ಪ್ರೊ ಸಿ ಎನ್ ಆರ್: ನೆರಳುಗಳ ಬೆನ್ನು ಹತ್ತಿ..

ನಾಡು ಕಂಡ ಉತ್ತಮ ವಿಮರ್ಶಕ ಪ್ರೊ ಸಿ ಎನ್  ರಾಮಚಂದ್ರನ್ ಅವರ ಆತ್ಮಚರಿತ್ರೆ ‘ನೆರಳುಗಳ ಬೆನ್ನು ಹತ್ತಿ’ ಹಾಗೂ ಅವರ ಬದುಕು ಬರಹಗಳನ್ನು ಶೋಧಿಸುವ ಕೃತಿ ‘ರೂಪಾಂತರ ‘ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಅಂಕಿತ ಪ್ರಕಾಶನ ಈ ಎರಡೂ ಕೃತಿಗಳನ್ನು ಪ್ರಕಟಿಸಿದೆ
ಸಿ ಎನ್  ಆರ್ ಅವರ ಆತ್ಮಚರಿತ್ರೆ ಹೇಗಿರಬಹುದು ಎಂಬ ಕುತೂಹಲವಿರುವವರಿಗಾಗಿ ಅವಧಿ ಇಲ್ಲಿ ಆ ಕೃತಿಯ ಒಂದು ಭಾಗವನ್ನು ನೀಡುತ್ತಿದೆ. ಸಿ ಎನ್  ಆರ್ ಅವರ ಮೈಸೂರು ವಾಸದ ಸಮೃದ್ಧ ನೆನಪುಗಳು ಇಲ್ಲಿವೆ. ಓದಿ –

ಅಧ್ಯಾಯ ಎರಡು: ಮೈಸೂರು
ಕಳೆದ ಶತಮಾನದ ಐವತ್ತನೆಯ ದಶಕವನ್ನು ಮಹಾರಾಜಾ ಕಾಲೇಜಿನ ಇಂಗ್ಲೀಷ್ ವಿಭಾಗದ ಸ್ವರ್ಣಯುಗ ಎಂದು ಕರೆಯಬಹುದು. ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ರಂಗಣ್ಣನವರು ಆಗತಾನೆ (ಎಂದರೆ 53ರಲ್ಲಿ) ರಿಟೈರ್ ಆಗಿ ಪ್ರೊ. ಸಿ. ಡಿ. ಎನ್. ( ಪ್ರೊ. ಸಿ. ಡಿ. ನರಸಿಂಹಯ್ಯ) ಆ ವರ್ಷವೇ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದು ಮತ್ತು ಸುಪ್ರಸಿದ್ಧ ವಿಮರ್ಶಕ ಎಫ್. ಆರ್. ಲೀವಿಸ್  ನ ಪಟ್ಟಶಿಷ್ಯರಾಗಿ, ಮಹಾರಾಜ ಕಾಲೇಜಿಗೆ ಹಿಂತಿರುಗಿ, ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. ವಿಭಾಗದ ಮತ್ತೊಬ್ಬ ಪ್ರೊಫೆಸರ್ ಎಂದರೆ ಭರತರಾಜ ಸಿಂಗ್; ಅವರೂ ಆಗತಾನೆ ಕೇಂಬ್ರಿಜ್ನಿಂದ ಹಿಂತಿರುಗಿದ್ದರು. ವಿಭಾಗದಲ್ಲಿದ್ದ ಇತರರೆಂದರೆ ಶ್ರೀ ಪಾರ್ಥಸಾರಥಿ (ಪಾಚು), ಎಂ. ಎನ್. ಪಾರ್ಥಸಾರಥಿ (ಇವರು ಎನ್. ಸಿ. ಸಿ. ಆಫೀಸರ್ ಕೂಡಾ ಆಗಿದ್ದರು), ಸಿ. ಡಿ. ಗೋವಿಂದರಾವ್, ಶಾಂತವೀರಪ್ಪ, ನಾವು ಎರಡನೆಯ ಆನಸರ್್ನಲ್ಲಿದ್ದಾಗ ಬಂದ ರಾಮರಾವ್, ಬಾಲಸುಬ್ರಹ್ಮಣ್ಯ, ಅಣ್ಣಯ್ಯಗೌಡ, ಮುಂತಾದವರು.
ಸಿ. ಡಿ. ನರಸಿಂಹಯ್ಯನವರ ಬದುಕು ಯಾವುದೇ ರೋಚಕ ಕಥೆ-ಕಾದಂಬರಿಗಳಿಗೆ ವಸ್ತುವಾಗಬಲ್ಲದು. ಕ್ಲೋಸ್ಪೇಟೆ ಎಂಬ ಒಂದು ಕಿರು ಗ್ರಾಮದ ಬಡ, ಕೆಳವರ್ಗದ ಹುಡುಗನೊಬ್ಬ ಅಪಾರ ಎಡರು-ತೊಡರುಗಳನ್ನೆದುರಿಸಿ (ಕಾಲೇಜಿನಲ್ಲಿ ಅವರು ಸಂಸ್ಕೃತ ಕಲಿಯಲು ಇಷ್ಟಪಟ್ಟಾಗ ‘ನಿನಗೇಕೆ ಸಂಸ್ಕೃತ? ಕನ್ನಡ ಕಲಿ’ ಎಂದು ಬ್ರಾಹ್ಮಣ ಶಿಕ್ಷಕರೊಬ್ಬರು ಹೇಳಿದುದನ್ನು ಅವರು ಎಂದೂ ಮರೆಯಲಿಲ್ಲ), ತನ್ನ ಶಿಕ್ಷಣವನ್ನು ಛಲದಿಂದ ಮುಂದುವರೆಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ. ಪದವಿ ಪಡೆದು, ಅನಂತರ ಪ್ರಸಿದ್ಧ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದು, ಮೈಸೂರು ವಿ.ವಿ.ಯ ಇಂಗ್ಲೀಷ್ ವಿಭಾಗದಲ್ಲಿ ಮೂರು ದಶಕಗಳ ಕಾಲ ಪ್ರಾಧ್ಯಾಪಕ-ಮುಖ್ಯಸ್ಥರಾಗಿ (1950-79), ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾಗಿ (1957-62), ನಿವೃತ್ತಿಯ ನಂತರ ‘ಧ್ವನ್ಯಾಲೋಕ’ದಂತಹ ಮಾದರಿ ಸಂಶೋಧನಾ ಕೇಂದ್ರವನ್ನು ಕಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದುದು ಒಂದು ದಂತಕಥೆಯೇ ಸರಿ.
ಕೇಂಬ್ರಿಜ್ನಲ್ಲಿ ಖ್ಯಾತ ವಿಮರ್ಶಕ ಎಫ್. ಆರ್. ಲೀವಿಸ್  ನ ಪಟ್ಟ ಶಿಷ್ಯರಾಗಿದ್ದ ಸಿಡಿಎನ್ ಮೈಸೂರು ವಿ. ವಿ.ಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದನಂತರ ಪಠ್ಯಾವಳಿ, ಬೋಧನಕ್ರಮ, ಪರೀಕ್ಷಾ ಪದ್ಧತಿ, ಇವೆಲ್ಲವುಗಳಲ್ಲಿಯೂ ಆಮೂಲಾಗ್ರ ಬದಲಾವಣೆಗಳನ್ನು ಮಾಡಿ, ಮೈಸೂರು ವಿ. ವಿ.ಯ ಇಂಗ್ಲೀಷ್ ವಿಭಾಗ ಇಡೀ ಭಾರತದಲ್ಲಿಯೇ ಪ್ರಸಿದ್ಧವಾಗುವಂತೆ ಮಾಡಿದರು. ಅಷ್ಟೇ ಅಲ್ಲದೆ, ಬಿ. ಎ. ತರಗತಿಗಳಿಗಿದ್ದ ‘ಕಡ್ಡಾಯ ಇಂಗ್ಲಿಷ್’ ಪೇಪರ್ ಗಳ ಪಠ್ಯಾವಳಿಯನ್ನು ಸಂಪೂರ್ಣ ಬದಲಾಯಿಸಿ, 12 ಪಠ್ಯಗಳನ್ನು ಸೇರಿಸಿದುದು ಅಂದು ಕ್ರಾಂತಿಕಾರಿಯಾಗಿತ್ತು; ಅಷ್ಟೇ ಚಚರ್ಾಸ್ಪದವಾಗಿತ್ತು. (ನನ್ನ ಕಿರಿಯ ಸೋದರಮಾವ ಆಗ ಬಿ. ಎ. ಓದುತ್ತಿದ್ದುದರಿಂದ, ನನಗೆ ಆ ಪಠ್ಯಗಳು ವಿದ್ಯಾಥರ್ಿಗಳಲ್ಲಿ ಹಾಗೂ ಅಧ್ಯಾಪಕರಲ್ಲಿ ಹುಟ್ಟಿಸಿದ ಗೊಂದಲ ನೆನಪಿದೆ; ಆಗಲೇ, ಆ ಪಠ್ಯಗಳಲ್ಲಿ ಸೇರಿದ್ದ ವಾಲ್ಟೇರ್ ನ ಅಚಿಟಿಜಜಜ ಕಾದಂಬರಿಯನ್ನು ಓದಿದ್ದು.) ಒಂದೆರಡು ವರ್ಷಗಳನಂತರ ಸಿಂಡಿಕೇಟ್ ಸಿಡಿಎನ್ ಅವರ ವಿರೋಧವನ್ನು ಲಕ್ಷಿಸದೆ ಅವುಗಳ ಜಾಗದಲ್ಲಿ ಮತ್ತೆ ಮೊದಲಿನಂತೆ ಮೂರು ಪಠ್ಯಗಳನ್ನು ನಿಗದಿ ಮಾಡಿತು. ( ಆ ಕಾಲಘಟ್ಟದಲ್ಲಿ, 1954-58ರ ಅವಧಿಯಲ್ಲಿ, ನಾನು ಆ ವಿಭಾಗದ ವಿದ್ಯಾರ್ಥಿಯಾಗಿದ್ದುದು ನನ್ನ ಅದೃಷ್ಟ.) ಮುಖ್ಯವಾಗಿ, ಅಂದಿದ್ದ ಆನರ್ಸ್ -ಎಂ.ಎ. ಪದವಿಗಳ ಪಠ್ಯಾವಳಿಗಳನ್ನು ಆಮೂಲಾಗ್ರವಾಗಿ ಬದಲಾಯಿಸಿ, ಪರಂಪರಾಗತವಾಗಿದ್ದ ‘ಮಿಡ್ಲ್ ಇಂಗ್ಲೀಷ್ ಮತ್ತು ಛಾಸರ್,’ ‘ಪ್ರೊಸೊಡಿ’ (ಛಂದಃಶಾಸ್ತ್ರ), ‘ಇಂಗ್ಲೀಷ್ ಭಾಷೆಯ ಚರಿತ್ರೆ,’ ‘ಇಂಗ್ಲೀಷ್ ಸಾಹಿತ್ಯ ಚರಿತ್ರೆ,’ ಇತ್ಯಾದಿಗಳನ್ನು ಕೈಬಿಟ್ಟು, ಅವುಗಳ ಬದಲಿಗೆ ಆಧುನಿಕ ಪಠ್ಯಗಳನ್ನು ಸೇರಿಸಿದರು; ಹಾಪ್ಕಿನ್ಸ್, ಎಲಿಯಟ್, ಯೇಟ್ಸ್, ಮುಂತಾದವರ ‘ಆಧುನಿಕ ಕಾವ್ಯ’ಕ್ಕೆ, ಹಾಗೂ ರಿಚರ್ಡ್ಸ್ , ಎಲಿಯಟ್, ಲೀವಿಸ್ ಮುಂತಾದವರ ನವ್ಯ ವಿಮರ್ಶೆಗೆ ಆದ್ಯತೆ ಕೊಟ್ಟರು. ಪ್ರತಿ ಬುಧವಾರವೂ ಸೇರುತ್ತಿದ್ದ ‘ಲಿಟರರಿ ಕ್ಲಬ್’ ಸಭೆಗಳಲ್ಲಿ ನಡೆಯುತ್ತಿದ್ದ ಗಂಭೀರ ವಿಚಾರ-ಚರ್ಚೆಗಳಲ್ಲಿ ವಿದ್ಯಾರ್ಥಿಗಳೂ ನೇರವಾಗಿ (ಮತ್ತು ಕಡ್ಡಾಯವಾಗಿ) ಭಾಗವಹಿಸುವಂತೆ ಮಾಡಿದರು. ತರಗತಿಗಳಲ್ಲಿ ಒಂದು ಪಠ್ಯವು ಮುಗಿದನಂತರ, ಅದರ ವಿವಿಧ ಆಯಾಮಗಳನ್ನು ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ವಿಮರ್ಶಾ ಪ್ರಬಂಧವನ್ನು ಬರೆದು, ತರಗತಿಯಲ್ಲಿ ಅದನ್ನು ಮಂಡಿಸಿ, ಇತರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಅನಂತರ ಅವೆಲ್ಲವನ್ನೂ ಸಿಡಿಎನ್ ಓದಿ, ಆ ತರಗತಿಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಿದ್ದರು. (ಇಂತಹ ಮೌಲ್ಯಮಾಪನದಲ್ಲಿ ನನ್ನ ಬ್ಯಾಚ್ ಅತ್ಯಂತ ಕೆಳಗಿದ್ದು, ಅಧ್ಯಾಪಕರೆಲ್ಲರಿಗೂ ಅದೊಂದು ಜೋಕ್ ಆಗಿತ್ತು.) ಕೇಂಬ್ರಿಜ್ ಮಾದರಿಯಲ್ಲಿ ಇಡೀ ಕಾಲೇಜಿನಲ್ಲಿ ‘ಹೌಸ್ ಸಿಸ್ಟಿಮ್’ ಜಾರಿಗೆ ತಂದರು. (ಪ್ರತಿಯೊಬ್ಬ ಅಧ್ಯಾಪಕನಿಗೂ ಕೆಲವು ವಿದ್ಯಾಥರ್ಿಗಳ ಜವಾಬ್ದಾರಿಯನ್ನು ವಹಿಸಿ, ಅವರ ಹಿತಾಸಕ್ತಿಗಳನ್ನು ಕಾಪಾಡುವಂತೆ ಮಾಡುವ ಪದ್ಧತಿ; ಮುಖ್ಯವಾಗಿ, ಸ್ಕಾಲಷರ್ಿಪ್, ಫ್ರೀಷಿಪ್, ಇತ್ಯಾದಿಗಳಿಗೆ ಸಂಬಂಧಿಸಿದ ‘ಹೌಸ್’ನ ರೆಕಮೆಂಡೇಷನ್ ಬೇಕಿತ್ತು.) ಒಟ್ಟಿನಲ್ಲಿ, ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗಳನ್ನು ಪ್ರತಿಯೊಬ್ಬರೂ ಗಂಭೀರವಾಗಿ, ಜವಾಬ್ದಾರಿಯುತವಾಗಿ ಪರಿಗಣಿಸುವಂತಹ ವಾತಾವರಣವನ್ನು ಸಿಡಿಎನ್ ನಿಮರ್ಿಸಿದರು. ಕನ್ನಡದ ನವ್ಯ ಸಾಹಿತ್ಯದ ಚಳುವಳಿಯ ಮುಂಚೂಣಿಯಲ್ಲಿದ್ದ ಬಹುತೇಕ ಲೇಖಕರು     (ಭೋಗಿಶಯನ, ಎಂಜಿಕೆ, ರಾಜೀವ ತಾರಾನಾಥ್, ಅನಂತಮೂರ್ತಿ, ಶ್ರೀನಿವಾಸ ರಾವ್, ಮಿರ್ಲೆ ವಿಶ್ವನಾಥ್, ಡಿ. ಎ. ಶಂಕರ್, ಇತ್ಯಾದಿ) ಆ ಕಾಲಘಟ್ಟದಲ್ಲಿ ಸಿಡಿಎನ್ ಅವರ ಪ್ರಿಯ ಶಿಷ್ಯರಾಗಿದ್ದುದು ಆಕಸ್ಮಿಕವೇನಲ್ಲ. ಕನ್ನಡ ನವ್ಯ ಚಳುವಳಿಗೆ ಸಿಡಿಎನ್ ಅವರ ಪರೋಕ್ಷ ಪ್ರಭಾವ-ಪ್ರೇರಣೆಗಳು ಗಮನೀಯ.
ಹಾಗೆಯೇ, ಪ್ರಬಲ ವಿರೋಧವನ್ನೆದುರಿಸಿ, ಅಖಿಲ ಭಾರತ ನೆಲೆಯಲ್ಲಿ ‘ಇಂಗ್ಲೀಷ್ ಅಧ್ಯಯನ’ದ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ಬದಲಾಯಿಸಿದವರೂ ಸಿಡಿಎನ್ ಅವರೇ. ಕೇವಲ ‘ಬ್ರಿಟಿಷ್ ಸಾಹಿತ್ಯ’ದ ಅಧ್ಯಯನ ಕೇಂದ್ರಗಳಾಗಿದ್ದ ಇಂಗ್ಲೀಷ್ ವಿಭಾಗಗಳಲ್ಲಿ ಮೊಟ್ಟ ಮೊದಲು ಭಾರತೀಯರಿಂದ ಇಂಗ್ಲೀಷ್ ಭಾಷೆಯಲ್ಲಿ ರಚಿಸಲ್ಪಟ್ಟ ಸಾಹಿತ್ಯವನ್ನು ಪಠ್ಯಾವಳಿಯಲ್ಲಿ ಸೇರಿಸಿದರು. ಅನಂತರ, 60ರ ದಶಕದಲ್ಲಿ ಅಮೆರಿಕನ್ ಸಾಹಿತ್ಯ, ಆಸ್ಟ್ರೇಲಿಯನ್ ಸಾಹಿತ್ಯ, ಕಾಮನ್ವೆಲ್ತ್ ಸಾಹಿತ್ಯ, ಇತ್ಯಾದಿಗಳನ್ನೂ ಇಂಗ್ಲೀಷ್ ವಿಭಾಗಕ್ಕೆ ತಂದರು. ಅಥರ್ಾತ್, ‘ಇಂಗ್ಲೀಷ್ ಸಾಹಿತ್ಯವನ್ನು ಇಂಗ್ಲೀಷ್ನಲ್ಲಿ ಬರೆಯಲ್ಪಟ್ಟ ಸಾಹಿತ್ಯ’ ಎಂಬಂತೆ ಬದಲಾಯಿಸಿ, ಇಂಗ್ಲೀಷ್ ಅಧ್ಯಯನಕ್ಕೆ ನೂತನ ಆಯಾಮಗಳನ್ನು ದೊರಕಿಸಿಕೊಟ್ಟರು. ಬೋಧನೆ ಮತ್ತು ಪಠ್ಯಾವಳಿಗಳಲ್ಲಿ ಬದಲಾವಣೆ ತರಲು ಅಂದು (ಎಂದರೆ 50ರ ದಶಕದಲ್ಲಿ) ಸಿ ಡಿ ಎನ್ ಅವರಿಗಿದ್ದ ಚಿಮ್ಮುತ್ತಿದ್ದ ಉತ್ಸಾಹವನ್ನು ನಿದರ್ಶಿಸಲು (ಇಂದು ನಂಬಲಾಗದಂತಹ) ಒಂದೆರಡು ಘಟನೆಗಳನ್ನು ಇಲ್ಲಿ ದಾಖಲಿಸಬಹುದು.
ನಾನು ಆಗ ತಾನೆ ಆನಸರ್್ ವಿಭಾಗಕ್ಕೆ ಸೇರಿದ್ದೆ; ಸಿಡಿಎನ್ ಅವರೇ ‘ಆಧುನಿಕ ಬ್ರಿಟಿಷ್ ಕಾವ್ಯ’ ಮತ್ತು ‘ ಪ್ರಾಯೋಗಿಕ ವಿಮರ್ಶೆ’ ಈ ಎರಡೂ ಪೇಪರ್ ಗಳನ್ನು ಕಲಿಸುತ್ತಿದ್ದರು. ಒಮ್ಮೆ, ತರಗತಿಯೊಂದರಲ್ಲಿ ಅಂದು ಕಲಿಸಬೇಕಿದ್ದ ರಾಬರ್ಟ್  ಬ್ರಿಜಸ್ ಎಂಬ ಬ್ರಿಟಿಷ್ ಕವಿಯ (ಆ ಕಾಲದಲ್ಲಿ ‘ಮಹಾಕೃತಿ’ಯೆಂದು ಪರಿಗಣಿಸಲ್ಪಟ್ಟಿದ್ದ) ಟೆಸ್ಟಮೆಂಟ್ ಆಫ್ ಬ್ಯೂಟಿ ಎಂಬ ಕೃತಿಯ ನಾಲ್ಕು ಸಾಲುಗಳನ್ನು ಓದಿ, ” ಏನ್ರೀ — ಇದನ್ನೂ ಕಾವ್ಯ ಅಂತಾರಲ್ರೀ — ಛೇ!” ಎಂದು ಉದ್ಗರಿಸಿ, ಧೊಪ್ಪನೆ ಆ ಕೃತಿಯನ್ನು ನೆಲಕ್ಕೆಸೆದು, ಗಾಢ ವಿಷಾದದಿಂದ ಬಾಗಿಲ ಬಳಿ ನಡೆದು ಅಲ್ಲಿ ನಿಂತರು. (ತಮ್ಮ ಉತ್ಕಟ ಭಾವನೆಗಳನ್ನು -ಮುಖ್ಯವಾಗಿ ವಿಷಾದವನ್ನು –ಪ್ರಕಟಿಸಬೇಕಾದರೆ ಅವರು ಕನ್ನಡ ಉಪಯೋಗಿಸುತ್ತಿದ್ದರು.)
ಮತ್ತೊಂದು ತರಗತಿಯಲ್ಲಿ, ಹಾಪ್ಕಿನ್ಸ್ ಕವಿಯ ಸಾಲುಗಳನ್ನು ಭಾವಪೂರಿತವಾಗಿ ಓದುತ್ತಾ, ಬೆರಳೆತ್ತಿ ಆಕಾಶದಲ್ಲಿ ಬಹುವರ್ಣದ ಅರುಣೋದಯವನ್ನು ತನ್ನ ಹಿಂದೆಯೇ ಒಯ್ಯುತ್ತಿದ್ದ ಹಕ್ಕಿಯನ್ನು ‘ಅಗೋ, ಅಲ್ಲಿ’ ಎಂದು ನಮಗೆ ತೋರಿಸಿ, ಒಂದು ನಿಮಿಷ ಧ್ಯಾನಮಗ್ನರಾದರು.
ಈ ಘಟನೆಗಳು ಒಂದು ‘ನಾಟಕ’ವೆಂದು, ಪ್ರತಿ ವರ್ಷವೂ ಅವರು ಇದೇ ರೀತಿ ಮಾಡುತ್ತಿದ್ದರೆಂದು ಕೆಲವು ವರ್ಷಗಳ ನಂತರ ನಮಗೆ ತಿಳಿದರೂ, ಆ ‘ನಟನೆ’ಯ ಹಿಂದಿದ್ದ ತೀವ್ರತೆ ಹಾಗೂ ಪರಿಣಾಮ ಕಮ್ಮಿಯೇನೂ ಆಗಲಿಲ್ಲ.
ಆದರೆ, ಸಿಡಿಎನ್ ದೊಡ್ಡ ತರಗತಿಗಳಲ್ಲಿ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಎಲ್ಲಾ ಆನರ್ಸ್ ವಿಭಾಗಗಳ ವಿದ್ಯಾರ್ಥಿಗಳಿಗೂ ಒಟ್ಟಿಗೆ ‘ಕಡ್ಡಾಯ ಇಂಗ್ಲೀಷ್’ ಪಾಠಗಳು ಜೂನಿಯರ್/ಸೀನಿಯರ್ ಬಿ.ಎ. ಹಾಲ್ಗಳಲ್ಲಿ ನಡೆಯುತ್ತಿದ್ದುವು. ಸುಮಾರು 70-80 ವಿದ್ಯಾರ್ಥಿಗಳು ಆ ವಿಶಾಲ ಹಾಗೂ ಎತ್ತರಕ್ಕೆ ಹೋಗುತ್ತಿದ್ದ ಮೆಟ್ಟಿಲುಗಳಿದ್ದ ಆ ಹಾಲುಗಳಲ್ಲಿ ಸೇರುತ್ತಿದ್ದರು. ಅವರಿಗೆ ಇಂಗ್ಲೀಷ್ ಪಠ್ಯಗಳನ್ನು ಬೋಧಿಸುವುದು ಒಂದು ಸವಾಲೇ ಆಗಿತ್ತು. ಆಗ ತಾನೇ ಎಂ. ಎ. ಮುಗಿಸಿ, ಇಂಗ್ಲೀಷ್ ವಿಭಾಗದಲ್ಲಿಯೇ ಕೆಲಸಕ್ಕೆ ಸೇರಿದ್ದ ಸೇತೂ ಸಾವಿತ್ರಿ ಎಂಬ ಪ್ರತಿಭಾವಂತ ಹಾಗೂ ಸಭ್ಯ ಮಹಿಳೆ ನಮಗೆ ಹಾಡರ್ಿಯ ಟೂ ಆನ್ ಅ ಟವರ್ ಕಾದಂಬರಿಯನ್ನು ಕಲಿಸಲು ಪ್ರಯತ್ನಿಸುತ್ತಿದ್ದರು; ಅಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸಲಾಗದೆ ಅರ್ಧಕ್ಕೇ ಕೆಲವು ಸಲ ಕ್ಲಾಸ್ ಮುಗಿಸಿ, ತಮ್ಮ ಸ್ಟಾಫ್ ರೂಮಿಗೆ ಅಳುತ್ತಾ ಹೊಗಿದ್ದುದು ನನಗೆ ನೆನಪಿದೆ. ಪಾಚೂ ಅವರಂತೂ ಅರ್ಧ ಘಂಟೆ ಕನ್ನಡ-ಇಂಗ್ಲೀಷ್ ಬೆರೆಸುತ್ತಾ ಪಾಠ ಮಾಡಿ, ಯಾರಾದರೂ ‘ಸಾರ್ ಇಂಗ್ಲೀಷ್ ಕ್ಲಾಸ್’ ಎಂದು ಕೆಣಕಿದರೆ ‘ ಕನ್ನಡದಲ್ಲಿ ಮೊದಲು ಅರ್ಥ ಮಾಡಿಕೊಳ್ಳಿ, ಸಾಕು; ಆಮೇಲೆ ಇಂಗ್ಲೀಷ್’ ಎಂದು ಹೇಳಿ, ಕ್ಲಾಸ್ ಮುಗಿಸುತ್ತಿದ್ದರು.
ಅಂತಹ ದೊಡ್ಡ ತರಗತಿಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದವರೆಂದರೆ ಸಿ. ಡಿ. ಗೋವಿಂದರಾವ್ ಮತ್ತು ವೆಸ್ಲಿ. ಸಿಡಿಜಿ ನೋಡುವುದಕ್ಕೆ ತುಂಬಾ ಬಲಹೀನರಾಗಿ, ಸೆಣಕಲಾಗಿ ಕಂಡರೂ ಅದು ಹೇಗೆ ತಮ್ಮ ತರಲೆಗಳಿಗೆ ಪ್ರಸಿದ್ಧರಾಗಿದ್ದ ವಿದ್ಯಾರ್ಥಿಗಳನ್ನು ನಿಯಂತ್ರಿಸುತ್ತಿದ್ದರು ಎಂಬುದು ಗೊತ್ತಿಲ್ಲ; ಪ್ರಾಯಃ ಅವರ ಆತ್ಮವಿಶ್ವಾಸ ಮತ್ತು ಎಲ್ಲರನ್ನೂ ಗಮನಿಸುತ್ತಿದ್ದ ಕಣ್ಣು. ಹಿಂದೆ, ಅತಿ ಎತ್ತರದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನೂ ಅವರು ‘ಯು-ಗೆಟ್ ಔಟ್’ ಎಂದರೆ ಆ ವಿದ್ಯಾರ್ಥಿ, ನಿಧಾನವಾಗಿ, ಒಂದೊಂದೆ ಮೆಟ್ಟಿಲನ್ನ್ನು ಇಳಿಯುತ್ತಾ, ಹೊರಗೆ ಹೋಗುತ್ತಿದ್ದ. ವೆಸ್ಲಿ ಅವರದು ವಾಗ್ಝರಿ; ಮತ್ತು ಹಸನ್ಮುಖ. ಅವರು ವರ್ಷದ ಕೊನೆಯಲ್ಲಿ ಆ ವರ್ಷ ತರಗತಿಯಲ್ಲಿ ಬೋಧಿಸಿದ ಶೇಕ್ಸ್ಪಿಯರ್ ನಾಟಕಗಳ ಬಗ್ಗೆ (ನಾನಿದ್ದ ವರ್ಷ ಕಿಂಗ್ ಲಿಯರ್ ನಾಟಕವಿತ್ತು) ಪ್ರತಿ ಭಾನುವಾರವೂ ವಿಶೇಷ ಉಪನ್ಯಾಸಗಳನ್ನು ಮಾಡುತ್ತಿದ್ದರು; ಅವುಗಳನ್ನು ಕೇಳಲು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಗಳೇ ಅಲ್ಲದೆ ಶಾರದಾವಿಲಾಸ್, ಸೇಂಟ್ ಫಿಲೋಮಿನಾ ಕಾಲೇಜುಗಳ ವಿದ್ಯಾರ್ಥಿಗಳೂ ಬರುತ್ತಿದ್ದರು; ಸೀನಿಯರ್ ಬಿಎ ಹಾಲ್ ತುಂಬಿ, ಮೆಟ್ಟಿಲುಗಳ ಮೇಲೆ, ಕಿಟಕಿ-ಬಾಗಿಲುಗಳ ಹತ್ತಿರ ಕುಳಿತು, ನಿಂತು, ಅವರ ಉಪನ್ಯಾಸಗಳನ್ನು ಶಾಂತವಾಗಿ ಕೇಳುತ್ತಿದ್ದರು. (ಅಂದಿನ ಕಾಲದಲ್ಲಿ ಹೆಸರುವಾಸಿಯಾಗಿದ್ದ ಅಧ್ಯಾಪಕರ ‘ಸ್ಪೆಷಲ್ ಲೆಕ್ಚರ್ಸ್  ಕೇಳಲು ಯಾರು ಬೇಕಾದರೂ ಬರಬಹುದಿತ್ತು. ನಾನು ಇಂಟರ್ಮೀಡಿಯಟ್ ಕ್ಲಾಸಿನಲ್ಲಿದ್ದಾಗ, ನನ್ನ ಕೆಲವು ಸ್ನೇಹಿತರೊಡನೆ ಆಗ ಫಸ್ಟ್ಗ್ರೇಡ್ ಕಾಲೇಜಿನಲ್ಲಿದ್ದ ಪ್ರೊ. ಎಸ್. ಅನಂತನಾರಾಯಣ ಅವರ ‘ವಾಲಂಟರಿ ಪಾವರ್ಟಿ’ (ಗಾಂಧಿಜಿ ಅವರ ಲೇಖನ) ಎಂಬ ಪಾಠವನ್ನು ಕುರಿತ ವಿಶೇಷ ಉಪನ್ಯಾಸವನ್ನು ಕೇಳಲು ಹೋಗಿದ್ದೆ.) ಅಷ್ಟೇ ಜನಪ್ರಿಯರಾಗಿದ್ದ ಮತ್ತೊಬ್ಬರೆಂದರೆ ಆಗ ಫಸ್ಟ್ಗ್ರೇಡ್ ಕಾಲೇಜಿನಲ್ಲಿದ್ದ ಪ್ರೊ. ಮೈಲಾರಿ ರಾವ್. ಅವರು ಉಪನ್ಯಾಸ ಮಾಡುತ್ತಿರಲಿಲ್ಲ; ಶೇಕ್ಸ್ಪಿಯರಿನ ನಾಟಕಗಳನ್ನು ‘ಅಭಿನಯಿಸುತ್ತಿದ್ದರು.’ ಒಮ್ಮೆ, ಅವರು ಹ್ಯಾಮ್ಲಿಟ್ ಕಲಿಸುವಾಗ, ‘ಹೋಗೇಏಏ ಹುಚ್ಚುಮುಂಡೆ’ ಎಂದು ಆವೇಶದಿಂದ ತಮ್ಮ ಮುಷ್ಟಿಯಿಂದ ಟೇಬಲ್ ಕುಟ್ಟಿ, ಬೆರಳುಗಳಿಗೆ ಪೆಟ್ಟಾದುದು ಒಂದು ಮರೆಯಲಾಗದ ಸಂಗತಿ.
ಆಗ ಆನರ್ಸ್ ಮತ್ತು ಎಂ. ಎ. ವಿಭಾಗದಲ್ಲಿದ್ದ ವಿದ್ಯಾರ್ಥಿಗಳೂ ಅತ್ಯಂತ ಪ್ರತಿಭಾಶಾಲಿಗಳು, ಮುಂದೆ ಸರಿ ಸುಮಾರು ಎಲ್ಲರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿ ಹೆಸರುಗಳಿಸಿದವರು-ಯು. ಆರ್. ಅನಂತಮೂರ್ತಿ (ನಾನು ಮೊದಲ ಆನರ್ಸ್ನಲ್ಲಿದ್ದಾಗ ಅವರು ಮೂರನೆಯ ಆನರ್ಸ್ನಲ್ಲಿದ್ದರು), ಪೋಲಂಕಿ ರಾಮಮೂರ್ತಿ, ಪಿ. ಶ್ರೀನಿವಾಸರಾವ್, ಮಿರ್ಲೆ ವಿಶ್ವನಾಥ್, ಮೀನಾ ಬೆಳ್ಳಿಯಪ್ಪ, ಪದ್ಮಾ (ರಾಮಚಂದ್ರ ಶರ್ಮ), ಇತ್ಯಾದಿ. ಶ್ರೀನಿವಾಸರಾವ್, ಮಿರ್ಲೆ , ಮತ್ತು ನನಗಿಂತ ಒಂದು ವರ್ಷ ಕೆಳಗಿದ್ದ ವರ್ಮ, ಮುಂತಾದವರು ಕಟ್ಟಿದ್ದ ‘ಮಿತ್ರಮೇಳ’ ಎಂಬ ನಾಟಕ ಸಂಸ್ಥೆ ಆಗ ತುಂಬಾ ಹೆಸರು ಗಳಿಸಿತ್ತು. (ನಾನು ಸೇರಿದ ವರ್ಷವೇ ವರ್ಷಾಂತ್ಯದಲ್ಲಿ ಮಿತ್ರಮೇಳದವರು ಪರ್ವತವಾಣಿಯವರ ಉಂಡಾಡಿ ಗುಂಡ ನಾಟಕವಾಡಿದರು; ಅದರಲ್ಲಿ ಗುಂಡನ ಪಾತ್ರ ವಹಿಸಿದ್ದ ಶ್ರೀನಿವಾಸರಾವ್ ‘ಎಲ್ಲರೂ ನಮ್ಮನ್ನ ಉಂಡಾಡಿಗಳು ಅಂತ ಯಾಕೋ ಕರೀತಾರೆ?’ ಎಂದು ಕೇಳುತ್ತಲೇ ಮಿರ್ಲೆಯೊಡನೆ ರಂಗಕ್ಕೆ ಪ್ರವೇಶಿಸುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ; ಅದೇನು ಸಹಜ ಚಲನೆ, ಅಗಾಧ ಆತ್ಮವಿಶ್ವಾಸ!) ರಂಗದಲ್ಲಿ ಹೇಗೋ ಹಾಗೆ ಕಾಲೇಜಿನಲ್ಲೂ, ಅಷ್ಟೇ ಲೀಲಾಜಾಲವಾಗಿ ಅವರು ಹುಡುಗಿಯರ ದಂಡಿನೊಡನೆ ಮಾತನಾಡುತ್ತಾ ಕಾರಿಡಾರ್ ನಲ್ಲಿ ಹೋಗುತ್ತಿದ್ದರೆ, ನನ್ನಂಥವರಿಗೆ ಇನ್ನಿಲ್ಲದಷ್ಟು ಅಸೂಯೆಯುಂಟಾಗಿ, ‘ಈಗ ಇವರು ಜಾರಿ ಬೀಳಬಾರದೆ?’ ಎಂದು ಅನಿಸುತ್ತಿತ್ತು. ಮಲಗುವಾಗಲೂ ಇಸ್ತ್ರೀ ಮಾಡಿದ ಬಟ್ಟೆಯನ್ನೇ ಹಾಕಿಕೊಂಡು ಮಲಗುತ್ತಾರೆ ಎಂದು ಎಲ್ಲರೂ ಕುಹಕವಾಡುತ್ತಿದ್ದಂತೆ ಸುಂದರವಾಗಿ ಡ್ರೆಸ್ ಮಾಡಿಕೊಂಡು, ಆರಾಮವಾಗಿ ಸಿಡಿಎನ್ ಅವರೊಡನೆಯೂ ಮಾತನಾಡುತ್ತಿದ್ದ ವ್ಯಕ್ತಿ ಶ್ರೀನಿವಾಸರಾವ್. ಅದು ಸಂಜಯ್ ಹುಟ್ಟುಹಬ್ಬವಿರಬೇಕು; ತಮ್ಮ ಕ್ವಾರ್ಟಸರ್್ನಲ್ಲಿಯೇ ಮುಂದುಗಡೆ ಇದ್ದ ಹುಲ್ಲುಹಾಸಿನಲ್ಲಿ ಸಿಡಿಎನ್ ಎಲ್ಲರಿಗೂ ಔತಣ ಏರ್ಪಡಿಸಿದ್ದರು; ಆಗ, ಬರುವ ಅತಿಥಿಗಳನ್ನು ಸ್ವಾಗತಿಸಲು ಬಾಗಿಲಲ್ಲಿಯೇ ನಿಂತಿದ್ದವರು ಶ್ರೀನಿವಾಸರಾವ್ ಮತ್ತು ಮಿರ್ಲೆ  -ಕಣ್ಣು ಕುಕ್ಕುವ ಸೂಟ್ ಹಾಕಿಕೊಂಡು ‘ಬೋ’ ಕಟ್ಟಿಕೊಂಡು ಮೋಹನಾಂಗರಾಗಿದ್ದವರು. ಅನಂತರ, ಎಲ್ಲರೂ ಬಂದು ಕೂಟ ಪ್ರಾರಂಭವಾದನಂತರ, ಇವರಿಬ್ಬರೂ (ಇನ್ನು ಕೆಲವರೂ ಹಿಮ್ಮೇಳದಲ್ಲಿದ್ದಿರಬಹುದು) ಹುಟ್ಟು ಬಂಜೆ ಹೊನ್ನಮ್ಮ/ ಹುಟ್ಟಬಹುದೆ ಬುವಿಯಾಗ! ಎಂದು ಪ್ರಾರಂಭವಾಗುವ ಜನಪದ ಗೀತೆಯನ್ನು ರಂಜನೀಯವಾಗಿ ಹಾಡಿದ್ದರು. ಪೋಲಂಕಿಯವರೂ ಸೂಟ್ ಹಾಕಿಕೊಂಡೇ ಹೆಚ್ಚಿನ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಇವರೆಲ್ಲರಿಗಿಂತ ಸ್ವಲ್ಪ ಬೇರೆಯಾಗಿರುತ್ತಿದ್ದರು; ಅಷ್ಟೇನೂ ಬೇರೆಯವರೊಡನೆ ಬೆರೆಯುತ್ತಿರಲಿಲ್ಲ. ಇಂತಹ ಪ್ರತಿಭಾಶಾಲಿಗಳ ನಡುವೆ ‘ವೆರಿ ಬ್ರೈಟ್’ ಎಂದು ಹೆಸರು ಪಡೆದಿದ್ದವರು ಕೊಡವರಾದ ಮೀನಾ ಬೆಳ್ಳಿಯಪ್ಪ; ಸಿ ಡಿ ಎನ್ ಕೂಡಾ ಅವರೊಡನೆ ತುಂಬಾ ಗಂಭೀರವಾಗಿಯೇ ಮಾತನಾಡುತ್ತಿದ್ದರೆಂದು ನೆನಪು. (ಎರಡು ದಶಕಗಳ ನಂತರ ಹೈದರಾಬಾದಿನ ಸಿ ಐ ಇ ಎಫ್ ಎಲ್ ನಲ್ಲಿ ಅವರು ಪ್ರಾಧ್ಯಾಪಕರಾಗಿದ್ದರು; ಅದೇ ಕಾಲದಲ್ಲಿ ಪಂಡಿತ್ ರಾಜೀವ ತಾರಾನಾಥರೂ ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಮೀನಾ ಅವರ ಮೊದಲ ತರಗತಿಯನಂತರ ಅವರನ್ನು ಭೇಟಿಯಾಗಿ, ಮಹರಾಜಾ ಕಾಲೇಜಿನ ದಿನಗಳನ್ನು ನೆನಪಿಸಿದಾಗ, ಓ ನೋ! ಡು ಗೋಸ್ಟ್ಸ್ ಸ್ಟಿಲ್ ಹಾಂಟ್ ಮಿ? ಎಂದು -ನಗಲಿಲ್ಲ, ತುಂಬಾ ಭಾವುಕರಾಗಿ ಉತ್ತರಿಸಿದ್ದರು. ಅನಂತರ, ಅಲ್ಲಿಯೂ ಇರಲಾರದೆ, ಕೊನೆಗೆ ಯಾವುದೋ ಆಶ್ರಮಕ್ಕೆ ಸೇರಿದರೆಂದು ಕೇಳಿದೆ.)
ನನ್ನನ್ನು ಆ ದಿನಗಳಲ್ಲಿ ತುಂಬಾ ಪ್ರಭಾವಿಸಿದವರು ಅನಂತಮೂತರ್ಿ. ಆಗಲೇ (ಎಂದರೆ 54-55ರಲ್ಲಿಯೇ) ಅವರ ಬಗ್ಗೆ ಅನೇಕ ದಂತಕಥೆಗಳು ರೊಚಕವಾಗಿ ನಮ್ಮನ್ನು ತಲಪುತ್ತಿದ್ದುವು -ಅವರು ಗೋಪಾಲಗೌಡರ ಮಿತ್ರರಾಗಿದ್ದುದು, ಅದ್ಭುತ ಮಾತುಗಾರರಾಗಿದ್ದುದು, ಅಡಿಗರ ಜೊತೆ ಅವರಿಗೆ ಸ್ನೇಹವಿದ್ದುದು, ಅವರು ಹೊಸ ಅಲೆಯ ಕಥೆಗಳನ್ನು ಬರೆಯುತ್ತಿದ್ದುದು, ಇತ್ಯಾದಿ. ಅವರು ಬರೆದ ಖೋಜರಾಜ ಕಥೆಯನ್ನು ಹಾಸ್ಟಲ್ಲಿನ ವಾರ್ಡನ್ ಉ. ಕಾ. ಸುಬ್ಬರಾಯಾಚಾರ್ಯರು ಅದರಲ್ಲಿ ಬರುವ ಕೆಲವು ಲೈಂಗಿಕ ವಿವರಗಳನ್ನು ತೆಗೆದ ಹೊರತು ಅದನ್ನು ಹಾಸ್ಟಲ್ಲಿನ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟಿಸುವುದಿಲ್ಲವೆಂದು ಹೇಳಿದುದು, ‘ಅದರಲ್ಲಿನ ಒಂದು ಪದವನ್ನೂ ನಾನು ತೆಗೆಯುವುದಿಲ್ಲ’ ಎಂದು ಅನಂತಮೂರ್ತಿಯವರು ಘೋಷಿಸಿದುದು, ಕೊನೆಗೆ ಇತರ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ತುಂಬಾ ಸಂಕಟದಿಂದ ಅಪ್ಪಟ ಗಾಂಧಿವಾದಿ ಉ.ಕಾ.ಸು. ಅದನ್ನು ಪ್ರಕಟಿಸಿದುದೂ -ಎಲ್ಲವೂ ನಮಗೆ ರೋಚಕ ಕಥೆಗಳೇ. ಆ ಒಂದು ಕಥೆಗಾಗಿ ಆ ವಾರ್ಷಿಕಾಂಕವನ್ನು ಹೇಗೋ ಸಂಪಾದಿಸಿ, ನಾನು ಮತ್ತು ನನ್ನ ಇಬ್ಬರು ಮಿತ್ರರು ನನ್ನ ರೂಮಿನಲ್ಲಿ ಕುಳಿತು ಅದನ್ನು ಘಟ್ಟಿಯಾಗಿ ಓದಿದಾಗ, ನಮಗೆ ಮೂವರಿಗೂ ‘ಅದರಲ್ಲಿರುವ ಯಾವ ವಿವರ ಲೈಂಗಿಕ’ ಎಂದು ಗೊತ್ತಾಗದೆ ಒದ್ದಾಡಿದ್ದೆವು. ಕೊನೆಗೆ ‘ಹಾವನ್ನು ಸೀಳಿ’ ಎಂದು ಬರುವ –ನಮಗೆ ಅರ್ಥವಾಗದ –ವಾಕ್ಯವೇ ಲೈಂಗಿಕ ಪ್ರತಿಮೆಯಾಗಿರಬಹುದೆಂದು ತೀರ್ಮಾನಿಸಿದೆವು. ಅವರ ಮತ್ತೊಂದು ಕಥೆ ಇಂಗ್ಲೀಷ್ಗೆ ಅನುವಾದವಾಗಿ ರಾಘವನ್ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ವಾರ್ಸಿಟಿ ಟೈಮ್ಸ್’ನಲ್ಲಿ ಪ್ರಕಟವಾಯಿತು. ಇವೆಲ್ಲವೂ 56ರಲ್ಲಿ ಎಂದೆಂದೂ ಮುಗಿಯದ ಕಥೆ ಸಂಕಲನದಲ್ಲಿ ಸೇರಿದುವು.
ಅನಂತಮೂರ್ತಿಯವರನ್ನು ಮೊದಲ ಬಾರಿಗೆ ನಾನು ನೋಡಿದುದು ನಾನು ಆನರ್ಸ್ ಗೆ ಸೇರಿ ನಾಲ್ಕೈದು ತಿಂಗಳುಗಳ ನಂತರ -ಒಂದು ಕನ್ನಡ ಕಾರ್ಯಕ್ರಮದಲ್ಲಿ. ಅದನ್ನು ಯಾರು ಏರ್ಪಡಿಸಿದ್ದರೋ ಗೊತ್ತಿಲ್ಲ; ನಮ್ಮ ವಿಭಾಗದ ಕೋಣೆಯೊಂದರಲ್ಲಿಯೇ ಆ ಕಾರ್ಯಕ್ರಮವಿತ್ತು -ಅಡಿಗರ ‘ಭೂಮಿಗೀತ’ ಕವನದ ಓದು ಮತ್ತು ವ್ಯಾಖ್ಯಾನ, ಅನಂತಮೂರ್ತಿಯವರಿಂದ. ಹಾಲ್ ಇನ್ನೂ ತುಂಬಿರಲಿಲ್ಲ; ಆಗ ‘ಬರುವವರು ಬರಲಿ, ನಾವು ಶುರು ಮಾಡಿಬಿಡೋಣ’ ಎಂದು ಅನಂತಮೂರ್ತಿಯವರು ಸಮಯಕ್ಕೆ ಸರಿಯಾಗಿ ಸ್ಟೇಜಿನ ಬಳಿ ಹೋಗಿ, ಭಾವ ಪೂರ್ಣವಾಗಿ ಉರುಳುರುಳು –ಮೂರೇ ಉರುಳು –ನೋಡಿ, ಈ ಎರಡು ಪದಗಳೇ ಸಮುದ್ರ ಎಷ್ಟು ಹತ್ತಿರದಲ್ಲಿದೆ -ಮೂರೇ ಉರುಳು-ಅನ್ನೋದನ್ನ ತೋರಿಸುತ್ತೆ, ಅಲ್ವಾ? ಎಂದು ಇಡೀ ಕವನವನ್ನು ಸುಮಾರು ಒಂದು ಘಂಟೆಯ ಅವಧಿಯಲ್ಲಿ ಓದಿ, ಅಭಿನಯಿಸಿ, ವ್ಯಾಖ್ಯಾನಿಸಿದರು. ಅವರು ತಮ್ಮ ಉಪನ್ಯಾಸವನ್ನು ಮುಗಿಸುವ ವೇಳೆಗೆ ಹಾಲ್ ತುಂಬಿ ತುಳುಕುತ್ತಿದ್ದುದು ಅವರ ಚಪ್ಪಾಳೆಯಿಂದ ಗೊತ್ತಾಯಿತು.
ಆಫ್ ಪಿರಿಯಡ್ ಇದ್ದಾಗಲೆಲ್ಲಾ ಹೆಲ್ತ್ಕಿಚನ್ ಎಂಬ ಕ್ಯಾಂಟೀನಿಗೆ ನಮ್ಮನ್ನು ಕರೆದುಕೊಂಡು ಹೋಗಿ, ಹೇಗೆ ಅನಕೃ ಅವರಿಗಿಂತ ಕಾರಂತರು ಶ್ರೇಷ್ಠ ಕಾದಂಬರಿಕಾರರು, ಹೆನ್ರಿ ಜೇಮ್ಸ್ ಓದುವುದು ಹೇಗೆ, ವಿವೇಕಾನಂದರಿಗೆ ಏಕೆ ತುಂಬಾ ಸಿಹಿ ತಿನ್ನುವ ಅಭ್ಯಾಸವಿತ್ತು, ಲಾರೆನ್ಸ್ ಏಕೆ ಲೈಂಗಿಕತೆಗೆ ಇನ್ನಿಲ್ಲದ ಮಹತ್ವ ಕೊಡುತ್ತಾನೆ, ಇತ್ಯಾದಿಗಳ ಬಗ್ಗೆ ನಮಗೆ ಪಾಠಮಾಡುತ್ತಿದ್ದರು–ಸಿಗರೇಟ್ ಸೇದುತ್ತಾ, ಎಲ್ಲರನ್ನೂ ಗಮನಿಸುತ್ತಾ. ಮುಖ್ಯವಾಗಿ, ಅಂದು ಅವರ ‘ವಿಗ್ರಹಭಂಜನೆ’ಯೇ ನಮ್ಮೆಲ್ಲರನ್ನೂ ಅವರತ್ತ ಆಕಷರ್ಿಸುತ್ತಿತ್ತು ಎಂದು ಕಾಣುತ್ತದೆ.
ಪ್ರತಿ ಬುಧವಾರ ಸಾಯಂಕಾಲ ನಡೆಯುತ್ತಿದ್ದ ಲಿಟರರಿ ಕ್ಲಬ್ನಲ್ಲಿ ಅನಂತಮೂರ್ತಿ ಮತ್ತು ಪೋಲಂಕಿ ಇವರಿಬ್ಬರೇ ಪ್ರಮುಖರು; ಅಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಅವರು ಏನು ಹೇಳುತ್ತಾರೆ ಎಂಬುದನ್ನು ನಾವಿರಲಿ, ಅಧ್ಯಾಪಕರೂ ಗಂಭೀರವಾಗಿ ಗಮನಿಸುತ್ತಿದ್ದರು. ಲಿಟರರಿ ಕ್ಲಬ್ಬಿನ ಕಾರ್ಯಕ್ರಮವೊಂದರಲ್ಲಿಯೇ ನಾನು ಮೊದಲ ಬಾರಿಗೆ ಅಡಿಗರ ಭಾಷಣವನ್ನು ಕೇಳಿದ್ದು. ಅವರು ಪ್ರಾರಂಭಿಸಿದ್ದೇ ಹೀಗೆ (ಇಂಗ್ಲೀಷಿನಲ್ಲಿ): ‘ನಾನು ಕನ್ನಡದ ಕವಿ; ಕಾವ್ಯದ ಬಗ್ಗೆ ನನಗೆ ಕನ್ನಡದಲ್ಲಿ ಮಾತನಾಡಲು ಹೇಳಿದ್ದರೆ ಚೆನ್ನಾಗಿರುತ್ತಿತ್ತು.’ ಆದರೆ, ಕ್ಲಬ್ ಕಾರ್ಯಕ್ರಮದಲ್ಲಿ ಎಲ್ಲರೂ ಇಂಗ್ಲೀಷ್ನಲ್ಲಿಯೇ ಮಾತನಾಡಬೇಕಿತ್ತು. ಮುಂದೊಂದು ಸಲ, ಸ್ವಲ್ಪ ಮುಕ್ತವಾಗಿ ನಮ್ಮೊಡನೆ ಸಿಡಿಎನ್ ಮಾತನಾಡುತ್ತಿದ್ದಾಗ, ‘ಅಡಿಗರನ್ನು ಕನ್ನಡದಲ್ಲಿ ಯಾಕೆ ಮಾತನಾಡಲು ಹೇಳಲಿಲ್ಲ?’ ಎಂದು ಅವರನ್ನು ಕೇಳಿದೆ. ಅದಕ್ಕೆ ಅವರು ‘ಓ ನೋ! ದೆನ್ ಹಿ ವುಡ್ ನೆವರ್ ಸ್ಟಾಪ್’ ಎಂದರು. ಸಿಡಿಎನ್ಗೆ ಇತರ ಕವಿ-ಲೇಖಕರ ದೀರ್ಘ ಉದ್ಧರಣಗಳೆಂದರೆ ತಿರಸ್ಕಾರ; ಹೇಳುವುದನ್ನು ನೇರವಾಗಿ, ಸ್ಪಷ್ಟವಾಗಿ, ನಮ್ಮ ಮಾತಿನಲ್ಲಿಯೇ ಹೇಳಬೇಕು ಎನ್ನುತ್ತಿದ್ದರು. ಪ್ರಾಯಃ, ಪರಂಪರಾಗತ ಉಪನ್ಯಾಸ, ಬೋಧನೆ, ಪಠ್ಯಾವಳಿ, ಪರೀಕ್ಷಾ ಪದ್ಧತಿ, ಇವೆಲ್ಲವುಗಳ ಸ್ವರೂಪವನ್ನು ಸಂಪೂರ್ಣವಾಗಿ (ಮತ್ತು ಬಹು ಬೇಗ) ಬದಲಾಯಿಸುವ ಅವರ ತೀವ್ರ ಮಹದಾಕಾಂಕ್ಷೆ ಈ ಬಗೆಯ ನಿಲುವಿಗೆ ಕಾರಣವೆಂದು ತೋರುತ್ತದೆ.
ಲಿಟರರಿ ಕ್ಲಬ್ಬಿನ ಕಾರ್ಯಕ್ರಮಗಳು ವೈವಿಧ್ಯಪೂರ್ಣವಾಗಿರುತ್ತಿದ್ದುವು; ಮತ್ತು ವಾರ್ಷಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳು ಕವನ, ಪ್ರಬಂಧ, ನಾಟಕ ಇತ್ಯಾದಿಗಳ ಮೂಲಕ ವಿಭಾಗದ ಬಗ್ಗೆ ಹಾಗೂ ಅಧ್ಯಾಪಕರ ಬಗ್ಗೆ ತಮ್ಮ ಅನುಭವ-ವಿಚಾರಗಳನ್ನು ಅಭಿವ್ಯಕ್ತಿಗೊಳಿಸಬಹುದಿತ್ತು. ಅಂತಹ ಒಂದು ಕಾರ್ಯಕ್ರಮದಲ್ಲಿ ಪೋಲಂಕಿಯವರು (ಡ್ರೈಡನ್-ಪೋಪ್ ಅನುಕರಣೆಯಲ್ಲಿ) ಒಂದು ಸಾಕಷ್ಟು ದೀರ್ಘವಾದ ‘ಕಪ್ಲೆಟ್’ಗಳ ಕವನವನ್ನು ಬರೆದು ಓದಿದ್ದರು. ಅದರಲ್ಲಿ ಒಂದು ಕಪ್ಲೆಟ್  ನ ಭಾಗ ಈಗಲೂ ನೆನಪಿದೆ. ಇದು ಬಾಲಸುಬ್ರಹ್ಮಣ್ಯಂ ಅವರನ್ನು ಕುರಿತಾಗಿತ್ತು ಎಂದು ಸುಲಭವಾಗಿ ಗೊತ್ತಾಗುತ್ತಿತ್ತು: ಬಾಲಸುಬ್ರಹ್ಮಣ್ಯಂ ನಂಜನಗೂಡಿನಿಂದ ಪ್ರತಿದಿನವೂ ಬಂದು ಹೋಗುತ್ತಿದ್ದರು ಮತ್ತು ಅವರು ಎರಡು-ಮೂರು ವಾಕ್ಯಗಳಿಗೊಮ್ಮೆ ‘ಹಿ ಗೋಸ್ ಆನ್ ಇನ್ ದ ಸೇಮ್ ಸ್ಟ್ರೈನ್’ ಎಂದು ಹೇಳುತ್ತಿದ್ದರು. ಹೀಗೆ, ಅಧ್ಯಾಪಕರ ಹೆಸರುಗಳನ್ನು ಹೇಳದಿದ್ದರೂ (‘ಓಲ್ಡ್ ಮಂಕ್’ ಎಂದರೆ ಪ್ರೊ. ರಂಗಣ್ಣನವರು, ಇತ್ಯಾದಿ) ವಿವರಗಳು ಮತ್ತು ಶೈಲಿ ಗುರಿ ಯಾರು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದುವು. ಪೋಲಂಕಿಯವರ ಲೇಖನಿ ಅಂದೂ ತುಂಬಾ ಹರಿತವಾಗಿತ್ತು ಎಂಬುದು ನಿಸ್ಸಂಶಯ.
ಕ್ಲಬ್ಬಿನ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದು ‘ಮಿಲ್ಟನ್ ವಿಚಾರಣೆ’; ಎಂದರೆ ಟಿ. ಎಸ್. ಎಲಿಯಟ್ ಹೇಳಿದಂತೆ ‘ಮಿಲ್ಟನ್ ತನ್ನ ಕಾವ್ಯದಿಂದ ಮುಂದಿನ ಇಂಗ್ಲೀಷ್ ಕಾವ್ಯ ತಪ್ಪು ದಾರಿ ಹಿಡಿಯುವಂತೆ ಪ್ರಭಾವಿಸಿದ’ ಎಂಬ ತೀರ್ಮಾನವನ್ನು ಕುರಿತ ಚರ್ಚೆ. ನಾನು ಸೇರಿದ ವರ್ಷವೇ, ಪ್ರಾಯಃ ನವೆಂಬರ್ನಲ್ಲಿ, ನಡೆದ ಈ ‘ಮಿಲ್ಟನ್ ವಿಚಾರಣೆ’ ಕಾರ್ಯಕ್ರಮ ಸ್ವಲ್ಪ ಬೇರೆ ದಾರಿಯನ್ನು ಹಿಡಿಯಿತು. ಎಲಿಯಟ್ ನ ಹೇಳಿಕೆಯನ್ನು ವಿರೋಧಿಸಿ (ಮಿಲ್ಟನ್ ಕಾವ್ಯವನ್ನು ಸಮರ್ಥಿಸುತ್ತಾ) ರಾಮರಾವ್, ಪಾಚ್ಚು (ಪಾರ್ಥಸಾರಥಿ), ಬಾಲಸುಬ್ರಹ್ಮಣ್ಯ, ಮತ್ತಿತರರು ಮಾತನಾಡಿದರೆ, ಆ ತೀರ್ಮಾನವನ್ನು ಸಮರ್ಥಿಸಿ, ಸಿಡಿಎನ್, ಅನಂತಮೂರ್ತಿ, ಪೋಲಂಕಿ ರಾಮಮೂರ್ತಿ ಮುಂತಾದವರು ಮಾತನಾಡಿದರು.
ಏಕೋ, ಏನು ಕಾರಣವೋ, ಪೂರಾ ಶುಷ್ಕ, ಅಕಡೆಮಿಕ್ ಕಾರ್ಯಕ್ರಮವಾಗಬೇಕಿದ್ದ ಅಂದಿನ (54-55) ಚಚರ್ೆ ಉದ್ದಕ್ಕೂ ತುಂಬಾ ಕಾವೇರಿದ ವಾಗ್ವಾದವಾಯಿತು. ಮೊದಲಿಗೆ ರಾಮರಾವ್ ಮಾತನಾಡಿ, ‘ಪ್ಯಾರಡೈಜ್  ಲಾಸ್ಟ್’ ಕಾವ್ಯ ಹೇಗೆ ಅದ್ಭುತವಾದ ಮಹಾಕಾವ್ಯ ಎಂಬುದನ್ನು ಅನೇಕ ವಿಮರ್ಶಕರನ್ನು ದೀರ್ಘವಾಗಿ ಉದಹರಿಸುತ್ತಾ, ಪ್ರಬಲವಾಗಿ ತಮ್ಮ ವಾದವನ್ನು ಮಂಡಿಸಿದರು. ಕೂಡಲೇ ‘ಇತರರ ಉದ್ದ ಕೊಟೇಶನ್ ಗಳಿಂದ ಯಾವ ವಾದವೂ ನಿಲ್ಲುವುದಿಲ್ಲ; ಅದಕ್ಕೆ ಕಾವ್ಯವನ್ನು ಗ್ರಹಿಸುವ ಸೆನ್ಸಿಬಿಲಿಟಿ ಮತ್ತು ಇಂಗ್ಲೀಷ್ ಕಾವ್ಯ-ಪರಂಪರೆಯ ಅರಿವು ಇರಬೇಕು’ ಎಂದು ಸಿಡಿಎನ್ ಸ್ವಲ್ಪ ಮೊನಚಾಗಿಯೇ ಮಾತನಾಡಿದರು. ಕೊನೆಯಲ್ಲಿ ಮಾತನಾಡಿದ ಅನಂತಮೂರ್ತಿ, ಮಿಲ್ಟನ್ನ ಲ್ಯಾಟಿನ್ ಪ್ರೇಮ, ಅವನು ತನ್ನನ್ನು ‘ಮಹಾಕಾವ್ಯವನ್ನು ರಚಿಸಲೆಂದೇ ಜನ್ಮ ಎತ್ತಿರುವ ಮಹಾಕವಿ ‘ ಎಂದು ಗ್ರಹಿಸಿದ ಬಗ್ಗೆ, ಇತ್ಯಾದಿ ಅಂಶಗಳ ಬಗ್ಗೆ ತುಂಬಾ ರೋಚಕವಾಗಿ ಮಾತನಾಡಿ, ಕೊನೆಗೆ ಮಿಲ್ಟನ್ನ ಆನ್ ಹಿಸ್ ಬ್ಲೈಂಡ್ನಿಸ್ ಸಾನೆಟ್  ನ  ಸಾಲನ್ನು ಉದಹರಿಸಿ ಕುಳಿತರು. ಸಭೆ ನಿಶ್ಶಬ್ದವಾಗಿತ್ತು. (ಆ ವಾಗ್ವಾದದ ಪ್ರಭಾವ ನಮ್ಮ ಮೇಲೆ ಎಷ್ಟಾಗಿತ್ತೆಂದರೆ, ಕ್ಲಬ್ ಮುಗಿದಕೂಡಲೇ ಹೊರಗಡೆ ನಿಂತುಕೊಂಡು ನನ್ನ ಸಹಪಾಠಿ ಇ. ಪಿ. ಕಮಲಾ ಮತ್ತು ನಾನು ಉದ್ವೇಗದಿಂದ ‘ಮುಂದೆ ಮಿಲ್ಟನ್ ಕವಿಯನ್ನೇ ವಿಶೇಷವಾಗಿ ಅಧ್ಯಯನ ಮಾಡಿ, ಇಂದು ಅವನ ವಿರುದ್ಧ ಮಾಡಿದ ಆಪಾದನೆಗಳಿಗೆಲ್ಲಾ ಸೂಕ್ತ ಉತ್ತರ ಕೊಡಬೇಕು’ ಎಂದು ನಿರ್ಧರಿಸಿದೆವು. ಆದರೆ, ಅನೇಕ ವರ್ಷಗಳ ನಂತರ ನಾನು ಮಯಾಮಿ ವಿ.ವಿ.ಯಲ್ಲಿ ‘ಮಿಲ್ಟನ್ ಮತ್ತು ರಿಫಾರ್ಮೇಶನ್ ‘ ಎಂಬ ವಿಶೇಷ ಕೋರ್ಸ್ ತೆಗೆದುಕೊಂಡು ಇಡೀ ಪ್ಯಾರಡೈಸ್ ಲಾಸ್ಟ್ ಮತ್ತು ಮಿಲ್ಟನ್ ನ ಇತರ ವಾಙ್ಮಯವನ್ನು ಓದಿದ ಬಳಿಕ, ಮಿಲ್ಟನ್ ಅಷ್ಟೇನೂ ಶ್ರೇಷ್ಠ ವಿಶ್ವಕವಿ ಎಂದು ಪರಿಗಣಿಸಬೇಕಾಗಿಲ್ಲ ಎಂದು ಗೊತ್ತಾಯಿತು.) ಆ ಸಭೆಯ ನಂತರ ಒಂದೆರಡು ತಿಂಗಳುಗಳವರೆಗೂ ಅದು ಪ್ರಚೋದಿಸಿದ ಭಾವನೆಗಳು ಅಧ್ಯಾಪಕರಲ್ಲಿ ಉಳಿದಿದ್ದುವು ಎಂದು ನೆನಪು.
ಅಂದಿನ ಚರ್ಚೆಗೆ ಯಾಕಷ್ಟು ಮಹತ್ವವನ್ನು ಸಿಡಿಎನ್ ಮತ್ತು ರಾಮರಾವ್ ಕೊಟ್ಟರು? ಅದರ ಹಿನ್ನೆಲೆಯಲ್ಲಿ ಏನಾದರೂ ವಾಗ್ವಾದಗಳು ನಡೆದಿದ್ದುವೆ? ಇಂಗ್ಲೀಷ್ ವಿಭಾಗದಲ್ಲೇ ಏನಾದರೂ ಎರಡು ಗುಂಪುಗಳಿದ್ದುವೆ? ಗೊತ್ತಿಲ್ಲ. ಆದರೆ, ಅನಿರೀಕ್ಷಿತವಾಗಿ ತರಗತಿಗಳಲ್ಲಿ ಕೇಳಿಬರುತ್ತಿದ್ದ ಅಧ್ಯಾಪಕರ ಉದ್ಗಾರಗಳು ನಮ್ಮನ್ನು ಚಕಿತಗೊಳಿಸುತ್ತಿದ್ದುವು. ಉದಾಹರಣೆಗೆ: ನಾನು ಮೂರನೆಯ ಆನರ್ಸ್ನಲ್ಲಿದ್ದಾಗ ಎಂದು ಕಾಣುತ್ತದೆ; ಆಗ, ಒಂದು ಸಂದರ್ಭದಲ್ಲಿ ಗ್ರೀಕ್ ನಾಟಕಗಳಿಗೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನೆಲ್ಲಾ ಆ ವಿಷಯವನ್ನು ಕುರಿತು ಪಿಎಚ್ಡಿ ಮಾಡುತ್ತಿದ್ದ ತ. ಸು. ಶಾಮರಾವ್ ತೆಗೆದುಕೊಂಡು ಹೋಗಿದ್ದಾರೆ, ಎಂಬ ಮಾತು ಬಂದಿತು. ಆಗ ಅಲ್ಲಿಯೇ ಇದ್ದ ರಾಮರಾವ್ ‘ಅವರಿಗೆ ಬುದ್ಧಿಯಿಲ್ಲ; ಈಗ ಪಿಎಚ್ಡಿ ಮಾಡಿ ಏನು ಉಪಯೋಗ?’ ಎಂದರು. ‘ಯಾಕೆ ಸರ್?’ ಎಂದು ನಾನು ಕೇಳಿದುದಕ್ಕೆ ಅವರಿಂದ ಉತ್ತರ ಬರಲಿಲ್ಲ; ಅನಂತರ ಮಾತು ಬೇರೆ ವಿಷಯಕ್ಕೆ ತಿರುಗಿತು. ಎಂ. ಎನ್. ರಾಮಸ್ವಾಮಿಯವರು ನಮಗೆ ಟೆನಿಸನ್ ಕಾವ್ಯವನ್ನು ಕಲಿಸುತ್ತಿದ್ದರು. ಒಂದು ತರಗತಿಯಲ್ಲಿ, ‘ಇಲಾನಿ ದ ಫೇರ್ , ಇಲಾನಿ ದ ಲಿಲಿ ಮೇಡ್ ಆಫ್ ಅಸ್ಟ್ರೊಲಾಟ್’ ಎಂಬ ಸಾಲನ್ನು ಎರಡು ಸಲ ಓದಿ, ‘ನಿಜ ಹೇಳಿ; ಇದು ಕಾವ್ಯ ಅಂತ ನಿಮಗನ್ನಿಸೋಲ್ವಾ?’ ಎಂದು ಗೋಗರೆದಂತೆ ನಮ್ಮನ್ನು ಕೇಳಿದರು. ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ (ಪದ್ಮಾ ರಾಮಚಂದ್ರಶರ್ಮ ಆಗ ನನ್ನ ಸಹಪಾಠಿಯಾಗಿದ್ದರು) ಸಿ. ಡಿ. ಗೋವಿಂದರಾವ್ ನಮಗೆ ‘ಆಧುನಿಕ ಇಂಗ್ಲೀಷ್ ಕಾದಂಬರಿ’ ಎಂಬ ಪೇಪರ್ ಕಲಿಸುತ್ತಿದ್ದರು; ಆದರೆ, ಹೆಚ್ಚಿನ ವೇಳೆ ಬೇರೆಯೇ ವಿಷಯಗಳ ಚರ್ಚೆಯಲ್ಲಿ ಕಳೆಯುತ್ತಿತ್ತು. ಒಂದು ಸಲ ಅವರು, ತುಂಬಾ ಗಂಭೀರವಾಗಿ, ‘ಎಂ ಎ ಆದಮೇಲೆ ನೀವು ಕರ್ನಾಟಕದಲ್ಲಿ ಏನಾದರೂ ಇರಬೇಡಿ; ಎಲ್ಲಿಗಾದರೂ -ಅಂಡಮಾನ್ಗಾದರೂ ಹೋಗಿ’ ಎಂದರು. ಏಕೆ? ಏನು ಕಾರಣ? ಎಂದೇನೂ ಅವರು ವಿವರಿಸಲಿಲ್ಲ. ಆದರೆ, ಆ ತರಗತಿಯಾದನಂತರ, ಸ್ವಲ್ಪ ವಿ.ವಿ. ವ್ಯವಹಾರಗಳು ತಿಳಿದಿರುವ ನನ್ನ ಸಹಪಾಠಿಯೊಬ್ಬರು ಸಿಡಿಜಿ ಅವರ ಪಿ. ಎಚ್ ಡಿ. ಸಂಪ್ರಬಂಧಕ್ಕೆ  ಡಿಗ್ರೀ ಕೊಡಬಾರದೆಂದು ಸಿಂಡಿಕೇಟ್ ಸಭೆಯಲ್ಲಿ ಸಿಡಿಎನ್ ತುಂಬಾ ವಾದಿಸಿದರೆಂದು, ಆ ಕಾರಣದಿಂದ ಅವರಿಗೆ ಡಿಗ್ರೀ ದೊರಕಿದರೂ ಮನಸ್ಸಿಗೆ ತುಂಬಾ ನೋವಾಗಿತ್ತೆಂದೂ ಹೇಳಿದರು. ಪಿ.ಎಚ್ ಡಿ. ಬಗ್ಗೆ ಅಂದಿನ ಕಾಲಘಟ್ಟದಲ್ಲಿ ತುಂಬಾ ಕೇಳಿಬರುತ್ತಿದ್ದ ಮತ್ತೊಂದು ಗಾಸಿಪ್ ಎಂದರೆ ಎಸ್. ಅನಂತನಾರಾಯಣ ಅವರದು; ಅವರು ಆಧುನಿಕ ಕನ್ನಡ ಕಾವ್ಯದ ಮೇಲೆ ಇಂಗ್ಲೀಷ್ ಕಾವ್ಯದ ಪ್ರಭಾವ ಎಂಬ ತಮ್ಮ ಸಂಪ್ರಬಂಧದಲ್ಲಿ ಕುವೆಂಪು ಅವರ ಮಹಾಕಾವ್ಯವನ್ನು ತುಂಬಾ ಟೀಕಿಸಿದ್ದಾರೆಂದು ಅವರಿಗೆ ಪಿ. ಎಚ್.ಡಿ. ಕೊಡಲಿಲ್ಲ ಎಂಬ ಸಂಗತಿ. ಇದು ಎಷ್ಟು ನಿಜ ಎಂಬುದು ಅಂದು ವಿದ್ಯಾರ್ಥಿಗಳಾಗಿದ್ದ ನಮಗೆ ಗೊತ್ತಾಗುತ್ತಿರಲಿಲ್ಲ; ಆದರೆ, ಅಂದಿನಿಂದ ಅನಂತನಾರಾಯಣ ತುಂಬಾ ವಿಕ್ಷಿಪ್ತ ವ್ಯಕ್ತಿಯಾದರು ಎಂಬುದು ವಾಸ್ತವ.
ಇಷ್ಟೇ ಸಾಲದು ಎಂಬಂತೆ, ಆಗ ಇಂಗ್ಲೀಷ್ ವಿಭಾಗದಲ್ಲಿ ಪ್ರತ್ಯೇಕ ಕೊಠಡಿಗಳು ಕೇವಲ ಪ್ರಾಧ್ಯಾಪಕರಿಗೆ ಮಾತ್ರ (ಸಿಡಿಎನ್ ಮತ್ತು ಭರತ್ರಾಜ್ ಸಿಂಗ್ ಅವರಿಗೆ) ಇದ್ದುವು; ಇತರರು ತಮ್ಮ ಕ್ಲಾಸ್ ತೆಗೆದುಕೊಳ್ಳಲು ಖಾಲಿ ಕೊಠಡಿಯನ್ನು ಹುಡುಕಿಕೊಂಡು ಹೋಗಬೇಕಿತ್ತು. (ಒಮ್ಮೆ, ಸೇತೂ ಸಾವಿತ್ರಿ ಅವರು ಕ್ಲಾಸ್ ತೆಗೆದುಕೊಳ್ಳಲು ಖಾಲಿ ಕೊಠಡಿಯನ್ನು ಹುಡುಕುತ್ತಾ, ಇಡೀ ಕಾಲೇಜಿನ ಕೆಳ ಅಂತಸ್ತಿನ ಕೊಠಡಿಗಳನ್ನು ಪರೀಕ್ಷಿಸಿ, ಕೊನೆಗೆ ‘ಇಂದು ನಿಮಗೆ ಕೊಠಡಿಯೂ ಇಲ್ಲ, ಕ್ಲಾಸೂ ಇಲ್ಲ’ ಎಂದು ಹೇಳಿದ್ದು ನೆನಪಿದೆ.)
ಎಂದರೆ, ವಿಭಾಗದ ಅಧ್ಯಾಪಕವರ್ಗದಲ್ಲಿಯೇ ಕೆಲವರಲ್ಲಿ ಆ ಕಾಲದಲ್ಲಿ ಒಂದು ಬಗೆಯ ಹತಾಶೆಯ ಒಳಹರಿವಿತ್ತೆ? ಸಿಡಿಎನ್ ಅವರು ಅಲ್ಲಿಯವರೆಗಿದ್ದ ಇಂಗ್ಲೀಷ್ ಸಿಲಬಸ್, ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನ ಎಲ್ಲವನ್ನೂ ತುಂಬಾ ದ್ರುತಗತಿಯಿಂದ ಬದಲಾಯಿಸಿದರೆ? ಎಂದರೆ, ಎರಡು ಭಿನ್ನ ವಿದ್ವತ್ಪರಂಪರೆಗಳಿಗೆ ಸೇರಿದ ಅಧ್ಯಾಪಕರು ಅಂದು ವಿಭಾಗದಲ್ಲಿದ್ದು, ಒಂದು ಪರಂಪರೆಯವರು ತಮ್ಮನ್ನು ಅಸಹಾಯಕರಂತೆ ಭಾವಿಸುತ್ತಿದ್ದರೆ? ಗೊತ್ತಿಲ್ಲ.
(ಈ ಬಗೆಯ ವಾತಾವರಣ ನನ್ನನ್ನು ತುಂಬಾ ಪ್ರಭಾವಿಸಿರಬಹುದು; ಅಥವಾ ಅದು ಕಾಕತಾಳೀಯವಿರಬಹುದು-ಎಂ. ಎ. ಆದನಂತರ ಕರ್ನಾಟಕವನ್ನು ಬಿಟ್ಟು ಹೊರಗೆ ಹೋದವನು ಮರಳಿ ಕರ್ನಾಟಕಕ್ಕೆ ಬಂದದ್ದು 26 ವರ್ಷಗಳ ನಂತರ.)

‍ಲೇಖಕರು G

March 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. kum.veerabhadrappa

    kannada samakaaleena saahityada prasidda vimarshkaroo namagella tumba aatmeeyaroo aada Dr CNR avara aatmakatheya bhaaga oduva saluvaagi ninneyinda kaayuttidde. odide. tumaba aasaktikaravaagide,adannu poorna pramaanadalli odalu naavella tudigaalalli nintu kaayuttiddeve,
    kumvee

    ಪ್ರತಿಕ್ರಿಯೆ
  2. ಅಶೋಕವರ್ಧನ

    ಸಿಡಿಜಿ, ಸಿಡಿಎನ್, ಅಣ್ಣಯ್ಯಗೌಡ, ಪೋಲಂಕಿ, ಸೇತು ಸಾವಿತ್ರಿ, ಮೈಲಾರಿ ರಾವ್, ಅನಂತನಾರಾಯಣ (ಅನಂತಮೂರ್ತಿ ಬಾಬಾ ಸ್ಕಾಲರ್ ಶಿಪ್ಪಿನಲ್ಲಿದ್ದ ಕಾರಣ ನನಗೆ ದಕ್ಕಲಿಲ್ಲ)ಮತ್ತು ಇಂಗ್ಲಿಷ್ ವಿಭಾಗದ ಕಲಾಪಗಳು ಓದಓದುತ್ತಾ ನನ್ನದೇ ನೆನಪಿನೋಣಿಯ ಚಿತ್ರಗಳಲ್ಲಿ ಕಳೆದುಹೋಗುತ್ತಾ ಇಷ್ಟು ಚುಟುಕಾಗಿ ಮುಗಿಸಿಬಿಟ್ಟಿರಲ್ಲಾಂತನ್ನಿಸಿತು. ವ್ಯಾಖ್ಯಾನಗಳು ಸರಿ, ಆಖ್ಯಾನಕಗಳು ಇನ್ನಷ್ಟು ಮತ್ತಷ್ಟು ಸಿಎನ್ನಾರ್ ಲೇಖನಿಯಿಂದ ಕಾಯುತ್ತಾ ಇದ್ದೇನೆ. ಪುಸ್ತಕದ ವ್ಯಾಪ್ತಿಗಿದು ಚೊಕ್ಕವಿರಬಹುದು, ಜಾಲತಾಣಗಳಿಗಲ್ಲವಲ್ಲಾ ಎಂದು ಸವಿನಯ ನೆನಪಿಸಬಯಸುತ್ತೇನೆ. (ಪೂರ್ಣ ಪುಸ್ತಕದ ಓದಿಗೂ ಇಳಿಯೆಣಿಕೆ ನಡೆಸಿದ್ದೇನೆ – ೪೮ ಗಂಟೆ, ೪೭ ಗಂಟೆ. ೪೬ ಗಂಟೇ….

    ಪ್ರತಿಕ್ರಿಯೆ
  3. narayan raichur

    samaadhanada samatoolanada vimarshege hesaraadavaru CNR !! -avara aatmakatheya adhyaaya rochakavaagi-hrudyavaagi moodibandide ;
    Aa kaalada professoragala paathagalendare “SAABHINAYA UPANYAASAGALE” yendu kelidde ; CNR kooda antahaha kelavu prasangagalannu rasavattaagi chitrisiddare – english-nante kannadadallu tamma lekhani palagiruvudannu proove maadiddaare – avara krutigaagi kayuva !!

    ಪ್ರತಿಕ್ರಿಯೆ
  4. ಲಕ್ಷ್ಮಣ ಕೊಡಸೆ

    takshaNa Ivattara dashakada mysore shykshaNika parisarakke hOgi banda haagaayitu. pustakavannu kayuvante madide ee baraha. thanks sir.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: