ಸಂಧ್ಯಾರಾಣಿ ಕಾಲಂ : ಮಹಾಪ್ರಸ್ಥಾನಕ್ಕೆ ಹೋಗುತ್ತಿರುವವರು ಹಿಂದಿರುಗಿ ನೋಡುವಂತಿಲ್ಲ..


ಆಗ ನಾನಿನ್ನೂ ಪುಟ್ಟ ಹುಡುಗಿ. ಮನೆಯಲ್ಲಿ ಅಮ್ಮ ಭೀಮನ ಅಮಾವಾಸ್ಯೆ ಪೂಜೆ ಮಾಡಿದ್ದರು. ಪೂಜೆ ಮಾಡಿ ಭೀಮನಂತಹ ಗಂಡ ಸಿಗಲಿ ಎಂದು ಕೇಳಿಕೋ ಎಂದು ಅಜ್ಜಿ ನಗುನಗುತ್ತಾ ಹೇಳಿದ್ದರು. ಆಣೆಯಿಟ್ಟು ಹೇಳುತ್ತೇನೆ, ಭೀಮ ಆಗ ನನ್ನ ಕಣ್ಣಿಗೆ ರೊಮ್ಯಾಂಟಿಕ್ ಆಗಿ ಕಂಡಿರಲೇ ಇಲ್ಲ.  ಹದಿಹರೆಯದ ಆ ವಯಸ್ಸಿನಲ್ಲಿ ಅರ್ಜುನನ ಬಿಲ್ವಿದ್ಯೆಗೆ, ನೆಟ್ಟ ನೋಟಕ್ಕೆ, ಸಾಧನೆಗೆ ಮನಸ್ಸು ’ವಾಹ್ ವಾಹ್’ ಅನ್ನುತ್ತಿರುತ್ತದೆ, ಕೃಷ್ಣನ ಮುರಳಿಯ ಮೋಹಕತೆ, ಅವನ ಸುತ್ತಲಿನ ಮೋಹದ ಕಥೆಗಳು ಅವನ ಬಗ್ಗೆ ಆರಾಧನೆ ಹುಟ್ಟಿಸಿರುತ್ತದೆ. ಅವರ ನಡುವೆ ಭೀಮ ಒಡ್ಡನಂತೆ, ಒರಟನಂತೆ ಕಾಣುತ್ತಿರುತ್ತಾನೆ. ಹದಿವಯಸ್ಸಿಗೆ ಭೀಮ ಹಬ್ಬ ಮಾಡಿ, ಕೈಗೆ ಕಟ್ಟಿಕೊಳ್ಳುವ ಅರಸಿನದ ದಾರ ಮಾತ್ರ. ವಯಸ್ಸು ಮಾಗಿದಂತೆ ಅರ್ಜುನನಿಗೆ ಪ್ರೀತಿಸಲು ಸಾಧ್ಯವಾಗುವುದು ತನ್ನನ್ನು ಮಾತ್ರ ಎನ್ನುವುದರ ಅರಿವಾಗುತ್ತದೆ. ಕೃಷ್ಣನ ನವಿಲಗರಿ ಗಾಳಿ ಬೀಸಿದತ್ತೆಲ್ಲಾ ತಿರುಗುತ್ತದೆ ಎಂದು ಅರ್ಥವಾಗಿರುತ್ತದೆ. ಹದಿವಯಸ್ಸು ದಾಟಿದ ಹುಡುಗಿ ಹೆಣ್ಣಾದಾಗ, ಆಗ ಅವಳಿಗೆ ಭೀಮನ ಪ್ರೀತಿ ಅರ್ಥವಾಗುತ್ತದೆ. ಅವನ ಪ್ರೀತಿಯಲ್ಲಿ ನಯ ನಾಜೂಕಿಲ್ಲದಿದ್ದರೂ ಎಳೆಕಂದನ ಪ್ರಾಮಾಣಿಕತೆ ಇರುತ್ತದೆ, ಹಾಡು ಕಟ್ಟಿ ಹಾಡಲು ಬರದವನ ಎದೆಯಲ್ಲಿ ಪ್ರೀತಿ ಹಾಡಾಗಿರುತ್ತದೆ. ಅಂತಹ ಭೀಮನನ್ನು ನಾನು ಕಂಡು ಬಂದೆ.
’ ಮಹಾಪ್ರಸ್ಥಾನಕ್ಕೆ ಹೋಗುತ್ತಿರುವವರು ಹಿಂದಿರುಗಿ ನೋಡುವಂತಿಲ್ಲ!’ ರಂಗದ ಮೇಲೆ, ಸ್ವರ್ಗದ ಹಾದಿಯಲ್ಲಿ ನಡೆಯುತ್ತಿದ್ದ ಧರ್ಮರಾಯ ಘೋಷಿಸುತ್ತಿದ್ದ. ದಾರಿಯಲ್ಲಿ ಕೃಷ್ಣೆ ಬಸವಳಿದು ಬಿದ್ದಿದ್ದಳು. ’ಅಣ್ಣಾ, ಅವಳು ದ್ರೌಪದಿ, ನಮ್ಮ ದ್ರೌಪದಿ…’ ಭೀಮ ಅಗಾಧವಾದ ಸಂಕಟದಲ್ಲಿ ವಿಲಪಿಸುತ್ತಿದ್ದ. ಧರ್ಮರಾಯ ಲೋಕದ ಯಾವ ರಾಗ ಭಾವಗಳೂ ತನ್ನನ್ನು ತಾಕುವುದಿಲ್ಲವೇನೋ ಎನ್ನುವಂತೆ ನೇರ ನೋಟ ನೋಡುತ್ತಿದ್ದ. ನಿಂತವನು ಭೀಮ ಮಾತ್ರ.
ಅರ್ಜುನನ ಬಗ್ಗೆ ಹೇಳುವುದೇನು? ಮರದ ಮೇಲಿರುವ ಜೀವಂತ ಹಕ್ಕಿಯ ಕಣ್ಣಿನಲ್ಲಿ ತನ್ನ ಬಾಣದ ಗುರಿ ಕಂಡವನು ಅವನು. ಅವನ ದಿಟ್ಟಿಗೆ ಕಾಡು ಕಾಣುವುದಿಲ್ಲ, ಮರದ ಹಸಿರು ಕಾಣುವುದಿಲ್ಲ, ಪಟಪಟ ಹೊಡೆದುಕೊಳ್ಳುವ ಹಕ್ಕಿಯ ಹೃದಯ ಕಾಣುವುದಿಲ್ಲ, ಕಾಣುವುದು ತನ್ನ ಬಾಣದ ತುದಿ ಮತ್ತು ಹಕ್ಕಿಯ ಕಣ್ಣು ಮಾತ್ರವೇ. ನಕುಲ, ಸಹದೇವರದು ಪ್ರಶ್ನಿಸಿ ಗೊತ್ತಿಲ್ಲದ ಬದುಕು. ನಾಲ್ಕು ಜನ ಅಣ್ಣತಮ್ಮಂದಿರು, ’ನಾತಿ ಚರಾಮಿ’ ಎಂದು ಅಗ್ನಿಕನ್ಯೆಗೆ ಅಗ್ನಿಸಾಕ್ಷಿಯಾಗಿ ಹೇಳಿದವರು, ಅವಳನ್ನು ಬಿಟ್ಟು ಹೊರಟೇ ಬಿಡುತ್ತಾರೆ. ಎಲ್ಲರೂ ದಡ್ಡ ಎಂದು ಕರೆಯುವ, ನಗರದ ನಯ ನಾಜೂಕಿನ ನಡೆ ಗೊತ್ತಿಲ್ಲದ ಭೀಮ ಮಾತ್ರ ಮಹಾ ಪ್ರಸ್ಥಾನದ ಹಾದಿ ಬಿಟ್ಟು, ಬದುಕಿನೆಡೆಗೆ ನಡೆದು ಬರುವಂತೆ, ಪಾಂಚಾಲಿಯ ಬಳಿ ಬರುತ್ತಾನೆ, ಅವಳನ್ನು ತಬ್ಬಿ ಹಿಡಿಯುತ್ತಾನೆ. ಜೀವ ಹೋಗುವ ಘಳಿಗೆಯಲ್ಲಿ ಅವಳ ಜೀವವನ್ನು ತನ್ನದಾಗಿಸಿಕೊಳ್ಳುತ್ತಾನೆ.
ಸಂಸ ಬಯಲು ರಂಗಮಂದಿರದಲ್ಲಿ ಮೈಸೂರಿನ ರಂಗಾಯಣ ತಂಡದ ವಿದ್ಯಾರ್ಥಿಗಳಿಂದ ’ಭೀಮಾಯಣ’ ನಾಟಕ ನಡೆಯುತ್ತಿತ್ತು. ಅದು ಭೀಮಾಯಣವೂ ಹೌದು, ಭೀಮ ಯಾನವೂ ಹೌದು. ಇದು ಮಾಮೂಲಿನಂತೆ ಕುರುಕುಲ ಪ್ರತಾಪದ ಕಥೆಯಲ್ಲ ಎನ್ನುವ ಸುಳಿವನ್ನು ಪ್ರಾರಂಭದಲ್ಲಿಯೇ ಸೂತ್ರಧಾರ ಮತ್ತು ನಟಿ ಕೊಡುತ್ತಾರೆ. ಇದು ಅರಮನೆಯಲ್ಲಿ ಬದುಕಿದವರ ಕಥೆಯ ಜೊತೆ ಜೊತೆಯಲ್ಲಿಯೇ ಸಮಾಜದ ಅಂಚಿಗೆ ತಳ್ಳಲ್ಪಟ್ಟವರ ಕಥೆಯೂ ಹೌದು. ಇತಿಹಾಸವಾಗದವರ ಕಥೆಯೂ ಹೌದು. ಇದು ಮೆಟ್ಟಿಲು ಹತ್ತಿದವರ ಕಥೆ ಮಾತ್ರ ಅಲ್ಲ, ಮೆಟ್ಟಿಲಾದವರ ಕಥೆಯೂ ಹೌದು. ಭೀಮನ ಈ ಯಾನದ ಕಥೆಯಲ್ಲಿ ಏಕಲವ್ಯನಿದ್ದ, ಹಿಡಿಂಬಿ ಇದ್ದಳು, ಅರಗಿನ ಮನೆಯಲ್ಲಿ ಸತ್ತ ಆ ತಾಯಿ ಮತ್ತು ಮಕ್ಕಳಿದ್ದರು, ಘಟೋತ್ಕಚನಿದ್ದ, ಮತ್ತು ಆ ಕಥೆಗಳಲ್ಲಿ ಇನ್ನು ಎಷ್ಟೋ ಕಥೆಗಳಿದ್ದವು.
ಅದು ಟಿ ವಾಸುದೇವನ್ ನಾಯರ್ ಬರೆದ ಕಾದಂಬರಿಯ ರಂಗ ರೂಪಾಂತರ. ಡಾ ಪಾರ್ವತಿ ಐತಾಳ್ ಅವರು ಕನ್ನಡಕ್ಕೆ ತಂದ ಕೃತಿಯನ್ನು ರಂಗರೂಪಕ್ಕೆ ಅನುವು ಮಾಡಿಕೊಟ್ಟವರು ಶ್ಯಾಮ್ ಕುಟ್ಟಿ ಪಟ್ಟಣ್ ಕರ್, ನಿರ್ದೇಶನ ಡಾ ಶ್ರೀಪಾದ್ ಭಟ್. ಮಹಾಭಾರತವನ್ನು ಅವರೆಲ್ಲಾ ನಮ್ಮ ಭಾರತವನ್ನಾಗಿ ಕಟ್ಟಿಕೊಟ್ಟಿದ್ದರು. ಅದು ಕೇವಲ ’ಮಹಾ’ ಭಾರತದ ಕಥೆ ಆಗಿರಲಿಲ್ಲ, ಭಾರತದ ಎಲ್ಲರ ಕಥೆಯೂ ಆಗಿತ್ತು. ತನ್ನ ಅಣ್ಣ-ತಮ್ಮಂದಿರೆಲ್ಲಾ ಸ್ವರ್ಗದ ಕಡೆ ಮಹಾ ಪ್ರಸ್ಥಾನ ಮಾಡುತ್ತಿರುವಾಗ ಭೀಮ ಬದುಕಿನ ಕಡೆಗೆ ಮಾಡುವ ಪ್ರಸ್ಥಾನದ ಕಥೆ ಅದು. ತೋಳಿನಲ್ಲಿ ದ್ರೌಪದಿಯನ್ನು ಹಿಡಿದಿಟ್ಟುಕೊಂಡು ಆಸರೆ ಕೊಟ್ಟ ಭೀಮನ ಎದುರಿನಲ್ಲಿ ಅವನ ಬದುಕಿನ ಪುಟಗಳು ಮಗುಚಿಕೊಳ್ಳುತ್ತಾ ಹೋಗುತ್ತವೆ.
ವಿಷದ ಮದ್ಯ ಕುಡಿಸಿ ಭೀಮನನ್ನು ನದಿಗೆ ನೂಕುವ ಕೌರವರು, ನದಿಯಲ್ಲಿ ಕೊಚ್ಚುತ್ತಾ ಕಾಡುಜನರ ವಸತಿಯಿದ್ದ ದಂಡೆಗೆ ತಲುಪುವ ಭೀಮ. ಅವನನ್ನು ಹೊತ್ತು ತಂದವರು, ಕಾಡಿನ ಹಿರಿಯನ ಮುಂದೆ ಅವನನ್ನು ಮಲಗಿಸುತ್ತಾರೆ. ಭೀಮನ ಬಲಿಷ್ಠ ತೋಳು-ತೊಡೆ ಮುಟ್ಟಿದ ಕಾಡು ಹಿರಿಯನಲ್ಲಿ ಯಾವುದೋ ನೆನಪಿನ ತೆರೆಯಾಟ. ಅವನಿಗೆ ಕಾಡಿನ ಜನರ ವಿದ್ಯೆಯೆಲ್ಲವನ್ನೂ ಕಲಿಸಿ ಊರಿಗೆ ಕಳುಹಿಸಿ ಕೊಡುತ್ತಾನೆ. ಅರಗಿನ ಮನೆಯಲ್ಲಿ ಸುಡುವುದಕ್ಕೆಂದೇ ಕಳುಹಿಸಿದ ಬಲಿಪಶುಗಳು ಪಾಂಡವರು, ಆದರೆ ಅವರನ್ನು ವಿಧುರನ ಎಚ್ಚರಿಕೆ ಕಾಯುತ್ತಿರುತ್ತದೆ. ಜೊತೆ ಜೊತೆಯಲ್ಲಿ ಕುಂತಿಯ ತಣ್ಣನೆಯ ಕ್ರೌರ್ಯ ತನ್ನ ಮಕ್ಕಳನ್ನು ಕಾಪಾಡಿಕೊಳ್ಳುವುದರ ಜೊತೆಯಲ್ಲಿಯೇ ಇದ್ಯಾವುದಕ್ಕೂ ಸಂಬಂಧವಿರದ ತಾಯಿ ಮಕ್ಕಳು ಆ ಬೆಂಕಿಯಲ್ಲಿ ಸಿಕ್ಕು ಸಾಯುವಂತೆ ಮಾಡಿ, ತನ್ನ ಮಕ್ಕಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ತಯಾರಾಗಿರುತ್ತದೆ. ಆ ಅರಗಿನ ಮನೆಯಲ್ಲಿ ಅವರನ್ನು ರಂಜಿಸಲು ಬರುವ ತಾಯಿ ಮತ್ತು ಐದು ಮಕ್ಕಳ ಕಥೆಯನ್ನು ಕಟ್ಟಿಕೊಡುವ ರೀತಿಯೇ ಅನನ್ಯವಾಗಿದೆ.

ಆ ತಾಯಿ ಮಕ್ಕಳು ಕಥೆ ಹೇಳುತ್ತೇವೆ, ಹಾಡು ಹಾಡುತ್ತೇವೆ ಎಂದು ಬಂದಾಗ ಕುಂತಿ ಯಾವ ಕಥೆ ಎಂದು ವಿಚಾರಿಸಿಕೊಳ್ಳುತ್ತಾಳೆ. ಅವರು ಹೇಳುವುದು ಏಕಲವ್ಯನ ಕಥೆ. ಇತಿಹಾಸ ಅದನ್ನು ಬರೆದವರ ದನಿ ಎನ್ನುವ ಮಾತು ಇಲ್ಲಿ ಎಷ್ಟು ಸತ್ಯ… ಅರಮನೆಯ ಇತಿಹಾಸದಲ್ಲಿ ದ್ರೋಣ ಮಹಾನ್ ಗುರು, ರಾಜ ಕುವರರು ಅಪ್ರತಿಮ ಸಾಹಸಿಗಳು. ಆದರೆ ಈ ಕಾಡು ಜನರ ಹಾಡಿನಲ್ಲಿ ದ್ರೋಣ ಒಬ್ಬ ಅಡ್ನಾಡಿ ಗುರು, ಅರ್ಜುನ ಅವನ ಬಾಲಬಡುಕ ಶಿಷ್ಯ. ವಿದ್ಯೆ ಕಲಿಸದ ಗುರುವನ್ನು ಮಹಾಗುರುವಾಗಿಸಿದ ಏಕಲವ್ಯ ಇಲ್ಲಿ ಇವರ ಕಥೆಯ ನಾಯಕ. ಅವರು ಕಥೆ ಹೇಳಿ ಮುಗಿಸುತ್ತಿದ್ದಂತೆ ಕುಂತಿ ಅವರಿಗೆ ಮದ್ಯ ತರಿಸಿಕೊಡುತ್ತಾಳೆ. ಹೊರಟವರನ್ನು ತಡೆದು ನಿಲ್ಲಿಸಿ ಅಲ್ಲಿಯೇ ಮಲಗಿಕೊಳ್ಳಲು ಹೇಳುತ್ತಾಳೆ, ಭೀಮನ ಕೈಗೆ ಉರಿಯುವ ಕೊಳ್ಳಿ ಕೊಟ್ಟು ಅರಮನೆಗೆ ಬೆಂಕಿ ಕೊಟ್ಟು ಸುರಂಗದ ಮೂಲಕ ಹೊರಗೆ ಬರಲು ಆಜ್ಞಾಪಿಸುತ್ತಾಳೆ. ಈ ನಿರಪರಾಧಿಗಳನ್ನು ಹೇಗೆ ಕೊಲ್ಲುವುದು ಎನ್ನುವ ಅಳಲು ಕಾಡುವುದು ಭೀಮನನ್ನು ಮಾತ್ರ. ಉಳಿದವರ ಕಣ್ಣಿನಲ್ಲಿ ಅವರು ಕಾಡುಜನರು, ಮನುಷ್ಯ ಜಾತಿಗೆ ಸೇರಿದವರೇ ಅಲ್ಲ. ಭೀಮ ಅರಮನೆಗೆ ಬೆಂಕಿ ಕೊಟ್ಟು ತನ್ನವರ ಪಯಣದಲ್ಲಿ ಹೆಜ್ಜೆ ಹಾಕಲು ಹೊರಡುತ್ತಿದ್ದಂತೆ ಭೀಮನ ಎದೆಯ ಒಂದು ಭಾಗ ಸಹ ಸುಟ್ಟು ಭಸ್ಮವಾಗಿರುತ್ತದೆ. ಬೆಂಕಿಯಲ್ಲಿ ಬೆಂದ ಅವರ ಆಕ್ರಂದನ ಆಮೇಲೆ ಅವನ ಎದೆಯನ್ನು ನಿರಂತರವಾಗಿ ಮೀಟಿ ಘಾಸಿಗೊಳಿಸುತ್ತಲೇ ಇರುತ್ತದೆ. ಇಲ್ಲಿ ಕುಂತಿ ಕೊಲ್ಲಿಸುವುದು ಆ ಆರು ಜನರನ್ನು ಮಾತ್ರವಲ್ಲ, ಏಕಲವ್ಯನ ಕಥೆಯನ್ನೂ ಸಹ.
ಅಲ್ಲಿಂದ ಕಾಡಿಗೆ ಬಂದ ಅವನು ಭೇಟಿಯಾಗುವುದು ಹಿಡಿಂಬಿಯನ್ನು. ಎಂಥಹ ಜಿಂಕೆಯಂತಹ ಹುಡುಗಿ ಹಿಡಿಂಬಿ. ಕಾಡು ಭೀಮನ ಒಳಗನ್ನು ತುಂಬಿಕೊಳ್ಳುವಂತೆಯೇ ಕಾಡಿನ ಹುಡುಗಿ ಭೀಮನ ಒಳಗಿನ ಹಾಡಾಗುತ್ತಾಳೆ. ಭೀಮನಿಗೆ ಸಮಸಮವಾಗಿ ಪ್ರೀತಿಸಬಲ್ಲವಳು, ಪ್ರೇಮಿಸಬಲ್ಲವಳು, ಅವಳನ್ನು ಎರಡೂ ಕೈಚಾಚಿ ಎದೆಗೆ ಎಳೆದುಕೊಳ್ಳುತ್ತಾನೆ ಭೀಮ. ಅವಳು ಗರ್ಭವತಿ ಆಗುತ್ತಾಳೆ. ಕುಂತಿ ತನ್ನ ಮಕ್ಕಳನ್ನು ಏಕಚಕ್ರಪುರಕ್ಕೆ ಹೊರಡಿಸುತ್ತಾಳೆ. ’ಅಮ್ಮಾ ಹಿಡಿಂಬಾ?’ ಎಂದು ಭೀಮ ಬೇಡುತ್ತಾನೆ. ಏಕಚಕ್ರಪುರದಲ್ಲಿ ಬ್ರಾಹ್ಮಣರ ವೇಷ ಧರಿಸಿ ಬದುಕಬೇಕು ಅಲ್ಲಿ ಹಿಡಿಂಬೆಗೆ ತಾವಿಲ್ಲ ಎಂದು ಕುಂತಿ ಹೇಳುತ್ತಾಳೆ. ಕ್ಷತ್ರಿಯರಾದ ತಾವು ಬ್ರಾಹ್ಮಣರ ವೇಷ ಧರಿಸಿ ಇರಬಹುದಾದರೆ, ಹಿಡಿಂಬೆ ಯಾಕೆ ಇರಲಾಗುವುದಿಲ್ಲ ಎಂದು ಕೇಳುವಷ್ಟು ಜಾಣನಲ್ಲ ಭೀಮ.
ಕತೆ ಮುಂದುವರೆಯುತ್ತದೆ. ಪಂಚಪಾಂಡವರ ಶಕ್ತಿಯನ್ನು ಒಟ್ಟಾಗಿಸಿ ಕುಂತಿ ದ್ರೌಪದಿಯ ಸೆರಗಿನಲ್ಲಿ ಗಂಟು ಹಾಕುತ್ತಾಳೆ. ಆಕೆಯದೂ ಒಂದು ರೀತಿಯಲ್ಲಿ ಮಹಾಪ್ರಸ್ಥಾನವೇ. ಅವಳ ದಿಟ್ಟಿ ನೆಟ್ಟಿರುವುದು ಹಸ್ತಿನಾಪುರದ ಸಿಂಹಾಸನದ ಮೇಲೆ, ಆ ಹಾದಿಯಲ್ಲಿ ನಡೆಯುವಾಗ ಆಕೆ ಹಿಂದಿರುಗಿ ನೋಡುವುದಿರಲಿ, ಹಾದಿಯ ಅತ್ತಿತ್ತ ಸಹ ನೋಡಲಾರಳು. ಅ ಹಾದಿಯ ಆಚೀಚೆ ಆ ತಾಯಿ-ಐದು ಮಕ್ಕಳು, ಹಿಡಿಂಬೆ, ದ್ರೌಪದಿ ಯಾರೇ ಉರುಳಿ ಬಿದ್ದರೂ ಆಕೆ ’ಮಹಾ ಪ್ರಸ್ಥಾನದಲ್ಲಿ ಹಿಂದಿರುಗಿ ನೋಡುವುದಿಲ್ಲ’.

ಕುರುಕ್ಷೇತ್ರ ಯುದ್ಧ ಪ್ರಾರಂಭವಾಗುತ್ತದೆ. ತನ್ನನ್ನೆಂದೂ ತೋಳುಗಳಲ್ಲಿ ಎತ್ತಿಕೊಳ್ಳದ, ಎದೆಗೆ ಅಪ್ಪಿಕೊಳ್ಳದ ತಂದೆಯ ಸೈನ್ಯ ಸೇರಿ ನೆತ್ತರು ಚೆಲ್ಲಲು ಘಟೋತ್ಕಚ ಬರುತ್ತಾನೆ. ಯುದ್ಧದ ನಡುವೆ, ಕರ್ಣನಿಗೆ ಮಹಾಸೈನ್ಯಾಧಿಕಾರಿ ಪಟ್ಟಾಭಿಷೇಕವಾಗಿದೆ, ಇಟ್ಟ ಗುರಿ ತಪ್ಪದ ಅವನ ’ವೈಜಯಂತಿ’ ಅರ್ಜುನನ ಎದೆಗೆ ನಾಟುವುದರಲ್ಲಿ ಯಾರಿಗೂ ಸಂಶಯವೇ ಇರುವುದಿಲ್ಲ. ಆ ಘಳಿಗೆಯಲ್ಲಿ ಕೃಷ್ಣ ಘಟೋತ್ಕಚನನ್ನು ಅರ್ಜುನನಿಗೆ ಅಡ್ಡವಾಗಿ ನಿಲ್ಲಿಸುತ್ತಾನೆ. ಕೃಷ್ಣನ ಪ್ರಾಣಮಿತ್ರ ಅರ್ಜುನನ ಪ್ರಸ್ಥಾನದ ಹಾದಿಯಲ್ಲಿ ಪಾಪ ಘಟೋತ್ಕಚ ಇನ್ನೊಂದು ಮೆಟ್ಟಿಲಾಗುತ್ತಾನೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಭೀಮನನ್ನು ಕಂಡು ಕೃಷ್ಣ ಆಡುವುದು ಒಂದೇ ಮಾತು, ’ಇದು ಅಳುವ ಘಳಿಗೆಯಲ್ಲ, ಸಂಭ್ರಮಿಸುವ ಘಳಿಗೆ, ಅರ್ಜುನ ಬದುಕಿದ್ದಾನೆ, ನಮ್ಮ ಪಾಳಯದಲ್ಲಿ ವಿಜಯೋತ್ಸವ ನಡೆಯಲಿ’. ಹೌದು ಇಲ್ಲಿ ಕೃಷ್ಣ ಸಹ ಪ್ರಸ್ಥಾನದಲ್ಲಿ ಆಚೀಚೆ ತಿರುಗಿ ನೋಡುವುದಿಲ್ಲ. ಅವನ ಗುರಿಯೆಲ್ಲಾ ತನ್ನ ಮಿತ್ರನನ್ನು ಉಳಿಸುವುದು ಮಾತ್ರ. ತನ್ನ ಹೃದಯವನ್ನು ಕಿತ್ತು ತಂದೆಯ ಕೈಗಿಡುವ ಘಟೋತ್ಕಚ ಕೇಳುವುದು ಒಂದೇ ಪ್ರಶ್ನೆ, ’ಅಪ್ಪ,ಇಂದು ಕೌರವರ ಪಾಳಯಕ್ಕಿಂತ ಹೆಚ್ಚಾಗಿ ನಮ್ಮ ಪಾಳಯದಲ್ಲೇ ಯಾಕೆ ವಿಜಯೋತ್ಸವ ನಡೆಯುತ್ತಿದೆ?’. ಮಗನ ಹೃದಯವನ್ನು ಕೈಲಿ ಹಿಡಿದು ತತ್ತರಿಸುವ ಭೀಮ ಏನೂ ಉತ್ತರಿಸಿಯಾನು? ಪಾಪ ದಡ್ಡನಲ್ಲವೇ ಭೀಮ? ಭೀಮನ ಹೃದಯದ ಇನ್ನೊಂದು ಭಾಗ ಮುಕ್ಕಾಗುತ್ತದೆ.
ಯುದ್ಧ ಗೆದ್ದ ಮೇಲೆ, ನೂರು ಕೌರವರನ್ನೂ ಕೊಂದ ಭೀಮ ರಾಜನಾಗುವುದು ಸರಿಯೇನೋ ಎಂದು ಧರ್ಮರಾಯ ಅರೆಮನಸ್ಸಿನಿಂದ ಹೇಳುವಾಗಲೇ ಅಲ್ಲಿಗೆ ಬಂದ ಕುಂತಿ, ’ಈ ದಡ್ಡ ರಾಜನಾಗಬೇಕೆ?’ ಎಂದು ನಗುತ್ತಲೇ ಭೀಮನನ್ನು ಬದಿಗೆ ಸರಿಸಿಬಿಡುತ್ತಾಳೆ. ’ನೀನು ರಾಜನಾದರೆ, ಹಿಡಿಂಬಿ ಪಟ್ಟ ಮಹಿಷಿ, ನಾನು ದಾಸಿ’ ಎಂದು ನಿಟ್ಟುಸಿರಿಟ್ಟ ಪಾಂಚಾಲಿಯನ್ನು ಹೋಗು, ಪಟ್ಟಾಭಿಷೇಕಕ್ಕೆ ಹೋಗು ಎಂದು ಭೀಮ ಕಳುಹಿಸಿಕೊಡುತ್ತಾನೆ. ಭೀಮನಿಗೆ ಕೇಳುವುದು ಹೃದಯದ ಮಾತು ಮಾತ್ರ. ರಾಜಕಾರಣದ ನಡೆ, ಅಧಿಕಾರದ ಹಂಬಲ ಯಾವುದೂ ಅವನನ್ನು ಪ್ರಲೋಭಿಸುವುದಿಲ್ಲ.
ಕಡೆಯಲ್ಲಿ ವಿಧುರ ಮರಣಶಯ್ಯೆಯಲ್ಲಿರುತ್ತಾನೆ. ಅಲ್ಲಿಗೆ ಬಂದು, ನಮಸ್ಕರಿಸಿದ ಧರ್ಮರಾಯನಲ್ಲಿ ವಿಧುರನ ತೇಜಸ್ಸು ಲೀನವಾಗುತ್ತದೆ. ನೋಡುವ ಭೀಮ ತತ್ತರಿಸಿ ನಿಲ್ಲುತ್ತಾನೆ. ಧರ್ಮರಾಯ ವಿಧುರನ ಮಗ ಎಂದು ಆಗ ಅವನಿಗೆ ಅರ್ಥವಾಗುತ್ತದೆ. ’ಹಾಗಾದರೆ ನನ್ನ ತಂದೆ ಯಾರು? ಎನ್ನುವ ಅವನ ಪ್ರಶ್ನೆಗೆ ಕುಂತಿ ’ಅವನೇ ಆ ಕಾಡಿನ ಜನರ ನಾಯಕ’ ಎಂದು ಹೇಳುತ್ತಾಳೆ. ಭೀಮ ತತ್ತರಿಸಿ ಹೋಗುತ್ತಾನೆ. ಇದುವರೆವಿಗೂ ಸ್ವತಃ ತಾನೆ ತನ್ನವರ ಪ್ರಾಣವನ್ನು ಒಂದೊಂದಾಗಿ, ಒಂದೊಂದಾಗಿ ಬಲಿಕೊಟ್ಟೆ ಎನ್ನುವುದರ ಅರ್ಥ ಆಗ ಅವನಿಗಾಗುತ್ತದೆ. ಈ ಅರಿವು ಅವನ ವ್ಯಕ್ತಿತ್ವದಲ್ಲಿದ್ದ ಕುರುಡಾಗಿ ಒಪ್ಪಿಕೊಳ್ಳುವ ಗುಣವನ್ನು ಒರೆಸಿಹಾಕುತ್ತದೆ. ಹಾಗಾಗಿಯೇ ಧರ್ಮರಾಜನ ಮಹಾಪ್ರಸ್ಥಾನದ ಹಾದಿಯಿಂದ ಕಣ್ಣು ಹೊರಳಿಸಿ ದಾರಿಯ ಪಕ್ಕ ಬಿದ್ದಿದ್ದ ದ್ರೌಪದಿಯ ಕರೆ ಅವನನ್ನು ತಲುಪುತ್ತದೆ. ಬದುಕಿನುದ್ದಕ್ಕೂ ತನ್ನ ತಾಯಿ-ಸಹೋದರ ಹೇಳಿದಂತೆ ನಡೆಯುವ ಭೀಮ ಮೊದಲ ಬಾರಿಗೆ ಹಾಗೆ ಕುರುಡಾಗಿ ನಡೆಯಲು ನಿರಾಕರಿಸುತ್ತಾನೆ. ಹಾದಿ ಬದಿ ಬಿದ್ದವಳನ್ನು ಎತ್ತಿಕೊಂಡ ತೋಳುಗಳಲ್ಲಿ ಅವನ ಜೀವನ ಪ್ರಸ್ಥಾನವೂ ಇರುತ್ತದೆ.
ಮಹಾಪ್ರಸ್ಥಾನಕ್ಕೆ ದಿಟ್ಟಿ ನೆಟ್ಟು ನಡೆಯುವವರನ್ನು ಗೌರವಿಸಬಹುದು, ಆದರೆ ನಾವು ಪ್ರೀತಿಸುವುದು ಬದುಕಿನೆಡೆಗೆ ಪ್ರಸ್ಥಾನ ಮಾಡುವವರನ್ನು ಮಾತ್ರ. ಅದೊಂದು ರೀತಿಯಲ್ಲಿ ಹದಿಹರೆಯದಲ್ಲಿ ಅರ್ಜುನನೆಡೆಗೆ, ಕೃಷ್ಣನೆಡೆಗೆ ಬೆರಗಿನಿಂದ ನೋಡುವ ಕಣ್ಣುಗಳು ವಯಸ್ಸು ಮಾಗಿದಂತೆ ಗಂಡಿನಲ್ಲಿನ ಭೀಮನ ಗುಣಕ್ಕೆ ಮನಸೋಲುವಂತೆ. ಭೀಮನೆಂದರೆ ಗೆಳೆಯ, ಭೀಮನೆಂದರೆ ಪ್ರೇಮಿ, ಭೀಮನೆಂದರೆ ಸಂಗಾತಿ, ಭೀಮನೆಂದರೆ ನಂಬಿಕೆ, ಭೀಮನೆಂದರೆ ಬದುಕು.
ಈ ಕಥೆಯನ್ನು ಶ್ರೀಪಾದ್ ಭಟ್ ಅವರು ಕಟ್ಟಿಕೊಟ್ಟಿರುವ ರೀತಿಯೇ ಅನನ್ಯ. ರಂಗಸಜ್ಜಿಕೆ, ಬೆಳಕು, ಸಂಗೀತ ಎಲ್ಲವೂ ಸುಂದರ. ರಂಗವನ್ನು ಅವರು ಬಳಸಿಕೊಂಡಿರುವ ರೀತಿ ಮತ್ತು ರಂಗಸಜ್ಜಿಕೆಯ ಪ್ರಾಪ್ ಗಳನ್ನು ಬಳಸಿಕೊಳ್ಳುವುದರಲ್ಲಿನ ಕುಶಲತೆಗೆ ನಾನು ಬೆರಗಾಗಿದ್ದೆ. ರಂಗಾಯಣದ ಮೊದಲನೆಯ ವರ್ಷದ ವಿದ್ಯಾರ್ಥಿಗಳ ಕೈಲಿ ಅವರು ನಾಟಕ ಮಾಡಿಸಿದ್ದರು. ಇಡೀ ರಂಗಸ್ಥಳದ ತುಂಬಾ ನಟ ನಟಿಯರು ಓಡಾಡುತ್ತಿದ್ದ, ರಂಗವನ್ನು ಬಳಸಿಕೊಳ್ಳುತ್ತಿದ್ದ ರೀತಿ, ಮಿಂಚಿನಂತಹ ಚಲನ ವಲನ….. ಇಡೀ ನಾಟಕ ನಮ್ಮ ಕಣ್ಣ ಮುಂದೆ ಒಂದು ಕಾವ್ಯದಂತೆ ಹರಿಯುತ್ತಿತ್ತು. ಭೀಮನನ್ನು ನದಿಗೆ ನೂಕುವ ಸಂದರ್ಭದಲ್ಲಿ ನದಿಯ ಚಲನ ವಲನ, ಭೀಮ ಹಿಡಿಂಬಿಯರ ಪ್ರೇಮ, ಘಟೋತ್ಕಚನ ಜನನ, ವಿಧುರನ ಮರಣ ಇನ್ನೂ ಇಂತಹ ಹಲವು ದೃಶ್ಯಗಳು ಕಣ್ಣಿಂದ ಮರೆಯಾಗೇ ಇಲ್ಲ. ಇಂತಹ ಒಂದು ಒಳ್ಳೆಯ ಸಂಜೆಯನ್ನು ಕಟ್ಟಿಕೊಟ್ಟ ’ಭಾಗವತರು’ ಸಂಘಟನೆಗೆ ಅಭಿನಂದನೆಗಳು.

‍ಲೇಖಕರು G

August 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

36 ಪ್ರತಿಕ್ರಿಯೆಗಳು

  1. bharathi b v

    ಎಂಥ ಅದ್ಭುತ ನಾಟಕ! ಉಳಿದವರೆಲ್ಲ ಜಾಲ ಬೀಸುತ್ತ, ದಾಳ ಹಾಕುತ್ತ ನಡೆಯುವಾಗ ಭೀಮನೊಬ್ಬ ಮಾತ್ರ ಜಗದ ಎಲ್ಲ ಕಾರುಣ್ಯ, ಪ್ರೀತಿ, ಸಾಕ್ಷಿಪ್ರಜ್ಞೆಯಂತೆ ನಿಲ್ಲುವ ನಾಟಕ … ಅಬ್ಬಾ ತುಂಬ ದಿನಗಳು ಬೇಕು ಇದರಿಂದಾಚೆ ಬರಲು …. ಲೇಖನ ಚೆಂದವಿದೆ …

    ಪ್ರತಿಕ್ರಿಯೆ
  2. ಅಪರ್ಣ ರಾವ್

    ಭೀಮನ ಕುರಿತಾದ ವಿಶ್ಲೇಷಣೆ ಪರಿಣಾಮಕಾರಿಯಾಗಿದೆ.ಕಥೆಯ ಇನ್ನೊಂದು ಮಗ್ಗುಲು ಆಸಕ್ತಿ ಹುಟ್ಟಿಸುತ್ತದೆ.

    ಪ್ರತಿಕ್ರಿಯೆ
  3. Anil Talikoti

    ಭೀಮನೆಂದರೆ ಗೆಳೆಯ, ಭೀಮನೆಂದರೆ ಪ್ರೇಮಿ, ಭೀಮನೆಂದರೆ ಸಂಗಾತಿ, ಭೀಮನೆಂದರೆ ನಂಬಿಕೆ, ಭೀಮನೆಂದರೆ ಬದುಕು. ಅದಕ್ಕೆ ಏನೋ ಮಹಾಭಾರತ ಯುದ್ದದ ಆರಂಭದಿಂದ ಅಂತ್ಯದವರೆಗೂ ಭೀಮನದೇ ಪರಾಕ್ರಮ. ಭೀಮನ ವಿನಯ, ನಮ್ರತೆ ಅಪರಿಮಿತ.

    ಪ್ರತಿಕ್ರಿಯೆ
  4. ರೇಣುಕಾ ನಿಡಗುಂದಿ

    Excellent sandy. Illi koote nataka odida anubhava kattikottidde….

    ಪ್ರತಿಕ್ರಿಯೆ
  5. jogi

    ತುಂಬಾ ಚೆನ್ನಾಗಿದೆ. ಆ ನಾಟಕ ನೋಡಲಾಗಿರಲಿಲ್ಲ.. ಈಗ ಪಶ್ಚಾತ್ತಾಪವಾಗುತ್ತಿದೆ. ಥ್ಯಾಂಕ್ಸ್ ಸಂಧ್ಯಾರಾಣಿ

    ಪ್ರತಿಕ್ರಿಯೆ
  6. Palahalli Vishwanath

    ಪಾ೦ಚಾಲಿಗೆ ಸೌಗ೦ಧಿಕಾ ಪುಷ್ಪ ಬೇಕಾದರೂ ಭೀಮನೇ, ಸೈರ೦ಧ್ರಿಗೆ ಕೀಚಕ್ನಿ೦ದ ತಪ್ಪಿಸಿಕೊಳ್ಲಲೂ ಭೀಮನೇ ! ಅಣ್ಣ ಪರಮಾರ್ಥಿ, ತಮ್ಮ ಸ್ವಾರ್ಥಿ! ಲೇಖನ ಚೆನ್ನ್ನಾಗಿದೆ. ಹೌದು , ನಾಟಕ ನೋಡಬೇಕು

    ಪ್ರತಿಕ್ರಿಯೆ
  7. guru sullia

    ನಾಟಕವನ್ನ ವಿವರಿಸಿದ ಪರಿಗೆ…ಕುಂತಲ್ಲಿಂದಲೆ ಭೀಮ ಮನದೊಳಗಿಳಿದ.

    ಪ್ರತಿಕ್ರಿಯೆ
  8. Raju

    ಡಾ ಪಾರ್ವತಿ ಐತಾಳ್ avara ಕಾದಂಬರಿಯ hesaru kottidre chennagittu. Thanks madam

    ಪ್ರತಿಕ್ರಿಯೆ
  9. Aravind

    Naataka Ondu tookavadare nimma baraha innondu tooka. Such a nice write up… excellent.

    ಪ್ರತಿಕ್ರಿಯೆ
  10. ಮಲ್ಲಪ್ಪ

    ಸಂಧ್ಯಾ ಅಕ್ಕ,ನಾಟಕದ ವಿಧುರ ದರ್ಶನಕ್ಕೆ ಧನ್ಯವಾದಗಳು.ಭಾರತದಲ್ಲಿ ಕರ್ಣನನ್ನು ಬಿಟ್ಟರೆ ಭೀಮನಿಗೆನೇ ಅನ್ಯಾಯವಾದದ್ದು.ಹೌದು ಭೀಮ ಮುಗ್ಧ. ಅವನಿಗೆ(ಭೀಮನಿಗೆ ಮಾತ್ರ) ಮನಸ್ಸಿನ ಮಾತು ಮಾತ್ರ ತಿಳಿಯುತ್ತದೆ.ಎಲ್ಲರ ಕಷ್ಟಕ್ಕೂ ಭೀಮ ಬೇಕು.ಅವನ ಕಷ್ಟ ಯಾರಿಗೂ ಬೇಡ.ಕುಂತಿಯಂತು ವಿಚಿತ್ರವಾದ ತಾಯಿ.ನಾಟಕ ನೋಡಬೇಕು

    ಪ್ರತಿಕ್ರಿಯೆ
  11. ಕಿರಣ್

    ನಾಯರ್ ರವರ ಕಾದಂಬರಿಯನ್ನು ರೆಂಡಮೂಳಂ ಎಂದು ಉಚ್ಚರಿಸಬೇಕೋ ಏನೋ ಗೊತ್ತಿಲ್ಲ. ಆದರೆ ಅದ್ಭುತ ಕಥೆಗಾರಿಕೆ. ಅಂಗ್ಲ ಅನುವಾದ ಲಭ್ಯವಿದೆ. ನಾನು ಒಂದೇ ಗುಕ್ಕಿನಲ್ಲಿ ಓದಿದ ಕೆಲವೇ English ಕಾದಂಬರಿಗಳಲ್ಲಿ ಒಂದು.
    “To give voice to the voiceless” ಎಂದು ಕಾದಂಬರಿಯ ಆಶಯದಲ್ಲಿ ಹೇಳುತ್ತಾರೆ.
    ಬಹಳ ಸಫಲವಾಗಿದೆ.
    ನಾಟಕದ ದೃಶ್ಯ ಪರಿಭಾವಕ್ಕಿಂತ ಕತೆ ಓದುತ್ತಾ ಅನುಭವಿಸಿದ ನೋವು ಒಂದು ತೂಕ ಹೆಚ್ಚು ಎಂದು ನನಗನಿಸಿತು.
    ನಿಮ್ಮ ಲೇಖನಕ್ಕೆ ಧನ್ಯವಾದಗಳು. ನಿಮ್ಮ ಬರವಣಿಗೆ ನನ್ನಂತಹವರ ಪಾಲಿಗೆ “To give voice to the voiceless”! ನಮ್ಮ ಮನದಾಳದ ಭಾವಗಳಿಗೆ ಮೂರ್ತರೂಪ ಕೊಡುವ ನಿಮ್ಮ ಲೇಖನಿಗೆ ಪ್ರಣಾಮ!

    ಪ್ರತಿಕ್ರಿಯೆ
  12. ಮಾಲಿನಿ

    ಆ ನಾಟಕದಷ್ಟೇ ಅದ್ಭುತ ನಿನ್ನ ನಿರೂಪಣೆ. Excellent article.

    ಪ್ರತಿಕ್ರಿಯೆ
  13. Anonymous

    ತುಂಬ ಆಪ್ತವೂ ಆರ್ದ್ರವೂ ಆದ ಲೇಖನ. ಧನ್ಯವಾದ ಸಂಧ್ಯಾರಾಣಿಯವರೆ

    ಪ್ರತಿಕ್ರಿಯೆ
  14. ರೋಹಿತ್

    ಅದ್ಬುತ!
    ಆಫೀಸಿಗೆ ರಜೆ ಹಾಕಿಯಾದರೂ ಸರಿ, ಮುಂದಿನ ಶೋ ನೋಡ್ತೀನಿ.
    ತುಂಬಾ ಒಳ್ಳೆಯ ಲೇಖನ ಮೇಡಂ, as always 🙂

    ಪ್ರತಿಕ್ರಿಯೆ
  15. lakshmishankarjoshi.

    ಮನವನ್ನು ಆವರಿಸಿದ ಭೀಮ!ಕಟ್ಟಿಕೊಟ್ಟ ನೀವು!ಮನಸ್ಸು ತುಂಬಿಕೊಂಡು ಬಿಟ್ಟಿದ್ದೀರಿ!ಇವತ್ತಿದಡೀ ದಿನ ಭೀಮ ಕಾಡ್ತಾನೆ.ಅದ್ಭುತ ಲೇಖನ.

    ಪ್ರತಿಕ್ರಿಯೆ
  16. sheshagirijodidar

    I am surprised at your talent of narration…wonderfully told…no…no….experienced as though I have seen a real enacted play…and you have brought out the rugged but kind hearted, innocent and simple, straight forward Bheema…who touches our heart.. I just liked your…story….I wrote somewhere our national sports academy instead of giving Drona…award…it should be Ekalavya…award…Sandhya.. nice feeling to read your review story.. thank you

    ಪ್ರತಿಕ್ರಿಯೆ
  17. sheshagirijodidar

    A review of a play in the form of well narrated story……where both forms are justified…and this is called economy of words in review and the story..even those who have never heard…get the essence of if…I enjoyed your write up… thank you Sandhya Raniji…

    ಪ್ರತಿಕ್ರಿಯೆ
  18. Rohini Satya

    ಪಾತ್ರದ ಔನ್ನತ್ಯದ ಚಿತ್ರಣ ಸ್ಪಷ್ಟವಾಗಿ ಮೂಡಿಬಂದ ಲೇಖನ ತುಂಬಾ ಚೆನ್ನಾಗಿದೆ !

    ಪ್ರತಿಕ್ರಿಯೆ
  19. umavallish

    ”ಕಣ್ಣಿಗೆ ಕಟ್ಟುವಂತೆ ವಿವರಿಸುವುದು” ಎಂದರೆ ಇದೇ ಇರಬೇಕು ದನ್ಯವಾದಗಳು

    ಪ್ರತಿಕ್ರಿಯೆ
  20. ಲಕ್ಷ್ಮಿ ಜಿ ಪ್ರಸಾದ

    ಛೆ,ನಾನೂ ಆ ನಾಟಕ ನೋಡಬೇಕಿತ್ತು ಎಂದೆನಿಸಿತು ,ನಿರೂಪಣೆ ತುಂಬಾ ಇಷ್ಟವಾಯಿತು

    ಪ್ರತಿಕ್ರಿಯೆ
  21. ಅನು ಪಾವ೦ಜೆ

    ದ್ರೌಪದಿಗೆ ತನ್ನ ಆಪತ್ಕಾಲದಲ್ಲೆಲ್ಲಾ ಹಿ೦ದುಮು೦ದು ನೋಡದೇ ರಕ್ಷೆಯನ್ನಿತ್ತ ಭೀಮ…..ದ್ರೌಪದಿಗೆ ಕೊನೆಯವರೆಗೆ ಎಷ್ಟು ಆಪ್ತನಾದನೊ ಅಷ್ಟೇ ನಮಗೂ ಆಪ್ತನಾಗುತ್ತಾನೆ…..ಯಾವುದೇ ಹೆಣ್ಣಿಗೆ ಇದ್ದರೆ ಇರಬೇಕು ಭೀಮನ೦ತವನು !!!

    ಪ್ರತಿಕ್ರಿಯೆ
  22. oduga

    ಭೀಮಾಯಣ ಕಾದಂಬರಿ ಅನುವಾದ ಸಿ ರಾಘವನ್. ಅವರದು.

    ಪ್ರತಿಕ್ರಿಯೆ
  23. suguna mahesh

    ವಾಹ್ ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದೀರಿ. ಚೆಂದದ ಲೇಖನ

    ಪ್ರತಿಕ್ರಿಯೆ
  24. shashikala

    dear sandhyarani
    Ofcource bheema is the best human being among the brothers. He was the best son to Kunthi, best husband
    to Droupadi and best father to all children. Whenever Kunthi had any issues she used to take them to Bheema and when ever Draupadi had problems like keechaake or any wish like sougandhika pushpa she expressed to Bheema. He never betrayed her.
    Children liked him most as he was a child with children and spared time and attention
    But Bheema too erred in the episode of aragina mane and mother and five children who were burnt to create a picture of real pandavas being burnt,
    or be it Ghatotgaja case or Hidimbi
    Thank you for the article
    Shashikala

    ಪ್ರತಿಕ್ರಿಯೆ
  25. C S Sunandana

    sandhya avare.
    nimma lekhana odide. sahityanubhavada rasaaswadanegondu apoorva avakaasha sikkantaayitu.
    bheemayana pustakavannu odabekeniside. elli sikkuttade aa pustaka?
    dhanyavaadagalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: