ಸಂಧ್ಯಾರಾಣಿ ಕಾಲಂ : ಗುಲ್ಜಾರ್ ಕವಿತೆಗಳು ಮತ್ತು ಗಂಟಿನಲಿ ಕಟ್ಟಿಟ್ಟ ಒಂಟಿತನ


’ಮನಸೇ, ಬದುಕು ನಿನಗಾಗಿ, ಬವಣೆ ನಿನಗಾಗಿ, ನನ ಪ್ರೀತಿಯು ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೆ..?’, ಆಗ ಅಮೃತವರ್ಷಿಣಿ ಚಿತ್ರ ಬಂದ ಹೊಸತು. ಆ ಚಿತ್ರದ ಈ ಹಾಡು ಎಷ್ಟು ಕಾಡಿತ್ತು ಅಂದರೆ ಒಂದು ಕ್ಯಾಸೆಟ್ ತುಂಬಾ ಇದೊಂದೇ ಹಾಡು ರಿಕಾರ್ಡ್ ಮಾಡಿಸಿ, ಆ ಕ್ಯಾಸೆಟ್ ಅನ್ನು ಪದೇ ಪದೇ ಕೇಳುತ್ತಿದ್ದೆ. ಆ ಚಿತ್ರದಲ್ಲಿಯ ಗಂಡ-ಹೆಂಡತಿಯರ ನಡುವಿನ ಪ್ರೀತಿ, ಅನುಬಂಧ, ಸಾಂಗತ್ಯ… ವಾವ್! ನೆಗಟಿವ್ ಅನ್ನಿಸುವ ಪಾತ್ರ ಮಾಡಿದ್ದರೂ ರಮೇಶ್ ಅಭಿನಯ ಎಲ್ಲರ ಮನಸ್ಸನ್ನೂ ಮಿಡಿದಿತ್ತು.
ಆ ಚಿತ್ರದಲ್ಲಿ ಒಂದು ಸನ್ನಿವೇಶ ಬರುತ್ತದೆ. ಗಂಡನ ಸಾವು ಸಂಭವಿಸಿದೆ, ಅದು ಆಕಸ್ಮಿಕವಲ್ಲ, ಕೊಲೆ ಎಂದು ಹೆಂಡತಿಗೆ ಗೊತ್ತಾಗಿದೆ. ಮುಂದಿನ ಹೆಜ್ಜೆ ಇಡುವ ಮೊದಲು ಅವಳು ಸ್ನೇಹಿತರನ್ನೂ, ಗಂಡನ ಆಫೀಸಿನಲ್ಲಿ ಕೆಲಸ ಮಾಡುವವರನ್ನೂ ಕರೆದು ಒಂದು ಪಾರ್ಟಿ ಕೊಡುತ್ತಾಳೆ. ’ನಾನು ಒಬ್ಬ ಅನಾಥೆ, ಹೇಮಂತ್ ಸಹ. ಇಬ್ಬರೂ ನೋಡಿದೆವು, ಪ್ರೀತಿಸಿದೆವು, ಮದುವೆಯಾದೆವು… ಅದ್ಭುತ ದಾಂಪತ್ಯ ನಮ್ಮದು, ಅವರು ನನ್ನ ಪ್ರೇಮಿ, ಗಂಡ, ಬಳಗ, ಮಗು’ ಎಲ್ಲವೂ ಆಗಿದ್ದರು’ ಎಂದೆಲ್ಲಾ ಹೇಳಿ. ನಂತರ ತಾನು ಮರುಮದುವೆ ಆಗಲಿರುವುದಾಗಿ ಹೇಳುತ್ತಾಳೆ. ಅವರಿಬ್ಬರ ಅಪ್ರತಿಮ ದಾಂಪತ್ಯ ಕಂಡಿದ್ದ ಎಲ್ಲರಿಗೂ ಒಂದು ಕ್ಷಣ ಆಘಾತವಾಗುತ್ತದೆ. ಆಗ ಆಕೆ ಹೇಳುತ್ತಾಳೆ, ’ನೋಡಿ ಈಗ ಎಲ್ಲರೂ ಬಂದಿದ್ದೀರಿ, ಎಲ್ಲರೂ ಜೊತೆಯಲ್ಲಿದ್ದೀರಿ, ಸಂತೈಸುತ್ತಿದ್ದೀರಿ… ಆದರೆ ಆಮೇಲೆ…? ಆಮೇಲೆ ನೀವೆಲ್ಲಾ ನಿಮ್ಮ ಮನೆಗಳಿಗೆ ಹೋಗುತ್ತೀರಿ, ಎಷ್ಟೇ ಮುಂದೂಡಿದರೂ ಕಡೆಗೆ ನಾನು ನನ್ನ ಮನೆಗೆ ಹೋಗಬೇಕು. ನಿಮಗೆ ಮನೆಯಲ್ಲಿ ನಿಮ್ಮ ಗಂಡ, ಹೆಂಡತಿ, ಅಪ್ಪ, ಅಮ್ಮ, ತಮ್ಮ, ತಂಗಿ, ಮಕ್ಕಳು ಎಲ್ಲಾ ಇರ್ತಾರೆ, ನಿಮಗಾಗಿ ಕಾಯ್ತಾ ಇರ್ತಾರೆ. ಆದರೆ ನನಗೆ…? ಈಗ ನನ್ನ ಮನೆಯಲ್ಲಿ ಹೇಮಂತ್ ಇಲ್ಲ……’. ಆ ಚಿತ್ರ ನೋಡಿದಾಗಿನಿಂದ ಈ ಗಳಿಗೆಯವರೆಗೂ ಈ ದೃಶ್ಯ ನನ್ನನ್ನು ಕಾಡುತ್ತಿದೆ. ಹಾಗೆ ಆಕೆ ಯಾರೂ ಕಾಯದ, ಯಾರು ಇಲ್ಲದ, ದೀಪ ಹಚ್ಚದ ಮನೆಗೆ ಹೋದಾಗ ಏನನ್ನು ನೋಡುತ್ತಾಳೆ? ಅಲ್ಲಿ ಆಕೆ ಎದುರಿಸುವ ಏಕಾಕಿತನಕ್ಕೆ, ತಬ್ಬಲಿತನಕ್ಕೆ ಒಂದು ಆಕಾರ ಇರಬಹುದಾದರೆ ಅದು ಹೇಗಿರಬಹುದು? ಆ ಒಂಟಿತನದ ಬಣ್ಣ ಯಾವುದು?
ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಈ ಸಂಕಟವನ್ನು ಅನುಭವಿಸಿಯೇ ಇರುತ್ತೇವೆ. ಹಗಲೆಲ್ಲಾ ಹತ್ತು ಹಲವು ಕೆಲಸಗಳನ್ನು ಮೈಮೇಲೆ ಎಳೆದುಕೊಂಡಿರುತ್ತೇವೆ, ಸುತ್ತಲೂ ಹತ್ತಾರು ಸ್ನೇಹಿತರು, ನಗು-ಮಾತು-ಹರಟೆ, ಸರಿ, ಎಲ್ಲಾ ಸರಿ. ಆದರೆ ಎಂಥಹ ಅದ್ಭುತ ಸಂಜೆಯಾದರೂ ಅದು ಮುಗಿಯಲೇ ಬೇಕಲ್ಲ? ಕಡೆಗೊಮ್ಮೆ ಎಲ್ಲರಿಗೂ ಕೈ ಬೀಸಿ ಮನೆಯ ದಾರಿ ಹಿಡಿಯಲೇ ಬೇಕಲ್ಲ? ಹಾಗೆ ಖಾಲಿ ಖಾಲಿ ಮನೆಗೆ ಹೋಗಿ, ಬೀಗ ತೆಗೆದು, ಕತ್ತಲೆ ಮನೆಯನ್ನು ನೋಡಿ ನಿಟ್ಟುಸಿರಿಟ್ಟು, ಮುಖದ ಮೇಲಿನ ಗೆಲುವು, ಬೆನ್ನ ಮೇಲಿನ ಅಹಂಕಾರ, ಕಣ್ಣಲ್ಲಿನ ಆತ್ಮವಿಶ್ವಾಸ, ತುಟಿಯ ಮೇಲಿನ ನಗು ಎಲ್ಲವನ್ನೂ ಒಂದೊಂದಾಗಿ ಕಳಚಿಟ್ಟ ಮೇಲೆ ಎದುರಾಗುವ ಒಂಟಿತನ…. ಅದರ ಬಣ್ಣ ಯಾವುದು?
ಈ ಪ್ರಶ್ನೆ ಎದುರಾಗಲು ಒಂದು ಕಾರಣವಿದೆ. ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆ ಗುಲ್ಜಾರ್ ಕವಿತೆಗಳನ್ನು ಓದಬೇಕು ಅನ್ನಿಸಿ ಪುಸ್ತಕ ಕೈಗೆತ್ತಿಕೊಂಡಾಗ ಓದಿದ ಮೊದಲ ಕವಿತೆ ಇದು :
 
“ನನ್ನ ಬಟ್ಟೆಗಳ ಜೊತೆಯಲ್ಲಿಯೇ ನೇತಾಡುತ್ತಿದೆ ನಗುವಿನ ಬಣ್ಣದ ನಿನ್ನ ಬಟ್ಟೆಗಳೂ.
ಪ್ರತಿ ಸಲ ಅವನ್ನು ಮನೆಯಲ್ಲೇ ಒಗೆಯುತ್ತೇನೆ, ಒಣಗಿಸುತ್ತೇನೆ
ನಾನೇ ಪ್ರೀತಿಯಿಂದ ಒಂದೊಂದನ್ನೂ ಇಸ್ತ್ರೀ ಮಾಡುತ್ತೇನೆ, ಆದರೆ
ಎಷ್ಟೇ ಇಸ್ತ್ರಿ ಮಾಡಿದರೂ ಕೆಲವು ಸುಕ್ಕುಗಳು ಹೋಗುವುದೇ ಇಲ್ಲ…
ಎಷ್ಟೇ ಒಗೆದರೂ ಆರೋಪ, ಕಣ್ಣೀರುಗಳ ಕಲೆ ಮಾಸುವುದೇ ಇಲ್ಲ…”
ಕವನ ಓದುತ್ತಿದ್ದ ಹಾಗೆಯೇ ಗುಲ್ಜಾರ್ ಸದಾ ಧರಿಸುವ ಬಿಳಿ ಬಿಳಿ ಬಟ್ಟೆಗಳ ಚಿತ್ರ ಮನಸ್ಸಿನಲ್ಲಿ ಬಂತು. ಆ ಎಲ್ಲಾ ಬಿಳಿಬಟ್ಟೆಗಳ ನಡುವಲ್ಲಿ ಆ ಒಂದು ಬಣ್ಣದ ವಸ್ತ್ರ ಏನೆಲ್ಲಾ ನೆನಪುಗಳನ್ನು ತಂದು ಸುರಿಯುತ್ತಿರುತ್ತದೆ… ಆ ಬಣ್ಣದ ಬಟ್ಟೆ ಅವಳುಡುವಾಗ ನಗುವಿನ ಬಣ್ಣ ಹೊಂದಿದ್ದು, ದೂರಾದ ಮೇಲೆ ಒಂಟಿತನದ ಬಣ್ಣ ಹೊಂದುವ ವಿಚಿತ್ರ ನೋಡಿ. ಅಲ್ಲಿ ಗುಲ್ಜಾರ್ ಆ ಬಣ್ಣದ ಬಟ್ಟೆಗ ಬಳಸುವ ’ಖುಷ್ ರಂಗ್ ಲಿಬಾಸ್’ ಎನ್ನುವ ಪದವನ್ನೇ ಹಿಡಿದು ಮನಸ್ಸು ಜೀಕುತ್ತಿತ್ತು. ಆಗ ಅನ್ನಿಸಿದ್ದು ಇಲ್ಲಿ ಒಂಟಿತನದ ನೆನಪು ತರುವುದು ಬಿಳಿ ಬಣ್ಣವೋ ಅಥವಾ ಬಣ್ಣದ ವಸ್ತ್ರವೋ…?
ಯಾಕೋ ಗುಲ್ಜಾರ್ ಬರೆದ ಇನ್ನೊಂದು ಸಾಲು ನೆನಪಾಯ್ತು…’ನೀ ದೂರಾದ ಮೇಲೆ ಪ್ರತಿ ಕ್ಷಣವನ್ನೂ ನಾನು ನಿನ್ನೊಂದಿಗೇ ಕಳೆದಿದ್ದೇನೆ..’. ನಾವು ಪ್ರೀತಿಸುವವರು ನಮ್ಮನ್ನು ಸದಾ ನೆನಪು ಮಾಡಿಕೊಳ್ಳಬೇಕು ಅಂತಿದ್ದರೆ ದೂರಾಗಲೇಬೇಕಾ? ಜೊತೆಯಲ್ಲಿರುವಾಗ ಏಕೆ ಸಣ್ಣ ಪುಟ್ಟ ಅವಗುಣಗಳೇ ದೊಡ್ಡದಾಗಿ, ಪ್ರೀತಿ ಸೋತುಹೋಗಿಬಿಡುತ್ತದೆ? ಯಾಕೆ ಜೊತೆಯಲ್ಲಿದ್ದಾಗ ಪ್ರೀತಿಯ ಬೆಲೆ, ಪ್ರೀತಿಸುವವರ ಬೆಲೆ ಅರ್ಥವಾಗುವುದೇ ಇಲ್ಲ? ಯಾಕೆ ವ್ಯಕ್ತಿಗಳು ನೆನಪಾದಲೇ ಹೆಚ್ಚು ಬೇಕೆನ್ನಿಸುವುದು?
ಕವಿತೆ ಓದುವುದು ಎಂದರೆ ಅದೊಂದು ಗಾಡಿ ಹತ್ತಿ ಒಂದೂರಿನಿಂದ ಇನ್ನೊಂದೂರಿಗೆ ಹೋದಂತಲ್ಲ. ಗೆಳತಿ ಎಚ್ ಎನ್ ಆರತಿ ತನ್ನ ಕವಿತೆಯಲ್ಲಿ ಬರೆದಂತೆ, ಕವಿತೆ ’ ಸರ್ರನೆ ಹತ್ತುವುದು, ಜರ್ರನೆ ಇಳಿಯುವುದು’ ಎನ್ನುವ ಲಿಫ್ಟ್ ಪಯಣವಲ್ಲ. ಆ ಕವನದಲ್ಲಿರುವ ಸಾಲುಗಳು
’ ಹತ್ತಬೇಕು, ಮೆಟ್ಟಿಲು ಮೆಟ್ಟಿಲು,
ಒಂದೊಂದೇ. ನಿಂತು, ಕೂತು
ಎಡವಿ, ಬಾಯಾರಿ, ಕುರುಳ ನೇವರಿಸಿ
ಗಾಳಿಯುಸಿರ ಸೇರಬೇಕು…’
ಎನ್ನುವ ಹಾಗೆಯೇ ನನಗೆ ಕವನ ಎಂದರೆ…. ಪ್ರೀತಿ ಎಂದರೆ.

 

ರಾತ್ರಿ ಮಲಗುವ ಮೊದಲು ಒಂದು ಅಥವಾ ಎರಡು ಕವನ ಓದಬೇಕು. ಕವನದ ಸಾಲುಗಳನ್ನೂ, ಪದಗಳನ್ನೂ, ನಡುವಿನ ಮೌನವನ್ನೂ ನನ್ನದಾಗಿಸಿಕೊಳ್ಳಬೇಕು. ಎಲ್ಲಾದರೂ ಒಂದು ಪದ ಪ್ರಶ್ನೆಯಾದರೆ ಅಥವಾ ಅದು ಇನ್ನೇನನ್ನೋ ಧ್ವನಿಸುತ್ತಿದೆ ಎಂದರೆ ಹಾಗೆ ನಡುರಾತ್ರಿಯಲ್ಲಿಯೂ ಗುಲ್ಜಾರ್ ಕವಿತೆಯ ಬಗ್ಗೆ ಏನೇ ಅನುಮಾನ ಬಂದರೂ ಉತ್ತರಿಸುವ ಸ್ನೇಹಿತನಿಗೆ ಮೆಸೇಜ್ ಮಾಡಬೇಕು.
ಮೊನ್ನೆಯೂ ಹೀಗೇ ಆಯಿತು, ಸಾಲುಗಳ ನಡುವೆ ಒಂದು ಪದದ ಅರ್ಥ ಭಾಸವಾಗುತ್ತಿತ್ತು, ಆದರೆ ಸ್ಪಷ್ಟವಾಗುತ್ತಿರಲಿಲ್ಲ. ಕೂಡಲೇ ಮೆಸೇಜ್ ಮಾಡಿದೆ. ’ಅಯ್ಯೋ ಈ ಕವನವನ್ನು ಗುಲ್ಜಾರ್ ದನಿಯಲ್ಲಿ ಕೇಳಬೇಕು ನೀನು’, ಅಲ್ಲಿಂದ ಉತ್ತರ ಬಂತು. ಅಷ್ಟೇ ಅಲ್ಲ, ಆ ಹಾಡನ್ನು ಹುಡುಕಿ, ಗುಲ್ಜಾರ್ ದನಿಯನ್ನು ನನ್ನ ಮೇಲ್ ಬಾಕ್ಸಿಗೆ ತಲುಪಿಸಿದ ಸ್ನೇಹಿತ ನನ್ನ ಒಂಟಿತನದ ಮೌನ ಕದಡಲು ಗುಲ್ಜಾರ್ ದನಿಯನ್ನು ಕಳಿಸಿದ್ದ.


ಆ ಕವಿತೆ ಸಹ ಇಂತಹುದೇ…
“ರಾತ್ರಿಯಿಡೀ ಥಂಡಿ ಗಾಳಿ ಬೀಸುತ್ತಿತ್ತು
ರಾತ್ರಿಯಿಡೀ ನಾವು ಅಗ್ಗಿಷ್ಟಿಕೆಯಲ್ಲಿ ಮೈ ಕಾಯಿಸಿಕೊಳ್ಳುತ್ತಿದ್ದೆವು
ನಾನು ಒಣಗಿದ ನಿನ್ನೆಗಳ ಕೊಂಬೆಗಳನ್ನು ಕಡಿಯುತ್ತಿದ್ದೆ
ನೀನು ಕಳೆದು ಹೋದ ಕ್ಷಣಗಳ ಬಾಡಿದ ಎಲೆಗಳ ತೊಟ್ಟು ಮುರಿಯುತ್ತಿದ್ದೆ.
ನಾನು ಜೇಬಿನಿಂದ ಅರ್ಥವೇ ಇರದ ಎಷ್ಟೋ ಕವನಗಳನ್ನು ತೆಗೆದು ಎಸೆದೆ
ನೀನು ಸಹ ಮುದ್ದೆಯಾಗಿದ್ದ ಪತ್ರವೊಂದನ್ನು ಕೈಗಳಿಂದ ಸಾಫು ಮಾಡಿದೆ.
ನನ್ನ ಕಣ್ಣುಗಳಿಂದ ನಾನು ಕೆಲವು ಬಂಧಗಳನ್ನು ಕತ್ತರಿಸಿಕೊಂಡೆ
ಕೈಗಳಿಂದ ಎಷ್ಟೋ ಹಳಸಿದ ರೇಖೆಗಳನ್ನು ಕೊಡವಿಕೊಂಡೆ.
ನೀನು ಕಣ್ಣುಗಳ ಮೇಲೆ ಒಣಗಿಹೋಗಿದ್ದ ಆ ಕಂಬನಿಯನ್ನು ಜಾರಿಸಿಬಿಟ್ಟೆ
ನಮ್ಮ ತನುವಿನ ಮೇಲೆ ಬೆಳೆಯುತ್ತಿದ್ದ ಆ ಎಲ್ಲವನ್ನೂ ನಾವು
ಕಡಿದು ಉರಿಯುತ್ತಿದ್ದ ಬೆಂಕಿಗೆ ಹಾಕಿದೆವು
ಇಡೀ ರಾತ್ರಿ ನಮ್ಮ ಉಸಿರಿನಿಂದಲೇ ಬೆಂಕಿಯ ಪ್ರತಿ ನಾಲಿಗೆಯನ್ನೂ ಬದುಕಿಸಿದ್ದೆವು
ಎರಡು ದೇಹಗಳ ಅಸುವನ್ನೂ ಉಳಿಸಿಟ್ಟಿದ್ದೆವು
ಸಾಯುತ್ತಿದ್ದ ಒಂದು ಸಂಬಂಧವನ್ನು ನಾವು ಹೀಗೆ ಬೆಚ್ಚಗಿಟ್ಟೆವು… ”
ಸಾಲುಗಳು ಎದೆಯನ್ನು ಮೀಟುತ್ತಿದ್ದವು.
’ಹರಿದು ಹೋದ ಸರದ ಮುತ್ತುಗಳಂತೆ ನನ್ನ ಹಗಲು ರಾತ್ರಿಗಳು ಚಲ್ಲಾಪಿಲ್ಲಿಯಾಗಿವೆ
ನನ್ನನ್ನು ಒಂದಾಗಿ ಪೋಣಿಸಿ ಹಿಡಿದಿಟ್ಟಿದ್ದೆ ನೀನು..’ ಇನ್ನೊಂದು ಸಾಲು ಪಿಸುಗುಟ್ಟಿತು.
’’ಕರುಳ ಕೊರೆವ ಛಳಿ ಇರುಳಿನಲಿ
ರಾಗದಿ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ, ಸುರಿಸುತ ಕಂಬನಿ ಕಳೆದ ರಾಗಗಳ ಕೊರಗಿನಲಿ…’ ಭಾವಗೀತೆಯ ಈ ಸಾಲು ನೆನಪಾಯಿತು.
ಅಷ್ಟು ಸುಲಭವೆ ಕಳೆದ ರಾಗಗಳು ಮತ್ತೆ ಕೈಗೆಟುಕುವುದು? ವಿದಾಯದ, ಒಂಟಿತನದ ರಾಗಗಳು ಯಾಕೆ ಹೀಗೆ ಕಾಡುತ್ತಾವೆ ಉಸಿರಾಡಲೂ ಬಿಡದಂತೆ?
ಯಾಕೆ ಗುಲ್ಜಾರ್
’ನೆನಪಿದೆಯಾ? ಅಂದು
ನನ್ನ ಮೇಜಿನ ಬಳಿ ಕೂತು
ಸಿಗರೇಟಿನ ಡಬ್ಬಿಯ ಮೇಲೆ ಒಂದು ಮರದ ಚಿತ್ರ ಬಿಡಿಸಿದ್ದೆ?
ಆ ಮರ ಈಗ ಹೂಬಿಟ್ಟಿದೆ
ಬಾ, ನೋಡು ಬಾ’
ಎಂದು ಕರೆದು ಕವನ ಬರೆಯುತ್ತಾರೆ?
ಮಾಲಿಕರಿಲ್ಲದ ಮನೆಯ ಸಾಕಿದ ನಾಯಿ ಹಗಲೆಲ್ಲಾ ಹೊರಗೆ ಬಂದು ಊಟ ಮಾಡಿ, ಓಡಿಯಾಡಿದರೂ ರಾತ್ರಿ ಮಲಗುವಾಗ ಖಾಲಿಮನೆಯ ಹೊಸ್ತಿಲಿಗೆ ತಲೆಯಿಟ್ಟು ಯಾಕೆ ರಾತ್ರಿ ಕಳೆಯುತ್ತದೆ? ಯಾಕೆ ನಾಲಿಗೆ ಬಿದ್ದ ಹಲ್ಲಿನ ಒಸಡಿನ ಮೇಲೆ ಪದೇ ಪದೇ ಹೊರಳುವಂತೆ ಮನಸ್ಸು ಪದೇ ಪದೆ ಇಲ್ಲದ ಪ್ರೇಮದ ನೆನಪಿನಲ್ಲಿ ಎಡತಾಕುತ್ತದೆ?
ಅದೇ ಪುಸ್ತಕದ ಇನ್ನೊಂದು ಕವಿತೆ ಹೀಗಿದೆ :
ನನ್ನ ಕೆಲಸದ ನಿಮಿತ್ತ ನಾನು ಆ ಊರಿಗೆ ಹೋದಾಗೆಲ್ಲಾ
ಮತ್ತೆ ಮತ್ತೆ ಅದೇ ಗಲ್ಲಿಗೆ ಹೋಗುತ್ತೇನೆ
ಜನಗಳು ಹೆಚ್ಚು ಓಡಾಡದಾ ಆ ಗಲ್ಲಿ
ಮತ್ತು ಆ ಕೊನೆಯಲ್ಲಿ
ಆಕಳಿಸುತ್ತ ನಿಂತತಿರುವ ಒಂದು ಲೈಟುಕಂಬ.
ಅದೇ ಕಂಬದಡಿಯಲ್ಲಿ ಅವಳಿಗಾಗಿ
ಇಡೀ ಸಂಜೆ ಕಾದು, ನಿರಾಶೆಯಿಂದ
ನಾ ಆ ಊರು ಬಿಟ್ಟು ಹೊರಟಿದ್ದೆ.
ಮಿಣುಗುಟ್ಟುತ್ತಿರುವ ಬೆಳಕಿಗೊರಗಿ ನಿಂತಂತೆ
ಆ ಲೈಟು ಕಂಬ ಇನ್ನೂ ಅಲ್ಲೇ ಇದೆ.
ಮರುಳೆನ್ನಿಸಬಹುದು ನಿಮಗೆ, ಈಗಲೂ ನಾನು
ಆ ಕಂಬದ ಬಳಿ ಹೋಗಿ, ಗಲ್ಲಿಯವರ ಕಣ್ಣುತಪ್ಪಿಸಿ
ಪಿಸುನುಡಿಯಲ್ಲಿ ಕೇಳುತ್ತೇನೆ,
ನಾ ಹೊರಟ ಮೇಲಾದರೂ ಸರಿ, ಅವಳು ಬಂದಿದ್ದಳಾ?
ಅವಳು ಬಂದಿದ್ದಳಾ? “
ಅಕಸ್ಮಾತ್ ಅವಳು ಎದುರಿಗೆ ಸಿಕ್ಕೇಬಿಟ್ಟರೆ? ಆ ಸಂಬಂಧದ ಬಿಸುಪು ಹಾಗೆಯೇ ಉಳಿದಿರುತ್ತದಾ? ಆ ಸಂಬಂಧದ ಉಸಿರು ಹಾಗೆಯೇ ಉಳಿದಿರುತ್ತದಾ?
“ನನ್ನ ಎದುರಿಗೆ ಬಂದೆ, ನೋಡಿದೆ, ಮಾತನ್ನೂ ಆಡಿದೆ
ಮುಗುಳ್ನಕ್ಕೆ ಸಹ, ಹಳೆಯ ಯಾವುದೋ ಪರಿಚಯದ ನೆನಪಿನಿಂದ ಅನ್ನುವಂತೆ.
ಕಳೆದ ದಿನಗಳ ಪತ್ರಿಕೆಯಂತೆ ಕೈಗೆತ್ತಿಕೊಂಡೆ, ನೋಡಿದೆ, ಪಕ್ಕಕ್ಕಿಟ್ಟೆ…”
ಅಲ್ಲವಾ? ವಾಪಸ್ಸು ಬರುವವರಿಗಾಗಿ ದಿನಗಳೂ ಕಾಯುವುದಿಲ್ಲಾ, ಮನಗಳೂ ಕಾಯುವುದಿಲ್ಲ.
ಯಾಕೋ ಗುಲ್ಜಾರ್ ಕವಿತೆಗಳ ಗುಂಗು ನನ್ನನ್ನು ಬಿಡುತ್ತಿಲ್ಲ. ಹಗಲೆಲ್ಲಾ ಜಗ ಸುತ್ತಿ, ಮೈಮರೆತು, ಮನಸ್ಸು ಮರೆತು ಅಲೆದಾಡಿದರೂ ಇರುಳಾದರೆ ಖಾಲಿ ಮನೆಗೆ ವಾಪಸಾಗುವ ಒಂಟಿತನದಂತೆಯೇ, ರಾತ್ರಿ ಆಯಿತು ಎಂದರೆ ನಾನು ಈ ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತೇನೆ ಮತ್ತು ಚಿಂತಿಸುತ್ತೇನೆ. ಕವಿ ತನ್ನ ನೋವನ್ನೆಲ್ಲಾ ಕವನದಲಿ ಗಂಟುಕಟ್ಟಿ ಎತ್ತಿಡುತ್ತಾನೆ ಎಂದರೆ, ನಾವು ಆ ಗಂಟನ್ನು ಏಕೆ ಕೈಗೆತ್ತಿಕೊಳ್ಳುತ್ತೇವೆ? ಏಕೆ ಆ ಗಂಟನ್ನು ಬೆರಳುಗಳಿಂದ ಸಡಿಲಿಸಿ, ನೋವನ್ನು ಮಡಿಲಿಗೆ ಸುರಿದುಕೊಳ್ಳುತ್ತೇವೆ? ನಮ್ಮ ಯಾವು ನೋವನ್ನು ಆ ಗಂಟಿನಲ್ಲಿ ಹುಡುಕುತ್ತೇವೆ? ಅಲ್ಲಿರುವುದು ಕವಿಯ ಕಂಬನಿಯೋ ಅಥವಾ ನಮ್ಮ ಬಿಕ್ಕೋ? ಅರ್ಥವಾಗುತ್ತಿಲ್ಲಾ ನನಗೆ…. ಅಲ್ಲಿ ನಾವು ಕವಿಯ ಪ್ರೀತಿಯನ್ನು ಹುಡುಕುತ್ತಿರುವೆವೋ, ನಮ್ಮ ಒಂಟಿತನವನ್ನು ತಡಕುತ್ತಿರುವೆವೋ…?
 

‍ಲೇಖಕರು G

March 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. bharathi b v

    ಯಾಕಿಷ್ಟು ಭಾವುಕತೆ ತರ್ತಿದೆ ಈ ಬರಹ … ಆಳದಲ್ಲೆಲ್ಲೋ ಹುದುಗಿಟ್ಟ ನೋವಿನ ತಂತಿ ಒಂದೇ ಒಂದು ಸಲ ಎಳೆದು ಬಿಟ್ಟ ಹಾಗೆ …?

    ಪ್ರತಿಕ್ರಿಯೆ
  2. Anil Talikoti

    “ಯಾಕೆ ವ್ಯಕ್ತಿಗಳು ನೆನಪಾದಲೇ ಹೆಚ್ಚು ಬೇಕೆನ್ನಿಸುವುದು?” ಸಾಲು ಸಾಲು ಸುಂದರ ಸಾಲುಗಳು ಸಂಧ್ಯಾಜಿ

    ಪ್ರತಿಕ್ರಿಯೆ
  3. mmshaik

    heart touching..sandhya..saayuttidda sambandhvannu bechchgittevu..entha saalugaLu….. ohoh!!!…………………..

    ಪ್ರತಿಕ್ರಿಯೆ
  4. ಲಕ್ಷ್ಮೀಕಾಂತ ಇಟ್ನಾಳ

    ಸಂಧ್ಯಾರಾಣಿಯವರ ಮಾತುಗಳು ನನ್ನ ಹೃದಯದಿಂದ, ನರ ನರಗಳಿಂದ ಹಾದು ಬಂದಂತನಿಸಿದವು.

    ಪ್ರತಿಕ್ರಿಯೆ
  5. ದಿವ್ಯ ಆಂಜನಪ್ಪ

    ನಾವೂ ಗಂಟು ಬಿಚ್ಚುತ್ತಿರುವೆವು…. !! 🙂
    Very nice madam 🙂

    ಪ್ರತಿಕ್ರಿಯೆ
  6. mallikarjun talawar

    NAA HORATA MELADARU AVALU BANDIDDALA? WHAT LINES. REALLY NICE MADAM JI

    ಪ್ರತಿಕ್ರಿಯೆ
  7. Vaanee Suresh.

    ಎಷ್ಟು ಚೆಂದದ ಮನದಾಳದ ಮಾತುಗಳು! ನೀರು ಕುಡಿದಷ್ಟು ಸುಲಭವಾಗಿ ಸರಳವಾಗಿ ನೀವದನ್ನು ಬಿಂಬಿಸುವ ಪರಿ!! ಹೋದ ವಾರದ ನಿಮ್ಮ ಲೇಖನವನ್ನು ಮೆಚ್ಚಿ ಮೆಲಕುಹಾಕುವಾಗಲೇ ನಿಮ್ಮ ಲೇಖನಿಯಿಂದ ಮತ್ತೊಂದು ಸಿದ್ಧವಾಗಿರುತ್ತದೆ!
    ” ಯಾಕೆ ವ್ಯಕ್ತಿಗಳು ನೆನಪಾದಲೇ ಹೆಚ್ಚು ಬೇಕೆನ್ನಿಸುವುದು? ”
    ” ಕವಿ ತನ್ನ ನೋವನ್ನೆಲ್ಲಾ ಕವನದಲಿ ಗಂಟುಕಟ್ಟಿ ಎತ್ತಿಡುತ್ತಾನೆ ಎಂದರೆ, ನಾವು ಆ ಗಂಟನ್ನು ಏಕೆ ಕೈಗೆತ್ತಿಕೊಳ್ಳುತ್ತೇವೆ? ಏಕೆ ಆ ಗಂಟನ್ನು ಬೆರಳುಗಳಿಂದ ಸಡಿಲಿಸಿ, ನೋವನ್ನು ಮಡಿಲಿಗೆ ಸುರಿದುಕೊಳ್ಳುತ್ತೇವೆ? ನಮ್ಮ ಯಾವು ನೋವನ್ನು ಆ ಗಂಟಿನಲ್ಲಿ ಹುಡುಕುತ್ತೇವೆ? ಅಲ್ಲಿರುವುದು ಕವಿಯ ಕಂಬನಿಯೋ ಅಥವಾ ನಮ್ಮ ಬಿಕ್ಕೋ? ಅರ್ಥವಾಗುತ್ತಿಲ್ಲಾ ನನಗೆ ” – ಅದ್ಭುತ ಸಾಲುಗಳು!!….

    ಪ್ರತಿಕ್ರಿಯೆ
  8. ರೇಣುಕಾ ನಿಡಗುಂದಿ

    ವಾಪಸ್ಸು ಬರುವವರಿಗಾಗಿ ದಿನಗಳೂ ಕಾಯುವುದಿಲ್ಲಾ, ಮನಗಳೂ ಕಾಯುವುದಿಲ್ಲ.

    ಪ್ರತಿಕ್ರಿಯೆ
  9. Rohini Satya

    ಮೇಡಂ! ಭಾವಪೂರ್ಣ ಲೇಖನ. ಒಂದಲ್ಲ ಒಂದು ಸಮಯ ಎಲ್ಲರನ್ನೂ ಕಾಡುವ ಒಂಟಿತನವು ಭಾವವಾಗಿ, ಗುಲ್ಜಾರ್ ಅವರ ಕವಿತೆಗಳು ದ್ವನಿಯಾಗಿ, ನಿಮ್ಮ ಅಂತರಂಗ ರಾಗವಾಗಿ …..
    ಹರಿದುಹೋದ ಸರದ ಮುತ್ತುಗಳ ಹಗಲು ರಾತ್ರಿಗಳ ಪೋಣಿಸಿದ ಹಾಡು….
    ಈ ಗುಲ್ಜಾರ್….ಕಟ್ಟಿಟ್ಟ ಒಂಟಿತನ ಹಾಡು!

    ಪ್ರತಿಕ್ರಿಯೆ
  10. Sandhya, Secunderabad

    Gulzar’ra barahave ee tarahaddu allava? Superb article madam….
    Naavugalu nammade ada vaiyuktika novugalannu avara kavanagalalli huduktiveno…Avara aa saalugalannu odi, bhaavukaraagi, onderadu kanneera hani kenne meLinda jaaridagale ondishtu manassige samadhanaveno…gottilla!

    ಪ್ರತಿಕ್ರಿಯೆ
  11. guru sullia

    ಖಾಲಿ ಖಾಲಿ ಮನೆಗೆ ಹೋಗಿ, ಬೀಗ ತೆಗೆದು, ಕತ್ತಲೆ ಮನೆಯನ್ನು ನೋಡಿ ನಿಟ್ಟುಸಿರಿಟ್ಟು, ಮುಖದ ಮೇಲಿನ ಗೆಲುವು, ಬೆನ್ನ ಮೇಲಿನ ಅಹಂಕಾರ, ಕಣ್ಣಲ್ಲಿನ ಆತ್ಮವಿಶ್ವಾಸ, ತುಟಿಯ ಮೇಲಿನ ನಗು ಎಲ್ಲವನ್ನೂ ಒಂದೊಂದಾಗಿ ಕಳಚಿಟ್ಟ ಮೇಲೆ ಎದುರಾಗುವ ಒಂಟಿತನ…. ಅದರ ಬಣ್ಣ ಯಾವುದು?..
    ಸೊಗಸಾದ ಬರಹ, ಬಾವನೆಗಳ ತಾಕಲಾಟ..

    ಪ್ರತಿಕ್ರಿಯೆ
  12. Dr.Venkata subba rao

    ಅವಳಿದ್ದ ಗಲ್ಲಿಗೆ ಹೋಗಿ ,ಅವಳಲ್ಲಿದ್ದ ಎಷ್ಟೋ ವರ್ಷಗಳ ನಂತರವೂ ಜನರ ಕಣ್ಣು ತಪ್ಪಿಸಿ , ನಾನು ಬರುವ ದಿನ ನನಗಾಗಿ ಅವಳು ಎದುರುನೋಡುತ್ತಾ ನಿಲ್ಲುತ್ತಿದ್ದ ಮನೆಯ ಮುಂದಿನ ಬಾಲ್ಕನಿಯಂಥ ಒಂದು ಜಾಗದ ಮುಂದೆ ಸುಮ್ಮನೆ ಕೆಲ ಕ್ಷಣ ನೋಡಿ ಬರುತ್ತಿದ್ದ ಆ ಸಂಗತಿ ಗುಲ್ಶಾರ್ ಗೆ ಹೇಗೆ ಗೊತ್ತಾಯ್ತು ಮಾರಾಯಾ ???!!! ಅಂತ ಏಕ್ದಂ ಆಶ್ಚರ್ಯ ಆಗೋಯ್ತು ! ಗುಲ್ಜಾರ್ ಬರೆದಂತೆ ಅವಳಿದ್ದ ಗಲ್ಲಿಗೆ ಹೋಗಿ ಆ ಲೈಟು ಕಂಬವನ್ನು ನೋಡಿ ಬರುವಂಥ ತೀವ್ರತೆಯ ಭಾವವೊಂದನ್ನು ಹುಟ್ಟಿಸಲು ಕೇವಲ ಪ್ರ್ರೀತಿಗೆ ಮಾತ್ರ ಸಾಧ್ಯ !ಆ ಒಂದು ಉತ್ಕಟತೆ ಆ ಒಂದು nostalgic value ಪ್ರೀತಿಗೆ ಮಾತ್ರ ಇರೋ ಅಂಥದ್ದು ! ಒಹ್ ,ಈ ಪ್ರೀತಿ (ಅಂದರೆ ‘ನಿಜವಾದ ಪ್ರೀತಿ’ ಕೇವಲ ಬೇಕೆಂಬ ವಾಂಛೆ ಅಲ್ಲ ) ಎಂಬ nector ಬದುಕಿನಲ್ಲಿ ಸಿಕ್ಕಿಬಿಡುವಂಥ ಮನುಷ್ಯರು ಅದೆಷ್ಟು ಪುಣ್ಯವಂತರು ! ‘Love is the most powerful of all human emotions’ ,ಅನ್ನೋ ಸೈಕಾಲಜಿ ಹೇಳೋ ಮಾತು ,”ಹರ್ ಕಿಸೀಕೊ ನಹಿ ಮಿಲತಾ ಏ ಪ್ಯಾರ್ ಜಿಂದಗೀ ಮೆ ,ಖುಷ್ ನಸೀಬ್ ಹೈ ವೋ ಜಿನಕೋ ಹೈ ಮಿಲೇ , ಏ ಬಹಾರ್ ಜಿಂದಗೀ ಮೇ ! ಅನ್ನೋ ಆ ಜಾನ್ ಬಾಜ್ ಸಿನಿಮಾ ಹಾಡು ಇವೆರಡನ್ನೂ ಈ ಲೇಖನ ನೆನಪು ಮಾಡಿತು . ಸುಂದರ ಬರಹ . Gulzaars poetry continues to haunt as the memories of lost love does !

    ಪ್ರತಿಕ್ರಿಯೆ
  13. jagadishkoppa@gmail.com

    ಸಂಧ್ಯಾ, ಕವಿತೆಗಳು ಚನ್ನಾಗಿವೆ. ಗುಲ್ಜಾರ್ ಅವರನ್ನು ಬದುಕಿನುದ್ದಕ್ಕೂ ತೀವ್ರವಾಗಿ ಕಾಡಿದ್ದು, ಒಂದು ಅವರು ಹುಟ್ಟಿ ಬೆಳೆದು ನಂತರ ತೊರೆದು ಬಂದ ನೆಲ, ದೇಶದಲ್ಲಿ ನಡೆದ ಎರಡು ಕೋಮು ಗಲಭೆಗಳು ಮತ್ತು ಅಂತಿಮವಾಗಿ ಅವರ ಬಾಳ ಸಂಗಾತಿಯಾಗಿ ಬದುಕಿ, ಅವರಿಂದ ದೂರವಾದ ನಟಿ ರಾಖಿಯ ನೆನಪುಗಳು. ಇವೆಲ್ಲವೂ ಅವರ ಒಂದಲ್ಲ ಒಂದು ಕವಿತೆಯಲ್ಲಿ ಮರು ಹುಟ್ಟು ಪಡೆದಿವೆ. ನನ್ನ ಇಷ್ಟದ ಕವಿ ಮತ್ತು ಸಿನಿಮಾ ನಿರ್ದೇಶಕ ಅವರು.
    ಜಗದೀಶ್ ಕೊಪ್ಪ

    ಪ್ರತಿಕ್ರಿಯೆ
  14. Radhika

    ಸಂಧ್ಯಾ, ಹಿಂದಿ ಭಾಷೆಯ ಗೀತೆಗಳನ್ನು ಹೆಚ್ಚು ಕೇಳದ, ಕವನಗಳನ್ನು ಎಂದಿಗೂ ಓದದ ನನ್ನಂಥವರಿಗೂ ಗುಲ್ಜಾರ್ ಅವರ ಕವಿತೆಗಳ ಸೊಬಗನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು!

    ಪ್ರತಿಕ್ರಿಯೆ
  15. Nalla Tambi

    ಆ ಕಣ್ಣು ಸೂಸುವ ಪರಿಮಳವ ನಾ ಕಂಡೆ
    ಆದ ಮುಟ್ಟದಿರು , ಬಾಂಧವ್ಯದ ಯಾವ ಹೆಸರನು ಕೊಡದಿರು
    ಅದು ಸಂವೇದನೆ ಆದನು ಹೃದಯದಿಂದ ಸ್ಪರ್ಶಿಸು
    ಪ್ರೇಮವ ಪ್ರೇಮವಾಗೆ ಇರಲುಬಿಡು ಯಾವ ಛಾಪು ಒತ್ತದಿರು
    ಪ್ರೇಮ ಪದವಲ್ಲ , ಪ್ರೇಮ ದನಿಯಲ್ಲ
    ಪ್ರೇಮದ ಮಾತು ಮೌನ, ಅದು ಆಲಿಸುವುದು ಮೌನವನೇ
    ಪ್ರೇಮವ ತಡೆಯಲಾಗದು, ಆಳಿಸಲಾಗದು, ಅದು ನಿಲ್ಲದೆಲ್ಲೂ
    ಬೆಳಕಿನ ಕಿರಣವದು ಯುಗಗಳಿಂದ ಹೊಳೆಯುತಿದೆ
    ನಗುವಾಗಿ ಅರಳಿರುವುದು ಕಣ್ಣಂಚಿನಲಿ
    ಮಿಂಚಂತೆ ಅವಿತಿರುವುದು ಕಣ್ಣ ರೆಪ್ಪೆಯಲಿ
    ತುಟಿ ಬಿರಿದು ಮಾತನಾಡದು ಆದರೆ
    ಹೇಳದ ಸಾವಿರ ಕಥೆಗಳು ಅಡಗಿರುವುದು
    -ಗುಲ್ಜಾರ್
    ಆ ಅರ್ಧ ವೃತ್ತದ ಸಮುದ್ರ ದಂಡೆಯ ರಸ್ತೆಗೆ
    ನಾಳೆ ನಿನ್ನನು ವಿಹರಿಸಲು ಕರೆದುಹೋಗುವೆ
    ರಾತ್ರಿಯಲಿ ಅದು ಕೊರಳ ಹಾರದಂತೆ ಮಿಣುಗುವುದು
    ಅಲ್ಲಿಯ ಸಾರೋಟಿನಲ್ಲಿ ಸುತ್ತಾಡುವ
    ಕುದುರೆಯ ಗೊರಸಿನ ತಾಳಕ್ಕೆ
    ನಾವು ರಾಜರಾಣಿಯರಂತೆ ಭ್ರಮಿಸಬಹುದು
    ಆ ಗೇಟ್ ವೇ ಆಫ್ ಇಂಡಿಯ ಬಳಿಯ ತಾಜ್ಮಹಲ್ ಹೋಟೆಲಿಗೆ
    ಹನಿಮೂನ್ಗಾಗಿ ಬಂದಿರುವ ವಿದೇಶಿ ಜೋಡಿಗಳ ಕಾಣಬಹುದು
    ಆದರೆ ಈ ರಾತ್ರಿ ನಾವು ಎರಡು ಇಟ್ಟಿಗೆಗಳ ಈ ಪುಟ್ಪಾತಿನ ಮೇಲಿರಿಸಿ
    ಇರಾನಿ ಹೋಟೆಲಿನಿಂದ ತಂಡ ಬಿರಿಯಾನಿಯ ಬಿಸಿ ಮಾಡುವ
    ಮತ್ತು ಆ ಮೆಟ್ಟಿಲ ಕೆಳಗೆ ನಮ್ಮ ಹನಿ ಮೂನನ್ನು ಆಚರಿಸುವ
    gulzar

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: