-ಉದಯ ಗಾಂವಕಾರ
ಬರುವ ನವೆಂಬರ್ 6 ರಂದು ಸಮುದಾಯ ಕುಂದಾಪುರ ಆರಂಭಿಸಿದ ತಿಂಗಳ ಕತಾ ಓದು ಕಾರ್ಯಕ್ರಮ ಹತ್ತು ವರ್ಷ ಪೂರೈಸುತ್ತದೆ. 2016 ರ ನವೆಂವರ್ 6 ರಂದು ಎಚ್ ಎಮ್ ಎಮ್ ಶಾಲೆಯಲ್ಲಿ ವೆಂಕಟರಮಣ ನಾಯಕರವರು ತೇಜಸ್ವಿಯವರ ಮಾಯಾಮೃಗ ಕತೆಯನ್ನು ಓದುವ ಮೂಲಕ ಈ ಸರಣಿ ಆರಂಭವಾಗಿತ್ತು. ಈ ಕಾರ್ಯಕ್ರಮವನ್ನು ಆರಂಭಿಸುವಾಗ ಸಾಹಿತ್ಯದ ಸಹೃದಯ ಓದುಗರನ್ನು ಜೋಡಿಸುವುದಷ್ಟೇ ಉದ್ಧೇಶವಾಗಿರಲಿಲ್ಲ, ಹೊಸ ಓದುಗರನ್ನು ರೂಪಿಸುವುದು, ತಲುಪುವುದು ಮತ್ತು ಅವರೊಡನೆ ಮಾತಿಗಿಳಿಯುವುದು ಈ ಕಾರ್ಯಕ್ರಮದ ಬೀಜರೂಪೀ ಒಡಲಿನಲ್ಲಿ ಹುದುಗಿತ್ತು. ಆ ಉದ್ಧೇಶಕ್ಕೆ ತಕ್ಕಂತೆ ಸಮುದಾಯದ ಒಡನಾಟಕಕ್ಕೆ ಹೊಸಬರು ದೊರೆತದ್ದೂ ಸುಳ್ಳಲ್ಲ.
ಕತೆಗಾರ್ತಿಯ ಅಥವಾ ಕತೆಗಾರನ ಸೃಜನಶೀಲ ಮನಸ್ಸು ತನ್ನ ಲೋಕಾನುಭವದಿಂದ ಕತೆಯೊಂದನ್ನು ಹೊಸೆಯುತ್ತಿರುವಾಗಲೇ ಕತೆಯು ಕತೆಗಾರ್ತಿಯಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿರುತ್ತದೆ. ಕತೆಗಾರ್ತಿಯಿಂದ ಹೀಗೆ ತಪ್ಪಿಸಿಕೊಂಡೇ ಶ್ರೇಷ್ಠ ಕತೆಗಳು ಜೀವತಾಳಿವೆ. ಹೀಗೆ ಹುಟ್ಟಿದ ಕತೆಗಳಿಗೆ ತಪ್ಪಿಸಿಕೊಳ್ಳುವುದೆಂದರೆ ಬಲು ಇಷ್ಟವಿರಬೇಕು; ಕತೆಗಳು ಕತೆಗಾರ್ತಿಯ ಹಕ್ಕುಸ್ವಾಮ್ಯದಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡು ಓದುಗನಲ್ಲಿ ಅವರವರ ಲೋಕಗ್ರಹಿಕೆ, ನೋಟಕ್ರಮಗಳಿಗೆ ತಕ್ಕಂತೆ ವಿಸ್ತರಿಸಿಕೊಳ್ಳುತ್ತವೆ. ಓದುಗ ಪಠ್ಯದ ಒಳಗೆಲ್ಲೋ ವಿಹರಿಸಿ ಹೊರಬರುವಾಗ ಕತೆಗೆ ಹೊಸರೂಪ ಬರುತ್ತದೆ. ಓದುಗ ಕತೆಯನ್ನು ತನ್ನ ಸೃಜನಶೀಲ ಶಕ್ತಿಯಿಂದ ನಮ್ಯಗೊಳಿಸುತ್ತಿರುವಾಗಲೇ ಕತೆಯು ಓದುಗನ ನೋಟಕ್ರಮಗಳನ್ನು ಪ್ರಭಾವಿಸುತ್ತಿರುತ್ತದೆ. ಕತೆಗಾರ್ತಿ- ಕತೆ- ಓದುಗ ಎಲ್ಲೋ ಕೆಲವು ಬಿಂದುಗಳಲ್ಲಿ ಸಂಧಿಸುವ, ಅಲ್ಲೇ ವಿಲೀನವಾಗುವ ಅಮೃತಗಳಿಗೆಯನ್ನು ಹುಡುಕುತ್ತಾ ನಾವು ತಿಂಗಳಿಗೊಮ್ಮೆ ಕತೆಯೊಂದರ ಎಳೆ ಹಿಡಿದು ಜೊತೆಯಾಗುವುದು. ಓದಿದ ಕತೆಯನ್ನೇ ಇನ್ನೊಮ್ಮೆ ಕೇಳುವುದು. ಕತೆಯನ್ನು ಕತೆಗಾರ ಅಥವಾ ಕತೆಗಾರ್ತಿಯಿಂದ ಸಂಪೂರ್ಣವಾಗಿ ಬಿಡಿಸಿಕೊಂಡು ನಮ್ಮದೇ ಲೋಕಾನುಭವದಲ್ಲಿ ಮುಳುಗಿಸೇಳಿಸಿ ಮರುಕಟ್ಟುವುದು ಸೃಷ್ಟಿಕ್ರಿಯೆಯಲ್ಲದೆ ಮತ್ತೇನು?
ಲಂಕೇಶ್, ಅನಂತಮೂರ್ತಿ, ಚಿತ್ತಾಲ, ದೇವನೂರು,ಕಾಯ್ಕಿಣಿ, ವಸುದೇಂದ್ರ,ಸುನಂದಾ ಕಡಮೆ ಹೀಗೆ ಹಲವಾರು ಕತೆಗಾರರ ಕತೆಗಳನ್ನೋದಿ, ಕೇಳಿ, ಅವುಗಳ ಕುರಿತು ಮಾತನಾಡಿ, ಆನಂತರ ಮಾತು ಎಲ್ಲಿಗೆಲ್ಲಿಗೋ ಹೋಗಿ ಕೊನೆಗೂ ಚಟ್ಟಂಬಡೆಯೊಂದಿಗೆ ಬಂದ ಚಹಾ ತಣ್ಣಗಾಗುವುದರೊಂದಿಗೆ ಕತಾ ಓದು ಪ್ರತಿಸಲವು ಕೊನೆಗೊಳ್ಳುತಿತ್ತು.
ಕೆಲವು ಕತೆಗಳನ್ನು ವಾಚಿಸಿದ್ದೇವೆ. ಕೆಲವನ್ನು ಆಡಿದ್ದೇವೆ, ಅಭಿನಯಿಸಿದ್ದೇವೆ. ಕೆಲವನ್ನು ಕತೆಗಾರರೇ ಬಂದು, ಓದಿಹೋಗಿದ್ದಾರೆ ಕೂಡಾ.
ಪ್ರತಿ ಕಥಾಓದಿನಲ್ಲೂ…
ಎಲ್ಲರಿಗೂ ಪರಿಚಯವಿರುವ ಅದೇ ಮಾರುಕಟ್ಟೆಯಿಂದ ಎತ್ತಿತಂದ ಅವೇ ಸಾಮಗ್ರಿಗಳನ್ನು ಕುಶಲ ಕತೆಗಾರರು ಹೇಗೆ ಅತ್ಯಂತ ರುಚಿಯ ಅಡುಗೆಯಾಗಿ ಪರಿವರ್ತಿಸುತ್ತಾರೆಂದು ಆಶ್ಚರ್ಯಪಟ್ಟಿದ್ದೇವೆ. ಅಡುಗೆಯ ರುಚಿಯನ್ನು ನಿರ್ಧರಿಸುವಲ್ಲಿ ಅದನ್ನು ಸಿದ್ಧಪಡಿಸಿದವರ ಪಾಲೆಷ್ಟು ಮತ್ತು ಅದನ್ನು ಸ್ವೀಕರಿಸಿದವರ ನಾಲಿಗೆಯ ರಸಾಂಕುರಗಳ ಪಾತ್ರ ಎಂತಹದ್ದು ಎಂದು ಅನುಮಾನಿಸಿದ್ದೇವೆ. ಕತೆಗಳ ಚುಂಗು ಹಿಡಿದು ಸಂಚರಿದ್ದೇವೆ. ಕತೆಗಳು ಮೀಟಿದ ಕಂಪನದಲ್ಲಿ ಕಳೆದುಹೋಗಿದ್ದೇವೆ.
ಸುನಂದಾ ಕಡಮೆಯವರು ಯವರು ತಮ್ಮ ಕತೆಯೊಂದನ್ನು ಓದಲು ದೂರದ ಹುಬ್ಬಳ್ಳಿಯಿಂದ ಆಗಮಿಸಿದ್ದರು. ಅವರ ಕತೆಗಳಲ್ಲಿ ಬರುವ ಕೌಟುಂಬಿಕತೆಯ ಜಟಿಲ ಬಂಧಗಳು ಪ್ರತಿ ಭೂಕಂಪನದ ನಂತರವೂ ಇನ್ನಷ್ಟು ಸ್ಥಿರಗೊಳ್ಳುವ ಭೂಮಿಯಂತೆ ಇನ್ನಷ್ಟು ಬಿಗಿಗೊಳ್ಳುತ್ತವೆ. ಮನುಷ್ಯ ಸಂಬಂಧಗಳು ಉಸಿರು ಆಹಾರದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಎಂಬ ಸುನಂದಾರ ನಂಬಿಕೆಯೇ ಅವರ ಎಲ್ಲ ಕತೆಗಳ ಜೀವಾಳ. ಸುನಂದಾರೇ ಓದಿದ ಸರಸ್ವತಿಯ ಫೇಸ್ಬುಕ್ ಪ್ರಸಂಗ ಕತೆಯಲ್ಲೂ ಪ್ರತಿ ಕದಲಿಕೆಯ ನಂತರವೂ ಸಂಬಂಧಗಳನ್ನು ಗಟ್ಟಿಗೊಳಿಸುವ ಆಶಯವಿರುವ ಪಾತ್ರಚಿತ್ರಣಗಳು ದೊರೆಯುತ್ತವೆ. ಎಲ್ಲ ಸೃಜನಶೀಲ ಅಭಿವ್ಯಕ್ತಿಗಳ ಮೂಲ ನಿಲುವು ಮಾನವತೆಯೇ ಆಗಿರಬೇಕೆಂಬ ಸುನಂದಾರ ಜೀವಪ್ರೀತಿಯನ್ನು ಅವರ ಕತೆಗಳು ಹೊತ್ತುಕೊಂಡು ತಿರುಗುತ್ತವೆ. ಇದೇ ರೀತಿ ಸ್ವತಃ ಕತೆಗಾರರೇ ಬಂದು ಕತೆ ಓದಿದ ಇನ್ನೂ ಕೆಲವು ನಿದರ್ಶನಗಳಿವೆ. ಈಗ ಬುಕ್ ಬ್ರಹ್ಮ ಮೂಲಕ, ಬುಕ್ ಬ್ರಹ್ಮ ನಡೆಸುವ ಸಾಹಿತ್ಯೋತ್ಸವಗಳ ಮೂಲಕ, ಅಲ್ಲದೆ, ಘಾಂದ್ರುಕ್ ನಂತಹ ಕಾದಂಬರಿಯ ಮೂಲಕ ಹೆಸರಾಗಿರುವ ಸತೀಶ್ ಚಪ್ಪರಿಕೆ ತಮ್ಮ ಗರ್ಭ ಕತೆಯನ್ನು ಸಮುದಾಯದ ತಿಂಗಳ ಕತಾ ಓದಿನಲ್ಲಿ ಹಂಚಿಕೊಳ್ಳಲು ಬೆಂಗಳೂರಿನಿಂದ ಬಂದಿದ್ದರು. ವಿಲ್ಸನ್ ಕಟೀಲ್ ತಮ್ಮ ಕವಿತೆಗಳನ್ನು ಓದಿ ಹೋಗಿದ್ದರು.
ಕೆಲವು ಕತೆಗಳನ್ನು ವಾಸುದೇವ ಗಂಗೇರರ ನಿರ್ದೇಶನದಲ್ಲಿ ರಂಗದ ಮೇಲೆ ಓದಿದ್ದೇವೆ. ಅಂತವುಗಳ ಅನುಭವ ಬೇರೆ ತೆರನಾದದ್ದು. ಒಂದು ಕತೆಯನ್ನು ಹಲವರು ಓದುವುದು ಖಾಸಗಿ ಓದಿಗಿಂತ ಬೇರೆಯೇ ಅನುಭವ ನೀಡುತ್ತದೆ. ಒಂದು ಪಠ್ಯವನ್ನು ನಾವಷ್ಟೇ ನಮ್ಮಷ್ಟಕೆ ಓದುವಾಗ ಕತೆಯ ಪ್ರಪಂಚವನ್ನು ನಮ್ಮೊಳಗೆ ಸೃಷ್ಟಿಸಿಕೊಳ್ಳಲು ಸಿಗುವ ಏಕಾಂತ ಈ ಓದಿನಲ್ಲಿ ಸಿಗುವುದಿಲ್ಲವಾದರೂ ಬಹಿರಂಗದಲ್ಲಿ ಅವರಿವರ ಪ್ರತಿಕ್ರಿಯೆಗಳಲ್ಲಿ ಒಂದು ಕತೆಯನ್ನು ಮರುಕಟ್ಟುವ ಹೊಸ ದಾರಿ ಇಲ್ಲಿ ಒಲಿಯುತ್ತದೆ. ಸುನಂದಾ ಕಡಮೆಯವರ ಪತ್ರೋಡೆ, ಗಿರೀಶ್ ಕಾರ್ನಾಡರ ತಲೆದಂಢದ ಒಂದು ಭಾಗ, ಬ್ರೆಕ್ಟನ ಪಾಷಾಂಡಿಯ ಕೋಟು ಇತ್ಯಾದಿ ಕತೆಗಳು ಈ ಬಗೆಯಲ್ಲಿ ನಮ್ಮ ಓದಿಗೆ ಧಕ್ಕಿವೆ.
ಆರಂಭದಲ್ಲಿ ತೇಜಸ್ವಿ, ಜಯಂತ ಕಾಯ್ಕಿಣಿ, ವಸುದೇಂದ್ರ, ಸುನಂದಾ ಕಡಮೆಯಂತವರ ಕತೆಗಳನ್ನೇ ಆಯ್ದು ಈ ಸರಣಿಯನ್ನು ಮುಂದುವರಿಸುವಾಗ ಟೀಕೆಗಳೂ ಬಂದಿದ್ದವು. ಆದರೆ, ಹೊಸ ಓದುಗರನ್ನು ಗಂಭೀರ ಓದಿಗೆ ಎಳೆಯುವ ನಮ್ಮ ಉದ್ಧೇಶಕ್ಕೆ ಆ ಆಯ್ಕೆಗಳು ಸರಿಯಾಗೇ ಇದ್ದವು ಎಂಬುದು ನಮ್ಮನ್ನು ಸೇರಿಕೊಂಡ ಹೊಸಬರಿಂದಲೇ ಮನದಟ್ಟಾಯಿತು. ಮುಂದೆ ಲಂಕೇಶ್, ಅನಂತಮೂರ್ತಿ, ವ್ಯಾಸ, ಬ್ರೆಕ್ಟ್ ರನ್ನು ಈ ಪರಿಧಿಗೆ ಸೇರಿಸುತ್ತಾ ಹೋದಂತೆ ಈ ಟೀಕೆಗಳು ಕರಗಿದವು. ಓದುಗರಿಗೆ ಹೊಸ ಕತೆಗಾರರನ್ನು ಪರಿಚಯಿಸುವಂತೆ ಆ ಕತೆಗಳನ್ನು ಅಷ್ಟೇ ಉತ್ತಮವಾಗಿ ವಾಚಿಸಬಲ್ಲ ಓದುಗರನ್ನೂ ಪರಿಚಯಿಸಲು ಸಾಧ್ಯವಾಯಿತು. ವಿನಾಯಕ ಎಂ ರವರು ಶ್ರೀನಿವಾಸ ವೈದ್ಯರ ಕತೆಗಳನ್ನು ವಾಚಿಸಿದ ಪರಿಣಾಮಕಾರಿ ವಿಧಾನದ ಕುರಿತು ಈಗಲೂ ಹಲವರು ಮಾತಾಡಿಕೊಳ್ಳುತ್ತಾರೆ. ಎಲ್ಲಪ್ಪ ಕೆಕೆಪುರರವರ ಕಟ್ಟಕಡೆಯವರ ಕತೆ, ರಾಮಕೃಷ್ಣ ಗುಂದಿಯವರ ಆವಾರಿ, ಉದಯ ಗಾಂವಕಾರರವರ ಎಚ್ಚದ ಮನೆ ಮುಂತಾದ ಹೆಚ್ಚು ಪ್ರಚಲಿತಗೊಳ್ಳದ ಕತೆಗಳಿಗೂ ಇಲ್ಲಿ ಕೇಳುಗರು ಒದಗಿದರು.
ಕೋವಿಡ್ ಸಮಯದಲ್ಲೂ ಕ್ಲಬ್ ಹೌಸ್ ಮೂಲಕ ಕತಾ ಓದು ಮುಂದುವರಿಯಿತು. ಸಂತೋಷಗುಡ್ಡಿಯಂಗಡಿಯವರ ಗಂಜಿಬಜ್ಜಿ ಕತೆಯನ್ನು ರಮೇಶ ಗುಲ್ವಾಡಿಯವರು, ಪುತಿನ ರವರ ಧ್ವಜರಕ್ಷಣೆ ಕತೆಯನ್ನು ಡಾ. ಶ್ರೀಪಾದ ಭಟ್ ತುಂಬಾ ಚೆನ್ನಾಗಿ ಓದಿದ್ದರು. ಅಕ್ಕ-ಪಕ್ಕದಲ್ಲೇ ಕುಳಿತು ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಪ್ರತಿಕ್ರಿಯಿಸುವ ಸುಖ ಇಂತಹ ಓದಿನಲ್ಲಿ ದೊರೆಯುವುದಿಲ್ಲವಾದರೂ ಭೌಗೋಳಿಕ ಗಡಿಗಳನ್ನು ಮೀರಿ ಒಟ್ಟಿಗೆ ಕತೆ ಕೇಳುವುದು ಇನ್ನೊಂದು ಬಗೆಯ ಅನುಭವ. ಈಗ ಒಮ್ಮೆಲೆ ನೆನಪಿಗೆ ಬರದ ಇನ್ನೂ ಹಲವು ಸಂಗತಿಗಳಿವೆ. ಈ ಓದಿನಲ್ಲಿ ಜೊತೆಯಾದವರು ಸೇರಿಸಬಹುದು.
ಕತೆಯನ್ನು ಆಯ್ದುಕೊಳ್ಳುವಾಗ ಅದು ಹದಿನೈದರಿಂದ ಹದಿನೇಳು ನಿಮಿಷಗಳಲ್ಲಿ ಓದುವಷ್ಟು ದೊಡ್ಡದಿರಬೇಕೆಂಬ ಮಿತಿಯನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿತ್ತು. ಬಹಿರಂಗ ಓದಿಗೆ ಕಿವಿಗೊಡುವವರು ಹಲವು ಅವಧಾನ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಮನಗಂಡೇ ಈ ಮಿತಿಯನ್ನು ಹಾಕಿಕೊಂಡಿದ್ದೆವು. ಆದರೆ, ಓದಿನ ನಂತರ ಈ ಕತೆಗಳು ಹಲವು ಪದರುಗಳನ್ನು ತೆರೆದುಕೊಳ್ಳುತ್ತಾ ಗಂಟೆಗಳ ಕಾಲ ಕೇಳುಗರನ್ನು ಒಂದು ಮಾಡಿಕೊಂಡಿರುತ್ತಿದ್ದವು. ಡಾ. ರಾಜೇಂದ್ರ ನಾಯಕರು ಲಂಕೇಶರ ಮುಟ್ಟಿಸಿಕೊಂಡವನು ಓದಿದ ನಂತರ ಅಥವಾ ದೇವನೂರರ ಡಾಂಬರು ಬಂದುದು, ಎಚ್ ನಾಗವೇಣಿಯವರ ದಣಿಯರ ಬೆಳ್ಳಿಲೋಟ ಕತೆಗಳ ಓದಿನ ನಂತರ ದೀರ್ಘ ಚರ್ಚೆಗಳು ನಡೆದವು.
ಕತೆಗಳನ್ನು ಏಕೆ ಓದಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಡಿ.ಎಚ್ ಲಾರೆನ್ಸ್ ಕತೆಯ ಸ್ವರೂಪದ ಬಗ್ಗೆಯೂ ಮಾತಾಡುತ್ತಾರೆ. Trust the tale, not the teller ಎಂಬ ಅವರ ಹೇಳಿಕೆ ಕತೆಗಳಿಗೆ ಇರುವ ಅಪರಿಮಿತ ಶಕ್ತಿಯು ಅದು ಓದುಗನಿಗೆ ಸತ್ಯವಾಗುವುದರ ಮೂಲಕ ಓದುಗುವಂತದ್ದು ಎಂಬುದನ್ನು ತಿಳಿಸುತ್ತದೆ. ಕತೆಗಾರನು ಎಷ್ಟೇ ಅಪ್ರಾಮಾಣಿಕನಾಗಿರಲಿ ಕತೆಗಳು ಸುಳ್ಳಾಗಲಾರವು. ಓದುಗನ ಮಟ್ಟಿಗೆ ಎಲ್ಲ ಕತೆಗಳೂ ಸತ್ಯ. ಏಕೆಂದರೆ, ಓದುಗರು ಕತೆಗಳಿಗೆ ತಮ್ಮ ಅನುಭವದ ಮೂಲಕವೇ ಜೀವ ನೀಡುತ್ತಾರೆ.
ಆ ಮಟ್ಟಿಗೆ, ಕತೆಗಳು ಓದುಗನಷ್ಟೇ ಸತ್ಯ.






0 Comments