ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಜಗಳ ಜಗತ್ತಿನ ಜೊತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

3

ಜಗಳ ಜಗತ್ತಿನ ಜೊತೆ

ಅದೊಂದು ಕಾಲವಿತ್ತು ಅಲ್ಲಿ ಎಲ್ಲವೂ ಚೆನ್ನಾಗಿತ್ತು. ಹೀಗೆನ್ನುವುದು ಬರೀ ಹಳಹಳಿಕೆ ಆದರೆ ಪರವಾಗಿಲ್ಲ. ಹೀಗೆನ್ನುವುದು ರೋಗವಾಗಿಬಿಟ್ಟರೆ ಅಥವಾ ನಿಜವೇ ಆಗಿಬಿಟ್ಟರೆ? ಭವಿಷ್ಯದ ಮೇಲೆ ನಾವಿಟ್ಟುಕೊಂಡಿರುವ ಎಲ್ಲ ನಂಬಿಕೆಗಳೂ ನೆಲದ ಪಾಲಾಗಿ ನಿಶ್ಚೇತನರಾಗಿ ಹೋಗುತ್ತೇವೆ. ನನಗೆ ಆಗ್ತಾ ಇರೋದೂ ಅದೇನಾ? ಸಹಾ ನನ್ನನ್ನು ಹೀಗೆ ಒಂಟಿಯಾಗಿ ಬಿಟ್ಟು ಹೋದರೆ ನನಗೆ ಬೇರೆ ಏನೂ ದಾರಿ ಇಲ್ಲವಾ? ಯಾಕಿಲ್ಲ ಇಂಥಾ ಭ್ರಮೆಗಳಿಂದ ಹೊರಗೆ ಬರಬೇಕಿದೆ. ನನ್ನ ಜೊತೆ ಹುಟ್ಟಿದಾಗಿಂದ ಬೆನ್ನಟ್ಟಿಕೊಂಡು ಬಂದ ಹಾಡುಗಳಿವೆ. ಆ ಹಾಡುಗಳನ್ನು ಪ್ರೀತಿಸುವ ಜನರಿದ್ದಾರೆ. ರಾಜ್ಯದ ಯಾವ ಮೂಲೆಗೆ ಹೋದರೂ ಆದರಿಸುವ ಮನಸುಗಳಿವೆ, ಜೀವಕ್ಕಿಂತಲೂ ಹೆಚ್ಚಾದ ಮಗಳಿದ್ದಾಳೆ. ಮಗಳನ್ನು ನೆನೆಸಿಕೊಂಡ ತಕ್ಷಣ ಉತ್ಸಾಹವೊಂದು ಊಟೆಯಾಗಿ ಇಡೀ ಜಗತ್ತೇ ಆಪ್ತವಾಗಿ ನನ್ನ ಸುತ್ತಾ ಸುತ್ತಿದ ಹಾಗಾಯಿತು. ಸತೀಶನ ನೆಪದಲ್ಲಿ ನನ್ನ ಬದುಕಿಗೆ ಬಂದ ಬೆಳಕು ಅದು. ಅವಳ ನೆನಪಾಗಿದ್ದೇ ಆಗಿದ್ದು ನಾನೆಲ್ಲಿದ್ದೇನೆ ಎನ್ನುವ ಅರಿವು ಮೂಡಿತು. ಕತ್ತಲು, ಮಳೆ- ಜನರೇ ಸುಳಿಯದ ಕಾಡಿನಲ್ಲಿರುವುದು ಸರಿಯಲ್ಲ – ಅದೂ ಬೇಡದ ವಿಷಯ ತೆಗೆದುಕೊಂಡು. ಸಮಾಜದಲ್ಲಿ ಮಾತ್ರವಲ್ಲ ಮನೆಯಲ್ಲಿನ ನನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಮೈಮೇಲೆ ಬಿದ್ದ ದೂಳನ್ನು ಕೊಡವಿಕೊಂಡವಳಂತೆ ಸಿಕ್ಕ ಬಸ್ಸು ಹತ್ತಿ ಮನೆಗೆ ಬಂದೆ.

ಅಶಾ ನನಗಾಗಿ ಕಾಯ್ತಾ ಇದ್ದಳು. ಮನೆಯೊಳಗೆ ಬರುವಾಗ ಹಿಂದೆ ಮಾತಾಡಿಕೊಳ್ಳುತ್ತಲೇ ಅಮ್ಮಾ ಯಾಕಿಷ್ಟು ತಡ? ಪಪ್ಪಾ ಆಗಲೇ ಮನೆಗೆ ಬಂದರಂತೆ. ಮತ್ತೆ ನಿಮ್ಮಿಬ್ಬರ ಮಧ್ಯೆ ಜಗಳಾನಾ? ನನಗೆಷ್ಟು ಭಯ ಆಗಿತ್ತು ಗೊತ್ತಾ?’ ಎಂದಳು. ನಿಜಕ್ಕೂ ಅವಳ ಧ್ವನಿಯಲ್ಲಿ ಆತಂಕ ಇತ್ತು. ಇದನ್ನೆಲ್ಲಾ ಇವಳಿಗೆ ಹೇಗೆ ಹೇಳಿದರು? ಇಂಥಾ ವಿಷಯಗಳನ್ನು ಇವಳಿಗೆ ಹೇಳಬಹುದಾ? ಇವಳ ಈ ಪ್ರಶ್ನೆಗಳಿಗೆ ನಾನಾದರೂ ಏನು ಉತ್ತರ ಕೊಡಲಿ? ಆದರೆ ಮಾತಿದ್ದ ಮೇಲೆ ಮಾತನ್ನು ವಾಪಾಸು ಮಾಡಲೇಬೇಕಲ್ಲ? ಹೊಸದೇನೂ ಇಲ್ಲವಲ್ಲ. ಇದ್ದಿದ್ದೆ. ಅಪ್ರಾಮಾಣಿಕವಾಗುವುದನ್ನು ನೋಡಿದ್ರೆ ಮೈ ಉರ್ಯುತ್ತೆ. ನೀನ್ ಊಟ ಮಾಡಿದ್ಯೇನೋ?’ ಎಂದೆ ಕಕ್ಕುಲಾತಿಯಿಂದ. ತನ್ನ ಪ್ರಶ್ನೆಗೆ ಉತ್ತರ ಹೇಳದೆ ಮಾತು ಮರೆಸಿದ್ದರಿಂದ ಕಸಿವಿಸಿಗೊಂಡರೂ ತೋರಗೊಡದೆ ಇಲ್ಲಮ್ಮಾ ಕಾಲೇಜು ಮುಗಿಸಿಕೊಂಡು ನಾನು ಬಂದಿದ್ದೂ ತಡವಾಗೇ. ಇವತ್ತು ಇದ್ದಕ್ಕಿದ್ದ ಹಾಗೆ ಸ್ಪೆಷಲ್ ಕ್ಲಾಸ್ ಮಾಡಿದ್ರು. ಹಿಸ್ಟರಿ ಮ್ಯಾಡಂ ಡೆಲವರಿಗೆ ಹೋಗ್ತಾರಂತೆ ಅದಕ್ಕೆ ಎಲ್ಲಾ ಪೋರ್ಷನ್ಸ್ ಕವರ್ ಮಾಡ್ಬೇಕಲ್ಲಾ’ ಎಂದಳು. ಅವರ್ಯಾರೋ ಡೆಲವರಿಗೆ ಹೋದರೆ ನಿಮಗೆ ಎಲ್ಲವನ್ನೂ ಒಟ್ಟಿಗೆ ತಲೆಗೆ ತುಂಬಿಬಿಡೋದಾಂತಾ? ಎಂಥಾ ಜನ? ಪುಟ್ಟ ತಲೆಗೆ ಎಷ್ಟು ತಡಕೊಳ್ಳಲು ಆಗುತ್ತೆ?’ ಎಂದೆ. ಅಮ್ಮಾ ಪ್ಲೀಸ್ ನಾನು ಪುಟ್ಟ ಅಲ್ಲ. ನಾನೀಗ ಮೇಜರ್’ ಎಂದಳು ಆಶಾ ಹುಸಿಕೋಪದಿಂದ.


ನನಗೆ ಗೊತ್ತು ಅವಳ ಮಾತಲ್ಲಿ ಯಾವ ಕಲ್ಮಷವೂ ಇಲ್ಲಾಂತ. ಆದರೆ ನನ್ನ ಮನಸ್ಸಿನ ನೋವು ಸಂಕಟಗಳು ಹೊರಬರಬೇಕಲ್ಲಾ. ತಲೆಯೊಳಗೆ ಚಿಟಿಚಿಟಿ ಎನ್ನುತ್ತಿದ ಮಾತುಗಳನ್ನು ಎಲ್ಲಿಡಲಿ? ಹೊರಹಾಕದೆ ಗತ್ಯಂತರವಾದರೂ ಏನು? ಅವಳ ಈ ಒಂದು ಮಾತು ನೆಪಮಾಡಿಕೊಂಡೆ, ಎಲ್ಲಕ್ಕೂ ಚಿಮ್ಮುಹಲಗೆಯಾಯಿತು.ಎಲ್ಲರೂ ದೊಡ್ಡವರೇ ಕಣೆ! ನನ್ನೊಬ್ಬಳನ್ನು ಬಿಟ್ಟು. ನನಗೆ ಯಾರು ಹೇಳಿದ್ದೂ ಅರ್ಥ ಆಗಲ್ಲ’ ಎಂದು ಬೇಸರದಿಂದ ಅಡುಗೆ ಮನೆಯ ಕಡೆಗೆ ಹೊರಟೆ. ಪ್ಲೀಸ್ ಅಮ್ಮಾ ಸುಮ್ನೆ ಬೇಜಾರ್ ಮಾಡ್ಕೋಬೇಡ. ನಾನು ಯಾವ್ದಾದ್ರೂ ವಿಷ್ಯಾನ, ಅಮ್ಮಾ ಹೀಗೆಲ್ಲಾ ಆಯ್ತು ಅಂತ ಹೇಳಿದ್ರೆ, ನೀನು ಬಂದು ಕಾಲೇಜ್‌ನಲ್ಲಿ ಕೇಳ್ತೀಯಾ, ಜಗಳ ಮಾಡ್ತೀಯ. ಎಲ್ರೂ ನಿಮ್ಮಮ್ಮನ್ನ ಕರ್ಕೊಂಡ್ ಬಂದ್ಯಾ ಜಗಳ ಮಾಡೋಕ್ಕೆ ಅಂತ ರೇಗುಸ್ತಾರೆ. ಅದಕ್ಕೆ ನಿಂಗೆ ಏನ್ ಹೇಳೋಕೂ ಹಿಂಜರಿಕೆ’ ಎಂದಳು. ಹೌದು ನಾನೊಬ್ಬ ಜಗಳಗಂಟಿ, ಇನ್ಮೇಲೆ ನನ್ನಹತ್ರ ಏನೂ ಹೇಳಬೇಡ’ ಎಂದು ಅಡುಗೆ ಮನೆಯ ಕಡೆಗೆ ಹೊರಟೆ. ಅಮ್ಮ ಸಣ್ಣ ಪುಟ್ಟದ್ದನ್ನೆಲ್ಲಾ ದೊಡ್ಡದು ಮಾಡಿದ್ರೆ ನಾನು ನಿನ್ನ ಜೊತೆ ಮಾತಾಡೋದಾದ್ರೂ ಹೇಗೆ? ನಿನ್ನ ಜೊತೆ ಇರೋ ಪ್ರಾಬ್ಲಂ ಇದೊಂದೆ’ ಎಂದಳು ಅಸಹಾಯಕತೆಯಿಂದ. ಆಶಾಳ ಆತಂಕಕ್ಕೆ ಕಾರಣ ಇದೆ ಮಕ್ಕಳು ದೊಡ್ಡವರಾಗ್ತಾ ಅವರನ್ನು ದೊಡ್ಡವರು ಅಂತ ನಾವು ಕನ್ಸಿಡರ್ ಮಾಡಿಲ್ಲ. ಹಾಗೆ ಟ್ರೀಟ್ ಮಾಡಿಲ್ಲ ಅಂದ್ರೆ ಪ್ರಾಬ್ಲಂ ಬೇರೆಯದೇ ಸ್ವರೂಪ ತೆಗೆದುಕೊಳ್ಳುತ್ತೆ ಅನ್ನಿಸಿ, ಸಮಾಧಾನ ಮಾಡಿಕ್ಕೊಳ್ಳುವವಳಂತೆ,ಓಕೆ ಆಶಾ ಹೊರಗಿನ ಸಂಗತಿಗಳು ನನ್ನ ಡಿಸ್ಟರ್ಬ್ ಮಾಡಿವೆ. ಈಗ ಮಾತಾಡದೆ ಇದ್ದರೆ ಒಳ್ಳೇದೇನೋ’ ಎನ್ನುತ್ತಾ ಒಳಗೆ ಹೊರಟೆ.

ಹಿಂದೇ ಬಂದ ಆಶಾ ಅಲ್ಲೇ ಇದ್ದ ಸ್ಟೂಲ್ ಮೇಲೆ ನನ್ನ ಕೂರಿಸಿ, ಒಂದ್ ನಿಮ್ಷ ಕುತ್ಕೋ ಸ್ಟ್ರಾಂಗ್‌ ಕಾಫಿ ಮಾಡಿಕೊಡ್ತೀನಿ. ನಿನ್ನ ಎಲ್ಲ ಟೆನ್ಷನ್ ಕಡ್ಮೆ ಆಗುತ್ತೆ. ಆಮೇಲೆ ಕೆಲಸ ಶುರುಮಾಡುವಿಯಂತೆ’ ಎನ್ನುತ್ತಾ ಸ್ಟವ್ ಹಚ್ಚಿದಳು. ನಿಜ ಆಶಾ ದೊಡ್ಡವಳಾಗಿದ್ದಾಳೆ ಎನ್ನಿಸಿ ಅವಳನ್ನೇ ದಿಟ್ಟಿಸತೊಡಗಿದೆ. ಅವಳಿಗೂ ಅದು ಗೊತ್ತು ಆದರೂ ಗೊತ್ತಿಲ್ಲದವಳಂತೆ ತನ್ನ ಕೆಲಸದಲ್ಲಿ ಮಗ್ನಳಾದಳು. ನನ್ನ ಮೌನವನ್ನು ಅವಳು ಹೇಗೆ ಅರ್ಥ ಮಾಡಿಕೊಂಡಳೋ ಏನೋ,ಅಮ್ಮಾ ತಪ್ಪು ತಿಳೀದಿದ್ರೆ ಒಂದು ಮಾತು. ಆಗ್ಲೇ ಅಪ್ರಾಆಮಾಣಿಕತೆಯ ಬಗ್ಗೆ ಮಾತಾಡ್ದೆ. ನೀನೂ ಇನ್ನೊಬ್ಬರ ಕಣ್ಣಲ್ಲಿ ಹಾಗೆ ಕಾಣಲ್ಲ ಅಂತ ಗ್ಯಾರೆಂಟಿ ಏನು? ಎಂದಳು. ಅವಳೆಡೆಗೆ ತೀಕ್ಷ್ಣವಾಗಿ ನೋಡುತ್ತಾ, ಕಾಣುವುದು ಬೇರೆ ಇರೋದು ಬೇರೆ ಕಂದಾ’ ಎಂದೆ. ಅವಳು ಸ್ವಲ್ಪ ಕರಗಿದ ಹಾಗೆ ಕಂಡಳು. ಅಮ್ಮಾ ಪಪ್ಪನ ಜೊತೆ ಜಗಳ ಮಾಡಿ ಏನು ಸಾಧಿಸ್ತೀಯ? ನಿನ್ನ ಜಗಳ ಜಗತ್ತಿನ ಜೊತೆ ಇರುವಾಗ ನೀನು ಮಾತ್ರ ಪಪ್ಪನ ಜೊತೆ ಜಗಳ ಮಾಡ್ತೀಯ ಅವರು ಒಬ್ರು ಏನ್ ಮಾಡ್ತಾರೆ? ಎಂದಳು. ವಕಾಲತ್ತು ವಹಿಸುವುದನ್ನು ಇವಳೂ ಕಲಿತಳಾ? ನಂಗೆ ನಿನ್ನ ನಿನ್ನ ಪಪ್ಪನ ಲಾಜಿಕ್ ಎಲ್ಲಾ ಗೊತ್ತಾಗಲ್ಲ. ಸರಿಯಾಗಬೇಕು ಅಂದ್ರೆ ಅದು ನನ್ನ ಮನೆಯಿಂದ ಆಗಬೇಕು ಎಂದುಕೊಳ್ಳುವವಳು ನಾನು ನೀನು ಯಾವಾಗಿಂದ ನಿನ್ನ ಪಪ್ಪನ ಪರವಾಗಿ ವಕಾಲತ್ತು ಮಾಡೋದನ್ನ ಕಲಿತೆ?’ ಎಂದೆ ಕೋಪದಿಂದ. ನನ್ನೇ ನೋಡುತ್ತಿದ್ದ ಆಶಾ ಪಕ್ಕೆಂದು ನಗುತ್ತಾ,ಈ ಕ್ಷಣ ಎಂದರೆ ನಂಬುತ್ತೀಯಾ?’ ಎಂದಳು. ಅವಳ ಚೇಷ್ಟೆಯ ಹಿಂದಿನ ಮನಃಸ್ಥಿತಿ ಅರ್ಥವಾದರೂ ನಾನು ಮತ್ತಷ್ಟು ಬಿಗುವಾದೆ. ನನ್ನ ಹತ್ತಿರ ಬಂದು ನೆಲದ ಮೇಲೆ ಕುಳಿತು ತೊಡೆಗೆ ತಲೆ ಆನಿಸುತ್ತಾ, ಜಗತ್ತಿನಲ್ಲಿ ನನಗೆ ಅಂತ ಇರೋದು ನೀನೊಬ್ಬಳೇ. ನೀನು ಚೆನ್ನಾಗಿರಬೇಕು ನನಗೆ ಬೇಕಿರೋದು ಅಷ್ಟೇ ಎಂದಳು. ಇರಬಹುದು ಇವತ್ತು ಯಾಕೋ ಅತಿಗಳಲ್ಲೇ ಮಾತಾಡ್ತಾ ಇದೀನಿ ಅನ್ನಿಸಿ ಅವಳ ಆಪ್ತವಾದ ಮಾತಿಗೂ ಪ್ರತಿಕ್ರಿಯಿಸಲಿಲ್ಲ. ಆದರೆ ಕೈ ನನ್ನ ಮನಸ್ಸನ್ನೂ ಮೀರಿ ಅವಳ ತಲೆಯನ್ನು ಸವರುತ್ತಿತ್ತು.

ರಾತ್ರಿ ಇಬ್ಬರೂ ಜೊತೆಯಾಗಿ ಊಟ ಮಾಡುವಾಗಲೂ ಮಾತಿರಲಿಲ್ಲ. ನನಗೆ ಮನಸ್ಸಿಲ್ಲ ಅನ್ನುವುದು ಆಶಾಗೂ ಅರ್ಥ ಆಗಿದೆ. ಬರೀ ಪಾತ್ರೆಗಳ ಸ್ಪೂನ್‌ಗಳ ಶಬ್ದ ಬಿಟ್ಟರೆ ಬೇರೆ ಶಬ್ದವಿಲ್ಲ. ಎಷ್ಟೋ ವೇಳೆ ಇದು ನನಗೆ ಕಿರಿಕಿರಿ ಅನ್ನಿಸಿದೆ. ಊಟ ಮುಗಿಸಿದ ತಕ್ಷಣ ಅಮ್ಮಾ ನಾನು ಮಲಗ್ತೀನಿ. ನಾಳೆ ಬೆಳಗ್ಗೆ ಮತ್ತೆ ಸ್ಪೆಷಲ್ ಕ್ಲಾಸ್ ಇದೆ. ಪಪ್ಪಾ ಫೋನ್ ಮಾಡಿದ್ರೆ ಅವರಿಗೆ ನನ್ನ ಗುಡ್ ನೈಟ್ ಹೇಳಿಬಿಡು’ ಎಂದು ನನ್ನ ಹಣೆಗೆ ಮುತ್ತನ್ನಿಟ್ಟು ತನ್ನ ಕೋಣೆಗೆ ಹೋದಳು.ಯಾವ ಪಪ್ಪಾ? ಯಾರಿಗೋ ನಾನ್ಯಾಕೆ ಇವಳ ಪರವಾಗಿ ಗುಡ್ನೈಟ್‌ ಹೇಳಲಿ?! ಹೇಳಲ್ಲ’ ಎಂದು ಪ್ರತಿಕ್ರಿಯಿಸುವುದರೊಳಗೆ ಆಶಾ ಒಳಗೆ ಹೋಗಿಯಾಗಿತ್ತು.

ಹಾಸಿಗೆ ಮೇಲೆ ಮೈಚೆಲ್ಲುವ್ಗಲೂ ತಲೆಯ ತುಂಬಾ ಬರೀ ಯೋಚನೆಗಳೆ. ವಸಂತಕಾಲಕ್ಕೆ ಹೂಬಿಟ್ಟಾಗ ದುಂಬಿಗಳು ಒಂದೇ ಸಮನೆ ಜೀಂಗುಡುತ್ತಲ್ಲಾ ಹಾಗೆ. ಮೊದಮೊದಲಿಗೆ ಕೇಳಲು ಹಿತ ಒಂದೇ ಸಮನೆ ಕೇಳುತ್ತಾ ಹೋದರೆ ತಲೆ ಚಿಟ್ಟೆನ್ನಿಸುತ್ತದೆ. ನನಗೇನಾಗಿದೆ? ಹೊಂದಿಕೊಳ್ಳುವುದು ನನಗೆ ಯಾಕೆ ಬರಲಿಲ್ಲ. ನನ್ನ ಯುದ್ಧ ಯಾರ ಜೊತೆ? ದಿಕ್ಕುತೋಚದೆ ಒದ್ದಾಡಿದೆ. ಪಕ್ಕಕ್ಕೆ ತಿರುಗಿದರೆ ನಿದ್ದೆ ಬಂದೀತಾ? ಪ್ರಯತ್ನಿಸಿದೆ ನಿದ್ದೆ ಅಲ್ಲ, ಅದರ ಮನೆಯ ದಾರಿಯೂ ಗೊತ್ತಾಗುತ್ತಿಲ್ಲ. ನನ್ನ ಬದುಕು ಸರ್ವನಾಶದ ಕಡೆಗೆ ಹೋಗುತ್ತಿದೆಯಾ? ಭಯವಾಯಿತು. ಮೀಟಿಂಗ್ ಅಂತೆ ಗಹನವಾದ ಚರ್ಚೆಗಳಂತೆ. ಕುಡೀಲಿಕ್ಕೆ ಒಂದು ಅಡ್ಡೆ. ಹಾಗೆಂದುಕೊಂಡ ತಕ್ಷಣವೇ ನನ್ನ ಬಗ್ಗೆ ನನಗೇ ನಾಚಿಕೆ ಅನ್ನಿಸಿತು. ಛೇ ಅಷ್ಟು ಚೀಪ್ ಅಲ್ಲ ಮನುಷ್ಯ. ಕೆಲ ದೌರ್ಬಲ್ಯಗಳನ್ನು ಬಿಟ್ಟರೆ ಸಮಾಜಕ್ಕೆ ಏನು ಬೇಕೋ ಅದರ ಬಗ್ಗೆ ಚಿಂತನೆ ಮಾಡುತ್ತಾರೆ. ಜೊತೆಯಲ್ಲಿರುವವರ ಬಗ್ಗೆ ಅಸಮಾಧಾನ ಆಗೋದು ಸರಿಯೇ. ಆದರೆ ಅಸಹನೆ ಒಳ್ಳೆಯದಲ್ಲ. ಎರಡರ ನಡುವೆ ಇರೋದು ತೆಳುವಾದ ಗೆರೆ ಮಾತ್ರ. ನಾನು ಸಹಾರ ಬಗ್ಗೆ ತುಂಬಾ ತಪ್ಪಾಗಿ ಯೋಚನೆ ಮಾಡಬಾರ್ದು. ಸತೀಶನಿಗೂ ಅವರ ಮೇಲೆ ಎಂಥಾ ಗೌರವ ಇತ್ತು. ಆ ಗೌರವವೇ ತಾನೆ ನನ್ನ ಮತ್ತು ಆಶಾನ ಇಲ್ಲಿಗೆ ತಂದು ನಿಲ್ಲಿಸಿದ್ದು? ನನಗೆ ಸಹಾ ಹತ್ತಿರವಾದರು ಎಂದಾಗ ಎಷ್ಟು ಜನ ಹೆಣ್ಣುಮಕ್ಕಳು ಹೊಟ್ಟೆ ಉರಿದುಕೊಳ್ಳಲಿಲ್ಲ. ಎಂಥಾ ಅದೃಷ್ಟವಂತೆ ನೀನು!’ ಎಂದು.


ದೊಡ್ಡ ವ್ಯಕ್ತಿ ಒಬ್ಬರ ಜೊತೆ ಮಲಗುವಲ್ಲಿಗೆ ಹೋಗುವುದು ದೊಡ್ಡ ವಿಷಯವಾ? ಜಗತ್ತು ಏನನ್ನು ಹೇಳುತ್ತೆ? ಏನನ್ನು ಬಯಸುತ್ತೆ? ನನ್ನ ಅದೃಷ್ಟ ಏನೂಂತ ಈಗ ಕೇಳಲಿ ಹೇಳುವೆ, ದಿನಾ ಜಗಳ. ಅನ್ನುವ ಹಾಗಿಲ್ಲ ಅನ್ನದೇ ಇರುವ ಹಾಗಿಲ್ಲ. ಇದೆಲ್ಲಾ ಯಾರಿಗೆ ಹೇಗೆ ಅರ್ಥ ಆಗುತ್ತೆ? ಅದಕ್ಕೆ ಸಹಾ ನನಗೆ ಪ್ರೀತಿ ಕೊಟ್ಟಿದ್ದೇ ಬಹುದೊಡ್ಡ ಸಂಗತಿಯಾಗಿ ಕಾಣುತ್ತೆ. ಸಹಾ ಹಿಂದೆ ಯಾವಾಗಲೂ ಕಾಲೇಜು ದಿನಗಳಲ್ಲಿ ಪ್ರೀತಿಸಿದ ಮಂಜು ನನ್ನ ಬಳಿ ನಾಚುತ್ತಾ,ಸಹದೇವ ನನ್ನ ಪ್ರೀತಿಸ್ತೀಯಾ ಅಂತ ಕೇಳಿದಾಗ ನಾನು ಉತ್ತರಿಸಿರಲಿಲ್ಲ. ಒರಟು ಒರಟಾಗಿದ್ದೀಯಾ ನಿನ್ನ ಹೇಗೆ ಪ್ರೀತಿಸೋದು? ತಲೆ ಬಾಚಿಲ್ಲ, ಮುಖಕ್ಕೆ ಪೌಡರ್ ಇಲ್ಲ. ಸ್ವಲ್ಪ ಹುಡುಗೀರ ಬಳಿ ಬರುವಾಗ ಡೀಸೆಂಟ್ ಆಗಿ ಬಾ. ಆಗ ನಿನ್ನ ಮಾತು ಕೇಳಬಹುದೇನೋ ಎಂದಿದ್ದೆ. ಮಾರನೆ ದಿನ ನೀಟಾಗಿ ಕ್ರಾಫ್ ತೆಗೆದು ಎಣ್ಣೆ ಹಚ್ಚಿ ಒಳ್ಳೆ ಬಟ್ಟೆ ಹಾಕಿಕೊಂಡು, ನೀಟಾಗಿ ಒರೆಸಿಕೊಂಡರೆ ತಾನು ಪೌಡರ್ ಹಾಕಿದ್ದು ಕಾಣಲ್ಲ ಅಂತಲೋ ಏನೋ ಅಲ್ಲಲ್ಲಿ ಸ್ವಲ್ಪ ಉಳಿಸಿಕೊಂಡು ಬಂದಿದ್ದ. ಆದರೂ ನಾನು ಇಷ್ಟ ಪಡುವ ಹುಡುಗನ ಹಾಗೆ ನನಗೆ ಕಾಣಲಿಲ್ಲ. ನಾನವನಿಗೆ ಉತ್ತರ ಹೇಳಲಿಲ್ಲ. ನಾನವತ್ತು ಒಪ್ಪಿದ್ದಿದ್ರೆ ನೀನು ಹತ್ತಿರ ಬರಲಿಕ್ಕೂ ಅವಕಾಶ ಕೊಡ್ತಾ ಇರಲಿಲ್ಲ’ ಎಂದಿದ್ದರು. ಹಾಗೇ ಮಾಡಬೇಕಿತ್ತು.

ಈಗ ನನ್ನ ಹತ್ತಿರ ಬಂದು ಹೇಳುವ ಅಗತ್ಯ ಇರುತ್ತಿರಲಿಲ್ಲ ಎಂದು ನಕ್ಕಿದ್ದೆ. ಆದರೂ ಒಳಗೆ ತಳಮಳವಾಗಿತ್ತು. ಅಂದರೆ ಸಹಾ ಹೀಗೆ ಸಿಕ್ಕ ಸಿಕ್ಕವರನ್ನೆಲ್ಲಾ ಪ್ರೀತಿಸ್ತೀನಿ ಅಂತ ಓಡಾಡಿದ್ರಾ? ಅಂತ. ಹೀಗೆ ಎಂದು ಸಹಾರ ಬಳಿ ಹೇಳಿದರೆ ಹೌದಾ! ಇಲ್ಲವಲ್ಲಾ ಹಾಗೆಲ್ಲಾ ಏನೂ ನಡೆದೇ ಇಲ್ಲ. ಈ ಹೆಂಗಸರೇ ಇಷ್ಟು! ಎಲ್ಲವನ್ನೂ ತಮಗೆ ಇಷ್ಟ ಆಗುವ ಹಾಗೆ ಕಲ್ಪನೆ ಮಾಡಿಕೊಂಡು ಸುಖ ಅನುಭವಿಸುತ್ತಾರೆ. ಅವರ ಕಲ್ಪನೆಯ ಸುಖವನ್ನು ನಾನ್ಯಾಕೆ ಬೇಡ ಅನ್ನಬೇಕು’ ಎಂದು ನಕ್ಕಿದ್ದರು. ನಿಜ ಹೇಳಿ ಸಹಾ ನಾನು ನಿಮಗೆ ಯಾಕೆ ಇಷ್ಟ ಆದೆ?’ ಎಂದಿದ್ದಕ್ಕೆ, ಚೇತೂ ನಿಮ್ಮ ವಿಷಯಕ್ಕೆ ನಾನು ಏನೂ ಹೇಳಲಾರೆ, ನಿಮ್ಮ ಬಗ್ಗೆ ಇದ್ದದ್ದು ಅಭಿಮಾನವೋ, ಅನುಕಂಪವೋ, ಅವಲಂಬನೆಯೋ. ನನ್ನ ನಾನು ಎಲ್ಲಾದರೂ ಸರಿ ಕಳಕೊಳ್ಳಬೇಕು, ಈ ಜಗತ್ತು ಕೊಟ್ಟ ಎಲ್ಲ ಇಮೇಜುಗಳಿಂದ ದೂರಹೋಗಬೇಕು, ನನ್ನ ಅಹಂಕಾರ, ಮನೆಯ ಜಂಜಡ, ಹೆಂಡತಿಯ ಹಕ್ಕುಸ್ಥಾಪನೆ ಎಲ್ಲದರಿಂದ. ನೀವು ನನಗೆ ಸಿಕ್ಕಿದ್ದು ನನ್ನ ವ್ಯಕ್ತಿತ್ವಕ್ಕೆ ಸಿಕ್ಕ ದೊಡ್ಡ ಅವಕಾಶ. ನನ್ನ ಹೆಂಡತಿ ಆಗಬೇಕಿತ್ತು ಎಂದು ಹಂಬಲಿಸುವ ಮಂಜು ಇರಲಿ, ಈಗ ಹೆಂಡತಿಯಾಗಿರುವ ಲಲಿತ ಇರಲಿ ಯಾರೇ ಇದ್ದರೂ ನಿಮ್ಮ ಅಗಾಧವಾದ ಚುಂಬಕ ಶಕ್ತಿ ನನ್ನ ನಿಮ್ಮ ಕಡೆಗೆ ಎಳೆದು ತರುತ್ತಿತ್ತು’ ಎಂದಿದ್ದರು.

ಮನಸ್ಸು ಉಬ್ಬಿ ಹೋಗಿತ್ತು. ನಾನು ಬೇರೆಯೇ. ಬೇರೆ ಎಲ್ಲರಿಗಿಂತಲೂ ಬೇರೆಯೇ. ಸಹಾ ನನ್ನ ಹಾಗೆ ಚುಂಬಕ ಶಕ್ತಿ ಇರುವ ಇನ್ಯಾರಾದರೂ ಬಂದರೆ ಅವಳಿಗೂ ನೀವು ಇದೇ ಮಾತನ್ನ ಹೇಳ್ತೀರಾ? ಎಂದಿದ್ದೆ ತುಂಟತನದಲ್ಲಿ. ಅಯ್ಯೋ ಚೈತನ್ಯ ನೀವು ಹೀಗೆಲ್ಲಾ ಮಾತಾಡೋದು ನನಗೆ ಇಷ್ಟ ಆಗಲ್ಲ’ ಎಂದಿದ್ದರು. ನಾನೂ ಬಿಡದೆ, ನನಗೆ ಗೊತ್ತು ನಿಮಗೆ ಪ್ರೇಯಸಿಯರು ನೂರಾರು ಜನ ಇದ್ದಾರೆ’ ಎಂದೆ. ಅದು ನಿಜವೂ ಆಗಿತ್ತು. ಅವರನ್ನೆಲ್ಲಾ ಸಹಾ ಪ್ರೀತಿಸ್ತಾರೆ ಅಂತ ಅಲ್ಲ. ಅವರೂ ಇವರನ್ನು ಪ್ರೀತಿಸ್ತಾರೆ ಅಂತ ಅಲ್ಲ. ಒಂಥರದ್ರಲ್ಲಿ ಒಳಗೊಳಗೇ ಮನಸ್ಸಿನ ಕುಲುಕಾಟ ನಡೀತಾನೇ ಇತ್ತು. ನೋಡುತ್ತಿದ್ದ ನನಗೆ ಅರ್ಥ ಆಗ್ತಾ ಇತ್ತು. ಆದರೆ ಆ ಸಂಬಂಧಗಳಿಗೆ ಹೆಸರನ್ನು ಮಾತ್ರ ಇಡೋಕ್ಕಾಗ್ತಾ ಇರ್ಲಿಲ್ಲ. ಇಷ್ಟಾಗಿಯೂ ನಾನೂ ಬಿಡದೆ,ಸಹಾ ಯಾರಾದ್ರೂ ಇಷ್ಟ ಆದ್ರೆ ನನ್ನ ಬಿಟ್ಟು ಬಿಡ್ತೀರಾ?’ ಎಂದೆ. ಗಂಭೀರವಾಗಿ ನೋಡಿ ನನ್ನಿಂದ ದೃಷ್ಟಿಯನ್ನು ತೆಗೆದು, ಅಂಥಾ ಸಮಯ ಬಂದಾಗ ನೋಡೋಣ’ ಎಂದಿದ್ದರು. ಅರೆ ಗಂಡಸೇ! ಇಷ್ಟು ಮಾತುಕತೆ ಆದ ಮೇಲೆ ಅವರೇ ನನ್ನ ಈ ಪ್ರಶ್ನೆ ಕೇಳಿದ್ದಿದ್ದರೆ ನಾನು ಖಂಡಿತಾ ಹೇಳುತ್ತಿದ್ದೆ,ನಿಮ್ಮನ್ನು ಬಿಟ್ಟು ನಾನು ಬೇರೆ ಯಾರನ್ನೂ ನೋಡುವುದಿಲ್ಲ’ ಎಂದು. ಆದರೆ ಗಂಡಸರೇ ಹೀಗೆ ತಮಗೆ ಸಿಕ್ಕ ಒಂದು ಸಣ್ಣ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ, ಪುಟ್ಟ ಹುಡುಗಿಯೊಬ್ಬಳಿಗೆ ತಮ್ಮ ಕಡೆಗೆ ಆಗುವ ಕ್ರಷ್ ಅನ್ನು ಕೂಡಾ ಮನದುಂಬಿ ಆನಂದಿಸುತ್ತಾರೆ. ಅಂಥಾ ಹುಡುಗಿಯ ಜೊತೆ ಕೂಡಾ ಫ್ಲರ್ಟ್ ಮಾಡುತ್ತಾರೆ! ಹೀಗೆಂದುಕೊಳ್ಳುವಾಗೆಲ್ಲಾ ಉಂಟಾಗುವ ತಲ್ಲಣಕ್ಕೆ ನಾನೇ ಉತ್ತರ ಕಂಡುಕೊಳ್ಳಬೇಕಲ್ಲವಾ? ನನ್ನೆದೆಯ ಮೇಲೆ ನಾನೇ ಕೈ ಇಟ್ಟು ಸಮಾಧಾನ ಮಾಡಿಕೊಳ್ಳುತ್ತೇನೆ `ಚೇತೂ ಬಿ ರಿಲ್ಯಾಕ್ಸ್’.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: