ಸಂಪು ಕಾಲಂ : ಡೆಲ್ಲಿ ಸುಲ್ತಾನಳ ಮನಗೆದ್ದ ರಂಗನಾಥ!

ಬಾಗಿಲೊಳು ಕೈ ಮುಗಿಯುವಂತೆ ಮಾಡಿದ್ದ ರಾಜರಾಜ ಚೋಳ ಮತ್ತು

ಡೆಲ್ಲಿ ಸುಲ್ತಾನಳ ಮನಗೆದ್ದ ರಂಗನಾಥ

ಒಂದಾನೊಂದು ಊರಿನಲ್ಲಿ ತಂಜನ್ ಎಂಬ ಅಸುರನಿದ್ದನಂತೆ. ಅವನಿಂದ ಊರ ಜನರಿಗೆ ಭಾರೀ ಉಪದ್ರವ. ಈ ರಾಕ್ಷಸನ ಕಾಟ ತಾಳಲಾರದೆ ಊರ ಜನರು ವಿಷ್ಣುವಿನ ಮೊರೆ ಹೋದರು. ಆಗ ಆನಂದವಳ್ಳಿ ಅಮ್ಮನ್ ಮತ್ತು ವಿಷ್ಣು ನೀಲಮೇಘ ಪೆರುಮಾಳ್ ಈ ತಂಜನನ ವಧೆ ಮಾಡಿದರು. ಆತನ ಕೊನೆಯಾಸೆಯಂತೆ ಆ ಊರಿಗೆ ಅವನ ಹೆಸರಾಯಿತಂತೆ, ಅದೇ ಇಂದಿನ ತಂಜಾವೂರು ಎಂಬ ಪ್ರತೀತಿ. ಹಿಂದೊಮ್ಮೆ ಓದಿದ ಈ ಕಥೆ ಮಸುಕು ಮಸುಕಾಗಿ ನೆನಪಾಗಿ ನಮ್ಮ ಟೂರ್ ಮ್ಯಾನೇಜರ್ ಮೂಲಕ ಮತ್ತೆ ತಿಳಿದುಬಂದದ್ದು ತಂಜಾವೂರು ಬೃಹದೀಶ್ವರ ದೇವಸ್ಥಾನಕ್ಕೆ ಹೊರಡುವ ದಾರಿಯಲ್ಲಿ.

ವೀಣಾವಾದನದಲ್ಲಿ ಆಸಕ್ತಿಯಿರುವ ನಾನು ಚಿಕ್ಕಂದಿನಿಂದ “ತಂಜಾವೂರು ವೀಣೆ” ಎಂದು ಕೇಳಿದ್ದಿದ್ದಷ್ಟೇ ನನಗೆ ತಂಜಾವೂರಿನ ಬಗ್ಗೆ ತಿಳಿದದ್ದು. ಇಂದು ಅದೇ ಊರನ್ನು ನೋಡಲು ಹೋಗುತ್ತಿದ್ದೇನೆ ಎಂಬ ಕಾತರ. ಹೋಗುತ್ತಾ ದಾರಿಯೆಲ್ಲಾ ಕಣ್ಣಾಗಿ ಕಂಡದ್ದು ಇಂದು ಆ ಪ್ರದೇಶ ನಗರವೇ ಆಗಿದ್ದರೂ ಏನೋ ಒಂದು ಅಥೆಂಟಿಕ್ ಅನ್ನುವಂತಹ ರಾಜಗಾಂಭೀರ್ಯ ಆ ಊರನ್ನಾವರಿಸಿದ್ದು. ಶತಮಾನಗಳಾದಿಯಾಗಿ ತಂಜಾವೂರು ಚೋಳ, ನಾಯಕರು ಮತ್ತು ಮರಾಠರ ಆಳ್ವಿಕೆಯಲ್ಲಿ ಸುಭಿಕ್ಷವಾಗಿತ್ತು.
ಸುಮಾರು 846 – 880 AD ನಲ್ಲಿ ಪೆರುಮ್ಪಿಡುಗು ಮುತ್ತರೈಯನ್ ದೊರೆಯಿಂದ ವಿಜಯಾಲಯ ಚೋಳನ್ ತಂಜಾವೂರನ್ನು ತನ್ನ ಸುಪರ್ದಿಗೆ ತೆಗೆದುಕೊಂಡನು. ಅಂದಿನಿಂದ ರಾಜರಾಜ ಚೋಳನ್ ವರೆಗೂ ತಂಜಾವೂರು ವೈಭವೋಪೇತವಾಗಿ, ಕಲೆ, ಸಾಹಿತ್ಯ, ಸಂಗೀತ, ರಾಜಾಡಳಿತ ಎಲ್ಲದರಲ್ಲೂ ತನ್ನ ಛಾಪನ್ನು ಮೂಡಿಸಿತ್ತು. ಸುಮಾರು ಹದಿಮೂರನೇ ಶತಮಾನದವರೆಗೂ ತಂಜಾವೂರು ಚೋಳರ ರಾಜಧಾನಿಯಾಗಿತ್ತು. ನಂತರ ಪಾಂಡ್ಯರು ಇದನ್ನು ತಮ್ಮದಾಗಿಸಿಕೊಂಡರು.
ಸಾಕಷ್ಟು ಪ್ರಯಾಣದ ನಂತರ ನಾವು ಬೃಹದೀಶ್ವರ ದೇವಾಲಯವನ್ನು ತಲುಪಿದೆವು. ಮೂರ್ತಿ ಪೂಜೆಯನ್ನು ಪ್ರಶ್ನಿಸುವ, ಚಿಕ್ಕಂದಿನಿಂದಲೂ ದೇವಸ್ಥಾನ ಎಂದರೆ ಹಿಂದೆಡರುವ ಜಾಯಮಾನದವಳಾದ ನಾನು ಇಂದು (ಒಳಗಿರುವ ದೇವರ ಬಗ್ಗೆ ಅಲ್ಲದಿದ್ದರೂ) ಈ ದೇವಸ್ಥಾನದ ಪ್ರೇಮಿಯಾಗಿಬಿಟ್ಟೆ. ಆ ಭವ್ಯ ಕಟ್ಟಡ ಹೇಳುವ ರಾಜಾದಿರಾಜರ ವೈಭೋಗಗಳು, ಘನತೆಗಳು ಒಮ್ಮೆ ಕಣ್ಣ ಮುಂದೆ ಬಂದಂತಾಗಿ ನಮ್ಮ ಚರಿತ್ರೆ ಮೊದಲ ಬಾರಿಗೆ ಹೆಮ್ಮೆಎನಿಸಿಬಿಟ್ಟಿತು. ತಿಳಿಯದ ಒಂದು ಧನ್ಯತಾ ಭಾವ ನನ್ನನಾವರಿಸಿ “ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು” ಸಾಲುಗಳು ರಿಂಗಣಿಸಿದವು.
ಹೆಸರಿಗೆ ತಕ್ಕಂತೆ ಬೃಹತ್ತಾಗಿ ಮೂಡಿರುವ ಈ ದೇವಸ್ಥಾನ ಸುಮಾರು ಒಂಭತ್ತನೇ ಶತಮಾನದಲ್ಲಿ ರಾಜರಾಜ ಚೋಳನ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟಿತು. ಸಂಪೂರ್ಣ ಗ್ರಾನೈಟ್ ಕಲ್ಲಿನ ಕಟ್ಟಡವಾದ ಈ ದೇವಸ್ಥಾನ ವ್ಯಾಸರ ಶೈಲಿಯಲ್ಲಿ (ದ್ರಾವಿಡ ಮತ್ತು ನಾಗ ಎರಡೂ ಶೈಲಿಗಳ ಮಿಶ್ರಣ) ಮೂಡಿರುವಂಥದ್ದು. ಈ ದೇವಸ್ಥಾನವನ್ನು ರಾಜರಾಜೇಶ್ವರಂ ಮತ್ತು ಪೆರಿಯ ಕೋಯಿಲ್ ಎಂದೂ ಕರೆಯುತ್ತಾರೆ. ಕ್ರಿ.ಶ 985 – 1014 ರವರೆಗೆ ಆಳ್ವಿಕೆಯಲ್ಲಿದ್ದ ರಾಜರಾಜ ಚೋಳನು ಮಹಾ ಶಿವಭಕ್ತನು. ಆತನ ಭಕ್ತಿಯು ಈ ರೀತಿ ಒಂದು ಬೃಹತ್ ಕಲಾಗಾರವಾಗಿ ಮೂರ್ತರೂಪಗೊಂಡಿದ್ದು ಆರು ವರ್ಷಗಳ ಸತತ ಕಾರ್ಯಾಗಾರದಿಂದ. ಶಾಸನಗಳಲ್ಲಿ ಈ ದೇವಸ್ಥಾನದ ಹೆಸರು “ತಂಜೈ ಪೆರುವುದೈಯಾರ್ ಕೋಯಿಲ್” ಎಂದು ಕಂಡುಬಂದಿದ್ದು, ಕಾಲಾನುಗತ ಸಂಸ್ಕೃತದ ಉಪಯೋಗ ಹೆಚ್ಚಾಗಿ ಈ ದೇವಾಲಯ ಬೃಹದೀಶ್ವರ ದೇವಾಲಯವಾಯಿತು.
ಇಡೀ ದೇವಸ್ಥಾನ ಒಂದು ಸುಭದ್ರ ಕೋಟೆಯಿಂದ ಸುತ್ತುವರೆದಿದೆ. ಶಿವಪ್ಪ ನಾಯಕ ಎಂಬ ದೊರೆಯ ಹೆಸರಿನ ನೆನಪಿಗೆ ಈ ಕೋಟೆಗೆ ಶಿವಗಂಗ ಕೋಟೆ ಎಂತಲೂ ಕರೆಯುವುದುಂಟು. ಪರಕೀಯರ ದಾಳಿಯನ್ನು ತಡೆಗಟ್ಟಲು ಕೋಟೆ ಸುತ್ತಲೂ ಕಾವೇರಿಯ ಕಾಲುವೆಯನ್ನು ಮಾಡಿದ್ದರು. ಅದು ಇಂದಿಗೂ ಜೀವಂತವಾಗಿ ಹರಿಯುತ್ತಿದ್ದು, ನಗರದ ಜನರು ಉಪಯೋಗಿಸುತ್ತಿದ್ದಾರೆ. ಗರ್ಭಗುಡಿಯ ಮಂದಿರಕ್ಕೆ ತೆರಳುವ ಮುನ್ನ ದಾರಿಯಲ್ಲಿ ಎರಡು ಗೋಪುರಗಳು ಕಾಣುತ್ತವೆ. ಮೊದಲನೆಯದು ಕೇರಳಾಂತಕನ್ ತಿರುವಾಯಿಲ್ ಮತ್ತು ಎರಡನೆಯದು ರಾಜರಾಜನ್ ತಿರುವಾಯಿಲ್ ಎಂದು ಹೆಸರಿಸಲ್ಪಟ್ಟಿವೆ. ಎರಡೂ ಅತ್ಯಂತ ಸುಂದರವಾಗಿದ್ದು ಕೋಟೆಯ ಒಳಗಿನ ಭವ್ಯ ಗೋಪುರದ ಒಂದು ಝಲಕ್ ಆಗಿ ನಿಂತಿವೆ.
ಒಳಗಿರುವ ಮುಖ್ಯ ಪ್ರಾಕಾರದ ವಿಮಾನ ಸುಮಾರು ನೂರೆಂಭತ್ತು ಅಡಿ ಎತ್ತರವಿದ್ದು, ಮೇಲ್ಭಾಗದಲ್ಲಿ ಕಾಣಸಿಗುವ ಗುಂಡನೆ ಆಕಾರದ ಕಲ್ಲು ಸುಮಾರು ಇಪ್ಪತ್ತು ಅಡಿಯ ಒಂದೇ ಕಲ್ಲಿನ ಕೆತ್ತನೆಯಾಗಿದೆ. ಆ ಒಂಟಿಕಲ್ಲಿನ ಮೇಲ್ಭಾಗದ ಕಲಶ ಹನ್ನೆರಡು ಅಡಿ ಎತ್ತರದ್ದಾಗಿದ್ದು, 48 ಸೇರು ಅಪ್ಪಟ ಬಂಗಾರದ್ದಾಗಿದೆ. ಈ ಗೋಪುರದ ನಿಖರತೆ ಎಷ್ಟೆಂದರೆ, ಮಧ್ಯಾಹ್ನನದ ಸಮಯದಲ್ಲಿ ಗೋಪುರದ ನೆರಳು ಎಲ್ಲೂ ಕಾಣಸಿಗುವುದೇ ಇಲ್ಲ. ದೇವಸ್ಥಾನ ಕಟ್ಟಲು ಆ ಕಾಲದಲ್ಲಿ ಮಾಡಿಕೊಂಡ ಸಿಮೆಂಟ್ ಅನ್ನು ಕಚ್ಚು ಎಂದು ಕರೆಯುವರು. ಇದು ಮಣ್ಣು, ಬೆಲ್ಲ ಮತ್ತು ಸುಣ್ಣದ ಮಿಶ್ರಣ. ಎತ್ತರೆತ್ತರ ಸ್ಥಳಗಳಲ್ಲಿ ಕಲ್ಲುಗಳನ್ನು ಜೋಡಿಸಲು ಸರ್ವೇ ಮರಗಳ ಮತ್ತು ಮಣ್ಣಿನ ಜೋಡಣೆ ಮೆಟ್ಟಿಲಾಕಾರದಲ್ಲಿ ತಯಾರಿಸಿ ಅದರ ಮೇಲೆ ಆನೆಗಳ ಮೂಲಕ ಕಲ್ಲುಗಳನ್ನು ಸಾಗಿಸುತ್ತಿದ್ದರಂತೆ. ಆ ಕಾಲವನ್ನು ಕಲ್ಪಿಸಿಕೊಂಡರೆ ಎಂತಹ ರೋಮಾಂಚನ!

ವಿಮಾನದ ಶಿಲ್ಪವನ್ನು ಗಮನಿಸಿದಾಗ ನನ್ನ ಕುತೂಹಲ ಕೆಣಕಿದ್ದು ಅಲ್ಲಿ ಕಂಡ ಎರಡು ವಿಭಿನ್ನ ಶಿಲ್ಪಗಳು. ಒಂದು, ಒಬ್ಬ ವಿಚಿತ್ರವಾದ ಪೋಷಾಕು ಧರಿಸಿದ ವ್ಯಕ್ತಿಯ ಉಬ್ಬು ಶಿಲ್ಪ ಮತ್ತೊಂದು ದೊಡ್ಡದೊಂದು ಹಲ್ಲಿಯ ಉಬ್ಬು ಶಿಲ್ಪ. ವಿಚಾರಿಸಿದಾಗ ತಿಳಿದುಬಂದದ್ದು, ಆ ವಿಚಿತ್ರ ಪೋಷಾಕಿನ ವ್ಯಕ್ತಿ, ಅಂದಿನ ಕಾಲದ ಬ್ರಿಟಿಷ್ ಅಧಿಕಾರಿಯ ರೂಪಕ. ನಾಗಪಟ್ಟಣಂನಲ್ಲಿ ಡೇನಿಷ್ ಈಸ್ಟ್ ಇಂಡಿಯಾ ಕಂಪನಿ ಆಗ್ಗೆ ಇದ್ದು, ಈ ದೇವಸ್ಥಾನ ಕಟ್ಟುವ ಯಾವುದೋ ಶಿಲ್ಪಿ ಆ ಬ್ರಿಟಿಷರ ವಿಚಿತ್ರ ಪೋಷಾಕು ಗಮನಿಸಿ, ಆ ಡೇನಿಷ್ ವ್ಯಕ್ತಿಚಿತ್ರವನ್ನು ತನ್ನ ಕಲೆಯಾಗಿ ರೂಪಿಸಿದ್ದಾನೆ. ಮತ್ತೊಂದು ದೊಡ್ಡ ಹಲ್ಲಿ – ಇಂತಹ ಅದ್ಭುತ ಕಟ್ಟಡಕ್ಕೆ ಯಾವುದೇ ರೀತಿ ದೃಷ್ಟಿಯಾಗದಿರಲಿ ಎಂದು ಗರ್ಭಗುಡಿಯ ದ್ವಾರದಲ್ಲಿ ಹಲ್ಲಿಯನ್ನು ಕೆತ್ತಿದ್ದಾರೆ. ಬಹುಶಃ ಅದಕ್ಕೆ ದೃಷ್ಟಿ ಆಗದಿರಲು ಮತ್ತೊಂದು ಕೀಟವನ್ನೋ, ಹುಳುವನ್ನೋ ನಿರ್ಮಿಸಬೇಕೇನೋ ಎನಿಸುವಷ್ಟು ಸುಂದರ ಮತ್ತು ನಿಖರ.
ಗರ್ಭಗುಡಿಯ ಲಿಂಗ ಮತ್ತೊಂದು ಸೋಜಿಗ. ಈ ಲಿಂಗ ಏಳು ಅಡಿ ಎತ್ತರದ್ದಾಗಿದ್ದು ಹದಿಮೂರು ಅಡಿ ಸುತ್ತಳತೆ ಹೊಂದಿದೆ. ಗರ್ಭಗುಡಿಯ ಇಕ್ಕೆಲಗಳಲ್ಲಿ ಗಣೇಶ ಮತ್ತು ಸುಬ್ರಹ್ಮಣ್ಯನ ದೇವಸ್ಥಾನಗಳಿವೆ. ಸುಮಾರು ಹದಿನೈದನೇ ಶತಮಾನದಲ್ಲಿ ಗರ್ಭಗುಡಿಯ ಮುಂದೆ ಮದುರೈ ನಾಯಕರು ಒಂದು ದೊಡ್ಡ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ನಂತರ ಹದಿನೇಳನೆ ಶತಮಾನದಲ್ಲಿ ಮಂದಿರದ ಪಕ್ಕದಲ್ಲಿ ಪಾರ್ವತೀ ದೇವಿಯ ದೇವಾಲಯ ಭಕ್ತಾದಿಗಳು ಸೇರಿ ನಿರ್ಮಿಸಿದ್ದಾರೆ.
ಕಲೆ-ಶಿಲ್ಪಕಲೆ, ಅಚ್ಚುಕಟ್ಟುತನ, ನಿಖರತೆ, ಸೌಂದರ್ಯ ಪ್ರಜ್ಞೆ ಇವೆಲ್ಲದರ ಸಾಕಾರಮೂರ್ತಿಯಂತೆ ನಿಂತಿರುವ ಈ ಬೃಹದೀಶ್ವರ ದೇವಾಲಯಕ್ಕಾಗಿ ಜೀವ ತೆತ್ತವರೆಷ್ಟೋ, ಈ ದೇವಾಲಯ ನಿರ್ಮಾಣವನ್ನೇ ತಮ್ಮ ಜೀವನದ ಗುರಿಯಾಗಿಸಿ ಇಂದು ನಮಗೆ ಅದರ ಸವಿ ಉಣಿಸುತ್ತಿರುವವರೆಷ್ಟೋ. ಆ ಎಲ್ಲ ಕಾಣದ ಕೈಗಳಿಗೆ ಒಂದು ನಮನ! 1939ರಲ್ಲಿ ಮಹಾತ್ಮಾ ಗಾಂಧೀ ಈ ದೇವಾಲಯಕ್ಕೆ ಭೇಟಿಕೊಟ್ಟು ಹರ್ಷಿತಗೊಂಡು ತಮ್ಮ ಸಹಿಯೊಂದಿಗೆ ಬರೆದಿಟ್ಟ ಒಂದು ದಾಖಲೆ ಆ ದೇವಸ್ಥಾನದಲ್ಲಿ ಇಂದಿಗೂ ಘನವಾಗಿದೆ. ಅದೇನೆಂದು ನೀವೇ ಓದಿಕೊಂಡು ಬಿಡಿ:
“Rajah Sri Rajaramaranah sahib is the senior prince and hereditary trustee of tanjore palace devasthanams. He has 90 temples under his charge including the famous temple called sri brahadeswara. He has thrown open all these temples to Harijans as a purely voluntary act of reparation to harijan and thus hastened the process of purification that Hinduism is going through. It is a great and good thing that this rajah sahib has done. He deserves the congratulations of all those who believe that untouchability is a blot on Hinduism.”
ಇಷ್ಟು ಮಾತು ಇನ್ನಿಷ್ಟು ವಿವರಣೆ ಕೊಟ್ಟರೂ ಈ ದೇವಸ್ಥಾನಕ್ಕೆ ಕಡಿಮೆಯಾಗಬಹುದು ಎಂಬ ಒಂದು ನೋಟ್ ನೊಂದಿಗೆ ನಾವು ಮುಂದೆ ತೆರಳಿದ್ದು ತ್ರಿಚಿಯ ಶ್ರೀರಂಗಂನೆಡೆಗೆ. ಮೊದಲಿಗೆ ಶ್ರೀರಂಗಂ ಕಥೆಯನ್ನು ಹೇಳಿಬಿಡುತ್ತೇನೆ:
ಶ್ರೀ ರಂಗನಾಥನ ವಿಗ್ರಹವನ್ನು ಮೊದಲು ಬ್ರಹ್ಮ ಪೂಜಿಸುತ್ತಿದ್ದನಂತೆ ನಂತರ ಅದನ್ನು ಇಕ್ಷ್ವಾಕು ರಾಜನಿಗೆ ಕೊಟ್ಟನಂತೆ. ಅದನ್ನು ಆತ ಅಯೋಧ್ಯೆಗೆ ತಂದ. ಕಾಲಾನುಗತ ಅದನ್ನು ಶ್ರೀರಾಮ ಪೋಜಿಸುತ್ತಿದ್ದ. ರಾವಣನ ತಮ್ಮ ವಿಭೀಷಣ ಅಯೋಧ್ಯೆಗೆ ಬಂದಾಗ ಆ ಮೂರ್ತಿಯ ಸೌಂದರ್ಯಕ್ಕೆ, ಸಾಕಾರತೆಗೆ ಮರುಳಾಗಿ ಅದನ್ನು ಲಂಕೆಗೆ ಒಯ್ಯಲು ಬೇಡಿದ. ಆಗ ಆ ಮೂರ್ತಿಯನ್ನು ಎಲ್ಲೂ ನೆಲದ ಮೇಲಿಡದೆ ತೆಗೆದುಕೊಂಡು ಹೋಗಲು ಆಗ್ರಹವಾಯಿತು. ನೆಲದ ಮೇಲೆ ಇತ್ತ ಮರುಕ್ಷಣ ಅದು ಅಲ್ಲೇ ನೆಲೆಸಿಬಿಡುವುದಾಗಿ ತಿಳಿಸಲ್ಪಟ್ಟಿತಂತೆ. ಆಗ ಶ್ರೀರಂಗದಲ್ಲಿ ವಿಭೀಷಣ ಆ ಮೂರ್ತಿಯನ್ನು ನೆಲವೂರಿಬಿಟ್ಟಾಗ ವಿಗ್ರಹ ಅಲ್ಲೇ ಪ್ರತಿಷ್ಠಾಪನವಾಗಿಬಿಟ್ಟಿತು. ಆದರೆ ವಿಭೀಷಣನ ಸಲುವಾಗಿ, ಮೂರ್ತಿ (ಎಲ್ಲಕಡೆ ಇರುವಂತೆ) ಪೂರ್ವ ದಿಕ್ಕಿಗಲ್ಲದೆ ದಕ್ಷಿಣ ದಿಕ್ಕಿಗೆ (ಶ್ರೀ ಲಂಕೆ)ಯ ದಿಕ್ಕಿಗೆ ಮುಖ ಮಾಡಿ ನಿಂತಿದೆ. ಈಗಲೂ ವಿಭೀಷಣ ಹನ್ನೆರಡು ವರ್ಷಗಳಿಗೊಮ್ಮೆ ಬಂದು ಶ್ರೀ ರಂಗನಾಥನ ಪೂಜೆಗೈದು ಹೋಗುತ್ತಾನಂತೆ. ಎಂತಹ ಕಲ್ಪನೆ!
ಭಾರತದ ಅತಿ ಮುಖ್ಯ ವೈಷ್ಣವ ದೇವಾಲಯಗಳಲ್ಲಿ ಶ್ರೀರಂಗಂ ಒಂದು. ತಿರುಪತಿಯ ನಂತರದ ಪಾಪ್ಯುಲಾರಿಟಿ ಮತ್ತು ಜನಜಂಗುಳಿ ಕಂಡುಬರುವುದು ತಿರುಚಿರಾಪಲ್ಲಿಯ ಶ್ರೀರಂಗಂನಲ್ಲಿ. ತಿರುಚಿರಾಪಲ್ಲಿ ಎಂದರೆ ಮೂರು ತಲೆಯ ರಾಕ್ಷಸನ ಊರು ಎಂದು. ಶಿವನು ತ್ರಿಶಿರ ಎಂಬ ರಾಕ್ಷಸನ ಸಂಹಾರಮಾಡಿದ ಸ್ಥಳವೆಂದು ಪುರಾಣ ಹೇಳುತ್ತದೆ.
ಸುಮಾರು 600 ಎಕರೆ ಸವಿಸ್ತಾರವಾಗಿ ಹರಡಿರುವ ಈ ದೇವಸ್ಥಾನ, ಕಾವೇರಿ ಮತ್ತು ಕೊಲ್ಲಡಂನಿಂದ ಸುತ್ತುವರೆದಿದ್ದು ಭಾರತದಲ್ಲೇ ಅತ್ಯಂತ ದೊಡ್ಡ ದೇವಸ್ಥಾನವಾಗಿದೆ. ಭೂಲೋಕ ವೈಕುಂಠ ಮತ್ತು ಭೋಗಮಂಟಪ ಎಂದೂ ಕರೆಯುತ್ತಾರೆ. ಪ್ರಾಚೀನವಾದ ಈ ದೇವಸ್ಥಾನ ತಮಿಳು ವೈಷ್ಣವ ಸಂತರಾದ ಆಳ್ವಾರ್ ಅವರ ನುಡಿಗಳಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ. ಸ್ವರ್ಣ ಕಲಶವನ್ನೂ ಸೇರಿ ಈ ದೇವಸ್ಥಾನದಲ್ಲಿ ಚಿನ್ನ ಮತ್ತು ಆಭರಣಗಳ ಭಂಡಾರವೇ ಇದೆ.
ದೇವಸ್ಥಾನದ ಪ್ರಮುಖ ಗೋಪುರ ರಾಜಗೊಪುರಂ ಎಂದು ಕರೆಯಲ್ಪಟ್ಟಿದೆ. ಇದು 235 ಅಡಿ ಎತ್ತರವಿದ್ದು ಭಾರತದಲ್ಲೇ ಅತಿ ದೊಡ್ಡ ಗೋಪುರವಾಗಿದೆ. ಏಳು ದ್ವಾರಗಳು (ಪ್ರಾಕಾರಗಳು) ಉಳ್ಳ ಈ ದೇವಸ್ಥಾನದ ಪ್ರತಿ ಗೋಪುರಕ್ಕೂ ತನ್ನದೇ ಆದ ಕಥೆಗಳಿವೆ. ಮತ್ತು ಪ್ರತಿ ದ್ವಾರವೂ ಇತಿಹಾಸದ ಪುಟಗಳನ್ನು, ತೆರೆದಿದುವಂಥಹ ಕಥೆಗಳನ್ನು ಹೊತ್ತು ನಿಂತಿದೆ. ಇವುಗಳಲ್ಲಿ ನನ್ನ ಗಮನ ಸೆಳೆದದ್ದು ಆರನೇ ದ್ವಾರದಲ್ಲಿ ಕಂಡು ಬರುವ ಸುಲ್ತಾನರ ರಾಣಿಯ ವರ್ಣಚಿತ್ರ. ಮುಸ್ಲಿಂ ಸುಲ್ತಾನರು ಈ ದೇವಾಲಯ ಆಕ್ರಮಣ ಮಾಡಿದ್ದಾಗ, ಶ್ರೀ ರಂಗನಾಥನ ವಿಗ್ರಹವನ್ನು ದೊಚಿದ್ದರಂತೆ. ಆ ವಿಗ್ರಹದ ಸೌಂದರ್ಯಕ್ಕೆ ಮಾರುಹೋದ ಸುಲ್ತಾನನ ಮಗಳು ಅದನ್ನು ತಾನು ಮಲಗುವ ಕೋಣೆಯಲ್ಲಿ ಅಲಂಕರಿಸಿಟ್ಟುಕೊಂಡಳಂತೆ. ಬಹು ಕೋರಿಕೆಯ ನಂತರವೂ ಆಕೆ ಅದನ್ನು ಮರಳಿ ಕೊಡಲು ಒಪ್ಪಲಿಲ್ಲ. ಒಮ್ಮೆ ಆಕೆ ನಿದ್ರಿಸುತ್ತಿದ್ದಾಗ ಸುಲ್ತಾನ ಅದನ್ನು ಅಲ್ಲಿಂದ ಒಯ್ದು ದೇವಸ್ಥಾನಕ್ಕೆ ಮರಳಿಸಿದ. ಇದು ತಿಳಿತ ಕೂಡಲೇ ವಿಚಲಿತಗೊಂಡ ರಾಜಕುಮಾರಿ, ತಕ್ಷಣ ಶ್ರೀರಂಗಂಗೆ ತೆರಳಿ ತಾನೂ ಅಲ್ಲೇ ನೆಲೆಸಿದಳಂತೆ. ಆಕೆಯ ನೆನಪಿನಾರ್ಥ ದೇವಸ್ಥಾನದ ಆರನೆಯ ಗೋಪುರದಲ್ಲಿ ವರ್ಣಚಿತ್ರವೊಂದನ್ನು ಚಿತ್ರಿಸಲಾಗಿದೆ.
ಹೀಗೇ ನೋಡುತ್ತಾ, ಕೇಳುತ್ತಾ, ತಿಳಿಯುತ್ತಾ ಹೋದರೆ ನಮ್ಮ ಚರಿತ್ರೆಯ ಪ್ರತಿ ಮೈಲಿಗಲ್ಲೂ ಒಂದಲ್ಲಾ ಒಂದು ರೂಪದಲ್ಲಿ ದಾಖಲಾಗಿದೆ ಎಂಬುದು ತಿಳಿಯಬಹುದು. ಅವನ್ನೆಲ್ಲಾ ಕೆದಕಿ ಕೆರಳಿ ತಿಳಿಯುವುದು ಜೀವನದ ಒಂದು ಸಾರ್ಥಕ್ಯವೇ ಆಗಬಹುದು ಎನಿಸುವಷ್ಟು ತೃಪ್ತಿ, ಆನಂದ. ಇಸವಿ ಮತ್ತು ಹೆಸರುಗಳ ಗೋಜಲಿನಿಂದ ಹಿಂದೆಂದೂ ನನಗೆ ಇಷ್ಟವಾಗದಿದ್ದ ಹಿಸ್ಟರಿ ಕ್ಲಾಸ್ ಗೆ ಇದೀಗ ಮರಳುವ ಆಸೆಯಾಗಿಬಿಟ್ಟಿತು. ಯಾವುದೋ ಕಲ್ಲಿನ ಒಂದು ಕಪ್ಪು ಚುಕ್ಕೆಯ ಜಾಡು ಹಿಡಿದು ನಮಗಾಗಿ ಅನೇಕ ರೋಮಾಂಚಕಾರೀ ಘಟನೆಗಳನ್ನು ಬೆಳಕಿಗೆ ತರುವ ಸಂಶೋಧನಾಕಾರರ ಬೆಲೆ ನಮಗರಿವಾಗುವುದು ಇಂತಹ ಸಂದರ್ಭದಲ್ಲಿ.
ಈ ದೇವಸ್ಥಾನದಲ್ಲೊಂದು ವಿಭಿನ್ನ ಪರಿಪಾಠವಿದೆ. ಪ್ರತಿ ದಿನ ಬೆಳಗ್ಗೆ 6.45 ಕ್ಕೆ ಒಂದು ಹಸು ಮತ್ತು ಒಂದು ಆನೆಯನ್ನು ರಂಗನಾಥನ ಮುಂದೆ ಹಿಮ್ಮುಖವಾಗಿ ನಿಲ್ಲಿಸಿ ನಂತರ ಗರ್ಭಗುಡಿಯ ದ್ವಾರವನ್ನು ತೆರೆಯುತ್ತಾರೆ. ಇದು ಮಂಗಳಕರ ಎಂಬುದು ಇಲ್ಲಿನ ಪ್ರತೀತಿ. ನಗುಬಂದರೂ ನಗಲಾರದ ಪರಿಸ್ಥಿತಿ ನನ್ನದಾಗಿತ್ತು.
ಈ ದೇವಸ್ಥಾನದ ಮತ್ತಷ್ಟು ಆಕರ್ಷಣೆಗಳೆಂದರೆ, ರಾಮಾನುಜಾಚಾರ್ಯರ ಸಮಾಧಿ, ಕಂಭ ಮಂಟಪ (ಕಂಭ ರಾಮಾಯಣ ರಚಿತವಾದ್ದು ಇಲ್ಲೇ. ಇದಕ್ಕೂ ಒಂದು ಕಥೆ ಸ್ವಾಮೀ! ಕಂಭ ರಾಮಾಯಣವನ್ನು ಎಲ್ಲರೂ ಅಲ್ಲಗಳೆದಿದ್ದರಂತೆ, ಆಗ ಕಂಭ ಮಂಟಪದ ಎದುರು (ಒಂದು ಉಗ್ರ ನರಸಿಂಹನ ಗುಡಿಯಿದೆ) ಉಗ್ರ ನರಸಿಂಹ ಘರ್ಜಿಸಿದನಂತೆ ಆಗ ಎಲ್ಲರೂ ತಮ್ಮ ತಪ್ಪೊಪ್ಪಿಕೊಂಡರಂತೆ!), ಕಿಳಿ ಮಂಟಪ (ಶ್ರೀ ರಂಗನಾಥನ ಮಹಾಮಹಿಮೆಗಳನ್ನು ಒಂದು ಗಿಳಿ ಪಂಜರದಲ್ಲಿ ಕೂತು ಪಠಿಸುತ್ತಿತ್ತಂತೆ. ಅದಕ್ಕಾಗಿ ಈ ಮಂಟಪ), ಸಾವಿರ ಕಂಬಗಳ ಮಂಟಪ ಮತ್ತೊಂದು ವಸ್ತು ಸಂಗ್ರಹಾಲಯ. ರಾಜಾದಿರಾಜರ ಕಾಲದಲ್ಲಿ ಶತಮಾನಗಳಿಂದ ಉಪಯೋಗಿಸುತ್ತಿದ್ದ ಉಪಕರಣೆಗಳು, ಕತ್ತಿ ಗುರಾಣಿಗಳು, ವಸ್ತ್ರ ಆಭರಣಗಳು, ಸುವರ್ಣ ಪದಕಗಳು, ನಗ ನಾಣ್ಯಗಳು, ಶಾಸನಗಳು, ಬರಹಗಳು ಇತ್ಯಾದಿ ಅತಿ ಮುಖ್ಯ ಅವಶೇಷಗಳು ಇಲ್ಲಿ ಕಂಡು ಬಂದು ನಮ್ಮನ್ನೂ ಕ್ಷಣ ಕಾಲ ಇತಿಹಾಸದ ಪುಟಗಳೊಳಕ್ಕೆ ಸೇರಿಸಿ ಬಿಡುತ್ತದೆ.
ಎಲ್ಲ ಓಕೆ, ಆದರೆ ಇದು ಯಾಕೆ ಎಂದು ನನ್ನ ತಲೆ ತಿಂದದ್ದು ಮಾತ್ರ ಅಲ್ಲಿ ಕಂಡ ಒಂದು ಬೋರ್ಡು. ಅದರಲ್ಲಿ ಬರೆದದ್ದು “Only Hindus are allowed” ಎಂದು. ಅದ್ಭುತ ಕಲೆ, ಆರಾಧನೆ, ಭಕ್ತಿಗಳನ್ನು ಬಿಂಬಿಸುತ್ತಿರುವ ಈ ದೇವಸ್ಥಾನದ ಪ್ರತಿ ನಿಶಾನು ಇಂತಹ ಮತಾಂಧತೆಯ ಅಪವಾದವನ್ನು ನಿಜಕ್ಕೂ ಹೊತ್ತಿತ್ತೆ ಅಥವಾ ಬರಬರುತ್ತಾ “ರಾಯರ ಕುದುರೆಯಂತೆ” ನಾವುಗಳು ಬದಲಾಗಿ ಈ ಮತಾಂಧತೆಯ ಮಡುವಿನಲ್ಲಿ ಒದ್ದಾಡುತ್ತಿರುವುದಾ ಎಂಬ ಪ್ರಶ್ನೆ ಸುಳಿದು, ಎರಡನೆಯ ಕಾರಣವೇ ಬಲವಾಗಿ ಹೌದು ಎನಿಸಿದ್ದು ಮಾತ್ರ ನಮ್ಮ ಟೂರ್ ಮ್ಯಾನೇಜರ್ ಮುಸಲ್ಮಾನರ ಬಗ್ಗೆ ಒಂದು ಕ್ಷುಲ್ಲಕ ಕಾಮೆಂಟ್ ಮಾಡಿದಾಗ!
ನಮ್ಮ ಮುಂದಿನ ದಾರಿ (ಬಹುಶಃ) ಭಾರತದ ಅತಿ ಪ್ರಾಚೀನ ದೇವಾಲಯಗಳಲ್ಲಿ ಒಂದಾದ, ಸುಮಾರು 1ನೇ ಶತಮಾನದಲ್ಲೇ ಕಂಡುಬಂದಿದ್ದ ದೇವಸ್ಥಾನ ಜಂಬುಕೇಶ್ವರದತ್ತ ಸಾಗಿತ್ತು. ಆ ದೇವಸ್ಥಾನದ ಒಂದು ರಸವತ್ತಾದ ಕಥೆ ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ. ಹೆಚ್ಚು ವಿವರಗಳನ್ನು ಹೇಳಿ ಬೋರ್ ಹೊಡೆಸಿದ್ದರೆ ಕ್ಷಮಿಸಿ. ಸಹಿಸುವಂತಿದ್ದರೆ ತಿಳಿಸಿ…

‍ಲೇಖಕರು avadhi

October 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Swarna

    ಚೆನ್ನಾಗಿದೆ ವಿವರಣೆ.ಆ ಸುಲ್ತಾನನ ಮಗಳೇ ಬೀಬಿ ನಾಚ್ಚಿಯಾರ್ , ರಾಮಾನುಜರು ಮೇಲುಕೋಟೆಗೆ ಆ ಉತ್ಸವ ಮೂರ್ತಿಯನ್ನು ತಂದಾಗ ಅವಳೂ ಅಲ್ಲಿಗೆ ಬಂದು ನೆಲೆ ನಿಂತಳು ಅನ್ನೋ ಕಥೆ ಕೇಳಿದ್ದೇನೆ.

    ಪ್ರತಿಕ್ರಿಯೆ
  2. ಶಮ, ನಂದಿಬೆಟ್ಟ

    ಇತಿಹಾಸ, ಭಾವ ಕೋಶ ಎರಡನ್ನೂ ಬೆರೆಸಿ ಬರೆದ ಪರಿ ಚೆಂದ

    ಪ್ರತಿಕ್ರಿಯೆ
  3. Mahesh

    ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಜ, ದೇಶದಲ್ಲೇ ಬೃಹತ್ತಾದ ದೇವಾಲಯಗಳಿಂದ ಕೂಡಿದ ತಮಿಳುನಾಡಿನ ದೇವಾಲಯಗಳನ್ನು ನೋಡಿದಾಗ ಎಂಥವರೂ ದೇವಾಲಯ ಪ್ರೇಮಿಗಳಾಗಲೇಬೇಕು.

    ಪ್ರತಿಕ್ರಿಯೆ
  4. Badarinath Palavalli

    ತಮ್ಮ ದಯೆಯಿಂದ ಒಂದು ಮಾಹಿತಿ ಪೂರ್ಣ ಯಾತ್ರೆಗೆ ನಾವೇ ಹೋಗಿ ಬಂದಂತಾಯಿತು. ಧನ್ಯವಾದಗಳು. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: