ಸ್ವತಂತ್ರ ಭಾರತದ ಅತಂತ್ರ ಮಹಿಳೆ

divakar

ನಾ ದಿವಾಕರ್

ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತ ವಸಾಹತು ಆಳ್ವಿಕೆಯಿಂದ ಮುಕ್ತವಾಗಿ 68 ವರ್ಷಗಳು ಕಳೆದಿದೆ. ಈ 68 ವರ್ಷಗಳಲ್ಲಿ ಪ್ರತಿವರ್ಷವೂ ಭಾರತದ ಪ್ರಜ್ಞಾವಂತ ಪ್ರಜಾಸಮೂಹ ಸ್ವಾತಂತ್ರ್ಯದ ಸಾಧಕ ಬಾಧಕಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಇದೆ. ನಿಜ, ಪರಕೀಯರ ಆಡಳಿತದಿಂದ ನಾವು ಸ್ವತಂತ್ರರಾಗಿದ್ದೇವೆ. ನಮ್ಮದೇ ಆದ ಚುನಾಯಿತ ಸಕರ್ಾರ ನಮ್ಮನ್ನಾಳುತ್ತಿದೆ. ದೇಶದ ಜನತೆಗೆ ಎಲ್ಲ ಅಧಿಕಾರದ ಎಲ್ಲ ಹಂತಗಳಲ್ಲೂ ಪ್ರಾತಿನಿಧ್ಯ ದೊರೆಯುತ್ತಿದೆ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುತ್ತಿದ್ದೇವೆ. ಇದೇ ವೇಳೆ ಸ್ವಾತಂತ್ರ್ಯದ ಸ್ವೇಚ್ಚಾಚಾರವೂ ಭಾರತದ ಸಾಮಾಜಿಕ ಪರಿಸರವನ್ನು ಕಾಡುತ್ತಿದ್ದು ಒಂದು ಸ್ವತಂತ್ರ ರಾಷ್ಟ್ರದ ಮೂಲ ಪರಿಕಲ್ಪನೆಯನ್ನೇ ಅಣಕಿಸುವಂತೆ ಹಲವು ವಿದ್ಯಮಾನಗಳೂ ಸಂಭವಿಸುತ್ತಿವೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆಯೂ ಈ ವಿದ್ಯಮಾನಗಳ ಬಗ್ಗೆ ಆತಂಕ ಹೊಂದಿರುವುದು ಸಹಜ. ಆದರೆ ಸಾಮುದಾಯಿಕ ದೃಷ್ಟಿಕೋನದಿಂದ ನೋಡಿದಾಗ, ಭಾರತದಂತಹ ಪುರುಷ ಪ್ರಧಾನ ಸಮಾಜದಲ್ಲಿ ಸ್ವತಂತ್ರ ಭಾರತದ ಮಹಿಳೆಯರು ಎಷ್ಟು ಸ್ವತಂತ್ರರಾಗಿದ್ದಾರೆ ಎಂಬ ಪ್ರಶ್ನೆ ಗಂಭೀರವಾಗಿ ಕಾಣುತ್ತದೆ.
ಭಾರತೀಯ ಮಹಿಳೆ ಎಷ್ಟು ಸ್ವತಂತ್ರಳು ? ಮಹಿಳೆಯರ ಆದ್ಯತೆ ಮತ್ತು ಆಯ್ಕೆಗಳಿಗೆ ಇರುವ ಸ್ವಾತಂತ್ರ್ಯ ಎಷ್ಟು ? ತಮ್ಮ ಜೀವನದ ಬಗ್ಗೆ ಸ್ವತಃ ನಿಧರ್ಾರ ಕೈಗೊಳ್ಳುವ ಸ್ವಾತಂತ್ರ್ಯ ಮಹಿಳೆಯರಿಗೆ ಇದೆಯೇ ? ಈ ಹಲವು ಪ್ರಶ್ನೆಗಳು ಇಡೀ ಮಹಿಳಾ ಸಮುದಾಯವನ್ನು ಬಾಧಿಸುತ್ತಿವೆ. ಇತ್ತೀಚಿನ ಜನಗಣತಿಯ ಅಂಕಿ ಅಂಶಗಳನ್ನು ನೋಡಿದಾಗ ಪುರುಷ-ಮಹಿಳೆಯರ ಅನುಪಾತದಲ್ಲಿ ವೃದ್ಧಿಯಾಗಿರುವುದು ಕಂಡುಬಂದರೂ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿರುವುದು ಮಾತ್ರ ಸುಸ್ಪಷ್ಟ. ಆರು ವರ್ಷದೊಳಗಿನ ಮಕ್ಕಳ ಜನಸಂಖ್ಯಾ ಅನುಪಾತವನ್ನು ನೋಡಿದರೆ ಭಾರತೀಯ ಸಮಾಜದಲ್ಲಿನ ಈ ತಾರತಮ್ಯ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಈ ಸಮಸ್ಯೆಯನ್ನು ಶಾಸನಗಳ ಮೂಲಕವಾಗಲಿ, ಕಾನೂನು ಕ್ರಮದ ಮೂಲಕವಾಗಲಿ ಪರಿಹರಿಸಲಾಗದು ಎಂದು ಈಗಾಗಲೇ ಸಾಬೀತಾಗಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಮತ್ತು ಭ್ರೂಣ ಪತ್ತೆ ಮಾಡುವುದನ್ನು ನಿರ್ಬಂಧಿಸಲಾಗಿದ್ದರೂ ಇಂತಹ ಪ್ರಕರಣಗಳಿಗೇನೂ ಅಡ್ಡಿಯಾಗಿಲ್ಲ. ಏಕೆಂದರೆ ಕಾನೂನು ರಚಿಸುವುದೂ, ಉಲ್ಲಂಘಿಸುವುದೂ ಪುರುಷ ಪ್ರಧಾನ ವ್ಯವಸ್ಥೆಯೇ ಅಲ್ಲವೇ ? ಭಾರತದ ಸಂವಿಧಾನ ತನ್ನ ಸಮಸ್ತ ಪ್ರಜೆಗಳಿಗೂ ಕೆಲವು ಹಕ್ಕುಗಳನ್ನು ನೀಡುತ್ತದೆ, ಹಾಗೆಯೇ ಕೆಲವು ಬಾಧ್ಯತೆಗಳನ್ನೂ ವಹಿಸುತ್ತದೆ. ಮಹಿಳಾ ಸಮುದಾಯಕ್ಕೂ ತನ್ನದೇ ಆದ ಹಕ್ಕುಗಳನ್ನು ಸಂವಿಧಾನ ಒದಗಿಸಿದೆ. ಆದರೆ ಮಹಿಳೆಯರ ಬಾಧ್ಯತೆಗಳ ಬಗ್ಗೆ ಅತ್ಯಂತ ಕುತೂಹಲದಿಂದ ಗಮನಿಸುವ ಭಾರತೀಯ ಸಮಾಜ, ಮಹಿಳಾ ಸಮುದಾಯದ ಹಕ್ಕುಗಳನ್ನು ಅಷ್ಟೇ ನಿರ್ಲಕ್ಷ್ಯ ಭಾವದಿಂದ ನೋಡುತ್ತದೆ. ಈ ಸಂದರ್ಭದಲ್ಲಿ ಕೌಟುಂಬಿಕ ಜೀವನದ ಹಿನ್ನೆಲೆಯಲ್ಲಿ ನೋಡುವಾಗ ಮಹಿಳೆಯರಿಗೆ ಸಂವಿಧಾನ ಒದಗಿಸಿರುವ ಆಸ್ತಿಯ ಹಕ್ಕು ಮುಖ್ಯ ಪಾತ್ರ ವಹಿಸುತ್ತದೆ. ಲಿಂಗಾಧಾರಿತ ಧನಾತ್ಮಕ ತಾರತಮ್ಯ ನೀತಿಯನ್ನು ಸಕರ್ಾರ ಎಷ್ಟೇ ಪರಿಣಾಮಕಾರಿಯಾಗಿ ಅನುಸರಿಸಿದರೂ ಲಿಂಗಬೇಧ ಭಾರತೀಯ ಸಮಾಜವನ್ನು ಕಾಡುತ್ತಿದ್ದರೆ ಅದಕ್ಕೆ ಆಸ್ತಿಯ ಹಕ್ಕನ್ನು ಮಹಿಳೆಯರಿಗೆ ನೀಡದಿರುವುದೇ ಕಾರಣ.
IN16_I-DAY_163614f
ಕೌಟುಂಬಿಕ ಸನ್ನಿವೇಶವನ್ನು ನೋಡಿದಾಗ ಮಹಿಳೆಯರ ಸ್ಥಾನಮಾನವನ್ನು ನಿರ್ದಿಷ್ಟ ಕುಟುಂಬದ ಶ್ರೀಮಂತಿಕೆ ಅಥವಾ ಬಡತನವನ್ನು ಆಧರಿಸಿಯೇ ನಿರ್ಧರಿಸಲಾಗುತ್ತದೆ. ಸಹಜವಾಗಿಯೇ ಶ್ರೀಮಂತ ವರ್ಗಗಳ ಮಹಿಳೆಯರನ್ನು ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿರುವವರೆಂದೇ ಪರಿಗಣಿಸಲಾಗುತ್ತದೆ. ಆದರೆ ವಾಸ್ತವವಾಗಿ ಬಹುಪಾಲು ಶ್ರೀಮಂತ ಕುಟುಂಬಗಳಲ್ಲಿ ಮಹಿಳೆಯರಿಗೆ ಆಸ್ತಿಯ ಮೇಲಿನ ಹಕ್ಕು ಇರುವುದಿಲ್ಲ. ಕನರ್ಾಟಕ ಕೌಟುಂಬಿಕ ಆಸ್ತಿ ಸಮೀಕ್ಷೆಯ ಪ್ರಕಾರ ಗ್ರಾಮೀಣ ಪ್ರದೇಶದ ಶೇ. 20ರಷ್ಟು ಶ್ರೀಮಂತರ ಕುಟುಂಬಗಳಲ್ಲಿ ಮಹಿಳೆಯರು ಕೇವಲ ಶೇ. 16ರಷ್ಟು ಆಸ್ತಿಯನ್ನು ಮಾತ್ರ ಹೊಂದಿರುತ್ತಾರೆ. ವಿಚ್ಚೇದಿತ ಸಂಬಂಧಗಳ ಸಂದರ್ಭದಲ್ಲಿ ಈ ಹಕ್ಕುಗಳನ್ನೂ ಮಹಿಳೆಯರು ಕಳೆದುಕೊಳ್ಳುತ್ತಾರೆ. ವಿವಾಹ ವಿಚ್ಚೇದನ ಪ್ರಕರಣಗಳಲ್ಲೂ ಸಹ ಮಹಿಳೆಯರಿಗೆ ಮಾಸಿಕ ಪರಿಹಾರ ಒದಗಿಸಲಾಗುವುದೇ ಹೊರತು, ಆಸ್ತಿಯಲ್ಲಿ ಪಾಲು ನೀಡುವುದು ವಿರಳ. ಇದು ಒಂದು ಆಯಾಮ ಮಾತ್ರ.
ಮತ್ತೊಂದು ಆಯಾಮವೆಂದರೆ ಮಧ್ಯಮ ವರ್ಗಗಳಲ್ಲಿ ಮತ್ತು ಶ್ರೀಮಂತರಲ್ಲೂ ಸಹ ಮಹಿಳೆಯರಿಗೆ ಆಸ್ತಿಯ ಪರಭಾರೆ ಮಾಡಲಾಗಿದ್ದರೂ ಅವರ ಒಡೆತನ ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಬಹುತೇಕ ವಾಣಿಜ್ಯೋದ್ಯಮಿಗಳು ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲು ಮಹಿಳೆಯರ ಹೆಸರಿನಲ್ಲಿ ಆಸ್ತಿ ನೊಂದಾಯಿಸಿರುತ್ತಾರೆ. ಬ್ಯಾಂಕ್ ಖಾತೆಗಳನ್ನು, ಲಾಕರ್ಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಹೊಂದಿರುತ್ತಾರೆ. ಆದರೆ ಈ ಆಸ್ತಿಯ ಮೇಲೆ ಮಹಿಳೆಯರಿಗೆ ತಾತ್ವಿಕವಾಗಿ ಯಾವುದೇ ಹಕ್ಕೂ ಇರುವುದಿಲ್ಲ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶೇ.71ರಷ್ಟು ಭೂಮಿ ನಿವೇಶನಗಳ ಒಡೆತನ ಪುರುಷರದ್ದೇ ಆಗಿದ್ದು ಮಹಿಳೆಯರ ಪಾಲು ಶೇ.14ರಷ್ಟು ಮಾತ್ರ ಇರುತ್ತದೆ. ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಕೊಂಚ ಹೆಚ್ಚಾಗಿದ್ದರೂ ಅದು ಕೇವಲ ಔದ್ಯಮಿಕ ದೃಷ್ಟಿಕೋನದ ಜಾಣ್ಮೆಯ ಪ್ರತೀಕವಷ್ಟೆ. ಇನ್ನು ಮಹಿಳೆಯರು ಧರಿಸುವ ಚಿನ್ನದ ಒಡವೆಗಳ ಒಡೆತನ ಅವರದೇ ಆಗಿದ್ದರೂ ಬಹುತೇಕ ಸಂದರ್ಭಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಎದುರಾದಾಗ ಅಥವಾ ಪುರುಷರಿಗೆ ಅಗತ್ಯವೆನಿಸಿದಾಗ ಅವುಗಳನ್ನು ತ್ಯಾಗ ಮಾಡಲೇಬೇಕಾದ ಅನಿವಾರ್ಯತೆಯನ್ನೂ ಮಹಿಳೆಯರು ಎದುರಿಸುತ್ತಾರೆ.
ಈ ಪುರುಷ ಪ್ರಧಾನ ಕೌಟುಂ
ಕ ಮೌಲ್ಯಗಳು ಭಾರತೀಯ ಸಮಾಜವನ್ನೂ ನಿಯಂತ್ರಿಸುವುದರಿಂದಲೇ ಮಹಿಳಾ ಮೀಸಲಾತಿ ಮತ್ತು ಮಹಿಳೆಯರ ರಾಜಕೀಯ ಹಕ್ಕುಗಳೂ ಮರೀಚಿಕೆಯಾಗೇ ಉಳಿದಿವೆ. ಆಸ್ತಿಯ ಹಕ್ಕು ಮತ್ತು ಪರಭಾರೆ ಉಳ್ಳವರಿಗೆ ಸಂಬಂಧಿಸಿದ ವಿಷಯಗಳು. ಆದರೆ ಶೇ. 40ಕ್ಕೂ ಹೆಚ್ಚು ಕಡುಬಡವರನ್ನು ಹೊಂದಿರುವ ಭಾರತೀಯ ಸಮಾಜದಲ್ಲಿ ಈ ಹಕ್ಕುಗಳು ಮಾತ್ರವೇ ಮಹಿಳೆಯರ ಸ್ಥಾನಮಾನವನ್ನು ನಿರ್ಧರಿಸುವುದಿಲ್ಲ. ಮಹಿಳಾ ಮೀಸಲಾತಿಯ ಚರ್ಚೆಯ ಸಂದರ್ಭದಲ್ಲಿ ಮೂಡಿಬಂದ ಸಂಕಥನಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಸ್ಪಷ್ಟವಾಗುವ ಒಂದು ಅಂಶವೆಂದರೆ, ಭಾರತೀಯ ಪುರುಷ ಸಮಾಜ ಮಹಿಳೆಯರೊಂದಿಗೆ ಅಧಿಕಾರ ಹಂಚಿಕೊಳ್ಳಲು ಇಚ್ಚಿಸುವುದಿಲ್ಲ. ಅಷ್ಟೇ ಅಲ್ಲ ಅಧಿಕಾರ ಲಭ್ಯವಾದರೂ ಮಹಿಳೆಯರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ನೀಡುವುದಿಲ್ಲ. ಇತ್ತೀಚೆಗೆ ಕರ್ನಾಟಕದ ಜಿಲ್ಲಾ ಪಂಚಾಯತಿಯಲ್ಲಿ ಮಹಿಳಾ ಸದಸ್ಯರೊಂದಿಗೆ ಪುರುಷರೂ ಹಾಜರಿದ್ದುದು ಮತ್ತು ಈ ಕ್ರಮವನ್ನು ಮಹಿಳಾ ಸದಸ್ಯರೇ ಸಮರ್ಥಿಸಿಕೊಂಡಿದ್ದು ಒಂದು ನಿದರ್ಶನವಷ್ಟೆ.
ಈ ವಿದ್ಯಮಾನದ ಹಿಂದಿರುವ ಮೂಲಭೂತ ಭಾವನೆ ಎಂದರೆ ಮಹಿಳೆಯರಿಗೆ ಸ್ವಂತ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯ, ದಾಷ್ಟ್ರ್ಯತೆ ಇರುವುದಿಲ್ಲ ಎಂಬ ಪಿತೃಪ್ರಧಾನ ಮನೋಭಾವ. ಈ ಮನೋಭಾವವನ್ನು ಕೌಟುಂಬಿಕ ಹಿನ್ನೆಲೆಯಲ್ಲಿ ಕಾಣುವಂತೆಯೇ ಸಾಮಾಜಿಕ-ರಾಜಕೀಯ ನೆಲೆಯಲ್ಲೂ ಕಾಣಬಹುದು. ಆಧುನಿಕ ಸಮಾಜದ ಅನಿವಾರ್ಯತೆಗಳು ಮತ್ತು ಮಹಿಳಾ ಚಳುವಳಿಗಳ ಹಕ್ಕೊತ್ತಾಯಗಳಿಗೆ ಮಣಿದು ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದರೂ, ಅದು ಕೇವಲ ಮಹಿಳೆಯರಿಗೆ ಪುರುಷರು ಹಕ್ಕುಗಳನ್ನು ದಯಪಾಲಿಸುವ ಉದಾತ್ತತೆಯ ಸೋಗಿನಲ್ಲಿ ವ್ಯಕ್ತವಾಗುವುದೇ ಹೊರತು, ಸರ್ವ ಸ್ವತಂತ್ರ ಸ್ವಾಭಾವಿಕ ಹಕ್ಕು ಪ್ರತಿಪಾದನೆಯ ರೀತಿಯಲ್ಲಿ ಗೋಚರಿಸುವುದಿಲ್ಲ. ಸಾಮಾಜಿಕ ಪರಿಸರದಲ್ಲಿ ಮಹಿಳೆ ಹಿಂದೆಂದಿಗಿಂತಲೂ ಹೆಚ್ಚು ಸ್ವಾತಂತ್ರ್ಯ ಹೊಂದಿದ್ದರೂ ಸ್ವತಂತ್ರವಾಗಿ ತನ್ನ ಕಾಲಮೇಲೆ ತಾನು ನಿಲ್ಲಲು ಯತ್ನಿಸುವ ಮಹಿಳೆಯರನ್ನು ಭಾರತೀಯ ಸಮಾಜ ಇಂದಿಗೂ ಮುಕ್ತವಾಗಿ ಸ್ವೀಕರಿಸುವುದಿಲ್ಲ.
ಅಂತಹ ಮಹಿಳೆಯರ ಸಾಧನೆಯನ್ನು ವೈಭವೀಕರಿಸುವ ಮೂಲಕ, ಏನೋ ಅಸಾಧ್ಯವಾದದ್ದನ್ನು ಸಾಧಿಸಿದ್ದಾರೆ ಎಂದು ಬಿಂಬಿಸಿ ಮಹಿಳೆಯರು ಸ್ವಾಭಾವಿಕವಾಗಿ ಇದನ್ನು ಸಾಧಿಸಲಾರರು ಎಂಬ ಅಭಿಪ್ರಾಯವನ್ನು ಮೂಡಿಸುವ ಯತ್ನವನ್ನು ಈಗಲೂ ಕಾಣಬಹುದು. ಈ ವಿದ್ಯಮಾನದ ಹಿಂದಿನ ಸೂಕ್ಷ್ಮತೆಗಳನ್ನು ಪ್ರಜ್ಞಾವಂತ ನಾಗರಿಕ ಸಮುದಾಯವೂ ಗಮನಿಸುತ್ತಿಲ್ಲ. ಸ್ವಾತಂತ್ರ್ಯದಿನದ ಹೊಸ್ತಿಲಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಕುರಿತಂತೆ ನೂತನ ಚಿಂತನೆಗಳನ್ನು ಮೂಡಿಸುವ ಸಂಕಥನಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಆತ್ಮಾವಲೋಕನದ ತುರ್ತು ಅಗತ್ಯತೆಯೂ ಕಂಡುಬರುತ್ತಿದೆ.

‍ಲೇಖಕರು G

August 15, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: