ಬಿ. ಆರ್. ಲಕ್ಷ್ಮಣರಾವ್ ಅವರ ಆತ್ಮಕಥೆ ‘ಅದೃಷ್ಟವಂತನ ಆತ್ಮಕಥೆ’
ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಪಾರ್ವತಿ ಜಿ ಐತಾಳ್ ಅವರ ಬರಹ ಇಲ್ಲಿದೆ.
-ಪಾರ್ವತಿ ಜಿ ಐತಾಳ್
ಮನುಷ್ಯನ ಮೃದುಮಧುರ ಭಾವನೆಗಳ ಆಳಕ್ಕಿಳಿದು, ಓದುಗನ ಮನಸ್ಸಿನಲ್ಲಿ ರೋಮಾಂಚನವನ್ನು ಮೂಡಿಸುವ ಭಾವಗೀತೆಗಳ ಕವಿ ಬಿ. ಆರ್. ಎಲ್. (ಬಿ. ಆರ್. ಲಕ್ಷ್ಮಣರಾವ್) ಅವರು ತಮ್ಮ ಬದುಕಿನಲ್ಲಿ ಸಂಭವಿಸಿದ ಏಳುಬೀಳುಗಳನ್ನು ದಾಖಲಿಸಿರುವ ‘ಅದೃಷ್ಟವಂತನ ಆತ್ಮಕಥೆ’ ಒಂದು ಮಹತ್ವದ ಕೃತಿ. ಈ ಕೃತಿ ಏಕೆ ಮಹತ್ವದ್ದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವೇ ಇಲ್ಲದಂತೆ ಅವರ ನಿರೂಪಣೆ ಓದುಗನನ್ನು ಸೆರೆಹಿಡಿಯುತ್ತದೆ. ಬಾಲ್ಯದಿಂದ ಹಿಡಿದು ಬದುಕಿನ ಸಂಧ್ಯಾಕಾಲದವರೆಗೂ ಅಲ್ಲಲ್ಲಿ ಅಡೆತಡೆಗಳು ಎದುರಾದರೂ, ಗೆಲುವಿನಲ್ಲಿ ಹಿಗ್ಗದೆ, ಸೋಲಿನಲ್ಲಿ ಕುಗ್ಗದೆ, ಬದುಕಿನುದ್ದಕ್ಕೂ ಸಮತೋಲನವನ್ನು ಕಾಯ್ದುಕೊಂಡು ಸ್ಥಿತಪ್ರಜ್ಞತೆಯಿಂದ ಮುನ್ನಡೆಯುವ ಅವರ ಪರಿ ಅದ್ಭುತವಾದದ್ದು. ಅವರ ಬದುಕು ಖಂಡಿತವಾಗಿಯೂ ಹೂವಿನ ಹಾಸಿಗೆಯಾಗಿರಲಿಲ್ಲ. ಆದರೂ ಅವರು ತಮ್ಮನ್ನು ‘ಅದೃಷ್ಟವಂತ’ ಎಂದು ಕರೆದುಕೊಳ್ಳುವುದಕ್ಕೆ ಕಾರಣ, ಅಲ್ಪದಲ್ಲಿಯೇ ತೃಪ್ತಿಯನ್ನು ಕಂಡುಕೊಳ್ಳುವ ಅವರ ಗುಣವೇ ಇರಬೇಕು.
ಆತ್ಮಕಥೆಯೊಂದನ್ನು ಬರೆಯುವ ಉದ್ದೇಶ ತನ್ನ ಅನುಭವಗಳನ್ನು ಹಂಚಿಕೊಳ್ಳುವುದು; ಸುಖವಾಗಲಿ, ದುಃಖವಾಗಲಿ, ಅವುಗಳನ್ನು ತಾನು ಹೇಗೆ ಎದುರಿಸಿದೆ ಎಂಬುದನ್ನು ಹೇಳಿಕೊಳ್ಳುವುದು. ಇಲ್ಲಿ ಲೇಖಕ ತನ್ನ ತಾತ್ವಿಕತೆಯನ್ನು ಓದುಗನ ಮೇಲೆ ಹೇರದೆ, ತನ್ನ ಬದುಕಿನಿಂದ ಸ್ವಲ್ಪ ದೂರ ನಿಂತು ಅದನ್ನು ನಿರ್ಲಿಪ್ತವಾಗಿ ಅವಲೋಕಿಸುವುದು ಮುಖ್ಯ. ಅನುಭವಗಳ ನಿರೂಪಣೆಯಿಂದ ಓದುಗನಿಗೆ ಯಾವುದಾದರೂ ಪಾಠ ದೊರೆತರೆ, ಬದುಕಿನಲ್ಲಿ ಸ್ಫೂರ್ತಿ ಪಡೆಯಲು ಸಾಧ್ಯವಾದರೆ, ಅದೊಂದು ಹೆಚ್ಚುವರಿ ಲಾಭ. ಈ ದೃಷ್ಟಿಯಿಂದ ‘ಅದೃಷ್ಟವಂತನ ಆತ್ಮಕಥೆ’ ಅತ್ಯಂತ ಸರಳವಾಗಿ, ಸಂಯಮದಿಂದ ಮತ್ತು ವಸ್ತುನಿಷ್ಠವಾಗಿ, ಎಲ್ಲಿಯೂ ಉಪದೇಶದ ಧಾಟಿಗೆ ಜಾರದಂತೆ ನಿರೂಪಿಸಲ್ಪಟ್ಟಿರುವ ಆತ್ಮಕಥನ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ರಾಜಾರಾಮ ರಾವ್ ಮತ್ತು ವೆಂಕಟಲಕ್ಷ್ಮಮ್ಮನವರ ಒಂಬತ್ತು ಮಂದಿ ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದ ಬಿ. ಆರ್. ಎಲ್. ಆರಂಭದ ದಿನಗಳಲ್ಲಿ ಕಡುಬಡತನವನ್ನು ಎದುರಿಸಿದವರೇ. ಆದರೆ ಶಾಲೆಯಲ್ಲಿ ತಮ್ಮ ಬಹುಮುಖ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಓದು, ಸಂಗೀತ, ನಾಟಕ, ಆಟೋಟ—ಎಲ್ಲದರಲ್ಲಿಯೂ ಮುಂದಿರುತ್ತಿದ್ದ ಅವರು, ಕಡೂರಿನಲ್ಲಿ ಪ್ರೌಢಶಾಲೆಯ ವಿದ್ಯಾಭ್ಯಾಸಕ್ಕೆ ಸೇರುವ ಹೊತ್ತಿಗಾಗಲೇ ಪಠ್ಯಪುಸ್ತಕಗಳಿಗಿಂತ ಕಥೆ-ಕಾದಂಬರಿಗಳನ್ನು ಹೆಚ್ಚು ಓದುವ ಅಭ್ಯಾಸ ಬೆಳೆಸಿಕೊಂಡಿದ್ದರು.ತರಗತಿಯಲ್ಲಿ ಶಿಸ್ತಿನಿಂದ ಕುಳಿತು ಪಾಠ ಕೇಳುವ ವಿದ್ಯಾರ್ಥಿ ಅವರಾಗಿರಲಿಲ್ಲ. ತುಂಟ ಹುಡುಗರೊಂದಿಗೆ ತಿರುಗಾಡುವ ಅಭ್ಯಾಸವೂ ಇತ್ತು. ತರಗತಿಗಳನ್ನು ತಪ್ಪಿಸಿ ಸಿನಿಮಾಗಳನ್ನು ನೋಡಲು ಹೋಗುವುದೂ ಅವರಿಗೆ ಹೊಸತಾಗಿರಲಿಲ್ಲ. ಆದರೆ ಬುದ್ಧಿವಂತಿಕೆಯಿಂದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದರು. ಅವರಲ್ಲಿದ್ದ ಕಾವ್ಯಪ್ರತಿಭೆಯನ್ನು ಅಧ್ಯಾಪಕ ವೈ. ಎಸ್. ಗುಂಡಪ್ಪ ಗುರುತಿಸುತ್ತಾರೆ. ಅಷ್ಟರಲ್ಲಾಗಲೇ ವಿಪರೀತವಾಗಿ ಸಿನಿಮಾ ನೋಡುವ ಗೀಳನ್ನು ಬೆಳೆಸಿಕೊಂಡಿದ್ದ ಲಕ್ಷ್ಮಣರಾವ್ ಅವರ ಬಗ್ಗೆ, ಅವರ ತಂದೆಯ ಬಳಿ ‘ನಿಮ್ಮ ಹುಡುಗ ಉದ್ಧಾರವಾಗುವುದಿಲ್ಲ’ ಎಂಬ ಮಾತು ಮಾಸ್ತರರಿಂದ ಕೇಳಿಬಂದರೂ, ಉತ್ತಮ ಅಂಕಗಳೊಂದಿಗೆ ಎಲ್. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಅವರಲ್ಲಿದ್ದ ಪ್ರತಿಭೆ ಮುಂದೊಂದು ದಿನ ಅರಳಲಿರುವುದರ ಮುನ್ಸೂಚನೆಯಾಗಿ ಈ ಸಾಧನೆಯನ್ನು ಕಾಣಬಹುದು.
ದಾವಣಗೆರೆಯಲ್ಲಿ ಮಾವನ ಮನೆಯಲ್ಲಿದ್ದುಕೊಂಡು ಪಿ. ಯು. ಸಿ. ಮುಗಿಸಿದ ಅವರು, ಆರಂಭದಲ್ಲಿ ಬಿ. ಎಸ್. ಸಿ. ವ್ಯಾಸಂಗಕ್ಕೆ ಸೇರಿದರೂ, ಅಧ್ಯಾಪಕರ ಸಲಹೆಯಂತೆ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ. ಎ. ಮಾಡಲು ಸೇರುತ್ತಾರೆ. ಇದು ಅವರ ಬದುಕಿನ ಮಹತ್ವದ ತಿರುವು. ಅವರ ಕಾವ್ಯ ಮತ್ತು ನಾಟ್ಯಪ್ರತಿಭೆಗಳನ್ನು ಗುರುತಿಸಿ ತಮ್ಮ ಸಾಹಿತ್ಯಿಕ ಬಳಗಕ್ಕೆ ಸೇರಿಸಿಕೊಳ್ಳುವ ಲಂಕೇಶ್, ವೈ. ಎನ್. ಕೆ. ಮೊದಲಾದ ಸಾಹಿತ್ಯ ದಿಗ್ಗಜರ ಒಡನಾಟ ಅವರಿಗೆ ದೊರೆಯುತ್ತದೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಕಥೆ-ಕವಿತೆಗಳು ಪ್ರಕಟಗೊಂಡು ಸಾಹಿತ್ಯಿಕ ಯಶಸ್ಸಿನ ಹಾದಿ ತೆರೆದುಕೊಳ್ಳುತ್ತದೆ. ಇದೇ ಸಂದರ್ಭದಲ್ಲಿ ಅಸ್ತಿತ್ವವಾದದ ಪ್ರಭಾವದಿಂದ ದೇವರು, ಧರ್ಮ ಮೊದಲಾದವುಗಳ ಮೇಲಿನ ಅವರ ನಂಬಿಕೆ ಕ್ರಮೇಣ ಕಡಿಮೆಯಾಗುತ್ತದೆ.
ಮುಂದೆ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಮಾಡಬೇಕೆಂಬ ಆಸೆ ಅವರಿಗಿದ್ದರೂ ತಂದೆ ಅದಕ್ಕೆ ಒಪ್ಪುವುದಿಲ್ಲ. ಮನೆಯ ಹಿರಿಯ ಮಗನಾಗಿ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾದರೆ ಊರಾದ ಚಿಂತಾಮಣಿಯಲ್ಲಿಯೇ ಇರಬೇಕೆಂದು ತಾಕೀತು ಮಾಡುತ್ತಾರೆ. ಮನೆಯವರ ವಿರೋಧವನ್ನು ಲೆಕ್ಕಿಸದೆ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಒಮ್ಮೆ ಹೊರಟರೂ, ಕೊನೆಗೆ ಕರ್ತವ್ಯಪ್ರಜ್ಞೆಗೆ ಮಣಿದು ಮನಸ್ಸು ಬದಲಾಯಿಸುತ್ತಾರೆ. ಚಿಂತಾಮಣಿಯಲ್ಲಿ ಆಗಷ್ಟೇ ಆರಂಭವಾಗಿದ್ದ ಒಂದು ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇರುತ್ತಾರೆ. ಆದರೂ ಸಾಹಿತ್ಯದ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಆಗಾಗ ಬೆಂಗಳೂರಿಗೆ ಬಂದು ಸಾಹಿತಿಗಳ ಒಡನಾಟದಲ್ಲಿ ಕಾಲ ಕಳೆಯುತ್ತಿರುತ್ತಾರೆ.
ತಂದೆಯನ್ನು ಮದುವೆಯಾಗಬೇಕೆಂದು ಬಯಸಿದ್ದ ಅವರ ಮಾವನ ಮಗಳು ರತ್ನಾ, ಕೊನೆಗೂ ಅವರನ್ನೇ ನೆನಪಿಸಿಕೊಳ್ಳುತ್ತಾ ಮದುವೆಯಾಗದೆ ಉಳಿದದ್ದು ಅಚ್ಚರಿಯ ಸಂಗತಿ. ಬಹಳ ಕಾಲದ ನಂತರ ಆಕೆ ತಂದೆಯನ್ನೇ ಮದುವೆಯಾಗಿ, ಎರಡನೆಯ ಹೆಂಡತಿಯಾಗಿ ಅವರ ಮನೆಗೆ ಬರಲು ಮುಂದಾದಾಗ, ತನ್ನ ತಾಯಿಯ ದುಃಖವನ್ನು ನೆನಪಿಸಿಕೊಳ್ಳುವ ಲೇಖಕರು ಆಕೆಯ ಪ್ರವೇಶವನ್ನು ವಿರೋಧಿಸಿ ತಾಯಿಗೆ ಸಾಂತ್ವನ ನೀಡುತ್ತಾರೆ. ಆದರೆ ರತ್ನಾ ಅವರ ಮುಂದಿನ ಬದುಕಿನಲ್ಲಿ ಏನಾಯಿತು ಎಂಬುದನ್ನು ಇಲ್ಲಿ ವಿವರಿಸುವುದಿಲ್ಲ. ಈ ಘಟನೆಯ ನಿರೂಪಣೆಯಲ್ಲಿಯೂ ಲೇಖಕರು ತಮ್ಮ ಕುಟುಂಬದ ಭಾವನೆಗಳಿಗೆ ನೀಡುವ ಮಹತ್ವ ಎದ್ದು ಕಾಣುತ್ತದೆ.
ಚಿಂತಾಮಣಿಯ ಡಿಲಿಜೆನ್ಸ್ ಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ಇಬ್ಬರು ಹುಡುಗಿಯರೊಂದಿಗೆ ತಮಗಾದ ಅನುಭವಗಳನ್ನು ಲೇಖಕರು ಅತ್ಯಂತ ಪ್ರಾಮಾಣಿಕವಾಗಿ, ಮುಚ್ಚುಮರೆಯಿಲ್ಲದೆ ನಿರೂಪಿಸಿರುವುದು ಮೆಚ್ಚುಗೆಗೆ ಅರ್ಹವಾದದ್ದು.
ಮೊದಲನೆಯವಳು ಲಕ್ಷ್ಮಿ. ಎಂಟನೆಯ ತರಗತಿಗೆ ಸೇರಿದ ಆಕೆ ಮಾಸ್ತರರ ವ್ಯಕ್ತಿತ್ವದಿಂದ ಆಕರ್ಷಿತಳಾಗಿ ಅವರಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾಳೆ. ಲೇಖಕರು ಅವಳನ್ನು ಪ್ರೀತಿಯಿಂದ ‘ಮುದ್ದು ಗುಬ್ಬಚ್ಚಿ’ ಎಂದು ಕರೆಯುತ್ತಾರೆ. ಸುಂದರವಾದ, ಸೌಮ್ಯ ಸ್ವಭಾವದ ಆ ಹುಡುಗಿ ಒಮ್ಮೆ ಮಾಸ್ತರರು ತಮ್ಮ ಮನೆಗೆ ಬಂದಾಗ ನಾಚಿಕೆಯಿಂದ ಹೊರಗೆ ಬರುವುದೇ ಇಲ್ಲ. ಆಗ ಮಾಸ್ತರರು, ‘ಅವಳನ್ನು ನಾನೇ ಮದುವೆಯಾಗುತ್ತೇನೆ’ ಎಂದು ಹೇಳುತ್ತಾರೆ. ಆದರೆ ಅವಳು ಹತ್ತನೆಯ ತರಗತಿಗೆ ಬರುವ ವೇಳೆಗೆ ಕಾಯಿಲೆಯಿಂದ ನರಳಿ ಸಾವನ್ನಪ್ಪುತ್ತಾಳೆ. ಅವಳನ್ನು ಬಹಳವಾಗಿ ಹಚ್ಚಿಕೊಂಡಿದ್ದ ಮಾಸ್ತರರಿಗೆ ಈ ಆಘಾತದಿಂದ ಹೊರಬರಲು ಸುಲಭವಾಗುವುದಿಲ್ಲ. ಬದುಕು ಅವರಿಗೆ ನೀಡಿದ ಮೊದಲ ಪ್ರೇಮಾನುಭವದ ನೋವು ಮರೆಯಲಾಗದ ನೆನಪಾಗಿ ಉಳಿಯುತ್ತದೆ.
ಇನ್ನೊಂದು ಅನುಭವ ಶಕುಂತಲೆಯದು. ಅವಳ ಸೌಂದರ್ಯ ಮತ್ತು ಮಾದಕ ಕಂಗಳ ನೋಟಕ್ಕೆ ಮನಸೋತ ಮಾಸ್ತರರು ಅವಳನ್ನೇ ಮದುವೆಯಾಗಬೇಕೆಂದು ನಿರ್ಧರಿಸುತ್ತಾರೆ. ಆದರೆ ತಮ್ಮ ಮನದ ಮಾತನ್ನು ಹೇಗೆ ಹೇಳಬೇಕೆಂಬುದು ಅವರಿಗೆ ತಿಳಿಯುವುದಿಲ್ಲ. ಕೊನೆಗೆ ತಮ್ಮ ತಂಗಿಯನ್ನೇ ಅವಳ ಬಳಿಗೆ ರಾಯಭಾರಿಯಾಗಿ ಕಳುಹಿಸುತ್ತಾರೆ. ಆದರೆ ಶಕುಂತಲೆ ತನಗೆ ಮಾಸ್ತರರ ಬಗ್ಗೆ ಸೋದರಭಾವವಷ್ಟೇ ಇದೆ ಎಂದು ಸುಳ್ಳು ಹೇಳುತ್ತಾಳೆ. ಇದರಿಂದ ಮಾಸ್ತರರು ನೊಂದುಕೊಳ್ಳುತ್ತಾರೆ.
ಇದ್ದಕ್ಕಿದ್ದಂತೆ ಒಂದು ದಿನ ಶಾಲೆಯಲ್ಲಿ ಏಕಾಂತ ಸಿಕ್ಕಿದಾಗ ಶಕುಂತಲೆ ಬಂದು ಅವರನ್ನು ಬಿಗಿದಪ್ಪಿ, ‘ನಾನು ಅಪ್ಪನಿಗೆ ಹೆದರಿ ಸತ್ಯವನ್ನು ಅಡಗಿಸಿದೆ’ ಎಂದು ಹೇಳುತ್ತಾಳೆ. ಇದರಿಂದ ಮಾಸ್ತರರು ಸಂತೋಷಗೊಳ್ಳುತ್ತಾರೆ. ಆದರೆ ಜಾತಿ ಮತ್ತು ಪಂಗಡಗಳ ಭಿನ್ನತೆ ಅವರ ಮದುವೆಗೆ ಅಡ್ಡಿಯಾಗುವುದರಿಂದ ಇಬ್ಬರೂ ಬೇರೆಯಾಗಬೇಕಾಗುತ್ತದೆ. ಈ ಘಟನೆಯೂ ಅವರನ್ನು ನಿರಾಶೆಯ ಕೂಪಕ್ಕೆ ತಳ್ಳುತ್ತದೆ. ಆದರೂ ಬದುಕಿನಲ್ಲಿ ಎಂಥ ಹೊಡೆತ ಬಿದ್ದರೂ ಧೈರ್ಯ ಕಳೆದುಕೊಳ್ಳದೆ, ಮತ್ತೆ ಎದ್ದು ಮೈಕೊಡವಿಕೊಂಡು ಹೊಸದಾಗಿ ಬದುಕು ಆರಂಭಿಸುವ ಅವರ ಧಾರಣಶಕ್ತಿ ನಿಜಕ್ಕೂ ದೊಡ್ಡದು.
ಶಾಲೆಯಲ್ಲಿ ಅಧ್ಯಾಪಕರಾಗಿ ಮುಂದುವರಿಯಲು ಬಿ. ಎಡ್. ಪದವಿಯ ಅಗತ್ಯ ಎದುರಾದಾಗ, ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಲು ಅವರು ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ವಿಶ್ವೇಶ್ವರಿ ಎಂಬವರ ಪರಿಚಯವಾಗುತ್ತದೆ. ಆಕೆ ಮೆನೋನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದು, ಒಂದು ಮಗುವನ್ನೂ ಪಡೆದಿರುತ್ತಾಳೆ. ಮೆಲುಮಾತಿನ ಮೆನೋನ್ ಕೂಡ ಲೇಖಕರಿಗೆ ಇಷ್ಟವಾಗುತ್ತಾರೆ. ಆದರೆ ಸ್ವಲ್ಪ ಕಾಲದ ನಂತರ ಮೆನೋನ್ ಮತ್ತೊಬ್ಬ ಹೆಣ್ಣಿನ ಮೋಹಕ್ಕೆ ಒಳಗಾಗಿ ತನ್ನನ್ನು ಕಡೆಗಣಿಸುತ್ತಿರುವುದಾಗಿ ವಿಶ್ವೇಶ್ವರಿ ತಮ್ಮ ಅಂತರಂಗದ ನೋವನ್ನು ಅವರ ಮುಂದೆ ತೆರೆದಿಡುತ್ತಾಳೆ. ಬಿ. ಆರ್. ಎಲ್. ಆಕೆಯ ನೋವಿಗೆ ಸಹಾನುಭೂತಿ ತೋರಿ ಸಾಂತ್ವನ ಹೇಳುತ್ತಾರೆ. ತಮ್ಮ ಕೊನೆಯ ತಂಗಿ ಉಷಾ ಒಬ್ಬ ಮುಸ್ಲಿಂ ಯುವಕ ಸಿರಾಜ್ನನ್ನು ಮದುವೆಯಾಗಲು ನಿರ್ಧರಿಸಿದಾಗ, ಕುಟುಂಬದಲ್ಲಿ ಆಕೆಗೆ ಬೆಂಬಲವಾಗಿ ನಿಲ್ಲುವ ಏಕೈಕ ವ್ಯಕ್ತಿಯಾಗುತ್ತಾರೆ. ಈ ಸಂದರ್ಭದಲ್ಲಿ ಅವರು ತೋರುವ ವಿಶಾಲ ಮನೋಭಾವ ಮತ್ತು ಮಾನವೀಯತೆ ಅವರ ವ್ಯಕ್ತಿತ್ವದ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಪ್ರೀತಿ ಮತ್ತು ಸಂಬಂಧಗಳ ವಿಷಯದಲ್ಲಿ ತಮ್ಮ ಅನುಭವಗಳು ಹೇಗೇ ಇದ್ದರೂ, ಇತರರ ಬದುಕಿನ ಆಯ್ಕೆಗಳನ್ನು ಗೌರವಿಸುವ ಅವರ ಗುಣ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಐದು ವರ್ಷಗಳು ಕಳೆದ ನಂತರ, ಆಗಲೇ ಸ್ನೇಹಿತರಾಗಿದ್ದ ಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಮಧ್ಯಸ್ಥಿಕೆಯಲ್ಲಿ, ಲೇಖಕರು ಬಹಳವಾಗಿ ಇಷ್ಟಪಟ್ಟಿದ್ದ ಶಿವಮೊಗ್ಗದ ಸುಬ್ಬಾಭಟ್ಟರ ಮಗಳು ಗಿರಿಜಾ ಅವರ ಪತ್ನಿಯಾಗುತ್ತಾರೆ. ಅಲ್ಲಿಂದ ಅವರ ಬದುಕು ಸುಗಮ ಹಾದಿಯಲ್ಲಿ ಸಾಗುತ್ತದೆ. ಪರಸ್ಪರರನ್ನು ಅರ್ಥಮಾಡಿಕೊಂಡು, ಪ್ರೀತಿ-ವಿಶ್ವಾಸಗಳಿಂದ ಬದುಕುವ ಆದರ್ಶ ದಂಪತಿಗಳಾಗಿ ಅವರು ರೂಪುಗೊಳ್ಳುತ್ತಾರೆ. ಜೀವನದ ಆರಂಭದ ಪ್ರೇಮವೈಫಲ್ಯಗಳು ಮತ್ತು ನಿರಾಶೆಗಳ ನಂತರ ದೊರೆತ ಈ ದಾಂಪತ್ಯ ಅವರ ಬದುಕಿಗೆ ನೆಮ್ಮದಿ ಮತ್ತು ಸ್ಥಿರತೆಯನ್ನು ತಂದುಕೊಡುತ್ತದೆ.
ಬಿ. ಆರ್. ಎಲ್. ಕನ್ನಡ ಕಾವ್ಯಕ್ಷೇತ್ರವನ್ನು ಪ್ರವೇಶಿಸಿದ್ದು 1964ರಲ್ಲಿ—ನವ್ಯ ಚಳವಳಿಯ ಉಚ್ಛ್ರಾಯ ಕಾಲದಲ್ಲಿ. ‘ಗೋಕುಲ’, ‘ಪ್ರಜಾಮತ’, ‘ಲಹರಿ’, ‘ಸಂಕ್ರಮಣ’ ಮೊದಲಾದ ಪತ್ರಿಕೆಗಳಲ್ಲಿ ಅವರ ಕವನಗಳು ಪ್ರಕಟಗೊಳ್ಳತೊಡಗಿದವು. ಅನಂತರ ಅಂದಿನ ಪ್ರತಿಷ್ಠಿತ ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯಲ್ಲಿಯೂ ಆಗಾಗ ಅವರ ಕವಿತೆಗಳು ಪ್ರಕಟವಾಗತೊಡಗಿದವು. ಹೀಗೆ ಅವರ ಸಾಹಿತ್ಯಿಕ ವಲಯ ವಿಸ್ತರಿಸಿಕೊಳ್ಳುತ್ತದೆ.
ಗೋಪಾಲಕೃಷ್ಣ ಅಡಿಗರು, ವೈ. ಎನ್. ಕೆ., ಜಿ. ಎಸ್. ಸದಾಶಿವ, ಬಿ. ವಿ. ವೈಕುಂಠರಾಜು, ಜಿ. ಎನ್. ರಂಗನಾಥರಾವ್, ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು, ನಿಸಾರ್ ಅಹಮದ್, ಅನಂತರ ಎಚ್. ಎಸ್. ವೆಂಕಟೇಶಮೂರ್ತಿ, ಟಿ. ಎನ್. ಸೀತಾರಾಂ ಮೊದಲಾದವರ ಒಡನಾಟ ಅವರಿಗೆ ದೊರೆಯುತ್ತದೆ. ಅವರ ಬಳಗದಲ್ಲಿ ಸೇರಿಕೊಂಡ ಬಿ. ಆರ್. ಎಲ್. ಆಗಾಗ ಬೆಂಗಳೂರಿಗೆ ಬಂದು ಸಾಹಿತ್ಯಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ ‘ಗುಂಡು ಪಾರ್ಟಿ’ಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದೆ ‘ಎಂದು ಅವರೇ ಹೇಳಿಕೊಳ್ಳುತ್ತಾರೆ.
ಚಿಂತಾಮಣಿಯಲ್ಲಿದ್ದಾಗ ಯಾವುದೇ ಹೊಸ ಸಿನಿಮಾ ಬಿಡುಗಡೆಯಾದರೂ ತಪ್ಪದೆ ನೋಡುತ್ತಿದ್ದ ಅವರು, ಬೆಂಗಳೂರಿನಲ್ಲಿ ಗೆಳೆಯರೊಂದಿಗೆ ಇಂಗ್ಲಿಷ್ ಸಿನಿಮಾಗಳನ್ನೂ ವೀಕ್ಷಿಸುತ್ತಾರೆ. ಈ ಅನುಭವಗಳು ಅವರ ಲೋಕಜ್ಞಾನವನ್ನು ವಿಸ್ತರಿಸಿ, ಕಾವ್ಯರಚನೆಗೆ ಹೊಸ ಆಯಾಮಗಳನ್ನು ಒದಗಿಸುತ್ತವೆ.
ಆ ಕಾಲದಲ್ಲಿ ಬೆಂಗಳೂರಿನ ಕೆಲವು ಬಾರ್ಗಳಲ್ಲಿ ಕ್ಯಾಬರೆ ನೃತ್ಯಗಳು ಆರಂಭವಾಗಿದ್ದವು. ಬಿ. ಆರ್. ಎಲ್. ಅವರ ಗೆಳೆಯ ಗುರುರಾಜ್ ಒಮ್ಮೆ ಗ್ಯಾಂಡಲೀನ ಎಂಬ ನರ್ತಕಿಯ ಕ್ಯಾಬರೆ ನೃತ್ಯವನ್ನು ನೋಡಿ ಬಂದು ಅದನ್ನು ರಸವತ್ತಾಗಿ ವರ್ಣಿಸುತ್ತಾನೆ. ಆ ಅನುಭವವನ್ನು ಚಿಂತಾಮಣಿಯ ಗೆಳೆಯ ಗೋಪಿ ಎಂಬವನಿಗೆ ಅನ್ವಯಿಸಿ ಬಿ. ಆರ್. ಎಲ್. ‘ಗೋಪಿ ಮತ್ತು ಗ್ಯಾಂಡಲೀನ’ ಎಂಬ ಸುಂದರ ಕವಿತೆಯನ್ನು ರಚಿಸುತ್ತಾರೆ. ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಮುಂದೆ ತಮ್ಮ ಮೊದಲ ಕವನ ಸಂಕಲನಕ್ಕೂ ಅದೇ ಶೀರ್ಷಿಕೆಯನ್ನು ನೀಡುತ್ತಾರೆ. ಅವರ ಮುಂದಿನ ಕವನಸಂಕಲನಕ್ಕೆ ಯು. ಆರ್. ಅನಂತಮೂರ್ತಿಯವರು ಮೆಚ್ಚುಗೆಯ ಮುನ್ನುಡಿ ಬರೆದುಕೊಟ್ಟಾಗ ಅವರಿಗೆ ಅಪಾರ ಸಂತಸವಾಗುತ್ತದೆ..
ಬಿ. ಆರ್. ಎಲ್. ಅವರ ಬದುಕಿನಲ್ಲಿ ಮಹತ್ವದ ತಿರುವು ಕಾಣಿಸಿಕೊಂಡದ್ದು ಅವರ ಕವಿತೆಗಳು ಎಚ್. ಎಸ್. ವೆಂಕಟೇಶಮೂರ್ತಿಯವರ ಕವಿತೆಗಳೊಂದಿಗೆ ಬೆಂಗಳೂರು ಆಕಾಶವಾಣಿಯ ಸಂಗೀತ ವಿಭಾಗದ ಮುಖ್ಯಸ್ಥರ ಉಸ್ತುವಾರಿಯಲ್ಲಿ ಹಾಡುಗಳಾಗಿ ಪ್ರಸಾರಗೊಂಡಾಗ. ಈ ಹಾಡುಗಳು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟವು. ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ ಮೊದಲಾದ ಸುಪ್ರಸಿದ್ಧ ಗಾಯಕರ ಧ್ವನಿಯಲ್ಲಿ ಅವರ ಅನೇಕ ಕ್ಯಾಸೆಟ್ಗಳು ಬಿಡುಗಡೆಯಾಗುತ್ತವೆ. ಮಧುರವೂ ಭಾವಪೂರ್ಣವೂ ಆದ ಭಾವಗೀತೆಗಳ ಕವಿಯಾಗಿ ಅವರು ಜನಮನದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸುತ್ತವೆ.
ಆದರೆ ನವ್ಯಸಾಹಿತ್ಯದ ಕಾಲದಲ್ಲಿ ಓದಿನ ಕವಿತೆಗಳಿಗೆ ದೊರೆಯುತ್ತಿದ್ದ ಮಹತ್ವ ಹಾಡುಗವಿತೆಗಳಿಗೆ ದೊರೆಯುತ್ತಿರಲಿಲ್ಲ. ನವ್ಯಕವಿಯೊಬ್ಬ ಹಾಡುಗವಿತೆಗಳನ್ನು ಬರೆಯಬಾರದು ಎಂಬ ಅಲಿಖಿತ ನಿಯಮವೇ ಜಾರಿಯಲ್ಲಿದ್ದ ಕಾಲವದು. ಬಿ.ಆರ್.ಎಲ್ ಅವರ ಕವಿತೆಗಳು ಸಂಗೀತದ ಮೂಲಕ ಜನಪ್ರಿಯವಾಗತೊಡಗಿದ್ದನ್ನು ಲಂಕೇಶ್ ಸ್ವಲ್ಪವೂಅ. ಇಷ್ಟಪಡುವುದಿಲ್ಲ. ಎಚ್. ಎಸ್. ವೆಂಕಟೇಶಮೂರ್ತಿಯವರೊಂದಿಗೆ ಸೇರಿ ಬಿ. ಆರ್. ಎಲ್. ಅನೇಕ ಕ್ಯಾಸೆಟ್ಗಳನ್ನು, ಅನಂತರ ಸಿ. ಡಿ. ಗಳನ್ನು ಹೊರತಂದಾಗ, ಲಂಕೇಶ್ ಅವರನ್ನು ‘ಕ್ಯಾಸೆಟ್ ಕವಿಗಳು’ ಎಂದು ಗೇಲಿ ಮಾಡುತ್ತಾರೆ.
ಆದರೆ ಇಂತಹ ಟೀಕೆಗಳಿಂದ ಬಿ. ಆರ್. ಎಲ್. ಸ್ವಲ್ಪವೂ ಕುಗ್ಗುವುದಿಲ್ಲ. ತಮ್ಮ ಸಂಕಲ್ಪದಲ್ಲಿ ದೃಢವಾಗಿ ನಿಂತು ಸಾಹಿತ್ಯರಚನೆಯನ್ನು ನಿರಂತರವಾಗಿ ಮುಂದುವರಿಸುತ್ತಾರೆ.. ಸಂಗೀತಪ್ರಿಯರೂ ಸ್ವತಃ ಹಾಡುಗಾರರೂ ಆಗಿದ್ದ ಅವರು, ಕ್ಯಾಸೆಟ್ಗಳಿಗಾಗಿ ಹಾಡುಗಳನ್ನು ಹಾಡುವ ಅವಕಾಶಗಳನ್ನೂ ಪಡೆದುಕೊಳ್ಳುತ್ತಾರೆ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು, ನಿಸಾರ್ ಅಹಮದ್, ಎಚ್. ಎಸ್. ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಂ. ಎನ್. ವ್ಯಾಸರಾವ್ ಮೊದಲಾದವರೊಂದಿಗಿನ ಅವರ ಸಾಹಿತ್ಯಿಕ ಸಂಬಂಧ ಮತ್ತಷ್ಟು ಗಾಢವಾಗುತ್ತದೆ.
ಅವರ ಕವಿತೆಗಳು ಧ್ವನಿಮುದ್ರಿಕೆಗಳಾಗಿ ಜನರನ್ನು ತಲುಪಿದವು; ನಾಟಕಗಳು ರಂಗದ ಮೇಲೆ ಪ್ರದರ್ಶನಗೊಳ್ಳುತ್ತವೆ ; ಕಥೆ-ಕಾದಂಬರಿಗಳು ಚಲನಚಿತ್ರಗಳಾಗುತ್ತವೆ. ಹೀಗೆ ಅವರ ಕೀರ್ತಿಯ ಕಿರೀಟಕ್ಕೆ ನಾನಾ ದಾರಿಗಳಿಂದ ಹೊಸ ಗರಿಗಳು ಸೇರುತ್ತ ಹೋಗುತ್ತವೆ. ಅಭಿಮಾನಿಗಳ ಬಳಗವೂ ವಿಸ್ತಾರಗೊಳ್ಳುತ್ತದೆ. ದೇಶ-ವಿದೇಶಗಳಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳಿಗೆ ಅವರು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾಗತೊಡಗುತ್ತಾರೆ. ಅಂತಹ ಸಂದರ್ಭಗಳಲ್ಲೆಲ್ಲ ತಮ್ಮ ಪ್ರೀತಿಯ ಮಡದಿ ಗಿರಿಜಾರನ್ನೂ ಜೊತೆಯಲ್ಲಿ ಕರೆದೊಯ್ಯುತ್ತಾರೆ. ತಮ್ಮ ಯಶಸ್ಸಿನ ಪಯಣದಲ್ಲಿ ಪತ್ನಿಯ ಸಂಗ ಮತ್ತು ಸಹಕಾರವನ್ನು ಅವರು ಎಷ್ಟು ಪ್ರೀತಿಯಿಂದ ಗೌರವಿಸುತ್ತಿದ್ದರು ಎಂಬುದಕ್ಕೂ ಇದು ಸಾಕ್ಷಿ.
ಮಕ್ಕಳಿಬ್ಬರೂ ಜೀವನದಲ್ಲಿ ಚೆನ್ನಾಗಿ ನೆಲೆನಿಂತು, ಮೊಮ್ಮಕ್ಕಳನ್ನೂ ಪಡೆದ ನಂತರ, ಯಾವ ದೊಡ್ಡ ಚಿಂತೆಯೂ ಇಲ್ಲದೆ ಪತ್ನಿ ಗಿರಿಜಾರೊಂದಿಗೆ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದೇನೆ ಎಂದು ಹೇಳಿಕೊಳ್ಳುವ ಬಿ. ಆರ್. ಎಲ್. ಅವರ ಸಾರ್ಥಕ ಜೀವನದ ಕಥೆ ಓದುಗರಲ್ಲಿಯೂ ಸಂತೃಪ್ತ ಭಾವವನ್ನು ಮೂಡಿಸುತ್ತದೆ.
ಒಟ್ಟಾರೆ ಕೃತಿಯನ್ನು ಅವಲೋಕಿಸಿದಾಗ, ಲೇಖಕರು ತಮ್ಮ ಸೋಲುಗಳಿಗಿಂತಲೂ ಗೆಲುವುಗಳು ತಂದ ಸಂತೋಷವನ್ನೇ ಹೆಚ್ಚಾಗಿ ಓದುಗರೊಂದಿಗೆ ಹಂಚಿಕೊಂಡಿರುವುದು ಗಮನಕ್ಕೆ ಬರುತ್ತದೆ. ಬದುಕಿನಲ್ಲಿ ಎದುರಾದ ನೋವು, ನಿರಾಶೆ, ಟೀಕೆ ಮತ್ತು ಅಡೆತಡೆಗಳನ್ನು ಅವರು ಮುಚ್ಚಿಡುವುದಿಲ್ಲ. ಆದರೆ ಅವುಗಳನ್ನೇ ಬದುಕಿನ ಅಂತಿಮ ಸತ್ಯವೆಂದು ಭಾವಿಸದೆ, ಅವುಗಳನ್ನು ದಾಟಿ ಮುನ್ನಡೆದ ಅನುಭವಗಳನ್ನೂ ಸಮಾನ ಪ್ರಾಮಾಣಿಕತೆಯಿಂದ ದಾಖಲಿಸುತ್ತಾರೆ. ಅಲ್ಪದಲ್ಲಿಯೇ ತೃಪ್ತಿಯನ್ನು ಕಂಡುಕೊಳ್ಳುವ ಮನೋಭಾವ, ಬದುಕನ್ನು ಪ್ರೀತಿಸುವ ಗುಣ, ಇತರರ ಭಾವನೆಗಳನ್ನು ಗೌರವಿಸುವ ವಿಶಾಲ ಹೃದಯ
ಮತ್ತು ಟೀಕೆಗಳಿಗೆ ಜಗ್ಗದೆ ತಮ್ಮ ದಾರಿಯಲ್ಲಿ ಮುನ್ನಡೆಯುವ ದೃಢತೆ—ಇವೆಲ್ಲವೂ ಅವರನ್ನು ನಿಜವಾದ ಅರ್ಥದಲ್ಲಿ ‘ಅದೃಷ್ಟವಂತ’ರನ್ನಾಗಿಸಿವೆ.
ಈ ಆತ್ಮಕಥನದ ಮಹತ್ವ ಇರುವುದು ಕೇವಲ ಒಬ್ಬ ಕವಿಯ ಯಶೋಗಾಥೆಯಲ್ಲ; ಬದುಕನ್ನು ಅದರ ಎಲ್ಲ ಏಳುಬೀಳುಗಳೊಂದಿಗೆ ಸ್ವೀಕರಿಸಿ, ಸಣ್ಣಪುಟ್ಟ ಸಂತೋಷಗಳಲ್ಲಿಯೂ ಸಾರ್ಥಕತೆಯನ್ನು ಕಂಡುಕೊಳ್ಳುವ ಮನೋಭಾವದಲ್ಲಿದೆ. ಅದೇ ಬಿ. ಆರ್. ಲಕ್ಷ್ಮಣರಾವ್ ಅವರ ಜೀವನಪ್ರೀತಿಯ ದ್ಯೋತಕವೂ ಹೌದು. ಓದುಗನ ಮನಸ್ಸಿನಲ್ಲಿ ನೆಮ್ಮದಿಯ, ಆತ್ಮೀಯತೆಯ ಮತ್ತು ಬದುಕಿನ ಬಗ್ಗೆ ಹೊಸ ಭರವಸೆಯ ಭಾವವನ್ನು ಮೂಡಿಸುವ ಈ ಕೃತಿ, ನಿಜಕ್ಕೂ ಒಂದು ಸಾರ್ಥಕ ಆತ್ಮಕಥನ.






0 Comments