ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾ ಹೊನಗುಂಟಿಕರ್ ಕವಿತೆ – ಗೆದೆಯಬೇಕು ಮಗಳ…

ಸಂಧ್ಯಾ ಹೊನಗುಂಟಿಕರ್

ನಡುಮನೆಯ ಗೋಡೆಗೆ ನೇತುಹಾಕಿದೆ
ಗೀತೋಪದೇಶದ ಪಟ
ಅರ್ಜುನಗೆ ಕೃಷ್ಣನ ಪಾಠ
ಅಲ್ಲಲ್ಲಿ ಬಾಣಗಳ ಮೊನೆ
ಜೀವಗಳ ಕೊನೆ
ಕತ್ತರಿಸಿದ ಕೈ, ಹೊರಳಾಡುವ ಮೈ
ಗೋಡೆ ನೋಡಿದ
ಅಮ್ಮನ ಉವಾಚ:
ರಣಭೂಮಿಯ ಚಿತ್ರ
ಮನೆಯಲ್ಲೇಕೆ ಮಗಳೆ?
ಮನದಲ್ಲಿಯೇ ರಣರಂಗವಿರುವಾಗ…

ಕತ್ತಲೆಯ ಎದೆಯಲ್ಲಿ
ನೇಗಿಲ ಹೂಡಿ
ಕನಸ ಬಿತ್ತಿದರೂ
ಮೊಳಕೆಯೊಡೆಯದು
ಹಗಲ ನೆತ್ತಿಯಲ್ಲಿ
ಮನಸನೂರಿದರೂ
ಕುಡಿಯೊಡೆಯದು
ಯುದ್ಧವೆಂಬ ಹದ್ದು
ನೆತ್ತಿಯಲ್ಲಿರಲು.

ಗೆದೆಯೋಣ ಮೊದಲು
ಎದೆಯೊಳಗಿನ ಯುದ್ಧ
ಹದಗೊಂಡ ಬದುಕ
ಹೆದೆಗೇರಿಸಿಕೊಂಡು
ಹುದುಗಿದ ದುಃಖಕ್ಕ
ಬಾಣ ಹೂಡೋಣ

ಗೆದೆಯಬೇಕು ಮಗಳ..ss
ಅಸ್ತ್ರವಿಲ್ಲದ ಲಡಾಯಿ,
ಇಲ್ಲ ಯುದ್ಧೋನ್ಮಾದದ ಬಡಾಯಿ
ಕನಸುಗಳೆಲ್ಲ ಸೂಡುಕಟ್ಟಿ
ಬೆಂಕಿಯಿಲ್ಲದೆಯೇ ದಹನವಿಲ್ಲಿ

ಹರಗಬೇಕು ಎದೆಯಂಗಳ
ಉಸಿರುಗಟ್ಟುವ ಕೋಟಲೆಯ
ಹೆಡೆಮುರುಗಿ ಕಟ್ಟಿ
ಬದುಕು ಬಯಲಾಗಿಸಿ
ಬೆಳೆಯಬೇಕು ಹಸಿರು.. ಹಚ್ಚ ಹಸಿರು.
ಉಸಿರು
ಹನಿ…ಹನಿ…ಹನಿ…ತನಿ ಸುರಿದು…

‍ಲೇಖಕರು avadhi

21 February, 2023

3 Comments

  1. prathibha nandakumar

    ಕವನ ಚೆನ್ನಾಗಿದೆ

    ಪ್ರತಿಭಾ ನಂದಕುಮಾರ್

    • ಸಂಧ್ಯಾ ಹೊನಗುಂಟಿಕರ್

      ಧನ್ಯವಾದಗಳು ಮೇಡಂ.

    • ಸಂಧ್ಯಾ ಹೊನಗುಂಟಿಕರ್

      ಧನ್ಯವಾದಗಳು ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading