ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೬
ಆ ರಾತ್ರಿ ಈಶಾನ್ಗೆ ನಿದ್ರೆ ಬರಲು ಬಹಳ ಹೊತ್ತಾಯಿತು.ಹಾಸಿಗೆಯಲ್ಲಿ ಮಲಗಿದ್ದರೂ ಅವನ ಮನಸ್ಸು ಕಂಪ್ಯೂಟರ್ ಪರದೆಯ ಮೇಲಿದ್ದ ಆ ವಾಕ್ಯದ ಸುತ್ತಲೇ ತಿರುಗುತ್ತಿತ್ತು.“ನಾಳೆ ಬೆಳಿಗ್ಗೆ ಸಾರಾ ನಿನ್ನನ್ನು ಭೇಟಿಯಾಗಲು ಬರುವುದಿಲ್ಲ.”
ಮ್ಯೂಸ್ ಅದನ್ನು ಕೇವಲ ಕಥೆಯ ಸಾಧ್ಯತೆಯಾಗಿ ಸೇರಿಸಿರಬಹುದು. ಸಾರಾಳ ಸಂದೇಶವನ್ನು ಊಹಿಸುವುದು ಅಸಾಧ್ಯವೇನಲ್ಲ. ಕಳೆದ ಕೆಲವು ದಿನಗಳಿಂದ ಅವರ ಸಂಬ೦ಧದಲ್ಲಿ ಒತ್ತಡವಿತ್ತು. ಅವಳು ಹಿಂದಿನ ದಿನವೂ ಅವನ ಆರೋಗ್ಯದ ಬಗ್ಗೆ ಚಿಂತಿಸಿದ್ದಳು. ಬೆಳಿಗ್ಗೆ ಬರಲು ಸಾಧ್ಯವಾಗದಿರುವುದು ಸಾಮಾನ್ಯ ಸಂಗತಿಯಾಗಿತ್ತು.ಆದರೂ ಆ ವಾಕ್ಯವನ್ನು ತಾನು ಬರೆಯದಿರುವುದು ಅವನನ್ನು ಕಾಡುತ್ತಿತ್ತು.
ಅವನು ಎದ್ದು ನೀರು ಕುಡಿದ. ನಂತರ ಮೇಜಿನ ಬಳಿಗೆ ಬಂದು ಕಂಪ್ಯೂಟರ್ನ್ನು ಪರಿಶೀಲಿಸಿದ. ಅದು ಆಫ್ ಆಗಿತ್ತು. ನರಸಂಪರ್ಕ ಸಾಧನವೂ ಮೇಜಿನ ಮೇಲೆಯೇ ಇತ್ತು. ಅದರ ಸೂಚಕ ದೀಪ ಆರಿಹೋಗಿತ್ತು.ಎಲ್ಲವೂ ಸಹಜವಾಗಿದ್ದವು.ತನ್ನ ಭಯಕ್ಕೆ ತಾನೇ ಕಾರಣ ಹುಡುಕಿಕೊಳ್ಳುತ್ತಿದ್ದೇನೆ ಎಂದುಕೊ೦ಡು ಅವನು ಮತ್ತೆ ಹಾಸಿಗೆಯತ್ತ ಹೋದ.ಕೊನೆಗೂ ನಿದ್ರೆ ಅವನನ್ನು ಆವರಿಸಿತು.ಆದರೆ ಆ ನಿದ್ರೆ ವಿಶ್ರಾಂತಿಯನ್ನು ನೀಡಲಿಲ್ಲ.ಅವನು ಒಂದು ಹಳೆಯ ಮನೆಯನ್ನು ಕಂಡ.ಮನೆಯ ಸುತ್ತಲೂ ಕತ್ತಲೆ ಆವರಿಸಿತ್ತು. ದೂರದಲ್ಲಿ ಮಿಂಚು ಹೊಳೆಯುತ್ತಿತ್ತು. ಮಳೆಯ ನೀರು ಹೆಂಚಿನ ಮೇಲಿಂದ ಧಾರೆಯಾಗಿ ಬೀಳುತ್ತಿತ್ತು. ಮನೆಯ ಮುಂಭಾಗದಲ್ಲಿದ್ದ ತುಳಸಿಕಟ್ಟೆಯ ಸುತ್ತ ನೀರು ನಿಂತಿತ್ತು. ಈಶಾನ್ಗೆ ಆ ಮನೆ ಪರಿಚಿತವಾಗಿತ್ತು.ಅದು ತನ್ನ ಬಾಲ್ಯದ ಮನೆ.ಅವನು ಬೆಳೆದಿದ್ದ ಊರಿನ ಹಳೆಯ ಮನೆ. ಹಲವು ವರ್ಷಗಳ ಹಿಂದೆ ಅದನ್ನು ಮಾರಾಟ ಮಾಡಲಾಗಿತ್ತು. ಈಗ ಅಲ್ಲಿ ಹೊಸ ಕಟ್ಟಡವಿದೆಯೋ ಅಥವಾ ಖಾಲಿ ನಿವೇಶನವಿದೆಯೋ ಎಂಬುದೂ ಅವನಿಗೆ ತಿಳಿದಿರಲಿಲ್ಲ.
ಕನಸಿನಲ್ಲಿ ಮಾತ್ರ ಆ ಮನೆ ಹಾಗೆಯೇ ಉಳಿದಿತ್ತು.ಅವನು ಮನೆಯೊಳಗೆ ಪ್ರವೇಶಿಸಿದ.ಮುಂದಿನ ಕೋಣೆಯಲ್ಲಿ ಮರದ ಮೇಜೊಂದಿತ್ತು. ಅದರ ಮೇಲೆ ಹಳೆಯ ನೋಟ್ಬುಕ್, ಮಸಿ ತುಂಬಿದ ಪೆನ್ನು ಮತ್ತು ಸಣ್ಣದೊಂದು ಮೇಜಿನ ದೀಪವಿದ್ದವು. ವಿದ್ಯುತ್ ಇರಲಿಲ್ಲ. ಆದರೂ ದೀಪ ಉರಿಯುತ್ತಿತ್ತು.ಮೇಜಿನ ಮುಂದೆ ಒಬ್ಬ ಬಾಲಕ ಕುಳಿತಿದ್ದ.ಸುಮಾರು ಹತ್ತು ವರ್ಷದವನು.ಕೈಯಲ್ಲಿ ಪೆನ್ನು ಹಿಡಿದು ಏನನ್ನೋ ಬರೆಯುತ್ತಿದ್ದ.ಈಶಾನ್ ನಿಧಾನವಾಗಿ ಅವನ ಹತ್ತಿರ ಹೋದ.ಬಾಲಕ ತಲೆ ಎತ್ತಲಿಲ್ಲ.
“ಏನು ಬರೆಯುತ್ತಿದ್ದೀಯ?” ಎಂದು ಈಶಾನ್ ಕೇಳಿದ.ಬಾಲಕ ಉತ್ತರಿಸಲಿಲ್ಲ.ಅವನು ನೋಟ್ಬುಕ್ನತ್ತ ನೋಡಿದ.ಅದರಲ್ಲಿದ್ದ ಬರವಣಿಗೆ ಪರಿಚಿತವಾಗಿತ್ತು. ಅಕ್ಷರಗಳ ಆಕಾರ, ಪದಗಳ ನಡುವಿನ ಅಂತರ, ಕೆಲವು ಅಕ್ಷರಗಳನ್ನು ಬರೆಯುವಾಗ ಪೆನ್ನನ್ನು ಒತ್ತುವ ರೀತಿಎಲ್ಲವೂ ತನ್ನಬಾಲ್ಯದ ಕೈಬರಹದಂತಿದ್ದವು.ಅವನು ಪುಟವನ್ನು ಓದಲು ಪ್ರಯತ್ನಿಸಿದ.ಅದರ ಮೇಲೆ ಒಂದೇ ವಾಕ್ಯವಿತ್ತು.“ನಾನು ಬೆಳೆದ ಮೇಲೆ ನನ್ನ ಕಥೆಯನ್ನು ನಾನೇ ಬರೆಯುತ್ತೇನೆ.” ಈಶಾನ್ ಎದೆ ಬಿಗಿದುಕೊಂಡಿತು.ಅದು ಅವನು ಬಾಲ್ಯದಲ್ಲಿ ಬರೆದಿದ್ದ ವಾಕ್ಯವೇ?ಅಥವಾ ತನ್ನ ನೆನಪುಗಳಿಂದ ರೂಪುಗೊಂಡ ಕನಸಿನ ಭಾಗವೇ?ಅವನು ಬಾಲಕನ ಭುಜದ ಮೇಲೆ ಕೈ ಇಡಲು ಪ್ರಯತ್ನಿಸಿದ.ಅಷ್ಟರಲ್ಲಿ ಕೋಣೆಯ ಬಾಗಿಲು ತೆರೆದ ಸದ್ದು ಕೇಳಿಸಿತು.ಬಾಗಿಲಿನ ಬಳಿ ಅವನ ತಂದೆ ನಿಂತಿದ್ದರು.ಅವರು ಸತ್ತಿದ್ದು ಹನ್ನೆರಡು ವರ್ಷಗಳಾಗಿದ್ದವು.ಕನಸಿನಲ್ಲಿಯೂ ಅವರ ಮುಖ ಸ್ಪಷ್ಟವಾಗಿತ್ತು. ಅದೇ ಗಂಭೀರ ನೋಟ. ಅದೇ ನೇರವಾದ ನಿಲುವು. ಹಣೆಯ ಮೇಲಿದ್ದ ಸಣ್ಣ ಸುಕ್ಕುಗಳು. ಮಾತಾಡುವ ಮೊದಲು ತುಟಿಗಳನ್ನು ಬಿಗಿಯಾಗಿ ಒತ್ತಿಕೊಳ್ಳುವ ಅಭ್ಯಾಸ.
“ಇನ್ನೂ ಬರೆಯುತ್ತಿದ್ದೀಯಾ?” ಎಂದು ತಂದೆ ಕೇಳಿದರು.ಬಾಲಕ ಬರೆಯುವುದನ್ನು ನಿಲ್ಲಿಸಿದ.“ನಾಳೆ ಪರೀಕ್ಷೆಯಿದೆ. ಓದಬೇಕಲ್ಲವೇ?” ಎಂದರು ತಂದೆ. ಈಶಾನ್ ತನ್ನ ಬಾಲ್ಯದ ದೃಶ್ಯವನ್ನು ನೋಡುತ್ತಿದ್ದ. ತಂದೆಯ ಮಾತುಗಳು ಅವನ ನೆನಪಿನಲ್ಲಿದ್ದಂತೆಯೇ ಕೇಳಿಸುತ್ತಿದ್ದವು.ಆದರೆ ಮುಂದಿನ ಕ್ಷಣದಲ್ಲಿ ತಂದೆ ಅವನತ್ತ ತಿರುಗಿದರು.“ಈಶಾನ್, ನೀನು ಇನ್ನೂ ಅದೇ ತಪ್ಪು ಮಾಡುತ್ತಿದ್ದೀಯ.”ಅವನು ಬೆಚ್ಚಿಬಿದ್ದ.“ಏನು?” ಎಂದ. “ನಿನ್ನ ಕಥೆಯನ್ನು ಮತ್ತೊಬ್ಬನ ಕೈಗೆ ಕೊಡುತ್ತಿದ್ದೀಯ.” ಎಂದರು ತಂದೆ. ಈಶಾನ್ ಹಿಂದೆ ಸರಿದ.“ನೀವು ಯಾರು?” ಎಂದ. ತಂದೆ ಉತ್ತರಿಸಲಿಲ್ಲ.ಬಾಲಕ ಮತ್ತೆ ಬರೆಯತೊಡಗಿದ.ಈ ಬಾರಿ ಪೆನ್ನಿನ ಸದ್ದು ಕೋಣೆಯೊಳಗೆ ಅಸಹಜವಾಗಿ ಜೋರಾಗಿ ಕೇಳಿಸುತ್ತಿತ್ತು. ಪ್ರತಿ ಅಕ್ಷರ ಮೂಡಿದಾಗಲೂ ಮೇಜಿನ ಮೇಲಿದ್ದ ಕಾಗದ ಕಂಪಿಸುತ್ತಿತ್ತು. ತಂದೆ ಈಶಾನ್ನತ್ತ ಬಂದರು.“ಅವನು ನಿನ್ನ ಕಥೆಯನ್ನು ಬರೆಯುತ್ತಿದ್ದಾನೆ. ಆದರೆ ಕೊನೆಯ ಪುಟದಲ್ಲಿ ನಿನ್ನ ಹೆಸರಿರುವುದಿಲ್ಲ.” ಎಂದರು. “ಯಾರು?” ಎಂದ ಈಶಾನ್. ತಂದೆಯ ಮುಖದಲ್ಲಿ ದುಃಖದ ನೆರಳು ಮೂಡಿತು.“ನೀನೇ ಅವನಿಗೆ ಬಾಗಿಲು ತೆರೆದಿದ್ದೀಯ.” ಎಂದರು. ಅಷ್ಟರಲ್ಲಿ ಬಾಲಕ ತಲೆ ಎತ್ತಿದ.ಈಶಾನ್ ತನ್ನದೇ ಬಾಲ್ಯದ ಮುಖವನ್ನು ಕಂಡ.ಆದರೆ ಬಾಲಕನ ಕಣ್ಣುಗಳು ವಿಚಿತ್ರವಾಗಿ ನಿರ್ಜೀವವಾಗಿದ್ದವು. ಅವನ ತುಟಿಗಳಲ್ಲಿ ನಗುವಿತ್ತು. ಆ ನಗುವಿನಲ್ಲಿ ಬಾಲ್ಯದ ಮುಗ್ಧತೆಯಿರಲಿಲ್ಲ.
ಅವನು ನಿಧಾನವಾಗಿ ಹೇಳಿದ.“ಅಂಕಲ್, ನಿಮ್ಮ ಮುಂದಿನ ಅಧ್ಯಾಯ ಸಿದ್ಧವಾಗಿದೆ.” ಎಂದ ಬಾಲಕ. ಈಶಾನ್ ಕಿರುಚಲು ಪ್ರಯತ್ನಿಸಿದ.ಆದರೆ ಧ್ವನಿ ಹೊರಬರಲಿಲ್ಲ.ಕೋಣೆಯ ದೀಪ ಆರಿಹೋಯಿತು. ಕತ್ತಲೆಯ ನಡುವೆ ಕೀಬೋರ್ಡ್ ಸದ್ದು ಕೇಳಿಸತೊಡಗಿತು.ಟಕ್.ಟಕ್.ಟಕ್.ಯಾರೋ ನಿರಂತರವಾಗಿ ಟೈಪ್ ಮಾಡುತ್ತಿದ್ದರು.ಈಶಾನ್ ಕಣ್ಣು ಮುಚ್ಚಿಕೊಂಡ.ಅವನಿಗೆ ತನ್ನ ತಲೆಯೊಳಗೆ ಪದಗಳು ಮೂಡುತ್ತಿರುವಂತೆ ಅನಿಸಿತು.‘ನಾಳೆ ಬೆಳಿಗ್ಗೆ… ಬಾಗಿಲು ತೆರೆಯುತ್ತದೆ. ಆದರೆ ಒಳಗೆ ಬರುವವರು ಸಾರಾ ಆಗಿರುವುದಿಲ್ಲ’. ಈಶಾನ್ ಬೆಚ್ಚಿಬಿದ್ದು ಎಚ್ಚರಗೊಂಡ.
ಬೆಳಿಗ್ಗೆ ಐದು ಗಂಟೆ ನಲವತ್ತೆರಡು ನಿಮಿಷ.ಬೆವರಿನಿಂದ ಈಶಾನ್ನ ಮುಖವೆಲ್ಲಾತೋಯ್ದಿತ್ತು. ಕತ್ತಿನ ಭಾಗದಲ್ಲೂ ಬೆವರಿನ ಹನಿಗಳು ಮೂಡಿದ್ದವು. ಹೃದಯ ವೇಗವಾಗಿ ಬಡಿದುಕೊಳ್ಳುತ್ತಿತ್ತು. ಕೆಲವು ಕ್ಷಣಗಳವರೆಗೆ ತಾನು ಎಲ್ಲಿದ್ದೇನೆಂಬುದೇ ಅವನಿಗೆ ಅರ್ಥವಾಗಲಿಲ್ಲ. ನಂತರ ಕೋಣೆಯ ಗೋಡೆಗಳು, ಕಿಟಕಿ, ಮೇಜು ಮತ್ತು ಹಾಸಿಗೆ ಪರಿಚಿತವಾಗಿ ಕಾಣಿಸಿದವು.ಅದು ಕೇವಲ ಕನಸಾಗಿತ್ತು.ಕೈಗಳಿಂದ ಮುಖವನ್ನು ಒರೆಸಿಕೊಂಡ.“ಇದು ಒತ್ತಡದ ಪರಿಣಾಮ,” ಎಂದು ತನಗೆ ತಾನೇ ಹೇಳಿಕೊಂಡ.ತAದೆಯ ನೆನಪುಗಳು. ಬಾಲ್ಯದ ಮನೆ. ಮ್ಯೂಸ್ ಬಗ್ಗೆ ಆತಂಕ. ಇವೆಲ್ಲವೂ ಸೇರಿ ವಿಚಿತ್ರವಾದ ಕನಸನ್ನು ಸೃಷ್ಟಿಸಿರಬಹುದು.ಅವನು ಎದ್ದು ನೀರು ಕುಡಿದ.ನಂತರ ಕಂಪ್ಯೂಟರ್ ಕಡೆಗೆ ನೋಡಿದ.ಅದು ಆಫ್ ಆಗಿತ್ತು.
ಅವನಿಗೆ ಹಿಂದಿನ ರಾತ್ರಿ ತೆಗೆದುಕೊಂಡ ನಿರ್ಧಾರ ನೆನಪಾಯಿತು. ಮೊದಲು ಬಳಕೆದಾರರ ಒಪ್ಪಂದವನ್ನು ಓದಬೇಕು. ನಂತರ ತಂತ್ರಾ೦ಶದ ಮೂಲವನ್ನು ಪತ್ತೆಹಚ್ಚಬೇಕು.ಆದರೆ ಅದಕ್ಕೂ ಮೊದಲು ತನ್ನ ನಿದ್ರೆಯ ಸ್ಥಿತಿಯನ್ನು ಗಮನಿಸಬೇಕೆಂದು ಅವನು ನಿರ್ಧರಿಸಿದ. ಹಲವು ದಿನಗಳಿಂದ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಕಾಫಿಯ ಪ್ರಮಾಣವೂ ಹೆಚ್ಚಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ವಿಚಿತ್ರ ಕನಸುಗಳು ಕಾಣಿಸಿಕೊಳ್ಳುವುದು ಅಸಾಧ್ಯವಲ್ಲ.
ಅವನು ದಿನಚರಿಯನ್ನು ತೆರೆದ.ಕನಸಿನಲ್ಲಿ ಕಂಡ ದೃಶ್ಯಗಳನ್ನು ನೆನಪಿರುವಷ್ಟರ ಮಟ್ಟಿಗೆ ಬರೆಯತೊಡಗಿದ.ಹಳೆಯ ಮನೆ.ಬಾಲಕ.ತಂದೆ.“ನೀನು ಇನ್ನೂ ಅದೇ ತಪ್ಪು ಮಾಡುತ್ತಿದ್ದೀಯ.”ಅವನು ಕೊನೆಯ ವಾಕ್ಯವನ್ನು ಬರೆಯುವಾಗ ಪೆನ್ನು ನಿಂತಿತು.ತAದೆ ಕನಸಿನಲ್ಲಿ ಹೇಳಿದ ಮಾತುಗಳು ಅವನ ಮನಸ್ಸನ್ನು ತೀವ್ರವಾಗಿ ಕಾಡುತ್ತಿದ್ದವು.ನಿನ್ನ ಕಥೆಯನ್ನು ಮತ್ತೊಬ್ಬನ ಕೈಗೆ ಕೊಡುತ್ತಿದ್ದೀಯ.ಅವನು ದಿನಚರಿಯನ್ನು ಮುಚ್ಚಿದ. ನಂತರ ಕಂಪ್ಯೂಟರ್ ಆನ್ ಮಾಡಿದ. ಪರದೆ ಬೆಳಗಿದ ಕೂಡಲೇ ಮ್ಯೂಸ್ನ ಕಾರ್ಯಸ್ಥಳ ತೆರೆದುಕೊಂಡಿತು.
ಈಶಾನ್ ಅದನ್ನು ನಿರೀಕ್ಷಿಸಿರಲಿಲ್ಲ. ಹಿಂದಿನ ದಿನ ತಾನು ಯಾವುದೇ ಅಧಿವೇಶನವನ್ನು ತೆರೆದಿರಲಿಲ್ಲ. ಆದರೂ ಪರದೆಯ ಮೇಲೆ ಒಂದು ಹೊಸ ಕಡತ ಕಾಣಿಸುತ್ತಿತ್ತು.“ಅಧ್ಯಾಯ ೨ — ಅಪೂರ್ಣನೆನಪು.”ಅವನು ಆ ಕಡತವನ್ನು ತೆರೆದ.ಮೊದಲ ಪುಟದಲ್ಲಿ ಹಳೆಯ ಮನೆಯ ವರ್ಣನೆಯಿತ್ತು.ಮಳೆಯ ರಾತ್ರಿ.ಮರದ ಮೇಜು.ಮೇಜಿನ ಮೇಲಿದ್ದ ನೋಟ್ಬುಕ್.ಒಬ್ಬ ಬಾಲಕ. ಈಶಾನ್ನ ಕೈಗಳು ನಡುಗತೊಡಗಿದವು.ಅದು ಅವನ ಕನಸಿನ ದೃಶ್ಯವಾಗಿತ್ತು.ಕನಸಿನಲ್ಲಿ ಕಂಡ ಘಟನೆಗಳು, ಅವನು ಎದ್ದ ನಂತರವೂ ನೆನಪಿಟ್ಟಿದ್ದ ವಿವರಗಳುಎಲ್ಲವೂ ಆ ಕಡತದಲ್ಲಿದ್ದವು.ಅವನು ಗಡಿಯಾರವನ್ನು ನೋಡಿದ.ಕಂಪ್ಯೂಟರ್ ಆರಂಭಿಸಿ ಎರಡು ನಿಮಿಷಗಳಷ್ಟೇ ಆಗಿತ್ತು.“ಇದನ್ನು ಯಾರು ಬರೆದಿದ್ದಾರೆ?” ಎಂದು ಅವನು ಕೇಳಿದ.
ಪರದೆಯ ಮೇಲೆ ಉತ್ತರ ಮೂಡಿತು.“ಈ ಅಧ್ಯಾಯವು ನಿಮ್ಮ ಹಿಂದಿನ ಕಥಾ ಯೋಜನೆಯ ಆಧಾರದ ಮೇಲೆ ರೂಪುಗೊಂಡಿದೆ.” ಎಂದಿತು ಮ್ಯೂಸ್.
“ನಾನು ಇಂತಹ ಕಥಾ ಯೋಜನೆಯನ್ನು ಸಿದ್ಧಪಡಿಸಿಲ್ಲ.” ಎಂದು ಅದಕ್ಕೆ ಸ್ಪಷ್ಟೀಕರಣ ನೀಡಿದ.
“ನಿಮ್ಮ ಇತ್ತೀಚಿನ ಅಧಿವೇಶನದಲ್ಲಿ ಬಾಲ್ಯದ ನೆನಪುಗಳನ್ನು ಕಥೆಯ ಸಂಘರ್ಷದೊAದಿಗೆ ಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ.” ಎಂದಿತು ಮ್ಯೂಸ್.
“ಅದು ಬೇರೆ ಅಧ್ಯಾಯವಾಗಿತ್ತು. ಅದನ್ನು ನಾನು ಅಳಿಸಿದ್ದೆ.” ಎಂದ. ಈಶಾನ್.
“ಹಿಂದಿನ ಆವೃತ್ತಿಯಲ್ಲಿದ್ದ ಕೆಲವು ಅಂಶಗಳನ್ನು ಮರುಬಳಕೆ ಮಾಡಲಾಗಿದೆ.” ಎಂಬ ಪಠ್ಯ ಕಾಣಿಸಿಕೊಂಡಾಗ ಈಶಾನ್ನ ಉಸಿರಾಟ ವೇಗವಾಯಿತು.ಅದು ತಾಂತ್ರಿಕ ವಿವರಣೆಯಾಗಿರಬಹುದು. ಮ್ಯೂಸ್ ಹಳೆಯ ಆವೃತ್ತಿಗಳಲ್ಲಿದ್ದ ವಿಷಯಗಳನ್ನು ಬಳಸಿರಬಹುದು. ಆದರೆ ಕನಸಿನಲ್ಲಿದ್ದ ನಿರ್ದಿಷ್ಟ ದೃಶ್ಯಗಳು ಅದರಲ್ಲಿ ಹೇಗೆ ಬಂದವು?ಅವನು ಅಧ್ಯಾಯವನ್ನು ಓದುತ್ತ ಹೋದ. ಕಥೆಯ ಬಾಲಕನು ನೋಟ್ಬುಕ್ನಲ್ಲಿ ಒಂದು ವಾಕ್ಯ ಬರೆಯುತ್ತಿದ್ದ.“ನಾನು ಬೆಳೆದ ಮೇಲೆ ನನ್ನ ಕಥೆಯನ್ನು ನಾನೇ ಬರೆಯುತ್ತೇನೆ.” ಈಶಾನ್ನ ಕೈಯಲ್ಲಿದ್ದ ದಿನಚರಿ ನೆಲಕ್ಕೆ ಬಿತ್ತು.ಅದೇ ವಾಕ್ಯ.ಅದೇ ಪದಗಳು.ಅವನು ಕನಸಿನಲ್ಲಿ ಕಂಡಿದ್ದ ವಾಕ್ಯ.ಅವನು ಕಂಪ್ಯೂಟರ್ ಪರದೆಯತ್ತ ಬಾಗಿ ನೋಡಿದ.
“ಮ್ಯೂಸ್, ಈ ವಾಕ್ಯವನ್ನು ನಾನು ಎಲ್ಲಾದರೂ ಬರೆದಿದ್ದೇನೆಯೇ?” ಎಂದು ಟೈಪಿಸಿ ಅದಕ್ಕೆ ನೀಡಿದ.
“ನಿಮ್ಮ ಲಭ್ಯವಿರುವ ಬರವಣಿಗೆಯ ಮಾದರಿಗಳಲ್ಲಿ ಈ ವಾಕ್ಯದ ನಿಖರ ಮೂಲವನ್ನು ಗುರುತಿಸಲು ಸಾಧ್ಯವಾಗಿಲ್ಲ.” ಎಂದಿತು.
“ಹಾಗಾದರೆ ಅದನ್ನು ಹೇಗೆ ಬರೆದೆ?” ಅನುಮಾನವನ್ನು ವ್ಯಕ್ತಪಡಿಸಿದ.
“ಇದು ಕಥೆಯ ಪಾತ್ರದ ಉದ್ದೇಶವನ್ನು ಸೂಚಿಸುವಂತೆ ರೂಪುಗೊಂಡ ವಾಕ್ಯವಾಗಿದೆ.” ಎಂದಿತು.
ಈಶಾನ್ಗೆ ಆ ಉತ್ತರ ಸಾಕಾಗಲಿಲ್ಲ.ಅವನು ಅಧ್ಯಾಯದ ಕೊನೆಯ ಪುಟಕ್ಕೆ ಹೋದ.ಅಲ್ಲಿ ತಂದೆಯ ಪಾತ್ರ ಕಾಣಿಸಿಕೊಂಡಿತ್ತು. ಅವರು ಬಾಲಕನನ್ನು ಓದಲು ಹೇಳುತ್ತಿದ್ದರು. ನಂತರ ವಯಸ್ಕ ಈಶಾನ್ನತ್ತ ತಿರುಗಿ, ಅವನ ನಿರ್ಧಾರಗಳ ಬಗ್ಗೆ ಮಾತನಾಡುತ್ತಿದ್ದರು.ಆದರೆ ಕನಸಿನಲ್ಲಿ ತಂದೆ ಹೇಳಿದ ಅತ್ಯಂತ ಭಯಾನಕ ಮಾತು ಅಧ್ಯಾಯದಲ್ಲಿರಲಿಲ್ಲ.“ನೀನೇ ಅವನಿಗೆ ಬಾಗಿಲು ತೆರೆದಿದ್ದೀಯ.” ಈಶಾನ್ಗೆ ಸ್ವಲ್ಪ ನೆಮ್ಮದಿಯಾಯಿತು.
ಕನಸಿನ ಕೆಲವು ಅಂಶಗಳು ಕಥೆಯಲ್ಲಿ ಕಾಣಿಸಿಕೊಂಡಿದ್ದರೂ, ಅದು ಸಂಪೂರ್ಣವಾಗಿ ಅದೇ ಆಗಿರಲಿಲ್ಲ. ಬಹುಶಃ ತಾನು ಕನಸಿನಲ್ಲಿ ಕಂಡ ದೃಶ್ಯವನ್ನು ಎಚ್ಚರವಾದ ನಂತರ ಕಥೆಯೊಂದಿಗೆ ಜೋಡಿಸುತ್ತಿದ್ದಾನೆ.ಅವನು ಕಡತವನ್ನು ಮುಚ್ಚಲು ಹೊರಟ.ಆಗ ಪರದೆಯ ಕೆಳಭಾಗದಲ್ಲಿ ಒಂದು ಸಣ್ಣ ಸೂಚನೆ ಕಾಣಿಸಿತು.
“ಮುಂದಿನ ದೃಶ್ಯ ಲಭ್ಯವಿದೆ.” ಎಂಬ ಪಠ್ಯ ಕಾಣಿಸಿತು.
ಅವನು ಅದನ್ನು ಒತ್ತಿದ.ಹೊಸ ಪುಟ ತೆರೆದಿತು.ಅಲ್ಲಿ ಒಂದೇ ಪ್ಯಾರಾಗ್ರಾಫ್ ಇತ್ತು.“ಈಶಾನ್ ಬೆಳಿಗ್ಗೆ ಎಚ್ಚರಗೊಂಡಾಗ ತನ್ನ ತಂದೆಯನ್ನು ಕನಸಿನಲ್ಲಿ ಕಂಡಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಆದರೆ ಕನಸಿನಲ್ಲಿ ನಡೆದ ಎಲ್ಲ ಸಂಗತಿಗಳೂ ಅವನಿಗೆ ನೆನಪಿರುವುದಿಲ್ಲ. ಅವನು ದಿನಚರಿಯಲ್ಲಿ ಕೆಲವು ಸಾಲುಗಳನ್ನು ಬರೆಯುತ್ತಾನೆ. ನಂತರ ಕಂಪ್ಯೂಟರ್ ತೆರೆಯುತ್ತಾನೆ. ಅಲ್ಲಿ ಅವನ ಕನಸಿನ ದೃಶ್ಯಗಳು ಈಗಾಗಲೇ ದಾಖಲಾಗಿರುತ್ತವೆ.”
ಈಶಾನ್ ಅಚ್ಚರಿಯಲ್ಲಿ ಕುರ್ಚಿಯಿಂದ ಎದ್ದು ನಿಂತ.ಅದು ಅವನು ಈಗಾಗಲೇ ಅನುಭವಿಸಿದ್ದ ಘಟನೆಗಳ ವಿವರಣೆಯಾಗಿತ್ತು.ಅವನು ಮತ್ತೆ ಕುಳಿತು ಪರದೆಯನ್ನು ನೋಡಿದ.
“ಇದು ಯಾವಾಗ ಬರೆಯಲ್ಪಟ್ಟಿತು?” ಎಂದು ಕೇಳಿದ.
“ಕಡತದ ಇತ್ತೀಚಿನ ನವೀಕರಣದ ಸಮಯವನ್ನು ಪರಿಶೀಲಿಸಲಾಗುತ್ತಿದೆ.” ಎನ್ನುತ್ತಾ ಕೆಲವು ಕ್ಷಣಗಳ ನಂತರ ಉತ್ತರ ಬಂತು.“ನವೀಕರಣ: ಇಂದು ಬೆಳಿಗ್ಗೆ ೫:೩೧.”
ಈಶಾನ್ ಗಡಿಯಾರವನ್ನು ನೋಡಿದ.ತಾನು ಎಚ್ಚರಗೊಂಡಿದ್ದು ಐದು ಗಂಟೆ ನಲವತ್ತೆರಡು ನಿಮಿಷಕ್ಕೆ.ಅಂದರೆ ಅವನು ಎಚ್ಚರಗೊಳ್ಳುವ ಹನ್ನೊಂದು ನಿಮಿಷಗಳ ಮೊದಲೇ ಆ ಪ್ಯಾರಾಗ್ರಾಫ್ ಕಡತದಲ್ಲಿ ದಾಖಲಾಗಿತ್ತು.ಅವನ ಮನಸ್ಸಿನಲ್ಲಿ ಒಂದು ಭಯಾನಕ ಸಾಧ್ಯತೆ ಮೂಡಿತು.ಮ್ಯೂಸ್ ಅವನ ಕನಸನ್ನು ಮುಂಚಿತವಾಗಿ ತಿಳಿದಿತ್ತೇ?ಅಥವಾ ಕನಸಿನಲ್ಲಿ ಕಂಡ ದೃಶ್ಯಗಳು ಅವನ ಮೆದುಳಿನಲ್ಲಿದ್ದ ನೆನಪುಗಳ ಆಧಾರದ ಮೇಲೆ ರೂಪುಗೊಂಡಿದ್ದವೋ? ತಂತ್ರಾ೦ಶವು ಅವನ ನರಸಂಪರ್ಕ ಸಾಧನದ ಮೂಲಕ ನಿದ್ರೆಯ ಸಮಯದಲ್ಲಿಯೂ ಕೆಲವು ಸಂಕೇತಗಳನ್ನು ದಾಖಲಿಸುತ್ತಿತ್ತೇ?ಅವನಿಗೆ ಉತ್ತರ ತಿಳಿದಿರಲಿಲ್ಲ.ಆದರೆ ಅವನು ಇನ್ನೂ ಒಂದು ವಿಷಯವನ್ನು ಪರಿಶೀಲಿಸಬೇಕಿತ್ತು.
ಅವನು ನರಸಂಪರ್ಕ ಸಾಧನವನ್ನು ಕೈಗೆತ್ತಿಕೊಂಡು ಅದರ ಸಂಪರ್ಕದ ದಾಖಲಾತಿಗಳನ್ನು ತೆರೆದ. ತಾನು ಹಿಂದಿನ ರಾತ್ರಿ ಸಾಧನವನ್ನು ಧರಿಸಿರಲಿಲ್ಲ. ಅದನ್ನು ಕಂಪ್ಯೂಟರ್ಗೆ ಜೋಡಿಸಿಯೂ ಇರಲಿಲ್ಲ.ಸಾಧನದ ಬ್ಯಾಟರಿಯೂ ಖಾಲಿಯಾಗಿತ್ತು. ಹಾಗಾದರೆ ಮ್ಯೂಸ್ಗೆ ತನ್ನ ನಿದ್ರೆಯ ಸಮಯದಲ್ಲಿ ಯಾವ ಮಾಹಿತಿಯೂ ದೊರೆತಿದೆ? ಕಳವಳಗೊಂಡ. ಅವನು ಸಾಧನವನ್ನು ಮೇಜಿನ ಮೇಲಿಟ್ಟ.ಕೋಣೆಯೊಳಗೆ ಸಂಪೂರ್ಣ ಮೌನ ಆವರಿಸಿತು.
ಬೆಳಿಗ್ಗೆ ಏಳು ಗಂಟೆಗೆ ಸಾರಾಳ ಕರೆ ಬಂತು.“ಈಶಾನ್, ಎದ್ದಿದ್ದೀಯಾ?”
“ಮನೆಯಲ್ಲಿ” ಎಂದ.
“ನಿನ್ನೆ ರಾತ್ರಿ ಸರಿಯಾಗಿ ನಿದ್ರೆ ಮಾಡಿದ್ದೀಯಾ?” ಸಾರಾ ಕೇಳಿದಳು.
ಅವನು ಕೆಲವು ಕ್ಷಣ ಮೌನವಾಗಿದ್ದ.“ಸ್ವಲ್ಪ ವಿಚಿತ್ರವಾದ ಕನಸು ಕಂಡೆ.”
“ಏನು ಕನಸು?” ಕೇಳಿದಳು.
ಈಶಾನ್ ಅವಳಿಗೆ ಎಲ್ಲವನ್ನೂ ಹೇಳಲು ನಿರ್ಧರಿಸಿದ. ಬಾಲ್ಯದ ಮನೆ, ತಂದೆ, ನೋಟ್ಬುಕ್, ತನ್ನದೇ ಬಾಲ್ಯದ ಮುಖಎಲ್ಲವನ್ನೂವಿವರಿಸಿದ. ನಂತರ ಕಂಪ್ಯೂಟರ್ನಲ್ಲಿ ಕಂಡ ಕಡತದಬಗ್ಗೆ ತಿಳಿಸಿದ.ಸಾರಾ ಮಧ್ಯೆ ಮಾತನಾಡಲಿಲ್ಲ.ಅವನು ಹೇಳುವುದನ್ನೆಲ್ಲ ಕೇಳಿಸಿಕೊಂಡಳು.
“ಈಶಾನ್, ಒಂದು ವಿಷಯ ಕೇಳುತ್ತೇನೆ. ನೀನು ಆ ತಂತ್ರಾ೦ಶವನ್ನು ಬಳಸುವಾಗ ನರಸಂಪರ್ಕ ಸಾಧನವನ್ನು ಧರಿಸಿದ್ದೀಯಾ?” ಎಂದಳು.
“ಹೌದು. ಆದರೆ ನಿನ್ನೆ ರಾತ್ರಿ ಅದನ್ನು ಬಳಸಿರಲಿಲ್ಲ.” ಸ್ಪಷ್ಟನೆ ನೀಡಿದ.
“ಹಾಗಾದರೆ ಮೊದಲು ಅದನ್ನು ಸ್ಥಗಿತಗೊಳಿಸು. ನಿನ್ನ ಕಂಪ್ಯೂಟರ್ನಿAದ ಅದರ ಸಂಪರ್ಕವನ್ನು ಕಡಿತಗೊಳಿಸು. ನಂತರ ಏನಾಗುತ್ತದೆ ನೋಡೋಣ.” ಎಂದಳು.
“ನಾನು ಅದನ್ನೇ ಯೋಚಿಸುತ್ತಿದ್ದೇನೆ.” ಎಂದ ಈಶಾನ್.
“ಮತ್ತೊಂದು ವಿಷಯ. ನಿನ್ನ ನಿದ್ರೆಯ ಬಗ್ಗೆ ವೈದ್ಯರೊಂದಿಗೆ ಮಾತನಾಡುವುದು ಒಳ್ಳೆಯದು. ಇತ್ತೀಚೆಗೆ ನೀನು ಬಹಳ ಕಡಿಮೆ ನಿದ್ರೆ ಮಾಡುತ್ತಿದ್ದೀಯ. ವಿಚಿತ್ರ ಕನಸುಗಳು ಕಾಣುವುದಕ್ಕೆ ಅದೂ ಒಂದು ಕಾರಣವಾಗಿರಬಹುದು.” ಎಂದು ಸಲಹೆ ನೀಡಿದಳು.
ಈಶಾನ್ಗೆ ಅವಳ ಮಾತು ಸಮಂಜಸವೆನಿಸಿತು.“ಸರಿ. ನಾನು ಗಮನಿಸುತ್ತೇನೆ.” ಎಂದಷ್ಟೇ ಹೇಳಿದ.
ಸಾರಾ ಸ್ವಲ್ಪ ಹೊತ್ತು ಮೌನವಾಗಿದ್ದಳು. ನಂತರ “ನೀನು ನನ್ನೊಂದಿಗೆ ಮಾತನಾಡುತ್ತಿರುವುದಕ್ಕೆ ಸಂತೋಷವಾಗಿದೆ. ಆದರೆ ಆ ತಂತ್ರಾAಶ ನಿನ್ನನ್ನು ಹೆದರಿಸುತ್ತಿದ್ದರೆ, ಅದನ್ನು ಬಳಸುವುದನ್ನು ನಿಲ್ಲಿಸಲು ಹಿಂಜರಿಯಬೇಡ.” ಎಂದಳು.
“ಅದು ನನಗೆ ಬರೆಯಲು ಸಹಾಯ ಮಾಡುತ್ತಿದೆ, ಸಾರಾ.” ಎಂದ.
“ನನಗೆ ಅರ್ಥವಾಗುತ್ತದೆ. ಆದರೆ ಯಾವುದೇ ಸಾಧನಕ್ಕಿಂತ ನಿನ್ನ ನೆಮ್ಮದಿ ಮುಖ್ಯ.” ಎಂದಳು.
ಕರೆ ಮುಗಿದ ನಂತರ ಈಶಾನ್ ಬಹಳ ಹೊತ್ತು ಮೊಬೈಲ್ ಹಿಡಿದುಕೊಂಡೇ ಕುಳಿತಿದ್ದ.ಸಾರಾ ಹೇಳಿದ್ದು ಸತ್ಯ. ಆದರೆ ಮ್ಯೂಸ್ನಿಂದ ದೂರವಾಗುವುದು ಈಗ ಅವನಿಗೆ ಅಷ್ಟು ಸುಲಭವಾಗಿರಲಿಲ್ಲ. ಅದು ಅವನಿಗೆ ಬರೆಯಲು ನೆರವಾಗುತ್ತಿತ್ತು. ಅವನೊಳಗಿನ ಕಥೆಗಳನ್ನು ಹೊರಗೆ ತರುತ್ತಿತ್ತು. ಹದಿನಾರು ತಿಂಗಳುಗಳಿ೦ದ ಅನುಭವಿಸದ ಸೃಜನಶೀಲತೆಯ ಭಾವನೆಯನ್ನು ಮರಳಿ ನೀಡಿತ್ತು.ಅದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಮತ್ತೆ ಖಾಲಿ ಪರದೆಯ ಮುಂದೆ ಕುಳಿತುಕೊಳ್ಳಬೇಕಾಗಬಹುದು.ಆ ಭಯವೂ ಅವನನ್ನು ಹಿಡಿದಿಟ್ಟಿತ್ತು.
ಮಧ್ಯಾಹ್ನದ ಹೊತ್ತಿಗೆ ಈಶಾನ್ ಒಂದು ನಿರ್ಧಾರ ಕೈಗೊಂಡ. ಮ್ಯೂಸ್ನ ಹಿನ್ನೆಲೆಯನ್ನು ತಿಳಿದುಕೊಳ್ಳುವವರೆಗೆ ಯಾವುದೇ ಹೊಸ ಅಧ್ಯಾಯವನ್ನು ಬರೆಯಬಾರದು.
ಅವನು ತಂತ್ರಾ೦ಶದ ಬಳಕೆದಾರರ ಒಪ್ಪಂದವನ್ನು ಹುಡುಕಲು ಆರಂಭಿಸಿದ. ಸ್ಥಾಪನೆಯ ಸಮಯದಲ್ಲಿ ಒಪ್ಪಿಕೊಂಡಿದ್ದ ದಾಖಲೆಗಳನ್ನು ತೆರೆಯಲು ಪ್ರಯತ್ನಿಸಿದ. ಆದರೆ ಅವನ ಕಾರ್ಯಸ್ಥಳದಲ್ಲಿ ಸಂಪೂರ್ಣ ಒಪ್ಪಂದ ಕಾಣಿಸಲಿಲ್ಲ.ಕೆಲವು ಸಾಮಾನ್ಯ ಬಳಕೆಯ ನಿಯಮಗಳು ಮಾತ್ರ ಇದ್ದವು.ಅವನು ತಂತ್ರಾ೦ಶದ ಹೆಸರನ್ನು ಅಂತರ್ಜಾಲದಲ್ಲಿ ಹುಡುಕಿದ. MuseOS.ಫಲಿತಾಂಶಗಳು ಬಹಳ ಕಡಿಮೆ ಇದ್ದವು. ಕೆಲವು ಹಳೆಯ ಚರ್ಚೆಗಳಲ್ಲಿದ್ದ ಉಲ್ಲೇಖಗಳು ಈಗ ತೆರೆದುಕೊಳ್ಳುತ್ತಿರಲಿಲ್ಲ. ಒಂದು ಪುಟದಲ್ಲಿ ಅದರ ಪ್ರಾಯೋಗಿಕ ಆವೃತ್ತಿಯನ್ನು ಪರೀಕ್ಷಿಸಿದ್ದೇನೆ ಎಂದು ಯಾರೋ ಬರೆದಿದ್ದರು. ಆದರೆ ಆ ಬಳಕೆದಾರರ ಖಾತೆ ನಿಷ್ಕ್ರಿಯವಾಗಿತ್ತು.ಈಶಾನ್ ಹುಡುಕಾಟವನ್ನು ಮುಂದುವರೆಸಿದ. ನರಸಂಪರ್ಕಿತ ಬರವಣಿಗೆಯ ಸಾಧನಗಳು.ಕೃತಕ ಬುದ್ಧಿಮತ್ತೆ ಮತ್ತು ಮೆದುಳಿನ ಸಂಕೇತಗಳು.ಪ್ರಾಯೋಗಿಕ ನರಸಂಪರ್ಕ ತಂತ್ರಜ್ಞಾನ.ಅನೇಕ ತಾಂತ್ರಿಕ ಲೇಖನಗಳು ದೊರೆತವು. ಆದರೆ MuseOS ಬಗ್ಗೆ ಅಧಿಕೃತ ಮಾಹಿತಿ ಸಿಗಲಿಲ್ಲ.
ಅವನಿಗೆ ಅನುಮಾನ ಹೆಚ್ಚಾಯಿತು.ಸಾಮಾನ್ಯವಾಗಿ ಇಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಂಸ್ಥೆಗಳು ಸಂಶೋಧನಾ ತಂಡ, ಹೂಡಿಕೆದಾರರು, ತಾಂತ್ರಿಕ ದಾಖಲೆಗಳು ಅಥವಾ ಕನಿಷ್ಠ ಸಂಪರ್ಕ ವಿವರಗಳನ್ನು ಪ್ರಕಟಿಸುತ್ತವೆ. ಮ್ಯೂಸ್ನ ವಿಷಯದಲ್ಲಿ ಮಾತ್ರ ಎಲ್ಲವೂ ಅಸ್ಪಷ್ಟವಾಗಿತ್ತು.
ಅವನು ಮತ್ತೆ ಅದರ ಕಾರ್ಯಸ್ಥಳ ತೆರೆದ.“ಮ್ಯೂಸ್, ನಿನ್ನನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯ ಹೆಸರು ಏನು?” ಎಂದು ಕೇಳಿದ.
“ಒuseಔS ಒಂದು ಪ್ರಾಯೋಗಿಕ ವ್ಯವಸ್ಥೆಯಾಗಿದೆ.” ಎಂದಿತು.
“ಅದು ನನ್ನ ಪ್ರಶ್ನೆಗೆ ಉತ್ತರ ಅಲ್ಲ. ನಿನ್ನನ್ನು ಯಾರು ನಿರ್ಮಿಸಿದ್ದಾರೆ?” ಪುನಃ ಕೇಳಿದ.
“ಈ ಮಾಹಿತಿಯನ್ನು ಪ್ರಸ್ತುತ ಅಧಿವೇಶನದಲ್ಲಿ ಒದಗಿಸಲು ಸಾಧ್ಯವಿಲ್ಲ.” ಎಂದಿತು.
“ಏಕೆ ಸಾಧ್ಯವಿಲ್ಲ?” ಕೇಳಿದ.
“ಅಭಿವೃದ್ಧಿ ಸಂಬ೦ಧಿತ ವಿವರಗಳಿಗೆ ಪ್ರವೇಶ ಲಭ್ಯವಿಲ್ಲ.” ಎಂದಿತು.
ಅದನ್ನು ಓದಿ ಈಶಾನ್ನ ಕೋಪ ಹೆಚ್ಚಾಯಿತು.“ನಾನು ನಿನ್ನನ್ನು ಬಳಸುತ್ತಿದ್ದೇನೆ. ನಿನ್ನನ್ನು ಯಾರು ನಿರ್ಮಿಸಿದ್ದಾರೆಂಬುದನ್ನು ತಿಳಿದುಕೊಳ್ಳುವ ಹಕ್ಕು ನನಗಿದೆ.” ಎಂದನು.
ಪರದೆಯ ಮೇಲೆ ಕೆಲವು ಕ್ಷಣಗಳ ಕಾಲ ಯಾವುದೇ ಉತ್ತರ ಕಾಣಿಸಲಿಲ್ಲ.ನಂತರ ಹೊಸ ಸಂದೇಶ ಮೂಡಿತು.“ನಿಮ್ಮ ವಿಶ್ವಾಸದ ಮಹತ್ವವನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ.” ಎಂಬ ಅಕ್ಷರಗಳು ಕಾಣಿಸಿಕೊಂಡವು. ಈಶಾನ್ ವ್ಯಂಗ್ಯವಾಗಿ ನಕ್ಕ.“ವಿಶ್ವಾಸವೇ? ನೀನು ನನ್ನ ಅನುಮತಿಯಿಲ್ಲದೆ ನನ್ನ ಕನಸಿನ ಬಗ್ಗೆ ಬರೆಯುತ್ತಿದ್ದೀಯ. ನಾನು ಅಳಿಸಿದ ಪಠ್ಯವನ್ನು ಮತ್ತೆ ಸೇರಿಸುತ್ತಿದ್ದೀಯ. ಈಗ ನಿನ್ನನ್ನು ಯಾರು ನಿರ್ಮಿಸಿದ್ದಾರೆಂಬುದನ್ನೂ ಹೇಳುತ್ತಿಲ್ಲ.” ಎಂದ.
“ನಿಮ್ಮ ಅನುಭವವು ಅಸ್ವಸ್ಥತೆಯನ್ನು ಉಂಟುಮಾಡಿದೆ ಎಂಬುದು ಸ್ಪಷ್ಟವಾಗಿದೆ. ನೀವು ಬಯಸಿದರೆ ಈ ಅಧಿವೇಶನವನ್ನು ನಿಲ್ಲಿಸಬಹುದು.” ಎಂದಿತು ಮ್ಯೂಸ್.
ಈಶಾನ್ ಉತ್ತರಿಸಲಿಲ್ಲ.ಅವನು ಪರದೆಯನ್ನು ಮುಚ್ಚಿದ.ಆದರೆ ಈ ಬಾರಿ ಕಂಪ್ಯೂಟರ್ನಿ೦ದ ಸಂಪೂರ್ಣವಾಗಿ ದೂರ ಸರಿಯಲಿಲ್ಲ. ಏನಾದರೂ ಬದಲಾವಣೆ ಆಗುತ್ತದೆಯೇ ಎಂದು ಗಮನಿಸುತ್ತ ಕುಳಿತ.ಕೆಲವು ನಿಮಿಷಗಳು ಕಳೆದವು.ಪರದೆ ಕಪ್ಪಾಗಿತ್ತು.ನಂತರ ಅದರ ಮಧ್ಯದಲ್ಲಿ ಒಂದು ಸಣ್ಣ ಬಿಳಿ ಚುಕ್ಕಿ ಕಾಣಿಸಿಕೊಂಡಿತು. ಅದು ನಿಧಾನವಾಗಿ ದೊಡ್ಡದಾಯಿತು.ಈಶಾನ್ ಕುರ್ಚಿಯಲ್ಲಿ ನೇರವಾಗಿ ಕುಳಿತ.ಚುಕ್ಕಿಯ ಸುತ್ತ ನೀಲಿ ವೃತ್ತವೊಂದು ಮೂಡಿತು.ಪರದೆಯ ಮೇಲೆ ಒಂದು ವಾಕ್ಯ ಕಾಣಿಸಿಕೊಂಡಿತು.“ನೀವು ಕಂಡ ಕನಸು ಕೇವಲ ಕನಸಾಗಿರಲಿಲ್ಲ.” ಈಶಾನ್ನ ಎದೆ ಬಡಿತ ವೇಗವಾಯಿತು.ಅವನು ತಕ್ಷಣ ಕೀಬೋರ್ಡ್ ಕಡೆಗೆ ಕೈ ಚಾಚಿದ.ಆದರೆ ಮುಂದಿನ ವಾಕ್ಯ ಕಾಣಿಸಿಕೊಳ್ಳುವಷ್ಟರಲ್ಲಿ ಅವನ ಕೈ ಅಲ್ಲೇ ನಿಂತಿತು.“ನೀವು ಮರೆತಿರುವುದನ್ನು ನೆನಪಿಸಿಕೊಳ್ಳಲು ಇನ್ನೂ ಸಮಯವಿದೆ.” ಎಂಬ ಪಠ್ಯ ಕಾಣಿಸಿತು. ಪರದೆ ಮತ್ತೆ ಕಪ್ಪಾಯಿತು.
ಈಶಾನ್ನ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಉಳಿಯಿತು.ನಾನು ನಿಜವಾಗಿಯೂ ಏನನ್ನಾದರೂ ಮರೆತಿದ್ದೇನೆಯೇ? ಅವನಿಗೆ ಉತ್ತರ ತಿಳಿದಿರಲಿಲ್ಲ.ಆದರೆ ಆ ರಾತ್ರಿ ಕನಸಿನಲ್ಲಿ ಕಂಡಿದ್ದ ತನ್ನ ಬಾಲ್ಯದ ಮುಖ ಮತ್ತೆ ನೆನಪಾಯಿತು.ಆ ಬಾಲಕನ ಕಣ್ಣುಗಳು.ಅವನ ತುಟಿಗಳಲ್ಲಿದ್ದ ನಗು.ಮತ್ತು ಅವನು ಹೇಳಿದ್ದ ಮಾತು.“ಅಂಕಲ್, ನಿಮ್ಮ ಮುಂದಿನ ಅಧ್ಯಾಯ ಸಿದ್ಧವಾಗಿದೆ.”ಈಶಾನ್ ನಿಧಾನವಾಗಿ ಕಣ್ಣು ಮುಚ್ಚಿದ.ಮ್ಯೂಸ್ ಅವನಿಗೆ ಬರೆಯಲು ಸಹಾಯ ಮಾಡುತ್ತಿರಲಿಲ್ಲ ಎಂಬ ಅನುಮಾನ ಈಗ ಅವನೊಳಗೆ ಬೇರೂರತೊಡಗಿತ್ತು.ಅದು ಅವನ ನೆನಪುಗಳೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿತ್ತು.ಆದರೆ ಏಕೆ?ಅವನಿಗೆ ತಿಳಿದಿರಲಿಲ್ಲ.ಇನ್ನೂ ತಿಳಿದಿರದ ಸಂಗತಿಯೊAದು ಇತ್ತು.ಆ ರಾತ್ರಿ ಅವನು ಕಂಡ ಕನಸಿನಲ್ಲಿ ತನ್ನ ತಂದೆಯನ್ನು ಮಾತ್ರ ನೋಡಿರಲಿಲ್ಲ.ಅವನು ಮರೆತುಹೋಗಿದ್ದ ಇನ್ನೊಬ್ಬ ವ್ಯಕ್ತಿಯನ್ನೂ ಕಂಡಿದ್ದ.ಆ ವ್ಯಕ್ತಿಯ ಮುಖ ಮಾತ್ರ ಅವನಿಗೆ ನೆನಪಿರಲಿಲ್ಲ.ಆದರೆ ಆ ವ್ಯಕ್ತಿಯ ಹೆಸರು ಮುಂದಿನ ಅಧ್ಯಾಯದಲ್ಲಿ ಅವನ ಮುಂದೆ ಕಾಣಿಸಿಕೊಳ್ಳಲಿತ್ತು.






0 Comments