'ನೊಣವೆಂದರೇನು ಸಾಮಾನ್ಯವೆ?' – ಎಸ್ ದಿವಾಕರ್

1465185_446269972144437_611116965_n
ಎಸ್ ದಿವಾಕರ್

ಕೊಬಾಯಾಷಿ ಇಸ್ಸಾ ಹದಿನೆಂಟನೆಯ ಶತಮಾನದ ಜಪಾನಿ ಕವಿ ಮತ್ತು ಬೌದ್ಧ ಗುರು. “ಮನುಷ್ಯರಿರುವ ಕಡೆ ನೊಣಗಳುಂಟು, ಬುದ್ಧರೂ ಉಂಟು” ಎನ್ನುವುದು ಅವನದೊಂದು ಹೈಕು. ಬುದ್ಧರಿದ್ದಾರೋ ಇಲ್ಲವೋ, ನೊಣಗಳಂತೂ ಸಾವಿರಾರು ವರ್ಷಗಳಿಂದ ನಮ್ಮ ನಡುವೆ ಇದ್ದೇ ಇವೆ. ಅವುಗಳ ಬಗ್ಗೆ ಸಾವಿರಾರು ಭಾಷೆಗಳಲ್ಲಿ ಸಾವಿರಾರು ಗುಣವಾಚಕಗಳನ್ನು ಬಳಸಿ ದೂರಿದರೂ ಕೂಡ ಅವು ಎಲ್ಲಿಂದ ಬಂದುವೆಂದು ನಮಗೆ ಗೊತ್ತಿಲ್ಲ. ಆದರೆ ನಾವು ಎಸೆಯುವ ಕೊಳೆ ಕಸ ಗಲೀಜಿನಲ್ಲಿ, ಕೊಳೆತು ನಾರುವ ಪದಾರ್ಥಗಳಲ್ಲಿ, ಮಲದಲ್ಲಿ, ಹೆಣಗಳಲ್ಲಿ ಸದಾ ಪ್ರತ್ಯಕ್ಷ. ವಸ್ತುಸ್ಥಿತಿ ಹೀಗಿರುವಾಗ ಅವುಗಳ ಕತೆಯೇನು ಸಾಮಾನ್ಯವೆ? ಅವು ಪ್ರಾಚೀನ ಈಜಿಪ್ಟಿನ ಫರೋಗಳ ಮೈಮೇಲಿದ್ದವು, ರಾಜಮಹಾರಾಜರ ಔತಣಕೂಟಗಳಲ್ಲಿದ್ದವು, ಮಲಗುವ ಕೋಣೆಗಳಲ್ಲಿ ಗೋಡೆಗಳ ಮೇಲೆ ಕೂತು ನೋಡುತ್ತಿದ್ದವು, ಸೀಜರ್, ಗಾಂಧಿ, ಮದರ್ ತೆರೆಸಾರನ್ನು ಮುಟ್ಟಿ ಬಂದಂತೆಯೇ ಹಿಟ್ಲರ್, ಸ್ಟ್ಯಾಲಿನ್, ಮುಸೋಲಿನಿಯರನ್ನೂ ಮುಟ್ಟಿ ಬಂದಿದ್ದವು. ಮತ್ತೆ ನಮ್ಮ ಮೇಲೆ ಕೂರುವ ಮುನ್ನ ಎಲ್ಲಿ ಕೂತು ಬಂದಿದ್ದವೋ ನಮಗೆ ಗೊತ್ತಿಲ್ಲ, ಗೊತ್ತಾಗುವುದೂ ಇಲ್ಲ.

**

ಕಳೆದ ಶತಮಾನದ 50ರ ದಶಕದಲ್ಲಿ ‘ಚಿತ್ರಗುಪ್ತ’ ಎಂಬ ವಾರಪತ್ರಿಕೆ ಪ್ರಸಿದ್ಧವಾಗಿತ್ತು. ಅದರಲ್ಲಿ ಒಬ್ಬ ವಿಮರ್ಶಕರು ನವೋದಯದ ಕವಿಯೊಬ್ಬರ ಕಾವ್ಯದಲ್ಲಿ ಅದೆಷ್ಟೋ ಲಕ್ಷ ಅನುಸ್ವಾರಗಳು (ಅಂದರೆ ‘ಅಂ’ಗಳು) ಇವೆಯೆಂದು ಲೆಕ್ಕಹಾಕಿದ್ದರು. ಅದನ್ನು ಓದಿದ ಆ ಕವಿಯ ಪಕ್ಷಪಾತಿಯೊಬ್ಬರು ‘ನೊಣದ ಮೀಸೆ ಎಣಿಸುವ ವಿಮರ್ಶಕ’ ಎಂದು ಆ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ನೊಣದ ಮೀಸೆಗೇಕೆ ಹೋಲಿಕೆ? ಇಷ್ಟಕ್ಕೂ ನೊಣಕ್ಕಿರುವುದು ಮೀಸೆಯನ್ನು ಹೋಲುವ ಎರಡೇ ಎರಡು ಆಂಟೆನಾಗಳಷ್ಟೆ.
ನೊಣದ ಉದ್ದ ಕಾಲು ಅಂಗುಲವನ್ನು ಮೀರದು. ಅದು ಸೆಕೆಂಡಿಗೆ 200 ಬಾರಿ ರೆಕ್ಕೆ ಆಡಿಸುತ್ತದೆ, ಗಂಟೆಗೆ 5 ಮೈಲಿ ವೇಗದಲ್ಲಿ ಹಾರುತ್ತದೆ. ಅದರ ಕಣ್ಣೆಂದರೆ ಕೆಂಪು ಬಣ್ಣದ ಅನೇಕಾನೇಕ ಕಣ್ಣುಗಳ ಒಂದು ಸಮೂಹ. ಪ್ರತಿಯೊಂದರಲ್ಲೂ 4000 ಮಸೂರಗಳಿದ್ದು ಅವು ಏಕಕಾಲದಲ್ಲಿ ಬೇರೆ ಬೇರೆ ದೃಶ್ಯಗಳನ್ನು ನೋಡಬಲ್ಲವು.

ನೊಣಕ್ಕೆ ಕಾಲೆಂದರೆ ನಾಲಗೆಯಿದ್ದಂತೆ. ಎಲ್ಲಾದರೂ ಇಳಿದ ತಕ್ಷಣ ಅದಕ್ಕೆ ತಿನ್ನುವ ಪದಾರ್ಥ ಗೊತ್ತಾಗಿಬಿಡುತ್ತದೆ. ಹಲ್ಲುಗಳಿರದ ಕಾರಣ ತಿನ್ನುವುದನ್ನೆಲ್ಲ ಮೊದಲು ದ್ರವರೂಪಕ್ಕೆ ಪರಿವರ್ತಿಸುತ್ತದೆ. ಅಂದರೆ ಆಹಾರದ ಮೇಲೆ ಜೀರ್ಣಕಾರಿ ದ್ರವವನ್ನು ಸ್ರವಿಸಿ, ಆಹಾರವನ್ನು ಕೊಳೆಸಿ ನಂತರ ಸೇವಿಸುತ್ತದೆ.

**

ಜಾನ್-ಪಾಲ್ ಸಾರ್ತ್ರೆ, ಆಲ್ಬರ್ಟ್ ಕಮೂ ಇಬ್ಬರೂ ಫ್ರಾನ್ಸಿನ ಪ್ರಸಿದ್ಧ ಅಸ್ತಿತ್ವವಾದೀ ಲೇಖಕರು. ಸಾರ್ತ್ರೆ ಬರೆದ ‘ದಿ ಫ್ಲೈಸ್’ ಸ್ವಾತಂತ್ರ್ಯದ ವಸ್ತುವುಳ್ಳ ನಾಟಕ. ಒರೆಸ್ಟೆಸ್ ಎಂಬ ಗ್ರೀಕ್ ಪುರಾಣ ಕತೆಯನ್ನು ಆಧರಿಸಿದ ಈ ನಾಟಕದಲ್ಲಿ ಸಾರ್ತ್ರೆ ಬದುಕಿನ ಹೇವರಿಕೆಯಿಂದ ತಪ್ಪಿಸಕೊಳ್ಳಬೇಕಾದರೆ ಮನುಷ್ಯನಿಗೊಂದು ಹೊಣೆಗಾರಿಕೆಯಿದೆಯೆಂದೂ ಹೊಣೆಗಾರಿಕೆಯಿಲ್ಲದವನು ನೊಣಗಳಂತೆ ಬದುಕಿನ ಪರಿಣಾಮಗಳನ್ನು ಅನುಭವಿಸಬೇಕೆಂದೂ ಪ್ರತಿಪಾದಿಸುತ್ತಾನೆ.

ಇನ್ನು ಕಮೂನ ‘ದಿ ಅಡಲ್ಟ್ರಸ್ ವುಮನ್’ ಎಂಬ ಕತೆ ಪ್ರಾರಂಭವಾಗುವುದೇ ಹೀಗೆ: “ಬಸ್ಸಿನ ಕಿಟಕಿಗಳು ಮುಚ್ಚಿಕೊಂಡಿದ್ದರೂ ಕೂಡ ಒಂದು ನೊಣ ಕಳೆದ ಕೆಲವು ನಿಮಿಷಗಳಿಂದ ಸುತ್ತುತ್ತಲೇ ಇತ್ತು. ಅಲ್ಲೊಂದು ವಿಚಿತ್ರ ದೃಶ್ಯವಾಗಿದ್ದ ಅದು ತನ್ನ ದಣಿದ ರೆಕ್ಕೆಗಳನ್ನು ಬಡಿಯುತ್ತ ಹಿಂದಕ್ಕೂ ಮುಂದಕ್ಕೂ ಹಾರುತ್ತಿತ್ತು. ಜಾನಿನ್ ಅದರ ಪತ್ತೆ ಹಚ್ಚದಾದಳು; ಆಮೇಲೆ ಅದು ಅವಳ ಗಂಡನ ನಿಶ್ಚಲವಾದ ಕೈಯ ಮೇಲೆ ಕುಳಿತುಕೊಂಡದ್ದನ್ನು ನೋಡಿದಳು. ತಂಪಾದ ಹವೆ. ಮರಳನ್ನು ಹೊತ್ತು ತಂದ ಗಾಳಿ ಕಿಟಕಿಗಳಿಗೆ ಬಡಿದು ಕೆರೆದಂತಾದಾಗಲೆಲ್ಲ ಆ ನೊಣ ಕಂಪಿಸುತ್ತಿತ್ತು.” ಈ ಕತೆಯಲ್ಲಿ ಪ್ರಮುಖ ಪಾತ್ರಗಳೆಂದರೆ ಮಾರ್ಸೆಲ್ ಮತ್ತು ಜಾನಿನ್. ಆಲ್ಜೀರಿಯದ ಮೂಲಕ ಒಂದು ಬಸ್ಸಿನಲ್ಲಿ ಪ್ರವಾಸ ಹೊರಟಿರುವ ಈ ದಂಪತಿಯ ನಡುವೆ ಅಂಥ ಅನ್ಯೋನ್ಯ ಸಂಬಂಧವಿಲ್ಲವೆಂಬ ಸೂಚನೆ ನೊಣವನ್ನೂ ಒಳಗೊಂಡು ಹಲವು ಪ್ರತೀಕಗಳ ಮೂಲಕ ಕ್ರಮೇಣ ತೆರೆದುಕೊಳ್ಳುತ್ತದೆ.

**

2

ನೊಣಗಳ ಮೊಟ್ಟೆಗಳಿಗೆ, ಲಾರ್ವಗಳಿಗೆ ಅನುಕೂಲಕರ ಬ್ಯಾಕ್ಟೀರಿಯಾ ಅಗತ್ಯ. ಅದನ್ನು ಅವುಗಳ ಅಮ್ಮಂದಿರೇ ಪೂರೈಸುತ್ತಾರೆ. ಈ ಬ್ಯಾಕ್ಟೀರಿಯಾ ತಯಾರಿಸುವ ರಾಸಾಯನಿಕಗಳು ಹುಟ್ಟಿದ ನೊಣಗಳಿಗೆ ಆಹಾರವಾಗುತ್ತವೆ. ಮತ್ತೆ ನೊಣಗಳ ಕಾಲುಗಳಲ್ಲೇ ಬ್ಯಾಕ್ಟೀರಿಯಾ ಇರುವುದರಿಂದ ಅವು ಕುಳಿತ ಕಡೆಗಳಲೆಲ್ಲ ಬ್ಯಾಕ್ಟೀರಿಯಾ ಅಂಟಿಕೊಳ್ಳುತ್ತದೆ. ಹೀಗೆ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಹೋಗುವ ಬ್ಯಾಕ್ಟೀರಿಯಾಗಳಿಂದಲೇ ಕ್ಷಯ, ಕಾಲರಾ ಸೇರಿದಂತೆ 100ಕ್ಕೂ ಹೆಚ್ಚು ರೋಗಗಳು ಹುಟ್ಟಿಕೊಳ್ಳುತ್ತವೆ.
ಮೊಟ್ಟೆ, ಲಾರ್ವ, ಕೋಶಾವಸ್ಥೆ, ಬೆಳೆದ ನೊಣ, ಹೀಗೆ ನಾಲ್ಕು ಅವಸ್ಥೆಗಳ ಮೂಲಕ ವಿಕಾಸಗೊಳ್ಳುವ ನೊಣಗಳಿಗೆ ಆಯುಸ್ಸು ಕಡಿಮೆ. ಎಷ್ಟು ಕಡಿಮೆಯಂದರೆ 3-4 ವಾರಗಳೊಳಗೇ ಅವು ಅಜ್ಜ ಅಜ್ಜಿಯರಾಗುತ್ತವೆ. ಆದರೇನು? ಒಂದು ಜೊತೆ ನೊಣಗಳು ಎರಡು ವಾರಗಳಲ್ಲಿ ಇನ್ನೂರು ನೊಣಗಳನ್ನು ಹುಟ್ಟಿಸಬಲ್ಲವು. ಆ ಇನ್ನೂರು ನೊಣಗಳಿಂದಲೂ ಅವುಗಳಿಂದ ಹುಟ್ಟಿದ ನೊಣಗಳಿಂದಲೂ ಅದೇ ಪ್ರಮಾಣದಲ್ಲಿ ಸಂತಾನೋತ್ಪತ್ತಿಯಾದರೆ ಒಂದು ವರ್ಷದೊಳಗೆ ಒಂದು ಬಿಲಿಯನ್ ಬಿಲಿಯನ್ ಬಿಲಿಯನ್ ಬಿಲಿಯನ್ ಬಿಲಿಯನ್ ಬಿಲಿಯನ್ ಬಿಲಿಯನ್ ನೊಣಗಳಾಗಿರುತ್ತವೆ.

**

ಗ್ವಾಟೆಮಾಲಾದ ಲೇಖಕ ಅಗೂಸ್ತೊ ಮೊಂತೆರ್ರೋಸೋನ ‘ಪರ್ಪೆಚುವಲ್ ಮೋಷನ್’ ಎಂಬ ಕಥಾ ಸಂಗ್ರಹದಲ್ಲಿ ಮೊದಲಿಗೆ ‘ನೊಣಗಳು’ ಎಂಬ ಕತೆಯಂಥ ಪ್ರಬಂಧವೋ, ಪ್ರಬಂಧದಂಥ ಕತೆಯೋ, ಇವೆರಡೂ ಸೇರಿದ ಮತ್ತೊಂದೋ ಇದ್ದು ಅದು “ಮೂರು ವಸ್ತುಗಳಿವೆ: ಪ್ರೇಮ, ಸಾವು ಮತ್ತು ನೊಣಗಳು” ಎಂದು ಪ್ರಾರಂಭವಾಗುತ್ತದೆ. ಆಮೇಲಿನ 31 ಕತೆಗಳಲ್ಲಿ ಪ್ರತಿಯೊಂದು ಕತೆಗೂ ಮೊದಲಲ್ಲಿ ನೊಣಗಳಿಗೆ ಸಂಬಂಧಪಟ್ಟ ಒಂದಲ್ಲ ಒಂದು ಕೊಟೇಷನ್ನಿದೆ. ವಿಟ್ಗೆನ್ಸ್ಟೈನ್, ಸಿಸಿರೊ, ಯೇಟ್ಸ್, ಪ್ರೂಸ್, ಶೋಪೆನ್ಹಾವರ್, ರುಪರ್ಟ್ ಬ್ರೂಕ್, ಬೆಂಜಮಿನ್ ಪೀರೆ, ಟಿ.ಎಸ್. ಎಲಿಯಟ್, ಜೇಮ್ಸ್ ಜಾಯ್ಸ್, ಪಾಬ್ಲೊ ನೆರೂದ ಮೊದಲಾದವರ ಆ ಕೊಟೇಷನ್ನುಗಳಿಗೂ ಕತೆಗಳಿಗೂ ಏನು ಸಂಬಂಧ? ನಮಗೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಯಾಕೆಂದರೆ ಮೊಂತೆರ್ರೋಸೊ ನಾವು ಹಿಡಿದುಬಿಟ್ಟೆವೆಂದರೂ ಹಿಡಿಯಲಾಗದ ಒಂದು ನೊಣದಂತೆ! ‘ನೊಣಗಳು’ ಎಂಬ ಪ್ರಬಂಧದಲ್ಲಿ ಅವನ ವಿಚಾರಸರಣಿ ಹೀಗಿದೆ: “ವರ್ಷಗಳ ಹಿಂದೆ ನನಗೆ ನೊಣವನ್ನು ಕುರಿತ ಒಂದು ಜಗತ್ಸಂಕಲನವನ್ನು ಸಿದ್ಧಪಡಿಸುವ ವಿಚಾರವಿತ್ತು. ಈಗಲೂ ಇದೆ. ಆದರೆ ಬಹುಬೇಗ ನನಗೆ ಅದೊಂದು ಪಾರವಿಲ್ಲದ ಕೆಲಸವೆಂದು ಗೊತ್ತಾಯಿತು. ನೊಣ ಎಲ್ಲ ಭಾಷೆಗಳ ಸಾಹಿತ್ಯವನ್ನೂ ಆಕ್ರಮಿಸಿಕೊಂಡಿದೆ; ಎಲ್ಲಿ ನೋಡಿದರೂ ನೊಣವೊಂದು ಕಣ್ಣಿಗೆ ಬೀಳುತ್ತದೆ…. ನೊಣ ಸರಿಯಾಗಿ ನೋಡಿದರೆ ಮೊದಲ ನೋಟಕ್ಕೆ ಕಂಡಷ್ಟು ಕುರೂಪಿಯಾಗಿ ಕಾಣುವುದಿಲ್ಲ. ಆದರೆ ಅದು ಮೊದಲ ನೋಟಕ್ಕೇ ಕುರೂಪಿಯಾಗಿ ಯಾಕೆ ಕಾಣುವುದಿಲ್ಲವೆಂದರೆ ಯಾರೊಬ್ಬರೂ ಅದನ್ನು ಮೊದಲ ನೋಟದಲ್ಲೇ ಕಂಡದ್ದಿಲ್ಲ. ಪ್ರತಿಯೊಂದು ನೊಣವೂ ಸದಾ ಕಾಣಿಸುತ್ತಲೇ ಇದೆ.”

**

ಜೀವಶಾಸ್ತ್ರಜ್ಞ ಮಾರ್ಟಿನ್ ಬ್ರೂಕ್ಸ್ ‘ಫ್ಲೈ: ದಿ ಅನಸಂಗ್ ಹೀರೊ ಆಫ್ ಟ್ವೆಂಟಿಯತ್ ಸೆಂಚುರಿ ಸೈನ್ಸ್’ ಎಂಬ ಗ್ರಂಥದಲ್ಲಿ ಬರೆದಿರುವಂತೆ ಇವತ್ತು ಜಗತ್ತಿನಲ್ಲಿರುವ ಅನೇಕ ಪ್ರಯೋಗಶಾಲೆಗಳಲ್ಲಿ ‘ಫ್ರೂಟ್ ಫ್ಲೈ’ ಅಥವಾ ಹಣ್ಣಿನ ನೊಣಗಳು ಬದುಕಿನ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುತ್ತಿವೆ. ಜೆನೆಟಿಕ್ಸ್ನಿಂದ ಅಭಿವೃದ್ಧಿಯವರೆಗೆ, ವರ್ತನೆಯಿಂದ ವಯಸ್ಸಾಗುವುದರವರೆಗೆ, ಜೀವವಿಕಾಸದಿಂದ ಜೀವಿಗಳ ಉಗಮದವರೆಗೆ ನೊಣಗಳು ಮಹೋನ್ನತ ಜೀವಶಾಸ್ತ್ರೀಯ ಆವಿಷ್ಕಾರಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಹಾಗೆ ನೋಡಿದರೆ, ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವಿಕಿರಣವನ್ನು ಕುರಿತು ನಮ್ಮ ಕಣ್ಣು ತೆರೆಸಿದ್ದು ನೊಣಗಳ ಮೇಲಿನ ಪ್ರಯೋಗಗಳೇ. ವಂಶವಾಹಿ ಥೆರಪಿಯಿಂದ ಕ್ಲೋನಿಂಗಿನವರೆಗೆ ಎಲ್ಲವೂ ನಿಂತಿರುವುದು ನೊಣಗಳ ಸಂಶೋಧನೆಯ ಬುನಾದಿಯ ಮೇಲೆಯೇ.
ಇಪ್ಪತ್ತನೆಯ ಶತಮಾನದಲ್ಲಿ ಡಾರ್ವಿನ್ನನ  ವಿಕಾಸವಾದವನ್ನು ಪುರಸ್ಕರಿಸಬಲ್ಲ, ಪ್ರಯೋಗದಿಂದ ಸಿದ್ಧವಾದ ಸಾಕ್ಷಿ ಯಾವುದೂ ಇರಲಿಲ್ಲವಷ್ಟೆ. ವಂಶವಾಹಿಗಳ ಬಗ್ಗೆ ಚಿಂತಿಸುತ್ತಿದ್ದ ಜೀವವಿಜ್ಞಾನಿ ದೋಬ್ಜಾನ್ಸ್ಕಿ ಹಣ್ಣಿನ ನೊಣಗಳನ್ನು ತನ್ನ ಪ್ರಯೋಗಕ್ಕೆ ಗುರಿಪಡಿಸಿದ. ಆ ನೊಣಗಳು ಬಹು ದೊಡ್ಡ ಪ್ರಮಾಣದಲ್ಲಿ ಕ್ರೋಮೊಜೋಮುಗಳನ್ನು ಉತ್ಪಾದಿಸುತ್ತವೆಯೆಂದೂ ಬೇರೆ ಬೇರೆ ಪ್ರದೇಶಗಳಲ್ಲಿರುವ ನೊಣಗಳ ಸಮೂಹಗಳನ್ನು ಅವುಗಳ ಕ್ರೋಮೊಜೋಮುಗಳ ವಿನ್ಯಾಸದಿಂದಲೇ ಗುರುತಿಸಬಹುದೆಂದೂ ಕಂಡುಕೊಂಡ. ಮುಂದೆ ಅವನ ಸಂಶೋಧನೆ ವಂಶವಾಹಿಯನ್ನು ಡಾರ್ವಿನ್ನನ ವಿಕಾಸವಾದದ ಜೊತೆ ಸೇರಿಸುವ ಮೂಲಕ ‘ಎವೊಲ್ಯೂಷನರಿ ಜೆನೆಟಿಕ್ಸ್’ ಎಂಬ ಹೊಸ ವಿಜ್ಞಾನಕ್ಕೆ ದಾರಿಮಾಡಿಕೊಟ್ಟಿತು. ಹೀಗಾಗಿ ವಂಶವಾಹಿ ಸಂಶೋಧನೆಯಲ್ಲಿ ನೊಣಗಳೇ ಅಗ್ರಸ್ಥಾನ ಪಡೆದುಕೊಳ್ಳುವಂತಾಯಿತು.
ಇದುವರೆಗೆ ನೊಣಗಳನ್ನು ಕುರಿತು ಒಂದು ಲಕ್ಷಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಕ್ಯಾನ್ಸರ್, ಅಪಸ್ಮಾರ (ಎಪಿಲೆಪ್ಸಿ), ಆಲ್ಜೈಮರ್ ರೋಗಗಳ ಬಗ್ಗೆ ನಮ್ಮ ತಿಳಿವನ್ನು ಹೆಚ್ಚಿಸಿರುವ ನೊಣಗಳು ಭವಿಷ್ಯದ ಔಷಧಿಗಳನ್ನು ಕಂಡುಹಿಡಿಯಲು ಕೂಡ ನೆರವಾಗಲಿವೆ.

**

‘ದಿ ಫ್ಲೈ’ ಅಮೆರಿಕನ್ ಲೇಖಕಿ ಕ್ಯಾಥರಿನ್ ಆನ್ ಪೋರ್ಟರ್ ಬರೆದ ಕತೆ. ಅದರಲ್ಲಿ ಮಿಸ್ಟರ್ ವೂಡಿಫೀಲ್ಡ್ ಎಂಬ ವ್ಯಕ್ತಿ ನಿರೂಪಿಸುವ ಪ್ರಸಂಗವೊಂದನ್ನು ಕೇಳಿ ಅವನ ದಣಿಗೆ ತನ್ನ ಸತ್ತುಹೋಗಿರುವ ಮಗನ ನೆನಪಾಗುತ್ತದೆ. ಆಗ ಅವನು ಅಳಬೇಕೆಂದರೂ ಕಣ್ಣೀರು ಬರುವುದಿಲ್ಲ. ಆಮೇಲೆ ಮಸಿಕುಡಿಕೆಯಲ್ಲಿ ಬಿದ್ದಿರುವ ಒಂದು ನೊಣವನ್ನು ನೋಡಿದ್ದೇ ಅವನಲ್ಲೇನೋ ತಳಮಳವಾಗುತ್ತದೆ. ಆ ನೊಣವನ್ನು ಹೊರಗೆ ತೆಗೆದು ಅದರ ಮೇಲೆ ಒಂದಷ್ಟು ಮಸಿ ಸುರಿದು ಹಿಂಸಿಸುತ್ತಾನೆ. ಅದು ಸತ್ತ ಮೇಲೆ ಅವನೇ ಯಾತನೆಯಿಂದ ನರಳುವಂತಾಗುತ್ತದೆ. ಇಲ್ಲಿನ ವ್ಯಂಗ್ಯವೆಂದರೆ ತನ್ನ ಮಗನ ಸಾವಿಗೆ ಅಳಬೇಕೆಂದಿದ್ದವನು ತನ್ನದೇ ಮೃತ್ಯುವನ್ನು ನೆನೆದು ಒದ್ದಾಡುವುದು.

**

ಸ್ತೆಫಾನ್ ಮಲಾಮೆ ಫ್ರೆಂಚ್ ಭಾಷೆಯ ಸಂಕೇತವಾದೀ ಕವಿಯಷ್ಟೆ. ಅವನು ನೊಣವನ್ನು ಕುರಿತು ಬರೆದ ಕವಿತೆಯನ್ನು ದಶಕಗಳ ಹಿಂದೆ ಮಿರಿಯಮ್ ಗಿಶಾರ್ಡ್ ಎಂಬ ಅಮೆರಿಕನ್ ಮಹಿಳೆ ಓದಿ ತೋರಿಸಿದಾಗ ನನಗೆ ಕೇಳಿಸಿದ್ದು ಇಷ್ಟೆ: ಯ್ಞೀಯ್ಞೀಯ್ಞೀಯ್ಞೀಯ್ಞೀಯ್ಞೀಯ್ಞೀಯ್ಞೀಯ್ಞೀಯ್ಞೀ…. ಹೀಗೆ ಸುಮಾರು ಒಂದೂವರೆ ನಿಮಿಷ ಯ್ಞೀ ಎಂದು ಹೇಳುತ್ತಿರುವಾಗ ಅವರ ತಲೆಯೂ ನೊಣದ ಹಾಗೆ ಸುತ್ತುತ್ತಿತ್ತು!

**

ಕನ್ನಡ ಕಥಾಲೋಕದಲ್ಲಿ, ನವ್ಯರ ಕಾಲದಲ್ಲಿ ‘ಭೂಮಿ ಕಂಪಿಸಲಿಲ್ಲ’ ಮತ್ತು ‘ಪಾಪು-ಪುಟ್ಟು’ ಎಂಬ ಎರಡು ಕಥಾ ಸಂಕಲನಗಳನ್ನು ಹೊರತಂದು ನಂತರ ಬರೆಯುವುದನ್ನೇ ನಿಲ್ಲಿಸಿಬಿಟ್ಟ ಕತೆಗಾರರೆಂದರೆ ಶ್ರೀಕಾಂತ. ಅವರ ‘ನೊಣದ ಬೆನ್ನ ಹಿಂದೆ’ ಎಂಬ ಏಳು ಪುಟಗಳ ಕತೆಯುದ್ದಕ್ಕೂ ಕಥಾನಾಯಕನ ಅತಿ ಕಾಮುಕತೆಯನ್ನು ಪ್ರತಿಫಲಿಸುವ ಎರಡು ನೊಣಗಳಿವೆ. ಉದಾಹರಣೆಗೆ ಈ ಸಾಲುಗಳನ್ನು ಓದಿ: “ತಲೆಯ ಪೈರಿನ ಮೇಲೆ ಬೆರಳುಗಳ ಕುಂಟೆ ಓಡಿಸಿದಾಗ ನೊಣ ನಾಟ್ಯವಾಡಿತು. ಮುಂಗಾಲುಗಳಿಂದ ಮುಖ ಉಜ್ಜಿ ಮೇಕಪ್ ಮಾಡಿಕೊಂಡಿತು. ಜೊಯ್ ಜೊಯ್ ಎಂದು ಹಾರಿ ಹಾರಿ ನಲವಿನ ಆಹ್ವಾನದ ರಾಗ ಹಾಡಿತು. ಅದರ ವೈಯಾರಕ್ಕೆ ತಲೆ ಕಳೆದುಕೊಂಡ ಮನಸ್ಸು. ಜೊತೆ ಕಳೆದುಕೊಂಡ ಮತ್ತೊಂದು ನೊಣ ಬಂತು; ಬೆಲ್ಲಕ್ಕೆ ಬೆಲ್ಲದ ಪ್ರೇಮಿಗಳು ಮುತ್ತುವಂತೆ…. ನೊಣಗಳು ಪರಸ್ಪರ ಸರ್ಕಸ್ ಮಾಡಿದವು, ತಲೆಕೆಳಗಾಗಿ ಹತ್ತಿದವು. ಜರ್ರೆಂದು ಇಳಿದವು. ಅವನ ತಲೆಯ ಗೋಳದ ಸುತ್ತಾ ಗರಗರ ಸುತ್ತಿದವು.”

**

ನೀವು ಕುಳಿತಿರುವ ನೊಣವನ್ನೇನಾದರೂ ನೋಡಿದ್ದೀರಾ? ಅದು ಸುಮ್ಮನೆ ಕುಳಿತಿರುವುದಿಲ್ಲ; ತನ್ನ ಮುಂಗಾಲುಗಳನ್ನು ಎಡೆಬಿಡದೆ ಉಜ್ಜಿಕೊಳ್ಳುತ್ತಿರುತ್ತದೆ. ಮೊನ್ನೆ ಈ ಲೇಖನಕ್ಕಾಗಿ ಯೋಚಿಸುತ್ತಿರುವಾಗ ನನಗೆ ಚಾರ್ಲಿ ಚಾಪ್ಲಿನ್ನನ ಮೂಕಿ ಚಿತ್ರದ ದೃಶ್ಯವೊಂದು ನೆನಪಿಗೆ ಬಂತು. ಅದರಲ್ಲಿ ಅವನು ಥೇಟ್ ನೊಣದಂತೆಯೇ ಚಾಕು ಫೋರ್ಕುಗಳನ್ನು ಉಜ್ಜುತ್ತಿದ್ದ.

**

‍ಲೇಖಕರು G

August 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Arunkumar Habbu

    This article reflects even a fly can be subject for literature and can touch the hearts of readers. Really I feel proud of ample knowledge that Diwakar has. thanks for the article. Arunkumar Habbu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: