ರಾಗಂ ಅವರ ಕೃತಿ ಸಂತೆಯಿ೦ದ ಸಂತನೆಡೆಗೆ… ‘ಯೋಗಸ್ಥಃ’ (ಭಾಗ-2)
ಪಿ.ಆರ್.ಪಬ್ಲಿಕೇಷನ್ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ.
–ನಾಮದೇವ ಕಾಗದಗಾರ
ಸಮಕಾಲೀನ ಆಧ್ಯಾತ್ಮಿಕ ಲೋಕದಲ್ಲಿ ಕಾರ್ಪೊರೇಟ್ ಪ್ರಭಾವ, ಆಡಂಬರ ಮತ್ತು ಅಹಂಕಾರದ ಪ್ರದರ್ಶನಗಳು ವಿಜೃಂಭಿಸುತ್ತಿರುವ ಹೊತ್ತಿನಲ್ಲಿ, ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಬದುಕು ಮತ್ತು ಬೋಧನೆಗಳು ಮನುಕುಲಕ್ಕೆ ಶುದ್ಧ ಬೆಳಕಿನ ಸಂಜೀವಿನಿಯ೦ತೆ ನಿಲ್ಲುತ್ತವೆ. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀಗಳ ದಿವ್ಯ ಒಡನಾಟವನ್ನು ತಮ್ಮ ಅಂತರ೦ಗದ ಅನುಭವದ ನೆಲೆಯಲ್ಲಿ ಕಟ್ಟಿಡುತ್ತಿರುವ ಲೇಖಕ “ರಾಗಂ” ಅವರ “ಯೋಗಸ್ಥಃ” ಭಾಗ- 2, ಕೃತಿಯು ಕೇವಲ ಒಬ್ಬ ಮಹಾತ್ಮನ ಬಾಹ್ಯ ಚರಿತ್ರೆಯಾಗದೆ, ಗುರುವಿನ ಹೆಜ್ಜೆಯಲ್ಲಿ ಸಾಗುವ ಶಿಷ್ಯನ ಆತ್ಮನಿವೇದನೆಯಾಗಿ ಮೂಡಿಬಂದಿದೆ.
ಡಾ. ಟಿ.ಎನ್. ವಾಸುದೇವಮೂರ್ತಿ ಅವರು ತಮ್ಮ ಪ್ರವೇಶಿಕೆಯಲ್ಲಿ ಬರೆದಿರುವಂತೆ, ಈ ಕೃತಿಯು “ಜೀವನಚರಿತ್ರೆ ಮತ್ತು ಆತ್ಮಚರಿತ್ರೆಗಳ ಪವಿತ್ರ ಸಂಗಮ”. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಎಂದೂ ತಮ್ಮನ್ನು ಯಾವುದೇ ಪಂಥ, ಮಠ, ಜಾತಿ ಅಥವಾ ಕಿರೀಟಗಳಿಗೆ ಸೀಮಿತಗೊಳಿಸಿಕೊಂಡವರಲ್ಲ.
“ಇವರೊಂದೂ ಹವಿಸ್ಸು ಹಾಕಲಿಲ್ಲ, ಜ್ಯೋತಿಷ್ಯ ಹೇಳಲಿಲ್ಲ, ರಾಜಕಾರಣವನ್ನು ಸಾಕಿ ಮಠಾಧೀಶರಾಗಲಿಲ್ಲ… ಮಠ-ಮಂದಿರಗಳ ಹಂಗಿಗೊಳಗಾಗದೆ ‘ಏನೂ ಇಲ್ಲ’ ಎಂಬ ದಾರಿಯಲ್ಲಿ ಸಾಗಿದವರು” ಎಂಬ ಕೃತಿಯ ಹಿಂಬದಿಯ ಸಾಲುಗಳು ಶ್ರೀಗಳ ನಿರ್ಲಿಪ್ತ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಕೃತಿಯು ವಚನ ಮತ್ತು ಉಪನಿಷತ್ಗಳಿಂದ ಸಮ್ಮಿಲನಗೊಂಡಿದೆ. ಅಲ್ಲಮಪ್ರಭು, ಸಿದ್ಧರಾಮೇಶ್ವರರ ವಚನಗಳಿಂದ ಹಿಡಿದು ಕಠೋಪನಿಷತ್, ಛಾಂದೋಗ್ಯ ಉಪನಿಷತ್ತುಗಳವರೆಗಿನ ಸೂತ್ರಗಳನ್ನು ಲೇಖಕರು ಪ್ರತಿ ಅಧ್ಯಾಯದ ಶೀರ್ಷಿಕೆಯಲ್ಲಿಟ್ಟು ಶ್ರೀಗಳ ದೈನಂದಿನ ನಡವಳಿಕೆಗೆ ಹೊಂದಿಸಿದ್ದಾರೆ. ವೇದಾಂತವು ಗ್ರಂಥಾಲಯದ ತತ್ವವಲ್ಲ, ಅದು ನಡತೆಯಲ್ಲೇ ನುಡಿಯಾಗುವ ಸತ್ಯ ಎಂಬುದನ್ನು ಶ್ರೀಗಳ ಮಾತುಗಳು ರುಜುವಾತುಪಡಿಸುತ್ತವೆ.
ಪ್ಲೇಟೋನ ‘ರಿಪಬ್ಲಿಕ್’ ಪರಿಕಲ್ಪನೆ, ಪ್ಲೋಟಿನಸ್, ಸಂತ ಆಗಸ್ಟಿನ್, ಹರ್ಮನ್ ಹೆಸ್ಸೆಯ ‘ಸಿದ್ಧಾರ್ಥ’ ಹಾಗೂ ಕವಿ ‘ಆಂಡ್ರ‍್ಯೂ ಮಾರ್ವೆಲ್’ನ ಸಾಲುಗಳನ್ನು ಇಲ್ಲಿ ಮುಕ್ತವಾಗಿ ಉಲ್ಲೇಖಿಸಲಾಗಿದೆ. ಇದು ಸಿದ್ದೇಶ್ವರ ಶ್ರೀಗಳ ವಿಶಾಲ ದೃಷ್ಟಿಕೋನವನ್ನು ಹಾಗೂ ಲೇಖಕರ ಅಧ್ಯಯನ ಶೀಲತೆಯನ್ನು ಏಕಕಾಲಕ್ಕೆ ತೆರೆದಿಡುತ್ತದೆ.
ಗಡಿಯಾರದ ಅಂಗಡಿಗೆ ಭೇಟಿ ನೀಡಿದಾಗ “ಕಾಲ ಮತ್ತು ಸಮಯ”ದ ನಡುವಿನ ವ್ಯತ್ಯಾಸವನ್ನು ಬಿಡಿಸಿ ಹೇಳಿದ ಪ್ರಸಂಗವಾಗಲಿ, ವಿಜಯಪುರ-ಬರಟಗಿ ರಸ್ತೆಯ ನಡಿಗೆಯಲ್ಲಿ ಮುಗ್ಧ ಸೈಕಲ್ ಸವಾರನೊಂದಿಗೆ ಶ್ರೀಗಳು ನಡೆಸಿದ ಸಂವಾದವಾಗಲಿ, ಇಲ್ಲವೇ 16 ಕಿ.ಮೀ ನಡೆದುಬಂದ 87 ವರ್ಷದ ಹಿರಿಯ ಭಕ್ತನ ಮುಗ್ಧ ಶ್ರದ್ಧೆಯನ್ನು ಗೌರವಿಸಿದ ಕ್ಷಣವಾಗಲಿ, ಇವೆಲ್ಲವೂ ಶ್ರೀಗಳಲ್ಲಿದ್ದ ಕರುಣೆ ಮತ್ತು ನಿರಾಡಂಬರತೆಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತವೆ.
ನಿಂಬಾಳದ ಗುರುದೇವ ರಾನಡೆ, ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಸಿಂಪಿ ಲಿಂಗಣ್ಣನವರ ಒಡನಾಟದ ನೆನಪುಗಳನ್ನು ಮೆಲಕು ಹಾಕುತ್ತಾ, ಸದ್ಗುರುವಿನ ಮಾರ್ಗದರ್ಶನ ಶಿಷ್ಯನ ಅಹಂಕಾರವನ್ನು ಹೇಗೆ ಮೌನವಾಗಿ ಕರಗಿಸುತ್ತದೆ ಎಂಬುದನ್ನು ಕೃತಿ ಸೂಕ್ಷ್ಮವಾಗಿ ಧ್ವನಿಸುತ್ತದೆ.
ಲೇಖಕ ‘ರಾಗಂ’ ಅವರ ನಿರೂಪಣಾ ಶೈಲಿಯಲ್ಲಿ ಅತಿಯಾದ ವೈಭವೀಕರಣವಿಲ್ಲ; ಬದಲಾಗಿ ನಿಷ್ಠುರವಾದ ಸತ್ಯಾನ್ವೇಷಣೆಯಿದೆ. ಗುರುವಿನ ಸನ್ನಿಧಿಯಲ್ಲಿ ನಿಲ್ಲುವಾಗ ಶಿಷ್ಯನಲ್ಲಿ ಮೂಡುವ ತಳಮಳ, ಸಂದಿಗ್ಧತೆ ಮತ್ತು ಆಂತರಿಕ ಶೋಧನೆಗಳು ಇಲ್ಲಿ ಪ್ರಾಮಾಣಿಕವಾಗಿ ಅಕ್ಷರರೂಪ ತಳೆದಿವೆ. ‘ಸಂತೆ’ ಎಂಬ ಲೌಕಿಕ ಜಂಜಾಟದಿ೦ದ ‘ಸಂತ’ನೆ೦ಬ ನಿಶ್ಚಲ ತತ್ವದೆಡೆಗೆ ಸಾಗುವ ಈ ಆಂತರಿಕ ಪಯಣವು ಕೇವಲ ವ್ಯಕ್ತಿಯೊಬ್ಬರ ಕಥನವಾಗಿ ಉಳಿಯದೆ, ಪ್ರತಿಯೊಬ್ಬ ಸಾಧಕನಿಗೂ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಪ್ರೇರೇಪಿಸುವ ‘ಸಾಧಕರ ಕೈಪಿಡಿ’ಯಾಗಿ ನಿಲ್ಲುತ್ತದೆ.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಚೇತನದ ಸರಳತೆಯನ್ನು, ಅವರ ನಡೆ-ನುಡಿಯಲ್ಲಿದ್ದ ದೈವಿಕತೆಯನ್ನು ಯಾವುದೇ ಕೃತಕತೆಯಿಲ್ಲದೆ ದಾಖಲಿಸಿರುವ ‘ಯೋಗಸ್ಥಃ’ ಭಾಗ-೨, ಕನ್ನಡದ ಆಧ್ಯಾತ್ಮಿಕ ಹಾಗೂ ಸ್ಮೃತಿಸಾಹಿತ್ಯ ಪರಂಪರೆಗೆ ಸಂದ ಮೌಲಿಕ ಕೊಡುಗೆಯಾಗಿದೆ.






0 Comments