ಭಾರತೀಯ ಧರ್ಮಗಳ ಮೇಲೆ ಏಕ ಧರ್ಮದ ಹೇರಿಕೆ ಸಮಂಜಸವೇ?

-ನಾಗೇಶ ತಳವಾರ

‘ಧಾರಣಾತ ಧರ್ಮ ಇತ್ಯಾಹಃ
ಧರ್ಮ ಧಾರಯತಿ ಪ್ರಜಾಃ’
ಈ ಸಾಲುಗಳು ಮಹಾಭಾರತದ ಕರ್ಣ ಪರ್ವದಲ್ಲಿ ಬರುತ್ತೆ. ‘ಯಾವುದು ಇನ್ನೊಂದನ್ನು ಎತ್ತಿ ಹಿಡಿಯುವುದೋ ಅಥವಾ ಇನ್ನೊಂದಕ್ಕೆ ಆಧಾರವಾಗಿ ರಕ್ಷಿಸುವುದೋ ಅದು ಧರ್ಮ’ ಎನ್ನುತ್ತೆ. ಅಂದ್ರೆ ಭಾರತದ ನೆಲದಲ್ಲಿ ಪ್ರತಿಯೊಂದು ಧರ್ಮಕ್ಕೂ ಸ್ಥಾನವಿದೆ. ಮಾನವನ ಅಂತರಂಗದ ಭಾವನೆಗಳ ಅಭಿವ್ಯಕ್ತಿಗೆ ಧರ್ಮ ಅನ್ನೋದು ದಾರಿದೀಪ. ಭಾರತೀಯ ಸಂಸ್ಕೃತಿಯ ಇತಿಹಾಸವನ್ನ ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದಂತೆ ಅದರ ಒಳ ಅರ್ಥ ಏನೆಂಬುವುದು ನಮ್ಮ ಅರಿವಿಗೆ ಬರುತ್ತೆ. ನಮ್ಮ ನಿತ್ಯದ ಜಂಜಾಟದ ಬದುಕಿನಲ್ಲಿ ಭಯ ಅನ್ನುವುದು ನಮ್ಮನ್ನು ಆವರಿಸಿಕೊಂಡಿರುತ್ತೆ. ಅದರಿಂದ ಹೊರ ಬರಲು ಇಲ್ಲವೇ ಮುಕ್ತಿ ಪಡೆಯಲು ದಿವ್ಯ ಶಕ್ತಿಯತ್ತ ಮುಖ ಮಾಡುತ್ತೇವೆ. ಅದೇ ನಾವು ನಂಬಿಕೊಂಡು ಬಂದಿರುವ ದೇವರು ಹಾಗೂ ಧರ್ಮ. ಮನುಷ್ಯ ತಾನು ಕಂಡುಕೊಂಡಿರುವ ಹಾಗೂ ನಂಬಿರುವ ದೇವರು ಶ್ರೇಷ್ಠ ಅನ್ನೋ ಭಾವನಾತ್ಮಕ ಲೋಕದಲ್ಲಿ ವಿಹರಿಸುತ್ತಿರುತ್ತಾನೆ. ಹಾಗಾಗಿ ಆತನಿಗೆ ಆತ ನಂಬಿರುವ ಧರ್ಮವೇ ಪೂಜ್ಯ. ಅದು ತಪ್ಪು ಎನ್ನಲಾಗುವುದಿಲ್ಲ. ಆದ್ರೆ, ಆತ ತನ್ನ ನಂಬಿಕೆಗಳನ್ನು ಇತರರ ಮೇಲೆ ಬಲವಂತವಾಗಿ ಹೇರಬಾರದು. ಎಲ್ಲರಿಗೂ ಅವರದೆಯಾದ ನಂಬಿಕೆಗಳು ಇರುತ್ತವೆ. ಹೀಗಾಗಿ ಈ ನೆಲದಲ್ಲಿ ಇಂದಿಗೂ ಹತ್ತು ಹಲವು ಧರ್ಮಗಳು ಜೀವಂತ.
ನಮ್ಮ ಬದುಕಿನ ಜೀವನ ಶೈಲಿ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರ ವಿಸ್ತಾರವಾಗುತ್ತಾ ಹೋದಂತೆ, ಧರ್ಮ, ಪ್ರಜ್ಞೆ, ಆಚಾರ-ವಿಚಾರಗಳು ಸಹ ಬೆಳೆಯುತ್ತಾ ಸಾಗಿದವು. ಇದರಿಂದಾಗಿ ಹಿಂದೂ, ಯಹೂದಿ, ಇಸ್ಲಾಂ, ಬೌದ್ಧ, ಜೈನ್, ಪಾರಸಿ ಸೇರಿದಂತೆ ಅನೇಕ ಧರ್ಮಗಳು ಹುಟ್ಟಿಕೊಂಡವು. ಈ ಎಲ್ಲಾ ಧರ್ಮಗಳ ಸಾರ ಒಂದೇ, ಅದು ಅಹಿಂಸೆ. ಆದ್ರೆ, ನಾವು ‘ಅ’ ಪದವನ್ನ ತೆಗೆದುಹಾಕಿ ನಮ್ಮ ನಿತ್ಯದ ಬದುಕಿನಲ್ಲಿ ಹಿಂಸೆಯನ್ನು ಮಾತ್ರ ಆಚರಿಸುತ್ತಿರುತ್ತೇವೆ. ಅದು ನಮ್ಮ ಅಂತರಂಗದಲ್ಲಿನ ಕೌರ್ಯಕ್ಕೆ ಹಿಡಿದ ಕನ್ನಡಿ. ಇದರಿಂದಾಗಿ ಪರಸ್ಪರ ಎರಡು ಧರ್ಮಗಳನ್ನು ಆಚರಣೆ ಮಾಡುವವರ ನಡುವಿನ ಸಂಘರ್ಷಕ್ಕೆ ನಾಂದಿ ಹಾಡುತ್ತೆ. ಹಾಗಾಗಿ ಈ ನೆಲದಲ್ಲಿ ಏಕ ಧರ್ಮದ ಹೇರಿಕೆ ಎಂದೂ ಒಪ್ಪಲಾಗದು. ರೋಮ್, ಇಟಲಿ ಕಣ್ಣು ಬೀಡುವ ಮೊದ್ಲೇ ಭಾರತ ಜನ್ಮ ತಾಳಿತ್ತು. ಜಗತ್ತಿಗೆ ನಾಗರಿಕತೆಯ ಪಾಠ ಕಲಿಸಿದ್ದು ಭಾರತ. ಶಿಕ್ಷಣ ಅಂದರೆ ಏನು ಅನ್ನುವುದೇ ಗೊತ್ತಿಲ್ಲದ ಕಾಲದಲ್ಲಿ ಈ ನಾಡಿನಲ್ಲಿ ವೇದ ಉಪನಿಷತ್ತುಗಳ ಪಠಣ ನಡೆದಿತ್ತು. ಸಂಸ್ಕೃತದಲ್ಲಿ ನಮ್ಮ ಹಿರಿಯರು ‘ಯತಃ ಅಭ್ಯುದಯ ನಿಃಶ್ರೇಯಸ ಸಿದ್ಧಿಃ ಸ ಧರ್ಮ’ ಅನ್ನುವ ಮಾತನ್ನ ಹೇಳಿದ್ರು. ಅಂದ್ರೆ, ಯಾವುದ್ರಿಂದ ಶ್ರೇಯಸ್ಸು ಸಿಗುವುದೋ ಅದೇ ಧರ್ಮ ಅನ್ನುವುದು.
ಇಂತಹ ಅನೇಕ ಉದಾಹರಣೆಗಳು ನಮ್ಮ ನಡುವೆ ಇದ್ದರೂ ಮತ್ತೆ ಮತ್ತೆ ನಮ್ಮನ್ನ ಕಾಡುವುದು ಧಾಮರ್ಿಕ ಸಂಘರ್ಷ. ಪುರೋಹಿತ ಶಾಹಿಗಳ ಕಪಿಮುಷ್ಠಿಯಲ್ಲಿ ಧರ್ಮ ಸಿಕ್ಕಿಹಾಕಿಕೊಂಡಿರುವುದರಿಂದ ಗಲಭೆ, ದೊಂಬಿಗಳಗೆ ಕಾರಣವಾಗುತ್ತ್ತಿದೆ. ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟುವಂತಹ ಕೆಲಸಗಳು ನಡೆಯುತ್ತಿವೆ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಮಠಗಳು, ಮದರಸಾಗಳು ಹಾಗೂ ಚಚರ್ುಗಳು ಏಕ ಧರ್ಮದ ಪ್ರತಿಪಾದನೆ ಮಾಡುತ್ತಿವೆ. ಇದು ನಮ್ಮನ್ನು ವಿನಾಶದ ಅಂಚಿಗೆ ಒಯ್ಯಬಲ್ಲುದಷ್ಟೆ. ಏಕ ಧರ್ಮದ ಪ್ರತಿಪಾದನೆ ಮಾಡುತ್ತಿರುವ ಇರಾಕ್, ಇರಾನ್, ಖಜಕಿಸ್ತಾನ್ ಸೇರಿದಂತೆ ಅರಬ್ ರಾಷ್ಟ್ರಗಳು ಇಂದಿಗೂ ಸಹ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿವೆ. ಕಟ್ಟಾ ಸಂಪ್ರದಾಯವಾದಿಗಳಿಂದಾಗಿ ಮುಗ್ಧ ಜೀವಗಳು ಧರ್ಮದ ದಳ್ಳ್ಳುರಿಗೆ ಬಲಿಯಾಗುತ್ತಿವೆ. ಇಂತಹ ದಾರುಣ ದೃಶ್ಯಗಳು ನಮ್ಮ ಕಣ್ಣೆದುರೇ ನಡೆಯುತ್ತಿರುವಾಗ ಏಕ ಧರ್ಮದ ಲಾಲಸೆ ಯಾಕೆ..?

ಸ್ವಾಮಿ ವಿವೇಕಾನಂದರು ಒಂದು ಕಡೆ ಹೇಳುತ್ತಾರೆ, ‘ಜಗತ್ತಿನ ಪರಮೊಚ್ಚ ಧರ್ಮವೆಂದರೆ ನಮ್ಮ ಮೂಲ ಸ್ವರೂಪದಲ್ಲಿ, ಅಂತಃ ಸತ್ವದಲ್ಲಿ ನಂಬಿಕೆ ಇಡುವುದು’ ಅಂತ. ಪ್ರತಿಯೊಂದು ಧರ್ಮದ ಮೊಲ ಸ್ವರೂಪ ಏನು.. ಎಲ್ಲರನ್ನೂ ಸಮಾನತೆಯಿಂದ ಕಾಣುವುದು. ಎಲ್ಲರೂ ಒಂದೇ.. ಪ್ರತಿಯೊಬ್ಬರಿಗೂ ಇಲ್ಲಿ ಬದುಕುವ ಅವಕಾಶವಿದೆ ಅನ್ನೋದು. ಅಂತಃ ಸತ್ವದಲ್ಲಿ ನಂಬಿಕೆ ಇಡುವುದು ನಿಜಕ್ಕೂ ಶ್ರೇಷ್ಠವಾದ ಧರ್ಮ. ನಮ್ಮ ನಂಬಿಕೆಗಳು, ಆಚಾರ-ವಿಚಾರಗಳು ನಮಗಷ್ಟೇ ಇರಲಿ. ಅದನ್ನ ಯಾರ ಮೇಲಿಯೂ ಬಲವಂತವಾಗಿ ಹೇರಬಾರದು. ನನಗೆ ಸರಿ ಅನಿಸಿದ್ದು, ಇನ್ನೊಬ್ಬರಿಗೆ ತಪ್ಪಾಗಿ ಕಾಣಬಹುದು. ಅಥವಾ ಅವರಿಗೆ ಅದು ಹಿಡಿಸದೇ ಹೋಗಬಹುದು. ಹಾಗಂತ ಅವರನ್ನ ದ್ವೇಷಿಸುವುದಲ್ಲ. ಪ್ರತಿಯೊಬ್ಬರ ನಂಬಿಕೆಗಳನ್ನ ಗೌರವಿಸುತ್ತಾ ಸಾಮರಸ್ಯದಿಂದ ಬದುಕಿದಾಗ ಮಾತ್ರ ನೆಮ್ಮದಿ ಅನ್ನುವುದು ನಮ್ಮನ್ನು ಅರಸುತ್ತದೆ, ಆವರಸುತ್ತದೆ. ಅದೆಲ್ಲವನ್ನ ಬಿಟ್ಟು ನಾನು ಹೇಳುವುದೇ ಸರಿ ಎನ್ನುವ ಮೊಂಡು ವಾದವಾಗುತ್ತದೆ. ಎಂದಿಗೂ ನಾವು ಆಶಾಡಭೂತಿಗಳಾಗಬಾರದು.
ಪ್ರಜಾಪ್ರಭುತ್ವ ಹೊಂದಿರುವ ಜಗತ್ತಿನ ಅತೀ ದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳು, ಇತರೆ ಧರ್ಮಗಳನ್ನ ತನ್ನ ಜೊತೆಗೆ ಕರೆದುಕೊಂಡು ಹೋಗಬೇಕಾದ ತುತರ್ು ಇಂದಿನದು. ಇದರ ಜೊತೆಗೆ ನಾವು ಬಹು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಪ್ರತಿಯೊಂದು ಧರ್ಮಗಳಲ್ಲಿ ಕಂದಾಚಾರಗಳು, ಅನಿಷ್ಟ ಪದ್ಧತಿಗಳು ಇಂದಿಗೂ ಜೀವಂತವಾಗಿವೆ. ಅವುಗಳನ್ನ ಹೊಡೆದು ಹಾಕಬೇಕು. ಒಂದು ಇನ್ನೊಂದರತ್ತ ಬೊಟ್ಟು ಮಾಡಿ ತೋರಿಸುವುದನ್ನ ಬಿಡಬೇಕು. ‘ಜಾತಿವಿಡುವುದು ಸೂತಕವನರಸುವೆ, ಜ್ಯೋತಿವಿಡಿದು ಕತ್ತಲೆಯನರಸುವೆ! ಇದೇಕೊ ಮರಳುಮಾನವ ಜಾತಿಯಲ್ಲಿ ಅಧಿಕನೆಂಬೆ! ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನು ಭಕ್ತನೆ ಶಿಖಾಮಣಿ’ ಎಂದುದು ವಚನ. ‘ನಮ್ಮ ಕೂಡಲಸಂಗನ ಶರಣರಪಾದಪುರಷವ ನಂಬು, ಕೆಡಬೇಡ ಮಾನವ’ ಎಂದು 12ನೇ ಶತಮಾನದಲ್ಲಿಯೇ ಬಸವಣ್ಣ, ಜಗತ್ತಿಗೆ ಸಾರಿ ಹೇಳಿದ. ಆದರೆ, ಇಂದಿಗೂ ಅದು ನಮಗೆ ಅರ್ಥವಾಗದಿರುವುದು ನಮ್ಮ ದುರಂತವೇ ಸರಿ. ಇದರ ಸಾರವನ್ನ ತಿಳಿದುಕೊಳ್ಳುವ ಜರೂರತ್ ತುಂಬಾ ಇದೆ.
ಧರ್ಮಗಳ ಮೂಲ ಹುಡುಕುತ್ತಾ ಹೋದಂತೆ ನಮಗೆ ತಿಳಿಯುವುದು, ಆರ್ಯ ಹಾಗೂ ದ್ರಾವಿಡರ ಸಮಾಗಮದಿಂದ ಜನ್ಮ ತಾಳಿರುವುದು ಹಿಂದೂ ಧರ್ಮ. ಈ ಧಾಮರ್ಿಕ ಪರಂಪರೆಯಲ್ಲಿ ಹುಟ್ಟಿಕೊಂಡ ಅನೇಕ ಆಚಾರ-ವಿಚಾರಗಳನ್ನ ಪ್ರಶ್ನಿಸುತ್ತಾ ಹೋದಂತೆ, ಅನೇಕ ಹೊಸ ಧರ್ಮಗಳ ಜನ್ಮಕ್ಕೆ ಕಾರಣವಾಯಿತು. ಮುಂದೆ ಅವುಗಳು ತಮ್ಮದೆಯಾದ ಸಂದೇಶವನ್ನ ಭಾರತೀಯ ಸಮಾಜಕ್ಕೆ ನೀಡಿದವು. ನಂತರದ ಕಾಲಘಟದಲ್ಲಿ ಮತ್ತೆ ಅವುಗಳ ನಡುವೆ ನಡೆದ ತಿಕ್ಕಾಟದಿಂದಾಗಿ ದೇಶದ ತುಂಬಾ ಹರಿದು ಹಂಚಿಹೋದವು. ಹೀಗಾಗಿ ಸಮಾಜವಾದಿ ಹಾಗೂ ರಾಜಕೀಯ ತಜ್ಞ ಕಾರ್ಲ್ ಮಾರ್ಕ್ಸ್  ಹೇಳುತ್ತಾನೆ, ‘ಧರ್ಮವೆಂಬುವುದು ಜನತೆಯನ್ನ ಮರಳು ಮಾಡುವ ಅಫೀಮು’.
ಹಿಂದೂ ಧರ್ಮದಿಂದ ಹೊರ ಬಂದು ಜೈನ್ ಹಾಗೂ ಬೌದ್ಧ ಧರ್ಮವಾಗಿ ಗುರುತಿಸಿಕೊಂಡಿರುವ ಇವುಗಳ ಮೂಲವನ್ನ ಹುಡುಕಿದಾಗ, ಇವುಗಳ ಸಂಸ್ಥಾಪಕರು ಅಥವಾ ಮೂಲಪುರಷರೆಂದು ಕರೆಸಿಕೊಳ್ಳುವವರು ಕ್ಷತ್ರಿಯ ಕುಲದಲ್ಲಿ ಹುಟ್ಟಿದವರು. ಇನ್ನು ಪಾರ್ಸಿ ಧರ್ಮ ಒಂದು ಕಾಲದಲ್ಲಿ ಜಗತ್ತಿನ ಅತಿ ಮಹತ್ವದ ಧರ್ಮಗಳಲ್ಲಿ ಒಂದಾಗಿತ್ತು. ಈ ಧರ್ಮ, ಜೋರಾಷ್ಟ್ರ ಹೆಸರಿನಿಂದ ಚಲಾವಣೆಯಲ್ಲಿತ್ತು. ಇದು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದಾಗ, ಈಜಿಪ್ಟ್ ಸಾಮ್ರಾಜ್ಯದ ದೂರೆ ಆಶದೀರ್, ಇದರ ಪುನರುಜ್ಜೀವನಕ್ಕಾಗಿ ಸಾಕಷ್ಟು ಪ್ರಯತ್ನಿಸಿದ. ಮುಂದೆ ಇದು ಕ್ರೈಸ್ತಧರ್ಮ ಹುಟ್ಟಿದ ನಂತರ ಸುಮಾರು 150 ವರ್ಷಗಳ ಕಾಲ ಬದುಕಿತ್ತು. ಕ್ರಿ.ಶ 7ನೇ ಶತಮಾನದಲ್ಲಿ ಮಹಮ್ಮದೀಯರು ನಾಶಮಾಡುವವರೆಗೂ ಇತ್ತು. ಈಜಿಪ್ಟ್ನಿಂದ 200 ವರ್ಷಗಳ ಹಿಂದೆ ಭಾರತಕ್ಕೆ ಕಾಲಿಟ್ಟ ಪಾಸರ್ಿ ಇಂದಿಗೂ ಜೀವಂತವಾಗಿದೆ. ಇದೆಲ್ಲವನ್ನ ಇಲ್ಲಿ ನೆನಪಿಸಿಕೊಳ್ಳಲು ಕಾರಣ, ಏಕ ಧರ್ಮದ ಹೇರಿಕೆ ಯಾವಾಗ ನಡೆಯುತ್ತದೆಯೋ ಆಗ ಅದು ಇನ್ನೊಂದು ಧರ್ಮದ ಹುಟ್ಟಿಗೆ ಕಾರಣವಾಗುತ್ತೆ ಮತ್ತು ರಕ್ತಪಾತಕ್ಕೆ ನಾಂದಿ ಹಾಡುತ್ತೆ. ಇತರೆ ಧರ್ಮಗಳ ಮೂಲ ಯಾವುದೇ ಆಗಿರಲಿ, ಭಾರತದ ನೆಲದಲ್ಲಿ ಅವುಗಳಿಗೆ ಶಾಶ್ವತ ಸ್ಥಾನವಿದೆ. ಇದರಿಂದಾಗಿ ಭಾರತ ವಿಶ್ವದಲ್ಲಿ ಜಾತ್ಯಾತೀತ ರಾಷ್ಟ್ರವೆಂದು ಗುರುತಿಸಿಕೊಳ್ಳುತ್ತಿರುವುದು. ಭಾರತ ಅನ್ನುವುದು ಹಲವು ಧರ್ಮ, ಮತ, ಪಂಥಗಳ ಒಂದು ಒಕ್ಕೂಟ. ಇಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ಬದುಕುವ ಹಕ್ಕಿದೆ. ಅವರ ಧರ್ಮಗಳ ಸಂಸ್ಕೃತಿಯಂತೆ ಜೀವಿಸುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನೆ ಮಾಡುವಂತ್ತಿಲ್ಲ. ಯಾಕಂದ್ರೆ, ಇಡೀ ಜಗತ್ತಿಗೆ ಭಾರತ ಹೇಳಿಕೊಟ್ಟಿದ್ದು, ‘ವಸುದೈವ ಕುಟುಂಬಕಂ’. ಇದನ್ನ ಅರಿತಾವರಾರೂ ಎಂದಿಗೂ ಏಕ ಧರ್ಮದ ಸಿದ್ಧಾಂತವನ್ನ ಒಪ್ಪುವುದಿಲ್ಲ.
 

‍ಲೇಖಕರು G

August 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: