ದಿವಾನ ಸಾಹೇಬರು ಮತ್ತು ಪತ್ರಿಕಾ ಸಂಪಾದಕರು

ಪಾಲಹಳ್ಳಿ ವಿಶ್ವನಾಥ್

ಐದನೆಯ ಜನವರಿ 1959ನೆಯ ಇಸವಿ. ಅಂದು ಬೆಂಗಳೂರಿನ ವಿಂಡ್ಸರ್ ಲಾಡ್ಜ್‌ನಲ್ಲಿ 76 ವಯಸ್ಸಿನ ಒಬ್ಬ ಗಣ್ಯ ವ್ಯಕ್ತಿಯ ಮರಣವಾಗುತ್ತದೆ. ಆ ಸುದ್ದಿಯನ್ನು 65 ವರ್ಷಗಳ ವ್ಯಕ್ತಿಯೊಬ್ಬರು ತಮ್ಮ ದಿನಚರಿಯಲ್ಲಿ ಗುರುತು ಮಾಡಿಕೊಳ್ಳುತ್ತಾರೆ. ದಿನಚರಿಯಲ್ಲಿ ಬರೆದಿಡುವಂತಹ ವಿಶೇಷವೇನಿತ್ತು? ದೊಡ್ಡ ವ್ಯಕ್ತಿಗಳ ಬಗ್ಗೆ ಇತರರು ಹೀಗೆ ಬರೆದಿಟ್ಟುಕೊಳ್ಳುವುದು ಅಪರೂಪವೇನಲ್ಲವಲ್ಲ! ಆದರೂ ಬೇರೆ ಯಾವುದೋ ರೀತಿಯಲ್ಲಿ ಅವರಿಗೆ ದಿವಂಗತರಾದ ಈ ವ್ಯಕ್ತಿ ಮುಖ್ಯವಾಗಿದ್ದಿರಬಹುದಲ್ಲವೇ? ಹಾಗೂ ಅವರು ಬರೆದುಕೊಂಡಿದ್ದೇನು? ಸರ್ ಮಿರ್ಜಾರು (1883-1959) “ಹತ್ತೂವರೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು !”

ದಿವಾನರು:
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರ ಖಾಸಗಿ ಕಾರ್ಯದರ್ಶಿಯಾಗಿದ್ದು ಮಾಜಿ ದಿವಾನ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯನವರ ಶಿಫಾರಿಸಿನ ಮೇಲೆ ತಮ್ಮ 43ನೆ ಯ ವಯಸ್ಸಿನಲ್ಲಿ ದಿವಾನರಾಗಿ ಹದಿನಾರು ವರ್ಷ (1926-1941) ಮಿರ್ಜಾರವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರಲ್ಲವೆ? ವಿಶ್ವಕೋಶಗಳ ಪುಟಗಳನ್ನು ತೆಗೆದರೆ ಸಂಸ್ಥಾನಕ್ಕೆ ಮತ್ತು ಬೆಂಗಳೂರು/ಮೈಸೂರು ನಗರಗಳಿಗೆ ಮಿರ್ಜಾರವರ ಅನೇಕ ಕೊಡುಗೆಗಳು ಕಾಣುತ್ತವೆ. ಆಗಿನ ಮೈಸೂರಿನಲ್ಲಿ ಅನೇಕ ಕೈಗಾರಿಕೆಗಳನ್ನು ಪ್ರಾರಂಭಿಸುವಲ್ಲಿ/ಸುಧಾರಿಸುವುದರಲ್ಲಿ ಮಿರ್ಜಾ ಪ್ರಮುಖ ಪಾತ್ರ ವಹಿಸಿದ್ದರು. ಅವರ ಆಳ್ವಿಕೆಯಲ್ಲಿ ಅನೇಕ ಹಳ್ಳಿಗಳಿಗೆ ವಿದ್ಯುತ್ ಶಕ್ತಿ ದೊರಕಿತು. ಮೈಸೂರಿನ ದಿವಾನರಲ್ಲೆಲ್ಲಾ ವಿಶ್ವೇಶ್ವರಯ್ಯವರು ಮತ್ತು ಮಿರ್ಜಾರು ಇಡೀ ಭಾರತದಲ್ಲಿಯೆ ಖ್ಯಾತಿ ಗಳಿಸಿದ್ದರು. ವಿಶ್ವೇಶ್ವರಯ್ಯನವರು ಕೈಗಾರಿಕೆಗಳನ್ನು ಸ್ಥಾಪಿಸಿದರು ಮತ್ತು ಮಿರ್ಜಾರವರು ನಗರಗಳನ್ನು ಸುಂದರೀಕರಣಗೊಳಿಸಲು ಪ್ರಯತ್ನಿಸಿದರು. 20ನೆಯ ಶತಮಾನದ ಪೂರ್ವಾರ್ಧದ ಮೈಸೂರಿನ ಜೀವನದಮೇಲೆ ಹಲವಾರು ಹೆಜ್ಜೆ ಗುರುತುಗಳನ್ನು ಖಂಡಿತವಾಗಿ ಬಿಟ್ಟು ಹೋಗಿದ್ದರು ಮಿರ್ಜಾರವರು. ಇದೆಲ್ಲದರ ಜೊತೆ ಮಿರ್ಜಾರಿಗೆ ಗಾಂಧೀಜಿಯವರ ಸ್ನೇಹವೂ ಇದ್ದಿತು.

ಇಷ್ಟೇನೋ ಅಥವಾ ದಿವಾನರ ಮರಣ ಆ ವ್ಯಕ್ತಿಯ ಮನಸ್ಸನ್ನು ತಾಕಲು ಇನ್ನೇನಾದರೂ ಕಾರಣವಿತ್ತೇ? ಮೇಲೆ ಬರೆದಿರುವದೆಲ್ಲಾ ಶ್ಲಾಘನೀಯ ವಿಷಯಗಳೇ ಆಯಿತಲ್ಲ! ಆದರೆ ಅವರ ಆಳ್ವಿಕೆಯಲ್ಲಿ ಏರುಪೇರುಗಳು ಇದ್ದಿರಬೇಕಲ್ಲವೇ! ೧೮೮೧ ರಲ್ಲಿ ಬ್ರಿಟಿಷ್ ಸರಕಾರ ಚಾಮರಾಜ ಒಡೆಯರಿಗೆ ಅಧಿಕಾರ ಹಿಂತಿರುಗಿ ಕೊಟ್ಟರೂ ಬ್ರಿಟಿಷ್ ಸರ್ಕಾರದ ಹೆದರಿಕೆ ಮಹಾರಾಜರಿಗೆ ಇದ್ದೇ ಇದ್ದಿತು. ಆದ್ದರಿಂದ ಮಹಾರಾಜರು ಸರಕಾರವನ್ನು ನಡೆಸುವಾಗ ಈ ಅಂಶವನ್ನು ಗಮನದಲ್ಲಿಟ್ಟು ಕೊಂಡೇ ಇದ್ದರು . ಬ್ರಿಟಿಷರು ನೇರವಾಗಿಯೋ, ಅಥವಾ ದಿವಾನರುಗಳ ಮೂಲಕ ಪರೋಕ್ಷವಾಗಿಯೋ, ಮೈಸೂರು ರಾಜ್ಯದಲ್ಲೂ ಪೂರ್ಣ ಸ್ವಾತಂತ್ರವನ್ನು ವಿರೋಧಿಸುತ್ತಲೆ ಇದ್ದರು. ಕಾಂಗ್ರೆಸ್ ನಲ್ಲಿ ಗಾಂಧೀಜಿ ಮತ್ತು ಇತರರು ಈ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿಸದೆ ರಾಜ್ಯಗಳ ರಾಜಕೀಯದಲ್ಲಿ ಕೈಹಾಕಬಾರದು ಎಂಬ ಅಭಿಪ್ರಾಯವನ್ನು ಹಲವಾರು ಕಾಂಗ್ರೆಸ್ ಅಧಿವೇಶನಗಳಲ್ಲಿ ವ್ಯಕ್ತಪಡಿಸಿದ್ದರು. ಮೈಸೂರನ್ನು ರಾಮರಾಜ್ಯವೆಂದು ಗಾಂಧಿಯವರು ಹೊಗಳಿದ್ದರು ಕೂಡ.

ಮೈಸೂರು ಸಂಸ್ಥಾನವನ್ನು ನಡೆಸಿಕೊಂಡು ಬಂದ ದಿವಾನರೆಲ್ಲ ಸಮರ್ಥ ವ್ಯಕ್ತಿಗಳೇ! ಆದರೆ ಅವರಲ್ಲಿ ಕೆಲವರು  ಸ್ವರಾಜ್ಯದ ಅಭಿಮಾನಿಗಳಾಗಿದ್ದರೂ ಮೈಸೂರಿನೊಳಗೆ ಸ್ವಾತಂತ್ರ್ಯಪೂರಕ ಅಭಿಪ್ರಾಯಗಳು ಕಾರ್ಯರೂಪಕ್ಕೆ ಬರಲು ವಿರೋಧಿಗಳಾಗಿದ್ದರು. “..ಇಲ್ಲಿ ಮಹಾರಾಜರು ಮತ್ತು ಭಾರತೀಯ ಅಧಿಕಾರಿಗಳೆ ಇರುವುದರಿಂದ ಇದು ಒಂದು ರೀತಿಯ ಸ್ವರಾಜ್ಯವೇ ಆಗಿದೆ; ಇಲ್ಲಿನ ಪ್ರಜೆಗಳು ಬ್ರಿಟಿಷ್ ಇಂಡಿಯಾದ ಪ್ರಜೆಗಳಂತೆ ಸರಕಾರಕ್ಕೆ ವಿರೋಧವಾಗಿ ವರ್ತಿಸಬೇಕಿಲ್ಲ“ ಎಂಬುದು ಅವರ ಧೋರಣೆಯಾಗಿತ್ತು. ಇಂತಹ ಮನೋಭಾವವಿದ್ದವರಲ್ಲಿ ಶೇಷಾದ್ರಿ ಅಯ್ಯರ್ (ದಿವಾನರಾಗಿದ್ದ ಅವಧಿ= ೧೮೮೩-೧೯೦೧) ಮತ್ತು ಮಿರ್ಜಾ ಇಸ್ಮಾಯಿಲ್ ಹೆಚ್ಚು ಕಾಲ ಅಧಿಕಾರದಲ್ಲಿದ್ದರು. .ಶೇಷಾದ್ರಿ ಅಯ್ಯರ್ ಪ್ರಜಾ ಪ್ರತಿನಿಧಿಸಭೆಗೆ ಸರಿಯಾದ ಮಾನ್ಯತೆಯನ್ನೇ ಕೊಡಲಿಲ್ಲ ಮತ್ತು. ಅವರಿಗೆ ಇಷ್ಟವಾಗದಿದ್ದ ಪತ್ರಿಕಯನ್ನು ಹನ್ನೆರಡು ತಿಂಗಳು ಸಸ್ಪೆಂಡ್ ಮಾಡಿಸಿದ್ದರು.  ದಿವಾನ್ ವಿ.ಪಿ.ಮಾಧವರಾವರ ಕಾಲದಲ್ಲಿ ಮೊದಲ ಬಾರಿಗೆ (1908) ಮೈಸೂರಿನಲ್ಲಿ ಕ್ರೂರ ಪತ್ರಿಕಾ ಕಾನೂನು ಜಾರಿಗೆ ಬಂದು ಪತ್ರಿಕೆ ನಡೆಸಬೇಕಾದರೆ ಸರ್ಕಾರಕ್ಕೆ ಅರ್ಜಿ ಹಾಕಿಕೊಳ್ಳಬೇಕಿತ್ತು.

ಆ ಕಾಲದ ಖ್ಯಾತ ಪತ್ರಕರ್ತ ಟಿ.ಟಿ.ಶರ್ಮರ ಪ್ರಕಾರ “ಬ್ರಿಟಿಷರನ್ನು ಮೆಚ್ಚಿಸಬೇಕೆಂಬ ಮಹಾರಾಜರ ಮತ್ತು ಮೈಸೂರು ಸರ್ಕಾರದ ಮಿತಿಮೀರಿದ ಉತ್ಸಾಹವೆ ಈ ಅಪಕೀರ್ತಿಗೆ ಗುರಿಯಾದ ಕಾನೂನಿಗೆ ಬಹು ಮಟ್ಟಿಗೆ ಕಾರಣವೆಂದು ಕಾಣಬರುತ್ತದೆ” ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಕಾಲದಲ್ಲಿ, ಮೈಸೂರು, ಮಾದರಿ ಸಂಸ್ಥಾನವೆಂಬ ಖ್ಯಾತಿ ಪಡೆದಿದ್ದಲ್ಲದೆ, ಪತ್ರಿಕೆಗಳ ವಿಷಯದಲ್ಲಿಯೂ ಸರ್ಕಾರ ಉದಾರ ನೀತಿ ಅನುಸರಿಸಿತು. ಆದರೆ ಮಿರ್ಜಾರ ಕಾಲದಲ್ಲಿ ಸರ್ಕಾರ ಪತ್ರಿಕೆಗಳ ಮೇಲೆ ಮತ್ತೆ ಪ್ರಹಾರ ನಡೆಸಿತು. ಈ ದಿವಾನರನ್ನೆಲ್ಲಾ ಎದುರಿಸಿದವರಲ್ಲಿ ಮುಖ್ಯವಾದವರು ಮೈಸೂರಿನ ವೃದ್ಧ ಪಿತಾಮಹ (ಗ್ರಾಂಡ್ ಓಲ್ಡ್ ಮ್ಯಾನ್ ) ರೆಂದು ಖ್ಯಾತರಾದ ಎಮ್. ವೆಂಕಟಕೃಷ್ಣಯ್ಯ (1844-1933) ನವರು. ಮೈಸೂರಿನ ಸಾರ್ವತ್ರಿಕ ಜೀವನದ ಎಲ್ಲ ಕ್ಷೇತ್ರ – ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ -ಗಳಿಗೂ ತಾತಯ್ಯನವರ ಕೊಡುಗೆ ಅಪಾರ.

ಸಾಧ್ವಿ, ನ್ಯೂಲೈಫ್, ಸಂಪದಭ್ಯುದಯ ಇತ್ಯಾದಿ ಪತ್ರಿಕೆಗಳನ್ನು ಶುರುಮಾಡಿ ಮೈಸೂರಿನ ಪತ್ರಿಕಾ ಜಗತ್ತಿಗೂ ಮೇಲ್ಪಂಕ್ತಿ ಹಾಕಿಕೊಟ್ಟವರು ತಾತಯ್ಯನವರು. ಅದಲ್ಲದೆ ಮುಂದಿನ ಪೀಳಿಗೆಯ ಪತ್ರಕರ್ತರನ್ನೂ ಕೂಡ ಅವರು ತಯಾರು ಮಾಡುತ್ತಿದ್ದರು. ಇವರ ವರ್ಚಸ್ಸು ಎಷ್ಟಿತ್ತೆಂದರೆ ಸಮಸ್ಯೆಗಳು ಗಾಢವಾದಾಗ ದಿವಾನರು ಇವರನ್ನು ಸಮಾಲೋಚನೆಗೆ ಕರೆಯುತ್ತಿದ್ದರು. ಸರ್ಕಾರದ್ದು ತಪ್ಪು ಎನಿಸಿದಾಗ ತಾತಯ್ಯನವರು ದಿವಾನರಿಗೆ ಬುದ್ಧಿ ಹೇಳುತ್ತಿದ್ದರು. ತಮ್ಮ ಪತ್ರಿಕೆಗಳ ಮೂಲಕ ಸರ್ಕಾರದ ಅತಿರೇಕಗಳನ್ನು ಆದಷ್ಟೂ ತಡೆಯಲು ಪ್ರಯತ್ನಪಟ್ಟರು. ಆದರೆ ದಿವಾನರ ಕಾನೂನುಗಳು ಇವರ ಪತ್ರಿಕೆಗಳನ್ನೂ ಬಿಡಲಿಲ್ಲ. ಆ ಕಾಲದ ಹಿರಿಯ ಸ್ವಾತಂತ್ರ್ಯಸೇನಾನಿ ರಂಗನಾಥ ದಿವಾಕರರ ಪ್ರಕಾರ “ಬ್ರಿಟಿಷ ಸಾಮ್ರಾಜ್ಯದ ಸಹಿಸಲಾರದ ದರ್ಪ ಹಾಗೂ ದೇಶೀಯ ಸಂಸ್ಥಾನಗಳಲ್ಲಿ ನಿರಂಕುಶ ಅಧಿಕಾರದ ಆಡಳಿತ” ವನ್ನು ಪತ್ರಕರ್ತರು ಎದುರಿಸಬೇಕಾಗಿತ್ತು.

೧೯೨೬ ಏಪ್ರಿಲ್ ೧ರಂದು ಮಿರ್ಜಾ ಇಸ್ಮಾಯಿಲ್ ರವರು ದಿವಾನರಾದಾಗಿನಿಂದಲೂ ಸರ್ಕಾರವನ್ನು ಟೀಕಿಸಿ ಪತ್ರಿಕೆಗಳಲ್ಲಿ ಬಂದ ಲೇಖನಗಳು ಅವರಿಗೆ ಸರಿ ಎನಿಸಲಿಲ್ಲ. ಬೆಂಗಳೂರಿನ 1928ರ ಜುಲೈ ಗಣೇಶನ ಕೋಮು ಗಲಭೆಯ (ಜುಲೈ 28-29ರಂದು ನಡೆದ ದೊಡ್ಡ ಪ್ರಮಾಣದ ಕೋಮು ಗಲಭೆಯಲ್ಲಿ ನೂರಾರು ಜನರಿಗೆ ಗಾಯಗಳಾದ ನಂತರ ಸರ್ ಎಂ.ವಿಶ್ವೇಶ್ವರಯ್ಯ ಅವರ ನೇತ್ರತ್ವದಲ್ಲಿ ರಚಿಸಿದ ಒಂದು ವಿಚಾರಣಾ ಸಮಿತಿ ಸರ್ಕಾರವನ್ನು ಅದರ ನಿಷ್ಕ್ರಿಯತೆಗಾಗಿ ಟೀಕಿಸಿ ಪ್ರಜೆಗಳಿಗೂ ಹೆಚ್ಚು ಹಕ್ಕುಗಳಿರುವಂತೆ ಕೆಲವು ಮುಖ್ಯ ಶಿಫಾರಸುಗಳನ್ನು ಮಾಡಿದ್ದನ್ನು ದಿವಾನ್ ಮಿರ್ಜಾರು ತಿರಸ್ಕರಿಸಿದರು) ನಂತರ ದಿವಾನರ ಕೋಪವನ್ನು ಮೈಸೂರಿನ ಪತ್ರಿಕಾ ಜಗತ್ತು ಎದುರಿಸಬೇಕಾಯಿತು. ಹಲವಾರು ಪತ್ರಿಕೆಗಳಿಗೆ ಸರ್ಕಾರ ಎಚ್ಚರಿಕೆಯ ನೋಟೀಸುಗಳನ್ನು ಕಳಿಸಿದ್ದಲ್ಲದೆ ಅನೇಕ ಸಾರ್ವಜನಿಕರ ಮೇಲೆ ಮೊಕದ್ದಮೆ ಹೂಡಿತು. ತಾತಯ್ಯನವರಿಗೆ ಪತ್ರಿಕೆಗಳನ್ನು ನಡೆಸಕೂಡದೆಂದು ಸರ್ಕಾರದ ಅಪ್ಪಣೆಯಾಯಿತು. ಇದನ್ನು ಉಲ್ಲಂಘಿಸಿದರೆ ಅವರಿಗೆ ಗಡೀಪಾರು ಅಗುವ ಸಂಭವವಿದ್ದಿದ್ದರಿಂದ ಅವರು ತಮ್ಮ ಪತ್ರಿಕೆಗಳನ್ನು ಮುಚ್ಚಿದರು. ಟಿ.ಟಿ.ಶರ್ಮರ ವಿಶ್ವಕರ್ನಾಟಕ “ಮೈಸೂರು ವೃತ್ತ ಪತ್ರಿಕೆಗಳ ಕರಾಳ ಶಾಸನವನ್ನು ಶಾಸನ ಕಡತದಿಂದ ತೊಡೆದು ಹಾಕುವವರೆಗೂ ನಾವು ಪ್ರಧಾನ ಲೇಖನ ಬರೆಯುವುದಿಲ್ಲ” ಎಂಬ ಸಂಕಲ್ಪವನ್ನು 6-2-1929ರಂದು ಪ್ರಕಟಿಸಿತು.

ಸಂಪಾದಕರು:
ದಿವಾನರ ನಿರಂಕುಶತ್ವವನ್ನು ಎದುರಿಸಲು ಕೆಲವು ಯುವ ಪತ್ರಕರ್ತರು ಮುಂದಾದರು. ಹಿಂದೆ ಒಂದು ಬಾರಿ ದಿವಾನರು ಟೂರ್ ಹೋಗಿ ಬಂದು ಖುಷಿಯಾಗಿ ಅವರ ಜೊತ ಬಂದಿದ್ದ ಬಾತ್ಮೀದಾರರಿಗೆಲ್ಲ ನೂರು ರೂಪಾಯಿಗಳನ್ನು ಕೊಟ್ಟಾಗ ತಾತಯ್ಯನವರ ಶಿಷ್ಯನಾಗಿದ್ದ ಒಬ್ಬ ಯುವಕ ಆ ಹಣವನ್ನು ವಿನಯಪೂರ್ವಕವಾಗಿ ತಿರಸ್ಕರಿಸಿದ್ದ. ಮೈಸೂರಿನಲ್ಲಿ ವಾಸವಾಗಿದ್ದ ಅದೇ ವ್ಯಕ್ತಿ ೧೯೨೭ರ ಸೆಪ್ಟೆ೦ಬರ್ ತಿ೦ಗಳಿನ ೧೧ನೇ ತಾರೀಖಿನಂದು ತನ್ನ ದಿನಚರಿಯಲ್ಲಿ ಈ ಸಾಲುಗಳನ್ನು ಬರೆದುಕೊ೦ಡಿದ್ದನು: ನಾನು ೮ನೇ ತಾರೀಖು ‘ಮೈಸೂರು ಪೇಟ್ರಿಯಟ್’ ಸ೦ಪಾದಕತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ೧೨ರಿ೦ದ ‘ತಾಯಿನಾಡು’ ಪತ್ರಿಕೆಯನ್ನು ಶ್ರೀ ರಾಮ ಪ್ರೆಸ್ ನಲ್ಲಿ ಪ್ರಾರ೦ಭಿಸುತ್ತಿದ್ದೇನೆ. ನನ್ನ ಪ್ರಯತ್ನಗಳು ಸಫಲಗೊಳ್ಳಲಿ ಎ೦ದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ದಿವಾನರು ಸರ್ವಾಧಿಕಾರಿಗಳ ತರಹ ವರ್ತಿಸುತ್ತಿದ್ದಾರೆ. ಅವರ ಸರ್ವಾಧಿಕಾರತ್ವವನ್ನು ಕೊನೆಗಣಿಸುವುದೇ ಈ ಪತ್ರಿಕೆಯ ಪರಮೋದ್ದೇಶ” ಇದನ್ನು ಬರೆದ ವ್ಯಕ್ತಿಯ ಹೆಸರು ಪಿ(ಪಾಲಹಳ್ಳಿ). ಆರ್.ರಾಮಯ್ಯ!

ಶ್ರೀರಂಗಪಟ್ಟಣದಲ್ಲಿ 1894ರಲ್ಲಿ ಹುಟ್ಟಿದ ರಾಮಯ್ಯವರು ತಮ್ಮ 19ನೆಯ ವಯಸ್ಸಿನಲ್ಲಿ ಬೆನಾರೆಸ್ ಗೆ ಹೋಗಿ ಅಲ್ಲಿ ಎಮ್ಎಸ್ಸಿ ತನಕ ಓದಿ ಗಾಂಧೀಜಿಯವರ ಆದೇಶದ ಮೇಲೆ ತಮ್ಮ ವಿದ್ಯಾಭ್ಯಾಸ ನಿಲ್ಲಿಸಿ ಸ್ವಾತಂತ್ರ್ಯಚಳುವಳಿಯನ್ನು ಸೇರಿ ಸ್ವಲ್ಪ ಸಮಯ ಕಾಂಗ್ರೆಸ್ ಸಂಸ್ಥೆಯ ಕೆಲಸವನ್ನು ಮಾಡಿ ನಂತರ ಪತ್ರಕರ್ತರಾಗಲು ತಯಾರಿ ತೆಗೆದುಕೊಂಡರು. ಅದಕ್ಕಾಗಿ ಮದರಾಸಿನಲ್ಲಿ ಆಂಧ್ರಕೇಸರಿ ಪ್ರಕಾಶಮ್ ರ ಜೊತೆ ಸ್ವರಾಜ್ಯ ಪತ್ರಿಕೆಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ ಮೈಸೂರಿನಲ್ಲಿ ತಾತಯ್ಯನವರ ಪತ್ರಿಕಾಗರಡಿಯನ್ನು ಸೇರಿದರು ಮತ್ತು ನಿಧಾನವಾಗಿ ತಮ್ಮ ದಿಟ್ಟ ಮತ್ತು ಖಡಾಖಂದಿತ ಲೇಖನಗಳಿಗೆ ಖ್ಯಾತಿ ಗಳಿಸಿದರು. ಅವರು ತಮ್ಮದೇ ಪತ್ರಿಕೆಯನ್ನು ಶುರು ಮಾಡಿದಾಗಲೂ ಅದೇ ನಿರ್ಭೀತ ಧೋರಣೆಯನ್ನು ಮುಂದುವರಿಸಿದರು.

ಅವರು ತಮ್ಮ ಸಂಕ್ಷಿಪ್ತ ಆತ್ಮಚರಿತ್ರೆಯಲ್ಲಿ “ನಾನು ಪ್ರಾರಂಭದಲ್ಲಿ ದಿವಾನ್ ಮಿರ್ಜಾ ಸಾಹೇಬರ ಸರ್ವಾಧಿಕಾರತ್ವವನ್ನು ಕೊನೆಗಾಣಿಸಬೇಕೆಂದು ಸಂಕಲ್ಪಿಸಿದೆ. ಈ ಧೋರಣೆಯಲ್ಲಿ ನಾನು ಬಹಳ ಉಗ್ರ ಲೇಖನಗಳನ್ನು ಬರೆಯುತ್ತಿದ್ದೆ. “ಪತ್ರಿಕೆ ಶುರುವಾದಾಗ ರಾಮಯ್ಯನವರು ದಿವಾನರ ಕಚೇರಿಗೆ ಪತ್ರಿಕೆಯನ್ನು ಕಳಿಸುತ್ತಿದ್ದರಂತೆ. ಆದರೆ ಅದು ಬೇಡ ಎಂದು ಹೇಳಿ ಎಂದು ದಿವಾನರು ಹೇಳಿ ಕಳಿಸಿದರಂತೆ. ಸರ್ಕಾರದ ವಿರೋಧವನ್ನು ರಾಮಯ್ಯನವರು ಹಲವಾರು ರೀತಿಯಲ್ಲಿ ಎದುರಿಸಿದರು.” ೧೯೨೮ ಜುಲೈ ೩೦ರಲ್ಲಿ ಬೆ೦ಗಳೂರಿನಲ್ಲಿ ಗಣೇಶನ ಹಬ್ಬದ ಗಲಾಟೆ ಆಯಿತು. ಆ ಸಮಯದಲ್ಲಿ ನಾನು ಬರೆದ ಲೇಖನ ಉಗ್ರವಾಯಿತೆದು ಮ್ಯಾಜಿಸ್ಟ್ರೇಟರು ನನ್ನ ಪತ್ರಿಕೆಯನ್ನು ೧೪ ದಿನ ನಿಲ್ಲಿಸಿದರು ತಕ್ಷಣವೆ ನನಗೆ ಅನುಮತಿ ದೊರಕಿದ್ದ ‘ನ್ಯೂಲೈಫ್‘ ಎಂಬ ಪತ್ರಿಕೆಯನು ಹೊರಡಿಸಿ ಮ್ಯಾಜಿಸ್ಟ್ರೇಟರು ಹೊರಡಿಸಿದ್ದ ಆದೇಶವನ್ನು ಖಂಡಿಸಿದೆ. ೧೪ ದಿವಸಗಳ ನಂತರ ತಾಯಿನಾಡುವನ್ನು ಮತ್ತೆ ಹೊರಡಿಸಿದೆ.“

ಕಾಲಕ್ರಮೇಣ ರಾಮಯ್ಯನವರ ಪತ್ರಿಕೆ ’ತಾಯಿನಾಡು‘ ಬೆಳೆಯುತ್ತ ಹೋಗುತ್ತದೆ. ವಾರಪತ್ರಿಕೆಯಿಂದ ವಾರಕ್ಕೆ ಎರಡು ಬಾರಿ ಪ್ರಕಟವಾಗುತ್ತದೆ. ಒಂದೇ ವರ್ಷದಲ್ಲಿ ದಿನಪತ್ರಿಕೆಯೂ ಆಗುತ್ತದೆ. ಮೈಸೂರಿನ ಬದಲು ಬೆಂಗಳೂರಿನಿಂದ ಹೊರಡುತ್ತದೆ. ವಿದೇಶದ ರಾಯ್ಟರ್, ಎಪಿ ಮುಂತಾದ ಸುದ್ದಿ ಏಜನ್ಸಿಗಳಿಂದ ತಾಯಿನಾಡು ವಾರ್ತೆಗಳನ್ನು ತರಿಸಿಕೊಳ್ಳುತ್ತದೆ. ಚಂದಾದಾರರು ಹೆಚ್ಚಾಗುತ್ತ ಹೋಗುತ್ತಾರೆ. ಜಾಹೀರಾತುಗಳೂ ಹೆಚ್ಚಾಗುತ್ತ ಹೋಗುತ್ತವೆ. ಪತ್ರಿಕೆಯಲ್ಲಿ ಜಾಸ್ತಿ ಪುಟಗಳೂ ಸೇರುತ್ತವೆ. ಪತ್ರಿಕೆಯ ಆಕಾರವೂ ಬೆಳೆಯುತ್ತ ಹೋಗುತ್ತದೆ. ಮೈಸೂರಿನಲ್ಲಿ ಮತ್ತು ಸಂಸ್ಥಾನದ ಇತರ ದೊಡ್ಡ ಊರುಗಳಲ್ಲಿ ಮತ್ತು ದೆಹಲಿ/ಬಾಂಬೆ ಗಳಲ್ಲಿ ವರದಿಗಾರರನ್ನು ನೇಮಿಸುತ್ತದೆ. ನಿಧಾನವಾಗಿ ಪತ್ರಿಕೆ ಮೈಸೂರು ಸರ್ಕಾರದ ಮತ್ತು ದಿವಾನರ ಕಾರ್ಯವೈಖರಿಗಳಿಗೆ ಸೀಮಿತವಾಗದೆ ಇಡೀ ದೇಶದ ಮತ್ತ ಪ್ರಪಂಚದ ವಾರ್ತೆಗಳನ್ನು ಪ್ರಸಾರ ಮಾಡಲು ಪ್ರಾರಂಭಿಸುತ್ತದೆ. 1936ರ ವೇಳೆಗೆ ಮೈಸೂರು ಸಂಸ್ಥಾನದಲ್ಲೆಲ್ಲ ಹೆಚ್ಚು ಪ್ರಸಾರವಾಗುತ್ತಿದ್ದ ಪತ್ರಿಕೆಯಾಗಿತ್ತು.

ಹಾಗೂ ನೇರವಾಗಿಯೋ, ಪರೋಕ್ಷವಾಗಿಯೋ ಪತ್ರಿಕೆ ಸರ್ಕಾರದ ವಿರೋಧವನ್ನು ಅನುಭವಿಸುತ್ತಲೇ ಹೋಯಿತು. ಮುಂದೆ ಪತ್ರಿಕೆಯ ಸಂಪಾದಕರಾದ ಶ್ರೀ ಪಿ.ಬಿ.ಶ್ರೀನಿವಾಸನ್ ಒಂದು ಸಂಗತಿಯನ್ನು ಜ್ಞಾಪಿಸಿಕೊಳ್ಳುತ್ತಾರೆ ”ದಿವಾನರ ಕಾಲದಲ್ಲಿ ಅವರ ಆಪ್ತರಾಗಿದ್ದ ಕೆಲವರು ಐವತ್ತು ಸಹಸ್ರ ರೂಪಾಯಿಗಳ ಹಣದ ಚೀಲದೊಡನೆ ತಾಯಿನಾಡು ಕಚೇರಿಗೆ ಧಾವಿಸಿ ಬಂದು, ಇದೋ, ಇದು ನಿಮ್ಮ ಹಣ, ರಶೀತಿ ಬೇಕಿಲ್ಲ, ಉಪಯೋಗಿಸಿಕೊಳ್ಳಿ. ಆದರೆ ದಿವಾನರನ್ನು ಹೊಗಳಿ ಬರೆಯಿರಿ ಎಂದರು. ಆದರೆ ಆ ಆಮಿಷಕ್ಕೆ ರಾಮಯ್ಯನವರು ಬಲಿಯಾಗದೆ ಆ ಜನರನ್ನು ಕಚೇರಿಯಿಂದ ಅಟ್ಟಿದರು. ಈ ಪ್ರಸಂಗ ನನ್ನ ಮುಂದೆಯೇ ನಡೆಯಿತು.”

ಪತ್ರಿಕೆ ಬೆಳೆಯುತ್ತ ದಿವಾನರ ಧೋರಣೆಯೂ ಬದಲಾಯಿಸಿರಬಹುದು. ಈ ವಿಷಯದಲ್ಲಿ ಹಿರಿಯ ಪತ್ರಕರ್ತ ಮತ್ತು ಲೇಖಕ ಎಚ್ ಎಸ್ಕೆಯವರ (ಕೃಷ್ಣಸ್ವಾಮಿ ಅಯ್ಯಂಗಾರ್, ಎಚ್ ಎಸ್. 1920-2008) ನೆನಪು ಸ್ವಾರಸ್ಯಕರ: ಚಿತ್ರದುರ್ಗಕ್ಕೆ ದಿವಾನ ಸಾಹೇಬರು ಹೋದಾಗ (ಇಸವಿ ತಿಳಿಯದು) ಯುವಕ ಎಚ್ಎಸ್ಕೆ- “ಒಂದು ಸಭೆಯಲ್ಲಿ ಪತ್ರಿಕಾ ಪ್ರತಿನಿಧಿಗಳ ಸಾಲಿನಲ್ಲಿ ಕುಳಿತಿದ್ದರಂತೆ. ಅವರನ್ನು ನೋಡಿ ಮಿರ್ಜಾ ಸಾಹೇಬರು ಕುತೂಹಲದಿಂದ ವಿಚಾರಿಸಿ ಅವರು ತಾಯಿನಾಡು ಪ್ರತಿನಿಧಿ ಎಂದು ತಿಳಿದು “ಆ ದೊಡ್ಡ ಪತ್ರಿಕೆಗೆ ಈ ಚೋಟುದ್ದದ ಹುಡುಗ ಪ್ರತಿನಿಧಿಯೆ?” ಎಂದು ತಮಾಷೆ ಮಾಡಿದರಂತೆ. ಅದೇ ಸಮಯದಲ್ಲೋ ಏನೋ “ರಾಮಯ್ಯನವರು ನನ್ನ ಮಿತ್ರರು” ಎಂದೂ ಹೇಳುತ್ತಾರೆ. ದಿವಾನರು 1937ರಲ್ಲಿ ರಾಮಯ್ಯನವರಿಗ ಒಂದು ಪತ್ರದಲ್ಲಿ ಧನ್ಯವಾದಗಳನ್ನು ಕೂಡ ಅರ್ಪಿಸುತ್ತಾರೆ:

“30 ನವೆಂಬರ 1937 -ಮಾನ್ಯ ಶ್ರೀ ರಾಮಯ್ಯನವರಿಗೆ… 27ರ ನಿಮ್ಮ ತಾಯಿನಾಡುವಿನಲ್ಲಿನ ಸಂಪಾದಕೀಯವನ್ನು ಓದಿ ನನಗೆ ಸಂತೋಷವಾಯಿತು. ಅದರಲ್ಲಿನ ನನ್ನ ಬಗ್ಗೆಯ ಉಲ್ಲೇಖಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸಬೇಕೆಂದೆನಿಸಿತು. ತುಂಬಾ ಸ್ನೇಹಪರ ಮತ್ತು ಮೆಚ್ಚುಗೆಯ ಸಂಪಾದಕೀಯವನ್ನು ಬರೆಯಲು ನಿಮ್ಮನ್ನು ಪ್ರೇರೇಪಿಸಿದ ಪ್ರಾಮಾಣಿಕತೆ ಮತ್ತು ಸದ್ಭಾವನೆಯವನ್ನು  ನಾನು ಬಹಳವಾಗಿ ಪ್ರಶಂಸಿಸುತ್ತೇನೆ – ಇಂತಿ – ಮಿರ್ಜಾ ಇಸ್ಮಾಯಿಲ್.

ಅಂದಿನ ರಾಜಕೀಯ ಮತ್ತು ಪತ್ರಿಕಾ ಪ್ರಪಂಚದ ಬಗ್ಗೆ ಎರಡು ಉಲ್ಲೇಖಗಳು:
ಟಿ.ಟಿ.ಶರ್ಮರ -“1920ರಿಂದ 1947ರವರೆಗೆ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕನ್ನಡ ವೃತ್ತಪತ್ರಿಕೆಗಳು ವಹಿಸಿದ ಪಾತ್ರ ಅಪೂರ್ವ! ಕಾಲು ಶತಮಾನ ಕನ್ನಡ ಪತ್ರಿಕಾಕರ್ತರು ತೋರಿಸಿದ ಧೈರ್ಯ, ಸ್ಥೈರ್ಯ, ಶೀಲ (ಶ್ಲಾಘನೀಯ)

ಪಿ.ಬಿ.ಶ್ರೀನಿವಾಸನ್ ರ -ರಾಮಯ್ಯನವರು ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಪುರುಷಸಿಂಹರಾಗಿದ್ದರು. ನಿರ್ಭೀತರಾಗಿ ಪ್ರಜಾ ಸೇವೆಯನ್ನು ಪ್ರಾಮಾಣಿಕ ರೀತಿಯಲ್ಲಿ ಸಲ್ಲಿಸಿದರು. ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಕಾಶಮಾನವಾಗಿ ಉಳಿಯಬಲ್ಲದು.

ನಂತರದ ಕಥೆ:
ಸರ್ ಮಿರ್ಜಾರವರು ಮೈಸೂರಿನಿಂದ ಜೈಪುರಕ್ಕೆ ೧೯೪೨ರಲ್ಲಿ, ದಿವಾನರಾಗಿ ಹೋಗಿ ನಾಲ್ಕು ವರ್ಷಗಳು ಅಲ್ಲಿ ಇದ್ದು (ಅವರು ನಗರವನ್ನು ಸುಂದರೀಕರಿಸಿದ್ದು ಅಲ್ಲಿ ಅವರ ಹೆಸರಿನಲ್ಲಿ ಒಂದು ಮುಖ್ಯ ರಸ್ತೆಯಿದೆ) 1946ರಲ್ಲಿ ಬೆಂಗಳೂರಿಗೆ ವಾಪಸ್ಸು ಬರುತ್ತಾರೆ. ಹಾಗೆಯೇ ಹಿರಿಯ ಮುತ್ಸದ್ಧಿಯ ಜೀವನ ನಡೆಸುತ್ತಿದ್ದು ೧೯೫೪ರಲ್ಲಿ ತಮ್ಮ ಆತ್ಮಕಥೆ ‘ಮೈ ಪಬ್ಲಿಕ್ ಲೈಫ್’ ಪ್ರಕಟಿಸುತ್ತಾರೆ ಮತ್ತು ಮೇ ತಿಂಗಳಲ್ಲಿ ರಾಮಯ್ಯನವರಿಗೆ ‘ವಿತ್ ಕೈಂಡ್ ರಿಗಾರ್ಡ್ಸ್’ ಎಂದು ಬರೆದು ಪುಸ್ತಕದ ಒಂದು ಪ್ರತಿಯನ್ನು ಕಳಿಸುತ್ತಾರೆ. ತಾಯಿನಾಡು ಪತ್ರಿಕೆ 1940ರ ದಶಕದಲ್ಲಿ ಮತ್ತೂ ಜನಪ್ರಿಯವಾಗಿ ಇನ್ನೂ ದೊಡ್ಡ ಪತ್ರಿಕೆಯಾಗುತ್ತದೆ. ಅದರೆ 1950 ನಂತರ ಅರ್ಥಿಕ ತೊಂದರೆಗಳು ಪ್ರಾರಂಭವಾಗಿ  ರಾಮಯ್ಯನವರು ಪತ್ರಿಕೆಯನ್ನು 1957ರಲ್ಲಿ ಮಾರುತ್ತಾರೆ. ಇದರ ಮಧ್ಯೆ 1952ರಲ್ಲಿ  ರಾಮಯ್ಯನವರು ಬೆಂಗಳೂರಿನ ಬಸವನಗುಡಿಯಿಂದ ಚುನಾಯಿತರಾಗಿ 1957ರ ತನಕ ವಿಧಾನಸಭೆಯ ಸದಸ್ಯರಾಗಿರುತ್ತಾರೆ. 1957ರ ನಂತರ ಚೇತನಾ ಎಂಬ ಪುಟ್ಟ ವಾರಪತ್ರಿಕಯನ್ನು ನಡೆಸುತ್ತಿರುತ್ತಾರೆ.

1959ರಲ್ಲಿ ಮಿರ್ಜಾರ ನಿಧನದ ಸುದ್ದಿ ಕೇಳಿದಾಗ ರಾಮಯ್ಯನವರಿಗೆ ಹಳೆಯದೆಲ್ಲ ನೆನಪಿಗೆ ಬಂದಿರಬೆಕು. ಹೌದು, ಒಂದು ರೀತಿಯಲ್ಲಿ ದಿವಾನ್ ಮಿರ್ಜಾರವರು ‘ತಾಯಿನಾಡು‘ ಪತ್ರಿಕೆಯ ಜನ್ಮಕ್ಕೆ ಕಾರಣರಾಗಿದ್ದರು ಮತ್ತು ಒಂದು ಕಾಲಘಟ್ಟದಲ್ಲಿ ರಾಮಯ್ಯನವರ ಜೀವನಕ್ಕೆ ಒಂದು ಗುರಿಯನ್ನು, ಒಂದು ಉದ್ದೇಶವನ್ನು ಒದಗಿಸಿದ್ದರು. ದಿವಾನರು ಮತ್ತು ಅವರನ್ನು ಎದುರಿಸಿಕೊಂಡೇ ಪತ್ರಿಕೆ ಬೆಳೆಯಿತು. ಇದರ ಮಧ್ಯೆ ರಾಮಯ್ಯನವರ ಒಳ ಮತ್ತು ಹೊರ ಪ್ರಪಂಚದ ವ್ಯಾಪ್ತಿ ದೊಡ್ಢದಾಗಿದ್ದಿರಬೇಕು. ನಿಧಾನವಾಗಿ ದಿವಾನ ಸಾಹೇಬರೂ ಪತ್ರಿಕೆಗಳ ಮೂಲ ಉದ್ದೇಶಗಳನ್ನು ಮತ್ತು ಕರ್ತವ್ಯಗಳನ್ನು ಅರ್ಥ ಮಾಡಿಕೊಂಡಿರಬೇಕು ಅದಕ್ಕೆ ಪರೋಕ್ಷವಾಗಿಯಾದರೂ ರಾಮಯ್ಯನವರು ಮತ್ತು ಅವರಂತಹ ಪತ್ರಕರ್ತರು ಕಾರಣರಾಗಿರಬಹುದು. ಇದರಿಂದಾಗಿ ದಿವಾನರು ಪತ್ರಿಕೆಗಳನ್ನು, ಪತ್ರಕರ್ತರನ್ನು ಗೌರವದಿಂದ ನೋಡಲು ಪ್ರಾರಂಭಿಸಿರಬಹುದು ಅಂತೂ ಮೊದಲು ವೈರಿಗಳಾಗಿದ್ದ ಪತ್ರಿಕಾ ಸಂಪಾದಕರು ಮತ್ತು ಸಂಸ್ಥಾನದ ದಿವಾನರು ನಿಧಾನವಾಗಿ ಮಿತ್ರರಾಗುತ್ತಾರೆ.

ರಾಮಯ್ಯನವರಿಗೆ ಮೊದಲಿನಿಂದಲೂ ಅಧ್ಯಾತ್ಮದ ಕಡೆ ಒಲವಿದ್ದಿದ್ದು ಆಗ ಅವರು ಸಮಯದಲ್ಲಿ ನಿರ್ಲಿಪ್ತತೆಯ ಕಡೆ ಹೆಜ್ಜೆ ಇಡುತ್ತಿದ್ದರು. ಆದರೂ ದಿವಾನರ ನಿಧನದಿಂದ ಅವರಿಗೆ ಕಸಿವಿಸಿಯಾಗಿದ್ದಿರಬಹುದು! ಆ ಕಸಿವಿಸಿಯಲ್ಲಿಯೇ ಎಲ್ಲ ಪತ್ರಕರ್ತರಂತೆ ಆ ಐತಿಹಾಸಿಕ ಘಟನೆಯನ್ನು ತಮ್ಮ ದಿನಚರಿ ಪುಸ್ತಕದಲ್ಲಿ ದಾಖಲಿಸಿಕೊಂಡಿರಬೇಕು.

‍ಲೇಖಕರು nalike

May 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. H S. Raghavendra Rao

    ಬಹಳ ಒಳ್ಳೆಯ ವ್ಯಕ್ತಿಚಿತ್ರ. ತಾಯಿನಾಡು ಒಂದು ಕಾಲದಲ್ಲಿ ನಾವು ಓದುತ್ತಿದ್ದ ಪತ್ರಿಕೆ. I ಬರಹ ಆ ಕಾಲದ ಹಲವು ಹಿರಿಯರ ಬಗ್ಗೆ ಗೌರವ ಮೂಡುವಂತೆ ಮಾಡುತ್ತದೆ.
    ಎಚ್. ಎಸ್. ಆರ್.

    ಪ್ರತಿಕ್ರಿಯೆ
  2. Puttaraju.P

    ಎಷ್ಟು ಚೆನ್ನಾಗಿ ನಿರೂಪಣೆ ಆಗಿದೆ ಸರ್.
    ತಾತಯ್ಯ ಇವರ ಬಗ್ಗೆ ಓದಿದ್ದೆ. ರಾಮಯ್ಯ ನವರ ಬಗ್ಗೆ ಸಹ ಮೈಸೂರು ಜನರಿಗೆ ಅರಿವು ಇದೆ.

    ಪ್ರತಿಕ್ರಿಯೆ
  3. Palahalli Vishwanath

    Thank you for liking the article. I do not know whether the times were different or those people were different. Sorry not getting Kannada font

    ಪ್ರತಿಕ್ರಿಯೆ
  4. T.R.Anantharamu

    ಅಂದಿನ ಪ್ರಾಮಾಣಿಕತೆ-ಪತ್ರಿಕೋದ್ಯಮದ ಮೌಲ್ಯ ನಮ್ಮ ತಲೆಮಾರಿನವರಿಗೆ ಕನಸೇನೋ ಎನ್ನಿಸುತ್ತಿದೆ

    ಪ್ರತಿಕ್ರಿಯೆ
  5. P Venkataramaiah

    It is a great pleasure to read and know about Sir Mirza Ismail and the developmental works during his period. It is also a good article bringing to the notice of the young population the great personalities like Shri P R Ramaiah and others Thank you for the article. P Venkataramaiah

    ಪ್ರತಿಕ್ರಿಯೆ
  6. Palahalli Vishwanath

    Sri Raghavendrarao HS, Puttaraju.P, Anantaramu.T.R., Venkataramaiah P – Sirs, thank you very much for your kind comments ..P.R.Vishwanath

    ಪ್ರತಿಕ್ರಿಯೆ
  7. Raghavan Chakravarthy

    ಮನಮುಟ್ಟುವ ನಿರೂಪಣೆ ಸರ್…ಧನ್ಯವಾದಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: