ಜಿ ಎನ್ ನಾಗರಾಜ್ ಅಂಕಣ: ವೈದ್ಯರ, ರಸಸಿದ್ಧರ ರಸಶಾಲೆಯಲ್ಲಿ ರಸಾಯನಶಾಸ್ತ್ರ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ವೈದ್ಯಕೀಯವೇ ರಸಾಯನಶಾಸ್ತ್ರದ ಬೆಳವಣಿಗೆಯ ಮೂಲ ಕಾರಣ. ಇಡೀ ದೇಹವೇ ವಿವಿಧ ರೀತಿಯ ರಸಾಯನಕ್ರಿಯೆಗಳ ಸಂಕೀರ್ಣ ಸಮುಚ್ಛಯ ಎಂಬ ಅಪ್ರಜ್ಞಾಪೂರ್ವಕ ರೂಢಿಗತ ಕ್ರಿಯೆಗಳು ಪ್ರಜ್ಞಾಪೂರ್ವಕವಾಗುವುದೇ ವೈದ್ಯಕೀಯದ ವೈಜ್ಞಾನಿಕ ಅಡಿಪಾಯ. ಮಾನವರ  ದೇಹದ ಹುಟ್ಟು, ಬೆಳವಣಿಗೆ, ಅದರ ಸಾಮರ್ಥ್ಯ, ಕೊರತೆಗಳು ಅವರು ಸೇವಿಸುವ ಆಹಾರದ ಮೇಲೆ ಅವಲಂಬಿಸಿದೆ. ಈ ಆಹಾರದ ಬುತ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ವಿಧವಿಧ ಆಹಾರವಸ್ತುಗಳನ್ನು ಅನ್ವೇಷಿಸಿ ಸೇರಿಸಿಕೊಳ್ಳುತ್ತಾ ಹೋಗುವ ಕ್ರಿಯೆಯಲ್ಲಿ ರಸಾಯನಶಾಸ್ತ್ರದ ಬೀಜಗಳು ಅಡಗಿವೆ. ಯಾವುದನ್ನು ಸೇವಿಸಬಹುದು, ಬಾರದು ಎಂಬ ಅರಿವನ್ನು ಅನುಭವದ ಆಧಾರದ ಮೇಲೆ ಪಡೆಯುವುದು ಆಯಾ ವಸ್ತುಗಳ ಒಳರಾಸಾಯನಿಕ ಸಂರಚನೆಗೆ ತೋರುಬೆರಳಲ್ಲವೇ!

ಆಹಾರದ ಬುತ್ತಿಯನ್ನು ವಿಸ್ತರಿಸಿಕೊಳ್ಳುವ ಸಂದರ್ಭದಲ್ಲಿ ಬೇಯಿಸುವುದು, ಸುಡುವುದು ಎಂಬುದು ಆಯಾ ವಸ್ತುಗಳನ್ನು ಅರಿಗಿಸಿಕೊಳ್ಳಲಾಗುವ ರಾಸಾಯನಿಕಕ್ರಿಯೆಗಳಿಗೆ ಒಳಪಡಿಸುತ್ತದೆ. ಅದಕ್ಕಿಂತ ಮಿಗಿಲಾಗಿ ಈ ಆಹಾರವಸ್ತುಗಳನ್ನು ಒಂದರ ಜೊತೆ ಮತ್ತೊಂದನ್ನು ಬೆರೆಸಿ ಬೇಯಿಸುವುದರಿಂದ ಆಯಾ ವಸ್ತುಗಳ ಮೂಲ ಗುಣ, ರುಚಿಗಳಲ್ಲಿ ಮಾರ್ಪಾಟಾಗುತ್ತದೆ ಎಂದು ಕಂಡುಕೊಂಡದ್ದು ಮತ್ತೊಂದು ಹೆಜ್ಜೆ. ಅದರಲ್ಲಿ ಉಪ್ಪನ್ನು ಬಳಸಲಾರಂಭಿಸಿದ್ದು ಒಂದು ಮುಖ್ಯ ಹೆಜ್ಜೆ. ಉಪ್ಪು, ಹುಳಿ, ಖಾರಗಳ ಸಂಯೋಜನೆಯನ್ನು ಕಂಡುಕೊಂಡದ್ದು ಒಂದು ರಾಸಾಯನಿಕ ಶೋಧವೇ ಅಲ್ಲವೇ! ಇದು ಮಾನವರ ಆಹಾರದ ಬುತ್ತಿಯನ್ನು ಎಷ್ಟೊಂದು ವಿಸ್ತರಿಸಿಬಿಟ್ಟಿದೆ ಮತ್ತು ಆಹಾರವನ್ನು ಎಷ್ಟೊಂದು ರುಚಿಕರವಾಗಿಸಿದೆ! 

ಅಷ್ಟೇ ಅಲ್ಲದೆ ಉಪ್ಪಿನಕಾಯಿ, ಉಪ್ಪೂರಿಗಳ ರೂಪದಲ್ಲಿ  ಆಹಾರವನ್ನು ಸಂರಕ್ಷಿಸಿಡಲು ಕೂಡಾ ಎಷ್ಟೊಂದು ಪ್ರಯೋಜನಕಾರಿ. ಔಷಧಿಯಾಗಿ ಕೂಡಾ ಉಪ್ಪನ್ನು ಬಳಸಲಾಗುತ್ತದೆ. ಪ್ರಾಣಿಗಳ ಚರ್ಮಗಳನ್ನು ಸಂಸ್ಕರಿಸುವಾಗಲೂ ಉಪ್ಪು ಪ್ರಯೋಜನಕ್ಕೆ ಬರುತ್ತದೆ.
ಹೀಗೆ ಉಪ್ಪು, ಮಾನವರು ಮೊದಲು ಉಪಯೋಗಿಸಿದ ನಿರ್ದಿಷ್ಟ ರಸಾಯನಿಕ. ಚೀನಾದಲ್ಲಿ ಕ್ರಿಪೂ 4700ರ  ವೇಳೆಗೆ 40 ರೀತಿಯ ಉಪ್ಪನ್ನು ಗುರುತಿಸಲಾಗಿತ್ತಂತೆ. ಪ್ರಾಮುಖ್ಯತೆ ಎಷ್ಟಿತ್ತೆಂದರೆ ಅದನ್ನು ನಾಣ್ಯವಾಗಿ ಬಳಸಲಾಗುತ್ತಿತ್ತು. ಸಂಬಳವಾಗಿ ಕೂಡಾ ಕೊಡಲಾಗುತ್ತಿತ್ತು. Salary ಎಂಬ ಪದ ಹುಟ್ಟಿದ್ದೇ saltನಿಂದ ಎಂದು ಹೇಳಲಾಗಿದೆ. ಎಷ್ಟೋ ನಗರಗಳು, ಕೆಲವು ಇಡೀ ದೇಶಗಳು ಕೇವಲ ಉಪ್ಪಿನ ಗಣಿಗಳಾಗಿ ಅಥವಾ ಉಪ್ಪಿನ ಉತ್ಪಾದನೆಯಿಂದಲೇ ಬೆಳೆದಿವೆ.

ಭಾರತದಲ್ಲಿಯೂ ಉಪ್ಪಿನ ಪ್ರಾಚೀನ ಉತ್ಪಾದನೆಯನ್ನು ಕಛ್‌ ಮರುಭೂಮಿ ಪ್ರದೇಶದಲ್ಲಿ ಶೋಧಗಳು ತಿಳಿಸಿವೆ.
ಹೀಗೆ ಉಪ್ಪನ್ನು ವಿವಿಧ ರೀತಿಯಲ್ಲಿ ಅಡುಗೆಗಳಲ್ಲಿ ಬಳಸಿದ ಹೆಂಗಸರೇ ಜಗತ್ತಿನ ಮೊದಲ ರಸಾಯನ ವಿಜ್ಞಾನಿಗಳೆನ್ನಬಹುದೇ!? ಜೊತೆಗೆ ಉಪ್ಪು‌, ಹುಳಿ, ಖಾರದ ರಸಾಯನಿಕಕ್ರಿಯೆಯನ್ನು ಕಂಡುಹಿಡಿದವರು, ಆಹಾರಪದಾರ್ಥಗಳನ್ನು ನಾಶ ಮಾಡುವ ಬ್ಯಾಕ್ಟೀರಿಯಾ ಮೊದಲಾದ, ಅಂದು ಗೊತ್ತಿರದ ಜೀವಿಗಳ ವಿರುದ್ಧದ ರಾಸಾಯನಿಕ ಅಸ್ತ್ರವಾಗಿ ಅದನ್ನು ಉಪ್ಪಿನಕಾಯಿಯಲ್ಲಿ ಬಳಸಿದವರೂ,  ಹಾಲು ಮೊಸರಾಗುವುದನ್ನು, ಇಡ್ಲಿ, ದೋಸೆಗಳಲ್ಲಿ ಹುದುಗು ಬರುವುದನ್ನು ಗಮನಿಸಿ ಉಪಯೋಗಿಸಿದವರೂ‌ ಅವರೇ ಅಲ್ಲವೇ? ಮದ್ಯ, ಪಾನೀಯಗಳ ತಯಾರಿಕೆಯಲ್ಲಿ ಕೂಡ ಈ ವಿಧಾನವನ್ನು ಅವರೇ  ಮೊದಲು ಉಪಯೋಗಿಸಿರಬಹುದು.

ವಿವಿಧ ರೀತಿಯ ಉಪ್ಪುಗಳು ಬೇರೆ ಬೇರೆ ರುಚಿ, ಬೇರೆ ಬೇರೆ ಗುಣಗಳನ್ನು ಹೊಂದಿರುತ್ತವೆಂದು ನಂತರ ಕಂಡುಕೊಳ್ಳಲಾಯಿತು. ಅವುಗಳನ್ನು‌ ಲವಣಗಳೆಂದು ಹೆಸರಿಸಲಾಯಿತು. ವೈದ್ಯಕೀಯದಲ್ಲಿ ವಿವಿಧ ಲವಣಗಳು  ಬಹಳ ಉಪಯುಕ್ತವಾಗಿವೆ. ಚರಕ ಹಾಗೂ ಸುಶ್ರುತಸಂಹಿತೆಗಳು ಸೈಂಧವ, ಸಮುದ್ರ, ಸೌವಾರ್ಚ, ವಿಡ, ಔದ್ಬಿದ ಎಂಬ ಐದು ವಿಧದ ಲವಣಗಳನ್ನು, ಅವುಗಳ ವಿವಿಧ ವೈದ್ಯಕೀಯ ಉಪಯೋಗಗಳನ್ನೂ ವಿವರಿಸಿದೆ. ಇವು ಸೋಡಿಯಂಕ್ಲೋರೈಡ್ ಎಂಬ ರಾಸಾಯನಿಕದ ವಿವಿಧ ರೂಪಗಳಾದರೂ ಅದರ ಜೊತೆಗೆ ಅಲ್ಪಾಂಶದಲ್ಲಿ ಬೇರೆ ಬೇರೆ ಲೋಹಗಳ ಸಂಯುಕ್ತಗಳನ್ನು ಒಳಗೊಂಡಿರುತ್ತಿದ್ದವು.

ಹಾಗೆಯ ಆದಿಮಾನವರ ಕಾಲದಿಂದ ಬಳಸಲ್ಪಡುತ್ತಿದ್ದ ಪಾಕ ವಿಧಾನಗಳು ವಿವಿಧ ಗಿಡಮೂಲಿಕೆಗಳನ್ನು, ತೊಗಟೆಗಳನ್ನೂ ಜಜ್ಜುವ, ಕುಟ್ಟುವ, ಬೇಯಿಸುವ ಕ್ರಿಯೆಗಳ ಮೂಲಕ ಔಷಧಿಗಳ ತಯಾರಿಕೆಗೆ ಇಂಬುಕೊಟ್ಟಿವೆ. ಆ ಮೂಲಕ ವಿವಿಧ ಸಸ್ಯ, ಪ್ರಾಣಿ ಮೂಲಗಳಿಂದ ರೋಗ ಚಿಕಿತ್ಸೆಗೆ ಉಪಯುಕ್ತವಾದ ಕ್ರಿಯಾಶೀಲ ಸಾರವನ್ನು ಹೊರತೆಗೆಯಲು ಪ್ರಯತ್ನಿಸಲಾಗಿದೆ. ಅಲ್ಲದೆ ವಿವಿಧ ಗಿಡಮೂಲಿಕೆಗಳನ್ನು ಬೆರೆಸಿ ಬೇಯಿಸಿ ತಯಾರಿಸಿದ ಸಾರಗಳಿಗೆ ಎಡೆಮಾಡಿವೆ.

ಚರಕ, ಸುಶ್ರುತಸಂಹಿತೆಗಳಲ್ಲಿ ಹೀಗೆ ತಯಾರಿಸಿದ ವಿವಿಧ ಕ್ಷಾರಗಳ ಬಗ್ಗೆ, ಅವುಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ವಿವರಣೆಗಳಿವೆ. ಹೀಗೆ ತಯಾರಿಸುವಾಗ ಕೆಲವನ್ನು ನೀರಿನಲ್ಲಿ, ಮತ್ತೆ ಕೆಲವನ್ನು ಗಂಜಲದಲ್ಲಿ, ಎಣ್ಣೆ ಅಥವಾ ತುಪ್ಪದಲ್ಲಿ ಬೇಯಿಸುವ ವಿಧಾನಗಳನ್ನು ಅನುಸರಿಸಲಾಗಿದೆ. ಈ ವಿಧಾನಗಳಲ್ಲಿ ಉಪಯೋಗಿಸಿದ ದ್ರವವೇ ಅವುಗಳ ಫಲವಾಗಿ ಸಿಗುವ ದ್ರಾವಣಗಳ ರಾಸಾಯನಿಕಗಳನ್ನು ನಿರ್ದಿಷ್ಟಗೊಳಿಸುತ್ತವೆ. ಅವುಗಳ ರಾಸಾಯನಿಕ ಕ್ರಿಯೆಗಳ ಸ್ವರೂಪವನ್ನು ಸ್ವಲ್ಪಮಟ್ಟಿಗೆ ಹೇಳುತ್ತವೆ. ಗಂಜಲದಲ್ಲಿರುವ ಯೂರಿಕ್ ಆಸಿಡ್ ಕ್ಷಾರಗಳೊಡನೆ ಬೆರೆತು ಬೇರೆಯೇ ವಸ್ತು ದೊರೆತು ಚಿಕಿತ್ಸೆಗೆ ನೆರವಾಗುವ ಸೂಚನೆ ಇದು.

ಭಾರತದ ರಸಾಯನಶಾಸ್ತ್ರದ ಇತಿಹಾಸವನ್ನು ವಿವರವಾಗಿ ಅನ್ವೇಷಿಸಿದ ಆಚಾರ್ಯ ಪ್ರಫುಲ್ಲ ಚಂದ್ರ ರೇಯವರು ಈ ಸಂಹಿತೆಗಳಲ್ಲಿ ಅಡಕವಾಗಿರುವ ರಸಾಯನಶಾಸ್ತ್ರದ ಬಗ್ಗೆ, ಅವುಗಳಲ್ಲಿ ವಿವರಿಸಲ್ಪಟ್ಟ ವಿವಿಧ ರೀತಿಯ ಕ್ಷಾರಗಳ ತಯಾರಿಕೆಯ ಬಗ್ಗೆ ದಾಖಲಿಸಿದ್ದಾರೆ.
ಈ ಕ್ಷಾರಗಳನ್ನು ದೇಹದ ಹೊರಮೈಯಲ್ಲಿ ಮತ್ತು ಒಳಗೆ ಸೇವಿಸುವ ಎರಡೂ ರೀತಿಯ ಚಿಕಿತ್ಸೆಗೆ ವಿವಿಧ ವಸ್ತುಗಳಿಂದ ತಯಾರಿಸಲಾಗುತ್ತಿತ್ತು.

ಅದರಲ್ಲಿ ಒಂದು ಕ್ಷಾರವನ್ನು ತಯಾರಿಸುವ ವಿಧಾನಬುದ್ಧ ಪೂರ್ವದ ರಸಾಯನಶಾಸ್ತ್ರ ವಿಧಾನಗಳನ್ನು ಪರಿಚಯ ಮಾಡಿಸುತ್ತದೆ. ಮುತ್ತುಗದ ಮರ ಮೊದಲಾದ ವಿವಿಧ ಮರದ ತುಂಡುಗಳಿಂದ ಬಹು ಶ್ರಮ ಬೇಡುವ ಕ್ರಿಯೆಗಳ ಮೂಲಕ ವಿವಿಧ ಕ್ಷಾರಗಳನ್ನು ಪಡೆಯಲಾಗುತ್ತಿತ್ತು.

ರಸವಾದಿಗಳು – ಮಧ್ಯಕಾಲೀನ‌ ಭಾರತದಲ್ಲಿ ಕ್ರಿಶ ಎಂಟರಿಂದ ಹದಿನೈದನೆಯ ಶತಮಾನದ ನಡುವೆ ತಾಂತ್ರಿಕ‌ ಪಂಥಗಳಿಂದ ರಸವಿದ್ಯೆ, ರಸವಾದಿಗಳು, ರಸಶಾಸ್ತ್ರ ಎಂಬ ಹೊಸ ಪ್ರವೃತ್ತಿ ಉಗಮಗೊಂಡಿತು. ಇದು  ಚರಕ, ಸುಶ್ರುತರ ವೈದ್ಯಕೀಯ ರಸಾಯನಶಾಸ್ತ್ರವನ್ನು ಉನ್ನತ ಮಟ್ಟಕ್ಕೆ ಒಯ್ದಿತು.

ರಸವಾದಿಗಳು ತಾವು ಬಳಸುತ್ತಿದ್ದ ವಸ್ತುಗಳನ್ನು ಮಹಾರಸ, ಉಪರಸ, ಧಾತುಗಳು, ವಿಷಗಳು, ಯಂತ್ರಗಳು (ಉಪಕರಣಗಳು) ಎಂದು ವ್ಯವಸ್ಥಿತವಾಗಿ ವಿಂಗಡಿಸಿಕೊಂಡಿದ್ದಾರೆ. ಮಹಾರಸ ಎಂದರೆ ರಸವಾದಿಗಳಿಗೆ ಅಮೂಲ್ಯವಾದ ಪಾದರಸ.
ಉಪರಸ ಎಂಬ ವಿಭಾಗದಲ್ಲಿ ಮೈಕಾ (ಆಭ್ರಕ), ಪೈರೈಟ್ಸ್ (ಮಾಕ್ಷಿಕ ), ಚಾಲ್ಕೋ ಪೈರೈಟ್ಸ್ (ವಿಮಲ ), ಕಿಂಬರ್ಲೈಟ್ (ವೈಕಾಯಕ), ಸಲ್ಫೈಡ್ (ಗಂಧಕ), ಜಿಂಕ್ ಕಾರ್ಬನೇಟ್ (ಚವಲ), ಬಿಟುಮಿನ್ ( ಅದ್ರಿಜ) ಕಬ್ಬಿಣದಅದಿರು ಹೆಮಟೈಟ್, ಕಬ್ಬಿಣದ ಕಾರ್ಬೋನೇಟ್ ಅಥವಾ ಸಲ್ಫೈಡ್, ಆಂಟಿಮನಿ, ಆರ್ಸೆನಿಕ್‌ಗಳ ಸಂಯುಕ್ತಗಳು ಮುಂತಾದವು ಸೇರುತ್ತವೆ. ಧಾತುಗಳಲ್ಲಿ ಕಬ್ಬಿಣ, ತಾಮ್ರ, ಬೆಳ್ಳಿ, ಬಂಗಾರ ಮೊದಲಾದವು ಧಾತುಗಳೆಂದು ಕಂಚು, ಹಿತ್ತಾಳೆ ಮೊದಲಾದವು ಮಿಶ್ರಧಾತುಗಳೆಂದೂ ವಿಂಗಡಿಸಲ್ಪಟ್ಟಿವೆ.

ರಸಶಾಸ್ತ್ರಜ್ಞರು ಹಲವು ರಾಸಾಯನಿಕ ವಿಧಾನಗಳನ್ನು ಬಳಸುತ್ತಿದ್ದರು. ರಸಹೃದಯ, ರಸಪ್ರಕಾಶ ಸುಧಾಕರ ಎಂಬ ಗ್ರಂಥಗಳಲ್ಲಿ ಅಂದು ಬಳಸಲಾಗುತ್ತಿದ್ದ 18 ವಿಧಾನಗಳನ್ನು ವಿವರಿಸಲಾಗಿದೆ. ಅವು ಈ ಕೆಳಗಿನಂತಿವೆ:

ಸ್ವೇದನಮ್ – ಉಗಿ ಹಾಯಿಸುವುದು
ಮರ್ದನಮ್ – ಅರೆಯುವುದು
ಪಾತನಮ್ – ಭಟ್ಟಿ ಇಳಿಸುವುದು
ರೋಧನಮ್ – ಪುಟಕ್ಕೆ ಹಾಕುವುದು
ನಿಯಮನಮ್- ನಿಯಂತ್ರದಲ್ಲಿಡುವುದು
ಸಂದೀಪನಮ್ – ಉತ್ತೇಜಿಸುವುದು ಅಥವಾ ಹೊತ್ತಿಸುವುದು
ಗಗನಗ್ರಾಸ – ಸುಟ್ಟು ಹಾಕುವುದು
ಚಾರಣಮ್ – ಬೆರೆಸುವುದು
ಗರ್ಭದ್ರುತಿ – ಅಂತರಿಕ ದ್ರವೀಕರಣ
ಬಾಹ್ಯದ್ರುತಿ – ಹೊರಗೆ ದ್ರವೀಕರಣ
ಜೀರಣಮ್ – ಅರಗಿಸುವುದು
ರಂಜನಮ್ – ಬಣ್ಣ ತರಿಸುವುದು
ಸಾರಣಮ್ – ರೂಪಾಂತರಗೊಳಿಸುವುದಕ್ಕೆ‌ ಸಿದ್ಧಗೊಳಿಸುವುದು
ಸಂಕ್ರಮಣಮ್ – ರೂಪಾಂತರಗೊಳಿಸುವ ಸಾಮಾರ್ಥ್ಯವನ್ನು ಪಡೆಯುವುದು
ಮೂರ್ಛನಮ್ – ವಸ್ತುವು ತನ್ನ ರೂಪ ಕಳೆದುಕೊಳ್ಳುವಂತೆ ಮಾಡುವುದು
ಉತ್ಥಾಪನಮ್ – ಅದು ತನ್ನ ರೂಪ ಮರಳಿ ಪಡೆಯುವಂತೆ ಮಾಡುವುದು
ವೇಧನಮ್ – ತಯಾರಾದ ವಸ್ತುವಿನ ಸಾಮರ್ಥ್ಯವನ್ನು ಪರೀಕ್ಷಿಸುವುದು. ರಾಸಾಯನಿಕಶಾಸ್ತ್ರದಲ್ಲಿ ವಿವಿಧ ಹಂತಗಳಲ್ಲಿ ಬಳಸುವ ಈ ಕ್ರಿಯೆಗಳನ್ನು ರೂಪಿಸಿಕೊಂಡಿದ್ದರು. ಮತ್ತು‌ ಅವುಗಳನ್ನು ವಿವರಿಸಿದ್ದಾರೆ ಎಂಬುದು ಗಮನಾರ್ಹ. ಇಂದಿಗೂ ರಸಾಯನಶಾಸ್ತ್ರದ ಪ್ರಯೋಗಾಲಯಗಳಲ್ಲಿ ಬಳಸಲಾಗುತ್ತಿರುವ ವಿಧಾನಗಳಿವು.

ಈ 18 ಕ್ರಿಯೆಗಳು ತತ್ವಶಾಸ್ತ್ರೀಯ ಪ್ರಾಮುಖ್ಯತೆಯನ್ನೂ ಪಡೆದುಕೊಂಡಿದ್ದವೆಂಬುದು ವಿಶೇಷ. ವಿಜಯನಗರ ಕಾಲದಲ್ಲಿ ವಿದ್ಯಾರಣ್ಯರ ಬಂಧುವೊಬ್ಬರು ಬರೆದ ಬಹಳ ಪ್ರಮುಖವಾದ ಸರ್ವದರ್ಶನ ಸಂಗ್ರಹದಲ್ಲಿ 16 ದರ್ಶನಗಳಲ್ಲೊಂದಾಗಿ ರಸೇಶ್ವರ ದರ್ಶನವನ್ನು ವಿವರಿಸಲಾಗಿದೆ. ಅದರಲ್ಲಿಯೂ ಈ 18 ರಾಸಾಯನಿಕ ಕ್ರಿಯೆಗಳನ್ನು ನಮೂದಿಸುವ ಅಗತ್ಯ ಶಂಕರರ ಮಾಯಾವಾದದ ಅನುಯಾಯಿಯಾದ ಈ ಗ್ರಂಥಕರ್ತರಿಗೆ ಕಂಡುಬಂದಿದೆ ಎಂಬುದೇ ಈ ವಿಶೇಷ.

ಇಂತಹ ಸಂಕೀರ್ಣ ಕ್ರಿಯೆಗಳನ್ನು ಸರಿಯಾದ ವಿಧಾನದಲ್ಲಿ, ಕ್ರಿಯೆಗಳ ಮೇಲೆ ಅವಶ್ಯವಾದ ನಿಯಂತ್ರಣ ಸಾಧಿಸಿ ನಿಖರತೆಯಿಂದ ನಡೆಸಬೇಕಾದರೆ ಅವುಗಳಿಗೆ ಸೂಕ್ತವಾದ ಉಪಕರಣಗಳು ಬೇಕು. ಈ ಉಪಕರಣಗಳನ್ನು ಇಡಲು, ಅವಶ್ಯವಾದಾಗ ಸರಿಯಾದ ವಿಧಾನದಲ್ಲಿ ಉಪಯೋಗಿಸಲು ಅತ್ಯಂತ ಚೊಕ್ಕವಾದ, ವಿಫುಲ ಗಾಳಿ ಬೆಳಕನ್ನುಳ್ಳ ಪ್ರಯೋಗಾಲಯ ಬೇಕು. ಇವಿಲ್ಲದೆ ಈ ಹದಿನೆಂಟು ವಿಧಾನಗಳೂ ಪರಿಣಾಮಕಾರಿಯಾಗುವುದಿಲ್ಲ. ನಿರೀಕ್ಷಿತ ಫಲಿತಾಂಶ ನೀಡುವುದಿಲ್ಲ.

ರಸಶಾಸ್ತ್ರದ ಹಲವು ಗ್ರಂಥಗಳು ಅಂದು ಬಳಸಲಾಗುತ್ತಿದ್ದ ಉಪಕರಣಗಳ ಬಗ್ಗೆ ನೀಡುವ ವಿವರಣೆಯನ್ನು ನೋಡಿದರೆ ಯಾವ ಆಧುನಿಕ ರಸಾಯನ ವಿಜ್ಞಾನಿಯಾದರೂ ಬೆರಗಿನಿಂದ ಮೂಗಿನ‌ ಮೇಲೆ ಬೆರಳಿಟ್ಟುಕೊಳ್ಳಬೇಕು. ಈ ಉಪಕರಣಗಳನ್ನು ಅಂದು ಯಂತ್ರಗಳೆಂದು ಕರೆಯಲಾಗಿದೆ. ಇವುಗಳಲ್ಲಿ ಎಷ್ಟೊಂದು ರೀತಿಯ, ಎಷ್ಟೊಂದು ಆಕಾರದ ಮೂಸೆಗಳು. ಇಂದಿನ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ distillation, sublimation, titration, extraction, incineration ಮೊದಲಾದ ಕ್ರಿಯೆಗಳಿಗೆ ಅವಶ್ಯವಾದ ಮೂಸೆಗಳು. Distillation – ಭಟ್ಟಿ ಇಳಿಸುವುದರಲ್ಲಿ ಮೇಲಕ್ಕೆ, ಕೆಳಕ್ಕೆ, ಪಾರ್ಶ್ವಕ್ಕೆ ಭಟ್ಟಿ ಇಳಿಸುವ ವಿವಿಧ ಆಕಾರದ ಮೂಸೆಗಳಿದ್ದವು.

ಅವುಗಳ ಹೆಸರುಗಳು ಅವುಗಳ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ.

ಸ್ವೇದನೀ ಯಂತ್ರ – ಬಹು ನಿಧಾನವಾಗಿ ಕಾಯಿಸುವದಕ್ಕೆ, ಪಾಟನ ಯಂತ್ರ – sublimation ಕ್ರಿಯೆಗೆ, ಅಧಃಪಾಟನ ಯಂತ್ರ – ಮೇಲೊಂದು ತಲೆಕೆಳಗು ಮಾಡಿದ ಮಡಕೆ ಕೆಳಗೊಂದು ದೊಡ್ಡ ಮಡಕೆ. ಇದಕ್ಕೆ ಮೇಲಿನ ಮಡಕೆಯ ಒಳಗೆ ತಳಕ್ಕೆ ಮೆತ್ತಿದ ವಸ್ತುವಿಗೆ ಮಡಕೆಯ ಮೇಲಿನಿಂದ ಉರಿಹಾಕಿ ಕಾಯಿಸಿ ಕೆಳಗಿನ‌ ಮಡಕೆಯಲ್ಲಿರುವ ನೀರಿಗೆ ಆ  ವಸ್ತು ಆವಿಯಾಗಿ ಬಂದು ಸೇರುವುದು. ತಿರ್ಯಕ್ ಪಾಟನ ಯಂತ್ರ ಅಂತ ಒಂದಿದೆ. ಅದನ್ನು ನೋಡಿಯೇ ತಿಳಿದುಕೊಳ್ಳಬೇಕು. ಒಂದು ಸ್ವಲ್ಪ ಮೇಲೆ ಮತ್ತೊಂದು ಕೆಳಗೆ ಇರುವ ಎರಡು ಮಡಕೆಗಳ ಬಾಯಿಯನ್ನು ಪೂರ್ತಿ ಮುಚ್ಚಿ ಎರಡರ ನಡುವೆ ಒಂದು ಮಣ್ಣಿನ ಕೊಳವೆಯ ಮೂಲಕ ಮಾತ್ರ ಮೇಲಿನ ಮಡಕೆಯಿಂದ ವಸ್ತು, ಪಾದರಸ ಆವಿಯಾಗಿ ಇಳಿದು ಬರುವಂತೆ, ಕೆಳಗಿನ‌ ಮಡಕೆಯ ಮೇಲೆ ನೀರು ಹೊಯ್ಯುತ್ತಾ ತಣ್ಣಗೆ ಮಾಡಿ ಶುದ್ಧ ಪಾದರಸವನ್ನು ಪಡೆಯುವ ಸಾಧನ.  ಹೀಗೇ ಅದಿರಿನಿಂದ ಸಣ್ಣ ಪ್ರಮಾಣದಲ್ಲಿ ಖನಿಜಗಳನ್ನು ಶುದ್ಧೀಕರಿಸುವ ಕೋಸ್ಥೀ ಯಂತ್ರ, ಧೋಲಾ ಯಂತ್ರ, ಧೂಪ ಯಂತ್ರ, ದೀಪಿಕಾ, ಜಾರಣ, ಗರ್ಭ, ಹಂಸಪಾಕ, ವಿದ್ಯಾಧರ, ಸೋಮಾನಲ, ವಾಲುಕಾ, ಇಷ್ಟಿಕಾ, ಕಚ್ಛಪ, ನಾಲಿಕಾ, ಲವಣ, ಭೂಧರ, ಪಾಲಿಕಾ, ನಾಭಿ, ಘಟ, ದ್ರಮರುಕಾಖ್ಯ, ಸ್ಥಾಲಿ, ಕಂಡುಕ, ಅಂತರಾಲಿಕ, ಖಲ್ವ ಮೊದಲಾದ ಯಂತ್ರಗಳಿವೆ.

ಈ ಯಂತ್ರಗಳೆಲ್ಲ ಮಣ್ಣಿನಿಂದ ಮಾಡಿದವು. ಹುತ್ತದ ಮಣ್ಣು ಅಥವಾ ಬಿಳಿ ಜೇಡಿ ಮಣ್ಣು, ಸೀಮೆಸುಣ್ಣ, ಕಬ್ಬಿಣದ ಪುಡಿ, ಭತ್ತದ ಹೊಟ್ಟು ಇವೆಲ್ಲವನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹದವಾಗಿ ಕಲಸಿ, ಸುಟ್ಟು ಮಾಡಿದ ವಿವಿಧ ಆಕಾರದ ಮೂಸೆ, ಮಡಕೆಗಳನ್ನು ಬಳಸಿ ಈ‌ ಯಂತ್ರಗಳನ್ನು ತಯಾರಿಸಲಾಗುತ್ತಿತ್ತು.

ಈ ಎಲ್ಲ ಉಪಕರಣಗಳನ್ನು ಇಡುವ, ಉಪಯೋಗಿಸುವ ಪ್ರಯೋಗಶಾಲೆಯನ್ನು ರಸಶಾಲೆ ಎಂದು ಕರೆಯಲಾಗುತ್ತಿತ್ತು. ಇಂತಹ ರಸಶಾಲೆ ಊರಿನಿಂದ ದೂರವಾಗಿ ಔಷಧೀಯ ಗಿಡಮೂಲಿಕೆಗಳು ಯಥೇಚ್ಛವಾಗಿ ಸಿಗುವ ಸ್ಥಳದಲ್ಲಿ ಕಟ್ಟಲ್ಪಡಬೇಕು. ನಾಲ್ಕೂ ಕಡೆಗೆ ಬಾಗಿಲು, ಯಥೇಚ್ಛವಾಗಿ ಗಾಳಿ ಬೆಳಕು ಬರುವಂತೆ ಕಿಟಕಿಗಳನ್ನು ಇಡಬೇಕು. ರಸಶಾಲೆಯಲ್ಲಿ ಕುಟ್ಟುವ ಒನಕೆ, ಒರಳು, ಗಾಳಿ ಊದುವ ತಿದಿಗಳು, ವಿವಿಧ ಪ್ರಮಾಣದ ಜರಡಿಗಳು, ಮಣ್ಣು, ಬೆಂಕಿ ಹಾಕಲು ಬೆರಣಿ, ಕಟ್ಟಿಗೆ ಮುಂತಾದವು ಯಾವಾಗಲೂ ಲಭ್ಯವಿರಬೇಕು ಎಂದು ನಿರ್ದಿಷ್ಟಪಡಿಸಲಾಗಿದೆ.

ಅಂದಿನ ರಸಶಾಸ್ತ್ರದ ಗ್ರಂಥಗಳ ವಿವರಣೆಯನ್ನು ಆಧರಿಸಿ ರಾಷ್ಟ್ರೀಯ ವಿಜ್ಞಾನ ಕೇಂದ್ರವು ರಾಷ್ಟ್ರೀಯ ವಿಜ್ಞಾನ ಮ್ಯೂಸಿಯಂ‌ನಲ್ಲಿ ಈ ಯಂತ್ರಗಳನ್ನುಳ್ಳ ರಸಶಾಲೆಯನ್ನು‌ ನಿರ್ಮಿಸಿದೆ. ಅದನ್ನು ನೋಡುವುದು ಪ್ರಾಚೀನ ಹಾಗೂ ಮಧ್ಯಕಾಲೀನ ಭಾರತದ ರಸಾಯನಶಾಸ್ತ್ರದ ಪರಿಣತಿಯನ್ನು ತಿಳಿದುಕೊಳ್ಳಲು ಅಗತ್ಯ.

ಮದ್ದು (ಗನ್ ಪೌಡರ್), ಬಾಣ, ಬಿರುಸು, ಪಟಾಕಿ:

ಚೀನಾದಲ್ಲಿ ಕ್ರಿಪೂದಲ್ಲಿಯೇ ಆರಂಭವಾದರೂ ಕ್ರಿಶ ಎಂಟನೆಯ ಶತಮಾನದಲ್ಲಿ ಅದು ಗುಂಡು ಹೊಡೆಯುವ ಕೋವಿಗಳು, ಫಿರಂಗಿಗಳ ಮದ್ದಿನ‌ ಮೂಲಕ ಈ ರಾಸಾಯನಿಕ ತಂತ್ರಜ್ಞಾನ ಬೆಳವಣಿಗೆ ಹೊಂದಿತು. ಗಂಧಕ, ಪೆಟ್ಲುಪ್ಪು, ಇದ್ದಿಲುಗಳನ್ನು ವಿವಿಧ ಪ್ರಮಾಣದಲ್ಲಿ ಬೆರೆಸಿ ಕೋವಿಗಳ ಮದ್ದನ್ನು ತಯಾರಿಸಿದರು. ಮನರಂಜನಾ ಕ್ಷೇತ್ರದಲ್ಲಿಯೂ ಇದರ ಉಪಯೋಗ ಕಂಡಿತು. ಪಟಾಕಿಗಳು, ಬಾಣಬಿರುಸುಗಳ ಮೂಲಕ ಬಣ್ಣಬಣ್ಣದ ಬೆಳಕನ್ನು ವಿವಿಧ ಆಕಾರಗಳಲ್ಲಿ ಉತ್ಪಾದಿಸುವ ಮೂಲಕ ಜನಪ್ರಿಯವಾಯಿತು.

ಈ ತಂತ್ರಜ್ಞಾನ ಚೀನಾ ದೇಶದವನೆಂದು ಹೇಳಲಾದ ಭೋಗರ್ ಎಂಬುದು ತಮಿಳಿನ ಸಿದ್ಧನ ಗ್ರಂಥ ಭೋಗರ್ ಸೂತ್ತಿರಂನಲ್ಲಿ ವಿವರಿಸಲ್ಪಟ್ಟಿದೆ. ಹೀಗೆ ನೇರವಾಗಿ ಚೀನಾದಿಂದಲೇ ಇಲ್ಲಿಗೆ ಬಂದಿರಬಹುದು. ದೇಶಗಳ ವ್ಯಾಪಾರಿಗಳ ಮೂಲಕ ಇಲ್ಲಿಯ ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ಕೋವಿಗಳ ಮದ್ದುಗಳ ರೂಪದಲ್ಲಿಯೂ ಬಂದಿರಬಹುದು.

15-16ನೆಯ ಶತಮಾನದ ನಂತರ ರಚಿತವಾದ ಹಲವು ಸಂಸ್ಕೃತ, ಮರಾಠಿ, ತಮಿಳು, ಮಲಯಾಳಂ ಗ್ರಂಥಗಳಲ್ಲಿ ಬಾಣಬಿರುಸುಗಳ ತಯಾರಿಕೆಯ ವಿವರಣೆಗಳಿವೆ.

ಗಜಪತಿ ಪ್ರತಾಪ ದೇವನ ಕೌತುಕ ಚಿಂತಾಮಣಿ (1499-1539) ಎಂಟು ಪ್ರಕಾರದ ಬಾಣಬಿರುಸುಗಳನ್ನು ಮಾಡುವ ಸೂತ್ರಗಳ ವಿವರಣೆ ಇದೆ. ಅವುಗಳನ್ನು ತಯಾರಿಸಲು ಗಂಧಕ, ಪೆಟ್ಲುಪ್ಪು, ಇದ್ದಿಲುಗಳ ಜೊತೆಗೆ ವಿವಿಧ ಬಣ್ಣಗಳನ್ನು ಪಡೆಯಲು ತಾಮ್ರದ ಭಸ್ಮ, ಕಬ್ಬಿಣದ ಆಕ್ಸೈಡ್, ಆರ್ಸೆನಿಕ್ ಆಕ್ಸೈಡ್, ಕಬ್ಬಿಣ ಮತ್ತು ಮ್ಯಾಗ್ನೀಷಿಯಂ‌ನ ಆಕ್ಸೈಡ್ ಮುಂತಾದವುಗಳನ್ನು ಬಳಸಿ ಬಿದಿರಿನಕೊಳವೆಗಳಲ್ಲಿ ತುಂಬಿ ಬಳಸುತ್ತಿದ್ದರು. ಈ ಕೃತಿ ಚೀನಾದ ಏಳನೆಯ ಗ್ರಂಥ ವು ಪೈ ಚಿಗ್ ಅನ್ನೂ ಹಾಗೂ ಭೋಗರ್‌ನ ಗ್ರಂಥದಲ್ಲಿನ ವಿವರಗಳನ್ನು ಹೋಲುತ್ತದೆ. ಚಕ್ರಾಕಾರದ ಬಾಣಬಿರುಸು, ಮರದ ಆಕೃತಿಯದು, ಹವಾಯಿ – ಎಂಬ ಬೆಂಕಿಯುಗುಳುತ್ತಾ ಮೇಲೇರುವ ಕ್ಷಿಪಣಿ, ಹಾತ್ನಲ – ಎಂಬ ಕೈಯಲ್ಲಿ ಹಿಡಿದುಕೊಳ್ಳುವಂತಹದು, ಸುಮನಮಾಲಾ – ಹೂವಿನ‌ಮಾಲೆಯಂತೆ ಕಾಣುವುದು, ಭೂನಲ – ಭೂಮಿಯ ಮೇಲೆ ಕಿಡಿಗಳ ಧಾರೆ ಸುರಿಸುವಂತಹುದು, ಚಂದ್ರ ಜ್ಯೋತಿ – ಬೆಳದಿಂಗಳಿನಂತಹ ಬೆಳಕನ್ನು ನೀಡುವಂತಹುದು ಇತ್ಯಾದಿ ಬಾಣಬಿರುಸುಗಳ ವಿವರಣೆ ಕೆಲ ಗ್ರಂಥಗಳಲ್ಲಿದೆ.

ತಮಿಳಿನ ಬಾಣ ಶಾತ್ತಿರಂನಲ್ಲಿ 90 ವಿಧದ ಬಾಣಬಿರುಸುಗಳನ್ನು ತಯಾರಿಸುವ ಸೂತ್ರಗಳ ವಿವರಣೆ ಇದೆ.

ವಿಜಯನಗರ ಸಾಮ್ರಾಜ್ಯದ ಮಹಾನವಮಿ ಉತ್ಸವದಲ್ಲಿ ವಿವಿಧ ಬಣ್ಣಗಳನ್ನು ಸೂಸುವ ವಿವಿಧ ಪ್ರಕಾರಗಳ ಬಾಣಬಿರುಸುಗಳ ಪ್ರಯೋಗ ಮಾಡಿದುದನ್ನು ಪ್ರವಾಸಿ ಅಬ್ದುಲ್ ರಜಾಕ್ 1445ರಲ್ಲಿ ದಾಖಲಿಸಿದ್ದಾನೆ.

ಈ ತಂತ್ರಜ್ಞಾನ ಯುದ್ಧದಲ್ಲಿ‌ ಬಳಸುವ ರಾಕೆಟ್‌ಗಳಾಗಿ, ಕೋವಿಗಳಾಗಿ, ಫಿರಂಗಿಗಳಾಗಿ ಉಪಯೋಗಿಸಲ್ಪಟ್ಟಿದೆ. ಅದರಲ್ಲಿ ಬಾಣ ಎಂಬ ಹೆಸರಿನ ರಾಕೆಟ್ ಬಹಳ ಪರಿಣಾಮಕಾರಿಯಾಗಿತ್ತೆಂದು ಹಲವು ದಾಖಲೆಗಳು ತಿಳಿಸಿವೆ. ತುರ್ಕಿಯ ಒಟ್ಟೋಮಾನ್ ಸಾಮ್ರಾಜ್ಯದಲ್ಲಿ ಬಳಸಲಾಗುತ್ತಿದ್ದ ಫಿರಂಗಿಗಳನ್ನು ಬಾಬರನು ಬಳಸಿ ಪಾಣಿಪತ್ ಯುದ್ಧದಲ್ಲಿ (1526) ವಿಜಯಶಾಲಿಯಾದನೆಂದು ದಾಖಲಾಗಿದೆ.
ನಂತರದ ಕಾಲದಲ್ಲಿ ಭಾರತದ ಎಲ್ಲ ಸಾಮ್ರಾಟರು, ರಾಜ, ಸುಲ್ತಾನರುಗಳ ಫಿರಂಗಿಗಳನ್ನು ತಯಾರಿಸಿ ಬಳಸಿದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ಕೋಟೆ ಗೋಡೆಗಳ ಮೇಲೆ ಸ್ಥಾಪಿಸಲಾಗಿರುವ ಫಿರಂಗಿಗಳನ್ನು, ಎತ್ತುಗಳ ಮೂಲಕ ಎಳೆದು ಯುದ್ಧಭೂಮಿಗೆ ಸಾಗಿಸಲಾಗುತ್ತಿದ್ದ ಫಿರಂಗಿಗಳನ್ನು ನೋಡಬಹುದು. ಹಾಗೇ ವಿವಿಧ ತೆರನ ಕೋವಿಗಳನ್ನು ತಯಾರಿಸಿ ಈ ಮದ್ದನ್ನು ಬಳಸಲಾಯಿತು. ಅಕ್ಬರ್ ಶಹಜಹಾನ್, ಬಹಮನಿ ಸುಲ್ತಾನರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ವೈಯುಕ್ತಿಕ ಆಸಕ್ತಿ ತೋರಿಸುತ್ತಿದ್ದರು. ಅದರಲ್ಲೂ ಅಕ್ಬರನು ತಾನೇ ಕೆಲವು ಹೊಸ ಶೋಧಗಳನ್ನು ಮಾಡಿದನೆಂದು ಹೇಳಲಾಗಿದೆ.

ಟಿಪ್ಪುಸುಲ್ತಾನನು ಅಭಿವೃದ್ಧಿಪಡಿಸಿದ ರಾಕೆಟ್ ತಂತ್ರಜ್ಞಾನ ಬ್ರಿಟಿಷರನ್ನು ದಿಕ್ಕೆಡಿಸಿದ ಬಗೆ ವಿವರವಾಗಿ ದಾಖಲಾಗಿದೆ. ಈ ತಂತ್ರಜ್ಞಾನವನ್ನು ಅನುಕರಿಸಿ ಬ್ರಿಟಿಷರು ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆಂದು ಹೇಳಲಾಗಿದೆ. 

ಹೀಗೆ, ಭಾರತದಲ್ಲಿ ರಸಾಯನಶಾಸ್ತ್ರ ಆದಿ‌ಮಾನವರ ಗುಹೆಗಳಿಂದಲೇ‌ ಆರಂಭವಾಗಿ ರಸಶಾಲೆ ಎಂಬ ಪ್ರಯೋಗಶಾಲೆ, ಅದರ ಅತಿ‌ಸೂಕ್ಷ್ಮವಾದ ಉಪಕರಣಗಳನ್ನು ತಯಾರಿಸುವ ಉನ್ನತಮಟ್ಟಕ್ಕೆ‌ ಬೆಳೆಯಿತು. ಆದರೆ ಅಂದು ಗಾಜಿನ ತಯಾರಿಕೆಯನ್ನು ಚೆನ್ನಾಗಿ ತಿಳಿದಿದ್ದರೂ ಪ್ರಯೋಗಶಾಲೆಗೆ ಅಗತ್ಯವಾದ ಗಾಜಿನ ಪಾತ್ರೆಗಳನ್ನು ತಯಾರಿಸಿ, ಬಳಸಲಿಲ್ಲ. ಇದರಿಂದಾಗಿ ಮಣ್ಣಿನ ಪಾತ್ರೆಗಳ ಒಳಗೆ ನಡೆಯುತ್ತಿದ್ದ ರಸಾಯನಿಕ ಕ್ರಿಯೆಗಳನ್ನು ಗಮನಿಸಿ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗೂ ಕ್ರಿಯೆ ನಡೆಯುತ್ತಿರುವಾಗಲೇ ಅವುಗಳಲ್ಲಿನ‌ ಕೊರತೆ ದೋಷಗಳನ್ನು ಗಮನಿಸಿ ಕ್ರಿಯೆಯಲ್ಲಿ ತಿದ್ದುಪಾಟುಗಳನ್ನು ತರಲು‌ ಸಾಧ್ಯವಾಗಲಿಲ್ಲ ಎಂಬುದು ಒಂದು ಮುಖ್ಯ ಕೊರತೆಯಾಯಿತು.

ಅದಕ್ಕಿಂತ ಮಿಗಿಲಾಗಿ ಒಂದು ಕಡೆ ವರ್ಣ – ಜಾತಿ ಬೇಧಗಳು, ಮತ್ತೊಂದು ಕಡೆ ವಿಫುಲವಾಗಿ ‌ಸಿಗುವ ಕಬ್ಬಿಣ, ತಾಮ್ರ ಮೊದಲಾದ ಲೋಹಗಳನ್ನು ಚಿನ್ನವಾಗಿ ಪರಿವರ್ತಿಸುವ ಮೋಹ, ಪಾದರಸದ ಸಹಾಯದಿಂದ ವಜ್ರಕಾಯವನ್ನು ಪಡೆದು ಚಿರಂಜೀವಿಯಾಗುವ ಅಸಾಧ್ಯ, ಅಪ್ರಾಯೋಗಿಕ ಬಯಕೆಗಳಿಂದ ಮುಂದುವರೆಯಲಾಗಲಿಲ್ಲ.

‍ಲೇಖಕರು avadhi

June 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: