ಸಂಪು ಕಾಲಂ : ’ಓಡ್’, ಹಾಡು ಮತ್ತು ಪ್ರಗಾಥದ ಬಗ್ಗೆ ಒಂದಿಷ್ಟು

ಪ್ರಗಾಥ ಪ್ರತಿಭೆಯ ಒಳನೋಟ

“Away! away! for I will fly to thee,
Not charioted by Bacchus and his pards,
But on the viewless wings of Poesy…”
“ದೂರ, ದೂರ ಹಾರಿ ನಿನ್ನ ಬಳಿ ಬರುವೆನು. ಬಾಕಸ್ಸಿನ ಮಧುಪಾನದ ಮತ್ತಿನಿಂದಲ್ಲ, ಕಾವ್ಯವೆಂಬ ಅಗಾಧ ರೆಕ್ಕೆಯುಳ್ಳ ಹಕ್ಕಿಯನೇರಿ”. (ಬಾಕಸ್ ಎಂಬುವವನು ಮಧುಪಾನದ ದೇವತೆಯಾಗಿ ಗ್ರೀಕ್ ಪುರಾಣದಲ್ಲಿ ಕಾಣಸಿಗುತ್ತಾನೆ.) ಜಾನ್ ಕೀಟ್ಸ್ ನ Ode to a Nightingale ಪದ್ಯದಲ್ಲಿನ ಈ ಸಾಲುಗಳನ್ನು ಗಮನಿಸಿದರೆ ಇಂಗ್ಲಿಷ್ ಸಾಹಿತ್ಯದ ‘ಓಡ್’ ಎಂಬ ಸೊಗಸಾದ ಪರಿಕಲ್ಪನೆಯ ಕಿರುಪರಿಚಯವಾಗುತ್ತದೆ. ಕನ್ನಡದ ಭಾವಗೀತೆಗಳನ್ನು ಹೋಲುವ ಈ ಓಡ್ ಎಂಬ ಪ್ರಭೇದ ಪ್ರಾಚೀನ ಇಂಗ್ಲಿಷ್ ಸಾಹಿತ್ಯದಲ್ಲಿ ಒಂದು ಪಾಪ್ಯುಲರ್ ರಚನೆಯಾಗಿತ್ತು. ಗ್ರೀಕ್ ಮೂಲದ ಪ್ರಯೋಗವಾಗಿದ್ದ ‘ಓಡ್’ ಸಾಮೂಹಿಕ ಭಾವಗೀತೆಗಳನ್ನು ಹೋಲುತ್ತದೆ. ಇದನ್ನು ನೃತ್ಯಕ್ಕಾಗಿಯೂ ರಚಿಸುತ್ತಿದ್ದರು. ಗ್ರೀಕಿನ ಪಿಂಡಾರ್ ಮತ್ತು ಲ್ಯಾಟಿನ್ನಿನ ಹೊರೇಸ್ ಇಬ್ಬರ ಓಡ್ ರಚನಾ ಪ್ರಕಾರಗಳನ್ನು ಮಾದರಿಯಾಗಿ ಉಪಯೋಗಿಸಿ ಅನೇಕಾನೇಕ ಇಂಗ್ಲಿಷ್ ಸಾಹಿತಿಗಳು ಅದನ್ನು ತಮ್ಮ ಕುಂಚದಲ್ಲಿ ತೀಡಿ ಕಾವ್ಯ ಭಾಷೆಗೆ ಹೊಸ ರಂಗನ್ನು ನೀಡಿದ್ದಾರೆ.
‘ಓಡ್’ ಪ್ರಕಾರವು ಸಂಗೀತ ಅಥವಾ ಲಯ ಪ್ರಧಾನವಾದದ್ದು. ಅದರ ವಸ್ತುವೂ ಗಂಭೀರವಾದ, ವೈಚಾರಿಕವಾದ ಪ್ರಜ್ಞೆಯಾಗಿರುತ್ತದೆ. ಗಾಢ ಚಿಂತನೆಗಳಿದ್ದರೂ ಭಾವಾವೇಶಕ್ಕೆ ಆಸ್ಪದವಿದೆ. ಇವು ನಿರೂಪಣಾತ್ಮಕವಾಗಿಯೂ ಇರುತ್ತದೆ. ಹೆಚ್ಚಾಗಿ ಯಾವ ಛಂದಸ್ಸು, ಸಾಲುಗಳ ಮಿತಿಗಳಿಲ್ಲದೇ ಭಾವಲಯದಲ್ಲಿ ಮುಳುಗಿ ತಂತಾನೇ ಸಂತೋಷವಾಗಿ ಈಜುವ ಭಾವಲಹರಿಯೇ ಈ ಓಡ್ ಗಳು. ಇಂಗ್ಲಿಷ್ ಕವಿಗಳಾದ ಬೆನ್ ಜಾನ್ಸನ್, ಕೀಟ್ಸ್, ಡ್ರೈಡನ್, ಶೆಲ್ಲಿ, ಪೋಪ್ ಇನ್ನೂ ಅನೇಕರು ಈ ಓಡ್ ಎಂಬ ಸಮುದ್ರದಲ್ಲಿ ಸುಖ ಪಯಣ ಕಂಡವರು.
ಕನ್ನಡದ ಕಣ್ವ ಬಿ.ಎಂ.ಶ್ರೀ ಮೂಲಕ ಈ ಓಡ್ ಗಳು ಕನ್ನಡ ಸಾಹಿತ್ಯದ ಹೊಸ್ತಿಲ ಸೇರಿತು. ಸಂಸ್ಕೃತದ ಹಳೆಯ ಛಂದಸ್ಸಿನ ಪ್ರಕಾರವೊಂದಾದ ‘ಪ್ರಗಾಥ’ ಎಂಬ ಹೆಸರನ್ನು ಈ ಓಡ್ ಗೆ ಬಿ.ಎಂ.ಶ್ರೀನವರೇ ಇಟ್ಟರು. ಅಂದಿನಿಂದ ಇಂಗ್ಲಿಷ್ ಓಡ್ ಎಂಬ ಲಹರಿಯು ಕನ್ನಡದ ಕಂಪಿನೊಂದಿಗೆ ಸೇರಿ ಹೊಸ ಕಳೆ ಕಟ್ಟಿತು. ಬೇಂದ್ರೆ ಈ ಪ್ರಕಾರವನ್ನು ‘ಹಾಡು’ ಎಂದೇ ಕರೆದರು. ಡಿ.ವಿ.ಜಿ, ಕುವೆಂಪು, ಪುತಿನ, ಬೇಂದ್ರೆ, ಮಾಸ್ತಿ, ಕೆ.ಎಸ್.ನ, ಗೋವಿಂದ ಪೈ ಮುಂತಾದ ಅನೇಕ ಸಾಹಿತ್ಯ ದಿಗ್ಗಜರು ಪ್ರಗಾಥಗಳ ಪ್ರವಾಹದಲ್ಲಿ ತೊಯ್ದಿದ್ದರು. ಅದರ ರಸವನ್ನು ನಮಗೂಡಿಸಿದ್ದರು. ಒಬ್ಬರಿಗೆ ಒಂದು ವಿಗ್ರಹದ ಚೆಲುವು ಸ್ಫೂರ್ತಿಯಾದರೆ ಮತ್ತೊಬ್ಬರಿಗೆ ಹಕ್ಕಿಯ ಕಲರವ, ಬೇಲೂರ ಶಿಲಾಬಾಲಿಕೆಯರು ಒಬ್ಬರ ಪ್ರಗಾಥದಲ್ಲಿ ಮೂಡಿದರೆ, ಕನ್ನಡದ ಬಾವುಟದ ಹಾರಾಟ ಇನ್ನೊಬ್ಬರ ಪ್ರಗಾಥದಲ್ಲಿ ಅರಳಿತ್ತು. ಹೀಗೆ ಪ್ರಗಾಥಗಳ ವಸ್ತುವಿಗೆ, ಅದರ ಹರವಿಗೆ ಯಾವ ಕಡಿವಾಣವೂ ಇರಲಿಲ್ಲ. ಪ್ರಗಾಥಗಳ ಮೂಲಕ ಒಂದು ವಿಷಯವನ್ನು ಬೆಳಗಿಸಲು ಭಾವ, ಲಯ ಮುಖ್ಯವಾಗಿದ್ದವು. ಅದನ್ನು ಭವ್ಯ ಕವನ (Majestic poem) ಎಂದು ಸಹ ಹೆಸರಿಸಲಾಗಿತ್ತು. ಹೀಗೆ ಒಂದಷ್ಟು ಕಾಲ ಪ್ರಗಾಥಗಳು ಕನ್ನಡ ಸಾಹಿತ್ಯ ಲೋಕದಲ್ಲಿ ರಾರಾಜಿಸಿತು.
ಆದರೆ, ಇಂತಹ ಭವ್ಯ ಕಾವ್ಯ ಪ್ರಕಾರ ಸಮಯಕ್ಕನುಗುಣವಾಗಿ ಸಾಮಾಜಿಕ ಬದಲಾವಣೆಗೊಳಗಾಗಿ ಕ್ಷೀಣಿಸಿ, ಪ್ರಗಾಥಗಳ ಪರಿ ಅಂತ್ಯಕ್ಕೆ ಬಂದಿತ್ತು. ಒಂದಷ್ಟು ಕಾಲ ಎಲ್ಲರನ್ನೂ ಆಕರ್ಷಿಸಿದ ಪ್ರಗಾಥಗಳು ಅಷ್ಟೇ ಬೇಗ ಅದರ ಕಾವು ಕಳೆದುಕೊಂಡಿತು. ಪ್ರಗಾಥಗಳ ರಚನೆ ಗಮನೀಯವಾಗಿ ಕಡಿಮೆಯಾಗುತ್ತಾ ಬಂತು. ಇಂತಹ ಸಂದರ್ಭದಲ್ಲಿ, ಪ್ರಗಾಥಗಳ ಈ ಅವನತಿಯನ್ನು ಗಮನಿಸಿ, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಪ್ರಗಾಥ ಪ್ರಭೇದಗಳನ್ನು ಅಧ್ಯಯನ ಮಾಡಿ ಅದಕ್ಕೆ ಮನಸೋತಿದ್ದ ಕನ್ನಡದ ಕವಿ ಡಾ. ದೊಡ್ಡರಂಗೇಗೌಡರು ಈ ಪ್ರಗಾಥಗಳ ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿರುವುದು ಗಮನಾರ್ಹ. ಪೃಥ್ವಿ ಪ್ರಗಾಥ, ಪ್ರಳಯ ಪ್ರಗಾಥ, ಪಾಪಿ ಪ್ರಗಾಥ, ಪರಾಕ್ರಮ ಪ್ರಗಾಥ, ಪ್ರೀತಿ ಪ್ರಗಾಥ, ಪರದೇಸಿ ಪ್ರಗಾಥ ಹೀಗೆ ಸಾಕಷ್ಟು ಪ್ರಗಾಥಗಳನ್ನು ಅದ್ಭುತವಾಗಿ ಭಾವಲಹರಿಯಲ್ಲಿ ತೋಯಿಸಿ ಪ್ರಗಾಥಗಳ ಕಟ್ಟಡವನ್ನು ಹೊಸ ರಂಗಿನೊಂದಿಗೆ ಮರುನಿರ್ಮಾಣ ಮಾಡುತ್ತಿದ್ದಾರೆ.
ಪ್ರಗಾಥಗಳ ಕುರಿತಾದ ದೋರಂಗೌರವರ ಈ ಮಾತುಗಳು ಗಮನಾರ್ಹ: “ಭಾವಗೀತೆಯ ಆಂತರ್ಯದಿಂದ ಟಿಸಿಲೊಡೆದದ್ದೇ ಪ್ರಗಾಥ. ಅದರ ಬೀಸು ದೊಡ್ಡದು. ಭಾವಧಾರೆ ಜೋಗದ ಜಲಪಾತದ ಹಾಗೆ; ಅಮೆರಿಕಾದ ನಯಾಗರದ ಹಾಗೆ; ಓತಪ್ರೋತ… ಭಾವಪಾತ! ನಮ್ಮ ನಲ್ಮೆ ಕಾವೇರಿ ನದಿಯ ಹಾಗೆ ಅದರ ಹರಿತ. ಕವಿಗೆ ಒಮ್ಮೆ ಆ ಗುಂಗು ಹತ್ತಿದರೆ ಸಾಕು. ಹರಿಯುತ್ತದೆ ನಿರಂತರ ನೀಲ ನೈಲ್ ನದಿಯ ಹಾಗೆ ಜೀವಂತ. ಆ ಓಟದಲ್ಲಿ ‘ಓಡ್’ ಇದೆ. ಅದು ರಮ್ಯ; ನವ್ಯವೂ ಹೌದು. ಕಾವ್ಯವೂ ಹೌದು”.

“ಪೃಥ್ವಿ ಪ್ರಗಾಥ” ಎಂಬ ಅವರ ಪುಸ್ತಕವೊಂದರಲ್ಲಿ ಮುದ್ರಿತಗೊಂಡ ಅವರ ಈ ಮಾತುಗಳನ್ನು ಓದಿ ನಾನು ಆ ಪುಸ್ತಕವನ್ನು ಓದ ಬಯಸಿದೆ. ಪುಸ್ತಕದ ಪೂರ ಅವರೇ ಹೇಳಿರುವಂತೆ “ಪ್ರಗಾಥಗಳ ಓತಪ್ರೋತ…ಭಾವಪಾತ”. ಅನೇಕ ಪ್ರಗಾಥಗಳ ಗುಚ್ಛವಾದ ಪೃಥ್ವಿ ಪ್ರಗಾಥದ ವಸ್ತುವಿನ ಹರವು ಅಗಾಧ. ಬಡವರ ಬೆವರಿನ ಹಾಡು, ಪ್ರಳಯ, ಸುನಾಮಿಗಳ ಮೊರೆತ, ಪ್ರೀತಿ, ಪಾಪ, ಪರಾಕ್ರಮಗಳ ಗಾಥೆ, ಪೃಥ್ವಿ, ವಿಜ್ಞಾನ, ಪಂಚಮುಖಿಗಳ ಗೀತೆ, ನಯಾಗರ, ನೈಲು, ಐಗುಪ್ತ (ಈಜಿಪ್ಟ್) ಗಳೆಂಬ ಪರದೇಸಿಯ ಕವಿತೆ. ಹೀಗೆ ಈ ಪ್ರಗಾಥಗಳ ವಿಸ್ತಾರ ದೊಡ್ಡದು. ಅನೇಕ ಆಳ, ಗಹನ, ಸೂಕ್ಷ್ಮ, ಸಂವೇದನಾಶೀಲ ವಿಷಯಗಳು ಈ ಪುಸ್ತಕದ ವಿಷಯವಾಗಿದೆ. “ಕನ್ನಡ ಕಾವ್ಯದ ಜಾಯಮಾನಕ್ಕೆ ಪ್ರಗಾಥಗಳ ರಚನೆ ಹೊಂದುತ್ತದೆ” ಎಂದು ಹೇಳುವ ಕವಿ ಪೃಥ್ವಿ ಪ್ರಗಾಥದ ಹೊತ್ತಿಗೆಯ ಮೂಲಕ ಅದನ್ನು ನಿರೂಪಿಸಿದ್ದಾರೆ ಸಹ.
ಪ್ರತಿಯೊಂದು ಪ್ರಗಾಥವೂ ತನ್ನ ಲಯದೊಂದಿಗೆ ಒಂದೇ ಗುಕ್ಕಿನೊಂದಿಗೆ ನಮ್ಮನ್ನು ಸೆಳೆದೊಯ್ಯುತ್ತದೆ. ಪುಸ್ತಕದಲ್ಲಿನ ಒಂದು ಪದ್ಯವಾದ ‘ಪೃಥ್ವಿ ಪ್ರಗಾಥ’ವನ್ನೇ ಮೊದಲು ಓದಿದ ನನಗೆ, ಕ್ಷಣಗಳಲ್ಲೇ ಅದರ ಹಿಡಿತ ದೊರೆತು ಒಂದು ಸಣ್ಣ ನಿಟ್ಟುಸಿರು! ಸರಳವಾಗಿ ಕಂಡರೂ ಕಾಡುವ ಕೆಲವು ಸಾಲುಗಳು ಹೀಗಿವೆ:
“ಕಲ್ಪವೃಕ್ಷವಿಲ್ಲ; ಕಾಮಧೇನುವಿಲ್ಲ
ಕಂಸಾಸುರರೇ ಈಗ ಎಲ್ಲ!
ಜೀವ ಲಕ್ಷ್ಮೀ ಇಲ್ಲ; ಗೊಂಡೆ ಹೂ ಇಲ್ಲ
ಪ್ಲಾಸ್ಟಿಕ್ಕೂ ಮನೆಯಲೆಲ್ಲಾ!
ತುಂಬೆ ಹೂ ಇಲ್ಲ; ರೆಂಬೆ ಹೂ ಇಲ್ಲ
ಚಿತ್ರವಷ್ಟೇ ಗೋಡೆಯಲೆಲ್ಲಾ”
ದೋರಂಗೌರವರ ವಿಶೇಷ ಕಾಣಿಸುವುದು ಅವರ ಕಾವ್ಯದ ಸರಳತೆಯಲ್ಲೇ. ಅತ್ಯಂತ ಸರಳವಾಗಿ, ಸಾಮಾನ್ಯರಿಗೂ ಮನಮುಟ್ಟುವಂತೆ ಗಂಭೀರ ವಿಷಯಗಳನ್ನು ತಿಳಿಯಾಗಿಸುತ್ತಾರೆ. ಆಳಕ್ಕಿಳಿಸುತ್ತಾರೆ.
“ಹಗಲು ಇರುಳಂತಾಗುತ
ಕಡತ ಬಿಚ್ಚಿತು ವಿಕೃತ;
ಕಗ್ಗತ್ತಲೆಯು ಹೆಚ್ಚುತ
ಜಂಘಾಬಲವೇ ಉಡುಗಿತು!”
“ಕಡತ ಬಿಚ್ಚಿತು ವಿಕೃತ” ಎನ್ನುವುದು ಸರಳ ಹಾಗೂ ದಿನನಿತ್ಯ ಬಳಸುವ ಪದಗಳ, ಗ್ರಹಿಕೆಗಳ ರೂಪಕವಾಗಿದೆ. ಆದರೆ ಅದರ ವಿಷಯ ಬೆಚ್ಚಿಬೀಳಿಸುವ ಹಾಗಿದೆ. ಈ ರೀತಿ ತಮ್ಮ ವಿಚಾರಗಳನ್ನು, ಬದುಕಿನ ಆಗು ಹೋಗುಗಳನ್ನು ಸರಳೀಕರಿಸಿ, ಲಯಬೆರೆಸಿ ಹಾಡಿ, ಹಾಡಿಸುವುದು ಕವಿಗೆ ಪರಿಚಯವಾಗಿದೆ. ಪದ್ಯದ ವಿಷಯದಷ್ಟೇ ನಾಜೂಕಾಗಿ ಅವರು ಪದ್ಯಕಟ್ಟುವಿಕೆಗೂ ಮಹತ್ವ ಕೊಡುತ್ತಾರೆ. ಪದ್ಯದ ಸಾಲುಗಳು ಸಹ ವಿಷಯವನ್ನು ಬಿಂಬಿಸುವಂತಿರುವಂತೆ ತೋರುತ್ತಾರೆ. ‘ಪ್ರಳಯ ಪ್ರಗಾಥ’ದ “ಉತ್ಸಾಹದ ಕಥೆ ಮುಗಿಯಿತು, ಉಸಿರ್ಗಟ್ಟಿದ ವ್ಯಥೆ ಬಿರಿಯಿತು; ಕ್ಷಣ ಕ್ಷಣ ಕ್ಷಣ ಭುವಿ ಕುಸಿಯಿತು, ದಿನ ದಿನ ದಿನ ಅಳಲು ಹೆಚ್ಚಿತು!” ಎಂಬ ಸಾಲುಗಳು ಈ ಮಾತನ್ನು ಸಮರ್ಥಿಸುತ್ತವೆ.
‘ಪ್ರೀತಿ ಪ್ರಗಾಥ’ದ ತುಂಬೆಲ್ಲಾ ಪ್ರೀತಿಯ ಕಂಪು. ಮುಗ್ಧ ಪ್ರೇಮ, ಶುದ್ಧ ಕಾಮ, ಲಯಬದ್ಧ ಸಾಲುಗಳ ಆಗಮ. “ಮೊದಲ ದಿನ ಮಾತಿಗಿಂತ ಮೌನ ನೋಟದ ಮೀಟು, ಎಷ್ಟು ಚೆನ್ನ? ಪ್ರೀತಿ ಸುರಿವ ಕಂಗಳಲ್ಲಿ ನೂರು ಕಾವ್ಯ ಕಂಡವಲ್ಲಿ!” ಎಂಬ ಸಾಲುಗಳು ತಮ್ಮ ಸ್ವಾನುಭವದ ಓಲೆಯಾಗಿದೆ. ಲೌಕಿಕ ವಿಷಯಗಳನ್ನು ಚರ್ಚಿಸುತ್ತಲೇ ತಮ್ಮದೇ ಆದ ವಿಶೇಷ ಧಾಟಿಯಲ್ಲಿ ಆಧ್ಯಾತ್ಮಿಕವಾಗಿಯೂ ಪ್ರಗಾಥವನ್ನು ಬಳಸಲು ಯತ್ನಿಸುತ್ತಾರೆ ದೋರಂಗೌರವರು. ತಮ್ಮ ‘ಅನಿರೀಕ್ಷಿತ ಗಾಥ’ದಲ್ಲಿನ “ಬಾಳೆಂಬುದೇನು ಹೀಗೆ….. ಹೂವಿನಲ್ಲೂ ಮುಳ್ಳಿರುತ್ತೆ, ಏಳಿನಲ್ಲೂ ಬೀಳಿರುತ್ತೆ, ಹಾದಿಯಲ್ಲೂ ಕಲ್ಲಿರುತ್ತೆ….” ಎಂಬಿತ್ಯಾದಿ ಸಾಲುಗಳು ಬದುಕಿನ ಕೌತುಕ, ವಿಸ್ಮಯಗಳ ಬಗೆಗಿನ ಅನುಭವಸ್ಥ ಒಳನೋಟವನ್ನು ಒಂದು ಪುಟ್ಟ ಹಾಡಿನ ಮೂಲಕ ಬಿಂಬಿಸಿದ್ದಾರೆ.
ಕೊನೆಯದಾಗಿ, ಪುಸ್ತಕದ ಅಲ್ಲಲ್ಲಿ ಕೆಲವು ದೋಷಗಳು, ಅತಿ-ಸರಳೀಕರಣ, ಪುನರಾವರ್ತನೆ ಇದ್ದೇ ಇದೆ. ಆದರೆ ಅವೆಲ್ಲವೂ ನಗಣ್ಯ. ಕಳೆದುಹೋದುದರ ಕಟ್ಟುವಿಕೆಯ ಪ್ರಯತ್ನವೇ ಸಾಕು ನಮ್ಮಲ್ಲಿ ಒಂದು ಸಂತೋಷ, ಅಚ್ಚರಿ ಮೂಡಿಸಲು. ಪ್ರಗಾಥಗಳ ವಿವಿಧ ರಂಗಿನ, ವಿವಿಧ ರೂಪಗಳ ಮೇಳೈಕೆಯಾಗಿರುವ ಹಾಡಬುತ್ತಿಯಾದ ‘ಪೃಥ್ವಿ ಪ್ರಗಾಥ’, ಕನ್ನಡ ಸಾಹಿತ್ಯಕ್ಕೆ ಒಂದು ವಿನೂತನ ಕಾಣಿಕೆಯಾಗಿದೆ. ಈ ಹೊಸ ಚಿಗುರು ಹಳೆ ಬೇರಿನ ಘಮ ಪಸರಿಸಿ ಪ್ರಗಾಥಗಳ ಹರವನ್ನು ಮತ್ತಷ್ಟು ವಿಸ್ತರಿಸಲಿ ಎಂಬ ಆಶಯ.
 

‍ಲೇಖಕರು G

May 31, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anil Talikoti

    ಸುಂದರ ಸುಲಲಿತ ವಿವರಣೆ. ಪ್ರಗಾಥ ಭಾವಗೀತೆಯ ಟಿಸಿಲು ಎಂಥಹ ಸುಂದರ ಭಾವ- ಇದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  2. ಡಾ.ಪ್ರಕಾಶ ಗ.ಖಾಡೆ

    ಕನ್ನಡ ಸಾಹಿತ್ಯದ ವಿಮರ್ಶಾ ಕ್ಷೇತ್ರ ವಿಸ್ತರಿಸುತ್ತಿದ್ದೀರಿ,,ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: