ಸಂಪು ಕಾಲಂ : ವೈದ್ಯೋ ನಾರಾಯಣೋ ಹರಿಃ?!

ನಮ್ಮ ಸಮಾಜದಲ್ಲಿ ವೈದ್ಯರಿಗೆ ಅತ್ಯಂತ ಗೌರವ ಸ್ಥಾನವಿದೆ. ಕಣ್ಣಿಗೆ ಕಾಣುವ ದೇವರಂತೆ ವೈದ್ಯರನ್ನು ನಾವು ಭಾವಿಸುತ್ತೇವೆ. ನಮ್ಮ ದೇಹದಲ್ಲಿ ಜರುಗುತ್ತಿರುವ ಅನೇಕ ಅನಾನುಕೂಲಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅದಕ್ಕೆ ತಕ್ಕ ಔಷಧಿ ಕೊಟ್ಟು, ಆ ಅನಾರೋಗ್ಯವನ್ನು ಓಡಿಸುವುದು, ಪುನಃ ನಮ್ಮಲ್ಲಿ ಚೈತನ್ಯ ತುಂಬುವುದು ಎಂದರೆ ಸಾಮಾನ್ಯ ಸಂಗತಿಯೇ. ಬದುಕು ಸಾವುಗಳ ನಡುವಿನ ಒಂದು ಜೀವಂತ ಕೊಂಡಿಯಾಗಿರುವ ಆಪದ್ಬಾಂಧವ ಈ ವೈದ್ಯ. ಹಿಂದಿನ ಕಾಲದದಿಂದಲೂ ವೈದ್ಯ ವೃತ್ತಿಗೆ ಸಾಕಷ್ಟು ಮನ್ನಣೆ. ರಾಜಾದಿರಾಜರೂ ಸಹ ವೈದ್ಯರ ಕಾಲಿಗೆರಗುತ್ತಿದ್ದರು. ವೈದ್ಯರು ಹಳ್ಳಿ ಹಳ್ಳಿಗಳಿಗೆ ನಡೆದಾಡಿ ರೋಗಿಗಳಿಗೆ ಉಚಿತ ಚಿಕಿತ್ಸೆ ಮಾಡುತ್ತಿದ್ದರು. ವೈದ್ಯರ ಜೀವನೋಪಾಯವನ್ನು ಸಮಾಜವೇ ನೋಡಿಕೊಳ್ಳುತ್ತಿತ್ತು.

ಅಂದರೆ ಅವರಿಗೆ ಬೇಕಾದ ಧವಸ, ಧಾನ್ಯಗಳು, ಬಟ್ಟೆ ಬರೆ ಇತ್ಯಾದಿ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿತ್ತು. ಜನರ ಜೀವನಕ್ಕೆ, ಭಾವನೆಗಳಿಗೆ ನಿಜಕ್ಕೂ ಸ್ಪಂದಿಸುತ್ತಾ ಒಂದು ವರವಾಗಿ ವೈದ್ಯ ಜೀವಿಸುತ್ತಿದ್ದ. ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ನಿಜಕ್ಕೂ ಸತ್ಯವಾಗಿತ್ತು. ಆದರೆ ಇಂದಿಗೂ ಆ ಮಾತು ನಿಜಕ್ಕೂ ಪ್ರಸ್ತುತವೇ? ಇರಬಹುದು. ಇಂದಿಗೂ ದೇವರಂತಹ ವೈದ್ಯರು ಇದ್ದಾರೆ, ಆದರೆ ಈ ದೇವರುಗಳ ಸಂಖ್ಯೆ ಸಾಕಷ್ಟು ಕ್ಷೀಣಿಸುತ್ತಾ ಬಂದಿದೆ.

‘ರಾಶಿಯಲ್ಲೊಂದು ಮುಷ್ಠಿ’ ಎಂಬಷ್ಟು ಕಡಿಮೆಯಾಗಿ ಹೋಗಿದೆ ಈ ವೈದ್ಯ ಮತ್ತು ವೈದ್ಯ ವೃತ್ತಿಯ ಪರಮಾರ್ಥ. ಇಂದು ‘ವೈದ್ಯರು’ ಮತ್ತು ‘ಆಸ್ಪತ್ರೆಗಳು’ ಎಂಬ ಪದಗಳೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಯಮಯಾತನೆಯನ್ನು ಪ್ರಸಾದಿಸುವ ಸಾಕಾರತ್ವವನ್ನು ಪಡೆಯುತ್ತಿವೆ. ಮನುಷ್ಯನ ಜೀವನಕ್ಕೆ, ಭಾವನೆಗಳಿಗೆ ಯಾವ ಬೆಲೆಯೂ ಕೊಡದ ಈ ಚಿಕಿತ್ಸಾಕೂಪಗಳು ದುಡ್ಡು ಹುಟ್ಟಿಸುವ ಯಂತ್ರದ ಕಾರ್ಖಾನೆಗಳಾಗಿ ಮಾರ್ಪಡುತ್ತಿವೆ. ತೆಲುಗಿನಲ್ಲಿ ಒಂದು ಗಾದೆ ಮಾತಿದೆ, “ಮೃದುಮೈನ ಅತ್ತಿಪಂಡು, ದಾನಿ ಪೊಟ್ಟವಿಪ್ಪಿ ಚೂಸಿತೆ, ಒಳ್ಳಂತಾ ಪುಲುಗುಲು” (ಮೃದುವಾದ ಅಂಜೂರದ ಹಣ್ಣಿನ, ಹೊಟ್ಟೆ ಬಗೆದು ನೋಡಿದರೆ, ಮೈಯೆಲ್ಲಾ ಹುಳುಗಳೇ). ಹಾಗೆ, ನೋಡಲು ಪಂಚತಾರಾ ಹೋಟೆಲುಗಳಂತೆ ಹೊಳೆಯುವ ಇಂದಿನ ಸಾಕಷ್ಟು ಆಸ್ಪತ್ರೆಗಳು, ಒಳಗೆ ಬರೀ ವ್ಯಾಪಾರ, ಹಣದ ಲಾಲಸೆ, ವಂಚನೆ ಎಂಬ ಹುಳುಕನ್ನೇ ತುಂಬಿಕೊಂಡಿದೆ.

“My doctor gave me six months to live, but when I couldn’t pay the bill he gave me six months more.” ಎಂಬಂತಹ ಪ್ರಸಿದ್ಧ ಅಮೇರಿಕನ್ ಚಿತ್ರನಟ ವಾಲ್ಟರ್ ಮಾಥ್ಯೂ ಅವರ ತಮಾಷೆಯ ಈ ನುಡಿ, ವೈದ್ಯ ವೃತ್ತಿಯ ಕ್ರೌರ್ಯವನ್ನು ನುಣುಪಾಗಿ ಬಿಂಬಿಸುತ್ತದೆ. ಇಷ್ಟೆಲ್ಲಾ ಕಹಿ ಧಿಡೀರನೆ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಕಾರಣ. ನಾನು ಇತ್ತೀಚಿಗೆ ಕೇಳಲ್ಪಟ್ಟ, ಅನುಭವಿಸಲ್ಪಟ್ಟ ಸಾಕಷ್ಟು ಘಟನೆಗಳು. ನನ್ನ ಸ್ನೇಹಿತೆಯೊಬ್ಬಳು, ಆಕೆಯ ಪತಿಗೆ ಕಿಡ್ನಿನಲ್ಲಿ ತೊಂದರೆ ಕಾಣಿಸಿಕೊಂಡು, ಅದು ಸಾಕಷ್ಟು ಮುಂದುವರೆದುಬಿಟ್ಟಿದ್ದು, ತಕ್ಷಣ ಆಪರೇಶನ್ ಜರುಗಿಸಬೇಕು ಎಂದು ತಿಳಿದು ಬಂತು.ಆಕೆಗೆ ಭಯ, ಗಾಭರಿಗಳ ನಡುವೆ ದುಡ್ಡು ಹೊಂಚಿಸುವ ಭರಾಟೆ.

ಕೊನೆಗೂ ಹೇಗೋ ಮಾಡಿ, ತನ್ನ ಪತಿ ಆ ಕ್ಷಣ ಮೊದಲಿನಂತಾಗಬೇಕು ಎಂಬ ಆಸೆಯಿಂದ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಿದಳು. ಅದಕ್ಕೂ ಮುಂಚೆ ಈ ಆಸ್ಪತ್ರೆಯ ಬಗ್ಗೆ ತಿಳಿದಿರಲಿಲ್ಲ. ಆದರೆ ಈಕೆ ಮೊದಲು ತೋರಿದ ಸಾಮಾನ್ಯ ಫಿಸಿಶಿಯನ್ ವೈದ್ಯರು, ಈ ಆಸ್ಪತ್ರೆಯನ್ನು ಸೂಚಿಸಿದ್ದರು. (ನಡುವೆ ಅವರಿಗೂ, ಇವರಿಗೂ ಇರುವ ನೆಂಟಸ್ತಿಕೆ ಗಮನಿಸಿ! ). ಚಿಕಿತ್ಸೆ ಪ್ರಾರಂಭವಾಯಿತೋ ಇಲ್ಲವೋ, ಜೇಬು ಖಾಲಿಯಾಗುತ್ತಲೇ ಬಂತು! ಆತನಿಗೆ ‘ತತ್ ಕ್ಷಣ ‘ಮಾಡಲೇಬೇಕಾದ ಅನೇಕ ಟೆಸ್ಟ್ ಗಳ ಪಟ್ಟಿ ಬಂದೇಬಿಟ್ಟಿತು.

ಹೆದರಿದ ಜೀವ, ನೊಂದ ಮನ ದುಡ್ಡಿನ ಬಗ್ಗೆ ಯೋಚಿಸುತ್ತದೆಯೇ! ಅವರು ಹೇಳಿದಂತೆ ಎಲ್ಲವೂ ಮಾಡಿಯಾಯಿತು, ಎಲ್ಲಕ್ಕೂ ತಲೆಯಾಡಿಸಿ ಆಯಿತು. ಕೊನೆಗೆ ಎಲ್ಲ ರಿಪೋರ್ಟ್ ಬಂದ ಮೇಲೆ, ಒಮ್ಮೆ ಎಲ್ಲ ನೋಡಿ “ಈ ಮಾತ್ರೆ ತೆಗೆದುಕೊಳ್ಳಿ” ಎಂದು ಒಮ್ಮೆಲೇ ಬರೆದು, “ಬಿಲ್ ಅಲ್ಲಿ ಕಟ್ಟಿ” ಎನ್ನುತ್ತಾ ಹೊರಟೇ ಬಿಡುವುದೇ! ವ್ಯಕ್ತಿಗೆ ಏನಾಗಿದೆ? ಅದು ಯಾಕೆ ಹೀಗೆ, ಅದಕ್ಕೆ ನಿಜಕ್ಕೂ ಏನು ಮಾಡಬೇಕು, ಹೇಗೆ ಕಾಳಜಿ ವಹಿಸಬೇಕು, ಇದ್ಯಾವುದಕ್ಕೂ ಅವರಲ್ಲಿ ಸಮಾಧಾನಿಸುವ ಉತ್ತರವಿಲ್ಲ, ಕೊಡುವಷ್ಟು ಸಮಯವೂ ಇಲ್ಲ!


ಎಲ್ಲವೂ ಆದ ನಂತರ, ಕೊನೆಗೆ ಅದೇನೋ “ಪ್ಯಾಕೇಜ್” ಅಂತೆ, ಏನಪ್ಪಾ ಅಂದರೆ, “ರೋಗಿಯ ಮತ್ತು ಆತನ ಮನೆಯವರ ಮನಸ್ಸು ತುಂಬಾ ನೊಂದಿರುತ್ತದೆ ಅದಕ್ಕೆ, ನಾವು ನೀಡುವ ಮನೋವೈಜ್ಞಾನಿಕ ಚಿಕಿತ್ಸೆ” ಎಂದು ಬರೆದಿತ್ತಂತೆ. ಅದರಲ್ಲಿ ಏನೂ ಹುರುಳಿಲ್ಲದಿದ್ದರೂ, ಅದಕ್ಕೂ ಎರಡು ಸಾವಿರ ರೂ ವರೆಗೂ ಹಣ ತೆತ್ತಿ ಬರಬೇಕಾದ ಪರಿಸ್ಥಿತಿ! ಇದು ನಮ್ಮ ಬೇಜವಾಬ್ದಾರಿ ಅಥವಾ ದಡ್ಡತನ ಎಂದು ಖಂಡಿತ ಹೇಳಲು ಅಸಾಧ್ಯ. ಏಕೆಂದರೆ, ಆ ತಕ್ಷಣದ ಮನಸ್ಥಿತಿಯಲ್ಲಿ, ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳುವ ಆತಂಕ, ರೋಗಿಗೆ ಏನೇನೆಲ್ಲಾ ಆಗಿ ಹೋಗಿದೆಯೋ ಎಂಬ ಭಯ ಆವರಿಸಿಬಿಟ್ಟಿರುತ್ತದೆ.

ಇಂತಹ ಸಂದರ್ಭವನ್ನು ಕ್ಯಾಶ್ ಮಾಡಿಕೊಳ್ಳುವುದು ಗೋಮುಖ ವ್ಯಾಘ್ರತೆ ಎನಿಸಿಕೊಳ್ಳುವುದಿಲ್ಲವೆ! ನನ್ನ ವಯಸ್ಸಾದ ಅಜ್ಜಿಯನ್ನು ತಾಳಲಾರದ ಹೊಟ್ಟೆನೋವು ಆವರಿಸಿ ಅಂಜಿಕೆಯಿಂದಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೆ, ಆ ಮಹಾನ್ ವೈದ್ಯೆ “ಅಯ್ಯೋ ಈಕೆಗೆ ಏನೋ ಆಗಿದೆ, ನಿಧಾನಿಸಬಾರದು, ತತ್ ಕ್ಷಣ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಈ ಕೆಳಗಿನ ಪರೀಕ್ಷೆಗಳನ್ನೆಲ್ಲ ಈಗಲೇ ಮಾಡಿ” ಎಂದು ನಮ್ಮನ್ನು ಲಿಟೆರಲಿ ಓಡಿಸಿಬಿಟ್ಟಳು. ಹೆದರಿದ್ದ ನಾವು ಎಲ್ಲಾ ಪರೀಕ್ಷೆಗಳನ್ನೂ ಮಾಡಿಸಿದ ನಂತರ ತಿಳಿದು ಬಂದದ್ದು, ಸಣ್ಣ ಅಜೀರ್ಣ ಮತ್ತೇನೂ ಇಲ್ಲ ಎಂದು. ಈ ರೀತಿ ಒಂದೆಡೆ ಹಣಸುಲಿಗೆಯಾದರೆ ಮತ್ತೊಂದು ಕಡೆ ಮಾನಸಿಕ ಒತ್ತಡ! ಮೊದಲನೆಯದಾದರೂ ಕ್ಷಮಿಸಿಬಿಡಬಹುದು. ಎರಡನೆಯದ್ದಾದ ಮಾನಸಿಕ ಉದ್ವೇಗವನ್ನು, ಅದರಿಂದಾಗುವ ಪರಿಣಾಮಗಳನ್ನು ಅನುಭವಿಸಿಯೇ ತಿಳಿಯಬೇಕು.

ಈ ರೀತಿ ಮನಸುಗಳ ಜೊತೆ ಚೆಲ್ಲಾಟವಾಡುತ್ತಿದ್ದೀವಿ ಎಂಬ ಒಂದು ಸಣ್ಣ ಪಿಂಚ್ ಕೂಡ ಅವರಿಗೆ ಆಗುವುದಿಲ್ಲವೇ ಎಂಬ ಆಶ್ಚರ್ಯ ಕಾಡುತ್ತದೆ! ಇವುಗಳ ನಡುವೆ ನನಗೆ ಭಾರತಿ ಬಿ ವಿ ಅವರು ಉದಯವಾಣಿಯಲ್ಲಿ ಬರೆದ “ನನ್ನ ಮರುಜನ್ಮ” ಲೇಖನ ನೆನಪಾಗುತ್ತದೆ. ಅದರಲ್ಲಿ ಒಂದು ಕಡೆ ಅವರು, ಮೊಟ್ಟ ಮೊದಲ ಬಾರಿಗೆ ತಮಗೆ ಯಾವುದೋ ದೊಡ್ಡ ಖಾಯಿಲೆ ಇದೆ ಎಂದು ತಿಳಿದ ಕ್ಷಣದ ಬಗ್ಗೆ, ಮತ್ತು ಆ ಕ್ಷಣದಲ್ಲಿ ಅವರೊಟ್ಟಿಗೆ ವೈದ್ಯರು ನಡೆದುಕೊಂಡ ರೀತಿ ಇವುಗಳ ಬಗ್ಗೆ ತಿಳಿಸಿದ್ದಾರೆ. ಆ ಘಟನೆಯನ್ನು ನೆನೆಸಿಕೊಂಡರೆ ಮನಸು ಮುದುಡಿಹೋಗುತ್ತದೆ! ಇಂತಹ ಸಂದರ್ಭಗಳಲ್ಲಿ, “The doctor is to be feared than the disease” ಎಂಬ ಒಂದು ಲ್ಯಾಟಿನ್ ಹೇಳಿಕೆ ನೆನಪಾಗುತ್ತದೆ. ರೋಗಗಳನ್ನು ಬಿಟ್ಟುಬಿಡೋಣ, ಬಹುಷಃ ಅದರ ಸಂಪೂರ್ಣ ಜ್ಞಾನವಿಲ್ಲದೇ ಠೀಕೆಗೆ ಗುರಿಪಡಿಸುವುದು ತಪ್ಪಾಗಬಹುದು.

ಆದರೆ, ಹೆರಿಗೆಗಳು?! ತಲೆತಲಾಂತರಗಳಿಂದ ಮನುಷ್ಯ ಮನುಷ್ಯರುಗಳ ಜನ್ಮವನ್ನು ಕಂಡ ಈ ಭೂಮಿ ಮೂಕಸಾಕ್ಷಿಯಾಗಿ ನಿಂತಿದೆ. ಆಗ ಆಗುತ್ತಿದ್ದುದೂ ಹೆರಿಗೆಯೇ, ಈಗ ಆಗುವುದೂ ಅದೇ ಹೆರಿಗೆಯೇ! ನಮ್ಮಜ್ಜಿಯನ್ನು ಅವರ ಒಂದು ಮಾತಿನಿಂದ ನಾವು ಸದಾ ಕೀಟಲೆ ಮಾಡುತ್ತೀವಿ, ಅದನ್ನು ಆಕೆಯ ಬಾಯಿಯಿಂದಲೇ ಕೇಳಿದರೆ ಚೆನ್ನ, “ನನಗೆ ಬಾಳೆಹಣ್ಣು ಸುಲಿದ ಹಾಗೆ ಹೆರಿಗೆ ಆಗಿಬಿಡುತ್ತಿತ್ತು” ಎಂದು ಹೇಳಿ ನಾಚುತ್ತಾರೆ. ಆಗ್ಗೂ, ಈಗ್ಗೂ ಕಾಲಸಹಾಜ ಮಾರ್ಪಾಡುಗಳು (ನಮ್ಮ ದೈಹಿಕ ವ್ಯಾಯಾಮ, ಆರೈಕೆಗಳ ಕೊರತೆ ಇರಬಹುದು) ಬಿಟ್ಟರೆ ಉಳಿದೆಲ್ಲ “ನಿರ್ವಹಣ ವಿಧಾನಗಳು” ಒಂದೇ. ಆದರೂ ಈಗಿನ ಒಂದು ಹೆರಿಗೆಗೆ ಏನಿಲ್ಲ ಎಂದರೂ ಒಂದು ಲಕ್ಷ ಖರ್ಚು, ಜೊತೆಗೆ ಅವರ ಸಾಕಷ್ಟು “ಹಿತವಚನ”ಗಳಿಂದ ಉಂಟಾಗುವ ಮಾನಸಿಕ ಒತ್ತಡ.

ಇದಕ್ಕಿಂತಲೂ ಒಂದು ಕ್ರೌರ್ಯ ಹೇಳುತ್ತೇನೆ ಕೇಳಿ. ಫಸ್ಟ್ ಆಫ್ ಆಲ್, ಈ ವಿಷಯವನ್ನ ಒಂದು ಮೆಡಿಕಲ್ ಶಾಪ್ ನ ಮೂಲಕ ಕೇಳಲ್ಪಟ್ಟೆ. ಈಗಲೂ ನನಗೆ ನಂಬಲು, ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ಮಾತು! ಅದೇನೆಂದರೆ, ನಗರದ ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ, ಒಬ್ಬ ವ್ಯಕ್ತಿ ಸತ್ತ ನಂತರವೂ ಒಂದೆರಡು ದಿನ, ಐ ಸಿ ಯು ಲಿ ಇಟ್ಟಿರುವುದಾಗಿಯೂ, ಯಾರನ್ನೂ ಒಳಬಿಡಲು ಸಾಧ್ಯವಿಲ್ಲ ಎಂಬುದಾಗಿಯೂ ತಿಳಿಸಿ, ಆ ಎರಡು ದಿನಕ್ಕೆ ಹೆಚ್ಚುವರಿ ಹಣ ಪಡೆದು ನಂತರ ಹೆಣವನ್ನು ಮರಳಿಸಿದರಂತೆ!! ಬಹುಷಃ ಈ ಮಾತು ಸತ್ಯವೇ ಆದ್ದಲ್ಲಿ, ಇದು ದುರಾತ್ಮದ ಪರಮಾವಧಿಯಲ್ಲವೇ!

ನಾನಾಗಲೇ ಹೇಳಿದಂತೆ, ಈ ಮೇಲೆ ಹೇಳಿದ ಮಾತುಗಳು ಒಂದು ಜೆನೆರಲೈಸೇಷನ್ನೇ ಹೊರತು, ಎಲ್ಲ ವೈದ್ಯರೂ ಹೀಗೆ ಎಂದಲ್ಲ. ಸರಿಯಾದ ವೈದ್ಯರನ್ನು ಹುಡುಕಿ ಹೋಗುವುದು, ಬುದ್ಧಿಯನ್ನು ಮನಸ್ಸಿಗೆ ಕೊಡದೆ ಒಮ್ಮೆ ಆಲೋಚಿಸಿ ವೈದ್ಯಕೀಯ ಚಿಕಿತ್ಸಾ ಪಾತ್ರಗಳನ್ನು ಕೈಗೊಳ್ಳುವುದು ಅತ್ಯವಶ್ಯಕ ಮತ್ತು ನಮ್ಮ ಜವಾಬ್ದಾರಿಯಾಗುತ್ತದೆ. ನಮಗಾಗಿ ಅಲ್ಲದಿದ್ದರೂ, ವೃತ್ತಿ ದ್ರೋಹ ಮಾಡುವಂತಹ ವೈದ್ಯರನ್ನು, ಅವರ ಆಸ್ಪತ್ರೆಗಳನ್ನು ತಡೆಗಟ್ಟಲಾದರೂ ನಮ್ಮ ಆರೋಗ್ಯದ ಕಡೆ ಈ ಕ್ಷಣದಿಂದಲೇ ಗಮನ ಕೊಡೋಣ!

 

 

‍ಲೇಖಕರು avadhi

March 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Gopaal Wajapeyi

    ನಿಮ್ಮ ಲೇಖನ ಓದಿದೆ. ತ್ಚ್… ”ನಾರಾಯಣ… ನಾರಾಯಣ…”

    ಪ್ರತಿಕ್ರಿಯೆ
  2. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಸಂಯುಕ್ತ , ನಿಮ್ಮ ಲೇಖನ ಸಕಾಲಿಕ . ನನಗೊಮ್ಮೆ ಕಫ ಮತ್ತು ಕೆಮ್ಮು .ನಮ್ಮ ವೈದ್ಯರು ಪ್ರಸಿದ್ಧ ನರ್ಸಿಂಗ್ ಹೋಂ ನ ಇ.ಏನ್.ಟಿ ತಜ್ಞರ ಬಳಿಗೆ
    ಕಳಿಸಿದರು .ಗಂಟಲಿಗೆ ಅರಿವಳಿಕೆ ಬಳಿದು ಇಣುಕಿದ ಮಹಾಶಯರು ‘ಗಂಟಲಲ್ಲಿ ಎರಡು ನಾಡ್ಯೂಲ್ ಗಳಿವೆ ,ಆಪರೇಟ್ ಮಾಡ್ಬೇಕು ‘ಅಂದ್ರು .ಆಮೇಲೆ
    ಸ್ಪೀಚ್ ಥೆರಪಿ ಮಾಡ್ತೇವೆ ,ಹದಿನೈದು ದಿನ ರಜ ಹಾಕ್ಬೇಕು -ಅಂದ್ರು . ಗಾಬರಿಗೊಂಡು ,’ಏನದು ಕಾನ್ಸರ್ರೆ ?’ ಅಂತ ಕೇಳಿದೆ .’ ಗೊತ್ತಿಲ್ಲ್ಲ ಆಮೇಲೆ
    ಪೆಥಾಲೋಜಿ ಗೆ ಕಳಿಸಿದ್ರೆ ಗೊತ್ತಾಗುತ್ತೆ ‘ ಅಂತಂದ್ರು.’ನಿಮ್ಮ ಅನುಭವದಲ್ಲಿ ಈ ಥರದ್ದು ಸಾಮಾನ್ಯವಾಗಿ ಏನಾಗಿರ್ತದೆ ?’,ಒಳಗಿನ ಆತಂಕದಿಂದ
    ಕೆದಕಿದೆ .’ಮೋಸ್ಟ್ ಪ್ರೋನ್ ಟು ಕಾನ್ಸರಸ್ ‘ ಎಂದೇನೋ ಅಂದ್ರು .ಅಂದ್ರೆ ಬಹುಪಾಲು ಕಾನ್ಸರ್ರೆ ಅಂತ ನಾನಂದುಕೊಂಡೆ .ಅಂದಿನಿಂದ ಎರಡು
    ದಿನ ನಾನು ಜೀವಚ್ಛ ವವಾಗಿ ತಿರುಗಾಡಿದೆ(ಮನೇಲಿ ಹೆಂಡತಿ ಮಕ್ಕಳಿಗೂ ತಿಳಿಸಲಿಲ್ಲ ) .ಕೊನೆಗೆ ಇನ್ಯಾರನ್ನಾದರೂ ಕೇಳೋಣ ಅಂತ ಹೊಳೆಯಿತು .
    ತಮ್ಮನ ಮೂಲಕ ಅಣ್ಣನಿಗೆ ತಿಳಿಸಿದೆ .ಮಧ್ಯಮ ವರ್ಗದ ಆಸ್ಪತ್ರೆ ಎಂದು ಖ್ಯಾತವಾದ ಕ್ರಿಶ್ಚಿಯನ್ನರ ಆಸ್ಪತ್ರೆಗೆ ಹೋದೆವು .ಅಲ್ಲಿ ಡಾ.ಲಕ್ಷ್ಮೀ ಅಂತ (ಆಕೆಯ ಪಾದಕ್ಕೆ ಈಗ ಮತ್ತೊಂದು ನಮನ !) ಎಂಡೊಸ್ಕೊಪಿ ಮಾಡಿ ,’ಏನು ಇಲ್ಲ ರೀ ,ಸ್ವಲ್ಪ ಊತ ಇದೆ ,ಈ ಮಾತ್ರೆ ಟೆಪರಿಂಗ್ ರೀತಿಯಲ್ಲಿ ತಗೊಳ್ಳಿ
    ಎಲ್ಲ ಸರಿಹೋಗುತ್ತದೆ ‘ಅಂದ್ರು .ಈಚೆಗೆ ಬಂದ ನಾವು ಮೂವರು ಅಣ್ಣ ತಮ್ಮಂದಿರು ಒಬ್ಬರನ್ನೊಬ್ಬರು ನೋಡಿದ್ದೇ ತಡ ‘ಓ ‘ಅಂತ ಅತ್ತೆವು ..ಕರುಳಿನಾಳದಿಂದ ಬಂದ ಆ ನಮ್ಮ ದುಃಖವನ್ನು ನಾನಿನ್ನು ಒದ್ದೆ ಕಂಗಳಲ್ಲಿ ನೆನೆಯುತ್ತೇನೆ.
    ಇದಾಗಿ ಇಪ್ಪತ್ತು ವರ್ಷಗಳಾಗಿರಬಹುದು .ಇನ್ನು ಚೆನ್ನಾಗಿ ಬೋಧನೆ ಮಾಡುತ್ತಿದ್ದೇನೆ .
    ಈ ಥರದ ಬೇರೆಯವರಿಗಾದ ಇನ್ನೂ ಕೆಲವು ಘಟನೆಗಳು ಇವೆ .ಆದ್ದರಿಂದಲೇ ನಾನು ಹೇಳಿದ್ದು ನಿಮ್ಮ ಲೇಖನ ಸಕಾಲಿಕ ಎಂದು.
    ಇದು ಇಂದಿನ ಗಂಭೀರ ಸಮಸ್ಯೆ .ಇದನ್ನು ಸರಿಪಡಿಸುವವರಾರು ?

    ಪ್ರತಿಕ್ರಿಯೆ
  3. Jayalaxmi Patil

    ಕಾಳಜಿಯುಳ್ಳ ಬರಹ. ಇಷ್ಟವಾಯ್ತು ಸಂಯುಕ್ತಾ.

    ಪ್ರತಿಕ್ರಿಯೆ
  4. D,Ravivarma

    ಇದಕ್ಕಿಂತಲೂ ಒಂದು ಕ್ರೌರ್ಯ ಹೇಳುತ್ತೇನೆ ಕೇಳಿ. ಫಸ್ಟ್ ಆಫ್ ಆಲ್, ಈ ವಿಷಯವನ್ನ ಒಂದು ಮೆಡಿಕಲ್ ಶಾಪ್ ನ ಮೂಲಕ ಕೇಳಲ್ಪಟ್ಟೆ. ಈಗಲೂ ನನಗೆ ನಂಬಲು, ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ಮಾತು! ಅದೇನೆಂದರೆ, ನಗರದ ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ, ಒಬ್ಬ ವ್ಯಕ್ತಿ ಸತ್ತ ನಂತರವೂ ಒಂದೆರಡು ದಿನ, ಐ ಸಿ ಯು ಲಿ ಇಟ್ಟಿರುವುದಾಗಿಯೂ, ಯಾರನ್ನೂ ಒಳಬಿಡಲು ಸಾಧ್ಯವಿಲ್ಲ ಎಂಬುದಾಗಿಯೂ ತಿಳಿಸಿ, ಆ ಎರಡು ದಿನಕ್ಕೆ ಹೆಚ್ಚುವರಿ ಹಣ ಪಡೆದು ನಂತರ ಹೆಣವನ್ನು ಮರಳಿಸಿದರಂತೆ!! ಬಹುಷಃ ಈ ಮಾತು ಸತ್ಯವೇ ಆದ್ದಲ್ಲಿ, ಇದು ದುರಾತ್ಮದ ಪರಮಾವಧಿಯಲ್ಲವೇ!…..dinaduddakku ii tarada amaanaviiya krtyagalu nadeyuttale ive….ivara hanada vymoha avarannu jiivanta rakshasarannagi marpadiside…nimma chintane baraha nanage tumbaa istavaaytu….
    D.Ravi varma

    ಪ್ರತಿಕ್ರಿಯೆ
  5. Rj

    ಇದು ಖಂಡಿತ ಬೇಸರದ ವಿಷಯವೇ ಸರಿ.ಅದರಲ್ಲೂ ಇಂಥದ್ದೆಲ್ಲ ಬೆಂಗಳೂರಿನಲ್ಲಿ ಕೊಂಚ ಜಾಸ್ತಿಯೆನಿಸುವಷ್ಟು ಹರಡುತ್ತಿದೆ.ಮುಂದೊಂದು ದಿನ ‘ಮೆಡಿಕಲ್ ಇನ್ಶುರೆನ್ಸ್’ ಎನ್ನುವದು ಎಲ್ಲರಿಗೂ ಅನಿವಾರ್ಯವೆನಿಸುವ ದಿನಗಳು ದೂರವೇನಿಲ್ಲ ಅಂತ ಅನಿಸುತ್ತಿದೆ.
    -Rj

    ಪ್ರತಿಕ್ರಿಯೆ
  6. Pramod

    ಸಿ೦ಪಲ್ ಹೊಟ್ಟೆನೋವಿಗೆ, ಅಡ್ಮಿಟ್ ಮಾಡಿಸಿ ಐವಿ ಕೊಡಿಸಿಬೇಕೆ೦ದು ದೊಡ್ಡ ಲೀಸ್ಟ್ ಬರೆದುಕೊಟ್ಟ ಬರಿ ಎ೦ಬಿಬಿಎಸ್ ಕಳಿತ ಡಾಕ್ಟ್ರು ನೋಡಿದ ಕೂಡಲೇ ಸ೦ಶಯ ಬ೦ದು ಪಕ್ಕದ ಮೆಡಿಕಲ್ ನಲ್ಲಿ ಕೇಳಿದರೆ ಆ ಹೊಸ್ಪಿಟಲ್ ಸರೀ ಇಲ್ಲಾ ಸರ್ ಅ೦ತ ಅ೦ದ.
    ಇನ್ನೊ೦ದು ಸಾರಿ ಡಾಕ್ಟ್ರ್ ವೈರಲ್ ಜ್ವರಕ್ಕೆ ರಕ್ತ ಪರೀಕ್ಷೆ ಮಾಡದೆಯೇ ಮಲೇರೀಯ ಅ೦ತ ಎರಡು ಪುಟ ಔಷದ ಬರೆದುಕೊಟ್ಟರು.
    ಡಾಕ್ಟ್ರ ಹತ್ರ ಹೋದರೆ ಮೊದಲ ಪ್ರಶ್ನೇನೇ ನೀವು ಸಾಫ್ಟ್ ವೇರಾ?.
    ಇನ್ಶುರೆನ್ಸ್ ಮೂಲಕ ಹಾಸ್ಪಿಟಲ್ ಹೋದರೆ ಎಲ್ಲವನ್ನೂ ಬಿಲ್ಲ್ ಡಬಲ್ ಮಾಡಿಸುತ್ತಾರೆ.
    ಇನ್ನು ಡೆ೦ಟಿಸ್ಟ್ ಗಳು ಮಾಡುವ ಕಿತಾಪತಿ ಬರೆಯಲು ಪೆನ್ ಪೇಪರ್ ಸಾಲದು.

    ಪ್ರತಿಕ್ರಿಯೆ
  7. Kiran

    Whom to blame? Government which permits private medical colleges which in turn sell degrees for money? Fee structure for medical students in medical colleges, which need selling of ancestral property? Corporates who “invest” in hospitals? Government policies which promote brain-drain? People who are sarcastic on a doctor who is “just MBBS”? Public which prefers buying unsolicited medicine from a pharmacy rather than paying fee to a doctor? Any meritorious student who does MBBS and has no more money left to pay for post-graduation, but still yearns to live a dignified life? Or, people who threaten doctors with legal consequences if “anything” goes wrong?
    What we see today is the summation of answers to all these questions and many more. It is not civilized to criticize anybody without being in their shoes for sometime. Element of truth does not vanish. Remember, the scenario would not be any different (or may even be worse) for a doctor himself or to his own family if they are in the position described by you.
    We do not live in good times anymore.

    ಪ್ರತಿಕ್ರಿಯೆ
  8. ಹರಿ

    ನಿಜ ಸಂಯುಕ್ತ…ಎಲ್ಲರೂ ಆಗಲ್ಲ…ಆದರೆ ಹಾಗೆ ಇರುವ ಕೆಲವರಿಂದ ಇಡೀ ವೈದ್ಯ ಕುಲಕ್ಕೆ ಕೆಟ್ಟ ಹೆಸರು.
    ನಮ್ಮ ತಂದೆಯ ಕಣ್ಣಿನಲ್ಲಿ ಸಮಸ್ಯೆ ಉಂಟಾದಾಗ ನಮ್ಮ ಊರಿನಲ್ಲಿ ಪರೀಕ್ಷೆ ಮಾಡಿಸಿದರು…ಅಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದರು.
    ಆದರೆ ನಾನು ಬೆಂಗಳೂರಿನಲ್ಲಿ ಉತ್ತಮ ವೈದ್ಯರು, ಆಧುನಿಕ ಪ್ರಯೋಗಶಾಲೆ-ಉಪಕರಣಗಳ ವ್ಯವಸ್ಠೆ ಇರುತ್ತದೆ ಎಂದು ಹೇಳಿ ಇಲ್ಲಿಗೆ ಕರೆತಂದು ನನಗೆ ತಿಳಿದ ಮಟ್ಟಿಗೆ ಒಳ್ಳೆಯ ಆಸ್ಪತ್ರೆಗೆ ಹೋದೆವು. ಹೇಳಿದ್ದೆಲ್ಲವೂ ನಿಜವೋ-ಸುಳ್ಳೋ ಒಂದು ಗೊತ್ತಿಲ್ಲ. ಹೊರಬರುವ ಹೊತ್ತಿಗೆ ಇಬ್ಬರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದೆವು. ಸತತ ಎರಡು ದಿನ ಎಲ್ಲಾ ಪರೀಕ್ಷೆಗಳನ್ನು ನಡೆಸಿದರು. ಏನನ್ನೂ ಸರಿಯಾಗಿ ಹೇಳದೆ ಸದ್ಯಕ್ಕೆಂದು ಮಾತ್ರೆ-ಡ್ರಾಪ್ಸ್ ಕೊಟ್ಟು ಪ್ರತಿ ತಿಂಗಳು ಬರುವಂತೆ ಹೇಳಿ ಕೆಲ ತಿಂಗಳಲ್ಲಿ ಆಪರೇಷನ್ ಮಾಡಲೇ ಬೇಕು ಎಂದರು. ಊರಿಗೆ ಮರಳಿದ ತಂದೆಯವರು ನಂತರ ಮತ್ತೆ ಬೆಂಗಳೂರಿಗೆ ಬರಲು ಒಪ್ಪಲೇ ಇಲ್ಲ. ಅಲ್ಲಿಯೇ ಚಿಕಿತ್ಸೆ ಪಡೆಯುವುದಾಗಿ ಹೇಳಿದರು. ನಾನು ಊರಿಗೆ ಹೋದಾಗ ಅವರೊಂದಿಗೆ ಊರಿನ ನೇತ್ರ ವೈದ್ಯರನ್ನು ಭೇಟಿ ಮಾಡಿದೆ. ಅಷ್ಟೊಂದು ರೋಗಿಗಳಿದ್ದರೂ ನನ್ನ ಎಲ್ಲ ಪ್ರಶ್ನೆಗಳಿಗೆ ಅರ್ಧ ಗಂಟೆಗೂ ಮೀರಿ ತಾಳ್ಮೆಯಿಂದ ಏನು ಆಗಿದೆ-ಏನು ಮಾಡಬೇಕು ಎಲ್ಲವನ್ನು ಕೂಲಂಕಷವಾಗಿ ತಿಳಿಸಿದರು. ಘಟನೆ ನಡೆದು ಮೂರು ವರ್ಷ ಆಯಿತು. ತಂದೆ ಆರೋಗ್ಯವಾಗಿದ್ದಾರೆ. ಯಾವ ಆಪರೇಷನ್ನು ಮಾಡಿಸಲಿಲ್ಲ. ವೈದ್ಯೋ ನಾರಾಯಣ ಹರಿಃ (Conditions apply) ನಂಬಿಕೆ ಉಳಿದಿದೆ.

    ಪ್ರತಿಕ್ರಿಯೆ
  9. ಎಚ್. ಸುಂದರ ರಾವ್

    ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಳೇವರೇ|
    ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ||
    ಶರೀರ ಜೀರ್ಣವಾಗಿ ಹೋಗಿದೆ. ದೇಹದಲ್ಲಿ ಅನೇಕ ರೋಗಗಳು ಸೇರಿಕೊಂಡಿವೆ. (ಅರ್ಥಾತ್ ಮುಪ್ಪು ಬಂದಿದೆ). ಮುದುಕ ಹಾಸಿಗೆ ಹಿಡಿದಿದ್ದಾನೆ. ಅಂತಹ ಹೊತ್ತಿನಲ್ಲಿ ಬಂದವರು ಯಾರೋ ಕೇಳುತ್ತಾರೆ: “ಯಾರು ವೈದ್ಯರು? ಏನು ಔಷಧಿ?” ಅದಕ್ಕೆ ಮುದುಕನ ಉತ್ತರ: “ಔಷಧ ಗಂಗಾಜಲ; ವೈದ್ಯ ಆ ನಾರಾಯಣ!”
    ನಮ್ಮಲ್ಲಿ ವೈದ್ಯರನ್ನು ದೇವರೆಂದು ತಿಳಿದಂತಿಲ್ಲ. ವೈದ್ಯರ ಕುರಿತ ಒಂದು ಶ್ಲೋಕ ಹೀಗಿದೆ:
    ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ|
    ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿ ಚ||
    ಯಮರಾಜನ ಸಹೋದರನಾದ ವೈದ್ಯರಾಜನೇ ನಿನಗೆ ನಮಸ್ಕಾರ! ಯಮನಾದರೋ ಕೇವಲ ಪ್ರಾಣವನ್ನು ಒಯ್ಯುತ್ತಾನೆ. ವೈದ್ಯನು ಪ್ರಾಣ, ಧನ ಎರಡನ್ನೂ ಒಯ್ಯುತ್ತಾನೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: