ನಾ ದಿವಾಕರ್ ನೇರನುಡಿ : ಸರ್ಕಾರದ ಮುಂದಿವೆ ಹಲವು ಸವಾಲುಗಳು

ನೂತನ ಸರ್ಕಾರದ ಆದ್ಯತೆಗಳೇನು ?

ನಾ ದಿವಾಕರ

ಬಹುತೇಕ ಒಂದು ದಶಕದ ನಂತರ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಚುನಾವಣೆಗಳಲ್ಲಿ ಸದಾ ರಾಜಕೀಯವಾಗಿ ತಟಸ್ಥ ನೀತಿ ತಳೆಯುತ್ತಿದ್ದ ಕರ್ನಾಟಕದ ಹಲವು ಪ್ರಗತಿಪರ ಬುದ್ಧಿಜೀವಿಗಳೂ ಬೆಂಬಲ ವ್ಯಕ್ತಪಡಿಸಿದ್ದು ವಿಶಿಷ್ಟ ವಿದ್ಯಮಾನ. ಇದಕ್ಕೆ ಕಾರಣಗಳೂ ಹಲವು. ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ಮತ್ತೆ ರಚನೆಯಾಗಕೂಡದು ಎಂಬ ಒಂದು ಧೋರಣೆ ಮತ್ತು ಸಂಭಾವ್ಯ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್ ಆಯ್ಕೆ ಮಾಡಿದ್ದುದರಿಂದ ಹಿಂದುಳಿದ ವರ್ಗಗಳ ಸಬಲೀಕರಣದತ್ತ ಇದೊಂದು ದಿಟ್ಟ ಹೆಜ್ಜೆ ಎಂಬ ಭ್ರಮೆ. ಸಿದ್ಧರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ನಂತರದಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ, ಮಾಧ್ಯಮಗಳ ಮೂಲಕ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನೋಡಿದರೆ ಈ ರಾಜ್ಯದ ಜನತೆ ಮತ್ತು ವಿಶೇಷವಾಗಿ ಅಹಿಂದ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳು ಕಾಂಗ್ರೆಸ್ ಸರ್ಕಾರದ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇರಿಸಿರುವುದು ಸ್ಪಷ್ಟವಾಗುತ್ತದೆ.

ಈ ನಂಬಿಕೆಗಳ ವಿಸ್ತಾರ, ವಿನ್ಯಾಸ, ಆಶಯ ಮತ್ತು ಧೋರಣೆಗಳೂ ಜನಸಮುದಾಯಗಳಷ್ಟೇ ವಿಭಿನ್ನ. ದಲಿತ ಸಮುದಾಯಗಳಲ್ಲಿ ಎಡ-ಬಲಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಒಂದು ತಾತ್ವಿಕ ನಿಲುವು ಸರ್ಕಾರದ ವತಿಯಿಂದ ಅಪೇಕ್ಷಿಸಬಹುದು ಎಂದು ನಂಬಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳು ಕಳೆದ ಏಳು ವರ್ಷಗಳ ಕೋಮುವಾದಿ ಆಳ್ವಿಕೆಯಿಂದ ಮುಕ್ತಿ ಹೊಂದಿ ತಮ್ಮ ಮೇಲಿನ ಆಕ್ರಮಣಗಳು ನಿಯಂತ್ರಿಸಲ್ಪಡುತ್ತಿವೆ ಎಂದು ನಿರೀಕ್ಷಿಸುತ್ತಿವೆ. ಹಿಂದುಳಿದ ವರ್ಗಗಳು ತಮ್ಮ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಿದ್ಧರಾಮಯ್ಯನವರ ಸರ್ಕಾರ ಸಕ್ರಿಯವಾದ ಕ್ರಮ ಕೈಗೊಳ್ಳುತ್ತದೆ ಎಂಬ ಆಶಾಭಾವನೆ ಹೊಂದಿವೆ. ರಾಜ್ಯದ ಕೃಷಿಕರು ಯಡಿಯೂರಪ್ಪ ಮತ್ತು ಇತರ ಸರ್ಕಾರಗಳ ಕೃಷಿ ಬಜೆಟ್ನಿಂದ ಏನೂ ಪಡೆಯಲಾಗದೆ ತಮ್ಮ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಮತ್ತು ಲಾಭದಾಯಕ ಮಾರುಕಟ್ಟೆಯನ್ನು ನಿರೀಕ್ಷಿಸುತ್ತಿದ್ದಾರೆ. ಶೈಕ್ಷಣಿಕ ವಲಯದಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಮೂಲಕ ನೂತನ ಕಾಂಗ್ರೆಸ್ ಸರ್ಕಾರ ಶಿಕ್ಷಣದ ವಾಣಿಜ್ಯೀಕರಣವನ್ನು ತಡೆಗಟ್ಟುತ್ತದೆ ಎಂಬ ಆಶಾಭಾವನೆ ಜನಸಾಮಾನ್ಯರಲ್ಲಿ ಮೂಡಿದೆ.

ಆದರೆ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಮಾನ್ಯ ಮುಖ್ಯಮಂತ್ರಿಗಳು ಮಾಡಿದ ಘೋಷಣೆಗಳನ್ನು ನೋಡಿದರೆ ನೂತನ ಕಾಂಗ್ರೆಸ್ ಸರ್ಕಾರ ತನ್ನ ಆದ್ಯತೆಗಳನ್ನು ಸಮರ್ಥವಾಗಿ ಪರಿಶೀಲಿಸಿಲ್ಲ ಎಂದು ಕಾಣುತ್ತದೆ. ಯಾವುದೇ ರಾಜ್ಯದ ಅಧಿಕಾರ ವಹಿಸಿಕೊಳ್ಳುವ ಮುಖ್ಯಮಂತ್ರಿಗಳು ಪ್ರತಿನಿಧಿಸುವುದು ಸಾರ್ವಭೌಮ ಪ್ರಜೆಗಳನ್ನೇ ಹೊರತು ಆಡಳಿತಾರೂಢ ಪಕ್ಷವನ್ನಲ್ಲ. ಪಕ್ಷ ರಾಜಕಾರಣ ಅಧಿಕಾರ ಗ್ರಹಣದೊಂದಿಗೇ ಮುಕ್ತಾಯಗೊಂಡಲ್ಲಿ ಮಾತ್ರ ಸಮರ್ಥವಾದ, ಪ್ರಾಮಾಣಿಕವಾದ ಪ್ರಜಾತಂತ್ರ ವ್ಯವಸ್ಥೆ ನೆಲೆಯೂರಲು ಸಾಧ್ಯ. ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಸಿದ್ಧರಾಮಯ್ಯನವರನ್ನೂ ಸೇರಿದಂತೆ, ರಾಜ್ಯದ ಬೊಕ್ಕಸ ಬರಿದಾಗಿದೆ, ಬಿಜೆಪಿ ಸರ್ಕಾರ ಬೊಕ್ಕಸದ ಹಣವನ್ನು ಮಠಮಾನ್ಯಗಳಿಗೆ ಹರಿದು ಹಂಚಿದೆ, ಅಭಿವೃದ್ಧಿಗಾಗಿ ರಾಜ್ಯದಲ್ಲಿ ಹಣಕಾಸಿನ ಕೊರತೆ ಇದೆ, ಕೇಂದ್ರ ಯೋಜನೆಗಳ ಅನುದಾನಗಳನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ ಎಂದೆಲ್ಲಾ ಆರೋಪಿಸಿತ್ತು. ಆದರೆ ಪ್ರಮಾಣವಚನ ಸ್ವೀಕರಿಸಿದ ಕ್ಷಣಾರ್ಧದಲ್ಲೇ ಮಾನ್ಯ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತ ನಿಗಮ, ಅಂಬೇಡ್ಕರ್ ನಿಗಮ ಮತ್ತು ಹಿಂದುಳಿದ ವರ್ಗಗಳ ನಿಗಮದಿಂದ ನೀಡಿದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿರುವುದು, ಬಜೆಟ್ ಮಂಡಿಸುವ ಮುನ್ನವೇ 87 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಕಿಲೋಗೆ ಒಂದು ರೂನಂತೆ ಅಕ್ಕಿ ನೀಡುವುದು ಮುಂತಾದ ಭರವಸೆ ನೀಡಿರುವುದು ಸಮರ್ಥ ಆಡಳಿತದ ಲಕ್ಷಣವಾಗಲಾರದು.

ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಂಭವಿಸಿರುವ ಅನಾಹುತಗಳು ಹಲವಾರು. ಮತೀಯ ಶಕ್ತಿಗಳ ಸಬಲೀಕರಣ, ಕೋಮುವಾದಿಗಳ ಅಟ್ಟಹಾಸ, ಶಿಕ್ಷಣ ಕ್ಷೇತ್ರದ ಕೇಸರೀಕರಣ, ಔದ್ಯಮಿಕ ಕ್ಷೇತ್ರವನ್ನು ಕಾರ್ಪೋರೇಟ್ ಶಕ್ತಿಗಳಿಗೆ ಒಪ್ಪಿಸಿರುವುದು, ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಬಹು ಅಮೂಲ್ಯ ಗಣಿ ಉದ್ಯಮದ ಲೂಟಿ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ಅವ್ಯಾಹತ ಆಕ್ರಮಣ ಹೀಗೆ ಅಕ್ರಮಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದರಲ್ಲಿ ಅಚ್ಚರಿಯೇನಿಲ್ಲ. ಬಿಜೆಪಿ ಸರ್ಕಾರದಿಂದ ಇವೆಲ್ಲವೂ ನಿರೀಕ್ಷಿತವೇ ಆಗಿರುತ್ತದೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಈ ನೀತಿಗಳಿಂದ ಭಿನ್ನವಾಗಿದ್ದಲ್ಲಿ ಮಾತ್ರ ರಾಜ್ಯದ ಜನತೆಯ ಅಪೇಕ್ಷೆ, ಆದ್ಯತೆ ಮತ್ತು ಆಯ್ಕೆ ಸಾರ್ಥಕ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಉಡುಪಿ ಮಠ ಮತ್ತು ಗೋಕರ್ಣ ದೇವಾಲಯದ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲೂ ಸಿದ್ಧರಾಮಯ್ಯ ಕೊಂಚ ವಿವೇಚನೆಯಿಂದ, ಗಂಭೀರವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು. ಉಡುಪಿ ಮತ್ತು ಗೋಕರ್ಣ ದೇವಾಲಯಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದು ಸಮರ್ಥನೀಯ ನಿರ್ಧಾರವೇ ಆದರೂ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಆತುರದ ನಿರ್ಣಯ ತಾಳುವುದು ಸ್ವಾಗತಾರ್ಹವಲ್ಲ

ಸಾಮಾಜಿಕ ನ್ಯಾಯ, ಸೆಕ್ಯುಲರಿಸಂ ಮತ್ತು ಆರ್ಥಿಕ ಸಬಲೀಕರಣ ನೀತಿಗಳು ಒಂದು ವಿವೇಕಯುತ ನಿಟ್ಟಿನಲ್ಲಿ ಸಾಗಿದಾಗ ಮಾತ್ರ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮುಂದೆ ಹಲವು ಆದ್ಯತೆಗಳು ಇರಬೇಕಾಗುತ್ತದೆ. ರಾಜ್ಯದ ನೈಸರ್ಗಿಕ ಸಂಪನ್ಮೂಲಗಳ ಲೂಟಿಯನ್ನು ತಡೆಗಟ್ಟುವುದು, ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು, ಶಿಕ್ಷಣ ಕ್ಷೇತ್ರದ ಕೇಸರೀಕರಣ ಮತ್ತು ವಾಣಿಜ್ಯೀಕರಣ ಪ್ರಕ್ರಿಯೆಯನ್ನು ತಡೆಗಟ್ಟುವುದು, ಕೋಮುವಾದಿ ಸಂಘಟನೆಗಳನ್ನು ನಿಯಂತ್ರಿಸುವುದು, ರಾಜ್ಯದಲ್ಲಿ ಬೇರೂರಿರುವ ಕೋಮು ದ್ವೇಷ ಮನೋಭಾವವನ್ನು ಹೊಡೆದೋಡಿಸಲು ಯತ್ನಿಸುವುದು, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಬಗ್ಗೆ ಸಕಾರಾತ್ಮಕ ನೀತಿ ಜಾರಿಗೊಳಿಸುವುದು, ಉತ್ತರ ಕರ್ನಾಟಕದ ಹಲವು ಸಮಸ್ಯೆಗಳಿಗೆ ಸ್ಪಂದಿಸುವುದು, ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವುದು, ಆಪರೇಷನ್ ಕಮಲದಂತಹ ಭ್ರಷ್ಟ ರಾಜಕಾರಣಕ್ಕೆ ತಡೆಹಾಕುವುದು, ರಾಜಕೀಯ ವಲಯದಲ್ಲಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಬಲವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವುದು, ಲೋಕಾಯುಕ್ತವನ್ನು ಬಲಪಡಿಸುವುದು ಇವೇ ಮುಂತಾದ ಆದ್ಯತೆಗಳು ಸಿದ್ಧರಾಮಯ್ಯನವರ ಮುಂದಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಮುಂದುವರೆದರೆ ಮಾತ್ರ ಜನತೆ ಬಯಸಿದ ಬದಲಾವಣೆ ಕಾಣುತ್ತದೆ. ಇಲ್ಲವಾದಲ್ಲಿ ಹಳೆಯ ಬಾಟಲಿಯಲ್ಲಿ ಹೊಸ ನೀರು ಎಂಬಂತಾಗುತ್ತದೆ.

‍ಲೇಖಕರು avadhi

May 31, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Ramesh

    Agreed all your points as you said, more important issues are there to govern the state than taking over the temples.

    ಪ್ರತಿಕ್ರಿಯೆ
    • ದಿವಾಕರ ನಾ

      This point was made as a corollary. There is a need to take over these temples. But Siddaramiah should not behave like autocratic BJP government in settling some sensitive issues. Congress should prove different from BJP by being truly secular, lest it may fail the people

      ಪ್ರತಿಕ್ರಿಯೆ
  2. Anil Talikoti

    ಉತ್ತಮವಾದ ಲೇಖನ ದಿವಾಕರ ಅವರೇ. ಇಷ್ಟು ಉದ್ದದ to-do ಲಿಸ್ಟ ನೋಡಿ ಎದೆ ಒಡೆದುಕೊಂಡಾರು ಯಾರಾದರು. ನನ್ನ ಪ್ರಕಾರ less government is the best government. ಯಾವ ದೇವಾಲಯಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದು ಅನವಶ್ಯಕ. ಆರ್ಥಿಕ ಸ್ವಾವಲಂಬನೆ ಯತ್ತ ಗಮನ ಕೊಡುವದೆ ಆದ್ಯ ಕರ್ತವ್ಯವಾಗಬೇಕು -ಅದಾದರೆ ,ಬೇರೆಲ್ಲಾ ತನ್ನಿಂದ ತಾನೇ ಪರಿಹಾರದತ್ತ ದಾಪುಗಾಲಿಕ್ಕುತ್ತದೆ. All he has to do is to govern without worrying too much about social issues.

    ಪ್ರತಿಕ್ರಿಯೆ
  3. ಗುರುಶಾಂತ್ ಎಸ್.ವೈ

    ನಿಮ್ಮ ವಿಶ್ಲೇಷಣೆಯಲ್ಲಿ ಎತ್ತಿರುವ ಪ್ರಶ್ನೆಗಳು ಸರಿ ಇದೆ.ಸಿದ್ಧರಾಮಯ್ಯನವರಿಗೆ ದೊರೆತ ಅವಕಾಶವನ್ನು ಸರಿಯಾಗಿ ಬಳಸಬೇಕು ನಿಜ.ಆದರೆ ಕಾಂಗ್ರೆಸ್ ಪಕ್ಷ ಅದಕ್ಕೆಲ್ಲಾ ಅನುವು ಮಾಡಿಕೊಟ್ಟೀತೇ? ಆರ್ಥಿಕ ನೀತಿಗಳಲ್ಲಿ ಅವರೇ ಹೇಳಿಕೊಂಡಂತೆ ಮತ್ತು ನಡೆದುಕೊಂಡಂತೆ ಬಿಜೆಪಿ ಕಾಂಗ್ರೆಸ್ ಭಿನ್ನವೇನಲ್ಲ.ರಾಜ್ಯಪಾಲರ ಮೂಲಕ ಆಡಿಸಿದ ಮಾತುಗಳು ಅದನ್ನೇ ಹೇಳುತ್ತವೆ.ಕೃಷಿ ಕೈಗಾರಿಕೆಯ ಮೂಲಭೂತ ಬೆಳವಣಿಗೆಗೆ ವಿಶೇಷ ಒತ್ತು ನೀಡದ, ರಾಜ್ಯದ ನೆಲ.ಜಲ,ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿ ಉದ್ಯೋಗ ಸೃಷ್ಟಿಯ ಬೆಳವಣಿಗೆಗೆ ಇಂಬು ನೀಡದಿದ್ದರೆ ಅಭಿವೃದ್ಧಿ ಎಂಬುದು ಕೇವಲ ಬೆರಳೆಣಿಕೆಯ ಕೆಲವರ ಸ್ವತ್ತಾಗಲಿದೆ.ವಿಶ್ವ ಬ್ಯಾಂಕಿನ ಅಣತಿಯಂತೆ ಆರ್ಥಿಕ ನಿರ್ಭಂಧದ ಕಾಯ್ದೆಯ ಹಗ್ಗ ಕಾಲಿಗೆ ಕಟ್ಟಿಕೊಂಡು ಅದೆಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯ. ಹೀಗಿರುವಾಗಲೂ ಬಿಜೆಪಿ ಸರಕಾರ ವಿಶೇಷವಾಗಿ ಸಂಘ ಪರಿವಾರ ಅಧಿಕಾರವನ್ನು ಬಳಸಿಕೊಂಡು ಮಾಡಿರುವ ಅನಾಹುತಗಳನ್ನು ಸರಿಪಡಿಸಿ ಸೌಹಾರ್ಧ ಕರ್ನಾಟಕವನ್ನು ರಕ್ಷಿಸುವುದೂ ಮುಖ್ಯ ಆದ್ಯತೆಗಳಲ್ಲಿ ಒಂದು. ಇದನ್ನು ನೀವು ಸರಿಯಾಗಿಯೇ ಗುರುತಿಸಿದ್ದೀರಿ.ಒಂದೇ ಉದಾಹರಣೆಯೆಂದರೆ ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಪುರ ಮಠಕ್ಕೆ ನೀಡಿದ್ದು ಹಾಡಹಗಲೇ ನಡೆದ ಅನ್ಯಾಯ.ಸಾರ್ವಜನಿಕರಿಂದ ಅಪಾರ ಹಣ, ಸಂಗ್ರಹಿಸುವ ಇಂತಹ ಮಠ-ದೇವಸ್ಥಾನಗಳ ಸಾಮಾಜಿಕ, ಆರ್ಥಿಕ ಬಲವನ್ನು ರಾಜಕೀಯ-ಸಂಘಟನಾ ಬಲವಾಗಿ ಸಂಘಪರಿವಾರ ಬಳಸುತ್ತಲೇ ಬಂದಿದೆ ಎಂಬುದನ್ನು ಮರೆ ಮಾಚಬೇಕಿಲ್ಲ.ಹಾಗೇ ಒಂದು ಗಂಭೀರ ಪ್ರಶ್ನೆಯೆಂದರೆ ಕಾಂಗ್ರೆಸ್ ಪಕ್ಷಕ್ಕೆ ಇವನ್ನೆಲ್ಲಾ ಮಾಡುವ ರಾಜಕೀಯ ಇಚ್ಛಾ ಶಕ್ತಿ ಇದೆಯೇ? ಅಲ್ಲಿನ ವಿವಿಧ ಲಾಭಿಗಳು ಇವನ್ನೆಲ್ಲಾ ಮಾಡಲು ಬಿಡುತ್ತವೆಯೇ? ದೆಹಲಿಯ ಗದ್ದುಗೆ ಮೇಲೆ ಕಣ್ಣಿರಿಸಿರುವ, ಹತ್ತಾರು ಹಗರಣಗಳಲ್ಲಿ ಮುಳುಗೆದ್ದಿರುವ ಬಿಜೆಪಿ ಇಲ್ಲಿನ ವೈರುದ್ಯಗಳನ್ನು ಬಳಸದೇ ಬಿಡುತ್ತದೆಯೇ? ಇವಕ್ಕೆಲ್ಲಾ ಹೊಣೆಗಾರಿಕೆಯಲ್ಲಿ ಪಾಲಿರುವ ಸಿದ್ಧರಾಮಯ್ಯನವರಿಗಿಂತ ಪಕ್ಷದ ಲೋಕಮಾಂಡ್ ಮತ್ತು ಹೈಕಮಾಂಡ್ ನಾಯಕರಾದ ಪರಮೇಶ್ವರ್ ಮತ್ತು ಸೋನಿಯಾ ಮೇಡಂ ಉತ್ತರಿಸಬೇಕಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: