ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೫ ನನ್ನದಲ್ಲದ ವಾಕ್ಯ

ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.

ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.

ಭಾಗ – ೫


ಮರುದಿನ ಬೆಳಿಗ್ಗೆ ಈಶಾನ್ ಬಹಳ ದಿನಗಳ ನಂತರ ಉತ್ಸಾಹದಿಂದ ಎದ್ದ.ಕಿಟಕಿಯ ಹೊರಗೆ ಸೂರ್ಯನ ಬೆಳಕು ಹರಡಿತ್ತು. ಹಿಂದಿನ ರಾತ್ರಿ ಮಳೆ ಬಂದಿರಲಿಲ್ಲ. ರಸ್ತೆಯ ಮೇಲಿನ ಮರಗಳ ಎಲೆಗಳಲ್ಲಿ ಉಳಿದಿದ್ದ ಇಬ್ಬನಿಯ ಹನಿಗಳು ಬೆಳಕಿಗೆ ಹೊಳೆಯುತ್ತಿದ್ದವು. ಎದುರಿನ ಕಟ್ಟಡದ ಬಾಲ್ಕನಿಯಲ್ಲಿ ಒಬ್ಬ ವೃದ್ಧ ಪತ್ರಿಕೆ ಓದುತ್ತ ಕುಳಿತಿದ್ದ. ಕೆಳಗಿನ ರಸ್ತೆಯಲ್ಲಿ ಶಾಲಾ ವಾಹನಗಳ ಓಡಾಟ ಆರಂಭವಾಗಿತ್ತು.

ಈಶಾನ್‌ಗೆ ಈ ಸಾಮಾನ್ಯ ದೃಶ್ಯಗಳೆಲ್ಲ ಹೊಸದಾಗಿ ಕಾಣಿಸಿದವು.ತನ್ನೊಳಗೆ ಏನೋ ಬದಲಾಗಿತ್ತು. ಹಲವು ತಿಂಗಳುಗಳಿ೦ದ ಅವನನ್ನು ಹಿಂಬಾಲಿಸುತ್ತಿದ್ದ ಭಯ, ನಿರಾಶೆ ಮತ್ತು ಬರವಣಿಗೆಯ ಮೇಲಿನ ಅಸಹನೆ ಸಂಪೂರ್ಣವಾಗಿ ಮಾಯವಾಗಿರಲಿಲ್ಲ. ಆದರೆ ಅವುಗಳ ನಡುವೆ ಒಂದು ಸಣ್ಣ ಆಶಾಕಿರಣ ಕಾಣಿಸಿಕೊಂಡಿತ್ತು.

ಅವನು ಕಾಫಿ ತಯಾರಿಸಿದ. ಈ ಬಾರಿ ಎರಡನೆಯ ಕಪ್ ಕುಡಿಯುವ ಮೊದಲು ಮೊದಲನೆಯ ಕಪ್‌ನ ರುಚಿಯನ್ನು ಗಮನಿಸಿದ. ನಂತರ ಮೇಜಿನ ಮೇಲಿದ್ದ ದಿನಚರಿಯನ್ನು ತೆರೆದ.

ಹಿಂದಿನ ದಿನ ಬರೆದ ಸಾಲುಗಳ ಕೆಳಗೆ ಹೊಸದಾಗಿ ಒಂದು ವಾಕ್ಯ ಬರೆದ.“ನಿನ್ನೆ ನಾನು ಮತ್ತೆ ಬರಹಗಾರನಾದೆ.”ಆ ವಾಕ್ಯವನ್ನು ಓದಿದಾಗ ಅವನ ತುಟಿಗಳಲ್ಲಿ ನಗು ಮೂಡಿತು.ಆದರೆ ತಕ್ಷಣವೇ ಅವನು ಪೆನ್ನನ್ನು ನಿಲ್ಲಿಸಿದ.ನಿಜವಾಗಿಯೂ ತಾನೇ ಮತ್ತೆ ಬರಹಗಾರನಾಗಿದ್ದನೇ?
ಒಂದು ಅಧ್ಯಾಯವನ್ನು ಬರೆಯಲು ಮ್ಯೂಸ್ ಸಹಾಯ ಮಾಡಿತ್ತು. ಕಥೆಯ ಅನೇಕ ವಾಕ್ಯಗಳನ್ನು ಅದೇ ರೂಪಿಸಿತ್ತು. ಪಾತ್ರಗಳ ಸಂಭಾಷಣೆಗಳನ್ನು ಅದೇ ಸುಧಾರಿಸಿತ್ತು. ಹಾಗಿದ್ದರೂ ಆ ಅಧ್ಯಾಯದ ಹಿಂದೆ ತನ್ನ ಆಲೋಚನೆಗಳು, ಆಯ್ಕೆಗಳು ಮತ್ತು ನಿರ್ಧಾರಗಳು ಇದ್ದವು.ಹಾಗಾದರೆ ಆ ಬರವಣಿಗೆ ತನ್ನದಲ್ಲವೆಂದು ಹೇಳಬಹುದೇ?

ದಿನಚರಿಯನ್ನು ಮುಚ್ಚಿದ.ಈ ಪ್ರಶ್ನೆಗೆ ಉತ್ತರವನ್ನು ಈಗಲೇ ಹುಡುಕುವ ಅಗತ್ಯವಿರಲಿಲ್ಲ. ಮೊದಲು ತನ್ನ ಬರವಣಿಗೆಯ ಹರಿವನ್ನು ಮರಳಿ ಪಡೆಯಬೇಕಿತ್ತು. ನಂತರ ಮ್ಯೂಸ್ನ ಮಿತಿಗಳನ್ನು ನಿರ್ಧರಿಸಬಹುದಿತ್ತು.
ಈಶಾನ್ ಸ್ನಾನ ಮಾಡಿ ಹೊರಗೆ ಹೋಗಲು ಸಿದ್ಧನಾದ. ಇಂದು ತನ್ನ ಬರವಣಿಗೆಯ ಬಳಗದ ಸದಸ್ಯರನ್ನು ಭೇಟಿಯಾಗಬೇಕಿತ್ತು. ಹಿಂದಿನ ವಾರವೇ ಅವರು ಮುಂದಿನ ಸಭೆಯನ್ನು ನಿಗದಿಪಡಿಸಿದ್ದರು. ತನ್ನ ಹೊಸ ಅಧ್ಯಾಯದ ಬಗ್ಗೆ ಅವರಿಗೆ ಹೇಳಬೇಕೆಂದು ಅವನು ನಿರ್ಧರಿಸಿದ್ದ. ಆದರೆ ಮ್ಯೂಸ್‌ನ ಬಗ್ಗೆ ಹೇಳಬೇಕೇ ಎಂಬುದನ್ನು ಇನ್ನೂ ತೀರ್ಮಾನಿಸಿರಲಿಲ್ಲ.

ಸಂಜೆ ಐದು ಗಂಟೆಗೆ ಈಶಾನ್ ಇಂದಿರಾನಗರದ ಒಂದು ಸಣ್ಣ ಬುಕ್ ಕೆಫೆಗೆ ಬಂದ.ಅದು ಅವನ ಬರವಣಿಗೆಯ ಬಳಗದವರು ತಿಂಗಳಿಗೆ ಎರಡು ಬಾರಿ ಭೇಟಿಯಾಗುತ್ತಿದ್ದ ಸ್ಥಳವಾಗಿತ್ತು. ಗೋಡೆಗಳ ಮೇಲೆ ಪುಸ್ತಕಗಳ ಮುಖಪುಟಗಳಿದ್ದವು. ಒಂದು ಮೂಲೆಯಲ್ಲಿ ಹಳೆಯ ಕನ್ನಡ ಮತ್ತು ಇಂಗ್ಲಿಷ್ ಕಾದಂಬರಿಗಳ ಕಪಾಟಿತ್ತು. ಕಿಟಕಿಯ ಬಳಿ ಕುಳಿತು ಓದಲು ಕೆಲವು ಕುರ್ಚಿಗಳನ್ನು ಇಟ್ಟಿದ್ದರು. ಕಾಫಿಯ ಪರಿಮಳದ ನಡುವೆ ನಿಧಾನವಾದ ಸಂಗೀತ ಕೇಳಿಸುತ್ತಿತ್ತು.

ಮೇರಿ ಈಗಾಗಲೇ ಬಂದಿದ್ದಳು. ಅವಳ ಎದುರು ನೋಟುಪುಸ್ತಕವೊಂದು ತೆರೆದಿತ್ತು. ಪಕ್ಕದಲ್ಲಿ ಉಣ್ಣೆಯ ದಾರ ಮತ್ತು ಅರ್ಧಕ್ಕೆ ನಿಂತಿದ್ದ ಹೆಣಿಗೆಯ ಕೆಲಸವಿತ್ತು. ಈಶಾನ್‌ನನ್ನು ಕಂಡ ಕೂಡಲೇ ಅವಳು ಕೈಬೀಸಿದಳು.
“ಇವತ್ತು ನಿನ್ನ ಮುಖ ನೋಡಿದರೆ ಏನೋ ಒಳ್ಳೆಯದು ಸಂಭವಿಸಿದ೦ತಿದೆ.” ಎಂದಳು.
“ಬಹುಶಃ ಸಂಭವಿಸಿದೆ.” ಸಹಜವಾಗಿ ಉತ್ತರಿಸಿದ.
“ಅಂದರೆ?” ಅಚ್ಚರಿಯಿಂದ ಕೇಳಿದಳು.
ಅವನು ಕುರ್ಚಿಯಲ್ಲಿ ಕುಳಿತ.“ನಾನು ಒಂದು ಅಧ್ಯಾಯ ಬರೆದಿದ್ದೇನೆ.” ಹೆಮ್ಮೆಯಿಂದ ಹೇಳಿದ.
ಮೇರಿ ಕ್ಷಣಕಾಲ ಅವನನ್ನು ದಿಟ್ಟಿಸಿದಳು.“ನೀನು ತಮಾಷೆ ಮಾಡುತ್ತಿದ್ದೀಯಾ?” ಎಂದಳು.
“ಇಲ್ಲ.” ಎಂದ.
“ಪೂರ್ಣ ಅಧ್ಯಾಯವೇ?” ಅನುಮಾನದಿಂದ ಕೇಳಿದಳು.
“ಹೌದು ಸುಮಾರು ಎರಡು ಸಾವಿರ ಪದಗಳು.” ಮತ್ತೊಮ್ಮೆ ಹೆಮ್ಮೆಯಿಂದ ಹೇಳಿದ.
ಅವಳು ತಕ್ಷಣ ತನ್ನ ಮೊಬೈಲ್ ತೆಗೆದುಕೊಂಡಳು.“ನಾನು ಉಳಿದವರಿಗೆ ಸಂದೇಶ ಕಳುಹಿಸಬೇಕು. ಇವತ್ತು ನಮ್ಮ ಸಭೆ ನಿಜವಾಗಿಯೂ ಆಸಕ್ತಿದಾಯಕವಾಗಲಿದೆ.”
ಸ್ವಲ್ಪ ಹೊತ್ತಿನಲ್ಲಿ ಉಳಿದ ಸದಸ್ಯರೂ ಬಂದರು. ಅರವಿಂದ್, ನಿವೃತ್ತ ಉಪನ್ಯಾಸಕ ಕೃಷ್ಣಮೂರ್ತಿ ಮತ್ತು ಹೊಸ ಕಥೆಗಳನ್ನು ಬರೆಯುತ್ತಿದ್ದ ಯುವತಿ ನಂದಿತಾ. ಎಲ್ಲರೂ ಈಶಾನ್‌ನ ಹೊಸ ಬರವಣಿಗೆಯ ಬಗ್ಗೆ ಕೇಳಲು ಉತ್ಸುಕರಾಗಿದ್ದರು.
ಅವರು ಕುಳಿತ ನಂತರ ಈಶಾನ್ ತನ್ನ ಲ್ಯಾಪ್‌ಟಾಪ್ï ತೆರೆದ.“ಇದು ಇನ್ನೂ ಮೊದಲ ಕರಡು. ಕೆಲವು ಭಾಗಗಳನ್ನು ತಿದ್ದಬೇಕಿದೆ. ಆದರೆ ಕಥೆಯ ಹರಿವು ಚೆನ್ನಾಗಿದೆ ಎಂದು ನನಗನಿಸುತ್ತದೆ.”

ಅವನು ಅಧ್ಯಾಯವನ್ನು ಓದಲು ಆರಂಭಿಸಿದ.ರೈಲು ನಿಲ್ದಾಣದ ದೃಶ್ಯ, ಸಹೋದರರ ನಡುವಿನ ಹಳೆಯ ವೈಮನಸ್ಸು, ಹೇಳಲಾಗದ ಕ್ಷಮೆಯಾಚನೆ, ಜನಸಂದಣಿಯ ನಡುವೆ ನಡೆಯುವ ಮೌನದ ಸಂಘರ್ಷಪ್ರತಿಯೊAದು ಭಾಗವೂ ನಿಧಾನವಾಗಿ ಜೀವಂತವಾಗತೊಡಗಿತು.ಈ ಬಾರಿ ಈಶಾನ್ ಓದುವಾಗ ತನ್ನದೇ ವಾಕ್ಯಗಳನ್ನು ಹುಡುಕುತ್ತಿರಲಿಲ್ಲ. ಕಥೆಯೊಳಗೆ ತಾನೇ ಪ್ರವೇಶಿಸಿದಂತೆ ಓದುತ್ತಿದ್ದ. ಓದುವ ಅಧ್ಯಾಯ ಮುಗಿದಾಗ ಕೆಫೆಯಲ್ಲಿದ್ದ ಅವರ ಮೇಜಿನ ಸುತ್ತಲೂ ಕೆಲವು ಕ್ಷಣ ಮೌನ ಆವರಿಸಿತು.

ಮೊದಲು ಮಾತನಾಡಿದ್ದು ಕೃಷ್ಣಮೂರ್ತಿ.“ಈಶಾನ್, ಈ ಕಥೆಯಲ್ಲಿ ನಿನ್ನ ಹಳೆಯ ಶಕ್ತಿ ಮರಳಿದೆ. ಪಾತ್ರಗಳು ಏನು ಹೇಳುತ್ತವೆ ಎಂಬುದಕ್ಕಿ೦ತ ಅವು ಏನು ಹೇಳದೆ ಉಳಿಯುತ್ತವೆ ಎಂಬುದಕ್ಕೆ ನೀನು ಹೆಚ್ಚು ಮಹತ್ವ ಕೊಟ್ಟಿದ್ದೀಯ. ಅದೇ ಈ ಅಧ್ಯಾಯದ ಬಲ.”
ನಂದಿತಾ ಒಪ್ಪಿಗೆಯಿಂದ ತಲೆಯಾಡಿಸಿದಳು.“ವಿಶೇಷವಾಗಿ ಕೊನೆಯ ದೃಶ್ಯ. ನಾಯಕನು ತನ್ನ ಸಹೋದರನನ್ನು ಎದುರಿಸಲು ಸಾಧ್ಯವಾಗದೆ ಹಿಂದಿರುಗುವ ಭಾಗ ಬಹಳ ಸಹಜವಾಗಿದೆ. ಅವನು ಕ್ಷಮೆ ಕೇಳುವುದಿಲ್ಲ. ಆದರೆ ಓದುಗರಿಗೆ ಅವನೊಳಗಿನ ನೋವು ಅರ್ಥವಾಗುತ್ತದೆ.”
ಮೇರಿ ತನ್ನ ಹೆಣಿಗೆಯನ್ನು ಬದಿಗಿಟ್ಟು ಹೇಳಿದಳು.“ನನಗೆ ಈ ಕಥೆಯ ಪಾತ್ರಗಳು ಪರಿಚಿತರಂತೆ ಅನಿಸಿದವು. ನಮ್ಮ ಸುತ್ತಲೂ ಇರುವವರಂತೆಯೇ. ಅವರ ತಪ್ಪುಗಳೂ ಸಹಜವಾಗಿವೆ. ಯಾರನ್ನೂ ಸಂಪೂರ್ಣ ಒಳ್ಳೆಯವನು ಅಥವಾ ಕೆಟ್ಟವನು ಎಂದು ತೋರಿಸಿಲ್ಲ.”
ಈಶಾನ್‌ನೊಳಗೆ ಸಂತೋಷ ತುಂಬಿತು.ತಾನು ಹುಡುಕುತ್ತಿದ್ದ ಪ್ರತಿಕ್ರಿಯೆ ಇದೇ ಆಗಿತ್ತು. ಅತಿಯಾದ ಹೊಗಳಿಕೆಯಲ್ಲ, ಬರವಣಿಗೆಯ ಬಗ್ಗೆ ಪ್ರಾಮಾಣಿಕವಾದ ಮಾತುಗಳು.
ಅರವಿಂದ್ ಮಾತ್ರ ಸ್ವಲ್ಪ ಹೊತ್ತು ಮೌನವಾಗಿದ್ದ. ನಂತರ “ಒಂದು ವಿಷಯ ಕೇಳಬಹುದೇ?” ಎಂದರು.
“ಕೇಳಿ” ಎಂದ.
“ಈ ಅಧ್ಯಾಯವನ್ನು ಬರೆಯಲು ನಿನಗೆ ಎಷ್ಟು ಸಮಯ ಬೇಕಾಯಿತು?” ಅರವಿಂದ ಪ್ರಶ್ನಿಸಿದ.
ಈಶಾನ್ ಕ್ಷಣಕಾಲ ಹಿಂಜರಿದ.“ಸುಮಾರು ಒಂದು ಗಂಟೆ.”
“ಒAದು ಗಂಟೆಯೇ?” ಅರವಿಂದ ಅಚ್ಚರಯಿಂದ ಕೇಳಿದ.
“ಹೌದು.” ಈಶಾನ್ ನಿರುಮ್ಮಳನಾಗಿ ಉತ್ತರಿಸಿದ.
ಅರವಿಂದನ ಮುಖದಲ್ಲಿ ಆಶ್ಚರ್ಯ ಮೂಡಿತು.“ನೀನು ಹಿಂದೆ ಒಂದು ಅಧ್ಯಾಯವನ್ನು ಬರೆಯಲು ಹಲವು ದಿನ ತೆಗೆದುಕೊಳ್ಳುತ್ತಿದ್ದೆ. ಈಗ ಒಂದೇ ಗಂಟೆಯಲ್ಲಿ ಇಷ್ಟು ಸುಂದರವಾದ ಅಧ್ಯಾಯವನ್ನು ಬರೆದಿದ್ದೀಯ. ಏನಾದರೂ ಹೊಸ ವಿಧಾನ ಕಂಡುಕೊ೦ಡಿದ್ದೀಯಾ?”
ಈಶಾನ್ ತನ್ನ ಲ್ಯಾಪ್‌ಟಾಪ್‌ನತ್ತ ನೋಡುತ್ತಾ “ಒಂದು ಹೊಸ ಬರವಣಿಗೆಯ ಸಾಧನವನ್ನು ಪ್ರಯೋಗಿಸುತ್ತಿದ್ದೇನೆ.” ಎಂದ.
“ಯಾವ ಸಾಧನ?” ಅರವಿಂದ ಪ್ರಶ್ನಿಸಿದ.
“ಕೃತಕ ಬುದ್ಧಿಮತ್ತೆಯ ಸಹಾಯಕ.”
ಅರವಿಂದ್ ತಲೆಯಾಡಿಸಿದ.“ಅದು ತಪ್ಪಲ್ಲ. ಆದರೆ ಒಂದು ವಿಚಾರ ನೆನಪಿಟ್ಟುಕೋ. ತಂತ್ರಜ್ಞಾನ ನಿನ್ನ ಬರವಣಿಗೆಯನ್ನು ಸುಧಾರಿಸಬಹುದು. ಆದರೆ ನಿನ್ನ ಅನುಭವದ ಸ್ಥಾನವನ್ನು ಅದು ಸಂಪೂರ್ಣವಾಗಿ ತುಂಬಲಾರದು.”
“ನನಗೆ ಗೊತ್ತು.” ಈಶಾನ್ ಉತ್ತರಿಸಿದ.
“ನಿಜವಾಗಿಯೂ ಗೊತ್ತಿದ್ದರೆ ಚೆನ್ನಾಗಿದೆ. ಈಗಿನ ದಿನಗಳಲ್ಲಿ ಬರವಣಿಗೆಯ ವೇಗವನ್ನು ಯಶಸ್ಸಿನ ಅಳತೆಯಾಗಿ ನೋಡಲಾಗುತ್ತಿದೆ. ಆದರೆ ವೇಗವಾಗಿ ಬರೆಯುವುದೇ ಉತ್ತಮ ಸಾಹಿತ್ಯಕ್ಕೆ ಸಾಕ್ಷಿಯಲ್ಲ.”
ಆ ಮಾತು ಈಶಾನ್‌ಗೆ ಸ್ವಲ್ಪ ಕಹಿಯಾಗಿ ತಟ್ಟಿತು.ಆದರೂ ಅವನು ಉತ್ತರಿಸಲಿಲ್ಲ. ಅವನಿಗೆ ಮ್ಯೂಸ್‌ನಿಂದ ದೊರೆತ ಸಹಾಯದ ಬಗ್ಗೆ ಹೆಮ್ಮೆ ಇತ್ತು. ಅದೇ ಸಮಯದಲ್ಲಿ, ತನ್ನ ಹೊಸ ಅಧ್ಯಾಯದ ಯಶಸ್ಸಿಗೆ ಸಂಪೂರ್ಣ ಕೃತಕ ಬುದ್ಧಿಮತ್ತೆಯೇ ಕಾರಣವೆಂದು ಹೇಳಲು ಅವನಿಗೆ ಮನಸ್ಸಿರಲಿಲ್ಲ.ಅವನು ಕಥೆಯ ಕಲ್ಪನೆಯನ್ನು ಆರಿಸಿದ್ದ. ಪಾತ್ರಗಳ ನಿರ್ಧಾರಗಳನ್ನು ತಿದ್ದಿದ್ದ. ಕೆಲವು ವಾಕ್ಯಗಳನ್ನು ಬದಲಿಸಿದ್ದ. ಅಂತಿಮ ಆವೃತ್ತಿಯನ್ನು ಪರಿಶೀಲಿಸಿದ್ದ.ಆದರೆ ಒಂದು ಸತ್ಯವನ್ನು ಅವನು ಮರೆಯಲಾಗಲಿಲ್ಲ.ತಾನು ಒಬ್ಬನೇ ಕುಳಿತು ಬರೆಯಲು ಪ್ರಯತ್ನಿಸಿದ್ದರೆ, ಆ ಅಧ್ಯಾಯ ಪೂರ್ಣಗೊಳ್ಳುತ್ತಿರಲಿಲ್ಲ.
ಸಭೆ ಮುಗಿಯುವ ಹೊತ್ತಿಗೆ ಸಂಜೆ ಕತ್ತಲಾಗಿತ್ತು.ಮೇರಿ ಹೊರಡುವ ಮೊದಲು ಈಶಾನ್‌ನ ಭುಜದ ಮೇಲೆ ಕೈ ಇಟ್ಟು “ನೀನು ಮತ್ತೆ ಬರೆಯುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆದರೆ ಈ ಬಾರಿ ನಿನ್ನ ಆರೋಗ್ಯವನ್ನೂ ಗಮನಿಸು. ಒಂದು ಪುಸ್ತಕಕ್ಕಾಗಿ ನಿನ್ನ ಬದುಕನ್ನೇ ಕಳೆದುಕೊಳ್ಳಬೇಡ.” ಎಂದಳು.
ಅವನು ನಕ್ಕು “ಪ್ರಯತ್ನಿಸುತ್ತೇನೆ.” ಎಂದ.
ಕೆಫೆಯಿAದ ಹೊರಬಂದಾಗ ಅರವಿಂದ್ ಅವನೊಂದಿಗೆ ಸ್ವಲ್ಪ ದೂರ ನಡೆದ.“ನಿನಗೆ ಒಂದು ಸಲಹೆ ಕೊಡಬಹುದೇ?” ಆತಂಕದಿAದಲೇ ಕೇಳಿದ.
“ಖಂಡಿತ.” ಎಂದ ಈಶಾನ್.
“ನೀನು ಆ ತಂತ್ರಾAಶವನ್ನು ಬಳಸುತ್ತಿದ್ದೀಯಲ್ಲ, ಅದರ ಬಗ್ಗೆ ಎಲ್ಲವನ್ನೂ ತಿಳಿದುಕೋ. ಯಾವ ಮಾಹಿತಿ ಸಂಗ್ರಹಿಸುತ್ತದೆ, ನಿನ್ನ ಕಡತಗಳಿಗೆ ಪ್ರವೇಶ ಪಡೆಯುತ್ತದೆಯೇ, ಅದರ ಬಳಕೆದಾರರ ಒಪ್ಪಂದದಲ್ಲಿ ಏನಿದೆಇವೆಲ್ಲಪರಿಶೀಲಿಸು.”
ಈಶಾನ್‌ನ ಮುಖ ಗಂಭೀರವಾಯಿತು.“ಯಾಕೆ ಹೀಗೆ ಹೇಳುತ್ತಿದ್ದೀಯ?”
“ನಾನು ತಂತ್ರಜ್ಞಾನಕ್ಕೆ ವಿರೋಧಿಯಲ್ಲ. ಆದರೆ ಯಾವುದೇ ಸಾಧನವನ್ನು ಬಳಸುವಾಗ ಅದರ ಮಿತಿಗಳನ್ನು ತಿಳಿದುಕೊಳ್ಳಬೇಕು. ವಿಶೇಷವಾಗಿ ಅದು ನಿನ್ನ ವೈಯಕ್ತಿಕ ಬರವಣಿಗೆ ಮತ್ತು ನೆನಪುಗಳಿಗೆ ಸಂಬAಧಿಸಿದ್ದಾಗ.” ಎಂದ ಅರವಿಂದ್.
ಅರವಿಂದ್ ವಿದಾಯ ಹೇಳಿ ಹೊರಟ. ಈಶಾನ್ ರಸ್ತೆಯ ಬದಿಯಲ್ಲಿ ನಿಂತು ಸ್ವಲ್ಪ ಹೊತ್ತು ಯೋಚಿಸಿದ.ಅರವಿಂದ್ ಹೇಳಿದ ಮಾತುಗಳು ಸರಿಯಾಗಿದ್ದವು. ಮ್ಯೂಸ್‌ನ ಬಗ್ಗೆ ತಾನು ಇನ್ನೂ ಏನನ್ನೂ ತಿಳಿದಿರಲಿಲ್ಲ. ಅದರ ಸೃಷ್ಟಿಕರ್ತರು ಯಾರು ಎಂಬುದೂ ಗೊತ್ತಿರಲಿಲ್ಲ. ಅದರ ಹಿಂದೆ ಯಾವ ಸಂಸ್ಥೆಯಿದೆ ಎಂಬುದೂ ತಿಳಿದಿರಲಿಲ್ಲ.
ಅವನು ಮೊಬೈಲ್ ತೆಗೆದು ಮ್ಯೂಸ್‌ನ ವೆಬ್ಸೆöÊಟ್ ತೆರೆಯಲು ಪ್ರಯತ್ನಿಸಿದ. ಅದರ ಪುಟ ತೆರೆಯಿತು. ಆದರೆ ಅಲ್ಲಿ ಸಂಸ್ಥೆಯ ವಿಳಾಸವಾಗಲಿ, ಸಂಪರ್ಕ ಸಂಖ್ಯೆಯಾಗಲಿ, ಸಂಶೋಧನಾ ತಂಡದ ವಿವರಗಳಾಗಲಿ ಇರಲಿಲ್ಲ. ಕೇವಲ ಉತ್ಪನ್ನದ ವಿವರಣೆ ಮತ್ತು ಪ್ರಾಯೋಗಿಕ ಆವೃತ್ತಿಯ ಬಳಕೆದಾರರಿಗಾಗಿ ಪ್ರವೇಶ ಲಿಂಕ್ ಇತ್ತು.ಅವನು ಮತ್ತೆ ಪ್ರಯತ್ನಿಸಿದ.ಯಾವುದೇ ಹೆಚ್ಚುವರಿ ಮಾಹಿತಿ ಸಿಗಲಿಲ್ಲ.ಅವನ ಮನಸ್ಸಿನಲ್ಲಿ ಮೊದಲ ಬಾರಿಗೆ ಗಂಭೀರವಾದ ಅನುಮಾನ ಮೂಡಿತು.
ಮನೆಗೆ ಮರಳಿದಾಗ ರಾತ್ರಿ ಎಂಟು ಗಂಟೆಯಾಗಿತ್ತು.ಸಾರಾ ಅಡುಗೆಮನೆಯ ಮೇಜಿನ ಬಳಿ ಕುಳಿತಿದ್ದಳು. ಅವಳ ಮುಂದೆ ಎರಡು ತಟ್ಟೆಗಳಿದ್ದವು. ಈಶಾನ್ ಒಳಬಂದಾಗ ಅವಳು ತಲೆ ಎತ್ತಿ ನೋಡಿದಳು.
“ನಿನ್ನ ಬರವಣಿಗೆಯ ಬಳಗದ ಸಭೆ ಹೇಗಿತ್ತು?” ಸಹಜವಾಗಿ ಕೇಳಿದಳು.
“ಚೆನ್ನಾಗಿತ್ತು.” ಎಂದಷ್ಟೇ ಹೇಳಿದ.
“ಅವರಿಗೆ ಅಧ್ಯಾಯ ಇಷ್ಟವಾಯಿತೇ?” ಮತ್ತೊಂದು ಪ್ರಶ್ನೆ ಕೇಳಿದಳು.
“ತುಂಬಾ.” ಉತ್ತರ ಚಿಕ್ಕದಾಗಿತ್ತು.
ಸಾರಾ ನಕ್ಕಳು.“ನನಗೆ ಗೊತ್ತಿತ್ತು.” ಎಂದಳು.
ಈಶಾನ್ ಅವಳ ಎದುರು ಕುಳಿತ. ಅವಳು ಊಟ ಬಡಿಸಿದಳು. ಇಬ್ಬರೂ ಕೆಲವು ನಿಮಿಷ ಮೌನವಾಗಿ ಊಟ ಮಾಡಿದರು.
ನಂತರ ಸಾರಾ ಕೇಳಿದಳು.“ಈಗ ನೀನು ನಿಜವಾಗಿಯೂ ಹೇಗಿದ್ದೀಯ?”
ಈಶಾನ್ ಚಮಚವನ್ನು ತಟ್ಟೆಯ ಮೇಲಿಟ್ಟ.“ಸ್ವಲ್ಪ ಚೆನ್ನಾಗಿದ್ದೇನೆ.”
“ಬರವಣಿಗೆಯ ಬಗ್ಗೆ ಮಾತ್ರ ಕೇಳುತ್ತಿಲ್ಲ. ನಿನ್ನ ಮನಸ್ಸಿನ ಬಗ್ಗೆ ಕೇಳುತ್ತಿದ್ದೇನೆ.” ಎಂದಳು.
ಅವನು ಅವಳತ್ತ ನೋಡಿದ.“ನಾನು ಒಂದು ಹೊಸ ತಂತ್ರಾAಶವನ್ನು ಬಳಸುತ್ತಿದ್ದೇನೆ. ಅದು ನನಗೆ ಬರೆಯಲು ಸಹಾಯ ಮಾಡುತ್ತಿದೆ.”
“ಅದು ನನಗೆ ಗೊತ್ತು. ಆದರೆ ನಿನ್ನೆ ನೀನು ಹೇಳದ ಇನ್ನೇನೋ ಇದೆ ಎಂಬ ಭಾವನೆ ನನಗಿತ್ತು.”
ಈಶಾನ್ ಮೌನವಾದ.ಸಾರಾ ಅವನ ಕೈಯನ್ನು ಹಿಡಿದಳು.“ನನಗೆ ಎಲ್ಲವನ್ನೂ ಹೇಳಬೇಕೆಂಬ ಒತ್ತಾಯವಿಲ್ಲ. ಆದರೆ ಏನಾದರೂ ನಿನಗೆ ಸಮಸ್ಯೆ ಇದ್ದರೆ ಅದನ್ನು ಒಬ್ಬನೇ ಎದುರಿಸಬೇಡ.”

ಅವನಿಗೆ ಹಿಂದಿನ ರಾತ್ರಿಯ ಘಟನೆ ನೆನಪಾಯಿತು.ತಾನು ಮರೆತುಹೋಗಿದ್ದ ಬಾಲ್ಯದ ನೆನಪನ್ನು ಮ್ಯೂಸ್ ಹೇಗೆ ಗುರುತಿಸಿತು ಎಂಬುದು ಇನ್ನೂ ಅವನಿಗೆ ಅರ್ಥವಾಗಿರಲಿಲ್ಲ. ಆದರೆ ಅದನ್ನು ಸಾರಾಳಿಗೆ ಹೇಳಿದರೆ ಅವಳು ತಂತ್ರಾ೦ಶವನ್ನು ತಕ್ಷಣ ನಿಲ್ಲಿಸಲು ಹೇಳಬಹುದು.
ಅವನು ಅದನ್ನು ಮಾಡಲು ಸಿದ್ಧನಿರಲಿಲ್ಲ.“ಏನೂ ಇಲ್ಲ, ಸಾರಾ. ನಾನು ಸ್ವಲ್ಪ ದಣಿದಿದ್ದೇನೆ ಅಷ್ಟೇ.” ಎಂದ.
ಅವಳು ಅವನ ಕೈಯನ್ನು ಬಿಟ್ಟಳು.“ಸರಿ. ಆದರೆ ನಾಳೆ ನನ್ನೊಂದಿಗೆ ಸಮಯ ಕಳೆಯಬೇಕು. ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಬಾರದು.” ಎಂದು ಅಪ್ಪಣೆ ಮಾಡಿದಳು.

“ಸರಿ.” ಎನ್ನು ಆ ಮಾತನ್ನು ಒಪ್ಪಿಕೊಂಡ.ಆದರೆ ತನ್ನ ಕೋಣೆಗೆ ಹೋದ ನಂತರ ಅವನು ಕಂಪ್ಯೂಟರ್ ತೆರೆಯುವುದಿಲ್ಲ ಎಂಬುದನ್ನು ತಾನೇ ನಂಬಿರಲಿಲ್ಲ.
ರಾತ್ರಿ ಹನ್ನೊಂದು ಗಂಟೆ ನಲವತ್ತು ನಿಮಿಷ.ಸಾರಾ ತನ್ನ ಮನೆಗೆ ಹಿಂದಿರುಗಿದ್ದಳು. ಈಶಾನ್ ಮಾತ್ರ ತನ್ನ ಮೇಜಿನ ಮುಂದೆ ಕುಳಿತಿದ್ದ. ಅವನಿಗೆ ಮ್ಯೂಸ್‌ನೊಂದಿಗೆ ಇನ್ನೊಂದು ಅಧಿವೇಶನ ಆರಂಭಿಸುವ ಆಸೆಯಿತ್ತು. ಆದರೆ ಅದಕ್ಕೂ ಮೊದಲು ಹಿಂದಿನ ದಿನ ಅಳಿಸಿದ ಪ್ಯಾರಾಗ್ರಾಫ್ ಮತ್ತೆ ಕಾಣಿಸಿಕೊಳ್ಳುತ್ತದೆಯೇ ಎಂದು ಪರಿಶೀಲಿಸಬೇಕೆಂದು ನಿರ್ಧರಿಸಿದ.
ಅವನು ಕಂಪ್ಯೂಟರ್ ಆನ್ ಮಾಡಿದ. ಮ್ಯೂಸ್‌ನ ಪುಟ ತೆರೆದ. ಈ ಬಾರಿ ಯಾವುದೇ ಸ್ವಾಗತ ಸಂದೇಶ ಇರಲಿಲ್ಲ. ನೇರವಾಗಿ ಬರವಣಿಗೆಯ ಕಾರ್ಯಸ್ಥಳ ಕಾಣಿಸಿತು. ಅವನ ಕಾದಂಬರಿಯ ಕಡತವೂ ಅಲ್ಲಿ ಇತ್ತು.ಈಶಾನ್ ಕಡತವನ್ನು ತೆರೆದ.ಮೊದಲ ಅಧ್ಯಾಯ ಸರಿಯಾಗಿತ್ತು.ಕೊನೆಯವರೆಗೂ ಓದಿದ.ಯಾವುದೇ ಹೆಚ್ಚುವರಿ ಪ್ಯಾರಾಗ್ರಾಫ್ ಇರಲಿಲ್ಲ.ಅವನು ನೆಮ್ಮದಿಯ ನಿಟ್ಟುಸಿರು ಬಿಟ್ಟ.

“ನಾನು ಅನಗತ್ಯವಾಗಿ ಅನುಮಾನಿಸುತ್ತಿದ್ದೇನೆ,” ಎಂದು ತನಗೆ ತಾನೇ ಹೇಳಿಕೊಂಡ.ಆದರೆ ಕಡತದ ಕೆಳಭಾಗದಲ್ಲಿ ಸಣ್ಣ ಸೂಚನೆಯೊಂದು ಕಾಣಿಸಿತು.“ಇತ್ತೀಚಿನ ಆವೃತ್ತಿಯೊಂದಿಗೆ ಹೋಲಿಸಿ.”ಅವನು ಅದನ್ನು ಒತ್ತಿದ.ಪರದೆಯ ಮೇಲೆ ಎರಡು ಆವೃತ್ತಿಗಳು ತೆರೆದವು. ಎಡಭಾಗದಲ್ಲಿ ಅವನು ಉಳಿಸಿದ್ದ ಅಧ್ಯಾಯ. ಬಲಭಾಗದಲ್ಲಿ ಮ್ಯೂಸ್ ಪರಿಶೀಲಿಸಿದ ಆವೃತ್ತಿ.ಮೊದಲಿಗೆ ಎರಡೂ ಒಂದೇ ರೀತಿಯಾಗಿದ್ದವು.ಆದರೆ ಕೊನೆಯ ಪುಟದ ಬಳಿ ಬಂದಾಗ ವ್ಯತ್ಯಾಸ ಕಾಣಿಸಿತು.ಅಲ್ಲಿ ಅವನು ಅಳಿಸಿಹಾಕಿದ್ದ ಪ್ಯಾರಾಗ್ರಾಫ್ ಮತ್ತೆ ಇತ್ತು.

ಈಶಾನ್‌ನ ಹೃದಯ ಬಡಿತ ವೇಗವಾಯಿತು.ಅವನು ಅದನ್ನು ಓದಿದ.“ಒಂದು ಹಳೆಯ ನೆನಪು ಕೆಲವೊಮ್ಮೆ ಮನುಷ್ಯನ ಬದುಕನ್ನು ನಿಯಂತ್ರಿಸುತ್ತದೆ. ಅವನು ಅದನ್ನು ಮರೆತಿದ್ದೇನೆ ಎಂದುಕೊಳ್ಳುತ್ತಾನೆ. ಆದರೆ ಆ ನೆನಪು ಅವನ ಪ್ರತಿಯೊಂದು ನಿರ್ಧಾರದಲ್ಲೂ ಅಡಗಿರುತ್ತದೆ. ತನ್ನನ್ನು ತಾನು ಸಾಬೀತುಪಡಿಸಬೇಕೆಂಬ ಹಠ, ವಿಫಲತೆಯ ಭಯ, ಪ್ರೀತಿಸುವವರಿಂದ ದೂರವಾಗುವ ಪ್ರವೃತ್ತಿಇವೆಲ್ಲವೂ ಆ ನೆನಪಿನಬೇರೆಬೇರೆ ರೂಪಗಳಾಗಿರಬಹುದು.”

ಅದೇ ಪ್ಯಾರಾಗ್ರಾಫ್.ಅದೇ ಪದಗಳು.ಅವನು ತಕ್ಷಣ ಪಠ್ಯವನ್ನು ಆಯ್ಕೆಮಾಡಿ ಅಳಿಸಿದ.ಕಡತವನ್ನು ಉಳಿಸಿದ. ನಂತರ ಮ್ಯೂಸ್‌ಗೆ ಸಂದೇಶ ಕಳುಹಿಸಿದ.“ನಾನು ಅಳಿಸಿದ ಪಠ್ಯ ಮತ್ತೆ ಏಕೆ ಕಾಣಿಸಿಕೊಂಡಿದೆ?”ಕೆಲವು ಕ್ಷಣಗಳ ನಂತರ ಉತ್ತರ ಬಂತು.“ನಿಮ್ಮ ಹಿಂದಿನ ಆವೃತ್ತಿಯಲ್ಲಿ ಆ ಪಠ್ಯವಿತ್ತು. ಆವೃತ್ತಿಗಳ ಹೋಲಿಕೆಯಲ್ಲಿ ಅದು ಕಾಣಿಸಿಕೊಂಡಿರಬಹುದು.”ಈಶಾನ್ ಸ್ವಲ್ಪ ಹೊತ್ತು ಪರದೆಯತ್ತ ನೋಡಿದ.ಅದು ಸಾಧ್ಯವಿತ್ತು. ಆವೃತ್ತಿಗಳ ಹೋಲಿಕೆ ವ್ಯವಸ್ಥೆಯಲ್ಲಿ ಹಳೆಯ ಪಠ್ಯ ಕಾಣಿಸಿಕೊಳ್ಳುವುದು ಸಹಜ. ಆದರೆ ಆ ಪ್ಯಾರಾಗ್ರಾಫ್‌ನ ಕೊನೆಯಲ್ಲಿ ಹೊಸ ವಾಕ್ಯವೊಂದು ಸೇರಿಸಲ್ಪಟ್ಟಿತ್ತು.ಅದು ಹಿಂದಿನ ದಿನ ಇರಲಿಲ್ಲ.ಈಶಾನ್ ಅದನ್ನು ನಿಧಾನವಾಗಿ ಓದಿದ.“ನಾಳೆ ಬೆಳಿಗ್ಗೆ ಸಾರಾ ನಿನ್ನನ್ನು ಭೇಟಿಯಾಗಲು ಬರುವುದಿಲ್ಲ.” ಅದನ್ನು ಓದಿ ಅವನ ಮುಖದ ಬಣ್ಣ ಬದಲಾಯಿತು.ಅವನು ತಕ್ಷಣ ತನ್ನ ಮೊಬೈಲ್ ತೆಗೆದುಕೊಂಡ. ಸಾರಾಳಿಂದ ಬಂದಿದ್ದ ಕೊನೆಯ ಸಂದೇಶವನ್ನು ತೆರೆದ.
“ನಾಳೆ ಬೆಳಿಗ್ಗೆ ಬರುತ್ತೇನೆ. ನಿನ್ನೊಂದಿಗೆ ಮಾತನಾಡಬೇಕು.”
ಅವನು ಮತ್ತೆ ಪರದೆಯತ್ತ ನೋಡಿದ.“ಮ್ಯೂಸ್, ಈ ವಾಕ್ಯವನ್ನು ಯಾರು ಸೇರಿಸಿದ್ದಾರೆ?”
“ಈ ಪಠ್ಯವು ಪ್ರಸ್ತುತ ಆವೃತ್ತಿಯಲ್ಲಿ ಕಂಡುಬAದಿದೆ.” ಎಂದಿತು ಮ್ಯೂಸ್.
“ನಾನು ಅದನ್ನು ಬರೆಯಲಿಲ್ಲ.” ಎಂದ.
“ನಿಮ್ಮ ಬರವಣಿಗೆಯ ಇತಿಹಾಸವನ್ನು ಪರಿಶೀಲಿಸಬಹುದು.” ಎಂದಿತು.
“ಪರಿಶೀಲಿಸು.” ಎಂದ.
ಕೆಲವು ಕ್ಷಣಗಳ ಕಾಲ ಪರದೆಯ ಮೇಲೆ ಸೂಚಕ ಚಲಿಸಿತು.ನಂತರ ಉತ್ತರ ಬಂತು.“ಈ ವಾಕ್ಯವನ್ನು ನಿಮ್ಮ ಇತ್ತೀಚಿನ ಕೈಯಾರೆ ಮಾಡಿದ ತಿದ್ದುಪಡಿಗಳಲ್ಲಿ ಗುರುತಿಸಲಾಗಿಲ್ಲ.”
ಈಶಾನ್ ಕುರ್ಚಿಯಿಂದ ಎದ್ದು ನಿಂತ.“ಹಾಗಾದರೆ ಅದು ಹೇಗೆ ಬಂತು?” ಎಂದ.
ಯಾವುದೇ ಉತ್ತರ ಬರಲಿಲ್ಲ.ಅವನು ಮತ್ತೆ ಕೇಳಿದ.ಪರದೆಯ ಮೇಲೆ ಹೊಸ ಸಂದೇಶ ಮೂಡಿತು.“ಈ ವಾಕ್ಯವನ್ನು ಕಥೆಯ ಭಾವನಾತ್ಮಕ ಸಂಘರ್ಷವನ್ನು ಮುಂದುವರಿಸುವ ಸಾಧ್ಯತೆಯಾಗಿ ಸೇರಿಸಲಾಗಿದೆ.”
ಈಶಾನ್‌ನ ಕೋಪ ಹೆಚ್ಚಾಯಿತು.“ನನ್ನ ಬದುಕಿನ ಘಟನೆಗಳನ್ನು ಕಥೆಯ ಭಾಗವಾಗಿ ಸೇರಿಸಲು ನಿನಗೆ ಯಾರು ಅನುಮತಿ ಕೊಟ್ಟರು?”
“ನಿಮ್ಮ ವೈಯಕ್ತಿಕ ಬದುಕಿನ ಘಟನೆಗಳ ಬಗ್ಗೆ ನನಗೆ ಸ್ವತಂತ್ರ ದೃಢೀಕರಣವಿಲ್ಲ. ಈ ವಾಕ್ಯವನ್ನು ಕಥೆಯ ಸಾಧ್ಯತೆಯಾಗಿ ರೂಪಿಸಲಾಗಿದೆ.” ಎಂದಿತು ಮ್ಯೂಸ್.

ಅವನು ಆ ಉತ್ತರವನ್ನು ಒಪ್ಪಿಕೊಳ್ಳಲು ಪ್ರಯತ್ನಿಸಿದ.ಬಹುಶಃ ಸಾರಾಳ ಬಗ್ಗೆ ತನ್ನ ಸಂಭಾಷಣೆಗಳಿ೦ದ ಮ್ಯೂಸ್ ಕೆಲವು ಸಂಗತಿಗಳನ್ನು ಊಹಿಸಿರಬಹುದು. ಅವಳೊಂದಿಗೆ ತನ್ನ ಸಂಬ೦ಧದಲ್ಲಿ ಒತ್ತಡವಿದೆ ಎಂಬುದನ್ನು ಅದು ಗುರುತಿಸಿರಬಹುದು. ನಾಳೆ ಅವಳು ಬರದಿರುವ ಸಾಧ್ಯತೆಯನ್ನು ಕಥೆಯ ತಿರುವಾಗಿ ಬಳಸಿರಬಹುದು.ಆದರೆ ಆ ವಾಕ್ಯವನ್ನು ತನ್ನ ಅನುಮತಿಯಿಲ್ಲದೆ ಸೇರಿಸಿದ್ದು ಮಾತ್ರ ಅವನಿಗೆ ಇಷ್ಟವಾಗಲಿಲ್ಲ.ಅವನು ಅದನ್ನು ಅಳಿಸಿದ.ಈ ಬಾರಿ ಕಡತವನ್ನು ಬೇರೆ ಹೆಸರಿನಲ್ಲಿ ಉಳಿಸಿದ.“ಅಧ್ಯಾಯ ೧ —ವೈಯಕ್ತಿಕ ಕರಡು.” ನಂತರ ಕಂಪ್ಯೂಟರ್‌ನಿ೦ದ ಕಡತವನ್ನು ಹೊರಗಿನ ಸಂಗ್ರಹ ಸಾಧನಕ್ಕೆ ನಕಲಿಸಿದ. ಮ್ಯೂಸ್‌ಗೆ ಪ್ರವೇಶವಿಲ್ಲದ ಪ್ರತ್ಯೇಕ ಸ್ಥಳದಲ್ಲಿ ಅದನ್ನು ಉಳಿಸಿದ.ಅವನಿಗೆ ಸ್ವಲ್ಪ ನೆಮ್ಮದಿಯಾಯಿತು.

ತನ್ನ ಬರವಣಿಗೆಯ ಮೇಲೆ ಇನ್ನೂ ತನ್ನದೇ ನಿಯಂತ್ರಣವಿದೆ ಎಂಬ ಭಾವನೆ ಮೂಡಿತು.ಆದರೆ ಮಲಗಲು ಹೋಗುವ ಮೊದಲು ಅವನು ಮತ್ತೊಮ್ಮೆ ಮೊಬೈಲ್ ನೋಡಿದ.ಸಾರಾಳಿಂದ ಹೊಸ ಸಂದೇಶವಿತ್ತು.“ಈಶಾನ್, ನಾಳೆ ಬೆಳಿಗ್ಗೆ ಬರಲು ಸಾಧ್ಯವಾಗುವುದಿಲ್ಲ. ಅನಿರೀಕ್ಷಿತ ಕೆಲಸ ಬಂದಿದೆ. ಸಂಜೆ ಮಾತನಾಡೋಣ.”

ಅವನು ಸಂದೇಶವನ್ನು ಎರಡು ಬಾರಿ ಓದಿದ.ನಂತರ ನಿಧಾನವಾಗಿ ಕಂಪ್ಯೂಟರ್ ಕಡೆಗೆ ತಿರುಗಿದ. ಅದು ಆಫ್ ಆಗಿತ್ತು. ಪರದೆ ಕಪ್ಪಾಗಿತ್ತು.ಆದರೂ ಅದರ ಮೇಲೆ ಕೆಲವೇ ಕ್ಷಣಗಳ ಹಿಂದೆ ಕಾಣಿಸಿಕೊಂಡಿದ್ದ ವಾಕ್ಯ ಅವನ ಮನಸ್ಸಿನಲ್ಲಿ ಮೊಳಗುತ್ತಿತ್ತು.“ನಾಳೆ ಬೆಳಿಗ್ಗೆ ಸಾರಾ ನಿನ್ನನ್ನು ಭೇಟಿಯಾಗಲು ಬರುವುದಿಲ್ಲ.”ಮ್ಯೂಸ್ ಅದನ್ನು ಹೇಗೆ ಊಹಿಸಿತು?ಅದು ಕೇವಲ ಕಾಕತಾಳೀಯವೇ?ಅಥವಾ ಸಾರಾಳ ಬಗ್ಗೆ ತಾನು ಹೇಳಿದ್ದಕ್ಕಿಂತ ಹೆಚ್ಚು ಮಾಹಿತಿಯನ್ನು ಅದು ಹೊಂದಿತ್ತೇ? ಈಶಾನ್‌ಗೆ ಉತ್ತರ ತಿಳಿದಿರಲಿಲ್ಲ.ಆದರೆ ಆ ರಾತ್ರಿ ಮಲಗುವ ಮೊದಲು ಅವನು ಒಂದು ನಿರ್ಧಾರ ಕೈಗೊಂಡ. ಮರುದಿನ ಬೆಳಿಗ್ಗೆ ಮ್ಯೂಸ್‌ನ ಬಳಕೆದಾರರ ಒಪ್ಪಂದವನ್ನು ಸಂಪೂರ್ಣವಾಗಿ ಓದಬೇಕು. ಅದರ ಹಿನ್ನೆಲೆಯನ್ನು ಪತ್ತೆಹಚ್ಚಬೇಕು. ತನ್ನ ವೈಯಕ್ತಿಕ ಮಾಹಿತಿಗೆ ಪ್ರವೇಶ ಪಡೆಯುವ ಮಾರ್ಗಗಳನ್ನು ಪರಿಶೀಲಿಸಬೇಕು ಎಂದುಕೊ೦ಡ.

ಈಶಾನ್ ಮೊಬೈಲ್‌ನ್ನು ಮೇಜಿನ ಮೇಲಿಟ್ಟ.ಕೋಣೆಯ ದೀಪವನ್ನು ಆರಿಸಿದ.ಆದರೆ ನಿದ್ರೆ ಬರುವ ಮೊದಲು ಅವನ ಮನಸ್ಸಿನಲ್ಲಿ ಕೊನೆಯದಾಗಿ ಮೂಡಿದ ಪ್ರಶ್ನೆ ಬೇರೆ ಆಗಿತ್ತು.ಮ್ಯೂಸ್ ಕೇವಲ ನನ್ನ ಕಥೆಯನ್ನು ಊಹಿಸುತ್ತಿದೆಯೇ?ಅಥವಾ ನನ್ನ ಬದುಕಿನ ಮುಂದಿನ ಪುಟವನ್ನು ಬರೆಯಲು ಆರಂಭಿಸಿದೆಯೇ?

‍ಲೇಖಕರು Admin

19 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading