'ಸಂಬಂಧಗಳು’ – ಎಸ್ ದಿವಾಕರ್

ಎಸ್ ದಿವಾಕರ್

ಕೆಲವು ದಿನಗಳ ಹಿಂದೆ ಕಿರಾಣಿ ಅಂಗಡಿಯೊಂದರಲ್ಲಿ ನಾನೊಂದು ಪತ್ರಿಕೆಯನ್ನು ಕೊಂಡುಕೊಳ್ಳುತ್ತಿರುವಾಗ ಕೊಳ್ಳುವ ಆ ಪ್ರಕ್ರಿಯೆಯನ್ನು ಕುರಿತು, ಆ ಕ್ಷಣದ ವಿದ್ಯಮಾನವನ್ನು ಕುರಿತು (ಅಂಗಡಿಯವನಿಗೆ ನಾನು ಕೊಟ್ಟ ಹಣ, ಅವನು ಹಿಂತಿರುಗಿಸಿದ ಚಿಲ್ಲರೆ, ಪತ್ರಿಕೆಯನ್ನು ನಾನು ಮಡಿಚಿದ ರೀತಿ, ಇತ್ಯಾದಿ), ಚಾರಿತ್ರಿಕವಾಗಿ ಅದಕ್ಕೆ ಸಂಬಂಧಪಟ್ಟ ಅಂಥದೇ ಪ್ರಸಂಗಗಳನ್ನು, ಅವುಗಳ ಪರಿಣಾಮಗಳನ್ನು ಕುರಿತು – ನಾನು ಇಷ್ಟಪಟ್ಟರೆ – ನನ್ನ ಜೀವಮಾನದುದ್ದಕ್ಕೂ ಮೆಲುಕುಹಾಕಬಹುದೆನ್ನಿಸಿತು.
ಮೊದಲು ನಾನು ಪತ್ರಿಕೆಯನ್ನು ಕೊಂಡುಕೊಂಡ ಪ್ರಕ್ರಿಯೆಯನ್ನೇ ತೆಗೆದುಕೊಳ್ಳೋಣ. ಅದು ಒಂದು ವಸ್ತುವಿಗಾಗಿ ನನ್ನ ಹಣವನ್ನು ವಿನಿಮಯಮಾಡಿಕೊಂಡ ಸಂದರ್ಭ. ಆಗ ಅಂಗಡಿಯವನಿಗೆ ಮೊದಲು ಯಾವುದು ಸೇರಿತ್ತೋ ಅದು ನನಗೆ ಸೇರಿದಂತಾಯಿತು. ಅವನಿಗೆ ಆ ಕ್ಷಣ ಅವನು ಲೆಕ್ಕಹಾಕಿರದ ಕೆಲವು ಪೈಸೆಗಳಷ್ಟು ಲಾಭವಾಗಿರಲಿಕ್ಕೆ ಸಾಕು. ನನಗೋ, ನನ್ನಲ್ಲಿರದ ಪತ್ರಿಕೆ ನನ್ನ ಕೈಸೇರಿತು. ಅದನ್ನು ನಾನು ಓದುವುದು, ಸುರುಳಿ ಸುತ್ತಿ ನೊಣ ಹೊಡೆಯುವುದು, ನೆಲಕ್ಕೆ ಹಾಸಿ ನುಚ್ಚನ್ನೋ ಹಿಟ್ಟನ್ನೋ ಜರಡಿ ಹಿಡಿಯುವುದು, ಮಡಿಸಿ ಹಕ್ಕಿಯ ಆಕಾರಕ್ಕೆ ಕತ್ತರಿಸುವುದು, ಅದರಿಂದ ಬೆಂಕಿ ಹೊತ್ತಿಸುವುದು, ಆಸಕ್ತಿ ಹುಟ್ಟಿಸುವ ಸುದ್ದಿಗಳನ್ನು ಮುಂದೆ ಎಂದಾದರೂ ಉಪಯೋಗಕ್ಕೆ ಬರಬಹುದೆಂದು ಕತ್ತರಿಸಿಕೊಳ್ಳುವುದು, ಹಾಗೆ ಕತ್ತರಿಸಿಟ್ಟದ್ದನ್ನು ಸ್ನೇಹಿತರಿಗೆ ಕಳಿಸಿಕೊಡುವುದು, ದಿನದಿನವೂ ಕೂಡಿಟ್ಟು ಒಂದು ದಿನ ಹಳೆ ಪೇಪರ್ ಅಂಗಡಿಗೆ ಮಾರುವುದು, ಹೀಗೆ ಏನು ಬೇಕಾದರೂ ಮಾಡಬಹುದು ನಾನು. ಮೂರು ರೂಪಾಯಿ ಕೊಟ್ಟು ಕೊಂಡುಕೊಂಡ ಪತ್ರಿಕೆಯನ್ನು ಹೇಗೆಲ್ಲ ಉಪಯೋಗಿಸಬಹುದೆಂಬುದೇ ಅಚ್ಚರಿಯ ಸಂಗತಿ.

ಪತ್ರಿಕೆಯೊಂದನ್ನು ಕೊಳ್ಳುವ ಕ್ರಿಯೆಯಲ್ಲಿ ವಸ್ತುಗಳನ್ನು ವಿನಿಮಯಮಾಡಿಕೊಳ್ಳುವ ಒಂದು ಇತಿಹಾಸವೇ ಇದೆಯಷ್ಟೆ. ಒಂದು ವಸ್ತುವನ್ನು ಕೊಟ್ಟು ಇನ್ನೊಂದನ್ನು ಪಡೆದುಕೊಳ್ಳುವ ವಿನಿಮಯ ವಿಧಾನ ತುಂಬಾ ಹಳೆಯದು. ಅಡಾಂ ಸ್ಮಿತ್, ರಿಕಾಡರ್ೊ, ಕಾಲರ್್ ಮಾಕ್ಸರ್್, ಮ್ಯಾಕ್ಸ್ ವೆಬರ್ ಮೊದಲಾದವರು ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಯಾವ ಯಾವ ವಿನಿಮಯ ಸಿದ್ಧಾಂತಗಳನ್ನು ಮಂಡಿಸಿ ಏನೇನೆಲ್ಲ ವಿಶ್ಲೇಷಣೆ ನಡೆಸಿದ್ದಾರೋ ಅವನ್ನೆಲ್ಲ ಅರಿತುಕೊಳ್ಳಲು ಎಷ್ಟು ಸಮಯ ಬೇಕು? ಅದನ್ನು ಊಹಿಸಿಕೊಳ್ಳಲಾದೀತೆ?
ಇನ್ನು ನಾನು ಆ ಅಂಗಡಿಯವನ ಜೊತೆ ಮಾಡಿದ ವ್ಯವಹಾರ. ನಾನೂ ಅವನೂ ಸ್ನೇಹಿತರೇನಲ್ಲ. ಆದರೂ ಅವನನ್ನು ನಾನು ಬಲ್ಲೆ. ಎಷ್ಟೋ ವರ್ಷ ಒಂದು ಅಂಗಡಿಯಲ್ಲಿ ವ್ಯಾಪಾರ ಮಾಡಿದರೆ ಆ ಅಂಗಡಿಯವ ಗೊತ್ತಿಲ್ಲದೆ ಇರುವುದುಂಟೆ? ನನಗೆ ಅವನ ಅಂಗಡಿ ಅದೆಷ್ಟು ವರ್ಷದಿಂದ ಅಲ್ಲಿದೆಯೆಂದು ಗೊತ್ತು. ಅದಕ್ಕೂ ಮುಂಚೆ ಅವನು ಎಲ್ಲಿದ್ದ ಎಂದು ಗೊತ್ತಿಲ್ಲದಿದ್ದರೂ ಎಲ್ಲಿದ್ದ, ಏನಾಗಿದ್ದ ಎಂದು ಊಹಿಸಿಕೊಳ್ಳಬಲ್ಲೆ. ಅವನು ಸಂಜೆಯ ಹೊತ್ತು ಅದೇ ಬಡಾವಣೆಯ ಒಂದು ಮೋರಿಯ ಬದಿಯಲ್ಲಿ ಕುಳಿತು ಬೋಂಡ, ಆಂಬೊಡೆ, ಮಿಚರ್ಿ, ಆಲೂಗೆಡ್ಡೆ, ಬಾಳೆಕಾಯಿ ಬಜ್ಜಿ ಕರಿಯುತ್ತಿದ್ದಿರಬೇಕು; ಅವನ ಹೆಂಡತಿ ದುಡ್ಡು ಕೊಟ್ಟವರಿಗೆ ಪತ್ರಿಕೆಯ ಸಣ್ಣ ಸಣ್ಣ ತುಂಡುಗಳಲ್ಲಿ ಅವುಗಳನ್ನು ಕಟ್ಟಿಕೊಡುತ್ತಿದ್ದಿರಬೇಕು; ಅಥವಾ ಬೆಳಗಿನ ಹೊತ್ತು ಅವನು ಮನೆಮನೆಗೆ ಹಾಲು ಹಾಕುತ್ತಿದ್ದಿರಬೇಕು; ಅವಳು ದೊಡ್ಡದೊಂದು ಚೀಲದಲ್ಲಿ ತುಂಬಿಕೊಂಡ ಸೊಪ್ಪು ಮಾರುತ್ತಿದ್ದಿರಬೇಕು; ಹದಿನೈದು ವರ್ಷದ ಹಿಂದೆ ಅವನ ಕೂದಲು ನೆರೆತಿರಲಿಲ್ಲ, ಅವಳ ಕಣ್ಣುಗಳಲ್ಲಿ ಒಂದು ಬಗೆಯ ಹೊಳಪಿದ್ದಂತಿತ್ತು. ಆಗ ಅವರಿಗೊಂದು ಮಗುವೂ ಇತ್ತೆಂದು ನನಗೆ ಗೊತ್ತಿರಲಿಲ್ಲ. ಅಥವಾ ಈಗ ಹತ್ತು ಹನ್ನೆರಡು ವರ್ಷವಾಗಿರುವ ಹುಡುಗ ಆಗಿನ್ನೂ ಹುಟ್ಟಿರಲಿಕ್ಕಿಲ್ಲ.
ಅಂಗಡಿಯವನಿಗೂ ನನ್ನನ್ನು ಕಂಡರೆ ಮುಗುಳುನಗುವಷ್ಟು ನನ್ನ ಪರಿಚಯವುಂಟು. ಪತ್ರಿಕೆಯನ್ನು ಕೊಂಡುಕೊಳ್ಳುವ ಮೂಲಕ ನಾನು ಅವನ ಜೊತೆ ಮಾಡಿಕೊಂಡ ವಸ್ತುವಿನ, ದೃಷ್ಟಿಯ, ಮೌನದ, ಮಾತುಕತೆಯ ವಿನಿಮಯ ನನಗೆ ಮಾಹಿತಿಯನ್ನು, ಜ್ಞಾನವನ್ನು, ಒಳನೋಟಗಳನ್ನು ಒದಗಿಸಲಿಲ್ಲವೆಂದು ಹೇಗೆ ಹೇಳಲಿ? ಈಗಲೂ ಅವನ, ಅವನ ಹೆಂಡತಿಯ, ಅವರ ಮಗನ ದೈಹಿಕ ವಿವರಗಳನ್ನು, ಅವರ ನಡಾವಳಿಯನ್ನು, ಆ ಅಂಗಡಿಯ ಗಾತ್ರ, ಬಾಗಿಲು, ಮುಂಭಾಗದ ಅಲಂಕಾರ ಮೊದಲಾದವುಗಳನ್ನು ಕಲ್ಪಿಸಿಕೊಳ್ಳಬಲ್ಲೆ.
ಅವನು ಆ ಅಂಗಡಿಯಿಡುವುದಕ್ಕೆ ಮುಂಚೆ ಅಲ್ಲಿ ಯಾರು ಯಾರು ಇದ್ದರು, ಅವರೇನು ವ್ಯಾಪಾರ ಮಾಡುತ್ತಿದ್ದರು, ಅವರಲ್ಲಿ ಎಷ್ಟು ಹೊತ್ತಿಗೆ ಯಾರು ಯಾರು ಅಂಗಡಿಯಲ್ಲಿರುತ್ತಿದ್ದರು ಎಂದು ಕೂಡ ನನಗೆ ಗೊತ್ತು. ಒಮ್ಮೆ ಎಲೆಕ್ಟ್ರಿಸಿಟಿ ಬಿಲ್ಲು ಕಟ್ಟುವುದಕ್ಕಾಗಿ ವಿದ್ಯುತ್ ಇಲಾಖೆಗೆ ಹೋಗಿದ್ದಾಗ ಅಲ್ಲಿ ಸಿಕ್ಕಿದ ಬಿಲ್ಡಿಂಗ್ ಕಂಟ್ರಾಕ್ಟರೊಬ್ಬ ಆ ಕಟ್ಟಡ ಯಾರದು, ಯಾವಾಗ ಕಟ್ಟಿದ್ದು, ಮೊದಲು ಅಲ್ಲಿ ಯಾರಿದ್ದರು ಎಂದು ಒಂದಿಷ್ಟು ಮಾಹಿತಿ ಕೊಟ್ಟಿದ್ದ ನೆನಪು. ಆ ಅಂಗಡಿಯ ಹಿಂಭಾಗದಲ್ಲೇ ಇದ್ದ ಪುರೋಹಿತರೊಬ್ಬರು ಬೆಂಗಳೂರಿನ ಆ ಭಾಗ ಹೇಗೆಲ್ಲ ಬೆಳೆಯಿತು, ಬೆಳೆಯುತ್ತಾ ಬೆಳೆಯುತ್ತಾ ಏನೇನೆಲ್ಲವನ್ನು ಬದಲಾಯಿಸಿತು ಎಂದು ನನಗೊಮ್ಮೆ ತಿಳಿಸಿದ್ದರು. ಆ ವಿವರಗಳೆಲ್ಲ ಒಟ್ಟು ಸೇರಿದರೆ ಒಂದು ಪುಟ್ಟ ಚರಿತ್ರೆಯೇ ಆದೀತು. ಸದ್ಯಕ್ಕಂತೂ ನನ್ನ ಜ್ಞಾಪಕ ಶಕ್ತಿ ಅಗಾಧವಾಗಿರುವುದರಿಂದ ನಾನು ಕೇಳಿಸಿಕೊಂಡಿರುವ ಹಾಗೆಯೇ ಅವುಗಳನ್ನು ಬರೆದಿಡಬಲ್ಲೆ.
ನಾನು ಪತ್ರಿಕೆಯನ್ನು ಕೊಂಡುಕೊಂಡಾಗ ಆ ಅಂಗಡಿಯಲ್ಲಿ ಯಾರು ಯಾರಿದ್ದರು ಎಂದು ಖಚಿತವಾಗಿ ಹೇಳಬಲ್ಲೆ. ಅಂದು ಅಲ್ಲಿದ್ದವರು ಮೂರು ಮಂದಿ. ಒಬ್ಬ ನೋಡಿ ಗೊತ್ತಿದ್ದ ವ್ಯಕ್ತಿ. ಇನ್ನಿಬ್ಬರಲ್ಲ್ಲಿ ಏಳೆಂಟು ವರ್ಷಗಳ ಒಬ್ಬ ಹುಡುಗ ಹತ್ತು ಪೈಸೆಯನ್ನು ಪೆಪ್ಪರಮೆಂಟಿನ ಡಬ್ಬಿಯ ಮೇಲಿಟ್ಟು ಬಿಸ್ಕತ್ತೂ ಬಿಸ್ಕತ್ತೂ ಎಂದು ಕೂಗಿಕೊಳ್ಳುತ್ತಿದ್ದ. ಇನ್ನೊಬ್ಬಳು ಸುಮಾರು ನಲವತ್ತು ದಾಟಿದ ಮಹಿಳೆ. ಏನೋ ಯೋಚನೆಗಿಟ್ಟುಕೊಂಡಂತಿದ್ದ ಆಕೆಯ ಮುಖದಲ್ಲಿ ಒಂದು ಬಗೆಯ ನಿರಾಶೆಯಿದ್ದರೂ ಆಕರ್ಷಣೆಗೇನೂ ಕೊರತೆಯಿರಲಿಲ್ಲ. ಆಕೆ ಹಿಂದೂ ಪತ್ರಿಕೆಯನ್ನು ಕೊಂಡುಕೊಂಡು ಅದರ ಒಳಪುಟಗಳಲ್ಲಿ ಏನನ್ನೋ ಹುಡುಕಾಡಿ ತಕ್ಷಣ ಅಂಗಡಿಯ ಬದಿಯಲ್ಲೇ ಇದ್ದ ಪುಸ್ತಕದಂಗಡಿಯೊಳಕ್ಕೆ ನುಸುಳಿಕೊಂಡಳು. ಆಗ ನನಗೆ ಆಕೆ ಯಾವುದೋ ಇಂಗ್ಲಿಷ್ ಕಾದಂಬರಿ ಕೊಂಡುಕೊಳ್ಳುತ್ತಾಳೆನ್ನಿಸಿತು.
ನಾನು ಎಲ್ಲಿಂದ ಆ ಅಂಗಡಿಗೆ ಹೋದೆ, ಅಲ್ಲಿಂದ ಮತ್ತೆಲ್ಲಿಗೆ ಹೊರಟೆ ಎಂದು ಹೇಳಲಿಲ್ಲ, ಅಲ್ಲವೆ? ನಾನು ಅಲ್ಲಿಗೆ ಹೋದದ್ದು ಮನೆಯಿಂದ. ಆಮೇಲೆ ಅಲ್ಲಿಂದಲೇ ಏನನ್ನೋ ತರುವುದಕ್ಕಾಗಿ ಅಂಗಡಿ ಬೀದಿಗೆ ಹೋಗಿರಬೇಕು. ಬಹುಶಃ ಕಾಫಿಪುಡಿ ತರುವುದಕ್ಕಾಗಿ. ಮತ್ತೆ ಈ ಕಾರ್ಯಭಾರವನ್ನು ವಿವರಿಸಬೇಕಾದರೆ ನಾನು ನನ್ನ ಮನೆಯ ಬಗ್ಗೆ, ಸಂಸಾರದ ಬಗ್ಗೆ, ನನ್ನ ಉದ್ಯೋಗದ ಬಗ್ಗೆ, ನನಗಿರುವ ವರಮಾನದ ಬಗ್ಗೆ, ನಮ್ಮ ಜೀವನ ವಿಧಾನದ ಬಗ್ಗೆ ವಿವರಿಸಬೇಕಾದೀತು. ಆದರೆ ವಿನಿಮಯಕ್ಕೆ ಸಂಬಂಧಪಟ್ಟ ನನ್ನ ಈ ಲೇಖನಕ್ಕೆ ಅದು ಯಾವುದೂ ಪ್ರಸ್ತುತವಲ್ಲ.
ಅಂದು ನನ್ನ ಮನಃಸ್ಥಿತಿ ಹೇಗಿತ್ತು? ಈ ಪ್ರಪಂಚದಲ್ಲಿ ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಒಂದು ಸ್ಥಾನವಿದ್ದರೆ ನನಗಂದು ಯಾವ ಸ್ಥಾನವಿತ್ತು? ಒಬ್ಬ ಹೇಗೆ ನಿಲ್ಲುತ್ತಾನೆ, ಹೇಗೆ ವಾಲುತ್ತಾನೆ, ಹೇಗೆ ಕೈಬೀಸುತ್ತಾನೆ, ಅವನ ಆತಂಕವೇನು, ಅವನ ಆಶೋತ್ತರವೇನು, ಅವನ ಮುನ್ನಡೆಯೇನು, ಸೋಲೇನು? ಇವು ಆ ವ್ಯಕ್ತಿಯ ಕಾಲಖಂಡದೊಳಗೇ ಉದ್ಭವಿಸುವ ಪ್ರಶ್ನೆಗಳು. ಒಬ್ಬನ ಆತಂಕ, ಆಶೋತ್ತರ, ಮುನ್ನಡೆ, ಸೋಲು, ಇತ್ಯಾದಿಯನ್ನು ಸ್ವಲ್ಪಮಟ್ಟಿಗಾದರೂ ವಿವರಿಸಹೊರಟರೆ ಒಂದು ನೂರು ಪುಟಗಳು ಕೂಡ ಸಾಕಾಗುವುದಿಲ್ಲ.
ನಾನು ಎಷ್ಟು ಹೊತ್ತಿಗೆ ಆ ಅಂಗಡಿಗೆ ಹೋದೆ, ಆಗ ಎಂಥ ಹವಾಮಾನವಿತ್ತು ಎಂದು ಹೇಳುವುದನ್ನು ಮರೆತುಬಿಟ್ಟೆ. ಅವೊತ್ತು ನಾನು ಹೋದದ್ದು ಬೆಳಗ್ಗೆ ಸುಮಾರು ಒಂಭತ್ತೂವರೆ ಗಂಟೆಗೆ; ಅದು ಆಷಾಢ ಮಾಸದಂತೆ ಭಯಂಕರವಾಗಿ ಬೀಸುತ್ತಿದ್ದ ಗಾಳಿ ರಸ್ತೆಯ ಮರಳು ಕಸ ಕಡ್ಡಿಗಳನ್ನು ಗಿರಿಗಟ್ಟಲೆ ತಿರುಗಿಸಿ ನನ್ನ ಪ್ಯಾಂಟಿಗೆ ಅಪ್ಪಳಿಸಿದ್ದರಿಂದ ನಾನು ಅದನ್ನು ಕೊಡವಿಕೊಳ್ಳಬೇಕಾಯಿತು.
ಕೊನೆಗೆ ನಾನಂದು ಕೊಂಡುಕೊಂಡ ‘ವಿಜಯ ಕನರ್ಾಟಕ’ ಪತ್ರಿಕೆಯ ಬಗ್ಗೆ ಹೇಳಲೇಬೇಕು. ಒಂದು ಮನೆಯ ಬಗೆಗೋ ಬೀದಿಯ ಬಗೆಗೋ ವಿವರಿಸಬಹುದಾದರೆ ಒಂದು ಪತ್ರಿಕೆಯ ಕುರಿತೂ ವಿವರಿಸಬಹುದಲ್ಲ? ಹಾಗೆ ನಾನು ‘ವಿಜಯ ಕನರ್ಾಟಕ’ದ ಆಕಾರ, ಮೇಲ್ಮೈ, ವಿನ್ಯಾಸ, ತೂಕ, ಬಣ್ಣ, ಇತ್ಯಾದಿ ವಿವರಿಸುವುದು ಸುಲಭ. ಆದರೆ ಅಂದಿನ ಪತ್ರಿಕೆಯೊಳಗೆ ಏನೇನಿತ್ತು, ಪೂತರ್ಿ ಓದುವುದಕ್ಕೆ ಒಂದೂವರೆ ಗಂಟೆಯಷ್ಟಾದರೂ ಬೇಕಿತ್ತಲ್ಲವೆ, ಅದರ ಸಾರಾಂಶ ಏನಿತ್ತು, ಓದುತ್ತಿರುವಾಗ ವ್ಯಾಕರಣದ ತಪ್ಪುಗಳೇನಾದರೂ ಕಂಡುಬಂದವೆ, ಕೆಲವು ಸುದ್ದಿಗಳು ಎಷ್ಟು ಮಟ್ಟಿಗೆ ಹಳೆಯ ಸುದ್ದಿಗಳಿಗೆ ಸಂಬಂಧಪಟ್ಟಿದ್ದವು, ಹಿಂದಿನ ದಿನದಿಂದ ಅಂದಿನವರೆಗೆ ಏನೇನು ರಾಜಕೀಯ ಬೆಳವಣಿಗೆಯಾಗಿತ್ತು, ಇತ್ಯಾದಿ ವಿವರಿಸಬೇಕಾದರೆ ಎಷ್ಟೆಲ್ಲ ಸಮಯ ಬೇಕೆಂದು ಲೆಕ್ಕಹಾಕಲಾಗದು. ಅಂದಿನ ‘ವಿಜಯ ಕರ್ನಾಟಕ’ದಲ್ಲಿ ಎಷ್ಟು ಪದಗಳಿರಬಹುದೆಂದು ಒಂದು ಕ್ಷಣ ಯೋಚಿಸಿ ನಾನೇ ದಿಕ್ಕುಗಾಣದಂತಾಗಿದ್ದೆ. ಇರಲಿ, ಅಂದಿನ ಸಂಚಿಕೆಯ ಮುಖಪುಟದಲ್ಲಿ ನನಗೆ ತೀರ ಪರಿಚಿತರಾಗಿದ್ದ ನನ್ನ ಮಿತ್ರ, ಕವಿ ಸಿದ್ಧಲಿಂಗಯ್ಯನವರ ಫೋಟೋ ಇತ್ತು. ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸುದ್ದಿಯಿತ್ತು.
ಅದನ್ನು ನೋಡಿದ್ದೇ ಮೂವತ್ತೈದು ವರ್ಷಗಳಿಗೂ ಹಿಂದೆ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಾನು ಅವರನ್ನು ಮೊದಲು ನೋಡಿದ್ದ ಸಂದರ್ಭ ನೆನಪಾಯಿತು. ಜೊತೆಗೇ ಅವರ ಬಾಲ್ಯದ ಕೆಲವು ವಿವರಗಳು, ಅವರ ಆಸಕ್ತಿಗಳು, ಹವ್ಯಾಸಗಳು, ಅವರ ವಿಲಕ್ಷಣ ವರ್ತನೆಗಳು, ಅವರ ಹಾಸ್ಯ ಮನೋಧರ್ಮ, ಅವರು ಅಂದು ತೊಟ್ಟುಕೊಂಡಿದ್ದ ತಿಳಿ ರೋಜಾ ಬಣ್ಣದ ಬುಷ್ಷರಟು, ಅವರ ಕೈಯಲ್ಲಿದ್ದ ಡಿ.ಆರ್. ನಾಗರಾಜರ ‘ಅಮೃತ ಮತ್ತು ಗರುಡ’ ಎಂಬ ಪುಸ್ತಕ, ಇನ್ನೂ ಏನೇನೋ ನೆನಪಿಗೆ ಬಂದವು. ಆದರೆ ನಾನು ಹಣಕ್ಕೆ ವಿನಿಮಯಮಾಡಿಕೊಂಡ ಪತ್ರಿಕೆಯ ಬಗ್ಗೆ, ಅದರ ವಿನ್ಯಾಸದ ಬಗ್ಗೆ, ರಾಜಕೀಯ, ಸಾಮಾಜಿಕ ಸುದ್ದಿಗಳ ಬಗ್ಗೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ, ನಗರ ಪ್ರದಕ್ಷಿಣೆ, ವಾಣಿಜ್ಯ, ಕ್ರೀಡೆ, ರಿಯಲ್ ಎಸ್ಟೇಟ್, ಕ್ಲಾಸಿಫೈಡ್ ಜಾಹಿರಾತು, ಹವಾಮಾನ ವರದಿ ಮೊದಲಾದವುಗಳ ಬಗ್ಗೆ ನಾನೇನೂ ಹೇಳಲಾರೆ. ಯಾಕೆಂದರೆ ನನಗೆ ನೆನಪಿರುವಂತೆ, ಅದೇಕೋ ನಾನಂದು ಆ ಪತ್ರಿಕೆಯನ್ನು ಓದಲೇ ಇಲ್ಲ.
 

‍ಲೇಖಕರು G

July 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸ್ವರ್ಣಾ

    ಕಾಣಲು ಕಣ್ಣಿದ್ದರೆ ಒಂದು ಕ್ರಿಯೆಗೆ ಎಷ್ಟೆಲ್ಲಾ ಆಯಾಮಗಳು . ಚೆನ್ನಾಗಿದೆ ಸರ್

    ಪ್ರತಿಕ್ರಿಯೆ
  2. Gn Nagaraj

    ಸಂಬಂಧ-ಪ್ರತಿಕ್ಷಣದ ಜೀವನ ಕ್ರಿಯೆಗಳಲ್ಲಿ ಏರ್ಪಡುವ ಸಂಬಂಧಗಳ ಬಗ್ಗೆ ನಮ್ಮಲ್ಲಿ ಎಷ್ಟು ಅವಜ್ಞೆ ಇರುತ್ತದೆ ಎಂಬ ಬಗ್ಗೆ ನಮ್ಮ ಒಳಗಣ್ನನ್ನು ತೆರೆಯಬೇಕು. ಆಗ ನಾವು ಹೆಚ್ಚು ಹೆಚ್ಚು ಮಾನವೀಯವಾಗುತ್ತಾ ಹೋಗುತ್ತೇವೆ. ಈ ದಿಶೆಯಲ್ಲಿ ಇಂತಹ ಲೇಖನಗಳು ಸಹಾಯಕವಾಗುತ್ತವೆ.
    ಮತ್ತೊಂದು ಸಮಾಜಜೀವಿಯಾದ ಮನುಷ್ಯ ಸಾಮಾಜಿಕವಾಗಿಯೇ ತನ್ನ ಸಾಮರ್ಥ್ಯವನ್ನು ಹೆಚ್ಚು ಫಲಪ್ರದ ಮಾಡಿಕೊಳ್ಳುವ ಅವಕಾಶ.ಮಾರ್ಕ್ವೆಜ್ ನ ಕಾದಂಬರಿಗಳು, ಬರಹಗಳು ಇದನ್ನು ಮತ್ತೆ ಮತ್ತೆ ಗಮನಕ್ಕೆ ತರುತ್ತವೆ.ಪ್ರಕೃತಿಯಲ್ಲಿ ಪರಿಸರ ಸರಪಳಿ ಎಂಬುದೊಂದಿದೆಯಲ್ಲ. ಒಂದು ಸಸ್ಯ. ಒಂದು ಪ್ರಾಣಿಯ ಅಸ್ತಿತ್ವಕ್ಕೆ ಬರುವುದು ಅಥವಾ ಹೋಗುವುದು ಒಂದು ಸರಪಳಿ ಕ್ರಿಯೆಯನ್ನು ಹುಟ್ಟು ಹಾಕಿ ಊಹೆ ಮಾಡಲಾಗದ ಎಡೆಗಳಲ್ಲಿ ಊಹೆ ಮಾಡಲಾಗದ ಪರಿಣಾಮಗಳನ್ನುಂಟು ಮಾಡಬಲ್ಲದು ಎಂಬುದು ಅದರ ತಿರುಳು. ಹಾಗೆಯೇ ಸಾಮಾಜಿಕ ಸರಪಳಿ ಎಂಬುದೊಂದಿದೆ. ಅದರ ಅರಿವು ಮೂಡಲು ಸಂಬಂಧಗಳ ಬಗ್ಗೆ ಚಿಂತನೆ ಬೆಳೆಸಬೇಕಾಗಿದೆ.
    ಇಂದಿನ ವ್ಯಕ್ತಿ ಪ್ರಧಾನ್ಯತೆಯ ಮೌಲ್ಯ ವ್ಯವಸ್ಥೆ , ಮಾರುಕಟ್ಟೆ ಹುಟ್ಟು ಹಾಕಿದ ಕಾನಿಬಾಲಿಸ್ಟಿಕ್ ಸ್ಪರ್ಧೆಯ ಸಮಯದಲ್ಲಿ ಸಂಬಂಧಗಳ, ಸಾಮಾಜಿಕ ಸರಪಳಿ ಕ್ರಿಯೆಯ ಅರಿವು ಬಹಳ ಮುಖ್ಯ ೆಂಬುದು ದಿನೇ ದಿನೇ ಹೆಚ್ಚು ಪ್ರಸ್ತುತವಾಗುತ್ತಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: