ಸವಿರಾಜ್ ಆನಂದೂರು ಅವರ ಕವನ ಸಂಕಲನ ‘ಗಂಡಸರನ್ನು ಕೊಲ್ಲಿರಿ’
ಕಾವ್ಯ ಮನೆ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ನಾದ ಅಲೆಮಾರಿ ಅವರ ಬರಹ ಇಲ್ಲಿದೆ.
– ನಾದ ಅಲೆಮಾರಿ
ನಮಸ್ಕಾರ, ಗಂಡಸರನ್ನು ಕೊಲ್ಲಿರಿ ಎಂದು ನೀವು ಹೊರಡಿಸಿದ ಫತ್ವಾ ಅಲ್ಲಲ್ಲಿ ಓದಿ ಗಲಿಬಿಲಿಗೊಂಡಿದ್ದೆ. ಈ ಅಲೆಮಾರಿ ಹಾದಿಯಲ್ಲಿ ಎಲ್ಲೋ ಆ ಕವನ ಸಂಕಲನ ಸಿಕ್ಕಿತು. ಓದಿದೆ ಮತ್ತು ನಿಮ್ಮ ಫತ್ವ ಬಹಳ ನ್ಯಾಯೋಚಿತವಾದುದು ಅಂತ ನಾನು ಒಪ್ಪಿಕೊಂಡಿದ್ದೇನೆ.
ತುಂಬಾ ಸಲ ಒಂದು ಕವನ ಸಂಕಲನದಲ್ಲಿ ಕೆಲವಷ್ಟೇ ಗ-ಮನಸೆಳೆಯುವ ಕವಿತೆಗಳು ಇರುವುದು ಸಾಮಾನ್ಯ. ಆದರೆ ನಿಮ್ಮ ಸಂಕಲನದಲ್ಲಿ ಬಹುತೇಕ ಎಲ್ಲವೂ ನನ್ನನ್ನು ಬಹಳವಾಗಿ ಸೆಳೆದವು ಮತ್ತು ಮತ್ತೆ ಮತ್ತೆ ಓದಿಕೊಳ್ಳುವಂತೆ ಹಠಕ್ಕಿಟ್ಟುಕೊಂಡವು. ಮೊದಲ ‘ಪ್ರಾರ್ಥನೆ’ ಕವಿತೆಯಿಂದ ಹಿಡಿದು ‘ಎಲ್ಲ ಹುಡುಗಿಯರಿಗೆ’ ವರೆಗೂ ಓದಿಸಿಕೊಳ್ಳುವುದು ಮತ್ತು ಒಳಗೊಳಗೆ ಕಾಡಿಸಿ ಧ್ಯಾನಿಸಿಕೊಳ್ಳುವುದನ್ನು ನಾನು ಗಮನಿಸಿದೆ. ಅಷ್ಟೇ ಅಲ್ಲ, ಇಷ್ಟಪಟ್ಟೆ ಕೂಡಾ.
ಏಕತಾರಿ ಹಿಡಿದುಕೊಂಡು ಹಾಡುತ್ತಾ ಅಲೆದಾಡುತ್ತಾ ಸುತ್ತುವಾಗಲೆಲ್ಲ ನನ್ನ ಕಂಠ ಶೋಷಣೆಗೆ ಒಳಗಾಗಿತ್ತು. ಆದರೆ ನನ್ನ ಹಾಡು ಬರೀ ಕೊರಳ ಹಾಡಲ್ಲ, ಅದು ಕರುಳ ಹಾಡು ಅನ್ನುವುದು ನನಗಂತೂ ಸ್ಪಷ್ಟವಿದೆ. ನಿಮ್ಮ ಪ್ರಾರ್ಥನೆಯ ಸಾಲು ‘ಕಂಠ ಶೋಷಣೆಯ ತಪ್ಪಿಸಿ, ನಾಭಿಯಿಂದ ನುಡಿಸೆನ್ನ ‘ ಅಂತ ಓದಿದಾಗ ನನಗೆ ನಾನೇ ಮಾಡಿಕೊಳ್ಳುವ ಒಳ ಪ್ರಾರ್ಥನೆ ನೆನಪಾಯಿತು. ಅದರ ಮುಂದಿನ ಸಾಲು ಮಾತ್ರ ಇಡೀ ಮನುಕುಲದ ಸೃಷ್ಟಿ ಚರಿತ್ರೆಯನ್ನು ಬಹಳ ಆಳದ ಅನುಭೂತಿಯೊಂದು ಆವರಿಸಿರುವುದನ್ನು ಖಂಡಿತವಾಗಿ ಅಲ್ಲಗಳೆಯಲಾಗದು. ಮತ್ತು ಇದನ್ನು ಓದುತ್ತಿದ್ದಾಗ ಠಾಗೋರ್ ಅವರ ಗೀತಾಂಜಲಿಯ ಪ್ರಾರ್ಥನೆಯ ಗೀತೆಯೊಂದು ನೆನಪಾಯಿತು.
ಬುದ್ಧ ಚರಿತದ ಮನೆವಾರತೆ ಬಹಳ ಇಷ್ಟವಾಯಿತು. ಧಾರ್ಮಿಕತೆಯ/ ಆಧ್ಯಾತ್ಮಿಕತೆಯ ಹಾದಿಗಳು ಹೀಗೆ ನಮ್ಮ ಬದುಕಿನ ದರ್ಶನಗಳಾದಾಗ ನಮ್ಮ ನಾಗರಿಕತೆಯ ಕೊರತೆಗಳು ನಾಚಿಕೊಂಡಾವು ಅನಿಸಿತು.
ಬೀಜ ಬೇರೂರಿದರಷ್ಟೇ ಬಾಳು, ಮರದ ನೆನಪಲ್ಲೇ ಕೊಳೆಯುವುದರಲ್ಲಿ ಯಾವ ಅರ್ಥವಿದೆ ಹೇಳು..,? ಎಂಬ ಸ್ವಗತ, ಜೀವ ಲಘುವಾಗಿ ಭಾವ ಗುರುವಾಯಿತು ಎಂಬ ಸತ್ಯಶೋಧನೆ, ಸುಖವೆಂದರೆ ಸರಳ; ನಿನ್ನೆಡೆಗಿನ ನಿಯತ್ತು ತಪ್ಪುವುದು ಎಂಬ ಝೆನ್ನೋಟ, ಅಹಿಂಸೆಯನ್ನು ನೀವು ಕಟ್ಟಿದ ಮೂರು ಪ್ಯಾರಾಗಳಲ್ಲಿ ನಮಗೆ ‘ಕಾಣಿಸುವ’ ರೀತಿ ಬಹಳ ಚಂದ. ನಾನಿನ್ನು ಸತ್ತಿರಲಿಲ್ಲ ಕವಿತೆ ನಾವಿನ್ನು ಬದುಕಿದ್ದೀವಾ ಎಂಬ ಪ್ರಶ್ನೆಯನ್ನೂ ಮೂಡಿಸುವ ಹಾಗಿದೆ.
ಹೀಗೆ ಓದು ಮುಂದುವರಿಯುತ್ತಲೇ ಟೇಬಲ್ ಮ್ಯಾನರ್ಸ್ ಕವಿತೆಗೆ ಬಂದು, ಅದರ ಎರಡನೇ ಪ್ಯಾರಾದ ಕೊನೆಯ ಗೆರೆ ‘ ಹೊಟ್ಟೆಯೊಳಗಿಷ್ಟು ಬೂದಿ ಹಾಗೆ ಇದೆ’ ಎಂದು ಓದಿದಾಗ ಕಣ್ಣುಗಳಲಿ ನೀರು ಜಿನುಗಿ, ಮುಂದೆ ಓದಲಾಗದೆ ಸೋತುಬಿಟ್ಟಿದ್ದೆ. ಕೆಲದಿನದ ನಂತರ ಇನ್ನೊಂದು ಸುತ್ತಿನ ಓದು ಮುಂದುವರೆಯಿತು. ಪ್ರಣಯಕ್ಕಿಂತ ಸನಾತನವಾದದ್ದೇನನ್ನು ಕೊಡಬಲ್ಲೆ? ಎಂದು ಸನಾತನಿ ಹುಡುಗಿಗೆ, ಇಟ್ಟರೆ ಮಾಟ, ತಟ್ಟಿದರೆ ಶರಬತ್ತು ಎಂದು ದಳದ ಹುಡುಗಿಗೆ ಅನ್ನುತ್ತಾ ನೀವು ನಿ-ವೇದಿಸಿದ ರೀತಿ ಬಹಳ ಇಷ್ಟವಾಯಿತು.
ಕೆಟ್ಟವರೇನಲ್ಲ ಅನ್ನುವ ಇಡೀ ಕವಿತೆಯ ಎಲ್ಲಾ ತುಣುಕುಗಳು ಈ ಹೊತ್ತಿನ ಬಹುತೇಕ ಸಂಗಾತಿಗಳ ಸ್ವಗತಗಳು. ನನ್ನ ಶಿಬಿರ ತರಬೇತಿ ಕಾರ್ಯಗಾರಗಳಲ್ಲಿ ಇಂತಹ ಸಂಗತಿಗಳನ್ನು ಮಾತಾಡುತ್ತ ಅಸಮಾನತೆಯ ಕಿಡಿಗಳ ಕುಡಿಗಳನ್ನು ಹೆಕ್ಕಿ ಪರಿ -ವರ್ತಿಸಿಕೊಳ್ಳುವ ಹಾದಿಗಳ ಬಗ್ಗೆ ಮಕ್ಕಳು ಮತ್ತು ಯುವಜನರ ಜೊತೆಗೆ ಕೆಲಸ ಮಾಡುತ್ತಿರುವಾಗ ಈ ಕವಿತೆ ನಮಗೆ ಒಳ್ಳೆಯ resource ಆಗಿಯೂ ಉಳಿಯುತ್ತದೆ.
ಒಟ್ಟು ಸಂಕಲನದ ಎಲ್ಲ ಕವಿತೆಗಳಿಗೆ ನಮ್ಮೊಳ ಹೊಕ್ಕು ಮಾತನಾಡಿಸುವ ಶಕ್ತಿ ಇದೆ.
ವಂದನೆಗಳು ಸವಿರಾಜಣ್ಣ.
ಇಂತು ಒಲುಮೆಯಿಂದ






0 Comments