ಸುಪ್ರೀಮ್ ಕೋರ್ಟ್ ತೀರ್ಪು ಮತ್ತು ಶಿಕ್ಷಣ ಮಾಧ್ಯಮ – ಸಿ ಎನ್ ರಾಮಚಂದ್ರನ್

’ಸುಪ್ರೀಂ ಕೋರ್ಟ್ ತೀರ್ಪು ಮತ್ತು ಶಿಕ್ಷಣ ಮಾಧ್ಯಮ’ ಈ ಬಗ್ಗೆ ತಾವು ಬರೆದ ಲೇಖನವನ್ನು ಸಿ ಎನ್ ಆರ್ ರವರು ಪ್ರೀತಿಯಿಂದ ಅವಧಿಗೆ ಕಳುಹಿಸಿಕೊಟ್ಟಿದ್ದಾರೆ.

ಅವರಿಗೆ ’ಅವಧಿ’ಯ ವಂದನೆಗಳು.  ಈ ಬಗ್ಗೆ ನಿಮಗೆ ಅಭಿಪ್ರಾಯಗಳಿಗೆ ಸ್ವಾಗತ.

ಸಿ ಎನ್ ರಾಮಚಂದ್ರನ್

ಸುಮಾರು ಎರಡು ದಶಕಗಳ ನಂತರ ಹೊರಬಂದಿರುವ ಸುಪ್ರೀಂ ಕೋರ್ಟ್  ತೀರ್ಪು ಕರ್ನಾಟಕದಲ್ಲಿ (ಪ್ರಾಯಃ ಇತರ ರಾಜ್ಯಗಳಲ್ಲಿಯೂ) ಎಲ್ಲರನ್ನೂ ಸಹಜವಾಗಿ ಚಿಂತೆಗೆ ಈಡು ಮಾಡಿದೆ. ಈ ತೀರ್ಪನ್ನು ಕುರಿತು ಮತ್ತು ‘ಶಿಕ್ಷಣದಲ್ಲಿ ಮಾತೃಭಾಷೆಯ ಸ್ಥಾನ’ವನ್ನು ಕುರಿತು ಸಾರ್ವಜನಿಕ ಚರ್ಚೆಗೆ ಅನುವು ಮಾಡಿಕೊಟ್ಟಿರುವ ಪ್ರಜಾವಾಣಿಯನ್ನು ಅಭಿನಂದಿಸುತ್ತಾ, ನಲವತ್ತು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕೆಲಸಮಾಡಿರುವ ನನ್ನ ಅನುಭವವನ್ನು ಆಧರಿಸಿ, ಈ ಕೆಳಗಿನ ಕೆಲವು ವಿಚಾರಗಳನ್ನು ನಾನು ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ. ನನ್ನ ವಾದದ ತಿರುಳೇನೆಂದರೆ ‘ಬಹು ಭಾಷಿಕ ಭಾರತದಲ್ಲಿ ಭಾಷಾಮಾಧ್ಯಮದ ಪ್ರಶ್ನೆ ‘ಕನ್ನಡ/ ಮರಾಠಿ/ . . . ಥ ಇಂಗ್ಲೀಷ್’ ಎಂಬಷ್ಟು ಸರಳವಾಗಿಲ್ಲ. ಮೊದಲಿಗೆ ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳುತ್ತದೆಂದು ನೋಡೋಣ:
1) ಮಾಧ್ಯಮದ ಆಯ್ಕೆ: ತೀರ್ಪು ಶಿಕ್ಷಣ ಮಾಧ್ಯಮದ ಆಯ್ಕೆ ಪೋಷಕರದ್ದು ಎಂದು ಹೇಳಿದೆಯೇ ಹೊರತು ‘ಇಂಗ್ಲೀಷ್ ಮಾಧ್ಯಮವಾಗಬೇಕು’ ಎಂದು ಹೇಳಿಲ್ಲ. ಮಾಧ್ಯಮ ಕನ್ನಡ, ಇಂಗ್ಲೀಷ್, ಉರ್ದು, ತಮಿಳು ಯಾವುದು ಬೇಕಾದರೂ ಆಗಬಹುದು.
2) ಸಮಾನತೆ: ಈ ತೀರ್ಪಿನಿಂದಾಗಿ, ಕಳೆದ 20 ವರ್ಷಗಳಿಂದ ಇದ್ದ ‘ಇಂಗ್ಲೀಷ್ ಮಾಧ್ಯಮ ಬೇಕಾದರೆ ಖಾಸಗಿ/ಅನುದಾನರಹಿತ ಶಾಲೆ’ – ‘ಕನ್ನಡ ಮಾಧ್ಯಮ ಬೇಕಾದರೆ ಸರಕಾರಿ ಶಾಲೆ’ ಎಂಬಂತಹ ಅಸಮಾನತೆ ದೂರವಾಗಿದೆ.
3) ಮಾಧ್ಯಮ ಮತ್ತು ಭಾಷೆ: ‘ಮಾಧ್ಯಮ’ ಕಡ್ಡಾಯವಾಗಲು ಸಾಧ್ಯವಿಲ್ಲ ಎಂದರೆ ‘ಭಾಷೆಯ ಕಲಿಕೆ ಕಡ್ಡಾಯವಾಗಲು ಸಾಧ್ಯವಿಲ್ಲ’ ಎಂದಲ್ಲ. ಕರ್ನಾಟಕದಲ್ಲಿ ಎಲ್ಲಾ ಶಾಲೆಗಳು, ಮಾಧ್ಯಮ ಏನೇ ಇರಲಿ, ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಕಲಿಯಬೇಕು ಎಂದು ಕರ್ನಾಟಕ ಸರಕಾರ ಆಜ್ಞೆ ಹೊರಡಿಸಬಹುದು ಎಂದು ನನಗೆ ತೋರುತ್ತದೆ.
4) ಪ್ರಾಥಮಿಕ ಶಿಕ್ಷಣ ಮತ್ತು ಮಾತೃಭಾಷಾ ಮಾಧ್ಯಮ: ಸುಪ್ರೀಂಕೋರ್ಟ್ ನ ತೀರ್ಪು ಈ ಅಂಶವನ್ನೇ ಅತಿ ಮುಖ್ಯವಾಗಿ ಪರಿಗಣಿಸಿದೆ. . . . ರಾಜ್ಯಸರ್ಕಾರದಿಂದ ಅಂಗೀಕೃತವಾದ ಎಲ್ಲಾ ಶಾಲೆಗಳಲ್ಲಿ 1 ರಿಂದ 4ನೆಯ ತರಗತಿಯವರೆಗಿನ ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಕನ್ನಡ ಭಾಷೆ ಮಾಧ್ಯಮದಲ್ಲಿಯೇ ಆಗತಕ್ಕದ್ದೆಂದು ಆದೇಶಿಸಲಾಗಿದೆ (29/4/ 1994ರ ಕರ್ನಾಟಕ ಸರಕಾರದ ಆದೇಶ. ಅನಂತರ, 30/05/2002ರಲ್ಲಿ ಹೊರಡಿಸಿದ ಆದೇಶದಲ್ಲಿಯೂ ಇದೇ ವಾಕ್ಯವಿದ್ದು ಈ ಆದೇಶವನ್ನು 1 ರಿಂದ 5ದನೆಯ ತರಗತಿಯವರೆಗೆ ವಿಸ್ತರಿಸಲಾಗಿದೆ). ಇಲ್ಲಿ ಬರುವ ಪ್ರಶ್ನೆ ‘ಮಾತೃಭಾಷೆ’ಎಂದರೆ ಯಾವುದು?
ಮಗುವು ‘ತೊಟ್ಟಿಲಿನಲ್ಲಿ ಕೇಳುವ ಭಾಷೆ’/ ‘ಮನೆಯ ಭಾಷೆ’ ಮಾತೃಭಾಷೆ ಎಂದರೆ, ಕರ್ನಾಟಕ ಒಂದರಲ್ಲಿಯೇ ಕನ್ನಡದೊಡನೆ ತುಳು, ಕೊಂಕಣಿ, ಕೊಡವ, ಬ್ಯಾರಿ, ಉರ್ದು, ಲಂಬಾಣಿ, ಸೋಲಿಗ, ಮುಂಡ ಮುಂತಾದ ಹತ್ತಾರು ಲಿಪಿ ಇರುವ/ಇಲ್ಲದಿರುವ ಭಾಷೆಗಳು ಮಾತೃಭಾಷೆಗಳಾಗುತ್ತವೆ. ಇವೆಲ್ಲವುಗಳನ್ನೂ ಶಿಕ್ಷಣ ಮಾಧ್ಯಮವಾಗಿ ಉಪಯೋಗಿಸಲು ಸಾಧ್ಯವೆ? ಈ ಸಂದರ್ಭದಲ್ಲಿ ನಾವು ಉತ್ತರಿಸಬೇಕಾದ ಪ್ರಶ್ನೆಯೆಂದರೆ ‘ಪ್ರಾಥಮಿಕ ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲಿ ಮಾತ್ರ ಯಶಸ್ವಿಯಾಗುತ್ತದೆ’ ಎಂಬ ನಿಲುವು ಎಷ್ಟು ಸ್ವೀಕಾರಾರ್ಹ? ಈ ನಿಲುವು ಸತ್ಯವಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲಾ ಮಕ್ಕಳು ಎಲ್ಲಾ ವಿಷಯಗಳಲ್ಲಿಯೂ ಮುಂದಿರಬೇಕಾಗಿತ್ತು; ಆದರೆ ವಸ್ತುಸ್ಥಿತಿ ಹಾಗಿಲ್ಲ ಎಂಬುದು ಯಾವ ವರ್ಷದ ಎಸ್. ಎಸ್. ಎಲ್. ಸಿ. ಪರೀಕ್ಷೆಯ ಫಲಿತಾಂಶವನ್ನು ಗಮನಿಸಿದರೂ ನಮಗೆ ಗೊತ್ತಾಗುತ್ತದೆ.

ಆರೇಳು ವರ್ಷಗಳ ವರೆಗೆ ಮಕ್ಕಳ ಗ್ರಹಣಶಕ್ತಿ ಎಷ್ಟು ಅಗಾಧವಾಗಿರುತ್ತದೆ ಎಂದರೆ, ಯಾವ ಭಾಷೆ ಮಾಧ್ಯಮವಾದರೂ ಮಕ್ಕಳು ಕಲಿಸಿದುದನ್ನು ಸುಲಭವಾಗಿ ಗ್ರಹಿಸುತ್ತಾರೆ. ಇನ್ನೂ ಮುಖ್ಯವಾಗಿ, ‘ಮಾಹಿತಿಪ್ರಧಾನವಾದ ಇಂದಿನ ಶಿಕ್ಷಣ’ ಯಾವ ಮಾಧ್ಯಮದ ಮೂಲಕ ಮಕ್ಕಳನ್ನು ತಲಪಿದರೂ ಅಷ್ಟೇನೂ ವ್ಯತ್ಯಾಸವಾಗುವುದಿಲ್ಲ ಎಂದು ನನಗೆ ತೋರುತ್ತದೆ. ‘ಮಾತೃ ಭಾಷೆ,’ ‘ಫರ್ಸ್ಟ್ ಲಾಂಗ್ವಿಜ್,’ ‘ಸೆಕಂಡ್ ಲಾಂಗ್ವಿಜ್’ ಇತ್ಯಾದಿ ಪರಿಕಲ್ಪನೆಗಳು ವಸಾಹತುಶಾಹಿಯ ಕೊಡುಗೆಗಳು; ಇಂಗ್ಲೀಷ್ ಬೋಧನೆಯ ಚೌಕಟ್ಟಿನಲ್ಲಿ ಬ್ರಿಟಿಷ್ ಕೌನ್ಸಿಲ್ ರೂಪಿಸಿದ ಪರಿಕಲ್ಪನೆಗಳು. ಬಹು ಭಾಷಿಕವಾದ ಭಾರತದಲ್ಲಿ ಇದುವರೆಗೆ ‘ಶಿಕ್ಷಣದಲ್ಲಿ ಮಾತೃ ಭಾಷೆಯ ಸ್ಥಾನ/ ಮಹತ್ವ’ ಎಂಬ ವಿಷಯದ ಬಗ್ಗೆ ಎಲ್ಲಿಯಾದರೂ ಸಂಶೋಧನೆ ನಡೆದಿದೆಯೆ? ಬಹು ಭಾಷಿಕವಾದ ಕರ್ನಾಟಕದಲ್ಲಿ/ ಭಾರತದಲ್ಲಿ ಬ್ರಿಟಿಷರ ಆಗಮನಕ್ಕೆ ಮೊದಲು ಯಾವ ಗ್ರಂಥದಲ್ಲಾಗಲಿ ಶಾಸ್ತ್ರದಲ್ಲಾಗಲಿ ಸರಕಾರಿ ಆದೇಶಗಳಲ್ಲಾಗಲಿ ‘ಮಾತೃ ಭಾಷೆ,’ ‘ಮೊದಲ ಭಾಷೆ,’ ‘ಲೈಬ್ರರಿ ಭಾಷೆ’ ಇತ್ಯಾದಿ ಪರಿಕಲ್ಪನೆಗಳು/ ಚಚರ್ೆಗಳು ಇದ್ದುದು ನನಗಂತೂ ಗೊತ್ತಿಲ್ಲ.
5) ಪರಿಸರದ ಭಾಷೆ: ‘ಮಾತೃಭಾಷೆ’ಗೆ ಬದಲಾಗಿ ‘ಪರಿಸರದ ಭಾಷೆ’ ಎಂದು ತನ್ನ ಆದೇಶದಲ್ಲಿ ಸರಕಾರ ಉಲ್ಲೇಖಿಸಿದ್ದರೂ ಮೇಲೆ ಹೇಳಿದ ತೊಡಕುಗಳು ಇದ್ದೇ ಇರುತ್ತಿದ್ದುವು. ಏಕೆಂದರೆ, ಮಕ್ಕಳ ‘ಪರಿಸರ’ ಸಮಾನವಾಗಿರಲು ಸಾಧ್ಯವಿಲ್ಲ; ಸ್ಲಮ್ಗಳ ಪರಿಸರ, ಶ್ರೀಮಂತರು/ ಅಧಿಕಾರಿಗಳು ವಾಸಿಸುವ ಪರಿಸರ, ಭಿನ್ನ ಜಾತಿಗಳ/ ಧರ್ಮಗಳ ಸಮುದಾಯಗಳು ಇರುವ ಪರಿಸರ, ಹಳ್ಳಿಗಳ/ ಗ್ರಾಮಗಳ/ ಮಹಾ ನಗರಗಳ ಪರಿಸರ ಒಂದೇ ಆಗಿರುವುದಿಲ್ಲ. ಶಿಕ್ಷಣದ ಸಂದರ್ಭದಲ್ಲಿ ಅತಿ ಮುಖ್ಯವಾಗುವುದು ಮನೆಯ ಪರಿಸರ. ಎಂದರೆ, ಪೋಷಕರು ಶಿಕ್ಷಣದ ಬಗ್ಗೆ ತಳೆದಿರುವ ನಿಲುವು, ಮಕ್ಕಳ ಕಲಿಕೆಯಬಗ್ಗೆ ಅವರು ತೋರಿಸುವ ಆಸಕ್ತಿ ಮತ್ತು ಮಕ್ಕಳಿಗೆ ಅವರು ಕೊಡುವ/ ಕೊಡಲು ಸಾಧ್ಯವಾಗುವ ಸಮಯ, ಇತ್ಯಾದಿ.
ಈ ಎಲ್ಲಾ ಕಾರಣಗಳಿಂದ, ಸುಪ್ರೀಂಕೋರ್ಟ್ ನಮ್ಮ ಸಂವಿಧಾನದ ಚೌಕಟ್ಟಿನಲ್ಲಿ ಬೇರೆ ಬಗೆಯ ತೀರ್ಪು ಕೊಡಲು ಸಾಧ್ಯವೇ ಇರಲಿಲ್ಲ ಎಂದು ನನಗೆ ತೋರುತ್ತದೆ. ಈ ಸಂದರ್ಭದಲ್ಲಿ, ನಮ್ಮ ಮುಂದಿರುವ ಆಯ್ಕೆಗಳೇನು?
1) ರಾಷ್ಟ್ರೀಕರಣ: ಕೆಲವು ವಿದ್ವಾಂಸರು ವಾದಿಸುವಂತೆ, ಪ್ರಾಥಮಿಕ ಶಿಕ್ಷಣವನ್ನು ‘ರಾಷ್ಟ್ರೀಕರಣ’ (nationalization) ಗೊಳಿಸಿದರೆ ಅಥವಾ ಇಡೀ ಭಾರತದುದ್ದಕ್ಕೂ ‘ಸಮಾನ ಶಿಕ್ಷಣ ವ್ಯವಸ್ಥೆ’ ಯನ್ನು ರೂಪಿಸಲು ಪ್ರಯತ್ನಿಸಿದರೆ, ಕನ್ನಡದ ಸಮಸ್ಯೆ ಬಗೆಹರಿಯುತ್ತದೆಂದು ನನಗೆ ತೋರುವುದಿಲ್ಲ. ಈಗಾಗಲೇ ‘ರಾಷ್ಟ್ರಭಾಷೆ’ಯೆಂದು ಮೆರೆಯುತ್ತಿರುವ ಹಿಂದಿ ಸಾರ್ವಭೌಮ ಅಧಿಕಾರವನ್ನು ಪಡೆದು ಇತರ ಭಾಷೆಗಳು ಇನ್ನೂ ಸೊರಗುತ್ತವೆ.
2) ರಿವ್ಯೂ ಪೆಟಿಷನ್: ರಿವ್ಯೂ ಪೆಟಿಷನ್ ಸಲ್ಲಿಸಿ ಅದನ್ನು ಸುಪ್ರೀಂ ಕೋಟರ್್ ಸ್ವೀಕರಿಸಿದರೆ, ಇನ್ನು ಐದು-ಹತ್ತು ವರ್ಷಗಳ ಕಾಲ ಈ ಸಮಸ್ಯೆಯನ್ನು ಮುಂದೂಡಬಹುದು; ಆದರೆ, ಅನಂತರ ಈಗಿರುವುದಕ್ಕಿಂತ ಭಿನ್ನವಾದ ತೀರ್ಪು ಬರುವ ಸಾಧ್ಯತೆ ಬಹು ಕಮ್ಮಿ. ಆದುದರಿಂದ, ನಮಗುಳಿದಿರುವ ಆಯ್ಕೆಗಳು ಇವು ಎಂದು ನನಗೆ ತೋರುತ್ತದೆ:
ಅ) ರಿವ್ಯೂ ಪೆಟಿಷನ್ ಹಾಕಿದನಂತರ ಅಥವಾ ಹಾಕದೆ, ಇಂಗ್ಲೀಷೇತರ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಮತ್ತು ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕನ್ನಡ ಕಲಿಕೆ ಕಡ್ಡಾಯಗೊಳಿಸುವುದು.
ಆ) ಇನ್ನೂ ಮುಖ್ಯವಾಗಿ, ಪ್ರಾಥಮಿಕ ಶಿಕ್ಷಣ ಅಭಿಯಾನವನ್ನು ‘ರಾಜ್ಯದ ಪ್ರಪ್ರಥಮ ಕರ್ತವ್ಯ’ದಂತೆ ಕೈಗೊಳ್ಳುವುದು. ಎಂದರೆ, ಸರಕಾರಿ/ ಅನುದಾನಿತ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸುವುದು: ಶಿಕ್ಷಕರ ನೇಮಕ/ ಸ್ವಂತ ಕಟ್ಟಡಗಳು / ಗ್ರಂಥಾಲಯ/ ಶೌಚಾಲಯ/ ಆಟದ ಮೈದಾನ, ಇತ್ಯಾದಿ. ಈ ಯೋಜನೆಯ ಮೊದಲ ಘಟ್ಟದಲ್ಲಿ, 30 ಜಿಲ್ಲೆಗಳ ಶಾಲೆಗಳನ್ನು ಪರೀಕ್ಷಿಸಲು 30 ತಂಡಗಳನ್ನು ನೇಮಿಸಿ, ಅವುಗಳಿಂದ ಆಯಾಯಾ ಶಾಲೆಗಳ ಕೊರತೆ/ಮಿತಿಗಳ ಬಗ್ಗೆ ವರದಿಗಳನ್ನು ಕಾಲಮಿತಿಯೊಳಗೆ ತರಿಸಿಕೊಳ್ಳುವುದು; ಅನಂತರ, ಆ ವರದಿಗಳು ತೋರಿಸುವ ಕೊರತೆ/ಮಿತಿಗಳನ್ನು ಎರಡು ವರ್ಷಗಳ ಒಳಗೆ ಹಟತೊಟ್ಟು ನಿವಾರಿಸುವುದು. ಈ ಕಾರ್ಯಕ್ಕೆ ಅಗಾಧ ಇಚ್ಛಾಶಕ್ತಿಯೊಡನೆ ಅಪಾರ ಧನಸಂಪತ್ತೂ ಸರಕಾರಕ್ಕೆ ಬೇಕಾಗುತ್ತದೆ ಎಂಬುದು ನಿಜ. ಆದರೆ, ಈ ಯೋಜನೆ ಪೂರ್ಣಗೊಳ್ಳುವ ತನಕ, ಎಂದರೆ ಮೂರರಿಂದ ಐದು ವರ್ಷಗಳ ಕಾಲಾವಧಿಯಲ್ಲಿ, ಪ್ರತಿವರ್ಷವೂ ಸರಕಾರದಿಂದ ನಡೆಯುವ/ ಅನುದಾನ ಪಡೆಯುವ ಸಮ್ಮೇಳನಗಳು, ಉತ್ಸವಗಳು, ಮಠ-ಸಂಸ್ಥೆಗಳಿಗೆ ಕೊಡುವ ಅನುದಾನಗಳು, ಶಾಸಕರ ‘ಫಾರಿನ್ ಟೂರ್ಗಳು’ -ಇವೆಲ್ಲವನ್ನೂ ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ ಈ ಯೋಜನೆಗೆ ಅವಶ್ಯಕವಿರುವ ಧನಸಂಪತ್ತು ದೊರಕುತ್ತದೆ.
ಇಂತಹ ಕಾರ್ಯಗಳನ್ನು ಪ್ರಾಮಾಣಿಕವಾಗಿ ಕೈಗೊಂಡರೆ ಮತ್ತು ಎಲ್ಲಾ ಶಾಲೆಗಳಲ್ಲಿಯೂ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳ ಕಲಿಕೆಗೆ ಅವಕಾಶವನ್ನು ಕಲ್ಪಿಸಿದರೆ, ಪೋಷಕರು ತಾವಾಗಿಯೇ ಮಕ್ಕಳನ್ನು ಅಂತಹ ಶಾಲೆಗಳಿಗೆ ಕಳುಹಿಸುತ್ತಾರೆ. (ಯಾರಿಗೆ ತಾನೆ ಸುಮ್ಮ ಸುಮ್ಮನೆ ಸಾವಿರಾರು ರೂಪಾಯಿಗಳನ್ನು ಖಾಸಗಿ ಶಾಲೆಗಳಿಗೆ ಕೊಡಲು ಇಷ್ಟವಿರುತ್ತದೆ?) ಈ ಬಗೆಯ ಕಾರ್ಯವಲ್ಲದೆ, ಬೇರೆ ಯಾವ ಶಾಸನವನ್ನು ತಂದರೂ ಕನ್ನಡ ಉದ್ಧಾರವಾಗುವುದಿಲ್ಲ, ಬೆಳೆಯುವುದಿಲ್ಲ.
 
 
 
 

‍ಲೇಖಕರು G

May 24, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Kiran

    ಸರ್
    ಇದೆಲ್ಲಾ ಸಾಧ್ಯವಾ? ಇದಕ್ಕೆ ಬೇಕಾಗುವಷ್ಟು ಛಲ, ತನ್ಮಯತೆ ಸರ್ಕಾರದ ವ್ಯವಸ್ಥೆಗೆ ಇದೆಯಾ? ನಿಮ್ಮ ಆಲೋಚನೆಗಳಿಗೆ ಸ್ಪಂದಿಸುವಷ್ಟು ಬುದ್ಧಿ, ಸಹನೆ ಯಾವ ಸರ್ಕಾರಕ್ಕಿದೆ? ಅದರ ಮೇಲೆ ನೀವು “ಆದರೆ, ಈ ಯೋಜನೆ ಪೂರ್ಣಗೊಳ್ಳುವ ತನಕ, ಎಂದರೆ ಮೂರರಿಂದ ಐದು ವರ್ಷಗಳ ಕಾಲಾವಧಿಯಲ್ಲಿ, ಪ್ರತಿವರ್ಷವೂ ಸರಕಾರದಿಂದ ನಡೆಯುವ/ ಅನುದಾನ ಪಡೆಯುವ ಸಮ್ಮೇಳನಗಳು, ಉತ್ಸವಗಳು, ಮಠ-ಸಂಸ್ಥೆಗಳಿಗೆ ಕೊಡುವ ಅನುದಾನಗಳು, ಶಾಸಕರ ‘ಫಾರಿನ್ ಟೂರ್ಗಳು’ -ಇವೆಲ್ಲವನ್ನೂ ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ ಈ ಯೋಜನೆಗೆ ಅವಶ್ಯಕವಿರುವ ಧನಸಂಪತ್ತು ದೊರಕುತ್ತದೆ.” ಎಂತೆಲ್ಲಾ ಅನ್ನುತ್ತೀರಿ! ಯಾವ ರಾಜಕಾರಣಿ ಮುಂದೆ ಬಂದಾನು?

    ಪ್ರತಿಕ್ರಿಯೆ
  2. NARASIMHA NANDI

    sir,
    supreme court thirpu sariyagi ede “tande tayigala hakku”, e basha madyama yara naduve karnataka sarkara mattu court nalli prakrna dakalisiriva kannadigere evarnannu sarkara karedu court nalli eruva arjiyannu vapasu thegedu kolluvanthe madali…..,
    ennu namma mla gallu…………… bidi hagalla…

    ಪ್ರತಿಕ್ರಿಯೆ
  3. Ananda Prasad

    ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಜಾರಿಗೆ ಬಂದ ನಂತರ ಸರ್ಕಾರ ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿದು ಖಾಸಗಿಯವರಿಗೆ ಶಿಕ್ಷಣದ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ಒತ್ತಡಕ್ಕೆ ಸರ್ಕಾರಗಳು ಸಿಲುಕಿವೆ. ಹೀಗಾಗಿ ಸರ್ಕಾರ ಶಿಕ್ಷಣದ ಮೇಲೆ ಬಂಡವಾಳ ಹೂಡಲು ಮುಂದೆ ಬರುವ ಸಂಭಾವ್ಯತೆ ಇಲ್ಲ. ಸರ್ಕಾರಗಳು ಸಾರ್ವಜನಿಕ ಹಿತಾಸಕ್ತಿಯ ಎಲ್ಲ ವಿಷಯಗಳಿಂದಲೂ ಹಿಂದೆ ಸರಿಯಬೇಕೆಂಬುದು ಹಾಗೂ ಜನ ಎಲ್ಲವನ್ನೂ ಹಣ ಕೊಟ್ಟು ಪಡೆಯಬೇಕೆಂಬುದು ನೂತನ ಆರ್ಥಿಕ ನೀತಿಯ ಸಾರ. ಇಂಥ ಪರಿಸ್ಥಿತಿಯಲ್ಲಿ ಎಲ್ಲರ ಹಿತರಕ್ಷಣೆ ಜವಾಬ್ದಾರಿ ಸರ್ಕಾರಕ್ಕೆ ಇಲ್ಲ ಎಂಬುದು ಇಂದು ಸರ್ಕಾರ ನಡೆಸುವವರ ವಾದ ಅದು ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ ಮತ್ತೊಂದು ಪಕ್ಷವೇ ಇರಲಿ. ಖಾಸಗೀಕರಣದ ಅಂಗವಾಗಿ ಶಿಕ್ಷಣದ ಜವಾಬ್ದಾರಿಯಿಂದಲೂ ಸರ್ಕಾರ ಮುಂಬರುವ ದಿನಗಳಲ್ಲಿ ನುಣುಚಿಕೊಂಡರೂ ಅಚ್ಚರಿ ಇಲ್ಲ. ಇಂಥ ನೀತಿ ಹೊಂದಿರುವ ಪಕ್ಷಗಳನ್ನೇ ಜನ ಚುನಾವಣೆಯಲ್ಲಿ ಆರಿಸಿ ಕಳಿಸುವ ಕಾರಣ ಜನರಿಗೆ ಈ ಬಗ್ಗೆ ಕೇಳುವ ನೈತಿಕತೆ ಕೂಡ ಇಲ್ಲ.

    ಪ್ರತಿಕ್ರಿಯೆ
  4. Gananath SN

    ‘ಮಾಹಿತಿಪ್ರಧಾನವಾದ ಇಂದಿನ ಶಿಕ್ಷಣ’ ಯಾವ ಮಾಧ್ಯಮದ ಮೂಲಕ ಮಕ್ಕಳನ್ನು ತಲಪಿದರೂ ಅಷ್ಟೇನೂ ವ್ಯತ್ಯಾಸವಾಗುವುದಿಲ್ಲ.
    ತುಂಬ ಸರಿಯಾಗಿ ಹೇಳಿದ್ದೀರಿ.

    ಪ್ರತಿಕ್ರಿಯೆ
  5. Shekhar

    ಸರ್, ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿದೆನ್ನುವದು ಪ್ರಾಯಶಃ ಸರಿಯಲ್ಲ.ದೋಷವಿರುವದು ಶಿಕ್ಷಣ ಖಾತೆಯಲ್ಲಿರುವ ನೌಕರ ಹಾಗೂ ಶಿಕ್ಷಕವೃಂದದಲ್ಲಿ. ಸರಕಾರೀ ಶಿಕ್ಷಕ-ಶಿಕ್ಷಕಿಯರಲ್ಲಿ ಈಗ ಮನಃಪೂರ್ವಕವಾಗಿ ಕಲಿಸುವ ಉಮೇದಿ (passion)ಇಲ್ಲ. ಈಗ ಇದೊಂದು 9 to 5 ಟೈಮ್ ಪಾಸ್ ಮಾಡಿ, ದಿನದೂಡಿ, ತಿಂಗಳ ಸಂಬಳ ಎಣಿಸುವ ವೃತ್ತಿಯಾಗಿದೆ. ಹೋದ ವರ್ಷ ಚಂದನ ವಾಹಿನಿಯ ” ಥಟ್ ಅಂತ ಹೇಳಿ ” ಕಾರ್ಯಕ್ರಮದಲ್ಲಿ ಸರಕಾರೀ ಶಾಲೆಯ ಮಕ್ಕಳು ಭಾಗವಹಿಸಿದ್ದಾಗ, ಸರಳ ಗಣಿತಕ್ಕೂ ಅವರು ಪೆನ್-ಪೇಪರ್ ಬಳಸುವದನ್ನು ನೋಡಿದಾಗ ಈಗಿನ ಸರಕಾರೀ ಶಾಲಾ ಶಿಕ್ಷಕರ ಕಲಿಸುವಿಕೆಯ ಪರಿ ಹೇಗಿದೆಯೆಂದು ಗೊತ್ತಾಗುತ್ತದೆ. ಬಿಸಿಯೂಟಕ್ಕೆ, ಚುನಾವಣೆಗೆ, ಗಣತಿಗೆ ಎಲ್ಲಾ ತಮ್ಮನ್ನು ಬಳಸಿಕೊಳ್ಳುತ್ತಾರೆನ್ನುವದು ಬರೀ ನೆವವಷ್ಟೇ. ಇವರ ಡಿಕ್ಷನರಿಯಲ್ಲಿ “Accountability” ಎನ್ನುವ ಶಬ್ದವೇ ಇಲ್ಲ.
    ಈ ಮೊದಲು,ಹಳ್ಳಿಯ ಜನರಾದರೂ ತಮ್ಮ ಮಕ್ಕಳನ್ನು ಊರಲ್ಲಿನ ಸರಕಾರೀ ಶಾಲೆಗೆ ಕಳಿಸುತ್ತಿದ್ದರು. ಈಗೀಗ ಅವರಿಗೂ ಈ ಶಾಲೆಗಳ ಹಣೆಬರಹ ಗೊತ್ತಾಗಿ, ಪಕ್ಕದೂರಿನ ಅಥವಾ ತಾಲೂಕು ಕೇಂದ್ರದಲ್ಲಿರುವ ಖಾಸಗೀ ಶಾಲೆಗಳಿಗೆ ಕಳಿಸತೊಡಗಿದ್ದಾರೆ. ನಮ್ಮ ಸರಕಾರೀ ಶಾಲೆಗಳು ಮದ್ಯಾಹ್ನದ ಊಟ-ಸೈಕಲ್-ಹಣ ಏನೆಲ್ಲಾ ಆಸೆ ತೋರಿಸಿದರೂ, ಬಿಕೋ ಎನ್ನುತ್ತಿವೆ. ಅದರ ಪರಿಣಾಮ ಈಗೀಗ S.S.L.C. ರಿಜಲ್ಟ್ ಗಳಲ್ಲಿ ಅನುಭವವಾಗತೊಡಗಿದೆ.
    ಅದೇನೇ ಇರಲಿ, ಮನೆಯಲ್ಲಿ ಮಾತ್ರ ತಮ್ಮ ಮಕ್ಕಳಿಗೆ ಕನ್ನಡ ಕಲಿಸಲೇಬೇಕಾದ ಜವಾಬ್ದಾರಿ ಪೋಷಕರದ್ದಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: