'ಪಿಂಕ್' ಎಂಬ ಕನ್ನಡಿಯ ಮುಂದೆ ನಿಂತು..

sandhyarani

ಎನ್ ಸಂಧ್ಯಾರಾಣಿ 

‘No’ – No is not a word, it is a complete sentence !-

ಈ ಒಂದು ವಾಕ್ಯಕ್ಕಾಗಿ ನನಗೆ ಆ ಚಿತ್ರ ನೋಡಲೇಬೇಕು ಅನ್ನಿಸಿತ್ತು. ‘

ಹೆಣ್ಣು ‘ಉಹೂ’ ಎಂದರೆ ಅದರ ಅರ್ಥ ಹೂ ಎಂದು’ – ನಾವು ಕಾಲೇಜಿನಲ್ಲಿದ್ದಾಗ  ಸಾಧಾರಣವಾಗಿ ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಇರುತ್ತಿದ್ದ ವಾಕ್ಯ ಇದು.

ನನಗೆ ಈ ಸಾಲು ವಿಪರೀತ ಗೊಂದಲ ಹುಟ್ಟಿಸುತ್ತಿತ್ತು.

pink2ಅಲ್ಲ, ಗಂಡು ಏನನ್ನಾದರೂ ಕೇಳಿದರೆ ‘ಹೂ’ ಎಂದರೆ ಸರಿ, ‘ಉಹೂ’ ಅಂದರೂ ಅವನು ‘ಹೂ’ ಎಂದೇ ಅರ್ಥೈಸಿಕೊಂಡರೆ ಏನು ಮಾಡುವುದು ?  ಹಾಗಾದರೆ ಗಂಡು ಏನನ್ನಾದರು ಬಯಸಿದಾಗ ಅದಕ್ಕೆ ಹೆಣ್ಣಿನ ಒಪ್ಪಿಗೆ ಅವಳ ಉತ್ತರವನ್ನು ಅವಲಂಬಿಸಿರುವುದಿಲ್ಲ, ಗಂಡಿನ ಪ್ರಶ್ನೆಯನ್ನು ಅವಲಂಬಿಸಿರುತ್ತದೆ ಎನ್ನುವಾಗ ಯಾಕೋ ಇದೊಂದು ಹುನ್ನಾರ ಅನ್ನಿಸಿಬಿಡುತ್ತಿತ್ತು !

ಮೊನ್ನೆ ‘ಪಿಂಕ್’ ಸಿನಿಮಾದಲ್ಲಿ ಅಮಿತಾಭ್ ತನ್ನ ಆಳದ ಸಿರಿಕಂಠದಲ್ಲಿ “’ಬೇಡ’ ಎನ್ನುವುದು ಒಂದು ಶಬ್ಧವಲ್ಲ, ಅದು ತನ್ನೊಳಗೆ ತಾನು ಒಂದು ಸಂಪೂರ್ಣವಾದ ವಾಕ್ಯ, ಅದಕ್ಕೆ ಯಾವುದೇ ತರ್ಕ, ಸ್ಪಷ್ಟೀಕರಣ, ವಿವರಣೆ, ವ್ಯಾಖ್ಯಾನಗಳ ಅಗತ್ಯ ಇಲ್ಲ. ‘ಬೇಡ’ ಎಂದರೆ, ಬೇಡ ಎಂದಷ್ಟೇ ಅರ್ಥ” ಎಂದಾಗ ಅಮಿತಾಭ್ ನ ದನಿಯನ್ನು ಎರಡು ಕೈಗಳಲ್ಲಿ ಹಿಡಿದುಕೊಂಡು ಹಣೆಗೊತ್ತಿಕೊಳ್ಳಬೇಕು ಅನ್ನಿಸಿತು.

ಹೆಣ್ಣಿನ ‘ಬೇಡ’ ಪದವನ್ನು ಇಲ್ಲಿ ಇನ್ನೊಂದಿಷ್ಟು ವಿಸ್ತರಿಸಬೇಕು ಅನ್ನಿಸುತ್ತಿದೆ.

ಅದು ಪ್ರೀತಿ ಆಗಿರಬಹುದು, ಪ್ರಣಯ ಆಗಿರಬಹುದು, ಮಿಲನವಾಗಿರಬಹುದು, ‘ಬೇಡ’ ಎಂದರೆ ಅದರ ಅರ್ಥ ಕೇವಲ ಅಷ್ಟೇ..

..ನೀನು ಬೇಡ ಎಂದಲ್ಲ, ನಿನ್ನೊಂದಿಗೆ ಪರಿಚಯ ಬೇಡ ಎಂದಲ್ಲ, ಮತ್ತ್ಯಾರೋ ಬೇಕು ಎಂದಲ್ಲ.  ಬೇಡ ಎಂದರೆ ಬೇಡ ಅಷ್ಟೆ. ಅದಕ್ಕೆ ದಯವಿಟ್ಟು ಯಾವುದೇ ಹೆಚ್ಚಿನ ಅರ್ಥ ಬೇಡ, ಅದಕ್ಕಾಗಿ ಸಿಟ್ಟು, ಪ್ರತೀಕಾರ, ಅವಮಾನ, ಸೇಡು ಯಾವುದೂ ಬೇಡ. ನೀವು ನಮ್ಮ ಪರಿಚಿತರಾಗಿರಬಹುದು, ಸ್ನೇಹಿತರಾಗಿರಬಹುದು, ಪ್ರೇಮಿಯಾಗಿರಬಹುದು, ಪತಿಯೇ ಆಗಿರಬಹುದು, when we say ‘no’ its plain, simple ‘No’, please accept it and respect it.

ನಿರ್ದೇಶಕ ಅನಿರುದ್ಧ ರಾಯ್ ಚೌಧುರಿ ಇಲ್ಲಿ ಚಿತ್ರವನ್ನು ಮಾತ್ರ ಕಟ್ಟಿಕೊಟ್ಟಿಲ್ಲ, ನಾವು ಸಿನಿಮಾ ಹಾಲಿನಲ್ಲಿ ಕೂತಾಗ ತೆರೆಯ ಮೇಲೆ ಒಂದು ದೊಡ್ಡ ಕನ್ನಡಿಯನ್ನು ನಿಲ್ಲಿಸಿದ್ದಾರೆ. ಅಲ್ಲಿ ಯಾವುದೋ ಒಂದು ಪಾತ್ರದ, ಯಾವುದೋ ಒಂದು ಸನ್ನಿವೇಶದ, ಯಾವುದೋ ಒಂದು ಘಳಿಗೆಯಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ಕಾಣುತ್ತಾರೆ.

ಇಲ್ಲಿ ಹಾಡುಗಳಿಲ್ಲ, ಪ್ರೇಮ ಪ್ರಸಂಗ ಇಲ್ಲ, ಹೀರೋಯಿನ್ ಅನ್ನು ಯಾವುದೇ ಪ್ರೇಮಿ ಹೀರೋ ಬಂದು ಫೈಟ್ ಮಾಡಿ ಕಾಪಾಡುವುದಿಲ್ಲ, ಇಲ್ಲಿ ಯಾವುದೇ ಹೊಡೆದಾಟ ಸಹ ಇಲ್ಲ.

pink10ಅಸಲಿಗೆ ಚಿತ್ರ ಶುರುವಾಗುವುದೇ ಹೆಣ್ಣೊಬ್ಬಳು ತನ್ನನ್ನು ತಾನು ಕಾಪಾಡಿಕೊಳ್ಳಲು ತನ್ನನ್ನು ಅತಿಕ್ರಮಿಸುತ್ತಿದ್ದ ಗಂಡಿನ ತಲೆಯ ಮೇಲೆ ಬಾಟಲ್ ಒಡೆಯುವುದರೊಂದಿಗೆ. ಅವಳು ಮತ್ತು ಅವಳ ಗೆಳತಿಯರಿಬ್ಬರು ಆ ರೆಸಾರ್ಟ್ ನ ಕೋಣೆಯಿಂದ ಓಡುವುದರೊಂದಿಗೆ.

ಹೌದು ಆ ಹುಡುಗಿಯರು ಮಧ್ಯರಾತ್ರಿ ಮನೆಯಿಂದ ಹೊರಗೆ ಒಂದು ರಾಕ್ ಶೋ ನೋಡಲು ಬಂದಿರುತ್ತಾರೆ, ಹೌದು ಆ ಹುಡುಗಿಯರು ಆಧುನಿಕ ವಸ್ತ್ರಗಳನ್ನು ತೊಟ್ಟಿರುತ್ತಾರೆ, ಹೌದು ಆ ಹುಡುಗಿಯರು ಆ ಹುಡುಗರೊಂದಿಗೆ ಆ ರೆಸಾರ್ಟ್ ನ ಕೋಣೆಯಲ್ಲಿ ಊಟಕ್ಕೆಂದು ಹೋಗಿರುತ್ತಾರೆ, ಹೌದು ಆ ಹುಡುಗಿಯರು ಆ ಹುಡುಗರೊಂದಿಗೆ ಮದ್ಯ ಸೇವಿಸಿರುತ್ತಾರೆ.

‘ಸೋ ವಾಟ್’, ಅದಕ್ಕೇನೀಗ, ಎಂದು ನೀವೂ ನನ್ನೊಂದಿಗೆ ದನಿ ಸೇರಿಸುವುದಾದರೆ ನೀವು ಆ ಚಿತ್ರ ನೋಡಬೇಕು, ‘ಓಹ್ ಅದಕ್ಕೇ ಮತ್ತೆ ಹೇಳುವುದು, ಹೆಣ್ಣು ಹೊತ್ತಲ್ಲದ ಹೊತ್ತಿನಲ್ಲಿ ಹಾಗೆ ಮನೆಯಿಂದ ಹೊರಗೆ ಹೋಟಲು, ರೆಸಾರ್ಟು ಅಂತ ಹೋದರೆ, ಹುಡುಗರ ಜೊತೆಗೆ ಅವರ ಕೋಣೆಯಲ್ಲಿ ಊಟಕ್ಕೆ ಹೋದರೆ, ಜೊತೆಗೆ ಡ್ರಿಂಕ್ಸ್ ಬೇರೆ ತೆಗೆದುಕೊಂಡರೆ ಇನ್ನೇನಾಗುತ್ತದೆ, ತಪ್ಪು ಅವರದೆ’ ಎಂದು ನೀವಂದರೆ, ನೀವೂ ದಯವಿಟ್ಟು ಆ ಚಿತ್ರ ನೋಡಲೇಬೇಕು.

ಅನಿರುದ್ಧ್ ಚೌಧುರಿ ಆ ಚಿತ್ರವನ್ನು ಅಲ್ಲಿಂದ ತೆಗೆದುಕೊಂಡು ಹೋಗಿರುವ ರೀತಿಯೇ ಅನನ್ಯ. ಮೊದಲ ದೃಶ್ಯದಿಂದಲೇ, ಅಲ್ಲ ಮೊದಲ ದೃಶ್ಯ ಪ್ರಾರಂಭವಾಗುವ ಮೊದಲೇ, ಕೇವಲ ಮಾತುಗಳನ್ನು ಕೇಳಿಯೇ ಚಿತ್ರ ನಿಮ್ಮ ಗಮನವನ್ನು ಕಟ್ಟಿಹಾಕಿಬಿಡುತ್ತದೆ. ಆಮೇಲೆ ಸುಮಾರು ಎರಡೂವರೆ ಗಂಟೆಗಳ ಕಾಲ ನೀವು ಚಿತ್ರದಲ್ಲಿ ಮುಳುಗಿ ಹೋಗುತ್ತೀರಿ.

ಚಿತ್ರ ಶುರುವಾದಾಗ ಸಣ್ಣ ಸಣ್ಣ ಶಾಟ್ ಗಳು, ಚಿಕ್ಕ ಚಿಕ್ಕ ಫ್ರೇಂಗಳು, ಸಂಗೀತ, ಕತ್ತಲು, ಡ್ರೈವರ್ ಸರಿಯಾಗಿ ಓಡಿಸದೆ ಒಂದು ಅಪಘಾತವನ್ನು ತಪ್ಪಿಸಿಕೊಳ್ಳುವ ಕ್ಯಾಬ್ ಆ ಹುಡುಗಿಯರ ಆತಂಕವನ್ನು ಕಟ್ಟಿಕೊಟ್ಟರೆ,  ವೇಗವಾಗಿ ಓಡುವ ಐಷಾರಾಮಿ ಕಾರ್, ಲಾಂಗ್ ಶಾಟ್ಸ್, ಬೆಳಕು ಆ ಹುಡುಗರ ಸಿಟ್ಟು ಮತ್ತು ಅಹಂಕಾರವನ್ನು ಕಟ್ಟಿಕೊಡುತ್ತದೆ. ಇಲ್ಲಿ ಅತಿಕ್ರಮಿಸಿ ಶಿಕ್ಷೆಗೊಳಗಾದವರು ಆ ಹುಡುಗರು, ಅತಿಕ್ರಮಣಕ್ಕೊಳಪಟ್ಟವರು ಆ ಹುಡುಗಿಯರು. ಹಾಗಿರುವಾಗ ಆ ಹುಡುಗಿಯರು ಸಿಟ್ಟಾಗಬೇಕು, ಹುಡುಗರು ಆತಂಕಪಡಬೇಕು ಅಲ್ಲವೆ ? ಅದು ಅದಲು ಬದಲಾಗುವುದರಲ್ಲಿ ನಮ್ಮ ಸಮಾಜದ, ನಮ್ಮ ಸಂಸ್ಕೃತಿಯ, ನಮ್ಮ ಮೌಲ್ಯ ವ್ಯವಸ್ಥೆಯ ಸೋಲು ಇದೆ ಅನ್ನಿಸುತ್ತದೆ ನನಗೆ.

pink6ಒಂದು ರಾಕ್ ಸಂಗೀತ ಸಭೆಗೆ ಹೋಗಿರುವ ಮೂವರು ಗೆಳತಿಯರು, ಅವರು ಒಂದೇ ಫ್ಲಾಟ್ ನ ವಾಸಿಗಳೂ ಹೌದು, ತಮಗೆ ಮೊದಲೇ ಪರಿಚಿತವಿದ್ದ ಸ್ನೇಹಿತನ ಗೆಳೆಯರು ಬಲವಂತ ಮಾಡಿದರು ಎಂದು ಅವರ ಕೋಣೆಗೆ ಊಟಕ್ಕೆ ಹೋಗುತ್ತಾರೆ. ಹಾಗೆ ಕೋಣೆಗೆ ಬಂದ ಈ ಹುಡುಗಿಯರನ್ನು ಸುಲಭವಾಗಿ ಲಭ್ಯವಾಗುವವರು ಎಂದು ಆ ಹುಡುಗರು ಮುಂದುವರಿಯುತ್ತಾರೆ.

ಹುಡುಗಿಯರು ಪ್ರತಿರೋಧಿಸುತ್ತಾರೆ. ಎಷ್ಟೇ ಸಲ ಹೇಳಿದರೂ ಒಬ್ಬ ಹುಡುಗ ಕೇಳುವುದಿಲ್ಲ, ಕಡೆಗೆ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಮಿನಾಲ್ ಒಂದು ಬಾಟಲ್ ತೆಗೆದು ಹುಡುಗನ ತಲೆಗೆ ಹೊಡೆಯುತ್ತಾಳೆ. ಹಾಗೆ ಹೊಡೆಸಿಕೊಂಡ ಹುಡುಗ ರಾಜ್ ವೀರ್ ರಾಜಕೀಯ ಹಿನ್ನೆಲೆ ಇರುವ ಸ್ಥಿತಿವಂತರ ಮಗ. ಏನೂ ತೋಚದೆ ಆ ಹುಡುಗಿ ತನ್ನ ಗೆಳತಿಯರ ಜೊತೆ ಅಲ್ಲಿಂದ ಓಡಿಹೋಗುತ್ತಾಳೆ.

ಆನಂತರ ಆ ಹುಡುಗನ, ಅವನ ಗೆಳೆಯರ, ಅವನ ಮನೆಯವರು ಆ ಹುಡುಗಿಯ ಮೇಲೆ ತಮ್ಮ ಸಿಟ್ಟು ತೀರಿಸಿಕೊಳ್ಳಲು ಅವಳನ್ನು ಅಪರಾಧಿಯನ್ನಾಗಿಸುತ್ತಾರೆ. ಆ ಹುಡುಗಿ ಧೈರ್ಯವಂತೆ, ಅದೇ ಸಮಯದಲ್ಲಿ ಮೃದುವಾದ ಮನಸ್ಸಿನವಳೂ ಹೌದು. ಅವಳ ಮನೋಸ್ಥೈರ್ಯವನ್ನು ಒಡೆದು ಪುಡಿ ಮಾಡಲು ಒಂದು ಸೈನ್ಯವೇ ಸಜ್ಜಾಗಿರುತ್ತದೆ, ಅವಳ ಜೊತೆಗೆ ನಿಲ್ಲುವವನು ಒಬ್ಬ ವಕೀಲ – ದೀಪಕ್ ಸೆಹಗಲ್, ಆತ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿರುತ್ತಾನೆ. ಆ ಪಾತ್ರದಲ್ಲಿ ಅಮಿತಾಭ್ ನಟನೆಗೆ ಸಲಾಂ ಎನ್ನಬೇಕು.

ರಾಜ್ ವೀರ್ ಕಟಕಟೆಯಲ್ಲಿ ನಿಂತಾಗ ಅವನ ಹಿಂದಿರುವುದು ಹಣದ ಅಹಂ, ಒಳ್ಳೊಳ್ಳೆ ಕಾಲೇಜಿನಲ್ಲಿ ಓದಿದ್ದೇನೆ ಎನ್ನುವ ಅಹಂ, ಹೈ ಸೊಸೈಟಿಯ ಅಹಂ, ತನ್ನ ಹಿಂದಿರುವ ರಾಜಕೀಯ ಶಕ್ತಿಗಳ ಅಹಂ ಮತ್ತು ಅದೆಲ್ಲದಕ್ಕೂ ಹೆಚ್ಚಾಗಿ ತಾನು ಗಂಡು ಎನ್ನುವ ಅಹಂ. ಅದೇ ಅಹಂನ ಮೂಲಕ ಅಮಿತಾಭ್ ಅವನನ್ನು ಅಪರಾಧಿಯನ್ನಾಗಿ ಸಾಬೀತು ಪಡಿಸುತ್ತಾನೆ.

ಅವನು ನಿಲ್ಲುವ ರೀತಿ, ಮಾತಿನಲ್ಲಿಯ ಉಡಾಫೆ, ನಾನಿರುವುದು ಹೀಗೆ, ಹೌದು ನಾನು ಅದನ್ನು ಮಾಡಿದ್ದೇನೆ, ಏನೀಗ ಎನ್ನುವ ಅವನ ಬಾಡಿ ಲಾಂಗ್ವೇಜ್.. ‘ದಯವಿಟ್ಟು ಜೇಬಿನಿಂದ ಕೈ ತೆಗೆದು ನಿಲ್ಲಿ, ನೀವಿರುವುದು ಕಟಕಟೆಯಲ್ಲಿ’ ಎನ್ನುವ ವಕೀಲ ಮೊದಲಿಗೆ ಅವನ ಆ ದೊಡ್ಡಸ್ತಿಕೆಯ ಪೊಳ್ಳು ಕವಚವನ್ನು ಕಳಚುತ್ತಾನೆ.

ನ್ಯಾಯಾಲಯದಲ್ಲಿ, ಕಟಕಟೆಯಲ್ಲಿ ನಿಂತಿರುವಾಗ, ಎಲ್ಲರ ಎದುರಿನಲ್ಲಿ, ತನ್ನಂತಹ ವಯಸ್ಸಾದ ವಕೀಲನನ್ನೇ ‘ನೀನು’ ಎಂದು ಏಕವಚನದಲ್ಲಿ ಮಾತನಾಡಿಸುವ ಈತ ರಾತ್ರಿ ವೇಳೆಯಲ್ಲಿ, ರೆಸಾರ್ಟ್ ನಲ್ಲಿ, ತನ್ನನ್ನು ನಿರಾಕರಿಸಿದ ಹುಡುಗಿಯೊಬ್ಬಳ ಜೊತೆ ಹೇಗೆ ನಡೆದುಕೊಂಡಿರಬಹುದು ಎನ್ನುವುದನ್ನು ಹೇಳದೆಯೇ ಆತ ಸಾಬೀತು ಪಡಿಸುತ್ತಾನೆ.

ಇಲ್ಲಿ ಅಮಿತಾಭ್ ಗೆ ಯಾವುದೇ ಹೀರೋ ಮ್ಯಾನರಿಸ್ಂಗಳಿಲ್ಲ, ಆತ ಕಾಯಿಲೆಯಿಂದ ಬಳಲುತ್ತಿರುತ್ತಾನೆ, ಆಗಾಗ ಮಾತು ಮರೆಯುತ್ತಾನೆ, ನ್ಯಾಯಾಲಯದಲ್ಲಿರುವ ಜಿರಳೆ ಅವನ ಏಕಾಗ್ರತೆಯನ್ನು ಹಾಳು ಮಾಡಿಬಿಡುತ್ತದೆ, ಕಷ್ಟ ಪಟ್ಟು ಉಸಿರಾಡುತ್ತಾನೆ, ಅಮಿತಾಭ್ ನ ಮೇಕಪ್ ಅಂತೂ ಆತನನ್ನು ಎಷ್ಟು ಸಾಧ್ಯವೋ ಅಷ್ಟು ಕಟುವಾಗಿ ತೋರಿಸುತ್ತದೆ.

pink4

ಆದರೆ ಒಂದು ಸಲ ಪಾರ್ಕಿನಲ್ಲಿ ಮಿನಾಲ್ ತನ್ನೊಂದಿಗೆ ನಡೆದು ಬರುವಾಗ, ಎದುರಾದವರು ‘ಓ ಇವಳೇ ಅಲ್ಲವಾ’ ಆ ಸೂರಜ್ ಕುಂಡ್ ನಲ್ಲಿ ಗಲಾಟೆಯಲ್ಲಿ ಸಿಕ್ಕಿಹಾಕಿಕೊಂಡವಳು ಎಂದಾಗ ಮೀನಲ್ ಜನರಿಗೆ ತನ್ನ ಗುರುತು ಸಿಗಬಾರದು ಎಂದು ತನ್ನ ಜರ್ಕಿನ್ ನ ಹುಡ್ ಅನ್ನು ತಲೆಗೇರಿಸಿಕೊಂಡಾಗ, ಸದ್ದಿಲ್ಲದೆ ಅದನ್ನು ಹಿಂದೆ ತಳ್ಳಿ ಅವಳು ತಲೆ ಎತ್ತಿ ನಡೆಯಬೇಕು, ತಪ್ಪು ಅವಳದಲ್ಲ ಅಂತ ಮಾತಿಲ್ಲದೆಯೇ ಹೇಳುತ್ತಾನಲ್ಲ ಆ ಒಂದು ಕ್ಷಣದ ಆ ಒಂದು ನಡವಳಿಕೆ ಅವನನ್ನು ನಮ್ಮ ಮನಸ್ಸಿನಲ್ಲಿ ಹೀರೋ ಮಾಡಿ ಬಿಡುತ್ತದೆ.

ಆ ರೆಸಾರ್ಟ್ ನ ಕೋಣೆಯಲ್ಲಿ ನಿಜಕ್ಕೂ ಏನಾಗಿರುತ್ತದೆ ಎನ್ನುವುದು ಪ್ರೇಕ್ಷಕರಿಗೂ ಗೊತ್ತಿರುವುದಿಲ್ಲ, ಸಿಕ್ಕ ತುಣುಕು ಸಿಸಿ ಟಿವಿ ಫೂಟೇಜ್ ಗಳನ್ನು ಹುಡುಗರು, ಹೋಟೆಲ್ ನವರು, ಪೊಲೀಸಿನವರು ತಮ್ಮ ಮೂಗಿನ ನೇರಕ್ಕೆ ಸರಿಯಾಗಿ ಹೇಳುತ್ತಿರುತ್ತಾರೆ. ಮೂರೂ ಜನ ಹುಡುಗಿಯರ ವೈಯಕ್ತಿಕ ಬದುಕನ್ನು ಅಲ್ಲಿ ಹರಾಜಿಗಿಡಲಾಗುತ್ತದೆ.

ತಾನು ಮದುವೆಯಾಗದೆ, ಕಾಯಿಲೆಯಿಂದ ನರಳುತ್ತಿರುವ ಸಹೋದರನನ್ನು ನೋಡಿಕೊಳ್ಳುತ್ತಿರುವ ಹುಡುಗಿಗೆ ಹೆಂಡತಿ ಸತ್ತ ಒಬ್ಬಾತನೊಂದಿಗೆ ಪ್ರೀತಿ ಇದೆ ಎನ್ನುವ ಕಾರಣಕ್ಕೆ ಅವಳು ಮೈ ಮಾರಿಕೊಳ್ಳುವ ಹೆಣ್ಣು ಎಂದು ಪದೇ ಪದೆ ಕೋರ್ಟಿನಲ್ಲಿ ಪ್ರಾಸಿಕ್ಯೂಶನ್ ವಕೀಲ ಆರೋಪ ಮಾಡಿದಾಗ ಮೂವರಲ್ಲಿ ಅತ್ಯಂತ ಹಿರಿಯಳಾದ, ಅತ್ಯಂತ ಸೌಮ್ಯಳಾದ ಆಕೆ ಸಿಡಿದೆದ್ದು ‘ಹೌದು ನಾವು ಹಣ ತೆಗೆದುಕೊಂಡೆವು, ಹೌದು ಅವನು ಹಣ ಕೊಟ್ಟ, ಆಮೇಲೆ ಮೀನಲ್ ಮನಸ್ಸು ಬದಲಾಯಿಸಿ ಬೇಡ ಅಂದಳು.  ಈಗ ಹೇಳಿ, ಈಗ ನಿಮ್ಮ ಕಾನೂನು ಏನನ್ನುತ್ತದೆ’ ಎಂದು ನ್ಯಾಯಾಧೀಶರನ್ನು ಪ್ರಶ್ನಿಸುತ್ತಾಳಲ್ಲ ಆಗ ಅವಳು ಇಡೀ ವಾದವಿವಾದದ ಟೇಬಲ್ ಅನ್ನು ತಿರುಗಿಸಿ ಹಾಕುತ್ತಾಳೆ.

ತಮ್ಮ ಮೇಲಿನ ಸುಳ್ಳು ಆರೋಪವನ್ನೂ ಒಪ್ಪಿಕೊಂಡು, ಆಯ್ತು, ಹಾಗಿದ್ದರೂ ಇದು ಅತ್ಯಾಚಾರ ಅಲ್ಲವೇ ಎಂದು ಅಬ್ಬರಿಸುತ್ತಾಳಲ್ಲ ಅದು ಅಮಿತಾಭ್ ಗೂ ಒಂದು ಹೊಸ ದಾರಿ ತೋರಿಸುತ್ತದೆ.

pink3ಮುಂದಿನ ವಿಚಾರಣೆಯಲ್ಲಿ ಆತ ಮಿನಾಲ್ ನನ್ನು ತಾನೆ ‘ನೀನು ಕನ್ಯೆಯಾ ?’ ಎಂದು ಕೇಳುತ್ತಾನೆ, ಅವಳು ‘ಇಲ್ಲ’ ಎನ್ನುತ್ತಾಳೆ, ಅತ್ಯಾಚಾರಕ್ಕೆ, ಲೈಂಗಿಕ ಶೋಷಣೆಗೆ ಒಳಗಾದ ಹೆಣ್ಣನ್ನು ಪಾಟೀಸವಾಲು ಮಾಡುವಾಗ ಎಂತೆಂತಹ ಮುಜುಗರಗೊಳಿಸುವ ಪ್ರಶ್ನೆಗಳನ್ನು ಕೇಳಬಹುದೋ ಎಲ್ಲವನ್ನೂ ತಾನೇ ಕೇಳಿ, ಆಯ್ತು ಇದೆಲ್ಲದ್ದರಿಂದ ಆಕೆ ಎಲ್ಲರಿಗೂ ಸುಲಭವಾಗಿ ಸಿಗಬಲ್ಲ ಆಸ್ತಿಯಾಗಿ ಬಿಡುತ್ತಾಳಾ ಎನ್ನುವ ಪ್ರಶ್ನೆಯನ್ನು ಎಲ್ಲರ ಮುಖಕ್ಕೆ ರಾಚುತ್ತಾನೆ.

ನಿಜ, ನಾವು ಪ್ರಶ್ನಿಸಬೇಕಾಗಿರುವುದು ಅದನ್ನು. ಅತ್ಯಾಚಾರಕ್ಕೆ, ಅತಿಕ್ರಮಣಕ್ಕೆ ಒಳಗಾದ ಹೆಣ್ಣಿನ ಮೇಲೆಯೇ ಎಲ್ಲಾ ಜವಾಬ್ದಾರಿ, ಎಲ್ಲಾ ಕಾರಣ, ಎಲ್ಲಾ ಹೊರೆಯನ್ನು ಹೊರೆಸುತ್ತೀವಲ್ಲ, ಇಲ್ಲಿ ಮುಸುಕು ಹಾಕಿ ‘ಕಾಪಾಡಬೇಕಿರುವುದು’ ನಮ್ಮ ಹೆಣ್ಣುಮಕ್ಕಳನ್ನಲ್ಲ, ನಾವು ಕಡಿವಾಣ ಹಾಕಬೇಕಾಗಿರುವುದು ನಮ್ಮ ಪಾಳೆಗಾರ ಮನೋಸ್ಥಿತಿಗೆ, ನಮ್ಮ ಗಂಡು ಮಕ್ಕಳಿಗೆ. ಅದಕ್ಕೆ ಸರಿಯಾಗಿ ಕಡಿವಾಣ ಹಾಕಿದರೆ ನಮ್ಮ ಹೆಣ್ಣು ಮಕ್ಕಳು ತಮ್ಮಿಂದ ತಾವೆ ಸುರಕ್ಷಿತರಾಗುತ್ತಾರೆ ಎಂದು ಆ ವಕೀಲ ಹೇಳುತ್ತಾನೆ.

ಒಂದು ಹೆಣ್ಣು ಗಂಡಿನೊಡನೆ ಹೋಗುವುದು ತಪ್ಪು, ಅವನೊಡನೆ ನಗುನಗುತ್ತಾ ಮಾತನಾಡುವುದು ತಪ್ಪು, ಮಾತನಾಡಿದರೂ ಅದು ಲೈಬ್ರರಿಯಲ್ಲಿ, ದೇವಸ್ಥಾನದಲ್ಲಿ ಆದರೆ ಪರವಾಗಿಲ್ಲ, ರಾಕ್ ಶೋ, ಹೋಟಲಿನಲ್ಲಿ ಊಟ ಮಾಡುವಾಗ ಆಗಬಾರದು.

ನೀವಿರುವ ಜಾಗ ನಿಮ್ಮ ನಡತೆಗೆ ಸರ್ಟಿಫಿಕೇಟ್ ಕೊಡುತ್ತದೆ. ಹಗಲಲ್ಲಿ ಓಡಾಡಬಹುದು, ರಾತ್ರಿಯಾದಂತೆಲ್ಲಾ ರಸ್ತೆಯಲ್ಲಿ ಹೆಣ್ಣು ಒಂಟಿಯಾಗಿ ಓಡಾಡುತ್ತಿದ್ದರೆ ಕಾರ್ ಗಳು ನಿಧಾನವಾಗಿ ಚಲಿಸಲಾರಂಭಿಸುತ್ತವೆ, ಕಾರಿನ ಕಿಟಕಿಯ ಗಾಜುಗಳು ಮೆಲ್ಲನೆ ಕೆಳಗಿಳಿಯುತ್ತವೆ, ಯಾಕೋ ಹಗಲಿನಲ್ಲಿ ಈ ಸಾಹಸ ಯಾರೂ ಮಾಡುವುದಿಲ್ಲ, ಕೇಳಿ ಹುಡುಗಿಯರೆ, ನಿಮ್ಮ ನಡತೆಯನ್ನು ನಿರ್ಧರಿಸುವುದು ನಿಮ್ಮ ನಡವಳಿಕೆಯಲ್ಲ ಗಡಿಯಾರದ ಮುಳ್ಳು.

ಕುಡಿತ ಗಂಡಸರಿಗೆ ಒಂದು ಆರೋಗ್ಯದ ತೊಡಕು ಅಷ್ಟೇ, ಆದರೆ ಹೆಣ್ಣು ಮಕ್ಕಳಿಗೆ ಅದು ‘ನೋಡಿ ನಾನು ಸಿದ್ಧವಿದ್ದೇನೆ’ ಎನ್ನುವ ಫಲಕ… ಹೀಗೆ ಚಲನ ಚಿತ್ರದಲ್ಲಿ ಅತ್ಯಂತ ಕಟುವಾದ ಸತ್ಯಗಳನ್ನು ಅತ್ಯಂತ ಪರಿಣಾಮಕಾರಿ ಸಂಭಾಷಣೆಗಳಾಗಿ ಕಟ್ಟಿಕೊಟ್ಟಿದ್ದಾರೆ.

ನಾನು ಈ ಚಿತ್ರ ನೋಡಿದ್ದು ಒಂದು ಮಾಲ್ ನಲ್ಲಿ, ಅಲ್ಲಿ ಇದ್ದದ್ದು ಬಹುಪಾಲು ಮಂದಿ ಮಧ್ಯಮದಿಂದ ಮೇಲ್ ಮಧ್ಯಮ ವರ್ಗದ ಜನ. ಚಿತ್ರ ಮುಗಿದಾಗ ಅದು ಒಂದು ಚಲನಚಿತ್ರ ಎನ್ನುವ ಪರಿವೆಯೂ ಇಲ್ಲದೆ ಅಲ್ಲಿದ್ದ ಮುಕ್ಕಾಲು ಮಂದಿ ಮಹಿಳೆಯರು ಚಪ್ಪಾಳೆ ತಟ್ಟಿದ್ದರು. ಆ ಒಂದು ಕ್ಷಣದಲ್ಲಿ ಅದು ಅವರೆಲ್ಲರ ಕಥೆಯೂ ಆಗಿಹೋಗಿತ್ತು.

pink8ಚಿತ್ರದುದ್ದಕ್ಕೂ ಒಂದೂ ಮಾತನಾಡದೆ ಚಿತ್ರ ಮುಗಿದ ಮೇಲೆ ವಕೀಲನ ಕೈಕುಲುಕುವ ಆ ನ್ಯಾಯಾಲಯದ ಮಹಿಳಾ ಕಾನ್ಸ್ ಟೇಬಲ್ ಮುಖ ನೋಡಿದರೆ ಅದು ಅವಳ ಕಥೆಯೂ ಹೌದು ಅನ್ನಿಸುವುದಿಲ್ಲವೇ ಹಾಗೆ.

ಇದು ಇಂದಿನ ಬಹುಪಾಲು ಮಹಿಳೆಯರು ಪ್ರತಿ ದಿನ ಎದುರಿಸುವ ಅಗ್ನಿದಿವ್ಯ.

ಪ್ರಶ್ನೆ ಕೇಳಬಲ್ಲ, ಸ್ವತಂತ್ರ ಮನೋಭಾವ ಇಟ್ಟುಕೊಳ್ಳಬಲ್ಲ, ತನ್ನ ಬದುಕಿನ ನಿಯಮಗಳನ್ನು ತಾನೇ ರೂಪಿಸುವ ಧೈರ್ಯ ಇಟ್ಟುಕೊಳ್ಳಬಲ್ಲ ಹೆಣ್ಣನ್ನು ಕಂಡರೆ ಪಿತೃಪ್ರಧಾನ ವ್ಯವಸ್ಥೆಗೆ ಹೆದರಿಕೆ. ತಕ್ಷಣ ತನ್ನೆಲ್ಲಾ ಶಕ್ತಿ ಬಳಸಿ ಅವಳನ್ನು ನಡತೆಗೆಟ್ಟ ಹೆಣ್ಣಾಗಿಸಿ, ಬಲಿ ಹಾಕಿಬಿಡುತ್ತದೆ. ಇಲ್ಲಿ ಧೈರ್ಯವಂತ ಹೆಣ್ಣು ಶೋಭಿಸುವುದು ಕಥೆಗಳಲ್ಲಿ, ಫೋಟೋದಲ್ಲಿ, ದೇವಸ್ಥಾನಗಳಲ್ಲಿ ಮಾತ್ರ.

ಆದರೆ ಎಲ್ಲಾ ಗಂಡುಗಳು ಹಾಗೆ ಯೋಚಿಸುವುದಿಲ್ಲ ಎನ್ನುವುದನ್ನು ಸಹ ಚಿತ್ರ ಗಮನದಲ್ಲಿಟ್ಟುಕೊಳ್ಳುತ್ತದೆ.

ವಯಸ್ಸಾಗಿದ್ದರೂ, ತನ್ನ ಮೇಲೆ ಹಲ್ಲೆ ನಡೆದರೂ, ಆ ಹುಡುಗಿಯರನ್ನು ಮನೆ ಖಾಲಿ ಮಾಡಿಸಲು ಏರ್ಪಟ್ಟ ಎಲ್ಲಾ ಒತ್ತಡ, ಬೆದರಿಕೆಗಳ ನಡುವೆಯೂ ತಾನು ನಂಬಿದ್ದ ನಂಬಿಕೆಗೆ ಬೆಲೆಕೊಟ್ಟು ಆ ಹುಡುಗಿಯರ ಜೊತೆಗೆ ನಿಲ್ಲುವ ಆ ವಯಸ್ಸಾದ ಮನೆ ಮಾಲೀಕ, ಹುಡುಗಿಯರ ಸ್ಥಿತಿಗೆ ಮರುಗುವ, ಅವರನ್ನು ಈ ಸ್ಥಿತಿಗೆ ತಂದ ವ್ಯವಸ್ಥೆಯನ್ನು ಕುರಿತಾದ ಒಂದು ಸಾತ್ವಿಕ ಕೋಪವನ್ನು ತನ್ನ ಕಣ್ಣಿನಲ್ಲಿ, ಮಾತುಗಳಲ್ಲಿ ತೋರಿಸುವ ಆ ನ್ಯಾಯಾಧೀಶ, ನಿನ್ನ ಜೊತೆಗೆ ನಾನಿದ್ದೇನೆ ಎಂದು ಹೇಳುವ ಆಂಡ್ರಿಯಾಳ ಗೆಳೆಯ. ಒಂದು ಚಿತ್ರದಲ್ಲಿ ಕಥಾ ನಾಯಕ ಮತ್ತು ನಾಯಕಿಯನ್ನು ಬಿಟ್ಟರೆ ಮಿಕ್ಕವೆಲ್ಲಾ ಕೇವಲ ಅವರನ್ನು ಪೋಷಿಸುವ ಪೋಷಕ ಪಾತ್ರಗಳಾಗುವುದನ್ನು ಕಂಡ ನಮಗೆ ಇಲ್ಲಿ ಎಲ್ಲಾ ಪಾತ್ರಗಳೂ ಸ್ವತಂತ್ರವಾಗಿ ನಿಲ್ಲುವ ಪರಿ ಅಚ್ಚರಿ ಹುಟ್ಟಿಸುತ್ತದೆ.

ಹಿನ್ನೆಲೆ ಸಂಗೀತ ಅದ್ಭುತವಾಗಿದೆ, ‘ಬೆಳಕಿನ ಪಾದಗಳಿಗೆ ಸಂಕೋಲೆ ಬಂದಿದ್ದು ಹೇಗೆ ?, ಚಿಟ್ಟೆಯ ರೆಕ್ಕೆಯ ಮೇಲೆ ಆ ಕಲ್ಲಿಟ್ಟವರು ಯಾರು ?’ ಎನ್ನುವ ಸಾಲಿರುವ ‘ಕಾರಿ ಕಾರಿ’ ಹಾಡು ಇನ್ನೂ ಮನಸ್ಸಿನಲ್ಲಿ ರಿಂಗಣಿಸುತ್ತಲೇ ಇದೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ತನ್ನ ಸಂಭಾಷಣೆಯನ್ನು ಹೇಳುವಾಗ ಅಮಿತಾಭ್ ನ ದನಿಯಲ್ಲಿರುವ ಆ ಬದ್ಧತೆ ಮತ್ತು ಆ ಮೂಲಕ ಆ ಸಂಭಾಷಣೆಯ ಸಾಲುಗಳು ಕಲ್ಲಿನಲ್ಲಿ ಕೆತ್ತಿದ ಹಾಗೆ ನೆನಪಿನಲ್ಲಿರುತ್ತದೆ. ‘No’ – No is not a word, it is a complete sentence!

pink

‍ಲೇಖಕರು Admin

September 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. lakshmikanth itnal

    ಸಂಧ್ಯಾ ಜಿ, ಎಂಥಾ ಸೊಗಸಾದ ಅಕ್ಷರ ಚಿತ್ರಣ. ಹೆಣ್ಣು ಗಂಡುಗಳ ನಡುವಿನ ಸಂಕೀರ್ಣತೆಗಳ ಕೋಳಗಳ ನಡುವಿನ ಕೊಂಡಿಗಳಲ್ಲಿ ಕಳೆದುಹೋದ ಸಮಾಜದ ರೋಗಗ್ರಸ್ಥ ಸ್ವಾಸ್ಥ್ಯವನ್ನು ಹಸನುಗೊಳಿಸುವ ಪರಿಪೂರ್ಣ ಕಥಾನಕವೊಂದನ್ನು ಅದೆಷ್ಟು ಗಟ್ಟಿಯಾಗಿ ಕಟ್ಟಿಕೊಟ್ಟೀದ್ದೀರಿ ಎಂದರೆ, …..ಕಾರು ಹೊರಗೆ ತೆಗೆಯುತ್ತಿದ್ದೇನೆ. ಧಾರವಾಡದಿಂದ ಹುಬ್ಬಳ್ಳಿಗೆ ಹೋಗಬೇಕು ಥಿಯೇಟರ್ ಹುಡುಕಿಕೊಂಡು. ..

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      -) ಥ್ಯಾಂಕ್ಯೂ. ಫಿಲಂ ನೋಡಿದ್ರಾ ಸರ್?

      ಪ್ರತಿಕ್ರಿಯೆ
  2. ಭಾರತಿ ಬಿ ವಿ

    ಎಷ್ಟು ವರ್ಷಗಳಿಂದ ಎದೆಯಲ್ಲುಳಿದ ಪ್ರಶ್ನೆಗಳನ್ನು ಕೇಳುವಾಗ “ಓಹ್ ಯಾರಾದರೊಬ್ಬರು ಕೊನೆಗೂ ಕೇಳಿದರಲ್ಲ” ಅನ್ನುವ ನೆಮ್ಮದಿ , ನಿರಾಳತೆ …
    ಸಂಧ್ಯಾ ಇದು ನಿನ್ನ ಬೆಸ್ಟ್ ಬರಹಗಳಲ್ಲಿ ಒಂದು

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಹಾಗಿತ್ತು ಚಿತ್ರ ಅಲ್ವಾ? ಸಿನಿಮಾ ನೋಡ್ತಾ ಎಷ್ಟು ಸಲ ಚಪ್ಪಾಳೆ ಹೊಡೆಯಬೇಕು ಅನ್ಸಿತ್ತು.

      ಪ್ರತಿಕ್ರಿಯೆ
  3. ವಾಣೀ ಸುರೇಶ್

    ಒಹ್! ಎಷ್ಟು ಸರಳವಾದ ಅನಿಸಿಕೆಗಳಲ್ಲಿ ಎಂಥಾ ವಾಸ್ತವವನ್ನು ಕಟ್ಟಿಕೊಟ್ಟಿದ್ದೀರಿ ಸಂಧ್ಯಾರಾಣಿಯವರೇ!
    ಸಿನಿಮಾ ನೋಡಲೇ ಬೇಕೀಗ!

    ಪ್ರತಿಕ್ರಿಯೆ
  4. Anonymous

    ಮ್ಯಾಡಮ್ ನಿಮ್ಮ ಬರಹಕ್ಕೂ ನೋ ಪದವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಎಲ್ಲ ಗಂಡಸರಿಗೂ ನನ್ನ ಸಲಾಂ

    ಪ್ರತಿಕ್ರಿಯೆ
  5. Shashi rao

    ಚೆಂದ ಇದೆ ನಿರೂಪಣೆ ಶ್ರೀಮತಿ ಸಂಧ್ಯಾ ಅವರೇ, ನಿನ್ನೆ ಹಾಗು ಇಂದು ಎರೆಡೆರೆಡು ಬಾರಿ ಚಿತ್ರವಾ ನೋಡಿದ ಮೇಲೆ ಅನ್ನಿಸಿದ್ದು..
    ಚಿತ್ರದ ನಾಯಕಿ ತಾನು ತನ್ನ ಸ್ವಂತ ಮನೆಯಿಂದ ದೂರವಿರಲು ಕೊಟ್ಟ ಕಾರಣ ಅಷ್ಟು ಸಮಂಜಸವೆನಿಸಲಿಲ್ಲ, ತನ್ನ ಕೆಲಸದ ತಾಣಕ್ಕೆ ಸುಲಭವೆಂದೋ ಅಥವಾ ಗೆಳತಿಯರೊಡನೆ ಜೀವನದ ಮೊದಲ ಹೆಜ್ಜೆಗಳ ಅನುಭವ ಪಡೆವ ಹೀಗೆ ಇನ್ನೇನಾದರೂ ಸರಳ ಕಾರಣ ಕೊಡಬಹುದಿತ್ತು ಆದರೆ ತಾನು ಇಂಡಿಪೆಂಡೆಂಟ್ ವಿಮೆನ್/ ತನ್ನ ಕೆಲಸದ ವೇಳೆಯಿಂದಾಗಿ ಹೆತ್ತವರಿಗೆ ತೊಂದರೆಯಾಗಬಾರದೆನ್ನುವದು ಅಷ್ಟು ಸರಿಯೆನಿಸಲಿಲ್ಲ.
    ಇನ್ನು ಅಪರಾಧಿ ಸ್ಥಾನದಲ್ಲಿರುವವರಿಗಷ್ಟೇ ಶಿಕ್ಷೆಯಾದದ್ದು ಕೂಡ ಸಿಸ್ಟಮ್ ದೃಷ್ಟಿಯಿಂದ ನೋಡಿದರೆ ಸರಿಯಿಲ್ಲವೆನಿಸುತ್ತೆ, ಅಪರಾಧ ಮಾಡಿದವರಷ್ಟೇ ಅಪರಾಧವಾ ಸಮರ್ಥಿಸುವವರೂ ಅಪರಾಧಿಗಳೆನ್ನುವನಂತೆ ಬಿಂಬಿಸಿದ್ದರೆ.. ಅರ್ಥಾತ್ ಅವರ ಪರ ವಾದಿಸಿದ ಲಾಯರ್, ಕೇಸನ್ನು ಮುಚ್ಚಿಹಾಕಲು/ತಿರುಚಲು ಪ್ರಯತ್ನಿಸಿದ ಪೊಲೀಸ್ ಸಿಬ್ಬಂದಿ ಮತ್ತು ತನ್ನ ಪ್ರಭಾವ ಬೀರಿದ ಇತರೆ ಎಲ್ಲರಿಗೂ ಬಿಸಿ ಮುಟ್ಟಿಸುವನಂತಾ ತೀರ್ಪಿದ್ದಿದ್ದರೆ ಇನ್ನೂ ಚೆಂದ ಇರುತಿತ್ತು. ಕಾರಣ ಸಮಸ್ಯೆ ಒಂದು ಕ್ರಿಮಿಯ ಶಿಕ್ಷಿಸಿದೊಡನೆ ಕೊನೆಯಾಗುವದಿಲ್ಲ, ಬದಲಾಗಿ ಕ್ರಿಮಿಗಳ ಪೋಷಿಸುವವರ ಮಟ್ಟ ಹಾಕುವಲ್ಲಿ ಬೆಳಕು ಬೀರಬಹುದಿತ್ತೇನೋ ಎನ್ನುವದು ನಮ್ಮ ಅನಿಸಿಕೆ.
    ಆದರೂ ನೀವು ಹೇಳಿದಂತೆ ಇದೊಂದು ಒಂದು ಸರಳ ಸಂದೇಶವಿರುವ ಅತ್ಯುತ್ತಮ ಚಿತ್ರ.. ದಪ್ಪ ಚರ್ಮಿಗರಿಗೆ ಅರ್ಥವಾಗಬೇಕಷ್ಟೆ.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನಮಸ್ತೆ ಮೇಡಂ. ಮೊದಲಿಗೆ ನೀವು ಹೇಳಿರುವ ಆಕೆಯ ಕಾರಣಗಳ ಬಗ್ಗೆ. ನಿಜ ನೀವು ಹೇಳಿದ ಹಾಗೆ ಮಾಡಬಹುದಿತ್ತು. ಅದು ಚಿತ್ರವನ್ನು ಫೈನ್ ಟ್ಯೂನಿಂಗ್ ಮಾಡಬಹುದಿತ್ತು. ಇನ್ನು ಅಪರಾಧ ಪೋಷಿಸುವವರಿಗೂ ಶಿಕ್ಷೆ ಆಗಬೇಕು ಎನ್ನುವ ನಿಮ್ಮ ಆಶಯಕ್ಕೆ ನನ್ನದೂ ಸಹಮತ ಇದೆ. ಚಿತ್ರ ನೋಡಿ, ಲೇಖನ ಓದಿ, ಧೀರ್ಘವಾಗಿ ಪ್ರತಿಕ್ರಯಿಸಿದ್ದಕ್ಕೆ ವಂದನೆಗಳು 🙂

      ಪ್ರತಿಕ್ರಿಯೆ
  6. Shobha venkatesh

    ಸಂಧ್ಯ ಪಿಂಕ್ ಚಿತ್ರದ ಅನಿಸಿಕೆ ನೋಡಿದೆ.
    As usual ಬರವಣಿಗೆ ,ಭಾಷೆ,ನಿರೂಪಣೆ,ಚಿತ್ರ ನೋಡುವ ತವಕ ಹೆಚ್ಚಿಸಿದೆ.
    ನಿಮ್ಮ ಬರವಣಿಗೆ ಶಕ್ತಿ ಹಾಗಿದೆ.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಥ್ಯಾಂಕ್ಯೂ ಶೋಭ 🙂 ಚಿತ್ರ ನೋಡಿ, ನಿಮಗೆ ಇಷ್ಟ ಆಗುತ್ತದೆ

      ಪ್ರತಿಕ್ರಿಯೆ
  7. Dr. Prabhakar M. Nimbargi

    ತುಂಬಾ ಅದ್ಭುತ ವಿಶ್ಲೇಷಣೆ. ಕೇವಲ ಕಣ್ಣುಗಳಿಂದ ಮತ್ತು ದನಿಯಿಂದ ಪಾತ್ರ ನಿರ್ವಹಿಸುವವರು, ನಮ್ಮ ಮನ ಸೆಳೆಯಬಲ್ಲರು ಮತ್ತು ವಿಶಿಷ್ಟವಾಗುವ ನಟ-ನಟಿಯರು ಚಿತ್ರರಂಗದಲ್ಲಿ ಬಹಳ ಕಡಿಮೆ. ನಟಿಯರಲ್ಲಿ ಶರ್ಮಿಳಾ ಟ್ಯಾಗೋರ (‘ಅನುಪಮಾ’) ಮತ್ತು ರೇಖಾ (‘ಉಮ್ರಾವ್‍ ಜಾನ್‍’ ಅಲ್ಲದೇ ಇನ್ನೂ ಹಲವು ಚಿತ್ರಗಳಲ್ಲಿ) ಹೀಗೆ ಪಾತ್ರ ನಿರ್ವಹಿಸಿದ್ದಾರೆ. ಅಮಿತಾಭ್‍ ಬಚ್ಚನ್‍ರ ದನಿಯೂ ಆಳ ಮತ್ತು ಗಾಢ, ನಿಯಂತ್ರಣವೂ ಅಪರೂಪದ್ದು. ನಾನು ಥೇಟರಿಗೆ ಹೋಗಿ ಚಿತ್ರಗಳನ್ನು ನೋಡಿ ದಶಕಗಳಾದವು. ಆದರೂ ‘ಪಿಂಕ್‍’ ಕಲಬುರಗಿಗೆ ಬಂದಾಗ ಥೇಟರಿಗೆ ಹೋಗಿಯೇ ನೋಡುವ ಇಚ್ಛೆಯಾಗಿದೆ. ಧನ್ಯವಾದಗಳು.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಥ್ಯಾಂಕ್ಯೂ ಸರ್ 🙂 ನಿಜ ಸರ್, ಅಮಿತಾಭ್ ಸಂಭಾಷಣೆ ಹೇಳುತ್ತಿದ್ದರೆ ಕಣ್ಣು ಮುಚ್ಚಿಕೊಂಡೂ ಚಿತ್ರವನ್ನು ’ನೋಡ’ಬಹುದು.

      ಪ್ರತಿಕ್ರಿಯೆ
  8. Sandhya

    Tumba channaagi barediddeera, as if kannu munde naditide anno haage..
    Such a nice thought that accept and respect a “NO”

    ಪ್ರತಿಕ್ರಿಯೆ
  9. C. N. Ramachandran

    ಪ್ರಿಯ ಸಂಧ್ಯಾ ಅವರಿಗೆ:
    ’ಪಿಂಕ್’ ಸಿನಿಮಾದ ನಿಮ್ಮ ವಿಶ್ಲೇಷಣೆ ತುಂಬಾ ಗಂಭೀರವಾಗಿದೆ, ಮನೋಜ್ಞವಾಗಿದೆ, ಚಲನಚಿತ್ರಗಳ ವಿಶ್ಲೇಷಣೆ-ವ್ಯಾಖ್ಯಾನಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದೆ. ನಾನು ಇನ್ನೂ ಆ ಚಿತ್ರವನ್ನು ನೋಡಿಲ್ಲ, ಆದರೆ ನೋಡಲೇ ಬೇಕು ಎಂದು ನಿಮ್ಮ ಲೇಖನವನ್ನು ಓದಿದ ಮೇಲೆ ಬಲವಾಗಿ ಅನಿಸುತ್ತಿದೆ; ನೋಡಿದ ನಂತರ ಮತ್ತೊಮ್ಮೆ ಬರೆಯುತ್ತೇನೆ.
    ಅಭಿನಂದನೆಗಳು. ರಾಮಚಂದ್ರನ್

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಸರ್ ನಮಸ್ತೆ. ನೀವು ಈ ಬರಹವನ್ನು ನೀವು ಓದಿದಿರಿ ಎನ್ನುವುದೇ ನನಗೆ ಸಂತೋಷ. ಕಿರಿಯರ ಬರಹವನ್ನು ಓದಿ, ಅದರ ಬಗ್ಗೆ ಪ್ರೀತಿಯಿಂದ ಬರೆಯುವ ನಿಮ್ಮ ಗುಣಕ್ಕೆ ಶರಣು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: