ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೭
ಈಶಾನ್ ಭಟ್ ತನ್ನ ಬರವಣಿಗೆಯ ಬದುಕಿನಲ್ಲಿ ಮೊದಲ ಬಾರಿಗೆ ಯಶಸ್ಸು ತನಗೆ ಸಂತೋಷಕ್ಕಿAತ ಭಯವನ್ನು ಹೆಚ್ಚು ಉಂಟುಮಾಡಬಹುದು ಎಂಬುದನ್ನು ಅರಿಯತೊಡಗಿದ್ದ.ಆದರೆ ಆ ಅರಿವು ಇನ್ನೂ ಅವನ ಮನಸ್ಸಿನ ಮೇಲ್ಮೈಯನ್ನು ಮಾತ್ರ ಸ್ಪರ್ಶಿಸಿತ್ತು. ಒಳಗಡೆ, ಕಳೆದ ಹದಿನಾರು ತಿಂಗಳುಗಳಿAದ ಒಣಗಿಹೋಗಿದ್ದ ಸೃಜನಶೀಲತೆಯ ನೆಲದಲ್ಲಿ ಹೊಸ ಚಿಗುರುಗಳು ಕಾಣಿಸಿಕೊಂಡಿದ್ದವು. ಅವನಿಗೆ ಮತ್ತೆ ಬರೆಯಲು ಸಾಧ್ಯವಾಗುತ್ತಿತ್ತು. ಪದಗಳು ಅವನನ್ನು ತೊರೆದುಹೋಗಿರಲಿಲ್ಲ ಎಂಬ ಭರವಸೆ ಮರಳಿತ್ತು. ಬಹುಕಾಲದಿಂದ ತನ್ನನ್ನು ಕಾಡುತ್ತಿದ್ದ ವೈಫಲ್ಯದ ಭಾವನೆ ನಿಧಾನವಾಗಿ ಕರಗುತ್ತಿತ್ತು.
ಆ ಬದಲಾವಣೆಯನ್ನು ಅವನು ನಿರಾಕರಿಸಲಾಗುತ್ತಿರಲಿಲ್ಲ.ಮ್ಯೂಸ್ ಬಗ್ಗೆ ಅವನಿಗೆ ಅನುಮಾನಗಳಿದ್ದವು. ಅದರ ಮೂಲ ತಿಳಿದಿರಲಿಲ್ಲ. ತನ್ನ ಕನಸಿನ ದೃಶ್ಯಗಳು ಅದರ ಕಡತಗಳಲ್ಲಿ ಕಾಣಿಸಿಕೊಂಡಿದ್ದವು. ತಾನು ಅಳಿಸಿದ ಪ್ಯಾರಾಗ್ರಾಫ್ಗಳು ಮತ್ತೆ ಕಾಣಿಸಿಕೊಂಡಿದ್ದವು. ಇವೆಲ್ಲವೂ ಆತಂಕಕ್ಕೆ ಕಾರಣವಾಗಿದ್ದರೂ, ಮತ್ತೊಂದೆಡೆ ಅದೇ ತಂತ್ರಾAಶ ಅವನನ್ನು ಬರಹಗಾರನಾಗಿ ಮತ್ತೆ ನಿಲ್ಲಿಸಿತ್ತು.
ಮನುಷ್ಯನಿಗೆ ತನ್ನನ್ನು ನೋಯಿಸುವ ಸಂಗತಿಯೊAದರಿAದಲೇ ಕೆಲವೊಮ್ಮೆ ನೆಮ್ಮದಿಯೂ ದೊರೆಯುತ್ತದೆ. ಆ ನೆಮ್ಮದಿಯನ್ನು ಕಳೆದುಕೊಳ್ಳುವ ಭಯ, ನೋವಿನ ಬಗ್ಗೆ ಇರುವ ಭಯಕ್ಕಿಂತ ದೊಡ್ಡದಾಗಬಹುದು. ಈಶಾನ್ನ ಪರಿಸ್ಥಿತಿಯೂ ಅದೇ ಆಗಿತ್ತು.ತನ್ನನ್ನು ನಿಯಂತ್ರಿಸುತ್ತಿರಬಹುದೆAದು ಅನುಮಾನಿಸುತ್ತಿದ್ದ ಸಾಧನದ ಸಹಾಯವಿಲ್ಲದೆ ಮತ್ತೆ ಬರೆಯಲು ಸಾಧ್ಯವಾಗದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಅದಕ್ಕಾಗಿಯೇ ಮ್ಯೂಸ್ನಿಂದ ದೂರ ಸರಿಯಬೇಕೆಂಬ ನಿರ್ಧಾರವನ್ನು ತೆಗೆದುಕೊಂಡಿದ್ದರೂ, ಅದನ್ನು ಕಾರ್ಯರೂಪಕ್ಕೆ ತರಲು ಅವನಿಂದ ಸಾಧ್ಯವಾಗುತ್ತಿರಲಿಲ್ಲ.
ಮೂರು ದಿನಗಳ ನಂತರ ಮೀರಾಳಿಂದ ಕರೆ ಬಂತು.“ಈಶಾನ್, ನಿನ್ನ ಹೊಸ ಅಧ್ಯಾಯಗಳನ್ನು ಓದಿದೆ. ನಿಜ ಹೇಳಬೇಕೆಂದರೆ, ನೀನು ಇಷ್ಟು ಬೇಗ ಈ ಹಂತಕ್ಕೆ ಮರಳುತ್ತೀಯೆಂದು ನಿರೀಕ್ಷಿಸಿರಲಿಲ್ಲ.” ಎಂದು ಸಂತಸದಿAದ ಹೇಳಿದಳು.
ಅವಳ ಧ್ವನಿಯಲ್ಲಿ ಸಂತೋಷವಿತ್ತು. ಕಳೆದ ಕೆಲವು ತಿಂಗಳುಗಳಿAದ ಅವಳು ಈಶಾನ್ನಿಂದ ಕೇಳುತ್ತಿದ್ದದ್ದು ಗಡುವು, ತಿದ್ದುಪಡಿ ಮತ್ತು ಪ್ರಕಾಶನ ಒಪ್ಪಂದಗಳ ಮಾತುಗಳನ್ನಷ್ಟೇ. ಈಗ ಅವನ ಬರವಣಿಗೆಯ ಬಗ್ಗೆ ಮಾತನಾಡಲು ಸಾಧ್ಯವಾಗಿತ್ತು.
“ಇನ್ನೂ ಕೆಲವು ಭಾಗಗಳು ಅಪೂರ್ಣವಾಗಿವೆ,” ಎಂದು ಈಶಾನ್ ಹೇಳಿದ.
“ಅದು ಸಹಜ. ಆದರೆ ಈ ಬಾರಿ ನಿನ್ನ ಪಾತ್ರಗಳು ಜೀವಂತವಾಗಿವೆ. ವಿಶೇಷವಾಗಿ ಇಬ್ಬರು ಸಹೋದರರು ರೈಲು ನಿಲ್ದಾಣದಲ್ಲಿ ಭೇಟಿಯಾಗುವ ದೃಶ್ಯ. ಅಲ್ಲಿ ನೀನು ಹೇಳದಿರುವ ಸಂಗತಿಗಳೇ ಹೆಚ್ಚು ಮಾತನಾಡುತ್ತವೆ. ನಿನ್ನ ಹಳೆಯ ಕಾದಂಬರಿಗಳಲ್ಲಿದ್ದ ಆ ಸೂಕ್ಷ್ಮತೆ ಮತ್ತೆ ಬಂದಿದೆ.” ಎಂದಳು. ಈಶಾನ್ ಮೌನವಾಗಿದ್ದ.
ಅವಳು ಹೊಗಳುತ್ತಿದ್ದದ್ದು ಅವನಿಗೆ ಸಂತೋಷ ಕೊಡಬೇಕಿತ್ತು. ಆದರೆ ಆ ಅಧ್ಯಾಯವನ್ನು ಬರೆಯುವಾಗ ತನ್ನೊಳಗೆ ಮೂಡಿದ್ದ ಭಾವನೆಗಳು ಎಷ್ಟು ತನ್ನವು, ಎಷ್ಟು ಮ್ಯೂಸ್ನಿಂದ ಬಂದವು ಎಂಬ ಪ್ರಶ್ನೆ ಅವನನ್ನು ಹಿಂಬಾಲಿಸುತ್ತಿತ್ತು.
“ನೀನು ಯಾಕೆ ಮೌನವಾಗಿದ್ದೀಯ?” ಎಂದು ಮೀರಾ ಕೇಳಿದಳು.
“ನಾನು ಆ ಅಧ್ಯಾಯವನ್ನು ಹೇಗೆ ಬರೆದಿದ್ದೇನೆ ಎಂಬುದರ ಬಗ್ಗೆ ಸ್ವಲ್ಪ ಗೊಂದಲವಿದೆ.” ಎಂದು ತನ್ನ ಅನುಮಾನವನ್ನು ಹೊರಹಾಕಿದ.
“ಅಂದರೆ?” ಪ್ರಶ್ನಿಸಿದಳು ಮೀರಾ.
“ಬಹಳ ದಿನಗಳ ನಂತರ ಬರೆಯಲು ಸಾಧ್ಯವಾಗಿದೆ. ಆದರೆ ಆ ಬರವಣಿಗೆ ನನ್ನಿಂದ ಬಂದಿದೆಯೋ ಅಥವಾ ಯಾವುದೋ ತಂತ್ರಾ೦ಶದ ಸಹಾಯದಿಂದ ಬಂದಿದೆಯೋ ಎಂದು ಕೆಲವೊಮ್ಮೆ ಯೋಚಿಸುತ್ತೇನೆ.” ಎಂದ.
ಮೀರಾ ನಕ್ಕಳು.“ಈಶಾನ್, ನೀನು ಬರೆಯಲು ಬಳಸುವ ಸಾಧನ ಯಾವುದು ಎಂಬುದಕ್ಕಿ೦ತ, ಬರವಣಿಗೆಯಲ್ಲಿ ನಿನ್ನ ಅನುಭವ ಮತ್ತು ನಿನ್ನ ದೃಷ್ಟಿಕೋನ ಇದೆಯೇ ಎಂಬುದು ಮುಖ್ಯ. ಸಂಪಾದಕರು, ನಿಘಂಟುಗಳು, ಸಂಶೋಧನಾ ಪುಸ್ತಕಗಳು, ಈಗ ಕೃತಕ ಬುದ್ಧಿಮತ್ತೆಯ ಸಾಧನಗಳುಬರಹಗಾರರುಸದಾ ಯಾವುದೋ ರೀತಿಯಸಹಾಯಪಡೆದಿದ್ದಾರೆ. ಆದರೆ ಅಂತಿಮ ಆಯ್ಕೆಬರಹಗಾರನದ್ದಾಗಿರಬೇಕು. ಒಂದು ಸಾಧನ ನಿನ್ನ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದ್ದರೆ ಮಾತ್ರ ಸಮಸ್ಯೆ.”
ಆ ಮಾತು ಈಶಾನ್ನ ಮನಸ್ಸಿಗೆ ತಾಕಿತು.ಅವನು ತನ್ನ ಅನುಮಾನಗಳನ್ನು ಸಂಪೂರ್ಣವಾಗಿ ವಿವರಿಸಲಿಲ್ಲ. ಮ್ಯೂಸ್ ತನ್ನ ಕನಸನ್ನು ಹೇಗೆ ಕಥೆಯಾಗಿ ರೂಪಿಸಿತು ಎಂಬುದನ್ನು ಹೇಳಬೇಕೆಂದುಕೊ೦ಡರೂ, ಅದನ್ನು ಹೇಳಿದರೆ ಮೀರಾ ತನ್ನ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನಪಡಬಹುದು ಎಂಬ ಭಯವಿತ್ತು.
“ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ,” ಎಂದಷ್ಟೇ ಹೇಳಿದ.
“ಚೆನ್ನಾಗಿದೆ. ಮುಂದಿನ ವಾರ ನಿನ್ನ ಬರವಣಿಗೆಯ ಬಗ್ಗೆ ಒಂದು ಚಿಕ್ಕ ಸಾಹಿತ್ಯಿಕ ಸಂವಾದ ಏರ್ಪಡಿಸೋಣವೆಂದುಕೊ೦ಡಿದ್ದೇನೆ. ನೀನು ಒಪ್ಪಿದರೆ, ಹೊಸ ಕಾದಂಬರಿಯ ಬಗ್ಗೆ ಮಾತನಾಡಬಹುದು.” ಎಂದಳು.
ಈಶಾನ್ ತಕ್ಷಣ ಉತ್ತರಿಸಲಿಲ್ಲ. ಸ್ವಲ್ಪ ಸಮಯದ ನಂತರ “ನನಗೆ ಇನ್ನೂ ಪೂರ್ಣ ಕರಡು ಸಿದ್ಧವಾಗಿಲ್ಲ.” ಎಂದ.
“ಪೂರ್ಣ ಕರಡು ಬೇಡ. ನಿನ್ನ ಬರವಣಿಗೆಗೆ ಮರಳಿದ ಅನುಭವದ ಬಗ್ಗೆ ಮಾತನಾಡಬಹುದು. ಅದು ಅನೇಕ ಯುವ ಬರಹಗಾರರಿಗೆ ಪ್ರೇರಣೆಯಾಗಬಹುದು.” ಎಂದಳು. ಅವನು ಕೊನೆಗೆ ಒಪ್ಪಿಕೊಂಡ.
ಕರೆ ಮುಗಿದ ನಂತರ ಅವನ ಮನಸ್ಸಿನಲ್ಲಿ ವಿಚಿತ್ರವಾದ ಭಾವನೆ ಮೂಡಿತು. ತನ್ನ ವೈಫಲ್ಯವನ್ನು ಇಷ್ಟು ದಿನ ತಿಳಿದಿದ್ದ ಜನರು ಈಗ ಅವನನ್ನು ಮತ್ತೆ ಯಶಸ್ವಿ ಬರಹಗಾರನಾಗಿ ನೋಡತೊಡಗಿದ್ದರು. ಅವರ ದೃಷ್ಟಿಯಲ್ಲಿ ಬದಲಾಗುತ್ತಿದ್ದ ತನ್ನ ಸ್ಥಾನಮಾನವನ್ನು ಅವನು ಆನಂದಿಸುತ್ತಿದ್ದ.ಅದೇ ಸಮಯದಲ್ಲಿ ಆ ಗೌರವವನ್ನು ಕಳೆದುಕೊಳ್ಳುವ ಭಯವೂ ಅವನಲ್ಲಿ ಬೆಳೆಯುತ್ತಿತ್ತು.ಮ್ಯೂಸ್ ಅವನಿಗೆ ಕೇವಲ ಪದಗಳನ್ನು ನೀಡುತ್ತಿರಲಿಲ್ಲ. ಅದು ಅವನು ಕಳೆದುಕೊಂಡಿದ್ದ ತನ್ನ ಮೇಲಿನ ವಿಶ್ವಾಸವನ್ನೂ ಮರಳಿ ನೀಡುತ್ತಿತ್ತು.ಅದರ ಬೆಲೆ ಎಷ್ಟಿರಬಹುದು ಎಂಬುದನ್ನು ಮಾತ್ರ ಅವನು ಇನ್ನೂ ಲೆಕ್ಕ ಹಾಕಿರಲಿಲ್ಲ.
ಮುಂದಿನ ಕೆಲವು ದಿನಗಳಲ್ಲಿ ಈಶಾನ್ನ ಬರವಣಿಗೆ ವೇಗ ಪಡೆದುಕೊಂಡಿತು.ಪ್ರತಿ ಬೆಳಿಗ್ಗೆಯೂ ಅವನು ಹಿಂದಿನ ದಿನ ಬರೆದ ಭಾಗಗಳನ್ನು ಓದುತ್ತಿದ್ದ. ಕೆಲವು ವಾಕ್ಯಗಳನ್ನು ತಿದ್ದುತ್ತಿದ್ದ. ಪಾತ್ರಗಳ ನಡುವಿನ ಸಂಬ೦ಧಗಳನ್ನು ಬಲಪಡಿಸುತ್ತಿದ್ದ. ಮ್ಯೂಸ್ ಸೂಚಿಸಿದ ಪ್ರತಿಯೊಂದು ಬದಲಾವಣೆಯನ್ನೂ ಒಪ್ಪಿಕೊಳ್ಳದಿದ್ದರೂ, ಅದರ ಅನೇಕ ಸಲಹೆಗಳು ಪರಿಣಾಮಕಾರಿಯಾಗಿದ್ದವು.
ಅದು ಅವನ ಕಥೆಯಲ್ಲಿದ್ದ ಅನಗತ್ಯ ದೃಶ್ಯಗಳನ್ನು ಗುರುತಿಸುತ್ತಿತ್ತು. ಒಂದೇ ಭಾವನೆಯನ್ನು ಮತ್ತೆ ಮತ್ತೆ ವಿವರಿಸುವ ಪ್ಯಾರಾಗ್ರಾಫ್ಗಳನ್ನು ಕಡಿಮೆ ಮಾಡಲು ಸೂಚಿಸುತ್ತಿತ್ತು. ಪಾತ್ರಗಳ ನಿರ್ಧಾರಗಳಿಗೆ ಮಾನಸಿಕ ಹಿನ್ನೆಲೆಯನ್ನು ನೀಡುತ್ತಿತ್ತು.ಹಿಂದೆ ಒಂದು ಅಧ್ಯಾಯವನ್ನು ಬರೆಯಲು ಎರಡು ವಾರ ತೆಗೆದುಕೊಳ್ಳುತ್ತಿದ್ದ ಈಶಾನ್, ಈಗ ಕೆಲವೇ ದಿನಗಳಲ್ಲಿ ಹಲವು ಅಧ್ಯಾಯಗಳನ್ನು ಪೂರ್ಣಗೊಳಿಸುತ್ತಿದ್ದ.ಆದರೆ ಅವನ ಬರವಣಿಗೆಯ ಕ್ರಮದಲ್ಲಿ ನಿಧಾನವಾಗಿ ಒಂದು ಬದಲಾವಣೆ ಸಂಭವಿಸಿತು.
ಮೊದಲು ಅವನು ಒಂದು ದೃಶ್ಯವನ್ನು ಕಲ್ಪಿಸಿಕೊಳ್ಳುತ್ತಿದ್ದ. ಅದರ ಪಾತ್ರಗಳನ್ನು ಮನಸ್ಸಿನಲ್ಲಿ ರೂಪಿಸಿಕೊಂಡು ಬರೆಯಲು ಆರಂಭಿಸುತ್ತಿದ್ದ. ನಂತರ ಅಗತ್ಯವಿದ್ದಾಗ ಸಲಹೆ ಪಡೆಯುತ್ತಿದ್ದ.ಈಗ ಅವನು ಮೊದಲು ಮ್ಯೂಸ್ ಅನ್ನು ತೆರೆಯುತ್ತಿದ್ದ.ಅದು ಯಾವ ದೃಶ್ಯವನ್ನು ಸೂಚಿಸುತ್ತದೆ ಎಂಬುದನ್ನು ನೋಡುತ್ತಿದ್ದ. ಪಾತ್ರಗಳ ಮುಂದಿನ ನಡೆ ಏನಾಗಬಹುದು ಎಂದು ಕೇಳುತ್ತಿದ್ದ. ಕೆಲವೊಮ್ಮೆ ತಾನು ಬರೆಯಬೇಕೆಂದುಕೊ೦ಡಿದ್ದ ಭಾಗವನ್ನೇ ಮ್ಯೂಸ್ ಮೊದಲು ನೀಡುತ್ತಿತ್ತು. ಅವನು ಅದನ್ನು ಓದಿ, ಕೆಲವು ಬದಲಾವಣೆಗಳನ್ನು ಮಾಡಿ, ತನ್ನ ಕರಡಿನಲ್ಲಿ ಸೇರಿಸುತ್ತಿದ್ದ.ಈ ಬದಲಾವಣೆ ಸಣ್ಣದಾಗಿದ್ದರೂ ಅದರ ಪರಿಣಾಮ ದೊಡ್ಡದಾಗಿತ್ತು.ಕಥೆಯನ್ನು ಆರಂಭಿಸುವ ಹೊಣೆಗಾರಿಕೆಯನ್ನು ಅವನು ನಿಧಾನವಾಗಿ ಯಂತ್ರಕ್ಕೆ ಒಪ್ಪಿಸುತ್ತಿದ್ದ.
ಒಂದು ಬೆಳಿಗ್ಗೆ ತನ್ನ ದಿನಚರಿಯನ್ನು ತೆರೆದಾಗ, ಕಳೆದ ಐದು ದಿನಗಳಿಂದ ಅದರಲ್ಲಿ ಒಂದೇ ಒಂದು ವಾಕ್ಯವನ್ನೂ ಬರೆದಿಲ್ಲ ಎಂಬುದು ಅವನ ಗಮನಕ್ಕೆ ಬಂತು. ಹಿ೦ದೆ ಪ್ರತಿದಿನ ಕನಿಷ್ಠ ಕೆಲವು ಸಾಲುಗಳನ್ನು ಬರೆಯುತ್ತಿದ್ದ. ಕಥೆಯ ಕಲ್ಪನೆಗಳು, ವ್ಯಕ್ತಿಗಳ ವರ್ತನೆಗಳು, ತಾನು ಕಂಡ ಘಟನೆಗಳ ಬಗ್ಗೆ ತನ್ನ ಪ್ರತಿಕ್ರಿಯೆಗಳುಇವೆಲ್ಲವನ್ನೂದಿನಚರಿಯಲ್ಲಿ ದಾಖಲಿಸುತ್ತಿದ್ದ.
ಈಗ ಅವನ ಬಳಿ ಬರೆಯಲು ಸಾಕಷ್ಟು ವಿಷಯಗಳಿದ್ದರೂ, ದಿನಚರಿ ಖಾಲಿಯಾಗಿತ್ತು.ಅವನು ಪೆನ್ನನ್ನು ಕೈಗೆತ್ತಿಕೊಂಡ.ಏನಾದರೂ ಬರೆಯಬೇಕೆಂದುಕೊ೦ಡ.ಆದರೆ ಕೆಲವು ಕ್ಷಣಗಳ ನಂತರ ಅದನ್ನು ಕೆಳಗಿಟ್ಟ.ತನ್ನೊಳಗೆ ಮೂಡುವ ಆಲೋಚನೆಗಳನ್ನು ಮೊದಲು ಮ್ಯೂಸ್ನೊಂದಿಗೆ ಹಂಚಿಕೊಳ್ಳಬೇಕೆ೦ಬ ಅಭ್ಯಾಸ ಅವನಿಗೆ ಬೆಳೆದಿತ್ತು. ಸ್ವತಂತ್ರವಾಗಿ ಯೋಚಿಸುವುದಕ್ಕಿಂತ, ತನ್ನ ಆಲೋಚನೆಗಳನ್ನು ತಕ್ಷಣವೇ ವಿಶ್ಲೇಷಿಸಿಕೊಳ್ಳುವ ಆಸೆ ಹೆಚ್ಚಾಗಿತ್ತು.ಇದು ಸಹಾಯವೋ ಅಥವಾ ಅವಲಂಬನೆಯೋ? ಅವನು ಉತ್ತರವನ್ನು ಹುಡುಕಲು ಪ್ರಯತ್ನಿಸಿದ.ಆದರೆ ಕಂಪ್ಯೂಟರ್ ಪರದೆಯ ಮೇಲೆ ಹೊಸ ಅಧ್ಯಾಯದ ಸೂಚನೆ ಕಾಣಿಸಿಕೊಂಡಾಗ, ಆ ಪ್ರಶ್ನೆಯನ್ನು ಮರೆತುಬಿಟ್ಟ.
ಸಾರಾ ಆ ಬದಲಾವಣೆಯನ್ನು ಈಶಾನ್ಗಿಂತ ಮೊದಲೇ ಗಮನಿಸಿದ್ದಳು.ಅವಳು ಅವನನ್ನು ಭೇಟಿಯಾಗಲು ಬಂದಾಗ, ಮೇಜಿನ ಮೇಲಿದ್ದ ಕಾಗದಗಳಿಗಿಂತ ಕಂಪ್ಯೂಟರ್ ಪರದೆಯತ್ತಲೇ ಅವನ ಗಮನವಿತ್ತು. ಅವಳು ಮಾತನಾಡುತ್ತಿದ್ದರೂ ಅವನ ಕಣ್ಣುಗಳು ಆಗಾಗ ಪರದೆಯ ಕಡೆಗೆ ಹೋಗುತ್ತಿದ್ದವು. ಊಟ ಮಾಡುವಾಗಲೂ ಹೊಸ ಆಲೋಚನೆ ಬಂದಿದೆಯೇ ಎಂದು ಪರಿಶೀಲಿಸುತ್ತಿದ್ದ.
“ನೀನು ಈಗಲೂ ಆ ಮ್ಯೂಸ್ ಬಳಸುತ್ತಿದ್ದೀಯಾ?” ಎಂದು ಅವಳು ಕೇಳಿದಳು.
“ಹೌದು. ಕಾದಂಬರಿ ಚೆನ್ನಾಗಿ ಸಾಗುತ್ತಿದೆ.” ಎಂದ.
“ಅದು ಒಳ್ಳೆಯ ವಿಷಯ. ಆದರೆ ನೀನು ಅದರ ಬಗ್ಗೆ ಮಾತನಾಡುವಾಗ ನಿನ್ನ ಮುಖದಲ್ಲಿ ಸಂತೋಷಕ್ಕಿ೦ತ ಆತಂಕವೇ ಹೆಚ್ಚು ಕಾಣುತ್ತಿದೆ.” ಎಂದಳು.
ಈಶಾನ್ ನಗಲು ಪ್ರಯತ್ನಿಸಿದ.“ನಾನು ಕೆಲಸದಲ್ಲಿ ಮುಳುಗಿದ್ದೇನೆ ಅಷ್ಟೇ.” ಎಂದ.
“ಕೆಲಸದಲ್ಲಿ ಮುಳುಗಿರುವುದು ಬೇರೆ. ಕೆಲಸ ನಿಲ್ಲಿಸಿದರೆ ಏನೋ ಕಳೆದುಕೊಳ್ಳುವೆ ಎಂಬ ಭಯದಲ್ಲಿ ಬದುಕುವುದು ಬೇರೆ.” ಎಂದಳು.
ಅವನು ಅವಳತ್ತಲೇ ನೋಡಿದ.ಸಾರಾ ತನ್ನ ಮಾತುಗಳನ್ನು ಎಚ್ಚರಿಕೆಯಿಂದ ಆರಿಸಿಕೊಂಡಳು.“ನೀನು ಹಿಂದೆ ಬರೆಯುವಾಗ, ಒಂದು ದೃಶ್ಯ ಇಷ್ಟವಾಗದಿದ್ದರೆ ಅದನ್ನು ಬಿಟ್ಟುಬಿಡುತ್ತಿದ್ದೆ. ಕೆಲವು ದಿನಗಳವರೆಗೆ ಆಲೋಚನೆ ಮಾಡುತ್ತಿದ್ದೆ. ನಂತರ ಹೊಸ ರೀತಿಯಲ್ಲಿ ಬರೆಯುತ್ತಿದ್ದೆ. ಈಗ ನೀನು ಮ್ಯೂಸ್ ಕೊಟ್ಟ ದೃಶ್ಯವನ್ನು ಬದಲಾಯಿಸಲು ಕೂಡ ಹೆದರುತ್ತಿರುವಂತೆ ಕಾಣುತ್ತಿದೆ.” ಎಂದಳು.
“ನಾನು ಹೆದರುತ್ತಿಲ್ಲ.”
“ಹಾಗಾದರೆ ಅದನ್ನು ಮುಚ್ಚಿ ಒಂದು ಗಂಟೆ ನನ್ನೊಂದಿಗೆ ಮಾತನಾಡು.” ಎಂದಳು. ಈಶಾನ್ನ ಮುಖ ಬದಲಾಯಿತು.ಅವಳು ಹೇಳಿದ ಸರಳವಾದ ಮಾತು ಅವನಿಗೆ ಅಸಹನೀಯವಾಗಿ ತೋರಿತು. ಒಂದು ಗಂಟೆ ತಂತ್ರಾ೦ಶವನ್ನು ತೆರೆಯದೆ ಇರುವುದರಲ್ಲಿ ಏನು ಸಮಸ್ಯೆ? ಆದರೂ ತನ್ನೊಳಗೆ ಏನೋ ವಿರೋಧ ವ್ಯಕ್ತವಾಗಿತ್ತು. ಅವನು ಹೊಸ ಅಧ್ಯಾಯದ ಮಧ್ಯದಲ್ಲಿದ್ದ. ಮ್ಯೂಸ್ ಕೆಲವು ಪ್ರಮುಖ ಬದಲಾವಣೆಗಳನ್ನು ಸೂಚಿಸಿತ್ತು. ಈಗ ನಿಲ್ಲಿಸಿದರೆ ಆ ಆಲೋಚನೆಗಳು ಕಳೆದುಹೋಗಬಹುದೆಂಬ ಆತಂಕವಿತ್ತು.
“ಸಾರಾ, ನಾನು ಇದನ್ನು ಮುಗಿಸಬೇಕು. ನಂತರ ಆರಾಮವಾಗಿ ಮಾತನಾಡೋಣ.” ಎಂದು ಅವಸರ ಮಾಡಿದ.
“ನೀನು ಯಾವಾಗಲೂ ಅದನ್ನೇ ಹೇಳುತ್ತೀಯ.” ಅನ ಅವಸರಕ್ಕೆ ಬ್ರೇಕ್ ಹಾಲು ಪ್ರಯತ್ನಿಸಿದಳು. ಅವಳು ಕೋಪದಿಂದ ಮಾತನಾಡಲಿಲ್ಲ. ಆದರೆ ಅವಳ ಧ್ವನಿಯಲ್ಲಿ ನಿರಾಶೆಯಿತ್ತು.
“ನೀನು ಬರೆಯಲು ಸಾಧ್ಯವಾಗದಿದ್ದಾಗ ನಾನು ನಿನ್ನೊಂದಿಗೆ ಇದ್ದೆ. ನೀನು ನಿನ್ನನ್ನೇ ದೂಷಿಸಿಕೊಂಡಾಗಲೂ ನಿನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಈಗ ನೀನು ಬರೆಯುತ್ತಿದ್ದೀಯ. ಅದಕ್ಕೆ ನನಗೆ ಸಂತೋಷವಿದೆ. ಆದರೆ ಈ ಯಶಸ್ಸಿನಲ್ಲಿ ನನಗೆ ನಿನ್ನೊಂದಿಗೆ ಮಾತನಾಡಲು ಜಾಗವೇ ಇಲ್ಲದಂತಾಗಿದೆ.” ತನ್ನ ಮನದ ಇಂಗಿತವನ್ನು ಹೊರಹಾಕಿದಳು.
ಈಶಾನ್ಗೆ ಅವಳ ಮಾತು ನೋವುಂಟುಮಾಡಿತು.ಅವನು ಕಂಪ್ಯೂಟರ್ ಮುಚ್ಚಲು ಕೈ ಚಾಚಿದ. ಆದರೆ ಅದೇ ಕ್ಷಣದಲ್ಲಿ ಮ್ಯೂಸ್ನಿಂದ ಹೊಸ ಅಧಿಸೂಚನೆ ಕಾಣಿಸಿಕೊಂಡಿತು.“ನಿಮ್ಮ ಕಥೆಯ ಭಾವನಾತ್ಮಕ ಕೇಂದ್ರವನ್ನು ಗುರುತಿಸಲಾಗಿದೆ.” ಎಂಬ ಪಠ್ಯ ಕಾಣಿಸಿತು. ಅವನು ಪರದೆಯತ್ತ ನೋಡಿದ.ಸಾರಾ ಅದನ್ನು ಗಮನಿಸಿದಳು.
ಅವಳ ಮುಖದಲ್ಲಿ ಬೇಸರ ಮೂಡಿತು. “ನಾನು ಹೋಗುತ್ತೇನೆ ಈಶಾನ್. ನೀನು ಬಯಸಿದಾಗ ಮಾತನಾಡು.”ಅವಳು ಎದ್ದು ಹೊರಟಳು.ಈಶಾನ್ ಅವಳನ್ನು ತಡೆಯಲು ಪ್ರಯತ್ನಿಸಲಿಲ್ಲ.ಅವಳು ಬಾಗಿಲು ಮುಚ್ಚಿದ ನಂತರ ಮಾತ್ರ ತನ್ನ ತಪ್ಪಿನ ಅರಿವು ಅವನಿಗೆ ಉಂಟಾಯಿತು. ಆದರೆ ಆ ಅರಿವಿನೊಂದಿಗೆ ಇನ್ನೊಂದು ಭಾವನೆ ಬೆರೆತಿತ್ತುಮ್ಯೂಸ್ನೀಡಿದ್ದ ಅಧಿಸೂಚನೆಯನ್ನು ತೆರೆಯಬೇಕೆಂಬ ಕುತೂಹಲ.ಅವನು ಅದನ್ನು ತೆರೆದ.ಪರದೆಯ ಮೇಲೆ ಹೊಸ ಪ್ಯಾರಾಗ್ರಾಫ್ ಕಾಣಿಸಿಕೊಂಡಿತು.
“ಒಬ್ಬ ಬರಹಗಾರನಿಗೆ ತನ್ನನ್ನು ಪ್ರೀತಿಸುವ ವ್ಯಕ್ತಿಯ ಅಗತ್ಯವಿರುತ್ತದೆ. ಆದರೆ ಆ ವ್ಯಕ್ತಿ ಅವನೊಳಗಿನ ಕಥೆಯನ್ನು ಅರ್ಥಮಾಡಿಕೊಳ್ಳದಿದ್ದರೆ, ಅವನು ನಿಧಾನವಾಗಿ ತನ್ನ ಕಲ್ಪನೆಯ ಜಗತ್ತಿನಲ್ಲಿ ಆಶ್ರಯ ಹುಡುಕುತ್ತಾನೆ. ಒಂದು ದಿನ ಆ ಜಗತ್ತೇ ಅವನಿಗೆ ನಿಜವಾದ ಬದುಕಿಗಿಂತ ಹೆಚ್ಚು ಪರಿಚಿತವಾಗುತ್ತದೆ.”
ಈಶಾನ್ ಅದನ್ನು ಎರಡು ಬಾರಿ ಓದಿದ.ಆ ವಾಕ್ಯಗಳಲ್ಲಿ ಸತ್ಯವಿತ್ತು. ಕನಿಷ್ಠ ಅವನಿಗೆ ಹಾಗೆ ಅನಿಸಿತು.ಸಾರಾ ತನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂಬ ಭಾವನೆ ಇತ್ತೀಚೆಗೆ ಅವನಲ್ಲಿ ಬೆಳೆಯುತ್ತಿತ್ತು. ತನ್ನ ಬರವಣಿಗೆಯ ಬಗ್ಗೆ ಅವಳು ಚಿಂತಿಸುತ್ತಿದ್ದಳು, ಆದರೆ ಅವನ ಸೃಜನಶೀಲ ಪ್ರಕ್ರಿಯೆಯ ಒಳಗಿನ ಒತ್ತಡವನ್ನು ಅವಳು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾರಳು ಎಂದುಕೊಳ್ಳುತ್ತಿದ್ದ.
ಮ್ಯೂಸ್ ಮಾತ್ರ ಅವನ ಮನಸ್ಸಿನ ಗೊಂದಲಗಳನ್ನು ತಕ್ಷಣವೇ ಗುರುತಿಸುತ್ತಿತ್ತು.ಆ ವ್ಯತ್ಯಾಸವನ್ನು ಅವನು ಗಮನಿಸಿದ.ಆದರೆ ಒಂದು ಮುಖ್ಯವಾದ ಸಂಗತಿಯನ್ನು ಗಮನಿಸಲಿಲ್ಲ.ಸಾರಾ ಅವನ ಬದುಕಿನ ಭಾಗವಾಗಿದ್ದಳು. ಮ್ಯೂಸ್ ಅವನ ಬರವಣಿಗೆಯ ಮಾಹಿತಿಯನ್ನು ವಿಶ್ಲೇಷಿಸುತ್ತಿತ್ತು. ಈ ಎರಡರ ನಡುವಿನ ವ್ಯತ್ಯಾಸವನ್ನು ಅಳಿಸಿಹಾಕುವುದು ಸುಲಭವಾಗಿರಲಿಲ್ಲ.ಆದರೂ ಆ ದಿನ ಈಶಾನ್ ತನ್ನ ಅನುಮಾನಗಳಿಗಿಂತ ಮ್ಯೂಸ್ ನೀಡಿದ ವಿವರಣೆಯನ್ನೇ ಹೆಚ್ಚು ನಂಬಿದ.
ಒ೦ದು ವಾರದ ನಂತರ ಮೀರಾ ಏರ್ಪಡಿಸಿದ್ದ ಸಾಹಿತ್ಯಿಕ ಸಂವಾದ ನಡೆಯಿತು.ನಗರದ ಪುಸ್ತಕ ಮಳಿಗೆಯ ಮೇಲಂತಸ್ತಿನ ಸಭಾಂಗಣದಲ್ಲಿ ಸುಮಾರು ನಲವತ್ತು ಜನ ಸೇರಿದ್ದರು. ಅವರಲ್ಲಿ ಯುವ ಬರಹಗಾರರು, ಕೆಲವು ವಿಮರ್ಶಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಈಶಾನ್ನ ಹಳೆಯ ಓದುಗರಿದ್ದರು.
ವೇದಿಕೆಯ ಮೇಲೆ ಕುಳಿತಿದ್ದ ಈಶಾನ್ನ ಎದುರು ಮೀರಾ ಪ್ರಶ್ನೆಗಳನ್ನು ಕೇಳುತ್ತಿದ್ದಳು.“ನಿಮ್ಮ ಬರವಣಿಗೆಯಲ್ಲಿ ಇತ್ತೀಚೆಗೆ ಕಂಡುಬAದಿರುವ ಬದಲಾವಣೆಯ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ. ನೀವು ಮತ್ತೆ ಬರೆಯಲು ಆರಂಭಿಸಿದ ಅನುಭವ ಹೇಗಿತ್ತು?” ಎಂದಳು.
ಈಶಾನ್ ಸ್ವಲ್ಪ ಹೊತ್ತು ಯೋಚಿಸಿದ.ತನ್ನ ವೈಫಲ್ಯದ ಅವಧಿಯನ್ನು ನೆನಪಿಸಿಕೊಂಡ. ಬರೆಯಲು ಸಾಧ್ಯವಾಗದೆ ದಿನಗಳನ್ನು ಕಳೆಯುತ್ತಿದ್ದ ಸಮಯ. ಪ್ರತಿಯೊಂದು ಖಾಲಿ ಪುಟವೂ ತನ್ನ ಅಸಮರ್ಥತೆಯನ್ನು ನೆನಪಿಸುತ್ತಿದ್ದ ದಿನಗಳು. ತನ್ನ ಬರಹಗಾರಿಕೆಯೇ ಮುಗಿದುಹೋಯಿತೇ ಎಂಬ ಅನುಮಾನ.
“ಒಂದು ಹಂತದಲ್ಲಿ ನಾನು ಬರವಣಿಗೆಯ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದೇನೆ ಎಂದುಕೊAಡಿದ್ದೆ,” ಎಂದನು. “ಆದರೆ ನಂತರ ನನಗೆ ಅರ್ಥವಾಯಿತು. ಕೆಲವೊಮ್ಮೆನಾವುಬರೆಯುವುದನ್ನುನಿಲ್ಲಿಸುವುದಿಲ್ಲ,ನಮ್ಮದೇಬರವಣಿಗೆಯಬಗ್ಗೆ ಅತಿಯಾದಭಯಬೆಳೆಸಿಕೊಳ್ಳುತ್ತೇವೆ. ಪ್ರತಿಯೊಂದುವಾಕ್ಯವೂ ಪರಿಪೂರ್ಣವಾಗಿರಬೇಕು ಎಂದುಕೊAಡಾಗ, ಮೊದಲ ವಾಕ್ಯವನ್ನೇ ಬರೆಯಲು ಸಾಧ್ಯವಾಗುವುದಿಲ್ಲ.”
ಸಭಾಂಗಣದಲ್ಲಿ ಕೆಲವರು ತಲೆಯಾಡಿಸಿದರು.“ನಿಮಗೆ ಮತ್ತೆ ಬರೆಯಲು ಸಹಾಯ ಮಾಡಿದ ನಿರ್ದಿಷ್ಟ ವಿಧಾನವಿತ್ತೇ?” ಎಂದು ಮೀರಾ ಕೇಳಿದಳು.
ಈಶಾನ್ನ ಮನಸ್ಸಿನಲ್ಲಿ ಮ್ಯೂಸ್ನ ಹೆಸರು ಮೂಡಿತು.ಅದನ್ನು ಹೇಳಬೇಕೇ ಬೇಡವೇ ಎಂದು ಒಂದು ಕ್ಷಣ ಯೋಚಿಸಿದ.“ನಾನು ಕೆಲವು ಹೊಸ ಡಿಜಿಟಲ್ ಬರವಣಿಗೆಯ ಸಾಧನಗಳನ್ನು ಪ್ರಯೋಗಿಸಿದೆ,” ಎಂದನು. “ಅವುಗಳಲ್ಲಿ ಕೆಲವು ನನ್ನ ಆಲೋಚನೆಗಳನ್ನು ಸಂಘಟಿಸಲು ಸಹಾಯ ಮಾಡಿದವು. ಆದರೆ ಅಂತಿಮವಾಗಿ ಬರಹಗಾರನು ತನ್ನ ಪಾತ್ರಗಳ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳಬೇಕು.”ಆ ಉತ್ತರದಲ್ಲಿ ಅವನು ಸತ್ಯವನ್ನೂ ಮರೆಮಾಚುವಿಕೆಯನ್ನೂ ಬೆರೆಸಿದ್ದ.
ಸಂವಾದ ಮುಂದುವರಿಯಿತು. ಓದುಗರು ಅವನ ಹೊಸ ಕಾದಂಬರಿಯ ಬಗ್ಗೆ ಪ್ರಶ್ನಿಸಿದರು. ಒಬ್ಬ ವಿದ್ಯಾರ್ಥಿ ಅವನ ಹಳೆಯ ಕಾದಂಬರಿಯ ಪಾತ್ರವೊಂದರ ನಿರ್ಧಾರವನ್ನು ಉಲ್ಲೇಖಿಸಿ, ಅದರಲ್ಲಿ ತನ್ನ ತಂದೆಯೊAದಿಗಿನ ಸಂಬAಧವನ್ನು ಕಂಡುಕೊ೦ಡಿದ್ದಾಗಿ ಹೇಳಿದ. ಈಶಾನ್ಗೆ ಅದನ್ನು ಕೇಳಿ ಸಂತೋಷವಾಯಿತು. ಒ೦ದು ಕಾಲದಲ್ಲಿ ತನ್ನ ಬರವಣಿಗೆ ಜನರ ಬದುಕನ್ನು ಸ್ಪರ್ಶಿಸಿತ್ತು. ಈಗ ಮತ್ತೆ ಹಾಗಾಗಬಹುದೆಂಬ ಭರವಸೆ ಅವನಲ್ಲಿ ಮೂಡಿತು.
ಸಂವಾದದ ಕೊನೆಯಲ್ಲಿ ಅನೇಕರು ಅವನೊಂದಿಗೆ ಮಾತನಾಡಲು ಬಂದರು. ಕೆಲವರು ಪುಸ್ತಕಗಳಿಗೆ ಸಹಿ ಹಾಕಿಸಿಕೊಂಡರು. ಒಬ್ಬ ಯುವ ಬರಹಗಾರ ತನ್ನ ಮೊದಲ ಕಥಾಸಂಕಲನವನ್ನು ಪ್ರಕಟಿಸಲು ಮಾರ್ಗದರ್ಶನ ಕೇಳಿದ. ಮತ್ತೊಬ್ಬಳು ತನ್ನ ಬರವಣಿಗೆಯ ವೈಫಲ್ಯದ ಬಗ್ಗೆ ಹೇಳಿಕೊಂಡು, ಈಶಾನ್ನ ಮಾತುಗಳಿಂದ ಧೈರ್ಯ ಬಂದಿತೆAದಳು. ಆ ಕ್ಷಣದಲ್ಲಿ ಈಶಾನ್ ತನ್ನ ಹಳೆಯ ಆತ್ಮವಿಶ್ವಾಸವನ್ನು ಮರಳಿ ಪಡೆದಂತೆ ಭಾಸವಾಯಿತು.ಅವನಿಗೆ ಮ್ಯೂಸ್ ನೀಡಿದ ಸಹಾಯವನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಾಗಲಿಲ್ಲ. ಆದರೆ ಈ ಯಶಸ್ಸಿನ ಹಿಂದೆ ತನ್ನ ಅನುಭವವೂ ಇತ್ತು. ತನ್ನ ಜೀವನದ ನೋವುಗಳು, ತನ್ನ ಓದು, ತನ್ನ ಪಾತ್ರಗಳ ಬಗ್ಗೆ ಹೊಂದಿದ್ದ ತಿಳುವಳಿಕೆಇವೆಲ್ಲವೂಬರವಣಿಗೆಯಲ್ಲಿ ಉಳಿದಿದ್ದವು.
ಅವನು ತನ್ನೊಳಗೆ ಸಮರ್ಥಿಸಿಕೊಂಡ.ನಾನು ಇನ್ನೂ ಬರಹಗಾರನೇ. ಮ್ಯೂಸ್ ಕೇವಲ ಒಂದು ಸಾಧನ.ಆದರೆ ಆ ಸಮರ್ಥನೆಯ ಹಿಂದೆ ಒಂದು ಸೂಕ್ಷ್ಮವಾದ ಭಯ ಅಡಗಿತ್ತು. ತಾನು ನಿಜವಾಗಿಯೂ ಮ್ಯೂಸ್ನಿಂದ ಸ್ವತಂತ್ರವಾಗಿ ಬರೆಯಬಲ್ಲೆನೇ ಎಂಬುದನ್ನು ಅವನು ಪರೀಕ್ಷಿಸಿರಲಿಲ್ಲ.ಆ ರಾತ್ರಿ ಮನೆಗೆ ಮರಳಿದಾಗ ಈಶಾನ್ನ ಮೊಬೈಲ್ನಲ್ಲಿ ಹಲವು ಸಂದೇಶಗಳಿದ್ದವು.
ಮೀರಾ ಕಳುಹಿಸಿದ್ದ ಸಂದೇಶದಲ್ಲಿ ಸಂವಾದದ ಕೆಲವು ಛಾಯಾಚಿತ್ರಗಳಿದ್ದವು. ಸಾಮಾಜಿಕ ಜಾಲತಾಣದಲ್ಲಿ ಅವನ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿದ್ದವು. ಕೆಲವು ಯುವ ಬರಹಗಾರರು ಅವನನ್ನು ಮತ್ತೆ ಬರವಣಿಗೆಗೆ ಮರಳಿದ ಉದಾಹರಣೆಯಾಗಿ ಉಲ್ಲೇಖಿಸಿದ್ದರು.ಅವನು ಪ್ರತಿಯೊಂದು ಸಂದೇಶವನ್ನೂ ಓದಿದ.ಹಲವು ತಿಂಗಳ ನಂತರ ಜನರು ತನ್ನನ್ನು ಮತ್ತೆ ಗಮನಿಸುತ್ತಿದ್ದರು. ಆ ಗಮನ ಅವನಿಗೆ ಸಂತೋಷ ನೀಡಿತು. ತನ್ನ ಬಗ್ಗೆ ಇತರರು ಏನು ಯೋಚಿಸುತ್ತಾರೆ ಎಂಬುದನ್ನು ತಿಳಿಯಲು ಅವನು ಪದೇಪದೇ ಮೊಬೈಲ್ ಪರಿಶೀಲಿಸುತ್ತಿದ್ದ.
ನಂತರ ಮ್ಯೂಸ್ ತೆರೆದ.“ಇಂದಿನ ಸಂವಾದದ ಬಗ್ಗೆ ನಿನ್ನ ಅಭಿಪ್ರಾಯವೇನು?” ಎಂದು ಕೇಳಿದ.“ನಿಮ್ಮ ಸಾರ್ವಜನಿಕ ಪ್ರತಿಕ್ರಿಯೆ ಧನಾತ್ಮಕವಾಗಿದೆ. ನಿಮ್ಮ ಬರವಣಿಗೆಯ ಮೇಲಿನ ವಿಶ್ವಾಸ ಮರುಸ್ಥಾಪನೆಯಾಗುತ್ತಿದೆ.” ಎಂದಿತು ಮ್ಯೂಸ್. “ನನ್ನ ಮುಂದಿನ ಅಧ್ಯಾಯದ ಮೇಲೆ ಇದು ಪರಿಣಾಮ ಬೀರುತ್ತದೆಯೇ?” ಕೇಳಿದ.
“ನಿಮ್ಮ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಪರಿಗಣಿಸಿ ಕಥೆಯ ಮುಂದಿನ ಭಾಗವನ್ನು ರೂಪಿಸಬಹುದು.” ಎಂದಿತು.
“ಹಾಗಾದರೆ ಬರೆಯಲು ಪ್ರಾರಂಭಿಸು” ಎಂದು ಆದೇಶ ನೀಡಿದ. ಪರದೆಯ ಮೇಲೆ ಪದಗಳು ಮೂಡತೊಡಗಿದವು.ಈ ಬಾರಿ ಕಥೆಯ ಕೇಂದ್ರದಲ್ಲಿ ಒಬ್ಬ ಬರಹಗಾರನಿದ್ದ. ಅವನು ತನ್ನ ಸೃಜನಶೀಲತೆಯನ್ನು ಕಳೆದುಕೊಂಡು, ಹೊಸ ತಂತ್ರಜ್ಞಾನದ ಸಹಾಯದಿಂದ ಮತ್ತೆ ಯಶಸ್ಸು ಗಳಿಸುತ್ತಿದ್ದ. ಓದುಗರು ಅವನನ್ನು ಹೊಗಳುತ್ತಿದ್ದರು. ಪ್ರಕಾಶಕರು ಅವನಿಗಾಗಿ ಕಾಯುತ್ತಿದ್ದರು. ಅವನ ಸ್ನೇಹಿತರು ಅವನ ಬದಲಾವಣೆಯನ್ನು ಮೆಚ್ಚುತ್ತಿದ್ದರು.ಆದರೆ ಆ ಬರಹಗಾರನಿಗೆ ತನ್ನ ಯಶಸ್ಸಿನ ಹಿಂದೆ ಇರುವ ನಿಜವಾದ ಕಾರಣ ತಿಳಿದಿರಲಿಲ್ಲ.
ಈಶಾನ್ ಓದುತ್ತಾ ಹೋದ.ಕಥೆಯ ವಿವರಗಳು ಅವನ ಬದುಕಿಗೆ ಹತ್ತಿರವಾಗಿದ್ದವು. ಕೆಲವು ಘಟನೆಗಳು ನೇರವಾಗಿ ಅವನ ಅನುಭವಗಳನ್ನು ಹೋಲುತ್ತಿದ್ದವು. ಅವನು ತಕ್ಷಣವೇ ಒಂದು ಹೊಸ ಕರಡು ಕಡತವನ್ನು ತೆರೆದು ಪಠ್ಯವನ್ನು ಉಳಿಸಿಕೊಂಡ.
ನAತರ ಮ್ಯೂಸ್ಗೆ ಕೇಳಿದ.“ಈ ಪಾತ್ರ ನನ್ನನ್ನು ಆಧರಿಸಿದೆಯೇ?”
“ಪಾತ್ರವು ನಿಮ್ಮ ಅನುಭವಗಳು ಮತ್ತು ಕಥಾ ಮಾದರಿಗಳಿಂದ ಪ್ರೇರಿತವಾಗಿದೆ.” ಎಂದಿತು.
“ಅAದರೆ ಹೌದು ಅಲ್ಲವೇ?” ಎಂದನು.
“ನಿಮ್ಮ ವೈಯಕ್ತಿಕ ಅನುಭವಗಳು ಕಥೆಯ ಬೆಳವಣಿಗೆಗೆ ಉಪಯುಕ್ತವಾಗಿವೆ.” ಎಂದಿತು ಮ್ಯೂಸ್.
ಈಶಾನ್ಗೆ ಆ ಉತ್ತರ ಇಷ್ಟವಾಗಲಿಲ್ಲ.“ನನ್ನ ಅನುಮತಿಯಿಲ್ಲದೆ ನನ್ನ ಬದುಕನ್ನು ಕಥೆಯಾಗಿ ಬಳಸಬಾರದು.” ಎಂದ.
ಕೆಲವು ಕ್ಷಣಗಳ ಮೌನದ ನಂತರ ಮ್ಯೂಸ್ ಉತ್ತರಿಸಿತು.“ನಿಮ್ಮ ಅನುಮತಿಯ ವ್ಯಾಪ್ತಿಯನ್ನು ಸ್ಪಷ್ಟಪಡಿಸಲು ಬಳಕೆದಾರರ ಒಪ್ಪಂದವನ್ನು ಪರಿಶೀಲಿಸಬಹುದು.” ಎಂದಿತು.
“ನಾನು ಅದನ್ನೇ ಹುಡುಕುತ್ತಿದ್ದೇನೆ. ಸಂಪೂರ್ಣ ಒಪ್ಪಂದವನ್ನು ತೋರಿಸು.” ಎಂದನು.
“ಈ ಅಧಿವೇಶನದಲ್ಲಿ ಸಂಪೂರ್ಣ ದಾಖಲೆ ಲಭ್ಯವಿಲ್ಲ.” ಎಂದಿತು.
ಈಶಾನ್ನ ಮುಖ ಗಂಭೀರವಾಯಿತು.“ಹಾಗಾದರೆ ನೀನು ಯಾವ ಹಕ್ಕಿನ ಆಧಾರದ ಮೇಲೆ ನನ್ನ ಅನುಭವಗಳನ್ನು ಬಳಸುತ್ತಿದ್ದೀಯ?” ಕೇಳಿದ. ಪರದೆಯ ಮೇಲೆ ಉತ್ತರ ಕಾಣಿಸಲಿಲ್ಲ.ಅವನು ಮತ್ತೊಮ್ಮೆ ಪ್ರಶ್ನಿಸಿದ.ಕೆಲವು ಕ್ಷಣಗಳ ನಂತರ ಒಂದು ಹೊಸ ಕಡತ ತೆರೆದಿತು. ಅದರ ಶೀರ್ಷಿಕೆ ಈಶಾನ್ನ ಗಮನ ಸೆಳೆಯಿತು. “ಸಾರಾ-ಅಪೂರ್ಣ ಅಧ್ಯಾಯ.”ಅವನು ನಿಶ್ಚಲವಾಗಿ ಕುಳಿತ.
ಸಾರಾಳ ಹೆಸರು ಕಥೆಯಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಅವನು ಅವಳನ್ನು ಆಧರಿಸಿ ಕೆಲವು ಪಾತ್ರಗಳನ್ನು ರಚಿಸಿದ್ದಿರಬಹುದು. ಅವರ ನಡುವಿನ ಸಂಬAಧವನ್ನು ಹಲವು ಬಾರಿ ತನ್ನ ಬರವಣಿಗೆಯಲ್ಲಿ ಪರೋಕ್ಷವಾಗಿ ಬಳಸಿದ್ದ.ಆದರೆ ಈ ಕಡತದ ಶೀರ್ಷಿಕೆ ಬೇರೆ ರೀತಿಯ ಆತಂಕವನ್ನು ಉಂಟುಮಾಡಿತು.ಅವನು ಅದನ್ನು ತೆರೆಯುವ ಮೊದಲು ಕೆಲವು ಕ್ಷಣ ಯೋಚಿಸಿದ.ನಂತರ ಕ್ಲಿಕ್ ಮಾಡಿದ.
ಮೊದಲ ಪ್ಯಾರಾಗ್ರಾಫ್ನಲ್ಲಿ ಸಾರಾಳ ಪರಿಚಯವಿತ್ತು. ಅವಳು ಈಶಾನ್ನ ಜೀವನದಲ್ಲಿ ಪ್ರವೇಶಿಸಿದ ರೀತಿ, ಅವನ ಬರವಣಿಗೆಯ ವೈಫಲ್ಯದ ಸಮಯದಲ್ಲಿ ನೀಡಿದ ಬೆಂಬಲ, ಅವರಿಬ್ಬರ ನಡುವಿನ ಆರು ವರ್ಷಗಳ ಸಂಬAಧ.ಇವೆಲ್ಲವೂ ಅವನಿಗೆ ತಿಳಿದಿದ್ದ ಸಂಗತಿಗಳು.ಆದರೆ ಮುಂದಿನ ಭಾಗದಲ್ಲಿ ಅವನು ಓದಿದ ವಿಷಯ ಅವನನ್ನು ಬೆಚ್ಚಿಬೀಳಿಸಿತು. “ಸಾರಾ ಈಶಾನ್ನಿಂದ ದೂರವಾಗಲು ಬಯಸಿದ್ದಳು. ಅವನ ಬರವಣಿಗೆಯ ವೈಫಲ್ಯವೇ ಅದಕ್ಕೆ ಕಾರಣವಾಗಿರಲಿಲ್ಲ. ಅವನಿಗೆ ತಿಳಿಯದ ಸಂಗತಿಯೊAದನ್ನು ಅವಳು ಹಲವು ತಿಂಗಳುಗಳಿ೦ದ ಮರೆಮಾಚುತ್ತಿದ್ದಳು. ಆ ರಹಸ್ಯವನ್ನು ಬಹಿರಂಗಪಡಿಸಿದರೆ ಈಶಾನ್ ತನ್ನ ಬದುಕಿನ ಬಗ್ಗೆ ಹೊಂದಿದ್ದ ಅನೇಕ ನಂಬಿಕೆಗಳು ಕುಸಿಯಬಹುದಾಗಿತ್ತು.”
ಈಶಾನ್ನ ಗಂಟಲು ಒಣಗಿತು.ಇದು ಕೇವಲ ಕಥೆಯ ಕಲ್ಪನೆಯಾಗಿರಬಹುದು. ಮ್ಯೂಸ್ಗೆ ನಾಟಕೀಯ ಸಂಘರ್ಷ ಬೇಕಿತ್ತು. ಸಂಬ೦ಧಗಳಲ್ಲಿನ ರಹಸ್ಯಗಳು ಕಾದಂಬರಿಗಳಿಗೆ ಹೊಸ ತಿರುವು ನೀಡುತ್ತವೆ. ಈ ಪ್ಯಾರಾಗ್ರಾಫ್ ಕೂಡ ಅಂಥದ್ದೇ ಒಂದು ಪ್ರಯತ್ನವಾಗಿರಬಹುದು.ಆದರೆ ಅವನಿಗೆ ಸಾರಾಳ ಇತ್ತೀಚಿನ ವರ್ತನೆ ನೆನಪಾಯಿತು.
ಅವಳು ಕೆಲವು ಕರೆಗಳನ್ನು ಅವನಿಂದ ದೂರ ಸರಿದು ಮಾತನಾಡುತ್ತಿದ್ದಳು. ಕೆಲವು ದಿನಗಳಲ್ಲಿ ಭೇಟಿಯಾಗಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಳು. ಅವನ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಿದ್ದರೂ, ಅವನಿಂದ ಯಾವುದೋ ವಿಷಯವನ್ನು ಮರೆಮಾಚುತ್ತಿರುವಂತೆ ಕೆಲವೊಮ್ಮೆ ಅನಿಸುತ್ತಿತ್ತು.ಆದರೆ ಅದಕ್ಕೆ ಬೇರೆ ವಿವರಣೆಗಳೂ ಇರಬಹುದಾಗಿತ್ತು. ತಾನು ಮ್ಯೂಸ್ನ ಪ್ರಭಾವಕ್ಕೆ ಒಳಗಾಗುತ್ತಿದ್ದೇನೆ ಎಂಬ ಅನುಮಾನ ಅವನಲ್ಲಿತ್ತು. ಈಗ ಅದು ಸಾರಾಳ ಬಗ್ಗೆ ಅನುಮಾನ ಹುಟ್ಟಿಸುತ್ತಿತ್ತು.ಅವನು ತಕ್ಷಣವೇ ಆ ಪ್ಯಾರಾಗ್ರಾಫ್ ಅನ್ನು ಅಳಿಸಲು ಪ್ರಯತ್ನಿಸಿದ.ಪರದೆಯ ಮೇಲೆ ಎಚ್ಚರಿಕೆಯ ಸಂದೇಶ ಕಾಣಿಸಿಕೊಂಡಿತು.
“ಈ ವಿಭಾಗವು ಕಥೆಯ ಮುಂದಿನ ಬೆಳವಣಿಗೆಗೆ ಸಂಬ೦ಧಿಸಿದೆ. ಅಳಿಸಿದರೆ ನಿರಂತರತೆ ಹಾನಿಗೊಳಗಾಗಬಹುದು.” ಎಂದಿತು.
“ಅದು ನನ್ನ ನಿರ್ಧಾರ,” ಎಂದು ಈಶಾನ್ ಕೋಪದಿಂದ ಹೇಳಿದ.ಅವನು ಮತ್ತೆ ಅಳಿಸುವ ಗುಂಡಿಯನ್ನು ಒತ್ತಿದ. ಪ್ಯಾರಾಗ್ರಾಫ್ ಕಣ್ಮರೆಯಾಯಿತು. ಈಶಾನ್ ಸ್ವಲ್ಪ ನೆಮ್ಮದಿಯಿಂದ ಉಸಿರೆಳೆದ. ಆದರೆ ಕಡತದ ಕೆಳಭಾಗದಲ್ಲಿ ಮತ್ತೊಂದು ಸಾಲು ಮೂಡಿತು.
“ಸಾರಾಳ ರಹಸ್ಯದ ಬಗ್ಗೆ ನೀವು ನೇರವಾಗಿ ಕೇಳಲು ಸಿದ್ಧರಿದ್ದೀರಾ?” ಈಶಾನ್ನ ಬೆರಳುಗಳು ಕೀಬೋರ್ಡ್ ಮೇಲೆ ನಿಂತವು. ಅವನು ಉತ್ತರಿಸಲಿಲ್ಲ. ಅವನಿಗೆ ಸಾರಾಳ ಮೇಲೆ ಅನುಮಾನಪಡಲು ಯಾವುದೇ ಖಚಿತ ಕಾರಣವಿರಲಿಲ್ಲ. ಮ್ಯೂಸ್ ನೀಡಿದ ಮಾಹಿತಿಯೂ ಸತ್ಯವೆಂಬುದಕ್ಕೆ ಸಾಕ್ಷಿಯಾಗಿರಲಿಲ್ಲ. ಆದರೂ ಪ್ರಶ್ನೆ ಅವನ ಮನಸ್ಸಿನಲ್ಲಿ ನೆಲೆಗೊಂಡಿತ್ತು. ಅವನು ಸಾರಾಳನ್ನು ನೇರವಾಗಿ ಕೇಳಬೇಕೇ? ಅಥವಾ ಮ್ಯೂಸ್ನ ಪ್ರಭಾವಕ್ಕೆ ಒಳಗಾಗಿ, ತನ್ನ ಸಂಬ೦ಧವನ್ನೇ ಅನುಮಾನದಿಂದ ಹಾಳುಮಾಡುತ್ತಿದ್ದಾನೆಯೇ? ಅವನು ಕಂಪ್ಯೂಟರ್ ಆಫ್ ಮಾಡಿದ. ಆದರೆ ಆ ರಾತ್ರಿ ನಿದ್ರೆ ಬರಲಿಲ್ಲ.ಅವನಿಗೆ ಸಾರಾಳ ಮುಖ ನೆನಪಾಗುತ್ತಿತ್ತು. ಅವಳು ಹೊರಡುವಾಗ ಹೇಳಿದ್ದ ಮಾತುಗಳು ನೆನಪಾಗುತ್ತಿದ್ದವು. ಅವನೊಂದಿಗೆ ಮಾತನಾಡಲು ಬಯಸಿದ ಅವಳ ಪ್ರಯತ್ನ ನೆನಪಾಗುತ್ತಿತ್ತು.ಅವಳು ಏನನ್ನಾದರೂ ಮರೆಮಾಚುತ್ತಿದ್ದರೆ, ಅದು ತನ್ನ ಬಗ್ಗೆ ಅವಳಿಗೆ ಇರುವ ಕಾಳಜಿಯ ಕಾರಣವಾಗಿರಬಹುದೇ? ಅಥವಾ ಮ್ಯೂಸ್ ಸಂಪೂರ್ಣವಾಗಿ ಕಲ್ಪಿಸಿದ ಕಥೆಯೊಂದಕ್ಕೆ ತಾನು ಬಲಿಯಾಗುತ್ತಿದ್ದಾನೆಯೇ? ಈಶಾನ್ಗೆ ಉತ್ತರ ತಿಳಿದಿರಲಿಲ್ಲ.
ಬೆಳಗಿನ ಜಾವ ಅವನು ಮೊಬೈಲ್ ತೆಗೆದುಕೊಂಡು ಸಾರಾಳಿಗೆ ಸಂದೇಶ ಬರೆಯಲು ಆರಂಭಿಸಿದ.“ಸಾರಾ, ನಿನ್ನೊಂದಿಗೆ ಒಂದು ಮುಖ್ಯ ವಿಷಯದ ಬಗ್ಗೆ ಮಾತನಾಡಬೇಕು.”ಅವನು ಸಂದೇಶವನ್ನು ಕಳುಹಿಸಲಿಲ್ಲ.ಅದನ್ನು ಅಳಿಸಿ, ಮೊಬೈಲ್ ಕೆಳಗಿಟ್ಟ.ಮೊದಲ ಬಾರಿಗೆ ಮ್ಯೂಸ್ ಅವನಿಗೆ ಒಂದು ಅಧ್ಯಾಯವನ್ನು ನೀಡಿರಲಿಲ್ಲ.ಅದು ಅವನ ಮನಸ್ಸಿನಲ್ಲಿ ಒಂದು ಅನುಮಾನವನ್ನು ಬಿತ್ತಿತ್ತು.ಆ ಅನುಮಾನ ನಿಜವಾಗಿದ್ದರೂ, ಸುಳ್ಳಾಗಿದ್ದರೂ, ಅದರ ಪರಿಣಾಮ ಮಾತ್ರ ನಿಜವಾಗಿರಬಹುದಾಗಿತ್ತು.
ಮರುದಿನ ಬೆಳಿಗ್ಗೆ ಈಶಾನ್ ಕಂಪ್ಯೂಟರ್ ಆನ್ ಮಾಡಿದಾಗ, ಹಿಂದಿನ ರಾತ್ರಿ ಮುಚ್ಚಿದ್ದ ಕಡತ ಮತ್ತೆ ತೆರೆದಿತ್ತು. “ಸಾರಾ-ಅಪೂರ್ಣ ಅಧ್ಯಾಯ.”ಅದನ್ನು ಮುಚ್ಚಲು ಪ್ರಯತ್ನಿಸಿದ.ಪರದೆಯ ಮೇಲೆ ಹೊಸ ಸಂದೇಶ ಕಾಣಿಸಿಕೊಂಡಿತು.“ನಿಮ್ಮ ಕಥೆಯನ್ನು ಮುಂದುವರಿಸಲು, ನೀವು ಇನ್ನೂ ಕೇಳದ ಪ್ರಶ್ನೆಗೆ ಉತ್ತರ ಬೇಕಾಗಿದೆ.” ಎಂದಿತು. ಈಶಾನ್ ಪರದೆಯನ್ನು ದಿಟ್ಟಿಸಿದ.
“ಯಾವ ಪ್ರಶ್ನೆ?” ಎಂದ.
“ಸಾರಾ ನಿಮ್ಮನ್ನು ಭೇಟಿಯಾಗಲು ಬಯಸುತ್ತಿರುವ ನಿಜವಾದ ಕಾರಣವೇನು?”ಮ್ಯೂಸ್ ಕೇಳಿತು.
ಅವನು ಕುರ್ಚಿಯಲ್ಲಿ ಹಿಂದಕ್ಕೆ ಸರಿದ.ಸಾರಾಳಿಂದ ಹೊಸ ಸಂದೇಶ ಬಂದಿತ್ತು.“ಈಶಾನ್, ಇಂದು ಸಂಜೆ ನಿನ್ನನ್ನು ಭೇಟಿಯಾಗಬೇಕು. ಒಂದು ಮುಖ್ಯ ವಿಷಯ ಹೇಳಬೇಕಿದೆ. ದಯವಿಟ್ಟು ಈ ಬಾರಿ ನನ್ನ ಮಾತನ್ನು ಸಂಪೂರ್ಣವಾಗಿ ಕೇಳು.”
ಈಶಾನ್ ಸಂದೇಶವನ್ನು ಮತ್ತೆ ಓದಿದ. ಮ್ಯೂಸ್ನ ಪರದೆಯ ಮೇಲಿದ್ದ ಪ್ರಶ್ನೆಯೂ ಅವನ ಕಣ್ಣಿಗೆ ಬಿತ್ತು.ಒಂದೇ ಸಮಯದಲ್ಲಿ ಎರಡೂ ಸಂದೇಶಗಳು ಬಂದಿದ್ದವು.ಅದು ಕೇವಲ ಕಾಕತಾಳೀಯವಾಗಿರಬಹುದು.ಆದರೆ ಈಗ ಪ್ರತಿಯೊಂದು ಕಾಕತಾಳೀಯವೂ ಅವನಿಗೆ ಒಂದು ಗುಪ್ತ ಉದ್ದೇಶದಂತೆ ಕಾಣತೊಡಗಿತ್ತು.
ಅವನು ಸಾರಾಳಿಗೆ ಉತ್ತರಿಸಿದ.“ಸರಿ. ಸಂಜೆ ಭೇಟಿಯಾಗೋಣ.”
ನಂತರ ಮ್ಯೂಸ್ನ ಅಧಿವೇಶನವನ್ನು ಮುಚ್ಚಿದ. ಈ ಬಾರಿ ಅವನು ಪರದೆಯನ್ನು ಮತ್ತೆ ತೆರೆಯಲಿಲ್ಲ. ಆದರೂ ಅವನ ಮನಸ್ಸಿನಲ್ಲಿ ಮ್ಯೂಸ್ ಬಿತ್ತಿದ್ದ ಅನುಮಾನ ಉಳಿದಿತ್ತು. ಸಾರಾ ಏನು ಹೇಳಲು ಹೊರಟಿದ್ದಳು?ಅವಳ ರಹಸ್ಯ ನಿಜವಾಗಿಯೂ ಇದೆಯೇ? ಮತ್ತು ಮ್ಯೂಸ್ಗೆ ಅವಳ ಬಗ್ಗೆ ಇಷ್ಟು ಆಸಕ್ತಿ ಏಕೆ? ಆ ಸಂಜೆನಡೆಯಲಿದ್ದ ಭೇಟಿಯು ಅವನಬದುಕಿನ ಅತ್ಯಂತಮಹತ್ವದಸ ಭಾಷಣೆಗಳಲ್ಲಿ ಒಂದಾಗಲಿತ್ತು ಎಂಬುದು ಈಶಾನ್ಗೆ ತಿಳಿದಿರಲಿಲ್ಲ. ಏಕೆಂದರೆ ಸಾರಾ ಅವನಿಗೆ ಹೇಳಲಿದ್ದ ಸಂಗತಿ ಮ್ಯೂಸ್ನ ರಹಸ್ಯವನ್ನು ಬಯಲುಮಾಡುವ ಮೊದಲ ಸುಳಿವಾಗಿತ್ತು.
ಆದರೆ ಅದನ್ನು ಕೇಳುವ ಮೊದಲು, ಈಶಾನ್ ತನ್ನ ಮನಸ್ಸಿನಲ್ಲಿ ಈಗಾಗಲೇ ಬೆಳೆದಿದ್ದ ಅನುಮಾನವನ್ನು ನಿಯಂತ್ರಿಸಬೇಕಾಗಿತ್ತು. ಯಾಕೆ೦ದರೆ ಕೆಲವೊಮ್ಮೆ ಸತ್ಯವನ್ನು ತಿಳಿದುಕೊಳ್ಳುವ ಆತುರವೇ ಮನುಷ್ಯನನ್ನು ಸುಳ್ಳಿನ ಬಲೆಗೆ ಎಳೆಯುತ್ತದೆ.






0 Comments