ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಬೈಯಲ್ಲಿ ಅಪೂರ್ವ ಕನ್ನಡ ಕಾಯಕ 

-ಪ್ರೊ. ಜಿ. ಎನ್. ಉಪಾಧ್ಯ

ಪತ್ರಿಕೋದ್ಯಮದ ಅದಮ್ಯ ಚೇತನ : ಚಂದ್ರಶೇಖರ ಪಾಲೆತ್ತಾಡಿ

ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾಗಿ ಅಖಂಡ ಮುಂಬೈ ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾದವರು ಚಂದ್ರಶೇಖರ ಪಾಲೆತ್ತಾಡಿ. ಪತ್ರಿಕೋದ್ಯಮ  ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಅವರಿಗೆ ಈ ಬಾರಿಯ ವ್ಯಾಸರಾಯ ಬಲ್ಲಾಳ  ಪ್ರಶಸ್ತಿ ಲಭಿಸಿದೆ. ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ನೂತನ ಆಯಾಮವನ್ನು ನೀಡಿ ಇಲ್ಲಿನ ಕನ್ನಡ ಸಂಸ್ಕೃತಿಯ ಸಂವರ್ಧನೆಗೆ ಶ್ರಮಿಸುತ್ತಾ ಬಂದಿರುವ ಪಾಲೆತ್ತಾಡಿ ಅವರ ವ್ಯಕ್ತಿತ್ವ, ಜೀವನ ಸಾಧನೆಯ ಕುರಿತ ಕಿರು ಲೇಖನ ಇಲ್ಲಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶ ಮುಂಬೈ ಮಹಾನಗರ. ಇಂದಿಗೂ ಮಾಯಾನಗರಿ ಮುಂಬೈಯಲ್ಲಿ ಸುಮಾರು ಇಪ್ಪತ್ತು ಲಕ್ಷ ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿರುವುದು ಗಮನೀಯ ಅಂಶ. ಮುಂಬೈನ ಜನಪ್ರಿಯ ಕನ್ನಡ ದೈನಿಕ ಕರ್ನಾಟಕ ಮಲ್ಲದ ಸಂಪಾದಕರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರು ಮುಂಬೈನ ಗಣ್ಯವ್ಯಕ್ತಿಗಳಲ್ಲಿ ಒಬ್ಬರು. ಈ ಮಾಯಾನಗರಿಯಲ್ಲಿ ಕನ್ನಡ ಹಾಗೂ ತುಳು ಸಾಹಿತ್ಯ ಸಂಸ್ಕೃತಿಯ ಏಳಿಗೆಗೆ ಕರ್ನಾಟಕ ಮಲ್ಲ ಪತ್ರಿಕೆ ಮಹತ್ವದ ಯೋಗದಾನವನ್ನು ನೀಡಿದೆ. ಕರ್ನಾಟಕ ಮಲ್ಲ ಮುಂಬೈ ಕನ್ನಡಿಗರ ವಿಶ್ವಾಸಕ್ಕೆ ಪಾತ್ರವಾದ ದೈನಿಕ. ಇದರ ರೂವಾರಿ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ. ಚಂದ್ರಶೇಖರ ಪಾಲೆತ್ತಾಡಿ ಅವರು ಲೇಖಕರಾಗಿ, ಚಿಂತಕರಾಗಿ ಸಹ ಹೆಸರು ಮಾಡಿದ್ದಾರೆ. ‘ನಾನು, ನನ್ನ ಸ್ವಗತ’  ಪಾಲೆತ್ತಾಡಿ ಅವರ ಕಿರು ಆತ್ಮಕಥನ. ಇದನ್ನು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಪ್ರಕಟಿಸಿದೆ. ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಕಳೆದ ಮೂರು ದಶಕಗಳಿಂದ ಅವರು ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಲೇ ‘ಇದು ಭಾರತ’ ಎಂಬ ಅಂಕಣವನ್ನು ಸತತವಾಗಿ ಬರೆಯುತ್ತಾ ಬಂದಿದ್ದಾರೆ. ‘ನಾನು, ನನ್ನ ಸ್ವಗತ’ ಕೃತಿಯಲ್ಲಿ ಪಾಲೆತ್ತಾಡಿ ಅವರ ಜೀವನ ಸಾಧನೆಯ ದಾಖಲಾತಿ ಸಂಕ್ಷಿಪ್ತವಾಗಿ ಪಡಿ ಮೂಡಿದೆ.

 ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವುದೆಂದರೆ ಕೆಂಡದ ಮೇಲೆ ನಡೆಯುವುದೆಂದೇ ಅರ್ಥ. ಅದೂ ಹೊರನಾಡಾದ ಮುಂಬೈಯಲ್ಲಿ ಒಂದು ಕನ್ನಡ ದೈನಿಕವನ್ನು ನಡೆಸಿಕೊಂಡು ಬರುವುದು ಸಾಮಾನ್ಯದ ಮಾತಲ್ಲ.ಪತ್ರಿಕೋದ್ಯಮದ ಮೂಲ ಉದ್ದೇಶ ಲೋಕಕಲ್ಯಾಣವಾಗಿದ್ದು ಓದುಗರಲ್ಲಿ, ಸಹೃದಯರಲ್ಲಿ ಜಾಗೃತಿ, ಎಚ್ಚರ, ಸಾಂಸ್ಕೃತಿಕ ಅರಿವು, ಕಾಳಜಿ, ರಾಜಕೀಯ ಚಿಂತನೆ, ವಿವೇಕವನ್ನು ಮೂಡಿಸುವುದೇ ಆಗಿದೆ.ಈ ಕಾಯಕವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಾ ಬಂದ ಅಪರೂಪದ ದಕ್ಷ ಪತ್ರಕರ್ತ ಪಾಲೆತ್ತಾಡಿ.

ಕಳೆದ ಮೂರು ದಶಕಗಳಲ್ಲಿ ಮುಂಬೈಯಲ್ಲಿ ಪತ್ರಿಕೆಯ ಮೂಲಕ ಕನ್ನಡಕ್ಕಾಗಿ ದುಡಿದ, ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರೂ ಒಬ್ಬರು. ಪಾಲೆತ್ತಾಡಿ ಅವರ ನಿರಂತರ ಪರಿಶ್ರಮ, ಪ್ರಯತ್ನಗಳಿಂದ ಕರ್ನಾಟಕ ಮಲ್ಲ ಇಂದಿಗೂ ಉಳಿದು ಬೆಳೆದು ಸಮೃದ್ಧ ಪತ್ರಿಕೆಯಾಗಿ ಮುಂಬೈ ಮಹಾನಗರದಲ್ಲಿ ಕಂಗೊಳಿಸುತ್ತಿದೆ ಎಂಬುದು ಅಭಿಮಾನದ ಸಂಗತಿ. ಕಳೆದ 33ವರ್ಷಗಳಿಂದ ಮುಂಬೈ ಕನ್ನಡಿಗರ ಮನಸೂರೆಗೊಂಡ ಕರ್ನಾಟಕ ಮಲ್ಲದಲ್ಲಿ ಪಾಲೆತ್ತಾಡಿ ಅವರು ಬರೆದ ಸಂಪಾದಕೀಯಗಳು, ಅಂಕಣ ಬರೆಹಗಳ ಸಂಖ್ಯೆ ಹತ್ತಿರ ಹತ್ತಿರ ಹತ್ತು ಸಾವಿರ. ಅವರ ಬರವಣಿಗೆಗೂ ವ್ಯಕ್ತಿತ್ವಕ್ಕೂ ಅವಿನಾಭಾವ ಸಂಬಂಧವಿದೆ. ಪತ್ರಿಕೋದ್ಯಮಿ ಎಂದ ತಕ್ಷಣ ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿರುವ ವ್ಯಕ್ತಿ ಎಂದೇ ಭಾವಿಸಲಾಗುತ್ತಿದೆ. ಆದರೆ ಹೆಚ್ಚಿನ ಪತ್ರಿಕೆಗಳ ಸಂಪಾದಕರು, ಉಪಸಂಪಾದಕರು ನಾಲ್ಕು ಗೋಡೆಗಳ ನಡುವೆ ಆಸನಕ್ಕೆ ಅಂಟಿಕೊಂಡೇ ಇರುವುದು ವಾಡಿಕೆ.ಆದರೆ ಮುಂಬೈಯಲ್ಲಿ ಅಪಾರವಾದ ಜನಪ್ರಿಯತೆಯನ್ನು ಸಂಪಾದಿಸಿರುವ ಪಾಲೆತ್ತಾಡಿ ತುಳು ಕನ್ನಡಿಗರು ಕರೆದಲ್ಲೆಲ್ಲ ಹೋಗಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾಲೆತ್ತಾಡಿ ಒಬ್ಬ ಸೂಕ್ಷ್ಮಜ್ಞ, ವಿಚಾರವಾದಿ, ಪ್ರಗತಿಪರ ಚಿಂತಕ, ಅಪರೂಪದ ಪತ್ರಕರ್ತ. ಅವರ ಮೇಲೆ ಮುಂಬೈ ಕನ್ನಡಿಗರು ಅಪಾರವಾದ ಆದರ ಅಭಿಮಾನ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ.

ಚಂದ್ರಶೇಖರ ಪಾಲೆತ್ತಾಡಿ ಅವರದು ಹೋರಾಟದ ಬದುಕು. ಅನ್ಯಾಯ, ಅಸಮಾನತೆಯ ಬಗೆಗೆ ಅವರು ಸದಾ ಗುಡುಗುತ್ತಾ ಬಂದವರು. ಅವರು ಖಂಡಿತವಾದಿ, ದಾಕ್ಷಿಣ್ಯಪರನಲ್ಲ.  ಸತ್ಯನಿಷ್ಠೆ, ನಿರ್ದಾಕ್ಷಿಣ್ಯ ಧೋರಣೆಯನ್ನು ಮೈಗೂಡಿಸಿಕೊಂಡ ಅವರು ಧೀರ ಪತ್ರಿಕೋದ್ಯಮಿ. ಚಂದ್ರಶೇಖರ ಪಾಲೆತ್ತಾಡಿ ಅವರು ಸ್ವಭಾವತಃ ನಿಗರ್ವಿ, ಅವರ ನಡೆ ನುಡಿ ಸ್ವಚ್ಚ. ಎಲ್ಲರ ಆಪ್ತಮಿತ್ರನೂ ಹೌದು. 

ಸಾಹಿತ್ಯ ಸೇವೆಯಲ್ಲಿ ಪತ್ರಿಕೆಗಳ ಪಾತ್ರ ಗಮನಾರ್ಹವಾದುದು. ಪತ್ರಿಕೆಗಳ ಮುಖಾಂತರ ಬರಹಗಾರರು ಹುಟ್ಟಿಕೊಳ್ಳುತ್ತಾರೆ,ಬರಹಗಳು ಹುಟ್ಟಿಕೊಳ್ಳುತ್ತವೆ. ಕರ್ನಾಟಕ ಮಲ್ಲ ದೈನಿಕದ ಮೂಲಕ ಅನೇಕ ಬರಹಗಾರರು ಹೆಸರು ಮಾಡಿದ್ದಾರೆ . ಅಲ್ಲಿನ ಅಂಕಣಗಳಿಂದಾಗಿ ಅನೇಕ ಬರಹಗಾರರು ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಮಲ್ಲದಿಂದಾಗಿ ಮುಂಬೈ ಮಹಾನಗರದಲ್ಲಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡದ್ದು ಸತ್ಯ. ಕರ್ನಾಟಕ ಮಲ್ಲದ ಮೂಲಕ ಪಾಲೆತ್ತಾಡಿ ಅವರು ಸಮಸ್ತ ಕನ್ನಡಿಗರ ಆಗುಹೋಗುಗಳಿಗೆ ಸ್ಫೂರ್ತಿಯಾಗಿದ್ದಾರೆ.

ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ನೂರ ಐವತ್ತು ವರ್ಷಗಳ ಗಟ್ಟಿಯಾದ ಇತಿಹಾಸವಿದೆ. ಕರ್ಕಿ ವೆಂಕಟರಮಣ ಶಾಸ್ತ್ರಿ ಅವರು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಪತ್ರಿಕೆಗಳನ್ನು ಬಳಸಿಕೊಂಡದ್ದು ಈಗ ಇತಿಹಾಸ. ಕನ್ನಡದ ಮೊದಲ ಸಾಮಾಜಿಕ ನಾಟಕ (1887) ಬೆಳಕು ಕಂಡದ್ದು ಮುಂಬೈನಲ್ಲೇ. ಅದರ ಕರ್ತೃ ಅವರೇ ಎಂಬುದು ಗಮನೀಯ ಅಂಶ. ಶ್ಯಾಮರಾವ್ ವಿಠಲ ಕೈಕಿಣಿ, ಹಟ್ಟಿಯಂಗಡಿ ನಾರಾಯಣರಾಯ, ಎಂ. ವಿ. ಕಾಮತ್, ವ್ಯಾಸರಾಯ ಬಲ್ಲಾಳ, ರಾಮಚಂದ್ರ ಉಚ್ಚಿಲ್, ಡಿ.ಕೆ. ಮೆಂಡನ್, ಕೆ. ಟಿ. ವೇಣುಗೋಪಾಲ್ ಹೀಗೆ ನೂರಾರು ಮಂದಿ ಮುಂಬೈ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಮುಂಬೈ ಸಾಹಿತ್ಯ ವಲಯವಾಗಿ ರೂಪುಗೊಳ್ಳಲು ಇಲ್ಲಿನ ಪತ್ರಿಕೋದ್ಯಮವೂ ಕಾರಣವಾಗಿದೆ. ಕರ್ನಾಟಕ ಮಲ್ಲ ಈ ಸುದೀರ್ಘ ಪರಂಪರೆಯನ್ನು ಸಶಕ್ತವಾಗಿ ಪೋಷಿಸಿಕೊಂಡು ಬಂದಿದೆ. ಅಶೋಕ್ ಸುವರ್ಣ, ಡಾ. ಜೀವಿ ಕುಲಕರ್ಣಿ, ರವಿ ಅಂಚನ್, ಶ್ರೀನಿವಾಸ ಜೋಕಟ್ಟೆ, ಡಾ. ಜಿ. ಡಿ. ಜೋಶಿ, ಕೊಲ್ಯಾರು ರಾಜು ಶೆಟ್ಟಿ, ಕೋಡು ಭೋಜ ಶೆಟ್ಟಿ, ರತ್ನಾಕರ ಶೆಟ್ಟಿ, ಶ್ರೀಧರ ಉಚ್ಚಿಲ್ ಮೊದಲಾದವರು ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಬರೆದ ಅಂಕಣ ಬರೆಹಗಳು ಕೃತಿರೂಪದಲ್ಲಿ ಬೆಳಕು ಕಂಡಿವೆ. ಇಲ್ಲಿನ ಎಲ್ಲ ಲೇಖಕರಿಗೆ ಪ್ರೋತ್ಸಾಹ ನೀಡುತ್ತಾ ಬಂದವರು ಚಂದ್ರಶೇಖರ ಪಾಲೆತ್ತಾಡಿ. ಪಾಲೆತ್ತಾಡಿ ಅವರು ಕಳೆದ ಮೂವತ್ತಮೂರು ವರ್ಷ ಗಳಿಂದ ಮುಂಬೈ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲರಾಗಿದ್ದಾರೆ. ಈಗ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕರ್ನಾಟಕ ಮಲ್ಲದ ಸಂಪಾದಕರಾಗಿ ಅದರ ಘನತೆಯನ್ನು ಹೆಚ್ಚಿಸಿದ ಕೀರ್ತಿ ಪಾಲೆತ್ತಾಡಿ ಅವರಿಗೆ ಸಲ್ಲುತ್ತದೆ.

ಪಾಲೆತ್ತಾಡಿ ಅವರದು ಹೋರಾಟದ ಬದುಕು. ಅವರು ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ಅವರು ಎಡಪಂಥೀಯ ನಿಲುವನ್ನು ಮೈಗೂಡಿಸಿಕೊಂಡಿದ್ದರೂ ಅವರದು ಸಮನ್ವಯ ದೃಷ್ಟಿ, ಸರ್ವೋದಯ ದೃಷ್ಟಿ. ಹೀಗಾಗಿ ಅವರು ಎಲ್ಲರೊಂದಿಗೆ ಪರಸ್ಪರ ಸಂಬಂಧ, ಸಂಪರ್ಕ ಸಮನ್ವಯವನ್ನಿಟ್ಟುಕೊಂಡಿದ್ದಾರೆ. ಅವರದು ಚಿಕಿತ್ಸಕ ಮನೋಧರ್ಮ. ತಮ್ಮದೇ ಆದ ಘನತೆ, ಗಾಂಭೀರ್ಯ  ಮಹತ್ತುಗಳಿಂದ ಅಪಾರ ಓದುಗರನ್ನು ಅವರು ಗಳಿಸಿಕೊಂಡಿದ್ದಾರೆ. ಕನ್ನಡ ಅಂಕಣ ಬರಹಗಾರರಲ್ಲಿ ಕರ್ನಾಟಕ ಮಲ್ಲದ ಸಂಪಾದಕ ಪಾಲೆತ್ತಾಡಿ ಅವರಿಗೆ ಉನ್ನತ ಸ್ಥಾನವೊಂದು ಯಾವತ್ತೂ ಮೀಸಲಾಗಿರುತ್ತದೆ. ದಿನಪತ್ರಿಕೆಯೊಂದಕ್ಕೆ ಸುಮಾರು ಮೂವತ್ತಮೂರು ವರ್ಷಗಳಿಂದ ಸಂಪಾದಕೀಯ, ಅಂಕಣಗಳನ್ನು ಬರೆಯುತ್ತಾ ಬಂದ ಎಷ್ಟು ಮಂದಿ ಸಂಪಾದಕರಿದ್ದಾರೋ ನಾಕಾಣೆ. ಮಂಗಳೂರು ಮಿತ್ರ, ಹೊಸದಿಗಂತ, ಉದಯದೀಪ, ಕರ್ನಾಟಕ ಮಲ್ಲ ಹೀಗೆ ನಾನಾ ಪತ್ರಿಕೆಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ದುಡಿದ ಅನುಭವಿ ಪತ್ರಕರ್ತ ಪಾಲೆತ್ತಾಡಿ. ಸಾಮಾಜಿಕ ಪ್ರಜ್ಞೆ ಅವರ ಮಾತು, ಕೃತಿ, ನೋಟ, ನಿಲುವುಗಳಲ್ಲಿ ಎದ್ದು ಕಾಣುವ ಅಂಶ.

ಕರ್ನಾಟಕ ಮಲ್ಲ ಹಾಗೂ ಅದರ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರ ಸಾಧನೆಯನ್ನು ಖ್ಯಾತ ಪತ್ರಿಕೋದ್ಯಮಿ, ಸಾಹಿತಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಹೀಗೆ ಕಂಡಿದ್ದಾರೆ – ‘ಮುಂಬಯಿ ಮೊದಲಿನಿಂದಲೂ ಕನ್ನಡದ ಭದ್ರ ಕೋಟೆಯೇ ಆಗಿತ್ತು. ಮುಂಬಯಿ ನಗರದ ಇತಿಹಾಸವನ್ನು ಕೆದಕಿದರೆ ಅಲ್ಲಿ ನಮಗೆ ಕಾಣ ಸಿಗುವುದು ಕನ್ನಡಿಗರ ಸಾಂಸ್ಕೃತಿಕ ಇತಿಹಾಸವೇ. ಇಂದಿಗೂ ಮುಂಬಯಿಯಲ್ಲಿ ಕನ್ನಡ ತಲೆ ಎತ್ತಿ ನಿಂತಿದೆ. ಮುಂಬಯಿ ಮಹಾನಗರದ ಕನ್ನಡಿಗರು ಮಹಾನ್ ಸಾಧಕರು. ನಾನು ಮತ್ತೆ ಮತ್ತೆ ಮುಂಬಯಿಗೆ ಬಂದು ಹೋಗುತ್ತಿದ್ದೇನೆ. ಹೀಗೆ ಬಂದಾಗಲೆಲ್ಲ ಕರ್ನಾಟಕ ಮಲ್ಲ ಪತ್ರಿಕೆಯನ್ನು ತಪ್ಪದೇ ಓದುತ್ತಾ ಬಂದಿದ್ದೇನೆ. ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರ ಸಂಪಾದಕೀಯಗಳು ನನಗೆ ತುಂಬಾ ಹಿಡಿಸಿವೆ. ಅವರ ನೇರ, ಸರಳ ಶೈಲಿ ವಾಚನೀಯವಾಗಿದೆ. ಪತ್ರಿಕೆ ಒಂದು ಸಶಕ್ತ ಮಾಧ್ಯಮ. ಮುಂಬಯಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಉನ್ನತಿಗೆ ಕರ್ನಾಟಕ ಮಲ್ಲ ಮಹತ್ವದ ಕೊಡುಗೆಯನ್ನು ನೀಡಿದೆ. ಹೊರನಾಡ ಕನ್ನಡಿಗರ ಸಾಧನೆಯನ್ನು ಕುರಿತು ಮಾತನಾಡುವಾಗ ಕರ್ನಾಟಕ ಮಲ್ಲ ಹಾಗೂ ಅದರ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರ ಸಾಧನೆಯನ್ನು ನಾವು ಪ್ರಸ್ತಾಪಿಸಲೇಬೇಕು’.

ದೇಶದ ಪತ್ರಿಕೋದ್ಯಮದ ಒಳಹೊರಗನ್ನು ಚೆನ್ನಾಗಿ ಬಲ್ಲ ಪಾಲೆತ್ತಾಡಿ ಅವರು ಪ್ರಬುದ್ಧ ಚಿಂತಕರೂ ರಾಜಕೀಯ ವಿಶ್ಲೇಷಕರೂ ಆಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾದ ಸಾಧನೆಗೈದವರಿಗೆ ಕೊಡಮಾಡುವ ಪ್ರತಿಷ್ಠಿತ ‘ವಡ್ಡರ್ಸೆ ರಘುರಾಮ ಶೆಟ್ಟಿ’ ಪ್ರಶಸ್ತಿಗೂ ಅವರು ಪಾತ್ರರಾಗಿದ್ದರು. ‘ಕರ್ನಾಟಕ ರಾಜ್ಯೋತ್ಸವ’ಪ್ರಶಸ್ತಿ ಪಾಲೆತ್ತಾಡಿ ಅವರಿಗೆ ಸಂದಿರುವುದು ನಿಷ್ಠಾವಂತ ಪತ್ರಿಕೋದ್ಯಮಿಯೊಬ್ಬರಿಗೆ ಸಂದ ಅರ್ಹ ಗೌರವ ಎಂದೇ ಹೇಳಬಹುದಾಗಿದೆ.ಇದೀಗ ಮೊಹರೆ ಹನುಮಂತ ರಾಯ ಪ್ರಶಸ್ತಿ ಅವರ ಸಾಧನೆ ಸಂದ ಬಹು ದೊಡ್ಡ ಗೌರವ.ಯಾವುದೇ ಪ್ರಶಸ್ತಿಗಾಗಿ ಅವರು ಯಾವುದೇ ಲಾಬಿ ಮಾಡಿಲ್ಲ, ಅತ್ತು ಕರೆದು ವಶೀಲಿ ಹಚ್ಚಿಲ್ಲ. ಸಂದ ಎಲ್ಲ ಪುರಸ್ಕಾರಗಳು ಅವರ ಸಾಧನೆಯನ್ನು ಅರಸಿಕೊಂಡು ಬಂದಿವೆ ಎಂಬುದು ಹೇಳಲೇಬೇಕಾದ ಸಂಗತಿ.ನಾಡಿನ ಪತ್ರಕರ್ತರಿಗೆ ಪಾಲೆತ್ತಾಡಿ ಅವರು ಎಲ್ಲ ದೃಷ್ಟಿಯಿಂದಲೂ ಆದರ್ಶಪ್ರಾಯರಾಗಿದ್ದಾರೆ. ಸಮಾಜಮುಖಿಯಾಗಿ, ಜನಮುಖಿಯಾಗಿ ದೂರದ ಮುಂಬೈಯಲ್ಲಿ ನುಡಿಸೇವೆಯಲ್ಲಿ ನಿರತರಾಗಿರುವ ಪಾಲೆತ್ತಾಡಿ ಅವರ ಜೀವನ ಸಾಧನೆ ಅನುಕರಣೀಯ ಅಂಶ.

‍ಲೇಖಕರು Admin

21 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading