ನಾ ದಿವಾಕರ ಕಂಡಂತೆ ಕೆ ರಾಮದಾಸ್

ನಾ ದಿವಾಕರ.

ಚಿರಸ್ಥಾಯಿಯಾದ ಒಂದು ಗಟ್ಟಿ ಧ್ವನಿ –ಪ್ರೊ. ಕೆ. ರಾಮದಾಸ್

ಪ್ರತಿರೋಧದ ಧ್ವನಿಗಳನ್ನು ಅಡಗಿಸುವ ನವಯುಗದಲ್ಲಿ ನೆನಪಾಗುವ ಚಿಂತಕ

ಸ್ವತಂತ್ರ ಭಾರತದ ಚರಿತ್ರೆಯಲ್ಲಿ ೧೯೭೦ರ ದಶಕ ಜನ ಚಳುವಳಿಗಳ ಉಚ್ಛ್ರಾಯ ಕಾಲ. ೨೫ ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ದೇಶದ ತಳಸಮುದಾಯಗಳು, ಮಧ್ಯಮವರ್ಗಗಳು ಹಾಗೂ ಅವಕಾಶವಂಚಿತ – ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ತಮ್ಮ ಸಾಂವಿಧಾನಿಕ ಕನಸುಗಳು ಈಡೇರುವುದರಲ್ಲಿ ಕಂಡ ವ್ಯತ್ಯಯಗಳು ಹಾಗೂ ಆಳುವ ವರ್ಗಗಳ ಆಡಳಿತ ನೀತಿಗಳಿಂದ ಸಮಾಜದಲ್ಲಿ ಸೃಷ್ಟಿಯಾದ ಅಸಮಾಧಾನದ ಹೊಗೆ ತಳಮಟ್ಟದಿಂದಲೂ ಸ್ಫೋಟಿಸಿದ್ದು ಇದೇ ದಶಕದಲ್ಲಿ. ೧೯೬೬-೬೭ರ ನಕ್ಸಲ್‌ಬಾರಿ ಚಳುವಳಿಯ ಹಿನ್ನೆಲೆಯಲ್ಲೇ ದೇಶದ ಪ್ರಭುತ್ವ ಮತ್ತು ಆಳುವ ವರ್ಗಗಳೂ ಸಹ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೂ ಲೆಕ್ಕಿಸದೆ ದಮನಕಾರಿ ನೀತಿಗಳನ್ನು ಅನುಸರಿಸಲಾರಂಭಿಸಿದ್ದವು. ಈ ಸಂಕೀರ್ಣ ಸನ್ನಿವೇಶದಲ್ಲೇ ಉಲ್ಬಣಿಸಿದ ಹಸಿವು, ಬಡತನ, ನಿರುದ್ಯೋಗ, ಆಹಾರ ಕೊರತೆ ಹಾಗೂ ಶ್ರೀಸಾಮಾನ್ಯರ ನಿತ್ಯಜೀವನದ ಬವಣೆಗಳು ಸಮಾಜದ ಎಲ್ಲ ಸ್ತರಗಳಲ್ಲೂ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿದ್ದವು.

ಈ ಹಂತದಲ್ಲೇ ದೇಶಾದ್ಯಂತ ಕಾರ್ಮಿಕ ಚಳುವಳಿಗಳು ತೀವ್ರಗೊಳ್ಳುತ್ತಿರುವಂತೆ, ಮಹಿಳೆಯರು, ವಿದ್ಯಾರ್ಥಿ – ಯುವಜನರು, ದಲಿತ ಸಮುದಾಯಗಳು ಹಾಗೂ ಬುಡಕಟ್ಟು ಸಮುದಾಯಗಳು ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಡುವ ಪ್ರಶಸ್ತ ಭೂಮಿಕೆಯೂ ಸಿದ್ಧವಾಗಿತ್ತು. ೧೯೭೫ರ ತುರ್ತುಪರಿಸ್ಥಿತಿಯ ಕರಾಳತೆಯ ನಡುವೆಯೂ ದೇಶಾದ್ಯಂತ ಸಮಾಜವಾದಿ ಚಿಂತನೆಯಿಂದ ಪ್ರೇರಿತವಾದ ನೂರಾರು ಹೋರಾಟಗಳು ಜನಸಾಮಾನ್ಯರ ನಿತ್ಯಬದುಕಿನ ಸಮಸ್ಯೆಗಳಿಗೆ ಸ್ಪಂದಿಸತೊಡಗಿದ್ದವು. ಈ ಜನಾಂದೋಲನದ ಪರ್ವಕಾಲದಲ್ಲಿ ಕರ್ನಾಟಕ ತನ್ನದೇ ಆದ ಸಮಾಜವಾದಿ ಚಿಂತಕರ, ರೈತ ನಾಯಕರ, ಮಾರ್ಕ್ಸ್‌ವಾದಿಗಳ, ವಿಚಾರವಂತರ ಹಾಗೂ ಸಮಾಜಮುಖಿ ಧೋರಣೆಯುಳ್ಳ ಅನೇಕ ಹೋರಾಟಗಳಿಗೆ ಪ್ರಸ್ಥಭೂಮಿಯಾಗಿ ಪರಿಣಮಿಸಿತ್ತು. ಈ ಕಾಲಘಟ್ಟದಲ್ಲೇ ಸಾಂಸ್ಕೃತಿಕ ನಗರಿ ಎಂದೇ ಹೆಸರಾಗಿದ್ದ ಮೈಸೂರು ತನ್ನ ಪಾರಂಪರಿಕ ಸೊಗಡನ್ನು ಕೊಡವಿಕೊಳ್ಳದೆಯೇ, ಪ್ರಜಾಸತ್ತಾತ್ಮಕ ಹೋರಾಟಗಳ ನೆಲೆವೀಡಾಗಿ ಅಸಂಖ್ಯಾತ ಪ್ರಖರ ಚಿಂತಕರಿಗೆ, ವಿದ್ವಾಂಸರಿಗೆ, ಹೋರಾಟಗಾರರಿಗೆ, ಸೈದ್ಧಾಂತಿಕ ಮಾರ್ಗದರ್ಶಕರಿಗೆ ತವರುಮನೆಯೂ ಆಗಿತ್ತು.

ಈ ತವರುಮನೆಯಲ್ಲಿ ಮೊದಲಿಗರಾಗಿ, ಸಮಾಜವಾದಿ ಚಳುವಳಿ ಮತ್ತು ಜನಪರ ಹೋರಾಟಗಳ ಮುಂಚೂಣಿಯಲ್ಲಿ ನಿಂತು ಪ್ರಕ್ಷುಬ್ಧ ಸಮಾಜದಲ್ಲಿ ಸಮನ್ವಯ, ಸೌಹಾರ್ದತೆ, ಸಾಮರಸ್ಯ ಮತ್ತು ಸೋದರತ್ವವನ್ನು ಗಟ್ಟಿಗೊಳಿಸುವ ಕೈಂಕರ್ಯದಲ್ಲಿ ಕಂಕಣಬದ್ಧರಾಗಿ ನಿಂತವರಲ್ಲಿ ಪ್ರೊ. ಕೆ. ರಾಮದಾಸ್‌ ಒಬ್ಬರು. ಬಣ್ಣಿಸುವುದೇ ಆದರೆ ಪ್ರೊ. ರಾಮದಾಸ್‌ ಅವರನ್ನು ಹಲವು ರೀತಿಯಲ್ಲಿ ಬಣ್ಣಿಸಬಹುದು. ಪ್ರಖರ ಚಿಂತಕ, ಸಮಾಜವಾದಿ, ಹೋರಾಟಗಾರ, ಸಮಾಜಮುಖಿ, ಪ್ರಖರ ವಾಗ್ಮಿ, ಮಾನವೀಯ ಮೌಲ್ಯಗಳ ಪ್ರತಿಪಾದಕ ಹೀಗೆ… ಆದರೆ ಇವೆಲ್ಲವನ್ನೂ ಮೀರಿಯೂ ಮೈಸೂರಿನ ಜನಪರ ಹೋರಾಟಗಳಲ್ಲಿ ಪ್ರೊ. ರಾಮದಾಸ್‌ ಅವರನ್ನು ಗುರುತಿಸಬಹುದಾದರೆ ಅವರ ಗಟ್ಟಿಯಾದ ಪ್ರತಿರೋಧದ ಧ್ವನಿ. ಸಮಾಜವಾದಿ ಚಳುವಳಿ ಹಾಗೂ ರಾಜ್ಯದಲ್ಲಿ ಬೇರೂರುತ್ತಿದ್ದ ರೈತ ಹೋರಾಟದ ಒಂದು ಭಾಗವಾಗಿ ರೂಪುಗೊಂಡ ಎಡಪಂಥೀಯ ವಿಚಾರಧಾರೆಯು ಈ ದಶಕದ ಎಲ್ಲ ಹೋರಾಟಗಳ ಪ್ರೇರಕಶಕ್ತಿಯಾಗಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ತಮ್ಮ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ, ತಾರತಮ್ಯ ಹಾಗೂ ಶೋಷಣೆಯನ್ನು ಕಂಡೂ ಕಾಣದಂತಿದ್ದ ಒಂದು ಜಡ ಸಮಾಜಕ್ಕೆ ಪ್ರೊ. ಕೆ. ರಾಮದಾಸ್‌ ಅವರ ಪ್ರಖರ ಪ್ರತಿರೋಧದ ಧ್ವನಿ ಬಡಿದೆಬ್ಬಿಸುವ ಗಂಟಾನಾದದಂತೆ ಕಾಣುತ್ತಿತ್ತು.

ಶೋಷಣೆಮುಕ್ತ ಸಮಾಜಕ್ಕಾಗಿ, ಸಮಾನತೆ ಮತ್ತು ಸಾಮರಸ್ಯದ ಸಾರ್ವಜನಿಕ ಬದುಕಿಗಾಗಿ ಡಾ. ಬಿ.ಆರ್.‌ ಅಂಬೇಡ್ಕರ್‌, ಮಹಾತ್ಮ ಗಾಂಧಿ, ರಾಮಮನೋಹರ ಲೋಹಿಯಾ ಮತ್ತು ಕಾರ್ಲ್‌ ಮಾರ್ಕ್ಸ್‌ ಅವರ ರಾಜಕೀಯ ಸೈದ್ಧಾಂತಿಕ ಚಿಂತನೆಗಳೊಂದಿಗೇ ಕರ್ನಾಟಕದಲ್ಲೇ ಜನ್ಮತಾಳಿದ ವಚನ ಚಳುವಳಿ ಹಾಗೂ ಬಸವ ಪ್ರಜ್ಞೆ, ಈ ಸಮಾಜ ಸುಧಾರಕ ಚಿಂತನಾ ವಾಹಿನಿಗಳಿಗೆ ಮೂಲ ಪ್ರೇರಣೆಯಾದ ಶತಮಾನಗಳ ಹಿಂದಿನ ಬೌದ್ಧ ಧಮ್ಮದ ತಾತ್ವಿಕ ನೆಲೆಗಳು – ಇವೆಲ್ಲವನ್ನೂ ಮೈಗೂಡಿಸಿಕೊಂಡು ತಮ್ಮ ಸುತ್ತಲಿನ ಸಮಾಜದಲ್ಲಿ ಸಮಾನತೆಯೊಂದಿಗೆ ಮಾನವೀಯ ಮೌಲ್ಯಗಳನ್ನೂ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಪ್ರೊ. ಕೆ. ರಾಮದಾಸ್‌ ನೀಡಿದ ಮಾರ್ಗದರ್ಶನ ಸಾವಿರಾರು ಹೋರಾಟಗಾರರಿಗೆ, ಚಿಂತಕರಿಗೆ ಮತ್ತು ಆ ಕಾಲಘಟ್ಟದ ವಿದ್ಯಾರ್ಥಿ ಯುವಜನತೆಗೆ ಪ್ರೇರಣೆಯಾಗಿದ್ದನ್ನು ಇಂದು ಪುನಃಪುನಃ ಸ್ಮರಿಸಬೇಕಿದೆ.

ಸಮಾಜವಾದಿ ಚಳುವಳಿಯಲ್ಲಿ ಪ್ರೊ. ನಂಜುಂಡಸ್ವಾಮಿ, ಪಿ. ಲಂಕೇಶ್‌, ಕೃಷ್ಣ ಆಲನಹಳ್ಳಿ, ಯು.ಆರ್.‌ ಅನಂತಮೂರ್ತಿ, ಕಡಿದಾಳು ಶಾಮಣ್ಣ ಮುಂತಾದವರೊಡನೆ ಸಕ್ರಿಯ ಚಳುವಳಿಯಲ್ಲಿ ಧುಮುಕಿದ ರಾಮದಾಸ್‌ ದಲಿತ ಸಂಘರ್ಷ ಸಮಿತಿ, ಮಹಿಳಾ ಹೋರಾಟಗಳು ಹಾಗೂ ದಮನಿತ ಸಮುದಾಯಗಳ ಪಾಲಿಗೆ ಗಟ್ಟಿಧ್ವನಿಯಾಗಿ ಮೈಸೂರು ನಗರವನ್ನು ಸಮಾಜವಾದಿ ಚಳುವಳಿಯ ಕೇಂದ್ರ ಬಿಂದುವಾಗಿ ಪರಿವರ್ತಿಸಿದ್ದರು. ಹೋರಾಟಗಳ ಮುಂಚೂಣಿಯಲ್ಲಿದ್ದು ನಾಯಕತ್ವ ವಹಿಸುವುದಷ್ಟೇ ಅಲ್ಲದೆ, ಶೋಷಿತ ಸಮುದಾಯಗಳು ಎದುರಿಸುವ ಎಲ್ಲ ರೀತಿಯ ದೌರ್ಜನ್ಯ, ತಾರತಮ್ಯಗಳ ವಿರುದ್ಧವೂ ತಮ್ಮ ಪ್ರತಿರೋಧದ ಧ್ವನಿ ದಾಖಲಿಸುವ ಮೂಲಕ ಪ್ರೊ. ಕೆ. ರಾಮದಾಸ್‌ ಹೋರಾಟಗಾರರಿಗೆ, ಪ್ರಗತಿಪರ ಚಿಂತನೆಗೆ ಒಂದು ಹೊಸ ಆಯಾಮವನ್ನು ನೀಡಿದ್ದರು. ಮೈಸೂರಿನ ಸಮಾಜವಾದಿ – ಮಾರ್ಕ್ಸ್‌ವಾದಿ ಗೆಳೆಯರೊಡನೆ ಸೇರಿ ಪ್ರೊ. ಕೆ. ರಾಮದಾಸ್‌ ರೂಪಿಸಿದ ಸಮಾಜಮುಖಿ ವೇದಿಕೆಗಳು ಇಂದಿಗೂ ಸಕ್ರಿಯವಾಗಿವೆ.

ಕಣ್ಣೆದುರು ನಡೆಯುವ ಅನ್ಯಾಯಗಳಿಗೂ ಸ್ಪಂದಿಸದೆ ತಮ್ಮ ಸ್ವಾರ್ಥ ಬದುಕಿಗೇ ಅಂಟಿಕೊಂಡ ಜನಸಂಖ್ಯೆಯೇ ಹೆಚ್ಚಾಗುತ್ತಿರುವ ಸಮಕಾಲೀನ ಕಾಲಘಟ್ಟದಲ್ಲಿ, ಪ್ರೊ. ಕೆ. ರಾಮದಾಸ್‌ ನೆನಪಾಗುವುದು ಅನ್ಯಾಯಗಳ ವಿರುದ್ಧ ಅವರು ಎತ್ತುತ್ತಿದ್ದ ಗಟ್ಟಿಧ್ವನಿಗಾಗಿ. ಪ್ರತಿರೋಧದದನಿ ಎತ್ತುವುದೇ ಅಪರಾಧವಾಗಿ ಕಾಣುತ್ತಿರುವ ವರ್ತಮಾನದ ಪ್ರಕ್ಷುಬ್ಧ ವಾತಾವರಣದಲ್ಲಿ ಪ್ರೊ. ಕೆ. ರಾಮದಾಸ್‌ ಒಂದು ಪ್ರಖರ ಧ್ವನಿಯಾಗಿ, ಹೋರಾಟದ ಚಿಲುಮೆಯಾಗಿ, ಪ್ರತಿರೋಧದ ಸ್ಫೂರ್ತಿಯಾಗಿ ನಮ್ಮ ನಡುವೆ ಎಂದಿಗೂ ಜೀವಂತವಾಗಿಯೇ ಉಳಿಯುತ್ತಾರೆ. ಇಂದು ಮಾನವ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳು ಮತ್ತು ಸಾಂಸ್ಕೃತಿಕ ಸಿಕ್ಕುಗಳಿಂದ ಬಿಡಿಸಿಕೊಳ್ಳಲು ಪ್ರೊ. ರಾಮದಾಸ್‌ ಅವರ ಮರೆಯಾದ ಧ್ವನಿಯೂ ಸಹ ನಮ್ಮ ನಡುವೆ ಪ್ರತಿಧ್ವನಿಸುತ್ತಲೇ ಇರುತ್ತದೆ.

ಚಿರಸ್ಥಾಯಿಯಾದ ಈ ಪ್ರಖರ ಪ್ರತಿರೋಧದ ಧ್ವನಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಅಗತ್ಯವೂ ನಮಗಿದೆ. ಈ ನಿಟ್ಟಿನಲ್ಲಿ ಮೈಸೂರಿನ ದೇಸೀರಂಗ ಸಾಂಸ್ಕೃತಿಕ ಟ್ರಸ್ಟ್‌ (ರಿ) ಪ್ರತಿವರ್ಷದಂತೆ ಈ ವರ್ಷವೂ ಪ್ರೊ. ಕೆ. ರಾಮದಾಸ್‌ ನೆನಪಿನ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರೊ. ಕೆ. ರಾಮದಾಸ್‌ ಮೈಸೂರಿನ ಸಾಂಸ್ಕೃತಿಕ ಲೋಕದಲ್ಲಿ ಚಿರಸ್ಥಾಯಿಯಾಗಿದ್ದರೂ ಅವರನ್ನು ನೆನಪಿಸಿಕೊಳ್ಳುವ ನೈತಿಕ ಜವಾಬ್ದಾರಿ ನಮ್ಮದೂ ಆಗಿದೆ.

‍ಲೇಖಕರು admin j

June 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: