ಸಂಪು ಕಾಲಂ : ನಾ ಕಂಡ "ಮದುಮಗಳು"

ನಾನು ಮೊಟ್ಟ ಮೊದಲಿಗೆ ಕಲಿತದ್ದು ಏಕಲವ್ಯ ನಾಟಕದ ತುಣುಕಿನ ಏಕಪಾತ್ರಾಭಿನಯ. ಯಾವುದೊ ಒಂದು ಮಕ್ಕಳ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸುವಾಗ, ಸುತ್ತುವರೆದಿದ್ದ ಜನರನ್ನು ನೋಡಿ ಹೆದರಿದ್ದ ನಾನು ಒಂದು ಸಾಲು ಮರೆತದ್ದು, ಪೇಚಾಗಿ ಎದುರಿಗಿದ್ದ ನನ್ನಪ್ಪನ ಮುಖ ನೋಡಿದ್ದು, ಅಪ್ಪ ಸಾಲು ಹೇಳಿಕೊಟ್ಟಿದ್ದು, ನಂತರ ನಾನೇ ಏಕಲವ್ಯ, ನನ್ನ ಬೆರಳೇ ಕತ್ತರಿಸಿ ಹೋದದ್ದು ಎಂಬಷ್ಟು ಉತ್ಕಟತೆಯಿಂದ ನಟಿಸಿದ್ದು, ನಂತರ ಪ್ರತಿ ಶಾಲಾ ವಾರ್ಷಿಕೋತ್ಸವದಲ್ಲೂ ಒಂದಲ್ಲಾ ಒಂದು ಬಣ್ಣ ಹಚ್ಚಿದ್ದು ಎಲ್ಲಾ ನೆನಪಿನ ಡೈರಿಯಲಿ ಮಾಸದ ಪುಟಗಳು.
ಹೀಗೆ ಪ್ರಾರಂಭವಾದದ್ದು ನನ್ನ ನಾಟಕ ಪ್ರೇಮ. ದಿನಗಳು ಉರುಳುತ್ತಾ ಆದ್ಯತೆಗಳು ಬದಲಾಗಬೇಕಾದಾಗ ನನ್ನ ನಾಟಕ ಪ್ರೀತಿ ವಿರಹ ಬಾಧೆಯನ್ನು ಅನುಭವಿಸಿದ್ದು ಹೌದು. ನಂತರ ಆಗೊಮ್ಮೆ ಈಗೊಮ್ಮೆ ನಮ್ಮ ಭೇಟಿ. ನಾಟಕದಲ್ಲಿ ಪಾತ್ರವಹಿಸುವುದು ನಿಂತಿದ್ದರೂ ಪ್ರೇಕ್ಷಕಿಯಾಗಿ ಭಾಗವಹಿಸುವುದು ಜಾರಿಯಲ್ಲಿ.
ಕುವೆಂಪುರವರ ಮಹಾಕಾದಂಬರಿ ‘ಮಲೆಗಳಲ್ಲಿ ಮಧುಮಗಳು’ ರಂಗ ಪ್ರಯೋಗವಾಗುತ್ತಿದೆ ಎಂದು ತಿಳಿದಾಗ ಅತ್ಯಂತ ಉತ್ಸುಕಳಾದೆ. ಆದಷ್ಟು ಬೇಗ ಅದನ್ನು ನೋಡಬೇಕು ಎಂಬ ನನ್ನ ಉತ್ಸಾಹ, ಕಾತುರಗಳಿಗೆ ಸಾತ್ ನೀಡಿದ್ದು ಈ ನಾಟಕದ ಅನೇಕ ವಿಶೇಷಗಳು. ಮೊದಲನೇದಾಗಿ ಒಂದು ಬೃಹತ್ ಕಾದಂಬರಿ ನಾಟಕ ರೂಪ ಪಡೆಯುತ್ತಿರುವುದು, ಇಡಿ ರಾತ್ರಿ ಜರುಗುವ ಒಂಭತ್ತು ಘಂಟೆಗಳ ಕಾಲದ ನಾಟಕದ ಸುದೀರ್ಘತೆ ಮತ್ತು ಬಹುಮುಖ್ಯವಾಗಿ ನಾಟಕದ ಕಥಾವಸ್ತು!
ಮಲೆಗಳಲ್ಲಿ ಮಧುಮಗಳು ಕಾದಂಬರಿ ಇತರ ಕಾದಂಬರಿಗಳಂತೆ ಒಂದು ಸಾಂಪ್ರದಾಯಿಕ ಚೌಕಟ್ಟಿನಿಂದ ಕೂಡಿದ್ದಲ್ಲ. ಅಂದರೆ, ಒಂದು ಸಿದ್ಧ ಕಥಾರೂಪ, ಕಥೆಯಲ್ಲಿ ಕಂಡುಬರುವ ಪ್ರೋಟಾಗನಿಸಮ್ (ನಾಯಕತ್ವ), ಒಂದು ಅಂತಿಮ ಘಟ್ಟ, ಓದಿ ಮುಗಿಸಿದ ಮೇಲೆ “ಇಲ್ಲಿಗೆ ಕಥೆ ಮುಗಿಯಿತು” ಅನ್ನುವ ಭಾವ ಯಾವುದೂ ಇಲ್ಲ. ಹಾಗೆಂದ ಮಾತ್ರಕ್ಕೆ ಇಲ್ಲಿ ಕಥೆಯೇ ಇಲ್ಲವಾ ಅಂದರೆ ತಪ್ಪಾಗುತ್ತದೆ. ಒಂದು ಕಥೆಗಿಂತ ಇಲ್ಲಿ ಹಲವಾರು ಕಥೆಗಳಿವೆ. ವಿಸ್ತಾರವಾದ, ವರ್ಣನಾತ್ಮಕವಾದ ಈ ಕಥಾ ಹಂದರದಲ್ಲಿ ಹೆಚ್ಚಾಗಿ ಕಂಡುಬರುವುದು ಒಂದು ಇಡೀ ಸಮುದಾಯದ, ಪರಿಸರದ ಚಿತ್ರಣ. ಕಥೆ ಓದುತ್ತಾ ಓದುತ್ತಾ ನಮಗೆ ಕಥೆಗಿಂತಲೂ ಹೆಚ್ಚಾಗಿ ಕಾಡುವುದು, ಮಲೆನಾಡ ಮಳೆಯ ಜಿಟಿ ಜಿಟಿ ಸದ್ದು, ಮಣ್ಣಿನ ಘಮಲು, ಇಂಬಳಗಳ ಕಚಗುಳಿ, ಜೀರುಂಡೆಗಳ ಸದ್ದು, ಚೀಂಕ್ರ, ಐತ, ಪೀಂಚಲು ಎಂಬ ಸೊಗಸಾದ ಹೆಸರುಗಳು, ಅವರ ಮುಗ್ಧತೆ, ಈ ರೀತಿ, ಕಥೆಯ ಸಾಲುಗಳ ನಡುವೆ ಕಂಡು ಬರುವ ಭಾವ ಮತ್ತು ಕಾವ್ಯ. ಈ ಕಾದಂಬರಿ ನಮಗೆ ಸಾರುವುದು ಸ್ವಾತಂತ್ರ್ಯ ಪೂರ್ವದ ಮಲೆನಾಡ ಒಂದು ಗ್ರಾಮದ ಕಾವ್ಯಾತ್ಮಕವಾದ ಟಿಪಿಕಲ್ ಚಿತ್ರಣ! ಇದನ್ನು ಹೇಗೆ ನಾಟಕ ಮಾಡಲು ಹೊರಟಿದ್ದಾರೆ ಎಂಬ ಕುತೂಹಲ!
ಕೊನೆಗೂ ನಾಟಕ ನೋಡಹೊರಡುವ ದಿನ ಬಂತು. ನಾಟಕವನ್ನು ನೋಡಲೇಬೇಕು ಎಂಬ ನನ್ನ ಬಹುದಿನದ ಅತೀವ ಕಾಯುವಿಕೆಗೆ ಮೋಡಗಳು ಕರಗಿ ಮಳೆ ಧಾರಾಕಾರ! ಗುಂಪಿನಲ್ಲಿ ಕೆಲವರು ಚಕಾರ ಎತ್ತಿದ ಕಾರಣ ಆಸೆಯೆಲ್ಲವೂ ನಿರಾಸೆಯಾಗಿ ಮರಳಿ ಮನೆಗೆ. ಆದರೂ ಪಟ್ಟು ಬಿಡದೆ ಮತ್ತೊಮ್ಮೆ ಹೋದೆವು. ನಮ್ಮ ಪುನರಾವರ್ತಿ ಪರಿಸ್ಥಿತಿಯನ್ನು ಅರಿತ ಮೋಡ ಕನಿಕರಿಸಿ ಅಂದು ನಮಗೆ ಸಹಕರಿಸಿತ್ತು. ಕೊನೆಗೂ ನಾಟಕ ನಡೆದಿತ್ತು. ನಾಟಕ ಮೊದಲುಗೊಳ್ಳುವ ಮೊದಲೇ ನನ್ನನ್ನು ಖುಷಿ ಪಡಿಸಿದ ಸಮಾಚಾರ ಎಂದರೆ, ಅಲ್ಲಿ ನೆರೆದಿದ್ದ ಪ್ರೇಕ್ಷಕರ ಸಂಖ್ಯೆ. ಯಾವುದೇ ಪ್ರದರ್ಶನದಲ್ಲಿ, ಪ್ರೇಕ್ಷಕರು ‘ಹೌಸ್ ಫುಲ್’ ಆಗಿ ತುಂಬಿದ್ದರೆ, ಅದಕ್ಕಿಂತ ದೊಡ್ಡ ಪ್ರೋತ್ಸಾಹ ನಟರಿಗೆ ಮತ್ತೇನು!
ಪ್ರಾರಂಭದಲ್ಲಿ ಕಂಡುಬರುವ ಜೋಗಯ್ಯರ ನಿರೂಪಣಾ ಶೈಲಿ ಸಾಕಷ್ಟು ಗಮನಸೆಳೆದಿತ್ತು. ಕೆಲವೇ ಕ್ಷಣಗಳಲ್ಲಿ ಪ್ರೇಕ್ಷಕರ ಸಂಪೂರ್ಣ ಹಿಡಿತ ಪಡೆಯುವುದರಲ್ಲಿ ಆ ಸೂತ್ರಧಾರರು ಸಫಲರಾಗಿದ್ದರು. ಒಂದು ದೊಡ್ಡ ಮೈದಾನವನ್ನು ಪೂರ್ಣ ಬಳಸಿಕೊಂಡು ಅತ್ಯಂತ ಮುಕ್ತವಾಗಿ, ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತಲ್ಲಿಗೆ ಚಿಗಿದು, ನೆಗೆದು ಕುಣಿಯುತ್ತಿದ್ದ ನಟರ ಕೌಶಲ್ಯ ಮತ್ತು ಸಕ್ರಿಯತೆಗೆ ನಮಗೆ ಕೂತಲ್ಲೇ ಹಗುರವಾದ ಭಾವ ಆವರಿಸಿತ್ತು. ನಾಟಕದ ಪ್ರಾರಂಭದ ಜೋಗಯ್ಯರ ನಗರದಿಂದ ಸಿಂಭಾವಿಯ ಕಡೆಗೆ ನಡೆವ ದೃಶ್ಯ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ರಂಗ ಸಿದ್ಧತೆ, ಬೆಳಕು ನಿರ್ವಹಣೆ ಎಲ್ಲವೂ ಚೆನ್ನಾಗಿತ್ತು. ಆದರೆ ಅದು ತೆರೆದ ರಂಗಭೂಮಿಯಾದ್ದರಿಂದ ಬೆಳಕು ಮತ್ತು ಶಬ್ದ ನಿರ್ವಹಣೆ ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದಿತ್ತೇನೋ ಅನಿಸಿತು.

ಫೋಟೋ : ಸುರೇಶ್ ಕುಮಾರ್
ಇಡೀ ನಾಟಕದಲ್ಲಿ ಪಾತ್ರವಹಿಸಿದ ಎಲ್ಲ ನಟರ ಸಾಮರ್ಥ್ಯದ, ಪರಿಶ್ರಮದ ಬಗ್ಗೆ ಎರಡು ಮಾತಿಲ್ಲ! ಗುತ್ತಿ, ಐತ, ಪೀಂಚಲು, ಚೀಂಕ್ರ, ಸುಬ್ಬಣ್ಣ ಹೆಗಡೆ, ನಾಗತ್ತೆ, ನಾಗಕ್ಕ, ಚಿನ್ನಮ್ಮ, ಸುಬ್ಬಣ್ಣ ಹೆಗಡೆಯ ಮಗ, ಹಂದಿ ಪಾತ್ರ, ಕಾವೇರಿ, ಅವಳ ತಾಯಿ, ಸಾಬರು, ದೇವಯ್ಯ, ಪಾದ್ರಿ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿ. ಪ್ರತಿಯೊಬ್ಬರದೂ ಮನೋಜ್ಞ ಅಭಿನಯ. ಇವರಲ್ಲಿ ಅತ್ಯಂತ ಗಮನ ಸೆಳೆದವರು ಎಂದರೆ, ಕುಂಟ ವೆಂಕಟಪ್ಪ ಮತ್ತು ಧರ್ಮು ಪಾತ್ರ ವಹಿಸಿದ ಪುಟ್ಟ ಹುಡುಗ. ಇವರ ನಟನೆ ಬಹಳ ಚುರುಕಾಗಿ ಮತ್ತು ಲವಲವಿಕೆಯಿಂದಿತ್ತು. ನಾಟಕದಲ್ಲೇನಾದರೂ ಅತ್ಯುತ್ತಮ ನಟ ಎಂಬ ಬಿರುದು ಕೊಡಲು ಹೇಳಿದರೆ ನನ್ನ ಸಂಪೂರ್ಣ ಮತ, ಎಷ್ಟೋ ಬಾರಿ “ಅಲೆಲೆ, ಇಲ್ಲೊಂದು ಕರಿ ನಾಯಿ ಬಂದುಬಿಟ್ಟಿದೆ” ಎಂದೆನಿಸುವಷ್ಟು ಸಹಜವಾಗಿ ‘ಹುಲಿಯಾ’ ಪಾತ್ರ ನಿರ್ವಹಿಸಿದ ಪೋರನಿಗೆ. ನಿಜಕ್ಕೂ ಅವನ ನಟನಾ ಸಾಮರ್ಥಕ್ಕೊಂದು ಸಲಾಂ!
ಕಾದಂಬರಿಯಲ್ಲಿ ಕಂಡುಬರುವ ಸ್ವಾತಂತ್ರ್ಯಾ ಪೂರ್ವದ ಸಂದರ್ಭದಲ್ಲಿನ ದಲಿತ ಸಮುದಾಯ, ಅವರ ಮೇಲೆ ಜರುಗುತ್ತಿದ್ದ ಶೋಷಣೆ, ಆ ಶೋಷಣೆಗಳ ನಡುವೆಯೂ ಅವರು ತಮ್ಮಷ್ಟಕ್ಕೆ ಸಂತೋಷದಿಂದ ಜೀವನ ಜರುಗಿಸುತ್ತಿದ್ದದ್ದು, ಎಲ್ಲವೂ ನಾಟಕದಲ್ಲಿ ಕಾಣಿಸಿಕೊಂಡಿದೆ. ಆದರೆ, ಕಾದಂಬರಿಯ ಗಾಢತೆ, ಅದರ ಉದ್ದೇಶಗಳನ್ನು ಬಲವಾಗಿ ಪ್ರತಿಬಿಂಬಿಸುವುದರಲ್ಲಿ ನಾಟಕ ವಿಫಲವಾಗಿದೆ. ನಾಟಕದ ಸಂಭಾಷಣೆಗಳ ಹಿಡಿತ ಜನರನ್ನು ಹಿಡಿದಿಡುವ ತಂತ್ರದಲ್ಲಿ ಗೆದ್ದಿದ್ದರೂ, ಕಾದಂಬರಿಯ ಒಳನೋಟಗಳನ್ನು, ಗಾಂಭೀರ್ಯವನ್ನು ಹೊಂದಿಲ್ಲ ಎಂದೇ ಹೇಳಬಹುದು. ಹಲವಾರು ಕಡೆ, ಅಲ್ಲಿ ಜರುಗುತ್ತಿರುವ ಗಂಭೀರ ಘಟನೆಯ ಗುಂಗು ಯಾವುದೋ ಒಂದು ತಿಳಿ ಹಾಸ್ಯದ (ಕೆಲವೊಮ್ಮೆ ಅಶ್ಲೀಲ ಎನಿಸುವ) ವಾಕ್ಯ ಅಥವಾ ಭಾವಾಭಿನಯದಲ್ಲಿ ಕಳೆದುಹೋಗುತ್ತದೆ. ಆದರೆ ಇಂತಹ ತಿಳಿಹಾಸ್ಯದ, ಗೆಲುವಾದ ಅಭಿನಯವೇ ಕಾದಂಬರಿ ಓದಿರದ ಅನೇಕರನ್ನು ಮೆಚ್ಚಿಸಿತ್ತು, ನಡುರಾತ್ರಿಯಲ್ಲಿ ನಿದ್ದೆ ಮರೆಸಿ, ಜನರನ್ನು ರಂಜಿಸಿ ಮೆರೆದಿತ್ತು. ನಾಟಕದ ಯಶಸ್ಸಿನ ಗುಟ್ಟುಗಳಲ್ಲಿ ಒಂದಾದ ಜನರನ್ನು ಮೆಚ್ಚಿಸುವ ಅಸ್ತ್ರವನ್ನು ನಿರ್ದೇಶಕರು ಯಶಸ್ವಿಯಾಗಿ ಉಪಯೋಗಿಸುವುದರಲ್ಲಿ ಗೆದ್ದಿದ್ದಾರೆ. ಮತ್ತೊಂದು ಅಂಶವೆಂದರೆ, ಕೆಲವೊಮ್ಮೆ ಅಗತ್ಯಕ್ಕಿಂತಲೂ (ಕಾದಂಬರಿಯಲ್ಲಿ ತೋರಿಸಿದ್ದಕ್ಕಿಂತಲೂ) ಹೆಚ್ಚಾಗಿ ಎಲ್ಲಾ ಜಾತಿ ಮತಗಳ ಅಪಹಾಸ್ಯ ಮಾಡಿದ್ದು. ಇದು ಕೊಂಚ ಅತಿರೇಕವೇ ಎನಿಸಿದರೂ, ಸಾಂದರ್ಭಿಕವಾಗಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಸಿನೆಮಾ ಸಂಗೀತ ಸಂಯೋಜಕರನ್ನು ನಾಟಕ ಸಂಗೀತ ಸಂಯೋಜಕರಾಗಿ ಆಯ್ಕೆ ಮಾಡಿದ್ದು, ನಾಟಕದ ಋಣಾತ್ಮಕ ಅಂಶಗಳಲ್ಲೊಂದು! ಕಿವಿಗೆ ಇಂಪಾದ, ಲಯಬದ್ಧವಾದ ಸಂಗೀತ, ಸುಶ್ರಾವ್ಯ ಧ್ವನಿಯಲ್ಲಿ ಮೂಡಿದ್ದರೂ, ರಂಗಸಂಗೀತದ ಸತ್ವ, ಸೊಗಡನ್ನು ಕಳೆದುಕೊಂಡಿತ್ತು. ಈ ದೃಷ್ಟಿಯಲ್ಲಿ ಸಂಗೀತ ಪೇಲವ ಅನಿಸಿಬಿಟ್ಟಿತು. ತಿಮ್ಮಿಯನ್ನು ಕರೆದುತಂದ ಗುತ್ತಿ, ಬೆಳ್ಳಂಬೆಳಗಿನ ಮುಂಜಾವಲಿ, ಆ ಮುಂಜಾನೆಯ ರಮ್ಯತೆಯನ್ನು ಸವಿದು, ಒಬ್ಬರನ್ನೊಬ್ಬರು ರಮಿಸುವ ಕ್ಷಣ, ಯಾವುದೋ ಒಂದು ಸಿನೆಮಾದ ಡ್ಯೂಯಟ್ ಸಾಂಗ್ ಇದ್ದಂತಿತ್ತು! ಕಾದಂಬರಿಯಲ್ಲಿ ಕಂಡುಬರುವ ಸ್ವಾಮೀ ವಿವೇಕಾನಂದರ ಸಾಂದರ್ಭಿಕ ಮಾತುಗಳ ಅರ್ಥ ಗ್ರಹಿಕೆ, ಗಾಂಭೀರ್ಯ, ಆ ಮೇಲ್ಛಾವಣಿಯ ಮೇಲೆ ಕಂಡು ಬರುವ ವಿವೇಕಾನಂದರ ‘ಗೆಸ್ಟ್ ಅಪಿಯರೆನ್ಸ್’ ನಿಂದ ಕಡಿಮೆಯಾದದ್ದು ಬಹುಶಃ ನಿರ್ಲಕ್ಷಿಸಬಹುದಾದ ದೋಷ.
ನಾಟಕದ ಮತ್ತೊಂದು ಮುಖ್ಯವಾದ ಅಭಾವ ಎಂದರೆ, ವೀಕ್ಷಣಾ ಸ್ಥಳದ ಸಿದ್ಧತೆ. ಲಭ್ಯವಿರುವ ಸ್ಥಳಕ್ಕಿಂತ ಹೆಚ್ಚಾಗಿ ತುಂಬಿದ್ದ ಜನರೆಲ್ಲರೂ ಒಂದು ಸ್ಥಳದಿಂದ ಮತ್ತೊಂದೆಡೆಗೆ ಓಡುವುದು, ತಮಗಾಗಿ, ತಮ್ಮವರಿಗಾಗಿ ಸರಿಯಾದ ಸ್ಥಳ ಕಾಯ್ದಿರಿಸುವುದು, ನಡುನಡುವೆ ಎಲ್ಲೋ ದೂರವಿದ್ದ ಕ್ಯಾಂಟೀನ್ ಗೆ ಹೋಗಿ ಅಲ್ಲಿಂದ ತಿನ್ನಲು ತರುವುದು, ಈ ಜಟಾಪಟಿಯಲ್ಲಿ ನಾಟಕದ ಹರಹು ತೊಡಕಾಗುತ್ತಿತ್ತು. ಅನೇಕ ಹಿರಿಯರೂ, ವೃದ್ಧರೂ ಸೀಟಿಗಾಗಿ ಪರದಾಡುವುದನ್ನು ಕಂಡು ನಾವು ಮರುಗುವುದರಲ್ಲೇ ನಾಟಕದ ಪೇಸ್ ಕಳೆದುಹೋಗುತ್ತಿತ್ತು. ಕಾದಂಬರಿ ಓದಿರದ ಮಂದಿಯಂತೂ ಕಥೆಯಲ್ಲಿ ಕಳೆದೇ ಹೋಗುತ್ತಿದ್ದರು.
ಆದರೆ, ತಮಾಷೆ, ಹಾಡು, ಕುಣಿತ ಮತ್ತು ಮುಖ್ಯವಾಗಿ ನಟರ ದಕ್ಷತೆ, ಇವುಗಳೆಲ್ಲದರಿಂದ ನಾಟಕ ಸಂಪೂರ್ಣ ಮೆಚ್ಚುಗೆ ಪಡೆಯುತ್ತದೆ. ಒಂದು ವಾಕ್ಯದಲ್ಲಿ ಹೇಳಬೇಕಾದರೆ, ಕಾದಂಬರಿಯನ್ನು ಗಮನಿಸದೆ ನಾಟಕ ನೋಡುವುದು ಹೆಚ್ಚು ಅರ್ಥಪೂರ್ಣ ಮತ್ತು ಮನರಂಜನೀಯ. ನಾಟಕದ ಆರಂಭದಲ್ಲಿ ಇದ್ದ ಟೆಂಪೋ, ನಡುವಿನಲ್ಲೊಮ್ಮೆ ಕಳೆದುಹೋದರೂ ಕೊನೆಗೆ ಗುತ್ತಿ, ತಿಮ್ಮಿಯ ಒಂದಾಗುವಿಕೆ, ದೇವಯ್ಯ ಪಾದ್ರಿಗಳ ಪ್ರಸಂಗ ಮತ್ತು ಮುಖ್ಯವಾಗಿ ಹುಲಿಯಾ ಸಾವಿನಿಂದ ಮತ್ತೆ ಮರುಕಳಿಸುತ್ತದೆ. “ಹಡಬೇಗೆ ಹುಟ್ಟಿದ್ದೇ…” ಎಂದು ಗುತ್ತಿ ಹುಲಿಯಾ ಸಾವಿಗೆ ಆಕ್ರಂದನವಿಡುವ ಘಟನೆ ಗಂಟಲುಕ್ಕಿಸುತ್ತದೆ. ನಾಟಕದ ಕೊನೆ ಹಂತದಲ್ಲಿ “ಇಲ್ಲಿ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ…” ಎಂಬ ಅರ್ಥ ಪೂರ್ಣ ಸಾಲುಗಳ ರಿಂಗಣಕ್ಕೆ ಅನ್ವರ್ಥವೆಂಬಂತೆ ಆ ಸ್ಥಳದಲ್ಲಿ ಸಾಹಿತ್ಯ ಲೋಕದ ಕೆಲ ಪ್ರಮುಖರು, ಎಲ್ಲರೊಟ್ಟಿಗೆ, ನೆಲದ ಮೇಲೆ ಕೂತಿರುವುದು ಕಂಡಾಗ ಆ ಹಾಡಿನ ಅರ್ಥ, ಭಾವಗಳು ಮತ್ತಷ್ಟು ಹೆಚ್ಚಾಗಿ ಮನದಟ್ಟಾಗಿತ್ತು!
ಕೊನೆ ಹನಿ:
ಈ ನಾಟಕದ ಬಗೆಗೆ ಹಲವಾರು ಖಂಡನೀಯ ವಿಮರ್ಶೆಗಳು ಕಂಡು ಬರುತ್ತಿವೆ. ಅವುಗಳಲ್ಲಿ ವ್ಯಕ್ತಪಡಿಸಿರುವ ಸಾಕಷ್ಟು ಅಂಶ ಸತ್ಯ ಕೂಡ. ಈ ಸಿನಿಮೀಯ ಸಂಗೀತ, ಅಸಹನೀಯವೆನಿಸುವಷ್ಟು ಸುದೀರ್ಘ ಕಾಲ, ಕೆಲವೆಡೆ ಅಪಹಾಸ್ಯ ಸಂಭಾಷಣೆ, ತಿಳಿಯಾದ ಗಾಢತೆ, ಕಾಣದ ಕಾದಂಬರಿಯ ಉದ್ದಿಶ್ಯ, ನಾಟಕ ಮುಗಿದ ಮೇಲೂ ಉಳಿದುಕೊಳ್ಳುವ ಗುಂಗಿನ ಕೊರತೆ ಇವು, ಇಂತಹ ಏನು ಹೇಗೆ ಇದ್ದರೂ, ಇದು ಕನ್ನಡ ರಂಗಭೂಮಿಯ ಒಂದು ಹೊಸ ಪ್ರಯೋಗ! ಮಲ್ಟಿಪ್ಲೆಕ್ಸ್ ಸಿನೆಮಾ, ಶಾಪಿಂಗ್ ಮಾಲು, ಡಿಸ್ಕೋ, ಪಬ್ಬು ಇವುಗಳೆಲ್ಲವೂ ಒಂದಷ್ಟು ದಿನಗಳ ಮಟ್ಟಿಗೆ ಬರಿದಾಗಿಸಿ, ಕುವೆಂಪು ಕಲಾಗ್ರಾಮದಲ್ಲಿ ತುಂಬಿದ ಜನ ಕನ್ನಡ ರಂಗಭೂಮಿಯ ಜೀವಂತಿಕೆಯನ್ನು ಬಿಂಬಿಸಿದ್ದಾರೆ. ಕಳೆದು ಹೋಗುತ್ತಿದೆಯೇನೋ ಎನಿಸುತ್ತಿರುವ ನಮ್ಮ ಸಾಹಿತ್ಯ ಸೌರಭ, ರಂಗಭೂಮಿಯ ವಂಶವಾಹಿಗಳು ಮತ್ತೆ ತಲೆ ಎತ್ತಬೇಕು, ನಮ್ಮ ಯುವಕರು, ತರುಣರನ್ನು ಆಕರ್ಷಿಸಬೇಕು ಎಂದರೆ, ಇಂತಹ ಹೊಸ ಪ್ರಯೋಗಗಳ ಅವಶ್ಯಕತೆ ಇದೆ ಮತ್ತು ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹವೂ ಬೇಕಾಗಿದೆ. ಇವುಗಳಲ್ಲಿ ಏನೇ ಲೋಪದೋಷಗಳಿದ್ದರೂ ಅದನ್ನು ಹಂಚಿಕೊಂಡು, ಮುಂದಿನ ಯೋಜನೆಗಳಲ್ಲಿ ಪರಿಷ್ಕರಿಸಬೇಕೆ ಹೊರತು, ಕಟುವಾಗಿ ಬೆರಳು ಮಾಡಿ ಟೀಕಿಸುವುದರಿಂದ ಪ್ರಯೋಜನವೇನು ಹೇಳಿ?!
 
 
 

‍ಲೇಖಕರು avadhi

May 31, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. bharathi

    Sampu malegalalli … nodide naanu koodaa. Kelavondannu hege vyaktha padisabeku annuvudu thiliyade summnagidde. Neenu barediruvudannu odi ide naanu helodikke horatiddallavaa annisthu .. chendavide

    ಪ್ರತಿಕ್ರಿಯೆ
  2. Sarala

    Samyukta, you have captured my thoughts too, exactly like you have felt about the play

    ಪ್ರತಿಕ್ರಿಯೆ
  3. vijay

    ಮಲೆಗಳಲ್ಲಿ ಮಧುಮಗಳು ಅಲ್ಲ ಸಂಯುಕ್ತ ಅವರೇ
    ಅದು ಮಲೆಗಳಲ್ಲಿ ಮದುಮಗಳು

    ಪ್ರತಿಕ್ರಿಯೆ
  4. Anil Talikoti

    ವಿಶ್ಲೇಷಣೆ ಚೆನ್ನಾಗಿದೆ. ಕಾದಂಬರಿಯ ಮದುಮಗಳು-ರಂಗ ಪ್ರಯೋಗದಲ್ಲಿ ‘ಮಧು’ ಮಗಳಾಗುವದು ಅನಪೇಕ್ಷಣಿಯವೇನಲ್ಲ. ಹೇಳಿಲ್ಲವೇ ಅಮಿತಾಭ “vaade aksar tut jaate hain, magar koshishein kaamyaab ho jaati hain”. ಇಂಥ ಪ್ರಯತ್ನಗಳು ಅತಿ ಮುಖ್ಯ ಅದಕ್ಕೆ ಪ್ರೋತ್ಸಾಹ ಅಷ್ಟೇ ಮುಖ್ಯ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  5. ಸತೀಶ್ ನಾಯ್ಕ್

    ಅದೆಷ್ಟು ಪ್ರಯತ್ನ ಪಟ್ಟರೂ ನನ್ನಿಂದ ಈ ನಾಟಕ ನೋಡಲಾಗಲೇ ಇಲ್ಲ.. ನಾನಿನ್ನು ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿಲ್ಲವಾದ್ದರಿಂದ ಈ ನಾಟಕವನ್ನ ನೋಡಿಯೇ ತೀರಬೇಕು ಅನ್ನಿಸಿ ಪ್ಲಾನ್ ಮಾಡಿಕೊಳ್ಳುವಷ್ಟರಲ್ಲಿ ಬಂತು ನೋಡಿ ಆಫೀಸಿನಿಂದ ಹದಿನೈದು ದಿನಗಳ ತಮಿಳುನಾಡು.. ಕೇರಳ ಪ್ರವಾಸದ ಕರೆ. ಇಲ್ಲ ಅನ್ನೋ ಹಾಗಿಲ್ಲ. ಮೇ ೩೧ ಕಡೆಯ ದಿನವಾದರೂ ನೋಡಿಬಿಡೋಣ ಅಂದುಕೊಂಡು ಟೂರ್ ಅಣ್ಣ ಆದಷ್ಟು ಬೇಗ ಮುಗಿಸಿ ಹೊರತು ಬಂದರೂ.. ಊರಿಗೆ ತುರ್ತಾಗಿ ಹೋಗಲೇ ಬೇಕಾದ ಪ್ರಸಂಗ ಬಂದದ್ದು ಮತ್ತೊಂದು ತೊಡಕಾಯಿತು.
    ನಿಮ್ಮ ಈ ಬರಹ ನೋಡಿದ ಮೇಲೆ ಅದೆಷ್ಟು ಕಷ್ಟವಾಗಿದ್ದರೂ ಈ ನಾಟಕವನ್ನ ನೋಡದೆ ಬಿಡ ಬಾರದಿತ್ತು ಅನ್ನೋ ಖೇದ ಶುರುವಾಯ್ತು. ಇರಲಿ ಮತ್ತೊಮ್ಮೆ ತೀರ್ಥಹಳ್ಳಿಯಲ್ಲೋ ಅಥವಾ ಬೆಂಗಳೂರಿನಲ್ಲೋ ಈ ನಾಟಕ ಆಯೋಜನೆಯನ್ನ ಮಾಡಲಾಗುತ್ತದಂತೆ.. ಆಗ ಖಂಡಿತ ಬಿಡಲಾರೆ.. ನಾಟಕದ ಕುರಿತಾದ ನಿಮ್ಮ ಸಂಕ್ಷಿಪ್ತ ವಿವರಣೆ ಮತ್ತು ಪಾತ್ರ ಪರಿಚಯ ಇಷ್ಟವಾಯ್ತು. ಹಾಗೆ ನಿಮ್ಮ ನೇರ ಅಭಿಪ್ರಾಯಗಳೂ ಕೂಡ. ಸುಂದರ ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: