ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಸಿ ರೊಟ್ಟಿಯೊಂದು ತುಪ್ಪವನ್ನು ತಣ್ಣಗಾಗಿಸಿ ಎದೆ ಕರಗಿಸಿತು…

ವಿವೇಕ ಕೆ ವಿ ಅವರ ‘ಬಿಸಿ ರೊಟ್ಟಿ ಮತ್ತು ಇತರ ಕಥೆಗಳು’

ಈ ಕೃತಿಯ ಕುರಿತ ದಯಾ ಗಂಗನಘಟ್ಟ ಅವರ ಬರಹ ಇಲ್ಲಿದೆ.

-ದಯಾ ಗಂಗನಘಟ್ಟ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಣ್ಣಕಥೆಯು ಕಾದಂಬರಿಯ ತರುವಾಯ ಅತ್ಯಂತ ಜನಪ್ರಿಯವಾದ ಮತ್ತು ಪ್ರಭಾವಶಾಲಿಯಾದ ಸಾಹಿತ್ಯ ಪ್ರಕಾರವಾಗಿದೆ. ಇಂದಿನ ಆಧುನಿಕ ‘ಸಣ್ಣಕಥೆ’ಯ ಸ್ವರೂಪವು ಪಾಶ್ಚಾತ್ಯ ಸಾಹಿತ್ಯದ ನೇರ ಪ್ರಭಾವದಿಂದ ರೂಪುಗೊಂಡಿದ್ದಾಗಿದೆ.
ಆಧುನಿಕ ಕನ್ನಡ ಸಾಹಿತ್ಯದ ಆರಂಭಿಕ ಘಟ್ಟಗಳಲ್ಲಿ, ಕಥನ ಪರಂಪರೆಯು ಬಹುಪಾಲು ಪುರುಷ-ಕೇಂದ್ರಿತವಾಗಿತ್ತು. ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಮಹಿಳೆಯು ಸಾಹಿತ್ಯದ ಕೇವಲ ‘ವಸ್ತು’ವಾಗಿದ್ದಳೇ ಹೊರತು, ‘ಸೃಷ್ಟಿಕರ್ತೆ’ಯಾಗಿ ವ್ಯಾಪಕವಾಗಿ ಗುರುತಿಸಿಕೊಂಡಿರಲಿಲ್ಲ. ಆರಂಭಿಕ ಪುರುಷ-ರಚಿತ ಸಣ್ಣಕಥೆಗಳಲ್ಲಿ ಹೆಣ್ಣನ್ನು ಕೇವಲ ಆದರ್ಶಮಯಿಯಾಗಿ, ತ್ಯಾಗಮಯಿಯಾಗಿ, ಕ್ಷಮಯಾಧರಿತ್ರಿಯಾಗಿ ಮತ್ತು ಸದ್ಗೃಹಸ್ಥೆಯಾಗಿ ಚಿತ್ರಿಸಲಾಗುತ್ತಿತ್ತು. ವಿಧವಾ ಸಮಸ್ಯೆಯಂತಹ ವಿಚಾರಗಳು ಕಥೆಗಳಲ್ಲಿ ಸ್ಥಾನ ಪಡೆದರೂ, ಅವೆಲ್ಲವೂ ಪುರುಷ ಪ್ರಧಾನ ವ್ಯವಸ್ಥೆಯ ಚೌಕಟ್ಟಿಗೆ ಪೂರಕವಾಗಿಯೇ ಚಿತ್ರಿತಗೊಂಡಂತವು. ಆದರೆ, ಕಾಲಕ್ರಮೇಣ ಮಹಿಳಾ ಲೇಖಕಿಯರು ಲೇಖನಿ ಹಿಡಿದು ತಮ್ಮದೇ ಆದ ‘ಸ್ತ್ರೀ ಸಂವೇದನೆ’ಯನ್ನು (Female Sensibility) ದೈನಂದಿನ ಕೌಟುಂಬಿಕ ಬಿಕ್ಕಟ್ಟುಗಳು, ಮಾನಸಿಕ ತಲ್ಲಣಗಳು ಮತ್ತು ಅಸ್ತಿತ್ವದ ಹೋರಾಟಗಳ ಮೂಲಕ ವ್ಯಕ್ತಪಡಿಸಲು ಆರಂಭಿಸಿದಾಗ, ಕನ್ನಡ ಕಥಾಸಾಹಿತ್ಯದ ದೃಷ್ಟಿಕೋನ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷಿ ಯಾಯಿತು.

ಸಾಹಿತ್ಯ ಚರಿತ್ರೆಯನ್ನು ಪುನರ್-ವಿಮರ್ಶಿಸುವಾಗ ಮಹಿಳಾ ಲೇಖಕಿಯರು ಎದುರಿಸಿದ ಅತಿ ದೊಡ್ಡ ಸವಾಲೆಂದರೆ “ಚಾರಿತ್ರಿಕ ನಿರ್ಲಕ್ಷ್ಯ”.ಇದು ಕನ್ನಡ ಸಾಹಿತ್ಯ ಚರಿತ್ರೆಯಲ್ಲೂ ಎದ್ದುಕಾಣುತ್ತದೆ.

ಇಂತಹಾ ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ಪ್ರಸ್ತುತ ಸಾಹಿತ್ಯವನ್ನಷ್ಟೇ ಮುಂದಿಟ್ಟುಕೊಂಡು ಯೋಚಿಸಿದರೆ ಹೊಸ ತಲೆಮಾರಿನಲ್ಲಿ ಹಲವಾರು ದಿಟ್ಟ ಕಥೆಗಾರ್ತಿಯರು ನಮಗೆ ಸಿಗುತ್ತಾರೆ. ನೋಡುವ ನೋಟ ಇನ್ನೂ ದಕ್ಕಬೇಕಷ್ಟೇ.

ಇಂತಹುದೇ ಉದಯೋನ್ಮುಖ ಕತೆಗಾರ್ತಿಯರ ದಂಡಿನಲ್ಲಿ ಮಿಂಚುಹುಳುವಿನಂತೆ ಮಿಣುಗುವ ಶಕ್ತ ಕಥೆಗಾರ್ತಿ ” ವಿವೇಕ. ಕೆ.ವಿ ಅವರು. ಇವರ “ಬಿಸಿ ರೊಟ್ಟಿ ಮತ್ತು ಇತರ ಕಥೆಗಳು” ಕಥಾಸಂಕಲನವನ್ನು ಓದುತ್ತಾ ಹೋದಂತೆ ಇಲ್ಲಿನ ಕಥೆಗಳನ್ನು ಕೇವಲ ಕಥಾವಸ್ತುಗಳ ಆಧಾರದ ಮೇಲೆ ವಿಶ್ಲೇಷಿಸುವುದು ಅಪೂರ್ಣವಾಗುತ್ತದೆ ಎಂದು ನನಗೆ ಅನಿಸಿತು. ಯಾಕಂದರೆ ಇವರು ಕಥನ ಶಿಲ್ಪವನ್ನು (Narrative Architecture) ಕಟ್ಟಿಕೊಡುವ ಬಗೆ, ಭಾಷೆಯ ಬಳಕೆ ಮತ್ತು ರೂಪಕಗಳ ಸೃಷ್ಟಿಯು ಅತ್ಯಂತ ವಿಶಿಷ್ಟವಾಗಿದೆ. ದೇವರು, ಧರ್ಮ,ಸಂಸ್ಕೃತಿ ಇತ್ಯಾದಿ ವಿಷಯಗಳು ಮತ್ತೆ ಹೆಣ್ಣಿನ ಮಡಿಲಿಗಷ್ಟೇ ಸುತ್ತಿಕೊಳ್ಳಲು ಹವಣಿಸುತ್ತಿರುವಂತಹ ಸಂಕೀರ್ಣ ಕಾಲಘಟ್ಟದಲ್ಲಿ ಅತ್ಯಂತ ಪ್ರಗತಿಪರವಾದ ಮತ್ತು ಆಧುನಿಕತೆಗೆ ಪೂರಕವಾದ ವಸ್ತುಗಳನ್ನು ಒಳಗೊಂಡಿರುವ ಇಲ್ಲಿನ ಕತೆಗಳು ಒಂದು ಆಶಾದಾಯಕ ಭರವಸೆಯನ್ನು ಮೂಡಿಸುವ ನೆಲೆಯಲ್ಲಿ ಮನತಟ್ಟುತ್ತವೆ. ವಿವೇಕ ಅವರು ಕಥೆಗಳನ್ನು ಹೇಳಿರುವ ರೀತಿ ಬಳಸಿರುವ ತಂತ್ರ ಸರಳವಾದರೂ ಅವುಗಳ ಕರ್ತೃವಿಗೆ ಸಾಮಾಜಿಕ ಕಾಳಜಿಯ ಕತೆ ಕಟ್ಟುವ ಅಗಾಧ ಶಕ್ತಿಯಿದೆ ಎಂಬ ತೋರುಗಲ್ಲು ಈ ಕತೆಗಳ ತಿರುಳಲ್ಲಿ ಅಡಗಿದೆ. ತುಮಕೂರು ಪರಿಸರದ ಪ್ರಾದೇಶಿಕ ಭಾಷೆಯ ಸೊಗಡಿನೊಂದಿಗೆ, ಮಧ್ಯಮ ವರ್ಗದ ಮನೆಗಳ ನಡುಮನೆಯಲ್ಲಿ ನಡೆಯುವ ಸೂಕ್ಷ್ಮ ಶೋಷಣೆಗಳನ್ನು, ಹೆಣ್ಣಿನ ಮೌನ ಆಕ್ರಂದನಗಳನ್ನು ಅತ್ಯಂತ ಕಲಾತ್ಮಕವಾಗಿ ಕಟ್ಟಿಕೊಡುತ್ತಾ, ಗಂಡು-ಹೆಣ್ಣಿನ ನಡುವಣ ಗೋಡೆಗಳು ಕರಗಿ, ಇಬ್ಬರೂ ಸಮಾನ ಸ್ತರದ ಪ್ರಬುದ್ಧ ಬದುಕು ನಡೆಸಬೇಕೆಂಬ ಸೃಜನಶೀಲ ಹುಡುಕಾಟ ಇವರ ಕಥೆಗಳಲ್ಲಿ ಎದ್ದುಕಾಣುತ್ತದೆ.

ಕಥೆಗಳ ಸಂಪೂರ್ಣ ಚೌಕಟ್ಟು ಹೆಣ್ಣು-ಗಂಡಿನ ಆಳ ಭಾವಗಳ ಒಳತೋಟಿಯ ಹಿಗ್ಗು-ಕುಗ್ಗಿನ ಸೂಕ್ಷ್ಮ ಚಿತ್ರಣವನ್ನು ಹೊಂದಿದೆ. ಪ್ರತೀ ಕತೆಯೂ ಕಸುಬುಗಾರ ಗೃಹಿಣಿಯೊಬ್ಬಳು ಅಸ್ತೆಯಿಂದ ತೊಳೆದು ಹಾರಾಕಿದ ಸ್ಟೀಲ್ ಪಾತ್ರೆಗಳಂತೆ ಫಳಫಳ ಅನ್ನುವುದಲ್ಲದೆ ಕಂಡದ್ದನ್ನು ಕಂಡಂತೆ ದಾಟಿಸುವ ಪ್ರಾಮಾಣಿಕ ಕನ್ನಡಿಯಂತೆ ತೋರುತ್ತದೆ. ಪುರುಷ-ನಿರ್ಮಿತ ಚೌಕಟ್ಟುಗಳನ್ನು ಮೀರಿ, ಮಹಿಳಾ ಸಂವೇದನೆಯನ್ನು ಕಥಾಸಾಹಿತ್ಯದಲ್ಲಿ ಸಮರ್ಥ ನಿರೂಪಕಿಯೊಬ್ಬಳು ಚಾನಲ್‌ಗಳಲ್ಲಿ ಎತ್ತುವ ನೇರ ಪ್ರಶ್ನೆಗಳಂತೆ ತರುವುದು ಇವರ ಕಥನ ಶೈಲಿಯ ವಿಶೇಷ. ಇವರ ಅಷ್ಟೂ ಕಥೆಗಳಲ್ಲಿ ಎದ್ದು ಕಾಣುವುದು ಯಾವುದೇ ರೀತಿಯ ಭ್ರಮೆಗಳಿಗೆ ಒಳಗಾಗದ, ನಿಷ್ಠುರವಾದ ವಾಸ್ತವವಾದ. ಹಾಗಾಗಿಯೇ ಇವರ ಕಥೆಗಳಲ್ಲಿ ಹರೆಯದ ಕೆಂಡದ ಕೆಂಪಿನ ಬಣ್ಣಕ್ಕಿಂತ ಅನುಭವದಲ್ಲಿ ಬೆಂದು ಮಾಗಿದ ಇಟ್ಟಿಗೆ ಬಣ್ಣವಿದೆ.

ಇವರ ಕಥೆಯ ಹಲವು ಹೆಣ್ಣು ಜೀವಗಳು ಅಸಹಜ ಮುಕ್ತಿಯನ್ನು ಹುಡುಕುವುದಿಲ್ಲ; ಬದಲಾಗಿ ವಾಸ್ತವದ ಕಟು ಅರಿವಿನಿಂದ ಬರುವ ಅಸ್ತಿತ್ವವಾದಿ ಬಿಡುಗಡೆಯನ್ನು ಕಂಡುಕೊಳ್ಳುತ್ತವೆ. ಕೇವಲ ಪ್ರಣಯ ಅಥವಾ ಕೌಟುಂಬಿಕ ರಮ್ಯತೆಗೆ ಸೀಮಿತವಾಗಿರದೆ, ಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಅಸಮಾನತೆಯ ಪ್ರಶ್ನೆಗಳನ್ನು ಎತ್ತಿವೆ. ಸ್ತ್ರೀಯರ ಆಳವಾದ ಮಾನಸಿಕ ತಲ್ಲಣಗಳು, ನಿಗ್ರಹಿಸಲ್ಪಟ್ಟ ಬಯಕೆಗಳು ಮತ್ತು ಮನೋವೈಜ್ಞಾನಿಕ ಬಿಕ್ಕಟ್ಟುಗಳನ್ನು ಇವರು ಕತೆಗಳ ಮೂಲಕ ವಿಶ್ಲೇಷಿಸುತ್ತಾರೆ. ಇಲ್ಲಿ ಇವರು ತಮಗೆ ತಾವೇ ಕೇಳಿಕೊಂಡಂತೆ ಎತ್ತುವ ಪ್ರಶ್ನೆಗಳು ಕೇವಲ ಆಯಾ ಪಾತ್ರದ ಪ್ರಶ್ನೆಗಳಲ್ಲ, ಬದಲಾಗಿ ಅಸಂಖ್ಯಾತ ಮಹಿಳೆಯರ ಪರವಾಗಿ ಸಮಾಜಕ್ಕೆ ಕೇಳುವ ಪ್ರಶ್ನೆಗಳಾಗಿವೆ. ಒಮ್ಮೆ ಕಥೆಯೊಳಗೆ ಹೊಕ್ಕು ಪಾತ್ರಗಳ ಚಿತ್ರಣವನ್ನ ತಂದುಕೊಂಡರೆ ಸಾಕು ಪುಸ್ತಕವು ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ. ಎಫ್ ಎಮ್ ರೇಡಿಯೋ ನಲ್ಲಿ ನಾವು ಕಥೆಯನ್ನು ಆಲಿಸುತ್ತಿದ್ದೇವೇನೋ ಎಂಬ ಹೊಸ ತರದ ಸಂವೇದನಾ ಶಕ್ತಿ ವಿವೇಕರವರ ಕತೆಗಳಿಗಿದೆ.

ಇವರ ‘ಬಂಧಗಳು’, ‘ಸುರುಳಿ’, ‘ಆಳ’, ‘ ಮಹಿಳಾ ದಿನಾಚರಣೆ’ ಕಥೆಗಳು ಆರ್ಥಿಕ ವಿಷಮತೆ ಮತ್ತು ಪಾಳೆಯಗಾರಿಕೆ ಪದ್ಧತಿಯ ಶೃಂಖಲೆಗಳಿಂದ ಹೊರಬರದ ಹೊರತು ಹೆಣ್ಣಿಗೆ ಮುಕ್ತಿಯಿಲ್ಲ ಎಂಬ ನಂಬಿಕೆಯನ್ನು ಕಡ್ಡಾಯವಾಗಿ ಮೂಡಿಸುತ್ತವೆ.

‘ ಗೋಲಿ’, ‘ಮ್ಯಾಟ್ರಿಮೋನಿ’, ‘ಜಾತಿ ಗೆದ್ದಿತು’, ‘ ನಂಬಿಕೆ’ ಕಥೆಗಳ ಪಾತ್ರಗಳು ಸಾಮಾಜಿಕ ಆದರ್ಶಗಳ, ಭಾವನಾತ್ಮಕ ಕವಚವನ್ನು ಕಳಚಿಟ್ಟು, ಅತ್ಯಂತ ಪ್ರಖರವಾದ ವಾಸ್ತವವನ್ನು ತೆರೆದಿಡುತ್ತವೆ. ಅಂತೆಯೇ ಮಾನವೀಯತೆಯೆಡೆಗೆ ಅತೀವ ಗೌರವಾಭಿಮಾನವನ್ನು ತೋರುತ್ತವೆ.

ವಿವೇಕ ಅವರ ಅಷ್ಟೂ ಕಥೆಗಳಲ್ಲಿ ಒಂದು ಅಮೂರ್ತ ಏಕ ಸೂತ್ರವಿದೆ, ಒಂದು ಕಿರು ಕಾದಂಬರಿ ಆಗಬಹುದಾದ ಐಕ್ಯತೆಯನ್ನ ಕತೆಗಾರ್ತಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವುಗಳಲ್ಲಿ ತಂದಿದ್ದಾರೆ. ಎಲ್ಲಾ ಕತೆಗಳೂ ಸಾಮಾಜಿಕ ಸುವ್ಯವಸ್ಥೆ ಯ ಬಯಕೆಯನ್ನು ಇಟ್ಟುಕೊಂಡೇ, ಇರುವ ಅವ್ಯವಸ್ಥೆಯನ್ನು ಕುರಿತು ಗಹನವಾದ ಆಲೋಚನೆ ಮತ್ತು ಆದರ್ಶಗಳನ್ನು ಹೊರಹಾಕುತ್ತವೆ. ಪದಗಳನ್ನು ಹದವಾಗಿ ಬೆರೆಸಿ ಸಂವಾದಮಾಧ್ಯಮವಾಗಿಸುವ ಕಲೆ ಕತೆಗಾರ್ತಿಗಿದೆ ಹಾಗಾಗಿಯೇ ಕೆಲವು ಕಥೆಗಳು ಕಿರುಚಿತ್ರ ದಂತೆ ಕಣ್ಣಿಗೆ ಕಟ್ಟುತ್ತವೆ. ವಿವಿಧ ಸನ್ನಿವೇಶಗಳಿಗೆ ಸಿಕ್ಕಿ ವಿಧವಿಧವಾಗಿ ವರ್ತಿಸುವ ಇಲ್ಲಿನ ಕತೆಗಳ ವಿಭಿನ್ನ ರೀತಿಯ ಪಾತ್ರಗಳು ಒಗ್ಗರಣೆಯಲ್ಲಿ ಚಿಟಚಿಟನೆ ಸಿಡಿವ ಸಾಸಿವೆಗಳಂತಲ್ಲ ಬದಲಿಗೆ ಮುಂದಿನ ಒಲೆ ಮತ್ತು ಓಗೊಲೆಯಲ್ಲಿ ಉಮ್ಮಳದಲ್ಲಿ ಕುದಿವ ಎಸರಿನಂತವು. ಹಾಗಾಗಿಯೇ ಇಲ್ಲಿನ ಕತೆಗಳಿಗೆ ಒಂದು ವಿಶೇಷವಾದ ಒಗರಿದೆ. ಒಂದು ಹೊಸ ಬಿಗಿ, ಹೊಸ ಲಯ ಮತ್ತು ವಿಶೇಷವಾದ ಗೇಯತೆ ಅಡಕಗೊಂಡಿದೆ. ಕೌಟುಂಬಿಕ ಜೀವನದ ಆಳ ಅಗಲಗಳ ಬಗ್ಗೆ ಕತೆಗಾರ್ತಿಗಿರುವ ವಿಶೇಷ ಅರಿವು ಅವರು ಕಟ್ಟಿಕೊಡುವ ಪಾತ್ರಗಳಲ್ಲಿ ಯಥಾವತ್ತಾಗಿ ಪ್ರತಿಬಿಂಬಿತವಾಗಿದೆ ಮತ್ತು ಭಾಷೆಯಾಚೆಗಿನ ‘ಮೌನ’ವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಒಂದು ಡಜನ್ ಕತೆಗಳ ಈ ಸಂಕಲನದಲ್ಲಿ ನನ್ನನ್ನು ಬಹುವಾಗಿ ಕಾಡಿದ ಕತೆ ” ಬಿಸಿರೊಟ್ಟಿ”. ತನ್ನಿಡೀ ಜೀವಮಾನದಲ್ಲಿ ಒಲೆಯ ಮೇಲೆ ಸುಟ್ಟ ತಕ್ಷಣವೇ ತುಪ್ಪ ಹಾಕಿಕೊಂಡು ಒಂದೇ ಒಂದು ಬಿಸಿ ಬಿಸಿ ರೊಟ್ಟಿಯನ್ನು ತಿನ್ನಬೇಕು ಎಂಬ ಒಂದು ಸಣ್ಣಾತಿಸಣ್ಣ ಆಸೆಯು ಹೆಣ್ಣೊಬ್ಬಳಿಗೆ ಒಂದೇ ಒಂದು ಸಲವೂ ಸಾಧ್ಯವಾಗದೇ ಹೋಗುವ ದುರಂತ ಅದೆಂತದ್ದಿರಬೇಕು. ಈ ಕತೆಯಲ್ಲಿ ಹಾಗೊಂದು ಬಿಸಿರೊಟ್ಟಿಯನ್ನು ತಿನ್ಬೇಕು ಅಂದುಕೊಳ್ಳುವ ಹೆಣ್ಣಿಗೆ ಕಥೆಗಾರ್ತಿ ಹೆಸರನ್ನೇ ಇಟ್ಟಿಲ್ಲ. ಆ ತರದ ಅಸಹಾಯಕ ಹೆಣ್ಣುಮಗಳು ನಮ್ಮ ನಿಮ್ಮಲ್ಲಿ ಯಾರಾದರೂ ಆಗಬಹುದು. ” ಏನೋ ಆಯಾಸ, ಸುಸ್ತು, ಸಂಕಟ ಇವತ್ತಾದರೂ ಒಂದು ಬಿಸಿ ರೊಟ್ಟಿಯನ್ನು ಸುಟ್ಟುಕೊಂಡು ಬಿಸಿ ಬಿಸಿಯಾಗಿ ತಿಂದು ಬಿಡಬೇಕು” ಎಂದು ನಿರ್ಧಾರ ಮಾಡಿ ಹಿಟ್ಟು ಕಲಸಿ, ತಟ್ಟಿ, ಬೇಯಿಸುವ ಈ ಹೆಣ್ಣುಮಗಳು ಬಾಯಿಗೆ ಬಿಸಿರೊಟ್ಟಿಯನ್ನು ಇನ್ನೇನು ಇಟ್ಟುಕೊಳ್ಳಬೇಕು ಅನ್ನುವ ಕ್ಷಣದಲ್ಲಿ ಒಲೆಯ ಮುಂದೆಯೇ ಸತ್ತುಹೋಗುತ್ತಾಳೆ. ಅವಳ ಹಾಲುತುಪ್ಪದ ದಿನ ಅವಳ ಫೋಟೋ ಮುಂದಿಟ್ಟ ಬಿಸಿರೊಟ್ಟಿ ಚಟ್ಣಿ ತುಪ್ಪ ನಮ್ಮನ್ನ ಅಷ್ಟೇ ಏಕೆ ಇಡೀ ಸಮಾಜವನ್ನ ಅಣಕಿಸುತ್ತದೆ. ವಿವೇಕ ಅವರು ಈ ಕಥೆಯನ್ನ ಅದೆಷ್ಟು ಸರಳವಾಗಿ ಕಟ್ಟಿಕೊಟ್ಟಿದ್ದಾರೋ ಅಷ್ಟೇ ಸಹಜವಾಗಿ ನಮಗೂ ಒಳಕ್ಕಿಳಿಯುತ್ತದೆ ಹಾಗಾಗೇ ಇಡೀ ಸಂಕಲನದ ಶೀರ್ಷಿಕೆ ಇದೇ ಆಗಿರುವುದು ಸೂಕ್ತವೆಂದು ನನಗೂ ಅನ್ನಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ‘ಮಹಿಳಾ ಸಾಹಿತ್ಯ’ವನ್ನು ಕೇವಲ ಒಂದು ಪ್ರತ್ಯೇಕ ವಿಭಾಗವಾಗಿ (Sub-genre) ನೋಡಬೇಕೇ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಚ.ಹ. ರಘುನಾಥ್ ಹಾಗೂ ಆರ್. ವಿಜಯರಾಘವನ್ ಅವರು ಒಂದೆಡೆ ಹೇಳುವಂತೆ, “ಸ್ತ್ರೀವಾದ, ಸ್ತ್ರೀಸಂವೇದನೆ, ಮಹಿಳಾ ಸಾಹಿತ್ಯ ಎಂಬ ವಾದಗಳು ಇರುವುದಾದರೂ, ಕತೆಯಾಗಿ ಪರಿಭಾವಿಸಿದಾಗ ಅವು ಕಥೆಗಳೇ ಹೊರತು ಮತ್ತೊಂದಲ್ಲ”. ಎಂಬ ಮಾತು ಇಲ್ಲಿ ಪ್ರಸ್ತುತ. ಲೇಖಕಿಯರ ಕಥೆಗಳಿಗೆ ಈಗ ಯಾವುದೇ ವಿಶೇಷ ರಿಯಾಯಿತಿಗಳ ಅಥವಾ ಅನುಕಂಪದ ಅಗತ್ಯವಿಲ್ಲ; ಏಕೆಂದರೆ ಅವರ ಕೃತಿಗಳು ಕನ್ನಡದ ಸಮಗ್ರ ಆಧುನಿಕ ಕಥಾಪರಂಪರೆಯನ್ನು ಮತ್ತು ಕಥನ ಸಂಸ್ಕಾರವನ್ನು ಅತ್ಯಂತ ಸಶಕ್ತವಾಗಿ ಮೈಗೂಡಿಸಿಕೊಂಡಿವೆ.

ಇಂದಿನ ಹೊಸ ಲೇಖಕಿಯರು ಕಾವ್ಯ, ಸಣ್ಣಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ – ಹೀಗೆ ಎಲ್ಲ ಪ್ರಕಾರಗಳಲ್ಲೂ ಪ್ರಬುದ್ಧ ಜೀವನದೃಷ್ಟಿ ಮತ್ತು ಆಳವಾದ ಒಳನೋಟಗಳನ್ನು ನೀಡುವ, ಉನ್ನತ ಮೌಲ್ಯಗಳನ್ನು ಪ್ರತಿಪಾದಿಸುವ ಕೃತಿಗಳನ್ನು ರಚಿಸುತ್ತಿದ್ದಾರೆ. ಬಾಲ್ಯದಿಂದಲೇ ಪ್ರಗತಿಶೀಲ ಮತ್ತು ಆಧುನಿಕ ಮನೋಭಾವದ ಪೋಷಕರ ಪ್ರಭಾವದಿಂದ ಬೆಳೆಯುತ್ತಿರುವ ಇವತ್ತಿನ ಕಥೆಗಾರ್ತಿಯರು, ಯಾವುದೇ ಸ್ತ್ರೀವಾದಿ ಹಣೆಪಟ್ಟಿಯಿಲ್ಲದೆಯೇ ಸಹಜವಾಗಿ ಸ್ತ್ರೀ ಶೋಷಣೆಯನ್ನು ವಿರೋಧಿಸುವ ದಿಟ್ಟತನವನ್ನು ಮೈಗೂಡಿಸಿಕೊಂಡಿದ್ದಾರೆ. ಕನ್ನಡ ಸಣ್ಣಕಥಾ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆಯು ಕೇವಲ ಸಂಖ್ಯೆಯ ದೃಷ್ಟಿಯಿಂದಲ್ಲ, ಗುಣಾತ್ಮಕ ಮತ್ತು ವೈಚಾರಿಕ ದೃಷ್ಟಿಯಿಂದಲೂ ಅಗಾಧವಾದದ್ದು. ಈಗಿನ ಕಥೆಗಾರ್ತಿಯರು ಪಿತೃಪ್ರಧಾನ ವ್ಯವಸ್ಥೆಯ ಬೇರುಗಳನ್ನು ಕೇವಲ ವಿಮರ್ಶಿಸುತ್ತಿಲ್ಲ, ಬದಲಾಗಿ ತಮ್ಮ ಲೇಖನಿಯ ಮೂಲಕ ಆ ಬೇರುಗಳನ್ನು ಅಲುಗಾಡಿಸುತ್ತಿದ್ದಾರೆ, ತಮ್ಮ ಹಕ್ಕುಗಳಿಗಾಗಿ, ತಮ್ಮ ದೇಹದ ಮೇಲಿನ ನಿಯಂತ್ರಣಕ್ಕಾಗಿ ಮತ್ತು ತಮ್ಮ ಆಲೋಚನೆಗಳ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರ ಕಥೆಗಳು ಕೇವಲ ಹೆಣ್ಣಿನ ಅಳಲನ್ನು ಹೇಳುವ ದುರಂತ ಗಾಥೆಗಳಾಗಿ ಉಳಿಯದೆ, ಸಮಗ್ರ ಮಾನವಕುಲದ ಬಿಡುಗಡೆಯ, ಸಮಾನತೆಯ ಮತ್ತು ಅಸ್ತಿತ್ವದ ಘನತೆಯ ಪ್ರತೀಕಗಳಾಗುತ್ತಿವೆ. ಭವಿಷ್ಯದ ಸಾಹಿತ್ಯಿಕ ಅಧ್ಯಯನಗಳಿಗೆ, ಸಾಮಾಜಿಕ ಬದಲಾವಣೆಯ ಆಂದೋಲನಗಳಿಗೆ ಮತ್ತು ಹೊಸ ತಲೆಮಾರಿನ ಬರಹಗಾರರಿಗೆ ಈ ಮಹಿಳಾ ಕಥನ ಪರಂಪರೆಯು ಸದಾ ಕಾಲ ಒಂದು ಪ್ರಬಲ ಆಕರವಾಗಿ, ಅಕ್ಷಯಪಾತ್ರೆಯಾಗಿ ಕಾರ್ಯನಿರ್ವಹಿಸಲಿದೆ. ಇಂತಹಾ ಕಥಾ ಪರಂಪರೆಯ ಅಕ್ಷಯ ಬೋಸಿಯಲ್ಲಿನ ಒಂದು ಬೆಳ್ಳಿಪಾತ್ರೆ ” ಬಿಸಿ ರೊಟ್ಟಿ” ಎಂಬುದರಲ್ಲಿ ಎರಡು ಮಾತಿಲ್ಲ.

‍ಲೇಖಕರು Admin

21 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading