ಸಂಧ್ಯಾರಾಣಿ ಕಾಲಂ : ಸೂರ್ಯನ ಕೊನೆಯ ಕಿರಣದಿಂದ, ಮೊದಲ ಕಿರಣದವರೆಗೂ…


ಏನಾಗಬಹುದು ’ಸೂರ್ಯನ ಕೊನೆಯ ಕಿರಣದಿಂದ ಸೂರ್ಯನ ಮೊದಲ ಕಿರಣದವರೆಗೂ…’? ಒಂದು ಮನೆಯ ಜೋಲಿಯಲ್ಲಿ ಮಗು ಲಾಲಿ ಕೇಳುತ್ತಾ ಮಲಗಿ, ಕಣ್ಣಂಚಿನಲ್ಲಿ ಕನಸು, ತುಟಿಯಂಚಿನಲಿ ನಗು ಇಟ್ಟುಕೊಂಡು ದೇವರಗೂಡಿನ ದೀಪದಂತೆ ಬೆಳಗಬಹುದು, ಹೆಣ್ಣು ಗಂಡಿನ ಒರಟುತನಕ್ಕೆ, ಅವಸರಕ್ಕೆ ಬಾಯಲ್ಲಿ ’ನಿಧಾನ ನಿಧಾನ’ ಎಂದು ಹೇಳುತ್ತಲೇ, ಮನಸ್ಸಿನಲ್ಲಿ ನಗುತ್ತಾ ಹೂವಾಗಬಹುದು, ಗಂಡು ಹೆಣ್ಣಿನ ಮೊಗದ ಬೆವರಿನಲ್ಲಿ ತನ್ನ ಮುಖವನ್ನು ನೋಡಿಕೊಂಡು ಹೆಮ್ಮೆ ಪಡಬಹುದು, ಪ್ರೇಮಿ ನಾಳಿನ ಭೇಟಿಯ ನೆನೆಯುತ್ತಾ ಕೆಂಪಾಗಬಹುದು, ಕನಸು ಕಾಯ್ಕಟ್ಟಬಹುದು, ಹೌದು ಏನೆಲ್ಲಾ ಆಗಬಹುದು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ. ಆದರೆ ಅಲ್ಲಿ ಅದೇನೂ ಆಗಲಿಲ್ಲ, ಅಲ್ಲಿ ಒಬ್ಬ ರಾಜ ಯುದ್ಧ ಮಾಡದೆಯೇ ಸೋತಿದ್ದ, ಒಬ್ಬ ವ್ಯಾಪಾರಿ ಹಳೆಯ ಸಾಲವನ್ನು ಬಡ್ದಿ ಸಮೇತ ವಸೂಲು ಮಾಡಿದ್ದ, ಮಂತ್ರಿ, ಪುರೋಹಿತ, ಸೇನಾಪತಿಗಳು ರಾಜ್ಯಕಾರಣ, ಧರ್ಮಕಾರಣ ಮಾಡುತ್ತಲೇ ಗೆದ್ದೆವೆಂದು ಬೀಗುತ್ತಿದ್ದರು, ಒಬ್ಬ ರಾಣಿ ಹಕ್ಕಿನಿಂದ ಪಡೆಯಬೇಕಾದ್ದನ್ನೂ ಭಿಕ್ಷೆಯಂತೆ ಪಡೆಯಲು ಕೈಚಾಚಿದ್ದಳು. ಅಲ್ಲಿ ಆಹಿರ್ ಭೈರವಿ ರಾಗ ಎದೆಯನ್ನು ನೇಗಲಿನಂತೆ ಉಳುತ್ತಿತ್ತು. ಅದು ಒಂದು ರಾತ್ರಿಯ ಪಯಣವಾಗಿರಲಿಲ್ಲ, ಹಲವು ಜೀವನಗಳ ಪಯಣ ಆಗಿತ್ತು.
ನಾನು ’ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕದ ಬಗ್ಗೆ ಮಾತನಾಡುತ್ತಿದ್ದೇನೆ. ಮೊದಲ ಸಲ ಈ ನಾಟಕದ ಹೆಸರು ನೋಡಿದಾಗ ಇದು ಸಂಜೆಯಿಂದ ಬೆಳಗಿನವರೆಗೂ ನಡೆಯುವ ಯಾವುದೋ ಕಾರ್ಯಕ್ರಮ ಎಂದುಕೊಂಡಿದ್ದೆ. ಆಮೇಲೆ ಅದು ನಾಟಕ ಎಂದು ಗೊತ್ತಾಯಿತು. ನಾಟಕಕ್ಕೆ ಸಂಗೀತ ನೀಡಿದ್ದ ರಾಮಚಂದ್ರ ಹಡಪದ್ ಮತ್ತು ನಿರ್ದೇಶಕ ನಂಜುಂಡೇ ಗೌಡರ ಆಹ್ವಾನದ ಮೇರೆಗೆ ನಾಟಕ ನೋಡಲು ಹೋಗಿದ್ದೆ. ಅಕಸ್ಮಾತ್ ಹೋಗದೆ ಇದ್ದಿದ್ದರೆ ಎಂತಹ ಭಾವಾನುಭವದಿಂದ ವಂಚಿತಳಾಗುತ್ತಿದ್ದೆ. ಕೇವಲ ಭಾವಾನುಭವವೆ ಅದು? ಇಲ್ಲ, ಅದು ಅದಕ್ಕಿಂತಲೂ ಮಿಗಿಲು. ಅದೊಂದು ಹೆಣ್ಣುನೋಟ ಕಟ್ಟಿಕೊಟ್ಟ ನಾಟಕ. ಇಲ್ಲಿ ನಾನು ಬೇಕೆಂದೇ ’ಹೆಣ್ಣು ನೋಟ’ ಎಂದು ಬಳಸುತ್ತಿದ್ದೇನೆ, ಅಲ್ಲಿ ಭಾಷಣವಿಲ್ಲ, ಅಲ್ಲಿ ಕ್ರಾಂತಿ ಇಲ್ಲ, ಅಲ್ಲಿ ಮಾತುಗಾರಿಕೆಯ ಜಾಣತನ ಇಲ್ಲ. ಅಲ್ಲಿದ್ದದ್ದು ಹೃದಯದ ಮಾತುಗಳು, ತನ್ನದಲ್ಲದ ತಪ್ಪಿಗೆ ಪಾಳು ಬಿದ್ದ ಭೂಮಿಯಂತಹ ಹೆಣ್ಣು, ಅವಳ ಅಳಲು, ಅವಳ ಖಾಲಿತನ, ಅವಳ ಆಕ್ರೋಶ, ಅವಳ ದಿಟ್ಟತನ, ಅವಳ ಹೆಣ್ತನ ಎಲ್ಲವೂ. ಆದರೆ ಅಲ್ಲಿ ಅದಷ್ಟೇ ಇರಲಿಲ್ಲ, ಅಲ್ಲಿ ಅವನ ಸಂಕಟಕ್ಕೂ ಮಿಡಿತ ಇತ್ತು. ಅವನ ನೋವಿಗೆ, ಅಸಹಾಯಕತೆಗೆ, ಒದ್ದಾಟಕ್ಕೆ ಸಹ ಮನಸ್ಸು ಮಿಡಿಯುತ್ತಿತ್ತು. ಹಾಗಾಗಿ ನನಗೆ ನಾಟಕ ಇಷ್ಟವಾಯಿತು.
ನಾಟಕ ನಡೆಯುವುದು ’ಮಲ್ಲ’ ರಾಜ್ಯದಲ್ಲಿ. ಅಲ್ಲಿನ ರಾಜ ಒಕ್ಕಾಕ, ರಾಣಿ ಶೀಲವತಿ. ಇಬ್ಬರಿಗೂ ಮದುವೆಯಾಗಿ ಐದು ವರ್ಷಗಳಾಗಿವೆ, ಮಕ್ಕಳಿಲ್ಲ. ರಾಜನಿಗೆ ಪಾಪ ಹಲವಾರು ಕಾಯಿಲೆಗಳು, ಮುಂದೆ ಮಕ್ಕಳಾಗಬಹುದೆನ್ನುವ ಯಾವ ನಂಬಿಕೆಯೂ ಇಲ್ಲದ ಸ್ಥಿತಿಯಲ್ಲಿ ಉಳಿದ ಉಪಾಯ ನಿಯೋಗ. ಅಲ್ಲಿನ ಅಮಾತ್ಯ ಪರಿಷತ್ತಿನ ನಿರ್ಣಯದಂತೆ ರಾಣಿ, ರಾಜನ ’ಅಪ್ಪಣೆ’ ಪಡೆದು ನಿಯೋಗ ಸ್ವೀಕರಿಸಬಹುದು. ಆಕೆ ಆಗ ಧರ್ಮನಟಿ, ಊರಿಗೆ ಡಂಗೂರ ಸಾರಲಾಗುತ್ತದೆ, ನೆರೆದ ಜನಗಳಲ್ಲಿ ಒಬ್ಬನನ್ನು ರಾಣಿ ಆ ದಿನದ ಸೂರ್ಯಾಸ್ತದಿಂದ ಮರುದಿನದ ಸೂರ್ಯೋದಯದವರೆಗೂ ಪತಿಯನ್ನಾಗಿ ಆರಿಸಿಕೊಳ್ಳಬಲ್ಲಳು. ಅಕಸ್ಮಾತ್ ಆ ತಿಂಗಳು ಗರ್ಭ ನಿಲ್ಲದಿದ್ದರೆ, ಮುಂದಿನ ತಿಂಗಳು ಮತ್ತೊಮ್ಮೆ, ಅದರ ಮುಂದಿನ ತಿಂಗಳು ಇನ್ನೊಮ್ಮೆ ಈ ಧರ್ಮನಟಿ ಪದ್ಧತಿ ಪುನರಾವರ್ತಗೊಳ್ಳುತ್ತದೆ. ಇದು ಅಮಾತ್ಯ ಪರಿಷತ್ತಿನ ಧರ್ಮಕಾರಣದೊಳಗಿನ ರಾಜ್ಯಕಾರಣ. ಅಲ್ಲಿ ರಾಜ, ರಾಣಿ, ಅವರಿಬ್ಬರ ಮನೋಸ್ಥಿತಿ ಯಾವುದೂ ಮುಖ್ಯವಲ್ಲ. ನಿಯೋಗ ರಾಜ ರಾಣಿಯರ ಸಮ್ಮತಿಯಿಂದ ಅರಮನೆಯ ಒಳಾಂಣದಲ್ಲಿ ನಡೆಯುವುದು ಬೇರೆ. ಆದರೆ ಅದನ್ನು ಡಂಗೂರ ಸಾರಿ, ಊರವರೆಲ್ಲರ ಎದುರಲ್ಲಿ ನಡೆಸುವುದೆಂದರೆ ಕಳಿಸಿಕೊಡುವ ಗಂಡ, ಹೋಗುವ ಹೆಂಡತಿ ಇಬ್ಬರೂ ಊರವರೆಲ್ಲರ ದೃಷ್ಟಿಯ ಎಷ್ಟು ಪ್ರಶ್ನೆ, ಲೇವಡಿ, ಕುಚೋದ್ಯ ಎದುರಿಸಬೇಕಾಗುತ್ತದೆ. ಆ ಕ್ರಿಯೆಯ ಪ್ರತಿಧ್ವನಿ ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುತ್ತದೆ.
ನಾಟಕ ಶುರುವಾಗುವುದೇ ಆ ಡಂಗೂರದಿಂದ. ಅಂದಿಗೆ ಒಂದು ವಾರಕ್ಕೆ ಆ ದಿನ ನಿಗದಿ ಆಗಿರುತ್ತದೆ. ಆ ವಾರದುದ್ದಕ್ಕೂ ಒದ್ದಾಡಿರುವುದು ರಾಜ ರಾಣಿ ಅಷ್ಟೇ ಅಲ್ಲ, ರಾಣಿಯ ಆಪ್ತ ಸಖಿಯರಿಗೂ ಮಾಡುವ ಕೆಲಸದಲ್ಲಿ ತೊಡಗಲಾರದ ತಳಮಳ, ಸೇವಕರಿಗೆ ತೋಟದಲ್ಲಿ ಉದುರಿದ ಎಲೆಗಳನ್ನು ಗುಡಿಸುವ ಮನಸ್ಸಿಲ್ಲ, ರಾಜಭವನದಲ್ಲಿ ಮಧುಪಾತ್ರೆಗಳ ಮೇಲೆಲ್ಲಾ ಧೂಳಿನ ತೆರೆ. ಕಡೆಗೂ ಆ ದಿನ ಬಂದೇ ಬಿಡುತ್ತದೆ.

ಕಳಿಸಲು ರಾಜನಿಗೆ ಮನಸ್ಸಿಲ್ಲ, ಕಳಿಸಲು ಒಪ್ಪುವುದೆಂದರೆ ತನ್ನ ನಪುಂಸಕತೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಂತೆ. ರಾಣಿಯ ಎದುರಲ್ಲಿ ಮಾತ್ರ ಸೋಲುತ್ತಿದ್ದ ರಾಜ ಈಗ ತನ್ನ ಮಂತ್ರಿ, ಪುರೋಹಿತ, ಸೇನಾಪತಿಯ ಕಣ್ಣುಗಳಲ್ಲಿ ತನ್ನ ಸೋಲು ಪ್ರತಿಫಲಿಸಿದಂತಾಗಿ ಮತ್ತೆ ಮತ್ತೆ ಸೋಲುತ್ತಾನೆ. ನಿಯೋಗಕ್ಕೆ ಯಾಕೆ ಮನಸ್ಸಿಲ್ಲ ಎಂದು ಕಾರಣಗಳನ್ನು ಒಪ್ಪಿಸುತ್ತಾ ಅವರೆದುರಲ್ಲಿ ದೈನ್ಯವಾಗುತ್ತಾ ಹೋಗುತ್ತಾನೆ. ಆದರೆ ಅವನೊಬ್ಬ ದುರ್ಬಲ ಪತಿ ಮತ್ತು ದುರ್ಬಲ ರಾಜ. ಅವನೆದುರಲ್ಲಿ ಅವನ ಮಂತ್ರಿ, ಸೇನಾಪತಿಗಳು ತೋರಿಕೆಗಾದರೂ ವಿನಯ ತೋರಿಸುವುದಿಲ್ಲ. ಹೆಚ್ಚು ಕಡಿಮೆ ಆಜ್ಞಾಪಿಸಿ ಅವನು ನಿಯೋಗಕ್ಕೆ ಒಪ್ಪುವಂತೆ ಮಾಡುತ್ತಾರೆ.
ರಾಣಿ ’ಸೂರ್ಯ ಅಸ್ಪರ್ಶಿತೆ’ – ಸೂರ್ಯನಿಂದ ಸ್ಪರ್ಶಿತೆ ಆಗದ ಹೆಣ್ಣು. ಅಂತಃಪುರದ ಪರದೆಗಳ ನಡುವೆ ಇರುವವಳು. ರಾಣಿಯಾದ ಮೇಲೆ ಮೊದಲ ಸಲ ಹೊರಗೆ ಹೋಗುತ್ತಿದ್ದಾಳೆ, ಅಷ್ಟೇ ಅಲ್ಲ, ಅಪರಿಚಿತನೊಂದಿಗೆ ಒಂದು ರಾತ್ರಿ ಕಳೆಯಬೇಕು ಅವಳು. ಅವಳು ಸೂರ್ಯ ಅಸ್ಪರ್ಶಿತೆ ಅಷ್ಟೇ ಅಲ್ಲ, ಪುರುಷ ಅಸ್ಪರ್ಶಿತೆಯೂ ಹೌದು. ಹೋಗುವ ಯಾವುದೇ ಹುರುಪಿಲ್ಲದ ಅವಳಲ್ಲಿ ಏನೇನೋ ಕಳವಳ. ಮದುವೆಯಾದ ಮೇಲೆ ಗಂಡನೊಂದಿಗೆ ಇರುಳು ಕಳೆಯುವುದು ಸಹಜ, ಅಥವಾ ಪ್ರೇಮಿಯೊಡನೆ ಇರುಳು ಕಳೆಯುವುದು ಸಂಭ್ರಮ, ಆದರೆ ಪ್ರೇಮ, ಸಾಮಾಜಿಕ ಒಪ್ಪಿಗೆ ಇದ್ಯಾವುದೂ ಇಲ್ಲದೆ ಕೇವಲ ದೈಹಿಕ ಅನುಸಂಧಾನಕ್ಕೆ ಎಂದೇ ಒಬ್ಬ ಅಪರಿಚಿತನನ್ನು ಒಂದು ರಾತ್ರಿಯ ಮಟ್ಟಿಗೆ ಸ್ವೀಕರಿಸಲು ಅರಮನೆಯ ಹೊಸಿಲು ದಾಟುವುದು ಎಷ್ಟು ಹೀನಾಯ ಅನ್ನಿಸುತ್ತಿರುತ್ತದೆ ಅವಳಿಗೆ.
ಆಗ ಮಂತ್ರಿಗಳು ಬಂದು ಅವಳಿಗೆ ಆಪದ್ಧರ್ಮ ಬೋಧಿಸುತ್ತಾರೆ. ಗುರಿಯಿಡುವ ಅರ್ಜುನ ಹೇಗೆ ಹಕ್ಕಿಯ ಕಣ್ಣನ್ನು ಮಾತ್ರ ಕಾಣುತ್ತಾನೋ ಹಾಗೆ ಆಕೆ ನೋಡಬೇಕಾದ್ದು ಬೆಳದಿಂಗಳಿನಂತಹ, ಗುಂಗುರು ಕೂದಲು, ಮುದ್ದು ಮುದ್ದು ಹಲ್ಲುಗಳ ರಾಜಕುಮಾರನನ್ನು, ಆಕೆಯ ಹೆಣ್ತನ ಸಾರ್ಥಕವಾಗುವುದು ತಾಯ್ತನದಿಂದ ಮಾತ್ರ ಸಾಧ್ಯ. ಆ ತಾಯ್ತನ ಮಾತ್ರ ಈ ನಿಯೋಗದ ಗುರಿ ಮತ್ತು ರಾಣಿಯಾಗಿ ಅದು ಆಕೆಯ ಕರ್ತವ್ಯ ಎಂದು ಬೋಧಿಸಿ ಅವಳನ್ನು ತಯಾರು ಮಾಡುತ್ತಾರೆ. ಆಗ ರಾಣಿ ಅರಮನೆಯ ಹೊರಗೆ ಹೆಜ್ಜೆ ಇಡುತ್ತಾಳೆ.
ಆದರೆ ಅಲ್ಲಿ ಒದ್ದಾಟವಿರುವುದು ಅವಳಲ್ಲಿ ಮಾತ್ರ ಅಲ್ಲ. ಹೆಂಡತಿಯನ್ನು ಕಳಿಸಿಕೊಟ್ಟ ಆ ಒಕ್ಕಾಕನ ಪರಿಸ್ಥಿತಿ ಏನಾಗಿರಬೇಕು. ಅರಮನೆಯ ಅಂಗಳದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಪರಿಚಾರಿಕೆಯಿಂದ ಕೇಳಿ ತಿಳಿಯುವ ದೌರ್ಭಾಗ್ಯ ಅವನದ್ದು.
ರಾಣಿ ತನ್ನ ಕೈಲಿದ್ದ ಮಾಲೆಯನ್ನು ತನ್ನ ಹಳೆಯ ಪರಿಚಿತನೊಬ್ಬನ ಕೊರಳಿಗೇ ಹಾಕಿದಳು ಎನ್ನುವುದು ಎಲ್ಲೋ ಅವನನ್ನು ಇನ್ನೂ ಭಾದಿಸುತ್ತದೆ. ಆಮೇಲೆ ಆ ಏಕಾಕಿತನದ ಘಳಿಗೆಗಳಲ್ಲಿ ಅವನು ರಾಣಿಯ ಸಖಿ ಮಹತ್ತರಿಕೆಯ ಬಳಿ ದಾಂಪತ್ಯದ ಖಾಸಗಿ ಘಳಿಗೆಗಳ ವಿವರ ಕೇಳುವುದು, ಹಾಗೆ ಕೇಳುತ್ತಲೇ ತನ್ನ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಮನಸನ್ನು ಹಿಂಡಿ ಹಾಕುತ್ತದೆ. ಮಲಗಬಾರದೇ ಎನ್ನುವ ಮಹತ್ತರಿಕೆಯ ಮಾತಿಗೆ ಅವನ ಉತ್ತರ ’ನಿದ್ದೆ ಇರಲಿ, ಇಂದು ಸಾವೂ ಸಹ ನನ್ನ ಬಳಿ ಬರುವುದಿಲ್ಲ…’

ಅಲ್ಲಿ ರಾಣಿ ರಾಜನೊಂದಿಗೆ ಮದುವೆ ಆಗುವುದಕ್ಕೆ ಮೊದಲು ತನಗೆ ನಿಶ್ಚಯವಾಗಿದ್ದ ವರ ಪ್ರತೂಷನನ್ನು ಆರಿಸಿಕೊಂಡಿದ್ದಾಳೆ, ಅವನೀಗ ಭೂತಕಾಲದ ಬಡವ ಪ್ರತೂಷನಲ್ಲ, ಸಿರಿವಂತ ವರ್ತಕ. ಆದರೆ ಅವನಲ್ಲಿನ ’ಗಂಡು’ ಇವಳು ತನ್ನನ್ನು ನಿರಾಕರಿಸಿ ರಾಜನ ಕೈಹಿಡಿದವಳು ಎನ್ನುವುದನ್ನು ಮರೆಯಲು ಬಿಡುವುದಿಲ್ಲ. ’ಇಂದು ನಿನ್ನನ್ನು ನಾನು ಸ್ಪರ್ಶಿಸುವುದೂ ಇಲ್ಲ, ಹೇಗೆ ಬಂದೆಯೋ ಹಾಗೆ ನೀನು ವಾಪಸ್ಸು ಹೋಗಬಹುದು’ ಎಂದು ನಗುತ್ತಲೇ, ಕರುಣೆಯಿಂದ ಹೇಳುತ್ತಾನೆ. (ನಗು ಮತ್ತು ಕರುಣೆ ಎಷ್ಟು ಹರಿತವಾಗಿ ಇರಿಯಬಲ್ಲದು…) ಹೇಗನ್ನಿಸಬಹುದು ಆಕೆಗೆ? ನಪುಂಸಕ ಗಂಡನಿಂದ ತಿರಸ್ಕೃತಳಾಗುವುದು ಬೇರೆ, ಈ ಗಂಡು, ತಾನು ಮಾಲೆ ಹಾಕಿ ಒಪ್ಪಿಕೊಂಡ ಗಂಡು ತನ್ನ ಹೆಣ್ತನವನ್ನು ಹೀಗೆ ನಿರಾಕರಿಸಿ, ಸ್ಪರ್ಶಕ್ಕೂ ನೀನು ಅರ್ಹಳಲ್ಲ ಎಂದು ನಡೆದುಕೊಂಡರೆ ಅದೆಂತಹ ಸಾವಿನಂತಹ ಸೋಲು ಆ ಹೆಣ್ಣಿಗೆ…. ಯಾವುದೇ ಹೆಣ್ಣಿಗೆ. ಕಡೆಗೆ ಅವಳು ಆತನ ಕಾಲಿಗೆ ಬಿದ್ದು ಶರಣಾಗತಳಾದ ಮೇಲೆ ಅವಳನ್ನು ಒಪ್ಪಿಕೊಳ್ಳುತ್ತಾನೆ. ಇಲ್ಲಿ ಸಹ ಪಾಪ ರಾಣಿಯ ಗೆಲುವು ಗೆಲುವಲ್ಲ, ಪ್ರತೂಷ ಕೊಡುವ ಭಿಕ್ಷೆ.
ನಾಟಕದ ಈ ಹಂತದಲ್ಲಿ ಅಲ್ಲಿ ಅವರಿಬ್ಬರ ನಡುವಿನ ಶೃಂಗಾರವನ್ನು ತೋರಿಸುತ್ತಲೇ, ಅರಮನೆಯಲ್ಲಿ ರಾಜನ ಸೋಲನ್ನು ತೋರಿಸಿರುವ ರೀತಿ ಬಹಳ ಪರಿಣಾಮಕಾರಿಯಾಗಿ ಬಂದಿದೆ. ಅರ್ಧ ರಾತ್ರಿ ಆಯಿತು, ಮಲಗಬಾರದೆ ಎನ್ನುವ ಪ್ರತೂಷನ ಮಾತಿಗೆ ರಾಣಿ ಹೇಳುತ್ತಾಳೆ, ’ಅರ್ಧರಾತ್ರಿ ಆಯಿತು ಎನ್ನಬೇಡ, ಅರ್ಧ ರಾತ್ರಿ ಉಳಿದಿದೆ ಎನ್ನು….’. ’ನಿದ್ದೆ ಇರಲಿ ಇಂದು ಸಾವು ಸಹ ನನ್ನ ಬಳಿ ಬರಲಾರದು..’ ಒಂದೇ ಮಾತು ಗಂಡ ಹೆಂಡತಿ ಇಬ್ಬರದೂ ಆದರೆ ಸಂದರ್ಭ, ಮನೋಸ್ಥಿತಿ ಎರಡೂ ಎಷ್ಟು ಭಿನ್ನ..
ಸೂರ್ಯೋದಯವಾಗುತ್ತದೆ, ರಾಣಿ ಹಿಂದಿರುಗುತ್ತಾಳೆ. ಆದರೆ ಅದು ಅರಮನೆಯಿಂದ ಹೋದ ಮುದುಡಿ ನಡೆಯುವ ಹೆಣ್ಣಲ್ಲ, ತನ್ನ ಹೆಣ್ತನದ ಸಂಪೂರ್ಣ ಅರಿವು ಪಡೆದ ಹೆಣ್ಣು. ಅವಳ ಕೂದಲು ಕೆದರಿದೆ, ಹಣೆಯ ಕುಂಕುಮ ಕದಡಿದೆ, ಅವಳ ಮೈಯಿಂದ ಪ್ರಣಯ ಗಂಧವಾಗಿ ಹರಡುತ್ತಿದೆ. ಇಲ್ಲ ರಾಜನಿಗೆ ಅದನ್ನು ನೋಡಿ ಸಹಿಸಲಾಗುವುದಿಲ್ಲ. ಮೊದಲು ಸ್ನಾನಕ್ಕೆ ಸಿದ್ಧ ಮಾಡು ಎನ್ನುತ್ತಾನೆ ಸಖಿಗೆ. ಇಲ್ಲ ಈ ಪರಿಮಳದೊಂದಿಗೆ ಇನ್ನಷ್ಟು ಹೊತ್ತು ಇರಬೇಕು ನಾನು ಎನ್ನುತ್ತಾಳೆ ರಾಣಿ.

ಇದುವರೆಗಿನ ರಾಣಿಯ ಪಾತ್ರ ಒಂದು ಬಗೆಯದಾದರೆ ಇಲ್ಲಿಂದ ಮುಂದೆ ರಾಣಿ ಇಡಿ ನಾಟಕವನ್ನೇ ಆವರಿಸಿಬಿಡುತ್ತಾರೆ. ರಾಣಿಯ ಪಾತ್ರ ಮಾಡಿದ ಸಿತಾರಳ ನಟನೆಗೆ ನಾನು ಮೊದಲು ಮಾರು ಹೋಗಿದ್ದು, ಆಕೆ ಚಕ್ರರತ್ನಳಾಗಿ ಅಭಿನಯಿಸಿದ್ದ ಚಕ್ರರತ್ನ ನಾಟಕವನ್ನು ನೋಡಿದಾಗ. ಇಡೀ ರಂಗಮಂಚದ ಸುತ್ತಲೂ ಗಿರಗಿರ ಬುಗರಿಯಂತೆ ತಿರುಗುತ್ತಾರೆ ಸಿತಾರ. ಆದರೆ ಈ ನಾಟಕದಲ್ಲಿ ಇವರ ನಟನೆ ಅದಕ್ಕೂ ಮಿಗಿಲು. ನೋಡಿ ನಾವು ಮೂಕರಾಗಿ ನಿಲ್ಲುತ್ತೇವೆ. ಇಲ್ಲಿ ಆಕೆಯದು ನಟನೆ ಅಲ್ಲವೇ ಅಲ್ಲ, ಆಕೆ ಥೇಟ್ ಮಹಾರಾಣಿ, ಸಂಪೂರ್ಣ ಹೆಣ್ತನದ ಮೂರ್ತರೂಪ. ಆಕೆ ಹೆಣ್ಣು, ಆಕೆ ಪ್ರಕೃತಿ ಮತ್ತು ಆಕೆ ಭೂಮಿ.
ಒಕ್ಕಾಕನ ಎದುರಲ್ಲಿ ನಿಂತು ಆಕೆ ಕೇಳುವ ಯಾವ ಪ್ರಶ್ನೆಗೂ ಅವನಲ್ಲಿ ಉತ್ತರವಿಲ್ಲ. ಇಲ್ಲಿ ತಪ್ಪು ಅವನದ್ದಲ್ಲ ನಿಜ, ಆದರೆ ಅದರ ಶಿಕ್ಷೆಯನ್ನು ಅವಳು ಅನುಭವಿಸುತ್ತಿರುವುದೂ ಅಷ್ಟೇ ನಿಜ ಅಲ್ಲವೇ? ಹೆಣ್ಣು ಒಂದು ಮೂಲಿಕೆಯೋ ಎನ್ನುವಂತೆ ಮದುವೆ ಆದರೆ ಎಲ್ಲಾ ಸರಿಹೋಗುತ್ತದೆ ಎಂದು ಮದುವೆಯಾದೆಯಲ್ಲಾ, ನೀನು ಸರಿ ಹೋಗದಿದ್ದರೆ ಮೂಲಿಕೆಗೆ ಏನೂ ಆಗುವುದಿಲ್ಲ, ಆದರೆ ನಾನು ಜೀವವಿರುವ ಹೆಣ್ಣು, ಆಗ ನಾನು ಏನಾಗಬಹುದು ಎಂದು ಯೋಚಿಸಲೇ ಇಲ್ಲವಲ್ಲ ನೀನು ಎನ್ನುವ ಪ್ರಶ್ನೆಯಲ್ಲೇ ಅವಳು ಅವನ ಮಾತುಗಳನ್ನು ಕಟ್ಟಿಹಾಕುತ್ತಾಳೆ.
ಅವಳನ್ನು ನೋಡಲು ಮಂತ್ರಿ, ಸೇನಾಪತಿ, ಪುರೋಹಿತರು ರಾಜಋಣ ಸಂದಾಯ ಮಾಡಿದ ಹೆಮ್ಮೆಯಲ್ಲಿ ಬರುತ್ತಾರೆ. ಅವರು ನಿರೀಕ್ಷಿಸಿರುವ ಹೆಣ್ಣೇ ಬೇರೆ, ಅವಳೆದುರಲ್ಲಿ ಕಾಣುವುದೇ ಬೇರೆ. ಆದ ನಿಯೋಗವನ್ನು ರಾಜ್ಯಕ್ಕಾಗಿ ’ಸಹಿಸಿಕೊಂಡು’ ಸಧ್ಯ ಈ ಬಾರಿಯೇ ಗರ್ಭ ಕಟ್ಟಿದರೆ ಸಾಕು ಎಂದು ಬೇಡುವ ’ಪತಿವ್ರತೆ’ ಹೆಣ್ಣಿನ ಕಲ್ಪನೆಯಲ್ಲಿ ಬಂದ ಇವರಿಗೆ ಕಾಣುವುದು ಈ ಹೆಣ್ಣು. ಅವಳು ಈಗ ಯುದ್ಧ ಗೆದ್ದ ಹೆಣ್ಣು. ಅವಳ ಹಣೆಯ ಕುಂಕುಮ ಸಹ ಆ ಮತ್ತಿನಲ್ಲಿ ಓಲಾಡಿರುತ್ತದೆ, ಅವಳ ಇಡೀ ವ್ಯಕ್ತಿತ್ವದಲ್ಲೇ ಆ ಗೆಲುವು ಮೈತುಂಬಿಕೊಂಡಿರುತ್ತದೆ. ಅವಳ ಮಟ್ಟಿಗೆ ತನ್ನ ಲೈಂಗಿಕತೆ ಅಪರಾಧವಲ್ಲ, ಆ ಬಗ್ಗೆ ಅವಳಲ್ಲಿ ಯಾವುದೇ ಅಪರಾಧಿ ಭಾವನೆ ಇಲ್ಲ, ಅವಳ ಮಟ್ಟಿಗೆ ತಾಯ್ತನ ಹೆಣ್ತನದ ಒಂದು ಮುಂದುವರಿಕೆಯೇ ಹೊರತು ಪರ್ಯಾಯ ಪದವಲ್ಲ. ಹೆಣ್ಣಿನ ಸಾರ್ಥಕತೆ ಇರುವುದು ಆಕೆಯ ತಾಯ್ತನದಲ್ಲಿ ಎನ್ನುವ ಅವರ ಮಾತಿನ ಟೊಳ್ಳನ್ನು ಎತ್ತಿ ಅವರ ಮುಖದ ಮುಂದೆ ಹಿಡಿಯುವ ಅವಳು, ಮಿಲನದ ಉತ್ಕಟತೆಯ ಕ್ಷಣಗಳಲ್ಲಿ ತನಗೆ ನೆನಪಿದ್ದಿದ್ದು ಕೇವಲ ಆ ಸ್ಪರ್ಶ ಮಾತ್ರ ಎನ್ನುತ್ತಲೇ ತನ್ನ ಲೈಂಗಿಕತೆಯನ್ನು ಅವಳು ಒಪ್ಪಿಕೊಳ್ಳುವ ರೀತಿಗೆ ಮನಸ್ಸು ಶಭಾಶ್ ಅನ್ನುತ್ತದೆ. ಅವಳ ಆ ಹೆಣ್ತನದ ಅರಿವಿನಲ್ಲೇ ಅವಳು ನಿಯಮದ ಒಂದು ತಿಂಗಳಿಗಾಗಿ ಕಾಯುವುದಿಲ್ಲ. ಮತ್ತೆ ಮುಂದಿನವಾರ ತಾನು ಧರ್ಮ ನಟಿಯಾಗಲಿದ್ದೇನೆ ಎಂದು ಡಂಗೂರ ಸಾರಲು ’ಆಜ್ಞಾಪಿಸುತ್ತಾಳೆ’. ಅಮಾತ್ಯ ಪರಿಷತ್ತು ತನಗೆ ನೀಡಿದ ಮೂರು ಅವಕಾಶಗಳನ್ನು ಬಳಸುವ ಸ್ವಾತಂತ್ರ್ಯವನ್ನು ಅವಳು ತನ್ನ ಕೈಯಲ್ಲೇ ಇಟ್ಟುಕೊಂಡು ಅವರ ಜಾಣ ಹುನ್ನಾರಗಳ ಹೆಮ್ಮೆಯನ್ನು ಒಡೆದು ಹಾಕುತ್ತಾಳೆ.
ಹಿಂದಿರುಗಿ ಬಂದು ಎಲ್ಲರ ಮಾತುಗಳ ಪೊಳ್ಳುತನವನ್ನು ಮುರಿದು, ಗುಡಿಸಿ ಹಾಕುವ ಅವಳ ಮಾತುಗಳು ಅವಳ ನಡವಳಿಕೆಯ ಜಸ್ಟಿಫಿಕೇಶನ್ ಗಾಗಿ ಬಳಕೆ ಆಯಿತೇನೋ ಎಂದು ಸ್ನೇಹಿತರೊಬ್ಬರು ಹೇಳಿದಾಗ ಅನ್ನಿಸಿದ್ದು, ಇಲ್ಲ ಅದು ಹಾಗಲ್ಲ. ಅಲ್ಲಿ ಯಾವುದೇ ಜಸ್ಟಿಫಿಕೇಶನ್ ಅವಳಿಗೆ ಬೇಡ, ಅವಳಲ್ಲಿರುವುದು ಇದುವರೆಗೂ ಇದನ್ನು ಕಳೆದುಕೊಂಡೆ ಎನ್ನುವ ನೋವು ಮಾತ್ರವಲ್ಲ. ಸುಖದ ಅನುಭವವೇ ಇಲ್ಲದ ದೇಹ ಅದಕ್ಕಾಗಿ ಕಾಯುವ ರೀತಿಯೇ ಬೇರೆ, ಒಮ್ಮೆ ಸ್ಪರ್ಶವನ್ನು ಸವಿದ ಮೇಲೆ ಒಡಲು ಆ ಪುಲಕಕ್ಕೆ ರಚ್ಚೆ ಹಿಡಿಯುವ ರೀತಿಯೇ ಬೇರೆ. ಇಡೀ ಜೀವನ ತನ್ನ ಯಾವುದೇ ತಪ್ಪಿಲ್ಲದೆ ಆ ಸುಖದಿಂದ ಎರವಾಗಿ ಬೇಕಾಗಿ ಬಂದ ತನ್ನ ಬಾಳನ್ನು ನೆನೆದು ಅವಳು ಹಾಗೆ ಸಿಡಿದು ನಿಲ್ಲುವುದರಲ್ಲಿ ಆಶ್ಚರ್ಯ ಏನಿದೆ?
೧೯೭೨ ರಲ್ಲಿ ಸುರೇಂದ್ರ ವರ್ಮಾ ಬರೆದ ನಾಟಕ ಇದು, ’ಸೂರ್ಯ್ ಕಿ ಅಂತಿಮ್ ಕಿರಣ್ ಸೆ ಸೂರ್ಯ್ ಕಿ ಪೆಹಲೀ ಕಿರಣ್ ತಕ್’. ಹಿಂದಿಯ ನಾಟಕಗಳನ್ನು ಇಲ್ಲಿನ ಬನಿ ಹನಿಯುವಂತೆ ಅನುವಾದಿಸುವ ಸಿದ್ದಲಿಂಗ ಪಟ್ಟಣಶೆಟ್ಟಿಯವರೇ ಈ ನಾಟಕವನ್ನೂ ಅನುವಾದಿಸಿದ್ದಾರೆ. ನಾಟಕ ಎಷ್ಟು ಕಸುವಿನಿಂದ ಕೂಡಿದೆ ಎಂದರೆ ಎಲ್ಲೂ ಅನುವಾದದ ತೆರೆಗಳು ನಮಗೆ ಕಾಣಿಸುವುದೇ ಇಲ್ಲ.
ನಾಟಕದಲ್ಲಿ ರಾಣಿಯ ಪಾತ್ರ ಮಾಡಿರುವ ಸಿತಾರ ಮತ್ತು ರಾಜನಾಗಿ ಮಹೇಶ್ ಒಬ್ಬರನ್ನೊಬ್ಬರು ಮೀರಿಸುವಂತೆ ನಟಿಸಿದ್ದಾರೆ. ಹಾಗೆ ನೆನಪಿನಲ್ಲಿ ಉಳಿಯುವ ಪಾತ್ರ ಮಹತ್ತರಿಕೆಯಾಗಿ ರಾಧಿಕೆಯದು. ಉಳಿದವರೂ ಅಷ್ಟೇ ಚೆನ್ನಾಗಿ ನಾಟಕಕ್ಕೆ ಕೈ ಜೋಡಿಸಿದ್ದಾರೆ. ಮಂಜು ನಾರಾಯಣ್ ಬೆಳಕು ನಾಟಕದ ಆಯಾ ಕ್ಷಣದ ಭಾವಗಳಿಗೆ ಕನ್ನಡಿ ಹಿಡಿಯುತ್ತದೆ. ವಸ್ತ್ರಾಲಂಕಾರ ನಾಟಕಕ್ಕೆ ಪೂರಕವಾಗಿಯೂ ನೋಟಕ್ಕೆ ಸುಂದರವಾಗಿಯೂ ಬಂದಿದೆ. ಪ್ರತೂಷ ಮತ್ತು ರಾಣಿಯ ನಡುವಿನ ಸರಸವನ್ನು, ಲಾಲಿತ್ಯವನ್ನೂ ತೋರುವಲ್ಲಿ ಆ ಬಿಳಿ ವಸ್ತ್ರದ ಬಳಕೆ ಅದ್ಭುತವಾಗಿ ಬಂದಿದೆ. ರಾಮಚಂದ್ರ ಹಡಪದರ ಸಂಗೀತದ ಬಗ್ಗೆ ಏನು ಹೇಳುವುದು? ನಾಟಕ ಮುಗಿದ ಕೂಡಲೆ ಅವರನ್ನು ಕೇಳಿದ ಪ್ರಶ್ನೆ ’ನೀವು ಆಲಾಪಿಸಿದ ರಾಗ ಯಾವುದು?’. ಆ ರಾಗ ರಾಣಿಯ ಮತ್ತು ರಾಜನ ಎದೆಯ ವಿಷಾದವನ್ನು ಹರಳುಗಟ್ಟಿಸಿ ನಮ್ಮೆದೆಗೆ ದಾಟಿಸುತ್ತಿತ್ತು. ಈ ನಾಟಕದಲ್ಲಿ ಸಂಗೀತಕ್ಕೂ ಪ್ರಮುಖ ಪಾತ್ರವೇ ಇದೆ.
ಇದು ದೃಶ್ಯಕಾವ್ಯ ತಂಡದ ಮೊದಲ ನಾಟಕ. ಮೊದಲ ನಾಟಕಕ್ಕೆ ಇಂತಹ ಸವಾಲಿನ ನಾಟಕವನ್ನು ಆಯ್ದುಕೊಂಡು, ಅದಕ್ಕೆ ಕಸುವು ತುಂಬಿ, ನಮ್ಮೆದುರಿಗೆ ಆ ಜೀವಗಳ ಎಲ್ಲಾ ತಲ್ಲಣಗಳನ್ನೂ ಕಟ್ಟಿಕೊಟ್ಟ ನಂಜುಂಡೇ ಗೌಡರಿಗೆ ಅಭಿನಂದನೆಗಳು. ಇದು ಎರಡನೆಯ ಪ್ರದರ್ಶನ, ಇನ್ನು ಸ್ವಲ್ಪ ತಾಲೀಮಿನ ನಂತರ ನಾಟಕ ಇನ್ನೂ ಕಳೆಗಟ್ಟುವುದರಲ್ಲಿ ಸಂದೇಹವೇ ಇಲ್ಲ.
ನಾಟಕದ ಕಡೆಯ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆ ಬದಿಯಲ್ಲಿ ತಲೆ ತಗ್ಗಿಸಿ ಕುಳಿತ ರಾಜ. ಈ ಬದಿಯಲ್ಲಿ ಸಾಕ್ಷಾತ್ ಭೂಮಿಯಂತೆ, ಪ್ರಣಯಿನಿಯಂತೆ ಕುಳಿತ ರಾಣಿ ಶೀಲವತಿ, ಬೆಳಕು ಮಂಕಾಗುತ್ತಾ ಹೋಗುತ್ತದೆ. ಒಮ್ಮೆ ನೋಡಿದ್ದು ಸಾಲದೆ ಮತ್ತೆ ನೋಡಬೇಕು ಅನ್ನಿಸಿದ ನಾಟಕ ಇದು.

‍ಲೇಖಕರು G

July 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. Hema Sadanand Amin /mumbai

    suryodayadalliyeye ” suryasthadinda suryodayavare” nataka nodida aubhuti. Nimma baharadalli natakave nammedurige sambruddha gondidhe.

    ಪ್ರತಿಕ್ರಿಯೆ
  2. Bharathi b v

    ಇಡೀ ರಾತ್ರಿ ಕನಸಿನಲ್ಲೂ ಕಾಡಿಬಿಟ್ಟಿತು ಈ ನಾಟಕ … ಸಂಧ್ಯಾ ನಿನ್ನ ಬರಹ ಓದಿದ ನಂತರ ಮತ್ತಿಷ್ಟು ದಿನ ಕಾಡುತ್ತೆ….

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ನಾಟಕದ ಅದ್ಭುತ ಅನುಭೂತಿಯೊಂದನ್ನು ಕಟ್ಟಿಕೊಟ್ಟ ಬರಹ. ನಾಟಕ ಸವಿದಂತೆಯೇ ಆಯಿತು. ಸುರೇಂದ್ರ ವರ್ಮ, ಸಿದ್ಧಲಿಂಗ ಪಟ್ಟಣಶೆಟ್ಟಿ(ಸಿಪ), ಹಡಪದ, ನಂಜುಂಡೇಗೌಡರು, ಸಿತಾರ, ಮಹೇಶ ಎಲ್ಲರಿಗೂ ಅಭಿನಂದನೆಗಳು. ಸಂಧ್ಯಾಜಿ ಒಂದೊಳ್ಳೆಯ ನಾಟಕದ ಆತ್ಮವನ್ನು ಈ ರೀತಿ ಹಿಡಿದಿಡುವುದೆಂದರೆ….ವಾಹ್…

    ಪ್ರತಿಕ್ರಿಯೆ
  4. ಸ್ವರ್ಣಾ

    ನಾಟಕವನ್ನು ನಿಮ್ಮ ಮಾತುಗಳಲ್ಲಿ ಓದುವುದೂ ಒಂದು ಸುಖ . ಚೆನ್ನಾಗಿದೆ. ನೋಡ್ಬೇಕು ಈ ರಾಣಿಯನ್ನು

    ಪ್ರತಿಕ್ರಿಯೆ
  5. Rj

    ’ಸೂರ್ಯನ ಕೊನೆಯ ಕಿರಣದಿಂದ ಸೂರ್ಯನ ಮೊದಲ ಕಿರಣದವರೆಗೂ…’? – ಎಂಬ ಮೊದಲ ಸಾಲನ್ನು ಓದಿದಾಗ, ಇದೇನೋ ವಿಶೇಷ ಅಥವಾ ವಿಚಿತ್ರವಾಗಿದೆಯಲ್ಲ ಅಂತ ಅನಿಸಿತ್ತು. ಸಾಮಾನ್ಯ ಅರ್ಥದಲ್ಲಿ, ‘ಮೊದಲ ಕಿರಣ’ ಅನ್ನುವದು ಮೊದಲಿಗೆ ಬರಬೇಕು, ಹಾಗಾಗಿ ಅದು, ‘ಸೂರ್ಯನ ಮೊದಲ ಕಿರಣದಿಂದ ಸೂರ್ಯನ ಕೊನೆಯ ಕಿರಣದವರೆಗೂ..?’ ಅಂತಿರಬೇಕಿತ್ತು ಅಂತನಿಸಿತ್ತು.
    ನಾಟಕಗಳೆಂದರೆ ಮೈಲು ದೂರ ಓಡುವ ನನ್ನಂಥವರಿಗೆ, ನಿಮ್ಮಂಥವರು ಕಟ್ಟಿಕೊಡುವ ನಾಟಕದ ತಿರುಳೇ ಇಷ್ಟವಾಗುತ್ತದೆ. ನಾಟಕದ ಅಂಗಳದಲ್ಲಿ ಆಯಾ ಪಾತ್ರಗಳು ಮೂಡಿಸಬಹುದಾದ ಭಾವಗಳು ನಮ್ಮಿಂದ ಒಮ್ಮೊಮ್ಮೆ ತಪ್ಪಿಹೋಗಬಹುದು. ನಿಮ್ಮಿಂದ ಅವು ತಪ್ಪಿಸಿಕೊಳ್ಳಲಾರವು ಅಂತನಿಸುತ್ತದೆ.. 🙂
    -Rj

    ಪ್ರತಿಕ್ರಿಯೆ
  6. shanthakumari

    ಇನ್ನೂ ಆ ನಾಟಕದ ಗುಂಗಿನಿಂದ ಹೊರಬಂದೇ ಇಲ್ಲ ಸಂಧ್ಯಾ ಈಗ ನಿಮ್ಮ ಬರಹ ನೋಡಿ ನನ್ನ ಮನದ ಮಾತುಗಳನ್ನೇ ಓದಿದಂತಾಯಿತು. ಮತ್ತೊಮ್ಮೆ ನಾಟಕ ಕಣ್ಣಿಗೆ ಕಟ್ಟಿತು. ತುಂಬಾ ಉತ್ತಮ ಬರಹ.

    ಪ್ರತಿಕ್ರಿಯೆ
  7. Anil Talikoti

    ನಾಟಕ ಮತ್ತೆ ನೋಡಿದಂತಹ ಅನುಭವ ಕಟ್ಟಿ ಕೊಡುವ ಬರಹ. ನನಗೆ ಹಿಡಿಸಿದ, ನನ್ನನ್ನು ಹಿಗ್ಗಿಸಿದ ನಾಟಕವಿದು. ದೃಶ್ಯ-ಕಾವ್ಯ ಎರಡೂ ಸುಂದರವಾಗಿ ಮೇಳೈಸಿದ ನಾಟಕವಿದು.
    ~ಅನಿಲ

    ಪ್ರತಿಕ್ರಿಯೆ
  8. Mallappa

    ನಾಟಕ ನೋಡಲಿಲ್ಲ ಅನ್ನುವ ಹಳಹಳಿ ಹೆಚ್ಚಿಸುವ ನಿಮ್ಮ ಬರಹ ಅದ್ಭುತ. ನಾಟಕ ನೊಡುತ್ತಿರುವಾಗ ತಂಡ ಕಟ್ಟಿ ಕೊಡುವುದು ತಲೆಯಲ್ಲಿ ಇಳಿಸಬೇಕು.ಆದರೆ ನಿಮ್ಮ ಬರಹ ಓದುತ್ತಿದ್ದರೆ ನಾವೇ ನಾಟಕವನ್ನು ತಲೆಯಲ್ಲಿ ಕಟ್ಟಿಕೊಳ್ಳಬೇಕು.ಜೊತೆಗೆ ನಾಟಕದ ವಿಮರ್ಶೆಯ ಬೋನಸ್. ಒಂದು ಬಿನ್ನಹ, ನಾಟಕದ ಸೂಚನೆ ಅವಧಿಯಲ್ಲಿ ಅಥವ ಫೆಸ್ ಬುಕ್ಕ ಲ್ಲಿ ತಿಳಿಸಿದರೆ ನಾವೂ ನೋಡಲು ಓಡಿ ಬರಲು ಅನುಕೂಲ. ಈ ನಾಟಕ ಎಲ್ಲಿ,ಯಾವಾಗ ನಡೆಯಿತು ತಿಳಿಸಿರಿ ಸಂದ್ಯ ಅಕ್ಕ.

    ಪ್ರತಿಕ್ರಿಯೆ
  9. ಅಕ್ಕಿಮಂಗಲ ಮಂಜುನಾಥ

    ಲೇಖನ ತುಂಬಾ ಚೆನ್ನಾಗಿದೆ, ಮೇಡಂ.

    ಪ್ರತಿಕ್ರಿಯೆ
  10. Nagakannika

    Naataka nodidanteye ayetu, manasinalli kaduava hagide nimma baravanige thank you madam.

    ಪ್ರತಿಕ್ರಿಯೆ
  11. raynuka

    ನಾನೂ ಸಹ ನಾಟಕದ ಹೆಸರಿನಿಂದಲೇ ಕುತೂಹಲಗೊಂಡಿದ್ದೆ. ಪೂರ್ತಿ ನಾಟಕ ನೋಡಿದಂತಾಯ್ತು. ನೀನು ಕಣ್ಣಿಗೆ ಕಟ್ಟುವಂತೆ ವಿವರಿಸುವ ರೀತಿಯೇ ಅನನ್ಯ ಸಂಧ್ಯಾ. ..ಕಾಡುವ ಬರಹ..ಕಾಡುವ ನಾಟಕ…ಕಾಡುವ ಕಥೆ…..

    ಪ್ರತಿಕ್ರಿಯೆ
  12. lakshmishankarjoshi.

    ಎಂಥಾ ಸೊಗಸನ್ನ ಕಟ್ಡಿ ಕೊಟ್ಟೆ ಕಣೆ!ನಾಟಕ ತಂಡಕ್ಕೆ ಕಲಬುರ್ಗಿಗೆ ಕಳಿಸೆ.ಯಾವಾಗ ನೋಡೀನೋ ಅನ್ನೋ ಹಾಗಿದೆ.ಎಂದಿನಂತೆ ಅದ್ಭುತ ಬರಹ!

    ಪ್ರತಿಕ್ರಿಯೆ
  13. Anonymous

    madam, namasthe. naanu sunday 7th aug. ee natakavannu doora darshana dalli nodide. tumba pulaka gonde. idu samstheya modala nataka vendu santhoshavu ayithu. nimma visthruta vada vimarshe odida mele natakada ola harivu innu tiliyayitu. vasthralankara, prasadhana( haneya bottu ), prathusha jotegina sarasa, bili batte balasida pari tumba mohaka. ettheechege olleya nataka nodida(t.v.parademele adaru) anubhava vayithu. nirdeshaka rannolagondu ella tandakke abhinandane. ramachandra hadapadara alaapane hagu hinnele sangeeta naanu aliside. madam, tumba sundaravada vimarshe nannanu matthomme nimma holahinalli nataka noduvanthe prerepiside. namaskar. bheemasen, rangathornana ballari

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: