ಸಂಪು ಕಾಲಂ : ಕನಸಿನ ಕೇರಳದ ಕಹಿ ಅನುಭವ


ಪ್ರಕೃತಿ ಸೊಬಗು, ಶುಭ್ರತೆ, ಸಾಕ್ಷರತೆ, ಮಹಿಳಾ ಸಬಲೀಕರಣ, ತೆಂಗಿನ ಮರಗಳು, ಕೊಬ್ಬರಿ ಎಣ್ಣೆ, ಕರಾವಳಿ ಈ ಎಲ್ಲಾ ಪದಗಳ ಕಾಮನ್ ಫ್ಯಾಕ್ಟರ್ ಆಗಿರುವ ಕೇರಳ ಎಂದರೆ ನನಗೆ ಮೊದಲಿನಿಂದಲೂ ಪ್ರೇಮ. ಗಾಡ್ಸ್ ಓನ್ ಕಂಟ್ರಿ ಅನಿಸಿಕೊಂಡಿರುವ ಈ ಪ್ರದೇಶದ ಸೆಳಕು ಹೇಗೆ, ಯಾವಾಗ ಪ್ರಾರಂಭವಾಯಿತು ತಿಳಿಯದು. ಒಟ್ಟಿನಲ್ಲಿ “ಕೇರಳ” ಎಂದರೆ ಮನಸು ಉಲ್ಲಾಸವಾಗುವಂತಹ ಸ್ಥಿತಿ. ಅಂತಹ ಕೇರಳಕ್ಕೆ, ಇಷ್ಟು ದಿನ ಕನವರಿಸಿ ಕೊನೆಗೂ ಭೇಟಿ ಮಾಡುತ್ತಿದ್ದೇನೆ ಎಂಬ ಸಂತೋಷ. ರಸ್ತೆಯಲ್ಲಿ ತಮಿಳು ಬೋರ್ಡ್ ಗಳು ನಿಂತು ಮಲಯಾಳಂ ಪ್ರಾರಂಭವಾಗುವ ಹೊತ್ತಿಗೆ “ವೆಲ್ಕಮ್ ಟು ಗಾಡ್ಸ್ ಓನ್ ಕಂಟ್ರಿ” ಎಂಬ ಫಲಕ ಕಂಡು ಬಂತು. ಆದರೆ “ಮಲೆನಾಡ ಸಿರಿಯನ್ನು ಮೀರಿಸುವ ಕೇರಳ” ಎಂಬ ನನ್ನ ಭಾವನೆಗೆ ಆ ಪರಿಸರ ಹೊಂದಾಣಿಕೆಯಾಗಲಿಲ್ಲ. ಮನಸ್ಸಿಗೆ ಎಷ್ಟು ಆತುರ! ಯಾವುದೋ ಸಿನೆಮಾದಲ್ಲಿ ಒಂದರ್ಧ ಕ್ಷಣ ತೋರಿಸುವ ಕೇರಳದ ದಟ್ಟ ಪ್ರಕೃತಿಗೂ, ಇಡೀ ಕೇರಳಕ್ಕೂ ಅದ್ಯಾವ ಫ್ರೇಮ್ ಹಾಕಿ ಮನಸ್ಸು ಕ್ಷಣಾರ್ಧದಲ್ಲಿ ತಲ್ಲಣಿಸುತ್ತದೆ? ದಾಹವಾದಾಗ ನಾಲಿಗೆ ನೀರಿಗಾಗಿ ಹಪಹಪಿಸುವಂತೆ, ನಗರದ ಒಣ ಪರಿಸರದಲ್ಲಿ ಒಣಗಿ, ಹಸಿ ಹಸಿ ಹಸಿರಿಗಾಗಿ ಮನಸ್ಸು ತಪಿಸುತ್ತದೆ. ಮಲಯಾಳಂ ನಲ್ಲೂ ಕೆ.ಎಫ಼್.ಸಿ ಬೋರ್ಡ್ ಗಳು ಕಾಣಬಹುದು ಎಂಬ ಸತ್ಯವನ್ನು ಖಡಾಖಂಡಿತವಾಗಿ ಮರೆತಿದ್ದೆ. ಅರಿವಿನಂತೆ ಸೃಷ್ಟಿ!
ಕೇರಳ ಎಂಬ ಹೆಸರು ಬಂದದ್ದು ಆ ಪ್ರಾಂತ್ಯದ ಚೇರರಿಂದ. ಚೇರರ ಸಾಮ್ರಾಜ್ಯ ಕೇರಳದಲ್ಲಿ ಮೊಟ್ಟ ಮೊದಲು ಕಂಡುಬಂದಿದ್ದು, “ಕೇರಳಪುತ್ರ” (ಚೇರರ ಮಕ್ಕಳ) ರಾಜ್ಯಎಂಬ ಹೆಸರಿನಿಂದ ನಾಮಾಂಕಿತಗೊಂಡಿದೆ. ಕ್ರಿ.ಪೂ 273-236 ರಲ್ಲಿ ಅಶೋಕನ ಶಾಸನದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಮತ್ತೊಂದು ವಿಶೇಷ, ಇಲ್ಲಿ ಏಳನೇ ಶತಮಾನದವರೆಗೂ ತಮಿಳು ಆಡಳಿತ ಭಾಷೆಯಾಗಿತ್ತು. ಮೊದಲು ಕೇರಳ ಮದ್ರಾಸ್ ಜೊತೆಗೆ ಸೇರಿತ್ತು. 1956 ರಲ್ಲಿ ಭಾಷಾವಾರು ರಾಜ್ಯ ವಿಭಾಗವಾದಾಗ ಕೇರಳ ಒಂದು ಪ್ರತ್ಯೇಕ ರಾಜ್ಯವಾಯಿತು.
ಕೇರಳದ ನಗರದ ಮೂಲಕವೇ ಪ್ರಯಾಣಿಸುತ್ತಿದ್ದ ನಮಗೆ ಮೊದಲನೇ ಸಮಾಧಾನವೆಂದರೆ ಶುಭ್ರತೆ ಮತ್ತು ಒಳ್ಳೆಯ ಗಾಳಿ. ತಮಿಳುನಾಡಿನ ಕೊಳಕು ಕೇರಳಕ್ಕೆ ತಟ್ಟಿರಲಿಲ್ಲ. ಸಣ್ಣ ಪುಟ್ಟ ಗಲ್ಲಿಗಳೂ ಶುಚಿಯಾಗಿ ಕಂಡು ಬೆಂಗಳೂರು ಸಹ ನಾಚುವಂತಿತ್ತು. ಕೇರಳದ ಮೊದಲ ಹೆಜ್ಜೆಗೆ ಕಣ್ಣು ಹಸಿರಾಗಲಿಲ್ಲವಾದರೂ ಹಿತವಾದ ವಾತಾವರಣ ಕಂಡು ಮನಸ್ಸು ತಂಪಾಯಿತು. ಪ್ಲಾನ್ ಪ್ರಕಾರ ಕೇರಳದ ರಾಜಧಾನಿಯಾದ ತಿರುವನಂತಪುರಂಗೆ ಹತ್ತು ಕಿ.ಮೀ ದೂರದಲ್ಲಿದ್ದ ಕೊವೆಲಂ ಸಮುದ್ರ ತೀರಕ್ಕೆ ಭೇಟಿಯಾಯಿತು. ಮಲಯಾಳಂನಲ್ಲಿ ಕೊವೆಲಂ ಎಂದರೆ ತೆಂಗಿನ ತೋಪು ಎಂದು ಅರ್ಥ. ಕನ್ಯಾಕುಮಾರಿಯನ್ನೇ ಕಣ್ತುಂಬಿಸಿಕೊಂಡಿದ್ದ ನನಗೆ ಕೊವೆಲಂ ಭ್ರಮನಿರಸನವನ್ನೇ ಉಂಟು ಮಾಡಿಬಿಟ್ಟಿತು. ನಮಗೆ ಬಸ್ ಇಳಿಯುವುದಕ್ಕೂ ಸಾಧ್ಯವಿರದ ಜೋರಾದ ಮಳೆ, ಜೊತೆಗಿದ್ದವರೆಲ್ಲಾ ಐವತ್ತ ಗಡಿ ದಾಟಿದವರು. ಆದರೂ ಪಟ್ಟು ಬಿಡದೆ ಹೇಗೋ ಛತ್ರಿ ಹಿಡಿದು ಇಳಿದು ನಡೆದೇ ಬಿಟ್ಟೆವು ನಾವು ಕೆಲವರು. ಸಮುದ್ರ ತೀರದಲ್ಲಿ ಎಂತಹ ಗಾಳಿ ಎಂದರೆ, ಬಹುಶಃ ಅಂದು ನಾನು ಮೊದಲ ಬಾರಿಗೆ ಗಾಳಿಗೆ ಹೆದರಿದ್ದೆ! ನಾವೊಂದು ದಿಕ್ಕು, ನಮ್ಮ ಛತ್ರಿ ಒಂದು ದಿಕ್ಕು, ನಮ್ಮ ಬಟ್ಟೆ ಬರೆ ಮತ್ತೊಂದು ದಿಕ್ಕು. ಮುಂದಕ್ಕೆ ಒಂದು ಹೆಜ್ಜೆ ಇಡಲು ಸಾಧ್ಯವಾಗದಂತಹ ಗಾಳಿ. ಒಮ್ಮೆಲೇ ಸೆಟೆದುನಿಂತು ಛಲದಿಂದ ಮುಂದಕ್ಕೆ ಹೆಜ್ಜೆ ಹಾಕಿ ಅಂತೂ ಸಮುದ್ರದಲೆಗಳನ್ನು ಸೇರಿದೆವು. ಅದೆಂಥದೋ ವಿಚಿತ್ರ ಬಣ್ಣದ ವಿಚಿತ್ರ ಮುದ್ದೆಗಳು ಸಮುದ್ರ ತೀರದ ತುಂಬೆಲ್ಲಾ ಹರಡಿದ್ದು, ಅವುಗಳನ್ನು ಹಾರಿ, ದಾಟಿ ಅಲೆಗಳನ್ನು ಸೇರಿದ ಬಳಿಕ, ಅಲ್ಲಿದ್ದೊಬ್ಬರು ಹೇಳಿದ್ದು, ಅವು ಜೆಲ್ಲಿ ಫಿಶ್ ಗಳು ಎಂದು. ಡಿಸ್ಕವರಿ ಚಾನೆಲ್ ನಲ್ಲಿ ಜೆಲ್ಲಿ ಫಿಶ್ ಗಳ ನೋಡಿದ್ದಷ್ಟೇ ಹೊರತು ಅವುಗಳ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅಬ್ಬರಿಸಿ ನಮ್ಮನ್ನಾವರಿಸುತ್ತಿದ್ದ ದೊಡ್ಡ ದೊಡ್ಡ ಅಲೆಗಳ ಜೊತೆಗೆ ಆ ಜೆಲ್ಲಿ ಮೀನುಗಳೂ ನಮ್ಮ ಮೇಲೆ ಹರಿಹಾಯುತ್ತಿತ್ತು. ಅನುಭವಿಸಲು ಕಷ್ಟವಾಗಿತ್ತು ಆದರೆ ಅದಕ್ಕಿಂತಲೂ ಮನಸ್ಸಿಗೆ ಘಾಸಿಯಾಯಿತು. ಅದು ಜೆಲ್ಲಿ ಮೀನುಗಳ ಮಾರಣ ಹೋಮವಾಗಿತ್ತು. ಯಾವುದೋ ಕಾರ್ಖಾನೆಯ ರಾಸಾಯನಿಕಕ್ಕೊ, ಮನುಷ್ಯರ ಪ್ರಯೋಗಗಳಿಗೋ ಬಲಿಪಶುವಾಗಿತ್ತು ಆ ರಾಶಿ ರಾಶಿ ಜೆಲ್ಲಿ ಮೀನುಗಳು. ಆ ಸಂದರ್ಭದಲ್ಲಿ “Every act of creation is first an act of destruction” ಎಂಬ ಪಾಬ್ಲೋ ಪಿಕಾಸೋ ಮಾತು ನೆನಪಾದದ್ದು ನನ್ನ ಸಣ್ಣತನವೆನಿಸಿತು.
ಇಂತಹ ಹಲವಾರು ಕಾರಣಗಳಿಂದ ಕೊವೆಲಂ ಬೀಚ್ ನನಗೆ ಇಷ್ಟವಾಗದ ಮೊದಲನೇ ಬೀಚ್ ಆಗಿ ಉಳಿದುಬಿಟ್ಟಿತು. ಅಲ್ಲಿಂದ ಮರಳುವಾಗ ಪಕ್ಕದಲ್ಲಿ ಕಂಡು ಬಂದದ್ದು ಚಾರ್ಲ್ಸ್ ಕೊರಿಯ ಎಂಬ ಪ್ರಖ್ಯಾತ ವಾಸ್ತು ಶಿಲ್ಪಿಯ ಅತ್ಯುತ್ತಮ ಬೀಚ್ ರೆಸಾರ್ಟ್ಗಳು. ಇದು ದೇಶ-ವಿದೇಶಗಳಲ್ಲಿ ಮಾತಾದಂಥದ್ದು. ನಮ್ಮ ಮುಂದಿನ ದಾರಿ ಒಂದು ಕಾಸ್ಟ್ಲೀ ಅಫೇರ್! ತಿರುವನಂತಪುರಂನ ಪದ್ಮನಾಭ ದೇವಸ್ಥಾನವಾಗಿತ್ತು. ಕೆಲ ಕಾಲದ ಹಿಂದಷ್ಟೇ ಇಡೀ ದೇಶ ಮೂಗಿನ ಮೇಲೆ ಬೆರಳಿತ್ತಿದ್ದ ಈ ದೇವಸ್ಥಾನವನ್ನು ನೋಡ ಹೊರಟಿದ್ದು ಒಂದು ಹೊಸ ಕುತೂಹಲವಾಗಿತ್ತು. ಕಾರಣ ಎಲ್ಲರಿಗೂ ತಿಳಿದಂಥದ್ದು. ನಮ್ಮ ಸ್ವಿಸ್ ಬ್ಯಾಂಕ್ ಗೆ ಸವಾಲಾಗುವಂತಹ ಅಪಾರ ಆಸ್ತಿಯನ್ನು ಈ ದೇವಸ್ಥಾನ ತನ್ನ ಮಡಿಲಲ್ಲಿ ತುಂಬಿಕೊಂಡಿದೆ.
ತಿರು ಅನಂತ ಪುರಂ ಅಂದರೆ ಸಾವಿರ ಹೆಡೆಗಳ ಸರ್ಪ ಅನಂತನ ಮೇಲೆ ಮಲಗಿರುವ ಪದ್ಮನಾಭನ ದೇವಸ್ಥಾನವಿರುವ ಸ್ಥಳ ಎಂದು. ಇಂತಹ ತನ್ನ ಹೆಸರನ್ನೇ ಊರು ಕರೆಸಿಕೊಳ್ಳುವಂತಹ ಪ್ರಖ್ಯಾತಿ ಈ ದೇವಸ್ಥಾನದ್ದು. ಈ ದೇವಸ್ಥಾನ ಬಹು ಪ್ರಾಚೀನವಾಗಿದ್ದು ಇದರ ಉಗಮ ಪತ್ತೆ ಹಚ್ಚುವುದು ಕಷ್ಟ ಆದರೆ ಇದನ್ನು 1733 ರಲ್ಲಿ ಅಲ್ಲಿನ ಮಹಾರಾಜ ಮಾರ್ತಾಂಡ ವರ್ಮನು ಮರು-ಸೃಷ್ಟಿಸಿದನು. ಇದು ಗ್ರಾನೈಟ್ ಕಲ್ಲಿನಿಂದ ಕಟ್ಟಲ್ಪಟ್ಟಿದ್ದು, ಗರ್ಭಗುಡಿಯ ಎತ್ತರಿಸಿದ ನೆಲ ಒಂದೇ ಗ್ರಾನೈಟ್ ಕಲ್ಲಿನದ್ದಾಗಿದೆ. ಅನಂತ ಪದ್ಮನಾಭನನ್ನು ಅನಂತ ಶಯನ ಎಂದೂ ಕರೆಯುತ್ತಾರೆ. 12,000 ಸಾಲಿಗ್ರಾಮ ಶಿಲೆಗಳಿಂದ ಈ ಮೂರ್ತಿಯನ್ನು ಮಾಡಲಾಗಿದೆ. 1729 ರಲ್ಲಿ ಮಾರ್ತಾಂಡ ವರ್ಮನು ತನ್ನ ಬಳಿ ಇದ್ದ ಎಲ್ಲ ಸಿರಿ-ಸಂಪತ್ತನ್ನು ಪದ್ಮನಾಭನಿಗೆ ಧಾರೆ ಎರೆದ. ತನ್ನ ಖಡ್ಗವನ್ನು ದೇವರ ಮೂರ್ತಿಯ ಬಳಿ ಇರಿಸಿ ನಂತರ “ಪದ್ಮನಾಭ ದಾಸ” ಎಂಬ ಹೆಸರಿನಿಂದ ರಾಜ್ಯವನ್ನು ಆಳಿದ. ಪದ್ಮನಾಭನನ್ನು ಗರ್ಭಗುಡಿಯಲ್ಲಿ ಮೂರು ದ್ವಾರಗಳ ಮೂಲಕ ಕಾಣಬೇಕು. ಒಂದು ಆತನ ಪಾದ, ಮತ್ತೊಂದು ಆತನ ಹೊಟ್ಟೆ (ಜೊತೆಗೆ ಕಮಲದಲ್ಲಿನ ಬ್ರಹ್ಮ) ಮತ್ತೊಂದು ಎದೆ ಮತ್ತು ಶಿರಭಾಗ. ಈತನ ಪತ್ನಿ ಶ್ರೀ ಹರಿ ಲಕ್ಷ್ಮಿ ತಾಯಾರ್.
ಏಳು ಎಕರೆ ಹರಡಿದ ದೇವಸ್ಥಾನ ಕೋಟೆ ಗೋಡೆಗಳಿಂದ ಸುತ್ತುವರಿಯಲ್ಪಟ್ಟಿದೆ. ದೇವಸ್ಥಾನದ ಹೊರಭಾಗ ಶ್ರೀಬಲಿಪುರ ಎಂಬ ಒಂದು ದೊಡ್ಡ ಕಟ್ಟಡವಾಗಿದ್ದೂ ಇದನ್ನು ಕಟ್ಟಲು 4,000 ಕಟ್ಟಡಕಾರರು, 6,000 ಕೂಲಿಯಾಳುಗಳು ಮತ್ತು 100 ಆನೆಗಳೊಂದಿಗೆ ಸತತ ಕೆಲಸದಿಂದ ಏಳು ತಿಂಗಳ ಕಾಲ ಹಿಡಿಸಿತು. ಈ ದೇವಸ್ಥಾನದಲ್ಲಿ ಅನೇಕ ವರ್ಷಗಳ ಕಾಲ ರಾಜನಾಳ್ವಿಕೆಯಲ್ಲಿ ಬ್ರಾಹ್ಮಣ ಭೋಜನ ದಾನ ನಡೆಯುತ್ತಿತ್ತಂತೆ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಬೃಹದಾಕಾರದ ಅಡಿಗೆ ಪಾತ್ರೆಗಳು, ಸಾಮಾನುಗಳು ಅಲ್ಲಿ ಕಂಡುಬರುತ್ತವೆ. ಇಲ್ಲಿ ವೈಭವೋಪೇತ ರಾಜಮನೆತನದ ರೀತಿ ನೀತಿಗಳು, ದಾನ ಮಾಡುವ ಆತನ ಉದಾರತೆ ಕಂಡು ಬರುತ್ತದೆಯಾದರೂ ಜಾತಿ ಪ್ರಾಧಾನ್ಯತೆಯು ಹಾಸು ಹೊಕ್ಕಾಗಿದ್ದದ್ದು ಕಂಡುಬರುತ್ತದೆ.

ಈ ದೇವಸ್ಥಾನದಲ್ಲಿ ಕಾಲಿಟ್ಟ ಕ್ಷಣದಿಂದ ನಾವು ಅನುಭವಿಸಿದ್ದು ಸಂಪೂರ್ಣ ಆತಂಕಮಯ, ಭಯಭೀತ ವಾತಾವರಣವನ್ನು. ತಮಿಳು ನಾಡಿನ ಯಾವ ದೇವಸ್ಥಾನದಲ್ಲೂ ಕಂಡುಬರದ ಒಂದು ಪ್ರತಿಕೂಲವಾದ ನೆರಳು ಈ ದೇವಸ್ಥಾನವನ್ನಾವರಿಸಿತ್ತು. ಈ ದೇವಸ್ಥಾನ ತಲುಪುವ ಮೊದಲೇ ನಮಗೆ ಒಂದು ದೊಡ್ಡ ನಿಯಮಾವಳಿಗಳ ಪಟ್ಟಿ ಕೊಟ್ಟಿದ್ದರು. ಗಂಡಸರು ಪಂಚೆಯನ್ನಷ್ಟೇ ಉಡಬೇಕು, ಹೆಂಗಸರು ಸೀರೆಯನ್ನೇ ಉಡಬೇಕು, ಒಂದು ವೇಳೆ ಹೆಂಗಸರು ಇತರ ವಸ್ತ್ರ ಧರಿಸಿದ್ದಲ್ಲಿ, ಅದರ ಮೇಲೆಯೇ ಒಂದು ದಟ್ಟಿಯನ್ನು ಸುತ್ತಿಕೊಳ್ಳದ ಹೊರತು ದೇವಸ್ಥಾನಕ್ಕೆ ಪ್ರವೇಶವಿಲ್ಲ. ದೇವರು ನಮ್ಮನ್ನು ನೋಡಬೇಕೋ, ನಮ್ಮ ಬಟ್ಟೆಯನ್ನು ನೋಡಬೇಕೋ ಅಥವಾ ನಾವು ದೇವರನ್ನು ನೋಡಬೇಕೋ ಏನೂ ತಿಳಿಯಲಿಲ್ಲ! ಇದರ ಜೊತೆಗೆ ಕ್ಯಾಮರಾ, ಬ್ಯಾಗ್ ಸಮೇತವಾಗಿ ಯಾವ ವಸ್ತುಗಳಿಗೂ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಇಷ್ಟು ಸಾಲದೆಂಬಂತೆ, ರಟ್ಟೆ ಬಿಗಿಸಿಕೊಂಡು, ಎದೆಯುಬ್ಬಿಸಿ, ಮೀಸೆ ಚೂಪಾಗಿಸಿ ನಿಂತ ಆರಕ್ಷಕರು ನಮ್ಮ ದೇಹದ ಸರ್ವ ಪರೀಕ್ಷೆಯನ್ನೂ ಮಾಡಿ ಮುಂದೆ ಹೆಜ್ಜೆ ಇಡಲು ಬಿಡುತ್ತಾರೆ. ಹೀಗೆ ಆತಂಕಕಾರೀ ಮನಸ್ಥಿತಿಯಿಂದ ಹೊರಬರಲು ದೇವಸ್ಥಾನಗಳಿಗೆ ಜನರು ಭೇಟಿ ಮಾಡುವುದು ಸಾಧಾರಣ, ಆದರೆ ಈ ದೇವಸ್ಥಾನ ಅದಕ್ಕೂ ಹೊರತಾಗಿತ್ತು. ಒಳಕ್ಕೆ ಹೋದ ನಂತರವೂ ಮೂಲೆ ಮೂಲೆಗಳಿಂದ ದೊಡ್ಡ ಗಾತ್ರದ ಪೈಲ್ವಾನುಗಳ ಕಣ್ಣು ನಮ್ಮ ಮೇಲೆ ಇರುತ್ತದೆ. ಕೊಂಚ ಸಂದೇಹಾಸ್ಪದವಾಗಿ ಯಾರಾದರೂ ನಡೆದುಕೊಂಡಲ್ಲಿ ಅವರಿಗೆ ಅಂದೇ ಮೋಕ್ಷ ಪ್ರಾಪ್ತಿ!
ಈ ದೇವಸ್ಥಾನದ ಮತ್ತೊಂದು ತಮಾಷೆಯ ವಿಷಯ ಎಂದರೆ, ಗರ್ಭಗುಡಿಯ ಮುಂದಿನ ಸ್ಥಳ. ಈ ಆವರಣದಲ್ಲಿ ಯಾವ ಸಾಮಾನು ಬಿದ್ದರೂ, ಕೊನೆಗೆ ಮನುಷ್ಯರೇ ಎಡವಿ ಬಿದ್ದರೂ (ಅಥವಾ ಮಲಗಿ ಸಾಷ್ಟಾಂಗ ಹಾಕಿದರೂ) ಆ ವಸ್ತು ಅಥವಾ ವ್ಯಕ್ತಿ ದೇವಸ್ಥಾನಕ್ಕೆ ಸೇರಿಹೊಗುವುದು ಎಂದು ಪ್ರತೀತಿ. ಈ ಮಾತನ್ನು ನಮ್ಮ ಗುಂಪಲ್ಲೊಬ್ಬರು ಹೇಳಿದಾಕ್ಷಣ, ದೇವರ ದರ್ಶನವಿರಲಿ ನಮ್ಮ ನಮ್ಮ ಸಾಮಾನು ಹಾಗೂ ದೇಹವನ್ನು ನೆಲಕ್ಕೆ ತಾಕದಂತೆ ಜಾಗ್ರತೆವಹಿಸಿ ಅಲ್ಲಿಂದ ಕಳಚಿ ಓಡುವುದು ಜನರ ಕಾಳಜಿ, ಭಕ್ತಿಯಾಗಿಹೊಗಿತ್ತು! ವಿಷಯ ನಮ್ಮ ಬುಡಕ್ಕೆ ಬಂದಾಗ ಯಾವ ದೇವರು ಸಮ ಹೇಳಿ! ಕೊನೆಗೆ ದೂರದಲ್ಲೊಂದು ಪುಟ್ಟ ಬಾಗಿಲಿತ್ತು. ಅದಕ್ಕೆ ಗಟ್ಟಿ ಬೀಗ ಜಡಿದಿದ್ದರು. ದೇವಸ್ಥಾನದ ಹೊರಬಂದ ಮೇಲೆ ಅಲ್ಲೊಬ್ಬರು ಪಿಸುನುಡಿದದ್ದು “ಅದೇ ಬಾಗಿಲ ಮೂಲಕ ಹೋದರೆ, ನಿಧಿ ಇರುವುದು” ಎಂದು. ನನಗೆ ಇದನ್ನೆಲ್ಲಾ ನೋಡಿ ಸಣ್ಣದೊಂದು ನಗು.
ದೇವರನ್ನು ನೋಡಬೇಕು ಎಂದು ಊರಿಂದ ಊರಿಗೆ ಜನ ಬರುವುದು, ಬಂದಾಗ ಅರೆ ನಗ್ನರಾಗಿ, ಭಯಭೀತರಾಗಿ, ಉಸಿರುಗಟ್ಟಿ ಸಾಲಿನಲ್ಲಿ ನಿಲ್ಲುವುದು, ನಿಂತು ಏನೋ ತಪ್ಪು ಮಾಡಿರುವಂತೆ ಗಿಲ್ಟ್ ಮುಖ ಮಾಡಿಕೊಂಡು ಮೆಲ್ಲಗೆ ಮುಂದೆ ಹೆಜ್ಜೆ ಹಾಕುವುದು, ಇಷ್ಟೆಲ್ಲಾ ಆದಮೇಲೆ ಗರ್ಭಗುಡಿಯ ಆವರಣದಿಂದ ಹೇಗಪ್ಪಾ ತಪ್ಪಿಸಿಕೊಳ್ಳುವುದು ಎಂದು ಮನಸ್ಸು ಕೇಂದ್ರೀಕರಿಸುವುದು. ಕೊನೆಗೆ ಕ್ಯೂನಿಂದ ಹೊರಬಿದ್ದು “ಹುಶ್ಶಪ್ಪಾ, ಕೊನೆಗೂ ದರ್ಶನಭಾಗ್ಯ ಲಭಿಸಿತು” ಎಂದು ಸಂತೋಷ ಪಡುವುದು! ಏನು ಹೇಗೇ ಇರಲಿ, ದೇವಸ್ಥಾನದ ವಾಸ್ತುಶಿಲ್ಪವಂತೂ ಅದ್ಭುತ! ಗತಕಾಲದ ವೈಭವದೊಂದಿಗೆ ಆ ಕಾಲದ ಗಾಂಭೀರ್ಯ, ಗುರುಭಕ್ತಿಯನ್ನೂ ಈ ದೇವಸ್ಥಾನ ಇಂದಿಗೂ ಉಳಿಸಿಕೊಂಡು ಬಂದಿದೆ.
ಬದುಕಿದೆಯಾ ಬಡಜೀವ ಎಂದು ದೇವಸ್ಥಾನದಿಂದ ಹೊರಬಿದ್ದು ನಂತರ ಬಾರದ ಭಾಷೆಯಲ್ಲಿ ತಿಂಡಿ, ತೀರ್ಥದ ಶಾಪಿಂಗ್ ಮಾಡಿ ದಾರಿ ತಪ್ಪದೆ ನಮ್ಮ ತಂಗುದಾಣ ತಲುಪಿದ್ದು ಒಂದು ಸಂತೋಷದ ಸಾಹಸವೇ ಸೈ. ಈ ದೇವಸ್ಥಾನಗಳ ಭರಾಟೆಯಿಂದ ಕೊಂಚ ಬ್ರೇಕ್ ಎಂಬಂತೆ ನಮ್ಮ ಮುಂದಿನ ಪ್ರಯಾಣ ಸ್ಥಳ ಆಲಪಿ ಆಗಿತ್ತು. ಯಾವ ದೇವರ, ನಿಯಮಗಳ, ಭಯಗಳ ಹಂಗಿಲ್ಲದೆ ಪ್ರಕೃತಿಯ ಮಡಿಲಲ್ಲಿ, ನಿಜ ದೈವವನ್ನು ಅರಿಯುವ ಸ್ಥಳ ಸಂದರ್ಭ ಒದಗಿತ್ತು. ವಿಪರ್ಯಾಸವೆಂದರೆ, ನಮ್ಮ ಗುಂಪಿನ ಸಾಕಷ್ಟು ಮಂದಿಗೆ ಈ ಸ್ಥಳ ಒಂದು “ಟೈಮ್ ವೇಸ್ಟ್” ಆಗಿತ್ತು.
 
 

‍ಲೇಖಕರು G

November 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. sunil rao

    Kaleda sala anantha padmanabhana devalakke hodaaga panche iralilla…darshanavoo aagalilla…ee sala hogabeku annistide.
    Keralada shuchutwakke ade saati.
    Beautiful writeup

    ಪ್ರತಿಕ್ರಿಯೆ
  2. Rekha Hegde

    ಲೇಖನ ಓದಿ ನನ್ನ ಅನುಭವ ನೆನಪಾಯಿತು.
    ಹತ್ತು ವರ್ಷಗಳ ಹಿಂದೆ ಗುರುವಾಯೂರು ದೇವಸ್ಥಾನಕ್ಕೆ ಹೋದಾಗಲೂ ಇದೇ ಗತಿ. ದೇವರ ದರ್ಶನದವರೆಗೆ ವಿಪರೀತ ಕಟ್ಟುನಿಟ್ಟು, ಬಾಡಿಗೆ ದಟ್ಟಿ ಉಟ್ಟು ಎರಡೂವರೆ ತಾಸು ಸರತಿಯಲ್ಲಿ ನಿಂತ ಮೇಲೆ ಒಂದು ನ್ಯಾನೋಸೆಕೆಂಡ್ ‘ಕೃಷ್ಣ ದರ್ಶನ’! ದರ್ಶನ ಮುಗಿಯುತ್ತಿದ್ದಂತೆ ಒಂದು ಕಿರಿದಾದ ಬಾಗಿಲಿನಲ್ಲಿ ಏನಿಲ್ಲವೆಂದರೂ ಒಂದು ನೂರು ಜನ ಎಲ್ಲೆಡೆಯಿಂದ ಮುನ್ನುಗ್ಗಿ ಹೊರಹೋಗಲು ಗುದ್ದಾಡುತ್ತಿದ್ದರು. ಒಂದು ಚಿಕ್ಕ ಗಲಾಟೆಯಾದರೂ ಕಾಲ್ತುಳಿತ ಗ್ಯಾರಂಟಿ ಅನ್ನೋ ಪರಿಸ್ಥಿತಿ! ಅಷ್ಟರ ನಂತರ ‘ದೊಡ್ಡ ದೊಡ್ಡ’ ದೇವಸ್ಥಾನಗಳಿಗೆ ಹೋಗುವುದೇ ಸಾಕು ಅನ್ನಿಸಿಬಿಟ್ಟಿದೆ.

    ಪ್ರತಿಕ್ರಿಯೆ
  3. Anil Talikoti

    ಅಯ್ಯೋ ದೇವರೆ – ಇವೆ ಅನುಭವಗಳು ನನ್ನವೂ ಕೂಡಾ. ನನ್ನ ಮಗನಂತೂ ಇನ್ನೂವರೆಗೂ ಪದ್ಮನಾಭ ದೇವಸ್ಠಾನದ ಧೋತಿಧಾರಿಗಳು ಬಂದೂಕಧಾರಿಗಳಾಗಿದ್ದನ್ನು ಎಲ್ಲರಿಗೂ ಹೇಳ್ತಾ ಇರ್ತಾನೆ. ನಾವು ಹೋದಾಗ (ಆಗಸ್ಟಿನಲ್ಲಿ) ಕೂಡಾ ಸಮುದ್ರ ತೀರದ ಗಾಳಿಯ ಆರ್ಭಟ ಜೋರಾಗಿತ್ತು, ಆದರೆ ಅದಕ್ಕೆಕಿಷ್ಟು ಕೋಪವೋ ಅರ್ಥವಾಗಲಿಲ್ಲ. ಇಲ್ಲಿಯೂ (ನಾರ್ಥ ಕ್ಯಾರೊಲಿನಾದ) ಸಮುದ್ರ ತೀರದಲ್ಲಿ ಜೆಲ್ಲಿ ಫಿಶ್ ಗಳು ದಂಡಿಯಾಗಿ ಬಿದ್ದಿರುತ್ತವೆ – ಹೆಚ್ಚ್ಚಾಗಿ ಮಳೆಗಾಲದ, ಅತೀ ಗಾಳಿಯ ದಿನಗಳಲ್ಲಿ – ನನಗನಿಸುವ ಮಟ್ಟಿಗೆ – ಇದು ಪ್ರಕೃತಿಯ ಪರಿಣಾಮವಿರಬಹುದು , ರಾಸಾಯನಿಕ ಅಥವಾ ಮನುಷ್ಯ ಪ್ರಯೋಗಗಳಿಗಿಂತ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  4. ಸತೀಶ್ ನಾಯ್ಕ್

    ಅತಿ ಸುಂದರವಾಗಿ ಹೆಣೆದು ಕೊಟ್ಟಿದ್ದೀರ ನಿಮ್ಮ ಪ್ರವಾಸದನುಭವಗಳನ್ನ. ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ, ಅವುಗಳ ಶಮನಕ್ಕಾಗಿಯೇ ದೇವರ ಪಾದಗಳಡಿಗೆರಗಲು ಓಡೋಡಿ ಹೋಗುವ ನಾವುಗಳು ಅಂತ ಹೆಸರಾಥ ದೇವಾಲಯಗಳಲ್ಲಿ ನಿಜಕ್ಕೂ ನಾವನುಭಾವಿಸುವ ಪಡಿಪಾಟಲುಗಳು ನಮ್ಮ ನಿಜ ಬದುಕಿನ ಪಡಿಪಾಟಲುಗಳಿಗಿಂತ ಕಷ್ಟವೆನಿಸಿ ಬಿಡುತ್ತದೆ. ನಾನಂತು ಅಂತ ದೇವಸ್ಥಾನ ಗಳಿಗೆ ಭಕ್ತನಾಗಿ ಹೋಗುವುದೇ ಇಲ್ಲ. ಬರೀ ವೀಕ್ಷಕನಾಗಿ ಆಷ್ಟೇ.

    ಪ್ರತಿಕ್ರಿಯೆ
  5. Badarinath Palavalli

    “Every act of creation is first an act of destruction” ನಿಜ Samyuktha Puligal ಅವರೇ.
    ನಿಮ್ಮ ಕೇರಳದ ಅನುಭವ ಬರಹ ನೈಜತೆಯ ಅನಾವರಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: