-ಸಂಕೇತ್ ಗುರುದತ್
ನಾಡಿನ ನಾಟಕ ರಚನೆಕಾರ, ನಾಟಕ ನಿರ್ದೇಶಕರಾದ ಎನ್ ಸಿ ಮಹೇಶ್ ಅವರೀಗ ಹೊಸ ರಂಗ ಪ್ರಯೋಗಕ್ಕೆ ಅಣಿಯಾಗಿದ್ದಾರೆ.
ನಾಡಿನ ಸಾಹಿತ್ಯಲೋಕದ ದಿಗ್ಗಜರಾದ “ಕನ್ನಡದ ಭಗವದ್ಗೀತೆ” ಎಂದೇ ಹೆಸರಾಗಿರುವ “ಮಂಕುತಿಮ್ಮನ ಕಗ್ಗ”ದ ಮೂಲಕವೇ ಕನ್ನಡಿಗರ ಮನದಲ್ಲಿ ನೆಲೆಗೊಂಡಿರುವ ಡಿ ವಿ ಗುಂಡಪ್ಪ ಅವರ ಸಾಹಿತ್ಯದ ಬಗ್ಗೆ ತಿಳಿಯದ ಕನ್ನಡಿಗರೇ ಇಲ್ಲದಿಲ್ಲ.
ಈ ಮಂಕುತಿಮ್ಮನ ಕಗ್ಗದಷ್ಟೇ ಜನಜನಿತವಾಗಿರುವ ಡಿ ವಿ ಜಿ ಅವರ “ಜ್ಞಾಪಕ ಚಿತ್ರಶಾಲೆ”ಯ ಮಾಲಿಕೆಗಳು ಕೂಡ ಕನ್ನಡಿಗರಿಗೆ ಚಿರಪರಿಚಿತವಾದದ್ದೇ ಆಗಿದೆ.
ಡಿ.ವಿ.ಜಿ ಅವರ ಜೀವನದ ರಸಪ್ರಸಂಗಗಳಾದ “ಜ್ಞಾಪಕ ಚಿತ್ರಶಾಲೆ”ಯು ಈಗ ರಂಗದ ಮೇಲೆ ಮೂಡಿ ಬರಲಿದೆ. ರಂಗದ ಚೌಕಟ್ಟಿಗೆ, ಅಲ್ಲಿನ ಇತಿಮಿತಿಗಳಿಗೆ, ಪಾತ್ರಗಳ ಮೂಲಕ, ಅದಕ್ಕೊಪ್ಪುವ ಭಾವಾಭಿನಯದ ಮೂಲಕ ಅಭಿವ್ಯಕ್ತಿಸುವ ಹೊಸ ಪ್ರಯತ್ನವನ್ನು ರಂಗ ನಿರ್ದೇಶಕರಾದ ಎನ್ ಸಿ ಮಹೇಶ್ ಅವರು ಮಾಡಿದ್ದಾರೆ.
ಈ ಹಿಂದೆ ಎನ್, ಸಿ. ಮಹೇಶ್ ಅವರು ರಾಮ್ ಫ್ರಮ್ ತೆನಾಲಿ, ಸಾಲ ತೀರಿಸು ಗಾಲಿಬ್, ಬೀಚ್ ಹೌಸ್, ಅವನು ಗಜಲ್… ಅವಳು ಶಾಯರಿ ಎಂಬ ನಾಟಕಗಳನ್ನು ನಿರ್ದೇಶಿಸಿದ್ದಲ್ಲದೇ, “ವಾಂತಿ” ಎಂಬ ಕಿರುಚಿತ್ರವನ್ನೂ ನಿರ್ದೇಶಿಸಿದ್ದಾರೆ.
ಈ ವರ್ಷದ ಪದ್ಮಭೂಷಣ ಪ್ರಶಸ್ತಿ ವಿಜೇತರೂ, ಬಹುಭಾಷಾ ಪ್ರವೀಣರೂ, ಶತಾವಧಾನಿಗಳೂ ಆದ ಆರ್. ಗಣೇಶ್ ಅವರ “ಬ್ರಹ್ಮಪುರಿಯ ಭಿಕ್ಷುಕ” ಕೃತಿಯನ್ನು ಆಧಾರವಾಗಿಟ್ಟುಕೊಂಡು ಎನ್ ಸಿ ಮಹೇಶ್ ಅವರು ರಂಗರೂಪಕ್ಕೆ ತಂದು ನಿರ್ದೇಶಿಸಿದ್ದಾರೆ.



ನಾಡಿನ ಖ್ಯಾತ ಹಿರಿಯ ನಟರಾದ ಬಾಬು ಹಿರಣ್ಣಯ್ಯ ಅವರು ಡಿ ವಿ ಜಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದ ಉತ್ಸಾಹಿ ತರುಣ ಪಡೆ ಇಲ್ಲಿದೆ. ಜೊತೆಗೆ ಮಿಕ್ಕ ಹಿರಿಯರೂ ಇದ್ದಾರೆ. ಹಾಗಾಗಿ ಇದು “ಹಳೆ ಬೇರು ಹೊಸ ಚಿಗುರಿನ” ರೀತಿಯದ್ದು. ಡಿ.ವಿ.ಜಿ ಅವರು ಬರೆದಿರುವ “ಜ್ಞಾಪಕ ಚಿತ್ರಶಾಲೆ” ಯ ಕೆಲ ಪ್ರಸಂಗಗಳೂ ಇಲ್ಲಿವೆ. ಪ್ರಧಾನವಾಗಿ ಡಿ.ವಿ.ಜಿ ಬದುಕಿನ ಚಿತ್ರಗಳೇ ನಮಗೆ ಜ್ಞಾಪಕ ಚಿತ್ರಶಾಲೆಯಾಗಿದೆ ಎನ್ನುವ ಅರ್ಥದಲ್ಲಿ ಕಟ್ಟಿರುವ ಪ್ರಯೋಗ ಇದು.
ಇದೇ ಅಕ್ಟೋಬರ್ 20 ರಂದು ರಂಗಶಂಕರದಲ್ಲಿ ಸಂಜೆ 7-30ಕ್ಕೆ ಪ್ರದರ್ಶನವಾಗಲಿದೆ. ಬುಕ್ ಮೈ ಶೋನಲ್ಲಿ ಟಿಕೇಟ್ಗಳು ಲಭ್ಯ. ಹೊಸ ಪ್ರಯೋಗಗಳಿಗೆ ಎಂದೆಂದೂ ಕೈ ಜೋಡಿಸುವ ಕನ್ನಡದ ಸಾಹಿತ್ಯಾಸಕ್ತರೂ, ರಂಗಾಸಕ್ತರೂ ಬಂದು ಈ ಪ್ರಯೋಗಕ್ಕೆ ಸಾಕ್ಷಿಯಾಗಬೇಕು. ಸಮಾನ ಮನಸ್ಕರನ್ನೂ ಜೊತೆಗೆ ಕರೆ ತನ್ನಿ.






0 Comments