಾವಿರದಿಂದ ಹದಿನೈದು ಸಾವಿರಕ್ಕೆ ಅದನ್ನು ಏರಿಸಿಬಿಟ್ಟಿದ್ದರು. ವಾರದಲ್ಲಿ ಇಂಥಾ ಬದಲಾವಣೆ ಹೇಗೆ ಸಾಧ್ಯ ಎಂದು ನಾನು ಪ್ರಶ್ನಿಸಿದ್ದಕ್ಕೆ ಬಹುದಿನಗಳಿಂದ ನೆನೆಗುದಿಗೆ ಬಿದ್ದ ಮೊತ್ತದ ಬದಲಾವಣೆ ಏಕಾಏಕಿ ಆಗಿಬಿಟ್ಟಿತ್ತು.

ನನ್ನ ಹತ್ತಿರ ಇದ್ದ ಹಣ ಯಾವುದಕ್ಕೂ ಆಗುವುದಿಲ್ಲ. ಇಲ್ಲಿ ಆಗಿಲ್ಲ ಅಂದ್ರೆ ನಿಮ್ಮೂರಲ್ಲೇ ನಮ್ಮ ಹೆಸರಿಗೆಡಿಡಿ ತೆಗೆದು ಡೀಟೇಲ್ಸ್ ಕಳಿಸಿ, ಇಲ್ಲಾಂದ್ರೆ ಅಕೌಂಟ್‌ಗೆ ಹಣವನ್ನು ಟ್ರಾನ್ಸ್ಪ್ ರ್ ಮಾಡಿ ಎಂದುಬಿಟ್ಟರು. ಹಿಂದೆ ಹಂಗಾಮಿ ಅಧಿಕಾರಿ ಅಲ್ಲೇ ಇದ್ದರು. ಅವರನ್ನೂ ಕೇಳಿಕೊಂಡೆ. ಇಡೀ ದೇಶವೇ ಸಂಕಷ್ಟದಲ್ಲಿರುವಾಗ ನಮ್ಮ ಪರಿಸ್ಥಿತಿಗೆ ಸ್ಪಂದಿಸಿ ಸಹಾಯ ಮಾಡಿ ಎಂದು. ನನ್ನ ಮಾತುಗಳಿಂದ ಅವರ ಮನಸ್ಸು ಕರಗುತ್ತಿತ್ತು. ಆದರೆ ನನಗೆ ಸಹಾಯ ಮಾಡುವ ಯಾವ ದಾರಿಗಳೂ ಅವರಿಗೆ ಕಾಣಲಿಲ್ಲ.

ನನ್ನ ಹತ್ತಿರ ಎಟಿಎಂ ಕಾರ್ಡ್ ಇದ್ದರೂ ಅದನ್ನ ಬಳಸಲಿಕ್ಕಾಗದ ಸ್ಥಿತಿ. ನಮ್ಮ ಹಣವನ್ನು ನಾವೇ ತೆಗೆದುಕೊಳ್ಳಲಾಗುತ್ತಿಲ್ಲ. ದೇಶದ ಕಳ್ಳರನ್ನೆಲ್ಲಾ ಹಿಡಿಯುವ ದೊಡ್ಡ ಆಶ್ವಾಸನೆಯ ಜೊತೆಗೆ ನಮ್ಮ ಕನಸುಗಳೂ ಸೇರಿದ್ದರಿಂದ ಇದನ್ನೆಲ್ಲಾ ಸಹಿಸಿಕೊಂಡು ಬಿಡೋಣ ಎಂದು ಅನ್ನಿಸುತ್ತಿತ್ತು. ತುಘಲಕ್ ದರ್ಬಾರಿಗೆ ನಾವೂ ಹೀಗೆ ಕೈಜೋಡಿಸುತ್ತೇವೆಂದೂ ಬೆಟ್ಟ ಅಗೆದು ಇಲಿಯನ್ನೂ ಹಿಡಿಯಲಾಗದ ಒಣ ಜಂಭಗಳನ್ನು ಹೀಗೆ ಪೋಷಿಸುತ್ತೇವೆಂದು ಕಲ್ಪನೆ ಕೂಡಾ ಇರಲಿಲ್ಲ. ಏನೇ ಆಗಲಿ ಎಲ್ಲದಕ್ಕೂ ಬಲಿಯಾಗುವುದು ಮಾತ್ರ ನಮ್ಮಂಥಾ ಮಧ್ಯಮ ವರ್ಗದ, ದುಡಿದ ಪೈಸೆ ಪೈಸೆಯ ಲೆಕ್ಕವನ್ನೂ ಇಟ್ಟು ತೆರಿಗೆ ಕಟ್ಟುವ ಜನ ಮಾತ್ರ. ಇಲ್ಲಿಯೂ ಆಗಿದ್ದು ಇದೇ. ಈ ದೇಶದ ದುರಂತ ಎಂದರೆ ತೆರಿಗೆ ಹಣವನ್ನು ತಪ್ಪಿಸಿಕೊಳ್ಳಲಿಕ್ಕೆ ದೊಡ್ಡವರಿಗೆ ದಾರಿಗಳಿರುವುದು.

ಪಂಚಾಕ್ಷರಿಗೆ ಫೋನ್ ಮಾಡಿದ್ರೆ ಅವರು, ಮೇಡಂ ಹೇಗಾದ್ರೂ ನೀವೇ ಅರೇಂಜ್ ಮಾಡಿ ನನ್ನ ಕೈಲಿ ಎಲ್ಲಾ ಕೆಲಸ ಒಟ್ಟಿಗೆ ಮಾಡಲಿಕ್ಕಾಗಲ್ಲ ಅಂದುಬಿಟ್ಟರು. ಕಾಣದ ಊರು ಮಾಡುವುದಾದರೂ ಏನು? ನಾನು ಬೆಳಗ್ಗೆ ಹತ್ತು ಗಂಟೆಗೆ ಅಲ್ಲಿಗೆ ಹೋಗಿದ್ದು ಮಧ್ಯಾಹ್ನ ಎರಡಾದರೂ ಏನೂ ಆಗುತ್ತಿಲ್ಲ. ಹಳೆಯದಾದ ನನ್ನ ಫೋನ್‌ನಲ್ಲಿ ಚಾರ್ಜ್ ಕೂಡಾ ನಿಲ್ಲುತ್ತಿಲ್ಲ. ಮತ್ತಲ್ಲಿ ಯಾರೊಂದಿಗೋ ರಿಕ್ವೆಸ್ಟ್ ಮಾಡಿ ಅದನ್ನು ಚಾರ್ಜ್ ಮಾಡಿಸಿಕೊಂಡೆ. ಮಧ್ಯಾಹ್ನವಾಗುತ್ತಾ ಬಂದದ್ದರಿಂದ ನನ್ನ ಕರೆತಂದಿದ್ದ ಡ್ರೈವರ್ ಕಾರನ್ನು ವಾಪಾಸು ತೆಗೆದುಕೊಂಡು ಹೋಗುವ ತುರ್ತಿನಲ್ಲಿ ಹೊರಟ. ಈಗ ನನಗೆ ನಾನು ಈ ಜಗತ್ತಿನಲ್ಲಿ ಒಂಟಿ ಅನ್ನಿಸಿಬಿಟ್ಟಿತ್ತು.

ನನ್ನ ಪರಿಸ್ಥಿತಿ ನೋಡಿ ಕನಿಕರದಿಂದ ಅಲ್ಲಿದ್ದ ಸಿಬ್ಬಂದಿ, ‘ಮೊದಲು ಊಟ ಮಾಡಿ ಬನ್ನಿ ಮೇಡಂ’ ಎಂದು ಕಾಳಜಿ ಮಾಡಿದರು. ಅದಕ್ಕಿಂತ ಬೇರೆ ಏನು ಮಾಡಲು ಅವರಿಗೆ ಸಾಧ್ಯವಿರಲಿಲ್ಲ. ನನಗೆ ನೀವೇ ನೋಡಿಕೊಳ್ಳಿ ಯಾರಿಂದಲಾದರೂ ಹಣವನ್ನು ಟ್ರಾನ್ಸ್ಫರ್ ಮಾಡಿಸಿ ಎಂದು ಹೇಳಿಯಾದ ಮೇಲೆ ಪಂಚಾಕ್ಷರಿ ಫೋನ್ ರಿಸೀವ್ ಮಾಡ್ಲಿಲ್ಲ. ಅವರನ್ನು ಏನೂ ಅನ್ನಲಿಕ್ಕೆ ಸಾಧ್ಯವಿರಲಿಲ್ಲ. ಅವರು ಶೂಟಿಂಗ್ ಮಾಡುವ ಅನಿವಾರ್ಯ ಸ್ಥಿತಿಯಲ್ಲಿದ್ದರು. ಮತ್ತೆ ಮನೆಗೆ ಸ್ನೇಹಿತರಿಗೆ ಎಲ್ಲರಿಗೂ ಫೋನಾಯಿಸಿದೆ, ತಲೆಯನ್ನೂ ತಿಂದೆ. ಎಲ್ಲರ ಸ್ಥಿತಿಯೂ ನನಗಿಂತ ತುಂಬಾ ಬೇರೆಯಾಗಿರಲಿಲ್ಲ.

‘ನನ್ನ ಸ್ನೇಹಿತರು ಬ್ಯಾಂಕಿನಲ್ಲಿದ್ದಾರೆ, ತುಂಬಾ ಒಳ್ಳೆಯವರು, ಅವರು ಸಹಾಯ ಮಾಡಬಹುದು’ ಎಂದು ಇನ್ಯಾರೋ ಫೋನ್ ನಂಬರ್ ಕೂಡ ಕಳಿಸಿದ್ದರು. ಅವರು ಒಳ್ಳೆಯವರಲ್ಲ, ಅದಕ್ಕೆ ನನಗೆ ಸಹಾಯ ಮಾಡಲಿಲ್ಲ ಎಂದು ಹೇಳಲಿಕ್ಕಾಗುತ್ತದಾ? ಅವರಿಂದ ವಿಶಾದ ಯೋಗದ ಮಾತುಗಳು ಬಿಟ್ಟರೆ ಮತ್ತೇನೂ ಸಿಗಲಿಲ್ಲ. ಆಗ ಆನ್‌ಲೈನ್ ಟ್ರಾನ್ಸ್ಫರ್ ಮಾಡುವ ಸೌಲಭ್ಯ ಎಲ್ಲರಲ್ಲೂ ಇರುತ್ತಿರಲಿಲ್ಲ. ಕಡೆಗೆ ನನ್ನ ಗಂಡನಿಗೆ ಕಾಟಕೊಟ್ಟು `ಏನಾದರೂ ಮಾಡು ಮಾರಾಯ’ ಎಂದಿದ್ದಕ್ಕೆ ಇರುವ ಕೆಲಸದ ನಡುವೆ ನಿನ್ನದೊಂದು ಎಂದು ಬೈದುಕೊಳ್ಳುತ್ತಲೇ ಸ್ನೇಹಿತರ ಕಡೆಯಿಂದ ಆನ್ ಲೈನ್ ಟ್ರಾನ್ಸ್ಫರ್ ಮಾಡಿಸಿದರು.

ಆಗ ಮಧ್ಯಾಹ್ನ ಮೂರೂವರೆ. ಊಟ ಕೂಡಾ ಮಾಡಿರಲಿಲ್ಲ, ಹತ್ತು ನಿಮಿಷ ಊಟ ಮುಗಿಸಿ ಬರುತ್ತೇನೆ ಎಂದು ಅವರಿಗೆ ಹೇಳಿ ಅಲ್ಲೇ ಇದ್ದ ಪುಟ್ಟ ಕ್ಯಾಂಟೀನ್ ಒಂದರಲ್ಲಿ ಏನು ಸಿಕ್ಕಿತೋ ಅದನ್ನೇ ತಿಂದೆ. ನನಗೆ ವಾಪಾಸು ಹೋಗಲಿಕ್ಕೆ ವೆಹಿಕಲ್ ಇಲ್ಲದ್ದರಿಂದ ಫೈರ್ ಇಂಜಿನ್ ವಾಹನದ ಜೊತೆಗೇ ಹೊರಟೆ. ದೊಡ್ಡ ಸಮಾಧಾನದ ನಿಟ್ಟುಸಿರು ನನ್ನೊಂದಿತ್ತು. ನಾನಿಲ್ಲಿ ಇಷ್ಟು ಕಷ್ಟಪಟ್ಟಿದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಯಾಕೆಂದರೆ ಆ ಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಿದ್ದು ನಾನು ಮಾತ್ರ. ಹಾಗಾಗಿ ಈ ನನ್ನ ಸಾಹಸದ ಸಣ್ಣ ಕಲ್ಪನೆ ಕೂಡಾ ಯಾರಿಗೂ ಸಿಗಲಿಲ್ಲ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: