ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 3 ಮತ್ತೊಮ್ಮೆ ಸಿಂಗಲೀಲಾದಲ್ಲಿ ಲೀಲಾ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

18.3

ಎರಡನೆಯ ಸಲಕ್ಕೆ ಬಂಗಾಳಕ್ಕೆ ಬಂದೆ. ಹಿಂದಿನ ಸಿಂಗಲೀಲಾದ ಟೂರ್ ಮಾರ್ಗದರ್ಶಿ ಸಂದೀಪ್ ಜೊತೆ ಗಾಜಲಡೋಬದಲ್ಲಿ ದೋಣಿಯಾನ ಮಾಡುವಾಗ ಸಿಂಗಲೀಲಾ ಟೂರಿನ ಬಗ್ಗೆ ನಿಕ್ಕಿ ಮಾಡಿಕೊಂಡಿದ್ದೆ. ಸಿಂಗಲೀಲಾ ಜೊತೆಗೆ ರಾಂಗ್ಟಾಂಗ್-ಶಿವಕೋಲದ ಪ್ಲ್ಯಾನಿತ್ತು. ಭೂತಾನ್ ಪ್ರವಾಸ ಮುಗಿಸಿ ಕೊಲ್ಕೊತ್ತಾದಲ್ಲಿ ಇಳಿದವಳೇ ವಿಮಾನವೇರಿ ಬಾಗ್ಡೋಗ್ರಾಗೆ ತಲುಪಿದೆ.

ಸಂದೀಪ್ ನನಗೆ ಸುತ್ತಾಡಿಸಲು ಜೀಪ್ ತಂದಿದ್ದ. ನನಗೋ ಜೀಪುಗಳಿಗೆ ಹತ್ತುವುದು ಇಳಿಯೋದು ಕಷ್ಟ. ಆದರೂ ಹತ್ತಿದೆ, ಇಳಿದೆ. ರಾಂಗ್ಟಾಗ್ ಹಾಗೂ ಶಿವಕೋಲದಲ್ಲಿ ಅಡ್ಡಾಡಿದೆವು. Grey capped pigmy wood pecker, Large wood shrike, Spangled drongo, Lesser racket tailed drongo, Lesser necklaced laughing thrush, Barred cuckoo dove, Black stork ಹೊಸ ಹಕ್ಕಿ ಕಾಣಸಿಕ್ಕವು. ಗ್ರೇಕ್ಯಾಪ್ಡ್ ಪಿಗ್ಮಿ ಮರಕುಟುಕ ಮರಿಗೆ ತುತ್ತುಣಿಸುವುದರಲ್ಲಿ ಬ್ಯುಸಿಯಾಗಿ ನಮ್ಮ ಕಡೆಗೆ ನಮ್ಮ ಕ್ಯಾಮೆರಾ ಕಡೆಗೆ ತಲೆಯೆತ್ತಿ ನೋಡಲಿಲ್ಲ. Large wood shrike ಕ್ಲಿಕ್ ಪರವಾಗಿಲ್ಲ. Necklaced laughing thrush ಸಂಧಿಗಳಲ್ಲಿ ಕಾಣಸಿಕ್ಕಿತು. Black stork ಹಾರುವ ವೇಳೆಯಲ್ಲಿ ಹಿಡಿದೆ. Barred cuckoo dove ಸಮಯ ನೀಡಿತು.

ಸೂರ್ಯ ರೆಸ್ಟ್ ಪಡೆಯಲು ಇರುಳರಮನೆಗೆ ಓಡುತ್ತಿದ್ದ, ನಮ್ಮ ದಾರಿ ವಸತಿಯ ಕಡೆಗೆ ಇತ್ತು. ದಾರಿಯಲ್ಲಿ ಒಂದೆರಡು ಕಡೆ ಇಲ್ಲಿ ಅದಿದೆ, ಅಲ್ಲಿ ಇದಿದೆ ಎಂದು ನಿಲ್ಲಿಸಿ, ಪ್ಹಿ ಪ್ಹಿ ಎಂದು ಕಾಲರ್ಗೂಬೆಯ ತರಹಕ್ಕೆ ಕೂಗಿ ಯಾವುದೂ ಸಿಕ್ಕುತ್ತಿಲ್ಲ ಎಂಬ ವಿಷಾದದ ಧ್ವನಿಯಲ್ಲಿ ಉಸುರಿದ. ಸಂದೀಪ್ ಹಾಗೂ ಈ ಪ್ಹಿ ಪ್ಹಿ ಕೂಗು ಎರಡೂ ಅವಿನಾಭಾವ. ಸಂದೀಪ ಇದ್ದಲ್ಲಿ ಈ ಧ್ವನಿ ಖಡಾಖಂಡಿತ. ಕೇಳಿ ಕೇಳಿ ನನಗೂ ಬಹುತೇಕ ಹಾಗೆ ಸಿಳ್ಳೆ ಹೊಡೆಯೋದು ಅಭ್ಯಾಸ ಆಗಿಬಿಟ್ಟಿತು.

ಸಂದೀಪನನ್ನು ಕೇಳಿದೆ, ಮರುದಿನದ ಪ್ರಯಾಣಕ್ಕೆ ಅನುಕೂಲವಾಗುವಂತೆ ಹತ್ತಿರದಲ್ಲೇ ಉಳಿಯಲು ವ್ಯವಸ್ಥೆ ಮಾಡಿದ್ದರೆ ಬೆಳಿಗ್ಗೆ ಬೇಗ ಹೋಗಬಹುದಿತ್ತೆಂದು. ಆತನ ಉತ್ತರ ಅರ್ಥವಾಗಲಿಲ್ಲ. ಮಾರಾಯನ ತಲೆಯಲ್ಲಿ ಅದೇನು ಐಡಿಯಾ ಇರುತ್ತವೆಯೋ, ಹೇಗೆ ಕಾರ್ಯರೂಪಕ್ಕೆ ತರುತ್ತಾನೋ ಸೃಷ್ಟಿಕರ್ತನಿಗೆ ಗೊತ್ತು. ಎಪ್ಪತ್ತು ಕಿ.ಮೀ. ದೂರ ಪಯಣಿಸಿ ಗೊರುಮಾರದ ರೆಸಾರ್ಟಲ್ಲಿ ಪ್ರತಿಷ್ಠಾಪಿಸಿ, ಊಟಕ್ಕೆ ವ್ಯವಸ್ಥೆ ಮಾಡಿ ತಾನು ಬೆಳಿಗ್ಗೆ ಬೇಗ ಬರುತ್ತೇನೆ, ಇಲ್ಲೇ ಕೆಲವು ಹಕ್ಕಿಗಳಿವೆ ಅವನ್ನು ನೋಡಿ ಹೋಗೋಣವೆಂದು, ನಾನು ಇನ್ನೇನಾದರೂ ಕೇಳುವ ಮೊದಲೇ ಜಾಗ ಖಾಲಿ ಮಾಡಿದ.

ಬಂದ ಊಟ ಮಾಡಿ ಬೇಗ ಏಳುವ ಸಲುವಾಗಿ ನಿದ್ದೆ ಬರದಿದ್ದರೂ ಬೇಗ ಮಲಗಿದೆ. ಎದ್ದವಳೇ ಆಚೆ ಕಣ್ಣು ಆಡಿಸಿದೆ, ಹಕ್ಕಿ ಕಾಣಬಹುದಾ ಎಂದು. ರಿಸಾರ್ಟ್ ನವನಿರ್ಮಿತಿ ಆಗಿದ್ದರಿಂದ ಹಕ್ಕಿಗಳಿಗೆ ಅಲ್ಲಿಗೆ ಬರುವ ಪ್ರಲೋಭನೆ ಇರಲಿಲ್ಲ. ಸಂದೀಪ ಬಂದ ಕೂಡಲೇ ಹೊರಟೆ. ಹಕ್ಕಿ ಇವೆ ನೋಡಿ ಹೋಗೋಣ ಎಂದಿದ್ದ ಸಂದೀಪ ತುಟಿ ಎರಡು ಮಾಡಲೇ ಇಲ್ಲ. ನಾನಾಗಿ ಕೇಳಿದಾಗ ಪಕ್ಕದ ಕಾಂಪೌಂಡಿನ ಮೇಲೆ ಕುಳಿತ Red start ಕಡೆಗೆ ಕೈ ತೋರಿಸಿ ತೆಗೆಯುತ್ತೀರಾ ಎಂದ. ಅವನ ಈ ವರಸೆ ನೋಡಿ ಬೆಕ್ಕಸಬೆರಗಾಗಿ ʻಆ ಹಕ್ಕಿ ಕಾಂಪೌಂಡಲ್ಲೇ ಕುಳಿತಿರಲಿ, ನಾನ್ಯಾಕೆ ಅದನ್ನು ಓಡಿಸಲಿ, ನಡೆ ಮುಂದೆʼ ಎಂದೆ.

ಹೋಗ್ತಾ ಹೋಗ್ತಾ ಗಾಡಿ ನಿಧಾನಿಸಿ ನಿಂತಿತು. ಕಾರಣ ಕೇಳಿದ್ದಕ್ಕೆ ಉಳಿದಿದ್ದ ರೆಸಾರ್ಟಿನ ಮಾಲೀಕ, ಅವರ ಕುಟುಂಬ ನಮ್ಮೊಟ್ಟಿಗೆ ಬರುತ್ತದೆ, ಅದಕ್ಕೆ ಕಾಯುತ್ತಿದ್ದೇನೆಂದ. ಈತ ಅರೇಂಜ್ ಮಾಡಿದ exclusive ಟೂರ್ ಕಥೆಯ ವಿಶೇಷ ವೈಖರಿಯಿದು. ಸಂದೀಪ ಕ್ಯಾಮೆರಾ ಹೊತ್ತು ಓಡಿದ. ಏನೆಂದು ನೋಡಿದರೆ Common iora ಇತ್ತಲ್ಲಿ. ನಮ್ಮೂರಿನಲ್ಲೇ ಮಧುರಕಂಠ ಸಿಗುತ್ತಿತ್ತಲ್ಲ? ಸುಮ್ಮನಾದೆ.

ಬರುವವರು ಬಂದ ಬಳಿಕ ಪ್ರಯಾಣ ಮುಂದುವರೆಯಿತು ಮನೆಬಂಜನ್ ತನಕ ಕಾರು, ಜೀಪಿನಲ್ಲಿ. ಸುದೀಪನ ಕಾರಿನ ಯುವಸಾರಥಿ ನಮ್ಮನ್ನು ಕುಕ್ಕಿಸಿಕೊಂಡೆ ಕರೆತಂದಿದ್ದ. ಇದೇ ಜೀಪಿನಲ್ಲಿ ಸಿಂಗಲೀಲಾಗೂ ಹೋಗ್ತೀವಿ, ರೋವರಿಗಿಂತ ಜೀಪಿನಲ್ಲಿ ಹತ್ತಿ ಇಳಿಯುವುದು ಎಷ್ಟೋ ಮೇಲೆಂದು ಭಾವಿಸಿದ್ದೆ. ಆದರೆ ಮನೆಬಂಜನ್‌ನಲ್ಲಿ ಕೆಳಗಿಳಿಸಿ ಪುರ‍್ರೆಂದು ಹಾರಿಯೇಬಿಟ್ಟ. ರೋವರ್ ಹತ್ತಿ ಟುಮ್ಲಿಂಗ್ ಕಡೆಗೆ ಹೊರಟೆವು. ನಾನು ಮುಂದೆ ಕೂತೆ, ಕೊನೆಯ ಪಕ್ಷ ಮುಂದೆ ಹಿಡಿ ಹಿಡಿದು ಕೂರಬಹುದೆಂದು.

ಮೋಡ-ಮಂಜಿನ ವಾತಾವರಣದಲ್ಲಿ ಅಲ್ಲಲ್ಲಿ ಹಕ್ಕಿ ಸಿಕ್ಕಿದಾಗ ಗಾಡಿಯಿಂದ ಹಕ್ಕಿ ಕ್ಲಿಕ್ಕಿಸುವುದು, ಹೀಗೆ ಸಾಗಿತು ಪಯಣ. ಹಿಂದಿನ ಸಲ ಉಳಿದಿದ್ದ ಲಾಡ್ಜಿಗೆ ತಲುಪಿದೆವು. ಆಗ ಫೆಬ್ರವರಿಯಲ್ಲಿ ಬಂದಿದ್ದೆ, ಈಗ ಮಾರ್ಚಿನಲ್ಲಿ ಎನ್ನುವ ವ್ಯತ್ಯಾಸ ಬಿಟ್ಟರೆ ವಾತಾವರಣದಲ್ಲಿ ವ್ಯತ್ಯಾಸವಿರಲಿಲ್ಲ. ಆಗ ಬಂದ ದಿನವೂ ಅಲ್ಲಲ್ಲಿ ಹಿಮಪಾತವಾಗಿತ್ತು. ಈಗಲೂ ಅದೇ ದೃಶ್ಯಾವಳಿ. ಆವರಿಸುತ್ತಿದ್ದ ಫಾಗು, ಕೊರೆಯುತ್ತಿದ್ದ ಕುಳಿರ್ಗಾಳಿ ಮುಂದಿರುವುದೆಲ್ಲವನ್ನೂ ಮರೆಸಿ ಮೆರೆಯುತ್ತಿದ್ದವು.

ರೆಸಾರ್ಟಿನ ಒಡತಿ ಸ್ನೇಹಪೂರ್ಣ ನಗೆಬೀರಿ ಹಿಂದಿನ ಸಲ ಉಳಿದಿದ್ದ ಗ್ರೌಂಡ್ ಫ್ಲೋರಿನ ರೂಂ ಕೊಟ್ಟರು. ಸಂಜೆಗತ್ತಲಿಗೆ ಮುನ್ನ ಹಕ್ಕಿ ಅರಸಲು ಗಾಡಿಯೇರಿ ಹೊರಟೆವು. ಸಂದೀಪನ ವಾಹನ ವ್ಯವಸ್ಥೆ ಅಧ್ವಾನ. ಅವ ಸುಧಾರಿಸುವ ಲಕ್ಷಣ ಕಡಿಮೆ. ಎಲ್ಲರಿಗೂ ಒಂದೇ ಗಾಡಿ. ಅರಳಿದ Rhododendron ಕಂಡು ಅಲ್ಲಿ ಹಕ್ಕಿಗಳು ಇದ್ದೇ ಇರುತ್ತವೆಂದು ಇಳಿದೆವು.

ಹಕ್ಕಿಗಳು Rhododendron ಹೂವಳೊಡಗಿ ಮಕರಂದ ಹೀರುತ್ತವೆ. Rhododendron ಅನ್ನು ಮೊದಲು ನೋಡಿದ್ದು ಉತ್ತರಾಖಂಡದ Cheer pointನಲ್ಲಿ. ಸೀಜ಼ನ್ನಿನ ಕೊನೆಯಾಗಿದ್ದರಿಂದ ಅಲ್ಲಲ್ಲಿ ಒಂದೊಂದು ಹೂವಿತ್ತು. ಭೂತಾನಿನಲ್ಲಿ ಕಾಣಸಿಕ್ಕಿತ್ತು. ರೋಡೋಡೆಂಡ್ರಾನ್ ಅರಳಿರುತ್ತವೆ. ಹಕ್ಕಿ ಹೂವು ಒಟ್ಟಿಗೆ ತೆಗೆಯಬೇಕೆಂಬ ಆಸೆಯಿಂದ ಮಾರ್ಚಿಯಲ್ಲಿ ಮತ್ತೆ ಸಿಂಗಲೀಲಾಗೆ ಬಂದಿದ್ದೆ. ಸೀಜನ್ನಿನಲ್ಲಿ ಇಡೀ ಕಾಡಿಗೆ ಸೊಬಗು. ಬೆಣ್ಣೆ ತಿಂದು ಮೆತ್ತಿಕೊಂಡ ಮಕ್ಕಳ ಮುಖದಂತೆ ಹೂವಿನಲ್ಲಿ ಮುಖ ಹುದುಗಿಸಿ ಮೇಲೆತ್ತಿದ ಹಕ್ಕಿಗಳ ಮುಖ ಕಣ್ಣು ತುಂಬುವ ನೋಟ.

ಯೂಹಿನಾಗಳು ಹೂವಿನರಮನೆಯಲ್ಲಿ ಆರಾಮವಾಗಿ ಅನಂದದಮಲಿನಲ್ಲಿದ್ದವು. ಜೊತೆಗೆ barwing ಸೇರಿದ್ದವು. Warbler ಹೂ, ಎಲೆಗಳ ನಡುವೆ ಹುಡುಕಾಡುತ್ತಿದ್ದವು. ಕ್ಲಿಕ್ಕಿಸುತ್ತಿದ್ದರೂ ಬೆಳಕು ಸರಿಯಿರದ ಸಂಕಟ ಸುಡತೊಡಗಿತ್ತು. ಸ್ವಲ್ಪ ಮೇಲಿನ ದಾರಿ ಏರಿ ಮಗದಷ್ಟು ರೋಡೋಡೆಂಡ್ರನ್ ಹುಡುಕಿದೆವು. ಬೆಂಕಿಬಾಲದ ಸೂರಕ್ಕಿ ಗಂಡು ಹೆಣ್ಣು ಸುಳಿದು ಸೊಬಗಿನ ಸೋನೆಮಳೆ ಸುರಿಸಿದವು. ಗಂಡಿನ ಬಣ್ಣ ಥೇಟ್ ಬೆಂಕಿ ತುಣುಕಿನಂತಿತ್ತು. ಹಕ್ಕಿಗಳು ಒಂದೆಡೆ ಇರುತ್ತವೆಯೆ ಚಿತ್ರವಾಗುವತನಕ?, ಚಿತ್ರವಾಗಿ ತೃಪ್ತಿ ಕೊಡುವ ತನಕ ಮೂಡ್ ಹಾಳು ಮಾಡದೆ ಕೂರಬೇಕು ತಾನೆ. ಚಿತ್ತ ನಿರೋಧಿಸಬಲ್ಲ ಮನುಜರೇ ಚಿತ್ತಚಾಂಚಲ್ಯದಿಂದ ಕೂಡಿರುವಾಗ ಪಾಪ ಹಕ್ಕಿಗಳ ಪಾಡೇನು?

ಈ ಹುಡುಕಾಟದೊಳಗೆ ಮೋಹಕ ಪಚ್ಚೆವರ್ಣದ ಮೈ, ಕೆಂಪುಬಣ್ಣದ ಕೊರಳು ಬಾಲ, ನೆತ್ತಿಯ ಮೇಲೆ ದೃಷ್ಟಿಬೊಟ್ಟುಗಳಂತೆ ಕಪ್ಪು ಚುಕ್ಕೆಗಳುಳ್ಳ ಚಂದದ ಹಕ್ಕಿ Fire tailed Mezorin ಲೈಫರಾಯಿತು. ವರ್ಷಗಳಿಂದ ತಪಸ್ಸಿಗೆ ಕುಳಿತವರ ಬಳಿಗೆ ಹಸಿರು ಸೌಂದರ್ಯ ಎರಕಗೊಂಡ ಪಕ್ಷಿದೇವತೆ ಬಂದಂತಿತ್ತು. ಇನ್ನೂ ಚೆನ್ನಾಗಿ ಸಿಗಬೇಕಿತ್ತೆನಿಸಿದರೂ, ʻಆಸೆ ಪಡು, ಆದರೆ ಅತ್ಯಾಸೆ ಬೇಡʼ ಎಂದು ಸಾಂತ್ವನಗೊಳಿಸಿದೆ. ಜೊತೆಗೆ Rufous Breasted Thrush, Yellow browed Tit ಸಿಕ್ಕು ಖುಷಿ ಹೆಚ್ಚಿಸಿತು.

ಕತ್ತಲು ದಟ್ಟವಾದಂತೆ ಗಾಡಿ ವಸತಿಯತ್ತ ಮರಳಿತು, ಗುಡಿಗುಡಿಸುವ ಚಳಿಯೂ ಜೊತೆಗೆ ಬಂದಿತು. ಮೂರು ಹೊದಿಕೆಗಳೊಳಗೆ ಮೈಮುದುರಿದರೂ ಹಿಮಗಾಳಿಯ ಅಬ್ಬರ ತಗ್ಗಲಿಲ್ಲ. ಊಟ ರೂಮಿಗೆ ಬಂದಿತು, ಹೊದಿಕೆಯೊಳಗೆ ಮುದುರಿ ಕುಳಿತೆ ಹೊಟ್ಟೆಗಿಳಿಸಿದೆ. ಹ್ಞು ಹ್ಞು ಸೌಂಡಿನೊಳಗೆ ಸುವ್ವಿ ಹಾಡುತ್ತಾ ರಾತ್ರಿ ತಳ್ಳಿದೆ. ಬೆಳಿಗ್ಗೆ ಆದರೂ ಬೆಳಕು ಬಂದಿತೆನ್ನುವಂತಿರಲಿಲ್ಲ. ಆದರೂ ರೆಡಿ ಆದೆವು. ಸಂಡಕ್ಪು ಮಾರ್ಗದಲ್ಲಿ ಪಯಣ ಹೊರಟಿತು

ಕಾಯ್‌ಕಟ್ಟಾದಲ್ಲಿ ನೆಲದ ಮೇಲೆ ಕುಪ್ಪಳಿಸುತ್ತಿದ್ದ ಪುಟ್ಟಹಕ್ಕಿಗಳನ್ನು ಕಂಡು ಇಳಿದು ಕ್ಯಾಮೆರಾ ಸೆಟ್ ಮಾಡಿಕೊಂಡೆವು. Altier Accentor ಹಾಯ್ ಎಂದು ಕೈಬೀಸಿ ಅಲ್ಲಲ್ಲ ರೆಕ್ಕೆ ಬೀಸಿ ಸ್ವಾಗತವೆಂದವು. ರೋಡಿನಲ್ಲಿ ಬಿದ್ದುಕೊಂಡೆ ಹಿಡಿಗಾತ್ರದ ಹಕ್ಕಿಗಳ ಚಿತ್ರ ತೆಗೆದೆ. ಬಳಿಕ ಪೊದೆಯ ಸಂಧಿಯಲ್ಲಿ ಕಂಡೂ ಕಾಣದಂತೆ White browed bush robin ಲೈಫರ್ ಸಿಕ್ಕಿತು.

ಒಂದು ಗಂಟೆ ಅಡ್ಡಾಡಿದ ಬಳಿಕ ಹಿಮದ ದಾರಿಯಲ್ಲಿ ಸಂಡಕ್ಪು ತಲುಪಿದೆವು. ಹಿಮಾಲಯವೂ ನಾನಿದ್ದೇನೆ ನೋಡಿರೆಂದು ನಿಲ್ಲಿಸಿತು. ಅಲ್ಲಿದ್ದ ಹೊಟೇಲಿನೊಳಗೆ ಇಣುಕಿದೆವು ತಿನ್ನಲಲ್ಲ, ಅದರ ಹಿಂಭಾಗದಲ್ಲಿ ಕುಳಿತು ಹಕ್ಕಿಗೆ ಗುರಿಯಿಡಲು. ಭೂತಾನಿನಲ್ಲಿ ಕಂಡಿದ್ದ Red crossbeak ಗಂಡು ಹೆಣ್ಣುಗಳು, ʻತೆಗೆ ಲೀಲಮ್ಮಾ…ʼ ಎಂದು ಕ್ರಾಸ್ ಕೊಕ್ಕಿನ ಸಂಧಿಯಲ್ಲಿ ಕೂಗಿದಂತಾಗಿ ಕ್ಲಿಕ್ಕಿಸಿದೆ. ಚಿತ್ರ ತೆಗೆದ ಬಳಿಕ ಅದೇ ಹೊಟೇಲಿನಲ್ಲಿ ಹೊಟ್ಟೆಪಾಡು ಪೂರೈಸಿ ಮರಳಿದೆವು. ಮರಳುವ ದಾರಿಯಲ್ಲಿ ಸಂದೀಪನ ಕಿವಿಗೆ ರೆಡ್ ಪಾಂಡಾ ಸುದ್ದಿ ಬಿದ್ದಿದ್ದೇ ತಡ ಮೈಯೆಲ್ಲಾ ಕಣ್ಣಾದ. ಅವರ ಬಳಿ ಮಾತುಕತೆ ಚೌಕಾಸಿ ನಡೆಸಿ ಕೊನೆಗೆ ಒಪ್ಪಿ ಪ್ರತೀಕ್ ತಂಡದ ಜೊತೆ ಕಣಿವೆಯ ಕೆಳಗೆ ನನ್ನ ಕ್ಯಾಮೆರಾ ಸಮೇತ ಇಳಿದ. ಬನ್ನಿ ಜೋಪಾನವಾಗಿ ಕರೆದುಕೊಂಡು ಹೋಗುತ್ತೇನೆಂದು ಎಷ್ಟೇ ಅಭಯ ನೀಡಿ ಹಸ್ತ ಚಾಚಿದರೂ, ಈ ಬಡಪೆಟ್ಟಿಗೆ ಜೀವ ಬಿಲ್‌ಕುಲ್ ಒಪ್ಪದೆ ಗಾಡಿಯಲ್ಲೇ ಬಂಧಿತಳಾದೆ. ಕೆಳಗಿಳಿದವರು ಬೇಕೆನಿಸುವಷ್ಟು ಹೊತ್ತು ಪಾಂಡಾ ಸೆರೆಹಿಡಿದು ಸಂತೃಪ್ತ ವದನದೊಂದಿಗೆ ಮೇಲೆ ಬಂದರು. ಸಂದೀಪ್, ʻಅಮ್ಮಾ ಈ ಪಾಂಡಾ ಚಿತ್ರ ನೀವೂ ಬಳಸಿಕೊಳ್ಳಬಹುದುʼ ಎಂದ. ʻಕಣ್ಣಲ್ಲಿ ಕಾಣದ ಪಾಂಡಾವನ್ನು ನಾನು ತೆಗೆದ ಚಿತ್ರವೆನ್ನಲಾರೆʼ ಎಂದು ನಿರಾಕರಿಸಿದೆ. ಪಾಂಡಾ ನನ್ನೆದುರೇ ಬಂದಾಗ ಕ್ಲಿಕ್ ಮಾಡ್ತೀನಿ ಎಂದೆ ಆಶಾವಾದಿಯಾಗಿ.

ವಸತಿಗೆ ಮರಳಿದೆವು, ಆದರೆ ಟುಮ್ಲಿಂಗಿಗಲ್ಲ, ಗರ್‌ಬೈಸಿಗೆ. ಈ ಹಿಂದೆ ಗರ್‌ಬೈಸಿಗೆ ಬಂದಿದ್ದರೂ ಉಳಿದಿರಲಿಲ್ಲ. ಈ ಸಲ ನಮ್ಮ ಸ್ಟೇ ನೇಪಾಳದ ಗಡಿ ವಸತಿಯಲ್ಲಾಗಿತ್ತು. ನಾವು ಬರುವ ವೇಳೆಗೆ ಮಳೆಯೂ ಕಂಪನಿ ಕೊಟ್ಟು ವಸತಿಗೃಹದ ಸುತ್ತಮುತ್ತ ಠಳಾಯಿಸಿತು. ಕಿಟಿಕಿಯಿಂದಲೇ ಏನಾದರೂ ಸಿಕ್ಕರೆ ಅಂತಾ ಕದ ತೆರೆದರೆ ಮಳೆ ಒಳಗೆ ಬರ‍್ತೀನೆಂದು ನುಗ್ಗಿ ಬರುತ್ತಿತ್ತು. ಬಾಗಿಲು ಬಂಧಿಸಿ ನನ್ನನ್ನೂ ರಗ್ಗು ಶಾಲುಗಳೊಳಗೆ ಬಂಧಿಸಿಕೊಂಡೆ ಎನ್ನುವಲ್ಲಿಗೆ ಆ ದಿನ ಸಂಜೆಯ ಹಕ್ಕಿ ಹುಡುಕಾಟದ ದಾರಿ ಕಂಪ್ಲೀಟಾಗಿ ಕ್ಲೋಸ್ ಆಯಿತು.

ಮರುದಿನ ಮತ್ತೆ ಕಾಯ್‌ಕಟ್ಟಾದ ಹಾದಿಗೆ ಪಯಣ ಸಿದ್ಧವಿತ್ತು. ಆದರೆ ಈ ಸಲ ರಸ್ತೆ ಬದಿಯಲ್ಲಿ ಹಕ್ಕಿ ಹುಡುಕದೆ ಅಲ್ಲಿದ್ದ ಹೈಡಿಗೆ ಕೆಲವು ಹಕ್ಕಿ ಬರುತ್ತವೆ, ಮೆಲ್ಲಗೆ ಇಳಿದು ಬನ್ನಿ ಎಂದು ಕ್ಯಾಮೆರಾ ಹೊತ್ತು ಸಂದೀಪ ಮೆಟ್ಟಿಲು ಇಳಿಸಿಸಿದ. ನಾನು ತುದಿಗಾಲಿನಲ್ಲಿ ನಿಂತರೂ ಕಾಣದಷ್ಟು ಎತ್ತರದ ಹೈಡಿನ ಕಿಟಕಿ ಸಂಧಿಯಲ್ಲಿ ಇಣುಕಿದರೆ ಅಡುಗೆಮನೆಯಿಂದ ಬರುತ್ತಿದ್ದ ನೀರು, ಅನ್ನಕ್ಕೆ ಕೆಲ ಹಕ್ಕಿಗಳು ಬಂದರೆ, ಅಲ್ಲಿದ್ದ ಬಿದಿರಿನಲ್ಲಿ ಮತ್ತಷ್ಟು ಬರುತ್ತಿದ್ದವು. ʻಹೈಡಿನಲ್ಲಿ ಕುಳಿತು ತೆಗೆಯಲಾರೆʼ ಎಂದು ಆಚೆ ಬಂದು ಕೊಚ್ಚೆಮಣ್ಣಿನ ಮೇಲೆ ಕಾಲುಚಾಚಿ ಆಸೀನಳಾಗಿ ಕ್ಯಾಮೆರಾ ಹಿಡಿದೆ. ಹೇಗೆ ಸ್ಟಿಲ್ ಆಗಿ ಕುಳಿತೆನೆಂದರೆ ಕೆಲ ಹಕ್ಕಿಗಳು ಕ್ಯಾಮೆರಾ ಅಳತೆಗೆ ಸಿಗದಂತೆ ಕಾಲಿನ ಸಮೀಪವೂ ಬಂದವು. Spotted Laughing Thrush, Chestnut headed Laughing thrush ಲೈಫರ್‌ಗಳಾಗಿ ಪೈಸಾ ವಸೂಲ್ ಆಗಿತ್ತು.

ಮರಳಿ ಗರ್‌ಬೈಸಿಗೆ ಬಂದು ಆಗಾಗ ಹನಿಯುತ್ತಿದ್ದ ವಾತಾವರಣದಲ್ಲಿಯೇ ಅತ್ತಿತ್ತ ಓಡಾಡುತ್ತಾ ಕೆಲವು ಹಕ್ಕಿಗಳಿಗೆ ಹೆಚ್ಚು ಐಎಸ್‌ಓ ಹಾಕಿ ಕ್ಲಿಕ್ ಮಾಡಿದೆ. Golden breasted Fulvetta, Grey sided Bush warbler, Chestnut crowned Warbler, Rufous winged fulvetta, Whistlers Warbler, Chestnut headed tesia, Rufous vented Yuhina, Rufous Fronted Tit. ಅರೆರೆ ಈ ಇಕ್ಕಟ್ಟಿನಲ್ಲೇ ಇಷ್ಟು ಲೈಫರ್‌. ಆದರೆ ವಾತಾವರಣ ಸರಿ ಇದ್ದಿದ್ದರೆ ಎಂಬ ಕನಸೂ ಕೆಣಕಿ ಕೇಳುತ್ತಿತ್ತು.

ಆ ಟೂರಿನ ಕೊನೆಯ ಹಕ್ಕಿ ಕ್ಲಿಕ್ಕು ಮುಗಿದಿದ್ದವು. ಮರುದಿನ ಬೆಳಿಗ್ಗೆ ಬಾಗ್ಡೋಗ್ರಾಗೆ ಪಯಣ ಶುರುವಾಯಿತು. ದಾರಿಯಲ್ಲಿ ಸಂದೀಪ್ ಅಮ್ಮಾ Satayr Tragopan ಹೆಣ್ಣು ಹೋಗ್ತಾ ಇದೆ ಎಂದ. ರೆಕಾರ್ಡ್ ಷಾಟ್ ಆಯಿತು ಅಷ್ಟೆ. ಅದೂ ಲೈಫರ್ ಕೊನೆಯ ದಿನದಂದು. ದಾರಿಯಲ್ಲಿ ತಿಂಡಿ ತಿಂದುಬಿಡಿ ಎಂದು ಮ್ಯಾಗಿ ಮಾಡಿಸಿ ತಂದುಕೊಟ್ಟ. ಕೈಗೆ ಬಂದ ಮ್ಯಾಗಿಯಲ್ಲಿ ಮೊಟ್ಟೆಯೂ ಇಣುಕಿ, ʻನೀ ನನ್ನನ್ನು ನಿಜವಾಗಿಯೂ ತಿನ್ನುವೆಯಾ…?ʼ ಎಂದು ಕೆಣಕಿತು. ಸಂದೀಪ ಸಾರಿ ಎಂದೆ, ಆತನೂ ಸಾರಿ ಅಮ್ಮಾ ಎಂದು ಬೌಲ್ ಮರಳಿಸಿ ಬೇರೆ ಮ್ಯಾಗಿ ಮಾಡಿಸಿಕೊಟ್ಟ. ಮನೇಬಂಜನ್ ತಲುಪಿದರೂ ನಮ್ಮ ಜೀಪೂ ಬಂದೇ ಇರಲಿಲ್ಲ. ನನಗೋ ಟೆನ್ಷನ್ ಶುರುವಾಯಿತು, ಸಂಜೆ ಫ್ಲೈಟ್ ಸಮಯಕ್ಕೆ ತಲುಪುತ್ತೀನಾ ಇಲ್ಲವಾ ಎಂದು. ಸಂದೀಪ ಯಥಾಪ್ರಕಾರ ಡೋನ್ಟ್ ವರಿ ಅಮ್ಮಾ… ಎಂದ. ಆದರೆ ನನ್ನ ವರಿ ಕೊರೆಯುತ್ತಲೇ ಇತ್ತು. ಕೊನೆಗೂ ಬಂದ ಸಾರಥಿ ನಾಗಾಲೋಟದಲ್ಲಿ ಓಡಿಸಿ ಬಾಗ್ಡೋಗ್ರಾ ತಲುಪಿಸಿದ ಎನ್ನುವಲ್ಲಿಗೆ ಸಂದೀಪನ ಜೊತೆಗೆ ಬಂಗಾಳದ ಪ್ರವಾಸವೊಂದು ಮುಕ್ತಾಯವಾಯಿತು.

‍ಲೇಖಕರು avadhi

June 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: