ಸಂಪು ಕಾಲಂ : ಹಳೆಗನ್ನಡದಲ್ಲಿ 'ಉಳಿದವರು ಕಂಡಂತೆ'


‘ಉಳಿದವರು ಕಂಡಂತೆ’ಯನ್ನು ಉಳಿದವರು ಕಂಡಂತೆ ನೋಡಿ, ಕೇಳಿ ಫೈನಲಿ ನಾನೇ ಕಂಡಿದ್ದಾಯಿತು. ಒಂಥರಾ ಮಿಶ್ರ ಪ್ರತಿಕ್ರಿಯೆ. ಒಳ್ಳೆಯ ಸಂಗೀತ, ಛಾಯಾಗ್ರಹಣಗಳೊಂದಿಗೆ ಪುಟ್ಟ ಕಥೆಯನ್ನು ಹೆಣೆದು ಅದರ ವಿವಿಧ ಆಯಾಮಗಳನ್ನು ಸ್ಥಳೀಯ ಸೊಗಡಿನೊಂದಿಗೆ ವಿಶಿಷ್ಟವಾಗಿ ತೋರಿಸಿದ್ದಾರೆ. ಒಂದು ವಿನೂತನ ಪ್ರಯೋಗ. ಎಲ್ಲರೂ ನೋಡಿ, ಮೆಚ್ಚಿರುವ ಈ ಸಿನೆಮಾದ ಬಗ್ಗೆ ನಾನು ಚರ್ಚಿಸುತ್ತಿಲ್ಲ. ಆದರೆ ಈ ಸಿನೆಮಾದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ್ದು; ಒಂದು ಕಥೆಯನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ದೃಷ್ಟಿಕೋನದಿಂದ ಹೇಗೆ ನೋಡುತ್ತಾರೆ, ಪ್ರತಿಯೊಬ್ಬರ ಪರ್ಸ್ಪೆಕ್ಟಿವ್ಸ್ ಹೇಗೆ ಭಿನ್ನವಾಗಿರುತ್ತದೆ ಎಂಬ ವಾಸ್ತವ. ಇದನ್ನು ನೋಡಿದಾಗ ನನಗೆ ನಮ್ಮ ತಂದೆ ಒಮ್ಮೆ ವಿವರಿಸಿದ್ದ ಹಳೆಗನ್ನಡದಲ್ಲಿನ ‘ಪರ್ಸ್ಪೆಕ್ಟಿವ್ಸ್’ ಬಗ್ಗೆ ಒಂದು ವಿಶೇಷ ಅಧ್ಯಯನ ನೆನಪಾಯಿತು!
ಮಹಾಭಾರತ ಮತ್ತು ರಾಮಾಯಣಗಳು ನಮ್ಮ ಭಾರತೀಯರಲ್ಲಿ ಭೌತಿಕ, ಆಧ್ಯಾತ್ಮಿಕ, ಪಾರಮಾತ್ಮಿಕ ಎಂಬಿತ್ಯಾದಿ ಎಲ್ಲ ಇಸಮ್ಮುಗಳಲ್ಲೂ ಹಾಸುಹೊಕ್ಕಾಗಿ ನಮ್ಮ ದಿನನಿತ್ಯದ ಬದುಕಾಗಿಬಿಟ್ಟಿದೆ. ಎಷ್ಟರಮಟ್ಟಿಗೆ ಎಂದರೆ “ರಾಮಾ”, “ಕೃಷ್ಣಾ” ಎಂಬ ಸಂಭೋದನೆಗಳು, ‘ಆ”, “ಅಯ್ಯೋ” ಎಂಬ ಭಾವಸೂಚಕ ಪದಗಳಂತೆಯೂ ಬಳಸಲ್ಪಡುವಷ್ಟು ಮನಸ್ಸಿಗೆ ನಿಕಟ, ಭಾವುಕ. ಇದಕ್ಕೆ ಬಹುಪಾಲು ಕಾರಣ ನಮ್ಮ ಹಿರಿಯ/ಪರಂಪರೆಯ ಕವಿವೃಂದ ಎಂದರೆ ತಪ್ಪಾಗಲಾರದು. ಸಾಮಾನ್ಯ ಜನರ ಅರ್ಥಗ್ರಹಿಕೆಗೆ ನಿಲುಕದ ಸಂಸ್ಕೃತದ ವ್ಯಾಸಭಾರತವನ್ನು ಅನೇಕ ಕವಿಗಳು ಓದಿ, ಮೆಚ್ಚಿ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಿಗೆ ಅದನ್ನು ತರ್ಜುಮೆಗೊಳಿಸಿದರು. ‘ದೇವಭಾಷೆ’ ಎಂದು ಒಂದು ಗುಂಪಿನ ಜನರಿಗೆ ಮಾತ್ರ ಆಕ್ಸಿಸಿಬಲ್ ಆಗಿದ್ದಂತಹ ಮಹತ್ ಗ್ರಂಥಗಳು ಮನೆ ಮನೆಗೂ ತಲುಪುವಂತಾಯಿತು. ಅದ್ಭುತವಾದ, ಅತೀತವಾದ ವ್ಯಾಸಭಾರತವು ಸಾಮಾನ್ಯ ಜನರ ಮನತಟ್ಟಿತು.
ಇಂಟೆರೆಸ್ಟಿಂಗ್ ಅಂದರೆ, ಈ ಪ್ರಾದೇಶಿಕೀಕರಣದಲ್ಲಿ ಹಿಂದಿನ ಕಾಲದ ಕವಿಗಳು ಉಳಿದವರು ಕಂಡಂತೆ ಸಿನೆಮಾವನ್ನು ಚಿತ್ರಿಸಿಯೇ ಬಿತ್ತಿದ್ದು. ಅಂದರೆ ವ್ಯಾಸಭಾರತವನ್ನು ಯಥಾವತ್ತಾಗಿ ತರ್ಜುಮೆ ಮಾಡದೆ, ಮೂಲ ಕಥೆಯನ್ನು ಉಳಿಸಿಕೊಂಡು, ತಮ್ಮದೇ ಆದ ಅಂದಿನ ಕಾಲಕ್ಕೆ ಪ್ರಸ್ತುತವಾದ ವಯಕ್ತಿಕ, ಪ್ರಾದೇಶಿಕ, ಸಾಮಾಜಿಕ, ರಾಜಕೀಯ ರಂಗಗಳಿಗೆ ಹೊಂದಿಸಿಕೊಂಡು ಹೊಸ ರಂಗುಗಳನ್ನು ಕೊಟ್ಟು, ಅದನ್ನು ಜನರಿಗೆ ತಮ್ಮದೇ ಕಥೆ ಎನಿಸುವಷ್ಟು ಹಿತವಾಗಿಸಿದರು. ಮೊದಲೇ ರಾಮಾಯಣ, ಮಹಾಭಾರತಗಳು ಒಂದು ಮಹಾನ್ “ಎನ್ಸೈಕ್ಲೋಪೀಡಿಯಾ ಆಫ್ ಹ್ಯೂಮನ್ ಸೈಕಾಲಜಿ” ಎಂದರೆ ತಪ್ಪಿಲ್ಲ. ಅದರ ಜೊತೆಗೆ ಕವಿಹೃದಯ, ಜನಪದ ಸೊಗಡು ಸಮ್ಮಿಶ್ರವಾದರೆ ಕೇಳಬೇಕೇ! ಈ ಗ್ರಂಥಗಳು ಎಲ್ಲಾ ಭಾಷೆಗಳಲ್ಲೂ ಭಾವಾನುವಾದವಾಗಿ ಕನ್ನಡಕ್ಕೂ ತನ್ನ ಕಂಪನ್ನು ಹಚ್ಚಿದ್ದು, ಆದಿಕವಿ ಪಂಪನ ಮೂಲಕ. ಅನೇಕಾನೇಕರು ಮಹಾಭಾರತವನ್ನು ಪುನರ್ರಚಿಸಿದ್ದಾರೆ, ರಾಮಾಯಣವನ್ನು ಪ್ರತಿಧ್ವನಿಸಿದ್ದಾರೆ. ಆದರೆ ಪ್ರತಿ ಪ್ರಯತ್ನವೂ ಒಂದು ಹೊಸ ಕಥೆಯನ್ನು ಹೇಳುವಂತೆ ನಾವೀನ್ಯತೆಯನ್ನು, ತಾಜಾತನವನ್ನೂ ಪಡೆದಿರುತ್ತವೆ. ಕನ್ನಡದ ಭಾರತ, ರಾಮಾಯಣಗಳನ್ನು ಬರೆದವರಲ್ಲಿ ಪ್ರಮುಖರು; ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶ, ನಾಗಚಂದ್ರ, ಕುವೆಂಪು ಇನ್ನೂ ಹಲವರು (ಸಂಪೂರ್ಣ ಕಥೆಯನ್ನು ಹೇಳಿದವರಲ್ಲಿ ಪ್ರಮುಖರು. ಇವರಲ್ಲದೆ ಹರಿಹರ, ರಾಘವಾಂಕ, ಜನ್ನ, ಪೊನ್ನ ಇತ್ಯಾದಿ ಇನ್ನೂ ಅನೇಕ ಮಹಾಕವಿಗಳು ಭಾರತದ, ರಾಮಾಯಣದ ಉಪಕಥೆಗಳನ್ನು, ಅದರ ಪ್ರಾಮುಖ್ಯತೆಯನ್ನು ಹಿಡಿದೆತ್ತಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ). ಈ ಹಿರಿಯರೆಲ್ಲರೂ ಭಾರತ, ರಾಮಾಯಣ ಕಥೆಗಳೇ ಹೇಳಿದ್ದರೂ ಎಲ್ಲರೂ ತಮ್ಮ ತಮ್ಮ ದೃಷ್ಟಿಕೋನದಲ್ಲಿ ಕಥೆಯನ್ನು ನಿರೂಪಣೆ ಮಾಡಿದ್ದಾರೆ. ಕಥೆಯೊಂದೇ ಆದರೂ ಪ್ರತಿಯೊಬ್ಬರ ಕಥಾನಾಯಕ ಬೇರೆಯವನೇ ಆಗಿರುತ್ತಾನೆ ಎಂಬುದು ಗಮನಿಸಬೇಕಾದ ಕುತೂಹಲದ ಅಂಶ. ಕೆಲವು ಉದಾಹರಣೆಗಳನ್ನು ನೋಡೋಣ.
ಧರ್ಮನಂದನ, ಧರ್ಮರಾಯ ಎಂದೇ ಮೊದಲಿಗೆ ಕರೆದ ವ್ಯಾಸಭಾರತದಲ್ಲಿ, ವ್ಯಾಸನ ಹೀರೋ ಧರ್ಮರಾಯನೇ. ಇಡೀ ವ್ಯಾಸಭಾರತ ಧರ್ಮರಾಯನ ಕಥೆಯಾಗಿದ್ದು, ಅವನ ಮೂಲಕವೇ ಕಥೆ ಹೆಣೆದುಕೊಂಡು ಹೋಗುತ್ತದೆ. ಅದನ್ನೇ ಸ್ವಲ್ಪ ಬದಲುಮಾಡಿದ ಪಂಪ ಭಾರತದ ನಾಯಕ ಅರ್ಜುನ. “ವಿಕ್ರಮಾರ್ಜುನವಿಜಯಂ” ಎಂದೇ ತನ್ನ ಕೃತಿಯನ್ನು ಕರೆದು ಕಥಾ ಪ್ರಾಮುಖ್ಯತೆಯನ್ನು ಅರ್ಜುನನ ಮೂಲಕ, ಅವನ ಪರಾಕ್ರಮಗಳ ಮೂಲಕ ಕಥೆಯನ್ನು ಬಿತ್ತರಿಸುತ್ತಾನೆ. (ಬರೀ ಕಾಂಗ್ರೆಸ್, ಬಿಜೆಪಿ ರಾಜಕೀಯ ನೋಡಿ ಬೋರಾದವರಿಗೆ ಇಲ್ಲೊಂದು ವಿಭಿನ್ನ ರಾಜಕಾರಣದ ತುಣುಕು!) ಪಂಪ ಅರಿಕೇಸರಿಯ ರಾಜಾಶ್ರಯದಲ್ಲಿ ಇದ್ದದ್ದರಿಂದ, ಅರಿಕೇಸರಿಯ ಮನಗೆಲ್ಲಲು ಅರ್ಜುನನನ್ನು ಅರಿಕೇಸರಿಗೆ ಹೋಲಿಸಿ, ಅವನ ಪರಾಕ್ರಮಗಳನ್ನು ವಿಶೇಷವಾಗಿ ಹೊಗಳುತ್ತಾನೆ. ಇದು ಸಾಮಾಜಿಕ ಮತ್ತು ರಾಜಕೀಯ ನ್ಯಾಯ. ಆದರೆ ಪಂಪನ ಕವಿಮನಸ್ಸು ನಿಜಕ್ಕೂ ಮಿಡಿಯುವುದು ಭಾರತ ಕಥೆಯ ದುರಂತ (ಖಳ?)ನಾಯಕನಾದ ಕರ್ಣನ ಬಗೆಗೆ. ಕಥೆಯ ಒಂದು ಭಾಗದಲ್ಲಿ ಪಂಪ: “ನೆನೆಯದಿರಣ್ಣ ಭಾರತದೊಳಿಂ ಪೆರರಾಮುಂ ನೆನೆವೊಡೆಒಂದೆಚಿತ್ತದಿಂಕರ್ಣನಂ ನೆನೆಯ” (ಭಾರತ ಕಥೆಯಲ್ಲಿ ಮತ್ಯಾರನ್ನೂ ನೆನೆಯಬೇಡಿ, ನೆನಪಿಸಿಕೊಳ್ಳುವುದೇ ಆದರೆ ಒಂದೇ ಚಿತ್ತದಿಂದ ಕರ್ಣನನ್ನು ನೆನೆಯಿರಿ) ಎಂದು ಹೇಳುತ್ತಾನೆ.

ಒಂದೇ ಪದ್ಯದಲ್ಲಿ ಪಂಪ, ಮಹಾಭಾರತದ ಎಲ್ಲ ಪ್ರಮುಖ ಪಾತ್ರಗಳ ಗುಣಗಳನ್ನು ನೆನೆದು ಅದರಲ್ಲೂ ಕರ್ಣನಿಗೆ ಅಕ್ಕರೆ, ಕೃತಜ್ಞತಾಭಾವವನ್ನೇ ಅರ್ಪಿಸುತ್ತಾನೆ. ಆ ಪದ್ಯ ಹೀಗಿದೆ:
ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮುದ್ರೇಶನತ್ಯುನ್ನತಿಯೊಳಮರ ಸಿಂಧೋದ್ಭವಂ ಚಾಪವಿದ್ಯಾ
ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ
ರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿನರ್ಗಳಿನೀಭಾರತ ಲೋಕಪೂಜ್ಯಂ।।
ರತ್ನತ್ರಯರಲ್ಲಿ ಎರಡನೆಯವನಾದ ರನ್ನನ ಕೃತಿ, ಸಾಹಸಭೀಮ ವಿಜಯಂ (ಗಧಾಯುದ್ಧ). ಹೆಸರಲ್ಲೇ ಹೇಳುವಂತೆ ರನ್ನನ ನಾಯಕ ಭೀಮ. ಇವನ ಪ್ರಕಾರ ಇಡೀ ಭಾರತ ಕಥೆಯು ಭೀಮ-ದುರ್ಯೋಧನರ ಗಧಾಯುದ್ಧದಲ್ಲೇ ಇದೆ. “ಒಳಪೊಕ್ಕು ನೋಡೆ ಭಾರತದೊಳಗಣ ಕಥೆಯೆಲ್ಲಮೀ ಗಧಾಯುದ್ಧದೊಳಂ” ಎನ್ನುತ್ತಾನೆ ಕವಿಚಕ್ರವರ್ತಿ ರನ್ನ. ಆದರೆ ಇಲ್ಲೂ ಪಂಪನಂತೆ ರನ್ನನ ಒಳಮನಸು ಜೈ-ಸುವುದು ಮತ್ತೊಬ್ಬ ದುರಂತ (ಖಳ?)ನಾಯಕನನ್ನು. ಎಲ್ಲರೂ ಹಲುಬುವ, ಭಾರತ ಕಥೆಯ ದೊಡ್ಡ ವಿಲನ್ ಎಂದೇ ಚಿತ್ರಿತಗೊಂಡಿರುವ ದುರ್ಯೋಧನನ ಮೃದುಹೃದಯ, ಸ್ನೇಹಭಾವ, ಅನುರಾಗ, ಕೆಚ್ಚೆದೆ ಇವೆಲ್ಲವೂ ರನ್ನನ ಲೇಖನಿಯು ಸೆರೆಹಿಡಿದಿದೆ. “ಕುರುಕುಲಾರ್ಕನುಂ ಅರ್ಕನುಂ ಅಸ್ತಮೇಯ್ದಿದರ್” (ಕುರುಕುಲದ ಸೂರ್ಯ, (ಅಂದರೆ ದುರ್ಯೋಧನ) ಮತ್ತು ಸೂರ್ಯ ಇಬ್ಬರೂ ಅಸ್ತಂಗತವಾದರು (ಅಂದರೆ ಸಂಜೆ, ಸೂರ್ಯ ಮುಳುಗುವ ವೇಳೆಗೆ ದುರ್ಯೋಧನನು ಅಸ್ತಂಗತನಾದನು ಎಂದು)) ಎಂದು ಕರುಣರಸವನ್ನು ಪ್ರಧಾನಿಸುತ್ತಾನೆ. ಸೈಕಾಲಜಿ ಅಟ್ ವರ್ಕ್!
ಕುಮಾರವ್ಯಾಸ ಮತ್ತು ಲಕ್ಷ್ಮೀಶರ ನಾಯಕ, ದೈವ, ಗುರು ಎಲ್ಲವೂ ಕೃಷ್ಣನೇ. ಮಹಾಭಾರತದ ಕಥೆಯಾದ ‘ಕರ್ಣಾಟ ಭಾರತ ಕಥಾಮಂಜರಿಯಲ್ಲಿ’, “ತಿಳಿಯ ಹೇಳುವೆ ಕೃಷ್ಣ ಕಥೆಯನು, ಇಳೆಯ ಜಾಣರು ಮೆಚ್ಚುವಂತಿರೆ” ಎನ್ನುತ್ತಾನೆ ಕುಮಾರವ್ಯಾಸ. ಕಥೆಯೆಲ್ಲವೂ ಕೃಷ್ಣನ ಮೂಲಕವೇ ಹೆಣೆದುತೋರುತ್ತಾನೆ. ಉಪಮಾಲೋಲನಾದ ಲಕ್ಷ್ಮೀಶ ಕವಿಯೂ ಕೃಷ್ಣನ ಆರಾಧಕನೇ. ಭಾರತ ಕಥೆಯನ್ನು ಪೂರ್ತಿ ತರ್ಜುಮೆ ಮಾಡದಿದ್ದರೂ ಜೈಮಿನಿ ಭಾರತದಲ್ಲಿ ಅಷ್ವಮೇಧಿನೀ ಪರ್ವವನ್ನು ಸಂಪೂರ್ಣ ಕನ್ನಡೀಕರಿಸಿ ಅದರ ಮೂಲಕ ದೇಸೀ ಮುದವನ್ನು ನಮಗೆ ನೀಡುತ್ತಾನೆ ಲಕ್ಷ್ಮೀಶ ಕವಿ. ಕೃಷ್ಣನ ಕಥೆಯನ್ನೇ ಹೇಳುತ್ತಾ ನಡುನಡುವೆ ಸಾಮಾನ್ಯ ಜನರ ಸಂವೇದನಾಶೀಲತೆಯನ್ನು ಅರ್ಥಪೂರ್ಣವಾಗಿ ಹಿಡಿದಿಡುತ್ತಾನೆ. ಸ್ತ್ರೀ-ಸಂವೇದನೆಯ ಉತ್ತಮ ಬಿತ್ತರಿಕೆ ಲಕ್ಷ್ಮೀಶನ ಸಾಲುಗಳಲ್ಲಿವೆ. ಮಹಾಭಾರತ ಕಥೆಯನ್ನು ಹೇಳುತ್ತಾ ನಡುವೆ ರಾಮಾಯಣದ ಕಥಾಭಾಗವನ್ನೂ ಸೇರಿಸುತ್ತಾನೆ ಕವಿ. (ಸೀತೆಯನ್ನು ಕಾಡಿನಲ್ಲಿ ಬಿಟ್ಟು ದುಃಖಿಸಿ ಲಕ್ಷ್ಮಣನು ಮರಳುವಾಗ, ಸೀತೆಯ “ಕರುಣಾಳು ರಾಘವನಲ್ಲಿ ತಪ್ಪಿಲ್ಲ ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿದೊಡಲಂ ಪೊರೆವುದೆನ್ನೊಳಪಾರಾಧ ಮುಂಟು…” ಎಂದು ವ್ಯಂಗ್ಯಮಾಡುವ ಸಾಲುಗಳು ಉಲ್ಲೇಖನೀಯ).
ಹೀಗೆ ಮಹಾಭಾರತದ ಕಥೆಯು ಒಬ್ಬೊಬ್ಬರ ದೃಷ್ಟಿಕೋನದಲ್ಲಿ ಒಂದೊಂದು ರೀತಿಯಲ್ಲಿ, ವಿನೂತನವಾಗಿ, ವಿಶೇಷವಾಗಿ ಹೊರಹೊಮ್ಮಿರುವುದು ಅತ್ಯಂತ ಸೋಜಿಗದ ಮತ್ತು ಹೆಮ್ಮೆಯ ವಿಷಯವಾಗಿದೆ. ಈ ಮೇಲೆ ಉದಾಹರಿಸಿದ ನಾಲ್ಕೂ ಕವಿಗಳ ಭಾರತಕಥೆಯ ಕಥಾಹರವನ್ನು ಒಂದೇ ಸಾಲಿನಲ್ಲಿ ಹಿಡಿದಿಡುತ್ತಾರೆ ವಿಮರ್ಶಕರೊಬ್ಬರು. ಆ ಸಾಲುಗಳು ಹೀಗಿವೆ: “ಪಂಪನಿಗೆ ಭಾರತ ಲೌಕಿಕಕಾವ್ಯ, ರನ್ನನಿಗೆ ಯುದ್ಧದ ಸಂಘರ್ಷ, ಕುಮಾರವ್ಯಾಸನಿಗೆ ಅದೊಂದು ಭಗವದ್ವಿಲಾಸ ಭೂಮಿಕೆ ಮತ್ತು ಲಕ್ಷ್ಮೀಶನಿಗೆ ಅದೊಂದು ಕೃಷ್ಣಚರಿತಾಮೃತ”.
ಅಭಿನವಪಂಪ ಎಂದು ಕರೆಯಲ್ಪಡುವ ನಾಗಚಂದ್ರನ ಪಂಪರಾಮಾಯಣದಲ್ಲಿ ಅವನ ಮೆಚ್ಚಿನ ನಾಯಕ ರಾವಣ. ಇತ್ತೀಚೆಗಿನ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಕುವೆಂಪು ಮೈ-ಮನ ವಿಕಾರಿಯೆನಿಸಿರುವ ಮಂಥರೆಯನ್ನು “ಮಮತೆಯ ಸುಳಿ” ಎಂದು ಕರೆಯುತ್ತಾರೆ. ಬಹುಶಃ ರಾಮಾಯಣ ಕಥೆಯಲ್ಲಿ ಅಮುಖ್ಯವೆನಿಸುವ ಊರ್ಮಿಳೆಯ ನಿಟ್ಟುಸಿರು ಕುವೆಂಪುರವರಿಗೆ ವಿಶೇಷವಾಗಿ ಕೇಳಿಸುತ್ತದೆ. ಪ್ರತಿಯೊಬ್ಬರ ಭಾವಲಯ, ಎಲ್ಲಿ, ಹೇಗೆ, ಯಾರ ಭಾವಕ್ಕೆ ಪ್ರಚೋದಿಸುತ್ತದೆಯೋ ತಿಳಿಯದು. ಈ ರೀತಿಯ ಎಂಪಥಿ ಅಥವಾ ಸ್ವಾತ್ಮಾರೋಪದ ಗುಣ ಕವಿಯಲ್ಲಿದ್ದರೆ ಆತನ/ಆಕೆಯ ಬರಹ ನಿಜಕ್ಕೂ ಸಾರ್ಥಕ್ಯ ಪಡೆಯುತ್ತದೆ. ಹೀಗೆ ನಮ್ಮ ಮಹಾಗ್ರಂಥಗಳು ದೇಸೀ ರೂಪದಲ್ಲಿ ಮೂಲದ ಆಶಯದಿಂದಲೇ ಒಬ್ಬೊಬ್ಬರ ಕಣ್ಣಲ್ಲಿ ಕಥೆ ಕಟ್ಟುವಿಕೆ ಒಂದೊಂದು ರೀತಿಯದ್ದಾಗಿ, ಈ “ಉಳಿದವರು ಕಂಡಂತೆ”ಯನ್ನು ಅಧ್ಯಯನ ಮಾಡುವುದು ಎಷ್ಟು ಇಂಟೆರೆಸ್ಟಿಂಗ್ ಅಲ್ಲವೇ!

‍ಲೇಖಕರು G

May 24, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಡಾ.ಪ್ರಕಾಶ ಗ.ಖಾಡೆ

    ಮಹಾಭಾರತ ರಾಮಾಯಣ ಕಥೆಯಲ್ಲಿ ಅಮುಖ್ಯವೆನಿಸುವ ಪಾತ್ರಗಳ ಎಳೆ ಹಿಡಿದು ಬರೆದ ಬರಹ ಅಧ್ಯಯನಪೂರ್ಣವಾಗಿದೆ.

    ಪ್ರತಿಕ್ರಿಯೆ
  2. ಸತ್ಯನಾರಾಯಣ

    “””ಇತ್ತೀಚೆಗಿನ ‘ಶ್ರೀ ರಾಮಾಯಣ ದರ್ಶನಂ’””” ಎಂದಿದ್ದೀರಿǃ ಶ್ರೀರಾಮಾಯಣ ದರ್ಶನಂ ಬಂದು ಅರವತ್ತುಮೂರು ವರ್ಷಗಳೇ ಆಗಿಹೋಗಿವೆ. ಇದು ಸಣ್ಣ ಅವಧಿಯೇನಲ್ಲ.
    ಇನ್ನೂ ಕೊನೆಗೆ, ಇತ್ತೀಚೆಗಿನ ಎಂದು ನೀವು ಹೇಳಬಹುದಾಗಿದ್ದ ಕೃತಿ ವೀರಪ್ಪಮೊಯಿಲಿಯವರ ‘ಶ್ರೀರಾಮಾಯಣ ಮಹಾನ್ವೇಷಣಂ’. ಹೆಸರಿನಲ್ಲಿ ರಾಮಾಯಣ ಎಂಬ ಪದವಿದ್ದರೂ, ವೀರಪ್ಪಮೊಯಿಲಿಯವರು ತಮ್ಮ ಕೃತಿ ‘ಲಕ್ಷ್ಮಣಾಯಣ’ ಎಂದು ಕರೆದುಕೊಮಡಿದ್ದಾರೆ. ಲಕ್ಷ್ಮಣನೇ ಅದರ ನಾಯಕ ಕೂಡǃ

    ಪ್ರತಿಕ್ರಿಯೆ
  3. Anil Talikoti

    ತುಂಬಾ ಚೆನ್ನಾಗಿದೆ – ಈ ಪರ್ಸ್ಪೆಕ್ಟಿವ್ಸನ ಕೋನ/ದೃಷ್ಟಿಯೇ ಸೃಜನಶೀಲತೆಯ ಅಳತೆಗೋಲು. ಇದು ಅತ್ಯಂತ ಆಸಕ್ತಿಕರ ಓದಿಗೆ ಪ್ರೇರಕ.

    ಪ್ರತಿಕ್ರಿಯೆ
  4. Pramod

    ಒಳ್ಳೆಯ ಲೇಖನ. ಕಥೆಗಳು ಜೀವ೦ತವಾಗಿರುವುದೇ ಹೀಗೆ. ತಲೆಯಿ೦ದ ತಲೆಗೆ, ತಲೆಮಾರಿನಿ೦ದ ತಲೆಮಾರಿಗೆ, ಕಥೆಗಳು ಜೀವ೦ತ ನದಿಯಾಗಿ ಹರಿಯುತ್ತವೆ.
    ನಿಮ್ಮ ಲೇಖನ ಓದುತ್ತಾ ನೆನಪಾಗಿದ್ದು ಕುರೋಸಾವ ಕ೦ಡ೦ತೆ ಷೇಕ್ಸ್ ಸ್ಪಿಯರ್ ನ ಜಪಾನ್ ಸಿನೆಮಾ ಅವತರಣಿಕೆಗಳು!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: