ಸಂಪು ಕಾಲಂ : ನಾವು 'ಜನರಲ್' ನವರು ಅರ್ಥ ಮಾಡಿಕೊಳ್ಳಬೇಕಾದ್ದು ಏನೆಂದರೆ…


ನ್ಯೂಸು, ಫೇಸ್ಬುಕ್ಕು, ಬ್ಲಾಗು ಮುಂತಾದ ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿನಿತ್ಯ ಕಂಡು ಬರುವ ಕಾಮನ್ ವಿಷಯ ಏನು ಎಂದು ಗೆಸ್ ಮಾಡಿದರೆ, ಈಗ ಮುಂದೆ ನಾನೇನು ಬರೆಯ ಹೊರಟಿರುವೆ ಎಂದು ನೀವು ಥಟ್ ಅಂತ ಹೇಳಿಬಿಡಬಹುದು. ಹೌದು ಅದೇ ‘ಜಾ(ತಿ)(ಅ)ತೀಯತೆ’ಯ ಬಗ್ಗೆ. ಅಯ್ಯೋ ಸಾಕಪ್ಪಾ ಎಂಬಷ್ಟು, ಬಹುಶಃ ಬಗೆಹರಿಯಲಾರದಷ್ಟು ಚರ್ಚೆಗಳು, ಜಗಳಗಳು, ಉದಾಸೀನಗಳು, ಅನುಕಂಪಗಳು, ಉಡಾಫೆ ಮಾತುಗಳು ಎಕ್ಸೆಟ್ರಾಗಳ ಮಧ್ಯೆ ಚಿಗಿದೇಳುವ ಒಂದು ಚರ್ವಿತ ಚರ್ವಣವಾದರೂ, ನನ್ನ ಅನಿಸಿಕೆಗಳನ್ನೂ ಹಂಚಿಕೊಳ್ಳಲೇಬೇಕು ಎನಿಸಿ ಈ ಬರಹ ನಿಮ್ಮ ಮುಂದೆ.
“ನಿಮ್ಮೊಡನಿದ್ದೂ ನಿಮ್ಮಂತಾಗದ…” ಎನ್ನುವಷ್ಟರ ಮಟ್ಟಿಗೆ, ನಾನು ಬ್ರಾಹ್ಮಣಳೇ ಆಗಿದ್ದರೂ ನನ್ನ ತಂದೆಯ ನೆರಳಿಂದ ಕಾನ್ಷಿಯಸ್ಲೀ ಈ ‘ಬ್ರಾಹ್ಮಣ್ಯ’ದಿಂದ ತಕ್ಕ ಮಟ್ಟಿಗೆ ಹೊರತಾಗೇ ಇದ್ದೇನೆ ಎಂದು ಹೇಳಬಹುದು. “Sitting on the fence” ಅಂತ ಹೇಳ್ತಾರಲ್ಲ ಹಾಗೆ ನಾನೂ ಇತ್ತ ಸಂಪೂರ್ಣ “ಮೇಲ್ಜಾತಿ”ಯ ಸುಳಿಯಲ್ಲೂ ಸಿಕ್ಕಿ ಹಾಕಿಕೊಳ್ಳದೆ ಅತ್ತ ದಮನಿತರ ದುಃಖದ ಮಡುವಿಗೂ ಬೀಳದೆ ನಟ್ಟ ನಡುವಿನ ಒಂದು ಅಭದ್ರ ದಡದ ಮೇಲೆ ಕೂತು ಸಮ ಬೆಸ ಲೆಕ್ಕ ಹಾಕುತ್ತಾ ಕೂತವಳು. ಇದರಿಂದ ಯಾವ ಒಂದು ಪಂಥಕ್ಕೂ ಸಂಪೂರ್ಣ ಸೇರದ ಒಂದು ಅಡ್ಡ ಗೋಡೆಯಾಗಿದ್ದರೂ ಯಾವುದೇ ಪೂರ್ವಾಗ್ರಹಪೀಡನೆಗಳಿಗೆ ಹೊರತಾಗಿರಬಹುದೇನೋ ಎಂಬ ಅನುಮಾನದ ಸಮಾಧಾನ ಇದ್ದೇ ಇದೆ.
ಒಂದು ಕಡೆ ಕಪ್ಪು ಬಾವುಟ ಹಾರಿಸುತ್ತಾ “ಆ ನನ್ ಮಕ್ಕಳು ತಪುಕ್ ಅಂತ ಮುಖದಿಂದ ಉದುರಿಬಿದ್ದರಂತೆ” ಎನ್ನುವವರು ಮತ್ತೊಂದು ಕಡೆ ಕೇಸರಿ ಝಂಡಾ ಓಲೈಸುತ್ತಾ “ಬ್ರಾಹ್ಮಣೋಸ್ಯ ಮುಖಮಾಸೀತ್” ಎನ್ನುವವರು. ಇವರ ನಡುವೆ ಒಂದು ಬಿಳಿ ಬಣ್ಣದ ಧ್ವಜ ಆರೋಹಿಸಲು ಸಾಧ್ಯವೇ ಇಲ್ಲವಾ? ಯಾವ ಪೂರ್ವಾಗ್ರಹ ಪೀಡನೆಗಳಿಲ್ಲದೆ ಸರಾಗವಾಗಿ ಬಗೆಹರಿಯುವ ಕೌಟುಂಬಿಕ ಸಮಸ್ಯೆಗಳಂತೆ ನಮ್ಮ ಸಾಮಾಜಿಕ ಸಮಸ್ಯೆಗಳನ್ನೂ ಪರಿಹರಿಸಿಬಿಡುವುದು ಅಸಾಧ್ಯವಾದ ಉಟೋಪಿಯಾ ಆಗಿರಬಹುದಾ? ಎಂಬ ಪ್ರಶ್ನೆ ಆಗಾಗ ಕಾಡುತ್ತದೆ.
ನಾನು ನನ್ನ ಮುಂದಿನ ಮಾತುಗಳನ್ನು ಹೇಳುವ ಮೊದಲು ನಮ್ಮ ವರ್ಣಾಶ್ರಮ ಧರ್ಮದ ಕುರಿತು ವೇದಾಧ್ಯಾಯೀ ಸುಧಾಕರ ಶರ್ಮರವರ ಮಾತುಗಳನ್ನು ಉಲ್ಲೇಖಿಸಬಯಸುತ್ತೇನೆ. ಅವರ ಪ್ರಕಾರ, “ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ | ಊರೂ ತದಸ್ಯ ಯದ್ವೈ ಶಃ | ಪದ್ಭಾಗ್ಂ ಶೂದ್ರೋಅಜಾಯತ ||” ಎಂಬ ಶ್ಲೋಕ ಸಂಪೂರ್ಣ ವಿರೋಧಾರ್ಥವಾಗಿಯೇ ಮಾರ್ಪಾಡಾಗಿ ಹೋಗಿದೆ. ಬ್ರಾಹ್ಮಣ, ಶೂದ್ರ ಎಂಬಿತ್ಯಾದಿ ಪದಗಳ ಅರ್ಥವೇ ಬೇರೆ! ಸುಧಾಕರ ಶರ್ಮಾರವರು ಹೇಳುವಂತೆ ವೇದಗಳ ಪ್ರಕಾರ, ಯಾವ ವ್ಯಕ್ತಿ ತನ್ನ ಜ್ಞಾನಾರ್ಜನೆಗಾಗಿ ತುಡಿಯುತ್ತಾನೋ, ಜ್ಞಾನ ಸಂಪಾದನೆಗಾಗಿ ಹಂಬಲಿಸುತ್ತಾನೋ ಆತನೇ ಬ್ರಾಹ್ಮಣ ಮತ್ತು ಯಾರು ದೈಹಿಕವಾಗಿ ಶ್ರಮ ಪಟ್ಟು ದುಡಿಯುತ್ತಾನೋ ಅವನೇ ಶೂದ್ರ. ಮತ್ತು ಈ ವ್ಯವಸ್ಥೆಯಲ್ಲಿ ಯಾವುದೂ ಮೇಲು ಕೀಳಲ್ಲ, ಎಲ್ಲವೂ ಸಮಾನ! ಈ ಅರ್ಥದಲ್ಲಿ ನೋಡ ಹೋದರೆ ಈಗಿನ ಮುಕ್ಕಾಲು ಪಾಲು “ಬ್ರಾಹ್ಮಣ”ರಲ್ಲಿ ಯಾರೂ ನಿಜವಾದ ಬ್ರಾಹ್ಮಣರಲ್ಲ ಮತ್ತು ಸಾಕಷ್ಟು “ಶೂದ್ರ”ರಲ್ಲಿಯೂ ಬ್ರಾಹ್ಮಣರು ಇದ್ದಾರೆ! ಈ ವರ್ಣಾಶ್ರಮ ಪದ್ಧತಿಯು ಕಾಲಾನುಕಾಲಗಳ ಹಿಂದೆ ಒಂದಷ್ಟು “ಮೇಲ್ಜಾತಿ”ಯವರು ತಮ್ಮ ಅನುಕೂಲಕ್ಕಾಗಿ ಬದಲಾಯಿಸಿಕೊಂಡು, ಇಂದು ಸಂಪೂರ್ಣ ಹದಗೆಟ್ಟ ಹಂತ ತಲುಪಿಬಿಟ್ಟಿದೆ. ಜಗತ್ತು ಎಷ್ಟು ಕಾಲಸೂಚಕ ವಸ್ತು ಎಂಬುದು ಈ ರೀತಿಯ ಅನುಭವಗಳಿಂದಲೇ ಗ್ರಹಿಸಬಹುದಲ್ಲವೇ!
ವರ್ಣಾಶ್ರಮ ಧರ್ಮ ಮಾರ್ಪಟ್ಟಿದ್ದು ಹೇಗೆ ಮತ್ತು ಅದು ಇಂದಿನ ಹಂತ ತಲುಪಲು ಕಾರಣವಾದದ್ದಾದರೂ ಏನು ಎಂಬ ಅಧ್ಯಯನದಲ್ಲಿದ್ದೇನೆ. ಒಂದೊಮ್ಮೆ ಅದನ್ನೂ ನಿಮ್ಮೊಟ್ಟಿಗೆ ಹಂಚಿಕೊಳ್ಳ ಬಯಸುತ್ತೇನೆ. ಇರಲಿ. ಬ್ರಾಹ್ಮಣ ಮನೆಯಲ್ಲಿ ಹುಟ್ಟಿ ನಾನು ಕಣ್ಣಾರೆ ಕಂಡು ಮರುಗಿದ ಕೆಲ ಘಟನೆಗಳು ಹೀಗಿವೆ: ಸಣ್ಣ ಸುಮಾರು ಹತ್ತು ವರ್ಷದ ಹುಡುಗಿ ನಾನು, ವಯಸ್ಸಾದ ಮುದುಕನೊಬ್ಬ ನನ್ನ ಮುಂದೆ ಬಾಗಿ “ಹೇಗಿದ್ದೀರಿ ಅಮ್ಮಯ್ಯಾ” ಎಂದು ನಾಚಿ ನುಡಿದಾಗ ನಾನು ಕಸಿವಿಸಿಗೊಂಡಿದ್ದೆ. ಇದೇಕೆ ಹೀಗೆ? ಮನೆಯಲ್ಲಿದ್ದ ಅಜ್ಜನಿಗೂ, ಈ ಮುದುಕನಿಗೂ ಹೆಚ್ಚೂ ಕಡಿಮೆ ಒಂದೇ ವಯಸ್ಸು ಆದರೂ ಆತ ನನ್ನನ್ನು ಬಹುವಚನದಲ್ಲಿ, ಅದೂ ಮಾರುದೂರದಲ್ಲಿ ನಿಂತು ಬಾಗಿ ಮಾತನಾಡಿಸುತ್ತಾನೆ! ನನ್ನ ಓರಗೆಯವರ ತಾಯಿ ಒಬ್ಬರು, ಹಿರಿಯರು, ದೂರದಿಂದ ನನ್ನ ಅಜ್ಜಿಯನ್ನು ನೋಡಲು ಬಂದು ಅತ್ಯಂತ ಪ್ರೀತಿಯಿಂದ ಆಕೆಯನ್ನು ಮುಟ್ಟಿ ಮಾತನಾಡಿದಾಗ ನನ್ನ ಅಜ್ಜಿಗೆ ಆದದ್ದು ಅವಮಾನ, ಅಸಹ್ಯ! ಹಳ್ಳಿ ಮನೆಯ ನಮ್ಮ ಅಜ್ಜಿಯ ಅಡುಗೆ ಮನೆಯ ಹಿಂಭಾಗದ ಒಂದು ಮೂಲೆಯಲ್ಲಿ ಸುಮಾರು ಬೊಚ್ಚುಗೊಂಡಿರುವ ಲೋಟ, ತಟ್ಟೆಗಳು. ಅವು ಮೀಸಲಾಗಿದ್ದದ್ದು ನಮ್ಮ ಮನೆಯ ‘ಜೀತದಾಳು’ಗಳಿಗೆ!
ಈ ರೀತಿಯ ವ್ಯತಿರಿಕ್ತ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ ನನ್ನ ತಂದೆಯ ಅನುಭವಗಳು ಮತ್ತೂ ವಿಷಾದನೀಯ! ಆ ಕಾಲದಲ್ಲಿ ನಮ್ಮ ನೆಂಟಸ್ತಿಕೆಯ ಹಿರಿಯರೊಬ್ಬರು ನನ್ನ ತಂದೆ ಮತ್ತಿತರ ಮಕ್ಕಳಿಗೆ ಶ್ಲೋಕಗಳನ್ನು ಹೇಳಿಕೊಡುವಾಗ ಭದ್ರವಾಗಿ ಬಾಗಿಲು, ಕಿಟಕಿಗಳನ್ನು ಜಡಿಯುತ್ತಿದ್ದರಂತೆ, ಸೊ ದಟ್ ಅಲ್ಲಿನ “ಶೂದ್ರ”ರು ಯಾರೂ ತಪ್ಪಿಯೂ ಆ ಶ್ಲೋಕಗಳನ್ನು ಕೇಳಿಸಿಕೊಂಡು ಬಿಡಬಾರದು ಎಂದು. ಇನ್ನೂ ಹಿಂದಿನ, ನನ್ನಪ್ಪ ಕೇಳಲ್ಪಟ್ಟ ವಿಚಾರ, ಪ್ರಾಚೀನ ಕಾಲದಲ್ಲಿ ಅಪ್ಪಿ ತಪ್ಪಿ ಯಾರಾದರೂ “ಶೂದ್ರರು” ಆ ಶ್ಲೋಕಗಳು, ಮಂತ್ರಗಳನ್ನು ಕೇಳಿಬಿಟ್ಟರೆ, ಅವರ ಕಿವಿಗೆ ಕಾದ ಕಬ್ಬಿಣದ ರಸ ಹುಯ್ಯುತ್ತಿದ್ದರಂತೆ! ನನ್ನ ತಾತ ಮನೆಯ ಚಾವಡಿಯಲ್ಲಿ ಕೂತದ್ದು ಕಂಡರೆ ಸುಮಾರು ಒಂದೈವತ್ತು ಹೆಜ್ಜೆಗಳಷ್ಟು ದೂರದಿಂದಲೇ ಚಪ್ಪಲಿ ಕಳಚಿ, ಬಾಗಿ, ಕೈ ಮುಗಿದು ನಡೆಯುತ್ತಿದ್ದರಂತೆ! ಅಜ್ಜಿ ನೀರು ಸೇದಲು ಬಾವಿಗೆ ಹೋಗಿ ಮರಳಿ ಮನೆಗೆ ಬರುವಷ್ಟರಲ್ಲಿ ಬಿಂದಿಗೆಯ ಒಂದಷ್ಟು ನೀರು ದಾರಿಯ ಶುದ್ದೋಧಕಕ್ಕಾಗಿ ಖಾಲಿ! ಹೀಗೆ ಒಂದಲ್ಲಾ ಎರಡಲ್ಲಾ ಸಿಕ್ಕಷ್ಟೂ, ಬಗೆದಷ್ಟೂ ವಿಧಗಳಲ್ಲಿ ಹಿಂದುಳಿದವರು ತುಳಿತಕ್ಕೆ, ಅವಮಾನಗಳಿಗೆ, ಶೋಷಣೆಗೆ ಒಳಗಾಗಿದ್ದಾರೆ. ಇದು ನಮ್ಮ ಚರಿತ್ರೆಯ ಒಂದು ಕಹಿ ಮತ್ತು ಅಳಿಸಲಾರದ ಕಪ್ಪು ಮಸಿ! ಈ ಘೋರಾಪರಾಧಗಳ ಇಂಟೆನ್ಸಿಟಿಯನ್ನು ಇಂದಿನ “ಮೇಲ್ಜಾತಿ”ಯ ಯುವಕರು ಅರ್ಥ ಮಾಡಿಕೊಳ್ಳಬೇಕು! ನಮ್ಮದೇ ಹಿರಿಯರು ಅವರ ಅರಿವಿಗಿಂತಲೂ ಹೆಚ್ಚಿನ ಸಾಮಾಜಿಕ ನಷ್ಟವನ್ನು ಮಾಡಿಬಿಟ್ಟಿದ್ದಾರೆ. ಅವರ ಆ ಕೃತ್ಯಗಳ ವೈಪರೀತ್ಯಗಳು ಅಟ್ಲೀಸ್ಟ್ ಇಂದು ನಮ್ಮಿಂದ ಕಡಿಮೆಯಾಗಬೇಕಲ್ಲವೇ!
ಇತ್ತೀಚಿಗೆ ಫೇಸ್ಬುಕ್ ನಲ್ಲಿ ನನ್ನ ಸ್ನೇಹಿತ ಪ್ರವರ ಕೊಟ್ಟೂರು ಒಬ್ಬ ಕಂಗೆಟ್ಟ ಯುವಕನ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಹಿಂದುಳಿದವರ ಬಗ್ಗೆ, ಅವರಿಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಅವರು ಬರೆದ ಸಾಲುಗಳು ಈ ರೀತಿ ಇವೆ:
……. “ಹೊಟ್ಟೆ ತುಂಬಾ ಅನ್ನ ಮಾಡಿಕೊಂಡು ತಿನ್ನುವಷ್ಟು ಅಕ್ಕಿ, ಮಾಡಿದ ಸಾಲ ಸಾಲದೆಂಬಂತೆ ಇನ್ನಷ್ಟು ಮಾಡಲೆಂದು ಸಾಲಮನ್ನಾ, ಜಸ್ಟ್ ಪಾಸ್ ಆದರೂ ಸಾಕು, ಸೈನ್ ಹಾಕಲು ಬಾರದಿದ್ದರೂ ತಾನೇ ಸೈ ಎಂಬಂತೆ ಸರ್ಕಾರೀ ಆಫೀಸುಗಳಲ್ಲಿ ಹೋಗಿ ಆರಾಮವಾಗಿ ಕುಳಿತುಕೊಳ್ಳಲು ಮೀಸಲಾತಿ, ಮೇಲಿಂದ, ಹಿಂದೆ ಹಿಂದೆಯೇ ಉಳಿಯುವವರೆಂಬ ಕಾರಣಕ್ಕಾಗಿ ಎಲ್ಲರ ಅನುಕಂಪ”……..
ಈ ಮಾತುಗಳು ಬರೀ ಈ ಹುಡುಗನದ್ದಷ್ಟೇ ಅಲ್ಲ, ಭಾಗಶಃ “ಮೇಲ್ಜಾತಿ”ಯವರು ಯೋಚಿಸುವುದೇ ಹೀಗೆ! ಇದು ಒಂದು ಕಡೆ ಅವರಿಗೆ ಕೈ ತಪ್ಪಿ ಹೋಗುತ್ತಿರುವ ಸವಲತ್ತುಗಳ ಕುರಿತು ವಿಷಾದ ಆದರೆ ಮತ್ತೊಂದು ಕಡೆ ಮುಂದುವರೆದಿರುವ ಮೇಲರಿಮೆಯ ಘೀಳು. ಇದರಲ್ಲಿ ತಪ್ಪು ಅವರದ್ದಲ್ಲ ಎಂಬ ಮಾತನ್ನು ಬೇರೆ. ಆದರೆ ನಾವು ಜನರಲ್ ಕ್ಯಾಟೆಗರಿನವರು ಆಲೋಚಿಸಬೇಕಾದ ವಿಷಯ ಎಂದರೆ, ಈ ರೀತಿಯಾದ, ಇಂದು ನಾವು ಅನುಭವಿಸುತ್ತಿರುವ ಮಿಸ್ಸಿಂಗ್ ಆಪರ್ಚುನಿಟಿಗಳು ಏನಿವೆ ಅವನ್ನು ನಾವು ಸಾವಿರಾರು ವರ್ಷಗಳಿಂದ ಕಸಿದುಕೊಂಡು, ನಮ್ಮದೇ ಆಗಿಸಿಕೊಂಡು, ನಮ್ಮ ಬುಟ್ಟಿಯಲ್ಲೇ ಹಾಕಿ ಬೀಗ ಜಡಿದಿದ್ದೇವೆ! ಯಾರಾದರೂ ಎರಡು ಎನ್ನಲು “ಎಲ್ಡು” ಎಂದರೆ ಫಕ್ಕನೆ ನಗುವ, ಹಾಸಿಗೆಗೆ ಹೊದಿಸುವ ಹೊದಿಕೆಯನ್ನು ಪಂಚೆಯಂತೆ ಸುತ್ತುಕೊಂಡದ್ದು ಕಂಡಾಗ ಅಸಹ್ಯ ಪಟ್ಟುಕೊಳ್ಳುವ ನಾವು ಅರ್ಥ ಮಾಡಿಕೊಳ್ಳಬೇಕಾದ್ದು, ‘ಸುಸಂಸ್ಕೃತಿ’, ‘ಸದಾಚಾರ’, ‘ಸನ್ನುಡಿ’ ಎಂದು (ಅದು ನಿಜಕ್ಕೂ ಇಷ್ಟೇ ಆಗಿದ್ದಲ್ಲಿ) ನಾವು ಏನನ್ನು ಕರೆಯುತ್ತೇವೆ, ಅವುಗಳಿಂದ ಕಾಲಾನುಗತವಾಗಿ ಈ ಜನರನ್ನು ಪ್ರೆವೆಂಟ್ ಮಾಡಿದ್ದೇವೆ. ಯಾರಾದರೂ ಇದರ ವಿರುದ್ಧ ದನಿ ಎತ್ತಿದ್ದರೆ, ಚಿಗುರಿನಲ್ಲೇ ಹೊಸಕಿ ಹಾಕಿ, ನೆಲಸಮ ಮಾಡಿಬಿಟ್ಟಿದ್ದೇವೆ!
ನಮ್ಮಲ್ಲಿ ಅನೇಕರಿಗೆ ಇರುವ ಅನಿಸಿಕೆ, “ಹೌದು ಆಗ ಹಾಗೆ ಮಾಡಿದ್ದಿರಬಹುದು. ಅದು ತಪ್ಪು ಆದರೆ ಇಂದು ನಾವು ಹಾಗಿಲ್ಲವಲ್ಲಾ….ನಮಗ್ಯಾಕೆ ಹೀಗೆ, ಅವರು ಮಾಡಿದ್ದು ನಾವು ಯಾಕೆ ಅನುಭವಿಸಬೇಕು” ಎಂದು. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಸಿಂಪಲ್ ಉದಾಹರಣೆ: ಒಂದು ಮನೆಯಲ್ಲಿ ಒಬ್ಬ ಮಗು ಮಾನಸಿಕವಾಗಿಯೋ, ದೈಹಿಕವಾಗಿಯೋ ಊನವಾಗಿದ್ದರೆ, ಅದನ್ನು ನಾವು ಹೆಚ್ಚು ಕಾಳಜಿವಹಿಸಿ ಪ್ರೀತಿಸುವುದಿಲ್ಲವೇ? ಮನೆಯಲ್ಲಿ ಅಮ್ಮ ಆ ಮಗುವಿಗೆ ಒಂದು ಮುತ್ತು, ತುತ್ತು ಹೆಚ್ಚಿಗೆ ಕೊಟ್ಟು ಮಡಿಲಲ್ಲಿ ಅವುಚಿಕೊಳ್ಳುವುದಿಲ್ಲವೇ? ಅದೇ ರೀತಿ ಸಾವಿರಾರು ವರ್ಷಗಳಿಂದ ದಮನಕ್ಕೆ ಒಳಗಾಗಿದ್ದಾರೆ. ಈ ಒಂದು ನೆಗೆಟಿವ್ ಇಂಪ್ಯಾಕ್ಟ್ ನಿಂದ ಹೊರಬರಲು ಅವರಿಗೆ ಒಂದಷ್ಟು ಕಾಲ ಬೇಡವೇ!? ಪರರ ಶೋಷಣೆಯಿಂದ ಖಿನ್ನತೆಗೆ ಒಳಗಾಗಿ ಊನವಾದ ನಮ್ಮ ಸೋದರರೇ ಆದ ಹಿಂದುಳಿದವರಿಗೆ ಅವರು ಒಂದು ಹಂತಕ್ಕೆ ಬರುವವರೆಗೂ, ಹೆಚ್ಚಿನ ಸವಲತ್ತುಗಳನ್ನು ಕೊಟ್ಟು ಸಲುಹಿದರೆ ಅದಕ್ಕಾಗಿ ಕರುಬುವುದಾದರೂ ಏತಕ್ಕಾಗಿ?! ಇದು ಯೋಚಿಸಬೇಕಾದ ವಿಚಾರ.
ನಾನು ಮತ್ತೊಂದು ವಿಚಾರವನ್ನೂ ಇಲ್ಲಿ ಹೇಳ ಬಯಸುತ್ತೇನೆ. ಅದಕ್ಕೆ ಮುಂಚೆ ಒಂದು ಘಟನೆ: ಕೇರಳದಲ್ಲಿ ದಲಿತರು ಶಾಲೆ ಸೇರುತ್ತಿದ್ದಾರೆ ಎಂಬ ವಿಚಾರ ಕೇಳಿದ ಸವರ್ಣೀಯನೊಬ್ಬ ಪ್ರಜ್ಞೆ ತಪ್ಪಿಬಿದ್ದು, ಮಾತು ಕಳೆದುಕೊಂಡುಬಿಟ್ಟರಂತೆ! ಅದೇ ರೀತಿ ನನ್ನ ತಂದೆ ಜನಿವಾರ ಕಳಚಿಟ್ಟಾಗ ನನ್ನ ತಾತ ದಂಗಾಗಿದ್ದರು, ವಿಚಲಿತರಾಗಿದ್ದರು. “ಇತರೆ ಜಾತಿ”ಯವರು ಅಕಸ್ಮಾತ್ ನನ್ನಜ್ಜಿಯನ್ನು ಮುಟ್ಟಿ ಬಿಟ್ಟರೆ ಅಜ್ಜಿ ಹೆದರುತ್ತಿದ್ದರು, ನೊಂದುಕೊಳ್ಳುತ್ತಿದ್ದರು. ಈ ಉದಾಹರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಗೆಳೆಯರೇ, ಇಲ್ಲಿ ನಮಗೆ ಕಾಣಸಿಗುವುದು ನಂಬಿಕೆಯ ಪಾತ್ರ! ಅದ್ಯಾವುದೋ ಕಾಲದಲ್ಲಿ ಯಾರೋ, ಯಾವ ಕುಚೋದ್ಯದಿಂದಲೋ ಮಾಡಿದ ಹಲವಾರು ಕೆಟ್ಟ ಪ್ರತೀತಿಗಳೂ, ವಾಡಿಕೆಗಳೂ ಬರಬರುತ್ತಾ ರಕ್ತಗತವಾದ ಒಂದು ಆಚರಣೆಯಾಗಿ, ಒಂದು ಗಾಢ ನಂಬಿಕೆಯಾಗಿ ಬದಲಾಗಿಬಿಟ್ಟಿದೆ. ಮತ್ತು ಯಾವುದೇ ಒಂದು ಗಾಢ ನಂಬಿಕೆಯ ಪರಿಣಾಮ, ಪ್ರಭಾವಗಳು ನಮ್ಮೆಲ್ಲರಿಗೂ ಗೊತ್ತೇ ಇವೆ. ಇವರ, ಇಂತಹವರ ವಿಚಾರಗಳನ್ನು ವಿರೋಧಿಸಬೇಕೆ ಹೊರತು ಒಂದು ಜಿದ್ದಾಗಬಾರದು ಅಲ್ಲವೇ!
ಒಟ್ಟಿನಲ್ಲಿ, ಅವರು ಎಂದು ಇವರು, ಇವರು ಎಂದು ಅವರು ಬೊಟ್ಟು ಮಾಡಿ ತೋರಿಸುವುದನ್ನು ನಿಲ್ಲಿಸಿ, ನಮ್ಮ ಹಿಸ್ಟರಿಯನ್ನು ಅದರ ಕಹಿಯನ್ನು ಮರೆತು, ಮನ್ನಿಸಿ, ಇನ್ನು ಮುಂದೆ ಒಂದು ಈಕ್ವಾಲಿಟಿ, ಒಂದು ಸಮೀಕರಣ ಮಂತ್ರವನ್ನು ಎಲ್ಲರೂ ಕಲಿಯುವಂತಹ ಮನಸ್ಸು ನಮ್ಮೆಲ್ಲರದೂ ಆಗಬೇಕು. ಇದು ಸಾಧ್ಯವಾಗಿಸಬಹುದು ಅಲ್ಲವಾ?!

‍ಲೇಖಕರು avadhi

August 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. ಸುರೇಶ್

    ಸಂಯುಕ್ತ ಅವರೆ,
    ಒಳ್ಳೆಯ ವಿಷಯ ಎತ್ತಿದ್ದೀರಿ. ಹೀಗೆ ಎಲ್ಲೆಡೆ ಜಾತಿಯ ಮಾತು ಬರುತ್ತಿರುವುದು ನಿಜ. ಆದರೆ ಕೆಲವರದ್ದು ಈ ಜಾತ್ಯಾತೀತವಾದ ಬರೀ ಲೇಖನಕ್ಕೆ, ಭಾಷಣಕ್ಕೆ ಸೀಮಿತವಾಗುತ್ತದೆ. ತಮ್ಮ ಮನೆ ಮದುವೆ, ಸಂಪ್ರದಾಯ, ಶುಭ ಸಮಾರಂಭ ಬಂದಾಗ ಈ ಜಾತ್ಯಾತೀತ ನಿಲುವು ಮಾಯವಾಗಿಬಿಡುತ್ತದೆ. ನಿಮ್ಮ ಮನೆಯಲ್ಲೀ ಇವರೆಡಕ್ಕೆ ಸೀಮಿತವಾಗದೇ ಆಚರಣೆಯಲ್ಲೂ ಇದ್ದರೆ ಸಂತೋಷ. ನಿಮ್ಮ ತಂದೆಯವರು ಜನಿವಾರ ಕಿತ್ತಿಟ್ಟರು, ಜಾತಿ ಬಿಟ್ಟರು, ಜಾತ್ಯಾತೀತ ಪರಿಸರ ನಿರ್ಮಿಸಿ ನಿಮ್ಮನ್ನು ಬೆಳೆಸಿದರು ಎಂದಿರಲ್ಲ. ಖುಷಿಯಾಯಿತು. ಆದರೆ ತಾವು ಮದುವೆಯಾಗುವಾಗ ನಿಮ್ಮದೇ ಜಾತಿಯ ಹುಡುಗನನ್ನು ನೋಡಿ ಮದುವೆ ಮಾಡಿದರೆ? ಆ ವಿಷಯದಲ್ಲೂ ಅವರು ವಿಶಾಲ ಹೃದಯಿಗಳಾಗಿ ವರ್ತಿಸಿದರೆ? ಜನಿವಾರ ಕಿತ್ತಿಡುವುದು, ಬ್ರಾಹ್ಮಣ ಸಂಪ್ರದಾಯ ಬಿಡುವುದು ಜಾತಿ ಬಿಡುವ ತರವಲ್ಲ. ಜನಿವಾರ ವಿದ್ದಾಗಲೂ ಶೂದ್ರನನ್ನು ತಬ್ಬಿಕ್ಕೊಳ್ಳುವುದು. ಮನೆಯಲ್ಲಿ ಕರೆದೆ ಉಪಚರಿಸುವುದು ಆಗಬೇಕಾದ ಬದಲಾವಣೆ.

    ಪ್ರತಿಕ್ರಿಯೆ
    • samyuktha

      Suresh avare,
      Maduveya sandarbhadalloo namma tande “yaavude” jatiya huduganannu aliyanaagisikollalu tayariddaru. Adara bagge nannottige charchisiddaroo kooda. Adare nirdhara nanage bittiddaru.

      ಪ್ರತಿಕ್ರಿಯೆ
  2. sunil

    Facebook nallaadaroo ondashtu aarogyakara charche mattu nemmadi sigatte ankondre, itteecehege illoo ide jaati vaadagalu shuruvaagide.
    Ivrellaa onde kanrri…bere bere bhavuta hariskondu jatiyate bittuttaare ashte.
    M N Sreenivas avara pustakadalloo ide untu….baru barutaa jaati prabalavaaguttaa hogatte….kadme aagolla anta…
    These groups are prooving it.

    ಪ್ರತಿಕ್ರಿಯೆ
  3. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಲೇಖನ ಚೆನ್ನಾಗಿದೆ. ಶೋಷಿತರ ಬಗ್ಗೆ ಮರುಕ,ಶೋಷಿತ ಮತ್ತು ಶೋಷಕರ ನಡುವಿನ ಹೃದಯ ಸಾಮರಸ್ಯಕ್ಕಾಗಿ ಹಂಬಲ ವ್ಯಕ್ತವಾಗಿದೆ. ಒಂದು ಘಟನೆಯನ್ನು ಉಲ್ಲೇಖಿಸಬಯಸುತ್ತೇನೆ: ನಮ್ಮ ಅಣ್ಣ ಪಿ.ಎಸ್.ರವೀಂದ್ರನಾಥ್ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶುದ್ಧಹಸ್ತ ,ಕರ್ತವ್ಯನಿಷ್ಠೆ , ಕಾನೂನು ಪಾಲನೆಯ ಅಚಲತೆಯೊಂದಿಗೆ ಮಾನವೀಯ ದೃಷ್ಟಿಕೋನ, ಶಿಸ್ತುಬದ್ಧ ಕರ್ತವ್ಯಪಾಲನೆ ಹಾಗು ಜೀವನ, ಸೇವಾತತ್ಪರತೆ, ಉನ್ನತ ಆದರ್ಶ, ಪರಿಶುದ್ಧ ಬದುಕು,ಅತ್ಯಂತ ಸರಳ ಸ್ವಭಾವ -ಹೀಗೆ ಹಲವಾರು ಗಣಗಳ ಸೌಮ್ಯ ಮೂರ್ತಿ. ಒಮ್ಮೆ ಅವರು ಕಛೇರಿಯಲ್ಲಿ ಕಾರ್ಯಮಗ್ನರಾಗಿರುವಾಗ ಯಾರದೋ ಮಾತು ಕೇಳಿ ನಂಬಿದ ದಲಿತ ಮುಖಂಡರೊಬ್ಬರು ಕಛೇರಿಯೊಳಗೆ ನುಗ್ಗಿ ‘ಏನ್ ಸಾರ್,ನಮ್ಮ ದಲಿತ ಶಿಕ್ಷಕನೊಬ್ಬನ ಮೇಲೆ ಶಿಸ್ತುಕ್ರಮ ಜರುಗಿಸುತ್ತಿದ್ದೀರಂತಲ್ಲ ( ಕ್ಷಮಿಸಿ,ಸ್ವಲ್ಪ ಹೆಚ್ಚು ಕಡಿಮೆ ಹೀಗೆ,ಸರಿಯಾಗಿ ನೆನಪಿಲ್ಲ) . ನಿಮ್ಮ ಈ ದಲಿತ ವಿರೋಧೀ ನೀತಿಯನ್ನು ಖಂಡಿಸುತ್ತೇನೆ! …….. ‘ ಇತ್ಯಾದಿ ಆರೋಪಗಳನ್ನು ಮಾಡತೊಡಗಿದರಂತೆ. ಆಗ ರವೀಂದ್ರನಾಥ್ರವರು ಪ್ರತಿಕ್ರಿಯಿಸಿದ ರೀತಿ ನನಗೆ ತುಂಬಾ ಮೆಚ್ಚುಗೆಯಾದದ್ದು. ಅವರಂದದ್ದು ಹೀಗೆ: ‘ ದಯವಿಟ್ಟು ಕೂತ್ಕೊಳ್ಳಿ, ನಿಮ್ಮ ಈ ಆಕ್ರೋಶವನ್ನು ನಾನು ಗೌರವಿಸುತ್ತೇನೆ ……. ‘ ಎಂದು ಹೇಳಿ ನಂತರ ಅವರ ಸಮಸ್ಯೆಯ ಬಗ್ಗೆ ಚರ್ಚಿಸಿದರಂತೆ. ಹೃದಯವನ್ತರಲ್ಲಿ ಮಾತ್ರ ಇದ್ದಕ್ಕಿದ್ದಂತೆ ಇಂಥ ಪ್ರತಿಕ್ರಿಯೆ ಬರಲು ಸಾಧ್ಯ! ‘ಜನರಲ್ ‘ ಆದವರು ಶೂದ್ರರ ಮತ್ತು ದಲಿತರ ಆಕ್ಷೇಪಣೆಗಳನ್ನು, ಆಕ್ರೋಶಗಳನ್ನು, ಹಕ್ಕೊತ್ತಾಯಗಳನ್ನು ಅತ್ಯಂತ ಗೌರವದಿಂದ ಅರ್ಥ ಮಾಡಿಕೊಳ್ಳಬೇಕಾಗಿದೆ. ನಮ್ಮ ದೇಶದ ಇತಿಹಾಸದಲ್ಲಿ ಈ ಸಂಬಂಧ ನಡೆದಿರುವ ಅನ್ಯಾಯ -ಅಕ್ರಮಗಳನ್ನು ಮಾನವೀಯವಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ಇದು ಸಾಧ್ಯ.

    ಪ್ರತಿಕ್ರಿಯೆ
  4. g.n.nagaraj

    ಬಹಳ ಒಳ್ಳೆಯ ಮನಸ್ಸಿನಿಂದ ಹೊಮ್ಮಿದ ಭಾನೆಗಳು.ನೀವು ಅಡ್ಡ ಗೋಡೆಯ ಮೇಲಿರುವವರಲ್ಲ. ಜಾತಿವ್ಯವಸ್ಥೆಯ ವಿರೋಧಿಗಳು. ಮನುಜ ಮತದವರು.ಇಂತಹ ಆರೋಗ್ಯಕರ ಚಿಂತನೆಯನ್ನು ( ಕೆಲವು ಮಿತಿಗಳಿದ್ದರೂ ) ಸಾಧಿಸಲು ಕಾರಣವಾದ ನಿಮ್ಮ ತಂದೆ,ಮನೆಯ ಪರಿಸರ, ಮತ್ತು ನಿಮಗೂ ಅಭಿನಂದನೆಗಳು.
    ” ಜಾತಿ ಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ,
    ಕೃತಕ ತಿಮಿರದಾಳದಿಂದ ವಿಸ್ತಾರದ ಬಯಲಿಗೆ,
    ನಾವೆಲ್ಲರು ಒಂದೇ ಜಾತಿ, ಒಂದೇ ಮತ
    ಒಂದೇ ಕುಲ ನಾವು ಮನುಜರು
    ನರರ ನಡುವಿನಡ್ಡ ಗೋಡೆಗಳನು ಕುಟ್ಟಿ ಕೆಡಹುವೆವು
    ನಾವು ನವ ವಿಧಾತರು ”
    ” ಜಾತಿ ಮತ ಬೇಧಗಳ ಕಂದಕವು ಸುತ್ತಲೂ
    ದುರ್ಬೇಧ್ಯವೆನೆ ಕೋಟೆ ಕೊತ್ತಲಗಳು
    ವೀರ ತರುಣರು ನಾವು ಒಂದೇ ನೆಗೆತಕೆ ನೆಗೆವೆವೋ ಕಂದಕವನು ”
    ಇದನ್ನು ಬರದವರೂ ಮೇಲ್ಜಾತಿಯವರೇ.( ಅವರು ಮುಂದೆ ಬದಲಾದರು ಎಂಬ ಮಾತು ಬೇರೆ. ) ಈ ಭಾವನೆ ಎಲ್ಲ ಮೇಲ್ಜಾತಿಯವರಲ್ಲಿ ಮೂಡಲಿ.ಕೆಳ ಜಾತಿಯವರಲ್ಲಿ ಇದರ ಪ್ರತಿಬಿಂಬ ಬೆಳಗುತ್ತದೆ. ಅದೇ ಸಮಯದಲ್ಲಿ ಕೇವಲ ಭಾವನೆಗಳಿಂದ ಜಾತಿ ಪದ್ಧತಿ ಹುಟ್ಟಿದ್ದಲ್ಲ. ಕೇವಲ ಭಾವನೆಗಳ ಬದಲಾವಣೆಯಿಂದ ಅಳಿಯುವುದೂ ಅಲ್ಲ. ಸಮಾಜದ ರಚನೆಯ ಒಂದು ಭಾಗ ಜಾತಿ ಪದ್ಧತಿ. ಮುಖ್ಯವಾಗಿ ಭೂ ಒಡೆತನ ಯಾರದು, ಕೃಷಿಯಂತಹ ಕಷ್ಟಕರ ದುಡಿಮೆಯನ್ನು ಯಾರು ಮಾಡಬೇಕು ಎಂಬ ವಿಷಯದಲ್ಲಿ ಮೂಡಿದ ಸಾಮಾಜಿಕ ಸಂರಚನೆಯ ಭಾಗ. ಆದ್ದರಿಂದಲೇ ಅನೇಕ ಸಂತರ, ಧಾರ್ಮಿಕ ಪಂಥಗಳ, ಸಮಾಜ ಸುಧಾರಕರ ಪ್ರಯತ್ನಗಳ ನಂತರವೂ ಜಾತಿ ಪದ್ಧತಿ ಹಾಗೇ ಉಳಿದಿದೆ. ಈ ಎಲ್ಲ ಆಯಾಮಗಳನ್ನು ಆಳವಾಗಿ ಅರ್ಥ ಮಾಡಿಕೊಂಡು ಸಮಾಜದ ಸಮಗ್ರ ಬದಲಾವಣೆಗೆ ಬೃಹತ್ ಹಾಗೂ ಧೃಡ ಪ್ರಯತ್ನ ಮಾಡದೆ ಜಾತಿ ವಿನಾಶ ಸಾಧ್ಯವಿಲ್ಲ.

    ಪ್ರತಿಕ್ರಿಯೆ
  5. Rj

    ಹೌದು.ಬಾಲ್ಯದಲ್ಲಿ ನಿಮಗಾದ ಅನುಭವಗಳು ನನ್ನವೂ ಕೂಡ.ಆಗೆಲ್ಲ ನನಗೆ ವಿಶೇಷ ಮರ್ಯಾದೆ ಸಿಗುತ್ತಿದ್ದುದು ನೋಡಿ ಖುಷಿಯೇನೋ ಆಗುತ್ತಿತ್ತು.ಆದರೆ ಬರಬರುತ್ತ ಅದು ನಾಚಿಕೆಯ ವಿಷಯವೆನಿಸತೊಡಗಿತು.ಲೇಖನ ಒಳ್ಳೆಯ ವಿಚಾರಗಳಿಂದ ಕೂಡಿದೆ.
    -Rj

    ಪ್ರತಿಕ್ರಿಯೆ
  6. ಹನುಮಂತ ಹಾಲಿಗೇರಿ

    ಒಳ್ಳೆ ವಿಚಾರ ಎತ್ತಿದ್ದಿರಿ

    ಪ್ರತಿಕ್ರಿಯೆ
  7. ಕೃಷ್ಣೇಗೌಡ ಟಿ.ಎಲ್.

    ಸಂಯುಕ್ತರವರೆ,
    ಒಳ್ಳೆಯ ವಿಚಾರವನ್ನು ಚರ್ಚಿಸಿದ್ದೀರಿ.ಆದರೆ ಜಾತಿ ವ್ಯವಸ್ಥೆ ಕೇವಲ ಭವನಾತ್ಮಕವಲ್ಲ.ಅದು ಯಾವುದರ ತಳಹದಿಯ ಮೇಲೆ ಆಧರಿಸಿದಿಯೋ ಅದನ್ನು ಗರುತಿಸಿ ತುಂಡರಿಸುವ ಕೆಲಸ ಆಗಬೇಕು.ಆದರೂ ಇಂತಹದೊಂದು ಚರ್ಚೆಯೇ ಆರೋಗ್ಯಕರ. ತಮಗೆ ಧನ್ಯವಾದ

    ಪ್ರತಿಕ್ರಿಯೆ
  8. Ashok Shettar

    ಜಾತಿ ವಿನಾಶದ ಚಿಂತನೆ ಜಾತಿ ವಿರೋಧಿ ಹೋರಾಟ ಇವೆಲ್ಲ ಕೆಲವು ಜಾತಿಗಳ ವಿರುದ್ಧ ಇನ್ನು ಕೆಲವು ಜಾತಿಗಳ ಹೋರಾಟ ಎಂಬಂತಾಗಿವೆ. ಎಲ್ಲಿಯ ವರೆಗೆ ಜಾತಿ ಎಂಬ ವ್ಯವಸ್ಥೆಯ ವಿರುದ್ಧ ಎಲ್ಲಾ ಜಾತಿಗಳವರ ಹೋರಾಟವಾಗಿ ಇದು ಮಾರ್ಪಡುವದಿಲ್ಲವೋ ಅಲ್ಲಿಯ ವರೆಗೆ ಇದು ಗುಡ್ಡಕ್ಕೆ ಕಲ್ಲು ಹೊರುವ ಕ್ರಿಯೆಯೇ. ಶೋಷಕ ಜಾತಿಗಳೊಂದೆಡೆ ಶೋಷಿತ ಜಾತಿಗಳಿನ್ನೊಂದೆಡೆ ಎಂಬ ಧೃವೀಕರಣ ಕೂಡ ಇಲ್ಲಿಲ್ಲ. ಬ್ರಾಹ್ಮಣರಿಂದ ಮೊದಲ್ಗೊಂಡು ಹೊಲೆಮಾದಿಗರ ವರೆಗಿನ ಎಲ್ಲಾ ಜಾತಿಗಳಲ್ಲೂ ಮತ್ತೆ ಆಂತರಿಕವಾದ ಮೇಲು ಕೀಳಿನ ಪರಿಗಣನೆಗಳಿವೆ. ಎಲ್ಲರೂ ಜಾತಿ ಚೌಕಟ್ಟಿನಿಂದ ಹೊರಬಂದು ಯೋಚಿಸಬೇಕು ಎಂದು ಪ್ರತಿಯೊಬ್ಬನು ಹೇಳುತ್ತಾನೆ, ತನ್ನೊಬ್ಬನನ್ನು ಬಿಟ್ಟು..! ಮೀಸಲಾತಿಯ ಪುನರ್ವಿಮರ್ಶೆ ಆಗುತ್ತಿಲ್ಲ. ಏಕತ್ರಿತವಾಗಿದ್ದರೆ ಪ್ರಬಲ ಶಕ್ತಿಯಾಗಬಹುದಾಗಿದ್ದ ದಲಿತ ಜಾತಿಗಳೇ ಮೀಸಲಾತಿಯೊಳಗಿನ ಅವೈಜ್ಞಾನಿಕ ಸೂತ್ರಗಳಿಂದಾಗಿ ತಮ್ಮ ತಮ್ಮೊಳಗೇ ವಿಭಜಿತವಾಗಿವೆ.
    ಏನಿದ್ದರೂ ಈ ಕುರಿತ ನಿಮ್ಮ ಬರಹದ ಹಿನ್ನೆಲೆಯಲ್ಲಿರುವ ಯೋಚನೆ ಪ್ರಾಮಾಣಿಕವಾಗಿದೆ. ಜಾತಿಯ ಕುರಿತ ಚಿಂತನೆಗಳಲ್ಲಿ ಇಂಥ ಪ್ರಾಮಾಣಿಕತೆ ಸವರ್ಣೀಯರು ಎಂದು ದಲಿತರು ಕರೆಯುವ ಸಮುದಾಯಗಳಲ್ಲೂ ಸ್ವತ: ದಲಿತರಲ್ಲೂ ಹೆಚ್ಚು ಹೆಚ್ಚಾಗಿ ಮೂಡುತ್ತ ಹೋದರೆ ಸ್ವಲ್ಪ ಮುಕ್ತವಾದ ರೀತಿಯಲ್ಲಿ ಇವುಗಳನ್ನು ಚರ್ಚಿಸುವ ವಾತಾವರಣ ಮೂಡಬಹುದೇನೋ

    ಪ್ರತಿಕ್ರಿಯೆ
  9. veda

    ಒಟ್ಟಿನಲ್ಲಿ, ಅವರು ಎಂದು ಇವರು, ಇವರು ಎಂದು ಅವರು ಬೊಟ್ಟು ಮಾಡಿ ತೋರಿಸುವುದನ್ನು ನಿಲ್ಲಿಸಿ, ನಮ್ಮ ಹಿಸ್ಟರಿಯನ್ನು ಅದರ ಕಹಿಯನ್ನು ಮರೆತು, ಮನ್ನಿಸಿ, ಇನ್ನು ಮುಂದೆ ಒಂದು ಈಕ್ವಾಲಿಟಿ, ಒಂದು ಸಮೀಕರಣ ಮಂತ್ರವನ್ನು ಎಲ್ಲರೂ ಕಲಿಯುವಂತಹ ಮನಸ್ಸು ನಮ್ಮೆಲ್ಲರದೂ ಆಗಬೇಕು. ಇದು ಸಾಧ್ಯವಾಗಿಸಬಹುದು ಅಲ್ಲವಾ?!
    Howdu Saadhyavagisabeku. Olleya lekhana sampu

    ಪ್ರತಿಕ್ರಿಯೆ
  10. Mohan V Kollegal

    ಒಳ್ಳೆಯ ಲೇಖನ. ಸಮಾನತೆ ಬೇಡುವವರು ಮೀಸಲಾತಿಯನ್ನು ಯಾಕೆ ವಿರೋಧಿಸುವುದಿಲ್ಲವೆಂಬ ಬಾಲಿಶ ಮಾತನ್ನೇ ಮೂಲವಾಗಿಸಿಕೊಂಡು ಜಾತಿಯನ್ನು ಸಮರ್ಥಿಸಿಕೊಳ್ಳುವವರನೇಕರಿದ್ದಾರೆ. ಆದರೆ, ಮೀಸಲಾತಿ ಜಾತಿಯಾಧಾರವಾಗಿ ಕಂಡರೂ ಅನಾದಿ ಕಾಲದಿಂದಲೂ ತುಳಿತಕ್ಕೊಳಗಾಗಿ ನೆಲ ಕಚ್ಚಿರುವವರನ್ನು ಮೇಲಕ್ಕೆತ್ತುವ ಒಂದು ಪ್ರಯತ್ನವಷ್ಟೆ.ಇಷ್ಟು ದೊಡ್ಡ ಪ್ರಪಂಚದಲ್ಲಿ, ಅದಿರಲಿ, ನಮ್ಮ ಹಳ್ಳಿಗಳಲ್ಲಿ ನಾವು ನಮ್ಮ ಬೀದಿಗಷ್ಟೇ ಸೀಮಿತವಾಗಿ ಬದುಕು ನಡೆಸುವ ಕರ್ಮದ ಹಿಂದೆ ತಲಾತಲಾಂತರಗಳಿಂದ ತುಳಿಯುತ್ತ ಬಂದವರ ಮರ್ಮವಿದೆ. ಅಂಬೇಡ್ಕರ್ ರಂತಹ ವ್ಯಕ್ತಿಗಳು ಹುಟ್ಟದೇ ಹೋಗಿದ್ದಾರೆ, ಇಂದು ಈ ದೇಶ ಧರ್ಮ ಸಂಪ್ರದಾಯಗಳ ನೆರಳಿನಲ್ಲಿ ಬಣ್ಣ ಹಚ್ಚಿಕೊಂಡು ಒಳಗೊಳಗೆ ಅದೆಷ್ಟು ಸೊರಗಿ ಹೋಗುತ್ತಿತ್ತು. ಸ್ವಲ್ಪವಾದರೂ ಕಣ್ಣು ಬಿಡುತ್ತಿರುವ ಜನ ಕಣ್ಣಿಲ್ಲದ ಕುರುಡರಾಗಿಹೋಗುತ್ತಿದ್ದರು.

    ಪ್ರತಿಕ್ರಿಯೆ
  11. Anil Talikoti

    Excellent article, completely agree ‘ಯಾವ ವ್ಯಕ್ತಿ ತನ್ನ ಜ್ಞಾನಾರ್ಜನೆಗಾಗಿ ತುಡಿಯುತ್ತಾನೋ, ಜ್ಞಾನ ಸಂಪಾದನೆಗಾಗಿ ಹಂಬಲಿಸುತ್ತಾನೋ ಆತನೇ ಬ್ರಾಹ್ಮಣ’

    ಪ್ರತಿಕ್ರಿಯೆ
  12. ಅಜ್ಜಿಮನೆಗಣೇಶ್

    ಹಳೆಯ ಅವ್ಯವಸ್ಥೆ,ಹೊಸ ಅವಸ್ಥೆಯ ನಡುವೆ ನಿಜವಾದ ವ್ಯವಸ್ಥೆಯ ಹುಡುಗಾಟ ಹಂಬಲ ವ್ಯಕ್ತಪಡಿಸಿದ್ದೀರಿ…ನನಗೂ ಈ ಜಾತಿ, ದರ್ಮಗಳ ಕಟ್ಟುಪಾಡುಗಳಲ್ಲಿ ನಂಬಿಕೆಯಿಲ್ಲ.ನಾನು ನೀವು ಕರೆದ ಜನರಲ್ ನವನೆ ಆದರೂ ನನ್ನ ಬೆಳವಣಿಗೆ ಸಾಗಿ ಬಂದಿದ್ದು ನಾರಾಯಣ ಎಂಬ ವ್ಯಕ್ತಿಯೊಂದಿಗೆ. ಬಾಲ್ಯದಲ್ಲಿ ಅವನು ಕಲಿಸಿದ ಜೀವನ ಪಾಠವೆ ಇಂದಿಗೂ ಮೈಗೂಡಿದಿದೆ. ಅವನೆದುರು ತನ್ನ ಅಶ್ಲೀಲ ಭಾವಗಳನ್ನ ತೆರೆದುಕೊಳ್ಳುತ್ತಿದ್ದ ಜನರಲ್ ನ ಪ್ರಪಂಚ,ನನ್ನನ್ನ ಸಲೀಸಾಗಿ ಒಪ್ಪಿಕೊಂಡಿತ್ತು.ಹಾಗೆ ಅವನೊಂದಿಗೆ ಇದ್ದ ಕಾರಣಕ್ಕೆ ದೂರವು ಮಾಡುತ್ತಿತ್ತು.ಹೀಗಾಗಿ ಶೋಷಣೆಯ ಎಲ್ಲ ಮಜಲುಗಳು ಚಿಕ್ಕಂಧಿನಲ್ಲೆ ಅರ್ಥವಾದವು.ಹುಡುಗಾಟಕ್ಕೊ,ದೂರವಿಟ್ಟ ಸಿಟ್ಟಿಗೋ ಆಗಾಗ ನಾವಿಬ್ಬರು ಸೇರಿ ಇಡಿ ಕೇರಿಯನ್ನ ಮೈಲಿಗೆ ಮಾಡುತ್ತಿದ್ದುದು ಇಂದಿಗೂ ನಗೆ ತರಿಸುತ್ತಿದೆ.ಅದರಿಂದ ನಾನು ತಿಂದ ಪೆಟ್ಟುಗಳಿಗೆ ಲೆಕ್ಕವೆ ಇಲ್ಲ ಬಿಡಿ.ಆದರೆ ಬೆಳದ ನಂತರ ಅಂತಹ ಹುಡುಗಾಟಿಕೆ ಮರೆಯಾಯಿತು.ಅದೃಷ್ಟಕ್ಕೆ ನನ್ನೊಂದಿಗೆ ಬೆಳೆದ ನಾರಾಯಣನಂತವರ ಸ್ನೇಹ ಮಾತ್ರ ಹಾಗೆ ಮುಂದುವೆರೆಯಿತು. ಆದರೆ ಹೊಸದಾಗಿ ಹೊಸ ತಳಮಳಗಳು ,ಅಂದುಕೊಂಡಿದ್ದಕ್ಕಿಂತ ಬಿನ್ನ ಸಮಸ್ಯೆಗಳು ಕಾಣತೊಡಗಿದವು.ತಳಮಟ್ಟದವರೆನಿಸಿಕೊಂಡವರೆ ಹೆಚ್ಚಿದ್ದ ಕಾಲೇಜು ನನ್ನ ಅವರಿವರ ಅಂತರದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿತು . ಮಹಡಿಯವರದ್ದು ಶೋಷಣೆ ಮಾತ್ರ ಅಂದುಕೊಂಡಿದ್ದ ನನಗೆ ಮಹಡಿಯಲ್ಲಿದ್ದವರು ಕಷ್ಟದಲ್ಲಿರುವುದು ಕಂಡಿತು.ದಮನಿತರು ಅಟ್ರಾಸಿಟಿಯ ಬಳಸಿ ದೃಡವಂತರ ನಾಶ ಮಾಡಿದ ಉದಾಹರಣೆಗಳು ದೊರೆತವು.ತನಗಿಲ್ಲದ್ದು ನಿನಗೂ ಇರಬಾರದು ಎಂಬ ಮೆಲ್ಮನಸಿನ ಜಾತಿಗಳು ನಡೆಸಿದ ಹುನ್ನಾರಗಳು ತೆರೆದುಕೊಂಡವು.ಮಾಡ್ರನ್ ಅನ್ನಿಸಿಕೊಂಡರು,ನಾವೀಗ ಸೆಕ್ಯುಲರ್ ಅಂತ ಜನಿವಾರ ಕಿತ್ತವರು, ದಮನಿತರು ನಮ್ಮನ್ನ ನಂಬಲ್ಲ ಎಂದು ದೂರವಿಟ್ಟು ಅವರಿಂದ ನಾವು ಹಾಳಾದೆವಲ್ಲ ಅನ್ನುವ ದ್ವೇಷವನ್ನ ಹತ್ತಿರಬಿಟ್ಟುಕೊಂಡರು.ಮತ್ತೊಂದೆಡೆ ಅನಿಷ್ಟಕ್ಕೆಲ್ಲ ಅಂಗಾರಕನೆ ಕಾರಣ ದೂಷಿಸುವ ವರ್ಗವು ಕೆಳಮನೆಯಲ್ಲಿ ಹುಟ್ಟಿಕೊಂಡಿರುವುದು ಕಂಡಿತು.ಜೊತೆಯಲ್ಲಿ ತಮ್ಮ ಸ್ವಾರ್ಥಕ್ಕೆ ತಮ್ಮವರನ್ನೆ ಬಳಸಿಕೊಂಡು ವರ್ಗ ಸಂರ್ಘಷಕ್ಕೆ ತುಪ್ಪ ಸುರಿದು, ಸರ್ಕಾರದ ಸವಲತ್ತುಗಳನ್ನ ವಂಚಿಸುವ ಸಂಘಟನೆಗಳ ಉದ್ದೇಶ ಅರ್ಥವಾಯಿತು.ಇರುವುದೆ ಎರಡೆ ಜಾತಿ, ಉಳ್ಳವರು ಮತ್ತು ಉಳ್ಳದವರು. ಅದು ಕೂಡ ಅಸಮಾನತೆಯ ಕೂಸೆ ಅಂದರೂ ನಂಬದ ಸ್ನೇಹಿತರು.ನಿನ್ನ ಮತ ಅಲ್ಲಿಗೊ,ಇಲ್ಲಿಗೋ ಅನ್ನುವ ಸಂಧ್ಗಿಗತೆಯನ್ನ ತಂದಿಟ್ಟರು.ಜಾತಿ ಜಾಗೃತಿಯಲ್ಲು ಸಂಕುಚಿತವನ್ನ ಹುಟ್ಟಿಹಾಕಿ ಪೋಷಿಸುತ್ತಿರುವ ಇಂತಹ ಮನಸ್ಸುಗಳನ್ನ ಈಗೀಗ ಅರಿತುಕೊಳ್ಳುತ್ತಿದ್ದೇನೆ.ಸರ್ಕಾರದ ಅಡಿಯಲ್ಲಿ ಒಂದುಸಮಾಜ ಮೇಲೇರುತ್ತಿದ್ದರೆ,ಖಾಸಗಿ ವಲಯದಲ್ಲಿ ಮತ್ತೊಂದು ಸಮುದಾಯ ಸದ್ದಿಲ್ಲದೆ ಪ್ರಾಬಲ್ಯ ಪಡೆಯಲು ಹವಣಿಸುತ್ತಿದೆ .ಒಂದರಲ್ಲಿ ಇನ್ನೊಂದು ಸಮುದಾಯವನ್ನ ತುಳಿಯಲಾಗುತ್ತಿದೆ. ಅಶೋಕ್ ಶೆಟ್ಟರ್ ಹೇಳಿದ ಹಾಗೆ ಬಲಿಷ್ಟ ಸಮುದಾಯ ವಿಂದು ತನ್ನದೆ ರೀತಿಯಲ್ಲಿ ವಿಭಿಜಿತವಾಗುತ್ತಿದೆ.ಇದಕ್ಕೆ ಬಾಹ್ಯ ಶಕ್ತಿಯ ಜೊತೆಯಲ್ಲಿ,ವಿಕೇಂದ್ರಿತ ಸಮುದಾಯದ ಕೆಲ ಕೇಂದ್ರಿತ ಮನಸ್ಸುಗಳು ಕೆಲಸಮಾಡುತ್ತಿದೆ. ಚಿಕ್ಕಂದಿನಲ್ಲಿ ಮೈಮುಟ್ಟಿ ಮಾತನಾಡಿಸುವಂತಾದರೆ , ಜೊತೆಗೆ ಕೂತು ಉಣ್ಣುವಂತಾದರೆ , ಎಲ್ಲ ಸರಿಹೋದಿತು ಅಂದುಕೊಂಡಿದ್ದೆ.ಆದರೆ ಈಗ ಜಾತಿಯ ಅವ್ಯವಸ್ಥೇ ಹೆಚ್ಚಾಗಿದೆ, ಸಂಕೀರ್ಣವಾಗುತ್ತಿದೆ. ಸಮಸ್ಯೆ ಬಗೆಹರಿಸಬೇಕಾದ ಮೀಸಲಾತಿ ಕಂದರವನ್ನ ದೊಡ್ಡದು ಮಾಡುತ್ತಿದೆ.ಹೀಗಾಗಿ ನಾನಂದುಕೊಂಡಷ್ಟು ಸುಲಭವಾಗಿ ಸಮಸ್ಯೆ ಬಗೆಹರಿಯಲಾರದು ಎನ್ನಿಸುತ್ತದೆ. ಹಾಗೆ ಮನಸ್ಥಿತಿಯೊಂದೆ ಬದಲಾದರು ಇದಕ್ಕೆ ಉತ್ತರವಾಗಲಾರದು, ಯಾಕೆಂದ್ರೆ ಅಭದ್ರ ತಟದಲ್ಲಿ ನಿಂತಿರುವವರನ್ನೆ ಒಂದು ಬಣ ಅಂತ ಲೇಬಲ್ ಹಾಕುತ್ತಿರುವಾಗ ಯಾರನ್ನ ಅಂತ ಒಪ್ಪಿಕೊಳ್ಳುವುದು ಜಾತಿಯ ನಂಟನ್ನ, ಬಿಟ್ಟಿರಲಾರದ ಸ್ನೇಹವನ್ನ.ಒಟ್ಟಿನಲ್ಲಿ ಅನಾಧಿ ಕಾಲದ ಬೇದಬಾವದ ವ್ಯವಸ್ಥೆ, ಹೇಗೇಗೋ ಮಂಥನ ಗೊಂಡು ಇಂದು ರಾಡಿಯಾಗಿ ಹರಿಯುತ್ತಿದೆ.ಅದಕ್ಕೆ ಪ್ರತಿಮನೆಯ ಹೊಲಸು ಸೇರುತ್ತಿದೆ.ಸ್ವಚ್ಚಗೊಳಿಸಬೇಕಾಗಿದೆ ದರ್ಮವನ್ನ, ಜಾತಿಯನ್ನ ,ಉಪಜಾತಿಯನ್ನ,ಪಂಗಡ,ವಂಶಾವಳಿ,ಕೊನೆಗೆ ಪ್ರತಿಷ್ಟೆಗಿಟ್ಟುಕೊಂಡ ಸರ್ ನೇಮ್ ನ್ನು ಸಹ ಹೆಕ್ಕಿ ಸುಡಬೇಕಾಗಿದೆ. ಈ ನಿಟ್ಟಿನಲ್ಲಿ ಅಭದ್ರ ನೆಲಗಟ್ಟಿನಲ್ಲಿ ನಿಂತುಕೊಂಡು ಬಿಳಿ ಭಾವುಟನ್ನ ಹಾರಿಸಿದ್ದೀರಿ.ನಿಮ್ಮ ಪ್ರಯತ್ನ ಮುಂದುವರೆಯಲಿ, ಹೊಸ ಆಸೆಗೆ ವಿಷವುಣಿಸುವ ಸೊಳ್ಳೆ ನಾಶಕ್ಕೆ ನಾವು ಪ್ರಯತ್ನಿಸುತ್ತೇವೆ

    ಪ್ರತಿಕ್ರಿಯೆ
  13. Badarinath Palavalli

    ಜಾತೀಯ ಪದ್ದತಿಗೆ ಒಗ್ಗಿದ ದೇಶದಲ್ಲಿ, ಹಾಗೆಲ್ಲಾ ಒಮ್ಮೆಲೆ ಕ್ರಾಂತಿಯೂ ಸಂಭವಿಸುವ ಕಾಲ ಇನ್ನೂ ಬಹು ದೂರದಲ್ಲಿದೆ. ಸರ್ಕಾರಗಳೂ ಮನುಷ್ಯನ ಆರ್ಥಿಕ ಬಾಲ ಮತ್ತು ಬೌದ್ಧಿಕ ಬಲದ ಮೇಲೆ ಗುರುತಿಸುವ ಕಾಲ ಎಂದಿಗೋ? 🙁

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: