ಸಂಧ್ಯಾರಾಣಿ ಕಾಲಂ: ನನ್ನ ಆಕಾಶವನ್ನು ತುಂಡು ಮಾಡಿದವರು ಯಾರು?

ಅವಧಿಯಲ್ಲಿ ಅಂಕಣ ಬರೆಯಲು ಹೇಳಿದಾಗ ಮೊದಲ ಭಾವ ಸಂತಸ ಮತ್ತು ಹೆದರಿಕೆ! ನಾನು ಕಣ್ಣರಳಿಸಿ ನೋಡುತ್ತಿದ್ದ, ಮನಸ್ಸಿಟ್ಟು ಓದುತ್ತಿದ್ದ, ಮತ್ತೆ ಮತ್ತೆ ಓದುತ್ತಿದ್ದ ಅವಧಿಯಲ್ಲಿ ನಾನೂ ನಿಯಮಿತವಾಗಿ, ವಾರದಿಂದ ವಾರಕ್ಕೆ ಬರೆಯುವುದು ಸಂತಸ ಮತ್ತು ಹೆದರಿಕೆ ಎರಡಕ್ಕೂ ಕಾರಣ..
ಹೇಗೋ ಸಂಭಾಳಿಸಿಕೊಂಡು ಬರೆಯಲು ಕುಳಿತೆ. ಆದರೆ ನಾನು ಯಾವಾಗ ’ಒಂದೂರಿನಲ್ಲಿ….’ ಎಂದು ಪ್ರಾರಂಭಿಸಿದರೂ ನನ್ನ ಒಂದೂರು ಶುರುವಾಗುವುದು ಪುಸ್ತಕದೊಡನೆಯೇ. ಹಾಗಾಗಿಯೇ ನನ್ನ ಮೊದಲನೆಯ ಬರಹ ಪುಸ್ತಕಗಳ ಜೊತೆಯಲ್ಲಿನ ನನ್ನ ನಿರಂತರ ಲವ್ ಸ್ಟೋರಿಯೊಂದಿಗೆ ಪ್ರಾರಂಭ.
’ಕವಿತೆಗಳು ಇರುವುದು ರೂಂ, ನನ್ನ ತುಂಬಾ ಪ್ರೀತಿಯ ಮನೆಯ ಭಾಗ, ಆಗಾಗ ನೋಡಬೇಕು, ಸುಮ್ಮನೆ ಸಮಾಧಾನಕ್ಕಾದರೂ ನೋಡುತ್ತಾ ಇರಬೇಕು ಅನ್ನಿಸುವ ಪುಸ್ತಕಗಳಿರುವುದು ಹಾಲ್. ಇನ್ನು ನನ್ನ ಪುಸ್ತಕಗಳನ್ನೆಲ್ಲಾ ನೀಟಾಗಿ ಜೋಡಿಸಿಟ್ಟಿರುವ ಪುಸ್ತಕದ ಕಪಾಟಿರುವ ಜಾಗ ಪ್ಯಾಸೇಜ್..’ ಬಹುಶಃ ನನ್ನ ಮನೆಯ ಬಗ್ಗೆ ಹೇಳಬೇಕೆಂದರೆ ನಾನು ಹೀಗೆ ಹೇಳಿಯೇನು.
ಪುಸ್ತಕಗಳಿಲ್ಲದೆ ನಾನು ಮನೆಯನ್ನು, ನನ್ನ ಓದುವ ಮೇಜನ್ನು, ಊಟ ತಿಂಡಿಯನ್ನು ಅಷ್ಟೇಕೆ ನಿದ್ದೆ ಮಾಡುವ ಮೊದಲಿನ ಕೊನೆಯ ಕ್ಷಣವನ್ನು ಊಹಿಸಿಕೊಳ್ಳಲಾರೆ.  ಹೋಟೆಲಿಗೆ ಹೋದರೆ ಒಂದು ನಿಮಿಷ ಮೆನು ಕಾರ್ಡ್ ಮೇಲೆ ಕಣ್ಣು ಹಾಯಿಸಲೇ ಬೇಕು, ಆಗಲೇ ಸಮಾಧಾನ. ಇದು ನನ್ನ ಅನೇಕ ಸಮಸ್ಯೆಗಳಿಗೆ ಪರಿಹಾರ ಮತ್ತು ಕೆಲವು ಸಲ ದೌರ್ಬಲ್ಯ ಸಹ. ನನ್ನ ಕಲ್ಪನೆಯಲ್ಲಿ ನನ್ನ ಆರೋಗ್ಯಕ್ಕಾಗುವ ಅತಿದೊಡ್ಡ ಏರು ಪೇರೆಂದರೆ ನನ್ನ ಕಣ್ಣಿಗೇನಾದರೂ ಆಗಿ ನಾನು ಓದಲಾಗದಿರುವುದು!
ಪುಸ್ತಕಗಳೊಂದಿಗೆ ನನ್ನ ಸಾಂಗತ್ಯ ನನ್ನ ನೆನಪುಗಳು ನೆನಪಾಗುಳಿದ ದಿನದಿಂದಲೇ ಶುರು. ಅಜ್ಜಿ ಮನೆಗೆ ರಜಕ್ಕೆಂದು ಹೋಗುತ್ತಿದ್ದೆವು. ಹಳ್ಳಿಯಲ್ಲಿ ಪೋಸ್ಟ್ ಆಫೀಸ್ ಇದ್ದದ್ದು ನಿಜವಾದರೂ ಪೋಸ್ಟ್ ಮ್ಯಾನ್ ಎಂದರೆ ’ಅಪನೀ ಮರ್ಜಿ ಕಾ ಮಾಲಿಕ್’. ಬೆಳಗ್ಗೆ ೧೦.೩೦ ರ ಬಸ್ಸಿನಲ್ಲಿ ಪೋಸ್ಟ್ ಒಂದು ಖಾಕಿ ಬಣ್ಣದ ಚೀಲದಲ್ಲಿ ಬರುತ್ತಿತ್ತು. ಅಂದಿನಿಂದ ಮರುದಿನ ಸಂಜೆಯ ವೇಳೆಗೆ ಯಾವಾಗಲಾದರೂ ಮನೆಗೆ ಪೋಸ್ಟ್ ಬರಬಹುದು. ಸುತ್ತ ಮುತ್ತ ಹಳ್ಳಿಗೂ ಇದ್ದದ್ದು ಒಬ್ಬನೇ ಪೋಸ್ಟ್ ಮ್ಯಾನ್ ಆದ್ದರಿಂದ ಅವನನ್ನು ಯಾರೂ ಕೇಳುವ ಹಾಗೇ ಇರಲಿಲ್ಲ… ಹಾಗೇನಾದರೂ ಜಗಳ ಮಾಡಿ ಮನಸ್ತಾಪ ಕಟ್ಟಿಕೊಂಡಿರೋ ಮುಗೀತು, ನಿಮ್ಮ ನೆಂಟರ ಮಗಳ ಮದುವೆ ಆದ ಮೇಲೆ ಆಹ್ವಾನ ಪತ್ರಿಕೆ ಕೈ ಸೇರಬಹುದು, ಕೆಲಸದ ಇಂಟರ್ವ್ಯೂ ಇರುವ ದಿವಸ ನಿಮ್ ಕೈಗೆ ಕಾರ್ಡ್ ಬರಬಹುದು, ಏನಾದರೂ ಆದೀತು. ಹಾಗಾಗಿ ಓದು ಮುಗಿಸಿ ಕೆಲಸದ ಬೇಟೆಯಲ್ಲಿದ್ದ ಸೋದರ ಮಾವ ನಮ್ಮನ್ನು ೧೧.೩೦ ಗೆ ಸರಿಯಾಗಿ ಪೋಸ್ಟ್ ಆಫೀಸಿಗೆ ಓಡಿಸುತ್ತಿದ್ದ. ಅಲ್ಲಿ ಹೋಗಿ, ನೋಡಿ, ಪೋಸ್ಟ್ ಬಂದಿದ್ದು, ಅದು ಈತನಿಗೆ ಬೇಕಾದ ಪೋಸ್ಟ್ ಆಗಿದ್ದರೆ ಆಗ ಅಟ್ಟದ ಮೇಲಿಂದ ಮಂತ್ರವಾದಿಯ ಥರದಲ್ಲಿ ಒಂದು ಕ್ಯಾನ್ ವ್ಯಾಸ್ ಬ್ಯಾಗ್ ಕೆಳಗಿಳಿಸುತ್ತಿದ್ದ. ಇನ್ನೇನು ಮಾಯಾಲೋಕ ಕಣ್ಣೆದುರಿಗೆ ಬಂತೇನೋ ಎನ್ನುವಂತೆ ನಾನು ಉಸಿರಾಡುವುದನ್ನೂ ಮರೆತು ಕಾಯುತ್ತಿದ್ದೆ, ಬ್ಯಾಗಿನ ಒಳಗೆ ಕೈ ಹಾಕಿದರೆ, ಅಮೂಲ್ಯವಾದ ರತ್ನಹಾರದಂತೆ, ೧೫-೨೦ ಸಂಚಿಕೆಗಳನ್ನು ಒಟ್ಟು ಸೇರಿಸಿ ಬೈಂಡ್ ಮಾಡಿದ್ದ ಚಂದಮಾಮ, ಬಾಲಮಿತ್ರ ಹೊರಗೆ ಬರುತ್ತಿತ್ತು.  ವಿಕ್ರಮ-ಬೇತಾಳ, ರಕ್ಕಸ ಕೊಳ್ಳ, ಪರೋಪಕಾರಿ ಪಾಪಣ್ಣ …… ಅಯ್ಯೋ ನನ್ನ ಕೈಗೆ ಸ್ವರ್ಗವೇ ಬಂದಂಥ ಸಂಭ್ರಮ! ಸರಿಯಾಗಿ ಒಂದು ಗಂಟೆ ನನ್ನ ಕೈಲಿರುತ್ತಿತ್ತು ಅದು, ಮತ್ತೆ ಅಟ್ಟ ಹತ್ತಿ ಕೂತರೆ, ಇಳಿಯುತ್ತಿದ್ದಿದ್ದು ಮತ್ತೆ ಪೋಸ್ಟ್ ಬಂದಾಗಲೇ.
ಆ ಸಲ ರಜೆ ಮುಗಿಸಿ ಹೋದ ಮೇಲೆ ನಮ್ಮ ಮನೆಯಲ್ಲೇ ಇದ್ದು ಕೆಲಸಕ್ಕೆ ಹೋಗುತ್ತಿದ್ದ ಇನ್ನೊಬ್ಬ ಸೋದರ ಮಾವ ತ್ರಿವೇಣಿಯವರ ಹೂವು – ಹಣ್ಣು ಕೊಟ್ಟಿದ್ದರು. ಅವರ ಬಳಿ ಲೈಬ್ರರಿ ಕಾರ್ಡ್ ಇತ್ತು. ರಾತ್ರೋ ರಾತ್ರಿ ನನ್ನ ನಿಷ್ಠೆ ಈ ಸೋದರ ಮಾವನೆಡೆಗೆ ತಿರುಗಿ ಬಿಟ್ಟಿತ್ತು! ಅಲ್ಲಿಂದ ತ್ರಿವೇಣಿಯವರ ಎಲ್ಲಾ ಕಾದಂಬರಿಗಳು, ಬೈರಪ್ಪನವರ
ಗೃಹಭಂಗ …. ಹಾ , ಗೃಹಭಂಗ ದಲ್ಲಿ ಆತ ಮಡದಿ ಮನೆಗೆ ಅಂತ ತೆಗೆದುಕೊಂದು ಹೋಗುವ ಬಾಳೆಹಣ್ಣಿನ ಗೊನೆಯಿಂದ ಒಂದೊಂದಾಗಿ, ಒಂದೊಂದಾಗಿ ಹಣ್ಣು ತಿಂತಿದ್ದು ನನ್ನ ಮಟ್ಟಿಗೆ ನೂರು laughter challenge ಕಾರ್ಯಕ್ರಮಗಳಿಗೆ ಸಮ. ’ಕಣ್ಣು ಹಾಳಾಗುತ್ತೆ’ ಅಂತ ಅಮ್ಮ ಬೈಯೋಕ್ಕೆ ಶುರು ಮಾಡಿದ್ದರು, ತಮಾಶೆ ಎನು ಅಂದ್ರೆ ಆಗಾಗಲೇ ನನಗೆ ದೂರ ಕೂತರೆ ಬೋರ್ಡ್ ನ ಅಕ್ಷರಗಳು ಸರಿಯಾಗಿ ಕಾಣುತ್ತಿರಲಿಲ್ಲ, ಹೇಳಿದರೆ ಪುಸ್ತಕ ಓದೋದು ಎಲ್ಲಿ ತಪ್ಪಿಹೋಗುತ್ತದೋ ಅನ್ನುವ ಭಯದಲ್ಲಿ ಒಂದು ಇಡೀ ವರ್ಷ ಹಾಗೇ ಮ್ಯಾನೇಜ್ ಮಾಡಿದ್ದೆ ನಾನು. ಕಡೆಗೆ ನನ್ನ ಪಕ್ಕ ಕೂರುತ್ತಿದ್ದ ಶಾಂತಿಯ ಜೊತೆ ಜಗಳ ಆಗಿ, ಅವಳು ಪುಸ್ತಕ ಮುಚ್ಚಿಟ್ಟುಕೊಳ್ಳತೊಡಗಿದಾಗ ವಿಧಿ ಇಲ್ಲದೆ ಮನೇಲಿ ಹೇಳಬೇಕಾಯ್ತು. ಆಗಿನಿಂದ ಪುಸ್ತಕದ ಜೊತೆ, ಕನ್ನಡಕವೂ ಸಂಗಾತಿ ಆಯ್ತು!
ನಾವು ಹೈಸ್ಕೂಲಿಗೆ ಬರುವಷ್ಟರಲ್ಲಿ ಅಪ್ಪ ನನಗೇ ಒಂದು ಲೈಬ್ರರಿಕಾರ್ಡ್ ಮಾಡಿಸಿಕೊಳ್ಳಲು ಅನುಮತಿ ಕೊಟ್ಟಿದ್ದರು. ಅದೊಂದು ಸಣ್ಣ ಲೈಬ್ರರಿ, ಅದರ ಲೈಬ್ರೇರಿಯನ್ ಮುರಳಿ ಅಂತ ಇರಬೇಕು, ಅವನ ತಂಗಿ ಸಹ ನಮ್ಮ ಟ್ಯೂಶನ್ ಗೇ ಬರುತ್ತಿದ್ದರಿಂದ ನಮಗೆ ಬೇಕಾದ ಪುಸ್ತಕಗಳನ್ನು ಎತ್ತಿಟ್ಟು ಕೊಡುತ್ತಿದ್ದ. ಜೊತೆಗೆ ಮನೆಗೆ ಬರುತ್ತಿದ್ದ ಸುಧಾ, ಪ್ರಜಾಮತ ಅಂತೂ ಇದ್ದೇ ಇತ್ತಲ್ಲ …. ಆಗ ಬೀಸಿದ ಸುಂಟರಗಾಳಿಯ ಹೆಸರು ಯಂಡಮೂರಿ ವೀರೇಂದ್ರನಾಥ್…. ಎಲ್ಲೆಲ್ಲೋ ಸುತ್ತಿಸಿ, ಕುತೂಹಲ ಹುಟ್ಟಿಸುತ್ತಿದ್ದ ಜಿಂದೆ, ನರಸಿಂಹರಾಯರ ಕಾದಂಬರಿಗಳು ಯಾಕೋ ಬೋರ್ ಅನ್ನಿಸ ತೊಡಗಿದ್ದವು. ಎಚ್ ಜಿ ರಾಧಾದೇವಿ ಬೇಳೆ ಹುಳಿ, ಸಂಡಿಗೆ, ಅಂಗೈ ಅಗಲದ ಹರಳಿನ್ ಬ್ರೋಚ್, ಅದಕ್ಕೊಪ್ಪುವ ಕಡು ಹಸಿರಿನ ಸೀರೆ ಬಿಟ್ಟು ಮುಂದೆ ಹೋಗುತ್ತಲೇ ಇರಲಿಲ್ಲ. ಇನ್ನು ಸಾಯಿಸುತೆ ಕಾದಂಬರಿಗಳಲ್ಲಿ ಅದ್ಭುತವಾದ ನಾಯಕ, ಅವನಿಗೆ ತಕ್ಕ ನಾಯಕಿ, ಆದರೆ ಅವರು ಎಷ್ಟು ದಡ್ಡರಿರುತ್ತಿದ್ದರೆಂದರೆ, ಹೈಸ್ಕೂಲು ಓದುತ್ತಿದ್ದ ನಮಗೇ ೨೦ ಪುಟ ಓದುವಷ್ಟರಲ್ಲಿ ಅರ್ಥ ಅಗಿಬಿಡುತ್ತಿತ್ತು ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಅಂತ, ಮುಟ್ಠಾಳರು ಸುಮಾರು ೨೦೦ ಪುಟ ಜಗಳ ಆಡಿಕೊಂದು ಟೈಮ್ ವೇಸ್ಟ್ ಮಾಡ್ತಾ ಇದ್ದರು. ಸ್ವಲ್ಪ ಫ್ರೆಶ್ ಅನ್ನಿಸ್ತಿದ್ದಿದ್ದು ಉಷಾ ನವರತ್ನ ರಾಂ. ಆಗ ಬಂತಲ್ಲ ಯಂಡಮೂರಿ ಧಾರಾವಾಹಿ! ತೆಲುಗಿನಿಂದ ಅನುವಾದಗೊಂದು ನಮ್ಮ ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಹರಿಯುತ್ತಿದ್ದವು.  ಬೆಳದಿಂಗಳ ಬಾಲೆಯ ಜಾಣತನ (ಅರೆ, ಮೊದಲ ಸಲ ನಾಯಕಿ, ನಾಯಕನಿಗಿಂತ ಜಾಣೆಯಾಗಿ ಕಂಡಿದ್ದು ಅಲ್ಲಿಯೇ. ಅವಳ ಚೆಲುವಿನ ಬಗ್ಗೆಗಿಂತಾ ಅವಳ ಜಾಣತನದ ಬಗ್ಗೆ ಯಂಡಮೂರಿ ಬರೆಯುತ್ತಾ ಹೋದರೆ ನಮ್ಮ ಚಲುವಿನ ಬಗ್ಗೆ ನಮಗಿದ್ದ ಎಷ್ಟೋ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಗಳಿಗೆ ಸದ್ದಿಲ್ಲದೆ ಮದ್ದು ಸಿಕ್ಕಿತ್ತು. ಅರೆ, ಜಾಣೆಯಾದರೆ ಸಾಕು ಚಂದವಾಗಿಲ್ಲದಿರುವುದು ಕೊರತೆಯೇ ಅಲ್ಲ ಎನ್ನುವುದು ಎಂಥಹ ಇನ್ ಸೆಂಟಿವ್ ಗೊತ್ತ?! ದುಡ್ಡುಗಳಿಸುವುದನ್ನು ಒಂದು ಆಟವಾಗಿಸಿದ, ಕಾನೂನು ಮತ್ತು ನ್ಯಾಯ ಬೇರೆ ಬೇರೆ ಎಂದು ಹೇಳಿದ ದುಡ್ಡು ಟು ದ ಪವರ್ ಆಫ್ ದುಡ್ಡು, ಮೊದಲ ಸಾರಿ ನಕ್ಸಲ್ ಹೆಸರು ಓದಿದ ರಕ್ತ ಸಿಂಧೂರ, ನೂರಾರು ತಿರುವುಗಳ ಅಭಿಲಾಶ, ನಮ್ಮ ರಾತ್ರಿಗಳನ್ನು ಭಯದಿಂದ ತುಂಬಿಡುತ್ತಿದ್ದ, ತಲೆಬಾಚಿದ ನಂತರ ಹುಷಾರಾಗಿ ಕೂದಲನ್ನು ಕಾಣದಂತೆ ಎಸೆಯಲು ಪ್ರೇರೇಪಿಸಿದ ತುಳಸಿದಳ, ತುಳಸಿ.. ಯಂಡಮೂರಿ ಕಾದಂಬರಿಗಳಿಗೆ ಲಾ ಆಫ್ ಡಿಮಿನಿಶಿಂಗ್ ಮಾರ್ಜಿನಲ್ ಯುಟಿಲಿಟಿ ಅಪ್ಲೈ ಆಗುತ್ತಲೇ ಇರಲಿಲ್ಲ.
 

ಚಿತ್ರ ಕೃಪೆ: ತೆಹೆಲ್ಕಾ

ಹೀಗೆ ಮನರಂಜನೆಯ ಮಟ್ಟಕ್ಕಿದ್ದ ನನ್ನ ಮತ್ತು ಸಾಹಿತ್ಯದ ಸಂಬಂಧಕ್ಕೆ ಇನ್ನೊಂದು ಆಯಾಮ ಸಿಕ್ಕಿದ್ದು ನಾನು ಕಾಲೇಜಿಗೆ ಬಂದ ಮೇಲೆ. ಆಗಿನ್ನೂ ಎಂ ಎ ಮುಗಿಸಿ ಬಂದಿದ್ದ ಕನ್ನಡ ಮೇಷ್ಟ್ರು ನಮಗೆ ಪುಸ್ತಕಗಳ ಇನ್ನೊಂದು ಜಗತ್ತನ್ನು ತೋರಿಸಿಕೊಟ್ಟರು. ಒಳ್ಳೊಳ್ಳೆ ಪುಸ್ತಕಗಳನ್ನು ಕೊಟ್ಟು ಓದಿಸುತ್ತಿದ್ದರು, ನಿರಂಜನ, ಚಿತ್ತಾಲ, ಶಾಂತಿನಾಥ ದೇಸಾಯಿ, ಸಿದ್ಧಲಿಂಗಯ್ಯನವರ ಹೊಲೆ ಮಾದಿಗರ ಹಾಡು, ತೇಜಸ್ವಿ, ಕುವೆಂಪು, ಕಾರಂತ …. ನನ್ನೆದುರಿಗೆ ಹೊಸ ಯೋಚನೆಗಳು, ಹೊಸ ವಿಶ್ವ, ಹೊಸ ಭಾಷೆ, ಪೂರ್ತಿಯಾಗಿ ಅರ್ಥವಾಗದ, ಅರ್ಥವಾಗದೆಯೂ ನನ್ನದು ಅನ್ನಿಸುವ ಒಂದು ಪ್ರಪಂಚ …. ಅಂದಿನಿಂದಲೂ ಓದುತ್ತಲೇ ಇದ್ದೇನೆ …. ಅದೇ ಲೋಕದಲ್ಲಿ ಅದೇ ಹಾದಿಯಲ್ಲಿ ಓಡಾಡುತ್ತಲೇ ಇದ್ದೇನೆ.
ಆಗಷ್ಟೇ ಲಂಕೇಶ್ ಪತ್ರಿಕೆ ಸಹ ಶುರು ಆಗಿತ್ತು, ಯಾವುದೆ ಜಾಹಿರಾತುಗಳಿಲ್ಲದ, ಸಂಪೂರ್ಣ ಕ್ರಾಂತಿಕಾರಿ ಪತ್ರಿಕೆ, ಮಿನಿಸ್ಟರುಗಳನ್ನ, ಸ್ವಾಮೀಜಿಗಳನ್ನ ಮುಲಾಜಿಲ್ಲದೆ ಬೈತಾರೆ ಅನ್ನೋದೆ ನಮ್ಮ ಮಟ್ಟಿಗೆ ಆಗ ಬೆಕ್ಕಸ ಬೆರಗಾಗುವ ಸಂಗತಿ.  ’ಹೆಂಗಾರ ಕ್ರಾಂತಿ ಆಗ್ಲೇಬೇಕು’ ಅಂತ ಜಪ ಮಾಡ್ತಿದ್ದ ವಯೋಮಾನದ ಮನಸ್ಸುಗಳಿಗೆ ಅದು ರಾಷ್ಟ್ರಗೀತೆಯ ಥರ ಕಾಣ್ತಿದ್ದ ಪತ್ರಿಕೆ, ಜತೆಗೆ ಮೇಷ್ಟ್ರು ಇದು ಜಾಣ ಜಾಣೆಯರಿಗೆ ಮಾತ್ರ ಅಂತ ಬೇರೆ ಹೇಳಿಬಿಟ್ಟಿದ್ದರಲ್ಲ? ವಾರಕ್ಕೊಮ್ಮೆ ಪತ್ರಿಕೆ ತಂದುಕೊಡುತ್ತಿದ್ದ ಅಪ್ಪ ಯಾಕೋ ನಿಧಾನಕ್ಕೆ ಕಳವಳಗೊಳ್ಳುತ್ತಿದ್ದರು.. ಏನೋ ನೆಮ್ಮದಿಯಾಗಿ ಕಥೆ ಕಾದಂಬರಿ ಓದ್ಕೊಂಡು ಇರಲಿ ಮಗಳು ಅಂತಿದ್ರೆ, ಈ ಲಂಕೇಶ್ ಯಾಕೋ ಮಗಳನ್ನ ದಾರಿ ತಪ್ಪಿಸಿದ್ದಾನೆ ಅನ್ನಿಸಿರಬೇಕು, ಪೇಪರ್ ತರೋದು ನಿಲ್ಲಿಸಿಬಿಟ್ರು. ಆಗ ಅಪ್ಪ ಕೆಲಸದಲ್ಲಿದ್ದಿದ್ದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ, ಮೊದಲನೆಯ ವರ್ಷದ ಪಿಯುಸಿ ಬಂಗಾರಪೇಟೆಯಲ್ಲಿ ಓದಿದ್ದರಿಂದ, ಎರಡನೆಯ ವರ್ಷಕ್ಕೂ ಮಾಲೂರಿನಿಂದ ಬಂಗಾರಪೇಟೆಗೆ ಟ್ರಾವೆಲ್ ಮಾಡ್ತಾ ಇದ್ದೆ, ಬೆಳಗ್ಗೆ ೬ ಕ್ಕೆ ಮನೆ ಬಿಟ್ಟರೆ, ಮಧ್ಯಾನಃ ಮೂರೂವರೆಗೆ ವಾಪಸ್, ಬೆಳಗ್ಗೆ ನಾಲ್ಕು ಪೀಸ್ ಬ್ರೆಡ್ ತಿಂದು ಹೊರಡ್ತಾ ಇದ್ದೆ. ಮಗಳು ಉಪವಾಸ ಇರ್ತಾಳೆ, ಏನಾದ್ರು ತಿನ್ನಲಿ ಅಂತ ಅಪ್ಪ ತಿಂಗಳಿಗೆ ೨೫ ರೂ ಪಾಕೆಟ್ ಮನಿ ಕೊಡ್ತಾ ಇದ್ದರು. ಸರಿ ಅದರಲ್ಲಿ ತಿಂಡಿ ತಿನ್ನದೆ, ಉಳಿಸಿ, ವಾರಕ್ಕೊಂದು ಲಂಕೇಶ್ ಮತ್ತು ಒಂದು ಕ್ಯಾಡ್ಬರೀ ಫ್ರೂಟ್ಸ್ ಅಂಡ್ ನಟ್ಸ್ ಕೊಂಡುಕೊಂಡರೆ ಆಯಿತು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಲಂಕೇಶ್ ಬರಹಗಳು, ಸಾರಾ ಅಬೂಬ್ಕರರ ಚಂದ್ರಗಿರಿ, ವೈದೇಹಿಯವರ ಕಥೆಗಳು, ಬಾನು ಮುಶ್ತಾಕ್ …. ಒಟ್ಟೊಟ್ಟಿಗೆ ಎಷ್ಟು ಜನ ನನ್ನವರಾದರು …
ನನ್ನ ಜೀವನದ ಸಮಸ್ಯೆಗಳನ್ನು, ಸವಾಲುಗಳನ್ನು ನಾನು ’ಆಯ್ತು ಮಾರಾಯ, ಬಾ ಇಲ್ಲಿ, ಕೂತು ಮಾತಾಡೋಣ, ಅಂಥಾದ್ದೇನಾಯ್ತು ಈಗ’ ಅನ್ನುವಂತೆ ತೆಗೆದುಕೊಳ್ಳಲು ಸಾಧ್ಯವಾದದ್ದು ಈ ಪುಸ್ತಕಗಳಿಂದ, ಸಾಹಿತ್ಯದಿಂದ ಮತ್ತು ಅದರ ಮೂಲಕ ಎದೆಗೆ ನಡೆದುಬಂದ ಕವನ ಹಾಡುಗಳಿಂದ …. ಹೀಗೆ ನಾನೂ ನನ್ನ ಪುಸ್ತಕಗಳು ಎನ್ನುವಂತೆ ಸುಖವಾಗಿದ್ದ ನನ್ನನ್ನು ಬೆಚ್ಚಿ ಬೀಳಿಸಿದ್ದು ಮೊನ್ನೆ ಜೋಗಿ ಅವರು ಬರೆದ ಲೇಖನ. ಲೇಖನದಲ್ಲಿ ಅವರು ಇತ್ತೀಚೆಗೆ ಸಾಹಿತ್ಯವನ್ನು ’ಹಾರ್ಡ್ ವೇ ಸಾಹಿತ್ಯ ಮತ್ತು ಸಾಫ಼್ಟ್ ವೇರ್ ಸಾಹಿತ್ಯ’ ಎಂದು ವಿಂಗಡಿಸುವ ಪ್ರವೃತ್ತಿಯ ಬಗ್ಗೆ ವಿವರಿಸಿದ್ದರು.
ನಾನು ಅಲ್ಲಾಡಿಹೋದೆ.  ಇದ್ಯಾರು ನನ್ನ ಆಕಾಶವನ್ನು ತುಂಡು ಮಾಡಿದವರು ??? ನಾನು ನನ್ನ ಜನ್ಮದಲ್ಲೇ ಬಳ್ಳಾರಿ ಜಿಲ್ಲೆಗೆ ಹೋಗಿಲ್ಲ, ಆದರೂ ಕುಂವೀ ಅವರ ರಾಯಲ ಸೀಮಾ ನನ್ನ ಮೆಚ್ಚಿನ ಪುಸ್ತಕಗಳಲ್ಲೊಂದು, ಹಳ್ಳಿಗಾಡನ್ನೂ, ಒಕ್ಕಲುತನದ ಬದುಕನ್ನು ಕೇವಲ ದೂರದಿಂದ ಮಾತ್ರ ನೋಡಿರುವ ನನಗೆ ಕೇಶವರೆಡ್ಡಿ ಹಂದ್ರಾಳ ಅವರ ಆತ್ಮ ಚರಿತ್ರೆ, ಎಚ್ ಹನುಮಂತರಾಯರ ’ವಕೀಲರೊಬ್ಬರ ವಗೈರೆಗಳು’ ಅರಿವಿನ ಗಡಿಯನ್ನೂ ಮೀರಿ ಮನದ ನೆಲೆಯನ್ನು ಮುಟ್ಟುತ್ತದೆ? ದೇವನೂರು ಬರೆದ ಬದುಕು, ಬವಣೆ ನನ್ನದಲ್ಲ, ಆದರೆ ಅವರ ಬರಹದ ಪ್ರಾಮಾಣಿಕತೆಯಿಂದಲೇ ಅದು ಏಕೆ ನನ್ನದು ಅನ್ನಿಸಿಬಿಡುತ್ತದೆ? ಮಲಹೊರುವ ಕಾರ್ಮಿಕರ ಬಗ್ಗೆ ಟಿ ಕೆ ದಯಾನಂದ್ ಬರೆದಾಗ ಯಾಕೆ ನನಗೆ ಇನ್ನಿಲ್ಲದ ಅಪರಾಧಿ ಪ್ರಜ್ಞೆ ಕಾಡಬೇಕು? ಕಾರಂತ, ಕುವೆಂಪು, ತೇಜಸ್ವಿ, ವೈದೇಹಿ, ಎಸ್ ದಿವಾಕರ್, ಮಿತ್ರಾ ವೆಂಕಟ್ರಾಜು, ಸರ್ವಮಂಗಳಾ, ಖಾಸನೀಸರು, ಓದುವ ಖುಷಿ ಹೆಚ್ಚಿಸಿದ ಜಾನಕಿ ಕಾಲಂ.. ಇವರೆಲ್ಲರೂ ಹತ್ತಿರವಾದ ಹಾಗೆ ನನಗೆ ವಸುಧೇಂದ್ರ, ದತ್ತಾತ್ರಿ, ಗುರುಪ್ರಸಾದ್ ಕಾಗಿನೆಲೆ, ವಿಕ್ರಂ ಹತ್ವಾರ್ ಬಿಡಿಸುವ ಒತ್ತಡದ ಸಾಫ್ಟ್ ವೇರ್ ಪ್ರಪಂಚ ಸಹ ತಾಕುತ್ತದೆ. ನಗರದಲ್ಲೇ ಹುಟ್ಟಿ ಬೆಳೆದ ಪಿ ಸಾಯಿನಾಥ್ ಗ್ರಾಮೀಣ ಭಾರತಕ್ಕೆ ತೆರೆದಿಟ್ಟ ಬಾಗಿಲು ಅವರ ಪುಸ್ತಕದ ಕನ್ನಡ ಅನುವಾದ, ಜಿ ಎನ್ ಮೋಹನ್ ಅನುವಾದಿಸಿದ ’ಬರ ಅಂದ್ರೆ ಎಲ್ಲರಿಗೂ ಇಷ್ಟ…’, ಅದನ್ನು ಬರೆದ ಪಿ ಸಾಯಿನಾಥ್ ನಗರವಾಸಿಗಳು, ಅವರು ಆ ಪುಸ್ತಕ ಬರೆದಾಗ ಪ್ರತಿನಿಧಿಸಿದ್ದು ಒಂದು ಕಾರ್ಪೋರೇಟ್ ಅನ್ನು, ಹಾಗೆಂದ ಮಾತ್ರಕ್ಕೆ ಅವರ ಬರಹ ಹಾರ್ಡ್ ರಿಯಾಲಿಟಿ ಅಲ್ಲದೆ, ಸಾಫ್ಟ್ ಬರಹ ಆಗಿಬಿಡುತ್ತದಾ? ಸಾಹಿತಿಯ ಬರಹದ ತಾಕತ್ತು ಅದರ ಸಾರ್ವತ್ರಿಕತೆ ಹಾಗು ಸಾರ್ವಕಾಲೀಕತೆಯನ್ನು ನಿರ್ಧರಿಸುತ್ತದೆ ಅಲ್ಲವಾ?
ಅಷ್ಟಕ್ಕೂ ಸಾಹಿತ್ಯವನ್ನು ಕಾರ್ಪೊರೇಟ್ ವಲಯದ ಸಾಹಿತ್ಯ ಎಂದು ವಿಂಗಡಿಸ ಬೇಕಾದರೂ ಏತಕ್ಕೆ? ಯಾಕೆ, ಅಲ್ಲಿನವರ ಸಂವೇದನೆಗಳು ಸತ್ಯವಲ್ಲವಾ? ಮನೆಯಲ್ಲಿ ಅರಳುಗಣ್ಣಿನ ಮಗು ನಿದ್ರೆಗೆ ಜಾರುವ ಮೊದಲು ಮನೆ ಸೇರಬೇಕಪ್ಪ ಎಂದು ತವಕಿಸುವ ಅಪ್ಪ-ಅಮ್ಮನ ಸಂವೇದನೆ ಅಂತಃಕರಣ ಕೇವಲ ಅವರು ಪಡೆಯುವ ಸಂಬಳದಿಂದ ತೆಳುವಾಗಿಬಿಡುತ್ತದಾ? ಯಾಕೋ ಮನಸ್ಸು ಒಪ್ಪುತ್ತಿಲ್ಲ. ’ನೀವು ಕಳೆದುಕೊಳ್ಳುವ ಮುಗ್ಧತೆಗೆ ತಕ್ಕ ಪ್ರೌಢಿಮೆಯನ್ನು ಗಳಿಸಿಕೊಳ್ಳೋದಿಲ್ಲ’ ಎಂಬ ವಸ್ತಾರೆ ಕಥೆಯ ಸಾಲು ಇಂದಿನ ಮಕ್ಕಳು ಎದುರಿಸುತ್ತಿರುವ ವಿರೋದಾಭಾಸವನ್ನು ಕಟ್ಟಿಕೊಡುವುದಿಲ್ಲವೆ?
ಇಷ್ಟಕ್ಕೂ ಕಾರ್ಪೊರೇಟ್ ಲೋಕದಲ್ಲಿರುವವರಾದರೂ ಯಾರು? ಅವರೂ ನಮ್ಮ ಹುಡುಗ – ಹುಡುಗಿಯರೇ ಅಲ್ಲವಾ? ಗ್ರಾಮಾಂತರದಲ್ಲಿ ಓದಿದ ಹುಡುಗ, ಓದು ಮುಗಿಸಿ, ಕಾರ್ಪೊರೇಟ್ ಜಗತ್ತನ್ನು ಪ್ರವೇಶಿಸಿದ ಎಂದರೆ, ಆ ಚಿಗುರು ಕಾರ್ಪೊರೇಟ್ ಜಗತ್ತಿಗೆ ಸೇರಿರುವುದು ಎಂದರೂ ಬೇರು ಹಳ್ಳಿಯದೇ ಅಲ್ಲವಾ? ಅದನ್ನು ಪ್ರತ್ಯೇಕಿಸುವುದಾದರೂ ಹೇಗೆ? ಪ್ರತ್ಯೇಕಿಸಬೇಕಾದರೂ ಯಾಕೆ?
ಕುವೆಂಪು, ಕಾರಂತರ ಮೂಲಕ ಮಲೆನಾಡು, ದಕ್ಷಿಣ ಕನ್ನಡ ಅರಿವಾದ ಹಾಗೆ ವಸುಧೇಂದ್ರ, ವಸ್ತಾರೆ ಮೂಲಕ ನನಗೆ ನಗರ ಜೀವನದ ತಲ್ಲಣಗಳು ದಕ್ಕಿದರೆ ಅದರಲ್ಲಿ ತಪ್ಪೇನು? ಅಷ್ಟಕ್ಕೂ ಈಗಿನ ಕಥೆಗಾರರ ಬಗ್ಗೆ ಬರೆಯುವಾಗ, ಈಗಿನ ಕಥೆಗಳನ್ನು ಓದುವಾಗ ಇಂದಿನ ನಗರ ಬದುಕಿನ ಸಮಸ್ತ ಸಂಕೀರ್ಣತೆಯನ್ನೂ ಹಿಡಿದಿಡುವ ಕಥೆಗಳನ್ನು ಬಿಟ್ಟು ಓದಿದರೆ ಇಂದಿನ ಸಮಗ್ರತೆ ನಮಗೆ ದಕ್ಕುವುದಾದರೂ ಹೇಗೆ?
ನನ್ನದೂ ಒಂದೇ ಬೇಡಿಕೆ. ನಾನು ಒಬ್ಬ ಓದುಗಳು, ಪುಸ್ತಕಗಳೆಂದರೆ ನನ್ನ ಪಾಲಿನ ಆಕಾಶ, ದಯವಿಟ್ಟು ಅದನ್ನು ತುಂಡು ಮಾಡಬೇಡಿ, ನನಗೆ ಎಲ್ಲವೂ ಬೇಕು, ಎಲ್ಲರೂ ಬೇಕು … ನನ್ನನ್ನು ನೆಮ್ಮದಿಯಾಗಿ ಓದಿಕೊಂಡಿರಲು ಬಿಡಿ…

‍ಲೇಖಕರು avadhi

March 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

38 ಪ್ರತಿಕ್ರಿಯೆಗಳು

  1. bharathi bv

    Waah! Modala baraha mechchina pustakadindle shruvaagide! Tumba chendada baraha sandhya …prathee vaara kaayuttene …:)

    ಪ್ರತಿಕ್ರಿಯೆ
  2. Jayalaxmi Patil

    ಆಹಾ! ಓದಿನ ನಂಟಿನೊಂದಿಗೆ ಆರಂಭ!ಶುಭಾರಂಭ. ಶುಭವಾಗತೈತಮ್ಮೋಓಓ ಓ ಓ ಓ. 🙂 ಅಭಿನಂದನೆ ಸಖಿ. :)ಇನ್ನು ನಿಮ್ಮ ಸರಣಿಗಾಗಿ ಕಾಯುವ ಸರದಿ. ಹರುಷದಿಂದ ಕಾಯುವೆ. 🙂

    ಪ್ರತಿಕ್ರಿಯೆ
  3. Gopaal Wajapeyi

    ನಿಮ್ಮ ಬೇಡಿಕೆಯನ್ನು ಇಲ್ಲಿ ಪ್ರಕಟಿಸಿದ ಮೇಲೆ ಈಗದು ಬರಿ ನಿಮ್ಮದಾಗಿ ಉಳಿದಿಲ್ಲ ; ನಮ್ಮದೂ ಹೌದು. ಅದಕ್ಕೇ ನೀವು ಈ ಮಾಲಿಕೆಯನ್ನು ‘ತುಂಡು ಮಾಡದೇ’ ವಾರವಾರವೂ ನೀಡುತ್ತಲೇ ಹೋಗಿ. ನಾವು ನೋಡುತ್ತಲೇ ಸಾಗುತ್ತೇವೆ.

    ಪ್ರತಿಕ್ರಿಯೆ
  4. vividyashankar harapanahalli

    It is always great pleasure to remain simple and anonymous reader. Great of reading is reading itself. Very important to remain as simple reader in this difficult time of polapolarisation

    ಪ್ರತಿಕ್ರಿಯೆ
  5. vividyashankar harapanahalli

    Please read it as… greatest joy of reading is reading itself.

    ಪ್ರತಿಕ್ರಿಯೆ
  6. jogi

    ಸಂಧ್ಯಾರಾಣಿ ಅವರೇ
    ಬರಹ ಚೆನ್ನಾಗಿದೆ. ನಿಮ್ಮ ಓದಿನ ವಿಸ್ತಾರ ಕೂಡ. ಎಲ್ಲವನ್ನೂ ಓದುತ್ತಾ ಹೋಗುವುದು ನಂಗೂ ಇಷ್ಟ. ನೀನು ನನ್ನ ಓದುಗನಲ್ಲ, ನೀನು ಓದುವ ರೀತಿ ಸರಿಯಿಲ್ಲ, ನೀನು ಇಂಥದ್ದನ್ನು ಓದಬೇಕು ಅನ್ನುವ ಸಲಹೆಗಳನ್ನೆಲ್ಲ ನಾನು ಧಿಕ್ಕರಿಸುತ್ತಲೇ ನನಗೆ ಬೇಕಾದ್ದನ್ನು ಕೊಂಡುಕೊಂಡು ಓದಿದ್ದೇನೆ. ಓದು ಮತ್ತು ಬರಹ ಎರಡೂ ಖಾಸಗಿ ಖುಷಿಗೆ. ಅದು ಆ ಕ್ಷಣ ಕೊಡುವ ಸಂತೋಷವನ್ನು ಯಾರೂ ಕಿತ್ತುಕೊಳ್ಳಲಾರರು.
    ಬರೀತಿರಿ.
    -ಜೋಗಿ

    ಪ್ರತಿಕ್ರಿಯೆ
  7. sunil Rao

    abbaa!! wonderfull one
    inculcation of anything with books are always absolute..

    ಪ್ರತಿಕ್ರಿಯೆ
  8. RENUKA NIDAGUNDI

    ವಾಹ್!!! ಹೆಚ್ಚು ಕಡಿಮೆ ನನ್ನ ಅನುಭವಗಳೂ ಹೀಗೆ ಇವೆ ಸಂಧ್ಯಾ. ನನ್ನ ಮನೆತುಂಬಾ ಪುಸ್ತಕಗಳೇ, ಟಿಪಾಯ್ ಮೆಲೆ, ದಾಇನಿಂಗ್ ಟೇಬಲ್ ಮೋಲೊಂದು, ಹಸಿಗೆ ಪಕ್ಕ ಮತ್ತೊಂದು…ತುಂಬಾ ಚೆನ್ನಾಗಿದೆ ಪುಸ್ತಕ ಹಾದಿಬದಿಯ ಹೂಗಳ ಕಂಪು… 🙂

    ಪ್ರತಿಕ್ರಿಯೆ
  9. Aparna Rao

    nanna manasthitiya prathibimba.. nimma lekhanagalalli..baredudannu ella mechchali, ennuvudakkinta ellara barahavannu oduva hambala.. adannu tammishtadante arthaisikolluva swatantra sukha hechchinadu ennuva nimma pramaanika aashayakke… nimaa barahagala odugalaagabayasuva.. sakhi.

    ಪ್ರತಿಕ್ರಿಯೆ
  10. veda

    Nimma baravanige ishtavaythu Sandhya. Sampu column thara Sandhya column gu kaytirtini. Shuba Haraikegalu

    ಪ್ರತಿಕ್ರಿಯೆ
  11. Rj

    ಈಗಷ್ಟೇ ‘ಕಾಲಂ’ ಓದಿದೆ.ನಿಮ್ಮ ಬರಹ ಕೊಡುವ ಖುಷಿ ನಿರೀಕ್ಷಿತ.ಬೇರೆ ಬೇರೆ ಹೂವುಗಳನ್ನು ಒಂದೇ ದಾರದಲ್ಲಿ ಪೋಣಿಸಿ,ವಿಭಿನ್ನ ಸುವಾಸನೆಗಳ ಮಧ್ಯೆ ಹೊಸ ಪರಿಮಳದ ನೋಟ ಅಸ್ವಾದಿಸುವದನ್ನು ಒಂದು ಕಲೆ ಅಂತ ಅನ್ನುವದಾದರೆ-
    Yes,You are blessed! 🙂
    -Rj

    ಪ್ರತಿಕ್ರಿಯೆ
  12. Sandhya Bhat

    ಪುಸ್ತಕಗಳಿಲ್ಲದ ದಿನಗಳನ್ನು imagine ಕೂಡ ಮಾಡಲಾರೆ. ಓದುತ್ತಿದ್ದಂತೆ ನನಗೆ ಓದಿನ ಹುಚ್ಚು ಹಿಡಿಸಿದ ಅಮ್ಮ, ಮಾವ, ಅತ್ತಿಗೆ, ಎಲ್ಲರೂ ನೆನಪಿಗೆ ಬಂದರು… ನಮ್ಮನೆಗೆ ಬರದ ತರಂಗವನ್ನು ಓದುವುದಕ್ಕಾಗಿ ಪಕ್ಕದ ಮೆನೆಯವರಿಗೆ ಓದಿ ಮುಗಿಯಲಿ ಎಂದು ಕಾಯುತ್ತಿದ್ದ ದಿನಗಳು ನೆನಪಾದವು… ತುಂತುರು, ಚಂಪಕ , ಚಂದಮಾಮ , ಬಾಲ ಮಂಗಳ… ಇವೆಲ್ಲ ಪುಸ್ತಕಗಳು ಓದುವ ಹವ್ಯಾಸಕ್ಕೆ ಬುನಾದಿ ಹಾಕಿದಂಥವು …
    you rocks … ಸಂಧ್ಯಾ …:)

    ಪ್ರತಿಕ್ರಿಯೆ
  13. umasekhar

    tumba chennagide nimma article sandhya. Ondu khushi andare nanna ishtada authur nimma ishtadaavaru kuda. Adare nimma book rack vomme nodabeku . pusthaka togollikke alla nodalu aste.

    ಪ್ರತಿಕ್ರಿಯೆ
  14. ಸುಮ ಸುಧಾಕಿರಣ್

    ಪುಸ್ತಕಗಳ ಬಗ್ಗೆ ನನ್ನ ಅನಿಸಿಕೆಗಳನ್ನೇ ನೀವು ಬರೆದಂತಿದೆ . ತುಂಬ ಇಷ್ಟವಾಯ್ತು ಈ ಕಾಲಂ . ಸಾಹಿತ್ಯದಲ್ಲಿ ವರ್ಗೀಕರಣ , ಸಾಹಿತ್ಯಲೋಕದ ಒಳಜಗಳಗಳು , ಸೆಲೆಬ್ರಿಟಿ ಸಾಹಿತಿಗಳ ಚಮಚಾಗಿರಿ , ಯಾವುದೂ ನಮಗೆ ಬೇಕಿಲ್ಲ . ಒಳ್ಳೆಯದು ಎಲ್ಲಿದ್ದರೂ ಬೇಕು . ನಮಗೆ ಬೇಕಿರುವುದು ಓದುವ ಖುಷಿ ಮತ್ತು ಅದರಿಂದ ವಿಸ್ತಾರಗೊಳ್ಳುವ ನಮ್ಮ ಅರಿವು ಇಷ್ಟೇ.

    ಪ್ರತಿಕ್ರಿಯೆ
  15. BHAGYALAKSHMI B V

    nanna baalyada nenapugalige pustakada hucchige matte rekke mudithu…..mudisitu e lekhana

    ಪ್ರತಿಕ್ರಿಯೆ
  16. suseela

    Sandhya,there is depth & width in ur writing.How we waited when we were young to read the serials of great writers
    like that we will wait & read ur column.Hats off to u dear.

    ಪ್ರತಿಕ್ರಿಯೆ
  17. ಸುಧಾ ಚಿದಾನಂದಗೌಡ

    ಪುಸ್ತಕಗಳ ಕುರಿತ ಮೊದಲ ಬರಹ ಚೆನ್ನಾಗಿದೆ ಸಂಧ್ಯಾ

    ಪ್ರತಿಕ್ರಿಯೆ
  18. ಅಶೋಕ ಶೆಟ್ಟರ್

    “ಆದರೆ ನಾನು ಯಾವಾಗ ’ಒಂದೂರಿನಲ್ಲಿ….’ ಎಂದು ಪ್ರಾರಂಭಿಸಿದರೂ ನನ್ನ ಒಂದೂರು ಶುರುವಾಗುವುದು ಪುಸ್ತಕದೊಡನೆಯೇ.”
    ಹಾ ಹಾ.., ಹಾಗಾದರೆ ಹಲವಾರು ಊರುಗಳ ದರ್ಶನ ಮಾಡಿಸಬಹುದು ನೀವು. ನಿಮ್ಮ ಬರಹದ ವಿಚಾರಗಳ ಕುರಿತ ಚರ್ಚೆ ಇಲ್ಲಿ ಅಪ್ರಸ್ತುತ, ಆದರೆ ನಿಮ್ಮ ಬರಹದ ಸರಳಗುಣದಲ್ಲೊಂದು ಸೌಂದರ್ಯವಿದೆ, ಇಷ್ಟವಾಯ್ತು,

    ಪ್ರತಿಕ್ರಿಯೆ
  19. Usha Rai

    ಸಂಧ್ಯಾ, ಪ್ರಾರಂಭ ಚೆನ್ನಾಗಿದೆ. ನಮಗೆಲ್ಲರಿಗೂ ನಮ್ಮ ಬಾಲ್ಯವೆಂದರೆ ಪುಸ್ತಕಗಳದ್ದೇ ನೆನಪು.

    ಪ್ರತಿಕ್ರಿಯೆ
  20. poornima girish

    Sandy.. TumbA chennagide Andre adu samanya agatte.. ninna barahada shaili TumbA hidistu.. look fwd to read more and more…

    ಪ್ರತಿಕ್ರಿಯೆ
  21. Anil Talikoti

    ತುಂಬಾ ಚೆನ್ನಾಗಿದೆ ಸಂಧ್ಯಾರಾಣಿ ಅವರೇ. ಹೆಚ್ಚು ಕಮ್ಮಿ ನನ್ನ ಓದು ಆರಂಭವಾಗಿದ್ದು ಪ್ರಜಾಮತ ,ಸುಧಾ, ತರಂಗ ಗಳಿಂದಲೇ. ಯಂಡಮೂರಿಯ ಧಾರಾವಾಹಿಗಳನ್ನು ಕಾಯ್ದು ಕಾಯ್ದು ಓದಿದ್ದಿದೆ. ಅಂತೆಯೇ ಮಲೆನಾಡು, ಮೈಸೂರಗಳ ಬಗ್ಗೆ ಅಪ್ಪ್ಯಾಯಮಾನತೆ ಬೆಳೆದದ್ದೇ ಕುವೆಂಪು, ಕೆ.ಎಸ.ನ ಇತ್ಯಾದಿಗಳ ಬರವಣಿಗೆಯಿಂದ. ಆಸಕ್ತಿಕರ ಕಾಲಂ – ಇನ್ನೂ ಆಕಾಶದ ಬಗೆಗಿನ ಮಾತು – ಅದು ಎಂದಿಗೂ ತುಂಡಾಗದ್ದು , ಆಗಾಗ ಬಣ್ಣ ಬದಲಾಯಿಸುತ್ತ ಇರುತ್ತದೆ ಅಷ್ಟೇ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  22. ಉಷಾಕಟ್ಟೆಮನೆ

    ಅಂಕಣ ಬರಹಕ್ಕೆ ತೆರೆದುಕೊಂಡ ರೀತಿ ಚೆನ್ನಾಗಿದೆ ಸಂಧ್ಯಾ.

    ಪ್ರತಿಕ್ರಿಯೆ
  23. shobhavenkatesh

    praramba thumba chennagide.nimma oodina hanthagalu,postman visiya chennagi moodibandide.nimma akasha nimage iruthade.yaroo thundu madalu sadyavilla.innu mundina lekhanagalige kayuthidene.

    ಪ್ರತಿಕ್ರಿಯೆ
  24. kiran desai

    ಸಂಧ್ಯಾ, ನಿಮ್ಮ ಬರಹ ನನ್ನ ನೆನಪಿನ ಅಂಕಣವನ್ನು ತೆರೆಯಿತು ಅಷ್ಟು ಚೆನ್ನಾಗಿ ಬರೆದಿದ್ದೀರ ಪುಸ್ತಕದ ಇಲ್ಲದೇ ಜೀವನ ಇಲ್ಲ ವಯಸ್ಸಾದ ಹಾಗೆ ನಮ್ಮ ಕಣ್ಣಿನ ಬಗ್ಗೆ ಕಾಳಜಿ ಮಾಡಿಕೊಳ್ಳಬೇಕು

    ಪ್ರತಿಕ್ರಿಯೆ
  25. ಸಂಧ್ಯಾ ರಾಣಿ

    ಮೊದಲ ಅಂಕಣ ಬರಹ ಅಂದರೆ ತುಂಬಾ ಹೆದರಿಕೆಯಲ್ಲಿ, ಟೆನ್ಶನ್‌ನಲ್ಲಿ ಇದ್ದೆ …. ಬರೆದ ಮೇಲೂ ಆತಂಕ … ಇದನ್ನು ನೀವೆಲ್ಲಾ ಓದಿದ್ದೀರಿ ಅನ್ನುವುದೇ ನನಗೆ ಸಂಭ್ರಮ .. ಜೊತೆಗೆ ನಿಮ್ಮ ಮೆಚ್ಚುಗೆಯ ನುಡಿಗಳು … ಮನಸಾರೆ ವಂದನೆ ..

    ಪ್ರತಿಕ್ರಿಯೆ
  26. ಸುಗುಣ ಮಹೇಶ್

    ವಿದ್ಯೆ ಯಾರಪ್ಪನ ಸ್ವತ್ತೂ ಅಲ್ಲಾ ಅಂತಾರೆ ಹಿರಿಯರು ಅದು ಓದಿಗು ಅನುವಹಿಸುತ್ತದೆ ಎಂದೆನಿಸುತ್ತೆ. ಯಾರು ಯಾವ ಬರಹ, ವಿಚಾರ ವಿನಿಮಯಗಳನ್ನು ಓದಬಹುದು… ಓದುಗರಾಗುವ ಸಂತಸ ಬೇರೆಲ್ಲೂ ಸಿಗದು.. ಸಂಧ್ಯಕ್ಕ ಚೆನ್ನಾಗಿದೆ ನಿಮ್ಮ ಲೇಖನ ಮುಂದುವರಿಸಿ ಕಾಯುತ್ತಿರುವೆವು ಮುಂದಿನ ಬರಹಗಳಿಗೆ.
    ವಂದನೆಗಳು
    ಸುಗುಣ ಮಹೇಶ್

    ಪ್ರತಿಕ್ರಿಯೆ
  27. akshata

    ಭೋ ಚಂದಾಗದೆ ನಿಮ್ಮ ಬರ್ವಣಿಗೆ ಸಂಧ್ಯಾ.:) ನನ್ನ ಮನೆಯಲ್ಲೂ ಪುಸತಕಗಳ ರಾಶಿಯೇ ಸಿಗುತ್ತದೆ ನಿಮಗೆ. ಮುಂಬಯಿಯಲ್ಲಿದ್ದು ಕನ್ನಡದ ಪುಸ್ತಕ ರಾಶಿ! ಓದುವ ಹವ್ಯಾಸ ಎಷ್ಟು ಖುಷಿ ಕೊಡುತ್ತದೆ ಅಲ್ಲವೆ? ಚಿಕ್ಕಂದಿನಿಂದ ಇಲ್ಲಿಯವರೆಗೆ ನಿಮ್ಮ ಓದಿನ ಪ್ರವಾಸ ಓದಿ ಬಹಳ ಖುಷಿಯಾಯಿತು. ಮುಂದಿನ ಬರಹಕ್ಕಾಗಿ ಕಾಯುವೆ. ಮತ್ತೊಮೆ ಅಭಿನಂದನೆಗಳು.
    ಅಕ್ಷತಾ.

    ಪ್ರತಿಕ್ರಿಯೆ
  28. ಜಿ.ಎನ್ ನಾಗರಾಜ್

    ನನಗೆ ನಿಮ್ಮ ಬರಹ ಬಹಳ, ಬಹಳ ಖುಷಿ ಕೊಟ್ಟಿತು.ಒಂದು,ಪುಸ್ತಗಳೊಂದಿಗಿನ ನಿಮ್ಮಅಂತ್ಯವಿಲ್ಲದ ಪ್ರಣಯದ ಬಗ್ಗೆ ಹಾಗೂ ಅದನ್ನು ಎಲ್ಲರ ಮುಂದಿಟ್ಟಿರುವ ಚೆಂದದ ಬಗ್ಗೆ.ಮತ್ತೊಂದು ಪುಸ್ತಕಗಳ ಪ್ರಣಯಿಗಳ ವಿಶಾಲ ಲೋಕ ಈ ನೆಪದಲ್ಲಿ ಇಲ್ಲಿ ತೆರೆದುಕೊಂಡ ಬಗ್ಗೆ.ಅಹಾ ! ಅದೇನು ಮಜಾ !! ಈ ಪ್ರಣಯ.ನಿನ್ನೆ ಮೊನ್ನೆ ರೈಲಿನಲ್ಲಿ ದೀರ್ಘ ಪ್ರಯಾಣ ಮಾಡುವ ವೇಳೆ ಸಿಕ್ಕ ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ ” ಸಾಹಿತ್ಯಕ್ಕೆ ತೆರೆದು ಕೊಳ್ಳಿ, ನಿಮ್ಮ, ನಿಮ್ಮ ಅತಿ ಕಿರಿದಾಗುತ್ತಾ ಹೋಗುತ್ತಿರುವ ಪರಿಣತಿಯ ಕೂಪ ಮಂಡೂಕಗಳಾಗ ಬೇಡಿ.’ಹಸುರು ಹೊನ್ನು’ ‘ಮೇರಿ ಕ್ಯೂರಿ’ಗಳಿಂದಲೇ ಆರಂಭಿಸಿ. ಓದಿನ ಮೂಲಕ ವಿಶಾಲ ಜಗತ್ತಿನ ಪಯಣಿಗರಾಗಿ. ಆಗ ನಿಮ್ಮ ಮಾನವೀಯತೆ ಮತ್ತಷ್ಟು ಅರಳುತ್ತದೆ.” ಎಂದು ರಾತ್ರಿ ಹನ್ನೆರಡರವರೆಗೂ ಕೊರೆದಿದ್ದೆ. ರೈಲಿನಿಂದ ಕೆಳಗಿಳಿದ ಕೂಡಲೇ ಈ ಬರಹ ನೋಡಿದ್ದು ಖುಷಿಯಾಗದಿದ್ದೀತೆ !

    ಪ್ರತಿಕ್ರಿಯೆ
  29. Anuradha.B.Rao

    ತುಂಬಾ ಚೆನ್ನಾಗಿದೆ ಸಂಧ್ಯಾ. ನಾವು ಶಾಲಾ ಕಾಲೇಜುಗಳಲ್ಲಿಓದುತ್ತಿದ್ದ ತ.ರಾ.ಸು ಅವರ ಚಿತ್ರದುರ್ಗದ ಇತಿಹಾಸ ಮಾಲಿಕೆಯ ಕಾದಂಬರಿಗಳು ನೆನಪಾದವು. ಪುಸ್ತಕದೊಡಗಿನ ನಂಟು ಬಿಡಿಸಲಾರದ ಗಂಟು. ಅಭಿನಂದನೆಗಳು.

    ಪ್ರತಿಕ್ರಿಯೆ
  30. Tejaswini Hegde

    ನನ್ನ ಜೀವನದ ಸಮಸ್ಯೆಗಳನ್ನು, ಸವಾಲುಗಳನ್ನು ನಾನು ’ಆಯ್ತು ಮಾರಾಯ, ಬಾ ಇಲ್ಲಿ, ಕೂತು ಮಾತಾಡೋಣ, ಅಂಥಾದ್ದೇನಾಯ್ತು ಈಗ’ ಅನ್ನುವಂತೆ ತೆಗೆದುಕೊಳ್ಳಲು ಸಾಧ್ಯವಾದದ್ದು ಈ ಪುಸ್ತಕಗಳಿಂದ, ಸಾಹಿತ್ಯದಿಂದ ಮತ್ತು ಅದರ ಮೂಲಕ ಎದೆಗೆ ನಡೆದುಬಂದ ಕವನ ಹಾಡುಗಳಿಂದ …..
    Wah!!!! ivu nanna matugalE… nannoLagina maaatugaLu.. sakat ista aaytu Sandhya 🙂

    ಪ್ರತಿಕ್ರಿಯೆ
  31. umavallish

    ಇದು 3 ವರ್ಷದ ಹಳೆಯದಾದರೂ ನಾನು ಈ ಪತ್ರಿಕೆಗೆ ಹೊಸಬಳು. ಸಂದ್ಯಾ ಅವರೇ ನಿಮ್ಮ ಲೇಖನಗಳನ್ನು ಓದುತ್ತಾ, ಓದುತ್ತಾ ಇರಲೇಬೇಕು ಅಂತ ಅನ್ನಿಸುವ ಹಾಗೆ ನಿಮ್ಮ ನಿರೂಪಣೆ ಇರುತ್ತದೆ. 2015 ರ ಲೇಖನಗಳನ್ನೂ, ಓದಿದ್ದೇನೆ. ಏಕೆಂದರೆ ನಾನು ಈ ಪತ್ರಿಕೆಯ ಓದುಗಳಾದದ್ದೇ ಆಗ. ”ನೀವು ಬರೆಯುತ್ತಲೇ ಇರಿ” ನಾನು ಅಭಿಮಾನದಿಂದ ಓದುತ್ತಲೇ ಇರ್ತೀನಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: