ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್

ನನ್ನ ಭಾವ ಜಗತ್ತಿಗೂ, ಇಂಗ್ಲಿಷಿನ G ಅಕ್ಷರಕ್ಕೂ ಒಂದು ಸೂಫಿಯಾನಿ ಸಂಬಂಧವಿದೆ.

ನನ್ನನ್ನು ಆಳವಾಗಿ ಕಲಕುವ, ನಾನು ಕನವರಿಸುವ, ಸ್ಪರ್ಶಕ್ಕೆ ದಕ್ಕದ ಅನುಭವಗಳೆಲ್ಲಕ್ಕೂ ಪದಗಳ ಬಟ್ಟೆತೊಡಿಸಿ, ಚಿತ್ರವಾಗಿಸುವ ಮೂರು ಕವಿಗಳ ಹೆಸರೂ G ಅಕ್ಷರದಿಂದಲೇ ಶುರುವಾಗುತ್ತದೆ….. ಗಿಬ್ರಾನ್, ಗಾಲಿಬ್ ಮತ್ತು ಗುಲ್ಜಾರ್.

ಗಾಲಿಬ್ ನನ್ನು ಮತ್ತೆ ಓದುವುದು, ಅವನೊಡನೆ ಗಲೀ ಖಾಸಿಮ್ ಉದ್ದಕ್ಕೂ ಹೆಜ್ಜೆ ಹಾಕುವುದು, ದೆಹಲಿಯ ಕಡುಚಳಿ, ರಣಬಿಸಿಲುಗಳ ತೀವ್ರತೆಯಲ್ಲಿ ಅರಳಿದ ಅವನ ಕಾವ್ಯಕ್ಕೆ ಮತ್ತೊಮ್ಮೆ ಎದೆಯೊಡ್ಡುವುದು ನನ್ನ ಸಂಭ್ರಮಕ್ಕೆ ಕಾರಣವಾಗಿತ್ತು.

ಗಾಲಿಬ್ ಒಂದು ಹರಿಯುವ ನದಿಯಂಥವನು.  ಅವನನ್ನು ನಾನು ಪದಗಳಲ್ಲಿ ಹೇಗೆ ಬಂಧಿಸಿಡಲಿ?  ಅವನ ಬದುಕು ಮತ್ತು ಕಾವ್ಯ ಎರಡರ ಹರಹೂ ವಿಸ್ತಾರವಾದದ್ದು.  ಅಲ್ಲದೆ ಈಗಾಗಲೇ ಗಾಲಿಬನ ಬಗ್ಗೆ ಹಲವಾರು ಹಿರಿಯರು ಬರೆದಿದ್ದಾರೆ.  ಅದರ ಹೊರತಾಗಿ ನಾನು ಮತ್ತೇನು ಬರೆಯಲಿ?  ಹಾಗಾಗಿ ನದಿಯನ್ನು ಹಿಡಿದಿಡುವ ಬದಲು ಒಂದು ಕೊಳದಲ್ಲಿ ಗಾಲಿಬನನ್ನು ಕಾಣಬಹುದಾದ ಸಾಧ್ಯತೆಗಳನ್ನು ನಾನು ಹುಡುಕುತ್ತಾ ಹೋದೆ.  ಆಗ ನನ್ನ ಇನ್ನೊಂದು ಪ್ರೀತಿಯಾದ ಗುಲ್ಜಾರ್ ಗಾಲಿಬನನ್ನು ಹಿಡಿದಿಟ್ಟಿದ್ದ ಅಚ್ಛೋದ ಸರೋವರ ನೆನಪಾಯಿತು.  ಅದು 1980 ರ ಸಮಯದಲ್ಲಿ ಗಾಲಿಬನ ಬಗ್ಗೆ ಗುಲ್ಜಾರ್ ದೂರದರ್ಶನಕ್ಕಾಗಿ ಮಾಡಿದ ಕಾವ್ಯ ಸರಣಿ.  ಇಂದಿಗೂ ಅದು ನನ್ನ ಪ್ರೀತಿಯ ನೆನಪುಗಳಲ್ಲಿ ಒಂದು.

ಗುಲ್ಜಾರ್ ಉರ್ದುಕಾವ್ಯದಲ್ಲಿ, ಹಿಂದಿ ಚಿತ್ರರಂಗದಲ್ಲಿ ಬೀಸಿದ ಒಂದು ತಂಗಾಳಿಯ ಅಲೆ.  ಕಾವ್ಯಕ್ಕೆ ಶಿಲ್ಪವನ್ನೂ, ಚಿತ್ರಗೀತೆಗಳಿಗೆ ಕಾವ್ಯವನ್ನೂ ಕೊಟ್ಟ ಮಾಂತ್ರಿಕ.  ನನ್ನ ಈ ಮಾಂತ್ರಿಕ ತನ್ನನ್ನು ತಾನು ಗಾಲಿಬನ ಸೇವೆಯಲ್ಲಿರುವ ಮೂರನೆಯ ಸೇವಕ ಎಂದು ಕರೆದುಕೊಳ್ಳುತ್ತಾರೆ.  ಮೊದಲಿಬ್ಬರೆಂದರೆ ಗಾಲಿಬನ ಮನೆಯ ಕೆಲಸಗಾರ ಕಲ್ಲೂ ಮಿಯಾ ಮತ್ತು ಕೆಲಸದಾಕೆ ವಫಾದಾರ್.  ಗಾಲಿಬನನ್ನು ಇಷ್ಟು ತೀವ್ರವಾಗಿ ಧೇನಿಸುವ ಗುಲ್ಜಾರ್, ಕೈಫಿ ಆಜ್ಮಿಯೊಡನೆ ಹಲವಾರು ತಿಂಗಳುಗಳ ಸಂಶೋದನೆಯ ನಂತರ ತಮ್ಮ ಸರಣಿ ಪ್ರಾರಂಭಿಸಿದಾಗ ಅವರಿಗೆ ಜೊತೆಯಾದವರು ನಾಸಿರುದ್ದೀನ್ ಶಾ ಮತ್ತು ಜಗಜೀತ್ ಸಿಂಗ್.  ಒಬ್ಬರು ಗಾಲಿಬನ ದೇಹವಾದರೆ, ಮತ್ತೊಬ್ಬರು ಆತನ ದನಿಯಾದರು.  ಅದಕ್ಕೆ ಆತ್ಮವನ್ನಿತ್ತದ್ದು ಗುಲ್ಜಾರ್.  ನನ್ನ ಈ ಬರಹ ಗುಲ್ಜಾರ್ ಕಟ್ಟಿಕೊಟ್ಟ ಗಾಲಿಬ್ ನನ್ನು ಆಧರಿಸಿದೆ.  ಅದಕ್ಕಾಗಿ ಗುಲ್ಜಾರ್ ಎತ್ತಿಕೊಂಡ ಘಟನೆಗಳು ಮತ್ತು ಕವನಗಳು ಇದರ ವಸ್ತು.  ಕವಿಯೊಬ್ಬ ಕವಿತೆಯ ಬಗ್ಗೆ ಕಂಡ ಕನಸಿನಂತಿದೆ ಆ ಸರಣಿ, ’ಮಿರ್ಜಾ ಗಾಲಿಬ್’.

’Ghalibiat’ – ಗುಲ್ಜಾರರ ಜಗತ್ತಿನಲ್ಲಿ ಗಾಲಿಬ್ ಎನ್ನುವುದು ವಿಶ್ವಮಧ್ಯ ಸೂರ್ಯ.  ಅವನ ಸುತ್ತಲೂ ಸುತ್ತುವ ಗ್ರಹ ಮತ್ತು ಉಪಗ್ರಹಗಳು ಜಗತ್ತಿನ ಜನರು. 1797-1869 ರ ವರೆಗೂ ಇದ್ದ ಈ ಗಾಲಿಬ್ ಎನ್ನುವ ಸೂರ್ಯನ ಪ್ರಖರತೆ ಇಂದಿಗೂ ಕಡಿಮೆಯಾಗಿಲ್ಲ.  ಗಾಲಿಬನ ಒಂದು ಕವನ ಸಂಕಲನದ ಶಾಯರಿಗಳನ್ನು ನೋಡಿದರೆ ನಿಮ್ಮ ಮನಸ್ಸಿನ ಎಲ್ಲಾ ಭಾವಗಳಿಗೂ ಪದಗಳು ಸಿಕ್ಕುತ್ತವೆ ಎಂದು ಹೇಳುತ್ತಾರೆ.  ಗಾಲಿಬ್ ನ ಪದಗಳ ತಾಕತ್ತು ಎಂದರೆ ಅದು.

ಆತ ಆಸ್ಥಾನದ ಪರಾಕುಗಳ ನಡುವಿನಿಂದ ಬಂದ ಕವಿಯಲ್ಲ, ದೆಹಲಿಯ ಗಲ್ಲಿಗಳಲ್ಲಿ ಅರಳಿದ ಹೂವು. ಅವನ ಒಡನಾಟ ದರ್ಬಾರಿಗಳಿಗಿಂತ ದೆಹಲಿಯ ಕೆಳಮಧ್ಯಮ ವರ್ಗದ ಜೊತೆಗೆಯೇ ಹೆಚ್ಚು.  ದೆಹಲಿಯ ಕಾಲೇಜಿನಲ್ಲಿ ಅವನಿಗೆ ಕೆಲಸ ಕೊಟ್ಟು, ಬದುಕಿಗೊಂದು ಆರ್ಥಿಕ ಭದ್ರತೆ ಕಲಿಸಬಹುದಾದದವರು ಇವನ ಪಲ್ಲಕ್ಕಿಯನ್ನು ಸ್ವಾಗತಿಸಲು ಬರಲಿಲ್ಲ ಎಂದು ಆ ಕೆಲಸ ಬೇಡ ಎಂದ, ದರ್ಬಾರಿನಲ್ಲಿ ಜೌಕ್ ನಂತರ ಎರಡನೆಯ ಸ್ಥಾನ ಒಲ್ಲೆ ಎಂದ ಈ ಮಹಾನ್ ಸ್ವಾಭಿಮಾನಿ ದೆಹಲಿಯ ಜೂಜುಕೋರರ ಜೊತೆಯಲ್ಲಿ, ಫಕೀರರ ಜೊತೆಯಲ್ಲಿ, ಜನಸಾಮಾನ್ಯರ ಜೊತೆಯಲ್ಲಿ ಇನ್ನಿಲ್ಲದಷ್ಟು ಸರಳತೆಯಿಂದ ಬೆರೆತು ಹೋಗುತ್ತಿದ್ದ.

ಹೆಂಡತಿ ಉಮ್ರಾವ್ ಈತನ ಬಾಲ್ಯದ ಗೆಳತಿ, ಆದರೆ ಇಬ್ಬರ ಸ್ವಭಾವದಲ್ಲೂ ಅಜಗಜಾಂತರ ವ್ಯತ್ಯಾಸ.  ಹೆಂಡತಿ ಇವನ ಸಂಗಾತಿಯಾಗುವುದಿಲ್ಲ, ಸಂಗಾತಿಯಾಗಬಹುದಾಗಿದ್ದ ನವಾಬ್ ಜಾನಳಿಗೆ ಈತ ಹತ್ತಿರಾಗುವ ಧೈರ್ಯ ಮಾಡುವುದಿಲ್ಲ. ಹುಟ್ಟಿದ ಏಳು ಮಕ್ಕಳಲ್ಲಿ ಒಂದೂ ಉಳಿಯುವುದಿಲ್ಲ. ಅವನ ಮನಸ್ಸಿನ ಖಾಲಿತನ ತುಂಬುವುದೇ ಇಲ್ಲ. ಅವನದೇ ಮಾತುಗಳಲ್ಲಿ ಹೇಳುವುದಾದರೆ,

’ಮುಷ್ಕಿಲೆ ಮುಝ್ ಪರ್ ಪಡಿ ಇತ್ನಿ ಕಿ ಆಸಾನ್ ಹೋಗಯ’

(ನನ್ನ ಮೇಲೆ ಕಷ್ಟಗಳ ಮಳೆ ಯಾವ ಪರಿ ಬಿತ್ತೆಂದರೆ ಕಡೆಗೆ ಅದು ಸುಲಭವೇ ಆಗಿ ಹೋಯ್ತು),

‘ಇಶ್ರತ್ ಎ ಖತ್ರಾ ಹೈ ದರಿಯಾ ಮೆ ಫನಾ ಹೋ ಜಾನಾ, ದರ್ದ್ ಕ ಹದ್ ಸೆ ಗುಜರ್ನಾ ಹೈ ದವಾ ಹೋ ಜಾನ’

(ನೀರಿನ ಹನಿಯ ಗೆಲುವು ನದಿಯಲ್ಲಿ ಒಂದಾಗಿ ಇಲ್ಲವಾಗುತ್ತಲೇ ಎಲ್ಲವೂ ಆದಾಗ, ನೋವಿಗೆ ನೋವೆ ಔಷದಿ ಆಗುವುದು ನೋವು ಇನ್ನೊಂದು ನೋವನ್ನು ಸೇರಿ ಮಿತಿಯನ್ನು ದಾಟಿದಾಗ),

-ಒಂದಾದ ಮೇಲೊಂದರಂತೆ ಬಂದೆರಗಿದ ನೋವಿನ ಅಲೆಗಳನ್ನೇ ತೆಪ್ಪ ಮಾಡಿಕೊಂಡು ಮುಳುಗದೆ ತೇಲಿದವನು ಗಾಲಿಬ್. ಇಷ್ಟು ಕಷ್ಟಗಳ ನಡುವೆಯೂ ಅವನು ಬದುಕಿನ ಬಗ್ಗೆ ವಿಮುಖನಾಗುವುದಿಲ್ಲ, ಬದುಕಿಗೆ ಬೆನ್ನು ಮಾಡುವುದಿಲ್ಲ, ಅದಕ್ಕೆದುರಾಗಿ ನಿಂತು ಅದರೊಡನಿನ ಸಂವಾದವನ್ನು ನಿರಂತರವಾಗಿ ಜಾರಿಯಲ್ಲಿಟ್ಟುಕೊಳ್ಳುತ್ತಾನೆ. ಗಾಲಿಬ್ ನಮಗೆ ಮುಖ್ಯವಾಗಬೇಕಾಗಿರುವುದು ಈ ಕಾರಣಕ್ಕೆ.

ಯಾವುದೇ ವ್ಯಕ್ತಿ ಕೇವಲ ತಾನೇತಾನಾಗಿ ನಮ್ಮ ಅರಿವಿಗೆ ದಕ್ಕುವುದಿಲ್ಲ. ಪ್ರತಿ ಶಬ್ಧಕ್ಕೂ ಒಂದು ಅರ್ಥವಲಯವಿರುವಂತೆ, ಪ್ರತಿ ವ್ಯಕ್ತಿಗೂ ಒಂದು ಭಾವವಲಯವಿರುತ್ತದೆ. ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪೂರ್ಣಗೊಳಿಸುವುದು ಆ ವ್ಯಕ್ತಿಯ ಸುತ್ತಲಿರುವ ಆ ಆವರಣ. ಹಾಗಾಗಿಯೇ ವ್ಯಕ್ತಿ ಚಿತ್ರಣವನ್ನು ಕಟ್ಟಿಕೊಡುವವರು ಆ ಎಲ್ಲಾ ವಲಯಗಳ ಜೊತೆಗೇ ಆ ಚಿತ್ರದ ರಂಗುಗಳನ್ನು ತುಂಬಬೇಕಾಗುತ್ತದೆ. ಗುಲ್ಜಾರ್ ಕಟ್ಟಿಕೊಡುವ ಗಾಲಿಬ್ ಹಾಗೆ ದಿಲ್ಲಿಯ ಇಕ್ಕಟ್ಟು ಗಲ್ಲಿಗಳೊಡನೆ, ಸುಡುಬಿಸಿಲಿನೊಂದಿಗೆ ಬರುವ ಅವನ ಪ್ರೀತಿಯ ಮಾವಿನ ಹಣ್ಣಿನೊಡನೆ, ಮೂಳೆಗಳೂ ಕಂಪಿಸುವ ಚಳಿಗೆ ಗುಟುಕರಿಸುವ ಖಾವಾದೊಡನೆ, ಶರಾಬಿನೊಡನೆ, ನವಾಬ್ ಜಾನಳ ನಿಟ್ಟುಸಿರೊಡನೆ ನಮ್ಮೊಳಗೆ ಇಳಿಯುತ್ತಾನೆ.

ಗುಲ್ಜಾರ್ ಮೊಗಲರ ಅರಮನೆ, ಇಮಾರತುಗಳನ್ನು ತೋರಿಸಿ ಅದನ್ನು ದಿಲ್ಲಿ ಅನ್ನುವುದಿಲ್ಲ, ಗಲ್ಲಿ ಮನೆಗಳನ್ನು ತೋರಿಸುತ್ತಾರೆ, ಅಲ್ಲಿ ಹೆಗಲ ಮೇಲೆ ಚರ್ಮದ ಚೀಲ ಹೊತ್ತು ನೀರು ಹಾಯಿಸುವ ಜಲಗಾರ ಇದ್ದಾನೆ, ಕೋತಿ ಆಡಿಸುವವನು, ಗಾಳಿಪಟ ಆಡಿಸುವ ಮಕ್ಕಳು, ಸರಾಯಿ ಖಾನೆ, ಪಲ್ಲಕ್ಕಿ ಹೊರುವವರು, ಪಾತ್ರೆಗಳಿಗೆ ಕಲಾಯಿ ಮಾಡುವವರು ಎಲ್ಲರೂ ಇದ್ದಾರೆ. ಗುಲ್ಜಾರ್ ಕಟ್ಟಿಕೊಡುವ ದಿಲ್ಲಿ ಜನಸಾಮಾನ್ಯರ ದಿಲ್ಲಿ. ಅಲ್ಲಿ ಒಬ್ಬ ಬಿಕ್ಷುಕ ಬರುತ್ತಾನೆ. ಸರಣಿಯುದ್ದಕ್ಕೂ ಬರುವ ಆ ಭಿಕ್ಷುಕ ಒಂದು ರೀತಿಯಲ್ಲಿ ಗಾಲಿಬನ ಸಾಕ್ಷಿಪ್ರಜ್ಞೆ. ಗಾಲಿಬನ ಬದುಕಿನಲ್ಲಿ ಆದಂತೆ ಆತನ ಬದುಕಿನಲ್ಲೂ ಹಲವಾರು ಪಲ್ಲಟಗಳು ಆಗುತ್ತವೆ. ಅವನ ಮೂಲಕ ಗುಲ್ಜಾರ್ ಕಾಲವನ್ನು, ದೆಹಲಿಯ ಅರಸೊತ್ತಿಗೆಯನ್ನು, ಬದಲಾಗುವ ಅಧಿಕಾರ ಕೇಂದ್ರವನ್ನು, ಹಿಂದೂ ಮುಸ್ಲಿಮರ ನಡುವಿನ ಸಾಮರಸ್ಯವನ್ನು ಕಟ್ಟಿಕೊಡುತ್ತಾರೆ. ಬ್ರಿಟಿಷರ ಆಗಮನಕ್ಕೆ, ಭಾರತದ ಮೊದಲ ಸ್ವಾತಂತ್ರ ಸಂಗ್ರಾಮಕ್ಕೆ, ಬಹದ್ದೂರ್ ಶಾಹ್ ನ ಬಂಧನದ ನಂತರ ಆಗುವ ಸಾಂಸ್ಕೃತಿಕ ಪಲ್ಲಟಕ್ಕೆ ಸರಣಿ ಸಾಕ್ಷಿ ಆಗುತ್ತದೆ. ಈ ಎಲ್ಲಾ ಕಾರಣಗಳಿಂದ ಇದು ಕೇವಲ ಗಾಲಿಬನ ಕಥೆಯಾಗದೆ, ಆ ಕಾಲದ ದೆಹಲಿಯ ಕಥೆ, ಭಾರತದ ಕಥೆಯೂ ಆಗುತ್ತದೆ.

ಸರಣಿ ಪ್ರಾರಂಭವಾಗುವುದು ಗುಲ್ಜಾರ್ ಅವರ ದನಿಯಿಂದ. ಅವರ ದನಿಯಲ್ಲಿನ ಬನಿ ಚಿತ್ರಕ್ಕೊಂದು ಶಾಯರಾನಿ ಆವರಣ ಕಟ್ಟಿಕೊಡುತ್ತದೆ. ಆಜಾನ್ ಹಿನ್ನಲೆಯಲ್ಲಿ, ಮಸೀದಿಯ ನೆರಳಲ್ಲಿ, ಕಗ್ಗತ್ತಲ ಗವಿಯಿಂದ ಒಂದೊಂದು ಹೆಜ್ಜೆಯಿಟ್ಟು, ವಯಸ್ಸಾದ ಗಾಲಿಬ್ ನಡೆದು ಬರುತ್ತಾನೆ. ಕತ್ತಲಲ್ಲಿ ಏನೂ ಕಾಣದು, ಕೇಳುವುದು ಅವನ ಹೆಜ್ಜೆಯ ಸದ್ದು ಮಾತ್ರ. ಆ ಕತ್ತಲಿಂದ ಕ್ಯಾಮೆರಾ ನಿಧಾನವಾಗಿ ಅಸದುಲ್ಲಾ ಗಾಲಿಬ್ ನ ಮುಖದ ಮೇಲೆ ಜೂಮ್ ಆಗುತ್ತದೆ, ಗಾಲಿಬನ ಮುಖದ ಸುಕ್ಕುಗಳಲ್ಲಿ ಒಂದು ಬದುಕಿನ ಹೋರಾಟವಷ್ಟೇ ಅಲ್ಲ, ಒಂದು ದೇಶದ ಹೋರಾಟದ ಕುರುಹುಗಳೂ ಕಾಣುತ್ತವೆ. ಗಾಲಿಬ್ ನ ಬದುಕಿನ ಪುಟಗಳು ನಮ್ಮೆದುರಲ್ಲಿ ತೆರೆದುಕೊಳ್ಳುತ್ತವೆ. ಅಲ್ಲಿಂದ ಪ್ರಾರಂಭವಾಗುವ ಸರಣಿ, ವರ್ತಮಾನದಿಂದ ಭೂತಕ್ಕೆ, ಭೂತದಿಂದ ಮತ್ತೆ ವರ್ತಮಾನಕ್ಕೆ ಚಲಿಸುತ್ತದೆ.

ಗಾಲಿಬ್ ಆಗ್ರಾದ ಹುಡುಗ, ದೆಹಲಿ ಅವನ ಮಾವನ ಮನೆಯಿರುವ ಊರು. ಆಗ್ರಾದಿಂದ ಬಂದಾಗ ಅವನ ಕಾವ್ಯ ನಾಮ- ‘ಅಸದ್’. ಆದರೆ ಆ ಹೆಸರಿನಲ್ಲಿ ಮತ್ತೊಬ್ಬ ಕವಿ ಕೆಟ್ಟ ಪದ್ಯಗಳನ್ನು ಬರೆಯುತ್ತಿರುತ್ತಾನೆ ಎಂದು ಅಸಾದುಲ್ಲ ತನ್ನ ಕಾವ್ಯನಾಮವನ್ನು ‘ಗಾಲಿಬ್’ ಎಂದು ಬದಲಾಯಿಸಿಕೊಳ್ಳುತ್ತಾನೆ.  ಆದರೆ ಅಲ್ಲಿ ಇನ್ನೊಂದು ಸೂಕ್ಷ್ಮ ಬದಲಾವಣೆಯೂ ಆಗಿರುತ್ತದೆ. ಪರ್ಷಿಯನ್ ಭಾಷೆಯಲ್ಲಿ ಶಾಯರಿ ಬರೆಯುತ್ತಿದ್ದ ಅಸಾದುಲ್ಲ ನಂತರ ಉರ್ದುವನ್ನು ತನ್ನದಾಗಿಸಿಕೊಳ್ಳುತ್ತಾನೆ, ಹೀಗೆ ಗಾಲಿಬ್ ಕಾವ್ಯ ಪಂಡಿತರ ಭಾಷೆಯಾದ ಪರ್ಷಿಯನ್ ಅನ್ನು ಬಿಟ್ಟು ಜನಸಾಮಾನ್ಯರ ಭಾಷೆಯನ್ನು ತನ್ನದಾಗಿಸಿಕೊಂಡು, ಜನಗಳಿಗೆ ಹತ್ತಿರಾಗುತ್ತಾನೆ. ಆಗ್ರಾದಿಂದ ಬಂದ ಗಾಲಿಬನನ್ನು ಮೊದಮೊದಲಿಗೆ ದೆಹಲಿ ತನ್ನವನೆಂದು ಒಪ್ಪಿಕೊಳ್ಳುವುದಿಲ್ಲ. ಆದರೆ ಆನಂತರ ಎದೆಯಲ್ಲಿಟ್ಟುಕೊಳ್ಳುತ್ತದೆ, ತಲೆಯ ಮೇಲೆ ಹೊತ್ತುಕೊಳ್ಳುತ್ತದೆ. ನವಾಬ್ ಜಾನಳ ಮಾತಿನಲ್ಲೇ ಹೇಳುವುದಾದರೆ ‘ಗಾಲಿಬ್ ಹಲವರ ಸಾಲದ ಋಣ ಹೊತ್ತಿರಬಹುದು ಆದರೆ ಮುಂದಿನ ಎಷ್ಟೋ ಪೀಳಿಗೆಯವರೆಗೂ ದೆಹಲಿ ಅವನ ಋಣ ತೀರಿಸಲು ಒದ್ದಾಡುತ್ತದೆ.’

ಗಾಲಿಬನನ್ನು ಕೇವಲ ಸಂಭಾಷಣೆಗಳಲ್ಲಿ ಹಿಡಿದಿಡುವುದು ಸರಿಯಾಗದು, ಹಾಗೆಂದೇ ಗುಲ್ಜಾರ್ ಸಂಭಾಷಣೆಗಳ ಜಾಗದಲ್ಲಿ ಬಹಳಷ್ಟು ಶೇರ್, ಶಾಯರಿಗಳನ್ನೇ ಬಳಸಿದ್ದಾರೆ.  ಹಾಗಾಗಿಯೇ ಅದರ ಪರಿಣಾಮ ಹೆಚ್ಚು ಅಥೆಂಟಿಕ್ ಹಾಗು ಕಾವ್ಯಾತ್ಮಕವಾಗುತ್ತದೆ. ಗಾಲಿಬನ ಶಾಯರಿಯನ್ನು ನಾಸಿರುದ್ದಿನ್ ಶಾ, ಜಗಜೀತ್ ಸಿಂಗ್ ಮತ್ತು ಚಿತ್ರಾಸಿಂಗ್ ದನಿಯಲ್ಲಿ ಕೇಳುವುದೇ ಒಂದು ಅನುಭೂತಿ. ಸರಣಿಯ ಪ್ರತಿಯೊಂದು ಭಾಗ ಒಂದು ಶಾಯರಿಯಿಂದ ಕೊನೆಯಾಗುತ್ತದೆ.

ನಾಸಿರುದ್ದೀನ್ ಶಾ ಗುಲ್ಜಾರ್ ಗೆ ಸಿಕ್ಕ ಒಂದು ವಜ್ರ. ಕವಿತೆಯನ್ನು ಹೇಳುವ ಕಲೆ ನಾಸಿರ್ ಗೆ ಗೊತ್ತು, ಕಣ್ಣನ್ನು ಕವಿತೆಯಾಗಿಸುವ ಕಲೆ ಅವನಿಗೆ ಗೊತ್ತು, ಹಾಗಾಗಿಯೇ ಅದು ಕಥಾ ಸರಣಿಯಾಗುವುದಕ್ಕಿಂತ ಹೆಚ್ಚಾಗಿ ಕಾವ್ಯ ಸರಣಿ ಆಗಿದೆ. ಗಾಲಿಬ್ ನ ಶೇರ್ ಗಳನ್ನು ಕವನವಾಗಿ ಅನುವಾದಿಸುವ ದಾರ್ಷ್ಟ್ಯ ನನ್ನಲ್ಲಿಲ್ಲ, ಆದ್ದರಿಂದ ಅದಕ್ಕೆ ಕನ್ನಡದಲ್ಲಿ ಅರ್ಥವನ್ನು ಮಾತ್ರ ವಿವರಿಸುತ್ತೇನೆ.

ಸರಣಿಯುದ್ದಕ್ಕೂ ಗುಲ್ಜಾರ್ ಗಾಲಿಬನ ಕವಿತೆಗಳ ಹಿರಿಮೆಯನ್ನು ವಾಚ್ಯವಾಗಿಸದೆ, ಸನ್ನಿವೇಶಗಳ ಮೂಲಕ ಕಟ್ಟಿಕೊಡುತ್ತಾರೆ. ಅದಕ್ಕೆ ಒಂದು ಉದಾಹರಣೆ, ಅವನ ಕವನಗಳನ್ನು ಓದಿ ಅವುಗಳನ್ನು ಪ್ರತಿ ಮಾಡುವ ಲಿಪಿಕಾರನ ಪ್ರತಿಕ್ರಿಯೆ. ತನ್ನ ಕೆಲಸವನ್ನೂ ಮರೆತು ಆತ ಕವನಗಳ ಮೋಡಿಗೆ ತಲೆಯಾಡಿಸುತ್ತಾ ಕುಳಿತುಬಿಡುತ್ತಾನೆ. ಆ ಕವನದ ಸಾಲುಗಳಾದರೂ ಎಂತಹವು?

’ದಾಯಿಮ್ ಪಡಾ ರಹಾ ತೇರೆ ದರ್ ಪರ್ ನಹೀ ಹೂ ಮೆ,

ಖಾಕ್ ಐಸಿ ಜಿಂದಗಿ ಪೆ ಕೆ ಪಥ್ಥರ್ ನಹಿ ಹೂ ಮೆ’

(ಸದಾ ಕಾಲ ನಿನ್ನ ಬಾಗಿಲಲ್ಲಿ ಕಾದು ನಿಲ್ಲಲು, ನಿನ್ನ ಹೊಸ್ತಿಲ ಪಕ್ಕದ ಧೂಳು ಮೆತ್ತಿದ ಕಲ್ಲಿನ ಮೆಟ್ಟಿಲು ನಾನಲ್ಲ)

ಪ್ರತಿ ಮಾಡುವ ಆ ಲಿಪಿಕಾರ ಗಾಲಿಬ್ ಬಳಿ ಬಂದು ಅವನ ಕವನಗಳಿಗೆ ಸಲಾಮ್ ಒಪ್ಪಿಸುತ್ತಾನೆ.

ಗಾಲಿಬ್ ಎಂದರೆ ಹಲವಾರು ವೈರುಧ್ಯಗಳ ಸಂಗಮ. ಅದ್ಭುತ ಕಲಾವಿದರಿಗಿರುವ ಆರ್ಥಿಕ ಅಶಿಸ್ತು, ಅಹಂಕಾರ ಗಾಲಿಬ್ ನಿಗೂ ಇತ್ತು. ಆತ ಹೆಜ್ಜೆಗೊಮ್ಮೆ ಸಾಲ ಮಾಡುತ್ತಾನೆ,  ಅದನ್ನು ತೀರಿಸಲಾಗದೆ, ಸಾಲಕೊಟ್ಟವರಿಗೆ ಹೊಸಹೊಸ ನೆಪಗಳನ್ನು ಹೇಳುತ್ತಾನೆ. ಕೆಲವು ಇತಿಹಾಸಕಾರರು ಇವನನ್ನು’ಪರಮ ಸುಳ್ಳುಗಾರ’ ಎಂದು ನೆನಪಿಸಿಕೊಳ್ಳುತ್ತಾರೆ. ‘ಗಾಲಿಬನ ಅದೆಲ್ಲಾ ಸಾಲವನ್ನೂ ತೀರಿಸುವ ಅದೃಷ್ಟ ನನ್ನದಾಗಿದ್ದರೆ….’ ಎಂದು ಗುಲ್ಜಾರ್ ನಿಟ್ಟುಸಿರಿಡುತ್ತಾರೆ.

ತನ್ನ ಕವಿತೆಗಳ ಬಗ್ಗೆ ಗಾಲಿಬನಿಗೆ ಒಂದು ಅಹಂಕಾರವಿರುತ್ತದೆ, ಕವಿಗೆ ಅದು ಅಲಂಕಾರವೂ ಹೌದು. ‘ಹೈ ಔರ್ ಭಿ ದುನಿಯಾ ಮೆ ಸುಖನ್ವರ್ ಬಹುತ್ ಅಚ್ಛೆ, ಕೆಹತೆ ಹೈ ಕಿ ಗಾಲಿಬ್ ಕ ಅಂದಾಜ್-ಎ ಬಯಾನ್ ಔರ್’ (ಪ್ರಪಂಚದಲ್ಲಿ ಇನ್ನೂ ಬಹಳಷ್ಟು ಕವಿಗಳು ಆಗಿಹೋದ್ದಾರೆ, ಆದರೆ ಗಾಲಿಬ್ ಕವನವನ್ನು ಕಟ್ಟುವ ಸೊಗಸೇ ಬೇರೆ!) ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅದೇ ಗಾಲಿಬ್ ಫಕೀರನೊಬ್ಬ ಹಾಡುವ ಮೀರ್ ತಕಿ ಮೀರ್ ನ ಶಾಯರಿಯನ್ನು ಕೇಳಿ, ’ರೇಖ್ತೆ ಕಿ ತುಮ್ಹೀ ಉಸ್ತಾದ್ ನಹಿ ಗಾಲಿಬ್, ಕೆಹತೆ ಹೈ ಅಗಲೆ ಜಮಾನೆ ಮೆ ಕೋಯಿ ಮೀರ್ ಭೀ ಥಾ!’ (ಬರಹದ ಜಗತ್ತಿನಲ್ಲಿ ನೀನೊಬ್ಬನೇ ದೊಡ್ಡವನಲ್ಲ ಗಾಲಿಬ್, ನಿನಗಿಂತ ಮೊದಲು ಮೀರ್ ಅನ್ನುವ ಕವಿ ಸಹ ಇದ್ದನಂತೆ!) ಎಂದು ಹೇಳುವಷ್ಟು ವಿನಯಿಯೂ ಹೌದು. ಅವನಿಗೆ ಒಂದು ವಿಚಿತ್ರವಾದ ಅಭ್ಯಾಸ ಇರುತ್ತದೆ.  ಮನಸ್ಸಿನಲ್ಲಿ ಕವನದ ಸಾಲುಗಳು ಮೂಡುತ್ತಿದ್ದ ಹಾಗೇ ಕೈಯಲ್ಲಿರುವ ಕರವಸ್ತ್ರದಲ್ಲಿ ಒಂದು ಗಂಟು ಹಾಕುತ್ತಿದ್ದನಂತೆ. ಮರುದಿನ ಅದನ್ನು ದಾಖಲಿಸುವಾಗ ಆ ಗಂಟುಗಳನ್ನು ಸಡಲಿಸುತ್ತಿದ್ದನಂತೆ. ಆ ಗಂಟುಗಳು ಅವನ ನೆನಪಿಗೆ ದಿಕ್ಸೂಚಿಗಳು.

ದೆಹಲಿಯ ಆಸ್ಥಾನದ ಚಕ್ರವ್ಯೂಹವನ್ನು ಬೇಧಿಸುವುದು ಗಾಲಿಬನಿಗೆ ಸುಲಭದ ಕೆಲಸವಾಗಿರುವುದಿಲ್ಲ. ಮೊದಲ ಸಲ ಅವನಿಗೆ ಆಸ್ಥಾನದ ಕವಿಗೋಷ್ಟಿಯಲ್ಲಿ ಕವನ ಓದಲು ಆಹ್ವಾನ ಬಂದಾಗ ಅಲ್ಲಿ ಉಳಿದ ಕವಿಗಳು, ಅದರಲ್ಲೂ ಜೌಕ್ ಆತನ ಬಗ್ಗೆ ತೋರಿಸುವ ಉಪೇಕ್ಷೆಯನ್ನು ಸಹಿಸಲಾರದೆ ಕವಿಗೋಷ್ಠಿಯನ್ನೇ ಬಿಟ್ಟು ಆತ ಎದ್ದು ಬರುತ್ತಾನೆ.

’ಹೇ ರಬ್, ಜಮಾನ ಮುಝ್ ಕೊ ಮಿಟಾತ ಹೈ ಕಿಸ್ ಲಿಯೆ?

ಲೋಹ್ ಎ ಜಹಾನ್ ಪೆ ಹರ್ಫೆ ಮುಕರರ್ ನಹಿ ಹೂ ಮೆ’

(ದೇವರೆ, ಈ ಜಗತ್ತು ಏಕೆ ನನ್ನನ್ನು ಅಳಿಸಲು ಪ್ರಯತ್ನಿಸುತ್ತದೆ?

ಜಗತ್ತೆನ್ನುವ ಈ ಹಲಗೆಯ ಮೇಲೆ, ಪುನರಾವರ್ತನೆಗೊಂಡ ಅಕ್ಷರವಲ್ಲ ನಾನು)

ಎನ್ನುವ ಆತ್ಮವಿಶ್ವಾಸವೊಂದೇ ಅವನನ್ನು ಕಾಪಾಡುತ್ತದೆ.

ಯಾವ ಜೌಕ್ ನಿಂದ ಆತ ಅಪಮಾನಿತನಾಗುತ್ತಾನೆಯೋ ಅದೇ ಜೌಕ್ ನ ಕಾರಣದಿಂದಲೇ ಆತ ದೆಹಲಿಯ ಆಸ್ಥಾನದಲ್ಲಿ, ದೆಹಲಿಗರ ಮನಸ್ಸಿನಲ್ಲಿ ನೆಲೆಯಾಗುವ ಘಟನೆ ಸೊಗಸಾಗಿದೆ.

ಒಂದು ಸಲ ಜೌಕ್ ಪಲ್ಲಕ್ಕಿಯಲ್ಲಿ ಜಂಬದಿಂದ ಹೋಗುತ್ತಿರುತ್ತಾನೆ. ಅವನನ್ನು ಕೆಣಕಲೆಂದೇ ಗಾಲಿಬ್ ’ಹುವಾ ಹೈ ಶಾಹ್ ಕ ಮುಸಾಹಿಬ್, ಫಿರೆ ಹೈ ಇತ್ ರಾತ’ (ದೊರೆಯ ಕೃಪಾಕಟಾಕ್ಷ ಬಿದ್ದಿದೆ, ಅದಕ್ಕೇ ಈ ಬೀಗುವ ನಡಿಗೆ) ಎಂದು ಹೇಳುತ್ತಾನೆ. ಜೌಕ್ ಕುದ್ದುಹೋಗುತ್ತಾನೆ. ದೊರೆಯ ಬಳಿ ದೂರನ್ನೂ ಒಯ್ಯುತ್ತಾನೆ. ಅಂದು ಆಸ್ಥಾನದಲ್ಲಿ ನಡೆಯುವ ಕವಿಗೋಷ್ಠಿಗೆ ಮತ್ತೆ ಗಾಲಿಬನಿಗೆ ಆಹ್ವಾನ ಬರುತ್ತದೆ. ಅಲ್ಲಿ ಕವಿಗೋಷ್ಠಿಯ ಆರಂಭಕ್ಕೆ ಮೊದಲೇ ಈ ಮಾತು ಬರುತ್ತದೆ. ನೇರವಾಗಿ ಕೇಳಿದಾಗ ಗಾಲಿಬ್ ಅದು ತನ್ನ ಕವಿತೆಯೊಂದರ ಸಾಲು ಎಂದುಬಿಡುತ್ತಾನೆ. ಹಾಗಾದರೆ ಅದರ ಮುಂದಿನ ಸಾಲೇನು ಎಂದು ಕೇಳಿದಾಗ,

’ಹುವಾ ಹೈ ಶಾ ಕ ಮುಸಾಹಿಬ್, ಫಿರೆ ಹೈ ಇತ್ ರಾತ,

ವರ್ನಾ ಶೆಹರ್ ಮೆ ಗಾಲಿಬ್ ಕಿ ಆಬ್ರೂ ಕ್ಯಾ ಹೈ’

(ದೊರೆಯ ಕೃಪಾಕಟಾಕ್ಷ ಬಿದ್ದಿದೆ, ಅದಕ್ಕೇ ಈ ಬೀಗುವ ನಡಿಗೆ

ಅದುಬಿಟ್ಟರೆ ಗಾಲಿಬ್ ನಿನಗಿರುವ ಹಿರಿಮೆಯಾದರೂ ಇನ್ನೇನು?)

ಎಂದು ಬುದ್ಧಿವಂತಿಕೆ ಮತ್ತು ಸಮಯಸ್ಪೂರ್ತಿಯಿಂದ ಹೇಳಿಬಿಡುತ್ತಾನೆ. ಆದರೆ ಜೌಕ್ ಅದಕ್ಕೂ ಬಿಡುವುದಿಲ್ಲ, ಕವಿತೆಯ ಈ ಸಾಲುಗಳೇ ಇಷ್ಟು ಚೆನ್ನಾಗಿರಬೇಕಾದರೆ, ಮಿಕ್ಕ ಸಾಲುಗಳು ಹೇಗಿರಬಹುದು, ಇದೇ ಕವಿತೆಯನ್ನು ಗಾಲಿಬ್ ಇಂದು ಓದಬೇಕು ಎಂದು ಮನವಿ ಮಾಡುತ್ತಾನೆ.  ಒಂದಿಷ್ಟೂ ಹಿಂಜರಿಯದ ಗಾಲಿಬ್, ಜೇಬಿನಿಂದ ಖಾಲಿ ಹಾಳೆಯೊಂದನ್ನು ತೆಗೆದು ಅದರಿಂದ ಓದುವವನಂತೆ ನಟಿಸುತ್ತಾ, ಆ ಸಾಲುಗಳ ಸುತ್ತ ಒಂದು ಸುಂದರವಾದ ಕವಿತೆಯನ್ನು ಅಲ್ಲಿ ಆ ಕ್ಷಣದಲ್ಲಿ ಕಟ್ಟುತ್ತಾನೆ. ಜೌಕ್ ಸಮೇತ ಇಡೀ ಆಸ್ಥಾನ, ಅದಕ್ಕೆ ’ವಾಹ್, ವಾಹ್’ಗಳ ಮಳೆಗರೆಯುತ್ತದೆ! ಗಾಲಿಬ್ ನ ಕವಿತೆಗಳಿಂದಾಗದ ಕೆಲಸ ಅವನ ಈ ಅಶುಕವಿತೆಯಿಂದ ಆಗಿಬಿಡುತ್ತದೆ.  ಗಾಲಿಬ್ ದೆಹಲಿಯ ಮನೆಮಾತಾಗುತ್ತಾನೆ. ಕಾವ್ಯ ಗೆಲ್ಲುವುದು ಹೀಗೆ, ಗೊತ್ತೇ ಆಗದ ಮಾಯಿಯಿಂದ ಬಿಗಿದಿಟ್ಟ ತುಟಿಗಳ ನಡುವಿಂದ ’ವಾಹ್’ ಹೊರಬಂದುಬಿಡುತ್ತದೆ.

ಅಷ್ಟು ಕಷ್ಟಗಳ ನಡುವೆಯೂ ಗಾಲಿಬನ ಹಾಸ್ಯಪ್ರವೃತ್ತಿ ಕುಗ್ಗಿರಲಿಲ್ಲ. ಅದನ್ನು ಸಾಬೀತುಮಾಡುವ ಹಲವಾರು ಸನ್ನಿವೇಶಗಳನ್ನು ಗುಲ್ಜಾರ್ ಕಟ್ಟಿಕೊಡುತ್ತಾರೆ.  ಒಮ್ಮೆ ಗಾಲಿಬನ ಹೆಂಡತಿ ’ನೀನು ನಮಾಜ್ ಮಾಡುವುದಿಲ್ಲ, ಅದಕ್ಕೇ ದೇವರು ನಿನ್ನ ಮಾತನ್ನು ಕೇಳುವುದಿಲ್ಲ’ ಎಂದಾಗ ಆತ ನಗುತ್ತಾ ಹೇಳುವ ಮಾತು, ’ಬಹುಶಃ ದೇವರಿಗೆ ಕವಿತೆ ಅರ್ಥವಾಗುವುದಿಲ್ಲವೇನೋ!’.

ಮತ್ತೊಮ್ಮೆ ಗೆಳೆಯನೊಬ್ಬ ಗಾಲಿಬ್ ಕೊಟ್ಟ ಮದ್ಯ ನಿರಾಕರಿಸುತ್ತಾನೆ. ಯಾಕೆ ನಿನಗೆ ಮದ್ಯ ಎಂದರೆ ಅಷ್ಟು ದ್ವೇಷ ಎಂದು ಗಾಲಿಬ್ ಕೇಳುತ್ತಾನೆ. ಆಗ ಆ ಗೆಳೆಯ ’ಕುಡಿದಾಗ ಮಾಡುವ ಪ್ರಾರ್ಥನೆಯನ್ನು ದೇವರು ಮನ್ನಿಸುವುದಿಲ್ಲ’ ಎಂದು ಗಂಭೀರವಾಗಿ ಹೇಳುತ್ತಾನೆ. ಗಲಿಬಿಲಿಗೊಂಡು ಅವನನ್ನು ನೋಡುವ ಗಾಲಿಬ್, ಪರಮ ಮುಗ್ಧನಂತೆ, ’ಅಲ್ಲಪ್ಪಾ, ಮದ್ಯ ಇರುವಾಗ ಇನ್ನ್ಯಾವುದಕ್ಕೆ ಪ್ರಾರ್ಥನೆ ಮಾಡಬೇಕು’ ಎಂದು ಕೇಳುತ್ತಾನೆ!

ಮಾವಿನ ಹಣ್ಣು ಎಂದರೆ ಗಾಲಿಬನಿಗೆ ಇನ್ನಿಲ್ಲದ ಪ್ರೀತಿ. ಎಣಿಕೆಯೇ ಇಲ್ಲದಂತೆ ಮಾವಿನಹಣ್ಣು ತಿನ್ನುತ್ತಿರುತ್ತಾನೆ. ಅವನ ಗೆಳೆಯನೊಬ್ಬನಿಗೆ ಮಾವಿನಹಣ್ಣೆಂದರೆ ಆಗುವುದಿಲ್ಲ. ಒಮ್ಮೆ ಅವರೆಲ್ಲಾ ಹರಟೆಹೊಡೆಯುತ್ತಿರುವಾಗ ಒಂದು ಕತ್ತೆ ಬರುತ್ತದೆ. ಮಾವಿನ ಸಿಪ್ಪೆಯನ್ನು ಮೂಸಿದ ಅದು ಸುಮ್ಮನೆ ಮುಂದೆ ಹೋಗಿಬಿಡುತ್ತದೆ. ಗಾಲಿಬ್ ನನ್ನು ಕಿಚಾಯಿಸಲೆಂದು ಆ ಗೆಳೆಯ, ’ನೋಡಪ್ಪ, ಕತ್ತೆ ಸಹ ಮಾವಿನಹಣ್ಣು ತಿನ್ನೋಲ್ಲ’ ಎನ್ನುತ್ತಾನೆ. ಕಿಡಿಗೇಡಿ ನಗು ನಗುತ್ತಾ ಗಾಲಿಬ್, ’ಹೌದಪ್ಪ, ಕತ್ತೆಗಳು ಮಾವು ತಿನ್ನುವುದಿಲ್ಲ’ ಎನ್ನುತ್ತಾನೆ!

ಹೊರಗಿನ ಲೋಕದ ಅಷ್ಟೆಲ್ಲಾ ಕೋಟಲೆಗಳ ನಡುವೆಯೂ ಗಾಲಿಬ್ ತನ್ನ ಒಳಗಿನ ಲೋಕವನ್ನು ಕಹಿ ಮಾಡಿಕೊಳ್ಳದೆ ಇರುವುದನ್ನು ಈ ಪ್ರಸಂಗಗಳು ಕಟ್ಟಿಕೊಡುತ್ತವೆ.

ಅವನಿಗೂ ಅವನ ಖುದಾನಿಗೂ ವಿಚಿತ್ರವಾದ ಅನುಬಂಧ ಇರುತ್ತದೆ. ದೇವರ ಬಳಿ ಅದು ಕೊಡು ಇದು ಕೊಡು ಎಂದು ಬೇಡುತ್ತಾ ಹೋಗುವುದು ಅವನಿಗೆ ಆಗಿಬರುವುದಿಲ್ಲ. ಅವನ ಈ ಮನೋಭಾವವನ್ನು ಹೆಂಡತಿ ಆಕ್ಷೇಪಿಸಿದಾಗ ಅವನು ಹೇಳುವುದು ಒಂದೇ ಮಾತು, ’ಸಜದೆ ಮೆ ನಹೀ ಗಯೆ, ತೊ ಶಿಕ್ವಾ ಭಿ ನಹಿ ಕಿಯಾ,’ (ಅವನ  ಪೂಜೆಗೆ ಹೋಗಲಿಲ್ಲ ಅನ್ನುವುದೇನೋ ನಿಜ, ಆದರೆ ಅವನನ್ನು ಎಂದೂ ಯಾವುದಕ್ಕೂ ಆಕ್ಷೇಪಿಸಲೂ ಇಲ್ಲ). ವಯಸ್ಸಾದ ಮೇಲೆ ಆಜಾನ್ ಕೂಗು ಕೇಳಿ ಎದ್ದು ಮಸೀದಿಯವರೆಗೂ ಹೋಗುವ ಗಾಲಿಬ್ ಎಂದೂ ಒಳಗೆ ಹೋಗುವುದಿಲ್ಲ, ಹೆಂಡತಿ ಕೇಳಿದರೆ, ’ಆಗ ದಿನಕ್ಕೆ ಐದು ಸಲ ಅವನು ನನ್ನನ್ನು ಕರೆದ, ನಾನು ಹೋಗಲಿಲ್ಲ, ಈಗ ಏನೆಂದು ಹೋಗಲಿ’ ಎನ್ನುತ್ತಾನೆ.  ಆದರೆ ಮುಂಜಾನೆ ಎದ್ದು ಮಸೀದಿಯವರೆಗೂ ನಡೆಯುವ ಪರಿಪಾಠವನ್ನು ತಪ್ಪಿಸುವುದಿಲ್ಲ.

ಉಮ್ರಾವ್ ಗಾಲಿಬನ ಹೆಂಡತಿ. ಅವನ ಬಾಲ್ಯದ ಗೆಳತಿ. ಅವಳನ್ನು ಮದುವೆಯಾದ ಗಾಲಿಬ್, ಆಗ್ರಾದಿಂದ ದೆಹಲಿಗೆ ಬಂದು ನೆಲೆಸುತ್ತಾನೆ. ಬಾಲ್ಯದಲ್ಲಿ ಗೆಳೆಯರಾಗಿದ್ದರೂ ಬೆಳೆಯುತ್ತಾ ಬೆಳೆಯುತ್ತಾ ಇಬ್ಬರ ವ್ಯಕ್ತಿತ್ವಗಳೂ ಬೇರೆಯಾಗುತ್ತಾ ಹೋಗುತ್ತವೆ. ಇಬ್ಬರ ನಡುವೆ ಸ್ನೇಹವಿರುತ್ತದೆ, ಆದರೆ ಅಂತರವೂ ಇರುತ್ತದೆ. ಗಾಲಿಬ್ ನ ಸ್ವಭಾವದಿಂದ ಬೇಸತ್ತ ಉಮ್ರಾವ್ ದೇವರೆಡೆಗೆ ವಾಲುತ್ತಾಳೋ ಅಥವಾ ಉಮ್ರಾವ್ ಳ ಅತಿಯಾದ ದೈವಭಕ್ತಿ ಗಾಲಿಬ್ ನನ್ನು ಅವಳಿಂದ ವಿಮುಖನನ್ನಾಗಿಸುತ್ತದೋ ಹೇಳಲಾಗುವುದಿಲ್ಲ. ಇಬ್ಬರನ್ನೂ ಬೆಸೆಯಬಹುದಾಗಿದ್ದ ಮಕ್ಕಳು ಉಳಿಯುವುದಿಲ್ಲ. ಅವರಿಬ್ಬರ ನಡುವೆ ಒಂದು ಸಾಮಾನ್ಯ ಎಳೆಯೇ ಇಲ್ಲದಾಗುತ್ತದೆ. ಗಾಲಿಬ್ ನ ಕುಡಿತ ಮತ್ತು ಜೂಜನ್ನು ಭರಿಸಲಾಗದ ಉಮ್ರಾವ್ ತನ್ನ ತಟ್ಟೆ, ಬಟ್ಟಲುಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುತ್ತಾಳೆ. ಅದು ಗಾಲಿಬ್ ನನ್ನು ಘಾಸಿಗೊಳಿಸಿತ್ತು ಎಂದು ಹೇಳುತ್ತಾರೆ. ಇದೇನೆ ಇದ್ದರೂ ಅವರು ಕಡೆಯವರೆಗೂ ಒಂದೇ ಮನೆಯಲ್ಲೇ ಇರುತ್ತಾರೆ. ಒಂದೇ ಮನೆಯಲ್ಲಿದ್ದರೂ ಇಬ್ಬರ ಜಗತ್ತೂ ಬೇರೆ ಬೇರೆ. ನೆಲಮಹಡಿಯಲ್ಲಿ ಉಮ್ರಾವ್ ಳ ಜಗತ್ತು, ಮಹಡಿಯ ಮೇಲೆ ಗಾಲಿಬ್ ಜಗತ್ತು. ನಡುವೆ ಮೆಟ್ಟಿಲುಗಳು. ಇದನ್ನು ಗುಲ್ಜಾರ್ ಒಂದು ರೂಪಕದಂತೆ ಬಳಸಿಕೊಂಡಿದ್ದಾರೆ.

ಗಾಲಿಬ್ ದಂಪತಿ ಮಕ್ಕಳನ್ನು ಕಳೆದುಕೊಳ್ಳುವ ಒಂದು ಸನ್ನಿವೇಶವನ್ನು ಗುಲ್ಜಾರ್ ಕಟ್ಟಿಕೊಡುತ್ತಾರೆ. ಗಾಲಿಬ್ ಪ್ರತಿ ಮಾಡಿಸಿ ಕಳಿಸಿದ್ದ ಕವನಗಳನ್ನು ಮುದ್ರಿಸಲು ಯಾವ ಪ್ರಕಾಶಕರೂ ಮುಂದೆ ಬರುತ್ತಿಲ್ಲ. ಅದೇ ಸಮಯದಲ್ಲಿ ಅವನ ಹೆಂಡತಿಗೆ ಹೆರಿಗೆ ಆಗುತ್ತದೆ. ಮತ್ತೆ ಮಗು ಸತ್ತು ಹುಟ್ಟಿದೆ. ಅವೆರಡನ್ನೂ ಗುಲ್ಜಾರ್ ಅತ್ಯಂತ ಸೂಕ್ಷ್ಮವಾಗಿ ಸಮೀಕರಿಸುತ್ತಾರೆ. ಮಗು ಸತ್ತ ಸುದ್ದಿ ಕೇಳಿ ಜಗತ್ತಿನ ಭಾರವೇ ಹೆಗಲ ಮೇಲಿದೆಯೇನೋ ಎನ್ನುವಂತೆ ಮಹಡಿಯ ಒಂದೊಂದೇ ಮೆಟ್ಟಿಲು ಹತ್ತುವ ಗಾಲಿಬ್… ಅವನು ಅಷ್ಟೂ ಮೆಟ್ಟಿಲುಗಳನ್ನೂ ಹತ್ತುವುದನ್ನು ಬೇಕೆಂದೇ ಗುಲ್ಜಾರ್ ತೋರಿಸಿದ್ದಾರೆ, ಆ ದೀರ್ಘ ಸಮಯದಲ್ಲಿ ಆ ನೋವಿನ ತೀವ್ರತೆ ನಮ್ಮನ್ನು ಅಲ್ಲಾಡಿಸುತ್ತದೆ.

ಅಷ್ಟರಲ್ಲಿ ಮಹಡಿಯಲ್ಲಿ ಕವನದ ಪ್ರತಿ ಮಾಡಿಸಿಟ್ಟಿದ್ದ ಎಲ್ಲಾ ಹಾಳೆಗಳೂ ಗಾಳಿಗೆ ಒಂದೊಂದಾಗಿ ಹಾರಿ ಹೋಗುತ್ತವೆ. ಕಡೆಗೆ ಉಳಿದ ಒಂದು ಹಾಳೆಯನ್ನು ಕೈಗೆತ್ತಿಕೊಂಡ ಗಾಲಿಬ್ ನ ಕಣ್ಣುಗಳ ತುಂಬಾ ನೀರು…. ಅದನ್ನು ಒಂದು ಘಳಿಗೆ ದಿಟ್ಟಿಸಿ ನೋಡುವ ಆತ ಆ ಹಾಳೆಯನ್ನು ಕೈಯಿಂದ ಚೆಲ್ಲುತ್ತಾನೆ.  ಕಳೆದುಕೊಂಡ ಮಗುವಿನ ಮುಂದೆ ತನ್ನ ಕವಿತೆ ಅವನಿಗೆ ಆ ಘಳಿಗೆಯಲ್ಲಿ ಕ್ಷುಲ್ಲಕ ಅನ್ನಿಸಿಬಿಡುತ್ತದೆ. ಆ ಕ್ಷಣದಲ್ಲಿ ಗಾಲಿಬ್ ಕವಿಯಾಗಿ ಅಲ್ಲ, ಒಬ್ಬ ತಂದೆಯಾಗಿ, ಮನುಷ್ಯನಾಗಿ ಹೆಚ್ಚು ಹತ್ತಿರವಾಗುತ್ತಾನೆ.

ಗಾಲಿಬ್ ಹಲವಾರು ಗಜಲ್ ಗಳನ್ನು ಬರೆದಿದ್ದಾನೆ.  ಆದರೆ ಅವನ ಬದುಕಿಗೆ ಥೇಟ್ ಒಂದು ಗಜಲ್ ನಷ್ಟು ಮಧುರವಾಗಿ, ಒಂದು ಹಾಡಿನಷ್ಟೇ ಸಮಯಕ್ಕೆ, ಶಾಲ್ಮಲೆಯಂತೆ ಬಂದವಳು ನವಾಬ್ ಜಾನ್, ದೆಹಲಿಯ ನರ್ತಕಿ, ಕೋಠೆವಾಲಿ.  ತಂಗಾಳಿಯಲ್ಲಿ ತೇಲಿಬಂಧ ಯಾವುದೋ ಸುಗಂಧದ ಅಲೆಯಂತೆ ಗಾಲಿಬನ ಕವಿತೆಯ ಸಾಲುಗಳು ಅವಳ ಬಳಿ ಬರುತ್ತವೆ.  ಅಂಗಡಿಯಿಂದ ಬಂದ ಪೊಟ್ಟಣದಲ್ಲಿ ಸಿಕ್ಕ ಎರಡು ಸಾಲುಗಳನ್ನು ಓದಿ ಅವಳು ತನ್ನೆದೆಯನ್ನು ’ತಟ್ಟನೆ ಪಸಾಯದಾನವಾಗಿ’ ಕವಿಗೆ ಕೊಟ್ಟು ಬಿಡುತ್ತಾಳೆ.

ಆ ಎರಡು ಸಾಲುಗಳನ್ನೇ ಅವಳು ಗುನುಗುನಿಸುತ್ತಿರುತ್ತಾಳೆ.  ಅವಳ ಮನೆ ಎದುರಿಗಿನ ಪುಸ್ತಕದ ಅಂಗಡಿಯಲ್ಲಿರುವ ಗಾಲಿಬ್ ನ ಕಿವಿಗೆ ಆ ಹಾಡು ತಲುಪುತ್ತದೆ.  ಆ ಕಾಲಘಟ್ಟದಲ್ಲಿ ಗಾಲಿಬ್ ನ ಆತ್ಮವಿಶ್ವಾಸ ಇನ್ನಿಲ್ಲದಂತೆ ಕುಸಿದಿರುತ್ತದೆ. ಆಸ್ಥಾನದ ಕವಿಗೋಷ್ಥಿಯಲ್ಲಿನ ಉಪೇಕ್ಷೆ ಅವನನ್ನು ಒಳಗೊಳಗೆ ತಿಂದು ಹಾಕಿರುತ್ತದೆ. ಅವನ ಕವಿತೆಗಳನ್ನು ಕೇಳುವವರಿಲ್ಲ, ಓದುವವರಿಲ್ಲ, ಮೆಚ್ಚಿಕೊಳ್ಳುವವರಿಲ್ಲ. ಇಂತಹ ಆತ್ಮನ್ಯೂನತಾ ಸ್ಥಿತಿಯಲ್ಲಿದ್ದಾಗ ಆ ದನಿ ಅವನ ಪಾಲಿಗೆ ’ದೂರದೊಂದು ತೀರದಿಂದ ತೇಲಿ ಬಂದ ಪಾರಿಜಾತ ಗಂಧ’.  ಅವನ ಮುಖವನ್ನು ಒಂದು ದಿವ್ಯವಾದ ಮುಗುಳ್ನಗು ಆವರಿಸುತ್ತದೆ. ’ಮೊದಲ ಸಲ ದಿಲ್ಲಿಯಲ್ಲಿ ನನ್ನ ಕವಿತೆಯನ್ನು ಇನ್ನೊಬ್ಬರ ಕಂಠದಿಂದ ಕೇಳುತ್ತಿದ್ದೇನೆ, ಭೂಮಿಯ ಈ ಶಬ್ಧಗಳನ್ನು ಆಗಸದ ಸ್ವರ್ಗಕ್ಕೆ ತಲುಪಿಸಿದ್ದು ಯಾರು’ ಎಂದುಕೊಳ್ಳುತ್ತಾನೆ. ಪುಂಗಿಯ ನಾದಕ್ಕೆ ತಲೆದೂಗುವ ಹಾವಿನಂತೆ ಆ ದನಿಯ ಬೆನ್ನು ಹತ್ತಿ ಮೆಟ್ಟಿಲೇರುತ್ತಾ ಅವನು ಅವಳ ಕೋಠಿಗೆ ಹೋಗುತ್ತಾನೆ.

ಹೋದವನು ತಾನೇ ಗಾಲಿಬ್ ಎಂದು ಹೇಳುವುದಿಲ್ಲ, ಅವನ ಗೆಳೆಯ ಎನ್ನುತ್ತಾನೆ.  ಅವಳ ಕೈಲಿದ್ದ ಆ ಎರಡು ಸಾಲುಗಳ ಜೊತೆಯ ಮಿಕ್ಕ ಸಾಲುಗಳನ್ನು ಹೇಳಿ ಕವಿತೆಯನ್ನು ಪೂರ್ಣಗೊಳಿಸುತ್ತಾನೆ, ಅವಳ ಕಣ್ಣುಗಳಲ್ಲಿ ಇನ್ನಿಲ್ಲದ ಬೆರಗು. ತುಂಬು ಆರಾಧನೆಯಿಂದ, ’ಈ ಸಾಲುಗಳನ್ನು ಬರೆದಿಟ್ಟುಕೊಳ್ಳಲಾ’ ಎಂದು ಕೇಳುತ್ತಾಳೆ. ಇವನ ಎಲ್ಲಾ ನೋವಿಗೂ ಆ ಘಳಿಗೆಯಲ್ಲಿ ಬೆಳಗಿನ ಎಳೆಬಿಸಿಲ ದಯೆ ಸಿಕ್ಕಿಬಿಡುತ್ತದೆ. ’ಪೂಚ್ತೆ ಹೈ ವೊ ಕೆ ಗಾಲಿಬ್ ಕೌನ್ ಹೈ, ಕೋಯಿ ಬತ್ಲಾವ್ ಯಾ ಹಮ್ ಬತ್ಲಾಯೆ ಕ್ಯಾ?’ (ಗಾಲಿಬ್ ಅಂದರೆ ಯಾರು ಎಂದು ನನ್ನನ್ನೇ ಕೇಳುತ್ತಾಳೆ, ಯಾರಾದರೂ ಹೇಳುವಿರಾ ಇಲ್ಲ ನಾನೇ ಹೇಳಲಾ?!) ಎಂದು ನಗುತ್ತಾ ಹೊರಟವನ ಹೆಜ್ಜೆಗಳಲ್ಲಿ ಮೋಡಗಳ ರೆಕ್ಕೆ!  ಒಬ್ಬ ಪಕೀರ ಮತ್ತು ಒಬ್ಬ ನರ್ತಕಿ ಇಬ್ಬರೂ ಹಾಡಬಲ್ಲ ಕವಿತೆಗೆ ಸಾವೆಲ್ಲಿದೆ ಎಂದು ಗುನುಗುತ್ತಾ ಹಗುರಾಗಿ ನಗುತ್ತಾ ಹೆಜ್ಜೆಹಾಕುತ್ತಾನೆ.

ಅವನು ಹೊರಡುತ್ತಾನೆ, ಆದರೆ ನವಾಬ್ ಜಾನ್ ಅದನ್ನು ಹಾಗೆಯೇ ಬಿಡುವುದಿಲ್ಲ.  ಗಾಲಿಬನ ಕವಿತೆ ಎನ್ನುವ ಶರಾಬು ಕುಡಿದವಳಿಗೆ ತೀರದ ದಾಹ.  ಇಲ್ಲಿ ಗಾಲಿಬನ ಪರಿಸ್ಥಿತಿ ಸಹ ಬೇರೆಯಾಗಿಲ್ಲ. ಗಜಲ್ ಕಟ್ಟುತ್ತಾ ಕಟ್ಟುತ್ತಾ ಹೆಂಡತಿಯ ದುಪ್ಪಟ್ಟಾದ ಸೆರಗಿಗೆ ಗಂಟು ಹಾಕುತ್ತಿರುತ್ತಾನೆ, ಅಲ್ಲಿ ಬಂದ ಹೆಂಡತಿ ಏನು ಮಾಡುತ್ತಿರುವೆ ಎನ್ನುತ್ತಾಳೆ. ’ಗಜಲ್ ಹಾಗೆ ನೋಡು, ಇಲ್ಲಿ ಗಂಟು ಹಾಕುತ್ತೀನಿ, ಮತ್ತೆಲ್ಲೋ ಮುಡಿ ಬೀಳುತ್ತದೆ…’ – ಕವಿ ಉತ್ತರಿಸುತ್ತಾನೆ.  ಮತ್ತಷ್ಟು ಕವಿತೆಗಳನ್ನು ಬೇಡಿ ನವಾಬ್ ಜಾನ್ ತನ್ನ ಮನೆಗೆಲಸದವನ್ನು ಗಾಲಿಬನ ಮನೆಗೆ ಕಳಿಸುತ್ತಾಳೆ.

’ದಿಲ್ ಎ ನಾದಾನ್ ತುಝೆ ಹುವಾ ಕ್ಯಾ ಹೈ,

ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ?

ಹಮ್ ಕೊ ಉನ್ ಸೆ ಹೈ ವಫಾ ಕಿ ಉಮ್ಮೀದ್

ಜೋ ನಹಿ ಜಾನ್ ತೆ ಹೈ, ವಫಾ ಕ್ಯಾ ಹೈ’

(ಹೇ ಮರುಳು ಹೃದಯವೆ, ನಿನಗೆ ಆಗಿರುವುದಾದರೂ ಏನು? ಈ ನೋವಿಗೆ ಔಷಧಿಯಾದರು ಏನು?

ನಂಬಿಕೆ ಎಂದರೆ ಏನು ಎಂದು ಗೊತ್ತಿಲ್ಲದವರ ಬಳಿ ನನಗೆ ನಂಬಿಕೆಯ ನಿರೀಕ್ಷೆಯಾದರೂ ಏಕೆ?)

ಗಾಲಿಬ್ ನ ಬಾಯಿಂದ ಹೊಸದೊಂದು ಶಾಯಿರಿ.

’ಒಮ್ಮೆ ನನ್ನ ಮನೆಗೆ ಬನ್ನಿ, ನಿಮ್ಮದೇ ಗಜಲ್ ನಿಮ್ಮ ಮುಂದೆ ಹಾಡಬೇಕಿದೆ… ’ಶಾಯದ್ ಕಿಸಿ ಕೋ ಜೀನೆ ಕ ವಜಹ್ ಮಿಲ್ ಜಾಯೆ’, (ಬಹುಶಃ ಯಾರಿಗೋ ಬದುಕಲು ಕಾರಣವೇ ಸಿಕ್ಕಿಬಿಡಬಹುದು…) ನವಾಬ್ ಜಾನ್ ಪತ್ರ ಕಳಿಸುತ್ತಾಳೆ.

’ಮೆ ತೋ ಉಡ್ ನೆ ಸೆ ಪೆಹಲೆ ಹೀ ಗಿರಫ್ದಾರ್ ಹೋ ಗಯಾ ಹು’(ನಾನು ಹಾರುವ ಮೊದಲೇ ಬಂಧಿಯಾದವನು) – ಗಾಲಿಬ್ ಉತ್ತರ ಕಳಿಸುತ್ತಾನೆ.

ಗಾಲಿಬ್ ಸ್ನೇಹಿತನ ಅಂಗಡಿಯಲ್ಲಿ ಕುಳಿತಿರುವಾಗಲೇ ಅವಳ ದನಿ ಇವನನ್ನು ತಲುಪುತ್ತದೆ,

‘ಯಹೀ ಹೈ ಆಜ್ ಮಾನ, ತೊ ಸತಾನ ಕಿಸ್ಕೊ ಕೆಹ್ತೆ ಹೈ?’

’ಇದನ್ನೇ ಪರೀಕ್ಷಿಸುವುದು ಎನ್ನುವುದಾದರೆ, ಕಾಡಿಸುವುದು ಎಂದು ಯಾವುದನ್ನು ಕರೆಯುತ್ತಾರೆ?)

ತನ್ನ ಪಾದಗಳು ತನ್ನ ಮಾತನ್ನು ಕೇಳದಿದ್ದರೆ ಎನ್ನುವ ಆತಂಕದಲ್ಲಿ ಅವಳ ದನಿಯ ಅಂಗಳವನ್ನು ದಾಟಿ ಹೊರಡುತ್ತಾನೆ ಮಿರ್ಜಾ.  ನವಾಬ್ ಜಾನ್ ಮತ್ತು ಮಿರ್ಜಾರ ನಡುವೆ ಇರುವುದು ಕಾವ್ಯದ ನಂಟು.

‘ರಾಹ್ ಮೆ ಹಮ್ ಮಿಲೆ ಕಹಾ,

ಬಜ್ಮ್ ಮೆ ವೊಹ್ ಬುಲಾಯೆ ಕ್ಯೂ?’

(ನಾವು ಸಂಧಿಸಬಹುದಾದ ರಸ್ತೆಯಾದರೂ ಎಲ್ಲಿದೆ,

ತನ್ನ ಮೆಹಫಿಲ್ ಗೆ ನನ್ನನ್ನು ಆಕೆ ಕರೆಯುವುದಾದರೂ ಯಾಕೆ?)

ಗಾಲಿಬ್ ಚಡಪಡಿಸುತ್ತಾನೆ.

ಹೆಂಡತಿ ಗರ್ಭಿಣಿಯಾದ ಖುಷಿಯಲ್ಲಿ ದರ್ಗಾಗೆ ಹೋದವನಿಗೆ ನವಾಬ್ ಜಾನ್ ಸಿಗುತ್ತಾಳೆ.  ಅಲ್ಲಿ ಆಕೆ ’ನನ್ನ ಕವಿಗೆ ಒಳ್ಳೆಯದಾಗಲಿ ಎಂದು ಬೇಡಲು ಬಂದಿದ್ದೇನೆ’ ಅನ್ನುತ್ತಾಳೆ.  ಹಾಗೆ ನನ್ನ ಕವಿತೆ ಗೆದ್ದದ್ದೇ ಆದರೆ ನಿನಗೆ ಶಾಲು ಹೊದಿಸುತ್ತೇನೆ ಎಂದು ಗಾಲಿಬ್ ಸಹ ತಮಾಷೆ ಮಾಡುತ್ತಾನೆ.  ದಿನಗಳು ಉರುಳುತ್ತವೆ, ಗಾಲಿಬ್ ಆಸ್ಥಾನದಲ್ಲಿ ಕವಿಯಾಗಿ ಗೆಲ್ಲುತ್ತಾನೆ.  ಅವಳಿಗಿತ್ತ ಮಾತು ನೆನಪಾಗುತ್ತದೆ. ಮಿರ್ಜಾ ಕಡೆಗೂ ನವಾಬ್ ಳ ಮನೆಗೆ ಬರುತ್ತಾನೆ. ಆದರೆ ಅಷ್ಟರಲ್ಲಿ ತಡವಾಗಿರುತ್ತದೆ. ಗಾಲಿಬನೆಡೆಗೆ ಅವಳಿಗಿರುವ ಪ್ರೀತಿ ಸಹಿಸದ ಕೊತ್ವಾಲನ ಕಾಟದಿಂದ ಅವಳು ಊರು ಬಿಡಬೇಕಾಗಿ ಬಂದಿರುತ್ತದೆ. ಅವಳ ಮನೆಯೊಳಗೆ ಹೆಜ್ಜೆಯಿಟ್ಟ ಗಾಲಿಬನಿಗೆ ಅವಳ ಮನೆಯ ತುಂಬಾ ತನ್ನ ಕವಿತೆಗಳು ಅಂಬೆಗಾಲಿಡುತ್ತಲಿರುವುದು ಕಾಣುತ್ತದೆ.

ಅವಳ ಮನೆಯ ಕನ್ನಡಿಯ ಮೇಲೆ,

’ಇಶ್ಕ್ ಮುಜ್ಕೊ ನಹಿ, ವೈಶಕ್ ಹಿ ಸಹಿ

ಮೆರಿ ವೈಶಕ್ ತೆರಿ ಶೊಹರತ್ ಹೀ ಸಹಿ…’

(ಇದು ಪ್ರೇಮವಲ್ಲ, ಹುಚ್ಚು ಎಂದರೆ ಹಾಗೆ ಆಗಲಿ ಬಿಡು, ನನ್ನ ಈ ಹುಚ್ಚು ನಿನ್ನ ಹಿರಿಮೆಯೇ ಆಗಲಿ ಬಿಡು)

ಎನ್ನುವ ಸಾಲು… ಕವಿಯನ್ನು ಕಲಕಲು ಇನ್ನೇನು ಬೇಕು?  ಮನೆಗೆ ಬರದ ಕವಿಯನ್ನು ಮನೆ ತುಂಬಾ ತುಂಬಿಸಿಕೊಂಡಿರುತ್ತಾಳೆ ನವಾಬ್.

’ಜಾನ್ ತುಮ್ ಪರ್ ನಿಸಾರ್ ಕರ್ ತಾ ಹೂ,

ಮೈ ನಹಿ ಜಾನ್ ತಾ ದುವಾ ಕ್ಯಾ ಹೈ?’

(ನೀನೆಂದರೆ ಜೀವ ಬಿಡುತ್ತೇನೆ, ಅದರ ಹೊರತಾಗಿ ಇನ್ನ್ಯಾವ ಪ್ರಾರ್ಥನೆಯೂ ನನಗೆ ಬರುವುದಿಲ್ಲ)

ಇನ್ನೊಂದು ಸಾಲು.  ಭಾರವಾದ ಹೆಜ್ಜೆಗಳಿಂದ ಗಾಲಿಬ್ ಹೊರಡುತ್ತಾನೆ.  ಕಡೆಯದಾಗಿ ಬಾಗಿಲ ಬಳಿ ಕಡೆಯ ಸಾಲು,

‘ಹಮ್ ಭೀ ತಸ್ಲೀಮ್ ಕಿ ಖು ಡಾಲೇಂಗೆ

ಬೆ ನಿಯಾಜಿ ತೇರಿ ಆದತ್ ಹಿ ಸಹಿ’

(ಏಕಾಕಿತನ ನಿನ್ನ ಅಭ್ಯಾಸವೇ ಆಗಿದ್ದರೆ, ಅದನ್ನು ಸಹಿಸುವುದನ್ನು ನಾನೂ ಅಭ್ಯಾಸ ಮಾಡಿಕೊಳ್ಳುತ್ತೇನೆ ಬಿಡು)

ಅವಳಿಗಾಗಿ ಗಾಲಿಬ್ ನ ಎದೆಯಿಂದ ಹೊರಡುವ ಕವಿತೆ ಹೀಗಿದೆ,

’ಹಜಾರ್ ಖ್ವಾಯಿಶೇ ಐಸೆ, ಕೆ ಹರ್ ಖ್ವಾಯಿಶ್ ಪೆ ದಮ್ ನಿಕಲೆ.

ಬಹುತ್ ಬೇ ಆಬ್ರೂ ಹೋಕರ್ ತೇರೆ ಕೂಚೆ ಸೆ ಹಮ್ ನಿಕಲೆ’.

(ಒಂದೊಂದು ಆಸೆಗೂ ಜೀವ ಬಿಡಬೇಕು ಅನ್ನಿಸುವಂತಹ ಸಾವಿರ ಆಸೆಗಳು,

ಇನ್ನಿಲ್ಲದ ನಾಚಿಕೆಯಿಂದ ನಾನು ನಿನ್ನ ಮನೆಯಿಂದ ಹೊರಡುತ್ತಿದ್ದೇನೆ)

ಹಾಗೆ ಹೋದ ನವಾಬ್ ಜಾನ್ ಮತ್ತೆಂದೂ ಗಾಲಿಬನಿಗೆ ಜೀವಂತವಾಗಿ ಸಿಗುವುದೇ ಇಲ್ಲ.  ಗಾಲಿಬ್ ನೋಡಲು ಸಾಧ್ಯವಾಗುವುದು ಅವಳ ಗೋರಿ ಮಾತ್ರ, ಅದರ ಮೇಲೂ ಇರುವುದು ಇವನದೇ ಕವಿತೆಯ ಸಾಲು.

’ಯೆ ನ ಥಿ ಹಮಾರಿ ಕಿಸ್ಮತ್ ಕೆ ವಿಸಾಲ್-ಎ-ಯಾರ್ ಹೋತಾ,

ಅಗರ್ ಔರ್ ಜೀತೆ ರೆಹ್ತೆ ಯಹಿ ಇಂತಜಾರ್ ಹೋತಾ…’

(ಪ್ರೇಮಿಯನ್ನು ಸಂಧಿಸುವುದು ನನ್ನ ಹಣೆಯಲ್ಲಿ ಬರೆದಿಲ್ಲ,

ಇನ್ನೂ ಬದುಕಿದ್ದರೂ ಇದೇ ನಿರೀಕ್ಷೆಯಲ್ಲೇ ಬದುಕಬೇಕಿತ್ತು)

ಇವನ ಕವಿತೆಯನ್ನೇ ಹೊದ್ದು ನಿದ್ರಿಸಿರುತ್ತಾಳೆ ನವಾಬ್ ಜಾನ್.  ಗೋರಿಯ ಮೇಲೆ ತನ್ನ ಶಾಲು ಹೊದ್ದಿಸಿ, ಅವಳಿಗಾಗಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಾನೆ ಗಾಲಿಬ್.  ನವಾಬ್ ಜಾನ್ ಮಿರ್ಜಾ ಗಾಲಿಬ್ ಬರೆದರೂ ಗಟ್ಟಿಯಾಗಿ ಓದಲಾರದ ಒಂದೇ ಒಂದು ಕವಿತೆ

ಗಾಲಿಬನ ಬಗ್ಗೆ ವಿವರಿಸಲು ನಾನು ಈ ಸರಣಿಯನ್ನು ಆಯ್ದುಕೊಳ್ಳಲು ಮೇಲೆ ಹೇಳಿದ ಕಾರಣ ಸಾಕಿತ್ತು.  ಆದರೆ ಅದನು ನೋಡುತ್ತಾ ಹೋದ ಹಾಗೆ ನನಗೆ ಅಲ್ಲಿ ಎರಡು ವ್ಯಕ್ತಿತ್ವಗಳ ಸಾಕ್ಷಾತ್ಕಾರ ಆಗಿತ್ತು.  ಒಂದು ಗಾಲಿಬನದ್ದು, ಮತ್ತೊಂದು ಗಾಲಿಬನ ಮೂಲಕ ಗುಲ್ಜಾರ್ ದು.  ಈ ಸರಣಿ ಮುಗಿಸಿದಾಗ ಗುಲ್ಜಾರ್ ಸಹ ಅದನ್ನೇ ಹೇಳಿದ್ದರು, ’ಅವನ ಬದುಕನ್ನು ನಾನು ಕಟ್ಟಿಕೊಟ್ಟೆನೇ ಅಥವಾ ನನ್ನ ಬದುಕನ್ನು ಅವನು ಕಟ್ಟಿದನೆ….’ ಎಂದು.  ನಿಜ, ’ಹೈ ಔರ್ ಭಿ ದುನಿಯಾ ಮೆ ಸುಖನ್ವರ್ ಬಹುತ್ ಅಚ್ಚೆ, ಕೆಹತೆ ಹೈ ಕೆ ’ಗಾಲಿಬ್’ ಕ ಹೈ ಅಂದಾಜ್-ಎ-ಬಯಾನ್ ಔರ್’, ಗಾಲಿಬ್ ಎಂದರೆ ಹಾಗೆಯೇ.

ಇಷ್ಟೆಲ್ಲಾ ಓದಿ, ಬರೆದ ಮೇಲೂ ನನ್ನನ್ನು ಬಹುವಾಗಿ ಕಾಡುತ್ತಿರುವುದು ಗಾಲಿಬನ ಈ ಸಾಲು…

‘ಹೂಂ ಗರೆ- ಎ ನಿಶಾತ್-ಎ ತಸವ್ವರ್ ಸೆ ನಗಮಾ ಜ್ಙಾನ್,

ಮೈಂ ಅಂದಲೀಬ್-ಎ ಗುಲ್ಶನ್ ನ ಆಪ್ರೀದಾ ಹೂಂ’

(ಇನ್ನೂ ಅರಳಬೇಕಾದ ತೋಟದ ಕೋಗಿಲೆ ನಾನು).

ಇಂದಿನ ಕಡು ಬೇಸಿಗೆಯನ್ನು ಮರೆತು, ನಾಳೆ ಅರಳಬಹುದಾದ ತೋಟದ ಕಲ್ಪನೆಯಲ್ಲೇ ಅಲ್ಲವೇ ಎಲ್ಲಾ ಕವಿಗಳೂ ಬರೆಯುವುದು?

‍ಲೇಖಕರು avadhi

February 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Shaul Hamid

    hazaron KHwahishen aisi ki har KHwahish pe dam nikle

    bahut nikle mere arman lekin phir bhi kam nikle

    I have a thousand yearnings , each one afflicts me so

    Many were fulfilled for sure, not enough although

    nikalna KHuld se aadam ka sunte aae hain lekin

    bahut be-abru ho kar tere kuche se hum nikle

    From Eden, of Adam’s exile, I am familiar, though

    Greatly humiliated from your street did I have to go

    ಪ್ರತಿಕ್ರಿಯೆ
  2. Ahalya Ballal

    ಭಾವಲೋಕಕ್ಕೆ ಅಕ್ಷರ-ಹಣತೆ ಹಚ್ಚುವ ಎರಡು ಅದ್ಭುತ ಕವಿಮನಗಳ ಪರಿಚಯ. Thank you, ಸಂಧ್ಯಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: