’ವೇದಕಾಲದಲ್ಲಿ ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರು ಎನ್ನುವ ಮಾತು…’ – ಜಿ ಪಿ ಬಸವರಾಜು

ಆಹಾರ : ಯಾವುದರಲ್ಲಿ ವಿಷವಿದೆ?

ಜಿ ಪಿ ಬಸವರಾಜು

ಆಹಾರ ಅದೇಕೆ ಭಾರತೀಯ ಸಮಾಜದಲ್ಲಿ ಅಷ್ಟೊಂದು ಸೂಕ್ಷ್ಮ ವಿಚಾರವಾಗುತ್ತದೆ? ತನಗೆ ಬೇಕಾದುದನ್ನು ತಿನ್ನುವ, ಬೇಡವಾದುದನ್ನು ನಿರಾಕರಿಸುವ ಆಯ್ಕೆ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ. ತನ್ನ ರುಚಿ, ಇಷ್ಟ, ಅನಿಷ್ಟಗಳನ್ನು ಆಧರಿಸಿ ಪ್ರತಿಯೊಬ್ಬನೂ ತನ್ನ ಆಹಾರವನ್ನು ಆಯ್ಕೆಮಾಡಿಕೊಳ್ಳುತ್ತಾನೆ. ಆಹಾರದಲ್ಲಿ ಮೇಲಿಲ್ಲ; ಕೀಳೂ ಇಲ್ಲ. ಸಸ್ಯಾಹಾರದಷ್ಟೇ, ಮಾಂಸಾಹಾರವೂ ಮಾನ್ಯ. ಇಂಥ ಸರಳ ಸಂಗತಿಯೂ ನಮ್ಮಲ್ಲಿ ಬಿಕ್ಕಟ್ಟುಗಳನ್ನು ಹುಟ್ಟುಹಾಕುತ್ತದೆ. ಪರಸ್ಪರ ದ್ವೇಷ, ಸಂಘರ್ಷಕ್ಕೂ ಆಹಾರ ಎಡೆಮಾಡಿಕೊಡುವುದು ಎಂಥ ದುರಂತ!
ವೇದಕಾಲದಲ್ಲಿ ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರು ಎನ್ನುವ ಮಾತಾಗಲೀ, ಎಳೆಗರುಗಳ ಮಾಂಸವನ್ನು ಋಷಿಗಳು ಯಜ್ಞಯಾಗಾದಿಗಳ ಸಂದರ್ಭದಲ್ಲಿ ಅಪೇಕ್ಷಿಸುತ್ತಿದ್ದರು ಇತ್ಯಾದಿ ಹೇಳಿಕೆಗಳು ಯಾಕೆ ವಿವಾದಕ್ಕೆ ಎಡೆಮಾಡಿಕೊಡಬೇಕು? ಸಾವಿರಾರು ವರ್ಷಗಳ ಹಿಂದೆ ಮನುಷ್ಯರು ಏನನ್ನು ತಿನ್ನುತ್ತಿದ್ದರು, ಹೇಗೆ ತಿನ್ನುತ್ತಿದ್ದರು ಎಂಬುದನ್ನು ಹೇಳಿದರೆ ಜ್ವಾಲಾಮುಖಿಗಳೇ ಸಿಡಿದೇಳುತ್ತವೆ. ‘ವಿಪ್ರ ಸಂಘಟನೆ’ಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತವೆ. ಅಂದರೆ ಆಹಾರ ತಕ್ಷಣ ಜಾತಿಯೊಡನೆ ಬೆರೆತುಬಿಡುತ್ತದೆ; ಜಾತಿಶ್ರೇಣೆ ಎಂದರೆ ಮೇಲುಕೀಳಿನ ಪರಿಗಣನೆ. ನಮಗೆಲ್ಲರಿಗೂ ಗೊತ್ತು-ಆಹಾರದಲ್ಲಿ ಮೇಲು ಕೀಳುಗಳಿಲ್ಲ. ಆದರೂ ಆಹಾರವನ್ನು ಜಾತಿಗೆ ಗಂಟುಹಾಕಿದ್ದೇವೆ. ಜಾತಿಯ ಪರಿಕಲ್ಪನೆಯ ಜೊತೆಗೇ ಹುಟ್ಟಿಕೊಂಡ ತರತಮ ಆಹಾರಕ್ಕೂ ಅಂಟಿಕೊಳ್ಳುವಂತೆ ನೋಡಿಕೊಂಡಿದ್ದೇವೆ. ವೇದಕಾಲವನ್ನು ಅಧ್ಯಯನ ಮಾಡಿದ ವಿದ್ವಾಂಸರು ಹೇಳುವ ಸತ್ಯಗಳು ಆಹಾರದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ನೀಡುತ್ತವೆ.
ವೇದ ಕಾಲದಲ್ಲಿ ಎತ್ತಿನ, ಕುದುರೆಯ, ಎಳೆಗರುವಿನ ಮಾಂಸವನ್ನು ದೇವರಿಗೆ ‘ನೀಡುವುದು’ ಸಾಮಾನ್ಯವಾಗಿತ್ತು. ಗೋವು ಪವಿತ್ರವೇನೂ ಆಗಿರಲಿಲ್ಲ. ಮಾಂಸವನ್ನು ತಿನ್ನಬಾರದೆಂಬ ನಿಯಮವೂ ಇರಲಿಲ್ಲ. ವೇದಗ್ರಂಥಗಳಲ್ಲಿ ಇದಕ್ಕೆಲ್ಲ ಪುರಾವೆಗಳಿವೆ ಎಂದು ಋಗ್ವೇದವನ್ನು ಆಳವಾಗಿ ಅಧ್ಯಯನ ಮಾಡಿರುವ ಡಿ.ಎನ್.ಝಾ ಅಂಥವರು ಹೇಳುತ್ತಾರೆ. ಪುರಾತನ ಗ್ರಂಥಗಳು, ಶಾಸನಗಳು, ಸಾಹಿತ್ಯ ಇತ್ಯಾದಿ ಎಲ್ಲವೂ ಒಂದು ಸಮಾಜದ ಸಂಸ್ಕೃತಿಯನ್ನು, ನಾಗರಿಕತೆಯ ವಿಕಾಸವನ್ನು ಹೇಳುತ್ತವೆ. ಆಹಾರ ಪದ್ಧತಿಯ ವಿಚಾರಗಳೂ ಅಲ್ಲಿ ಸಿಕ್ಕುತ್ತವೆ. ಎಲ್ಲವನ್ನೂ ನಮ್ಮ ಹಿರಿಮೆಗೆ, ಪ್ರಾಚೀನ ನಾಗರಿಕತೆಯ ಕಿರೀಟಕ್ಕೆ ಸಿಕ್ಕಿಸಿಕೊಳ್ಳುವ ನಾವು ಆಹಾರದ ವಿಚಾರದಲ್ಲಿ ಮಾತ್ರ ಬಹಳ ಸೂಕ್ಷ್ಮರಾಗಿಬಿಡುತ್ತೇವೆ. ನಮ್ಮ ಬೇಕು ಬೇಡಗಳಿಗೆ ತಕ್ಕಂತೆ ಈ ವಾಸ್ತವ ಸಂಗತಿಗಳನ್ನು ತಿರುಚಲು ನೋಡುತ್ತೇವೆ.

ಇದೆಲ್ಲದಕ್ಕಿಂತ ಮುಖ್ಯವಾದ ಅಂಶವೆಂದರೆ, ಆಹಾರ ನಮ್ಮ ನಾಲಿಗೆಗೆ ಸಂಬಂಧಿಸಿದ ವಿಚಾರ; ವೈಯಕ್ತಿಕ ಸಂಗತಿ. ಇಷ್ಟವಾದರೆ ತಿನ್ನುತ್ತೇವೆ; ಇಲ್ಲವಾದರೆ ಇಲ್ಲ. ಆಯ್ಕೆ ಅವರವರಿಗೇ ಬಿಟ್ಟ ಸಂಗತಿ. ಆದರೆ ಈ ಆಯ್ಕೆಯನ್ನು ಸಾಮಾಜಿಕ ಸಂಗತಿಯಾಗಿ ಯಾಕೆ ಮಾಡಲಾಗುತ್ತಿದೆ? ಇದರ ಹಿಂದೆ ಜಾತಿಯ ಹುನ್ನಾರಗಳಿವೆ. ಜಾತಿ ಪ್ರಾಬಲ್ಯದ ಪಟ್ಟುಗಳಿವೆ. ಹಾಗೆಯೇ ರಾಜಕೀಯ ಲಾಭ ನಷ್ಟದ ವಿಚಾರಗಳೂ ಇವೆ. ಈ ಕಾರಣದಿಂದಾಗಿಯೇ ಹಸು ಪವಿತ್ರ ಎಂದು ಪ್ರತಿಪಾದಿಸುವುದು, ಹಸು ಪೂಜ್ಯ, ಅದನ್ನು ತಿನ್ನುವುದು ಪಾಪ ಎನ್ನುವ ವಿಚಾರವನ್ನು ಬಿತ್ತುವುದು. ಹಸುವನ್ನು ಪೂಜಿಸುವವರೆಲ್ಲ ಒಂದು ಎಂದು ಹೇಳುವುದರ ಮೂಲಕ, ಈ ತತ್ವವನ್ನು ಮಾನ್ಯ ಮಾಡುವ ಎಲ್ಲ ಜಾತಿಗಳನ್ನು ಸಂಘಟಿಸುವ ರಾಜಕೀಯ ಕ್ರಿಯಾಶೀಲವಾಗಿರುತ್ತದೆ. ಕೆಲವರಿಗೆ ಹಸು ಪವಿತ್ರವಾದರೆ, ಕೆಲವರಿಗೆ ನಾಯಿ ಪವಿತ್ರವಾಗಬಹುದು. ಅತ್ಯಂತ ಸಾಧುಪ್ರಾಣಿಯಾದ ಕತ್ತೆ ಯಾಕೆ ಪವಿತ್ರವಲ್ಲ? ಜಿಂಕೆ, ಹುಲಿ, ಸಿಂಹಗಳೇಕೆ ಪವಿತ್ರವಲ್ಲ? ಅದು ಬೇರೆಯದೇ ಆದ ವಿಚಾರ. ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಪ್ರಾಣಿಯನ್ನು ಪವಿತ್ರ ಎಂದು ಕರೆದುಕೊಳ್ಳಬಹುದು. ಆದರೆ ಅದರ ಮಾಂಸ ತಿನ್ನುವ ವಸ್ತುವಲ್ಲ ಎನ್ನುವುದು, ಮಾಂಸವನ್ನು ಒಂದು ಜಾತಿಗೆ ಅಂಟುಹಾಕುವುದು ಸಂಬದ್ಧ ವಿಚಾರವಾಗುವುದಿಲ್ಲ.
ಇವತ್ತಿನ ಸಂಗತಿಗಳನ್ನೇ, ವಿಶೇಷವಾಗಿ ಭಾರತೀಯ ಸಮಾಜದ ಆಹಾರ ಪದ್ಧತಿಯನ್ನೇ ಗಮನಿಸೋಣ: ಮಾಂಸ ತಿನ್ನುವವರೆಲ್ಲ ಶೂದ್ರರು, ತಿನ್ನದವರೆಲ್ಲ ಬ್ರಾಹ್ಮಣರು ಎಂದು ಹೇಳಲು ಬರುವುದಿಲ್ಲ. ಇಡೀ ದೇಶದಲ್ಲಿರುವ ಬ್ರಾಹ್ಮಣರ ಆಹಾರ ಪದ್ಧತಿಯನ್ನೇ ತೆಗೆದುಕೊಂಡರೂ ಅನೇಕ ವಿರೋಧಾಭಾಸಗಳು ಕಂಡುಬರುತ್ತವೆ. ಮೀನನ್ನು ತಿನ್ನುವ, ಅದನ್ನು ಸಸ್ಯಾಹಾರ ಎಂದು ಪರಿಗಣಿಸುವ ಬ್ರಾಹ್ಮಣರಿದ್ದಾರೆ. ಕೆಲವು ಕಡೆ ವಿಶೇಷ ಸಮಾರಂಭಗಳಲ್ಲಿ ಕೋಳಿಯನ್ನೂ ಮೀನಿನ ಜೊತೆ ಭಕ್ಷ್ಯವಾಗಿ ಉಪಯೋಗಿಸುವ ಪದ್ಧತಿಯೂ ಇದೆ. ಕೋಳಿ ಮತ್ತು ಮೀನನ್ನು ತಿನ್ನುವವರು ಬ್ರಾಹ್ಮಣರಲ್ಲ ಎಂದು ಹೇಳುವವರಿದ್ದಾರೆಯೇ? ಕನರ್ಾಟಕದಲ್ಲಿಯೂ ನೂರಾರು ಜಾತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಹಾರಪದ್ಧತಿಯಲ್ಲಿನ ಸೂಕ್ಷ್ಮಗಳು ಕಂಡುಬರುತ್ತವೆ. ಈ ಜಾತಿಯವರು ಇಂಥ ಆಹಾರವನ್ನೇ ತಿನ್ನಬೇಕೆಂಬ ನಿಯಮವನ್ನು ವಿಧಿಸಲಾಗುವುದಿಲ್ಲ.
ಆಹಾರ ಕ್ರಮಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುತ್ತಾ ಹೋಗಬಹುದು. ಅಲ್ಲಿನ ಹವಾಮಾನ, ಸಿಕ್ಕುವ ಆಹಾರ ಪದಾರ್ಥಗಳು, ಪ್ರಾಣಿಗಳು ಇತ್ಯಾದಿ ಅನೇಕ ಅಂಶಗಳನ್ನು ಅವಲಂಬಿಸಿ ಒಂದು ಸಮಾಜ ತನ್ನ ಆಹಾರವನ್ನು ನಿರ್ಧರಿಸಿಕೊಂಡಿರುತ್ತದೆ. ಅದಕ್ಕೆ ಕಟ್ಟುಪಾಡುಗಳೇನೂ ಇರುವುದಿಲ್ಲ. ಚಾತುರ್ವರ್ಣಗಳು ರೂಪಗೊಂಡಾಗ ಆಹಾರ ಪದ್ಧತಿಯಲ್ಲಿ ಭೇದವಿರಲಿಲ್ಲ. ಒಂದೇ ಆಹಾರವನ್ನು ಎಲ್ಲರೂ ತಿನ್ನುತ್ತಿದ್ದರು. ಮಾಂಸಾಹಾರಕ್ಕೆ ಬಹಿಷ್ಕಾರವಿರಲಿಲ್ಲ ಎಂಬುದನ್ನು ವೇದಕಾಲದ ಗ್ರಂಥಗಳು ತಿಳಿಸುತ್ತವೆ. ದನದ ಮಾಂಸ, ಕುದುರೆ ಮಾಂಸ ತಿನ್ನಲು ಬಳಕೆಯಾಗುತ್ತಿತ್ತು. ಮಾಂಸಾಹಾರ ಎನ್ನುವುದು ಸಾಮಾನ್ಯವಾಗಿದ್ದ ಕಾಲದಲ್ಲಿ ಯಾವ ಪ್ರಾಣಿಯನ್ನು ತಿನ್ನುತ್ತಿದ್ದರು, ಯಾವುದನ್ನು ಬಿಡುತ್ತಿದ್ದರು ಎಂದು ಹೇಳುವುದರಲ್ಲಿ ಹೆಚ್ಚಿನ ಮಹತ್ವ ಕಾಣಿಸುವುದಿಲ್ಲ. ಆದರೆ ಮಾಂಸಾಹಾರ ಮಾನ್ಯವಾಗಿತ್ತು ಎಂಬುದಷ್ಟೇ ಮುಖ್ಯ.
ಇವತ್ತು ಭಾರತೀಯ ಸಮಾಜ ಅನೇಕ ಕಟ್ಟುಪಾಡುಗಳನ್ನು ಮುರಿದಿದೆ. ಜಾಗತಿಕ ವಿದ್ಯಮಾನಗಳು, ನಾಗರಿಕತೆಯ ವಿಕಾಸ ಮನುಷ್ಯರನ್ನು ಒಂದೇ ಚಿಂತನೆಯಲ್ಲಿ ಕಟ್ಟಿಹಾಕಲಾಗದ ಸ್ಥಿತಿಯನ್ನು ನಿರ್ಮಿಸಿವೆ. ಸ್ವಾತಂತ್ರ್ಯದ ಗಡಿರೇಖೆಗಳು ವಿಸ್ತಾರಕ್ಕೆ ಚಾಚಿಕೊಂಡಿವೆ. ಸೀಮಿತವಾದ, ಸಂಕುಚಿತವಾದ, ಅತಾರ್ಕಿಕ ವಿಚಾರಗಳನ್ನು ಬಿತ್ತುತ್ತ, ಮನುಷ್ಯನ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗದು. ಆಹಾರ ಪದ್ಧತಿಯನ್ನೇ ಬಳಸಿಕೊಂಡು ಮನುಷ್ಯರನ್ನು ಜಾತಿಯ ಚೌಕಟ್ಟಿನಲ್ಲಿ ಕಟ್ಟಿಹಾಕುವುದೂ ಅಸಾಧ್ಯ. ಒಂದು ಕಾಲಕ್ಕೆ ಸಮುದ್ರದಾಟುವುದೇ ನಿಷೇಧವಾಗಿತ್ತು. ಇವತ್ತು ನಮ್ಮ ಮಕ್ಕಳು ಖಂಡಾಂತರ ವಲಸೆ ಹೋಗುತ್ತಾರೆ. ತಮಗೆ ಇಷ್ಟವಾದ ಆಹಾರವನ್ನು ತಿನ್ನುತ್ತಾರೆ. ತಾವೇ ತಯಾರಿಸಿ ಊಟಮಾಡುವ ಕಾಲವಂತೂ ಹೊರಟೇ ಹೋಯಿತು. ಅದು ಮಾಂಸಾಹಾರವಾಗಬಹುದು, ಸಸ್ಯಾಹಾರವಾಗಬಹುದು. ಅವರಿಗೆ ಹಿಡಿಸುವ, ಆರೋಗ್ಯಕ್ಕೆ ಕೇಡಾಗದ ಆಹಾರವನ್ನು ಅವರು ಆಯ್ದುಕೊಳ್ಳುತ್ತಾರೆ. ಯಾರೂ, ಯಾವ ವಿಚಾರವೂ ಅವರನ್ನು ನಿರ್ಬಂಧಿಸಲಾರದು.
ಗೋವಿನ ಮಾಂಸವೊ, ಎತ್ತಿನ ಮಾಂಸವೋ, ಕೆಂಟುಕಿ ಫ್ರೈಯ್ಡ್ ಚಿಕನ್ನೋ, ನಾಲಗೆಗೆ ಇಷ್ಟವಾದ ಆಹಾರವನ್ನು ಅವರು ತಿನ್ನುತ್ತಾರೆ. ಅಷ್ಟೇ ಏಕೆ, ತಮಗೆ ಹಿಡಿಸುವ ಇನ್ನೊಂದು ಜೀವವನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಜಾತಿಕ ಕಟ್ಟುಪಾಡುಗಳು ಅವರನ್ನು ಕಾಡುವುದಿಲ್ಲ; ತಡೆಯುವುದೂ ಇಲ್ಲ. ತಮ್ಮ ವೇಗದ ಬದುಕಿನಲ್ಲಿ ಅವುಗಳಲ್ಲಿಯೇ ಮುಳುಗಿ ಹೋಗಲು ಅವರಿಗೆ ಕಾಲಾವಕಾಶವೂ ಇರುವುದಿಲ್ಲ. ಇದನ್ನು ದೂರದಲ್ಲಿದ್ದುಕೊಂಡೇ ನಾವು ಮಾನ್ಯಮಾಡುತ್ತೇವೆ. ಅವರು ಚೆನ್ನಾಗಿರಲಿ ಎಂದು ಹರಸುತ್ತೇವೆ. ಅವರು ಮಾವಿನ ಕಾಯಿಯ ಗೊಜ್ಜು-ಅನ್ನವನ್ನೇ ತಿನ್ನುತ್ತಿರಲಿ ಎಂದು ಯಾವ ತಂದೆತಾಯಿಯೂ ಬಯಸುವುದಿಲ್ಲ. ಬಯಸಿದರೂ ಆ ಬಯಕೆ ಈಡೇರುವುದಿಲ್ಲ ಎಂಬ ಸತ್ಯವೂ ನಮಗೆ ಗೊತ್ತಿರುತ್ತದೆ.
ಅಷ್ಟು ದೂರದ ವಿಚಾರವೇಕೆ? ಇವತ್ತಿನ ಭಾರತವನ್ನೇ ಗಮನಿಸಿ. ಇಲ್ಲಿಯೇ ಎಷ್ಟೊಂದು ಬದಲಾವಣೆಗಳಾಗುತ್ತಿವೆ. ಜಾತಿಯ ಚೌಕಟ್ಟುಗಳು ಎಷ್ಟೇ ಬಿಗಿಯಾಗಿದ್ದರೂ ಇವತ್ತು, ಆಹಾರ ಪದ್ಧತಿ ವಿಭಿನ್ನವಾಗಿರುವ ಗಂಡು ಹೆಣ್ಣುಗಳು ಪರಸ್ಪರ ಪ್ರೇಮಿಸಿ ಮದುವೆಗಳು ನಡೆಯುತ್ತಿವೆ. ಒಂದೇ ಕುಟುಂಬದಲ್ಲಿ ಸಸ್ಯಾಹಾರವೂ ಮಾಂಸಾಹಾರವೂ ಚಾಲ್ತಿಯಲ್ಲಿರುತ್ತದೆ. ನಾವು ನೂರಕ್ಕೆ ನೂರು ಸಸ್ಯಾಹಾರಿಗಳು ಎಂದು ಹೇಳಿಕೊಳ್ಳುವವರ ಮನೆಯಲ್ಲಿನ ಮಕ್ಕಳು ತಮ್ಮ ಗೆಳೆಯ ಗೆಳತಿಯರ ಮನೆಗಳಿಗೆ ಹೋಗಿ ಮಾಂಸಾಹಾರವನ್ನು ತಿಂದುಬರುವುದು, ಮುಂದೆ ಅದನ್ನೇ ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುವುದು ಅಪರೂಪದ ಸಂಗತಿಯಲ್ಲ. ಅದನ್ನು ನಾವು ನೋಡುತ್ತಿದ್ದೇವೆ. ನಮ್ಮ ಮಕ್ಕಳನ್ನು ಗೌರವಿಸುತ್ತಿದ್ದೇವೆ. ಆಹಾರದ ಕಾರಣಕ್ಕಾಗಿಯೇ ಮಕ್ಕಳನ್ನು ಹೊರಹಾಕಿದ ಉದಾಹರಣೆಗಳಂತೂ ತುಂಬಾ ಅಪರೂಪ.
ಸತ್ಯ ಇದು. ಇದನ್ನು ಒಪ್ಪಿಕೊಳ್ಳಬೇಕು. ಆಹಾರ ಆಹಾರವೇ. ಮಾಂಸಾಹಾರ ವಿಷವಲ್ಲ; ಸಸ್ಯಾಹಾರ ಅಮೃತವೂ ಅಲ್ಲ. ಹೆಚ್ಚಾಗಿ ತಿಂದರೆ ಎರಡರಲ್ಲೂ ವಿಷವಿದೆ. ಹಿತವಾಗಿ ತಿನ್ನುವ ಯಾವ ಆಹಾರವೂ ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ. ಮಾಂಸಾಹಾರ ಎಂದಕೂಡಲೇ ಬೀದಿಗಿಳಿದು ಪ್ರತಿಭಟಿಸುವುದು ದೊಡ್ಡ ಪ್ರಹಸನದಂತೆ ಕಾಣಿಸುತ್ತದೆ. ವೇದಕಾಲದಲ್ಲಿ ಮಾತ್ರವಲ್ಲ, ಈಗಲೂ ಶೂದ್ರರ ಆಹಾರ ಮಾಂಸಾಹಾರ ಎಂದು ಹೇಳಿದರೆ ಯಾವ ಶೂದ್ರನೂ ಬೀದಿಗಿಳಿದು ಪ್ರತಿಭಟಿಸುವುದಿಲ್ಲ ಯಾಕೆ?
ಜಾತಿವ್ಯವಸ್ಥೆ ಎನ್ನುವುದೇ ದೊಡ್ಡ ವಿಷ. ಇದರಿಂದ ದೂರವಿರುವುದನ್ನು ಎಲ್ಲರೂ ಕಲಿಯಬೇಕು.
 

‍ಲೇಖಕರು avadhi

October 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

19 ಪ್ರತಿಕ್ರಿಯೆಗಳು

  1. kum.veerabhadrappa

    ಪ್ರಿಯ ಮಿತ್ರ ಬಸವರಾಜ್
    ನಿಮ್ಮ ಲೇಖನ ಆಹಾರ ವ್ಯಸನಿಗಳ ಕಣ್ತೆರೆಸುವಂತಿದೆ, ಈ ವ್ಯತ್ಯಾಸಗಳನ್ನು ಆರೋಪಿಸಿಕೊಂಡಿರುವುದು ಈ ಶತಮಾನದಲ್ಲಿ, ಅದೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ, ಮಾನವನ ದೇಹದ ಜೀರ್ಣಾಂಗಗಳಲ್ಲಿ ಮುಖ್ಯವಾಗಿ ಬಾಯಿಯಲ್ಲಿ ದವಡೆಹಲ್ಲುಗಳಿರುವುದು, ಒಳಗೆ ಕೆಲವು ಹಾರ್ಮೋನುಗಳು ಮಾಂಸಾಹಾರ ಪಚನಕ್ಕೆ ಸಂಬಂಧಿಸಿದಂತೆ, ವೇದಕಾಲೀನ ಸಮಾಜದಲ್ಲಿ ಮಾಂಸಾಹಾರ ಎಲ್ಲಾ ವರ್ಗದ ಜನರಿಗೆ ಅನಿವಾರ್ಯವಾಗಿತ್ತು, ಉದಾಹರಣೆಗೆ ವಾಜಪೇಯಿ ಎಂಬ ಪುರೋಹಿತ್ಯಕ್ಕೆ ಸಂಬಂಧಿಸಿದ ಪದವನ್ನೇ ತೆಗೆದುಕೊಳ್ಳುವುದಾದರೆ ವಾಜ್ ಎಂದರೆ ಕುದುರೆ, ಪೇಯಿ ಎಂದರೆ ತಿನ್ನುವವನು, ಇಂಥ ಉದಾಹರಣೆಗಳು ವೇದೋಪನಿಷತ್ತುಗಳಲ್ಲಿ ಸಾಕಷ್ಟಿವೆ, ಅದನ್ನು ಸೋಕಾಲ್ಡ್ ಮೇಲ್ಜಾತಿಯವರು ಸಾರ್ವಜನಿಕವಾಗಿ ಒಪ್ಪಿಕೊಂಡರೆ ಅವರ ಸಾಮಾಜಿಕ ವರ್ಚಸ್ಸಿಗೆ ದಕ್ಕೆ ಖಂಡಿತ ಬರುವುದಿಲ್ಲ, ವೆಜಿಟೇರಿಯನ ಪುಲಾವ್, ಬೋಂಡಾ ಇಂಥ ಖಾದ್ಯಗಳು, ಕುಂಬಳಕಾಯಿ ಬಲಿಕೊಡುವುದು ಇತ್ಯಾದಿ ಮಾಂಸಾಹಾರ ಮತ್ತು ಪ್ರಾಣಿಬಲಿಯ ಆಧುನಿಕ ರೂಪಗಳೆ. ಇವರೆಲ್ಲ ಒಣಧಿಮಾಕು ತೋರಿಸುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ, ನಿಮ್ಮಂಥ ಪ್ರಜ್ಜಾವಂತರು ಈ ಕುರಿತು ಬರೆಯುತ್ತಿರುವುದು ಸಂತೋಷ, ಅಭಿನಂದನೆಗಳು
    ಕುಂವೀ

    ಪ್ರತಿಕ್ರಿಯೆ
  2. kum.veerabhadrappa

    ಇನ್ನೊಂದು ಮಾತು ಹೇಳೋದಿತ್ತು ಜಿಪಿ, ಅದೆಂದರೆ ಪರಿಣತರು ಈ ಬಗ್ಗೆ ನಿಜ ಸಂಗತಿಗಳನ್ನು ಬಹಿರಂಗಪಡಿಸುವುದು ತುಂಬಾ ಮುಖ್ಯ, ಸತ್ಯ ಹೇಳಲು ಹಿಂದೆಮುಂದೆ ನೋಡುವವರು ಸಮಾಜದ ಶತ್ರುಗಳು, ನಾವು ಮನೆಯಲ್ಲಿ ಸಸ್ಯಾಹಾರಿಗಳು, ಅದೂ ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ದುಡಿಯುವ ವರ್ಗಗಳ ಕೊರಳಿಗೆ ಲಿಂಗ ಕಟ್ಟಿರುವ ಕಾರಣದಿಂದ, ವೀರಶ್ಯವ ಸಮಾಜದ ಶೇಕಡಾ ಎಂಭತ್ತರಷ್ಟು ಜನ ಅದಕ್ಕೂ ಪೂರ್ವದಲ್ಲಿ ಮಾಂಸಾಹಾರಿಗಳಾಗಿದ್ದರು. ಉದ್ದೇಶಪೂರ್ವಕವಾಗಿ ನನ್ನ ಮೂರು ಮಕ್ಕಳ ಆಹಾರಾಭ್ಯಾಸವನ್ನು ಮಾಂಸಾಹಾರಿಗಳನ್ನಾಗಿ ಬದಲಿಸಿದ್ದೇನೆ. ಅವರ ವ್ಯಾಸಂಗದವಧಿಯಲ್ಲಿ ನಾನ್ ವೆಜ್ ಅಲೊಯನ್ಸಂತ ಅಯ್ದು ನೂರು ರೂಪಾಯಿಗಳನ್ನು ಹೆಚ್ಚುವರಿ ಕಳಿಸುತ್ತಿದ್ದೆ, ಅವರೆಲ್ಲ ಗಟ್ಟಿಮುಟ್ಟಾಗಿರಲಿ, ಕದ್ದು ತಿನ್ನದಿರಲಿ ಎಂಬ ಸದುದ್ದೇಶದಿಂದ
    ಕುಂವೀ

    ಪ್ರತಿಕ್ರಿಯೆ
  3. Dattaraj

    ಜೆ ಪಿ ಮತ್ತು ಕುಂವೀ ಎಂಬ ಇಬ್ಬರೂ ಹಿರಿಯರು ಆಹಾರ ಅನ್ನುವುದು ಕೇವಲ ಹಸಿವು ನೀಗಿಸಲಿಕ್ಕಾಗಿ ಇರುವ ಪದಾರ್ಥ ಅಂತ ತಿಳಿದುಕೊಂಡಿರುವುದು ಶೋಚನೀಯ.

    ಪ್ರತಿಕ್ರಿಯೆ
  4. aharnishi

    ಇಲ್ಲಿ ಮಾಂಸ ತಿನ್ನುವವರು ತಿನ್ನಲಿ, ಸಸ್ಯ ತಿನ್ನುವವರು ತಿನ್ನಲಿ ಅಭ್ಯಂತರವಿಲ್ಲ. ತಿನ್ನುವವರಿಂದ ವೇದಕಾಲದ ಬ್ರಾಹ್ಮಣರೂ ತಿನ್ನುತ್ತಿದ್ದರು ಅನ್ನುವ ಸಮರ್ಥನೆಯ ಅಗತ್ಯವಿಲ್ಲ್ಲ.ತಿನ್ನದವರಿಂದಲೂ ಬ್ರಾಹ್ಮಣರು ತಿನ್ನಲಿಲ್ಲ ಅನ್ನುವ ಸಮರ್ಥ್ನೆಯ ಅಗತ್ಯವೂ ಇಲ್ಲ. ಇರುವುದು ಎರಡೇ ವರ್ಗ. ಒಂದು ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು.. ಇದಕ್ಕೆ ಬ್ರಾಹ್ಮಣರನ್ನೋ, ಮುಸ್ಲಿಮರನ್ನೋ ಅಥವಾ ಇತರ ವರ್ಗಗಳನ್ನೋ ಎಳೆದು ತರುವ ಅಗತ್ಯವಿಲ್ಲ… ಕಾಂಗ್ರೆಸನ್ನೋ , ಬಿಜೆಪಿಯನ್ನೋ ಇತರ ರಾಜಕೀಯ ಪಕ್ಷಗಳನ್ನೋ ತಳುಕು ಹಾಕುವ ಅಗತ್ಯವೂ ಇಲ್ಲ… ಒಟ್ಟಿನಲ್ಲಿ ಈ ಲೇಖನದ ಗುರಿ ವರ್ಗದ ಮನಸ್ಸನ್ನು ನೋಯಿಸುವುದು ಮಾತ್ರ…

    ಪ್ರತಿಕ್ರಿಯೆ
  5. Umesh

    ಈ ಲೇಖನದ ಉದ್ದೇಶವೋ ಅಥವಾ ದುರುದ್ದೇಶವೋ, ಈ ಲೇಖನದ ಔಚಿತ್ಯ ಏನು ಅಂತ ತಿಳಿಯದಾಗಿದೆ. ಯಾವುದೋ ಸಹಸ್ರಾರು ವರ್ಷದ ಹಿಂದೆ ಯಾರೋ ಮಾಂಸ ತಿನ್ನುತಿದ್ದರು ಈಗ ತಿನ್ನುತಿಲ್ಲ. ಅಷ್ಟೇ ಅಲ್ಲ ಬ್ರಾಹ್ಮಣರು ಯಾರನ್ನೂ ಇದನ್ನು ತಿನ್ನಿ ಅಥವಾ ತಿನ್ನಬೇಡಿ ಅಂತ ಒತ್ತಾಯಿಸುತ್ತಿಲ್ಲ. ಬ್ರಾಹ್ಮಣರು ಮಾಂಸ ಈಗ ತಿನ್ನುತಿಲ್ಲ ಅನ್ನುವುದೇ ಲೇಖಕರಿಗೆ ಒಂದು ಸಮಸ್ಯೆ ಆಗಿರುವಂತೆ ತೋರುತ್ತಿದೆ.

    ಪ್ರತಿಕ್ರಿಯೆ
    • aharnishi

      ಇದನ್ನೇ ನಾನೂ ಹೇಳುವುದು… ಯಾರು ಏನು ತಿನ್ನುತ್ತಿದ್ದರು… ಈಗ ತಿನ್ನುತ್ತಿಲ್ಲ ಅನ್ನುವುದನ್ನೇ ಮಾಂಸ ಎಳೆದಂತೆ ಎಳೆದೂ ಎಳೆದೂ ಬರೆದ ಲೇಖನ

      ಪ್ರತಿಕ್ರಿಯೆ
  6. ಶಮ, ನಂದಿಬೆಟ್ಟ

    “ಜಾತಿವ್ಯವಸ್ಥೆ ಎನ್ನುವುದೇ ದೊಡ್ಡ ವಿಷ. ಇದರಿಂದ ದೂರವಿರುವುದನ್ನು ಎಲ್ಲರೂ ಕಲಿಯಬೇಕು”
    ಇದು ಇಂದಿನ ಅಗತ್ಯ, ಅವಶ್ಯಕತೆ ಮತ್ತು ಅನಿವಾರ್ಯತೆ.

    ಪ್ರತಿಕ್ರಿಯೆ
  7. mallikarjuna

    onadimakina aahaara vysanigalige olleya maddu.KUM.VEE. abhipraayakke nana sahamata ide.

    ಪ್ರತಿಕ್ರಿಯೆ
    • Dattaraj

      ಭಾರತಿ ಅಕ್ಕ .. ಈ ಲೇಖನದ ಮೂಲ ವಿಷಯವಾದ ವೇದಕಾಲೀನ ಬ್ರಾಮ್ಹಣರ ಆಹಾರದ ಬಗ್ಗೆಯಾಗಲೀ ಅನಂತ ಮೂರ್ತಿಯವರ ಹೇಳಿಕೆಯ ಬಗ್ಗೆಯಾಗಲೀ ನನಗೆ ಯಾವುದೇ ತಕರಾರಿಲ್ಲ. ಆದರೆ ಆಹಾರದಿಂದಾಗಿ ಜಾತಿ ವಿಭಜನೆ ಅನ್ನುವ ಮಾತು ತುಂಬಾ ಹಗುರವಾಗಿ ಕಾಣಿಸಿತು. ಈ ಬರಹದ ಲೇಖಕರಿಗೂ ಮತ್ತು ಮೊದ್ಲು ಪ್ರತಿಕ್ರಯಿಸಿ ಅನಗತ್ಯವಾಗಿ ತಮ್ಮ ವೈಯಕ್ತಿಕ ಸಂಗತಿಗಳನ್ನೆಲ್ಲ ಪ್ರಸ್ತಾಪಿಸಿದ ಕುಂವೀ .. ಈ ಇಬ್ಬರೂ ಕೂಡ ಜಾತಿಯ ಪರಿಧಿ ದಾಟಿ ಆಹಾರ ಉಂಟುಮಾಡುವ ಮಾನಸಿಕ ಮತ್ತು ಬೌದ್ಧಿಕ ಪರಿಣಾಮದ ಕಡೆಗೆ ಗಮನವನ್ನೇ ಹರಿಸಿಲ್ಲ. ಆಹಾರ ನಿಯಮಗಳು ಜಾತಿ ಆಧಾರಿತ ಅಲ್ಲ. ಜೀವನದ ಮಾರ್ಗದ ಆಧಾರದ ಮೇಲೆ ಆಹಾರ ಸೂಚನೆ ಮಾಡಿದ್ದಾರೆ.
      ನಾವು ತಿನ್ನುವ ಅನ್ನ ಅಥವಾ ಆಹಾರವನ್ನು ಯಾರು ಸಂಪಾದಿಸಿ ತಂದಿದ್ದು, ಎಂತಹ ವೃತ್ತಿಯಿಂದ ಸಂಪಾದಿಸಿದ್ದು, ಯಾರು ಅಡುಗೆ ಮಾಡಿದ್ದು, ಅಡುಗೆ ಮಾಡುವವನ ಮಾನಸಿಕತೆ, ಆಹಾರ ಒಳಗೊಂಡಿರುವ ಪದಾರ್ಥಗಳು ಹೀಗೆ ಈ ಎಲ್ಲ ಸಂಗತಿಗಳು ತಿನ್ನುವವನ ಮನಸ್ಸು ಮತ್ತು ಬುದ್ದಿಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿಯೇ ಕಳ್ಳನ ಮನೆಯ ಅನ್ನ ತಿಂದವನು ಕಳ್ಳನೇ ಆಗುತ್ತಾನೆ ಅನ್ನುವ ಅನುಭವದ ಮಾತನ್ನು ಹಿರಿಯರು ಹೇಳುತ್ತಾರೆ. ಮನುಷ್ಯನಮನ್ನಸ್ಸಿನಲ್ಲಿ ಸಾತ್ವಿಕ, ರಾಜಸಿಕ ತಾಮಸಿಕ ಎನ್ನುವ ಮೂರು ಗುಣಗಳಿವೆ. ಅವು ಪ್ರಕೃತಿಯಿಂದ input ಪಡೆಯುತ್ತಲೇ ಇರುತ್ತವೆ. ಆ ಮೂರರಲ್ಲಿ ಯಾವ ಗುಣ ಹೆಚ್ಚಾಗಿರುತ್ತದೆಯೋ ಅದಕ್ಕೆ ತಕ್ಕಂತಹ ಪ್ರವೃತ್ತಿ ಮನುಷ್ಯನಲ್ಲಿ ಬೆಳೆಯುತ್ತ ಹೊಗುತ್ತದೆ. ನಮ್ಮ ಪೂರ್ವಜರು ಈ input ಅನ್ನು monitor ಮಾಡುವ ಮೂಲಕ ಅವರವರ ಜೀವನದ ಗುರಿಗೆ ತಕ್ಕಂತೆ ಯಾವ ಗುಣ ಹೆಚ್ಚಾಗಿರಬೇಕೋ ಅದಕ್ಕೆ ಅನುಗುಣವಾದ ಆಹಾರ ಪದ್ಧತಿಯನ್ನು ವಿಧಿಸಿದ್ದರು. ಬ್ರಮ್ಹಚಾರಿಗೆ ಮತ್ತು ಸನ್ಯಾಸಿಗೆ ಭಿಕ್ಷೆ ಬೇಡಲಿಕ್ಕೆ ಕೂಡ ಇಂತಹವರ ಮನೆಯಲ್ಲಿ ಬೇಡಬೇಕು ಇಂತಹವರ ಮನೆಯಲ್ಲಿ ಬೇಡಬಾರದು ಎಂಬ ನಿಯಮಗಳಿವೆ(ಜಾತಿಯ ಆಧಾರದಿಂದ ಅಲ್ಲ ).
      ಅನ್ಯಾಯದಿಂದ ಸಂಪಾದಿಸಿದ ಶ್ರೀಮಂತನ ಮನೆಯ ಮದುವೆ ಊಟವನ್ನೂ ಮಾಡಬೇಡ ಅಂತ ಹೇಳಿದ್ದಾರೆ. ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆ ಕಾಯಿ, ಬದನೆ ಕಾಯಿ, ಕುಂಬಳ ಕಾಯಿ, ಮಾಂಸ, ಮದ್ಯ ಮುಂತಾದ ಕೆಲ ಪದಾರ್ಥಗಳು ಮನಸ್ಸಿನ ತಾಮಸಿಕತೆಯನ್ನು ಹೆಚ್ಚಿಸುತ್ತವೆ. ಬ್ರಹ್ಮ ಮಾರ್ಗದಲ್ಲಿ ಮುಂದುವರೆಯಬೇಕಾದರೆ ಸಾತ್ವಿಕ ಗುನ್ನ ಹೆಚ್ಚು ಪ್ರಮಾಣದಲ್ಲಿ ಇರಬೆಕಾಗುತ್ತದೆ. ಹೀಗಾಗಿ ಈ ಎಲ್ಲ ಪದಾರ್ಥಗಳನ್ನು ಬ್ರಮ್ಹದ ಬಗ್ಗೆ ಆಸಕ್ತಿ ಹೊಂದಬೇಕಾಗಿರುವ ನೀವು ತಿನ್ನಬೇಡಿ ಅಂತ ಯಾರೋ ಅನುಭವಿಗಳು ಹೇಳಿದರು. ಮಕ್ಕಳಿಗೆ ಪರೀಕ್ಷೆ ಹತ್ತಿರ ಬಂದ ಕೂಡಲೇ ಅಪ್ಪ ಅಮ್ಮ ಟಿವಿ ನೋಡಬೇಡ, ವಿಡಿಯೋಗೇಮ್ ಆಡಬೇಡ, ಹೊರಗೆ ಸುತ್ತಲಿಕ್ಕೆ ಹೋಗ ಬೇಡ ಅದನ್ನು ಮಾಡಬೇಡ ಇದನ್ನು ಮಾಡಬೇಡ ಅಂತೆಲ್ಲ ಹೆಲ್ತಾರೆ. ಯಾಕಂದ್ರೆ ಆ ಮಗುವಿನ ಗಮನ ಪೂರ್ತಿಯಾಗಿ ಓದಿನ ಕಡೆಗೆ ಇರಲಿ ಅಂತ. ಈಗ ಮಗುವಿಗೆ ಓದಬೇಕೋ ಬೇಡವೋ ಅಂತ ಹೇಳುವ ಹಕ್ಕು ಅಪ್ಪ ಅಮ್ಮನಿಗೆ ಇಲ್ಲ – ಮಗು ಬೇಕಾದ್ರೆ ಓದಲಿ ಇಲ್ಲ ಅಂದ್ರೆ ಬೇಡ ಅಂತ ಬಿಡುವ ಪೋಷಕರು ಇದ್ದಾರೆಯೇ ? ಇದೂ ಹಾಗೆಯೇ. ಆಧ್ಯಾತ್ಮದ ದಾರಿಯಲ್ಲಿ ಹೋಗಬೇಕಾದ ವ್ಯಕ್ತಿಗೆ ಇದನ್ನು ಮಾಡಬೇಕು, ಇದನ್ನು ಮಾಡಬಾರದು ಅನ್ನುವ ಸೋಚನೆಗಳಿವೆ. ಆ ಸೂಚನೆಗಳ ಹಿಂದೆ ಬಲವಾದ ಕಾರಣಗಳಿವೆ. ಬ್ರಹ್ಮ ಅಂದರೆ ಏನು ಅಂತ ಗೊತ್ತಿದ್ದವರು ಅದನ್ನು ಪಾಲಿಸಿದರು. ಬ್ರಹ್ಮ ಅಂದರೆ ಏನು ಅಂತ ಗೊತ್ತಿಲ್ಲದವರು ನಾವು ಬ್ರಾಮ್ಹನರು ಹೀಗಾಗಿ ಅದನ್ನೆಲ್ಲ ತಿನ್ನಬಾರದು ಅಂತ ಅರ್ಥ ಮಾಡಿಕೊಂಡರು. ಆಗ ಅದು ಜಾತಿಯ ಮಟ್ಟಕ್ಕೆ ಇಳಿಯಿತು.ನಿಮ್ಮ ಅಪ್ಪ ಅನ್ಯಾದ ಕೆಲಸ ಮಾಡಿ ಸಂಪಾದಿಸಿ ತಂದು ಹಾಕಿದರೆ ಆ ಅಪ್ಪನ ಮನೆಯನ್ನು ಬಿಟ್ಟು ಹೊರಗೆ ಬದ್ನು ಬದುಕು ಅಂತ ಧರ್ಮ ಹೆಲುತ್ತದೆ. ಅದರ ಉದ್ದೇಶ ನಿನ್ನ ಒಳಗಿನ ಸಾತ್ವಿಕತೆಯನ್ನು ಉಳಿಸಿಕೋ ಅಂತ. ಆಹಾರದ ಜೊತೆಗೆ ಹರಿದು ಬರುವ ಗುಣಗಳಿಂದಾಗಿ ನಾಶವಾಗಿ ಹಾದಿ ತಪ್ಪಬೇಡ ಅಂತ. (ಇನ್ನು ಯಾವುದು ಹಾದಿ ತಪ್ಪುವಿಕೆ ಯಾವುದು ಉದ್ಧಾರ ಆಗುವಿಕೆ ಅನ್ನುವುದರ ಬಗ್ಗೆ ಅವರರದೆ ಅಭಿಪ್ರಾಯಗಳಿವೆ. ಹೀಗಾಗಿ ಬೇರೆ ಬೇರೆ ಆಹಾರ ಪದ್ಧತಿ ಮತ್ತು ಜೀವನವಿಧಾನಗಳಿವೆ.) ಸಾತ್ವಿಕತೆ ಹೆಚ್ಚಿಸಲಿಕ್ಕಾಗಿ ಕೇವಲ ಆಹಾರ ಮಾತ್ರ ಅಲ್ಲ ಬಟ್ಟೆಗಳ ಬಣ್ಣ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇಷ್ಟು ಬೇಸಿಕ್ ಆದ ವಿಷಯವನ್ನೇ ಬಿಟ್ಟು ಆಹಾರವನ್ನು ಕೇವಲ ಜಾತಿಗೆ ಗಂಟು ಹಾಕಿ ನೋಡಿದ ಲೇಖಕರು ಮತ್ತು ಪ್ರತಿಕ್ರಯಿಸಿದ ಕುಂವೀ ಅವರ ಸ್ಥಿತಿ ಶೋಚನೀಯ ಅಂತ ನಾನು ಹೇಳಿದ್ದು.

      ಪ್ರತಿಕ್ರಿಯೆ
  8. Kavya Nagarakatte

    ಸರಿಯಾಗಿ ಯೋಚಿಸಬಲ್ಲ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸುಪ್ತವಾಗಿದ್ದ ವಿಚಾರಗಳಿಗೆ ಅಕ್ಷರರೂಪದಂತಿದೆ ಈ ಲೇಖನ. ತನಗೆ ಬೇಕಾದುದನ್ನು ತಿನ್ನುವ, ಬೇಡವಾದುದನ್ನು ನಿರಾಕರಿಸುವ ಆಯ್ಕೆ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ ಎಂಬ ಸರಳವಾದ ವಿಚಾರವನ್ನು ಅಷ್ಟೇ ಸರಳವಾಗಿ ಒಪ್ಪಿಕೊಂಡರೆ ಇಲ್ಲಿ ಉಸಿರಾಡುವುದು ಎಷ್ಟೋ ಸುಲಭವಾಗಿಬಿಡುತ್ತಿತ್ತು. ಇಂಥ ಲೇಖನಗಳು ಎಲ್ಲರಿಗೂ ತಲುಪುವಂತೆ ಮಾಡುವ ಹೊಣೆ ನಮ್ಮ ಮೇಲಿದೆ.

    ಪ್ರತಿಕ್ರಿಯೆ
  9. nagraj.harapanahalli

    ವಿಚಾರ ಪ್ರಚೋದಕ ಲೇಖನ. ರಾಜಕಾರಣಿಗಳು, ಜಾತಿ ವ್ಯವಸ್ಥೆ ಪ್ರತಿಪಾದಕರು, ಟಿವಿಯಲ್ಲಿ ಮೌಢ್ಯ ಪ್ರತಿಪಾದಿಸುವ ಜೋತಿಷಿ ಪುರುಹಿತರು ಗೋವನ್ನು ಪವಿತ್ರ ಅಂಥ ಪ್ರತಿಪಾದಿಸುತ್ತಿರುವುದೇ ಹಿಂದುತ್ವದ ಹೆಸರಿನ ರಾಜಕಾರಣಕ್ಕೆ, ವರ್ಣ ವ್ಯವಸ್ಥೆ ಉಳಿಸಿಕೊಳ್ಳಲಿಕ್ಕೆ. ನನ್ನ ಬಹಳಷ್ಟು ಬ್ರಾಹ್ಮಣ ಮಿತ್ರರು ಮೀನು ತಿನ್ನುತ್ತಾರೆ. ಕೋಳಿ ತಿನ್ನುವವರು ಇದ್ದಾರೆ. ಆದರೆ ಜಾತಿ ವ್ಯವಸ್ಥೆ ಬಗ್ಗೆ ಚಕಾರ ಎತ್ತಲ್ಲ. ಮೌನವಹಿಸುತ್ತರೆ. ಮದುವೆಯ ಹಂತಕ್ಕೆ ಅವರು ಬದಲಾಗಿಲ್ಲ. ಆಹಾರ ಪದ್ಧತಿಯ ಬಗ್ಗೆ ಅವರಿಗೆ ಸಮ್ಮಿತಿ ಇದೆ. ಮದ್ಯವನ್ನು ಖುಷಿಯಿಂದ ಸೇವಿಸುತ್ತಾರೆ. ಅಷ್ಟರಮಟ್ಟಿಗೆ ಅವರು ಪ್ರಗತಿಪರರು.

    ಪ್ರತಿಕ್ರಿಯೆ
  10. aravind

    Yuganusara kalanusara deshanusara shastragalu badalagutta bandive.
    Krutayugadalli ayushya 1 laksha varsha ayushya ittu.
    28 mola ettara
    4 pada Dharma
    Suvarnaratna vyapara
    Ellaru Satyavadigalagiddaru.
    Tretayugadalli 10 savira varsha ayushya
    14 mala ettar
    3 pada dharma 1 pada adharma ittu
    Bangara belli vyapara
    3 pada satya 1 asatya ittu
    Dvaparayugadalli
    1000 varsha ayushya
    7 mola ettara
    2pada dharma 2 pada adharma
    Belli tamra hittale vyapara
    Kaliyugadalli
    100 varsha ayushya
    3.5 mola hight
    3 pada asatya 1 pada satya (Parikshita maharaja iruvavarege matra satya ittu)
    Kabbina&manni vyapara.
    Annagata prana ide so ellaru navu sasyharigalagi badukabeku aste.

    ಪ್ರತಿಕ್ರಿಯೆ
  11. aravind

    Krutayugadalli astigataprana ittu manushya elabugalannu tindu badukutidda.
    Tretaygadalli Raktagata prana
    Dvaparyugadalli Mansagata prana ittu
    Kaliyugadalli annagataprana ide so anna tindu manushya badukabeku anta helodu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: