ಸಂಪು ಕಾಲಂ : ಜೀವಂತ ಕಲ್ಲುಗಳೂ, ಗ್ರಹಗಳೂ ಮತ್ತು ನಾವು

(ಇಲ್ಲಿಯವರೆಗೆ…)

“Happiness is your nature. It is not wrong to desire it. What is wrong is seeking it outside when it is inside.” ಇದು ಬಹಳ ಹಿಂದೆ ಕೇಳಿದ್ದ ಮಾತು, ಸದಾ ನೆನಪಾಗುತ್ತಲೇ ಇರುತ್ತದೆ. ನಮ್ಮ ಮಿತಿಗಳು ಗೊತ್ತಿದ್ದರೂ ಅವನ್ನು ನಮ್ಮಿಂದಲೇ ಮರೆಮಾಚಿ ಒಂದು ಪೊಳ್ಳು ಪರದೆಯನ್ನು ಕಟ್ಟಿಕೊಂಡು ಯಾವುದೊ ಅಮೂರ್ತಕ್ಕಾಗಿ, ನಮ್ಮ ಆಸೆಗಳ ಸೇತುವೆಯ ಮೇಲೆ ಜರುಗಬಹುದಾದ ಜಾದೂವಿಗಾಗಿ ಹವಣಿಸುತ್ತೀವಲ್ಲಾ ಅದೇ ನಮಗೆ ಸದಾ ನಿರಾಶೆಯನ್ನುಂಟು ಮಾಡುವುದು. ಆ ನಿರಾಶೆ ದೂರ ಮಾಡಬೇಕಾದರೆ ನಾವು “ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು” ಭೌತಿಕವಾಗಿಯೂ, ಮಾನಸಿಕವಾಗಿಯೂ. ಆಗಲೇ ನಮಗೆ ನಮ್ಮಲ್ಲಿನ ಸುಖ, ಸಂತೋಷ ಕಾಣಸಿಗುವುದು. ಇದು ಆಗಾಗ ನೆನಪಾಗುತ್ತೆ ಹೊರತು ಅನುಷ್ಠಾನಕ್ಕೆ? ಸಾಧ್ಯವಾಗದ ಮಾತು! ಇಂತಹ ಆಣಿಮುತ್ತುಗಳಾದ ಸತ್ಯಗಳು ಎಲ್ಲರಿಗೂ ಹ್ರುದ್ಪೂರ್ವಕ ಗೋಚರವಾಗುವಂತಹದ್ದಲ್ಲ. ಅದಕ್ಕೇ ರಮಣ ಮಹರ್ಷಿಯಂಥವರು ನಮಗೆ ದೈವೀಕವಾಗಿ ಕಾಣುವುದು. ಮೇಲೆ ಹೇಳಿರುವ ಕೋಟ್ ರಮಣ ಮಹರ್ಷಿ ಜೀವನದ ಬಗೆಗೆ ಅರ್ಥೈಸಿಕೊಂಡ ಮೊದಲ ಪಾಠವಂತೆ.
ಇಂತಹ ಯುಗಪುರುಷರ ಆಶ್ರಮದಲ್ಲಿ ಕಾಲಿಡುವುದೇ ನಮಗೆ ಒಂದು ಸೋಜಿಗವೆನಿಸಿತು. ನಮ್ಮ ಅದೃಷ್ಟವೋ ಎಂಬಂತೆ, ನಮಗೆ ಸ್ವಾಗತ ಕೋರಿದ್ದು ತನ್ನ ಗರಿಬಿಚ್ಚಿ ಕುಣಿದು, ಜೀಕುತ್ತಿದ್ದ ನವಿಲು. ನಿಶ್ಶಬ್ದವಾದ ಆ ವಾತಾವರಣದಲ್ಲಿ ಗಂಡು ನವಿಲೊಂದು ದೂರದ ಕೊಂಬೆಯ ಮೇಲೆ ಕೂತಿದ್ದ ಹೆಣ್ಣು ನವಿಲಿಗೆ ತನ್ನ ಸಂದೇಶವನ್ನು ತಲುಪಿಸಿತ್ತು. ಅದರ ಕುಣಿತ ಕಂಡು ಆ ಹೆಣ್ಣು ನವಿಲಿನ ಬಗ್ಗೆ ತಿಳಿಯದು ಆದರೆ ನಾವಂತೂ ರೋಮಾಂಚಿತರಾದೆವು. ಆ ಸ್ಥಳದ ನೀರವತೆ, ಪ್ರಶಾಂತತೆ ನಮಗೆ ಬಹಳ ಆಪ್ತವೆನಿಸಿದವು. ಸುತ್ತುವರೆದಿದ್ದ ಜನರಿಂದ ದೂರಾಗಿ ಆ ಸಿರಿನಿಟಿಯನ್ನು ತುಂಬಿಕೊಳ್ಳಲು ಆಶ್ರಮದ ಸುತ್ತ ನಾವಿಬ್ಬರು ಒಂದು ಸುತ್ತು ಹಾಕಿದೆವು. ಒಂದು ಕ್ಷಣ ನಮ್ಮ ಬೆಂಗಳೂರಿನ ದೈನಂದಿನ ರಶ್ ನೆನೆದು ದಿಗಿಲೇ ಆಗಿಬಿಟ್ಟಿತು. ಅದೇ ಆಶ್ರಮದಲ್ಲೇ ಇದ್ದು ಬಿಡುವಷ್ಟು ಸೆಳೆತ. ಆಶ್ರಮದಲ್ಲಿ ರಮಣ ಮಹರ್ಷಿಗಳ ತಾಯಿಯ ಸಮಾಧಿಯಿದೆ ಮತ್ತು ಅಲ್ಲೇ ಇರುವ ಒಂದು ಸಣ್ಣ ಕೊಠಡಿ, ಅವರು ತಂಗುವ ಸ್ಥಾನವಾಗಿದ್ದು, ಅಲ್ಲಿ ಅವರು ಬಳಸುತ್ತಿದ್ದ ಎಲ್ಲಾ ಉಪಕರಣಗಳನ್ನು ಇಟ್ಟಿದ್ದಾರೆ. ಅದೇ ಸ್ಥಳದಲ್ಲಿ ಮಹರ್ಷಿಗಳು ನಿರ್ವಾಣವನ್ನು ಪಡೆದದ್ದು ಎಂದು ತಿಳಿಸಲಾಗಿದೆ.
ಈ ಎಲ್ಲಾ metaphysical ಎಂದು ಹೇಳಬಹುದಾದ ಅನುಭೂತಿಯನ್ನು ಪಡೆದ ನಾವು ಭಗ್ನ ಕನಸಿನಿಂದ ಎಚ್ಚರವಾಗುವಂತೆ ಮತ್ತೆ ನಮ್ಮ ಪ್ರಯಾಣ ಮುಂದುವರೆಸಿದೆವು. ನಮ್ಮ ಮುಂದಿನ ದಾರಿ ಚಿದಂಬರಂ. ಶೈವ ದೇವಾಲಯಗಳಲ್ಲೇ ಅತ್ಯಂತ ಪ್ರಾಚೀನ ಎಂದು ಗುರುತಿಸಲ್ಪಟ್ಟಿರುವ ಚಿದಂಬರಂ ದೇವಸ್ಥಾನದ ಉಗಮ ನಿಖರವಾಗಿ ಎಲ್ಲೂ ತಿಳಿಸಿಲ್ಲ. ಸಂಗಮ ಸಾಹಿತ್ಯದಲ್ಲಿ (ಪ್ರಾಚೀನ ತಮಿಳು ಸಾಹಿತ್ಯ) ಈ ದೇವಸ್ಥಾನದ ಬಗ್ಗೆ ಉಲ್ಲೇಖ ಕಂಡು ಬಂದಿದೆ. ಈ ದೇವಸ್ಥಾನದಲ್ಲಿ ವಿಷ್ಣುವಿನ ವಿಗ್ರಹವೂ ಇದ್ದು, ಅದಕ್ಕೂ ಪ್ರತಿ ನಿತ್ಯ ವಿಶೇಷ ಪೂಜೆ ನಡೆಯುತ್ತದೆ. ವಿಸ್ತಾರವಾಗಿ ಹರಡಿರುವ ಈ ದೇವಾಲಯ ಒಂದು ಬೃಹತ್ ಕಲಾಗರ. ಲಿಖಿತ ಆಧಾರಗಳ ಪ್ರಕಾರ, ಆದಿತ್ಯ ಚೋಳ I ಮತ್ತು ಪರಂತಕ ಚೋಳ I ಈ ದೇವಸ್ಥಾನದ ಪುನರ್ ರಚನೆ ಮಾಡಿದ್ದಾರೆ. ಇವರ ನಂತರ ಪಾಂಡ್ಯ ಮತ್ತು ವಿಜಯನಗರದ ಅರಸರು ತಮ್ಮ ಕಲೋಪಾಸನೆಗೆ ಅನುಗುಣವಾಗಿ ಈ ದೇವಾಲಯದ ಅಂದ ಹೆಚ್ಚಿಸಿದ್ದಾರೆ. ಈ ದೇವಸ್ಥಾನದ ಉತ್ತರ ದ್ವಾರದ ಗೋಪುರದಲ್ಲಿ ಶ್ರೀ ಕೃಷ್ಣದೇವರಾಯನ ಮೂರ್ತಿಯನ್ನು ಕೆತ್ತಲಾಗಿದೆ ಎಂಬುದು ವಿಶೇಷ. 18ನೇ ಶತಮಾನದಲ್ಲಿ ನಡೆದ ಯುದ್ಧದಲ್ಲಿ ಈ ದೇವಸ್ಥಾನವನ್ನು ಒಂದು ಕೋಟೆಯಂತೆ ಉಪಯೋಗಿಸಿದ್ದರಂತೆ. ಬ್ರಿಟಿಷ್ ಅಧಿಕಾರಿ ಸರ್ ಐರ್ ಕೂಟ್ ನ ಧಾಳಿಯಿಂದ ಕಾಪಾಡಲು ಈ ದೇವಾಲಯದ ನಟರಾಜ ಮತ್ತು ಶಿವಕಾಮಸುಂದರಿಯ ವಿಗ್ರಹಗಳನ್ನು ತಿರುವಾರೂರ್ ತ್ಯಾಗರಾಜ ದೇವಸ್ಥಾನದಲ್ಲಿ ಅಡಗಿಸಿತ್ತಿದ್ದರಂತೆ.

ಈ ದೇವಸ್ಥಾನದ ಮತ್ತೊಂದು ಗಮನ ಸೆಳೆವ ಅಂಶ ಎಂದರೆ, ಇಲ್ಲಿ ಕಂಡು ಬರುವ “ಚಿದಂಬರ ರಹಸ್ಯ”. ಈ ಪದ ಬಳಕೆ ನಾನು ಶಾಲೆ ಕಲಿಯುತ್ತಿದ್ದಾಗಿನಿಂದಲೂ ತಿಳಿದಿತ್ತು ಮತ್ತು ಸದಾ ನನ್ನ ಕೌತುಕದ ಮನಸ್ಸನ್ನು ಪ್ರಶ್ನಿಸುತ್ತಲೇ ಇತ್ತು. ಏನಿರಬಹುದು ಈ ಚಿದಂಬರ ರಹಸ್ಯ ಎಂದು. ಈ ಸ್ಥಳ ಜೀವನದ ಒಂದು ದೊಡ್ಡ ರಹಸ್ಯವನ್ನು ಜೋಭದ್ರ ಪಡಿಸಿಕೊಂಡಿದೆ ಎಂಬ ಪ್ರತೀತಿ. ಆದರೆ ಅಲ್ಲಿ ಕಾಣುವುದು ಏನೂ ಇಲ್ಲದ ಖಾಲೀ ಕೋಣೆ ಮತ್ತು ಆ ಕೋಣೆಯ ಮೂಲಕ ಕಂಡು ಬರುವ ಬೆಳಗುವ ಜ್ಯೋತಿ. ಆಧ್ಯಾತ್ಮಿಕತೆಯ ಪರಮಾವಧಿ ಎನ್ನಬಹುದಾದ ಒಂದು absoluteness ಅನ್ನೂ nothingness ಅನ್ನೂ ಈ “ಚಿದಂಬರ ರಹಸ್ಯ” ಭೇದಿಸುತ್ತದೆ. ಜಟಿಲ ತಾತ್ವಿಕ ನೆಲೆಗಳನ್ನು ಹೀಗೆ ನಮ್ಮ ಹಿರಿಯರು ಅರ್ಥಗರ್ಭಿತವಾಗಿ ಮೂಡಿಸಿದ್ದಾರೆ. ಈ ಹೊಸ ಅನುಭವಗಳ ಪುಳಕಗಳ ನಡುವೆ ಉಪದ್ರವವೆನಿಸಿದ್ದು ಪುರೋಹಿತರ ಹಾವಳಿ. ಇಲ್ಲಿ ನಿಲ್ಲಿ, ಅಲ್ಲಿ ನಿಲ್ಲ ಬೇಡಿ, ಇಷ್ಟು ಹಣ ಕೊಡಿ, ಅಷ್ಟು ದಾನ ಮಾಡಿ ಎಂದು ಹೆಜ್ಜೆ ಹೆಜ್ಜೆಗೂ ನಮ್ಮ ಸಾವಧಾನವನ್ನು ಪರೀಕ್ಷಿಸುತ್ತಿದ್ದರು. ಸಹನೆ ಮೀರಿದ್ದಂತೂ “ನೀವು ಚಿದಂಬರ ರಹಸ್ಯವನ್ನು ನೋಡಲು 50 ರೂ (ಕಣ್ಣ ಸನ್ನೆಯ ಮೂಲಕ 80 ಎಂದು ತಿದ್ದಿದ ಮತ್ತೊಬ್ಬ) ಕೊಡಿ” ಎಂದು ಮುಗ್ಧರ ಬಳಿ ತಮ್ಮ ಲಂಪಟತನವನ್ನು ತೋರಿಸುತ್ತಿದ್ದುದು. ಪಾಪ ಅವರೇನು ಮಾಡಿಯಾರು, ಕುಣಿಸಿದಂತೆ ಕುಣಿಯುವ ನಾವೆಲ್ಲಾ ಇದ್ದೇವಲ್ಲಾ! ಇಂತಹ ಸಮಯದಲ್ಲೇ ಬೇಡವೆಂದರೂ ನನಗೆ ನಿಸ್ಸಾರ್ ನೆನಪಾಗಿಬಿಡುತ್ತಾರೆ!
ಸಾಕಷ್ಟು ಅನುಭವಗಳೊಂದಿಗೆ ನಮ್ಮ ಮೊದಲ ದಿನದ ಪ್ರವಾಸ ಸುಸೂತ್ರವಾಗಿ ಮುಗಿದಿತ್ತು. ನಮ್ಮ ಎರಡನೆಯ ದಿನದ ಪ್ರವಾಸ ಇದ್ದದ್ದು ಕುಂಭಕೋಣಂನ ಸುತ್ತುವರೆದಿರುವ ನವಗ್ರಹ ದೇವಸ್ಥಾನಗಳ ದರ್ಶನ. ಬುಧ, ಶುಕ್ರ, ಶನಿ, ರಾಹು, ಕೇತು, ಸೂರ್ಯ, ಚಂದ್ರ, ಗುರು, ಮಂಗಳ ಹೀಗೆ ಜನ ಮರುಳೋ ಜಾತ್ರೆ ಮರುಳೋ ಎಂದು ಹಲವಾರು ದೇವಸ್ಥಾನಗಳಿಗೆ ಹೋಗುವುದೂ, ಪ್ರಸಾದ ತುಂಬಿಸಿಕೊಳ್ಳುವುದು ಬಸ್ಸು ಹತ್ತುವುದು – ಹೀಗೆಯೇ ದಿನ ಕಳೆದುಹೋಯ್ತು. ಎಲ್ಲಾ ನವಗ್ರಹ ದೇವಸ್ಥಾನಗಳಲ್ಲೂ ಶಿವನ ಮಂದಿರವಿದ್ದೇ ಇರುತ್ತದೆ ಮತ್ತು ಮೊದಲಿಗೆ ಶಿವನನ್ನು ಕಂಡು ನಂತರ ಗ್ರಹಗಳನ್ನು ಕಾಣಬೇಕು ಎಂಬುದು ಅಲ್ಲಿಯ ನಂಬಿಕೆ. ಬುಧನಿಂದ ಪ್ರಾರಂಭಿಸಿದ ನಮ್ಮ ಮ್ಯಾರಥಾನ್ ಎಂಟು ಗ್ರಹಗಳನ್ನು ಮುಗಿಸಿತ್ತು. ಒಂಭತ್ತನೇ ಗ್ರಹ ಸೂರ್ಯ ದೇವನ ಕರುಣೆಯಿಂದ ಮರುದಿನಕ್ಕೆ ಪೋಸ್ಟ್ಪೋನ್ ಆಗಿತ್ತು.
ಈ ಎಂಟು ದೇವಾಲಯಗಳಲ್ಲಿ ನಾವು ಗಂಡ ಹೆಂಡತಿ ಬಹುಶಃ ನಾಲ್ಕು ದೇವಾಲಯಗಳ ಒಳಗೆ ಹೋಗುವುದನ್ನು ತಪ್ಪಿಸಿ ನಮ್ಮ ತಂಡವೆಲ್ಲ ಹೋಗಿ ಮರಳುವವರೆಗೂ ಅಲ್ಲೇ ಸುತ್ತ ಮುತ್ತ ಅಡ್ದಾಡುತ್ತಿದ್ದೆವು. ಯಾವುದೋ ಸಣ್ಣ ಡಬ್ಬ ಅಂಗಡಿಯಲ್ಲಿ ಮುರುಕು ಭಾಷೆ ಮಾತಾಡಿ ಚೆನ್ನಿಲ್ಲದ ಚಹಾ ಕುಡಿದದ್ದು, ಮತ್ಯಾರೋ ಗುಡಿಸಲಿನ ಸಗಣಿ ಸಾರಿದ ಶುಭ್ರ ಅಂಗಳದಲ್ಲಿ ಕಾಲು ಚಾಚಿ ನಮ್ಮ ಮನೆಯೇ ಎಂದು ಕೂತುಬಿಟ್ಟದ್ದು, ನಂತರ ಬಸ್ ಏರಿ ನಾವು ಹೊರಡುವವರೆಗೂ ಬಾಗಿಲಲ್ಲೇ ನಿಂತು, ಆ ಮನೆಯಾತ ನಮಗೆ ಕೈ ಬೀಸಿ ಬೀಳ್ಕೊಟ್ಟಿದ್ದು ಎಲ್ಲವೂ ಮರೆಯಲಾರದ ಅನುಭೂತಿ.
ಈ ನವಗ್ರಹ ದೇವಸ್ಥಾನಗಳು ಬಹುಶಃ ಅಷ್ಟು ಪಾಪ್ಯುಲರ್ ಅಲ್ಲದ ಕಾರಣವೋ ಏನೋ ಬಹಳ ಕೆಟ್ಟ ನಿರ್ವಹಣೆ ಇದ್ದಿತ್ತು. ಪ್ರತಿ ದೇವಸ್ಥಾನವೂ ವಿಶಾಲವಾಗಿಯೇ ಇತ್ತು. ಶಿಲ್ಪ ಕಲೆಯಂತೂ ಕೇಳುವುದೇ ಬೇಡ, ಒಂದಕ್ಕಿಂತ ಒಂದು ಚೆನ್ನ. ಆದರೆ, ಗಲೀಜು, ವಾಸನೆ, ಕೊಳೆತ ನೀರುಗಳಿಂದ ತುಂಬಿ ಇಡೀ ದೇವಸ್ಥಾನ ನಾರುತ್ತಿತ್ತು. ಪ್ರತಿ ದೇವಸ್ಥಾನಕ್ಕೂ ಒಂದೊಂದು ಸ್ಥಳ ಪುರಾಣವಿದ್ದೇ ಇತ್ತು. ನಮಗೆ ಸಾಕಷ್ಟು ಸಮಯವಿಲ್ಲದ ಕಾರಣ ಎಲ್ಲವನ್ನೂ ದಾಖಲಿಸಲಾಗಲಿಲ್ಲ. ಕೇತುವಿನ ದೇವಸ್ಥಾನದಲ್ಲಿ ನಮಗಾಗಿ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ, ದೇವಸ್ಥಾನದ ಒಳಾಂಗಣದ ಗೋಡೆಯೊಂದರ ಮೇಲೆ, ಅಲ್ಲಿನ ಸ್ಥಳ ಪುರಾಣದ ಕಥೆಯನ್ನು ಕನ್ನಡದಲ್ಲಿ ಬರೆಯಲಾಗಿತ್ತು! ಸಂತೋಷ, ಆಶ್ಚರ್ಯಗಳೊಂದಿಗೆ ಅಲ್ಲಿ ಎಲ್ಲರೂ ಫೋಟೋಗಳನ್ನು ಕ್ಲಿಕ್ಕಿಸಿದ್ದೆ ಆಯಿತು. ಎಂಟು ಗ್ರಹಗಳ ವಿಸಿಟ್ ನಂತರ ಉಳಿದಿದ್ದ ಚಂದ್ರ ದೇವಸ್ಥಾನ, ಆಕಾಶದಲ್ಲಿ ಚಂದ್ರನ ದರ್ಶನವಾದ ಸಲುವಾಗಿ ಮರುದಿನಕ್ಕೆ ಮುಂದೂಡಲಾಗಿತ್ತು. ಎಲ್ಲಾ ದೇವಸ್ಥಾನಗಳ ಪುಣ್ಯಗಳನ್ನೂ ನನ್ನ ಹಣೆ ಭರ್ತಿ ತುಂಬಿಸಿಕೊಂಡು ತಂಗುದಾಣಕ್ಕೆ ಸೇರಲು ಬಸ್ ಹತ್ತಿದರೆ, ನಮ್ಮ ಜೊತೆಯಲ್ಲಿದ್ದ ಹಿರಿಯರೊಬ್ಬರು ಹತ್ತಿರ ಬಂದು “ಜಮಾತಾ ದಶಮೀ ಗ್ರಹಃ” (ಅಳಿಯ ಹತ್ತನೇ ಗ್ರಹ) ಎಂದು ಹೇಳಿ ಮುಸಿನಗಬೇಕೆ! ನಿಜವೇ ಇರಬಹುದು ಎಂದು ಪಕ್ಕದಲ್ಲಿದ್ದ ನನ್ನ ಗಂಡನನ್ನೊಮ್ಮೆ ನೋಡಿ ಮುಗುಳ್ನಕ್ಕೆ.
ಮರುದಿನ ಕುಂಭೇಶ್ವರ, ಸಾರಂಗಪಾಣಿ ದೇವಸ್ಥಾನ ಮತ್ತು ಚಂದ್ರ ಗ್ರಹವನ್ನು ಕಂಡು ನಮ್ಮ ದಾರಿ ಚಲಿಸಬೇಕಾಗಿದ್ದದ್ದು ತಂಜಾವೂರಿನತ್ತ. ಕುಂಭೇಶ್ವರ ಮತ್ತೊಂದು ಅತ್ಯುತ್ತಮ ದೇವಸ್ಥಾನ. ಸಾವಿರದ ಮುನ್ನೂರು ವರ್ಷಗಳಿಗಿಂತಲೂ ಹಳೆಯದಾದ ಈ ಕುಂಭೇಶ್ವರ ದೇವಾಲಯವು ತಮಿಳು ನಾಡಿನ ಅತಿ ಮುಖ್ಯ ದೇವಸ್ಥಾನಗಳಲ್ಲೊಂದು. ಕುಂಭಕೋಣಂನ ‘ಮಹಾಮಹಂ’ ಹಬ್ಬ ನಡೆಯುವುದು ಈ ದೇವಸ್ಥಾನದಿಂದಲೇ. ಈ ದೇವಸ್ಥಾನದ ಕಥೆ ಹೀಗಿದೆ: ಕಡಲ ಮಂಥನದ ನಂತರ ದೊರೆತ ಅಮೃತವನ್ನು, ಜೀವರಸವನ್ನು ಒಂದು ಕುಂಭದಲ್ಲಿ ಹೊತ್ತು ಬ್ರಹ್ಮ ತರುತ್ತಿರುತ್ತಾನೆ. ದಣಿವಾದಂತಾಗಿ ದಾರಿಯಲ್ಲಿ ವಿರಮಿಸಲು ಕೂರುತ್ತಾನೆ. ಆಗ ಯಾವುದೋ ಬೇಟೆಯಲ್ಲಿದ್ದ ಶಿವನು, ತನ್ನ ಈಟಿಯನ್ನು ಬೀಸುತ್ತಾನೆ. ಆ ಗುರಿ ತಪ್ಪಿ, ಬ್ರಹ್ಮನ ಆ ಅಮೃತದ ಮಡಕೆಗೆ ಬಿದ್ದು ಮಡಕೆ ಒಡೆದು ಅಮೃತ ಚೆಲ್ಲಾಪಿಲ್ಲಿಯಾಗುತ್ತದೆ. ಈ ಘಟನೆಯಿಂದ ಕುಂಭಕೋಣಂ ಸ್ಥಳವೇ ಪವಿತ್ರವಾಗಿ ಪುನರ್ ರೂಪಿತವಾಗಿ, ನಗರದ ನಡುವೆ ಇರುವ ಮಹಾಮಹಂ ಕೊಳದಲ್ಲಿ ಚೆಲ್ಲಿದ ಅಮ್ರುತವೆಲ್ಲಾ ಸೇರಿಬಿಡುತ್ತದೆ. ಈ ಕಾರಣದಿಂದಲೇ, ಮಹಾಮಹಂ ಕಲ್ಯಾಣಿಯು ಅತ್ಯಂತ ಪವಿತ್ರ, ಅದರಲ್ಲಿ ಮಿಂದರೆ ಎಂತಹ ಪಾಪಗಳೂ ತೊಳೆದು ಹೋಗುತ್ತವೆ ಎಂಬ ಪ್ರತೀತಿ. ವರ್ಷಕ್ಕೆ ಒಮ್ಮೆ (ಸುಮಾರು) ಎಂಬಂತೆ ಬಿಡುವ ಈ ಮಹಾಮಹಂ ಸ್ನಾನಕ್ಕೆ ಜನ ನೂಕು ನುಗ್ಗಲಾಗಿ ಪ್ರತಿ ವರ್ಷ ನಾವು “ಕುಂಭಕೋಣಂ ಸ್ಟ್ಯಾಂಪ್ಪೀಡ್” ಎಂದು ಪತ್ರಿಕೆಗಳಲ್ಲಿ ಓದುತ್ತಿದ್ದರ ನೆನಪಾಯಿತು.
ಆ ಕಥೆಯನ್ನು ಕೇಳಿ ಮಂತ್ರಮುಗ್ಧರಾಗಿದ್ದೆವು. ಎಷ್ಟೆಲ್ಲಾ ಕಲ್ಪನೆ, ಎಂತಹ ದಾರ್ಶನಿಕತೆ ಅದರಲ್ಲಿ! ಅಮೃತ ಹೊತ್ತ ಮಡಕೆ ಮತ್ತು ಅದು ಚೆಲ್ಲುವುದು ಮತ್ತು ಅದು ನಗರದ ಕಲ್ಯಾಣಿಯಾಗಿ ಆಜೀವ ಕಂಗೊಳಿಸುವುದು. ಈ ಕಥೆಗಳೆಲ್ಲಾ ಹೇಗೆ ಹುಟ್ಟಿಕೊಂಡಿತು ಎಂಬ ತೀವ್ರ ಕುತೂಹಲದೊಂದಿಗೆ ನಮ್ಮ ಮುಂದಿನ ಚಾರಣ ಕುಂಭಕೋಣಂನ ಸಾರಂಗಪಾಣಿ ದೇವಸ್ಥಾನದತ್ತ ಸಾಗಿತು.
ಸಾರಂಗಪಾಣಿ ದೇವಸ್ಥಾನ ಕುಂಭಕೋಣಂನ ಅತಿ ಎತ್ತರದ ಮತ್ತು ವಿಷ್ಣುವಿನ ಅತಿ ದೊಡ್ಡ ದೇವಸ್ಥಾನ. ಅತಿ ಪುರಾತನ ದೇವಾಲಯವಾದ ಸಾರಂಗಪಾಣಿ, ಒಂದು ವಿಶೇಷ ಕಥೆಯನ್ನು ಹೇಳುತ್ತದೆ. ಒಮ್ಮೆ ಹೇಮಾ ಮಹರ್ಷಿಯು ದೀರ್ಘ ತಪಸ್ಸನ್ನು ಕೈಗೊಂಡು ವಿಷ್ಣು ಪ್ರತ್ಯಕ್ಷನಾದ ನಂತರ ತನಗೆ ಲಕ್ಷ್ಮಿಯನ್ನು ಮಗಳಾಗಿ ಪ್ರಸಾದಿಸು ಎಂದು ಬೇಡಿಕೊಂಡನಂತೆ. ಅದಕ್ಕೆ ಪ್ರಸನ್ನನಾದ ವಿಷ್ಣು ತಥಾಸ್ತು ಎಂದನಂತೆ. ನಂತರ ಪೋತ್ರಾಮರೈ ಎಂಬ ಕಲ್ಯಾಣಿಯಲ್ಲಿ ಸಾವಿರ ಕಮಲಗಳ ನಡುವೆ ಲಕ್ಷ್ಮಿ ಜನಿಸಿದಳಂತೆ. ಆದ್ದರಿಂದ ಅವಳ ಹೆಸರು ‘ಕೋಮಲವಳ್ಳಿ’ ಎಂದಾಯಿತಂತೆ. ನಂತರ ವಿಷ್ಣುವು ಅರವಮುದನ್ ಆಗಿ, ತನ್ನ ಸೈನ್ಯದೊಂದಿಗೆ ಸೋಮೇಶ್ವರ ದೇವಸ್ಥಾನದ ಬಳಿ ನೆಲೆಸಿ ಲಕ್ಷ್ಮಿಯನ್ನು ಒಲಿಸಿಕೊಂಡು, ಆಕೆಯನ್ನು ಮದುವೆಯಾಗುತ್ತಾನಂತೆ. ‘ಸಾರಂಗಂ’ ಎಂದರೆ ಬಿಲ್ಲು, ‘ಪಾಣಿ’ ಎಂದರೆ ಹಸ್ತ. ‘ಕೈಯಲ್ಲಿ ಬಿಲ್ಲನ್ನು ಹಿಡಿದಿರುವ’ ಎಂಬ ಅರ್ಥವನ್ನು ಬಿಂಬಿಸುವ ಸಾರಂಗಪಾಣಿ ದಕ್ಷಿಣ ಭಾರತದ ಅಪರೂಪದ ವಿಷ್ಣು ದೇವಾಲಯಗಳಲ್ಲಿ ಒಂದಾಗಿದೆ.
ಕಥೆ ಮೊದಲೋ ಕಥೆಯ ಹೆಣೆದ ಮನಸ್ಸುಮೊದಲೋ ಎಂಬಂತೆ, ದಾರದ ಪೋಣಿಕೆಯ ಹಾರದಷ್ಟು ನಿಖರವಾಗಿ ಸಾಮಾಜಿಕವಾಗಿ ಹೊಂದಿಕೊಂಡು ಹೋಗಿಬಿಡುವುದು ಹೇಗೆ ಎಂಬುದೊಂದು ಸೋಜಿಗವೇ ಸರಿ. ಇಷ್ಟೆಲ್ಲಾ ದೇವಸ್ಥಾನದ ಸೌಂದರ್ಯೋಪಾಸನೆ, ಪುರಾಣಗಳ ‘ಕಥೋಪಾಸನೆ’ಗಳನ್ನೇ ಮನದಲ್ಲಿ ಸೆರೆ ಹಿಡಿದು ಮುಂದೆ ಚಂದ್ರ ಗ್ರಹಕ್ಕೆ ಹೋದರೆ ಪಿಚ್ಚೆನಿಸುವಷ್ಟು, ಬಹಳ ಸಾಧಾರಣ ಎಂಬಂತಹ ದೇವಾಲಯ. ಆದಷ್ಟು ಬೇಗ ಆ ಸ್ಥಳ ಬಿಟ್ಟು ಮುಂದೆ ಹೊರಟ ನಮ್ಮ ಮುಂದಿನ ಡೆಸ್ಟಿನಿ ಇದ್ದದ್ದು ತಂಜಾವೂರಿನ ಬೃಹದೀಶ್ವರ ದೇವಸ್ಥಾನ. ಮೊದಲ ನೋಟದಲ್ಲೇ ನಮ್ಮನ್ನು ಮೂಕವಿಸ್ಮಿತಗೊಳಿಸಿದ ಭವ್ಯ ಕಟ್ಟಡ ಅದಾಗಿತ್ತು. ಗತಕಾಲದ ಕಲೆ, ಸಾಹಿತ್ಯ, ಸೌಂದರ್ಯೋಪಾಸನೆ, ಜೀವನ ಶೈಲಿಗಳು ಎಲ್ಲವೂ ಕಣ್ಣ ಮುಂದೆ ಹಾಯ್ದು ಹೋದ ಅನುಭವ. ಇದರ ಹೆಚ್ಚಿನ ವಿವರಗಳನ್ನು ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ.
 
 
(ಮುಂದುವರಿಯುವುದು…)
 
 
 

‍ಲೇಖಕರು G

October 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. sunil Rao

    Naavinnu bahupaalu metaphysical tharave irteevalla yaake…
    Adara mundina Activism baratta athava adara hindina theological stithi baratta gottilla…
    Ellavoo dwandwa..
    Ramana maharshi….!!!!!! Aata obba asaadhaarana santa..
    Beautiful article

    ಪ್ರತಿಕ್ರಿಯೆ
  2. Sunaath

    `ಜಾಮಾತೋ ದಶಮಗ್ರಹ:’ ಎಂದು ಸರಿಪಡಿಸಲು ವಿನಂತಿಸುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: