’ಶೋಭನ್ ಸರ್ಕಾರ ಕನಸೂ, ನನ್ನ ಕನಸೂ’ – ಕುಂ ವೀ ಬರೀತಾರೆ

ಕುಂ ವೀರಭದ್ರಪ್ಪ

ಏನೊಂದನ್ನೂ ಬರೆಯಲು ಪುಸಲಾಯಿಸದೆ ದೂರವಿರಿಸಿದ್ದು ಲಂಕೇಶರ ಟೀಕೆ- ಟಿಪ್ಪಣಿ ಸಂಪುಟಗಳು. ಕಳೆದೆರಡು ವಾರಗಳಿಂದ ನನ್ನನ್ನು ಎಡಬಿಡದೆ ಕಾಡುತ್ತಿರುವ ಮೇಸ್ಟ್ರ ಬರಹಗಳು ಸಮಕಾಲೀನವಾಗಿ ಫ್ರೆಷಾಗಿರುವುದೇ ಅವುಗಳ ಗ್ರೇಟ್ನೆಸ್. ತನ್ನ ಓದುಗನ ಅರಿವನ್ನು ತಿದ್ದುವ ಕೆಲಸ ಮಾಡುತ್ತಿರುವುದರಿಂದಾಗಿಯೇ ಅವರ ಬರಹಗಳು ಇಂದಿಗೂ ಉಳಿದು ಬೆಳೆಯುತ್ತಿವೆ. ಕೆಲವು ಸಾಲುಗಳನ್ನು ಟಿಪ್ಪಣಿ ಮಾಡಿಕೊಳ್ಳಲಾರಂಭಿಸಿದೆ, ಅವುಗಳನ್ನು ಬಾಯಿಪಾಠ ಮಾಡಿಕೊಳ್ಳುತ್ತ. ತಮ್ಮ ಬರಹಗಳಲ್ಲಿ ಜೀವಂತವಾಗಿರುವ ಮೇಸ್ಟ್ರು ಇವತ್ತೇನಾದರೂ ಬದುಕಿದ್ದಲ್ಲಿ ಸಮಕಾಲೀನ ಸಮಸ್ಯೆಗಳಿಗೆ, ರಾಜಕಾರಣಿಗಳ ನಿರ್ಲಜ್ಜ ನಡವಳಿಕೆಗೆ, ಸಾಧುಸಂತರ ಕನಸುಗಳನ್ನು ನಂಬಿ ಅವುಗಳ ದುಂಬಾಲು ಬಿದ್ದಿರುವ ಪ್ರಜಾಪ್ರಭುತ್ವವಾದಿ ಸರ್ಕಾರಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದರು! ಅಥವಾ ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ ಸೊಸೆ ಕಡೆ ಎಂಬಂತೆ ನಮ್ಮಂಥ ಎಡಬಿಡಂಗಿ ಸೋಕಾಲ್ಡ್ ಲೇಖಕರ ಮುಖವಾಡಗಳನ್ನು ಯಾವ ರೀತಿ ಕಳಚುತ್ತಿದ್ದರು! ಯೋಚಿಸುತ್ತ ಹೋದಂತೆ ಅವರ ಗೈರುಹಾಜರಿ ಕಾಡುತ್ತದೆ. ಕೆಲವು ದಿವಸಗಳಿಂದ ನಡೆಯುತ್ತಿರುವ ಘಟನೆಯನ್ನು ಉದಾಹರಿಸುವುದಾದರೆ..

ನಾನು 93ರಲ್ಲಿ ಕಂಡಂತೆ ಉತ್ತರಪ್ರದೇಶದ ದೌಂಡಿಯಾ ಖೇಡ್ ಒಂದು ಕುಗ್ರಾಮ. ರಾಜಾರಾಮ್ ಬಕ್ಸಿಂಗ್ ಎಂಬ ತುಂಡರಸ ಅದನ್ನು ಆಳುತ್ತಿದ್ದನಂತೆ.  1857ರಲ್ಲಿ ನಡೆದ ಸಿಪಾಯಿ ದಂಗೆಯಲ್ಲಿ ಆತ ಭಾಗವಹಿಸಿದ್ದನಂತೆ.  ಬ್ರಿಟೀಷರು ಎಲ್ಲ ಹೋರಾಟಗಾರರಂತೆ ಆತನನ್ನೂ ಗಲ್ಲಿಗೇರಿಸಿದರಂತೆ.  ಆ ಹುತಾತ್ಮ ಅಲ್ಲಿನ ಶೋಭನ್ ಸರ್ಕಾರ್ ಎಂಬ ಹೆಸರಿನ ಸಾಧು ಕನಸಲ್ಲಿ ಕಾಣಿಸಿಕೊಂಡು ಕೋಟೆಯಲ್ಲಿರುವ ತನ್ನ ಅಪಾರ ಸಂಪತ್ತು ಮತ್ತು ನಿಧಿಯನ್ನು ರಕ್ಷಿಸುವಂತೆ ಅಂಗಲಾಚುತ್ತಿದ್ದನಂತೆ. ದೇಶದ ಆರ್ಥಿಕ ದುಃಸ್ಥಿತಿಗೆ ಮನಕರಗಿ ಸಾಧು ತಮ್ಮ ಶಿಷ್ಯ ಹಾಗೂ ಕೇಂದ್ರ ಕೃಷಿ ಆಹಾರ ಮತ್ತು ಸಂಸ್ಕರಣಾ ಖಾತೆ ರಾಜ್ಯಸಚಿವ ಚಂದ್ರಹಾಸ್ ಮಹಾಂತ ಅವರ ಕಿವಿಯಲ್ಲಿ ಹಾಕಿದರಂತೆ. ಸಚಿವರು ಸುಮ್ಮನಿದ್ದಾರೆಯೆ! ತಮ್ಮ ಪ್ರಧಾನಿಯಾದಿಯಾಗಿ ಸಹೋದ್ಯೋಗಿಗಳಲ್ಲಿ ಹೇಳಿಕೊಂಡರಂತೆ. ಬರೋಬ್ಬರಿ ಒಂದು ಲಕ್ಷ ಟನ್ ಚಿನ್ನ ಎಂದರೆ ಹುಡುಗಾಟವೆ!
ಬಡಪಾಯಿ ರೂಪಾಯಿ ಅಂತರಾಷ್ಟ್ರೀಯವಾಗಿ ಎದೆ ಸೆಟೆಸಿ ನಿಲ್ಲುವಂತೆ ಮಾಡಲು ಕೇಂದ್ರ ಸರ್ಕಾರ ಕಳ್ಳಗಂಟಿನ ಮೊರೆ ಹೋಗಿದೆ, ಭಾರತೀಯ ಪುರಾತತ್ವ ಹಾಗೂ ಭೂಗರ್ಭ ಸರ್ವೇಕ್ಷಣಾ ಅಧಿಕಾರಿಗಳನ್ನು ಉನ್ನಾವೊ ಜಿಲ್ಲೆಗೆ ಕಳಿಸಿದೆ, ಅವರು ಅಲ್ಲೆಲ್ಲ ಏನೋ ಒಂದು ನಿಗೂಢ ಅಡಗಿರುವುದಾಗಿ ಖಚಿತಪಡಿಸಿದ್ದಾರೆ. ಅಕ್ಟೋಬರ್ 18ರಂದು (ಇಂದು) ಉತ್ಖನನ ಕಾರ್ಯ ಆರಂಭಿಸುವುದಾಗಿ ಅಲ್ಲಿನ ಜಿಲ್ಲಾಧಿಕಾರಿ ವಿಜಯ್ ಕರಣ್ ತಿಳಿಸಿದ್ದಾರೆ. ಈ ಘಟನೆ ಥ್ರಿಲ್ಲರ್ ಥರ ಎಷ್ಟೊಂದು ಇಂಟರೆಸ್ಟಿಂಗಾಗಿದೆಯಲ್ಲವೆ!
ಕಾಕತಾಳೀಯವೆಂಬಂತೆ ಅಲ್ಲೇನಾದರೂ ನಿಧಿ ಸಿಕ್ಕಲ್ಲಿ ಮುಂಬರುವ ಕಾಲಮಾನದಲ್ಲಿ ಸಾಧು ಸಂತರ, ಭವಿಷ್ಯ ಹೇಳುವವರ, ಪುರೋಹಿತರ ಮಾರುಕಟ್ಟೆ ಮೌಲ್ಯ ನೂರ್ಮಡಿಗೊಳ್ಳಲಿದೆ. ಅವರೆಲ್ಲ ಪರೋಕ್ಷವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ನಾಸ್ತಿಕರು ಅರೆಬರೆ ವಿಚಾರವಾದಿಗಳು ತಮ್ಮ ವೈಚಾರಿಕ ಅಸ್ತ್ರಗಳನ್ನು ತ್ಯಜಿಸಿದರೆ ಆಶ್ಚರ್ಯವಿಲ್ಲ. ಸಾಧುವಿನ ಭವಿಷ್ಯ ನಿಜವಾದರೆ! ನಿಜವಾಗದಿದ್ದರೆ! ನೀವು ನಂಬುವಿರೋ ಇಲ್ಲವೋ, ಆದರೆ ಒಂದಂತೂ ನಿಜ, ಈ ವೃದ್ದರಲ್ಲಿ ಮುಪ್ಪಾನು ಮುದುಕರಿದ್ದರಾಲ್ಲ ಇವರು ಮಾಂತ್ರಿಕರು, ಕಾಲಜ್ಞಾನಿಗಳು. ಯಾರು ಸಹಸ್ರಚಂದ್ರ ಪೂರೈಸಿ ಶತಮಾನದತ್ತ ಧಾವಿಸಿರುತ್ತಾರೋ ಅಂಥವರಲ್ಲಿ ಆರನೆ ಇಂದ್ರಿಯ ಜಾಗೃತವಾಗಿರುತ್ತದೆ.
ಇದು ಅಪ್ಪಟ ನಿಜವಾಗಿರದಿದ್ದರೂ ಸುಳ್ಳಂತೂ ಖಂಡಿತ ಅಲ್ಲ. ಸಿಗ್ಮಂಡ್ ಪ್ರಾಯ್ಡ್ ವಿರಚಿತ ಇಂಟರ್ ಪ್ರಿಟೇಶನ್ ಆಫ್  ಡ್ರೀಮ್ಸ್ ಕೃತಿಯನ್ನು ಅರಗಿಸಿಕೊಂಡಿರದಿದ್ದರೂ ತಕ್ಕಮಟ್ಟಿಗೆ ಓದಿರುವ ಹಾಗೂ ಅರೆಬರೆ ವಿಚಾರವಾದಿಯಾಗಿರುವ ನನಗೆ ಶೋಭನ್ ಸರ್ಕಾರ್ ಬಗ್ಗೆ, ಆತ ಕಂಡಿರುವ ಕನಸಿನ ಬಗ್ಗೆ ಕುತೂಹಲವಿದೆ, ಕಾರಣ ನಾನು ಪ್ರಾಚೀನನೂ ಅಲ್ಲ, ಅಪ್ರಾಚೀನನೂ ಅಲ್ಲ. ಮುದುಕರೊಂದಿಗೆ ಒಡನಾಡಿರುವಂತೆ ಆಧುನಿಕರೊಂದಿಗೂ ಸಂಪರ್ಕವಿರಿಸಿಕೊಂಡಿದ್ದೇನೆ, ನೀತ್ಸೆ ಕಾಮೂ ಕಾಫ್ಕಾ ಮಾರ್ಕ್ಸ್  ವಗೈರೆ ವಗೈರೆಗಳನ್ನು ಓದಿರುವಂತೆ ಸ್ವಲ್ಪಮಟ್ಟಿಗೆ ವೇದೋಪನಿಷತ್ ಪುರಾಣಗಳನ್ನೂ ಅಧ್ಯಯನ ಮಾಡಿದ್ದೇನೆ. ನನ್ನನ್ನು ನನ್ನ ವಾರಿಗೆಯವರನ್ನು ಸಂಕ್ರಮಣದ ಹೊಸ್ತಿಲಲ್ಲಿರಿಸಿದ್ದು ಪ್ರಸಿದ್ಧ ವಿಚಾರವಾದಿ ಅಬ್ರಹಾಂ ಟಿ ಕೋವೂರವರು. ಒಂದು ಕಡೆ ಹಣ್ಣುಹಣ್ಣು ವೃದ್ದರು ಇನ್ನೊಂದು ಕಡೆ ಅಬ್ರಹಾಂ ಕೋವೂರ್! ಈ ಹಗ್ಗನುಗ್ಗಾಟದಿಂದ ಚೇತರಿಸಿಕೊಳ್ಳಲಾಗಿಲ್ಲ ಇನ್ನೂ. ತನ್ನ ಅಪೂರ್ವ ಕನಸನ್ನು ಸಕಾರದ ಮೂಲಕ ಜಗಜ್ಜಾಹಿರು ಮಾಡುವುದರ ಮೂಲಕ ತಾನೂ ಪ್ರಸಿದ್ದನಾಗಿರುವ ಶೋಭನ್ ಸರ್ಕಾರ್ ಎಂಬ ವೃದ್ದಸಾಧು ನೆನಪಿಸಿದ್ದು ನನ್ನ ಮುತ್ತಜ್ಜಿ ಮತ್ತು ಆಕೆಯ ಮರಣೋತ್ತರವಾಗಿ ನಾನು ಕಂಡ ಕನಸನ್ನು. ಇದು ಹಾಸ್ಯಾಸ್ಪದವೂ ಅಲ್ಲ, ಅಪ್ರಾಸಂಗಿಕವೂ ಅಲ್ಲ.

ಹಲವು ಶತಮಾನಗಳ ಹಿಂದೆಯೇ ಜನಿಸಿರುವಂತೆ ಕಾಣುತ್ತಿದ್ದ ಅದು ಹಂಪಮ್ಮಜ್ಜಿ ವೃದ್ಯಾಪ್ಯದ ವಸ್ತುಸಂಗ್ರಹಾಲಯದಂತಿತ್ತು. ತಿರಸೃತ ತ್ಯಾಜ್ಯವಸ್ತುಗಳನ್ನು ಪ್ರೀತಿಸುತ್ತಿತ್ತು. ಅದಕ್ಕೆ ಹಗಲಿರುಳುಗಳನ್ನು ಸಮಾನವಾಗಿ ಪರಿಭಾವಿಸುತ್ತಿತ್ತು. ಎಳೆಯರಿದ್ದ ತನ್ನ ಗಿರಿಗಿರಿ ಮೊಮ್ಮಕ್ಕಳಾದ ನಮ್ಮನ್ನು ತುಂಬ ಪ್ರೀತಿಸುತ್ತಿತ್ತು.  ಜಾನಪದ ಕಥೆಗಳನ್ನು ದಣಿವರಿಯದೆ ಹೇಳುತ್ತಿತ್ತು. ತೂಕಡಿಕೆ ಆರಂಭವಾದೊಡನೆ ನಮ್ಮನ್ನು ತನ್ನ ಕೌದಿ ಗೊಂಗಡಿಯೊಳಗೆ ಎಳೆದುಕೊಂಡು ತಬ್ಬಿ ನಿದ್ದೆ ಬರಿಸುತ್ತಿತ್ತು, ಕೋಪಾವಿಷ್ಠ ತಂದೆ ನೀಡುತ್ತಿದ್ದ ಕಠಿಣ ಶಿಕ್ಷೆಗಳಿಂದ ನಮ್ಮನ್ನು ರಕ್ಷಿಸಲು ತಾನು ಅಭೇದ್ಯಕೋಟೆಯಾಗುತ್ತಿತ್ತು. ಅಷ್ಟೇ ಅಲ್ಲದೆ ಪಶುವೈದ್ಯೆಯೂ, ಕುಶಲ ಸೂಲಗಿತ್ತಿಯೂ, ಮಂತ್ರಗಾತಿಯೂ, ನ್ಯಾಯಾಲಯವೂ ತಾನಾಗಿತ್ತು. ಅದರ ಚಿರಂಜೀವತನ ತನ್ನ ಮಗಳು (ಆಕೆಯೂ ಮುಪ್ಪಾನು ಮುದುಕಿಯೆ) ನಿಂಗವ್ವಗೆ ಇಷ್ಟವಾಗಲಿಲ್ಲವೋ, ಜವರಾಯನೇ ಬೇಸತ್ತು ಆಕೆಯ ಬಾಯಿಯಿಂದ ಮಾತಾಡಿಸಿದನೋ! ’ಎಂಥೆಂಥೋರೆ ಸುಡುಗಾಡಿಗೋಕ್ತಾರೆ ನೀನಿನ್ನೂ ಬೊದ್ಕಿದ್ದೀಯಲ್ಲೇ’ ಎಂದು ಶಪಿಸಿದ್ದೇ ತಡ ಮಹಾಸ್ವಾಭಿಮಾನಿ ಹಂಪಮ್ಮಜ್ಜಿ ಅನ್ನನೀರು ತ್ಯಜಿಸಿತಲ್ಲದೆ ಸಲ್ಲೇಖನಾರೂಢೆಯಾಯಿತು.  ಮುವ್ವತ್ತು ನಲವತ್ತು ದಿವಸಗಳ ಬಳಿಕ ಒರಸು ಎಂಬ ಶರಶಯ್ಯೆಯ ಪಾಲಾಯಿತು.
ಪುರಾತನಗಳಿಗೆ ಮಣ್ಣು ಕೊಡಲೆಂದು ಅಪಾರಸಂಖ್ಯೆಯಲ್ಲಿ ಬಂಧುಬಳಗದವರು ಎರಡೂ ರಾಜ್ಯಗಳಿಂದ ಬಂದು ಬೀಡುಬಿಟ್ಟರು. ಪ್ರತಿಘಳಿಗೆ ಅದರ ಸಾವಿಗಾಗಿ ತುದಿಗಾಲಲ್ಲಿ ನಿಂತು ಕಾಯಲಾರಂಭಿಸಿದರು. ಅವರನ್ನು ಅನ್ನಪಾನಗಳಿಂದ ಸತ್ಕರಿಸುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಮನೆಯಲ್ಲಿದ್ದ ದವಸಧಾನ್ಯ ಖಾಲಿಯಾಗತೊಡಗಿತು.
ಆಗಿನ್ನೂ ನಾನೋ ಎರಡನೆ ತರಗತಿಯ ವಿದ್ಯಾರ್ಥಿ. ಸಾವಿನ ಬಗ್ಗೆ ಬಾಲಸಹಜ ಕುತೂಹಲವಿದ್ದ ನನಗೆ ಪ್ರಾಣ ದೇಹದ ಯಾವ ರಂದ್ರದಿಂದ ಹೋಗಬಹುದೆಂದು ಅಲ್ಲಿಯೇ ಇದ್ದು ಕಾಯುತ್ತಿದ್ದೆ, ಕಣ್ಣುಗಳನ್ನು ಪಿಳಿಪಿಳಿ ಬಿಡುವುದರ ಮೂಲಕ ತಾನಿನ್ನೂ ಬದುಕಿರುವುದಾಗಿ ಸಾಬೀತುಪಡಿಸುತ್ತ.  ತುಟಿ ಚಲನೆಯಿಂದ ಏನನ್ನೋ ನುಡಿಯಲೆತ್ನಿಸುತ್ತ, ಆಗಾಗ್ಗೆ ಹತ್ತಿರವಿರುತ್ತಿದ್ದ ನನ್ನ ತಲೆಯನ್ನು ತನ್ನ ದುರ್ಬಲ ಕೈಯಿಂದ ನೇವರಿಸುತ್ತ ರೋಮಾಂಚನಗೊಳಿಸುತ್ತಿತ್ತು. ಅದು ಸಾಯುವುದು ನನಗೆ ಎಳ್ಳಷ್ಟು ಇಷ್ಟವಿರಲಿಲ್ಲ. ನನಗೆ ಅದು ಆಗೊಮ್ಮೆ ಈಗೊಮ್ಮೆ ತನ್ನ ಕುಣಿಕೆ ಚೀಲದಿಂದ ಆಣೆ ಎರಡಾಣೆ ನೀಡುತ್ತಿದ್ದ ಭಕ್ಷೀಸು ಅದಕ್ಕೆ ಕಾರಣ. ಅದು ಸಾಯದಿರುವುದರಿಂದ ಬೇಸತ್ತ ತಂದೆ ಬಂದವನೆ ಬೇ ಮುದೇದೆ ಮರ್ಯಾದೆಯಿಂದ ಪ್ರಾಣಬಿಡ್ತೀಯೋ ಇಲ್ಲ ಕುತ್ತಿಗೆ ಹಿಚುಕಿ ಸಾಯಿಸಲೋ ಎಂದು ಅವಾಜು ಹಾಕಿದ್ದು ನನಗೆ ಬೇಸರ ತರಿಸಿತು.
ಕೊನೆಗೆ ಪಾಶ್ಚಾತ್ತಾಪ ಮತ್ತು ಅಸಹಾಯಕತೆಯಿಂದ ಅದರ ಎರಡೂ ಕೈಗಳನ್ನು ಹಿಡಿದುಕೊಂಡು ಪುಣ್ಯಾತ್ಗಿತ್ತಿ ಯಾಕವ್ವಾ ಪ್ರಾಣಬಿಡೋಕೆ ಮಿಜಿಮಿಜಿ ಮಾಡ್ತಿ, ನೂರಾರು ಜನ ಕೆಲಸಬದುಕು ಬಿಟ್ಟು ನಿನಗೆ ಮಣ್ಣು ಕೊಡಲಿಕ್ಕೆ ಬಂದು ತಿಂಗಳಾಯ್ತು ಕಣವ್ವಾ, ಅವರ ಮೇಲಾದ್ರು ಒಂಚೂರು ಕರುಣೆ ತೋರಬಾರದೇನು! ನಿನ್ನ ಮನಸ್ಸಿನಲ್ಲಿ ಏನೈತೆ ಎಂಬುದನ್ನಾದ್ರು ತಿಳಿಸು ಎಂದು ಅಂಗಲಾಚುತ್ತಿರುವಾಗ ತನ್ನ ಕಣ್ಣುಗಳನ್ನು ಒದ್ದೆ ಮಾಡಿಕೊಂಡಿದ್ದ ಅಪ್ಪ. ಆಗ ಅದು ತುಸು ಹೊತ್ತಾದ ಬಳಿಕ ಶಕ್ತಿಯನ್ನು ನಾಲಗೆಗೆ ತಂದುಕೊಂಡು ತುಂಬರಗುದ್ದಿ ಗೌಡ್ರ ವಕ್ರಾಣಿ ಬಾವಿ ನೀರು ಕುಡಿಯಂಗಾಗೈತಿ ಎಂದು ತನ್ನ ಅಂತಿಮ ಆಸೆಯನ್ನು ಪ್ರಕಟಿಸಿದ್ದು ಆಶ್ಚರ್ಯ ತಂದಿತು.
ಎಲ್ಲಿ ಕೊಟ್ಟೂರು! ಎಲ್ಲಿ ತುಂಬರಗುದ್ದಿ! ಆ ಗ್ರಾಮವಾಚಕ ಅಸ್ತಿತ್ವದಲ್ಲಿರುವುದಾಗಿ ಯಾರೂ ಭಾವಿಸಿರಲಿಲ್ಲ. ಅದರ ಮಕ್ಕಳನ್ನು ವಿಚಾರಿಸಿದ ಬಳಿಕ.. ಅದು ತನ್ನ ಹದಿನೈದದಿನಾರನೇ ವಯಸ್ಸಿನಲ್ಲಿ ತನ್ನ ಗಂಡನೊಡನೆ ಅಲ್ಲಿಗೆ ಹೋಗಿ ನೆಲೆಸಿತ್ತಂತೆ. ಅಂದರೆ ಸುಮಾರು ಶತಮಾನದ ಹಿಂದೆ. ಅದನ್ನು ಪತ್ತೆ ಹಚ್ಚಿ ನೀರು ತರುವಂತೆ ಅಪ್ಪ ಗಾಳೆಪ್ಪ ಎಂಬಾತನನ್ನು ಕಳಿಸಿದ. ಗಾಳೆಪ್ಪ ಎರಡು ದಿವಸಗಳ ಬಳಿಕ ಬರಿಗೈಯಲ್ಲಿ ಮರಳಿದ, ಆ ಹೆಸರಿನ ಊರು ಬಂಡ್ರಿ, ಸೊಂಡೂರು ಪ್ರಾಂತದಲ್ಲಿ ಬೇಚಿರಾಕ್ ಗ್ರಾಮದ ರೂಪದಲ್ಲಿರುವುದಾಗಿಯೂ, ಅಲ್ಲಿ ಯಾವುದೇ ಬಾವಿ ಇಲ್ಲವೆಂದೂ ಹೇಳಿದ. ಅದೋ ತಮ್ಮಿಬ್ಬರ ನಡುವೆ ನಡೆದ ಮಾತುಕತೆ, ಯಾರೂ ಕೇಳಿಸಿಕೊಂಡಿಲ್ಲದಿರುವುದು ತಮ್ಮ ಪುಣ್ಯ. ಸಮಯಪ್ರಜ್ಞೆಯಿಂದ ಅಪ್ಪ ಸಮೀಪದಲ್ಲಿದ್ದ ಬಸವನಬಾವಿಯಿಂದ ನೀರು ತರಿಸಿದ್ದೂ ಅಲ್ಲದೆ ಅದಕ್ಕೆ ಮಣ್ಣುಮಸಿ ತುಸು ಬೆಲ್ಲ ಸೇರಿಸಿ ವಿಲಕ್ಷಣಗೊಳಿಸಿದ, ತಡಮಾಡದೆ ಹೋಗಿ ಅದರ ಬಾಯಿಯಲ್ಲಿ ಚಮಚದ ಸಹಾಯದಿಂದ ಇನುಕಿಸುತ್ತ ಕುಡಿಯವ್ವೋ ಕುಡಿ ತುಂಬರಗುದ್ದಿ ಬಾವಿಯ ನೀರನ್ನು ಎಂದು ಹೇಳಿದ, ಆಗ ಹಂಪಮ್ಮಜ್ಜಿ ಆ ನೀರನ್ನು ಉಗುಳಿತಲ್ಲದೆ ಅಪ್ಪನತ್ತ ತೀಕ್ಷ್ಣವಾಗಿ ನೋಡುತ್ತ ಥೂ! ಬಸ್ವನಭಾವಿ ನೀರಿದು, ತುಂಬ್ರಗುದ್ದೀದು ಅಲ್ಲೋ ಎಂದು ನಮ್ಮನ್ನು ಅಚ್ಚರಿಗೊಳಿಸಿತು.
ಪ್ರಾಣಪಕ್ಷಿ ಅದರ ದೇಹದ ಯಾವರಂದ್ರದಿಂದ ಹೋಯಿತೆನ್ನುವುದು ತಿಳಿಯದು, ಅಂತೂ ಕೊನೆಯುಸಿರೆಳೆಯಿತು. ಮಣ್ಣು ತಿಥಿ ಮುಗಿದಾದ ನಂತರ ಎಲ್ಲರೂ ತಮ್ಮತಮ್ಮ ಊರುಗಳಿಗೆ ಮರಳಿದರು. ಕಾಸು ಕೊಡುವ ಮುದುಕಿ ಸಾಯಿತಲ್ಲ! ಮಂಕು ನನ್ನನ್ನು ಆವರಿಸಿತು. ಕೆಲವು ದಿವಸಗಳ ಬಳಿಕ ನಾನೊಂದು ಕಂಡ ಕನಸಿನಲ್ಲಿ.. ಶಾಲೆಗೆ ಹೊರಟಿರುವೆ, ಅಭ್ಯಾಸದಂತೆ ಹುಡುಕಿದೆ, ಅಂಗಳಲ್ಲಿ ತೇಜೋಮಾನವಾಗಿ ನಿಂತಿದ್ದ ಹಂಪಮ್ಮಜ್ಜಿಯೆದುರು ಕೈಚಾಚಿದೆ. ಆಗ ಅದು ಕುಣಿಕಿ ಚೀಲ ಇಲ್ಲಲ್ಲೋ, ಕಣದಲ್ಲಿ ಅಡಕಲ ಗಡಿಗೆಗಳಲ್ಲಿಟ್ಟೀನಿ, ಹೋಗಿ ತಗೋ ಎಂದು ಹೇಳಿತು. ಕಣ್ಣುಬಿಟ್ಟು ನೋಡುತ್ತೇನೆ, ಇನ್ನೂ ಕತ್ತಲೆ, ಬೆಳಕು ಹರಿದಿರಲಿಲ್ಲ, ಚುಮುಚುಮು ಬೆಳಕು ಹರಿದೊಡನೆ ಅಗಸರ ಕೊಟ್ರ ಎಂಬ ಗೆಳೆಯನನ್ನು ಜೊತೆಯಲ್ಲಿ ಕಣಕ್ಕೆ ಧಾವಿಸಿದೆ. ಅಡಕಲ ಗಡಿಗೆಗಳನ್ನು ಒಂದೊಂದಾಗಿ ಎತ್ತಿಇಳುವಿ ಹುಡುಕಿದೆ. ಕೊನೆಯ ಗಡಿಗೆಯ ತುಂಬೆಲ್ಲ ನೆಲ್ಲುತೌಡು ಇತ್ತು, ಅದರೊಳಗೆ ಕೈಯಾಡಿಸಿದ ನನ್ನ ಕೈಗೆ ಒಂದು ಚೀಲ ದೊರಕಿತು. ಕೈಯಾಡಿಸುತ್ತೇನೆ ಅದರಲ್ಲಿ ಚಿನ್ನದ ಚೂರುಗಳು, ಬೆಳ್ಳಿ ರೂಪಾಯಿಗಳು, ಹತ್ತರ ನೂರರ ಮನಿನ ನೋಟುಗಳು! ಅಪ್ಪನಿಗೆ ತೋರಿಸಿ ಆತನಿಂದ ಶಹಬ್ಬಾಷ್ ಎನ್ನಿಸಿಕೊಳ್ಳಬೇಕಲ್ಲವೆ! ಕನಸು ಹಾಳುಮೂಳು ಹೇಳಿ ಕೊಟ್ಟೆ. ಅದನ್ನು ನೋಡಿ ಸಂತೋಷಪಡುವ ಬದಲು ಅಪ್ಪ ಸಾಕಿ ಸಲುವಿದ ನಮ್ಮ ಕನಸಿನಲ್ಲಿ ಬಾರದೆ ಆ ಮುದೇದು ನಿನ್ನ ಕನಸಿನಲ್ಲಿ ಬಂದು ಹೇಳಿತೇನು, ಸೂಳ್ಯಾಮಗನೆ ಎಲ್ಲಿ ಕದ್ದು ತಂದಿರುವೆ ಬೊಗುಳು ಎಂದು ಛಟೀರನೆ ಕೆನ್ನೆಗೆ ಏಟು ನೀಡಿದ. ನನಗೆ ದಿಕ್ಕು ತೋಚದಾಯಿತು. ಅಗಸರ ಕೊಟ್ರ ಸಾಕ್ಷ್ಯ ನುಡಿಯದಿದ್ದಲ್ಲಿ, ನಿಂಗಮ್ಮಜ್ಜಿ, ಸಿದ್ದಮ್ಮಜ್ಜಿ ಬಂದು ರಕ್ಷಿಸದಿದ್ದಲ್ಲಿ ಅಪ್ಪ ನನಗೆ ಮರಣದಂಡನೆಗೀಡುಮಾಡುತ್ತಿದ್ದನೇನೊ!
ಹೈಕೋರ್ಟಿರುವ ಬೆಂಗಳೂರಿಗೆ ಹೋಗಿಬರುತ್ತಿದ್ದ ಅಪ್ಪ ಅಲ್ಲಿಂದ ನನಗೆ ಚೆಂಡನ್ನೂ ಕೃಷ್ಣಶಾಸ್ತ್ರಿಗಳ ವಚನಭಾರತವನ್ನೂ ಬಹುಮಾನ ರೂಪದಲ್ಲಿ ನೀಡಿದ.
ನನ್ನ ಕನಸು ನನಸಾಗಿರುವಾಗ ಶೋಭನ್ ಸರ್ಕಾರ್ ಕಂಡಿರುವ ಕನಸೇನಾದರೂ ನಿಜವಾದಲ್ಲಿ!

‍ಲೇಖಕರು avadhi

October 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಹರಿ

    ಪ್ರೀತಿಯ ಕುಂವೀರವರೆ,
    ಓದುತ್ತ ಇದ್ದಷ್ಟು ಹೊತ್ತು ನಾನೂ ಕನಸು ಕಾಣುತ್ತಿದ್ದೀನೇನೋ ಎಂಬಂತೆ ಕಲ್ಪನಾ ಲೋಕದಲ್ಲಿ ಮುಳುಗಿದ್ದೆ.
    ವೃದ್ದಾಪ್ಯದ ಅಸಹಾಯಕತೆ, ಹಿರಿಯರ ಅಸಹನೆ, ಬಾಲ್ಯದ ಮುಗ್ದತೆ…. ಅವರವರ ಭಾವಕ್ಕೆ ಅವರವರ ಭಕುತಿಗೆ.

    ಪ್ರತಿಕ್ರಿಯೆ
  2. sindhu

    oh!
    chalo ide. gandhi classinalli ee sannivesha odiddene. mattilli shobhan sarkarana context alli oduvaaga mattu ishta aytu.

    ಪ್ರತಿಕ್ರಿಯೆ
  3. kum.veerabhadrappa

    ನಿಮ್ಮ ಅನ್ನಿಸಿಕೆ ಸರಿ ಸಿಂಧು, ಗಾಂಧಿಕ್ಲಾಸು ಆತ್ಮಕಥೆಯಲ್ಲಿ ಈ ಘಟನೆಯನ್ನು ಪ್ರಸ್ತಾಪಿಸಿರುವೆ, ಶೋಭನ್ ಸರ್ಕಾರ್ ತಮ್ಮ ಕನಸನ್ನು ಪ್ರಸ್ತಾಪಿಸದಿದ್ದಲ್ಲಿ ನಾನಿದನ್ನು ಬರೆಯುತ್ತಿರಲಿಲ್ಲವೇನೋ! ಆಗ್ಲಿ ನೀವು ಮಾತ್ರ ಹಕೀಕತ್ ಕಂಡು ಹಿಡಿದಿದ್ದರಿಂದ ಸಂತೋಷವಾಯ್ತು, ಧನ್ಯವಾದಗಳು
    ಕುಂವೀ

    ಪ್ರತಿಕ್ರಿಯೆ
  4. ಪಂಪಾರಡ್ಡಿ ಅರಳಹಳ್ಳಿ

    ಕುಂವೀ ಅವರ ಬರೆಹ ಓದುವುದು ಎಂದರೆ ಎಲ್ಲಿಲ್ಲದ ಖುಷಿ. ಅದರರಲ್ಲಿ ಶೋಭನ್ ಸರಕಾರದ ಬಗ್ಗೆ ಬರೆದ ಕನಸು, ತುಂಬಾ ಸರಳವಾಗಿ ಕನಸು ಕಾಣುವಂತೆ ಓದಿಸಿಕೊಂಡು ಹೊಗುತ್ತದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಲಂಕೇಶರಿಂದ ಆರಂಭಿಸಿ, ಹಂಪಮ್ಮಜ್ಜಿ ನೀರಿನ ರುಚಿಯ ಕಂಡುಹಿಡಿದು ಉಗಳಿ ಮೂಖ ನೋಡಿ ವಾಸ್ತವವನ್ನು ಅರಿಯುವವರೆಗು ತುಂಬಾ ಚೆನ್ನಾಗಿದೆ ಸರ್ ಲೇಖನ. ಈ ವಿಷಯವನ್ನು ಸಿಂಧು ಅವರು ಹೇಳಿರುವಹಾಗೆ “ಗಾಂಧಿ ಕ್ಲಾಸು” ಆತ್ಮಕಥನದಲ್ಲಿ ಓದಿದ ನೆನಪಿದೆ.

    ಪ್ರತಿಕ್ರಿಯೆ
  5. Kavya Nagarakatte

    ಮೇಷ್ಟ್ರು- ಶೋಭನ್ ಸರ್ಕಾರ್- ಹಂಪಮ್ಮಜ್ಜಿ- ಇವೆಲ್ಲವನ್ನೂ ರಿಲೇಟ್ ಮಾಡಿದ್ದು ತುಂಬ ಚೆನ್ನಾಗಿದೆ. ನಿಮ್ಮ ಬರಹದ ವರ್ಸಿಟಾಲಿಟಿಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿರುವುದಕ್ಕೆ ಅಭಿನಂದನೆಗಳು ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: