ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತೆ ಮುಗಿಯುವ ಹೊತ್ತಿನಲ್ಲಿ

 ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಇನ್ನೇನು ಸಾವು ನಿಗದಿಯಾಗಿದೆ
ಮೈಮೇಲೆ ಹಿಮದ ಹಲಗೆ ಎಳೆಯಲು
ಸಜ್ಜಾದಂತಿದೆ ಎಲ್ಲರೂ

ಈ ಒಬ್ಬಂಟಿ ವಾರ್ಡ್ ಗೆ ಬರುವಾಗ
ಇದ್ದ ನಾಲ್ಕು ಗೋಡೆ, ಒಂದು ಬಾಗಿಲು,
ಒಂದು ಕಿಟಕಿ, ಮೂಲೆಯ ಟಾಯ್ಲೆಟ್,
ತಲೆ ಮೇಲೆ ತಿರುಗುತ್ತಿದ್ದ ಫ್ಯಾನು
ಈಗ ಎಲ್ಲವೂ ಸ್ತಬ್ಧ

ಮಂಕಿನಂತೆ ಸಾವು ಕವಿಯತೊಡಗಿದಾಗ
ಹುಚ್ಚು ಬದುಕಾದರೂ ಲೇಸೆಂಬ ಯೋಚನೆ
ಬದುಕು ಹುಚ್ಚಾಗಿದ್ದಾಗ ಸಾವಿನ ಯಾತನೆ

ಬದುಕಲು
ಎಲ್ಲ ಅವಕಾಶಗಳು ಮುಚ್ಚಿರುವಾಗ
ಎದೆಯ ಅಂಗಳದಲ್ಲಿ
ತೊಡೆ ಮುರಿದುಕೊಂಡ ನೆನಪುಗಳು
ಸಾವಿಗಿಂತ ಮಿಗಿಲಾಗಿ ಕೊಲ್ಲುತಿವೆ

ಹಾಲುಗಾಳಿನ ಜೋಳದ ತೆನೆಗಳು
ಎಳೇ ಎಳ್ಳಿನ ಕಾಯಿಗಳು
ಸಾಸಿವೆ ಮೊಗ್ಗು
ಉದ್ದು ಮಡಕೆ ಹೆಸರು ತೊಗರಿ
ಹತ್ತಾರು ಅಕ್ಕಡಿ ಬಾಳು
ಸುಖಾಸುಮ್ಮನೇ
ಅಲ್ಲಿ ಒಣಗುತ್ತಿರುವುದು
ನನ್ನ ಕರುಳ ಬಗೆದು
ಕಣ್ಣೆದುರೇ ಚೂರು ಮಾಡಿದಂತಾಗುತ್ತಿದೆ

ಎಲ್ಲಿಂದ ಬಂತಿದು ಸಾವು
ನಮ್ಮ ಹೊಲ ಮನೆ ಊರಲ್ಲಿಲ್ಲದ್ದು?
ಕೂತು ಕೆಮ್ಮಿದವವನನ್ನೇ ಹೊರಡೆಂದರು
ಈ ಸಾವಿನ ಮನೆಗೆ

ಏನೋ ಮಂಕಾಗುತ್ತಿದೆ
ಮಣ್ಣು ಕಲ್ಲು ಗಿಡ ಮರ
ಶಬ್ದ ನಾದ ಎಲ್ಲವೂ ಸಾಯುತಿವೆ
ನನ್ನೊಳಗೆ

ಇದೇನಿದು
ಸಂತೆ ಮುಗಿಯುವ ಹೊತ್ತಿನಲ್ಲಿ
ಉಳಿದ ಪದಾರ್ಥವ
ಸೋವಿಗೆ ಮಾರಿ
ಗುಡಾರ ಕೊಡವೇಳುವಂತೆ
ಜೀವ ಮಾರಿ ಹೊರಡುವುದೇ?

ನನ್ನೊಳಗಾಡುವ ಉಸಿರಿಗೂ
ಅನ್ಯರ ಒಡೆತನ
ಅಣು ವೈರಿಯ ಕಾರುಬಾರು
ನನ್ನ ನೆತ್ತರ ಮೇಲೆ

ಎಚ್ಚರವಿರಿ ನನ್ನಂತೆ ಎಚ್ಚರ ತಪ್ಪದೆ
ವೈರಿ ಮೈಯೊಳಗೆ ಹೊಕ್ಕರೆ
ಎಲ್ಲಾ ಶಸ್ತ್ರಗಳೂ ಸಾಯುತ್ತವೆ

‍ಲೇಖಕರು nalike

22 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading