ಸಂಧ್ಯಾರಾಣಿ ಕಾಲಂ : ಕ್ರಿಕೆಟ್ ಎನ್ನುವ ಈ ಮಾಯಾವಿ


ಟಿವಿಯಲ್ಲಿ ಛಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಬರುತ್ತಿತ್ತು. ಕಳ್ಳರ ರಾಜ್ಯಕ್ಕೆ ಪೋಲೀಸ್ ಸೇನಾಧಿಪತಿಯಂತೆ ಕಾಣುತ್ತಿದ್ದ ರಾಹುಲ್ ಡ್ರಾವಿಡ್ ರಾಜಾಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಇದು ಡ್ರಾವಿಡ್ ಅವರ ಕಡೆಯ ಅಂತರರಾಷ್ಟ್ರೀಯ ಪಂದ್ಯ, ಡ್ರಾವಿಡ್ ಗೆಲ್ಲಲ್ಲಿ, ಒಂದು ಗೆಲುವಿನೊಂದಿಗೆ ಡ್ರಾವಿಡ್ ಕ್ರಿಕೆಟ್ ಗೆ ವಿದಾಯ ಹೇಳಲಿ ಎಂದು ಮನಸ್ಸು ಹಾರೈಸುತ್ತಿತ್ತು.
ಕ್ರಿಕೆಟ್ ಜೊತೆ ನನ್ನ ಸಂಬಂಧ ಬಹಳ ಹಳೆಯದು. ನಮ್ಮದು ಸ್ವಾತಂತ್ರ್ಯ ಯೋಧರ ಕುಟುಂಬ ಎಂದು ಹೇಳಿಕೊಳ್ಳುತ್ತಾರಲ್ಲ, ಹಾಗೆ ನಮ್ಮದು ಕ್ರಿಕೆಟ್ ಪ್ರೇಮಿಗಳ ಕುಟುಂಬ ಎಂದು ಯಾವುದೇ ಶಂಕೆಯಿಲ್ಲದೆ ನಾನು ಹೇಳಿಕೊಳ್ಳಬಲ್ಲೆ! ನಾವು ಸಣ್ಣವರಿದ್ದಾಗ ಕ್ರಿಕೆಟ್ ಅರ್ಥವಾಯ್ತು ಅಂದರೆ ದೊಡ್ಡವರ ಜಗತ್ತಿನಲ್ಲಿ ಪ್ರವೇಶ ಸಿಕ್ಕಿತು ಎಂದು ಅರ್ಥ! ಆಗೆಲ್ಲಾ ಟೆಸ್ಟ್ ಮ್ಯಾಚ್ ಗಳು ನಡೆಯುತ್ತಿದ್ದ ಕಾಲ. ತಾತ ಐದು ದಿನಗಳ ಟಿಕೆಟ್ ತರಿಸುತ್ತಿದ್ದರು. ಬೆಂಗಳೂರಿನಿಂದ ಸುಮಾರು ೩೫ ಕಿಮೀ ದೂರದಲ್ಲಿ ಅಜ್ಜಿ ಮನೆ. ಅಲ್ಲಿಂದ ದಿನಕ್ಕಿಬ್ಬಿಬ್ಬರಂತೆ ಆ ಟಿಕೆಟ್ ನಲ್ಲಿ ಮನೆ ಮಂದಿಯೆಲ್ಲಾ ನಾಲ್ಕು ದಿನ ಹೋಗಿ ಮ್ಯಾಚ್ ನೋಡಿ ಬರುತ್ತಿದ್ದರು. ಅದೂ ಏನು ಸಂಭ್ರಮದಲ್ಲಿ… ಅಜ್ಜಿ ಬೆಳಗ್ಗೆ ಬೇಗ ಎದ್ದು, ತಿಂಡಿ, ಅಡಿಗೆ ಮಾಡಿ, ಇವರೆಲ್ಲಾ ಯುದ್ಧಕ್ಕೆ ಹೋಗುವವರೇನೋ ಎನ್ನುವಂತೆ ಬುತ್ತಿ ಕಟ್ಟಿ ಕೊಡುತ್ತಿದ್ದರು.
ಮೊದಲ ದಿನ ತಾತ, ಒಬ್ಬ ಸೋದರ ಮಾವ ಹೋದರೆ, ಮರು ದಿನ ಅಪ್ಪ-ಅಮ್ಮ, ಆಮೇಲೆ ಚಿಕ್ಕಪ್ಪ ಚಿಕ್ಕಮ್ಮ, ಕಡೆಯ ದಿನ ಇಬ್ಬರಿಗೆ ಮತ್ತೊಮ್ಮೆ ಮ್ಯಾಚ್ ನೋಡುವ ಅವಕಾಶ. ತಾತ ಸಾಧಾರಣವಾಗಿ ಆ ಛಾನ್ಸ್ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಉಳಿದ ದಿನಗಳಲ್ಲಿ ಇದ್ದೇ ಇತ್ತಲ್ಲ ರೇಡಿಯೋ ಕಾಮೆಂಟರಿ. ಅದು ಹೇಗೋ ಆ ಕಾಮೆಂಟರಿಯ ಲಯ ಸಹ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತು ಬಿಟ್ಟಿರುತ್ತಿತ್ತು, ಅರ್ಥವಾಗದಿದ್ದರೂ ಆ ಕಾಮೆಂಟರಿ ಮೆಲು ದನಿ ಕೇಳುತ್ತಾ ನಮ್ಮ ಮನೆ ಕಂದಮ್ಮಗಳು ನಿದ್ದೆ ಮಾಡಿದ್ದು ಸಹ ಇದೆ! ನಮಗೆಲ್ಲಾ ಆಗಿನ ಜರೂರತ್ತು ಎಂದರೆ ಬೇಗ ದೊಡ್ಡವರಾಗಿಬಿಡಬೇಕು, ದೊಡ್ಡವರ ಜಗತ್ತಿಗೆ ವೀಸಾ ಪಡೆದು ಸ್ಟೇಡಿಯಂ ಗೆ ಹೋಗಿ ಮ್ಯಾಚ್ ನೋಡಬೇಕು..
ಐದು ದಿನದ ಕ್ರಿಕೆಟ್ ಒಂದು ದಿನಕ್ಕೆ ಬಂತು, ಅಷ್ಟರಲ್ಲಿ ಮನೆಗೆ ಟೀವಿ ಬಂದಿತ್ತು. ಹೀಗಾಗಿ ಸ್ಟೇಡಿಯಂಗೆ ಹೋಗದಿದ್ದರೂ ಮನೇಲಿ ಮ್ಯಾಚ್ ನೋಡಬಹುದು ಎಂದಾಯ್ತು. ಸ್ಕೂಲು, ಕಾಲೇಜಿಗೆ ಹೋಗುತ್ತಿದ್ದಾಗ ಕ್ರಿಕೆಟ್ ಕಾಲ ಬಂತು ಅಂದರೆ ಟಿವಿ ಬಿಟ್ಟು ಹೋಗೋದು ಅಂದರೇನೇ ಸಂಕಟ. ಕಾಲೇಜಿಗೆ ಅಂತ ಕೆಜಿಎಫ್ ಗೆ ೧೦ ಕಿಮೀ ದೂರ ಪ್ರಯಾಣ ಮಾಡಬೇಕಿತ್ತು. ಕಾಲೇಜ್ ಆಡಿಟೋರಿಯಂನಲ್ಲಿ ಬ್ರೇಕ್ ವರೆಗೂ ಮ್ಯಾಚ್ ನೋಡಿ, ಓಡಿ ಬಂದು ಬಸ್ಸು ಹಿಡಿದರೆ ಬ್ರೇಕ್ ಮುಗಿಯುವ ವೇಳೆಗೆ ನಮ್ಮ ಊರು, ಆದರೆ ಬಸ್ ಸ್ಟ್ಯಾಂಡ್ ನಿಂದ ಮನೆ ೨ ಕಿಮೀ. ಅದಕ್ಕೂ ಒಂದು ಪರಿಹಾರ ಹುಡುಕಿಕೊಂಡಿದ್ದೆವು, ಬಸ್ ಸ್ಟ್ಯಾಂಡ್ ಹತ್ತಿರವೇ ಗೆಳತಿಯ ಮನೆ, ಅಲ್ಲಿ ಹೋಗಿ ಕೂತು, ಮತ್ತೊಂದು ಬ್ರೇಕ್ ವರೆಗೂ ಮ್ಯಾಚ್ ನೋಡಿ, ಬ್ರೇಕ್ ಮುಗಿಯುವಷ್ಟರಲ್ಲಿ ಮನೆ ಸೇರಿಕೊಳ್ಳುತ್ತಿದ್ದೆವು. ಆಗ ಇದೇ ಕಾರಣಕ್ಕೆ ನಮ್ಮ ಜೊತೆ ಪ್ರಯಾಣ ಮಾಡುವ ಹುಡುಗನೊಬ್ಬ ಟ್ರ್ಯಾನ್ಸಿಸ್ಟರ್ ಖರೀದಿ ಮಾಡಿದ್ದ, ಅವನ ಸುತ್ತ ಮುತ್ತಲಿನ ಸೀಟಿಗೆ ಡಿಮಾಂಡು!
ಆಗ ದಾಖಲೆ ಮಾಡಿದ, ಆ ಕ್ಷಣಕ್ಕೆ ದೇವರಾದ ಆಟಗಾರರು ಹಲವಾರು ಜನ. ಕೆಲವರು ಅದನ್ನು ಉಳಿಸಿಕೊಂಡರು, ಆದರೆ ಇನ್ನೂ ಕೆಲವರು ಚೆನ್ನಾಗಿ ಆಡಿದರೂ ನಾನಾ ಕಾರಣಗಳಿಂದಾಗಿ ಮೈದಾನದಿಂದ ಹೊರಗೆ ನಡೆದರು. ಗೆದ್ದವರ ಸಂಭ್ರಮಕ್ಕಿಂತ ಗೆದ್ದು ಸೋತವರ ಆ ವಿಷಾದ ಮನಸ್ಸಿನಲ್ಲಿ ನಿಂತುಬಿಟ್ಟಿದೆ.
ಆಗ ನಾವು ನೋಡಿದ, ಅನುಭವಿಸಿದ, ಮೈ ಮರೆತ ಕ್ರಿಕೆಟ್ ಕ್ಷಣಗಳೆಷ್ಟು… ಬೋರ್ಡಿಗೇ ಇಲ್ಲದ ತಂಡವನ್ನು ಕಟ್ಟಿಕೊಂಡು ಹೋಗಿ ಕಪಿಲ್ ವರ್ಲ್ಡ್ ಕಪ್ ಗೆದ್ದು ತಂದಿದ್ದ. ಅತ್ಯಂತ ಸೊಫೆಸ್ಟಿಕೇಟೆಡ್ ಆಗಿ ಪರಮ ಲೆಕ್ಕಾಚಾರಿಯಂತೆ ಕಾಣುತ್ತಿದ್ದ ಸುನಿಲ್ ಗವಾಸ್ಕರನಿಗಿಂತ ಸರಿಯಾಗಿ ಇಂಗ್ಲೀಷ್ ಮಾತನಾಡದ, ಅದನ್ನು ಅತ್ಯಂತ ಮುಗ್ಧತನದಿಂದ ಒಪ್ಪಿಕೊಳ್ಳುತ್ತಿದ್ದ ಈ ಹರಿಯಾಣ್ವಿ ಜಾಟ್ ಹುಡುಗ ಕಪಿಲ್ ನಮಗೆಲ್ಲಾ ಅತ್ಮೀಯ ಅನ್ನಿಸಿಬಿಡುತ್ತಿದ್ದ.
ಆಗಿನ ದೈತ್ಯರಾದ ಕೃಷ್ಣಮಾಚಾರಿ ಶ್ರೀಕಾಂತ್, ತನ್ನ ಆಟದಷ್ಟೇ ಸಿಟ್ಟಿಗೂ ಹೆಸರಾಗಿದ್ದ ವೆಂಗ್ ಸರ್ಕಾರ್, ಕರಾರುವಕ್ಕಾಗಿ ಬೌಲಿಂಗ್, ತಪ್ಪದಂತಹ ಫೀಲ್ಡಿಂಗ್ ಮಾಡುತ್ತಿದ್ದ ಬಿನ್ನಿ, ಅಜರುದ್ದೀನ್, ಚೇತನ್ ಶರ್ಮ, ಮೋರೆ… ಇಲ್ಲ ಚಂದ್ರು, ವಿಶಿ, ಪ್ರಸನ್ನರ ಆಟ ನಾನು ನೋಡಿಲ್ಲ, ಕೇಳಿ ಬಲ್ಲೆ ಅಷ್ಟೆ. ಅವರ ನಡುವೆ ಅದ್ಭುತವಾಗಿ ಶುರುವಾದ ಎಷ್ಟೋ ಕೆರಿಯರ್ ಗಳು ಯಾಕೆ ಹೀಗೆ ಅರ್ಧ ದಾರಿಯಲ್ಲೇ ಸೋತು ನಿಂತುಬಿಡುತ್ತವೆ?
ರಣಜಿ ಟ್ರೋಫಿಯಲ್ಲಿ ಸರಣಿಯಲ್ಲಿ ಆರು ಸಿಕ್ಸರ್ ಎತ್ತಿದ್ದ ರವಿ ಶಾಸ್ತ್ರಿ ಹಗಲಾಗುವಷ್ಟರಲ್ಲಿ ಭಾರತದ ಹೀರೋ ಆಗಿ ಬಿಟ್ಟಿದ್ದ. ಅವನ ಗೆಳತಿಯರ ಸಮೂಹ, ಅಮೃತಾ ಸಿಂಗ್ ಜೊತೆ ಅವನ ಸ್ನೇಹ ಎಲ್ಲವೂ ಸುದ್ದಿಯೇ.
ವರ್ಲ್ಡ್ ಕಪ್ ಗೆದ್ದು ಎರಡು ವರ್ಷವಾಗಿತ್ತು. ವರ್ಲ್ಡ್ ಛಾಂಪಿಯನ್ ಶಿಪ್ ನಲ್ಲಿ, ಏಳು ರಾಷ್ಟ್ರಗಳು ಮುಖಾಮುಖಿಯಾಗಿದ್ದವು. ಭಾರತ ಟ್ರೋಫಿ ತನ್ನದಾಗಿಸಿಕೊಂಡಿತ್ತು, ಮ್ಯಾನ್ ಆಫ್ ದ ಸೀರೀಸ್ ಆಗಿ ರವಿಶಾಸ್ತ್ರಿ ಆಡಿ ಕಾರ್ ಗೆದ್ದಿದ್ದ, ಇಡೀ ತಂಡ ಕಾರಿನಲ್ಲಿ ಕೂತು ಮೈದಾನವನ್ನು ಸುತ್ತುಹೊಡೆದಿದ್ದರು. ಅದೊಂದು ಮರೆಯಲಾಗದ ಸಂಭ್ರಮ. ಆದರೆ ಹಾಗೆ ಆಡಿದ ರವಿ ಶಾಸ್ತ್ರಿ ಆಮೇಲೆ ಏನಾದ? ಸೋಲನ್ನು ಜೀರ್ಣಿಸಿಕೊಳ್ಳುವುದಕ್ಕಿಂತಲೂ ಕಷ್ಟ ಗೆಲುವನ್ನು ಸಂಭಾಳಿಸುವುದು. ಹಾಗೆ ಗೆದ್ದು ಸೋತ ಮತ್ತೊಬ್ಬ ಆಟಗಾರ ವಿನೋದ್ ಕಾಂಬ್ಳಿ. ಸಚಿನ್ ಜೊತೆ ಜೊತೆಯಲ್ಲಿಯೇ ಮೈದಾನದಿಂದ ನಡೆದು ಬಂದವ. ಸಚಿನ್ ಜೊತೆ ಜೊತೆಯಲ್ಲಿಯೇ ಎಳವೆಯಲ್ಲಿಯೇ ದಾಖಲೆ ಆಟ ಆಡಿದವ. ಆದರೆ ಗೆಲುವನ್ನು ಸಚಿನ್ ಸಂಭಾಳಿಸಿದಂತೆ ಸಂಭಾಳಿಸುವುದು ವಿನೋದ್ ಗೆ ಸಾಧ್ಯವಾಗಲೇ ಇಲ್ಲ.


೧೯೮೮ ರಲ್ಲಿ ಹೀಗೆ ಇನ್ನೊಬ್ಬ ಹುಡುಗ ದಾಖಲೆ ನಿರ್ಮಿಸಿದ, ೧೮ ವರ್ಷದ ಕನ್ನಡಕಧಾರಿ ಹುಡುಗ ನರೇಂದ್ರ ಹಿರ್ವಾನಿ. ಟೆಸ್ಟ್ ನ ಎರಡು ಇನ್ನಿಂಗ್ಸ್ನಲ್ಲಿ ೮-೮ ವಿಕೆಟ್ ಪಡೆದವ. ಅದೇ ಮ್ಯಾಚಿನಲ್ಲಿ ಕಿರಣ್ ಮೋರೆ ಸ್ಟಂಪ್ ಮಾಡುವುದರಲ್ಲಿ ದಾಖಲೆ ಬರೆದ. ವೆಸ್ಟ್ ಇಂಡೀಸ್ ನ ಎದುರು ಅಂತಹ ಅದ್ಭುತ ಆಟ ಆಡಿದ ಈ ಹುಡುಗ ತನ್ನ ಇಡೀ ಜೀವನದಲ್ಲಿ ಆಡಿದ್ದು ೧೭ ಟೆಸ್ಟ್ ಮ್ಯಾಚುಗಳನ್ನು ಮಾತ್ರ. ಈಗ ನೆನಪಿಸಿಕೊಂಡರೆ ಎಲ್ಲಿ ಹೋದ ಈ ಹುಡುಗ ಅನ್ನುವಂತಾಗುತ್ತದೆ.
ಈ ಎಲ್ಲಾ ಸಂಭ್ರಮದ ನಡುವೆ ಮನೋಜ್ ಪ್ರಭಾಕರ್ ಒಂದು ಬಾಂಬ್ ಸಿಡಿಸಿದ. ಅದುವರೆವಿಗೂ ದೇವರಾಗಿದ್ದ ಎಷ್ಟೋ ಆಟಗಾರರ ಕಾಲುಗಳು ಕೆಸರಲ್ಲಿ ಹೂತು ಹೋಗಿದ್ದವು. ಕ್ರೀಡಾ ಜಗತ್ತು ಒಮ್ಮೆ ಬೆಚ್ಚಿಬಿದ್ದಿತ್ತು. ನಾವೆಲ್ಲರೂ ತಲೆ ಎತ್ತಿ ನೋಡುತ್ತಿದ್ದ ಆಟಗಾರರು ವಿದೇಶಿ ವಾಚುಗಳಿಗೆ, ಹಣಕ್ಕೆ ತಮ್ಮನ್ನು ಮಾರಿಕೊಂಡಿದ್ದಾರೆ ಎಂದು ಗೊತ್ತಾಗಿ ಆಘಾತ ಆಗಿತ್ತು. ಆಟಗಾರರ ಆತ್ಮವಿಶ್ವಾಸ ಸಹ ಕುಸಿದು ಹೋಗಿತ್ತು, ಕಪಿಲ್ ದೇವ್ ನಂತಹ ಕಪಿಲ್ ಸಹ ಕಣ್ಣೀರಿಟ್ಟಿದ್ದ. ಆ ಘಟನೆಯ ನಂತರ ಅಗತ್ಯವಾಗಿ ಬೇಕಾಗಿದ್ದ, ಅಪರಿಮಿತ ಆತ್ಮವಿಶ್ವಾಸದ ನಾಯಕನಾಗಿ ಗಂಗೂಲಿ ಆಗಿ ಬಂದಿದ್ದ. ಮೊದಲ ಸಲ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಟಗಾರರಿಗೆ ಡ್ರಿಂಕ್ಸ್ ಕೊಡು ಎಂದಾಗ, ’ನಾನು ಗಂಗೂಲಿ, ಡ್ರಿಂಕ್ಸ್ ಸಪ್ಲೈ ಮಾಡಲು ಬಂದವನಲ್ಲ’ ಎಂದವನ ದನಿ ಆಗ ಅಹಂಕಾರವಾಗಿ ಕೇಳಿಸಿದ್ದರೂ ಆಮೇಲೆ ಅದೇ ಆತ್ಮವಿಶ್ವಾಸವಾಗಿ ಕಂಡಿತು. ಇಂಗ್ಲೆಂಡಿನಲ್ಲಿ ಗೆದ್ದ ನಂತರ ತನ್ನ ಜೆರ್ಸಿ ಕಳಚಿ ಗೆಲುವಿನಿಂದ ಬೀಸಿದವನನ್ನು ಕಂಡು ಕೆಲವರು ಬೆಚ್ಚಿದ್ದರು, ಹಲವರು ಚಪ್ಪಾಳೆ ತಟ್ಟಿದ್ದರು. ಎಂತಹ ತಂಡ ಕಟ್ತಿದ ಸೌರವ್, ಹೇಗೆ ಆಟಗಾರರಲ್ಲಿ ಆತ್ಮ ವಿಶ್ವಾಸ ಹುಟ್ಟುಹಾಕಿದ. ಆಮೇಲೆ ತನ್ನ ಜೆಂಟಲ್ ಮನ್ ತನದಿಂದ, ಮೃದೂನಿ ಕುಸುಮಾದಪಿ, ವಜ್ರಾದಪಿ ಕಠೋರಹ ಎನ್ನುವಂತಹ ಗುಣದಿಂದ ಕುಂಬ್ಳೆ, ಅದೃಷ್ಟವನ್ನು ಕ್ಯಾಪ್ ಒಳಗೆ ಬಂಧಿಸಿಟ್ಟು ಕೊಂಡ ಧೋನಿ … ಎಲ್ಲರೂ ಈ ಆಟವನ್ನು ನಮ್ಮೊಳಗಿನ ಮಿಡಿತವಾಗಿಸಿದವರೇ.
ಟೆಸ್ಟ್ ನಿಂದ ಒಂದು ದಿನದ ಮ್ಯಾಚ್ ಬಂದಾಗ ಕಟ್ಟಾ ಕ್ರಿಕೆಟ್ ಪ್ರೇಮಿಗಳು ಹೌಹಾರಿದ್ದರು, ಒಂದು ಕಲೆಯ ಕೊಲೆ ಎಂದು ಕರೆದಿದ್ದರು. ಆದರೆ ಆಮೇಲೆ ೨೦-೨೦ ಬಂತು. ಲಲಿತ್ ಮೋದಿ ಐಪಿಎಲ್ ಪರಿಚಯಿಸಿ ಕ್ರಿಕೆಟ್ಟಿನ ಒನ್ ನೈಟ್ ಸ್ಟ್ಯಾಂಡ್ ಎನ್ನುವ ಮಟ್ಟಕ್ಕೆ ಆಟವನ್ನು ತಂದು ನಿಲ್ಲಿಸಿದ. ಭಾರತದ ಮಟ್ಟಿಗೆ ಚಲಿಸುವ ಶಕ್ತಿಗಳಾದ ಸಿನಿಮಾ ಮತ್ತು ಕ್ರಿಕೆಟ್ ಅನ್ನು ಜೊತೆ ಸೇರಿಸಿ, ಕಡೆಗೆ ತನ್ನನ್ನೇ ಮುಗಿಸುವ ಭಸ್ಮಾಸುರನನ್ನು ಆತ ಸೃಷ್ಟಿಸಿದ. ಇಲ್ಲಿ ಯಾರಿಗೂ ಯಾವುದೇ ಬಂಧನ ನಿಷ್ಠೆ ಇಲ್ಲ, ನಾವು ಯಾರನ್ನು, ಯಾವ ತಂಡವನ್ನು ಬೆನ್ನು ತಟ್ಟಬೇಕು ಅನ್ನುವುದೇ ಅರ್ಥವಾಗುವುದಿಲ್ಲ. ಇಲ್ಲಿ ಮಾಲೀಕರೇ ರೇಸು ಕುದುರೆಗೆ ಜೂಜು ಕಟ್ಟಿದಂತೆ ತಮ್ಮ ತಮ್ಮ ತಂಡಗಳ ಪರ ವಿರೋಧವಾಗಿ ಹಣ ಬಾಜಿ ಕಟ್ಟುತ್ತಾರೆ. ಯಾರು ಏನು ಅಂತಲೇ ಅರ್ಥವಾಗುವುದಿಲ್ಲ.
ಇವುಗಳೆಲ್ಲದರ ನಡುವೆಯೂ ನಾವು ಇನ್ನೂ ಕ್ರಿಕೆಟ್ ಅನ್ನು ಇಷ್ಟ ಪಡುತ್ತೇವೆ, ನೋಡುತ್ತೇವೆ, ನಮ್ಮ ಮಕ್ಕಳು ಗಲ್ಲಿ ಗಲ್ಲಿಗಳಲ್ಲಿ ಈ ಆಟವನ್ನು ಆಡುತ್ತಾರೆ, ನಮ್ಮನ್ನ ಸೇರಿಸಿಕೊಳ್ಳುತ್ತಾರೆ. ಅಂತಹ ಯಾವ ಮಾಯಾವಿ ಶಕ್ತಿಯಿದೆ ಈ ಆಟದಲ್ಲಿ. ಇಂದಿಗೂ ಸಹ ಟಿವಿಯಲ್ಲಿ ಮ್ಯಾಚ್ ಬಂದರೆ ಮುಂದೆ ಕೂತುಬಿಡುತ್ತೇನೆ, ಆಟದ ಏರಿಳಿತಗಳಿಗೆ ತಕ್ಕ ಹಾಗೆ ಎದೆಯ ಬಡಿತ ಏರು ಪೇರಾಗುತ್ತದೆ. ಕಾಲೇಜಿಗೆ ಹೋಗುವ ಮಗ, ಕೆಲಸದಿಂದ ಮನೆಗೆ ಬಂದ ತಂಗಿ ಮ್ಯಾಚ್ ಬರುವಾಗ ನನ್ನ ದನಿ ಮನೆಯಾಚೆಗೂ ಕೇಳುತ್ತದೆ ಎಂದು ಕಂಪ್ಲೇಂಟ್ ಮಾಡುತ್ತಾರೆ. ಏನೇ ಆಗಲಿ ಯಾಕೆ ಈ ಆಟವನ್ನು ನಿರಾಕರಿಸುವುದು ಆಗುತ್ತಿಲ್ಲ ನನಗೆ.
ಯಾವುದೇ ಸಂಬಂಧದಲ್ಲಿ ಇಬ್ಬರು ಒಳಗೊಂಡಿರುವಾಗ ಒಬ್ಬರು ಸಂಬಂಧಕ್ಕೆ ನಿಷ್ಟೆ, ಪ್ರಾಮಾಣಿಕತೆ ತೋರಿಸುತ್ತಿಲ್ಲ ಎಂದುಕೊಳ್ಳೋಣ, ಇನ್ನೊಬ್ಬರು ಅದನ್ನು ಪೂರ್ತಿಯಾಗಿ ನಂಬಿದ್ದಾರೆ ಎಂದುಕೊಳ್ಳೋಣ. ಆಗ ಆ ಸಂಬಂಧ ನಿಜವೋ, ಸುಳ್ಳೋ? ಒಬ್ಬರು ಅದಕ್ಕೆ ಬೆಲೆ ಕೊಡದೆ ಇರುವುದರಿಂದ ಅದು ಹುಸಿಯಾಗುತ್ತದಾ ಅಥವಾ ಒಬ್ಬರು ಅದಕ್ಕೆ ತಮ್ಮತನವನ್ನು ಪೂರ್ತಿಯಾಗಿ ಅರ್ಪಿಸಿಕೊಂಡಿರುವುದರಿಂದ, ನಂಬಿರುವುದರಿಂದ ಅವರ ನಿಯತ್ತು ಆ ಸಂಬಂಧಕ್ಕೊಂದು ಘನತೆ ಕೊಡುತ್ತದೆಯೋ?
ನನಗನ್ನಿಸುವುದು ಹೀಗೆ, ಸಂಬಂಧಕ್ಕೆ ನಿಯತ್ತು ಕೊಡದವರ ಮಟ್ಟಿಗೆ ಅದು ಹುಸಿಯಾದರೂ, ಅದನ್ನು ಪೂರ್ತಿಯಾಗಿ ಗೌರವಿಸಿದವರ ದೃಷ್ಟಿಯಿಂದ ಅದು ಸತ್ಯ ಅಲ್ಲವಾ? ಬಹುಷಃ ಕ್ರಿಕೆಟ್ ಸಹ ಹೀಗೇ ಏನೋ… ಅದನ್ನು ನೋಡುವ, ಮೆಚ್ಚುವ, ಲಕ್ಷಾಂತರ ಮಂದಿ ಅಭಿಮಾನಿಗಳು ಅದನ್ನು ತಮ್ಮ ಮನದಲ್ಲಿ ಬದುಕಿಸಿಬಿಡುತ್ತಾರೋ ಏನೋ. ಇದು ಒಂದು ಚಲನಚಿತ್ರ ಎಂದು ಗೊತ್ತಿದ್ದರೂ ಲಗಾನ್ ಚಿತ್ರವನ್ನು ಈಗಲೂ ಮನಸಿಟ್ಟು ನೋಡುವ ನಮಗೆ, ಚಕ್ ದೇ ಯ ಟೈ ಬ್ರೇಕರ್ ಅನ್ನು ಚಪ್ಪಾಳೆ ತಟ್ಟಿ ಸಂಭ್ರಮಿಸುವ ನಮಗೆ ಬಹುಷಃ ನಮ್ಮ ಮನದಲ್ಲಿರುವ ಆಟ ಮತ್ತು ನಾವು ಅದಕ್ಕೆ ಕೊಡುವ ಬೆಲೆ ಇದೇ ಸತ್ಯವಾಗಿ ನಾವು ಕ್ರಿಕೆಟ್ ಅನ್ನು ಈ ಎಲ್ಲಾ ಕಳ್ಳಾಟ, ಮಂಗಾಟಗಳ ನಡುವೆಯೂ ಸಂಭ್ರಮಿಸಲು ಸಾಧ್ಯವೇನೋ.
ಅದಕ್ಕೇ ಈಗಲೂ ಕ್ರಿಕೆಟ್ ಬಂತು ಅಂದರೆ ಟಿವಿ ಎದುರು ನಾನು ರೆಡಿ. ಬೆಳೆದವರ ಲೋಕದ ರೀತಿ ನೀತಿಗಳನ್ನು, ಗಾಂಭೀರ್ಯವನ್ನು ಇನ್ನ ಕಲಿಯದ ತಂಗಿಯ ಮಗನ ಜೊತೆ ಆಟ ನೋಡುತ್ತಾ, ಕೈ ತಟ್ಟುತ್ತಾ, ಕೂಗುತ್ತಾ ಸಂಭ್ರಮಿಸುತ್ತೇನೆ. ಅವನ ಬಾಲ್ಯವನ್ನು ಒಂದು ಬೊಗಸೆ ಮೊಗೆದುಕೊಳ್ಳುತ್ತೇನೆ.
 

‍ಲೇಖಕರು G

October 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. sunil Rao

    Ee sala ondu sanna guess ittu….neevu sachin or dravid bagge bareebahudu anta..
    Manushya sambandha, naataka, cinema etc ashte allade…kreedege sambandhisida barahagalooo ishtu channagi nimminda dudisikondide…
    Thumbs up

    ಪ್ರತಿಕ್ರಿಯೆ
  2. Vidyashankar H

    My own famous liner has been, ‘If you live in India, don’t like cricket then I suspect your nationality’…. but recent corruption has brought down by enthu and zeal

    ಪ್ರತಿಕ್ರಿಯೆ
  3. bharathi b v

    Chennagide ! Aadre nangyako cricket nandu ansodu bittu tumba varshagalaagi hodvu. ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: